ಋತುಮಾನ ವೆಬ್ ಸೈಟಿನವರು ಪ್ರಸ್ತುತಪಡಿಸುತ್ತಿರುವ ಪಂಪಭಾರತದ ಒಂದು ಭಾಗದ ಗಮಕ ವಾಚನ ಮತ್ತು ವ್ಯಾಖ್ಯಾನಕ್ಕೆ ನಾನು ಬರೆದಿರುವ ಪುಟ್ಟ ಪೀಠಿಕೆಯಿದು,ಟಿವಿ ವೆಂಕಟಾಚಲ ಶಾಸ್ತ್ರಿ, ಕೆ ಆರ್ ಗಣೇಶ್, ಸಿಪಿಕೆ, ಚಂದ್ರಶೇಖರ ಕೆದ್ಲಾಯ ಮುಂತಾದ ಮಹನೀಯರು ವೀಡಿಯೊದಲ್ಲಿದ್ದಾರೆ. ಗಮಕಕ್ಕೆ ಪ್ರಸ್ತಾವನೆಯಾಗಿ ಇದನ್ನು ಬರೆದಿರುವುದರಿಂದ ಒಂದು ಲೇಖನದ ಸೊಗಸು ಕಾಣಲಾರದೇನೋ ಎಂಬ ಹೆದರಿಕೆ, ಅರ್ಜೆಂಟಿನಲ್ಲಿ ಮಾಡಿದ ಅಡುಗೆ ಬೇರೆ, ಈ ಸಂಕೋಚದೊಂದಿಗೇ ಇದನ್ನು ನಿಮ್ಮ ಮುಂದಿಡುತ್ತಿದ್ದೇನೆ:
ಪಂಪಭಾರತದಲ್ಲಿ ಭೀಷ್ಮ ಸೇನಾಧಿಪತ್ಯದ ಪ್ರಸಂಗವು ರಸವತ್ತಾದ ಭಾಗ. ಇಲ್ಲಿನ ಮೂರ್ನಾಲ್ಕು ಪದ್ಯಗಳು ಹತ್ತು ಹಲವು ಕಾರಣಗಳಿಗೆ ಪ್ರಸಿದ್ಧಿ ಪಡೆದಿವೆ, ಚರ್ಚೆಗಳನ್ನೂ ಎಬ್ಬಿಸಿವೆ. ಭೀಷ್ಮರ ನಿವಾಸಕ್ಕೆ ರಾತ್ರಿಯೇ ತೆರಳಿ, ಅವರ ಮನವೊಲಿಸಿ ಬಂದು, ಸಹಸ್ರ ಕಿರಣೋದಯವಾದಾಗ(ಬೆಳಗಾದಾಗ) ಅವರಿಗೆ ಸಕಲ ರಾಜವೈಭೋಗಗಳೊಂದಿಗೆ ಶಾಸ್ತ್ರೋಕ್ತವಾಗಿ ವೀರಪಟ್ಟವನ್ನು ಕಟ್ಟಲು ಧುರ್ಯೋಧನ ಹೊರಡುತ್ತಾನೆ. ಆ ಭೀಷ್ಮರಾದರೂ ಎಂಥವರು ? ಒಂದು ಕಾಲದಲ್ಲಿ ಪರಶುರಾಮನನ್ನೇ ಅಂಜಿಸಿದ ವೀರರು. ಅಂಥ ವೀರಾಗ್ರಣಿಯೇ ಸೇನಾಧಿಪತಿಯಾಗಿ ಬಂದು ನಿಂತರೆ, 'ಪಗೆವರನು ಎನ್ನ ಮಂಚದ ಕಾಲೊಳ್ ಕಟ್ಟಿದಂತೆಯೇ' ಎಂದು ಗರ್ವಿಸಿ ಉಬ್ಬುತ್ತಾನೆ ಧುರ್ಯೋಧನ.
