Thursday, 25 October 2018

ಹೊಸ ಅಲೆಯ ಚಿತ್ರಗಳು

ನಾಲ್ಕೈದು ವರ್ಷಗಳ ಹಿಂದೆ ಚಿತ್ರರಂಗದ ಬಗ್ಗೆ ಹರಟುವಾಗ, ಸಿನೆಮಾನುರಕ್ತಿ ಇದ್ದವರೆಲ್ಲ ತೀರಾ predictable ಆದ ರೀತಿಯಲ್ಲಿ ಮಾತಾಡುತ್ತಿದ್ದದ್ದಿತ್ತು.

ಸಾಂಪ್ರದಾಯಿಕ ಅಭಿಮಾನಿಗಳೋ ಮಸಾಲೆ ಚಿತ್ರಗಳಿಗೆ ಮನಸೋತವರು. ಚಿತ್ರ ಎಂದರೆ ತೆಲುಗು ಚಿತ್ರಗಳಂತೆ ಇರಬೇಕು ಅನ್ನುವುದು ಇವರ ಒಕ್ಕೊರಲಿನ ಮಂತ್ರ. ತಮ್ಮ ಮೆಚ್ಚಿನ ತಾರೆಯರು ತೆರೆಯಲ್ಲಿ ಬಂದಾಗ ಶಿಳ್ಳೆ ಹೊಡೆದು,ಅವರ ಕಟೌಟುಗಳಿಗೆ ಉದ್ದುದ್ದ ಹಾರಗಳು, ಹಾಲು, ಮಜ್ಜಿಗೆಗಳನ್ನು ಹಾಕಿ ಅವರನ್ನು ಮೆರೆದಾಡಿಸಿ ಸಂಭ್ರಮ ಪಡುತ್ತಿದ್ದವರಿವರು. ಸ್ವಲ್ಪ ಸೆಂಟಿಮೆಂಟು, ಒಂದಷ್ಟು ಹಾಸ್ಯ, ನಾಲ್ಕು ಹೊಡೆದಾಟಗಳು,ವಿದೇಶದಲ್ಲಿ ಹಾಡುಗಳ ಚಿತ್ರೀಕರಣ, ಎಂದೂ ಮುಗಿಯದ ಮದರ್ ಸೆಂಟಿಮೆಂಟು, ಬೊಂಬೆಯಂತಹಾ ಹೀರೋಯಿನ್ನು, ಕರುನಾಡನ್ನು ಹೊಗಳುವ ಎರಡು ವೀರಾವೇಶದ ಸಾಲುಗಳು, ನಾಯಕನಟನನ್ನು ಹಾಡಿ ಹೊಗಳಿ, ಅಟ್ಟಕ್ಕೇರಿಸಿ, ಹುಲಿ, ಸಿಂಹ, ಕರಡಿಗಳಿಗೆ ಹೋಲಿಸಿ ಮಾಡುವ ಹೀರೋಪೂಜೆ, ಅವವೇ ಮಾಸ್ ಮಸಾಲೆ ಚಿತ್ರಗಳ ಫಾರ್ಮುಲಾ ಪಾಕ ಇವೆಲ್ಲ ಇದ್ದರೆ ಸಾಕೆನ್ನುತ್ತಿದ್ದವರು. ಅಭಿರುಚಿ ಏನೇ ಇದ್ದರೂ, ನಿಷ್ಠೆಯಿಂದ ಥಿಯೇಟರಿಗೆ ಬಂದು ದುಡ್ಡು ಕೊಟ್ಟು ನೋಡಿ, ಪ್ರಾಮಾಣಿಕ ಅಭಿಪ್ರಾಯ ಕೊಟ್ಟು ಚಿತ್ರರಂಗವನ್ನು ಉಳಿಸುವವರು ಇದೇ ವರ್ಗದವರೇ.

