ನನ್ನ ಎಂಜಿನಿಯರಿಂಗಿನ ರೂಮ್ ಮೇಟ್, ಹತ್ತಿರದ ಗೆಳೆಯ ಪ್ರವೀಣ ಈಗ ಸಿಕ್ಕಿದರೂ ಮಾತು ಶುರು ಮಾಡುವುದು, "ನಿನ್ನ ರವಿ ಬೆಳಗೆರೆ ಈಗ ಎಂತ ಮಾಡ್ತಾ ಇದ್ದಾನೆ" ಎಂಬ ಧಾಟಿಯಲ್ಲೇ. ಆಗಿನ ಕಾಲದಲ್ಲಿ ಮಂಗಳವಾರವಾದರೆ 'ಹಾಯ್' ತರಲಿಕ್ಕೆ ಪೇಟೆಗೆ ಓಡಲು ಕಾಲು ಎಳೆಯುತ್ತಿತ್ತು, ಮನ ಎಳಸುತ್ತಿತ್ತು. ಜೋಗಿಯ ಜಾನಕಿ ಕಾಲಂ ಮತ್ತು ಬೆಳಗೆರೆಯ ಅಂಕಣಗಳ ಬಗ್ಗೆ ನನ್ನ ಪಾಠ್ಯ ಪುಸ್ತಕಗಳಿಗೆ ಅಸೂಯೆ ಹುಟ್ಟುತ್ತಿತ್ತೋ ಏನೋ ಅನ್ನಿಸುವಷ್ಟು ಓದುತ್ತಿದ್ದೆ ಅಂತ ಕಾಣುತ್ತದೆ. ನಾನು ಇಂಥವರ ಫ್ಯಾನು ಅನ್ನಬಹುದಾದಂತೆ ಓದಿದ್ದು ಬೀಚಿಯವರ ಪುಸ್ತಕಗಳನ್ನು. ಬೀಚಿಯವರ ಮಾತ್ರೆಗಳು, ಬೆಳ್ಳಿ ತಿಂಮ ನೂರೆಂಟು ಹೇಳಿದ, ಹುಚ್ಚು ಹುರುಳು, ಆರು ಏಳು ಸ್ತ್ರೀ ಸೌಖ್ಯ, ತಿಮ್ಮಿಕ್ಷನರಿ, ಮಾತನಾಡುವ ದೇವರುಗಳು ಇಂಥವೆಲ್ಲ ನನಗೆ ಓದುವ ಹುಚ್ಚು ಹಿಡಿಸಿದ ಪುಸ್ತಕಗಳು. ಆಮೇಲೆ ಅಂಥದ್ದೇ ಕಿಕ್ ಸಿಕ್ಕಿದ್ದು ಬಳಸಿ ಬರೆಯಲು ಕಂಠಪತ್ರದ ಉಲುಹುಗೆಡದಂತೆ ಬರೆದು ಬಿಸಾಕುತ್ತಿದ್ದಾರೇನೋ ಅನಿಸುತ್ತಿದ್ದ 'ಬೆಳಗೆರೆ ಉವಾಚ'ಗಳಲ್ಲಿ. ಕನ್ನಡದಲ್ಲಿ ಅತ್ಯಂತ ಪ್ರಖರವಾದ ವಿಡಂಬನೆ, ವ್ಯಂಗ್ಯ ಬಂದದ್ದು ಬೀಚಿ, ಚಂಪಾ ಮತ್ತು ಬೆಳೆಗೆರೆಯವರ ಪೆನ್ನುಗಳಿಂದ.
