Monday, 14 March 2016

ಕನ್ನಡ ಚಿತ್ರರಂಗದ ಪ್ರಯೋಗಗಳೂ ಮಲ್ಟಿಪ್ಲೆಕ್ಸುಗಳ ಅಟ್ಟಹಾಸಗಳೂ

ಮಲ್ಟಿಪ್ಲೆಕ್ಸುಗಳಲ್ಲಿ ಇಲಿಗಳ ಕಾಟ ಇರುವುದಿಲ್ಲ, ಬದಲಾಗಿ ಹೆಗ್ಗಣಗಳಿರುತ್ತವೆ. ಅವುಗಳು ಒಂದು ಪಾಪ್ ಕಾರ್ನಿಗೆ ಐವತ್ತು ರುಪಾಯಿ ವಸೂಲು ಮಾಡುತ್ತವೆ, ಒಂದು ಕೋಕ್ ಬಾಟಲಿಗೆ ನೂರು ರುಪಾಯಿ ಸುಲಿಯುತ್ತವೆ. ಎಲ್ಲಾ ಮಲ್ಟಿಪ್ಲೆಕ್ಸುಗಳಲ್ಲಿ ಏಕರೂಪದ ದರ ಇರುವುದಿಲ್ಲ, ವಾರದ ದಿನಗಳಲ್ಲಿ 150ರಿಂದ 250 ರ ತನಕ ಟಿಕೆಟ್ ಬೆಲೆಯಿದ್ದರೆ, ವಾರಾಂತ್ಯಕ್ಕೆ ಅದು 350ರಿಂದ 500ರ ತನಕ ಏರುವುದುಂಟು. ಮೈಸೂರಿನ ವಿವೇಕ್ ಪ್ರಕಾಶ್ ಅವರು ಚೆನ್ನೈನಲ್ಲಿ ಕೆಲವು ತಿಂಗಳು ಇದ್ದು ಬಂದವರು. ಚೆನ್ನೈನ ಮಲ್ಟಿಪ್ಲೆಕ್ಸ್ ಥಿಯೇಟರಲ್ಲಿ ಸಿನಿಮಾ ನೋಡುವುದೇ ಒಂದು ಆಹ್ಲಾದಕರ ಅನುಭವ ಎಂದು ಅವರು ಬರೆಯುತ್ತಾರೆ. ಅದಕ್ಕಿಂತ ಮುಖ್ಯವಾಗಿ ಅಲ್ಲಿನ ಟಿಕೆಟ್ ದರ ಕೇವಲ 100ರಿಂದ 120 ರುಪಾಯಿ. ವಾರಾಂತ್ಯಕ್ಕೂ ಅದು ಬದಲಾಗುವುದಿಲ್ಲ. ಆದರೆ ಬೆಂಗಳೂರಲ್ಲಿ ಮಲ್ಟಿಪ್ಲೆಕ್ಸ್ ಯಾಕೆ ಇಷ್ಟೊಂದು ದುಬಾರಿ?------> ಉದಯ ಮರಕಿಣಿ

ಮಲ್ಟಿಪ್ಲೆಕ್ಸುಗಳ ದರ ಏರಿಕೆಯ ಬಗ್ಗೆಯೇ ಒಂದು ಪ್ರಬಂಧ ಬರೀಬಹುದು, ವಿಷಯ ಅದಲ್ಲ. ಮಲ್ಟಿಪ್ಲೆಕ್ಸ್ ಗಳು ಕನ್ನಡ ಚಿತ್ರಗಳ ವಿರುಧ್ದ ಮಾಡುತ್ತಿರುವ ಸಂಚೊಂದು ಬಯಲಾಗಿದೆ, ಇದರ ಬಗ್ಗೆ ಕಿರಿಕ್ ಕೀರ್ತಿ ಎರಡು ವೀಡಿಯೊ ಮಾಡಿದ್ದಾರೆ, ಒಂದು ಇಲ್ಲಿದೆ ನೋಡಿ : (https://www.facebook.com/kirikkeerthi/videos/1207917279235735/
ಈ ಮಲ್ಟಿಪ್ಲೆಕ್ಸುಗಳ ಧೋರಣೆ ಬಗ್ಗೆ ನಾನು ಬರೆದಿದ್ದ ಪುಟ್ಟ ಲೇಖನ:
ಕನ್ನಡದಲ್ಲಿ ಮಾಸ್ ಫಿಲ್ಮುಗಳು, ಕ್ಲಾಸ್ ಚಿತ್ರಗಳು ಅಂತ ಎರಡು ತರ ಇದೆಯಷ್ಟೇ, ಹಿಂದಿಯಲ್ಲಿ ಇರುವ ಹಾಗೆ. ಈ ಕ್ಲಾಸ್ ಚಿತ್ರಗಳಿಗೆ ಈಚೆಗೆ ಒಂದು ಹೊಸ ಸಮಸ್ಯೆ ಹುಟ್ಟಿಕೊಂಡಿದೆ. ಮಲ್ಟಿ ಪ್ಲೆಕ್ಸುಗಳ ಸಮಸ್ಯೆ. ಅದೇನು ಅಂತ ನೋಡುವ ಮೊದಲು ಸ್ವಲ್ಪ ಹಿಂದಕ್ಕೆ ಹೋಗೋಣ.
