Friday, 2 December 2016

ಸರಿಗನ್ನಡಂ ಗೆಲ್ಗೆ

ಕಳೆದ ಸಲ ನಾಡಹಬ್ಬಕ್ಕೆ ಇದೇ ವಿಷಯವಾಗಿ ನಾನು ಬರೆದಿದ್ದ ಲೇಖನ ನಿಮ್ಮ ನೆನಪಿನಲ್ಲಿ ಹಸುರಾಗಿ (ಹಸಿರಾಗಿ ಅಲ್ಲ) ಉಳಿದಿರಬಹುದು,ಇರಲಿ, ಈ ಬಗ್ಗೆ ಎಷ್ಟು ಬರೆದರೂ ಕಡಮೆಯೇ (ಕಡಿಮೆ ಅಲ್ಲ ) ಆಗ ಬರೆದದ್ದನ್ನೇ ಅನಂತರ ಸ್ವಲ್ಪ ಬದಲಾಯಿಸಿ,ಎಳೆದು ಬರೆದಿದ್ದೇನೆ ( ನಾನು ಅದನ್ನು ಬದಲಾಯಿಸಿದ್ದು ಮೊದಲ ಆವೃತ್ತಿಯನ್ನು ತಂದ "ಅನಂತರ", ಬರೆದ "ನಂತರ" ಅಲ್ಲ ). 
ಇಂಗ್ಲೀಷಿನಲ್ಲಿ "Mistakes we make while speaking English" ಎಂದೋ "Common English bloopers" ಅಂತಲೋ ಲೇಖನಗಳು ಆಗೀಗ ಬರುವುದುಂಟು, ಇನ್ನು grammar Nazi ಗಳು ಅಂತ ಕರೆಸಿಕೊಂಡವರಂತೂ ಅನ್ನ ನೀರಾದರೂ ಬಿಟ್ಟಾರು, ಇನ್ನೊಬ್ಬರು ಇಂಗ್ಲೀಷಿನ ಬಳಕೆಯಲ್ಲಿ ಮಾಡುವ ತಪ್ಪುಗಳನ್ನು ಮಾತ್ರ ಸುಮ್ಮನೆ ಬಿಡಲಾರರು. ಅದೇ ರೀತಿ ಕನ್ನಡದ ಬಳಕೆಯಲ್ಲಿ ಆಗುವ ತಪ್ಪುಗಳ ಬಗ್ಗೆ ಒಂದಷ್ಟು ಪುಟ್ಟ ಟಿಪ್ಪಣಿಗಳನ್ನು ಪೋಣಿಸಿ ಮಾಡಿದ ಟಿಪ್ಪಣಿ ಮಾಲೆಯಿದು.
ಟೀವಿ ವಾಹಿನಿಗಳಲ್ಲಿ ಬರುವ ಕನ್ನಡವನ್ನು, ಪತ್ರಿಕೆಗಳಲ್ಲಿ, ಜಾಹೀರಾತುಗಳಲ್ಲಿ(ಇದನ್ನೂ ಹಲವರು ಜಾಹಿರಾತು ಅಂತ ಮೊಟಕು ಮಾಡುತ್ತಾರೆ) ಬರುವ ಎಲ್ಲ ಭಾಷಾಸ್ಖಾಲಿತ್ಯದ ಅಂಶಗಳನ್ನು ಎತ್ತಿ ಆಡುವ, ಅವನ್ನು ತಿದ್ದುವ ಎಂಟೆದೆ ನನಗಂತೂ ಇಲ್ಲ, ಅದು ಅಷ್ಟು ಬೇಗ ಮಾಡಿ ಮುಗಿಸಬಹುದಾದ ಕೆಲಸವೂ ಅಲ್ಲ,ಇನ್ನು "ಶೀಲಾನ್ಯಾಸ", "ಹಾರ್ಧಿಕ","ಅಸಮಾರ್ಥ್ಯ", "ನೆರೆವೇರಿಸು", "ಮರೆತು ಬೀಡಿ" ಯಂತಹ ಪ್ರಯೋಗಗಳನ್ನು ಹುಡುಕಿ ತಿದ್ದುತ್ತಾ ಕುಳಿತರೆ ಅವರು ನಮಗೆ ತಿಂಗಳಿಗೆ ಇಷ್ಟು ಅಂತ ಕೊಡಬೇಕಾದೀತು. ಇಂತಿಪ್ಪ ಚಿತ್ರ ವಿಚಿತ್ರ ಭಾಷಾಪ್ರಯೋಗಗಳ ಕತ್ತಲು ಮುಸುಕಿರುವ ಅಪರರಾತ್ರಿಯಲ್ಲಿ (ಅದು ಅಪರಾತ್ರಿಯಲ್ಲ - ಅಪರರಾತ್ರಿ, ಅಂದರೆ ರಾತ್ರಿಯ second ಹಾಫ್, ಅಪರಾಹ್ಣ ಇದ್ದಂತೆ) ಕವಿದಿರುವ ಅಂಧಕಾರವನ್ನು ಓಡಿಸುವ (ಅಂಧಃಕಾರ ಅನ್ನಬೇಡಿ ಮತ್ತೆ !) ಧೈರ್ಯ ನನಗಿಲ್ಲ. ಹೆಚ್ಚೆಂದರೆ ಇದರ ಬಗ್ಗೆ ಅಲವತ್ತುಕೊಂಡು "ಅವಲತ್ತು" ಅನ್ನುವ ಅಸಂಬದ್ದ ರೂಪದ ಕಡೆ ಬೆರಳು ತೋರಿಸಬಹುದಷ್ಟೇ. ಒಂದು ಕಿರುಹಣತೆಯನ್ನು ಹಚ್ಚಿ ತೋರಿಸಬಹುದಷ್ಟೇ. ಇರಲಿ. 
ಮೊತ್ತ ಮೊದಲಿಗೆ (ಯಾರಲ್ಲಿ... ... ಇದನ್ನು "ಮೊಟ್ಟ ಮೊದಲು" ಅಂತ ತಪ್ಪು ತಪ್ಪಾಗಿ ಹೇಳುವವರನ್ನು ಎಳೆದು ತನ್ನಿ, ಅವರನ್ನು ಬೆಟ್ಟವೊಂದರ ತುಟ್ಟ ತುದಿಗೆ ... ಅಲ್ಲಲ್ಲ ... ತುತ್ತ ತುದಿಗೆ ಕೊಂಡೊಯ್ದು, ಅಲ್ಲಿಂದ ನೂಕುತ್ತೇವೆ ಅಂತ ಹೆದರಿಸಿ ಕಟ್ಟ ಕಡೆಗೆ ಅವರನ್ನು ಬಿಟ್ಟು ಬಿಡಿ !!) ಆಯಿತೇ ? ಈಗ ಪುನೀತ್ ಅವರ ಅಭಿಮಾನಿಗಳಿಗೆ ಒಂದು ಪ್ರಶ್ನೆ. ಅವರು ನಡೆಸಿ ಕೊಡುತ್ತಿದ್ದ ಕಾರ್ಯಕ್ರಮದ ಹೆಸರು ಹೇಳಿ ನೋಡೋಣ! ಏನಂದ್ರಿ ? ಕನ್ನಡದ "ಕೋಟ್ಯಾಧಿಪತಿ" ಅಂದ್ರಾ ? ಹಹಹಾ !! ಸಿಕ್ಕಿ ಹಾಕ್ಕೊಂಡ್ರಿ ನೋಡಿ. ಅದು ಕೋಟ್ಯಧಿಪತಿ ಆಗಬೇಕಿತ್ತು ,ಕೋಟ್ಯಾಧಿಪತಿ ಅಲ್ಲ. ಕೋಟಿ + ಅಧಿಪತಿ = ಕೋಟ್ಯಧಿಪತಿ. ಕಾರ್ಯಕ್ರಮ ಹೆಚ್ಚು ದೀರ್ಘವಾಗಿ ಇರ್ಲಿಲ್ಲ, ಹಾಗಾಗಿ ದೀರ್ಘ ಬೇಡ!
ಇದೇ ಜಾತಿಗೆ ಸೇರಿದ ಮತ್ತೊಂದು "ಜಾತ್ಯಾತೀತ", ನೀವು ಏನು ಬೇಕಾದರೂ ಅಂದುಕೊಳ್ಳಿ, ನಾನಂತೂ ಜಾತ್ಯಾತೀತನಲ್ಲ. ಹೌದು ಸ್ವಾಮೀ ! ನಾನು ಜಾತ್ಯಾತೀತನಲ್ಲ ! ಮತ್ತೇನು ಹಾಗಾದರೆ ? ನಿಮ್ಮದೂ ಒಂದು ನಾಗರಿಕತೆಯೇ ( ಇಲ್ಲಿನ "ರಿ" ಅಕ್ಷರಕ್ಕೂ ದೀರ್ಘ ಕೊಟ್ಟು "ನಾಗರೀಕತೆ" ಮಾಡಬಾರದು, ನಗರ --> ನಾಗರಿಕ --> ನಾಗರಿಕತೆ)  ಅಂತ ಕಣ್ಣು ಹೊರಳಿಸಿದರೆ, "ನಾನು ಜಾತ್ಯತೀತ" ಅಂತ ದೀರ್ಘ ಇಲ್ಲದೆ ಹೇಳಿ ದೀರ್ಘವಾದ ಉಸಿರು ಬಿಡುತ್ತೇನೆ. ಆಧ್ಯಾತ್ಮ ಎಂಬಲ್ಲಿಯೂ ಉದ್ದ ಎಳೆಯದೆ, ಅಧಿ + ಆತ್ಮ  = "ಅಧ್ಯಾತ್ಮ" ಎಂದರೆ ಸಾಕು. ನಗರ --> ನಾಗರಿಕ ಆಗುವಂತೆ ಅಧ್ಯಾತ್ಮ --> ಆಧ್ಯಾತ್ಮಿಕ ಆಗುವಾಗ ದೀರ್ಘ ಥಟ್ಟನೆ ಹಾಜರಾಗುತ್ತದೆ. ಈ ಅಧ್ಯಾತ್ಮದ ಕಥೆ ಕೇಳಿ ಜೀವನದಲ್ಲಿ ಜಿಗುಪ್ಸೆ ಬಂತೇ ? ಅಯ್ಯಯ್ಯೋ ! ಹೇಗೂ ಬರುವುದೇ ಆದರೆ "ಜುಗುಪ್ಸೆ"ಯೇ ಬರಲಿ, ಜಿಗುಪ್ಸೆ ಬೇಡ.