ಆದರೆ ಚಂಪಾರದ್ದು ಭಾವುಕತೆಯಿಲ್ಲದ ಜಗಳಗಂಟಿ ವ್ಯಂಗ್ಯ, ಬೀಚಿ ಮತ್ತು ಬೆಳಗೆರೆಯವರದ್ದು ಇನ್ನೊಂದು ತರದ, ಭಾವದ ಸ್ಪರ್ಶವಿರುವ, ತುಂಟತನ, ವಿಷಾದ ಎಲ್ಲ ಸೇರಿದ ವಿಡಂಬನೆ. ಮಾರ್ಕ್ ಟ್ವೈನ್, ಆಸ್ಕರ್ ವೈಲ್ಡ್ , ಬರ್ನಾರ್ಡ್ ಷಾ , ಎಚ್ ಎಲ್ ಮೆಂಕನ್, Steve Martin,Woody Allen, Groucho Marx ಮುಂತಾದವರ witty ಸಾಲುಗಳನ್ನು ಸವಿದವರಿಗೆ ಕನ್ನಡದಲ್ಲಿ ಅಂಥದ್ದನ್ನು ಧಾರಾಳವಾಗಿ ಕೊಟ್ಟವರೆಂದರೆ ಬೀಚಿ, ಬೆಳಗೆರೆ ಮತ್ತು ಜೋಗಿ ಎನ್ನಬಹುದು. ಸುಮ್ಮನೆ ಕೇಳಿದವರು ಓಡಿಹೋಗುವಂತೆ ಬಯ್ಯುವುದಕ್ಕೂ ತುಂಟತನದಲ್ಲಿ ಕೆಣಕಿ,ಮಾತು ಸ್ಫಟಿಕದ ಶಲಾಕೆಯಾಗುವಂತೆ ಝಾಡಿಸುವುದಕ್ಕೂ ಇರುವ ವ್ಯತ್ಯಾಸ ಕಾಣಬೇಕಾದರೂ ಬೀಚಿ, ಬೆಳಗೆರೆ ಇವರುಗಳ ವಿಡಂಬನೆಗಳನ್ನೂ ಬೇರೆ ಟ್ಯಾಬ್ಲಾಯ್ಡ್ ಗಳು ಬಳಸಿದ ಬೈಗುಳಗಳನ್ನೂ ಹೋಲಿಸಿ ನೋಡಬೇಕು.
ರಾಜೀವ್ ಹತ್ಯೆ, ಗಾಂಧೀ ಹತ್ಯೆ, ಸಂಜಯ್ ಗಾಂಧಿ,ಮುಸ್ಲಿಂ ಇಂಥ ವಿಷಯಗಳ ಬಗ್ಗೆ ಇಷ್ಟು ಇಂಟೆರೆಸ್ಟಿಂಗ್ ಆಗಿ, balanced ಆಗಿ ಕನ್ನಡದಲ್ಲಂತೂ ಬೇರೆ ಯಾರೂ ಬರೆದಿಲ್ಲ ಅನ್ನಬೇಕು. ಭೂಗತ ಲೋಕವೆಂಬ ಹುತ್ತದೊಳಕ್ಕೆ ಕೈ ಹಾಕಿ ಬರೆದ 'ಪಾಪಿಗಳ ಲೋಕದಲ್ಲಿ' ಕೂಡಾ ಒಂದು ಅಸಾಧಾರಣ ಕೃತಿ. ಸಮಾಜದಲ್ಲಿ ಕ್ರಿಮಿನಲ್ಲುಗಳು ಹೇಗೆ ಮತ್ತು ಯಾಕೆ ಸೃಷ್ಟಿಯಾಗುತ್ತಾರೆ ಎಂಬುದರ ಅಧ್ಯಯನ ಮಾಡಿದರೆ, "ಇಂಥಾ ಕೃತಿಗಳು ಸಮಾಜಕ್ಕೆ ಒಳ್ಳೆಯದಲ್ಲ" ಎಂಬ ಆರೋಪಗಳಲ್ಲಿ ವೈಜ್ಞಾನಿಕ ಸತ್ಯ ಇಲ್ಲ ಅಂತ ಗೊತ್ತಾದೀತು. ಅದನ್ನು ಓದಿ ಇಷ್ಟ ಪಟ್ಟ ನಾನೇನೂ ಮಚ್ಚು ಹಿಡಿದು ರೌಡಿಯಾಗಿಲ್ಲ!
