ಬಹಳ ದಿನಗಳಿಂದ ತಲೆಯಲ್ಲಿ ತಿರುಗುತ್ತಿದ್ದ ವಿಷಯ ಸಿನೆಮಾ ಮತ್ತು ಕಳ್ಳತನ! ದಿನ ಬೆಳಗಾದರೆ ವಾಟ್ಸ್ ಅಪ್ಪಿನಲ್ಲೋ , ಫೇಸ್ಬುಕ್ಕಿನಲ್ಲೋ ಯಾರಾದರೂ ನಿನ್ನೆ ನೋಡಿದ ಈ ಚಿತ್ರ ಮೊನ್ನೆ ನೋಡಿದ ಆ ಸಿನೆಮಾದ ಹಾಗಿದೆ, ಇದನ್ನು ಅಲ್ಲಿಂದ ಕದ್ದಿದ್ದಾರಂತೆ, ಅದನ್ನು ಓ ಇಲ್ಲಿಂದ ಹಾರಿಸಿದ್ದಾರಂತೆ ಎಂದು ಮುಂತಾಗಿ ಪತ್ತೇದಾರಿಕೆ ಮಾಡಿ ಹೇಳುತ್ತಲೇ ಇರುತ್ತಾರೆ! ಆದರೆ ಇದು ಅಷ್ಟು ಸುಲಭದ ವಿಷಯ ಅಲ್ಲ ಅಂತ ನಿಮಗೂ ಅನ್ನಿಸಲಿ ಅಂತ ಇಷ್ಟು ಕೊರೆಯುವ ಸಾಹಸಕ್ಕೆ ಕೈ ಹಾಕಿದ್ದೇನೆ.
ಚೌರ್ಯಮೀಮಾಂಸೆ ಮಾಡುವ ಮೊದಲು ಒಂದು ಸಲ 2013ಕ್ಕೆ ಹೋಗಿ ಬರೋಣ. ಆಗ ಸಿಂಪಲ್ ಆಗ್ ಒಂದ್ ಲವ್ ಸ್ಟೋರಿ ಅನ್ನುವ ಚಿತ್ರ ಬಂದಿತ್ತು, ಬೆಂಗಳೂರಿಗೆ ಕನ್ನಡಿ ಹಿಡಿಯುವವರು ಒಬ್ಬರು ಬರೆದ ವಿಮರ್ಶೆ ಓದುತ್ತಿದ್ದೆ. ಇದು 50 First Datesನ ಕನ್ನಡ ಅವತಾರವೇನೋ ಅನ್ನುವಂತೆ ಬರೆದಿದ್ದರು, ಇನ್ನು ಕೆಲವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಇದು ಅದರ ಕಾಪಿಯೇ ಅಂತ ಬರೆದೂ ಬಿಟ್ಟರು! ಎರಡನ್ನೂ ನೋಡಿದ್ದ ನನಗೆ ಇದೇನಪ್ಪ ಕರ್ಮ ಅನಿಸಿತ್ತು. ಇಪ್ಪತ್ತೈದು ದೇಶಗಳ ಮೂವತ್ತೆಂಟು ಪತ್ತೇದಾರರು ಹುಡುಕಿದರೂ ಇದರ ಒಂದೇ ಒಂದು ದೃಶ್ಯ ಅದರ ಹಾಗಿರುವುದು ಸಿಕ್ಕಲಿಕ್ಕಿಲ್ಲ, ಎರಡೂ ಚಿತ್ರಗಳಲ್ಲಿ ಹೀರೋಯಿನ್ನಿಗೆ ಒಂದೇ ಖಾಯಿಲೆ ಇತ್ತು ಅಂದ ಮಾತ್ರಕ್ಕೆ ಕಾಪಿ ಮಂತ್ರ ಜಪಿಸುವ ಖಾಯಿಲೆ ನಮ್ಮ ಜನಕ್ಕೆ ಯಾಕೆ ಬಂತಪ್ಪ ಅಂತ ಸುಸ್ತಾಗಿದ್ದೆ. ಜಗತ್ತಿನಲ್ಲಿ ಬೇರೆ ಯಾರಿಗೂ ಅದೇ ಖಾಯಿಲೆ ಇರಬಾರದು ಅಂತ ಏನು ಕಾನೂನು ಇದೆಯೇ . ಹಾಗೆ ನೋಡಿದರೆ ಇವರುಗಳು ಬರೆಯುವ ವಿಮರ್ಶೆಗಳೂ ಈಗಾಗಲೇ ಸಾವಿರ ಸಲ ಬಂದಿರುವ ವಿಮರ್ಶೆಗಳ ಕಾಪಿಯೇ, ಚಿತ್ರದ ಕತೆಯನ್ನು ಉಂಡುಂಡೆಯಾಗಿ ಬರೆದು, ಕೊನೆಗೆ ಪಲ್ಯಕ್ಕೆ ಒಗ್ಗರಣೆ ಹಾಕಿದ ಹಾಗೆ ಛಾಯಾಗ್ರಹಣ ಚೆನ್ನಾಗಿದೆ, ಚಿತ್ರಕತೆ ಅಷ್ಟಕ್ಕಷ್ಟೇ, ಎಡಿಟಿಂಗ್ ಸರಿಯಿಲ್ಲ ಅಂತ ಸೇರಿಸಿರುವ ಅದದೇ ಸಾಲುಗಳಿರುವ ಅದೆಷ್ಟು ಸಾವಿರ ವಿಮರ್ಶೆಗಳ ಭಾರದಿಂದ ಫಣಿರಾಯ ತಿಣುಕಾಡಿಲ್ಲ! ಚಿತ್ರ ಮಾಡುವವರಿಗೆ ಕದಿಯುವ ಚಾಳಿಯಿರುವಷ್ಟೇ ನಮ್ಮ ಜನಗಳಿಗೆ ಸುಮ್ ಸುಮ್ನೆ ಕದ್ದ ಆರೋಪ ಹೊರಿಸುವ ಚಟವೂ ಇದೆ ಅಂದರೆ ತಪ್ಪಾಗಲಿಕ್ಕಿಲ್ಲ!
ಮಹಾ ಮೇಧಾವಿಯಾದ ನಿರ್ದೇಶಕ ಹಬೆಯಾಡುವ ಚಾ ಕುಡಿಯುತ್ತಾ ಕೂತಿರುತ್ತಾನೆ, ಒಮ್ಮೆಲೇ ಧಡಾರನೆ ಸಿಡಿಲು ಅಪ್ಪಳಿಸಿದ ಹಾಗೆ ಚಿತ್ರದ ಕತೆ ಆತನ ತಲೆಗೆ ಬರುತ್ತದೆ, ಚಾ ಮುಗಿಯುವಷ್ಟರಲ್ಲಿ ಆತನ ತಲೆಯಲ್ಲಿ ಭೋರ್ಗರೆದುರುಳುರುಳುವ ಜಲಪಾತದ ಹಾಗೆ ಇಡೀ ಎರಡೂವರೆ ಘಂಟೆಗಳ ಚಿತ್ರಕತೆ ಸುರಿದು ಹರಿದು ಉಕ್ಕಿ ತಯಾರಾಗಿ ಕೂತಿರುತ್ತದೆ, ಇದು ಜನಸಾಮಾನ್ಯರ ತಲೆಗೆ ಬರುವ ಚಿತ್ರ. ಈ ಮೂಢನಂಬಿಕೆಯೇ ಇಂತಹಾ ಆರೋಪಗಳಿಗೆ ಕಾರಣವೂ ಕೂಡ.
