Tuesday, 9 July 2019

ಜೋಗಿಯವರ 'L', ನನ್ನ ಬೊಗಸೆಗೆ ಸಿಕ್ಕಿದಷ್ಟು

Analysis of  the novel "L" by Jogi by Sharath Bhat Seraje

ಜೋಗಿಯವರ ಹೊಸ ಕಾದಂಬರಿ 'L', ನನ್ನ ಬೊಗಸೆಗೆ ಸಿಕ್ಕಿದಷ್ಟು, ಬೊಗಸೆಯಿಂದ ಸೋರದೆ ಉಳಿದಷ್ಟು: ಅನ್ಯರೊರೆದುದನೆ ಬರೆದುದನೆ ಬರೆಬರೆದು ಓದುಗರನ್ನು ದಣಿಸುವ ಜಾಯಮಾನ ಜೋಗಿಯವರದ್ದಲ್ಲ ಎನ್ನುವುದು ಅವರ ಕಥೆಗಳನ್ನೋದುವರಿಗೆಲ್ಲ ಗೊತ್ತಿರುವ ವಿಚಾರವೇ. ಅವರದ್ದು ಕಥೆಗಳಿಗೆ ತೆರೆದಷ್ಟೇ ಬಾಗಿಲು; ಪ್ರಯೋಗಕ್ಕೆ ತೆರೆದೇ ಇರುವ ಬಾಗಿಲು. ಸ್ವರೂಪದಲ್ಲೂ,ಜೋಡಣೆಯಲ್ಲೂ, ಕೊನೆಗೆ ಹುರುಳಿನಲ್ಲೂ As clever as they come ಅಂತನ್ನಿಸುವ ಜಾಣತನ,ವಿನೋದಸ್ವಭಾವ, ಚಮತ್ಕಾರಪ್ರಿಯತೆ ಇವೆಲ್ಲ ಜೋಗಿಯವರ ಟ್ರೇಡ್ ಮಾರ್ಕುಗಳು. ಅಂಥದ್ದೊಂದು ಚತುರಸೃಷ್ಟಿಯ "ದೊಡ್ಡ ಸಣ್ಣಕಥೆ"ಯಾಗಿ ಜಕ್ಕುಳಿಸಿ, ರಂಜಿಸಿ, ತಲೆದೂಗಿಸಿದ್ದು ಜೋಗಿಯವರ "ಸಲಾಂ ಬೆಂಗಳೂರು". ತಂತ್ರಗಾರಿಕೆಯ ದೃಷ್ಟಿಯಿಂದ ಈ ಕಾದಂಬರಿಯೂ ಸಲಾಂ ಬೆಂಗಳೂರಿನ ಚಿಕ್ಕಪ್ಪನ ಮಗನಂತಹದ್ದು, ಮನೋಭಾವ ಮತ್ತು toneನಲ್ಲಿ ಕಿಶೋರ್ ಕುಮಾರನ ಚೆಲ್ಲಾಟಕ್ಕೂ ಮುಕೇಶನ ವಿಷಾದಗೀತೆಗಳಿಗೂ ಇರುವಂತಹ ಅಂತರ. ಹಾಗಾಗಿ ಇವೆರಡೂ ಕೃತಿಗಳು ಹತ್ತಿರವಿದ್ದೂ ದೂರ.