ಈಗಲೂ ಮೆಚ್ಚಬಹುದಾದ 'ಪಾವೆಂ ಹೇಳಿದ ಕಥೆ', ಕಣ್ಣೀರು ತೊಟ್ಟಿಕ್ಕುವಂತೆ, ರಕ್ತ ಕುದಿಯುವಂತೆ ಮಾಡುವ ‘ಹಿಮಾಲಯನ್ ಬ್ಲಂಡರ್’ ಇವೆರಡನ್ನೇ ಬೆಳಗೆರೆ ಬರೆದಿದ್ದರೂ ದೊಡ್ಡ ಹೆಸರೇ ಮಾಡಿರುತ್ತಿದ್ದರು. ಬಸ್ ಸ್ಟಾಂಡಿನಲ್ಲಿ ಮೈಕ ಸಿಕ್ಕಿತೆಂದು, ಅನೌನ್ಸರ್ ಒಬ್ಬನು ಸಿಕ್ಕಾಪಟ್ಟೆ ಮಾತಾಡುವ ಕಥೆ, 'ಪಾವೆಂ ಹೇಳಿದ ಕಥೆ', ಕದಿಯುವ ಚಟ ಇರುವ ಅಮ್ಮನ ಕಥೆ ಇವೆಲ್ಲ ವಿಶಿಷ್ಟ ಸೃಷ್ಟಿಗಳು.
'ಅಸಲಿಗೆ', 'ನಂಗೊತ್ತು' Fine. ಬರ್ಬಾದ್, ಗಾಯಬ್, ಏಕ್‌ದಮ್, ನಿಕೃಷ್ಟ, ಮಟಾಷ್, 'ಹಟಕ್ಕೆ ಬಿದ್ದವನಂತೆ' ,'ಅಜಮಾಸು', ಪಟ್ಟಾಗಿ ಕೂತು 'ಬರೋಬ್ಬರಿ', 'ಮಟ್ಟಸ', ’ದರ್ದು’, "ಹೆಗ್ಗಳಿಕೆ ನನ್ನದಾ? ಅದು ನಿಮ್ಮದಾ? ಊಹುಂ, ಗೊತ್ತಿಲ್ಲ" 'ಅಫಿಡವಿಟ್ಟು', 'ಅರೆ ಇಸ್ಕಿ', “ಒಂದ್ಕಡೆಯಿಂದ ತಿಂದು ಹಾಕೋಣ ಅನ್ನೋಷ್ಟು ಚೆಂದ ಕಾಣ್ತಿದೀಯ ಇವತ್ತು!'' ಮುಂತಾದ ಟ್ರೇಡ್ಮಾರ್ಕ್ ಪದಪ್ರಯೋಗಗಳು,ಕುಟುಕುವ, ಕುತೂಹಲವನ್ನು ಕದಡಿ ಮಿಸುಕಾಡಿಸುವ, ಮಿಡಿಯುವ, ಬುದ್ಧಿ ಹೇಳುವ, ತುಂಟತನದ, ಭಾವದ ಮೂಲಕವೇ ಸ್ಪರ್ಶಿಸುವ ಬೆಳಗೆರೆ ಶೈಲಿ ಅನನ್ಯ.
ನಾನು ಒಂದು ಹತ್ತು ವರ್ಷ ಡ್ರಗ್ ಅಡಿಕ್ಟ್ ಆದವನಂತೆ ಹಾಯ್ ಓದಿದ್ದೆ. ಅದರ ಕ್ರೈಂ ವರದಿಗಳನ್ನು ಓದಿದ್ದು ಕಡಮೆ, ಅಂಕಣಗಳು, ಸಿನೆಮಾ ಸುದ್ದಿ ಇಂಥವೇ ಜಾಸ್ತಿ ಓದಿದ್ದು. ಆಮೇಲಾಮೇಲೆ ಅದದೇ ರಿಪೀಟ್ ಆಗುತ್ತದೆ, ಸರಕು ಮುಗಿದಿದೆ, ಬೋರು ಹೊಡೆಯುತ್ತಿದೆ, ಲೇಖಕ ತನ್ನ ಸರಕು ಖಾಲಿಯಾಗಿ, ಅಭ್ಯಾಸ ಬಲದಿಂದ ಬರೆಯತೊಡಗಬಾರದು ಅನಿಸಿತ್ತು. ಹಾಗನ್ನಿಸಿ 2012ರ ಸುಮಾರಿಗೆ ನಿಧಾನಕ್ಕೆ ಹಾಯ್ ಓದುವುದನ್ನು ಬಿಟ್ಟೆ. ಹೀಗೆ ಹತ್ತು ವರ್ಷ ಒಬ್ಬ ಓದುಗನನ್ನು ಹಿಡಿದಿಡುವುದು ಕಡಮೆ ಮಾತಲ್ಲ. ಬೆಳಗೆರೆಯೂ ತಮ್ಮ ಬಗ್ಗೆ ಸುಳ್ಳು, ಉತ್ಪ್ರೇಕ್ಷೆ ಮತ್ತೊಂದೆಲ್ಲ ಬರೆದುಕೊಳ್ಳುತ್ತಾರೆ ಅನಿಸಿತ್ತು, ಹಾಗಾಗಿ ಅವರ ಬರೆಹಗಳನ್ನು, ಖಾಸ್ ಬಾತ್ ಗಳನ್ನೂ ಕೂಡಾ ಕಥೆ ಅಂದುಕೊಂಡು ಓದುತ್ತಿದ್ದದ್ದೂ ಇತ್ತು. ಮುಟ್ಟಿದ್ದನ್ನೆಲ್ಲ ಒರೆಸುವ ಸ್ವಭಾವ ಇರುವ ತಮಿಳು ಹುಡುಗಿಯೊಬ್ಬಳ ಕಥೆ, ಒಂದು rogue ಸೈನಿಕರ ಗುಂಪನ್ನು ಒಂದು elite ಬಟಾಲಿಯನ್ನಾಗಿ ಪರಿವರ್ತನೆ ಮಾಡಿದವನ ಕಥೆ ಇಂಥವೆಲ್ಲ ಖಾಸ್ ಬಾತಿನ ರೂಪದಲ್ಲಿ ಬಂದ ಒಳ್ಳೆಯ ಸಣ್ಣ ಕಥೆಗಳೇ ಆಗಿದ್ದವು ಕೂಡಾ.
ಅರಾ ಮಿತ್ರ, ಕೃಷ್ಣೇ ಗೌಡ, ಪ್ರಾಣೇಶ್, ಹಿರಣ್ಣಯ್ಯ ಮುಂತಾದವರ ಜೊತೆಗೆ ನಿಲ್ಲಿಸಿದರೂ ಮಾತಾಡಿ ಚಪ್ಪಾಳೆ ಗಿಟ್ಟಿಸಿಕೊಂಡಾರು ಎನ್ನಿಸುವಂಥ ಭರ್ಜರಿ ಭಾಷಣಕಾರನೂ ರವಿಯವರ ಒಳಗಿದ್ದ. ಕಾಮರಾಜ ಮಾರ್ಗ ಪುಸ್ತಕ ಪ್ರಕಟವಾದಾಗಿನ ಸಭೆ ನನಗಿನ್ನೂ ನೆನಪಿದೆ. ಒಂದಿಡೀ ರವೀಂದ್ರ ಕಲಾಕ್ಷೇತ್ರ(ಅಥವಾ ಟೌನ್ ಹಾಲು) ತುಂಬಿ, ಹೊರಗೆ ಸ್ಕ್ರೀನು ಹಾಕಿ, ಅದನ್ನು ನೋಡಲಿಕ್ಕೂ ಜನತುಂಬಿ, 'ಪುಸ್ತಕದ ಕಾರ್ಯಕ್ರಮಕ್ಕೆ ಇಷ್ಟು ಜನ ಎಲ್ಲ ಬರ್ತಾರಾ' ಅನ್ನಿಸಿದ ಕಾರ್ಯಕ್ರಮ. ಅವತ್ತು ರಾಜಕಾರಣಿ ರಮೇಶ್ ಕುಮಾರ್ ಅವರದ್ದು ಎಲ್ಲರನ್ನೂ ಗೆದ್ದ ವಾಗ್ಜರಿ. "ಈ ಭಾಷಣ ಆದ್ಮೇಲೆ ಯಾರು ಮಾತಾಡಿದ್ರೂ ಡಲ್ ಹೊಡೆಯುತ್ತೆ" ಅಂತ ಶುರು ಮಾಡಿದ ಬೆಳಗೆರೆ ಅಷ್ಟೇ ಆಕರ್ಷಕವಾಗಿ ಮಾತಾಡಿ ಸಭಾಸದರನ್ನು ಮೋಡಿ ಮಾಡಿ ಬಿಟ್ಟಿದ್ದರು.