ಮೊನ್ನೆ ಮಧ್ಯಾಹ್ನ ನೋಡಿದ ಘಟನೆಯೊಂದು ಕೈ ಹಿಡಿದು ಜಗ್ಗುತ್ತದೆ, ಅದಕ್ಕೆ ಕಳೆದ ವರ್ಷ ನೋಡಿದ ಚಿತ್ರವೊಂದರ ದೃಶ್ಯವನ್ನು ಸ್ವಲ್ಪ ತಿರುಗಿಸಿ ಬದಲಾಯಿಸಿ ಸೇರಿಸುತ್ತಾನೆ, ನಡುವಿನಲ್ಲಿ ಮತ್ತೊಂದು ಚಿತ್ರದ ದೃಶ್ಯ ಹೀಗೆ ಬದಲಾಯಿಸಿ ತಂದರೆ ಹೇಗೆ ಅಂದುಕೊಳ್ಳುತ್ತಾನೆ, ಕೊನೆಯ ದೃಶ್ಯ ಓದಿ ಕೆಳಗಿಡಲಾರೆ ಅನ್ನಿಸಿದ್ದ ಆ ಕಾದಂಬರಿಯ ಹಾಗಿರಬೇಕು ಅಂದುಕೊಳ್ಳುತ್ತಾನೆ, ನಡುವಿನ ಕತೆ ಕಳೆದ ತಿಂಗಳು ನೋಡಿದ್ದ ಚಿತ್ರದ ಆರಂಭದ ಹಾಗೆ ಓಡಬೇಕು ಅಂತ ಲೆಕ್ಕ ಹಾಕುತ್ತಾನೆ. ಇದು ಸ್ವಲ್ಪ ವಾಸ್ತವಕ್ಕೆ ಹತ್ತಿರದ ಚಿತ್ರಣ. ಇದು ಬರೀ ಚಿತ್ರರಂಗದ ಕತೆ ಅಲ್ಲ. ಎಲ್ಲ ಕ್ರಿಯೇಟಿವಿಟಿಯೂ ಹೀಗೆಯೇ. ಅದು ಓದಿದ್ದನ್ನು, ನೋಡಿದ್ದನ್ನು, ಕೇಳಿದ್ದನ್ನು ಗುದ್ದಿ, ಚಿವುಟಿ, ಕಲಸಿ, ಬೆರೆಸಿ, ಎಳೆದು, ಒತ್ತಿ ಒಂದು ಹೊಸ ಹದಕ್ಕೆ ತಂದ ಹಾಗೆ. ಅಜ್ಜಿ ಕೊಟ್ಟ ಮಾವಿನ ಹಣ್ಣು, ಸಂತೆಯಿಂದ ತಂದ ದಾಳಿಂಬೆ, ಸೂಪರ್ ಮಾರ್ಟಿನಲ್ಲಿ ಹೆಕ್ಕಿದ ಸೇಬು, ಮನೆಯ ಹಿಂದೆ ಇದ್ದ ಚಿಕ್ಕು ಮರದ ಚಿಕ್ಕು ಎಲ್ಲ ಸೇರಿಸಿ ಮಾಡಿದ ನಮ್ಮದೇ ಸ್ವಂತದ(!) ಫ್ರುಟ್ ಸಲಾಡಿನಂತದ್ದು ಸೃಜಿಸುವ ಕ್ರಿಯೆ.
ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡು ಕೇಳಿದ್ದೀರಿ, ಅದರಲ್ಲಿ ಬದುಕಿದು ಜಟಕಾ ಬಂಡಿ,ಇದು ವಿಧಿ ಓಡಿಸುವ ಬಂಡಿ ಅನ್ನುವ ಸಾಲು ಬರೆಯುವಾಗ ಹಂಸಲೇಖರ ತಲೆಯಲ್ಲಿ ಡಿವಿಜಿ ಬರೆದ, ಬದುಕು ಜಟಕಾ ಬಂಡಿ ವಿಧಿ ಅದರ ಸಾಹೇಬ ಅನ್ನುವ ಸಾಲು ಇದ್ದಿರಬೇಕು, ಇದರಿಂದ ಹಂಸಲೇಖರಿಗೆ ಕಳಂಕವೇನೂ ತಟ್ಟಿಲ್ಲವಲ್ಲ.
