ಕತೆ ಚಿತ್ರಕತೆ ಸಂಭಾಷಣೆ' ಪುಸ್ತಕ ಬಿಡುಗಡೆಗೆ ಮೊದಲು ಬರೆದದ್ದು :
ಎರಡು ಸಂತೋಷದ ವಿಚಾರಗಳು! ಜೋಗಿ ಸರ್ ತುಂಬಾ ಆಸೆಪಟ್ಟು, ಸಂಭ್ರಮದಿಂದ `ಕತೆ ಚಿತ್ರಕತೆ ಸಂಭಾಷಣೆ' ಅನ್ನುವ ಪುಸ್ತಕ ಹೊರತರುತ್ತಿದ್ದಾರೆ. ಹೊಸದಾಗಿ ಚಿತ್ರಮಾಡಲು ಬಂದವರು,ಹೊಸ ಕಥೆಗಳನ್ನು ನೇಯ ಹೊರಟವರು, ಚಿತ್ರಕತೆ ಅನ್ನುವ ಮಾಟಗಾತಿಯ ಹಿಂದೆ ಬಿದ್ದವರು, ಇವರೆಲ್ಲ ಓದಲೇಬೇಕಾದ ಪುಸ್ತಕ ಇದಾಗಲಿದೆ ಅಂತ ನನ್ನ ಒಳ ಮನಸ್ಸು ಹೇಳುತ್ತಿದೆ. ಸುಮ್ಮನೆ ಚಿತ್ರ ನೋಡುವವರು, ಒಂದು ಚಿತ್ರ ಯಾಕೆ ಜನರನ್ನು ತಟ್ಟುತ್ತದೆ , ಒಂದು ಕಥೆ ಹೇಗೆ ಸೃಷ್ಟಿಯಾಗುತ್ತದಪ್ಪಾ ಅಂತ ತಲೆ ಕೆರೆದುಕೊಂಡವರು ಕೂಡ ಇದನ್ನು ಓದಬಹುದು. ಬರೀ ಕನ್ನಡವಷ್ಟೇ ಏಕೆ, ನಮ್ಮ ದೇಶದಲ್ಲೇ ಇಂತದ್ದು ಬಂದ ಹಾಗಿಲ್ಲ. ಸಲೀಂ ಜಾವೇದ್ ಜೋಡಿಯ ಸಲೀಂ ಖಾನ್ ಮತ್ತು ಜಾವೇದ್ ಅಖ್ತರ್ ಬರೆದಷ್ಟೇ ಚಂದದಲ್ಲಿ, witty ಆಗಿ,ಅರ್ಥಪೂರ್ಣವಾಗಿ screenplayಯ ಬಗ್ಗೆ ಮಾತಾಡುತ್ತಾರೆ, ಪ್ರಕಾಶ್ ಝಾ ಜೊತೆಗಿದ್ದ ಅಂಜುಮ್ ರಾಜಾಬಲಿ ಚಿತ್ರಕತೆಯ ಪಾಠ ಮಾಡುತ್ತಾರೆ. ಇದು ಬಿಟ್ಟರೆ ಈ ವಿಷಯದ ಬಗ್ಗೆ ಗುಣಮಟ್ಟದ ಬರೆಹಗಳು ಇಲ್ಲಿ ಅಷ್ಟಾಗಿ ಬಂದಂತಿಲ್ಲ.
