ಕನ್ನಡಪ್ರಭದಲ್ಲಿ ಕಿಮ್ ಕಿ-ಡುಕ್ ಎಂಬ ಕೊರಿಯನ್ ನಿರ್ದೇಶಕನ ಬಗ್ಗೆ ನನ್ನದೊಂದು ಪುಟ್ಟ ಲೇಖನ. ಬರೆಸಿ,ಪ್ರಕಟಿಸಿದ ಜೋಗಿಯವರಿಗೆ ಧನ್ಯವಾದಗಳು:
ಎಲ್ಲೋ ಓದಿದ ಈ ಸಾಲುಗಳನ್ನ ಇನ್ನೊಮ್ಮೆ ಓದಿಕೊಳ್ಳಿ :
ಬಿರುಗಾಳಿ ನಡುವೆ ಕಾಫಿಶಾಪ್
ಕೈಯ್ಯಲ್ಲೊಂದು ಕಪ್ ಕಾಫಿ
ಕಾಫಿಯೊಳಗೊಂದು ಬಿರುಗಾಳಿ
ಇದನ್ನೇ ನೀವು ಅಡ್ಡಡ್ಡ ಬರೆದು ಚು ಆಂಗ್ ತ್ಸು ಅಂತಲೋ ಅಥವಾ ಇನ್ನು ಯಾವುದಾದರೂ ಚೀನಿ,ಜಪಾನೀ ಹೆಸರು ತಗೊಂಡು ಆ ಝೆನ್ ಗುರು ಕಾಫಿಶಾಪ್ ನಲ್ಲಿ ಇದ್ದ ಅಂದು ಬಿಟ್ಟರೆ ಇದನ್ನೊಂದು ಝೆನ್ ಕಥೆ ಅಂತಲೂ ಅಂದುಕೊಳ್ಳಬಹುದು. ಇಂಥದ್ದನ್ನೆಲ್ಲ ಇಷ್ಟಪಡುವವರಿಗೆ ಅಂತ ಒಂದು ಸಿನಿಮಾ ಮಾಡಿದರೆ? ಇದನ್ನು ಕಲ್ಪಿಸಿಕೊಳ್ಳಿ: ಅಲ್ಲೊಂದು ನಿಶ್ಚಲ ಸರೋವರ, ಅದರ ಮೇಲೊಂದು ಬೌದ್ಧ ಸಂನ್ಯಾಸಿಯ ಕುಟೀರ. ಸರೋವರದಲ್ಲಿ ತೇಲುವ ಕುಟೀರದ ಸುತ್ತಲೂ ಎದ್ದುನಿಂತ ಗುಡ್ಡಗಳು, ಹಬ್ಬಿದ ಕಾಡು. ಇಂಥಲ್ಲಿ ನಿರಾಳವಾಗಿ ಬದುಕುವ ಗುರು ಶಿಷ್ಯರು; ಅಲ್ಲಿ ಅವರು ಬಿಟ್ಟರೆ ಇನ್ನೊಬ್ಬರಿಲ್ಲ. ಅಲ್ಲಿ ಬದಲಾಗುವ ಋತುಗಳು ಬದುಕಿನ ಬೇರೆ ಬೇರೆ ಹಂತಗಳಿಗೆ ಸಾಕ್ಷಿಯಾಗಿ, ರೂಪಕಗಳಾಗಿ ಇರುತ್ತವೆ.