ಈ ದೀರ್ಘವು "ಪ್ರಕಾರ" ಅನ್ನುವ ಶಬ್ದವನ್ನಂತೂ ಹಣ್ಣುಗಾಯಿ ನೀರುಗಾಯಿ ಮಾಡಿಬಿಟ್ಟಿದೆ. ಪ್ರಕಾರ ಅನ್ನಬೇಕಾದಲ್ಲಿ ಸುಮ್ಮನೆ ದೀರ್ಘವನ್ನು "ಎಳೆದು" ತಂದು "ಪ್ರಾಕಾರ" ನಿರ್ಮಾಣ ಮಾಡುವವರಿದ್ದಾರೆ. ಉದಾ : ಯಕ್ಷಗಾನ ಒಂದು ಕಲಾ ಪ್ರಕಾರ, ಪ್ರಾಕಾರ ಅಲ್ಲ. ಪ್ರಾಕಾರ ಅಂದರೆ ಸುತ್ತಲೂ ಆವರಿಸಿ ಇರುವ ಸುತ್ತುಗೋಡೆ. ಕೋಟೆಗಳಲ್ಲಿ ಪ್ರಾಕಾರಗಳು ಇದ್ದವು, ದೇವಸ್ಥಾನಗಳಲ್ಲಿ ಗರ್ಭ ಗುಡಿಯ ಸುತ್ತ ಪ್ರಾಕಾರಗಳು ಇರುತ್ತವೆ, ಹೀಗೆ. ಇನ್ನೊಮ್ಮೆ ಪ್ರಕಾರ ಅಂತ ಹೇಳಬೇಕಾದಲ್ಲಿ "ಪ್ರಾಕಾರ" ಅಂತ ಹೇಳಿದರೆ ಆ ಸೊಲ್ಲು ತನ್ನ ದುರದೃಷ್ಟ (ಇಲ್ಲಿಯೂ ಅದೇ ಕತೆ ,ಅದು ದುರಾದೃಷ್ಟ ಅಲ್ಲ, ದುರ್ + ಅದೃಷ್ಟ = ದುರದೃಷ್ಟ) ವನ್ನು ನೆನೆದು ಮಮ್ಮಲ ಮರುಗಿ ಯಾವುದಾದರೂ ಎತ್ತರದ ಪ್ರಾಕಾರದಿಂದ ಕೆಳಗೆ ಹಾರಿ ಪ್ರಾಣಬಿಟ್ಟೀತು, ಎಚ್ಚರ !
ಹಾಗೆಯೇ "ಪೂರ್ವಾಗ್ರಹ", ಇರುವಂತೆ ಕಾಣುವುದಿಲ್ಲ ,ಇದು ಪೂರ್ವ+ ಆಗ್ರಹ ಅಲ್ಲ, ಪೂರ್ವ + ಗ್ರಹ (ಗ್ರಹಿಕೆ) ಎಂದರೆ ವಿಷಯ ತಿಳಿಯದೆ ಮನಸ್ಸಿನಲ್ಲಿ ಮೊದಲೇ ಮಾಡಿಕೊಂಡ ಅಭಿಪ್ರಾಯ, ಹಾಗಾಗಿ ಪೂರ್ವಗ್ರಹ ಅಂದರೆ ಸೂಕ್ತವೇನೋ.