ಹಳಗನ್ನಡದ ಬಲಿಷ್ಠಕವಿ ರನ್ನ ಬರೆದಿರುವ ಈ ಸಾಲು ನೋಡಿ : "ಈ ಬೂತೆನ್ನ ಸರಂಗೇಲ್ದೊಡಲ್ಲದೆ ಪೊರಮಡುವನಲ್ಲಮ್. ಇವಂಗಾನೆ ಸಾಲ್ವೆಮ್" (ನನ್ನ ಸ್ವರ ಕೇಳದೆ ಈ ಭೂತ ಹೊರ ಬರಲಾರದು, ಇವನಿಗೆ ನಾನೇ ಸಾಕು ಬಿಡಿ ಅಂತ ಭೀಮ ಹೇಳುವ ಮಾತು), ಇದನ್ನು ಮಹಾಕವಿ ಪಂಪನ ಈ ಸಾಲುಗಳ ಪಕ್ಕದಲ್ಲಿ ಇಡಿ : ಎನ್ನ ಸರಂಗೇಲ್ದಲ್ಲದೀ ಬೂತು ಪೊರಮಡುವನಲ್ಲಮ್. ಈತಂಗಾನೆ ಬಲ್ಲೆಂ. ಪಂಪನ ಸಾಲನ್ನು ರನ್ನ copy paste ಮಾಡಿದ ಹಾಗಿದೆ! ಸರಿ, ಈಗ ಪಂಪನ ಈ ಸಾಲುಗಳನ್ನು ನೋಡಿ :
ಮಹಾಪ್ರಳಯ ಭೈರವ ಕ್ಷುಭಿತ ಪುಷ್ಕಳಾವರ್ತಮಾ
ಮಹೋಗ್ರರಿಪುಭೂಭುಜ ಶ್ರವಣ ಭೈರವಾಡಂಬರಂ
ಆಯಿತಲ್ಲ, ಈಗ ಸಂಸ್ಕೃತ ನಾಟಕವೊಂದರ ಈ ಸಾಲು ನೋಡಿ :
ಮಹಾಪ್ರಲಯ ಮಾರುತ ಕ್ಷುಭಿತ ಪುಷ್ಕಲಾವರ್ತಕ
ಪ್ರಚಂಡ ಘನಗರ್ಜಿತ ಪ್ರತಿರವಾನುಕಾರೀ ಮುಹುಃ
ಇದರಿಂದ ಪಂಪನ ಪೆಂಪು ಕಡಿಮೆಯೇನೂ ಆಗುವುದಿಲ್ಲ. ಇದರ ಕುರಿತಾಗಿ ತೀನಂಶ್ರೀ ಅವರು ಹೇಳಿರುವುದನ್ನು ನೋಡಿ : "ಹಿಂದಿನವರಿಗೆ ಋಣಿಯಲ್ಲದ ಕವಿ ಜಗತ್ತಿನಲ್ಲಿ ಎಲ್ಲುಂಟು ? ರನ್ನನು ಪಂಪನ ಕಾವ್ಯಭಾಗದ ತಳಹದಿಯ ಮೇಲೆ ತನ್ನ ಕೃತಿಮಂದಿರವನ್ನು ಕಟ್ಟಿದನು; ಪಂಪನು ಕಾಳಿದಾಸ, ಭಾರವಿ, ಮಾಘ , ಭಟ್ಟ ನಾರಾಯಣಾದಿಗಳಿಂದ ಬೇಕಾದಷ್ಟು ಸಹಾಯ ಪಡೆದನು ; ಕಾಳಿದಾಸನು ಕೂಡ ಅಲ್ಲಲ್ಲಿ ಅಶ್ವಘೋಷನನ್ನು ಅನುಸರಿಸುವಂತೆ ತೋರುತ್ತದೆ. ಅಶ್ವಘೋಷನ ಕಾವ್ಯದಲ್ಲಿ ವಾಲ್ಮೀಕಿ ರಾಮಾಯಣದ ಛಾಯೆ ಗೋಚರವಾಗುತ್ತದೆ -- ಈ ಪರಂಪರೆಗೆ ಕೊನೆಯೆಲ್ಲಿ ! "
ನಮ್ಮ ನವ್ಯ ಸಾಹಿತಿಗಳು ವಾರಕ್ಕೆರಡು ಸಲ ಜಪ ಮಾಡುತ್ತಿದ್ದ ಹೆಸರು T. S. Eliotನದ್ದು. ಆನಂತಮೂರ್ತಿಯವರು ಬರೆದಿರುವ ಈ ಸಾಲುಗಳನ್ನು ನೋಡಿ: "ಉತ್ತಮಕಾವ್ಯದಲ್ಲಿ ಕವಿ ತನಗೆ ತಾನೇ ಮಾತಾಡಿಕೊಳ್ಳುತ್ತಿದ್ದಾನೆ ಎನಿಸುತ್ತದೆ ಅಥವಾ ತನ್ನಂಥವರ ಜೊತೆ ಮಾತಾಡುತ್ತಿದ್ದಾನೆ ಎಂದೆನಿಸುತ್ತದೆ, ಇನ್ನೂ ಉತ್ತಮ ಕಾವ್ಯದಲ್ಲಿ, ಇಲ್ಲಿ ಈ ಕವನದಲ್ಲಿಯೇ ಕವಿ ತಾನು ಭಾವಿಸುವ ಕ್ರಮವನ್ನು ಅಭಿನಯಿಸಿ ತೋರಿಸುತ್ತಿದ್ದಾನೆ ಎನಿಸುತ್ತದೆ" ಇದನ್ನು ಎಲಿಯಟ್ಟನ ಈ ಸಾಲುಗಳ ಜತೆಗಿಟ್ಟು ನೋಡಿ : “The first voice is the voice of the poet talking to himself–or to nobody. The second is the voice of the poet addressing an audience, whether large or small. The third is the voice of the poet when he attempts to create a dramatic character speaking in verse.”
ಈಗ ಎಲಿಯಟ್ ಬರೆದಿರುವ ಈ ಸಾಲನ್ನು ಓದಿ :
"The Chair she sat in, like a burnished throne, / Glowed on the marble."
ಇದನ್ನು ಆತ ಷೇಕ್ಸಪಿಯರ್ ಬರೆದಿರುವ ಈ ಸಾಲಿಂದ ಎತ್ತಿದ್ದು ಪ್ರಸಿದ್ಧವಾಗಿದೆ : "The barge she sat in, like a burnish'd throne, / Burn'd on the water". ಇನ್ನು ಷೇಕ್ಸಪಿಯರ್ ಅಂತೂ ಇಡೀ ಕತೆಗಳನ್ನೂ ಎಷ್ಟೋ ಸಾಲುಗಳನ್ನೂ ಹಾಗಾಗೇ ಎಗರಿಸಿದ್ದಾನೆ. ಆದರೂ ಅವನ ಕೀರ್ತಿ ಪತಾಕೆ ಪಟ ಪಟಿಸುತ್ತಲೇ ಇದೆ. ಎಷ್ಟು ದೊಡ್ಡ ಲೇಖಕರನ್ನು ತೆಗೆದುಕೊಂಡರೂ ಅವರಿಗೆ ಸ್ವಲ್ಪವಾದರೂ ಋಣಭಾರ ಇರುವುದನ್ನು ತೋರಿಸಬಹುದು.