ಕಾವ್ಯ ಅಂದರೆ ಏನು ? ಕಾವ್ಯದ ಲಕ್ಷಣಗಳು ಯಾವುವು? ಕಾವ್ಯಕ್ಕೆ ಸೌಂದರ್ಯ ಹೇಗೆ ಬರುತ್ತದೆ? ಕವಿಯು ಹೇಗಿರುತ್ತಾನೆ, ಅವನ ಯೋಚನೆಯ ಪರಿಯೇನು ? ಅವನು ಯಾವ ಪರಿಕರಗಳನ್ನು ಬಳಸಿ ಕಾವ್ಯವನ್ನು ರಚಿಸುತ್ತಾನೆ? ಕಾವ್ಯದ ಪ್ರಯೋಜನ ಏನು? ಇಂತಹಾ ಮೂಲಭೂತವಾದ ಪ್ರಶ್ನೆಗಳಿಗೆ ಉತ್ತರ ಹುಡುಕುವ ಶಾಸ್ತ್ರಕ್ಕೆ ಕಾವ್ಯಮೀಮಾಂಸೆ ಅಂತ ಹೆಸರು. ಈ ಅರ್ಥದಲ್ಲಿ 'L' ಕಾದಂಬರಿಯ ನಾಯಕ ಲಕ್ಷ್ಮಣನೂ ಕಾವ್ಯಮೀಮಾಂಸೆಗೆ ಕೈ ಹಾಕಿದವನು. ತನ್ನ ಬವಣೆ, ಬೇಗುದಿಗಳಿಗೂ ತನ್ನ ಕಾವ್ಯಕ್ಕೂ ಎಷ್ಟು ಹತ್ತಿರದ ಸಂಬಂಧ ಅಂತ ಹುಡುಕುವವನು. ಅವನು ವಿದ್ವಾಂಸನಲ್ಲ, ಸಿದ್ಧಾಂತಿಯಲ್ಲ. ಅವನು ನಮ್ಮ ಭಾಮಹ, ದಂಡಿ, ವಾಮನ,ಕುಂತಕ, ಆನಂದವರ್ಧನ, ಅಭಿನವಗುಪ್ತರಂತೆ ಉದ್ದುದ್ದ ಸಿದ್ಧಾಂತಗಳನ್ನು ಮಂಡಿಸುವವನಲ್ಲ. ಅವನೊಬ್ಬ badass. ಸಿನಿಕನೂ.
Raymond Chandlerನ ಕಾದಂಬರಿಗಳಲ್ಲಿ ಬರುವ ಪತ್ತೆದಾರ Philip Marloweನ ಬಗ್ಗೆ ಒಬ್ಬರು ಹೀಗೆ ಹೇಳಿದ್ದಾರೆ : wisecracking, whiskey-drinking, tough-as-an-old-boot , Marlowe never minces his words or beats around the bush. He is blunt, terse, direct, sometimes dismissive and frequently rude. He talks tough and he talks smart. ನಮ್ಮ ಲಕ್ಷ್ಮಣನೂ ಇದೇ ಎರಕದವನು. ಹಳೇ ಚಿತ್ರಗಳಲ್ಲಿ ಬರುವ Humphrey Bogart, Robert Mitchum, Clint Eastwood, ನಾನಾ ಪಾಟೇಕರ್ ಮುಂತಾದವರಂತೆ. ಅವನ ಅನುಭವಗಳು ಕಹಿ, ಮಾತು ಕಟು - He is blunt, terse, direct, sometimes dismissive and frequently rude. He talks tough and he talks smart !!
ನಮ್ಮಲ್ಲಿ ಕಾವ್ಯ ಕಟ್ಟುವ ಕ್ರಿಯೆಯ ಬಗ್ಗೆಯೇ ಕಾವ್ಯ ಕಟ್ಟಿದವರಿದ್ದಾರೆ (ಬೇಂದ್ರೆಯವರ “ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ”), ಕಾವ್ಯ ಬರೆಯಲಾಗುತ್ತಿಲ್ಲ ಅನ್ನುವುದರ ಬಗ್ಗೆಯೇ ಕಾವ್ಯ ಬರೆದವರಿದ್ದಾರೆ(ಅಡಿಗರ ಕೂಪಮಂಡೂಕ) ! "English398: Fiction Workshop" ಅಂತೊಂದು ಕಥೆಯಿದೆ, ಕಥೆ ಬರೆಯುವ Workshopನಲ್ಲಿ ಹೇಳಿಕೊಡುವ ತಂತ್ರಗಳು ಆ ಕಥೆಯಲ್ಲಿಯೇ ಬರುತ್ತವೆ. ಇಂಥದ್ದನ್ನು metafiction ಅನ್ನುತ್ತಾರೆ, ಸಲಾಂ ಬೆಂಗಳೂರಿನಲ್ಲೂ metafiction ಇತ್ತು, L ಕೂಡಾ ಮೆಟಾ ಫಿಕ್ಷನ್ನೇ ಆದರೂ ಲಕ್ಷ್ಮಣನದು ಇನ್ನೊಂದೇ ಬಗೆಯ ಅನ್ವೇಷಣೆ. “ಆಳದನುಭವವನ್ನು ಮಾತು ಕೈ ಹಿಡಿದಾಗ, ಕಾವು ಬೆಳಕಾದಾಗ ಒಂದು ಕವನ” ಎನ್ನುವುದು ಕೆ. ಎಸ್‌. ನರಸಿಂಹಸ್ವಾಮಿಗಳ ಸಾಲು. ಬಡತನದಲ್ಲಿ ಬಳಲಿ, ಅಪ್ಪನಂತಿರದ ಅಪ್ಪನೊಂದಿಗೆ ಹೆಣಗಿ, ಪ್ರೇಮದಂತಿರದ ಪ್ರೇಮಜ್ವರದಲ್ಲಿ ತೊಳಲಿ, ಕಾವ್ಯವಾಗದ ಕಾವ್ಯದೊಂದಿಗೆ ಸೆಣಸಿ, ಉತ್ಸಾಹಗುಂದಿದ, ಕಠೋರ ಮನಸ್ಸಿನ, ಬಿರುಸು ಮಾತಿನ wisecracking ದೋಷದರ್ಶಿ ಇವನು. "ನೀನು ಸಿನಿಕ ಕಣಯ್ಯಾ" ಅಂತ ಯಾರಾದರೂ ಹೇಳಿದರೆ, 'A cynic is a man who, when he smells flowers, looks around for a coffin.' ಅಂತ ಹೇಳಿ, "ನನ್ನ ಜೀವನದಲ್ಲಿ ಮಾತ್ರ ಹೆಣದ ಪೆಟ್ಟಿಗೆ ಹತ್ತಿರವಿರದೆ, 'ಹೂವು ಮಾತ್ರ' ಅಂತ ಇರಲೇ ಇರಲಿಲ್ಲವಲ್ಲ" ಅಂತ ವಿಲವಿಲನೆ ಒದ್ದಾಡುತ್ತ ಇರಬಲ್ಲವನು. ಚುಚ್ಚುನುಡಿ ಮತ್ತು ಕಡುಮುಳಿಸು ಅವನ ಸ್ವಭಾವ, ಗಾಢವಾದ ವಿಷಾದ ಅವನಿಗೆ ನಿತ್ಯಸತ್ಯ, ನಾಟುನುಡಿ ಅವನಿಗೆ ಬಿಡುಗಡೆಗೆ/ಮುಕ್ತಿಗೆ ದಾರಿ.
ಇಂಥವನೊಬ್ಬ, "ಆಳದನುಭವವನ್ನು ಮಾತು ಕೈ ಹಿಡಿದಾಗ, ಕಾವು ಬೆಳಕಾದಾಗ" ಒಂದು ಕವನ ಆಗುತ್ತದೆಯೇ ಅಂತ ಅನ್ವೇಷಣೆ ಮಾಡಿದರೆ ಹೇಗಿರಬಹುದು ?! ಇಷ್ಟಕ್ಕೂ ಅನುಭವವು ಆಳ ಅಂತಾಗುವುದು ಯಾವಾಗ? ಅದು ಆಳದ ಅನುಭವ ಅಂತ ಗೊತ್ತಾಗುವುದು ಹೇಗೆ? ಅನುಭವವನ್ನು ಮಾತು ಕೈ ಹಿಡಿಯದಿದ್ದರೆ ಯಾವ ಗೋಡೆಗೆ ತಲೆ ಚಚ್ಚುವುದು? ಕಾವು