ಇಷ್ಟು ಹೇಳಿದೆ ಅಂತ ಎಲ್ಲೆಡೆಯಲ್ಲಿಯೂ ದೀರ್ಘ ಉಳಿಸಿ ಜಿಪುಣರಾಗಬೇಡಿ ಮತ್ತೆ. ದೀರ್ಘ ಬೇಕಾದಲ್ಲಿ ದೀರ್ಘ ಹಾಕದೆ ಇರುವುದನ್ನ ನೋಡಬೇಕಾದರೆ ಇಲ್ಲೊಂದು  ಹೋಟೆಲಿಗೆ ಬನ್ನಿ. ಅಲ್ಲಿ "ಉಪಹಾರ ದರ್ಶಿನಿ" ಅನ್ನುವ ಬೋರ್ಡು ಕಣ್ಣಿಗೆ ರಾಚುತ್ತದೆ. ಅಲ್ಲಿ ನಿಮಗೆ ಯಾರೂ ಹಾರ ಹಾಕುವುದಿಲ್ಲ. ಅಲ್ಲಿ ನಿಜವಾಗಿಯೂ ಸಿಗುವುದು ಉಪ + ಆಹಾರ = ಉಪಾಹಾರ. ಇನ್ನು ಸಸ್ಯಹಾರ, ಮಾಂಸಹಾರ ಬೇಡವೇ ಬೇಡ. ಚಿನ್ನದ ಹಾರ, ಮುತ್ತಿನ ಹಾರ , ರತ್ನದ ಹಾರ ಎಲ್ಲ ಇರುವಾಗ ಸುಮ್ನೆ ಮಾಂಸದ ಹಾರ ಯಾಕೆ ಹಾಕಿಕೊಳ್ತೀರಿ! ಮಾಂಸಹಾರ ಬಿಟ್ಟು ಮಾಂಸ + ಆಹಾರ = ಮಾಂಸಾಹಾರ ತಿನ್ನಿ( ನೀವು ಮಾಂಸಾಹಾರಿ ಆಗಿದ್ದರೆ! ), ಹಾರ ಅನ್ನುವುದಕ್ಕೆ ಅರ್ಪಣೆ, ನೈವೇದ್ಯ ಅನ್ನುವ ಅರ್ಥ ಸಂಸ್ಕೃತದಲ್ಲಿ ಉಂಟಾದರೂ ಆಹಾರ ಅನ್ನುವುದು ಸಹಜ ಮತ್ತು intuitive ಅಂತ ನನಗನ್ನಿಸುತ್ತದೆ, ಮೇಲಾಗಿ ಹಾರ ಅಂದರೆ ಬಲಿ ಅಂತಲೂ ಆಗುತ್ತದೆ(ಕೆರೆಗೆ ಹಾರ ಅಂತ ಒಂದು ನಾಟಕ ಉಂಟಲ್ಲ). ಹಾಗೆಯೇ "ಸತ್ಯಮೇವ ಜಯತೇ" ಅನ್ನುವ ಘೋಷ ವಾಕ್ಯ ಸರಿ, "ಜಯತೆ" ಅನ್ನಬಾರದು, ದೀರ್ಘ ಸೇರಿಸಿ "ಜಯತೇ" ಅನ್ನಬೇಕು. ಇನ್ನು ಆಗಾಗ ನಮ್ಮಲ್ಲಿ ಮಧ್ಯಂತರ ಚುನಾವಣೆಗಳು ಬರುತ್ತವೆ, ಆದರೆ ಮಧ್ಯ + ಅಂತರ = ಮಧ್ಯಾಂತರ ಎಂಬುದೇ ಸರಿಯಾದ ರೂಪ (ದೇಶಾಂತರ, ಪಕ್ಷಾಂತರಗಳನ್ನು ನೆನಪು ಮಾಡಿಕೊಳ್ಳಿ). ವರ್ಷಧಾರೆ/ವರ್ಷಕಾಲ, ಸುನಿಲ ಇಂತಹಾ ಪ್ರಯೋಗಗಳಿಗೆ ಧೀರ್ಘ ಹಾಕಿ ವರ್ಷಾಧಾರೆ, ಸುನೀಲ ಅಂತ ಮಾಡಿಕೊಂಡರೆ ವ್ಯಾಕರಣ ಹೇಳಿಕೊಡುವ ಮಾಷ್ಟ್ರುಗಳು ನಿಮ್ಮ ಬೆನ್ನು ತಟ್ಟಿಯಾರು.
ಹೋಟೆಲು ಅಂದಾಗ ನೆನಪಾಯಿತು, ನೀವು ಶಾಖಾಹಾರಿ ಹೋಟೆಲ್ಗಳನ್ನು ನೋಡಿದ್ದೀರಾ ? 'ಶಾಖ’ ಎಂದರೆ ಬಿಸಿಯಾದದ್ದು. ಆದ್ದರಿಂದ ‘ಶಾಖಾಹಾರ’ ಅಂದರೆ ‘ಬಿಸಿಯಾದ ಅಡುಗೆ’ ಎಂದಾಗಬಹುದು ಮತ್ತು ಇಂತಹ ಹೋಟೆಲುಗಳಲ್ಲಿ ತಣಿದ ಆಹಾರವೇ ಸಿಗುತ್ತದೆ! ಶಾಕ = ತರಕಾರಿ(ಶಾಕಾಂಬರಿ ದೇವಿಯನ್ನು ನೆನೆಯಿರಿ), ನೀವು ಒಂದು ಹೊಸ ಹೋಟೆಲು ತೆರೆದರೆ ಶಾಕಾಹಾರಿ ಅಂತಲೇ ಬರೆಸಿ.
ಮಹಾಪ್ರಾಣದಲ್ಲಿ ಹೇಳಿದರೆ ಗೌರವ ಹೆಚ್ಚು ಅಂತ ನಮ್ಮ ಜನ ಭಾವಿಸುವುದರಿಂದ ಹೀಗೆ ಪ್ರಯೋಗ ಮಾಡುತ್ತಾರೆ. ಶಾಖ ಅಂದರೆ ಮರ್ಯಾದೆ ಜಾಸ್ತಿ, ಶಾಕ ಅಂದರೆ ಕಡಿಮೆ ಅನ್ನುವ ಭಾವನೆ! ಹುಲಿ, ಸಿಂಹಗಳೇನೋ ಮಹಾಪ್ರಾಣಿಗಳೇ, ಆದರೆ ಅವುಗಳ ಕೂಗಿನ ಮೊದಲಕ್ಷರ ಮಹಾಪ್ರಾಣವಲ್ಲ. ಘರ್ಜನೆ ಅನ್ನುವ ಶಬ್ದ ಇಲ್ಲ, ಅದನ್ನು ಗರ್ಜನೆ ಅಂದರೆ ಸಾಕು.