ಹಾಲಿವುಡ್ಡಿನ ಮಹಾನ್ ಪ್ರತಿಭೆ Christopher Nolan ತನ್ನ interstellar ಚಿತ್ರದ ಬಗ್ಗೆ ಮಾತಾಡುತ್ತಾ, ನಾನು ಸುಮಾರು ಚಿತ್ರಗಳಿಂದ ಎತ್ತಿದ್ದೇನೆ ಅಂತ ಒಮ್ಮೆ ತಮಾಷೆ ಮಾಡಿದ್ದ. ಅತ್ಯಂತ ಕ್ರಿಯಾಶೀಲ, daringly original, ಯಾರೂ ಮಾಡಿರದ್ದನ್ನು ಮಾಡುವವ ಅನ್ನಿಸಿಕೊಂಡಿರುವ ನೋಲನ್ನನೇ ಹೀಗಂದರೆ ಚಿಲ್ಲರೆ ಪಿಲ್ಲರೆಗಳ ಕತೆ ಹೇಗಿರಬೇಡ! ಟೈಟಾನಿಕ್ ಆಗಲೇ ನಾಲ್ಕೈದು ಸಲ ಬಂದಿದ್ದ ಕತೆ. ಟರ್ಮಿನೇಟರ್ ಸೈನ್ಸ್ ಫಿಕ್ಷನ್ ಕೃತಿಗಳಲ್ಲಿ ಇದ್ದ ಸರಕೇ. ಜುರಾಸಿಕ್ ಪಾರ್ಕ್ ಬರುವ ಮೊದಲೇ ಡೈನೋಸಾರ್ಗಳ ಬಗ್ಗೆ ಒಂದಷ್ಟು ಚಿತ್ರಗಳು ಇದ್ದವು. ಅದ್ಭುತ ಸ್ಟೈಲಿಸ್ಟ್ ಅನ್ನಿಸಿಕೊಂಡ, ಗುಡ್ ಬ್ಯಾಡ್ ಅಗ್ಲೀ ತರದ ಕೌಬಾಯ್ ಚಿತ್ರಗಳಿಂದ ಹೆಸರು ಮಾಡಿದ್ದ Sergio Leoneಯ ಮೇಲೆ ಕೃತಿ ಚೌರ್ಯದ ಕೇಸೇ ಜಡಿದಿತ್ತು. ನಮ್ಮ ಸಲೀಂ ಜಾವೇದ್ ರ ಶೋಲೆ ಕೂಡ ಐದಾರು ಚಿತ್ರಗಳ ಕಲಸು ಮೇಲೋಗರವೇ, ಧರ್ಮೇಂದ್ರ ನೀರಿನ ಟಾಂಕಿಯಲ್ಲಿ ಮಾಡುವ ನಾಟಕ The secret of Santa Vittoriaದಲ್ಲಿ ಬಂದದ್ದೇ. ಅಷ್ಟಾದರೂ ಶೋಲೆ ಸ್ವಂತ ಚಿತ್ರವೇ. ಒಂದು ಹತ್ತು ನಿಮಿಷಗಳ ಸರಕು ಎತ್ತಿದ್ದು ಅಂತಲೇ ಇಟ್ಟುಕೊಂಡರೂ ಇನ್ನು ಮೂರು ಘಂಟೆಗಳ ಚಿತ್ರಕತೆ ಕಷ್ಟ ಪಟ್ಟು ಬರೆದದ್ದೇ. ಬಾಹುಬಲಿಯಲ್ಲಂತೂ ಜಾಗತಿಕ ಸಿನೆಮಾಗಳನ್ನು ನೋಡಿರುವವರಿಗೆ ಮತ್ತು ತರಾಸು, ಕೊರಟಿ ಶ್ರೀನಿವಾಸ ರಾವ್ ಅವರ ಕಾದಂಬರಿಗಳನ್ನು ಓದಿರುವವರಿಗೆ ಯಾವ್ಯಾವುದು ಎಲ್ಲಿಂದ ಬಂದಿದೆ ಅಂತ ಎದ್ದು ಕಾಣುತ್ತದೆ. ಈ ಸಲ ಆಸ್ಕರ್ ಗೆದ್ದಿರುವ ಶೇಪ್ ಆಫ್ ವಾಟರ್ ಅದೆಷ್ಟು ಸಲ ಬಂದಿದ್ದ ಕಥೆಯೋ. ನಮ್ಮ ಪ್ರಾಚೀನರಿಗಂತೂ ಹೊಸ ಕಥೆಗಳನ್ನು ಹುಟ್ಟಿಸುವ ಆಸಕ್ತಿಯೇ ಇದ್ದಂತಿಲ್ಲ. ಅವರಿಗೆ ಏನಿದ್ದರೂ ರಾಮಾಯಣ, ಮಹಾಭಾರತಗಳನ್ನು, ಪುರಾಣಗಳನ್ನು ಇನ್ನೊಮ್ಮೆ ಮತ್ತೊಮ್ಮೆ ಮಗುಳೊಮ್ಮೆ ಹೊಸ ತರದಲ್ಲಿ ಹೇಳುವುದರಲ್ಲಿಯೇ ಉತ್ಸುಕತೆ,ತೃಪ್ತಿ.
Quentin Tarantinoನದ್ದು ಇನ್ನೂ ವಿಚಿತ್ರ ಕೇಸು. ಪ್ರಭಾವ ಯಾವುದು, "ಎತ್ತಿದ್ದು" ಯಾವುದು, Tribute ಯಾವುದು, ಹಾಗಾಗೇ ತಂದದ್ದು ಎಷ್ಟು ಅಂತ ಹೇಳುವುದು ಕಷ್ಟ ಅವನ ವಿಚಾರದಲ್ಲಿ. ಎತ್ತಿದರೂ ಸಾಕಷ್ಟು ಸ್ವಂತಿಕೆ ಮೆರೆಯುತ್ತಾನೆ ಅನ್ನಬಹುದು. ಒಟ್ಟು ಒಂದು ಇನ್ನೂರೈವತ್ತು ಚಿತ್ರಗಳ ಪ್ರಭಾವವಾದರೂ ಅವನ ಚಿತ್ರಗಳಲ್ಲಿ ಕಾಣುತ್ತದೆ ಅನ್ನಬಹುದು. ಅಷ್ಟರ ಮಟ್ಟಿಗೆ ಆತ ಹಾಲಿವುಡ್ಡಿನ ಓಂ ಪ್ರಕಾಶ್ ರಾವೇ!! Reservoir Dogs ನಲ್ಲಂತೂ ಒಂದಿಡೀ ಕತೆಯನ್ನೇ ಎತ್ತಿದ್ದಾನೆ, ಇದನ್ನು ಬರೀ ಪ್ರಭಾವ ಅಂತ ಒರೆಸಿ ಹಾಕುವುದು ಕಷ್ಟ. ಕಿಲ್ ಬಿಲ್ ಅಂತೂ ಅದೆಷ್ಟೋ ಚಿತ್ರಗಳ ಕಿಚಡಿಯೇ. ಅದರಲ್ಲಿ ಕಡೆಗೆ ಹೀರೋಯಿನ್ ಹಾಕುವ ಹಳದಿ ಟ್ರಾಕ್ ಸೂಟು ಕೂಡ ಒಂದು ಚೈನೀಸ್ ಚಿತ್ರದ್ದು! ಇಡೀ ಕತೆಯನ್ನೇ ಎಗರಿಸಿದರೂ ಸ್ವಂತ ಕ್ರಿಯಾಶೀಲತೆಯೂ ಖಂಡಿತಾ ಇದೆ ಟರಾಂಟಿನೋ ಚಿತ್ರಗಳಲ್ಲಿ.
ಹಾಗಾದರೆ ಸ್ವಂತಿಕೆ ಅಂದರೆ ಏನು ? ಕುವೆಂಪು ಒಂದು ಕಡೆ ಹೀಗೆ ಹೇಳಿದ್ದಾರೆ : ಅಂಗಡಿಯಿಂದ ಯಾರು ಬೇಕಾದರೂ ತಾಮ್ರದ ತಂತಿಯನ್ನು ಕೊಂಡು ತರಬಹುದು. ಅದನ್ನು ಮುಟ್ಟಿದರೆ ಏನೋ ಆಗುವುದಿಲ್ಲ. ಅದು ವಿದ್ಯುತ್ ಕಂಬವನ್ನೇರಿದ ಮೇಲೆ ತಾನೆ ಅದರ ಗೌರವ ಬೇರೆಯಾಗುತ್ತದೆ! ಆಗ ಅದನ್ನು ಮುಟ್ಟಿದವನಿಗೆ ಅನುಭವ ಗೋಚರವಾಗುತ್ತದೆ ಅಗೋಚರವಾದ ಶಕ್ತಿಯ ತಟಿಚ್ಚುಂಬನ!