ಇದು ಯಾವುದಾದರೂ ವಿಮರ್ಶಕರು ಮಾತ್ರ ಮೆಚ್ಚುವ ಕಾದಂಬರಿಗೋ ಕವನಕ್ಕೋ ಆದೀತು, ಇಂಥ ಚಲನಚಿತ್ರವೂ ಇರಲು ಸಾಧ್ಯವೇ ಅಂತ ತಲೆ ಕೆರೆದುಕೊಳ್ಳಬಹುದು. ಹೀಗೂ ಉಂಟು ಅನ್ನುವ ತರ ಇದ್ದದ್ದು Spring, Summer, Fall, Winter... and Spring ಎಂಬ ಚಿತ್ರ, ಅದನ್ನು ನೋಡಿ, ಈ ನಿರ್ದೇಶಕ ಬೇರೇನು ಮಾಡಿದ್ದಾನೆ ಅಂತ ಆಸಕ್ತರಾದವರೇ ಹೆಚ್ಚು. ಕಿಮ್ ಕಿ-ಡುಕ್ ಎಂಬ ಕೊರಿಯನ್ ನಿರ್ದೇಶಕನ ಪರಿಚಯ ಹಲವರಿಗೆ ಆದದ್ದು ಹಾಗೆಯೇ. ಅದು ಆಗಬೇಕಾದ್ದೂ ಹಾಗೆಯೇ ಎನ್ನಬೇಕು! ಜುಗುಪ್ಸೆ ಹುಟ್ಟಿಸುವ, ಕೆರಳಿಸುವ, ರೋಸಿಕೊಳ್ಳುವಂತೆ ಮಾಡುವ ಸಾಕಷ್ಟು ಚಿತ್ರಗಳನ್ನೂ ಈ ಮನುಷ್ಯ ಮಾಡಿದ್ದರಿಂದ ಈ ಮಾತನ್ನು ಹೇಳಬೇಕಾಯಿತು.
ಕ್ರೈಮ್ ಥ್ರಿಲ್ಲರುಗಳನ್ನು ಕೊರಿಯನ್ನರಂತೆ ಮಾಡುವವರಿಲ್ಲ, ಹಿಂಸೆಯನ್ನು ಅವರಷ್ಟು ತೋರಿಸುವವರಿಲ್ಲ, ಅವರಂತೆ ತೋರಿಸುವವರೂ ಇಲ್ಲ ಎಂಬ ಭಾವನೆ ಸಿನಿಪ್ರಿಯರ ವಲಯದಲ್ಲಿದೆ. ಅಷ್ಟಲ್ಲದೆ,ಒಂದು ಒಳ್ಳೆಯ ಕನ್ನಡ ಥ್ರಿಲ್ಲರ್ ಬಂದರೆ, ಅದನ್ನು ಹೊಗಳುವ ಮೊದಲು, ಇದರ ಮೂಲ ಯಾವುದಾದರೂ ಕೊರಿಯನ್ ಸಿನೆಮಾದಲ್ಲಿ ಇರಬಹುದೇ ಅಂತ ಹುಡುಕಿ ನೋಡುವವರೂ ಇದ್ದಾರೆ! ಇಂಥ ಚಿತ್ರರಂಗದಲ್ಲಿ ತನ್ನದು ಮತ್ತು ತನ್ನದು ಮಾತ್ರವೇ ಆದ ಸ್ವರದ ಮೂಲಕ ಸದ್ದು ಮಾಡಿದ್ದು ಕಿಮ್ ಕಿ-ಡುಕ್. ಇಟಾಲಿಯನ್ ನಿಯೋರಿಯಲಿಸಂ, ಇರಾನಿಯನ್ ನ್ಯೂ ವೇವ್ ಇರುವಂತೆ ಕೊರಿಯನ್ ಹೊಸ ಅಲೆಯೂ ಬಂದಾಗ ಅದರಲ್ಲಿ ಕಾಣಿಸಿಕೊಂಡ ಹೆಸರುಗಳಲ್ಲಿ ಇವನದ್ದೂ ಗಮನಾರ್ಹವಾದ ಹೆಸರು. ಒಂದು ಸಿನಿಮೀಯ ದುರಂತ ಎಂದರೆ, ಕೊರಿಯಾದಲ್ಲಿಯೇ ಅವನಿಗೆ ಅಂಥ ದೊಡ್ಡ ಹೆಸರಿರಲಿಲ್ಲ, ಅವನ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿಯೂ ಸೋತವು, ವಿಮರ್ಶಕರನ್ನೂ ಅಷ್ಟಾಗಿ ಸೆಳೆಯಲಿಲ್ಲ. ಅವನ ಅಭಿಮಾನಿಗಳು ಯೂರೋಪಿನಲ್ಲಿ, ಅಮೆರಿಕಾದಲ್ಲಿ, ಭಾರತದಲ್ಲಿಯೇ ಹೆಚ್ಚು ಇರುವುದು. ಚಿತ್ರೋತ್ಸವಗಳಲ್ಲಿ ಅವನಿಗೆ ಸ್ಟಾರ್ ನಿರ್ದೇಶಕನಿಗೆ ಸಿಗುವ ರಾಜಮರ್ಯಾದೆಯೇ ಸಿಗುತ್ತಿತ್ತು. ಮಿಟೂ ಚಳುವಳಿಯ ಕಾಲದಲ್ಲಿ ಹಲವರು ಇವನೊಬ್ಬ ಅತ್ಯಾಚಾರಿ ಅಂದಾಗ ಎಲ್ಲರಿಗೆ ಬೇಸರವಾಗಿತ್ತು, ಒಬ್ಬ ಒಳ್ಳೆಯ ಕಲಾವಿದನು ಒಬ್ಬ ಒಳ್ಳೆಯ ಮನುಷ್ಯನೂ ಆಗಿರುತ್ತಾನೆಯೇ ಎಂಬ ಪ್ರಶ್ನೆಗಳು ಎದ್ದದ್ದೂ ಉಂಟು.
