Tuesday, 5 January 2016

ಇವರು ಯಾರು ಬಲ್ಲಿರೇನು?

ನನ್ನ ಪ್ರೇಮದ ಹುಡುಗಿ ತಾವರೆಯ ನಸುಕೆಂಪು
ತಾವರೆಯ ಹೊಸ ಅರಳ ಹೊಳೆವ ಕೆಂಪು
ನನ್ನ ಪ್ರೇಮದ ಹುಡುಗಿ ಕೊಳಲ ಮೆಲುನುಡಿಯಿಂಪು
ಕೊಳಲು ಮೋಹಿಸಿ ನುಡಿವ ಗಾನದಿಂಪು
ಇದೇನು, ಕವಿತೆ ಗಿವೆತೆ ಶುರು ಹಚ್ಕೊಂಡಿದಾನೆ ಇವನು ಅಂತ ಬೆರಗಾಗಬೇಡಿ. ಇದು ನಾನು ಬರೆದದ್ದಲ್ಲ, ಈಗ ಹೇಳಿ, ಪಕ್ಕನೆ ನೋಡಿದರೆ ಇದು ನಮ್ಮ ನರಸಿಂಹಸ್ವಾಮಿಗಳು ಬರೆದ ಸಾಲುಗಳ ಹಾಗೆ ಇಲ್ಲವೇ ? ಆದರೆ ಬರೆದದ್ದು ಅವರಲ್ಲ ! ಇದು ಮೂಲತಃ ಕನ್ನಡದ ಪದ್ಯವೂ ಅಲ್ಲ. ಇದು ಬಿ ಎಂ ಶ್ರೀ ಅವರು ಮಾಡಿದ್ದ ಅನುವಾದ, Robert Burns ಕವಿಯ ಮೂಲದ ಸಾಲುಗಳು ಹೀಗಿವೆ :
O my Luve's like a red, red rose,
That's newly sprung in June:
O my Luve's like the melodie,
That's sweetly play'd in tune
ಬರ್ನ್ಸ್ ಕನ್ನಡದಲ್ಲಿ ಬರೆದಿದ್ದರೆ ಹೀಗೇ ಬರೀತಿದ್ದ ಅನ್ನುವಷ್ಟು ನವಿರಾಗಿ, ಹಿತವಾಗಿದೆ ಅನುವಾದ. ನರಸಿಂಹಸ್ವಾಮಿಗಳೂ ಇದೇ ಬರ್ನ್ಸ್ ಕವಿಯ ಅಭಿಮಾನಿ ಆ ಮಾತು ಬೇರೆ. ವಿಷಯ ಅದಲ್ಲ. ಬಿ ಎಂ ಶ್ರೀ ಅವರ ಹುಟ್ಟು ಹಬ್ಬ ಮೊನ್ನೆ. ಯಾರ್ಯಾರೋ ಕೆಲಸಕ್ಕೆ ಬಾರದ ಸೆಲೆಬ್ರಿಟಿಗಳಿಗೆಲ್ಲಾ ಶುಭಾಶಯ ಕೋರುತ್ತೇವಂತೆ ,ಇಂತಹ ಮಹಾಮಹಿಮರ ಬಗ್ಗೆ ಬಹಳ ಜನಕ್ಕೆ ಗೊತ್ತೇ ಇಲ್ವಲ್ಲಪ್ಪ ಅಂತ ಬೇಸರ ಮತ್ತು ಆ ನೆಪಕ್ಕಾದರೂ ಅವರ ಬಗ್ಗೆ ಬರೀಬಹುದಲ್ಲ ಅನ್ನುವ ಖುಷಿ ನನಗೆ . ಇರಲಿ. ಬಿ ಎಂ ಶ್ರೀ ಅಂದರೆ ಬಿ ಎಂ ಶ್ರೀಕಂಠಯ್ಯ. ಇವರು ಹೆಚ್ಚು ಕಮ್ಮಿ ಗಾಂಧೀಜಿಯ ಕಾಲದಲ್ಲಿ ಇದ್ದವರು . ಮಾಸ್ತಿ, ಕುವೆಂಪು, ಎಸ್.ವಿ. ರಂಗಣ್ಣ, ಜಿ.ಪಿ. ರಾಜರತ್ನಂ ,ಡಿ. ಎಲ್. ಎನ್, ತೀ ನಂ ಶ್ರೀ, ಮೂರ್ತಿರಾಯರು ಎಲ್ಲ ಇವರ ಶಿಷ್ಯರೇ. ಬನ್ನಿ, ಫ್ಲ್ಯಾಶ್ ಬ್ಯಾಕ್ ಇಗೆ ಹೋಗೋಣ.
