Friday, 19 December 2014

ಸಚಿನ್ ............................ ಸಚಿನ್ ...................

ನಾನು ಸಚಿನ್ ನಿವೃತ್ತಿ ತಕೊಂಡಾಗ ಬರೆದಿದ್ದ  ಒಂದು ನುಡಿ ಹಾರ :
ಈ ವರ್ಷ ಬೆಂಗಳೂರಿನಲ್ಲಿ ಮಲೆಗಳಲ್ಲಿ ಮದುಮಗಳು ಅಂತ ಒಂದು ಅದ್ಬುತ ಮಹಾ ನಾಟಕ ಪ್ರದರ್ಶನ ಇತ್ತು. ಸುಮಾರು ಒಂಬತ್ತು ಘಂಟೆ ಉದ್ದ. ಯಕ್ಷಗಾನದ ಹಾಗೆ ಇಡೀ ರಾತ್ರಿ ನಾಟಕ. ವಿಶೇಷ ಅಂದ್ರೆ ತುಂಬಾ ಉದ್ದ ಕಣ್ರೀ ಅಂದವರೂ ಕಣ್ಣು ಬಾಯಿ ಬಿಟ್ಟು ನೋಡಿದರು, ಉದ್ದ ಅಂದವರೂ ಇನ್ನಷ್ಟು ಉದ್ದ ಆಗಲಿ ಅಂತ ಒಳಗೊಳಗೇ ಅಂದುಕೊಂಡರು. ಸಚಿನ್ ಅನ್ನೋ ಮೆಗಾ ಸೀರಿಯಲ್ ನದ್ದೂ ಅದೇ ಕತೆ. ಅವರು ಆಡಿದ್ದು ನಾವು ನೋಡಿದ್ದು ಎಲ್ಲ ಶುರುವಾಗಿ 24 ವರ್ಷ ಆಯಿತು. ನಮ್ಮೂರಲ್ಲಿ ಒಂದು ನಾಲ್ಕೋ ಐದೊ ಹೋಳಿಗೆ ತಿಂದವರು ಇನ್ನೂ ಒಂದು ಹಾಕ್ಲಾ ಅಂದರೆ ಬೇಡ ಬೇಡ ಅನ್ನುತ್ತಲೇ ಮತ್ತೆರಡು ತಿನ್ನುವುದಕ್ಕೆ ತಯಾರಿರ್ತಾರೆ. ಸಚಿನ್ ಆಟವೂ ಈ ಹೋಳಿಗೆ ತಿಂದವರ ಹಾಗೇ ಆಯಿತು. ನಾವೆಲ್ಲಾ ತುಪ್ಪ ಹಾಕಿದ ಗರಿ ಗರಿ ಹೋಳಿಗೆ ಬೇಡ ಬೇಡ ಎನ್ನುತ್ತಲೇ 24 ತಿಂದೆವು, ಯಾಕಂದರೆ ನಮಗೆ ಅದು ಇಷ್ಟ! 24 ತಿನ್ನುವಷ್ಟು ಇಷ್ಟ!!

ಕ್ರಿಕೆಟ್ ನ ಪಿತಾಮಹ WG Grace ಬಗ್ಗೆ ಒಂದು ಕತೆ ಚಾಲ್ತಿಯಲ್ಲಿದೆ. ಪ್ರದರ್ಶನ ಪಂದ್ಯ ಒಂದರಲ್ಲಿ ಗ್ರೇಸ್ ಮೊದಲ ಬಾಲಿಗೇ ಔಟ್ ಆದನಂತೆ. ಪವಿಲಿಯನ್ ಗೆ ನಡೆಯುವುದು ಬಿಟ್ಟು ಬೇಲ್ಸ್ ಎತ್ತಿಟ್ಟು ಮತ್ತೆ ಆಡೋದಕ್ಕೆ ನಿಂತನಂತೆ . ಏನಯ್ಯಾ ತಂದೆ, ಔಟ್ ಆದವರು ಸುಮ್ನೆ ಹೋಗ್ತಾ ಇರ್ಬೇಕು ಅದೇ ನಿಯಮ ಅಂದರಂತೆ ಅಂಪೈರ್ ಗಳು. ಗ್ರೇಸ್ ಟಪ್ ಅಂತ Square ಕಟ್ ಮಾಡಿದ ತರ ಉತ್ತರ ಕೊಟ್ಟಿದ್ದ : ಸ್ವಾಮೀ, ಒಂದು ತಿಳ್ಕೊಳ್ಳಿ, ಇಷ್ಟು ಜನ ಬಂದಿರೋದು ನೀವು ರೂಲ್ಸ್ ಫಾಲೋ ಮಾಡ್ತೀರ ಅಂತ ನೋಡೋದಕ್ಕಲ್ಲ, ಅವ್ರು ಬಂದಿರೋದು ನನ್ನ ಆಟ ನೋಡಿ ಜಿಗಿದು ಕುಣಿದು ಖುಷಿ ಪಡೋದಿಕ್ಕೆ !!! ಸಚಿನ್ ವಿಷಯವೂ ಹಾಗೆ ಆಯಿತು ಅನ್ನಿ.

