ಡಾ.ಗಜಾನನ ಶರ್ಮರ ಪುನರ್ವಸು ಹಲವು ಕಾರಣಗಳಿಗೆ ಗಮನಾರ್ಹವಾದ ಕಾದಂಬರಿ. ಸುಮಾರು 540 ಪುಟಗಳಲ್ಲಿ ಬಿಚ್ಚಿಕೊಳ್ಳುವ ಕಥಾನಕವಾದರೂ, ಕರಗಿಸಬಹುದಾದ ಬೊಜ್ಜು ಇದರಲ್ಲಿಲ್ಲ. ಇರುವುದೆಲ್ಲವೂ ಮನನೀಯ, ಬೋಧಪ್ರದ.
ಡೇವಿಡ್ ಅಟೆನ್ಬರೋ ಬಿಬಿಸಿಗೆ ಮಾಡಿಕೊಟ್ಟ Planet Earthನಂಥಾ ಕೆಲವು ಸಾಕ್ಷ್ಯಚಿತ್ರಗಳನ್ನು ಮುಗಿಸಲಿಕ್ಕೆ ಐದು ವರ್ಷಗಳೇ ಬೇಕಾಗಿದ್ದವಂತೆ ಅಂತೆಲ್ಲ ಶ್ಲಾಘಿಸಿ, "ನಮ್ಮಲ್ಲಿ ಇಷ್ಟೆಲ್ಲ ಕಷ್ಟ ಪಡುವವರು ಯಾರಿದ್ದಾರೆ" ಅಂತ ನಾವೆಲ್ಲ ಪೇಚಾಡುವುದುಂಟು. ಹಾಗಂತ ವರ್ಷಗಟ್ಟಲೆ ರಿಸರ್ಚು, ಮಾಹಿತಿಯ ಸಂಗ್ರಹ ಇವೆಲ್ಲ ನಮ್ಮಲ್ಲಿ ಇಲ್ಲವೆಂದಲ್ಲ. ಹಳಗನ್ನಡದ ಮೇಲೆ ಕೆಲಸ ಮಾಡುವವರು, ವ್ಯಾಕರಣ ಶಾಸ್ತ್ರದ ಆಳಕ್ಕೆ ಇಳಿದವರು, ಶಬ್ದಾರ್ಥ ಶೋಧನೆಗೆ/ನಿಘಂಟುಗಳ ರಚನೆಗೆ ತೆತ್ತುಕೊಂಡವರು, ನೂರಾರು ಶಾಸನಗಳ ಬೆನ್ನಟ್ಟುವವರು, ತಾಳೆಗರಿಗಳನ್ನು ಕಲೆಹಾಕಿ ಗ್ರಂಥಸಂಪಾದನೆ ಮಾಡಲು ಹೊರಡುವವರು - ಹೀಗೆ ಪಾಂಡಿತ್ಯ, ಸಂಶೋಧನೆಯ ಕ್ಷೇತ್ರಗಳಲ್ಲಿ ಇರುವವರು - ಇವರೆಲ್ಲರೂ ಎಲ್ಲೆಲ್ಲಿಂದಲೋ ವಿಷಯಗಳನ್ನು ಸಂಚಯಿಸುವ ಶ್ರಮಸಾಧ್ಯವಾದ ಕೆಲಸ ಮಾಡುತ್ತಲೇ ಬಂದಿದ್ದಾರೆ. ಆದರೆ ಕಥೆ ಕಾದಂಬರಿ ಬರೆಯುವವರು, ಚಲನಚಿತ್ರ ರಂಗದವರು ಎಲ್ಲ ರಿಸರ್ಚು ಮಾಡುವುದು ಕಡಮೆ.
