Tuesday 27 May 2014

ಲೂಸಿಯಾ - ಕಾಫಿಯೊಳಗೊಂದು ಬಿರುಗಾಳಿ!!

ಮತ್ತೊಂದು ಹಳೇ  ಬರಹ -  ವಿಮರ್ಶೆಯ ತರ  ಏನೋ ಒಂದು, ಓದಿಕೊಳ್ಳಿ  :

ಎಲ್ಲೋ ಓದಿದ ಈ ಸಾಲುಗಳನ್ನ ಇನ್ನೊಮ್ಮೆ ಓದಿಕೊಳ್ಳಿ :
ಬಿರುಗಾಳಿ ನಡುವೆ ಕಾಫಿಶಾಪ್
ಕೈಯ್ಯಲ್ಲೊಂದು ಕಪ್ ಕಾಫಿ
ಕಾಫಿಯೊಳಗೊಂದು ಬಿರುಗಾಳಿ

ಇದನ್ನೇ ನೀವು ಅಡ್ಡಡ್ಡ ಬರೆದು ಚು ಆಂಗ್ ತ್ಸು ಅಂತಲೋ ಅಥವಾ ಇನ್ನು ಯಾವುದಾದರೂ ಜಪಾನೀ ಹೆಸರು ತಗೊಂಡು ಆ ಝೆನ್ ಗುರು
ಕಾಫಿಶಾಪ್ ನಲ್ಲಿ ಇದ್ದ ಅಂದು ಬಿಟ್ಟರೆ ಇದನ್ನೊಂದು ಝೆನ್ ಕಥೆ ಅಂತಲೂ ಅಂದ್ಕೋ ಬಹುದು. ಸುಮಾರು ವರ್ಷಗಳ ಹಿಂದೆ KV ಸುಬ್ಬಣ್ಣ ಒಂದಷ್ಟು ಝೆನ್ ಕಥೆಗಳನ್ನ ಅನುವಾದ ಮಾಡಿ ಎಲ್ಲರೂ ಅಚ್ಚರಿಯಿಂದ ಓದುವ ಹಾಗೆ ಮಾಡಿದ್ದರು. ಅಂತದ್ದೇ ಎಳೆ ಒಂದನ್ನ ಹಿಡ್ಕೊಂಡು ಸಿನಿಮಾ ಮಾಡಿದರೆ?? ಹೀಗೂ ಉಂಟೆ ಅಂತ ತಲೆ ಕೆರೆದುಕೊಳ್ಳಬಹುದು. ಹೀಗೂ ಉಂಟು ಅನ್ನುವ ತರ ಲೂಸಿಯಾ ಇದೆ. ಝೆನ್ ಕಥೆಯ ಹಾಗೆ ಅಚ್ಚರಿ ಹುಟ್ಟಿಸುವ ಸಾಲೇ ಲೂಸಿಯಾ ದ ಪಂಚ್ ಲೈನ್. ಆ ಸಾಲಿಗೆ ಎಲ್ಲರೂ ಉಘೇ ಉಘೇ ಅಂದಿದ್ದಾರೆ. ಫೇಸ್ಬುಕ್ ನಲ್ಲಿ ಅತಿ ಹೆಚ್ಚು ಲೈಕ್ ಮಾಡಲ್ಪಟ್ಟ ಪೋಸ್ಟಿನ ತರ ಲೂಸಿಯ ಕಂಗೊಳಿಸಿದೆ.

ಒಂದು ಕನ್ನಡ ಸಿನಿಮಾದ ಬಗ್ಗೆ ಜನ ಇದು ನನ್ನ ತಲೆಗೆ ಹತ್ತುವಿದಿಲ್ಲ ಅಂತ ಹೇಳಿರುವುದೇ ವಿಶೇಷ ಅಂತ ಥ್ರಿಲ್ಲಾದವರಿದ್ದಾರೆ. ಇಷ್ಟು ದಿನ ಗಾಂಧಿನಗರ ದ ಪ್ರಜೆಗಳು ನಂ ಫಿಲ್ಲಂ ಅಲ್ಲಿ ಹೀರೋ ಎಂಟ್ರಿ ಸಾಂಗ್ ಇದೆ, ಭಯಂಕರ ಫೈಟಿಂಗ್ ಇದೆ, ಕರುನಾಡಿನ ಬಗ್ಗೆ ಒಂದು ಭೀಕರ ಡೈಲಾಗ್ ಇದೆ, ಫಾರಿನ್ ಅಲ್ಲಿ ಶೂಟಿಂಗ್ ಮಾಡಿದೀವಿ , ಸೆಂಟಿಮೆಂಟ್ ಇದೆ, ಕಾಮಿಡಿ ಇದೆ ಅಂತೆಲ್ಲ ಡಂಗುರ ಸಾರ್ತಾ ಇದ್ದದ್ದು ನಮಗೆ ಗೊತ್ತೇ ಇದೆ. ಅವೆಲ್ಲ ಇದೆ ಅನ್ನೋ ಕಾರಣಕ್ಕೇ ಫೇಸ್ಬುಕ್ ಅಲ್ಲಿರೋ ಮಹಾ ಜನತೆ ಕನ್ನಡ ಸಿನಿಮಾದ ಕಡೆ ತಲೆ ಹಾಕಿಯೂ ಮಲಗ್ತಾ ಇರ್ಲಿಲ್ಲ ಅನ್ನುವುದೂ ದಿಟವೇ. ಲೂಸಿಯದಲ್ಲಿ ಅವೆಲ್ಲ ಇಲ್ಲ ಅಂತಲೇ ಪವನ್ ಡಂಗುರ ಸಾರಿದ್ದರು. ಕನ್ನಡ ಪ್ರೈಡ್ ಅಂತೆಲ್ಲ ಮಾತಾಡಿದ್ದರು. ಒಂದೊಂದು ಸಲ ಕನ್ನಡದ ಹಿತ ಚಿಂತನೆ ಇಂಗ್ಲೀಷಿನಲ್ಲೇ ಮಾಡಿದ್ದೂ ಇದೆ!! ಇದೊಂಥರ ಇಂಗ್ಲೀಷು ಬ್ಯಾಂಡ್ ನ ಡ್ರಮ್ಮರ್ ಒಬ್ಬ ಕನ್ನಡ ಡಿಂಡಿಮ ಬಾರಿಸಿದ ಹಾಗೆ. ಇಂಗ್ಲೀಷು ಸಾಂಗಿಗೇ ಕನ್ನಡ ಡಿಂಡಿಮ ಬಾರಿಸಿದ ಹಾಗೆ.

ಹಾಲಿವುಡ್ ಜಪ ಮಾಡ್ತಾ ಇದ್ದವರು, ತಮಿಳಿನ ಪೂಜೆ ಮಾಡ್ತಾ ಇದ್ದವರು, ಬಾಲೀ ವುಡ್ ಗೆ ಶರಣಾದವರು ಬೆಚ್ಚಿ ಬೀಳುವಂತ ಸಿನಿಮಾ ಬೇಕು ಅಂದವರಿಗೆ ಲೂಸಿಯ ಬಂದಿದೆ. ಕೂಲ್ dude ಗಳು, youtube ಪ್ರಿಯರು, ಬಳುಕುವ ಲಲನೆಯರು (Babes) ಎಲ್ಲ ಕನ್ನಡ ಸಿನಿಮಾ ನೋಡುವಂತಾಯಿತು. ತಲೆ ಬುಡ ಅರ್ಥ ಆಗ್ಲಿಲ್ಲ ಅನ್ನುವುದೂ ಹೊಗಳಿಕೆ ಆಯಿತು. ಎಷ್ಟೋ ಸಿನಿಮಾಗಳಿಗೆ ತಲೆಯೂ ಇರ್ಲಿಲ್ಲ ಬುಡವೂ ಇರ್ಲಿಲ್ಲ ಇನ್ನು ಅರ್ಥ ಮಾಡಿಕೊಳ್ಳುವುದಾದ್ರೂ ಏನನ್ನ ಅನ್ನುವ ಪರಿಸ್ಥಿತಿ ಇತ್ತು, ಹಾಗಾಗಿ ತಲೆ ಬುಡ ಅರ್ಥ ಆಗ್ಲಿಲ್ಲ ಅಂದ್ರೆ ಅವೆರಡೂ ಇದೆ ಅಂತಲೇ ಖುಷಿ ಪಟ್ಟ ವರೂ ಇದಾರೆ!

ಹಾಲಿವುಡ್ ನಲ್ಲಿ ಒಂದು ತಂತ್ರ ಇದೆ. ಒಂದು ವಿಷಯ ನಿಮಗೆ ಮನದಟ್ಟು ಆಗಬೇಕು ಅಂದ್ರೆ ಅದನ್ನ ಕನಿಷ್ಠ 3 ಸಲ ಹೇಳಬೇಕು. ಬಸವನಗುಡಿಯ ಪಾರ್ಕ್ ಒಂದರಲ್ಲಿ ಹಸಿರು ಗಿಡದ ಕೆಳಗೆ ಬಾಂಬ್ ಒಂದರ ವಿವರ ಇದೆ ಅಂತ ಥಟ್ ಅಂತ ಒಂದ್ಸಲ ಹೇಳಿದರೆ ಅದು ಪ್ರೇಕ್ಷಕನಿಗೆ ತಟ್ಟುವುದಿಲ್ಲ. ಅದನ್ನ ೩ ಸಲ ಬೇರೆ ಬೇರೆ ರೀತಿ ಪ್ರೇಕ್ಷಕನಿಗೆ ಹೇಳಬೇಕು, ಆಗ ಅವನಿಗೆ ಅದು ಮನದಟ್ಟಾಗಿ ಅದರಲ್ಲಿ ಆತ involve ಆಗ್ತಾನೆ. ಪವನ್ ಹೀಗೆ ಮಾಡಿದ್ದರು. ಈ ಸಿನಿಮಾ ಮಾಡುವುದಕ್ಕೆ ಎಷ್ಟೆಷ್ಟು ಕಷ್ಟ ಪಟ್ಟೆ, ಎಷ್ಟು ಲೀಟರ್ ಬೆವರು ಸುರಿಸಿದೆ, ಎಷ್ಟು ಜನ ತುಳಿದರು, ತಾನು ಹೇಗೆ ಸಿಡಿದೆದ್ದೆ ಅಂತೆಲ್ಲ ಸಾರಿ ಸಾರಿ ಹೇಳಿದರು. 3 ಸಲ ಅಲ್ಲ 300 ಸಲ ಹೇಳಿದರು. ಎಲ್ಲರಿಗೂ ಬಾಯಿಪಾಠ ಆಗುವಷ್ಟು ಸಲ. ಇಷ್ಟಿಷ್ಟು ಕಷ್ಟ ಪಟ್ಟಿದ್ದಾರೆ, ಇಷ್ಟಿಷ್ಟು ಕ್ರಾಂತಿ ಮಾಡ್ತಾ ಇದ್ದಾರೆ ಹಾಗಾಗಿ ನಾವು ಇಷ್ಟು ಇಷ್ಟ ಪಡಬೇಕು ಅಂತ ಮೊದಲೇ ಮನಸ್ಸು ಮಾಡಿದ ಹಾಗೆ ಆಗಿತ್ತು !! ನೇತಾಜಿ ರಕ್ತ ಕೊಡಿ ನಿಮಗೆ ಸ್ವಾತಂತ್ರ್ಯ ಕೊಡ್ತೇನೆ ಅಂದಿದ್ದರು, ಪವನ್ ನಂಗೆ ದುಡ್ಡು ಕೊಡಿ ನಿಮಗೊಂದು ಸಿನಿಮಾ ಕೊಡ್ತೇನೆ ಅಂದರು. ಒಳ್ಳೆ ಸಿನೆಮಾವನ್ನೇ ಕೊಟ್ಟರು. ಕನಸನ್ನು ಹೊಸ ಟ್ವಿಸ್ಟ್ ನೊಂದಿಗೆ ಕಾಣುವ ಹಾಗಾಯಿತು.

ನಮ್ಮ ಸಿನೆಮಾಗಳ ವಿನ್ಯಾಸವೂ ನಮಗೆ ಬಾಯಿಪಾಠ. ಹೀರೋ ಬರಬೇಕು , ಹೀರೋ ಯಿನ್ ಬರಬೇಕು, ಸ್ಲೋ ಮೋಶನ್ ಅಲ್ಲೇ ಬರಬೇಕು , ಅವರಿಗೆ ಲವ್ವೇ ಆಗಬೇಕು ಬೇರೇನೇ ಆದರೂ ನಾವು ಗಾಬರಿಯಾಗುತ್ತೇವೆ.
ಹೀರೋ ಇರಬೇಕು , ಕೇಡಿ ಇರಬೇಕು, ಆ ಕೇಡಿ ಗಹ ಗಹಿಸಿಯೇ ನಗಬೇಕು, ಕೇಡಿಗೆ ಹೀರೋ ನಾಲ್ಕು ಬಾರಿಸಬೇಕು, ಹಾಗಾಗದಿದ್ದರೆ ನಾವು ಬೆಚ್ಚಿ ಬೀಳ್ತೇವೆ. ನಮಗೆ ಆ ವಿನ್ಯಾಸ, ಆ structure ಅಭ್ಯಾಸ ಆಗಿದೆ, ಬಾಯಿಪಾಠ ಆಗಿದೆ. ಈ ವಿನ್ಯಾಸ ತಿರುವು ಮುರುವಾದರೆ ಕೆಲವರಿಗೆ ಖುಷಿ ಹಲವರಿಗೆ ಸಂಕಟ ಆಗಬಹುದು. ಕ್ರಿಸ್ಟೋಫರ್ ನೋಲನ್ ಮಾಡಿದ್ದು ಅದನ್ನೇ, structure ಅಂದರೆ ಏನು, ವಿನ್ಯಾಸ ಅಂದರೆ ಏನು ಅನ್ನೋ ಕಲ್ಪನೆಗೇ ಪೆಟ್ಟು ಕೊಟ್ಟ. ಮೊದಲು ವಿಲ್ಲನ್ ಸೋತು ಆ ಮೇಲೆ ಹೀರೋ ಸತ್ತು ಆ ಮೇಲೆ ವಿಲನ್ ಗೆ ಒಂದು ರೋಮ್ಯಾಂಟಿಕ್ ಸಾಂಗ್ ಇದ್ದರೆ ಜನ ತಲೆ ಕೆರೆದುಕೊಳ್ಳುವುದಿಲ್ಲವೇ ? ಇದೂ ಹಾಗೇ . ನಮಗೆ ಬಾಯಿಪಾಠ ಆದ ವಿನ್ಯಾಸಕ್ಕೆ ಕೊಡಲಿ ಏಟು ಬಿದ್ದಿದೆ ಲೂಸಿಯ ದಲ್ಲಿ, ಇದು ಖಂಡಿತವಾಗಿಯೂ ನೋಲನ್ ಪ್ರಭಾವ, lucid ಡ್ರೀಮಿಂಗ್ ಕೂಡ Inception ನೋಡಿಯೇ ಹೊಳೆದಿರಬೇಕು. ಈ ಮಟ್ಟಕ್ಕೆ ಯೋಚನೆ ಮಾಡಿರುವುದೇ ಅಪರೂಪ. ಹಾಗಾಗಿ ನಮ್ಮಿಂದ ಒಂದು ಭಳಿರೆ, ಭೇಷ್ !!

ಮತ್ತದೇ ಲವ್ ಸ್ಟೋರಿ ಬೇಕಿತ್ತಾ ಅನ್ನುವುದೂ ಪ್ರಶ್ನೆಯೇ , ಹಾಲಿವುಡ್ ನಲ್ಲಿ ಆಗುವಂತೆ ಇನ್ನಷ್ಟು classy ಮನೋರಂಜನೆ ಬೇಕಿತ್ತು, ಇಂಗ್ಲಿಷಿನಲ್ಲಿ David Fincher, Nolan, Scorsese ನಮ್ಮ ನೀರಜ್ ಪಾಂಡೆ, ಅನುರಾಗ್ ಕಶ್ಯಪ್ ಸಿನೆಮಾಗಳಲ್ಲಿ ಇರುವ ಪರಿಪೂರ್ಣ accomplishment ಕಾಣಲಿಲ್ಲ. ಒಂದು ಅದ್ಬುತ ಕಥೆ ಇಟ್ಕೊಂಡು ವಿನ್ಯಾಸದ ಮೇಲೆ ಪ್ರಯೋಗ ಮಾಡಿದ್ದರೆ ಇನ್ನಷ್ಟು ಚೆನ್ನಾಗಿರ್ತಿತ್ತು. ದೇಸಾಯಿ, ಉಪೇಂದ್ರ, ಪುಟ್ಟಣ್ಣ ಕಣಗಾಲ್ ಎಲ್ಲ ಮಾಡಿದ ಹಾಗೆ. ಅದರೂ ಸಿನಿಮಾ ಸಕತ್ತಾಗದೆ. ನನಗಂತೂ ಒಂದೇ ಸಲಕ್ಕೆ ಅರ್ಥ ಆಯಿತು , ತೀರ ಮೈಂಡ್ fuck ಏನಲ್ಲ. ಒಂತರಾ ತುಂಬ ಒಳ್ಳೆ ಸಿನಿಮಾ , ಕನ್ನಡದ ಮಟ್ಟಿಗೆ ಅಭೂತ ಪೂರ್ವ ಅನ್ನುವಷ್ಟು ಒಳ್ಳೆ ಪ್ರಯೋಗ. ಜಟ್ಟ ದ Ashley-ಅಭಿಲಾಶ್ ಮತ್ತು ಲೂಸಿಯ ದ ಪೂರ್ಣ ಚಂದ್ರ ಅದ್ಬುತ ಹಾಡುಗಳಿಂದ ನೆನಪಿನಲ್ಲಿ ಉಳಿಯುವುದು ಖಚಿತ. ಕ್ಯಾಮೆರಾ ಹಿಡಿದ ಸಿದ್ಧಾರ್ಥ್ ವಾರೆವಾಹ್ ! ಪವನ್ ಆಡಿ, ಮಾಡಿ ರೂಡಿಯೊಳಗೆ ಉತ್ತಮರಾಗಿದ್ದಾರೆ. ಸಿನಿಮಾ ಹೇಗಿರಬಹುದು ಅಂತ ಒಂದು ಮಟ್ಟಕ್ಕೆ ನಮ್ಮನ್ನ ತಯಾರು ಮಾಡಿದ್ದರು, ಅದು ಹಾಗೇ ಇದೆ.

ಇನ್ನೂ ಇಂತ ಚಿತ್ರಗಳು ದಂದು ದಂಡಾಗಿ ಬರಲಿ. ಹಿಂಗಾರು ಮಳೆಯಾಗಿ, ಮುಂಗಾರು ಮಳೆಯಾಗಿ, ಸಿಡಿಲಾಗಿ , ಗುಡು ಗಾಗಿ, ಮುಸಲಧಾರೆಯಾಗಲಿ. ಕನ್ನಡ ಸಿನಿಮಾ ಅನ್ನೋ ಕಾಫಿಶಾಪ್ನಲ್ಲಿ ಸಣ್ಣಗೆ ಹೊಸ ಅಲೆಯ ಬಿರುಗಾಳಿ ಅಂತೂ ಎದ್ದಿದೆ, ಕಾಫಿಯೊಳಗೊಂದು ಬಿರುಗಾಳಿ, storm in a tea cup, ಇದು ಇನ್ನಷ್ಟು ಜೋರಾಗಿ ಬೀಸಲಿದೆ ಅಂತ ಹವಾಮಾನ ತಜ್ಞರಿಗೆ ಅನಿಸಲಿ ಈ ವರ್ಷಕ್ಕೆ ಗೊಂಬೆಗಳ ಲವ್, ಅಟ್ಟಹಾಸ, ಮೈನಾ, SOLS, ಕಡ್ಡಿ ಪುಡಿ, ಟೋನಿ, ಜಟ್ಟ, ಲೂಸಿಯ ಮತ್ತು ಚಿತ್ರ ಮಂದಿರದಲ್ಲಿ. ಇದು 7 ಕೋರ್ಸ್ ಡಿನ್ನರ್ ಇದ್ದ ಹಾಗೆ . ಪುಷ್ಕಳ ಭೋಜನ. ಮುಂದ ???

ಜಟ್ಟ - ಅಜ್ಞಾನವೇ ಪರಮ ಸುಖ ಅಂದಂತೆ


ಜಟ್ಟ ಸಿನಿಮಾ ನೋಡಿ ನಾನು ಬರೆದ ಪುಟ್ಟ ವಿಮರ್ಶೆಯಂತ ಬರಹ :