Orson Wellesನು ಮೊದಲ ಬಾರಿ Citizen Kane ಅನ್ನು ಜನರಿಗೆ ತೋರಿಸಿದಾಗ, ಈ ಪುಣ್ಯಾತ್ಮ ಹಾಲಿವುಡ್ಡಿನ ಎಲ್ಲ ನಿಯಮಗಳನ್ನ ಮುರಿದಿದ್ದಾನೆ ಅಂದರಂತೆ ಯಾರೋ. ಮುರಿಯುವುದಕ್ಕೆ ಈ ರೂಲ್ಸು ಯಾವ್ದು ಅಂತ ನನಗೆ ಗೊತ್ತೇ ಇರ್ಲಿಲ್ಲ ಅಂದಿದ್ದನಂತೆ ಆತ. ಅಜ್ಞಾನವೇ ಪರಮಸುಖ ಅಂದಂತೆ. ಕಿಮ್ ಕಿ-ಡುಕ್ ಕೂಡಾ ಹಾಗೆ ಗೊತ್ತಿಲ್ಲದೇ ನಿಯಮಗಳನ್ನು ಗಾಳಿಗೆ ತೂರಿದವನೋ, ಬೇಕೆಂತಲೇ ಎಲ್ಲರನ್ನೂ ಬೆಚ್ಚಿ ಬೀಳಿಸ ಹೊರಟವನೋ ಅಂತ ಹೇಳುವುದು ಕಷ್ಟ.
ಚಿತ್ರಕಥೆ ಬರೆಯುವುದನ್ನು ಹೇಳಿಕೊಡುವ ಮಾಷ್ಟ್ರುಗಳು ಹೇಳಿ ಕೊಡುವ ಮೊದಲನೇ ಪಾಠ ಅಂದರೆ “Don’t tell,Show” ಅಂತ. ಅಂದರೆ ಪಾತ್ರಗಳು ಆಡದೇ, ಮಾಡಿ ರೂಢಿಯೊಳಗುತ್ತಮರಾಗಬೇಕು ಅಂತ. ಇಂಥಹ ಮೇಷ್ಟ್ರುಗಳ ಮಾತು ಕೇಳಿಸದಷ್ಟು ಮಾತಾಡಿದ್ದು ಯೋಗರಾಜ ಭಟ್ಟರ ಪಾತ್ರಗಳು. ಯೋಗರಾಜ ಭಟ್ಟರ ಪ್ರೀತಂ ಸ್ವಲ್ಪ ಸೈಲೆಂಟ್ ಹುಡುಗ ಅನ್ನಿಸುವಷ್ಟು ಮಾತಾಡಿದ್ದು ಗುರುಪ್ರಸಾದರ ಪಾತ್ರಗಳು ಮತ್ತು ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿಯ ಪಾತ್ರಗಳು. “Don’t tell,Show” ಸಿದ್ದಾಂತವನ್ನು ಇನ್ನೊಂದು ಅತಿಗೆ ಕೊಂಡು ಹೋದವನಂತೆ, ಮಾತೇ ಆಡದ ಪಾತ್ರಗಳನ್ನು ಕಟ್ಟಿದ್ದು ಕಿಮ್ ಕಿ-ಡುಕ್. ನಮ್ಮಲ್ಲಿ ಹಾಕುವಂತೆ, ಕಥೆ-ಚಿತ್ರಕಥೆ- ಸಂಭಾಷಣೆ ಎಂಬ ಕ್ರೆಡಿಟ್ ಕೊಡುವ ಅಗತ್ಯವೇ ಅವನ ಹಲವು ಚಿತ್ರಗಳಲ್ಲಿಲ್ಲ, ಅಷ್ಟೆಲ್ಲ ಸಂಭಾಷಣೆಗಳನ್ನು ಬರೆಯುವುದರಲ್ಲಿ ಅವನಿಗೆ ನಂಬಿಕೆಯಿದ್ದಂತಿಲ್ಲ. ಕಥೆ-ಚಿತ್ರಕಥೆ- ಛಾಯಾಗ್ರಹಣ ಅಂತ ಹಾಕಿ, ದೃಶ್ಯ, ಪರಿಸರ, ಹಿನ್ನೆಲೆ ಸಂಗೀತಗಳೇ ಸಂಭಾಷಣೆಯ ಕೆಲಸ ಮಾಡುತ್ತವೆ ಅಂದು ಸುಮ್ಮನಾಗಬಹುದು.