ಕರ್ಣನಿಗೋ ಯೌವನದ ಸಹಜ ದುಡುಕು, ತನಗೆ ಎಷ್ಟೆಲ್ಲವನ್ನೂ ಕೊಟ್ಟ ದೊರೆಗೆ ಸ್ವಾಮಿನಿಷ್ಠೆಯನ್ನು ತೋರಿಸುವ ತವಕ, ಹಿಂದೊಮ್ಮೆ ಪಾಂಡವರು ತನ್ನ ಸೋದರರೆಂದು ತಿಳಿದಾಗ, ಅತ್ತ ತನ್ನವರನ್ನೂ ಕೊಲ್ಲಲಾರೆ ಇತ್ತ ತನ್ನನ್ನು ಪೂರ್ಣವಾಗಿ ನಂಬಿದ ಸುಯೋಧನನ್ನೂ ಬಿಡಲಾರೆ ಎಂಬ ಭಾವದಲ್ಲಿ, "ನನ್ನೊಡೆಯನಿಗಿಂತ ಮೊದಲು ನಾನೇ ಪರಾಕ್ರಮವನ್ನು ಅಂಗೀಕರಿಸಿ ಸಾಯುತ್ತೇನೆ(ತಱಸಂದುದ್ಧತ ವೈರಿ ಭೂಪ ಬಲದೊಡ್ಡಳ್ಳಾಡೆ ಲೆಕ್ಕಕ್ಕೆ ತಳ್ತಿಱದೆನ್ನಾಳ್ದನಿವಾನೆ ಮುಂಚೆ ನಿಱಪೆಂ ಕೆಯ್ಕೊಂಡು ಕಟ್ಟಾಯಮಂ)" ಎಂದು ನಿಷ್ಕರ್ಷೆ ಮಾಡಿಕೊಂಡವನಾತ, ಅಷ್ಟಾಗಿ ಹೆಜ್ಜೆ ಹೆಜ್ಜೆಗೂ ಜಾತಿಯ ಹೆಸರಿನಲ್ಲಿ ಆದ ಅವಮಾನಗಳಿಂದ ಮಡುಗಟ್ಟಿದ್ದ ಅಸಹಾಯಕತೆ, ಕೀಳರಿಮೆ ಮತ್ತು ಕ್ರೋಧಗಳು ಬೇರೆ ಇದ್ದವು .
ಇಂಥಹಾ ಕರ್ಣನಿಗೆ ತನ್ನ ಗೆಳೆಯ, ತನ್ನ ದೊರೆ ತನ್ನನ್ನು ಬಿಟ್ಟು, ಹೋಗಿ ಹೋಗಿ ಒಬ್ಬ ಮುದುಕರಿಗೆ ಪಟ್ಟಗಟ್ಟಿದಾಗ ಬರಬಾರದ ಕೋಪವೇ ಬರುತ್ತದೆ. ತಾನಾದರೋ ಶತ್ರುಗಳ ನಿಟ್ಟೆಲುಬುಗಳನ್ನು ಪುಡಿಮಾಡಬಲ್ಲವನು, ಅದುಬಿಟ್ಟು ಈ ಹಣ್ಣುಹಣ್ಣು ಮುದುಕರಿಂದೇನಾದೀತು ಎಂಬುದು ಅವನ ವ್ಯಥೆ. ಭೀಷ್ಮರು ಕಣ್ಣು ಕಾಣದ ಮುದುಕನಂತೆ, ಬಿಲ್ಲನ್ನು ಊರುಗೋಲಾಗಿ ಹಿಡಿಯಬೇಕಾದ ದುರ್ಬಲ ವೃದ್ಧರಂತೆ(ಅವರು ಪಿಡಿದ ಬಿಲ್ಲೆ ದಂಟಿಂಗೆಣೆ) ಅವನಿಗೆ ಕಾಣುತ್ತಾರೆ. ಅವರ ಪೌರುಷ ದೇವಿ ಮೈಮೇಲೆ ಬಂದವರ ಆವೇಶದಂತೆ, ಕಟ್ಟುಕಥೆ(ಇಲ್ಲಿ ಬರುವ "ಭಗವತಿಯೇಱುವೇೞ್ವ ತೆರದಿಂ ಕಥೆಯಾಯ್ತಿವರೇಱು" ಎಂಬ ಸಾಲಿನ ಅರ್ಥವೇನು ಎಂಬುದರ ಬಗ್ಗೆ ವಿದ್ವದ್ವಲಯದಲ್ಲಿ ಸಾಕಷ್ಟು ಚರ್ಚೆಗಳಾಗಿವೆ). ಇಂತಹಾ ಮುದುಕರನ್ನು ಯುದ್ಧರಂಗಕ್ಕೆ ಒಯ್ದರೆ ಶತ್ರುಗಳು ಬಿದ್ದು ಬಿದ್ದು ನಕ್ಕಾರು ಅನಿಸುತ್ತದೆ ಕರ್ಣನಿಗೆ, ಇದೆಲ್ಲವನ್ನೂ ಬಾಯಿಬಿಟ್ಟು ಹೇಳಿಯೂ ಬಿಡುತ್ತಾನೆ.