ಇದು ಒಪ್ಪಬೇಕಾದ ಮಾತು. ತಾಮ್ರದ ತಂತಿಯನ್ನು ಎಲ್ಲಿಂದಾದರೂ ತನ್ನಿ, ಕಂಬ ನೀವೇ ನೆಡಬೇಕು , ತಂತಿ ನಿಮ್ಮದೇ ಶೈಲಿಯಲ್ಲಿ ಬಿಗಿದು ಕಟ್ಟಬೇಕು, ತಂತಿಗೆ ವಿದ್ಯುತ್ ನಿಮ್ಮದೇ ಇರಬೇಕು. ಹಣ್ಣು ಎಲ್ಲಿಂದಾದರೂ ತನ್ನಿ, ಸಲಾಡ್ಗೆ ನಿಮ್ಮ ರುಚಿಯೇ ಇರಬೇಕು, ಬರೀ ಮಾವಿನ ಹಣ್ಣಿನಲ್ಲಿ, ಸೇಬಿನಲ್ಲಿ ಇಲ್ಲದ ರುಚಿ, ಸ್ವಾದ ಸಲಾಡಿನಲ್ಲಿ ಇರಲೇಬೇಕು. ತಂದದ್ದಕ್ಕೆ ಏನಾದರೂ ಸೇರಿಸಿ ಮೂಲದಲ್ಲಿ ಇಲ್ಲದ ಹೊಸತೇನಾದರೂ ಕೊಡಲೇ ಬೇಕು. ಹೊಸತನ ಇರುವುದು ವಿವರಗಳಲ್ಲಿ. ಅದೆಷ್ಟು ಸಾವಿರ ಪ್ರೇಮ ಕತೆಗಳು ಬಂದಿಲ್ಲ ? ಎಲ್ಲದರ ಕತೆಯೂ ಒಂದೇ . ಹೀರೊ ಹೀರೋಯಿನ್ ಭೇಟಿ, ಪ್ರೇಮಾಂಕುರ, ಅಡ್ಡಿ ಆತಂಕಗಳು, ಕೊನೆಗೆ ಒಂದಾಗುತ್ತಾರೆ ಅಥವಾ ಬೇರೆಯಾಗುತ್ತಾರೆ. ಇಷ್ಟೇ. ಮತ್ತೆ ಹೊಸ ಪ್ರೇಮ ಕತೆಗಳನ್ನು ಯಾಕೆ ನೋಡಬೇಕು ಹಾಗಾದರೆ ? ನಿರೂಪಣೆಗಾಗಿಯೇ ತಾನೇ ? ವಿವರಗಳಿಗಾಗಿಯೇ ತಾನೇ ? ವ್ಯಾಸರು ಬರೆದ ಕಥೆಯನ್ನೇ ಕುಮಾರವ್ಯಾಸ ಮತ್ತೊಮ್ಮೆ ಹೇಳಿದರೂ ಅದರಲ್ಲಿ ಅತಿಶಯವಾದ ಚೆಲುವು ಕಾಣುವುದು ಮರುನಿರೂಪಣೆಯಲ್ಲಿ ಇರುವ ಸ್ವಂತಿಕೆಯಿಂದಲೇ ಅಲ್ಲವೇ ?
ಒಂದು ಕತೆ ತಗೊಳ್ಳಿ. ಹೀರೋ ಬೆಂಗ್ಳೂರಿಂದ ಮಂಗ್ಳೂರಿಗೆ ಹೋಗುತ್ತಾನೆ. ಇದು ಕತೆ. ಈ ಕತೆಯಿಂದ ಹತ್ತು ಜನ ಹತ್ತು ತರದ ಚಿತ್ರ ಮಾಡಬಹುದು. ಮಂಗಳೂರಿಗೆ ಎತ್ತಿನ ಗಾಡಿಯಲ್ಲಿ ಹೋದರೆ ಅದೇ ಒಂದು ತರದ ಪಿಚ್ಚರ್, ಬೆಂಗ್ಳೂರಿಂದ ಮಂಗಳ ಗ್ರಹಕ್ಕೆ ಹೋಗಿ ಅಲ್ಲಿಂದ ಮಂಗ್ಳೂರಿಗೆ ಬಂದರೆ ಆ ಕತೆಯೇ ಬೇರೆ. ಹೋಗುವಾಗ ದಾರಿಯಲ್ಲಿ ಹೀರೋಯಿನ್ ಸಿಕ್ಕಿ ಪ್ರೀತಿ ಪ್ರೇಮ ಪ್ರಣಯ ಆದರೆ ಅದು ಯೋಗರಾಜ ಭಟ್ಟರ ಚಿತ್ರ, ಹಾಸನದ ಹತ್ತಿರ ಮಚ್ಚು ಹಿಡಿದವರು ಸಿಕ್ಕಿದರೆ ಪ್ರೇಮ್ ಮತ್ತು ಸೂರಿ ಖುಷಿ ಪಟ್ಟಾರು ! ಹೀರೊ ಮಂಗಳೂರಿಗೆ ನಡೆದೇ ಹೊರಟರೆ, ದಾರಿಯಲ್ಲಿ ಇಪ್ಪತ್ತು ಕರಡಿಗಳು ಸಿಕ್ಕಿದರೆ ಹೇಗೆ ಅಂತ ಸಾಹಸಪ್ರಿಯರು ಕಲ್ಪಿಸಿಕೊಳ್ಳಬಹುದು. ಬೆಂಗಳೂರಿಂದ ಹೊರಟವನು ತಪ್ಪಿ ಹೈದೆರಾಬಾದ್ ಸೇರಿದರೆ ಅದು ಇನ್ನೊಂದು ತರದ್ದೇ ಚಿತ್ರಕಥೆ. ಹೀರೊ ಪ್ರಧಾನ ಮಂತ್ರಿಯಾದರೆ ಈ ಪ್ರಯಾಣ ಬೇರೆಯೇ ರೀತಿಯದ್ದಾಗಬಹುದು. ಎಲ್ಲ ಚಿತ್ರಗಳ ಕತೆಯೂ ಒಂದೇ, ಹೀರೋ ಬೆಂಗ್ಳೂರಿಂದ ಮಂಗ್ಳೂರಿಗೆ ಹೋಗುವುದು. ಅಷ್ಟು ಮಾತ್ರಕ್ಕೆ ಕಾಪಿ ಅನ್ನುವುದು ಹೇಗೆ ಮತ್ತು ಯಾಕೆ ?! ನಿರೂಪಣೆ, ವಿವರಗಳು ಬೇರೆ ಬೇರೆಯೇ ಇರುತ್ತದಲ್ಲ ? ಈ ಎಲ್ಲ ಪ್ರಯಾಣಗಳೂ ಬೇರೆ ಬೇರೆ ಅನುಭವಗಳನ್ನೇ ಕಟ್ಟಿ ಕೊಡುತ್ತವಲ್ಲ. ಈ ಪ್ರಯಾಣದ ಎಲ್ಲ ವಿವರಗಳೂ ಕಾಪಿ ಪೇಸ್ಟ್ ಮಾಡಿದ ಹಾಗಿರಬಾರದು. ಗೇಮ್ ಆಫ್ ಥಾರ್ನ್ಸ್ ಅನ್ನು ಬರೆದ ಜಾರ್ಜ್ ಆರ್ ಆರ್ ಮಾರ್ಟಿನ್ ಹೀಗೆ ಹೇಳಿದ್ದಾನೆ : “Ideas are cheap. I have more ideas now than I could ever write up. To my mind, it’s the execution that is all-important.”