ಅವರ ಕುಣಿ ಕುಣಿಯುವ ಶಕ್ತಿಶಾಲಿ ಗದ್ಯ, ಹಿಂಡಿ ಬಿಡುವ ಭಾವುಕತೆ, ಕುಕ್ಕಿ ಬಿಡುವ ಹರಿತವಾದ ವ್ಯಂಗ್ಯ, ಕಣ್ಣಿಗೆ ಕಟ್ಟುವಂತೆ ವರ್ಣಿಸುವ ಚಿತ್ರಕ ಶಕ್ತಿ, ಅಳುಕಿಲ್ಲದೆ ಬದುಕಿನ ವಿಚಿತ್ರ ಮುಖಗಳಿಗೆ ಕನ್ನಡಿ ಹಿಡಿಯುವ ಗುಣ, ಸವಕಲಾಗದ ಗರಿಗರಿ ಭಾಷೆ, ತೀವ್ರತೆ, ಪುಸ್ತಕ ಬರೆಯಲು ಮಾಡುತ್ತಿದ್ದ ರಿಸರ್ಚು ಇವೆಲ್ಲ ಪ್ರಶಂಸನೀಯ. ಇಪ್ಪತ್ತು ವರ್ಷಗಳ ಖಾಸ್ ಬಾತನ್ನು ನೋಡಿ, ಹೇಳಿದ್ದನ್ನೇ ಹೇಳುವ ಸಾಧಾರಣ ಮಟ್ಟದವನ್ನು ಬಿಟ್ಟು, ಅದ್ಭುತವಾದವುಗಳನ್ನು ಹೆಕ್ಕಿ "ಬೆಸ್ಟ್ ಆಫ್ ಖಾಸ್ ಬಾತ್" ಅಂತ ಮಾಡಿದರೆ ಒಂದು ಮೂರು ಸಂಪುಟಗಳಿಗೆ ಆಗುವಷ್ಟು ವಸ್ತು ಅಲ್ಲೇ ಸಿಕ್ಕೀತು. ಹಾಗೆ ನಾನೇ ಒಂದು ದಿನ ಮಾಡಿಯೇನು ಅಂತ ಮನಸ್ಸಲ್ಲೇ ಅಂದುಕೊಂಡಿದ್ದೆ ಕೂಡಾ !
Alexander Mackendrick ಎಂಬ ನಿರ್ದೇಶಕ , ಮಾಸ್ಟ್ರು ಒಂದು ಸಲ ಹೇಳಿದ್ದ- ಹೊಸತಾಗಿ ಸಿನೆಮಾಕ್ಕೆ ಬರೆಯುವವರು ಈ ಕ್ಲಾಸಿಕ್ಕುಗಳು , ಅವಾರ್ಡ್ ವಿನ್ನಿಂಗೂ , ಕ್ರಿಟಿಕಲಿ acclaimed ತರದ್ದನ್ನೆಲ್ಲ ಓದ ಹೋಗಬಾರದು. ಅವರು ಓದಬೇಕಾದ್ದು pulp ಫಿಕ್ಷನ್ ಅನ್ನಿಸಿಕೊಂಡ ರೋಚಕ ಪತ್ತೆದಾರಿ, ಥ್ರಿಲ್ಲರ್ ರೈಟರುಗಳನ್ನು. ಕಸುಬು ಕಲಿಯಲು ಅದೇ ಸೂಕ್ತ ಅಂತ.
ನಾವೂ ಅದನ್ನು ಒಪ್ಪಬಹುದು. ಹೊಸತಾಗಿ ಬರೆಯ ಹೊರಟವರು, ಈಗಷ್ಟೇ ಓದಲು ತೊಡಗಿದವರು ಎಲ್ಲ ನಮ್ಮ ವಿಮರ್ಶಕರು ಮೆಚ್ಚುವ ಘನ ಗಂಭೀರ ಸಾಹಿತ್ಯ ಓದುವುದು ಸೂಕ್ತವಲ್ಲ(ಮಾಸ್ತಿ, ತೇಜಸ್ವಿ ತರದ ಜನಪ್ರಿಯರೂ, ವಿಮರ್ಶಕರ ಮೆಚ್ಚುಗೆ ಗಳಿಸಿದವರೂ ಆದ exceptionಗಳಿದ್ದಾರೆ ಆ ಮಾತು ಬೇರೆ). ಹೊಸಬರು ಓದಬೇಕಾದ್ದು ಅನಕೃ, ತರಾಸು, ಬೀಚಿ, ಬೆಳಗೆರೆ ತರದ craftsmanಗಳ ಆಕರ್ಷಕ, ರುಚಿಕಟ್ಟಾದ ಗದ್ಯವನ್ನೇ.