ಬೆಳಕಾಗದಿದ್ದರೆ ಎಲ್ಲಿಗೆ ಹೋಗುವುದು ? ಲಕ್ಷ್ಮಣನಂಥವರಿಗೆ ಇವು ಅವನನ್ನು ಅಲ್ಲಾಡಿಸಿಬಿಡಬಹುದಾದ ಪ್ರಶ್ನೆಗಳು. ಹೀಗಾಗಿಯೇ ಆತ ತನ್ನ ನೆನಪುಗಳ ಸುರುಳಿ ಬಿಚ್ಚುತ್ತ ಹೋಗುತ್ತಾನೆ, ಅಲ್ಲಿ ಉತ್ತರಗಳನ್ನು ಕಾಣ ಹೊರಡುತ್ತಾನೆ. ಬಾಳಿಗೂ ಬರೆಹಕ್ಕೂ ನಂಟಿನ ಅಂಟು ಉಂಟೇ ಅಂತ ’ತನ್ನ ಕಾವ್ಯಕೆ ತಾಂ ಮಹಾಕವಿ ಮಣಿವಂತೆ!’ ಪ್ರಶ್ನೆಗಳ ಬಲೆ ಹೆಣೆಯುತ್ತ, ಹೋಗುತ್ತಾನೆ. ಪ್ರತೀ ಅಧ್ಯಾಯದಲ್ಲೂ ಕಾವ್ಯದ ಬಗ್ಗೆ ಸೂತ್ರರೂಪದ ಹೇಳಿಕೆಯೊಂದನ್ನು ಲಕ್ಷ್ಮಣ ಅಧ್ಯಾಯದ ಮೊದಲಲ್ಲೋ ಕೊನೆಯಲ್ಲೋ ಹೇಳುತ್ತಾನೆ. ಆ ಅಧ್ಯಾಯದಲ್ಲಿ ಬರುವ ಲಕ್ಷ್ಮಣನ ಜೀವನದ ಘಟನೆಗಳು ಈ ಸೂತ್ರರೂಪದ ಹೇಳಿಕೆಗೆ ಕಾರಣವಾಗುವಂತೆ ಇರುತ್ತವೆ. ಈ ಜಾಣ್ಣುಡಿಯಂಥ ಹೇಳಿಕೆಯನ್ನು ಸಚಿತ್ರವಾಗಿ ವಿವರಿಸುವಂತೆ, ಬೆಳೆಸುವಂತೆ,ವಿಶದಗೊಳಿಸುವಂತೆ, ಚತುರೋಕ್ತಿಯನ್ನು ಪರೀಕ್ಷೆಗೆ ಒಡ್ಡಿ ಅದರ ಸತ್ಯಾಸತ್ಯತೆಯನ್ನು ತೋರಿಸಿ ಕೊಡುವಂತೆ ಆ ಅಧ್ಯಾಯದಲ್ಲಿ ಪಾತ್ರಗಳು ವರ್ತಿಸುತ್ತವೆ. ಇದು ಒಂದು ತಂತ್ರವಾಗಿ ಕುತೂಹಲಕಾರಿಯಾಗಿದೆ. ಹೀಗಿರುವುದರಿಂದ, ಈ ವಾಕ್ಯದ ಎರಡು ಪಾಲು ಉದ್ದ ಮಾತ್ರವಿರುವ ಅಧ್ಯಾಯಗಳೂ ಇಲ್ಲಿವೆ !!
ಸಲಾಂ ಬೆಂಗಳೂರಿನಲ್ಲಿ ಒಂದು ಚೇಸ್ ಥ್ರಿಲ್ಲರಿಗೆ ಆಗುವಂತಹಾ ಕಥೆಯಿತ್ತು, ಇಲ್ಲಿ ಅಂತಹಾ ಕಥೆಯೇನೂ ಇಲ್ಲ. ಹೇಳಬೇಕಾದ್ದನ್ನು ಕಥೆಯಲ್ಲಿ ಬುದ್ಧಿವಂತಿಕೆಯಿಂದ ಅಡಗಿಸುವ ಸಲಾಂ ಬೆಂಗಳೂರಿನ ಕಲೆಗಾರಿಕೆ ಇಲ್ಲಿಲ್ಲವಾದ್ದರಿಂದ ನನಗೆ ಇದಕ್ಕಿಂತ ಅದೇ ಹೆಚ್ಚು ಇಷ್ಟವಾಯಿತು. ಷೇಕ್ಸಪಿಯರನ ಬ್ರೂಟಸ್ ಹೇಳುವ, "If there be any in this assembly, any dear friend of Caesar's, to him I say that Brutus' love to Caesar was no less than his. If then that friend demand why Brutus rose against Caesar, this is my answer: not that I loved Caesar less, but that I loved Rome more" ಎಂಬ ಮಾತಿನಂತೆ, ನನಗೆ L ಇಷ್ಟವಾಗಲಿಲ್ಲ ಅಂತಲ್ಲ, ಸಲಾಂ ಹೆಚ್ಚು ಹಿಡಿಸಿತು ಅಷ್ಟೇ ಅಂತ ಹೇಳಿಬಿಡುತ್ತೇನೆ