ಸಿನೆಮಾದಂತಹಾ ಸಂಕೀರ್ಣ ಮಾಧ್ಯಮದಲ್ಲಿ ಕಥೆಯಷ್ಟಲ್ಲದಿದ್ದರೂ, ಉಳಿದ ಮಾಧ್ಯಮಗಳಿಗಿಂತ ಹೆಚ್ಚಿನ ಪ್ರಾಮುಖ್ಯ ತಾಂತ್ರಿಕತೆಗೂ ಇದೆ. ಕಥೆಯ ಹೋಲಿಕೆ ಎಲ್ಲರಿಗೂ ಗೊತ್ತಾಗುತ್ತದೆ, ಆದರೆ ನಾನು ತಾಂತ್ರಿಕವಾದ ವಿಷಯಗಳನ್ನು ಕದ್ದದ್ದು ಯಾರಿಗೂ ಗೊತ್ತಾಗಲಿಲ್ಲ ಅಂತ ರಾಮ್ ಗೋಪಾಲ್ ವರ್ಮಾ ತಮಾಷೆ ಮಾಡಿದ್ದ. ಕ್ಯಾಮೆರಾದ ಮೂಲಕ ಹೇಗೆ ಕಥೆ ಹೇಳಬಹುದು, ಬೆಳಕನ್ನು ಹೇಗೆ ಸಂಯೋಜಿಸಿದರೆ ಉಚಿತ, ಸಂಕಲನ ಹೇಗೆ ಮಾಡಿದರೆ ಪರಿಣಾಮಕಾರಿ ಎಂಬುದಕ್ಕೆಲ್ಲ ಹಳಬರು ಹಾಕಿಕೊಟ್ಟ ಮಾದರಿಗಳನ್ನೇ ಬಹುತೇಕ ಈಗಲೂ ಅನುಸರಿಸಲಾಗುತ್ತದೆ ಮತ್ತು ಅನುಕರಿಸಲಾಗುತ್ತದೆ. ಕ್ಯಾಮೆರಾದ ಬಳಕೆಯ ತಂತ್ರವನ್ನೋ, ಬೆಳಕಿನಿಂದ ಚಿತ್ರಿಸುವ ಕೌಶಲವನ್ನೋ ಸಾಲ ತೆಗೆದುಕೊಂಡರೆ ಅದು ಹಲವರಿಗೆ ಗೊತ್ತೇ ಆಗುವುದಿಲ್ಲ. ಇಲ್ಲೂ ಎಲ್ಲರೂ ಪೂರ್ವಸೂರಿಗಳಿಗೆ ಋಣಿಗಳೇ ಆಗಿದ್ದಾರೆ.
ಇನ್ನೊಂದು ವಿಷಯ ಪ್ರತಿಕ್ರಿಯೆಯದ್ದು, ಈಚೆಗೆ ಹಾಲಿವುಡ್ ರಿಪೋರ್ಟರ್ ಪತ್ರಿಕೆ ನಡೆಸಿಕೊಟ್ಟ ಹಾಲಿವುಡ್ಡಿನ ನಿರ್ದೇಶಕರ ರೌಂಡ್ ಟೇಬಲ್ ಗೋಷ್ಠಿಯೊಂದರಲ್ಲಿ ಈ ವಿಚಾರ ಬಂತು. ಬಹಳಷ್ಟು ಚಿತ್ರಗಳು ಚಿತ್ರಕಥೆ ಬರೆದವನು ಈಗಾಗಲೇ ನೋಡಿದ ಚಿತ್ರವೊಂದಕ್ಕೆ ಪ್ರತಿಕ್ರಿಯೆ ಎಂಬಂತೆ ಹುಟ್ಟಿರುತ್ತದೆ ಅಂತೊಬ್ಬಳು ನಿರ್ದೇಶಕಿ ಹೇಳಿದಳು. ಇದನ್ನು ಬಿಡಿಸಿ ಹೇಳುವುದಾದರೆ ತರದ ಪ್ರತಿಸ್ಪಂದನ ಬೇರೆ ಬೇರೆ ರೂಪಗಳಲ್ಲಿರಬಹುದು. "ಆಹಾ ಇದೆಷ್ಟು ಸೊಗಸಾಗಿದೆ, ನಾನೂ ಯಾಕೆ ಇಂತಾದ್ದೊಂದನ್ನು ಮಾಡಬಾರದು" ಎಂಬ ಧಾಟಿಯ ಸ್ಫೂರ್ತಿಯಿರಬಹುದು, "ಇದು ಸರಿಯಲ್ಲ, ಇದನ್ನು ಹೇಳಬೇಕಾದ ರೀತಿ ಇದಲ್ಲ, ನಾನು ಇದನ್ನೇ ಇದಕ್ಕಿಂತ ಚೆನ್ನಾಗಿ ಹೇಳಬಲ್ಲೆ" ಎಂಬ ಭಾವ ಇರಬಹುದು, "ಇದನ್ನೇ ಹೋಲುವ ಇನ್ನೊಂದು ಕಥೆಯೂ ಇದೆಯಲ್ಲ, ಅದನ್ಯಾಕೆ ಹೇಳಬಾರದು" ಅನ್ನುವ ತರದ ಸ್ಪೂರ್ತಿಯೂ ಇರಬಹುದು. The borrowing and retooling of ideas is a core part of what makes film tick. To argue otherwise is to deny a cinematic tradition of resonant, fruitful, and revealing
intertextuality ಅಂತೊಬ್ಬರು ಹೇಳಿರುವುದರಲ್ಲಿ ಸತ್ಯವಿದೆ.