"ಸ್ವಲ್ಪ ಇಂಗ್ಲಿಷ್ ಬಲ್ಲವರಿಗೂ ತಪ್ಪು ತಪ್ಪು ಇಂಗ್ಲಿಷ್‌ನಲ್ಲಿ ಬೆಪ್ಪಾಗಿ ಮಾತನಾಡುವುದೇ ಒಪ್ಪು, ಕನ್ನಡದಲ್ಲಿ ಮಾತನಾಡುವುದು ಹೀನಾಯ, ಕನ್ನಡದಲ್ಲಿ ಮಾತಾಡಿದರೆ ಮರ್ಯಾದೆ ಕಮ್ಮಿ ಅನ್ನುವ ಗೊಡ್ಡುನಂಬಿಕೆ, ’ಓದುವುದಕ್ಕೆ ಕನ್ನಡದಲ್ಲಿ ಏನಿದೆ?’ ಎಂದೇ ಬಹು ಮಂದಿಯ ಭಾವನೆ. ಕನ್ನಡದಲ್ಲಿ ಬರೆಯುವುದು-ಮಾತನಾಡುವುದು ಹಾಸ್ಯಕ್ಕೆ ವಸ್ತು. ಇಂಗ್ಲಿಷೆಂಬ ಬಿನ್ನಾಣಗಿತ್ತಿಗೆ ಮರುಳಾದವರಿಗೆ ಕನ್ನಡ ಎನ್ನುವ ಲಾವಣ್ಯವತಿ ಕಾಣುವುದೇ ಇಲ್ಲ (ಕಣ್ಣು ತೆರೆದರೆ ಅಲ್ಲವೇ ಕಾಣುವುದು)" ಇಂತಹ ಪರಿಸ್ಥಿತಿ ಕನ್ನಡದ್ದು . ಇದೇನಪ್ಪ ಇದು ಫ್ಲ್ಯಾಶ್ ಬ್ಯಾಕ್ ಅಂತ ಕೊರಳು ಕೊಂಕಿಸಿ ಇವತ್ತಿನ ಬೆಂಗಳೂರಿನ ಬಗ್ಗೆ ಮಾತಾಡ್ತಾ ಇದ್ದಾನೆ ಅಂದುಕೊಂಡ್ರಾ ? smile emoticon ಸುಮಾರು ಎಂಬತ್ತು/ತೊಂಬತ್ತು ವರ್ಷಗಳ ಹಿಂದೆ ಕನ್ನಡ ನಾಡಿನಲ್ಲೂ ಇದೇ ಸ್ಥಿತಿ, ಇದೇ ಗತಿ ಇತ್ತಂತೆ. ಆಡಳಿತ ಇಂಗ್ಲೀಷಿನಲ್ಲಿ,ಶಾಲೆ ಕಾಲೇಜು ಇಂಗ್ಲೀಷಿನಲ್ಲಿ , ಕಡೆಗೆ ಸಭೆ ಸಮಾರಂಭಗಳೂ ಇಂಗ್ಲೀಷಿನಲ್ಲಿ ಅನ್ನುವ ಪರಿಸ್ಥಿತಿ . ಅವತ್ತಿಗೆ ಇಂಗ್ಲಿಷರು ಹೇಳಿದ್ದೇ ಮಟ್ಟ, ಕಟ್ಟಿದ್ದೇ ಪಟ್ಟ. ಇದೇ ಕಥೆ, ಅದೇ ವ್ಯಥೆ.
ಅಷ್ಟು ಹಳೇ ವರ್ಷವೊಂದರಲ್ಲಿ ನಾವು ಹೊಸ ವರ್ಷಕ್ಕೆ ಸಂಕಲ್ಪ ಮಾಡುವ ಹಾಗೆ,ಬಿ ಎಂ ಶ್ರೀ ಒಂದು ಸಂಕಲ್ಪ ಮಾಡಿದರು, ಏನು ಅಂತ ಅವರ ಮಾತುಗಳಲ್ಲೇ ಕೇಳಿ : "ಈಗಲೂ ನನಗೆ ಜ್ಞಾಪಕವಿದೆ – ಮದರಾಸಿನಲ್ಲಿ ನನ್ನ ಸ್ನೇಹಿತರೂ ನಾನೂ ಸಾಯಂಕಾಲ ಸಮುದ್ರ ತೀರದಲ್ಲಿ ಮರಳಿನ ಮೇಲೆ ಕುಳಿತು, ಸಮಾಜದ ಮತ್ತು ಸಾಹಿತ್ಯದ ವಿಷಯಗಳನ್ನು ಚರ್ಚಿಸುತ್ತ, ಹೀಗೆ ಮಾಡಬೇಕು, ಹಾಗೆ ಮಾಡಬೇಕು ಕನ್ನಡ ನಾಡಿಗೆ, ಕನ್ನಡ ನುಡಿಗೆ, ನಮ್ಮ ಬಾಳಿಕೆಯನ್ನೇ ಕಾಣಿಕೆಯಾಗಿ ಒಪ್ಪಿಸಿಬಿಡಬೇಕು ಎಂದು ಪೌರುಷವನ್ನು ಕೊಚ್ಚಿಕೊಳ್ಳುತ್ತಿದ್ದುದು. ಕನ್ನಡ ಕಾವ್ಯಗಳನ್ನೆಲ್ಲಾ ಓದಬೇಕು. ಜನರಲ್ಲಿ ಬಳಕೆಗೆ ತರಬೇಕು, ಉಪಾಧ್ಯಾಯನಾಗಿ ವಿದ್ಯಾರ್ಥಿಗಳಲ್ಲಿ ಕನ್ನಡದ ಪ್ರೇಮವನ್ನು ಬಿತ್ತಬೇಕು, ಜನ ಸಾಮಾನ್ಯಕ್ಕೆ ತಿಳಿವಳಿಕೆಯೂ, ಹೊಸ ನಡವಳಿಕೆಯೂ ಹುಟ್ಟುವಂತೆ ಕಾಲಕ್ಕೆ ತಕ್ಕ ಪುಸ್ತಕಗಳನ್ನೂ ಬರೆಯಬೇಕು"