ತಮ್ಮ ಬಾಲ್ಯದ ನೆನಪುಗಳು, ತಮ್ಮ ಊರಿನ/ಹಳ್ಳಿಯ ವಿವರಗಳು, ತಾವು ಕಂಡ ವ್ಯಕ್ತಿಗಳು ಇವರನ್ನೆಲ್ಲ ತಮ್ಮ ಕಥೆಗಳಲ್ಲಿ ಬಲವಂತವಾಗಿ ಎಳೆದು ತರುವ ಚಪಲ ಎಲ್ಲರಿಗೂ ಇದ್ದದ್ದೇ. ಅವುಗಳಿಗೆ ಸಾಹಿತ್ಯಿಕ ಮೌಲ್ಯ ಇದೆಯೇ, ಕಥೆಗೆ ಇದೆಲ್ಲ ಬೇಕೇ ಅಂತ ಯೋಚಿಸದೆ, ನನ್ನ ಬಾಲ್ಯದ, ನಮ್ಮೂರಿನ ಸಂಗತಿಗಳನ್ನು ಹೇಗಾದರೂ ತಂದುಬಿಡಬೇಕು ಅಂತಿರುವವರು ನಮ್ಮಲ್ಲಿ ಹಲವರಿದ್ದಾರೆ. ನಾಸ್ಟಾಲ್ಜಿಯಾವೇ ಕಥೆಗೆ ಭಾರವಾಗುವಂತೆ ಬರೆಯುವವರೂ ಇಲ್ಲದಿಲ್ಲ.
"ನೀವು rationalist ಆದರೂ ನಿಮ್ಮ ಪಾತ್ರಗಳು ಸಂಪ್ರದಾಯ ಶರಣರು. ಹೀಗೇಕೆ?", ಅಂತ ಶಿವರಾಮ ಕಾರಂತರನ್ನು ಕೇಳಿದಾಗ, "ನಾನು ಬರೆದದ್ದು ಕಾದಂಬರಿ, ಆತ್ಮಕಥೆಯಲ್ಲ" ಅಂತ ಅವರು ಗುಡುಗಿದ್ದರು! ಜಯಂತ ಕಾಯ್ಕಿಣಿಯವರು ಒಂದು ಹೋಟೆಲಿಗೆ ಹೋಗಿದ್ದಾಗ, ಅವರ ಚಿತ್ರಗೀತೆಗಳ ಅಭಿಮಾನಿಯೊಬ್ಬ, "ನಿಮ್ದು ಲವ್ ಫೇಲ್ಯೂರ್ ಕೇಸಾ ಸರ್?" ಅಂತ ಕೇಳಿದ್ದನಂತೆ! "ನಾಸ್ತಿಕರಾದ ನೀವು ಕೃಷ್ಣನ ಬಗ್ಗೆ ಇಷ್ಟು ಪ್ರೀತಿಯಿಂದ ಹೇಗೆ ಬರೆದಿರಿ, ಅಷ್ಟೊಳ್ಳೆ ಭಜನ್ ಗಳನ್ನು ಹೇಗೆ ಬರೆದಿರಿ, ಆಸ್ತಿಕರಲ್ಲದವರು, ಹಿಂದೂಧರ್ಮದ ಅನುಯಾಯಿಗಳಲ್ಲದವರು ಹೀಗೆ ಬರೆಯಲು ಸಾಧ್ಯವೇ?" ಅಂತೊಬ್ಬರು ಜಾವೇದ್ ಅಕ್ತರರನ್ನು ಕೇಳಿದ್ದರಂತೆ. ಅದಕ್ಕವರು, "ನನ್ನ ಪುಣ್ಯಕ್ಕೆ ನೀವು ಗಬ್ಬರ್ ಸಿಂಗನ ಡೈಲಾಗ್ ಬರೆದವರು ಡಕಾಯಿತರೇ ಆಗಿರಬೇಕು ಅನ್ನಲಿಲ್ಲವಲ್ಲ" ಅಂದಿದ್ದರಂತೆ! ಎಲ್ ಕಾದಂಬರಿಯ ನಾಯಕ ಈ ವಿಚಾರಗಳಿಗೆ ಹೇಗೆ ಪ್ರತಿಕ್ರಿಯಿಸಬಹುದು? ಕಥೆಯಲ್ಲಿ ಕಥೆಗಾರ ಎಷ್ಟು ಕಾಣಿಸಿಕೊಳ್ಳಬೇಕು, ಅವನ ಜೀವನ ಎಷ್ಟು ಬರಬೇಕು ಎಂಬ ಪ್ರಶ್ನೆ L ಕಾದಂಬರಿಯದ್ದೂ ಆಗಿದೆ ಅಂದುಕೊಂಡು ಇಷ್ಟು ಕೊರೆದೆ.