ಇಷ್ಟಾದಾಗ ದ್ರೋಣರು ತಾವೇನು ಕಮ್ಮಿ ಕೋಪದವರಲ್ಲ ಎಂಬಂತೆ ಕೆರಳಿಬಿಡುತ್ತಾರೆ. ಈ ಕೋಪೋದ್ರೇಕದಲ್ಲಿ ಜಾತಿ ಬಂದುಬಿಡುತ್ತದೆ ! ಸತ್ಕುಲಪ್ರಸೂತರಾದ ಭೀಷ್ಮರನ್ನು ಹೀಗೆ ಆಡಿಕೊಳ್ಳಬೇಕಾದರೆ ಹೀನಕುಲದವನದ್ದೇ ನಾಲಗೆಯಾಗಬೇಕು ಎಂದವರ ಎಣಿಕೆ. ನಾಲಗೆ ಕುಲಮಂ ತುಬ್ಬುವುದು(ಪ್ರಕಟಪಡಿಸುವುದು) ಎಂಬ ನಾಣ್ಣುಡಿ ನಿನ್ನಂಥವರಿಗೇ ಇರುವುದು ಎಂದಾಡಿಬಿಡುತ್ತಾರೆ.
ಅಲ್ಲಿಗೆ ಕರ್ಣನ ಆತ್ಮಾಭಿಮಾನವನ್ನು ಬಡಿದೆಬ್ಬಿಸಿದಂತಾಗುತ್ತದೆ. ದ್ರೋಣನ ಕರ್ಣಕಠೋರ ವಚನಗಳಿಗೆ ಉತ್ತರ ಪಟಪಟನೆ ಅವನ ಬಾಯಿಯಿಂದ ಹೊರಡುತ್ತದೆ. "ಕುಲಮನೆ ಮುನ್ನಂ ಉಗ್ಗಡಿಪಿರೇಂ ಗಳ" (ಬಾಯಿ ತೆಗೆದರೆ ಮೊದಲು ಕುಲವನ್ನೇ ಕುರಿತು ದೊಡ್ಡದಾಗಿ ಯಾಕೆ ಹೇಳುತ್ತೀರಿ ಸ್ವಾಮೀ?) ಎನ್ನುತ್ತಾನೆ. ಹಿಂದೊಮ್ಮೆ ಧನುರ್ವಿದ್ಯಾ ಪ್ರದರ್ಶನವಾದಾಗಲೂ, ಕರ್ಣ ಅರ್ಜುನನ ಜೊತೆ ಸ್ಪರ್ಧಿಸಹೊರಟಾಗ ಅವನು ಕುಲದ ಕಾರಣದಿಂದ ಅರ್ಜುನನಿಗೆ ಸಮನಲ್ಲ ಎಂಬ ಕಟುನಿಂದೆ ಕೇಳಿಬಂದಿತ್ತು. ಆಗ ಕರ್ಣನ ಪರವಾಗಿ ಧುರ್ಯೋಧನನೇ ಮಾತಾಡಿ, "ಕುಲಮೆಂಬುದುಂಟೆ ಬೀರಮೆ ಕುಲಮಲ್ಲದೆ ಕುಲಮನಿಂತು ಪಿಕ್ಕದಿರಿಂ"(ಶೌರ್ಯವೇ ಕುಲವಲ್ಲದೆ ಕುಲವೆಂಬುದು ಬೇರೆಯುಂಟೇ?) ಎಂದಿದ್ದ. ಅದು ಕರ್ಣನಿಗೆ ನೆನಪಿದ್ದಿರಬೇಕು. ಮುಂಬರಿದು, "ನಿಮ್ಮ ಕುಲಂಗಳು ಆಂತು ಮಾರ್ಮಲೆವನನು