ಸುಮಾರು 17 ವರ್ಷಗಳ ಹಿಂದಿನ ಮಾತು. ನಾನಾ ಪಾಟೇಕರ್ ನ ಬಾಯಿ ಹಳಿ ತಪ್ಪಿದ ರೈಲೊಂದು ಆಗುಂಬೆ ಘಾಟಿ ಇಳಿದ ಹಾಗೆ ಓಡುತ್ತಿದ್ದ ಕಾಲ ಅದು. ಅವನದ್ದು ಯಶವಂತ್ ಅಂತೊಂದು ಸಿನಿಮಾ ಬಂದಿತ್ತು. ಅದರಲ್ಲೂ ಎಂದಿನಂತೆ ಆತ ಉಗ್ರ ಕೋಪಿ. ಸಾಲಾ ಏಕ್ ಮಚ್ಚರ್ ಆದ್ಮಿ ಕೊ ಹಿಜಡಾ ಬನಾ ದೇತಾ ಹೈ ಅನ್ನುವ ಹಾಡು(!!) ಅದರಲ್ಲಿತ್ತು. ನಮಗೆಲ್ಲ ತುಂಬ ಇಷ್ಟವಾದ ಹಾಡು ಅದು. ಸುಬಹ್ ನಿಕಲೋ, ಭೀಡ್ ಕಾ ಏಕ್ ಹಿಸ್ಸಾ ಬನೋ ಅಂತ ಉಗಿದು , ಶಾಮ್ ಕೊ ವಾಪಸ್ ಘರ್ ಆ ಜಾವೋ, ದಾರೂ ಪಿಯೋ ,ಬಚ್ಚೇ ಪೈದಾ ಕರೋ ಔರ್ ಫಿರ್ ಮರ್ ಜಾವೋ ಅಂತ ಕುಟುಕಿ, ಕ್ಯೋಂಕಿ ಆತ್ಮ ಔರ್ ಅಂದರ್ ಕಾ ಇನ್ಸಾನ್ ಮರ್ ಚುಕಾ ಹೈ ಅಂತ ಮುಗಿಸುತ್ತಿದ್ದ ವಿಚಿತ್ರ ಸಾಲುಗಳು, ಬಿದ್ದು ಸಾಯ್ರಿ ಆದ್ರೆ ಆ ಜಲಪಾತದ ತರಾ ಬಿದ್ದು ಸಾಯ್ರಿ – ಅದ್ರ ಅಂದ ನಾದ್ರೂ ಉಳಿಸ್ಕೊಳ್ಳುತ್ತೆ ಆ ಜಲಪಾತ ಎಷ್ಟೇ ಎತ್ತರದಿಂದ ಬಿದ್ರೂ ಅನ್ನೋ ಅರ್ಥದ ಸಾಲುಗಳೂ ಇತ್ತು ಅದ್ರಲ್ಲಿ. ಈ ಸಾಲುಗಳನ್ನ ಕೇಳುವಾಗ ನಮ್ಮ ಕಣ್ಣಲ್ಲಿ ಮಿಂಚಿನ ಸಂಚಾರ. ಗಿರಿ ಅಣ್ಣನಿಗೂ ಅದು ವಿಪರೀತ ಹಿಡಿಸಿದ ಸಾಲು ಅಂತ ನೆನಪು.

ನಿಗಿ ನಿಗಿ ಕೆಂಡದಂತ ನಾನಾ ಪಾಟೇಕರ್ ಅವರಿಗೆ ಹಿಡಿಸಿದ್ದು ಸುಮ್ಮನೆ ಏನಲ್ಲ ಅಂತ ಈಗೀಗ ಗೊತ್ತಾಗ್ತಾ ಇದೆ. ಅವರ ಸಿನೆಮಾಗಳಲ್ಲಿ ಅಂತದೊಂದು ಕೆಂಡ ನಿಗಿ ನಿಗಿ ಉರಿಯುತ್ತ ಇರುತ್ತದೆ, ಬೂದಿ ಮುಚ್ಚುವ ಕೆಲಸ ಅವರಂತೂ ಮಾಡುವುದಿಲ್ಲ. ಕಲ್ಲಂಗಡಿ ಹಣ್ಣು ಮಾರುವ ವ್ಯಾಪಾರದಲ್ಲಿ ಕೆಂಡ ಯಾವನಿಗೆ ಬೇಕು ಅಂತಲೂ ಅವರು ಕೇಳಿದವರಲ್ಲ. ಸಂತೋಷವೂ ಅದೇ ಬೇಸರವೂ ಅದೇ!! ಜಟ್ಟದಲ್ಲೂ ಹಿಗ್ಗಾ ಮುಗ್ಗಾ ಚಚ್ಚಿದ್ದಾರೆ, ನಾನಾ ಪಾಟೇಕರ್ ಜಪ್ಪಿದಂತೆ !! ಗಂಡಸರ ಬಗ್ಗೆ ಹೆಂಗಸರಿಗೂ ಇರದಷ್ಟು ಸಿಟ್ಟು ಅವರ ಪೆನ್ನಿಗೆ ಇದೆ ಅನ್ನುವುದೂ ಮೆಚ್ಚುಗೆಯ ಮಾತೇ. ಕಾಡಿನಂತ ಚಿತ್ರ ರಂಗದಲ್ಲಿ ಕಾಡಿನ ಬಗ್ಗೆ ಮಾತಾಡಿದ್ದಾರೆ, ಅಪರೂಪಕ್ಕೆ ಕಾಡುವ ಸಿನಿಮಾ ಮಾಡಿದ್ದಾರೆ. ಕಾಡಿನ ಸಿನಿಮಾ ಕಾಡುವ ಸಿನಿಮಾವೂ ಆಗುತ್ತದೆ Werner Herzog ನ ಸಿನೆಮಾಗಳಲ್ಲಿ ಆದಂತೆ(ಅವನ ಈ ಸಿನಿಮಾ ನನಗೆ ತುಂಬಾ ಇಷ್ಟ ). ಆತ್ಮ ಔರ್ ಅಂದರ್ ಕಾ ಇನ್ಸಾನ್ ಮರ್ ಚುಕಾ ಹೈ ಅಂದಂತಿದ್ದ ಗಾಂಧಿ ನಗರಕ್ಕೆ ಇಂತಹ ಚಿತ್ರಗಳು ಬೇಕಿತ್ತು, ಬಾಕ್ಸ್ ಆಫೀಸ್ನಲ್ಲಿ ಬಿದ್ದರೂ ಜಲಪಾತದ ತರ ಬೀಳುವರು ಬೇಕಿತ್ತು.

ಕೆಲವೇ ಪಾತ್ರಗಳನ್ನ ಇಟ್ಕೊಂಡು, ನಾಯಕ ನಟರು ಬೇಡ ನಟರು ಸಾಕು ಅಂದ್ಕೊಂಡು ಸಿನಿಮಾ ಮಾಡಿದ್ದಾರೆ. ಅಡಿಗರ ಕವನಗಳಲ್ಲಿ ತುಂಬ ಸಿಟ್ಟಿತ್ತು, ಸಿದ್ದಲಿಂಗಯ್ಯ ಅಂತೂ ಇಕ್ರಲಾ ಒದೀರ್ಲಾ ಅಂತಲೇ ಸಿಟ್ಟಾಗಿದ್ದರು, ಇವರ ಸಿನಿಮಾ ಗಳಲ್ಲೂ ಇರುವುದು ಅಂತದ್ದೇ ಸಿಟ್ಟು, ಸಿಟ್ಟು ಗಿರಿರಾಜರ ಸ್ಥಾಯಿ ಭಾವ. ತೀರ ನವ್ಯದವರ ತರ ಸೆಕ್ಸ್ ಬಗ್ಗೆ ಅಷ್ಟೊಂದು ಮಾತಾಡಿಯೂ ಹುಡುಗಿಯರ ಕೈಲೂ ಸಿನಿಮಾ ಚೆನ್ನಾಗಿದೆ ಅನ್ನಿಸಿಕೊಂಡಿದ್ದಾರೆ .

ಗೇರು ಸೊಪ್ಪದ ತಾಣಗಳಲ್ಲಿ ಆರದ ಗಾಯಕ್ಕೆ ಮುಲಾಮು ಹುಡುಕುತ್ತಿರುವ ಜಟ್ಟ, ಗಾಯಕ್ಕೆ ಉಪ್ಪು ಹಾಕಿ ಗುಣ ಮಾಡುವ ಸ್ವಭಾವದ ಸಾಗರಿಕ, ಒಂಥರಾ ನೋಲನ್ ಸಿನಿಮಾದಲ್ಲಿ ಬ್ಯಾಟ್ಮ್ಯಾನ್ ಮತ್ತು ಜೋಕರ್ ಡಿಕ್ಕಿ ಹೊಡೆದ ಹಾಗೆ ಮುಖಾ ಮುಖಿಯಾಗುತ್ತಾರೆ. ಬೃಂದಾವನವೇ ಬೆಸ್ಟ್ ಫಿಲಮ್ಮು ಅನ್ನುವವನಿಗೂ ಲೂಸಿಯ ಬಿಟ್ರೆ ಬೇರೆ ಇಲ್ಲ ಅನ್ನುವವನಿಗೂ ಇರುವಷ್ಟೇ ವ್ಯತ್ಯಾಸ ಅವರ ನಡುವೆ. ನಂಬಿದ್ದಕ್ಕೆ ಅಂಟುವ ಆತ, ಕೆಣಕುವ ಆಕೆ, ಸುಲಭಕ್ಕೆ ಮುಗಿಯದ ಜಗಳ.

ಸುಕೃತ ಪಳಗಿದ(!) ನಟಿಯಂತೆ ನಟಿಸಿದ್ದಾರೆ, ಸೊಕ್ಕು, ಸೆಡವು,ಹಟ ಎಲ್ಲ ಚೆನ್ನಾಗಿ ಕಂಡಿದೆ ಸುಕೃತ ನಟನೆಯಲ್ಲಿ . ಕಿಶೋರ್ ಎಂದಿನಂತೆ ಲೀಲಾ ಜಾಲ , ಎಂದಿಗಿಂತ ಸ್ವಲ್ಪ ಹೆಚ್ಚೇ ಲೀಲಾ ಜಾಲ , ಇಂತಹ ನಟರು ನಮಗೆ ಬೇಕೇ ಬೇಕು ಅನ್ನಿಸುವಂತ ನಟನೆ . ಪ್ರೇಂ ಕುಮಾರ್ ಮತ್ತು ಪಾವನ ಚಿಕ್ಕ ಚೊಕ್ಕ ಪಾತ್ರಗಳಲ್ಲಿ ಸರಾಗವಾಗಿ ನಟಿಸಿದ್ದಾರೆ.

Orson Welles ಮೊದಲ ಬಾರಿ Citizen Kane ತೋರಿಸಿದಾಗ ಈ ಪುಣ್ಯಾತ್ಮ ಹಾಲಿವುಡ್ ನ ಎಲ್ಲ ನಿಯಮಗಳನ್ನ ಮುರಿದಿದ್ದಾನೆ ಅಂದರಂತೆ ಯಾರೋ . ಮುರಿಯೋದಕ್ಕೆ ನಂಗೆ ಈ ರೂಲ್ಸು ಯಾವ್ದು ಅಂತ ಗೊತ್ತೇ ಇರ್ಲಿಲ್ಲ ಅಂದನಂತೆ ಆತ. ಅಜ್ಞಾನವೇ ಪರಮ ಸುಖ ಅಂದಂತೆ. ಗಿರಿರಾಜ್ ಕೂಡ ಹಾಗೆ ಒಂದು ಅರ್ಥದಲ್ಲಿ. ಇದು ಶೇಷಾದ್ರಿಯೋ, ಕಾಸರವಳ್ಳಿಯೋ ಸಿಟ್ಟಿಂದ ಮಾಡಿದ ಸಿನಿಮಾ ದ ಹಾಗಿದೆ. ಚೆನ್ನಾಗೇ ಇದೆ, ART ಫಿಲಂಗಳು ಚೆನ್ನಾಗಿರುವಂತೆ, ದ್ವೀಪವೋ ಅತಿಥಿಯೋ ಎಲ್ಲರಿಗೂ ಇಷ್ಟ ಆದಂತೆ. ಮುಂದೆ ಎಲ್ಲ ತರದ ಸಿನಿಮಾಗಳನ್ನೂ ಮಾಡಿ. ಬ್ರಿಜ್ ಸಿನಿಮಾವೇ ಮುಂದೆ ಕಮರ್ಷಿಯಲ್ ಆಗಲಿ. ಇದು ಕಮರ್ಷಿಯಲ್ ಅಲ್ಲ ಅನ್ನಿಸುವಂತ ಕಮರ್ಷಿಯಲ್ ಸಿನೆಮಾಗಳನ್ನ ಮಾಡಿ, ಹಾಗಂತ ಹಾರೈಸುತ್ತ……….!!(ಇದನ್ನೆಲ್ಲ ಒಂದು ಭಾಷಣದಲ್ಲಿ ಇನ್ನಷ್ಟು ಸೊಗಸಾಗಿ ಹೇಳಬಹುದಿತ್ತೇನೋ, ನನ್ನ ಭಾಷಣಗಳನ್ನ ನಿಮ್ಮಲ್ಲಿ ಕೆಲವರು ನೋಡೇ ಇದ್ದೀರಿ ! ಇದನ್ನೂ ಹಾಗೆ ಕಲ್ಪಿಸಿಕೊಳ್ಳಿ !)