ಇಷ್ಟು ಹೇಳಿದವರು ಮಾಡದೆ ಇರುತ್ತಾರೆಯೇ! ಕನ್ನಡಕ್ಕೆ ಅಚ್ಚೇ ದಿನ್ ತಂದೇ ಬಿಟ್ಟರು. ಬಿ ಎಂ ಶ್ರೀ ಇಂಗ್ಲಿಷು ಪ್ರೊಫೆಸರು, ಪ್ರೊಫೆಸರು ಏನು ಮಹಾ ಪಂಡಿತರು. ನೀವು Whitefieldನಲ್ಲಿ ಬಸ್ಸು ಹತ್ತಿದಾಗ ಶುರು ಮಾಡಿದರೆ ಬಸವನಗುಡಿಯಲ್ಲಿ ಇಳಿಯುವವರೆಗೂ ನಿರರ್ಗಳವಾಗಿ, ಇಂಗ್ಲಿಷು ಸಾಹಿತ್ಯದ ಬಗ್ಗೆ ಮಾತಾಡುವಷ್ಟು ಜ್ಞಾನ ಇದ್ದವರು, ಸಂಸ್ಕೃತ ಕರಗತ, ಕನ್ನಡದಲ್ಲಂತೂ ವಿದ್ವಾಂಸರೇ ಬಿಡಿ. ಇಷ್ಟು ಸಾಲದು ಅಂತ ತಮಿಳು ಓದುವಷ್ಟು, ಬರೆಯುವಷ್ಟು ಕಲಿತು, ಗ್ರೀಕ್ ಭಾಷೆ ಬೇರೆ ಕಲಿತಿದ್ದರು. ಮಾಡಿದ ಕೆಲಸಗಳು ಈಗೀಗ ಬರುವ ಧಾರಾವಾಹಿಗಳ ಕಂತುಗಳ ಥರ : ಲೆಕ್ಕ ಮರೆತು ಹೋಗುವಷ್ಟು ! ಅಲ್ಲಿ, ಇಲ್ಲಿ, ಎಲ್ಲೆಲ್ಲಿಯೂ ಬಡಿದೆಬ್ಬಿಸುವ ಭಾಷಣಗಳು, ಊರೂರು ಸುತ್ತಿ ಘಂಟೆಗಟ್ಟಲೆ ಉಪನ್ಯಾಸಗಳು, ದೊಡ್ಡವರ ಭೇಟಿ , ನೂರಾರು ಜನರ ಭೇಟಿ , ಅಕ್ಷರ ಪ್ರಚಾರ , ವಯಸ್ಕರ ಶಿಕ್ಷಣ , ಗ್ರಂಥಸಂಪಾದನೆ, ಲಿಪಿಸುಧಾರಣೆ, ವಿಶ್ವ ವಿದ್ಯಾಲಯದಲ್ಲಿ ಕನ್ನಡಕ್ಕೆ ಮರ್ಯಾದೆ ತರುವ ಕೆಲಸ, ಸಾಹಿತ್ಯ ಪರಿಷತ್ತಿನ ಕೆಲಸ, ಹೊಸ ಪತ್ರಿಕೆ , ಕರ್ನಾಟಕ ಏಕೀಕರಣ ಚಳುವಳಿ, ಒಂದನೇ ಕ್ಲಾಸಿಂದ MA ತರಗತಿಯವರೆಗೆ ಟೆಕ್ಸ್ಟ್ ಪುಸ್ತಕ ಪರಿಷ್ಕರಣೆ (ಆಗ ಕನ್ನಡ ಎಂ. ಎ ಅಂತಲೇ ಇರಲಿಲ್ಲ, ಅದನ್ನು ತಂದವರೂ ಇವರೇ) . ನಾವು whatsapp, youtube, ಫೇಸ್ಬುಕ್ ಸುಧಾರಿಸುವಷ್ಟರಲ್ಲೇ ಉಸ್ಸಪ್ಪ ಅನ್ನುತ್ತೇವೆ, ಅಂತದ್ದರಲ್ಲಿ ......! ಆಗಾಧವಾದ ವಿದ್ವತ್ತು, ಪ್ರಭಾವಶಾಲಿಯಾದ ವಾಗ್ಮಿತೆ; ಕನ್ನಡದ ಮೇಲಿನ ಅನನ್ಯವಾದ ಪ್ರೀತಿ; ಕನ್ನಡದ ಎಚ್ಚರಕ್ಕೆ ಹಾಗೂ ಏಕೀಕರಣಕ್ಕೆ ಅವರು ಪಟ್ಟಶ್ರಮ ಎಲ್ಲ ಸೇರಿ ಕನ್ನಡದ ನೈಸ್ ರೋಡು ನಿರ್ಮಾಣ ಆಯಿತು.