ಸಚಿನ್ ಒಂದು ಲೋಟ ಮಜ್ಜಿಗೆ ಕುಡಿದರೂ, ಮಜ್ಜಿಗೆ ಕುಡಿದ ಮೊದಲ ಆಟಗಾರ ನಮ್ಮ ದೇವರು ಅಂತ ಅದನ್ನೂ ಒಂದು ರೆಕಾರ್ಡ್ ಪಟ್ಟಿಗೆ ಸೇರಿಸಿ ಖುಷಿ ಪಡುವ ರೆಕಾರ್ಡ್ ಪ್ರಿಯರ ದೇಶ ಇದು. ಸಚಿನ್ ಬಿಡಿ, ಕಡೆಗೆ ಅತಿ ಹೆಚ್ಚು ರೆಕಾರ್ಡ್ ಮಾಡಿದ ಕ್ರಿಕೆಟಿಗ ಅಂತಲೂ ಒಂದು ರೆಕಾರ್ಡ್ ಮಾಡಿದ ಪುಣ್ಯಾತ್ಮ. ನಮ್ಮ ದೇಶಕ್ಕೆ ಅವರು ಹಿಡಿಸಿದ್ದು ಸಹಜವೇ. ನನ್ನಂತವರಿಗೆ ಅತೀ ಹೆಚ್ಚು ಮನರಂಜನೆ ಕೊಟ್ಟ ಆಟಗಾರ ಸಚಿನ್ ಅನ್ನುವುದೂ ಒಂದು ದೊಡ್ಡ ರೆಕಾರ್ಡ್. ನಾವೆಲ್ಲಾ ಕ್ರಿಕೆಟ್ ನೋಡಿದ್ದೇ ಸಚಿನ್ ಗಾಗಿ. Azar ಮಹಮೂದ್ ನಮಗೆ ನೆನಪಿರುವುದು ಸಚಿನ್ ಅವನ ಓವರ್ ನಲ್ಲಿ ಹೊಡೆದ ನಾಲ್ಕು ಬೌಂಡರಿ ಗಳಿಂದ. ಸಚಿನ್ ಓಪನರ್ ಆಗಿ ಆಡಿದ ಮೊದಲ ಮ್ಯಾಚ್ ಈಗಲೂ ನೆನಪಿನ ಪುಟದಲ್ಲಿ ಹಚ್ಹ ಹಸಿರು. ಅವತ್ತು ದೆವ್ವ ಮೆಟ್ಟಿ ದವರ ತರ 49 ಬಾಲಲ್ಲಿ 82. ಅದು Auckland. ನಮಗೆ NewZealand ನಲ್ಲಿ Auckland ಅಂತ ಒಂದು ಜಾಗ ಇದೆ ಅಂತ ಗೊತ್ತಾಗಿದ್ದೇ ಈ ಇನ್ನಿಂಗ್ಸ್ ನೋಡಿದ ಮೇಲೆ. Dhaka ಎಲ್ಲಿದೆ ಅಂದರೆ ಸಚಿನ್ ಪಾಕಿಸ್ತಾನದ ಮೇಲೆ 5 ಸಿಕ್ಸ್ ಜೊತೆ 95 ಚಚಿದ್ದರಲ್ಲ ಅದೇ Dhaka ಅನ್ನಬಹುದು. ಹೀರೋ ಕಪ್ ನಲ್ಲಿ ಕುಂಬ್ಳೆ 12 ರನ್ನಿಗೆ 6 ವಿಕೆಟ್ ಕಿತ್ತಷ್ಟೇ ಪ್ರಸಿದ್ದ ತೆಂಡೂಲ್ಕರ್ ಸೆಮಿ ಫೈನಲ್ ನಲ್ಲಿ ಹಾಕಿದ ಕೊನೆಯ ಓವರ್, ಸೌತ್ ಆಫ್ರಿಕಾ ಕ್ಕೆ ಕೊನೆಯ ಓವರ್ ನಲ್ಲಿ 6 ರನ್ ಬೇಕಿತ್ತು, ಸಚಿನ್ ಕೈಯಲ್ಲಿ ಚೆಂಡು, ಮುಂದಿನದು ದೇವರ ಚಿತ್ತ!