Sunday 25 May 2014

ರಾಹುಲ್ ದ್ರಾವಿಡ್ ಒಂದು ನುಡಿ ನಮನ

ದ್ರಾವಿಡ್ ನಿವೃತ್ತಿ ಘೋಷಿಸಿದಾಗ ಗೀಚಿದ್ದ ಪುಟ್ಟ ನುಡಿ ನಮನ :

ಕುಂಚ ಕೆಳಗಿಟ್ಟ ಕಲಾವಿದ ದ್ರಾವಿಡ್ಗೆ ಒಂದು ಪುಟ್ಟ ನುಡಿ ನಮನ (ಅಷ್ಟೂ ಮಾಡದೇ ಇದ್ದರೆ ಹೇಗೆ):
ಹನಿ ನೀರಾವರಿಯ ತರ ಒಂದೊಂದಾಗಿ ರನ್ ಪೇರಿಸಿ ಹಳ್ಳಕ್ಕೆ ಬೀಳಿಸ್ತಾನೆ ಅಂತ ಬೆವನ್ ನ ಬಗ್ಗೆಯೋ ಕಾರ್ಲ್ ಹೂಪರ್ ನ ಬಗ್ಗೆಯೋ ಹೇಳಿ ನಾವೆಲ್ಲ ಖುಷಿ ಪಡುವಾಗ ನಮಗೂ ಒಬ್ಬ ಇಂಥ ಕಸುಬುದಾರ ಬೇಕು ಅನ್ನೋ ಇಂಗಿತವೂ ಅಷ್ಟೋ ಇಷ್ಟೋ ಇತ್ತು ಅನ್ನಿ.

ಆಮೆಲಾಮೇಲೆ ಅಂಥಾ ವಿವಿಯನ್ ರಿಚರ್ಡ್ಸ್ ಬಾಯಿಂದಲೇ "On a different note, I can't help commenting that when it comes to style, I find Rahul... Dravid most stylish. In boxing parlance, he gets his punches without anyone noticing it. At the end of it, his opponent is bruised! " ಅನ್ನೋ ಮಾತು ಬಂತು.

ಟೆಸ್ಟ್  ಪ್ಲೇಯರ್ ಅಂತ ಕರೆಸಿಕೊಂಡು, ವನ್ ಡೇಯಲ್ಲೂ classy ಅನ್ನಿಸಿ, One Day/T20 ಆಡಲಾರ ಅಂತಲೂ ಟೀಕಿಸಿಕೊಂಡು ಎಲ್ಲ ಟೀಕೆಗಳ ಮೇಲೆ ಅದೇ ಸಂಯಮದಿಂದ ಚಂದದೊಂದು "ಗೋಡೆ" ಕಟ್ಟಿ, 20 ಚಿಲ್ಲರೆ ಬಾಲ್ ಗಳಲ್ಲಿ 50 ರನ್ ಉಡಾಯಿಸಿ, ಲಕ್ಷ್ಮಣ್ ನ 281 ರ ಜೊತೆ ಮರೆಯಾಗಿ, ಗಂಗೂಲಿ ಯ 180 ರ ಹಿಂದೆ ಕಳೆದು ಹೋಗಿ, ತೆಂಡುಲ್ಕರ್ ನ 140 ರ ಅಬ್ಬರಕ್ಕೆ ಜೊತೆಯಾಗಿ ನಮ್ಮ ನರಸಿಂಹ ಸ್ವಾಮಿಗಳ ಕವನದಂತೆ ಮೆಲುವಾಗಿ, ಹಿತವಾಗಿ, ಹೂವಿನಂತ ಇನ್ನಿಂಗ್ಸ್ ಕಟ್ಟಿದ ನಿಮಗೆ ನೀವೇ ಮಾದರಿ!!

ದೊಂಬರಾಟ ದವರ ತಂತಿ ಮೇಲೆ ನಿಲ್ಲಿಸಿ ಕೈಗೆ ಒಂದು ಹಾಕೀ ಸ್ಟಿಕ್ ಕೊಟ್ಟು ಒಂದು ಟೇಬಲ್ ಟೆನಿಸ್ ಬಾಲ್ ಎಸೆದರೂ ಅದನ್ನು ಮಿಸುಕಾಡದಂತೆ ತಟ್ಟಿ ಮಲಗಿಸಬಲ್ಲ ನಿಪುಣ ಕಲಾವಿದ ನೀವು. ನಿಮಗಿಲ್ಲ ಮರು ಮಾದರಿ!! ನೀವಿಲ್ಲ, ಇಂದೋ ನಾಳೆಯೋ ಸಚಿನ್ ಕೂಡ ಮನೆ ಸೇರಿದರೆ ಅಮೇಲೆ ಕ್ಲಾಸ್ ಅಂದರೇನು ಅಂತ ಯಾರಾದರೂ ಕೇಳಿದರೆ ಯಾರನ್ನು ತೋರಿಸೋಣ ? ಉಳಿಯುವುದು ಅದೇ ಹಳೆ ದೊಂಬರಾಟ !!

ಕೊನೇ ಸಿಡಿ(Twitterನಿಂದ ಹೆಕ್ಕಿದ್ದು): As is usual in India, they could name a street after #RahulDravid. But then, the Americans have already done it. Wall Street.

Andar Baahar film review

A review that I had written an year ago:
There are 3 reasons why you should watch this film:
1.     Parvathi Menon!
2.     Parvathi Menon !!
2.5. Parvathi Menon !!!
3.     Shivanna has finally tried something good.

If someone were to offer me a job to select the best performance by a heroine this year, I would not take the job. It would be mind bogglingly difficult to tell. Who wants to make a tough decision? I would not take it. Unless of course, I am allowed to declare a tie. A tie between the Menons. Nithya Cute Menon in Myna and Parvathi superb Menon Andar Bahar. What a performance it was!

Well,let me come to SRK before his fans pelt me with stones picked from the busy streets of KG road. SRK deserves some praise too. Firstly, for a good performance. Secondly for deciding to come out of a blood bubblingly bad spree of films like Jogayya, Lakshmi and Shiva. This is a step in the right direction. If you were to act like a PT master in a high school and ask the audience to fall in lines as per their taste, you would get 3 different lines.

First line would have hard core fans. These are freaks who would erect cut outs, dudes who watch movies to escape from it all. They belong to the “Cinema as escapism” category. They are poularly knwon as “The mass”. They would want their heroes to do superhuman things! Things like reaching from Majestic to maratha halli in 45 minutes during peak hours! Their hero should blast the baddies the way Chris Gayle treats cricket balls. Thier hero has to come like a Tsunami and go like a hurricane.
Second line will have English speaking, college going dudes who would not know who the president of India is unless it comes in MTV roadies. They would not know that a kannada film is releasing unless some chick shares the news in facebook. They are not fan boys(not at least of kannada heroes)
In the 3rd line you will have the great Indian families. Their list of favourites would include films like Yajamana, Anna thangi, Amruta Dhaare, Milana, Myna etc etc.

A film should get at least one line from above running towards theaters to be successful. To be a Mungaru male, it has to appeal to all 3 sections. To be a Simple aag ond love story it has to look cool to the 2nd line. To be a Myna it has to touch the hearts of people standing in the 3rd line.
Any teacher from any MBA school worth his salt would tell you that you should market your product to the right set of consumers. A case study on Andar Bahar would immediately reveal that it is a product prepared for the people in 3rd line. The mistake of course is that we had people from the 1st line queued near the theaters.

All said, Andar bahar is a decent film. One part of the story is a little cliched but there still is some freshness. There is nothing mindblowing but it definitely is worth a watch. Regular audeince might feel that it is a little slow but then if you are taking a city tour you would want the tour to be slow and relaxed, a bullet train would not be an ideal choice. Yes, there is some lag but then I am not sure as to what could have been cut.

The film starts like a mass film and then slowly moves to the slow and family mode. What makes that work is the lovely Parvathi and a decent performance by SRK. Scenes of the vegetable market, the tattoo scene and the handy cam scene in the end were touching and will stay in my mind for some time. The spinning car in the fight scene looked stylish. Vijay Prakash’s music was refreshingly different from the routine Hari Krishna stuff. Title track and Maleyali Minda deserve a special mention. Picturisation is rich and soothing to the eyes.

Go for it if you are fine with a slow, soft and meant for family kind of stuff. A good one time watch.

7.75/10

ಸಿಂಪಲ್ ಚಿತ್ರಕ್ಕೊಂದು ಕಾಂಪ್ಲಿಕೇಟೆಡ್ ವಿಮರ್ಶೆ !!

ಸಿಂಪಲ್ ಆಗೊಂದ್ ಲವ್ ಸ್ಟೋರಿ ಸಿನೆಮಾಕ್ಕೆ ನಾನು ಬರೆದಿದ್ದ ಹಳೇ  ಪಾತ್ರೆ ಹಳೇ ಕಬ್ಣದಷ್ಟು ಹಳೇ  ವಿಮರ್ಶೆ :

ನಿನ್ನೆ ಎಲ್ಲ ನಿನ್ನೆಗಳ ಥರ ಇರಲಿಲ್ಲ, ಬಹಳಷ್ಟು ನಾಳೆಗಳು ನೆನಪು ಇಟ್ಟುಕೊಳ್ಳುವಂತ ನಿನ್ನೆ ಮಾಲೆ ಪಟಾಕಿ ಒಂದು ಸಿಡಿಯಿತು. ಅದು ಮಾತಿನ ಪಟಾಕಿ, ತರಲೆಗಳ, ಈಗಿನ ಹುಡುಗರು ಮೆಚ್ಚಿ ಅಹುದಹುದೆನ್ನುವಂತ ಮಾತುಗಳ ಸರ ಪಟಾಕಿ.