ಇನ್ನು ಬರೀ ಸಾಹಿತಿಯಾಗಿಯೂ ಇವರು ಆಚಾರ್ಯ ಪುರುಷರೇ. ಆಗ ಕನ್ನಡದಲ್ಲಿ ಬರುತ್ತಿದ್ದದ್ದು ಬರೀ ರಾಮಾಯಣ, ಮಹಾಭಾರತ, ರಾಜ ಮಹಾರಾಜರ ಬಗೆಗಿನ ಸಾಹಿತ್ಯ ಮಾತ್ರ. ಅದೂ ಓದಿದರೆ ಜಂಡೂ ಬಾಂ ಬೇಕಾದೀತು ಅನ್ನಿಸುವ ಭಾಷೆಯಲ್ಲಿ, ಹಳೆ ಛಂದಸ್ಸು ಸೇರಿ ಸಾಹಿತ್ಯ ಜಡಗಟ್ಟಿ ಹೋಗಿತ್ತು. ಆಗ ಬರುತ್ತಿದ್ದ ಸಾಲುಗಳ ಒಂದು ಸ್ಯಾಂಪಲ್ ನೋಡಿ : "ಧುರ್ಯೊಧನನ ತೊಡೆಗಳೆಂಬ ಸ್ತಂಭಗಳನ್ನು ಮುರಿಯತಕ್ಕದ್ದರಲ್ಲಿ ನಿಶ್ಚಯಿಸಲ್ಪಟ್ಟ ವಿಜಯವುಳ್ಳ ಭೀಮಸೇನನು" (ಜಂಡೂ ಬಾಂ ಬೇಕಾದೀತು ಅಂತ ನಾನು ಮೊದಲೇ ಹೇಳಿದ್ದೆ ). ಆಗ ಬಂತು ನೋಡಿ ಶ್ರೀ ಅವರ ‘ಇಂಗ್ಲೀಷ್ ಗೀತಗಳು’. ಇಂಗ್ಲಿಷಿನಿಂದ ಕನ್ನಡಕ್ಕೆ ಕವಿತೆಗಳನ್ನು ಅನುವಾದ ಮಾಡುವುದರ ಮೂಲಕ, ಹೊಸತು ತರುವ ಪ್ರಯತ್ನ ಇದು. ಇದು ಆ ಕಾಲಕ್ಕೆ ಭಯಂಕರ ಪ್ರಯೋಗ. ಭಾಷೆ, ಕಾವ್ಯಶೈಲಿ, ಛಂದಸ್ಸು, ಕಾವ್ಯದ ವಸ್ತು – ಹೀಗೆ ಯಾವ ದೃಷ್ಟಿಯಿಂದ ನೋಡಿದರೂ ಹೊಚ್ಚ ಹೊಸದು. ಈ ಹೊಸ ಬೆಳೆ ತೆಗೆಯುವಲ್ಲಿ ಪಂಜೆ ಮಂಗೇಶ ರಾವ್, ಗೋವಿಂದ ಪೈ , ಕೈಲಾಸಂ, ಡಿ.ವಿ.ಜಿ ಇವರೆಲ್ಲರ ಕೆಲಸವೂ ಬೇಕಾದಷ್ಟಿದೆ ಅನ್ನಿ.
ಸುದೀಪ್ ರಿಮೇಕ್ ತರ ಮಾಡದೆ(!), ಯಥಾವತ್ ಅನುವಾದ ಮಾಡದೆ, ಇಲ್ಲಿನ ಸಂಸ್ಕೃತಿಗೆ ಒಗ್ಗುವ ಹಾಗೆ ಬದಲಾಯಿಸಿ ಅನುವಾದ ಮಾಡಿರುವುದು ವಿಶೇಷ. ಜೇನು ಹುಳವು ಹೇಗೆ ಯಾವ ಹೂವಿನ ಮಕರಂದವನ್ನು