Saturday, 19 December 2020

ಎರಡು ಅನುವಾದಗಳು

 ಅನುವಾದವೆನ್ನುವುದು ಎಷ್ಟೋ ಸರ್ತಿ, ಅಂಗಡಿಯಲ್ಲಿದ್ದ ಐಸ್ ಕ್ರೀಮನ್ನು ಆಸೆಪಟ್ಟು, ಬಟ್ಟಲೊಂದರಲ್ಲಿ ಹಾಕಿ, ಮನೆಗೆ ತರಹೊರಟಂತೆ ಆಗುವುದುಂಟು. ಮನೆಗೆ ಮುಟ್ಟುವಾಗ ಐಸು ಕ್ರೀಮು ಕರಗಿ ಸೊರಗಿ ನೀರಾಗಿ, ಮತ್ತೇನೋ ಆಗಿ, 'ಏಗಿದ್ದೆಲ್ಲ ಸುಮ್ಮನೆ' ಅನಿಸಿಬಿಡುತ್ತದೆ. ಎಷ್ಟೋ ಸಲ ದೊಡ್ಡವರು ಮಾಡಿದ ಅನುವಾದಗಳಲ್ಲಿಯೇ, "He is so cool" ಅನ್ನುವುದನ್ನು, 'ಅವನು ತಣ್ಣನೆಯ ಮನುಷ್ಯ' ಅಂತ ಮಾಡಿಬಿಟ್ಟಿದ್ದಾರೋ ಏನ್ಕತೆ ಅಂತ ತೋರುವುದಿದೆ. ಮೂಲ ಬಿಜೆಪಿ, ಅನುವಾದ ಕಾಂಗ್ರೆಸ್ಸು ಎಂಬಂತಾದರಂತೂ ಕಡುಕಷ್ಟ. ಎಲ್ಲೋ ಕೆಲವೊಮ್ಮೆ, ಬಿಎಂಶ್ರೀಯವರ ಅನುವಾದಗಳಲ್ಲೋ, ಜೋಗಿ, ರವಿ ಬೆಳಗೆರೆ ಅವರುಗಳು ಮಾಡಿದ ರೂಪಾಂತರಗಳಲ್ಲೋ ಚೀನಾದ ಗೋಬಿ ಮಂಚೂರಿ ನಮ್ಮದೇ ತಿಂಡಿ ಆಗಿಬಿಟ್ಟಂತೆ, ಅಲ್ಲಿಯದು ಇಲ್ಲಿಯದೇ ಆಗುವುದುಂಟು. ಹಾಗಾದರೆ, ಓದುಗರಿಗೆ ಗೋಬಿ ಮಂಚೂರಿಯನ್ನನ್ನು ಕಚ್ಚಿದ ಸುಖಪ್ರಾಪ್ತಿ.

ಸುಖವೋ ಕಷ್ಟವೋ, ಯಾವುದಕ್ಕೂ ಒಮ್ಮೆ ಷೆಲ್ಲಿಯ 'To a Skylark' ಕವನವನ್ನೊಮ್ಮೆ ನೋಡೋಣ. ಕನ್ನಡಿಗರ ಸುದೈವ ಎಂಬಂತೆ ಇಬ್ಬರು ಘನ ವಿದ್ವಾಂಸರು skylark ಎಂಬ ಹಕ್ಕಿಗೆ ಇಲ್ಲಿ ಗೂಡುಕಟ್ಟಿದ್ದಾರೆ. ಪಂಡಿತರ ಲೋಕದಲ್ಲಿ, "ಹುಲಿ ಅಂದ್ರೆ ಹುಲೀನೇ" ಎನ್ನಬಹುದಾದ ಮಂಜೇಶ್ವರದ ಗೋವಿಂದ ಪೈಯವರು `ಬಾನಕ್ಕಿಗೆ' ಎಂಬ ಹೆಸರಿನಲ್ಲೂ, ನನಗೆ ಇವತ್ತಿಗೂ ಅನುವಾದಕ್ಕೆ ಮಾದರಿಯಾಗಿರುವ ಬಿಎಂಶ್ರೀಯವರು `ಬಾನಾಡಿ' ಎಂದೂ ಈ ಪದ್ಯವನ್ನು ಕನ್ನಡಕ್ಕೆ ತಂದಿದ್ದಾರೆ. ಸುಮ್ಮನೆ ತಮಾಷೆಗೆ ಕೆಲವು ಸಾಲುಗಳನ್ನು ಅಕ್ಕಪಕ್ಕ ಇಟ್ಟು ಮೂಲದ ಒನಪನ್ನೂ, ಅನುವಾದದ ಒಯ್ಯಾರವನ್ನೂ, ಇಂಗ್ಲೀಷಿನ ಬಿಂಕವನ್ನೂ ಕನ್ನಡದ/ಹಳಗನ್ನಡದ ಬಿಗುಮಾನವನ್ನೂ ನೋಡೋಣ. ಇದೊಂತರ ತೆಂಡೂಲ್ಕರನನ್ನೂ ಲಾರಾನನ್ನೂ ಆಚೀಚೆ ಇಟ್ಟು ನೋಡಿದಂತೆ. ಬಿಎಂಶ್ರೀಯವರದ್ದು ಹೆಚ್ಚಿನ ಕಡೆ ಪಾಂಡಿತ್ಯದ ಭಾರ ಓದುವವರ ಮೇಲೆ ಬೀಳದಂತ ಸರಳ,ಲಲಿತ, ಭಾವಗೀತದ ಓಟ. ಗೋವಿಂದ ಪೈಗಳದ್ದು ಹಳೆಕಾಲದ ಪಂಡಿತರ ಬಿಗಿಯಾದ ಗತ್ತಿನ ನಡಿಗೆಯ ಕ್ರಮ.
ಮೊದಲ ಸಾಲುಗಳು ಹೀಗಿವೆ:
'Hail to thee blithe spirt!
Bird thou never wert,
That from heaven, or near it
pourest thyfull heart
In profuse strains of unpremeditated art''
ಇದನ್ನು ಶ್ರೀಯವರು ಹೀಗೆ ಅನುವಾದಿಸಿದ್ದಾರೆ:
'ಆರು ನೀನೆಲೆ ಹರುಷ ಮೂರುತಿ?
ಹಕ್ಕಿಯೆಂಬರೆ ನಿನ್ನನು!
ತೋರಿ ದಿವಿಜರು ಸುಳಿವ ಬಳಿ,ಸುಖ
ವುಕ್ಕಿ ಬಹನಿನ್ನೆದೆಯನು
ಹಾರಿ ನೆನೆಯದ ಕಲೆಯ ಕುಶಲದ ಭೂರಿಗಾನದೊಳೆರೆಯುವೆ'
ಇದು ಪೈಗಳಲ್ಲಿ ಹೀಗೆ ಬಂದಿದೆ:
ಸೊಗಯಿಸೈ ಸುಖಜೀವಿ!
ನೆಗೆವಕ್ಕಿ ನೀನಲ್ಲ;
ಗಗನದಿಂದಲೊ ಗಗನದರುಗಿಂದಲೊ
ಮೊಗೆವೆ ತುಂಬೆದೆಯ
ಮುಂಬಗೆದಿಲ್ಲದಿಹ
ಬಿನ್ನಣಿಗೆಯುಗುವುದಾರ ಗಾಯನದ ಝರಿಯಿಂ
ಇದರಲ್ಲಿ ಪೈಗಳದ್ದು ಮೂಲವನ್ನು ಇರುವ ಹಾಗೇ ತರುವ ಕ್ರಮ, ಶ್ರೀಯವರದ್ದು ಮೂಲದ ದಿಕ್ಕಿನಲ್ಲಿ ಸ್ವಲ್ಪ ಆಚೀಚೆ ಹೋಗುವ ದಾರಿ. pourest thy full heart In profuse strains of unpremeditated art ಅನ್ನುವುದರ ಕೊರಳಿಗೆ ಹಗ್ಗ ಬಿಗಿದು ಎಳೆತರುವುದು ಸಾಹಸದ ಕೆಲಸ. unpremeditated art ಅನ್ನುವುದರ ಭಾವ "ನೆನೆಯದ ಕಲೆಯ ಕುಶಲದ" ಅಂದಾಗ ಬರಲಿಲ್ಲ, "ಮುಂಬಗೆದಿಲ್ಲದಿಹ ಬಿನ್ನಣಿಗೆ ಉಗುವುದು" ಎಂದಾಗ ಮೂಲದ ಅಬ್ಬರವೇನೋ ಬಂತು, ಆದರೆ 'ಬಿನ್ನಣಿಗೆ' ಎಂಬ ಶಬ್ದಕ್ಕೆ ಡಿಕ್ಷನರಿ ಬೇಕಾದೀತು!