ಭಯಂಕರ ಸ್ಟಾರ್ ಗಳು ಅಂತ ಯಾರೂ ಇಲ್ಲದಿದ್ದರೆ ಕನ್ನಡ ಸಿನಿಮಾ ನೋಡೋದಕ್ಕೆ ಯಾರೂ ಬರೋದಿಲ್ಲ ಅನ್ನೋ ನಂಬಿಕೆಯ ತಲೆ ಮೇಲೆ ಹೊಡೆದಂತೆ ಜನ ಬಂದಿದ್ದರು. ಮಲ್ಟಿಪ್ಲೆಕ್ಸುಗಳು ಸೀಟು ಖಾಲಿಯಾಗಿದೆ ಅನ್ನೋ ಬದಲು ಟಿಕೆಟ್ ಖಾಲಿಯಾಗಿದೆ ಅಂತ ಉಸುರಿ ಧನ್ಯವಾದವು. ಎಲ್ಲ ಥಿಯೇಟರ್ ಗಳ ಮುಂದೆಯೂ ಕಾಲೇಜು ಹುಡುಗರ ದಂಡು, ಥಿಯೇಟರ್ಗಳ ಹತ್ತಿರ ಜನ ಸಾಗರ. ಮಹಾಸಾಗರ.  ಹಿಂದೂ ಮಹಾ ಸಾಗರ, ಮುಂದೂ ಮಹಾ ಸಾಗರ! ಆ ಮಟ್ಟಿಗೆ ಇದು  ಒಂಥರಾ ಅತಳ, ಸುತಳ, ಭೂತಳ, ಪಾತಾಳ, ತಳಾತಳ ಮತ್ತು ಫೇಸ್ಬುಕ್ ಗಳಲ್ಲಿ ಅಡಗಿದ್ದ ಪಡ್ಡೆ ಗಳನ್ನ , ಕಾಲೇಜು ಗಳ ಹತ್ತಿರ ಸುಳಿದಾಡುತ್ತಿದ್ದ ಹುಡುಗರನ್ನ ಥಿಯೇಟರ್ಗೆ ಎಳೆದು ತಂದ ಹೊಸ ಅಲೆಯ ಸಿನಿಮಾ. ಈ ಥರ ಹುಡುಗರು ನೋಡೋ ಅಂತ ಸಿನಿಮಾ ಮಾಡಿಯೂ ಗೆಲ್ಲಬಹುದು ಅಂತ ಈ ಸಿನಿಮಾ  ಸಾಧಿಸಿ ತೋರಿಸಲಿ ಅಂತ  ಹಾರೈಸಿ ಈ ವಿಚಾರವನ್ನ ಇಲ್ಲಿಗೆ ಕೈ ಬಿಡಬಹುದು!!

ಚಿತ್ರ ಕಥೆ ಬರೆಯೋದನ್ನ ಹೇಳಿ ಕೊಡೋ ಮೇಷ್ಟ್ರುಗಳು ಹೇಳಿ ಕೊಡುವ ಮೊದಲನೇ ಪಾಠ ಅಂದರೆ “Don’t tell,Show” ಅಂತ. ಅಂದರೆ ಪಾತ್ರಗಳು ಆಡದೇ, ಮಾಡಿ ರೂಡಿಯೊಳಗುತ್ತಮರಾಗಬೇಕು ಅಂತ. ಲೋಕನಾಥ್ ಉಪ್ಪಿನ ಕಾಯಿ ತಿಂತೇನೆ ಅಂತ ಡೈಲಾಗ್ ಉದುರಿಸಬಾರದು, ತಿಂದು ತೋರಿಸಬೇಕು, ಯಾಕೆಂದರೆ ಇದು ದೃಶ್ಯ ಮಾಧ್ಯಮ. ಇಂಥಹ ಮೇಷ್ಟ್ರುಗಳ ಮಾತು ಕೇಳಿಸದಷ್ಟು ಮಾತಾಡಿದ್ದು ಯೋಗರಾಜ ಭಟ್ಟರ ಪಾತ್ರಗಳು. ಈಗ  ಯೋಗರಾಜ ಭಟ್ಟರ ಪ್ರೀತಂ ಸ್ವಲ್ಪ ಸೈಲೆಂಟ್ ಹುಡುಗ ಅನ್ನಿಸುವಷ್ಟು ಮಾತಾಡಿರೋದು ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿಯ ಪಾತ್ರಗಳು.

ಅಂದ ಹಾಗೆ ಸಿನಿಮಾ ಹೇಗಿದೆ? ಸೀರಿಯಸ್ಸಾಗಿ ಹೇಳುವುದಾದರೆ ತಮಾಷೆಯಾಗಿದೆ. ರೀಡರ್ಸ್ ಡೈಜೆಸ್ಟ್ ನ ಐವತ್ತು ಪ್ರತಿಗಳಿ ಗಾಗುವಷ್ಟು “Quotable quotes”ಅನ್ನ ಬರೆದು ಬಿಸಾಡಿದ್ದಾರೆ ನಿರ್ದೇಶಕ  ಸುನಿ. ಕತೆ ಇಲ್ಲವಾ ಅಂತ ಕೇಳಿದರೆ ಇದೆ, ನಿಧಾನಕ್ಕೆ ಬಿಚ್ಚಿಕೊಳ್ಳುವ ಬಾವುಟದ ಥರ, ಮಾತುಗಳಲ್ಲಿ, ಹುಡುಗ ಹೇಳುವ ಕಥೆಯಲ್ಲಿ, ತರಳೆಯ  ತರಲೆಯಲ್ಲಿ, ಕಥೆ ಬೇಕೇ ಬೇಕು ಅನ್ನುವವರಿಗೆ ಸಾಕಾಗುವಷ್ಟು ಕಥೆ ಸಿಗುತ್ತದೆ. ಒಬ್ಬ ಹುಡುಗ ಒಬ್ಬ ಹುಡುಗಿಯನ್ನ ನೋಡೋಕೆ ಹೋಗಿ, ಅವರು ಒಂದಿಷ್ಟು ಹರಟೆ ಹೊಡೀತಾ ತಮ್ಮ ಗತ ಸಾಹಸಗಳನ್ನ ಹೇಳಿಕೊಳ್ಳೋದೇ ಸ್ಟೋರಿ. ಹಾಗೆ ಹೇಳುವಾಗ ಎಷ್ಟು ಮಜವಾಗಿ ಹೇಳ್ತಾರೆ ಅನ್ನುವುದು ಸಿನಿಮಾ ಹಳೇ ಪಾತ್ರೆನಾ ಅಥವಾ ಹಳೇ ಪಾತ್ರೆ ಥರಾ ಕಾಣೋ ಹೊಸಾ ಕಬ್ಣನಾ ಅಂತ ಹೇಳುತ್ತೆ. ಹಿಟ್ಟು ನಿನ್ನೇದೇ ಆದರೂ ಇವತ್ತು  ಹುಯ್ದಾಗ  ದೋಸೆ ಗರಿ ಗರಿಯಾಗೇ ಇರೋದಿಲ್ವೆ? ಸುನಿ ಗರಿ ಗರಿಯಾಗಿ, ರುಚಿ ರುಚಿಯಾಗೇ ಹುಯ್ದಿದ್ದಾರೆ ದೋಸೇನ. ದಿನ ಪೂರ್ತಿ ತಂಟೆ ಮಾಡುತ್ತ ಕುಣಿದಾಡುವ ಮುದ್ದು ಹುಡುಗಿಯ ಲವಲವಿಕೆಯ ತರ ಇದೆ ಸಿನಿಮಾ. ಲವಲವಿಕೆ ಯಾರಿಗೆ ತಾನೇ ಬೇಡ ? ಸುಮ್ಮನೆ ಇಬ್ಬರು ಮಾತಾಡಿದರೆ ಕಥೆ ಆಗುತ್ತಾ? ಅದು ಅವರು ಏನು ಮಾತಾಡ್ತಾರೆ ಅನ್ನೋದರ ಮೇಲೆ ಅವಲಂಬಿಸಿರುತ್ತದೆ! Before Sunrise ಅನ್ನೋ ಇಂಗ್ಲಿಷ್  ಫಿಲ್ಮಿನಲ್ಲಿ ಎರಡು ಪಾತ್ರಗಳು ಮಾತಾಡೋದು ಬಿಟ್ಟು ಇನ್ನು ಏನೂ ಇರಲಿಲ್ಲ. The man from earthನಲ್ಲೂ ಮಾತೇ ಕತೆ!

ಕಣ್ಣಿಗೆ ಇಷ್ಟ ಆಗುವ ಜಾಗಗಳು, ಕಣ್ಣಿಗೂ ಕಿವಿಗೂ ಇಷ್ಟ ಆಗುವ ಹುಡುಗಿ,  ಚಂದದ ಕ್ಯಾಮೆರಾ ಕುಸುರಿ ಎಲ್ಲ ಇದೆ. ಹೆಕ್ಕಿ ತೆಗೆದ ಲೊಕೇಷನ್ನುಗಳು, ಆ ಲೊಕೇಷನ್ನುಗಳಲ್ಲಿ  ಓಡಾಡುವ ಹುಡುಗ ಹುಡುಗಿ, ಒಂದಷ್ಟು ಮಳೆ, ಸ್ವಲ್ಪ ಚಳಿ ಎಲ್ಲದರಲ್ಲೂ ನಿರ್ದೇಶಕ ಸಿಗುತ್ತಾನೆ. ರಕ್ಷಿತ್ ನೇರ,ದಿಟ್ಟ,ನಿರಂತರ. ಕನ್ನಡಕ್ಕೆ ಸ್ಕ್ರಿಪ್ಟು ಓದುವ, ಕಥೆ ಕೇಳುವ ಸೂಕ್ಷ್ಮ ಮನಸ್ಸಿನ ಅಭಯ್ ಡಿಯೋಲ್ ತರದ ಸ್ಟಾರ್ ಒಬ್ಬ ಇದ್ದರೆ ಚೆನ್ನಾಗಿತ್ತು ಅನ್ನುವವರು ರಕ್ಷಿತ್ ಕಡೆ ತಿರುಗಿ ನೋಡಬಹುದು. ರಕ್ಷಿತ್ ಹಾಗಾಗಲಿ. ಶ್ವೇತಾ ಅನ್ನೋ ಚಿನಕುರುಳಿ ಇನ್ನಷ್ಟು ಸಿನಿಮಾ ಮಾಡಲಿ. ಸುನಿ ಮತ್ತು ಅವರ ತಂಡ ಇನ್ನೊಂದಿಷ್ಟು ಚೆಂದದ ಸಿನಿಮಾ ಮಾಡಿ ನಮ್ಮನ್ನ ಖುಷಿ ಪಡಿಸಲಿ.