ಒಂದು ಸಿನಿಮಾ ಅಂದ ಮೇಲೆ ಪ್ರದರ್ಶನಕ್ಕೆ ಜಾಗ ಬೇಕಲ್ಲ. ತೀರ ಈಚಿನ ತನಕವೂ ನಮ್ಮಲ್ಲಿ ಸಿಂಗಲ್ ಸ್ಕ್ರೀನ್ ಗಳೇ ಇದ್ದಿದ್ದು. ಅದಕ್ಕೆ ಒಂದು ವರ್ಗದ, ಒಂದು ರುಚಿಯ ಜನರೇ ಹೆಚ್ಚು ಬಂದು ನೋಡಿದ್ದರಿಂದ ಸಿಂಗಲ್ ಸ್ಕ್ರೀನ್ಗಳು ಅಂದರೆ ಮಸಾಲೆ, ಮಾಸ್ ಗೆ ಮಾತ್ರ ಸೀಮಿತ ಅಂತ ಆಯಿತು. ಆಗ ಬಂದದ್ದು ಮಲ್ಟಿ ಪ್ಲೆಕ್ಸುಗಳು. ಹಿಂದಿಯಲ್ಲಿ ಅನುರಾಗ್ ಕಶ್ಯಪ್ ಮತ್ತು ಅವನಂತ ಎಂಟು ಹತ್ತು ಜನ ಸೇರಿ ಕ್ಲಾಸ್ ಚಿತ್ರಗಳನ್ನು, ವಿಭಿನ್ನ ಚಿತ್ರಗಳನ್ನು ಮಲ್ಟಿ ಪ್ಲೆಕ್ಸುಗಳಲ್ಲಷ್ಟೇ ತೋರಿಸಿ ಗೆಲ್ಲಬಹುದು ಅಂತ ತೋರಿಸಿಕೊಟ್ಟರು. ಕನ್ನಡದಲ್ಲೂ ಹೊಸ ರಕ್ತದ ಬಿಸಿ ರಕ್ತದ ಜನ ಬಂದರು. ಸಯನೈಡ್ ನಿಂದ ಎದೆಗಾರಿಕೆ ವರೆಗೆ, ಟೋನಿ, ಲೂಸಿಯಗಳಿಂದ ರಂಗಿತರಂಗದವರೆಗೆ ಹೊಸ ಅಲೆಯ ಚಿತ್ರಗಳು ಬಂದವು. ಇಂತಹ ಹೊಸ ತರದ ಚಿತ್ರಗಳಿಗೆ ಮಲ್ಟಿ ಪ್ಲೆಕ್ಸುಗಳೇ ಸರಿ ಅಂತ ಹೊರಟಾಗ ನಮ್ಮ ಕಣ್ಣಿಗೆ ರಾಚಿದ್ದು ಕನ್ನಡದ ಬಗ್ಗೆ ಮಲ್ಟಿ ಪ್ಲೆಕ್ಸುಗಳಿಗೆ ಇರುವ ತಾತ್ಸಾರ.