ನನ್ನ ಮೇಲೆ ಸಿಟ್ಟು ಬಂದರೆ, ಆ ಸಿಟ್ಟನ್ನು ಕ್ರೋಢೀಕರಿಸಬೇಡಿ, ಬಾಲ ಇಲ್ಲದೆ "ಕ್ರೋಡೀಕರಿಸಿ"ದರೆ ಸಾಕು, "ದಾಳಿ" ಮಾಡಿ , "ಧಾಳಿ" ಬೇಡ. ಇನ್ನೂ ನಿಮ್ಮ ಕೋಪಾಗ್ನಿ ಕೊತ ಕೊತ ಕುದಿದರೆ, ಬೇಕಾದರೆ ನ್ಯಾಯಾಲಯಕ್ಕೆ ಹೋಗಿ. ಆದರೆ ಉಚ್ಚ ನ್ಯಾಯಾಲಯಕ್ಕೆ ಹೋದರೆ ಸಾಕು, ಉಚ್ಛ ನ್ಯಾಯಾಲಯ ಬೇಡ. 'ಚ' ಒತ್ತು ಸಾಕು. 'ಛ' ಒತ್ತು ಬೇಡ. 'ಅವಘಡ'ದಲ್ಲಿ 'ಘ' ಮತ್ತು 'ಢ' ಎರಡನ್ನೂ ಮಹಾಪ್ರಾಣ ಮಾಡುವವರಿದ್ದಾರೆ. ಇಲ್ಲಿಯೂ ನೀವು ಊಹಿಸಿರಬಹುದಾದಂತೆ 'ಅವಗಡ' ಪದ ಸರಿಯಾದ ಬಳಕೆ. ಅವಗಡ ಅಂದರೆ ವಿಪತ್ತು, ಅಪಘಾತ. ಮಹಾಪ್ರಾಣದ ವ್ಯಾಮೋಹಕ್ಕೆ ಕಡೇ ಉದಾಹರಣೆ: ಕುಂಕುಮಕ್ಕೆ ಇರುವ ಶಬ್ದ. ಸಿಂದೂರ ಅಂದರೆ ಕುಂಕುಮ (ಬಾಲ ಇಲ್ಲ). ಸಿಂಧುರ ಅಂದರೆ ಆನೆ (ಬಾಲ ಇದೆ, ಹಾಗಾಗಿ ಆನೆ ಅನ್ನಿ!), ಸಿಂಧೂರ ಅಂದರೆ ಏನೂ ಅಲ್ಲ, ಆದರೆ ಪಕ್ಕನೆ ಅದು ಸಿಂಧುರ (ಆನೆ) ಎಂಬಂತೆ ನಿಮ್ಮ ರಮಣೀಮಣಿಗೆ ಕೇಳಿ ನೀವು ಬೈಸಿಕೊಳ್ಳುವಂತಾದರೆ ನಾನು ಜನ ಅಲ್ಲ, ಈಗಲೇ ಹೇಳಿಬಿಟ್ಟಿದ್ದೇನೆ! ಕವಿ ಮುದ್ದಣನು ಲಲನೆಯೊಬ್ಬಳನ್ನು "ಸಿಂಧುರ ಬಂಧುರ ಯಾನೆ" ಅಂದರೆ ಆನೆಯಂತೆ ಗತ್ತಿನಿಂದ ನಡೆಯುವವಳು ಅಂದದ್ದನ್ನು ಮರೆಯಬೇಡಿ. 
ವಿದ್ಯಾಭ್ಯಾಸ ಮಾಡಿದವರೂ, ತಿಳಿವಳಿಕೆ ಇದ್ದವರೂ ಇಂತಹ ತಪ್ಪುಗಳನ್ನು ಮಾಡುತ್ತಾರೆ. ಅದನ್ನೆಲ್ಲಾ ಬಿಡಿ. "ವಿದ್ಯಾಭ್ಯಾಸ" ಅನ್ನುವ ಶಬ್ದವನ್ನೇ ತಪ್ಪಾಗಿ "ವಿಧ್ಯಾಬ್ಯಾಸ" ಅಂತ ಬರೆಯುವವರು ಎಷ್ಟು ಜನ ಇಲ್ಲ! ನೀವು ಅದೇನು ಕಲಿತು ಗುಡ್ಡೆ ಹಾಕಿದರೂ ಅದು ವಿದ್ಯೆ(ಬಾಲ ಇಲ್ಲ ) ವಿಧ್ಯೆ ಅಲ್ಲ. ವಿದ್ಯೆ ಕಲಿತರೆ ಕೆಲವರಿಗೆ ಕೋಡು ಬರುವ ಹಾಗೆ ವಿದ್ಯೆಗೆ ಬಾಲ ಬಂದು ವಿಧ್ಯಾ ಆಗುವುದು ಬೇಡ. ಅಭ್ಯಾಸವನ್ನ ಅಬ್ಯಾಸ ಮಾಡಿದರೆ ಅದೂ ಆಭಾಸವೇ, ಈ ಅಭ್ಯಾಸ ಬಿಟ್ಟು ಬಿಡಿ. ತಿಳಿಯಿತೇ ? ಈಗ "ತಿಳುವಳಿಕೆ" ಬಂತು ಅನ್ನದಿರಿ, ತಿಳಿ --> ತಿಳಿವಳಿಕೆ, ತಿಳು ಅಂತ ಪ್ರಯೋಗ ಇಲ್ಲ. ಇದೇ ಜಾತಿಯದ್ದು ಬರೆ --> ಬರೆವಣಿಗೆ, ಆದರೆ ಪ್ರಯೋಗದ ಬಲದಿಂದ ಈಗೀಗ ಬರವಣಿಗೆ ಅನ್ನುವುದನ್ನೂ ಸಾಧು ರೂಪ ಅಂತ ಮಾನ್ಯ ಮಾಡುತ್ತಾರೆ. ಇರಲಿ. ತಿಳಿ ಮತ್ತು ತಿಳು ತರದ್ದೇ ಮತ್ತೊಂದು ಮಡಕೆ ಮತ್ತು ಮಡಿಕೆ, ಮಡಕೆ ಅಂದರೆ ಮಣ್ಣಿನ ಪಾತ್ರೆ,ಗಡಿಗೆ. ಮಡಿಕೆ ಅಂದರೆ ನೆರಿಗೆ, ಮಡಿಸಿದ್ದು, ಪದರ ಅಂತೆಲ್ಲ ಅರ್ಥಗಳು. ಇದೆಲ್ಲ ಗೊತ್ತಿರಲಿಕ್ಕೆ ನಾನೇನೂ ಪರಿಣಿತನಲ್ಲ ಅನ್ನುವ ಬದಲು "ಪರಿಣತ" ಅನ್ನುವ ಶಬ್ದ ಪ್ರಯೋಗ ಮಾಡಿ ನಿಜಕ್ಕೂ ಪರಿಣತರಾಗಿ.
ಹೀಗೆಯೇ ಅರಳು-ಮರುಳು, ಇದನ್ನು ಹಲವರು ಅರಳು-ಮರಳು ಅಂತ ಪ್ರಾಸಬದ್ಧವಾಗಿಯೇ ಅಬದ್ಧ ಪ್ರಯೋಗ ಮಾಡುತ್ತಾರೆ, ಮರಳು ಅಂದರೆ ಹೊಯಿಗೆ, sand. ಮರುಳು ಅಂದರೆ ಹುಚ್ಚು. ಹೀಗೆ ಪ್ರಯೋಗ ಮಾಡಿ ಮರಳಿಗಾಗಿ ಮರುಳರಾಗುವ ನಮ್ಮ ಸ್ಯಾಂಡ್ ಮಾಫಿಯಾದವರಿಗೆ ಸಿಟ್ಟು ಬರಿಸಹೋಗಬೇಡಿ  ಬೆಳಗು, ಬೆಳಗಾಗು ಇಂತಹಾ ಪ್ರಯೋಗಗಳಿಂದ ಬೆಳಗ್ಗೆ ಬಂದಿದೆ, ಇದು ಜನರ ಬಾಯಿಗೆ ಸಿಕ್ಕಿ ಬೆಳಗ್ಗೆಯೇ "ಬೆಳಿಗ್ಗೆ" ಅಂತ ಆಗುವುದೂ ಮಾಮೂಲಿಯೇ.