ನೈರೋಬಿಯಲ್ಲಿ McGrathಗೆ 3 ಸಿಕ್ಸರ್ ಬಾರಿಸಿದಾಗ ನಮಗೆಲ್ಲ ಭಾರತ ಸರ್ಕಾರ ಇನ್ಸಾಟ್ ಉಪಗ್ರಹ ಹಾರಿಸಿದಷ್ಟು ಸಂತೋಷ ಆಗಿತ್ತು,ಟೊರೊಂಟೊದಲ್ಲಿ ವಕಾರ್ ಗೆ ಕೊಟ್ಟಿದ್ದು, ಹೆನ್ರಿ ಒಲೊಂಗ ಧೂಳಿ ಪಟ ಆದದ್ದು, ಶಾರ್ಜಾದ ಭಯಂಕರ ಬಿರುಗಾಳಿ, Andy Caddick ಗೆ ಥೇಟು ಚಕ್ರವರ್ತಿಯ ಗತ್ತಿನಲ್ಲಿ ಹುಕ್ ಮಾಡಿ ಕಣ್ಣು ತಂಪಾಗಿಸಿದ್ದು , ಆ ಮೇಲೆ ಪಾಕಿಸ್ತಾನದ ಜೊತೆ ಹೊಸ ಗಾನ ಬಜಾನಾ ಅನ್ನಿಸಿದ್ದು, ಆಸ್ಟ್ರೇಲಿಯಾ ದ ಜೊತೆ 175 ಮಾಡಿಯೂ ಸೋತಿದ್ದು. ಎಲ್ಲ ಸಂಭ್ರಮ ಕಣ್ಣಿಗೆ ಕಟ್ಟಿದ ಹಾಗೆ ಇದೆ. ಎಲ್ಲ ಜಿಪುಣರ ಬೌಲಿಂಗ್ ಇದ್ದ New Zealand ಜೊತೆ ಮಾಡಿದ 186 ಅಬ್ಬಬ್ಬಾ !! 1995,1996, 1998 ಮತ್ತು 2003 ಸಚಿನ್ ಪ್ರಿಯರಿಗೆ ಮರೆಯಲಾಗದ ವರ್ಷಗಳು. ಸವಿ ಸವಿ ನೆನಪು ಸಾವಿರ ನೆನಪು!

ಸ್ಟ್ರೈಟ್ ಡ್ರೈವ್ ಲೀಲಾ ಜಾಲ, ಹುಕ್ ಕಣ್ಣಿಗೆ ಹಬ್ಬ , ಪುಲ್ ಗಗನವೇ ಬಾಗಿ ಇಳೆಗೆ ಬಂದ ಹಾಗೆ, ಮುದ್ದು ಮಗುವಿನ ನಗೆಯ ಹಾಗೆ ಕಾಣುವ ಕವರ್ ಡ್ರೈವ್, ಅಪರೂಪದ ಲೆಗ್ glance, ಅಬ್ಬರದ ಸಿಕ್ಸರ್ ಗಳು, Square ಕಟ್ ಚಂದಕಿಂತ ಚಂದ, ಲೇಟ್ ಕಟ್ ಸೊಗಸೇ ಸೊಗಸು, ಮುಂದೆ ಬಂದರೆ ನಯನ ಮನೋಹರ , ಹಿಂದೆ ಹೋದರೆ ಅದೇ ಲಾಲಿತ್ಯ. ಮಳೆಗಾಲದಲ್ಲಿ ಜೋಗ ಜಲಪಾತ ಧುಮ್ಮಿಕ್ಕಿ ಹರಿದ ಹಾಗೆ ಅಬ್ಬರಿಸಿ ಬೊಬ್ಬಿರಿದು , ಮೆಲ್ಲನೆ ಬಳುಕಿ ಬಾಗಿ, ಒಮ್ಮೊಮ್ಮೆ ತಾಳ್ಮೆಯಿಂದ ನಿಧಾನಕ್ಕೆ ಶಿಲ್ಪಿ ಕೆತ್ತಿದ ಹಾಗೆ ನಯವಾಗಿ ದೂಡಿ ಆಡಿದ ಆಟ, ನಿಮಗೆ ನೀವೇ ಸಾಟಿ ! ಎಲ್ಲಕ್ಕೆ ಕಳಶ ಇತ್ತ ಹಾಗೆ ನೀವು ವಿನಯದ ಸೌಜನ್ಯದ ಮೂರ್ತಿ. ನೀವು ಸುಮಾರು 411 ಸಲ ಔಟಾಗಿರಬೇಕು ಒನ್ ಡೇ ಗಳಲ್ಲಿ, ಟೀವಿ ಅನ್ನುವುದು 100 ರೂಪಾಯಿಗೆ ಸಿಕ್ಕಿದ್ದರೆ ನಾವೆಲ್ಲಾ 411 ಸಲ ಟೀವಿ ಒಡೆದು ಹಾಕ್ತಾ ಇದ್ದೆವು. ಇನ್ನು ನೀವಿಲ್ಲ, ದ್ರಾವಿಡ್ ಇಲ್ಲ. ಟೀವಿ ಮಾರಾಟಕ್ಕಿದೆ !!

No comments:

Post a Comment