ಇಂತಹಾ ಚಿತ್ರಗಳಿಗೆ ಇರುವ ದೊಡ್ಡ ಸಮಸ್ಯೆ ಅಂದರೆ ಮಲ್ಟಿಪ್ಲೆಕ್ಷು ಗಳ ಜನಗಳ ಕೊಬ್ಬು. ಕಾಫ್ಕಾ ನ ಕಥೆಯೊಂದರಲ್ಲಿ ಸರ್ಕಾರಿ ಆಫೀಸಿಗೆ ಹೋದ ಜನ ಸಾಮಾನ್ಯನಿಗೆ ಆದ ಹಾಗೆ ಆಗುತ್ತದೆ ನಮ್ಮ ನಿರ್ದೇಶಕರ ಪರಿಸ್ಥಿತಿ ಈ ಪ್ಲೆಕ್ಸುಗಳಲ್ಲಿ ! ಲೂಸಿಯ, ಜಟ್ಟದಿಂದ ಶುರು ಮಾಡಿ ನಾನು ಅವನಲ್ಲ ಅವಳು ವರೆಗೆ ಎಲ್ಲರೂ ಕನ್ನಡ ಚಿತ್ರಗಳ ಬಗ್ಗೆ ಪ್ಲೆಕ್ಸುಗಳಿಗೆ ಇರುವ ತಿರಸ್ಕಾರವನ್ನು ಕಂಡವರೇ. ಇಂಗ್ಲಿಷು, ಹಿಂದಿ ಚಿತ್ರಗಳಿಗೆ ರಾಜ ಮರ್ಯಾದೆ, ಕನ್ನಡಕ್ಕೆ ಕಾಲ ಕಸದಂತಹ ಉಪಚಾರ.
ಲಿಂಗದೇವರು ಮೊನ್ನೆ ಇತ್ಲಾಗಿ ನಾನು ಅವನಲ್ಲದ ಒಂದು ಶೋ ಕ್ಯಾನ್ಸಲ್ ಆದದ್ದರ ಬಗ್ಗೆ ಮಾತಾಡಲು ಹೋದರೆ ಥೇಟು ಸರ್ಕಾರಿ ಆಫೀಸರನ ಹಾಗೆ ಕಾಯಿಸಿ, ಸತಾಯಿಸಿ,ದೂರ ನಿಲ್ಲಿಸಿ, ಕಡೆಗೆ ಅಸಡ್ಡೆಯಿಂದ ಮಾತಾಡಿಸಿದರಂತೆ ಪ್ಲೆಕ್ಷು ಗಳ ಜನ. ನಿಮಗೆ ಒಂದು ಶೋ ಕೊಟ್ಟದ್ದೇ ಭಿಕ್ಷೆ ಅನ್ನುವ ಹಾಗೆ ಮಾತಾಡಿದರಂತೆ.