ತಂದರೂ ಕೊನೆಗೆ ಎಲ್ಲಾ ತನ್ನ ಜೇನುತುಪ್ಪವಾಗಿ ಹೇಗೆ ಮಾಡಿಕೊಳ್ಳುವುದೋ ಹಾಗೆ ಬಹಳಷ್ಟು ಇಂಗ್ಲಿಷು ಪದ್ಯಗಳು ಕನ್ನಡದ ಜೇನಾಗಿದೆ ಇದರಲ್ಲಿ . ಇಲ್ಲಿನ ಸಂಸ್ಕೃತಿಗೆ ಸಂಬಂಧ ಪಟ್ಟ, ಇಲ್ಲಿನ ಜನಮಾನಸದಲ್ಲಿ ಅಚ್ಚಾಗಿರುವ ವಿಷಯಗಳನ್ನೇ ಬಳಸಿದ ಅನುವಾದ ಇಲ್ಲಿದೆ. ಉದಾಹರಣೆಗೆ, ಈಗ ರೇಡಿಯೋವನ್ನೇ ತೆಗೆದುಕೊಳ್ಳಿ. ಇದಕ್ಕೆ ನಾ ಕಸ್ತೂರಿಯವರು "ಆಕಾಶ ವಾಣಿ" ಅನ್ನುವ ಅದ್ಭುತ ಶಬ್ದವನ್ನು ಸೂಚಿಸಿದ್ದಾರೆ. ಇದು ನಮ್ಮ ಪುರಾಣಗಳಲ್ಲಿ ಬಂದಿರುವ ಅಶರೀರ ವಾಣಿ, ಆಕಾಶವಾಣಿಯ ಕಲ್ಪನೆಗಳನ್ನು ಒಂದು ಹೊಸ ವಿಚಾರಕ್ಕೆ ಸಮರ್ಥವಾಗಿ ಒಗ್ಗಿಸಿರುವ ಉದಾಹರಣೆ. ನಾ ಕಸ್ತೂರಿಯವರದ್ದೇ ಇನ್ನೊಂದು ಉದಾಹರಣೆ ನೋಡೋಣ. Alice in wonderland ಅನ್ನುವುದನ್ನು ಪಾತಾಳ ಲೋಕದಲ್ಲಿ ಪಾಪಚ್ಚಿ ಅಂತ ಅನುವಾದ ಮಾಡಿದ್ದಾರೆ. ಎಷ್ಟು ಸೊಗಸಾಗಿದೆ ನೋಡಿ. ನಮ್ಮಲ್ಲಿ ಈ wonderland ಅನ್ನು ಹೊಸತಾಗಿ ಸೃಷ್ಟಿ ಮಾಡುವ ಅಗತ್ಯವೇ ಬರಲಿಲ್ಲ. ನಮ್ಮ ಪುರಾಣಗಳಲ್ಲಿ ಬಂದಿರುವ ಪಾತಾಳಲೋಕದ ಕಲ್ಪನೆಯೇ ಸಾಕಾಗಿದೆ. ಬಿ ಎಂ ಶ್ರೀ ಅವರ ಅನುವಾದ ಕೂಡ ಇದೇ ರೀತಿಯದ್ದು. ಇದರಿಂದಾಗಿ ಒಂದು ರೀತಿಯಲ್ಲಿ ನಾವು ಈಗ ಓದುತ್ತಿರುವ ತರದ ಪದ್ಯಗಳು /ಹೊಸಗನ್ನಡ ಸಾಹಿತ್ಯದ ಯುಗ ಪ್ರಾರಂಭ ಆಯಿತು ಅನ್ನಬಹುದು. ಆ ಸಂಕಲನದ ಕೆಲವು ಪದ್ಯಗಳನ್ನು ಓದಿಯೇ ಬಿಡೋಣ :

Lead, kindly Light, amid the encircling gloom
Lead thou me on;
The night is dark, and I am far from home,
Lead thou me on

ಇದನ್ನು ಶ್ರೀ ಹೇಗೆ ತಂದಿದ್ದಾರೆ ನೋಡಿ :
ಕರುಣಾಳು ಬಾ ಬೆಳಕೆ ಮುಸುಕಿದೀ ಮಬ್ಬಿನಲಿ
ಕೈ ಹಿಡಿದು ನಡೆಸೆನ್ನನು
ಇರುಳು ಕತ್ತಲೆಯ ಗವಿ ಮನೆ ದೂರ ಕನಿಕರಿಸಿ
ಕೈ ಹಿಡಿದು ನಡೆಸೆನ್ನನು
ಕೈ ಹಿಡಿದು ನಡೆಸುವ ಕಲ್ಪನೆ ಎಷ್ಟು ಅರ್ಥಪೂರ್ಣವಾಗಿದೆ ನೋಡಿ, ಅದು ಮೂಲದಲ್ಲಿ ಇಲ್ಲ. ಗವಿಯ ಕಲ್ಪನೆಯೂ ಹೊಸದೇ.

ಇಲ್ಲಿ ರೋಸ್ Alymer ಎಷ್ಟು ಸಹಜವಾಗಿ, ಅರ್ಥಪೂರ್ಣವಾಗಿ ಪದುಮಾ ಆಗಿದ್ದಾಳೆ :
Ah What avails the sceptred race, ah What the form divine
What every virtue, every grace, Rose Aylmer. All were thine
ಬಿ ಎಂ ಶ್ರೀ:
ಅರಸಿನ ಕುಲವೊ, ಏನಿದ್ದೇನು! ಸುರ ವಧುರೂಪೋ; ಏನಿದ್ದೇನು!
ಗುಣವೋ, ಸೊಬಗೋ, ಏನಿದ್ದೇನು! ಪದುಮಾ, ಇದ್ದುವು ನಿನಗೆಲ್ಲಾ

