ಜಟ್ಟ ಸಿನಿಮಾ ನೋಡಿ ನಾನು ಬರೆದ ಪುಟ್ಟ ವಿಮರ್ಶೆಯಂತ ಬರಹ :
ಸುಮಾರು 17 ವರ್ಷಗಳ ಹಿಂದಿನ ಮಾತು. ನಾನಾ ಪಾಟೇಕರ್ ನ ಬಾಯಿ ಹಳಿ ತಪ್ಪಿದ ರೈಲೊಂದು ಆಗುಂಬೆ ಘಾಟಿ ಇಳಿದ ಹಾಗೆ ಓಡುತ್ತಿದ್ದ ಕಾಲ ಅದು. ಅವನದ್ದು ಯಶವಂತ್ ಅಂತೊಂದು ಸಿನಿಮಾ ಬಂದಿತ್ತು. ಅದರಲ್ಲೂ ಎಂದಿನಂತೆ ಆತ ಉಗ್ರ ಕೋಪಿ. ಸಾಲಾ ಏಕ್ ಮಚ್ಚರ್ ಆದ್ಮಿ ಕೊ ಹಿಜಡಾ ಬನಾ ದೇತಾ ಹೈ ಅನ್ನುವ ಹಾಡು(!!) ಅದರಲ್ಲಿತ್ತು. ನಮಗೆಲ್ಲ ತುಂಬ ಇಷ್ಟವಾದ ಹಾಡು ಅದು. ಸುಬಹ್ ನಿಕಲೋ, ಭೀಡ್ ಕಾ ಏಕ್ ಹಿಸ್ಸಾ ಬನೋ ಅಂತ ಉಗಿದು , ಶಾಮ್ ಕೊ ವಾಪಸ್ ಘರ್ ಆ ಜಾವೋ, ದಾರೂ ಪಿಯೋ ,ಬಚ್ಚೇ ಪೈದಾ ಕರೋ ಔರ್ ಫಿರ್ ಮರ್ ಜಾವೋ ಅಂತ ಕುಟುಕಿ, ಕ್ಯೋಂಕಿ ಆತ್ಮ ಔರ್ ಅಂದರ್ ಕಾ ಇನ್ಸಾನ್ ಮರ್ ಚುಕಾ ಹೈ ಅಂತ ಮುಗಿಸುತ್ತಿದ್ದ ವಿಚಿತ್ರ ಸಾಲುಗಳು, ಬಿದ್ದು ಸಾಯ್ರಿ ಆದ್ರೆ ಆ ಜಲಪಾತದ ತರಾ ಬಿದ್ದು ಸಾಯ್ರಿ – ಅದ್ರ ಅಂದ ನಾದ್ರೂ ಉಳಿಸ್ಕೊಳ್ಳುತ್ತೆ ಆ ಜಲಪಾತ ಎಷ್ಟೇ ಎತ್ತರದಿಂದ ಬಿದ್ರೂ ಅನ್ನೋ ಅರ್ಥದ ಸಾಲುಗಳೂ ಇತ್ತು ಅದ್ರಲ್ಲಿ. ಈ ಸಾಲುಗಳನ್ನ ಕೇಳುವಾಗ ನಮ್ಮ ಕಣ್ಣಲ್ಲಿ ಮಿಂಚಿನ ಸಂಚಾರ. ಗಿರಿ ಅಣ್ಣನಿಗೂ ಅದು ವಿಪರೀತ ಹಿಡಿಸಿದ ಸಾಲು ಅಂತ ನೆನಪು.