ರಂಗಿತರಂಗದ ಅನೂಪ್ ಪಟ್ಟ ಪಾಡು ಅಷ್ಟಿಷ್ಟಲ್ಲ. ಇವರು 'ಅಯ್ಯಾ' ಅನ್ನುವ ಸಜ್ಜನ, ಮಲ್ಟಿ ಪ್ಲೆಕ್ಷುಗಳಿಗೆ ಎಲವೋ ಅನ್ನುವುದರಲ್ಲೇ ಸ್ವರ್ಗ ಸುಖ. ಪ್ರೈಮ್ ಟೈಮಿಗೆ ಒಂದೇ ಒಂದು ಶೋ ಕೊಡಲಿಲ್ಲ, ಯಾರಿಗೂ ಬೇಡದ slotಗಳಲ್ಲಿ ಶೋ ಕೊಡಲಾಯಿತು. ಆದರೂ ಜನ ಬಂದರು . Display ಬೋರ್ಡ್ ಗಳಲ್ಲಿ ಇದರ ಹೆಸರೇ ಹಾಕುತ್ತಿರಲಿಲ್ಲ, ಹಾಗಾಗಿ ಹೋದವರಿಗೆ ಶೋ ಇದೆಯಾ ಅಂತಲೇ ಗೊತ್ತಾಗುತ್ತಿರಲಿಲ್ಲ, ಪೋಸ್ಟರ್ ಕೊಟ್ಟರೆ ಹಾಕುವುದಿಲ್ಲ. ವಿಚಾರಿಸಿದರೆ ಮತ್ತದೇ ಧಿಮಾಕಿನ ಮಾತು. ಒಂದೇ ವಾರದಲ್ಲಿ ಬಾಹುಬಲಿಗಾಗಿ ಚಿತ್ರವನ್ನ ಎಲ್ಲ ಕಡೆ ಎತ್ತಂಗಡಿ ಮಾಡುವ ಯೋಜನೆಯೂ ಇತ್ತು. ಬಾಹುಬಲಿಗೆ ಐದು ನೂರು ಶೋ ಕೊಟ್ಟು ರಂಗಿತರಂಗಕ್ಕೆ ಎರಡೋ ಮೂರೋ ಶೋ ಕೊಡುವ ತಯಾರಿ ನಡೆದಿತ್ತು . ಕಡೆಗೆ ಹೇಗೋ ಹೋರಾಟ ಮಾಡಿ, ಚೇಂಬರ್ ಅದು ಇದು ಅಂತ ಓಡಾಡಿ ಕೆಲವು ಶೋಗಳನ್ನಾದರೂ ಉಳಿಸಿಕೊಂಡರು. ಬೇರೆಯವರೂ ಕನ್ನಡ ಸಿನಿಮಾ ನೋಡುವಂತಾಗಲಿ ಅಂತ subtitles ಹಾಕಿದರೆ ಅದನ್ನೂ ತೋರಿಸಲಿಲ್ಲ. ವಿಚಾರಿಸಿದರೆ ಎಂದಿನಂತೆ ಸೊಕ್ಕಿನ ಮಾತು. ಕಡೆಗೆ ನಮಗೇ ಅಯ್ಯೋ ಪಾಪ ಎನಿಸಿ, ಒಂದು ಮಟ್ಟಕ್ಕೆ ಫೇಸ್ಬುಕ್, ಟ್ವಿಟ್ಟರ್, whatsapp ಗಳಲ್ಲಿ ರೊಚ್ಚಿಗೆದ್ದು , ಈ ಚಿತ್ರಕ್ಕೆ ಪ್ರಚಾರ ಮಾಡಿದೆವು. ಎಲ್ಲ ಚಿತ್ರಗಳಿಗೂ ಹೀಗೆ ಮಾಡುವುದಕ್ಕೆ ಆಗುವುದು ಕಷ್ಟ.

ಇದನ್ನೆಲ್ಲ anti-competitive practice ಅಂತ ಪರಿಗಣಿಸಿ Competition Commission of India (CCI)ಗೆ ದೂರು ಕೊಡಬಹುದು, ಕೊಟ್ಟರೆ ಮಲ್ಟಿ ಪ್ಲೆಕ್ಷುಗಳು ದಾರಿಗೆ ಬರುತ್ತವೆ ಅಂತ ಒಬ್ಬರು ಲಾ ಪಾಯಿಂಟೂ ಹಾಕಿದರು . ಆದರೆ ಅಷ್ಟೆಲ್ಲಾ ಮಾಡುವುದಕ್ಕೆ ಪುರುಸೊತ್ತು, ತಾಳ್ಮೆ ಯಾರಿಗಿದೆ ?