ಬಿ ಎಂ ಶ್ರೀಯವರ "ನೆಲವನೊಲ್ಲದೆ ಚಿಗಿದು ಚಿಮ್ಮುತ ಮೇಲು ಮೇಲಕ್ಕೋಡುವೆ; ಒಲೆದು ದಳ್ಳುರಿ ನೆಗೆದು ಎಂಬ ಸಾಲುಗಳಲ್ಲಿHigher still and higher/From the earth thou springest/Like a cloud of fire ಎಂಬ ಸಾಲುಗಳ ಸೊಗಸು ಮಾಯವಾಗಿದೆ. "ಉನ್ನತಂ ಮೇಣದರಿನುನ್ನತಂ ಭುವಿಯಿಂದ ನೀನ್ನೆಗೆವೆ ಕೆಂಡದುರಿ ಮೋಡದಂತೆ" ಎಂಬ ಪೈಗಳ ಸಾಲುಗಳು ಮೂಲಕ್ಕೆ ಹತ್ತಿರ. ಮುಂದೆ ಬರುವ And singing still dost soar, and soaring ever singest ಪೈಗಳಲ್ಲಿ - "ಗನ್ನದೊಳೇರುತಿನ್ನು ಹಾಡುವೆ, ಹಾಡುತಿನ್ನೇರುವೆ" ಅಂತ ಸಾಧಾರಣವಾಗಿದೆ. ಶ್ರೀಯವರ, "ನಲಿದು ಹಾಡುತ ಹಾಡುತೇರುವೆ, ಏರುತೇರುತ ಹಾಡುವೆ" ಎಂಬಲ್ಲಿ ಪದಗಳನ್ನು ಕುಣಿಸಿರುವ ರೀತಿಯಿಂದ ಮಜಾ ಬಂದಿದೆ.
ಕೈಗೆ ಸಿಗದೇ ಜಾರಬಹುದಾದ ಒಂದು ಸಾಲು ಇದು: Thou dost float and run; Like an unbodied joy whose race is just begun. ಶ್ರೀಯವರ "ಮುಳುಗಿ ಏಳುವೆ, ಹರಿಯುವೆ, ಕಳಚಿ ದೇಹವ ದಿವಕೆ ಹರಿಯುವ ಭೋಗಿಯೋಲಾಟದವೊಲು" ಎಂಬಲ್ಲಿ ಮೂಲಕ್ಕೆ ಬೇರೆಯೇ ಟ್ವಿಸ್ಟ್ ಕೊಟ್ಟಿದ್ದಾರೆ. ಪೈಗಳ "ಮುಂಗತಿಗಣಂ ತೊಡಗಿದಂಗವಡೆಯದ ಸೊಗದ ಪಾಂಗಿನಿಂ ತೇಲಾಡಿ ಹರಿದಾಡುವೆ" ಎಂಬುದು, ಸ್ವಲ್ಪ ಹಳಗನ್ನಡದಂತಿದ್ದರೂ ಮೂಲದ ಚೆನ್ನಾದ ಮರುಸೃಷ್ಟಿ. unbodied joy = ಅಂಗವಡೆಯದ ಸೊಗ ಎಂಬುದುಕಣ್ಣು ಸೆಳೆಯುವ ಅನುವಾದ.