ಇನ್ನು ಭಾಷೆಯನ್ನು ಒಲಿಸಿಕೊಂಡಿರುವ ಸಾಹಿತಿಗಳೂ ಒಮ್ಮೊಮ್ಮೆ ತಪ್ಪು ಮಾಡುತ್ತಾರೆ. ಖ್ಯಾತನಾಮರೊಬ್ಬರ ಒಂದು ಪುಸ್ತಕದ ಹೆಸರೇ ಸಮಕ್ಷಮ(ಸಮಕ್ಷ ಅನ್ನುವ ಶಬ್ದದ ತಪ್ಪು ರೂಪ, ಅಕ್ಷ = ಕಣ್ಣು, ಸಮಕ್ಷ = ಕಣ್ಣಿನ ಮುಂದೆ). ನಮ್ಮಲ್ಲಿ ಒಂದು ಕಾಲದಲ್ಲಿ ಬರೆಯುತ್ತಿದ್ದ ಒಂದಷ್ಟು  ಲೇಖಕರನ್ನು ಪ್ರಗತಿಶೀಲರು ಅಂತ ಕರೆಯುವ ಪರಿಪಾಠ ಇದೆ, ಪ್ರಗತಿಶೀಲರು ಅಂದರೆ ಪ್ರಗತಿ ಹೊಂದುವ ಸ್ವಭಾವದವರು (ಶೀಲ = ಸ್ವಭಾವ, ಸುಶೀಲ = ಒಳ್ಳೆಯ ಸ್ವಭಾವದವಳು),  ಈ ಲೇಖಕರೋ ಪಾಪ ಸಮಾಜದಲ್ಲಿ ಪ್ರಗತಿಯಾಗಲಿ ಅಂತ ಬಯಸಿದವರು, ಅವರನ್ನು ಪ್ರಗತಿಪರರು ಅನ್ನಬೇಕಿತ್ತು.ಸೃಜನಶೀಲ ಅನ್ನುವುದೂ ಸರ್ಜನಶೀಲ ಅನ್ನುವ ಶಬ್ದದ ಅಶುದ್ಧ ರೂಪವೇ, ಇದನ್ನಿನ್ನು ಬದಲಾಯಿಸುವುದು ಕಷ್ಟ. ಡಿ ಎಲ್ ನರಸಿಂಹಾಚಾರ್ಯರು "ವಿದ್ವತ್ಪೂರ್ಣವಾದ ಲೇಖನಗಳನ್ನು ಬರೆದಿದ್ದಾರೆ" ಅಂತ ಬರೆಯುವವರಿದ್ದಾರೆ. ವಿದ್ವತ್ = ಪಂಡಿತ (ವಿದ್ವತ್ಸಭೆ = ಪಂಡಿತರ ಸಭೆ). ಹೀಗಾಗಿ ವಿದ್ವತ್ಪೂರ್ಣ = ಪಂಡಿತರಿಂದ ತುಂಬಿದ, ವಿದ್ವತ್ತಾಪೂರ್ಣ = ಪಾಂಡಿತ್ಯದಿಂದ ತುಂಬಿದ ಅಂತಾಗುತ್ತದೆ. ದೇಶಕಾಲ ಅನ್ನುವ ಪದವನ್ನೂ ನಮ್ಮ ಸಾಹಿತಿಗಳು ಅರ್ಥಮಾಡಿಕೊಂಡಂತಿಲ್ಲ. Space ಮತ್ತು time ಒಂದಕ್ಕೊಂದು ಹೆಣೆದುಕೊಂಡಿರುತ್ತದೆ ಬರೀ ಸ್ಪೇಸ್ ಅನ್ನುವುದಕ್ಕೂ ಬರೀ ಟೈಮ್ ಅನ್ನುವುದಕ್ಕೂ ಅರ್ಥ ಇರುವುದಿಲ್ಲ, ಅವೆರಡನ್ನೂ ಜೊತೆ ಜೊತೆಯಾಗಿಯೇ ಹೇಳಬೇಕು(spacetime continuum) ಅಂತ ಐನ್ ಸ್ಟೀನ್ ಹೇಳಿದ್ದಾರೆ. ಹೀಗಾಗಿ, ಎಪ್ಪತ್ತರ ದಶಕದ ರಶಿಯಾ, ಮುಗಾಬೆಯ ಕಾಲದ ಜಿಂಬಾಬ್ವೆ, ಚಾಲುಕ್ಯರ ಕಾಲದ ಕರ್ನಾಟಕ ಅನ್ನುವ ಪ್ರಯೋಗಗಳಲ್ಲಿ ಕಾಣುವ ಹಾಗೆ ಅರ್ಥ ಬರಬೇಕಾದರೆ ದೇಶ ಮತ್ತು ಕಾಲ ಎಂಬ ಪದಗಳ  ನಡುವೆ ಸ್ಪೇಸ್ ಕೊಟ್ಟು ಬೇರೆಬೇರೆಯಾಗಿ ಬರೆಯಬೇಕು.  