8.25/10

Tuesday 20 May 2014

ಇಂಗ್ಲೀಶ್ ಎನೆ ಕುಣಿದಾಡುವುದೆನ್ನೆದೆ

ಕನ್ನಡ ಮಾಧ್ಯಮ ಕಡ್ಡಾಯವಲ್ಲ : ಸುಪ್ರೀಂ ತೀರ್ಪು

ಇದೊಂದು ಬೇರೆ ಬಾಕಿ ಇತ್ತು . ಇದು ಒಂದು ರೀತಿ ಕ್ಯಾನ್ಸರ್ ರೋಗಿಗೆ ವಿಷ ಕೊಟ್ಟ ಹಾಗೆ. ಮೊದಲೇ ನಮ್ಮ ಖಾಸಗಿ ಶಾಲೆಗಳಿಗೆ ಕನ್ನಡ ಅಂದರೆ ಅಷ್ಟಕ್ಕಷ್ಟೇ. ಮಗುವಿಗೆ ತನಗೇನು ಬೇಕು ಅಂತ ಗೊತ್ತಿಲ್ಲ, ಅದರ ಅಪ್ಪ ಅಮ್ಮನಿಗೆ ಕನ್ನಡ ಬೇಕಾಗಿಲ್ಲ, ಇಷ್ಟು ಸಾಲದು ಅಂತ ತೀರ್ಪು ಬೇರೆ. ಕರ್ನಾಟಕದಲ್ಲಿ ಕನ್ನಡ ಬೇಡ ಅಂದ್ರೆ ಹೇಗೆ ? ಇಲ್ಲಿ ಕನ್ನಡ ಬೇಡ ಅಂತಾದರೆ, ಇನ್ನೆಲ್ಲಿ ಸೋಮಾಲಿಯಾದಲ್ಲೋ ಈಜಿಪ್ಟಿನಲ್ಲೋ ಮಕ್ಕಳು ಕನ್ನಡ ಕಲಿಯಬೇಕೆ? 

ಇಂಗ್ಲೀಶು ಮಾಧ್ಯಮದಲ್ಲಿ ಕಲಿತರೆ ಮಾತ್ರ ಒಳ್ಳೆಯ ಕೆಲಸ ಸಿಗುತ್ತದೆ ಅನ್ನುವುದು ನಮ್ಮ ಪೇಟೆ ಜನರ ಅತಿ ದೊಡ್ಡ ಮೂಢ ನಂಬಿಕೆ. ಹಾಗೆ ನೋಡಿದರೆ ಇದಕ್ಕೆ ಯಾವ ಆಧಾರವೂ ಇಲ್ಲ. ವಿದೇಶಗಳಲ್ಲಿ ಇಂತಹಾ ವಿಷಯಗಳ ಬಗ್ಗೆ ಹತ್ತಿಪ್ಪತ್ತು ವರ್ಷ ಅಧ್ಯಯನ, ಸಂಶೋಧನೆ ಮಾಡಿ ಒಂದು ತೀರ್ಮಾನಕ್ಕೆ ಬರುವ ಕ್ರಮ ಇದೆ. ಈಗ ಒಂದೇ ಮಟ್ಟದ ಮೇಧಾಶಕ್ತಿ, ಬುದ್ಧಿ ಸಾಮರ್ಥ್ಯ ಇರುವ, ಒಂದೇ ಸಾಮಾಜಿಕ ಸ್ತರದಿಂದ ಬಂದ ನೂರು ಮಕ್ಕಳನ್ನ ಆಯ್ದುಕೊಂಡು, ಅವರಲ್ಲಿ ಒಂದೈವತ್ತು ಜನ ಕನ್ನಡ, ಒಂದೈವತ್ತು ಜನ ಇಂಗ್ಲೀಷು ಮಾಧ್ಯಮಕ್ಕೆ ಹೋಗುತ್ತಾರೆ ಅಂತಾದರೆ, ಈ ಮಕ್ಕಳನ್ನ ಒಂದು ಇಪ್ಪತ್ತು ಮೂವತ್ತು ವರ್ಷ ಗಮನಿಸಿ ಇಂಗ್ಲೀಷು ಮಾಧ್ಯಮದಲ್ಲಿ ಕಲಿತವರು ಉಳಿದ ಮಕ್ಕಳಿಗಿಂತ ವೃತ್ತಿಯಲ್ಲಿ ಮೇಲೆ ಹೋಗುತ್ತಾರೆಯೇ ಅಂತ ಗಮನಿಸಬಹುದು. ಇಂತಹಾ ಅಧ್ಯಯನಗಳೇನೂ ನಮ್ಮಲ್ಲಿ ಆದ ಹಾಗಿಲ್ಲ. ಹಾಗಾಗಿ ಈ ವಾದಕ್ಕೆ ಬಲವಾದ ಸಾಕ್ಷಿ ಆಧಾರಗಳೇನೂ ಇರುವ ಹಾಗಿಲ್ಲ. ಇಲ್ಲಿರುವುದು ಒಂದು ಗ್ರಹಿಕೆ ಅಥವಾ ನಂಬಿಕೆ ಮಾತ್ರ.  

ಗಮನಿಸಿ ನೋಡಿ. ಇವತ್ತು ಬೆಂಗಳೂರಿನಂತಹ ನಗರಗಳಲ್ಲಿ ಅರ್ಧರ್ಧ ಇಂಗ್ಲೀಷು ಮಾತಾಡುವ ಪುಟ್ಟ ಕಂದಮ್ಮಗಳು ಬೇಕಾದಷ್ಟು ಸಿಗುತ್ತವೆ. ಮಕ್ಕಳಿಗೆ ಕನ್ನಡವೂ ಕಲಿಸಿ ಜೊತೆಗೆ ಒಂದಷ್ಟು ಇಂಗ್ಲೀಷು ಹೇಳಿಕೊಟ್ಟರೆ ತೊಂದರೆ ಏನೂ ಇರಲಿಲ್ಲ. ಕನ್ನಡವನ್ನು ಸಂಪೂರ್ಣವಾಗಿ ಬಿಟ್ಟು ಬರೀ ಇಂಗ್ಲಿಷು ಮಾತ್ರ ಕಲಿಸುವುದರ ಬಗ್ಗೆ ತಕರಾರು  ಇರುವುದು. ಅಮೆರಿಕಾದಲ್ಲೋ, UK ಯಲ್ಲೋ ಆದರೆ ಸರಿ. ಇಲ್ಲಿ ಯಾಕೆ ಮಕ್ಕಳು ಕನ್ನಡ, ತಮಿಳು, ತೆಲುಗು ಮಾತಾಡದೆ ಇಂಗ್ಲೀಷು ಮಾತಾಡುತ್ತವೆ ? ಯಾಕೆಂದರೆ ಅವುಗಳ ಅಪ್ಪ ಅಮ್ಮ ಕಲಿಸಿದ್ದು ಅದೇ ಭಾಷೆ, ತೀರ ಉಪಾಯ ಇಲ್ಲದೆ ಅಜ್ಜ ಅಜ್ಜಿಯರೂ ಹರುಕು ಮುರುಕು ಇಂಗ್ಲಿಷಿನಲ್ಲೇ ಕತೆ ಹೇಳುವುದೂ ಇದೆ. ಭೀಮ ಬಕಾಸುರರ ಕತೆಯನ್ನು ಒಬ್ಬ ಅಜ್ಜ ಮಗುವಿಗೆ ಇಂಗ್ಲೀಷಿನಲ್ಲಿ ಹೇಳುವುದು ನೋಡಿ ನಾನೇ ನಕ್ಕದ್ದು ಇದೆ. ಇರಲಿ. ಯಾಕೆ ಹೀಗೆ ? ಮಗುವಿನ ಒಳ್ಳೆಯದಕ್ಕೆ ಹೀಗೆ ಮಾಡ್ತೇವೆ ಅಂತಾರೆ ಹಲವರು. ಇಷ್ಟು ಪುಟ್ಟ ಮಕ್ಕಳು ಅರೆ ಬರೆ ಇಂಗ್ಲೀಷು ಮಾತಾಡಿದರೆ ಹೇಗೆ ಅವಕ್ಕೆ ಒಳ್ಳೆಯದಾಗುತ್ತದೆ ಅಂತ ಕೇಳಿ ನೋಡಿ, ಇವತ್ತು ಇಂಗ್ಲೀಷು ಇಲ್ದೆ ಕೆಲಸ ಎಲ್ಲಿ ಸಿಗುತ್ತೆ ಅನ್ನುವ ಉತ್ತರ ಬರುತ್ತದೆ. ಈ ವಾದ ಎಷ್ಟು ಪೊಳ್ಳು ಅಂತ ನೋಡೋಣ ಬನ್ನಿ. 

ಹಾಗಂತ ಕೆಲಸ ಸಿಗುವುದಕ್ಕೆ ಇಂಗ್ಲೀಶು ಬೇಕಾಗುತ್ತದೆ ಅನ್ನುವುದು ಪೂರ್ತಿ ತಪ್ಪೇನಲ್ಲ. ಇದು ಹೇಗೆ ಅಂದರೆ ಕಂಪ್ಯೂಟರ್ ಬಳಕೆ ಗೊತ್ತಿದ್ದರೆ ಕೆಲಸ ಸಿಗುತ್ತದೆ ಅಂದ ಹಾಗೆ. ಕಂಪ್ಯೂಟರ್ ಬಳಕೆ ಗೊತ್ತಿರಬೇಕು ನಿಜ, ಹಾಗಂತ ಕಂಪ್ಯೂಟರ್ ಬಳಕೆ ಗೊತ್ತಿದೆ ನಿಮಗೆ ಅಂತಲೇ ಯಾರೂ ಕೆಲಸ ಕೊಡುವುದಿಲ್ಲ. ಹಾಗೆಯೇ ಇಂಗ್ಲೀಷು ಗೊತ್ತಿದೆ ಅಂತಲೇ ಯಾರೂ ಕೆಲಸ ಕೊಡುವುದಿಲ್ಲ. ಇಂಗ್ಲೀಷು ಬೇಕು, ತೀರ ಸಲ್ಮಾನ್ ರಶ್ದಿಯ ಮಟ್ಟದ ಇಂಗ್ಲೀಷು ಏನೂ ಬೇಕಾಗಿಲ್ಲ. ಒಟ್ಟಿನಲ್ಲಿ ಇವತ್ತು ಇಂಗ್ಲೀಶು ಬೇಕು ಅನ್ನುವುದು ಎಲ್ಲರೂ ಒಪ್ಪಬೇಕಾದ ವಿಚಾರವೇ. ಪ್ರಶ್ನೆ ಇರುವುದು ಕೆಲಸ ಸಿಗುವುದಕ್ಕೆ ಎಷ್ಟು ಇಂಗ್ಲೀಶು ಬೇಕಾಗುತ್ತದೆ ಮತ್ತು ಅಷ್ಟು ಇಂಗ್ಲೀಶು ಕಲಿಯುವುದಕ್ಕೆ ಕನ್ನಡವನ್ನು ಬಲಿ ಕೊಡಬೇಕೇ ಅನ್ನುವ ವಿಚಾರದಲ್ಲಿ ಮಾತ್ರ. ನಮಗೆ ಗಣಿತ, ವಿಜ್ಞಾನ, ಇತಿಹಾಸ, ಭೂಗೋಳ ಇವೆಲ್ಲ ಹೇಗೆ ಬೇಕೋ ಹಾಗೆಯೇ ಇಂಗ್ಲೀಷು ಕೂಡ ಬೇಕು ಅಂದರೆ ಸಾಕಾಗಲಾರದೇ? 