ಸ್ಪೀಡ್ ಎಂಬ ಚಿತ್ರದಲ್ಲಿ ಬಸ್ಸೊಂದರಲ್ಲಿ ಭಯೋತ್ಪಾದಕನೊಬ್ಬ ಬಾಂಬು ಇಟ್ಟಿರುತ್ತಾನೆ, ಬಸ್ಸು ಘಂಟೆಗೆ ಎಂಬತ್ತಕ್ಕಿಂತ ಹೆಚ್ಚು ವೇಗವಾಗಿ ಹೋದರೆ ಅದು ಸಿಡಿಯುತ್ತದೆ. ಈ ಚಿತ್ರ ಬಂದಾಗ ಅದನ್ನು Die hard in a bus ಅಂತ ವಿಮರ್ಶಕರು ಕರೆದರು, ಡೈ ಹಾರ್ಡಿನಲ್ಲಿ ಒಂದು ಕಟ್ಟಡವನ್ನು ಭಯೋತ್ಪಾದಕರು ವಶಕ್ಕೆ ತೆಗೆದುಕೊಂಡಿರುತ್ತಾರೆ, ಇಲ್ಲಿ ಕಟ್ಟಡಕ್ಕೆ ಬದಲಾಗಿ ಬಸ್ಸು ಇದೆ ಎಂಬುದು ಅಲ್ಲಿನ ಭಾವ. ಆದರೆ ಅದರ ಚಿತ್ರಕಥೆ ಬರೆದವರ ಚಿಂತನೆ ಹಾಗಿರಲಿಲ್ಲ, ಡೈ ಹಾರ್ಡ್ ಅವರ ತಲೆಯಲ್ಲಿಯೇ ಇರಲಿಲ್ಲವಂತೆ, ಅವರು ಸ್ಪೀಡ್ ಅನ್ನು ಬರೆದದ್ದು Runaway Train ಎಂಬ ಚಿತ್ರಕ್ಕೆ ಪ್ರತಿಕ್ರಿಯೆಯಾಗಿ. ರೈಲೊಂದಕ್ಕೆ ಬ್ರೇಕು, ಚಾಲಕ ಎರಡೂ ಇಲ್ಲದಾದಾಗ ಅದರಲ್ಲಿ ಸಿಕ್ಕಿ ಬಿದ್ದವರ ಕಥೆ ಅದು. ರೈಲು ಇಲ್ಲಿ ಬಸ್ಸಾಗಿದೆ, ಅಲ್ಲಿ ಬ್ರೇಕು ಇಲ್ಲದ್ದರಿಂದ ಅದು ನಿಲ್ಲಲಾರದು ಇಲ್ಲಿ ಬಾಂಬಿರುವುದರಿಂದ ನಿಲ್ಲಕೂಡದು. ತರಕಾರಿ ಅಲ್ಲಿನದು, ಸಾಂಬಾರು ನಮ್ಮದೇ ಎಂಬಂತೆ ಆ ಚಿತ್ರಕ್ಕೆ ಪ್ರತಿಕ್ರಿಯೆಯಾಗಿ ಇದು ಹುಟ್ಟಿದೆ. ರೈಲು ನಿಲ್ಲದಿದ್ದರೆ ಆಗುವ ತೊಂದರೆಯೇ ಬೇರೆ, ಪೇಟೆಯಲ್ಲಿ ಬಸ್ಸು ಎಂಬತ್ತಕ್ಕಿಂತ ಕಡಮೆ ವೇಗದಲ್ಲಿ ಓಡಲಾರದಾದರೆ ಆಗುವ ಕೋಲಾಹಲವೇ ಬೇರೆ, ಕಥೆಗಳ ಆಕೃತಿ ಒಂದೇ, ಆದರೆ ವಿವರಗಳು ಎಷ್ಟು ಬೇರೆ ಅಂದರೆ ವಿಮರ್ಶಕರು ಚಿತ್ರವನ್ನು ಡೈ ಹಾರ್ಡಿಗೆ ಹೋಲಿಸಿದರಲ್ಲದೆ ನಿಜಕ್ಕೂ ಅದು ಯಾವಚಿತ್ರಕ್ಕೆ ಪ್ರತಿಸ್ಪಂದನವಾಗಿತ್ತೋ ಅದನ್ನು ಗುರುತಿಸಲಿಲ್ಲ. ಬೇರೆ ಕಡೆಯಿಂದ ಬಂದ ಸಾಮಗ್ರಿ ನಮ್ಮದೇ ಆಗುವುದು ಹೀಗೆಯೇ.
ಒಬ್ಬರು ನಿರ್ದೇಶಕರು ಹೀಗೂ ಹೇಳಿದ್ದಾರೆ : “Nothing is original. Steal from anywhere that resonates with inspiration or fuels your imagination. Devour old films, new films, music, books, paintings, photographs, poems, dreams, random conversations, architecture, bridges, street signs, trees, clouds, bodies of water, light and shadows. Select only things to steal from that speak directly to your soul. If you do this, your work (and theft) will be authentic. Authenticity is invaluable; originality is non-existent. And don’t bother concealing your thievery - celebrate it if you feel like it. In any case, always remember what Jean-Luc Godard said: “It’s not where you take things from - it’s where you take them to."