ಬೊಂಬೆಯಾಟವಯ್ಯ ಹಾಡು ಕೇಳಿದ್ದೀರಲ್ಲ ? ಆ ಚಿತ್ರದಲ್ಲಿ ನಮ್ಮ ಕಣ್ಣೀರು ಸ್ಪೆಷಲಿಸ್ಟ್ ಶೃತಿ ನಟಿಸಿದರೆ ಅದನ್ನು ಏನಂತ ಹೇಳಬಹುದಿತ್ತು? ಶ್ರುತಿ ಸೇರಿದಾಗ ಚಿತ್ರದಲ್ಲಿ ಶೃತಿ ಸೇರಿದಾಗ!! ಶ್ರುತಿ ಅಂದರೆ ಸರಿ. ಶೃತಿ ಅಂದರೆ ಏನು ಅಂತ ಗೊತ್ತಾದರೆ ಆ ನಟಿ ಕಣ್ಣೀರು ಸುರಿಸಬಹುದೇನೋ( 'ಶೃತಿ’ ಪದಕ್ಕೆ cooked, boiled, dressed ಎನ್ನುವ ಅರ್ಥ). ಇದೇ ರೀತಿ ಧ್ರುವ ಅಂದರೆ ಸರಿ, ಧೃವ ಅಂದರೆ ತಪ್ಪು.
ದೀಪಾವಳಿ, ರಾಜ್ಯೋತ್ಸವ ಎಲ್ಲ ಒಟ್ಟೊಟ್ಟಿಗೆ ಬಂತು ಅಂತ ಆನಂದತುಂದಿಲರಾಗಿ "ಶುಭಾಷಯ" ಎಂದು ತಪ್ಪಾಗಿ ಶುಭ ಹಾರೈಸಬೇಡಿ. ಶುಭ + ಆಶಯ = ಶುಭಾಶಯ ಅಂದರೆ ಸಾಕು. ಈ ಹಬ್ಬಗಳ ಪ್ರಾಧಾನ್ಯತೆ, ಪಾವಿತ್ರ್ಯತೆಯನ್ನು ಕೊಂಡಾಡಿ, ಎಲ್ಲರೂ ಜೊತೆ ಸೇರಿ ನಮ್ಮ ಐಕ್ಯತೆ, ಸೌಹಾರ್ದತೆ ಹೆಚ್ಚುತ್ತದೆ ಅನ್ನಬೇಡಿ. ಪ್ರಧಾನ --> ಪ್ರಾಧಾನ್ಯ ಅಥವಾ ಪ್ರಧಾನತೆ, ಇಷ್ಟು ಸಾಕು. ಕಡೆಗೆ ಒಂದು ಕೊಂಡರೆ ಒಂದು ಉಚಿತ ಅನ್ನುವಂತೆ "ತೆ" ಸೇರಿಸಿ ಪಾವಿತ್ರ್ಯವನ್ನು ಪಾವಿತ್ರ್ಯತೆ, ಪ್ರಾವೀಣ್ಯವನ್ನು ಪ್ರಾವೀಣ್ಯತೆ ಮಾಡಿ ಕನ್ನಡ ಮೇಷ್ಟ್ರುಗಳ ಹತ್ತಿರ ಬೈಸಿಕೊಳ್ಳಬೇಡಿ. ಇನ್ನು ರಸ್ತೆ ಡಾಮರೀಕರಣ, ಅಗಲೀಕರಣ ಎಲ್ಲ ಹೇಗೂ ಬೇಡ. ಹೀಗೇ ಸಿಕ್ಕ ಸಿಕ್ಕಲ್ಲಿ "ಕರಣ" ಸೇರಿಸಿದರೆ ಮುಂದೆ ಹಬ್ಬ ಆಚರಿಸೀಕರಣ, ತಿಂಡಿ ತಿನ್ನೀಕರಣ ಎಲ್ಲ ಬಂದರೂ ಬಂದೀತು, ಜೋಕೆ!
ಇದನ್ನು ಓದಿ ಸುಸ್ತಾದೆ, ನಿಶ್ಯಕ್ತಿ ಆಗಿದೆ ಅನ್ನಬೇಡಿ. ಅದು ಶ್ಯಕ್ತಿ ಅಲ್ಲ, ಶಕ್ತಿ. ನಿಃ + ಶಕ್ತಿ = ನಿಶ್ಶಕ್ತಿ ('ಯ' ಒತ್ತು ಅಲ್ಲ 'ಶ' ಒತ್ತು). ಮಹಾಭಾರತದಲ್ಲಿ ಬರುವುದು ದುಶ್ಯಾಸನ ಅಲ್ಲ, ಅವನು ದುಶ್ಶಾಸನ . "ಅನಾವಶ್ಯಕ" ಇಷ್ಟು ಉದ್ದ ಬರ್ದಿದ್ದಾನೆ ಅಂದಿರಾ ? ನೋಡಿ ಅದೂ ಸರಿಯಲ್ಲ, ಇದರ ಬಗ್ಗೆ ವಿವರಣೆ ಅನವಶ್ಯಕ!! ನೀವು ಹೇಳಿದ್ದನ್ನೆಲ್ಲ ಕರಾರುವಕ್ಕಾಗಿ ಪಾಲಿಸುತ್ತೇವೆ ಅಂದುಬಿಟ್ಟೀರಿ ಮತ್ತೆ! ಕರಾರುವಾಕ್= ಕರಾರು + ವಾಕ್ (ವಾಕ್=ಮಾತು) ಅಂದರೆ ಕರಾರಿನ ಮಾತಿನಂತೆ, ಒಪ್ಪಂದದ ಮಾತಿನಂತೆ, ನಿರ್ದಿಷ್ಟವಾಗಿ ಅನ್ನುವ ಅರ್ಥ. 