ವಾಸ್ತವ ಏನೆಂದರೆ ಕೆಲಸ ಸಿಗುವುದಕ್ಕೆ ವ್ಯವಹಾರಕ್ಕೆ ತಕ್ಕಷ್ಟು ಇಂಗ್ಲೀಶು ಗೊತ್ತಿದ್ದರೆ ಸಾಕು, ಅಷ್ಟು ಇಂಗ್ಲೀಶನ್ನು ಬುದ್ದಿವಂತರು ಸಲೀಸಾಗಿ ಕಲಿಯುತ್ತಾರೆ  - ಶಾಲೆಯಲ್ಲಿ ಕನ್ನಡದಲ್ಲೇ ಕಲಿತಿರಲಿ, ಇನ್ಯಾವುದೋ ಆಫ್ರಿಕನ್ ಭಾಷೆಯಲ್ಲೇ ಕಲಿತಿರಲಿ. ಎಷ್ಟೋ ಸಲ "we are looking into it" ಅಂತಲೋ "I will check the issue and get back to you" ಹೇಳಿದಲ್ಲಿಗೆ ಕೆಲಸ ಮುಗಿಯುತ್ತದೆ. ಇಂತಹಾ ಒಂದು ನೂರು ನೂರಿಪ್ಪತ್ತು ವಾಕ್ಯಗಳನ್ನು ಕಲಿಯುವುದಕ್ಕೆ ಯಾವ ಮಹಾ ತಪಸ್ಸೂ ಮಾಡಬೇಕಾಗಿಲ್ಲ. ಒಂದು ಆರೇಳು ವರ್ಷಗಳಾದ ಮೇಲೆ ವಿದೇಶೀಯರ ಜೊತೆ ತಾನೇ ಮಾತಾಡಿ ವ್ಯವಹರಿಸುವಷ್ಟು ಇಂಗ್ಲೀಶು ಬರಬೇಕಾಗುತ್ತದೆ. ಅಷ್ಟು ಕಲಿಯುವುದಕ್ಕೆ ನೀವೇನೂ ಬೃಹಸ್ಪತಿಗಳಾಗಬೇಕಿಲ್ಲ. ಸ್ವಲ್ಪ ಚುರುಕಾಗಿರುವವರು ಒಂದು ನಾಲ್ಕೈದು ವರ್ಷಗಳಲ್ಲಿ ಇಷ್ಟನ್ನು ನೋಡಿಯೇ ಕಲಿತುಬಿಡುತ್ತಾರೆ. 

ಕಂಪ್ಯೂಟರ್ ಅನ್ನು ಒಬ್ಬ ಸಮಾಜಸೇವಕ  ಬಡತನ ನಿವಾರಣೆ ಮಾಡುವ ಯೋಜನೆಗೂ ಉಪಯೋಗಿಸಬಹುದು ಇನ್ನೊಬ್ಬ ಉಗ್ರಗಾಮಿ ನಾಲ್ಕು ಜನರನ್ನು ಕೊಲ್ಲುವುದಕ್ಕೂ ಬಳಸಬಹುದು. ಕಂಪ್ಯೂಟರ್ ಅನ್ನುವುದು ಒಂದು ಸಾಧನ ಮಾತ್ರ. ಹಾಗೆಯೇ   ಭಾಷೆ ಒಂದು ಮಾಧ್ಯಮ ಮಾತ್ರ. ಟಿಫಿನು ಡಬ್ಬಿಗೆ ಬೆಲೆ ಬರುವುದು ಒಳಗಿರುವ ಆಹಾರದಿಂದಲೇ ಹೊರತು ಡಬ್ಬಿ ಎಷ್ಟು ಹೊಳೆಯುತ್ತಿದೆ ಅನ್ನುವ ಕಾರಣಕ್ಕಲ್ಲ! ನಮ್ಮ ಸಾಫ್ಟ್ ವೇರ್ ಕಂಪೆನಿಗಳಿಗೆ ನಾನೇ ಐವತ್ತಕ್ಕೂ ಹೆಚ್ಚು ಸಂದರ್ಶನಗಳನ್ನ ಮಾಡಿದ್ದೇನೆ, ಇವತ್ತಿನ ತನಕ ಯಾರನ್ನೂ "ಆಹಾ... ಎಷ್ಟೊಳ್ಳೆ ಇಂಗ್ಲೀಶು  ಮಾತಾಡ್ತಾರೆ" ಅನ್ನುವ ಕಾರಣಕ್ಕೆ ಕೆಲಸಕ್ಕೆ ಆಯ್ಕೆ ಮಾಡಿಲ್ಲ. ಕೆಲಸ ಸಿಗುವುದು ಜ್ಞಾನಕ್ಕೆ, ಅನುಭವಕ್ಕೆ ಬೆಲೆ ಸಿಕ್ಕಿ, ಭಾಷೆಯ ಆಧಾರದ ಮೇಲೆ ಅಲ್ಲ(ನಮ್ಮ ದೇಶದಲ್ಲಿ ದುಡ್ಡು, ಜಾತಿ, ಪ್ರಭಾವ ಇವೆಲ್ಲವೂ ಇವೆ, ಆ ಮಾತು ಬೇರೆ). ಪೇಟೆ ಜನರೇ, ಇದನ್ನು ಇನ್ನೊಂದು ಸಲ, ಮತ್ತೊಂದು ಸಲ, ಮಗದೊಂದು ಸಲ ಓದಿಕೊಳ್ಳಿ!! ಕೆಲಸ ಸಿಗುವುದು ಜ್ಞಾನಕ್ಕೆ, ಅನುಭವಕ್ಕೆ, ಪ್ರತಿಭೆಗೆ, ನಿಮ್ಮ ನೈಪುಣ್ಯಕ್ಕೆ, ಕುಶಲತೆಗೆ. ಭಾಷಾ ಪ್ರಾವೀಣ್ಯದ ಅರ್ಹತೆಯ ಮೇಲೆ ಅಲ್ಲ!  ಮೊದಲೇ ಹೇಳಿದಂತೆ ಇದಕ್ಕೆ ಸಾಕ್ಷಿ ಆಧಾರ ಅಂತ ನಮ್ಮಲ್ಲಿ ಏನೂ ಅಷ್ಟಾಗಿ ಇದ್ದಂತಿಲ್ಲ, ಹೆಚ್ಚೆಂದರೆ anecdotal evidence ಕೊಡಬಹುದಷ್ಟೇ. 

 ಕನ್ನಡದಲ್ಲೇ ಕಲಿತು ಕನ್ನಡದಲ್ಲೇ ಯೋಚನೆ ಮಾಡಿ ನನ್ನಂತವರು ತಕ್ಕ ಮಟ್ಟಿಗೆ ಉದ್ದಾರ ಆಗಿದ್ದೇವಲ್ಲ (ನಾವು ಆಗಿರುವುದನ್ನೇ ಉದ್ದಾರ ಅನ್ನುವುದಾದರೆ!) ? ನಾವೆಲ್ಲಾ ಶುಧ್ಧ ಕನ್ನಡಲ್ಲೇ ಓದಿ ಕೂಡ ನಾಲ್ಕು ದೇಶ ಸುತ್ತಿ, ಸಾಫ್ಟ್ ವೇರು, ಹಾರ್ಡುವೇರು ಅಂತ ಏನೇನೋ ಕುಟ್ಟಿ ಪ್ರಮೋಷನ್ , ಮಣ್ಣು, ಮಸಿ ಅಂತ ತಗೊಂಡಿದ್ದೇವಲ್ಲ ? ತಲೆ ಬಿಚ್ಚಿದರೆ ನಾಲ್ಕು ಇಂಗ್ಲೀಶ್ ಶಬ್ದ ಉದುರಲಿಕ್ಕಿಲ್ಲ ಅನ್ನಿಸಿಕೊಂಡವರೆಲ್ಲ ಪ್ರಾಜೆಕ್ಟುಗಳನ್ನು ನಡುಗಿಸಿರುವುದು ನಾನೇ ನೋಡಿದ್ದೇನೆ. ಅಮೆರಿಕಾವನ್ನು ಮಿನಿ ಆಂಧ್ರಪ್ರದೇಶ ಅಂತಲೇ ಹೇಳುತ್ತಾರೆ, ಅಲ್ಲಿ ಅಷ್ಟು ಸಂಖ್ಯೆಯಲ್ಲಿ ತುಂಬಿಕೊಂಡಿರುವ ತೆಲುಗರಲ್ಲಿ ಇಂಗ್ಲೀಷು ಪಂಡಿತರು ಹೆಚ್ಚೇನಿಲ್ಲ. ಬಹಳಷ್ಟು ಜನ ಕೂಡಿಸಿ,ಸೇರಿಸಿ,ಪರದಾಡಿ ಅಲ್ಲಿಂದಲ್ಲಿಗೆ ವ್ಯವಹಾರಕ್ಕೆ ತಕ್ಕಷ್ಟು ಇಂಗ್ಲೀಶು ಮಾತಾಡುವವರೇ. Apostrophe ಎಲ್ಲಿ ಹಾಕಬೇಕು ಅಂತ ಸಾಫ್ಟವೇರ್ ಜನಗಳಿಗೆ ಕಲಿಸುವ ಒಂದು ವ್ಯಾಪಾರ ಮಾಡಿದರೆ ಈಗಲೂ ಭರ್ಜರಿ ವ್ಯಾಪಾರ ಆದೀತು, "it is one of my favorites" ಅನ್ನಬೇಕೋ "it is one of my favorite" ಅನ್ನಬೇಕೋ ಅಂತ ಗೊತ್ತಿರುವವರೂ ಅಲ್ಪಸಂಖ್ಯಾತರೇ! 

ನಮ್ಮ ಕಾಲೇಜಿನಲ್ಲೂ ಸುಟ್ಟು ತಿನ್ನುವಷ್ಟೂ ಇಂಗ್ಲೀಶು ಗೊತ್ತಿಲ್ಲದವರೂ ಕ್ಯಾಂಪಸ್ ಸೆಲೆಕ್ಷನ್ ಆದಾಗ ಮೊದಲ ಏಳೆಂಟು ಕಂಪೆನಿಗಳಲ್ಲೇ ಕೆಲಸ ಗಿಟ್ಟಿಸಿಕೊಳ್ಳುತ್ತಿದ್ದರು. ಕೆಲಸಕ್ಕೆ ಸೇರಿದ ಮೇಲೂ, ಸಾಕಷ್ಟು "ಇಂಗ್ಲೀಷ್ ಅಷ್ಟಕ್ಕಷ್ಟೇ" ಗಿರಾಕಿಗಳು ಯುರೋಪು ಸುತ್ತಿ, ಅಮೆರಿಕಾ ನೋಡಿ ಬಂದವರೇ. ನಮ್ಮದು ಹೀಗಾದರೆ ಯುರೋಪಿಯನ್ನರ, ಚೀನೀಯರ,ಜಪಾನೀಯರ,ಫಿಲಿಪೀನಿಯರ ಇಂಗ್ಲೀಷು ಉಚ್ಚಾರಣೆಯ ಶೈಲಿಯೇ ವಿಚಿತ್ರ. ಅವರಿಗೆ ಅದೊಂದು ಸಮಸ್ಯೆಯೇ ಆದ ಹಾಗಿಲ್ಲ. ಯುರೋಪಿಗೋ ಅರ್ಜೆಂಟಿನಕ್ಕೋ ಹೋದರೆ ಸಾಫ್ಟ್ ವೇರ್ ಕಂಪೆನಿಗಳಲ್ಲೂ ಕೇಳಿಸುವುದು ಮಾತೃ ಭಾಷೆಗಳ ರಿಂಗಣವೇ. 