ಅಟ್ಟಿ ತಿಂಬುವೆ" ಅಂತ ಸವಾಲು ಹಾಕುತ್ತಾನೆ(ಯುದ್ಧದಲ್ಲಿ ಎದುರಾಳಿ ಬಾಣಗಳ ಮಳೆಗರೆದಾಗ, "ನಾನು ಇಂಥಹಾ ಕುಲದವನು" ಅಂತ ಜಂಬ ಕೊಚ್ಚಿದರೆ, ನಿಮ್ಮ ಕುಲವೇನು ಯುದ್ಧ ಗೆದ್ದು ಕೊಡುತ್ತದೆಯೇ ಮಾರಾಯರೇ ಎಂಬ ಭಾವ).
ಕೊನೆಗೆ "ಕುಲಂ ಕುಲಮಲ್ತು, ಚಲಂ ಕುಲಂ,ಗುಣಂ ಕುಲಂ, ಅಭಿಮಾನಮೊಂದೆ ಕುಲಂ,ಅಣ್ಮು ಕುಲಂ"(ಹುಟ್ಟಿನಿಂದ ಬಂದದ್ದು ಕುಲವಲ್ಲ. ಚಲ, ಸದ್ಗುಣ, ಆತ್ಮಾಭಿಮಾನ, ಪರಾಕ್ರಮಗಳೇ ಕುಲ) ಎಂದುಸುರುತ್ತಾನೆ. ಪಂಪನ ಸಾಮಾಜಿಕ ಪ್ರಜ್ಞೆಗೆ ಇಲ್ಲಿ ಕರ್ಣ ಬಾಯಾಗುತ್ತಾನೆ. ಕಡೆಗೆ, ಭೀಷ್ಮನು ಪಾಂಡವರನ್ನು ಗೆದ್ದರೆ ನಾನು ತಪಸ್ಸಿಗೆ ಹೋಗಿಬಿಡುತ್ತೇನೆ ಅಂತ ಬೇರೆ ಹೇಳುತ್ತಾನೆ!
ಇಷ್ಟಾದ ಮೇಲೆ ಭೀಷ್ಮರು ತಣ್ಣಗೆ ಕರ್ಣನನ್ನು taunt ಮಾಡುವಂತೆ ಮಾತಾಡುತ್ತಾರೆ, 'ನಿನಗಿರುವಷ್ಟು ಕಲಿತನದ ಉಕ್ಕು, ಜವ್ವನದ ಸೊಕ್ಕು, ರಾಜನ ಗೆಳೆತನ, ತೋಳ್ಬಲದ ಶಕ್ತಿ ನನಗೆಲ್ಲಿದೆಯಪ್ಪಾ' ಎನ್ನುತ್ತಾರೆ. ಅಲ್ಲಿ ಅವರಾಡುವ "ಸೂೞ್ಪಡೆಯಲಪ್ಪುದು ಕಾಣ ಮಹಾಜಿರಂಗದೊಳ್" ಎಂಬ ಮಾತೂ ಬಹುಪ್ರಸಿದ್ಧ. "ಈ ಮಹಾಯುದ್ಧದಲ್ಲಿ ನಮಗೆ ಸಿಗುವುದು ವಿಜಯವಲ್ಲ, ನಮ್ಮದೇನಿದ್ದರೂ ಒಬ್ಬರಾದ ಮೇಲೆ ಒಬ್ಬರು ಪತನ ಹೊಂದುವ ಕೆಲಸ, ಸಾಯುವುದಕ್ಕೆ ನಮ್ಮ ಸರದಿ ಯಾವಾಗ ಬರುತ್ತದೆ ಅಂತ ಕಾಯುವ ಕೆಲಸ. ಹೀಗಾಗಿ, ಜಾಸ್ತಿ ಹಾರಾಡಬೇಡ, ನಿನ್ನ ಸರದಿಯೂ ಬಂದೇ ಬರುತ್ತದೆ" ಎಂಬ ವ್ಯಂಗ್ಯ ಭೀಷ್ಮರದು. ಇಷ್ಟು ಹೇಳಿ, "ಚಕ್ರವನ್ನು ಹಿಡಿಯುವುದಿಲ್ಲವೆಂದು ಪ್ರತಿಜ್ಞೆ ಮಾಡಿರುವ ಕೃಷ್ಣನ ಕೈಯಲ್ಲಿ ಚಕ್ರ ಹಿಡಿಸುತ್ತೇನೆ, ಅರ್ಜುನನ ರಥವು ಎಂಟು ಗಾವುದ ದೂರ ಹೋಗುವಂತೆ ಬಾಣಪ್ರಯೋಗ ಮಾಡುತ್ತೇನೆ, ಪ್ರತಿದಿನವೂ ಯುದ್ಧದಲ್ಲಿ ಹತ್ತು ಸಾವಿರ ಯೋಧರನ್ನು ಧರೆಗುರುಳಿಸುತ್ತೇನೆ" ಎಂದು ಭೀಷ್ಮರು ಮಹಾಪ್ರತಿಜ್ಞಾರೂಢರಾಗುವಲ್ಲಿಗೆ ಈ ಪ್ರಸಂಗ ಮುಗಿಯುತ್ತದೆ.
ಪೂರಕ ಓದಿಗೆ :
ಮುಳಿಯ ತಿಮ್ಮಪ್ಪಯ್ಯನವರ "ನಾಡೋಜ ಪಂಪ" ಎಂಬ ಅಧ್ಭುತ ಕೃತಿ
ವಿದ್ವಾನ್ ಕೆವಿ ಕೃಷ್ಣ ಭಟ್ಟರ 'ಕರ್ಣ ರಸಾಯನಂ' ಎಂಬ ಪುಸ್ತಕ
ಎಂ ಎಂ ಕಲಬುರ್ಗಿಯವರ "ನನ್ನಿಯೊಳಿನತನಯಂ" ಎಂಬ ಲೇಖನ
ಶಂಭಾ ಜೋಶಿಯವರ, 'ಕರ್ಣನ ಮೂರು ಚಿತ್ರಗಳು' ಎಂಬ ಲೇಖನ
"ಭಗವತಿಯೇಱುವೇೞ್ವ ತೆರದಿಂ ಕಥೆಯಾಯ್ತಿವರೇಱು" ಎಂಬ ಸಾಲಿನ ಬಗ್ಗೆ ಡಿ ಎಲ್ ನರಸಿಂಹಾಚಾರ್, ಟಿ.ವಿ. ವೆಂಕಟಾಚಲ ಶಾಸ್ತ್ರಿ, ಚಿದಾನಂದ ಮೂರ್ತಿ ಇವರೆಲ್ಲ ಬರೆದಿರುವ ಲೇಖನಗಳು
ವಾಗರ್ಥ ಬಳಗದಲ್ಲಿ ಈ ಪದ್ಯದ ಸೂಕ್ಷ್ಮಗಳ ಬಗ್ಗೆ ನಡೆದ ಚರ್ಚೆಗಳು(https://www.facebook.com/groups/vagartha/permalink/1535529626537188/)
ಗಮಕದ ವೀಡಿಯೊ ಇಲ್ಲಿದೆ :
No comments:
Post a Comment