ಸೂರಿಗೂ ಇದೇ ತರದ ವರ್ತನೆ ನೋಡಲಿಕ್ಕೆ ಸಿಕ್ಕಿತು ಅಂದರೆ ನೋಡಿ, ಹೇಗಿದೆ ಅವರ ದಾರ್ಷ್ಟ್ಯ! ಇವು software ಕಂಪೆನಿ ಅಥವಾ ಬೇರೆ ಯಾವುದೋ ಕಾರ್ಪೊರೇಟ್ ನಡೆಯುವ ಹಾಗೇ ನಡೆಯುತ್ತದೆ. ಅದ್ಯಾರೋ ಮುಂಬೈಯಲ್ಲೋ ಇನ್ನೆಲ್ಲೋ ಕೂತು ಅಪ್ಪಣೆ ಕೊಡುತ್ತಾರೆ, ಇಲ್ಲಿ ಉದ್ಯೋಗಕ್ಕಿರುವವರು ನಮಗೆ ಮೈಲ್ ಬಂದಿಲ್ಲ ಅಂತೇನಾದರೂ ಹೇಳಿ ಜಾರಿಕೊಳ್ತಾರೆ. ಇನ್ನೊಂದು ಕಾರಣ ಅಂದರೆ ಇಂಗ್ಲಿಷು, ಹಿಂದಿ ಟಿಕೆಟುಗಳನ್ನು ಹೆಚ್ಚಿನ ದರಕ್ಕೆ ಮಾರಬಹುದು ಅಂತ, ಕನ್ನಡದ ಬಗ್ಗೆ ಚೀಪ್ ಅನ್ನುವ ಭಾವ. ಕೆಲವು ಹಿಂದಿ ಸಿನೆಮಾಗಳಿಗೂ ಸಮಸ್ಯೆ ಆಗಿದೆ. ಆದ್ರೆ ರಂಗಿಗೆ ಸಿಕ್ಕಿದ treatment ಕನ್ನಡಕ್ಕೆ ಹೆಚ್ಚು. ಹಿಂದಿಯಲ್ಲಿ ಇವತ್ತು UTV, ಧರ್ಮಾ productions ತರದ ದೊಡ್ಡ ದೊಡ್ಡವರೆಲ್ಲ ಇಂತಾ ಚಿತ್ರಗಳ ಹಿಂದೆ ಇರುವುದರಿಂದ ಅವರಿಗೆ ಸ್ವಲ್ಪವಾದರೂ ಮರ್ಯಾದೆ ಸಿಗುತ್ತದೆ. ಕನ್ನಡದ ನಿರ್ದೇಶಕರು ಯಾರ ಪ್ರಭಾವವೂ ಇಲ್ಲದೆ ಅಬ್ಬೇಪಾರಿಗಳ ಹಾಗೆ ನಿಲ್ಲುವ ಪರಿಸ್ಥಿತಿ ಬಂದಿದೆ.ಮಹಾರಾಷ್ಟ್ರ ದಲ್ಲಿ ಮರಾಠಿ ಚಿತ್ರಗಳಿಗೆ ಪ್ರೈಮ್ ಟೈಮ್ ನಲ್ಲಿ ಒಂದಾದರೂ ಶೋ ಕೊಡಲೇ ಬೇಕು ಅಂತ ಅಲ್ಲಿನ ಸರ್ಕಾರ ಆದೇಶ ಕೊಟ್ಟದ್ದೂ ಇಂತಹ ಕಾರಣಗಳಿಗಾಗಿಯೇ , ಇಲ್ಲಿಯೂ ಅಂತದ್ದೇನಾದರೂ ಮಾಡಿದರೆ ಅದರ ವಿರುದ್ಧ ಮೊದಲು ದನಿ ಎತ್ತುವವರು ಕನ್ನಡಿಗರೇ! ನಮಗೆ ನಿರಭಿಮಾನ ಹೇಳಿಕೊಡಬೇಕೆ ?!