ಇನ್ನೊಂದು ನೋಡಿ :
A Chieftain, to the Highlands bound,
Cries, "Boatman, do not tarry!
And I'll give thee a silver pound
To row us o'er the ferry!
ಇದು ಕನ್ನಡಕ್ಕೆ ಬಂದ ರೀತಿ ನೋಡಿ :
ಪಡುವ ದಿಬ್ಬದ ಗೌಡನೊಬ್ಬನು
ಬಿಡದೆ ತೊರೆಯನ ಕೂಗಿಕೊಂಡನು;
ತಡೆಯದೀಯದೆ ಗಡುವ ಹಾಯಿಸು
ಕೊಡುವೆ ಕೇಳಿದ ಹೊನ್ನನು

ಈ ಸಾಲುಗಳು :
By this the storm grew loud apace,
The water-wraith was shrieking;
And in the scowl of heaven each face
Grew dark as they were speaking.
ಎಷ್ಟು ಚಂದದಲ್ಲಿ ಕನ್ನಡಕ್ಕೆ ಬಂದಿದೆ ನೋಡಿ :
ತೂರು ಗಾಳಿಗೆ ಕಡಲು ಕುದಿಯಿತು,
ನೀರ ದೆವ್ವಗಳರಚಿಕೊಂಡುವು.
ಹೆಪ್ಪು ಮೋಡದ ಹುಬ್ಬುಗಂಟಿಗೆ
ಕಪ್ಪಗಾದವು ಮುಖಗಳು.

ಆಗ ಫೇಸ್ಬುಕ್ ಇದ್ದಿದ್ದರೆ ಒಂದೊಂದು ಪದ್ಯಕ್ಕೂ ಅದೆಷ್ಟು ಲೈಕುಗಳು ಬರುತ್ತಿದ್ದವೋ.
ತಡವೇಕೆ ? ತಡವಾಗಿಯಾದರೂ ಬಿ ಎಂ ಶ್ರೀ ಅವರಿಗೆ ಹುಟ್ಟು ಹಬ್ಬದ ಶುಭಾಶಯ ಹೇಳಿ!

3 comments:

  1. ಕನ್ನಡದ ಕಣ್ವನ ಬಗ್ಗೆ ಎಷ್ಟು ಚೆನ್ನಾಗಿ ಬರ್ದಿದೀರ.... ನಮೊ ನಮ: ಗುರುಗಳೆ...

    ReplyDelete
  2. Facebook alli yestu like barthitho aadre bm shree avarige kannadigaru kruthagnithe helale beku... isthu detail aagi barediro nimgu thanks...

    ReplyDelete
  3. ಹೌದು ಬಿ ಎಂ ಶ್ರೀ ಅವರನ್ನ ನೆನಪಿಟ್ಟುಕೊಳ್ಳಲೇ ಬೇಕು. ಓದಿದ್ದಕ್ಕೆ ಗುರು ಮತ್ತು ವಿನೋದ್ ಅವರಿಗೆ ಧನ್ಯವಾದಗಳು

    ReplyDelete