ಎಡಿಸನ್ ಬಲ್ಬು ಕಂಡು ಹಿಡಿಯಲಿಲ್ಲ, ಈಗಾಗಲೇ ಇದ್ದ ಕಳಪೆ ಬಲ್ಬುಗಳಿಗೆ ಹೊಸ ರೂಪ ಕೊಟ್ಟದ್ದಷ್ಟೇ ಅವನು ಮಾಡಿದ್ದು. ಕಂಪ್ಯೂಟರ್ ಅನ್ನು ಅದು ಈಗ ಇರುವಂತೆ ಮಾಡಿದ್ದು ಸ್ಟೀವ್ ಜಾಬ್ಸ್ ಅನ್ನುತ್ತಾರೆ, ಅವನೂ Xerox ಕಂಪನಿ ಮಾಡಿದ್ದನ್ನು ಎಗರಿಸಿ ಅದಕ್ಕೆ ಹೊಸ ರೀತಿಯಲ್ಲಿ ಸಿಂಗಾರ ಬಂಗಾರ ಮಾಡಿದವನೇ. Xerox ಕಂಪನಿಯದ್ದೂ ಇದ್ದದ್ದಕ್ಕೆ ರೆಕ್ಕೆ ಪುಕ್ಕ ಸೇರಿಸಿದ ಸಾಧನೆಯೇ. ಎಲ್ಲವೂ ಫ್ರುಟ್ ಸಲಾಡೇ. ಆಡಂ ಗ್ರ್ಯಾಂಟ್ ಎಂಬ ಲೇಖಕನು Originals ಎಂಬ ಪುಸ್ತಕದಲ್ಲಿ ಸಾಧಕರು ಹೆಚ್ಚಾಗಿ ಯಾವುದನ್ನೂ ಇದಂಪ್ರಥಮವಾಗಿ ಮಾಡುವುದಿಲ್ಲ, ಕಡಮೆ ಪ್ರತಿಭೆಯವರು ಈಗಾಗಲೇ ಮಾಡಿರುವುದನ್ನು ನೋಡಿ, ಕಲ್ಪನೆಯನ್ನು ಕಾರ್ಯರೂಪಕ್ಕೆ ತರುವಾಗ ಬರಬಹುದಾದ ಅಡ್ಡಿ ಆತಂಕಗಳು, ಯೋಜನೆಯ ಸಾಧಕ ಬಾಧಕಗಳು ಇವನ್ನೆಲ್ಲ ತೂಗಿನೋಡಿಯೇ ರಂಗಪ್ರವೇಶ ಮಾಡುತ್ತಾರೆ ಅನ್ನುತಾನೆ. ತಮ್ಮಷ್ಟು ಅಸಾಧಾರಣ ಸಾಮರ್ಥ್ಯವಿಲ್ಲದವರು ಈಗಾಗಲೇ ಅವಿಕಸಿತ ಸ್ಥಿತಿಯಲ್ಲಿ ರೂಪಿಸಿರುವುದಕ್ಕೇ ಒಪ್ಪ ಓರಣ ಮಾಡಿ ಅದಕ್ಕೆ ಒನಪು ಒಯ್ಯಾರಗಳನ್ನು ಕೂಡಿಸಿ, ಅದರಲ್ಲಿರುವ ಕುಂದು ಕೊರತೆಗಳನ್ನು ಸರಿಮಾಡಿ, ಅದೊಂದು ಹೊಸತೇ ವಿಷಯ ಅನ್ನಿಸುವಷ್ಟು ಅದನ್ನು ಬದಲಿಸಿ ಅದನ್ನು ಸರ್ವಜನಾದರಣೀಯವಾಗಿ ಮಾಡುವುದೇ ಹಲವು ದೊಡ್ಡ ಸಾಧಕರು ಮಾಡಿರುವ ಕೆಲಸ ಎಂಬರ್ಥದಲ್ಲಿ ಈ ಪುಸ್ತಕದಲ್ಲಿ ತತ್ತ್ವಮಂಡನೆ ಮಾಡಲಾಗಿದೆ.
ಹಾಗಂತ ಕದ್ದದ್ದಕ್ಕೆಲ್ಲ ಕ್ಷಮೆಯಿದೆ ಅಂತಲೂ ಅಲ್ಲ. ನಮ್ಮಲ್ಲಿ ಫ್ರೇಮ್ ಟು ಫ್ರೇಮ್ ಕಾಪಿ, ಇದ್ದ ಹಾಗೆಯೇ ಇಡಿಕ್ಕಿಡೀ ಇಳಿಸಿದ್ದಾರೆ ಅನ್ನುವಂತದ್ದೂ ಬಹಳಷ್ಟು ಇದೆ, ಇದು ಖಂಡನೀಯ ಅನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಈ ಕಳ್ಳರ ಹಾವಳಿಯಿಂದಾಗಿ ಎಂತ ಬೋದಾಳ ಶಂಕರನೂ ಎಷ್ಟು ದೊಡ್ಡ ಜೀನಿಯಸ್ಸಿನ ಮೇಲೂ ಕಳ್ಳತನದ ಆರೋಪ ಹೊರಿಸಬಹುದು ಅನ್ನುವಂತೆ ಆಗದಿರಲಿ. ಎಲ್ಲೋ ಸ್ವಲ್ಪ ಹೋಲಿಕೆ ಇದೆ ಅಂದ ಮಾತ್ರಕ್ಕೆ ಕದ್ದ ಆರೋಪ ಬೇಡ. ನಿಮ್ಮ ಮನೆಯಲ್ಲೂ ಬೆಡ್ ರೂಮು, ಅಡಿಗೆ ಕೋಣೆ ಇರುತ್ತದೆ, ಪಕ್ಕದ ಮನೆಯಲ್ಲೂ ಇರುತ್ತದೆ, ಹಾಗಂತ ನಿಮ್ಮದು ಕದ್ದ ಮನೆಯಲ್ಲವಷ್ಟೇ. ಹೋಲಿಕೆ, ಸಾಮ್ಯ, ಸಮಾನ ಗುಣ ಧರ್ಮಗಳೇ ಬೇರೆ, ಕದಿಯುವುದೇ ಬೇರೆ. ಇನ್ನು ಕದ್ದ ಆರೋಪವನ್ನೇ ಕದಿಯುವವರೂ ಇದ್ದಾರೆ! X ಚಿತ್ರ Yನ ಹಾಗಿದೆ ಅಂತ ಯಾರೋ ಹೇಳಿದ್ದು ಕೇಳಿ ಹೇಳುವವರು. ಇನ್ನೊಬ್ಬರು ಹಾಕಿದ ಸ್ಟೇಟಸ್ ಅನ್ನೇ ನೋಡಿ ಸ್ಟೇಟಸ್ ಹಾಕುವವರು ಎಷ್ಟು ಜನ ಇಲ್ಲ.
ರಜನಿಕಾಂತನ ಈಮೈಲ್ ಅಡ್ರೆಸ್ಸ್ ಏನು ಅಂತ ಒಂದು ಜೋಕು ಇತ್ತು, gmail@RAJINIKANTH.com ಅನ್ನುವುದೇ ಉತ್ತರ. ಇದನ್ನು rediffmail @RAJINIKANTH.com ಅಂತ ಬದಲಾಯಿಸಿದರೂ ಇದು ಬೇರೆ ಜೋಕಾಗುವುದಿಲ್ಲ. ಜೋಕಿನ ಸತ್ವ, ಆತ್ಮ, ಆಕರ್ಷಣೆ ಬದಲಾದ ಮೇಲೂ ಅದುವೇ. ಇಲ್ಲಿ ವಿವರ ಬದಲಾದರೂ ಜೋಕು ಸ್ವಂತದ್ದಾಗಲಿಲ್ಲ, ಹೊಸ ದೇಹದಲ್ಲಿ ಹಳೆ ಆತ್ಮ ಇಟ್ಟ ಹಾಗಾಗಿದೆ ಅಷ್ಟೇ. ಹೀಗೆ ಆತ್ಮವನ್ನು ಎಗರಿಸಿದ್ದಾರೆಯೇ ಅನ್ನುವುದು ಮುಖ್ಯ. ಇದನ್ನೆಲ್ಲ ಯೋಚಿಸಿ ಆರೋಪ ಹೊರಿಸಿದರೆ ಒಳ್ಳೆಯದು ಅಂತ ಹೇಳಿ ನಿಮ್ಮ ತಲೆಗೆ ಒಂದೆರಡು ಹುಳವಾದರೂ ಬಿಟ್ಟಿದ್ದೇನೆ ಅಂದುಕೊಂಡು ಮುಗಿಸುತ್ತೇನೆ.