ಅವನ ಮೋಬಿಯಸ್ ಎಂಬ ವಿಕೃತ ಚಿತ್ರವನ್ನು ನೋಡದಿರುವುದೇ ಒಳ್ಳೆಯದೇನೋ, Pieta ಎಂಬ ಚಿತ್ರದಲ್ಲಿ ತೋರಿಸುವ ಕ್ರೌರ್ಯ ಅಸಹ್ಯ ತರಿಸಿ, ಎದ್ದು ಹೋಗುವ ಅನ್ನಿಸುವಂತೆ ಮಾಡಿದರೂ, ಅದನ್ನು ಸಹಿಸಿಕೊಂಡರೆ, ಅಬ್ಬಬ್ಬಾ ಎನ್ನಿಸುವ, ವಿಕ್ಷಿಪ್ತವಾದರೂ ಅದ್ಭುತವಾದ ಚಿತ್ರವಾಗಿ ಕಾಡುತ್ತದೆ. 3-Iron ಅವನ ನೋಡಲೇಬೇಕಾದ ಚಿತ್ರಗಳಲ್ಲೊಂದು. ಜತನದಿಂದ ಕಲಾತ್ಮಕವಾಗಿ ರೂಪಿಸಿದ ದೃಶ್ಯಗಳಲ್ಲಿ, ಆರದ ಗಾಯಕ್ಕೆ ಮುಲಾಮು ಹುಡುಕುತ್ತಿರುವ ಪಾತ್ರಗಳ ತೊಳಲಾಟದಲ್ಲಿ, ತಣ್ಣನೆಯ ಕ್ರೌರ್ಯದಲ್ಲಿ, ಸಂಕಟದಲ್ಲಿ, ಅಲ್ಲೊಮ್ಮೆ ಇಲ್ಲೊಮ್ಮೆ ಬರುವ ಮಾತುಗಳಲ್ಲಿ, ನಿಧಾನಕ್ಕೆ ಇಷ್ಟಿಷ್ಟೇ ಬಿಚ್ಚಿಕೊಳ್ಳುವ ಬಾವುಟದ ಥರ ಕಥೆ ಬಿಚ್ಚಿ ಪಟಪಟಿಸುವುದು ಅವನ ಚಿತ್ರಗಳ ಕ್ರಮ.
ನಮ್ಮ ಸೂರಿಯಂತೆ ಇವನೂ ಒಬ್ಬ ವರ್ಣಚಿತ್ರಕಾರ. ಅಕ್ಕರೆಯಿಂದ ಬಿಡಿಸಿಟ್ಟ ಚಿತ್ರದಂತೆ ಇರುವ, ರವಿಚಂದ್ರನ್ ಇದನ್ನು ಇಷ್ಟಪಟ್ಟಾರು ಅನ್ನಿಸುವಂಥ ಫ್ರೇಮುಗಳು ಅವನ ಚಿತ್ರಗಳಲ್ಲಿ ಎಲ್ಲೆಂದರಲ್ಲಿ ಸಿಗುತ್ತವೆ. ಅಷ್ಟು ಮಾತ್ರ ಅಲ್ಲ. ಇವಕ್ಕೆ ಹೋಲಿಸಿದರೆ ಸೂರಿ ಸಿನೆಮಾಗಳಲ್ಲಿ ತೋರಿಸುವ ಹಿಂಸೆಯು ರಾಜಕುಮಾರರ ಚಿತ್ರಗಳಷ್ಟು ಸಭ್ಯ ಎನ್ನಬಹುದಾದಷ್ಟು ಭಯಂಕರ, ವಿಕೃತ, ಭೀಭತ್ಸ ಚಿತ್ರಗಳನ್ನೂ ಈ ಪುಣ್ಯಾತ್ಮ ಮಾಡಿಟ್ಟಿದ್ದಾನೆ.