ನಿಗಿ ನಿಗಿ ಕೆಂಡದಂತ ನಾನಾ ಪಾಟೇಕರ್ ಅವರಿಗೆ ಹಿಡಿಸಿದ್ದು ಸುಮ್ಮನೆ ಏನಲ್ಲ ಅಂತ ಈಗೀಗ ಗೊತ್ತಾಗ್ತಾ ಇದೆ. ಅವರ ಸಿನೆಮಾಗಳಲ್ಲಿ ಅಂತದೊಂದು ಕೆಂಡ ನಿಗಿ ನಿಗಿ ಉರಿಯುತ್ತ ಇರುತ್ತದೆ, ಬೂದಿ ಮುಚ್ಚುವ ಕೆಲಸ ಅವರಂತೂ ಮಾಡುವುದಿಲ್ಲ. ಕಲ್ಲಂಗಡಿ ಹಣ್ಣು ಮಾರುವ ವ್ಯಾಪಾರದಲ್ಲಿ ಕೆಂಡ ಯಾವನಿಗೆ ಬೇಕು ಅಂತಲೂ ಅವರು ಕೇಳಿದವರಲ್ಲ. ಸಂತೋಷವೂ ಅದೇ ಬೇಸರವೂ ಅದೇ!! ಜಟ್ಟದಲ್ಲೂ ಹಿಗ್ಗಾ ಮುಗ್ಗಾ ಚಚ್ಚಿದ್ದಾರೆ, ನಾನಾ ಪಾಟೇಕರ್ ಜಪ್ಪಿದಂತೆ !! ಗಂಡಸರ ಬಗ್ಗೆ ಹೆಂಗಸರಿಗೂ ಇರದಷ್ಟು ಸಿಟ್ಟು ಅವರ ಪೆನ್ನಿಗೆ ಇದೆ ಅನ್ನುವುದೂ ಮೆಚ್ಚುಗೆಯ ಮಾತೇ. ಕಾಡಿನಂತ ಚಿತ್ರ ರಂಗದಲ್ಲಿ ಕಾಡಿನ ಬಗ್ಗೆ ಮಾತಾಡಿದ್ದಾರೆ, ಅಪರೂಪಕ್ಕೆ ಕಾಡುವ ಸಿನಿಮಾ ಮಾಡಿದ್ದಾರೆ. ಕಾಡಿನ ಸಿನಿಮಾ ಕಾಡುವ ಸಿನಿಮಾವೂ ಆಗುತ್ತದೆ Werner Herzog ನ ಸಿನೆಮಾಗಳಲ್ಲಿ ಆದಂತೆ(ಅವನ ಈ ಸಿನಿಮಾ ನನಗೆ ತುಂಬಾ ಇಷ್ಟ ). ಆತ್ಮ ಔರ್ ಅಂದರ್ ಕಾ ಇನ್ಸಾನ್ ಮರ್ ಚುಕಾ ಹೈ ಅಂದಂತಿದ್ದ ಗಾಂಧಿ ನಗರಕ್ಕೆ ಇಂತಹ ಚಿತ್ರಗಳು ಬೇಕಿತ್ತು, ಬಾಕ್ಸ್ ಆಫೀಸ್ನಲ್ಲಿ ಬಿದ್ದರೂ ಜಲಪಾತದ ತರ ಬೀಳುವರು ಬೇಕಿತ್ತು.
ಕೆಲವೇ ಪಾತ್ರಗಳನ್ನ ಇಟ್ಕೊಂಡು, ನಾಯಕ ನಟರು ಬೇಡ ನಟರು ಸಾಕು ಅಂದ್ಕೊಂಡು ಸಿನಿಮಾ ಮಾಡಿದ್ದಾರೆ. ಅಡಿಗರ ಕವನಗಳಲ್ಲಿ ತುಂಬ ಸಿಟ್ಟಿತ್ತು, ಸಿದ್ದಲಿಂಗಯ್ಯ ಅಂತೂ ಇಕ್ರಲಾ ಒದೀರ್ಲಾ ಅಂತಲೇ ಸಿಟ್ಟಾಗಿದ್ದರು, ಇವರ ಸಿನಿಮಾ ಗಳಲ್ಲೂ ಇರುವುದು ಅಂತದ್ದೇ ಸಿಟ್ಟು, ಸಿಟ್ಟು ಗಿರಿರಾಜರ ಸ್ಥಾಯಿ ಭಾವ. ತೀರ ನವ್ಯದವರ ತರ ಸೆಕ್ಸ್ ಬಗ್ಗೆ ಅಷ್ಟೊಂದು ಮಾತಾಡಿಯೂ ಹುಡುಗಿಯರ ಕೈಲೂ ಸಿನಿಮಾ ಚೆನ್ನಾಗಿದೆ ಅನ್ನಿಸಿಕೊಂಡಿದ್ದಾರೆ .
ಗೇರು ಸೊಪ್ಪದ ತಾಣಗಳಲ್ಲಿ ಆರದ ಗಾಯಕ್ಕೆ ಮುಲಾಮು ಹುಡುಕುತ್ತಿರುವ ಜಟ್ಟ, ಗಾಯಕ್ಕೆ ಉಪ್ಪು ಹಾಕಿ ಗುಣ ಮಾಡುವ ಸ್ವಭಾವದ ಸಾಗರಿಕ, ಒಂಥರಾ ನೋಲನ್ ಸಿನಿಮಾದಲ್ಲಿ ಬ್ಯಾಟ್ಮ್ಯಾನ್ ಮತ್ತು ಜೋಕರ್ ಡಿಕ್ಕಿ ಹೊಡೆದ ಹಾಗೆ ಮುಖಾ ಮುಖಿಯಾಗುತ್ತಾರೆ. ಬೃಂದಾವನವೇ ಬೆಸ್ಟ್ ಫಿಲಮ್ಮು ಅನ್ನುವವನಿಗೂ ಲೂಸಿಯ ಬಿಟ್ರೆ ಬೇರೆ ಇಲ್ಲ ಅನ್ನುವವನಿಗೂ ಇರುವಷ್ಟೇ ವ್ಯತ್ಯಾಸ ಅವರ ನಡುವೆ. ನಂಬಿದ್ದಕ್ಕೆ ಅಂಟುವ ಆತ, ಕೆಣಕುವ ಆಕೆ, ಸುಲಭಕ್ಕೆ ಮುಗಿಯದ ಜಗಳ.