ಕಡೆಗೊಮ್ಮೆ ಬರುವ We look before and after, And pine for what is not ಎಂಬ ಸರಳವಾದ ಸಾಲು, ಗೋವಿಂದ ಪೈಗಳಲ್ಲಿ "ಹಿಂದುಮುಂದಕೆ ನೋಡಿ ಹೊಂದದನು ಹಲುಬಲಾವೊಂದು" ಅಂತಾಗಿ ಭಾವ ಅಷ್ಟಾಗಿ ಮೂಡುವುದಿಲ್ಲ, ಇಂತಲ್ಲಿ ಸರಳತೆಯೇ ಒಳ್ಳೆಯದು ಎಂಬಂತೆ, ಶ್ರೀಯವರ ಈ ಸಾಲುಗಳು ತಟ್ಟನೆ ಮನಮುಟ್ಟುತ್ತವೆ: "ಹಿಂದುಮುಂದನು ನೋಡಿ ನಮೆವೆವು ನೆನೆಯುತಿಲ್ಲದ ಸುಖವನು". ಹಾಗೆ ನೋಡಿದರೆ ಈ ಸಾಲು ಅತ್ಯಂತ ಮನೋಹಾರಿಯಾಗಿ ಮೂಡಿರುವುದು ಅಡಿಗರಲ್ಲಿ ಮತ್ತು ಪುತಿನ ಅವರಲ್ಲಿ, ಅವರು ಈ ಕವನದ ಅನುವಾದ ಮಾಡಿರದಿದ್ದರೂ ! ಅಡಿಗರ, "ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ" ಎಂಬ ಸಾಲು ಷೆಲ್ಲಿಗಿಂತ ಒಂದು ಕೈ ಮೇಲೆಯೇ ಇದೆ. ಗೋಕುಲ ನಿರ್ಗಮನದಲ್ಲಿ ಪುತಿನ ಬರೆದಿರುವ ಈ ಸಾಲನ್ನು ಇವುಗಳ ಜೊತೆಯಿಟ್ಟು ನೋಡಿ, ಇದು ಉಳಿದೆಲ್ಲವನ್ನೂ ಮೀರಿಸುವಂತಿಲ್ಲವೇ: "ಬಯಕೆಯೊಳೇ ಬಾಳ್ ಕಳೆವುದು ಬಯಕೆಯು ದೊರೆತ ಚಣ/ ಬಯಸಿಕೆಯನೆ ಬಯಸುವ ತೆರವೇಕಹುದೆನ್ನ ಮನ"
ಇನ್ನು ಷೆಲ್ಲಿಯ Our sweetest songs are those that tell of saddest thought ಎಂಬುದರ ಪಂಚ್ ಗೋವಿಂದ ಪೈಗಳ "ಸಂದ ಬೇವಸವ ಬಗೆ ತಂದೊರೆವುವೆಮ್ಮ ಸ್ವಾದಿಷ್ಠ ಗೀತಂ" ಎಂಬ ಸಾಲಿನಲ್ಲಿ ಸಿಗುವುದಿಲ್ಲ. ಶ್ರೀಯವರ, "ನೊಂದ ಗೋಳನು ಹೇಳಿ ಕೊರೆವುವೆ ಇನಿಯ ಕವನಗಳೆಮ್ಮೊಳು" ಎನ್ನುವುದರಲ್ಲಿಯೂ ಅಷ್ಟು ಪಂಚ್ ಇಲ್ಲ, ಭಾವಸ್ಫುರಣೆಯಿಲ್ಲ. ಈ ಸಾಲು ನಿಜವಾಗಿಯೂ ಸತ್ತ್ವಪೂರ್ಣವಾಗಿ ಇನ್ನೊಂದು ತರದಲ್ಲಿ ಬಂದಿರುವುದು ಬೇಂದ್ರೆಯವರ ಈ ಕೆಳಗಿನ ಸಾಲುಗಳಲ್ಲಿ !
ಎನ್ನ ಪಾಡೆನಗಿರಲಿ, ಅದರ ಹಾಡನ್ನಷ್ಟೆ
ನೀಡುವೆನು ರಸಿಕ ನಿನಗೆ
ಕಲ್ಲುಸಕ್ಕರೆಯಂಥ ನಿನ್ನೆದೆಯು ಕರಗಿದರೆ
ಆ ಸವಿಯ ಹಣಿಸು ನನಗೆ
ವಿಶೇಷವೆಂದರೆ,ಇಬ್ಬರು ವಿಶಾರದರು ಒಂದೇ ಪದ್ಯವನ್ನು ಅನುವಾದಿಸಿದರೂ, ಒಂದೇ ಪದವನ್ನು ಬಳಸುವುದು ಇಲ್ಲ ಎಂಬಷ್ಟು ಕಡಮೆ ಎಂಬುದನ್ನು ಗಮನಿಸಿ.
ಹೀಗಿದೆ ಅನುವಾದಗಳ ಕಥೆ. ಅಂತೂ ಒಲಿಯದ ನಲ್ಲೆಯನ್ನು ಒಲಿಸಿಕೊಳ್ಳಲು ಹೆಣಗುವ ಹುಡುಗರಂತೆ ಬರೆಯುವವರು ಅನುವಾದಗಳನ್ನು ಮಾಡುತ್ತಲೇ ಇರುತ್ತಾರೆ.

No comments:

Post a Comment