ಮೊನ್ನೆ ಯಕ್ಷಗಾನದ ಕರೆಯೋಲೆಯೊಂದರಲ್ಲಿ, "ಈ ವೇದಿಕೆಯಲ್ಲಿ ಅಪಘಾತಕ್ಕೊಳಗಾದ ಕಲಾವಿದನಿಗೆ ಸನ್ಮಾನ ಮಾಡಲಾಗುವುದು" ಅಂತ ಬರೆದದ್ದನ್ನು ನೋಡಿ ಮಂಡೆಬಿಸಿಯಾಯಿತು, ವೇದಿಕೆಯಲ್ಲಿ ಅಪಘಾತವಾಯಿತೇ ಅಂದುಕೊಂಡೆ. ಆಮೇಲೆ ಗೊತ್ತಾಯಿತು, ಅಪಘಾತ ಆದದ್ದು ಬೇರೆಕಡೆ, ಸನ್ಮಾನ ಆಗಲಿರುವುದು ವೇದಿಕೆಯಲ್ಲಿ ಅಂತ ! ಇದೇ ರೀತಿ ಇನ್ನೊಬ್ಬರು, "ದೇವರ ನಾಮ ಸ್ಮರಣೆಯಿಂದ ಬರಬಹುದಾದ ಆಪತ್ತುಗಳು ತೊಲಗುತ್ತವೆ" ಅಂದಾಗ, ದೇವರ ನಾಮಸ್ಮರಣೆಯಿಂದ ಆಪತ್ತು ಬರುತ್ತದೆಯೇ ಅಂತ ಅವಾಕ್ಕಾಗಿದ್ದೆ. X ಅನ್ನುವುದು Y ಅನ್ನುವುದನ್ನು ವಿವರಿಸುತ್ತದೆ ಅಂತಾದರೆ X ದಿಲ್ಲಿಯಲ್ಲಿಯೂ Y ಕನ್ಯಾಕುಮಾರಿಯಲ್ಲಿಯೂ ಇದ್ದರೆ ಹೀಗಾಗುತ್ತದೆ. ಅವೆರಡು ಹತ್ತಿರಹತ್ತಿರ ಇದ್ದರೆ ಕನ್ನಡ ಶಿಕ್ಷಕರು ನಿಮ್ಮ ಬಾಯಿಗೆ ಕಲ್ಲುಸಕ್ಕರೆ ಹಾಕುತ್ತಾರೆ. "ಹೊಸ ನೇತ್ರರೋಗದ ಆಸ್ಪತ್ರೆ" , ಒಂದು ಎಕರೆ ಬೆಲೆಬಾಳುವ ಸ್ಥಳ", "ಡೈನಿಂಗ್ ಹಾಲಿನಲ್ಲಿ ಸ್ನಾನ ಮಾಡಿ ಊಟಕ್ಕೆ ಕೂತಿದ್ದೆ"  ಅಂತೆಲ್ಲ ವಾಕ್ಯ ರಚನೆ ಮಾಡಿ X ಯಾವುದು, Y ಯಾವುದು ಅಂತ ಕಕ್ಕಾಬಿಕ್ಕಿಯಾಗುವಂತೆ ಮಾಡಿದರೆ, ನಿಮ್ಮ ಬಾಯಿಗೇ ಕೈ ಹಾಕಿ, ಮೊದಲು ಹಾಕಿದ ಕಲ್ಲುಸಕ್ಕರೆಯನ್ನು ಕಿತ್ತುಕೊಳ್ಳುವುದಾಗಿ ನನ್ನ ಗುರ್ತದ ಕನ್ನಡ ಪಂಡಿತರೊಬ್ಬರು ಹೇಳಿದ್ದಾರೆ ! 
ಇಲ್ಲಿ ಹೇಳಿರುವ ಎಲ್ಲ "ಪ್ರಕಾರ"ದ ತಪ್ಪುಗಳನ್ನು "ಕೂಲಂಕಷ"ವಾಗಿ ಪರಿಶೀಲಿಸಿ ನೀವು ಹೇಳಿದ್ದನ್ನು "ಕರಾರುವಾಕ್ಕಾಗಿ" ಪಾಲಿಸುತ್ತೇನೆ ಅಂತ ಭರವಸೆ ಕೊಟ್ಟರೆ ನಾನೂ ಇಂತದ್ದನ್ನೆಲ್ಲ ಬರೆಯುವುದನ್ನು ನಿಲ್ಲಿಸುತ್ತೇನೆ ! 