ಡಿಸೆಂಬರ್ ಎರಡಕ್ಕೆ ಅಂಗಡಿಗಳಲ್ಲಿ, ಸಾಹಿತ್ಯ ಸಮ್ಮೇಳನದ ಮಳಿಗೆಗಳಲ್ಲಿ ಈ ಪುಸ್ತಕ ಸಿಗಲಿದೆ. ಆಮೇಲೊಂದು ಸ್ವಲ್ಪ ದಿನ ಕಳೆದು ಬಿಡುಗಡೆ ಸಮಾರಂಭ ಇರಬಹುದು. ಮೊದಲ ನೂರೈವತ್ತು ಪುಟಗಳಲ್ಲಿ ಎಂದಿನಂತೆ ಜೋಗಿ ಮಿಂಚಲಿದ್ದಾರೆ. ಆಮೇಲಿನ ಪುಟಗಳಲ್ಲಿ ಯೋಗರಾಜ್ ಭಟ್, ಕಾಸರವಳ್ಳಿ, ಬಿ ಸುರೇಶ , ಸೂರಿ ಅವರಂತ (ಸ್ವಲ್ಪ ಮಟ್ಟಿಗೆ !) ಪೂರ್ವ ಸೂರಿಗಳು, ಗೋಧಿ ಬಣ್ಣದ ಹೇಮಂತ್, ರಕ್ಷಿತ್, ಗಿರಿರಾಜ್, ಪವನ್ ರಂತ ಹೊಸ ತಲೆಮಾರಿನ ಹುಡುಗರು, ಪತ್ರಕರ್ತ ವಿಕಾಸ್ ನೇಗಿಲೋಣಿ ಇವರೆಲ್ಲ ಬರೆಯಲಿದ್ದಾರೆ. ಎರಡನೇ ಸುದ್ದಿ ಏನಪ್ಪಾ ಅಂತ ಕೇಳುವವರಾಗಿ . ಈ ತೆಂಡೂಲ್ಕರ್, ಸೆಹ್ವಾಗ್ , ಲಾರಾದಿಗಳ ಜೊತೆ ನಾನೂ ಯಥಾಶಕ್ತಿ ಬ್ಯಾಟು ಬೀಸಿದ್ದೇನೆ!
ಹೀಗೊಂದು ಪುಸ್ತಕ ಬರುತ್ತಿದೆ, ಇದಕ್ಕೆ ನಿಮ್ಮ ಲೇಖನ ಬರೆದುಕೊಡಿ ಅಂತ ಜೋಗಿ ಸರ್ ಹೇಳಿದಾಗ ಥಟ್ಟನೆ ತಲೆಗೆ ಬಂದದ್ದು ಭರತ ಮುನಿಯ ನಾಟ್ಯಶಾಸ್ತ್ರವನ್ನು ಇಟ್ಟುಕೊಂಡು, ನಮ್ಮ ರಸ ಸಿದ್ಧಾಂತ ಇಟ್ಟುಕೊಂಡು ಏನಾದರೂ ಕೊರೆದರೆ ಹೇಗೆ ಅಂತ. ಹಾಲಿವುಡ್, ವರ್ಲ್ಡ್ ಸಿನೆಮಾದ ಕಡೆಗೆ ಒಂದೆರಡು ಚಚ್ಚಿ ಅಂತ ಜೋಗಿ ಸರ್ ಸೂಚನೆ ಕೊಟ್ಟದ್ದರಿಂದ ಪಶ್ಚಿಮಕ್ಕೆ ಒಂದು ಕಾಲು, ಪೂರ್ವಕ್ಕೆ ಒಂದು ಕಾಲು ಇಟ್ಟುಕೊಂಡೇ ಫೀಲ್ಡಿಗೆ ಇಳಿದೆ. ಅದು ಬೇಡ, ಇದು ಬೇಡ ಅಂತ ಬಹಳಷ್ಟು ಪರಿಕಲ್ಪನೆಗಳನ್ನು ಕತ್ತರಿಸಿ ಎಸೆದ ಮೇಲೂ ಒಂದು ಸುಧೀರ್ಘ ಲೇಖನವೇ ಹಲ್ಲು ಬಿಟ್ಟು ನಗುತ್ತಿತ್ತು!