ಹಾಗಾದರೆ ನಾವು ಈ ಪ್ಲೆಕ್ಷುಗಳ ಮುಂದೆ ನಿಂತು ಯಾಕೆ ಭವತಿ ಭಿಕ್ಷಾಂದೇಹಿ ಅನ್ನಬೇಕು ? ಯಾಕೆಂದರೆ ಕೆಂಡಸಂಪಿಗೆ, ಆಟಗಾರ, ನಾನು ಅವನಲ್ಲ, ರಂಗಿತರಂಗ ನೋಡುವ ವರ್ಗ ಮೇಲ್ ಮಧ್ಯಮ ವರ್ಗ. ಅಮೇರಿಕಾ, sofwareಉ , ಮಾಲು , ಮಣ್ಣು ಮಸಿ ಇವುಗಳ ರುಚಿ ನೋಡಿರುವ ವರ್ಗ. ಟೆರೇಸ್ ಮನೆ ನೋಡಿರುವವನು ಹುಲ್ಲು ಹಾಸಿದ ಮಣ್ಣಿನ ಮನೆಗೆ ಹೋಗಲಾರ . ಒಂದಷ್ಟು ಸಿಂಗಲ್ ಸ್ಕ್ರೀನುಗಳೂ ಹಾಗೇ ಇವೆ ಅನ್ನಿ. ಹೆಂಡತಿಯನ್ನೋ, jeans ಹಾಕಿ ಬರುವ girlfriend ಅನ್ನೋ ಕರೆದುಕೊಂಡು ಹೋಗಬಹುದಾದಷ್ಟು ಸಭ್ಯ ವಾತಾವರಣ ಒಂದಷ್ಟು ಏಕ ಪರದೆಗಳಲ್ಲಿ ಇಲ್ಲ. ಪ್ರೇಕ್ಷಕರೂ ಎರಡು ತರದವರಿದ್ದಾರೆ. ಕಟ್ ಔಟು, ಹಾಲಿನ ಅಭಿಷೇಕ, ಪರದೆಯ ಮುಂದೆ ಡಾನ್ಸ್ ತರದವರು. ಮತ್ತು ನಾನು ಹೇಳಿದ ಸೊಫಿಸ್ಟಿಕೇಟೆಡ್ ಜನ. ಇವರಿಬ್ಬರೂ ಒಟ್ಟೊಟ್ಟಿಗೆ ನೋಡಬಹುದಾದಂತವು ಕೆಲವೇ ಕೆಲವು ಚಿತ್ರಗಳು (ಮುಂಗಾರು ಮಳೆ, ಮುನ್ನಾ ಭಾಯಿ, ರಾಜ್ ಕುಮಾರ್ ಚಿತ್ರಗಳು ಇಂತವು).
ಇನ್ನು ಕೆಲವು ಏಕ ಪರದೆ ಥಿಯೇಟರುಗಳ ವ್ಯವಸ್ಥೆಯಂತೂ ಕ್ರಿಸ್ತ ಪೂರ್ವ ೩೫೦ರಲ್ಲಿ ಚಂದ್ರಗುಪ್ತ ಮೌರ್ಯನ ಕಾಲದಲ್ಲಿ ಇದ್ದ ಥಿಯೇಟರುಗಳ ಹಾಗೆ ಇದೆ. ಇವತ್ತು Online ಬುಕಿಂಗ್ ಮಾಡಿಕೊಳ್ಳದೆ ಯಾರೂ ಸಿನಿಮಾಕ್ಕೆ ಬರುವುದಿಲ್ಲ ಅಂತ ಇನ್ನೂ ಇವರಿಗೆ ಜ್ಞಾನೋದಯ ಆದ ಹಾಗಿಲ್ಲ.
ಹಾಗಾಗಿ ಹಿಂದಿಯಲ್ಲಿ ಆಗಿರುವಂತೆ ಮಾಸ್, ಕ್ಲಾಸ್ ಎರಡಕ್ಕೂ ಸಮಾನ ಅವಕಾಶ, ಥಿಯೇಟರು ಸಿಕ್ಕುವ ವ್ಯವಸ್ಥೆ ಇಲ್ಲಿಯೂ ಆಗಬೇಕಿದೆ. ತ್ರಿಭುವನ್ , ಊರ್ವಶಿಯಂತ ಥಿಯೇಟರು ದಕ್ಕಿಸಿಕೊಳ್ಳುವ ವ್ಯವಹಾರ ನಿಪುಣರು ಇದ್ದರೂ ಸಾಕು . Rockline mall ತರದ್ದು ಬಂದರೂ ಸಾಕು. ಬೆಕ್ಕಿನ ಕೊರಳು ಖಾಲಿ ಇದೆ, ಘಂಟೆಯೂ ಇದೆ. ಯಾರು ಕಟ್ಟುತ್ತಾರೋ ನೋಡಬೇಕು.

No comments:

Post a Comment