6 comments:

  1. ಮೊನ್ನೆ ಈ ಲಿಂಕನ್ನು ಬುಕ್ ಮಾರ್ಕ್ ಮಾಡಿಟ್ಟುಕೊಂಡಿದ್ದು ಇವತ್ತು ಇದಕ್ಕೆ ಬಿಡುಗಡೆ. ಸೊಗಸಾದ ಲೇಖನ. ವ್ಯಾಕರಣ ನಾಜ಼ೀಗಳಲ್ಲೂ ಭರ್ಜಿಗೆ ಸಕ್ಕರೆ ಸವರುವ ದಯಾವಂತರು ಇರುತ್ತಾರೆಂದು ತಿಳಿದರೆ ಭಾಷೆಯಲ್ಲಿ ತಪ್ಪು ಮಾಡುವವರಿಗೆ ಎಷ್ಟೋ ಹಾಯೆನಿಸುತ್ತದೆ, ತಿವಿಸಿಕೊಳ್ಳುವಾಗ :) ನಿಮ್ಮ ಬರಹವನ್ನು ’ತಾಯೀಕರಣ’ತಜ್ಞರು ಹೇಗೆ ತೆಗೆದುಕೊಳ್ಳುತ್ತಾರೋ ಎನ್ನುವ ಕುತೂಹಲವಿದೆ (ಅಕಸ್ಮಾತ್ ಅವರಿಗೆ ಓದಲು ಬಂದರೆ)

    ಅಂದಹಾಗೆ, ಉಪಹಾರ, ಪೂರ್ವಾಗ್ರಹ ಕೂಡ ಸುಮಾರು ಹತ್ತಿರದ ಅರ್ಥದಲ್ಲೇ ಬಳಸಲು ಸಾಧ್ಯ. ಬೆಳಗ್ಗೆ (ಬೆಳಗಿಗೆ) ಕೂಡ ಹಲವು ಸಂದರ್ಭಗಳಲ್ಲಿ ಸಾಧು ಪ್ರಯೋಗವೇ.

    ReplyDelete
  2. ಓದಿದ್ದಕ್ಕೆ ಧನ್ಯವಾದಗಳು. ಹೌದು, ಹೇಗೂ ಹೊಡೆಯುವುದು ಅಂತ ನಿರ್ಧಾರ ಮಾಡಿದ ಮೇಲೆ ಕೋಲನ್ನು ಶಾಲಿನಲ್ಲಿ ಸುತ್ತಿದರೆ ಹೊಡೆಸಿಕೊಳ್ಳುವವರಿಗೂ ಸುಖ. ಒಪ್ಪಿದೆ ಉಪಹಾರ, ಪೂರ್ವಾಗ್ರಹಗಳು ಹೆಚ್ಚು ಕಮ್ಮಿ ಅದೇ ಅರ್ಥ ಕೊಡಬಲ್ಲವು.
    ಇನ್ನೊಮ್ಮೆ ಪುರುಸೊತ್ತಾದಾಗ ವಾಕ್ಯ ದೋಷಗಳನ್ನೂ ಸೇರಿಸಬೇಕು ಅಂದುಕೊಂಡಿದ್ದೇನೆ (ಉದಾ : ನಾಮಪದ ವಿಶೇಷಣದಿಂದ ಐದು ಮೈಲಿ ದೂರ ಇರುವುದು, ಇಂತದ್ದು )

    ReplyDelete
  3. ಶರತ್ ಧನ್ಯವಾದ..ಲೇಖನ ಇಷ್ಟವಾಯಿತು

    ReplyDelete
  4. ತುಂಬಾ ಚನ್ನಾಗಿದೆ ಲೇಖನ.ಧನ್ಯವಾದಗಳು.

    ReplyDelete
  5. This comment has been removed by the author.

    ReplyDelete
  6. ನಿಮ್ಮ ಬರೆಯುವ ಶೈಲಿಗೆ ಮಾರು ಹೋದೆ ಶರತ್ ಅವರೇ -ಹರೀಶ್ www.padya.org

    ReplyDelete