Monday, 7 December 2015

ಅಮೀರ ಖಾನನೂ ಭೋಗ ಷಟ್ಪದಿಯೂ!

ದಿನ ಬೆಳಗಾದರೆ ಅದೇ intoleranceಉ, ಮತ್ತದೇ ಪ್ರಶಸ್ತಿ ವಾಪಸ್ ಸುದ್ದಿ , ಅದೇ ಸಹಿಷ್ಣುತೆ, ಮಾಮೂಲಿ ಎಡ ಬಲಗಳ ಕಚ್ಚಾಟ ನೋಡಿ ನೋಡಿ ನೋಡಿ ತಲೆ ಚಿಟ್ಟುಹಿಡಿದಿದೆ. ಬೇರೆ ಏನಾದರೂ ಮಾತಾಡ್ರಪ್ಪಾ ಅನ್ನುವವರಿಗೆ, ನಾನೂ ಅದರ ಬಗ್ಗೆ ಬರೆದು ತಲೆ ನೋವು ಕೊಡೋಣ ಅಂತ! ಹೆದರಿಕೆ ಆಯ್ತಾ, ನಾನು ಹೇಳಿದ್ದು ಆ ತರ ಅಲ್ಲ. ಸ್ವಲ್ಪ ದಿನಕ್ಕೆ ಮೊದಲು ಕುಮಾರ ವ್ಯಾಸ Fight Club ನ ಸಂಭಾಷಣೆಯನ್ನು ಭಾಮಿನೀ ಷಟ್ಪದಿ ಯಲ್ಲಿ ಬರೆದರೆ ಹೇಗಿರುತ್ತದೆ ಅಂತ ಒಂದು ತಮಾಷೆಯ ಕಲ್ಪನೆಮಾಡಿದ್ದೆ(ಓದಿರದೇ ಇರುವವರಿಗಾಗಿ ಅದನ್ನು ಕೆಳಗೆ ಕೊಟ್ಟಿದ್ದೇನೆ). ಇವತ್ತು ಇನ್ನೊಬ್ಬ ಕವಿಯನ್ನ ಹಾಳು ಮಾಡೋಣ ಅಂತ.

"ತಿರುಕನ ಕನಸು" ಹಾಡು ಕೇಳಿದ್ದೀರಲ್ಲ ? ಅದು ಮುಪ್ಪಿನಷಡಕ್ಷರಿಗಳು ಬರೆದ ಹಾಡು. ಅವರು ಹದಿನಾರನೇ ಶತಮಾನದವರು. ಆ ಹಾಡು ಭೋಗ ಷಟ್ಪದಿಯಲ್ಲಿದೆ. ಆ ಮುಪ್ಪಿನ ಷಡಕ್ಷರಿಗಳು ನಮ್ಮ ಅಮೀರ್ ಖಾನ್ ಪ್ರಹಸನದ ಬಗ್ಗೆ ಹೇಗೆ ಬರೀಬಹುದು ಅಂತ ಒಂದು ವಿಚಿತ್ರ ಕಲ್ಪನೆ, ಭೋಗ ಷಟ್ಪದಿಯಲ್ಲಿ:
ಮಿಡುಕಿದಳು ರವೀನಾ ಬೆದರಿ
ಸಿಡುಕಿದನು ಅರ್ನಬ್ ಟೀವಿಯಲಿ
ಹುಡುಕಿ ಹೇಳಿ ನಿಜವ ದೇಶ ಕೇಳುತ್ತಿರಲು
ದುಡುಕಿ ರಮಣಿ ಹೇಳಲ್ ದೇಶ
ಬಿಡುವಮೀರ ಖಾನರೆ ನೀವು
ಕಡುಕಷ್ಟವೆ ನಿಮಗೆ ಏನಚ್ಚರಿ ಅಕಟಕಟಾ

ಹಳೇ ಬರಹದ ತುಣುಕು :
"You are not your job, you're not how much money you have in the bank. You are not the car you drive. You're not the contents of your wallet. You are not your fucking khakis. You are all singing, all dancing crap of the world" ― Chuck Palahniuk, Fight Club
ಇದನ್ನ ನಮ್ಮ ಕುಮಾರ ವ್ಯಾಸ ಬರೆದರೆ ಹೇಗಿರಬಹುದು ? ಹೀಗೆ :

ಕಾಯಕವು ನೀನಲ್ಲವೊ ಕೇಳು
ಮಾಯಕದ ಧನ ಕನಕ ನೀನಲ್ಲ
ರಾಯರೆಲ್ಲರನೊಯ್ವ ರಥವೇ ನೀನು ಧರಣಿಯಲಿ
ಕಾಯ ಒಪ್ಪುವ ಬಟ್ಟೆ ನಿನ್ನದೆ
ಆಯೆನುತ ಬೊಬ್ಬಿರಿದು ದುಗುಡದಲಿ
ಗಾಯನದಲಿ ಬಾಯ ಮೌನವ ಮುರಿವೆ ನೀನೆಂದ
(ಹೆಚ್ಚು ಕಮ್ಮಿ ಭಾಮಿನೀ ಷಟ್ಪದಿಯಲ್ಲೇ ಇದೆ, ಕಲಿಯುಗ ದ್ವಾಪರವಾಯಿತೋ ಇಲ್ಲವೋ ಗೊತ್ತಿಲ್ಲ , ಆದಿ ಪ್ರಾಸಗಳನ್ನ ತರುವಷ್ಟರಲ್ಲಿ ನನಗಂತೂ ಸಾಕಾಯಿತು)

ಕೊನೆಸಿಡಿ:ನಮ್ಮ ಎಫ್ಫೆಮ್ ಚಾನೆಲ್ ಗಳ ಜನರನ್ನ ಕುಮಾರ ವ್ಯಾಸನ ಕಾಲಕ್ಕೆ ಕರ್ಕೊಂಡು ಹೋಗಿ (Time Travel) , "ಎಲ್ಲಿ ಒಂದು ಗಣೇಶ ಸ್ತುತಿ ಭಾಮಿನೀ ಷಟ್ಪದಿಯಲ್ಲಿ ಬರೀರಿ ನೋಡೋಣ" ಅಂದರೆ ಹೇಗೆ ಬರೀಬಹುದು? ಹೀಗೆ(ಇದು ಜಿಪಿ ರಾಜರತ್ನಂ ತಮಾಷೆಗೆ ಬರೆದ ಪದ್ಯ) :
Cultಉ ಕಾವ್ಯದ ಮಸಿಯ ಕುಡಿಕೆಯ
Tiltಉ ಮಾಡುವ ಮೊದಲು ಹಾವಿನ
Beltಉ ಹಾಕಿದ ಗಣಪನನು ಹಾಡುವುದು ನಮ್ಮವರ |
Faultಉ ಮೀರಿದರಿದನು severe
Joltಉ ತಪ್ಪದು ಸತ್ಯ thunder
Boltಉ ಬಿದ್ದಂತೆಂದು therefore ಗಣಪತಿಯ ನೆನೆವೆ ||

No comments:

Post a Comment