The Silence of the Lambs ಅವನ ಮೇಲೆ ತುಂಬಾ ಪ್ರಭಾವ ಬೀರಿದ ಚಿತ್ರವಂತೆ. ಅದು ಸೀರಿಯಲ್ ಕಿಲ್ಲರನ್ನು ತೋರಿಸುವ ಚಿತ್ರ, ಅದರ ಮುಖ್ಯ ಪಾತ್ರ ಒಬ್ಬ ನರಭಕ್ಷಕನದು ಆದರೂ ಅದೇನು ಹಸಿಬಿಸಿಯಾದ, ಅಸಹ್ಯ ಎನ್ನಿಸುವ ಚಿತ್ರವಾಗಿರಲಿಲ್ಲ. ಅದರಲ್ಲಿ ಬರುವ ನರಭಕ್ಷಕನೂ ಚಾರ್ಮಿಂಗ್ ಆದ ವ್ಯಕ್ತಿ. ಆದರೆ ಕಿಮ್ ಕಿ-ಡುಕ್ಕನಿಗೆ ಯಾಕೋ ಕ್ರೌರ್ಯದ, ಲೈಂಗಿಕತೆಯ ಹಸಿ ಹಸಿ ಚಿತ್ರಣದಲ್ಲಿ ಆಸಕ್ತಿ ಜಾಸ್ತಿ.
ಇವೆಲ್ಲ ಏನಿದ್ದರೂ, ಶಾಂತ ರಸ, ಕರುಣ ರಸಗಳನ್ನೂ ಧ್ಯಾನಸ್ಥನಂತೆ ಮುಟ್ಟಿ, ರೌದ್ರ,ಭೀಭತ್ಸಗಳನ್ನೂ ಅಷ್ಟೇ ಆಸಕ್ತಿಯಿಂದ ಚಿತ್ರಿಸಿ, ಅಲ್ಲೂ ಚಿಂತನೆಗೆ ಗ್ರಾಸ ಒದಗಿಸಿದ ಮತ್ತೊಬ್ಬ ನಿರ್ದೇಶಕನ ಹೆಸರು ನೆನಪಾಗುವುದಿಲ್ಲ. ಬಹುಶಃ ಎಲ್ಲ ಅತಿಗಳಿಗೆ ಹೋಗಿಯೂ ತುಂಬ ಗೌರವ ಕಾಪಾಡಿಕೊಂಡು, ಜೀನಿಯಸ್ ಎನ್ನಿಸಿಕೊಂಡ ಸ್ಟಾನ್ಲಿ ಕೂಬ್ರಿಕ್ ಕೂಡಾ ಸ್ವಲ್ಪ(ಸ್ವಲ್ಪ ಮಾತ್ರ) ಇದೇ ಜಾತಿಯ ಪ್ರಾಣಿ ಎನ್ನಬಹುದು. ಇಂಥವರ ಚಿತ್ರಗಳು ಖುಷಿ ಕೊಟ್ಟು, ಪ್ರಚೋದಿಸಿ, ರೇಗಿಸಿ,ಚಿಂತನೆಗೆ ಸರಕನ್ನು ಸರಬರಾಜು ಮಾಡಿ, ಚರ್ಚೆಗೆ ವಿಚಾರವನ್ನು ಒದಗಿಸಿ art should comfort the disturbed and disturb the comfortable ಎಂಬಂತೆ ನಮ್ಮನ್ನು ಕಲಕುತ್ತವೆ ಎಂಬ ಕಾರಣಕ್ಕಾದರೂ ಸಿನೆಮಾವ್ಯಾಮೋಹಿಗಳ ಬಾಯಲ್ಲಿ ಇವನ ಹೆಸರು ಉಳಿಯುತ್ತದೆ.
No comments:
Post a Comment