ಇನ್ನು ಆರ್ಟ್ ಸಿನೆಮಾ, ಹಾಲಿವುಡ್ಡು, ವರ್ಲ್ಡ್ ಸಿನೆಮಾ ಎಲ್ಲ ನೋಡಿ, ಹೊಸತರ ರುಚಿ ಸಿಕ್ಕಿ, ಇಡೀ ಜಗತ್ತನ್ನೇ ಬದಲಾಯಿಸ ಹೊರಟ ಕ್ರಾಂತಿಪುರುಷರಂತೆ ಮಾತಾಡುತ್ತಿದ್ದ movie buffಗಳು ಇನ್ನೊಂದೇ ತರದ ವರಸೆ ತೆಗೆಯುತ್ತಿದ್ದವರು. ಇರಾನಿನ ಹೊಸ ಅಲೆ, ಇಟಾಲಿಯನ್ Neo Realism, French New wave, ಮಲಯಾಳದ ಸಹಜತೆ, ಸರಳತೆ, ಮರಾಠಿಯ ಹೊಸತನ, ತಮಿಳಿನ ಮಣ್ಣಿನ ವಾಸನೆ, ಅನುರಾಗ್ ಕಶ್ಯಪನ ಧೈರ್ಯ, ಟರಾಂಟಿನೋನ ಗತ್ತು ಗೈರತ್ತು, ನೋಲನ್ನನ ಬುದ್ಧಿಚಾತುರ್ಯ, Scorseseಯ ಪಾತ್ರವೈವಿಧ್ಯ ಎಲ್ಲ ಇಲ್ಲಿ ಬರಬೇಕೆಂದು ಹಠ ಹಿಡಿದವರು ಈ ತರದವರು. ಇವರನ್ನು ನಂಬಿ ಚಿತ್ರ ಮಾಡುವುದು ಕಷ್ಟ, ಇವರು ಸ್ವತಃ ಥಿಯೇಟರಿಗೆ ಬರುವುದಕ್ಕಿಂತ ಫೇಸ್ಬುಕ್ಕು, ಟ್ವಿಟ್ಟರುಗಳಲ್ಲಿ ತಮ್ಮ ಅಪಾರವಾದ ಬುದ್ಧಿಶಕ್ತಿಯ, ಭಯಂಕರ ಮೇಲ್ಮಟ್ಟದ ಅಭಿರುಚಿಯ ಪ್ರದರ್ಶನ ಮಾಡುವುದರಲ್ಲಿಯೇ ಹೆಚ್ಚು ತೃಪ್ತಿ ಕಾಣುವವರು. "ಲೂಸಿಯಾ ಇಡೀ ಜೀವಮಾನದಲ್ಲಿ ಮಾಡಿದಷ್ಟು ದುಡ್ಡನ್ನು ಸ್ಟಾರುಗಳ ಚಿತ್ರ ಮೊದಲ ಶನಿವಾರವೇ ಮಾಡಿರುತ್ತದೆ" ಅಂತ ಪವನ್ ಕುಮಾರ್ ಹೇಳಿದ್ದು ಅದನ್ನೇ.

ರಾಜ್ ಕುಮಾರರ ಕಾಲದಲ್ಲಿ ಹಾಗಿತ್ತು, ಪುಟ್ಟಣ್ಣ ಹಾಗಿದ್ದರು, ಪಂತುಲು ಹೀಗಿದ್ದರು, ವಿಷ್ಣುವರ್ಧನ್ ಹೇಗಿದ್ದರು, ಅನಂತ ಶಂಕರರು ಎಂತಿದ್ದರು ಎಂದು ಮುಂತಾಗಿ ಹೇಳುತ್ತಾ, ನಾಸ್ಟಾಲ್ಜಿಯಾದ ಜೋಕಾಲಿಯಿಂದ ಇಳಿಯಲೊಪ್ಪದ, "ನಾನು ಕನ್ನಡ ಚಿತ್ರಗಳನ್ನು ನೋಡಿ ಇಪ್ಪತ್ತು ವರ್ಷವಾಯಿತು", "ಕ್ವಿಟ್ ಇಂಡಿಯಾ ಚಳುವಳಿಯಾದ ಮೇಲೆ ನಾನು ಥಿಯೇಟರಿಗೆ ಹೋಗಿಲ್ಲ" ಅಂತೆಲ್ಲ ಉಸುರುವ, "ಆ ಕಾಲವೊಂದಿತ್ತು, ದಿವ್ಯ ತಾನಾಗಿತ್ತು" ಪಕ್ಷದವರು ಇನ್ನೊಂದೇ ಬಗೆಯವರು. ಇವರು ಚಿತ್ರವೊಂದು ಟೀವಿಯಲ್ಲಿ ಬರದ ಹೊರತು ನೋಡುವವರಲ್ಲ, ನೋಡಿದರೂ ಈಗಿನದನ್ನು ಒಪ್ಪುವವರಲ್ಲ, ಹೊಸತರಲ್ಲೂ ಒಳ್ಳೆಯದಿರಬಹುದೇ ಎಂದು ಹುಡುಕುವವರೂ ಅಲ್ಲ, ತಾವೇ ಹೇಳಿಕೊಳ್ಳುವಂತೆ ಥಿಯೇಟರಿಗಂತೂ ಹೇಗೂ ಬರುವವರಲ್ಲ.