ಇನ್ನು ನಮ್ಮ ಪೇಟೆ ಮಂದಿ ಮಾತಾಡುವ ಇಂಗ್ಲಿಷು ದೇವರಿಗೇ ಪ್ರೀತಿ. ಕಂ ಯಾ ಗೋ ಯಾ, ಎಸ್ ಡಾ , ವೈ ಡಾ, ಹೀ ಇಸ್ ಕಮಿಂಗ್ ನಾ ಅಂತೆಲ್ಲ ಮಾತಾಡುವವರ ಪೆದ್ದು ಇಂಗ್ಲಿಷು ಎಷ್ಟು ನೋಡಿಲ್ಲ ನಾವು? ಅತ್ಲಾಗೆ ಷೇಕ್ಸಪಿಯರ್ ಬರೆದದ್ದನ್ನೂ ಓದಲಿಲ್ಲ ಇತ್ಲಾಗೆ ಮೂರ್ತಿ ರಾಯರ ಬಗ್ಗೆಯೂ ಗೊತ್ತಿಲ್ಲ ಅನ್ನುವ ಎಡೆಬಿಡಂಗಿ ಅರ್ಧರ್ಧ ಇಂಗ್ಲಿಷು ಜನ ಎಷ್ಟಿಲ್ಲ ? ಇವರ್ಯಾರೂ ಕುವೆಂಪು, ಬೇಂದ್ರೆ, ಅಡಿಗರ ಹೆಸರನ್ನು ಕೇಳಿದವರಲ್ಲ. ಅತ್ತ ಬ್ಲೇಕ್, ವಿಟ್ಮ್ಯಾನ್,ಎಲಿಯಟ್‍ರನ್ನೂ ಓದಿಕೊಂಡವರಲ್ಲ. ಸೂಪರ್ ಮ್ಯಾನು, X ಮೆನ್ನು, ಅವೆಂಜರ್ಸ್ ತರದ್ದು ಒಂದು ನಾಲ್ಕು ಚಿತ್ರ ನೋಡಿ ನಾವು ಹಾಲಿವುಡ್ಡನ್ನು ಅರೆದು ಕುಡಿದಿದ್ದೇವೆ ಅನ್ನುವಂತೆ ಪೋಸು ಕೊಡುವವರ ಸಂಖ್ಯೆ ಕಡಮೆಯೇನಲ್ಲ! 

ಇದನ್ನೊಮ್ಮೆ ಊಹಿಸಿಕೊಳ್ಳಿ . ನೀವೊಬ್ಬ ವೈದ್ಯರ ಹತ್ತಿರ ಹೋಗ್ತೀರಿ, ಅವರಿಗೆ ಇಂಗ್ಲೀಶು ಲೀಲಾಜಾಲ, ಆದರೆ ಪಾಪ ಯಾವ ರೋಗಕ್ಕೆ ಯಾವ ಮದ್ದು ಕೊಡಬೇಕು ಅಂತ ಗೊತ್ತಿಲ್ಲ, ನೀವು ಎಷ್ಟು ಸಲ ಅದೇ ಡಾಕ್ಟರ ಹತ್ತಿರ ಹೋಗ್ತೀರಿ? ನೀವೊಂದು ವಿಮಾನ ಹತ್ತುತ್ತೀರಿ. ಪೈಲಟ್  ಅರಳು ಹುರಿದಂತೆ ಇಂಗ್ಲೀಶು ಮಾತಾಡ್ತಾನೆ, ಆದ್ರೆ ಆಸಾಮಿಗೆ ವಿಮಾನ ಓಡಿಸೋದು ಹೇಗೆ ಅಂತ ಗೊತ್ತಿಲ್ಲ, ಆ ಪೈಲಟ್ ನ ಇಂಗ್ಲೀಶು ಕೇಳುವ ಭಾಗ್ಯ ಎಷ್ಟು ದಿನ ಸಿಕ್ಕೀತು?! ಯಾವ ಭಾಷೆಯೂ ತನ್ನಷ್ಟಕ್ಕೇ ತಾನೇ ಶ್ರೇಷ್ಟ ಅಲ್ಲ. ಈಗ ಇಂಗ್ಲೀಷಿನಲ್ಲಿ ಮಾತಾಡಿದರೆ cool ಅನ್ನಿಸುವಂತೆ ಒಂದು ಕಾಲಕ್ಕೆ ಲ್ಯಾಟಿನ್ ನಲ್ಲೋ ಸಂಸ್ಕೃತದಲ್ಲೋ ಮಾತಾಡಿದರೆ ದೊಡ್ಡ ಮನುಷ್ಯ ಅಂತ ಪ್ರತೀತಿ ಇತ್ತು (ಆ ಭಾಷೆಗಳಲ್ಲಿ ಜ್ಞಾನ ಸಂಪತ್ತು ಸೃಷ್ಟಿಯೂ ಹೇರಳವಾಗೇ ಆಗುತ್ತಿತ್ತು ಅನ್ನಿ ಈಗ ಇಂಗ್ಲಿಷಿನಲ್ಲಿ ಆಗುತ್ತಿರುವ ಹಾಗೆ) ಈಗ ಎಲ್ಲಿ ಹಾಳಾಗಿ ಹೋಯಿತು ಅದೆಲ್ಲಾ ? ಕಾಲದ ರಥ ಯಾವ ಭಾಷೆಗೂ ಶಾಶ್ವತವಾಗಿ ಕಪ್ಪ ಕಾಣಿಕೆಗಳನ್ನು ಕೊಟ್ಟು ಕೈ ಮುಗಿದಿಲ್ಲ. 

ಯೋಚಿಸಿ ನೋಡಿ. ನೀವು ಉಪಯೋಗಿಸೋ ಟೀವಿ ತಯಾರಿಸಿದವರಿಗೆ ಬಹುಶಃ ಇಂಗ್ಲಿಷು ಗೊತ್ತಿಲ್ಲ, ನಿಮ್ಮ ಮೊಬೈಲು ತಯಾರಿಸಿದವರು ಪ್ರಾಯಶಃ ಇಂಗ್ಲಿಶ್ ಮಾತಾಡರು, ನೀವು ಪೀಯುಸಿಯಲ್ಲಿ ಓದಿದ ಬಹುತೇಕ ಎಲ್ಲ ಫಿಸಿಕ್ಸು ಯುರೋಪಿಯನ್ ಭಾಷೆಗಳಲ್ಲೇ ಬಂದಿದ್ದು, ಎಲ್ಲ ಅವರವರ ಮಾತೃ ಭಾಷೆಗಳಲ್ಲೇ ಅಥವಾ ಲ್ಯಾಟಿನ್ ನಲ್ಲಿ  ಬರೆದದ್ದು. ಅರ್ಧ ಅಮೇರಿಕಾ ಜಪಾನಿನ Animation ಸಿನೆಮಾಗಳನ್ನ ಇಂಗ್ಲಿಶ್ Subtitles ಹಾಕಿ ನೋಡ್ತದೆ , ವಿಷಯ ಚೆನ್ನಾಗಿದ್ದರೆ ಅವರೇ ಇಂಗ್ಲಿಷಿಗೆ ಅನುವಾದ ಮಾಡಿ ನೋಡುತ್ತಾರೆ ಅಲ್ಲವೇ? 2300 ವರ್ಷಗಳ ನಂತರ ಇವತ್ತಿಗೂ Aristotle, Plato ಅಂತ ಮಾತಾಡ್ತಾರೆ , ಅವ್ರೇನು ಇಂಗ್ಲಿಶ್ ಮೀಡಿಯಂ ಶಾಲೆಗೇ ಹೋಗಿ ಹಾಳಾಗಿದ್ದರೇ? ಅವರೇನು ಇಂಗ್ಲಿಷಲ್ಲಿ ಬರೆದಿದ್ರಾ ? ವಿಷಯ ಚೆನ್ನಾಗಿದ್ದರೆ ಅಮೆರಿಕಾದವರೇ ಇಂಗ್ಲಿಷಿಗೆ ಅನುವಾದ ಮಾಡಿ ಓದಿಕೊಳ್ಳುತ್ತಾರೆ. ನಿರ್ದೇಶಕ Akira Kurosawa ಮಾತಾಡಿದ್ದು ಜಪಾನೀ ಭಾಷೆಯಲ್ಲೇ, ಅರ್ಧ ಜಗತ್ತೇ ಅವನ ಪಾದದ Xerox ಕಾಪಿಯನ್ನು ಇಂಗ್ಲಿಷಿನಲ್ಲೇ ತೆಗೆಯಲಿಲ್ಲವೇ? ಬೆಲೆ ಇರುವುದು ನಿಮ್ಮ ತಲೆಗೆ ಮತ್ತು ಹೃದಯಕ್ಕೆ ಇಂಗ್ಲೀಷಿಗೂ ಅಲ್ಲ ಫ್ರೆಂಚಿಗೂ ಅಲ್ಲ!!

ಮಾತೃ ಭಾಷೆ ಬೇಡ ಅನ್ನೋದಕ್ಕಿಂತ ಪೆದ್ದುತನ ಬೇರೆ ಇಲ್ಲ, ನಮಗೆ ಇವತ್ತಿನ ಕಾಲಕ್ಕೆ ಇಂಗ್ಲೀಶು ಬೇಕು ಆದರೆ ಕನ್ನಡ ಬಿಟ್ಟಲ್ಲ. ಕನ್ನಡ ಕಲಿತರೆ ಇಂಗ್ಲಿಷು ಚೆನ್ನಾಗಿಯೇ ಬರ್ತದೆ,ಅದು ಕನ್ನಡದ ಮೂಲಕ ಬರುತ್ತದೆ ಅಷ್ಟೇ. ಒಂದು ಬಾಗಿಲು ಕನ್ನಡದ್ದು ಇದ್ದರೆ ಉಳಿದ ಕಿಟಕಿ ಬಾಗಿಲುಗಳು ಎಷ್ಟಾದರೂ ಇರಬಹುದಲ್ಲ. ಇಂಗ್ಲೀಷು, ಲ್ಯಾಟಿನು, ಫ್ರೆಂಚು, ಸಂಸ್ಕೃತ, ಪ್ರಾಕೃತ, ಅರೇಬಿಕ್ ಹೀಗೆ ಎಷ್ಟು ಕಡೆಯಿಂದಾದರೂ ಗಾಳಿ ಬೆಳಕುಗಳು ಬರಲಿ. ಒಂದು ಬಾಗಿಲು ಕನ್ನಡಕ್ಕೂ ಇರಲಿ. ಇಷ್ಟೂ ಅರ್ಥ ಆಗ್ಲಿಲ್ಲ ಅಂದ್ರೆ ಇಂಗ್ಲೀಷಲ್ಲೇ ಕಲೀರಿ, ಅದೇನು ಗುಡ್ಡೆ ಕಡಿದು ಹಾಕ್ತೀರೋ ನೋಡಿಯೇ ಬಿಡೋಣ.