ಜೋಗಿಯವರ ಪುಸ್ತಕ ಅಂದಮೇಲೆ ಜನ ರುಚಿಕಟ್ಟಾದ ಬರೆವಣಿಗೆಯನ್ನೇ ಕೇಳುತ್ತಾರೆ, ಇದು ಅವರ ಭರವಸೆಯ ಮಟ್ಟಕ್ಕೆ ಬಂತೇ ಅಂತ ತಿಳಿಯಲಿಲ್ಲ. ಕಾರ್ಪೊರೇಟು ಜಗದಲಿದ್ದು ಫೀಡ್ ಬ್ಯಾಕಿಗೆ ಅಂಜಿದೊಡೆಂತಯ್ಯ ಅಂತ ಹಾಡಿಕೊಂಡು ಇಬ್ಬರು ಗೆಳೆಯರ ಅಭಿಪ್ರಾಯ ಕೇಳಿದೆ. ಥಿಯರಿ, ಪ್ರಾಕ್ಟಿಕಲ್ಲು ಎರಡೂ ಇರಲಿ ಅಂದುಕೊಂಡೆ. ಚಿತ್ರರಂಗದ ಒಳ ಹೊರಗು, ವ್ಯವಹಾರ, ವಾಣಿಜ್ಯ ಗೊತ್ತಿರುವ ಒಬ್ಬರಿಗೆ ಮತ್ತು ನನ್ನ ಹಾಗೆ ಘಂಟೆಗಟ್ಟಲೆ ಥಿಯರಿ ಮಾತಾಡುವವರು ಒಬ್ಬರಿಗೆ ಓದಲು ಕೊಟ್ಟೆ. ಬೋರು ಹೊಡೆಸುವುದು ಮಹಾಪಾಪ, ಹಾಗಾಗಿ ಬೋರು ಹೊಡೆಸದೆ ಓದಿಸಿಕೊಂಡು ಹೋಗಬೇಕು, ಹೇಳಿದ್ದು ಅರ್ಥ ಆಗಿರಬೇಕು, ಏನಾದರೂ ಹೊಸತು ಕಲಿಯುವುದಕ್ಕೆ ಸಿಗಬೇಕು. ಇಷ್ಟು ಆಗಿದೆಯೇ ಅಂತ ಕೇಳಿದೆ. ಗೆಳೆಯರು ಮೆಚ್ಚಿ, superb ಅಂದು ಹುರಿದುಂಬಿಸಿದರು. ಕಡೆಗೆ ಧೈರ್ಯ ಮಾಡಿ ಕಳಿಸಿದೆ.
ಇದರಿಂದ ಹೊಸಬರಿಗೆ ಉಪಕಾರವಾದರೆ, ಕನ್ನಡದಲ್ಲಿ ನಾಲ್ಕು ಉತ್ಸಾಹಿ ಬರೆಹಗಾರರು ಹುಟ್ಟಿದರೆ, ಒಂದಷ್ಟು ಗಟ್ಟಿ ಕಥೆಗಳು ಬಂದರೆ, ನಮ್ಮೆಲ್ಲರ ಉತ್ಸಾಹಕ್ಕೂ ಒಂದು ಅರ್ಥ, ಸಾರ್ಥಕ್ಯ ಬರುತ್ತದೆ. ಕೊಂಡು ಓದುವುದಕ್ಕೆ, ಓದಿ ಹೇಗನಿಸಿತು ಅಂತ ಹೇಳುವುದಕ್ಕೆ ನೀವಿದ್ದೀರಲ್ಲ. ಇನ್ನು ನೀವುಂಟು, ಪುಸ್ತಕ ಉಂಟು.
ಈ ಪುಸ್ತಕ ಖಂಡಿತ ಓದಲೇಬೇಕು ಅನ್ಕೊಂಡಿದ್ದೇನೆ. ಎಲ್ಲಾ ಲೇಖಕರಿಗೂ ಈ ಪ್ರಯತ್ನಕ್ಕೆ ಧನ್ಯವಾದಗಳು.
ReplyDeleteಓದಿ ಓದಿ, ನೀವು ಓದಿ ಏನು ಹೇಳುತ್ತೀರಿ ಅನ್ನುವ ಕುತೂಹಲ ನನಗಂತೂ ಇದೆ
Delete