ಸುಕೃತ ಪಳಗಿದ(!) ನಟಿಯಂತೆ ನಟಿಸಿದ್ದಾರೆ, ಸೊಕ್ಕು, ಸೆಡವು,ಹಟ ಎಲ್ಲ ಚೆನ್ನಾಗಿ ಕಂಡಿದೆ ಸುಕೃತ ನಟನೆಯಲ್ಲಿ . ಕಿಶೋರ್ ಎಂದಿನಂತೆ ಲೀಲಾ ಜಾಲ , ಎಂದಿಗಿಂತ ಸ್ವಲ್ಪ ಹೆಚ್ಚೇ ಲೀಲಾ ಜಾಲ , ಇಂತಹ ನಟರು ನಮಗೆ ಬೇಕೇ ಬೇಕು ಅನ್ನಿಸುವಂತ ನಟನೆ . ಪ್ರೇಂ ಕುಮಾರ್ ಮತ್ತು ಪಾವನ ಚಿಕ್ಕ ಚೊಕ್ಕ ಪಾತ್ರಗಳಲ್ಲಿ ಸರಾಗವಾಗಿ ನಟಿಸಿದ್ದಾರೆ.
Orson Welles ಮೊದಲ ಬಾರಿ Citizen Kane ತೋರಿಸಿದಾಗ ಈ ಪುಣ್ಯಾತ್ಮ ಹಾಲಿವುಡ್ ನ ಎಲ್ಲ ನಿಯಮಗಳನ್ನ ಮುರಿದಿದ್ದಾನೆ ಅಂದರಂತೆ ಯಾರೋ . ಮುರಿಯೋದಕ್ಕೆ ನಂಗೆ ಈ ರೂಲ್ಸು ಯಾವ್ದು ಅಂತ ಗೊತ್ತೇ ಇರ್ಲಿಲ್ಲ ಅಂದನಂತೆ ಆತ. ಅಜ್ಞಾನವೇ ಪರಮ ಸುಖ ಅಂದಂತೆ. ಗಿರಿರಾಜ್ ಕೂಡ ಹಾಗೆ ಒಂದು ಅರ್ಥದಲ್ಲಿ. ಇದು ಶೇಷಾದ್ರಿಯೋ, ಕಾಸರವಳ್ಳಿಯೋ ಸಿಟ್ಟಿಂದ ಮಾಡಿದ ಸಿನಿಮಾ ದ ಹಾಗಿದೆ. ಚೆನ್ನಾಗೇ ಇದೆ, ART ಫಿಲಂಗಳು ಚೆನ್ನಾಗಿರುವಂತೆ, ದ್ವೀಪವೋ ಅತಿಥಿಯೋ ಎಲ್ಲರಿಗೂ ಇಷ್ಟ ಆದಂತೆ. ಮುಂದೆ ಎಲ್ಲ ತರದ ಸಿನಿಮಾಗಳನ್ನೂ ಮಾಡಿ. ಬ್ರಿಜ್ ಸಿನಿಮಾವೇ ಮುಂದೆ ಕಮರ್ಷಿಯಲ್ ಆಗಲಿ. ಇದು ಕಮರ್ಷಿಯಲ್ ಅಲ್ಲ ಅನ್ನಿಸುವಂತ ಕಮರ್ಷಿಯಲ್ ಸಿನೆಮಾಗಳನ್ನ ಮಾಡಿ, ಹಾಗಂತ ಹಾರೈಸುತ್ತ……….!!(ಇದನ್ನೆಲ್ಲ ಒಂದು ಭಾಷಣದಲ್ಲಿ ಇನ್ನಷ್ಟು ಸೊಗಸಾಗಿ ಹೇಳಬಹುದಿತ್ತೇನೋ, ನನ್ನ ಭಾಷಣಗಳನ್ನ ನಿಮ್ಮಲ್ಲಿ ಕೆಲವರು ನೋಡೇ ಇದ್ದೀರಿ ! ಇದನ್ನೂ ಹಾಗೆ ಕಲ್ಪಿಸಿಕೊಳ್ಳಿ !)
No comments:
Post a Comment