ಚಿತ್ರದುರ್ಗದ ಕಥೆ ಹೇಳಲು ತರಾಸು ಅವರು ಇತಿಹಾಸವನ್ನು ಕೆದಕಿದ್ದು, ಕೊರಟಿ ಶ್ರೀನಿವಾಸ ರಾವ್ ಅವರು ವಿಜಯನಗರದ ಇತಿಹಾಸವನ್ನು ಹೆಕ್ಕಿ ಗುಡ್ಡೆ ಹಾಕಿ ಕಥೆಗಳನ್ನು ಹೆಣೆದದ್ದು, ಭೈರಪ್ಪನವರು ಒಂದೊಂದು ಕೃತಿಗೆ ಮೊದಲೂ ಎಂಟೋ ಹತ್ತೋ ತಿಂಗಳು ಸಂಶೋಧನೆಗೆ ತೊಡಗುವುದು, ಕೆ.ಎನ್. ಗಣೇಶಯ್ಯನವರು ವಿಜ್ಞಾನ, ಇತಿಹಾಸಗಳ ಅಚ್ಚರಿಗಳ ಹುಡುಕಾಟವನ್ನು ಮತ್ತು ತನ್ನ ಕ್ಷೇತ್ರಕಾರ್ಯಗಳನ್ನೇ ಕಥೆಗಳನ್ನಾಗಿಸುವುದು ಹೀಗೆ ಕೆಲವು ಉದಾಹರಣೆಗಳನ್ನು ಕೊಡಬಹುದು. ಇದೀಗ ಈ ಕೂಟದ ಇತ್ತೀಚಿನ ಸದಸ್ಯರಾಗಿ ಪುನರ್ವಸು ಕಾದಂಬರಿಯ ಗಜಾನನ ಶರ್ಮರು ಸೇರಿಕೊಂಡಿದ್ದಾರೆ. ಅವರು ಹೇಳುತ್ತಿರುವುದು ಜೋಗದ ಸಿರಿಬೆಳಕಿನ, ಆ ಬೆಳಕಿನಿಂದ ಕತ್ತಲೆಗೆ ದೂಡಲ್ಪಟ್ಟ ಶರಾವತಿಯ ಆಚೀಚೆ ದಂಡೆಯ ಹಳ್ಳಿಗಳ ಕಥೆ. ನಮ್ಮಲ್ಲಿ ಕೈಗಾರಿಕೆಗಳು, ಉದ್ದಿಮೆಗಳು ಬರದಿದ್ದರೆ ಬಡತನ, ನಿರುದ್ಯೋಗಗಳು ತೊಲಗುವುದಿಲ್ಲ ಎಂಬ ಸರ್ ಎಂ. ವಿಶ್ವೇಶ್ವರಯ್ಯನವರ ನಿಲುವಿನಿಂದ ಶುರುವಾಗುವ ಜೋಗದ ಪ್ರಾಜೆಕ್ಟ್ ಮತ್ತು ಅದರಿಂದಾಗಿ ಮುಳುಗಿದ ಊರುಗಳ ಕಥೆಯಿದು.
ಉಪೇಂದ್ರ ಒಂದೊಮ್ಮೆ ಶೂಟಿಂಗ್‌ಗೆ ಒಂದುಕಡೆಗೆ ಹೋಗಿದ್ದಾಗ ಅವರ ಸ್ನೇಹಿತರು, 'ನೋಡು, ಈ ಏರಿಯಾ ಇನ್ನೂ ಡೆವಲಪ್ ಆಗಿಲ್ಲ. ಬರೀ ಕಾಡು, ಗುಡಿಸಲಿನಲ್ಲೇ ಜನ ವಾಸ ಮಾಡುತ್ತಿದ್ದಾರೆ' ಎಂದರಂತೆ. ಆಗ ಉಪ್ಪಿ, 'ನಿಮ್ಮ ಪ್ರಕಾರ, ಡೆವಲಪ್‌ಮೆಂಟ್ ಅಂದ್ರೆ ಏನು? ಈ ಏರಿಯಾದಲ್ಲಿನ ಕಾಡು ಕಡಿದು, ನಾಲ್ಕು ದೊಡ್ಡ ಬಿಲ್ಡಿಂಗ್ ಬಂದು ಜನ ಅಲ್ಲಿ ಐಷಾರಾಮಿಯಾಗಿ ವಾಸಿಸುತ್ತಿದ್ದರೆ ಅದು ಡೆವಲಪ್‌ಮೆಂಟಾ? ಕಡೆಗೆ ಏನ್ಮಾಡ್ತಾರೆ, ಆ ಬಿಲ್ಡಿಂಗ್ ಸಹವಾಸ ಬೋರಾಗಿ ಮತ್ತೆ ಎಲ್ಲೋ ತೋಟದ ಮನೆ ತೆಗೆದುಕೊಂಡು ಅಲ್ಲಿ ಹಾಯಾಗಿ ವಾಸಿಸುತ್ತಾರೆ. ಆದರೆ ಇಲ್ಲಿ ಹುಟ್ಟುವಾಗಲೇ ಪ್ರಕೃತಿಯ ಮಡಿಲಿನಲ್ಲಿ ಹುಟ್ಟಿ ಅದನ್ನೇ ಅನುಭವಿಸಿ ಖುಷಿಯ ಜೀವನ ನಡೆಸುತ್ತಿದ್ದಾರೆ. ಮನುಷ್ಯನಿಗೆ ಅಂತಿಮವಾಗಿ ಬೇಕಾಗೋದು ನೆಮ್ಮದಿಯ ವಾತಾವರಣವೇ ಹೊರತು ಡೆವಲಪ್‌ಮೆಂಟ್, ಐಷಾರಾಮಿ ಮನೆಯಲ್ಲ. ಅದೇ ಕಾರಣಕ್ಕೆ ದೊಡ್ಡ ಶ್ರೀಮಂತರು ತಮ್ಮ ಕೊನೆಗಾಲದಲ್ಲಿ ಎಲ್ಲೋ ಒಂದು ಚಿಕ್ಕ ಫಾರ್ಮ್ ಹೌಸಿನಲ್ಲಿ ವಾಸಿಸುತ್ತಾರೆ' ಎಂದಿದ್ದರಂತೆ. ಪುನರ್ವಸುವಿನಲ್ಲಿ ವಿಶ್ವೇಶ್ವರಯ್ಯ,ಕೃಷ್ಣರಾವ್, ಎಸ್ ಜಿ ಫೋರ್ಬ್ಸ್, ಎಸ್ ಕಡಾಂಬಿ, ಮೊಹಮದ್ ಹಯಾತ್, ಸರ್ ಮಿರ್ಜಾ ಇಸ್ಮಾಯಿಲ್ ಮುಂತಾದ ದೀವಾನರು, ದಕ್ಷ ಎಂಜಿನಿಯರುಗಳು ಎಲ್ಲ ಪ್ರಗತಿಯ ಬಗ್ಗೆ ಎಷ್ಟೆಲ್ಲ ವಾದಗಳನ್ನು ಹೂಡಿದರೂ, ಕೃತಿಕಾರನ ಒಲವಿರುವುದು ಉಪ್ಪಿ ಹೇಳಿದ ಸಿದ್ಧಾಂತದ ಕಡೆಗೇ.
ಲಿಂಗನಮಕ್ಕಿ ಜಲಾಶಯದ ಹಿಂದಿನ ಕಥೆ,ವ್ಯಥೆ, ಅಲ್ಲಿನ ಹಳ್ಳಿಗಾಡಿನ ಶ್ರೀಮಂತ ಸಂಸ್ಕೃತಿ, ಜೋಗದ ಬಗ್ಗೆ ಗೊತ್ತಿಲ್ಲದ ಸಂಗತಿಗಳು ಇವೆಲ್ಲವನ್ನು ಡೇವಿಡ್ ಅಟೆನ್ಬರೋ ಬಿಬಿಸಿಗೆ ಮಾಡಿಕೊಟ್ಟ ಸಾಕ್ಷ್ಯಚಿತ್ರವೊಂದರಂತೆ ಹೃದಯಹಾರಿಯಾಗಿ ತೋರಿಸಿದ್ದಕ್ಕೆ ಗಜಾನನ ಶರ್ಮರಿಗೆ ಅಭಿನಂದನೆಗಳು.
---> Sharath Bhat Seraje
No comments:
Post a Comment