ಇದೆಲ್ಲದರ ನಡುವೆ ಹಲವು ದೆಸೆಗಳಿಂದ ಹೊಸತನವೇನೋ ಬಂದೇ ಬಂತು. ಭಿನ್ನ ಮಾರ್ಗದ ಚಿತ್ರಗಳು ಮಾತ್ರ ಈಚೆಗೆ ಸಾಕಷ್ಟು ಬಂದಿವೆ ಅನ್ನಬೇಕು. ಹೊಸ ಅಲೆ ಇಡಿಯಾಗಿ ಬಂತೋ, ಅರ್ಧಾರ್ಧ ಬಂತೋ, ಬರುವ ತಯಾರಿಯಲ್ಲಿದೆಯೋ, ಬಂದು ಹೋಯಿತೋ, ಬರಲಾರದೋ, ಬಂದೇ ಬಿಟ್ಟಿತೋ,ಉಲ್ಲೋಲ ಕಲ್ಲೋಲವೇ ಆಯಿತೋ, ಆಗಲಿದೆಯೋ ಹೇಳುವುದು ಕಷ್ಟ.  ಒಂದು ಸಿಂಹಾವಲೋಕನ ಮಾತ್ರ ಮಾಡಬಹುದು ಎಂಬ ನೆಲೆಯಲ್ಲಿ ಅಂತಹಾ ಚಿತ್ರಗಳದ್ದೊಂದು ಪಟ್ಟಿ ಮಾಡಿದರೆ ಹೇಗೆ ಅಂತ ಅನ್ನಿಸಿ ಇದನ್ನು ಅಣಿಗೊಳಿಸಿದ್ದೇನೆ. ಪಟ್ಟಿಯಲ್ಲಿರುವ ಬಹುತೇಕ ಚಿತ್ರಗಳನ್ನು ನೋಡಿದ್ದೇನೆ, ಕೆಲವನ್ನು ನೋಡಿಲ್ಲ. ಈ ಪಟ್ಟಿಯಲ್ಲಿ ಇರುವುದರಲ್ಲಿ ಹೆಚ್ಚಿನವು ಕಳೆದ ನಾಲ್ಕೈದು ವರ್ಷಗಳಲ್ಲಿ ಬಂದವು, ಮಸಾಲೆ ಚಿತ್ರಗಳ ಸಿದ್ಧಸೂತ್ರಗಳನ್ನು ಬಿಟ್ಟು ಹೊಸಹಾದಿಯನ್ನು ತುಳಿದವು. ಪ್ರಯೋಗಗಳೆಲ್ಲ ಯಶಸ್ವಿಯಾಗಿವೆ ಅನ್ನಲಾಗದು, ಎಲ್ಲವೂ ಚೆನ್ನಾಗಿರುವುದೂ ಅಶಕ್ಯ. ಎಲ್ಲವೂ ಎಲ್ಲರಿಗೂ ಇಷ್ಟ ಆಗುವುದೂ ಅಸಾಧ್ಯ. ಏನೇ ಇದ್ದರೂ, ಇಷ್ಟು ಸಂಖ್ಯೆಯಲ್ಲಿ ವಿಭಿನ್ನ ಪ್ರಯತ್ನಗಳಾಗಿವೆ ಎಂದಾದರೂ ಈ ಪಟ್ಟಿಯನ್ನು ನೋಡಿದರೆ ಗೊತ್ತಾಗುತ್ತದೆ:

  1. ಉಳಿದವರು ಕಂಡಂತೆ
  2. ಸಿಂಪಲ್ ಆಗ್ ಒಂದ್ ಲವ್ ಸ್ಟೋರಿ
  3. ಕೂರ್ಮಾವತಾರ
  4. ಭಾರತ್ ಸ್ಟೋರ್ಸ್  
  5. ಅಟ್ಟಹಾಸ 
  6. ಚಿತ್ರಮಂದಿರದಲ್ಲಿ
  7. ಗೊಂಬೆಗಳ ಲವ್
  8. ಲೂಸಿಯಾ 
  9. ಸಿದ್ಲಿಂಗು
  10. ಟೋನಿ 
  11. 6-5=2
  12. ಮೈನಾ
  13. ಬಹುಪರಾಕ್
  14. ರಂಗಿತರಂಗ
  15. ಕಿಲ್ಲಿಂಗ್ ವೀರಪ್ಪನ್ 
  16. ನಾನು ಅವನಲ್ಲ ಅವಳು
  17. ಉಗ್ರಂ
  18. ಕೆಂಡಸಂಪಿಗೆ
  19. ಯು ಟರ್ನ್ 
  20. ಪ್ಲಾನ್ 
  21. ಮೈತ್ರಿ
  22. ಉಪ್ಪಿ 2
  23. ಕಿಲ್ಲಿಂಗ್ ವೀರಪ್ಪನ್ 
  24. ಅಮರಾವತಿ 
  25. ಜಟ್ಟ 
  26. ವಿದಾಯ 
  27. ತಿಥಿ 
  28. ಜೀರ್ಜಿಂಬೆ
  29. ಕಿರಗೂರಿನ ಗಯ್ಯಾಳಿಗಳು 
  30. ಹಗ್ಗದ ಕೊನೆ 
  31. ಲಾಸ್ಟ್ ಬಸ್
  32. ಕರ್ವ 
  33. ರಿಕ್ಕಿ 
  34. ಗೋಧಿ ಬಣ್ಣ ಸಾಧಾರಣ ಮೈಕಟ್ಟು 
  35. ರನ್ ಆಂಟನಿ  
  36. ನೀರ್ ದೋಸೆ 
  37. ರಾಮಾ ರಾಮಾ ರೇ 
  38. ಕಹಿ 
  39. ಡೈರೆಕ್ಟರ್ಸ್ ಸ್ಪೆಷಲ್
  40. ದ್ಯಾವ್ರೆ
  41. U The End A
  42. ಭಾಗ್ಯರಾಜ್ 
  43. ಅಪೂರ್ವ
  44. ಬ್ಯೂಟಿಫುಲ್ ಮನಸುಗಳು
  45. ಎರಡನೇ ಸಲ 
  46. ಶುದ್ಧಿ 
  47. ರಾಗ 
  48. ಹ್ಯಾಪಿ ನ್ಯೂ ಇಯರ್ 
  49. ಒಂದು ಮೊಟ್ಟೆಯ ಕಥೆ
  50. ಹೊಂಬಣ್ಣ 
  51. ಆಪರೇಷನ್ ಅಲಮೇಲಮ್ಮ 
  52. ವಿಸ್ಮಯ 
  53. ಕಾಫಿ ತೋಟ 
  54. ಲಿಫ್ಟ್ ಮ್ಯಾನ್ 
  55. ಅಯನ 
  56. ಹುಲಿರಾಯ 
  57. ಕಟಕ 
  58. ದಯವಿಟ್ಟು ಗಮನಿಸಿ 
  59. ಕಾಲೇಜ್ ಕುಮಾರ್ 
  60. ನಿರುತ್ತರ 
  61. ಕೆಂಪಿರ್ವೆ 
  62. ರಿಕ್ತ 
  63. ಹರಿವು 
  64. ಹಜ್ 
  65. ಮಫ್ತಿ 
  66. ರೈಲ್ವೆ ಚಿಲ್ಡ್ರನ್ 
  67. ಟಗರು 
  68. ರಾಜರಥ 
  69. ವರ್ತಮಾನ 
  70. ಕಾನೂರಾಯಣ 
  71. ಟ್ರಂಕ್ 
  72. ತ್ರಾಟಕ 
  73. ಗುಳ್ಟೂ 
  74. ಕಥೆಯೊಂದು ಶುರುವಾಗಿದೆ 
  75. ಆ ಕರಾಳ ರಾತ್ರಿ 
  76. ಒಂದಲ್ಲಾ ಎರಡಲ್ಲಾ   
  77. ಸರ್ಕಾರಿ ಹಿಪ್ರಾ ಶಾಲೆ 
  78. ದಿ ಟೆರರಿಸ್ಟ್ 
ನೀವೇನಂತೀರಿ ?

1 comment:

  1. 'ಕಿಲ್ಲಿಂಗ್ ವೀರಪ್ಪನ್' ಎರಡು ಬಾರಿ ಉಲ್ಲೇಖವಾಗಿದೆ. ಅನೇಕ ಚಿತ್ರಗಳು ಗೊತ್ತೇ ಇಲ್ಲ :)

    ReplyDelete