ಸು.ರಂ. ಎಕ್ಕುಂಡಿಯವರ "ಇಬ್ಬರು ರೈತರು" ಎಂಬ ಕವಿತೆಯಲ್ಲಿ ಕಾವ್ಯಕ್ಕೂ ಬದುಕಿಗೂ ಇರುವ ನಂಟನ್ನು ಇನ್ನೊಂದು ತರದಲ್ಲಿ ನೋಡಲಾಗಿದೆ. ಅದರಲ್ಲಿ ಇಬ್ಬರು ರೈತರು ಉಜ್ಜಯಿನಿಗೆ ಬರುತ್ತಾರೆ. ಅದು ಕಾಳಿದಾಸನ ಊರು. ಅವನ ಮನೆಗೇ ಬರುತ್ತಾರೆ. ಹೇಳಿ ಕೇಳಿ ಒಬ್ಬ ಕವಿಯ ಮನೆಗೆ ಯಾಕೆ ಬರುತ್ತಾರೆ ಅನ್ನುವುದು ಇಂಟೆರೆಸ್ಟಿಂಗ್ ಆಗಿದೆ. ಕವಿಯು ಕಾವ್ಯಗಳಲ್ಲಿ, ಪಾತ್ರಗಳನ್ನು ಸಂಕಷ್ಟಗಳಿಂದ ಪಾರು ಮಾಡಿದವನು( "ಕಣ್ವಪುತ್ರಿಯ ದೊರೆಗೆ ಒಪ್ಪಿಸಿದಿರಿ/ಅಂದು ಶಾಪಗ್ರಸ್ತಬಲೆಗಿದಿರಾಗಿದ್ದ ಅನಾಹುತವ, ಉಂಗುರದಿ ತಪ್ಪಿಸಿದಿರಿ"). ಇಂಥದ್ದು ನಿಜಜೀವನದಲ್ಲೂ ಯಾಕಾಗಬಾರದು ಅನ್ನುವುದು ಮುಗ್ಧ ರೈತರ ನಿಲುವು. ಕಾಳಿದಾಸನ ಮೇಘದೂತ ಕಾವ್ಯದಲ್ಲಿ ಯಕ್ಷನೊಬ್ಬನು ಒಂದು ಮೋಡದ ಹತ್ತಿರ ಮಾತಾಡಿ, ದೂರದಲ್ಲಿ ಅಲಕಾನಗರಿಯಲ್ಲಿದ್ದ ಯಕ್ಷಿಯ ಕಡೆಗೆ ಆ ಮೋಡವನ್ನು ಸಂದೇಶವಾಹಕನಾಗಿ ಕಳಿಸಿಕೊಟ್ಟವನು. ಹಾಗಾಗಿ ಕವಿಯ ಮಾತನ್ನು ಮೋಡವೂ ಕೇಳೀತು ಅಂತ ಆ ರೈತರ ನಂಬುಗೆ !! ಮೋಡಕ್ಕೆ ಸ್ವಲ್ಪ influence ಮಾಡಿಸಿ, ದಾರಿಯಲ್ಲಿ ನಮ್ಮ ಹೊಲಗಳಲ್ಲಿ ಬಾಯಾರಿ ಒಣಗಿನಿಂತ ಪೈರಿಗೆ ನೀರು ಸುರಿಸಲು ಹೇಳ್ತೀರಾ" ಅಂತ ರೈತರು ಕೋರಿಕೊಳ್ಳುವಲ್ಲಿಗೆ ಎಕ್ಕುಂಡಿಯವರ ಕವನ ನಿಲ್ಲುತ್ತದೆ. ಎಲ್ ಕಾದಂಬರಿಯ ನಾಯಕನಿಗೆ ಈ ಕವಿತೆ ಇಷ್ಟವಾಗುತ್ತಿತ್ತೆಂದು ಕಾಣುತ್ತದೆ. ನೇಮಿಚಂದ್ರನು ಬರೆದ, ಕಪಿ ಸಂತತಿಯು ಕಡಲಿನಲ್ಲಿ ಸೇತುವೆ ಕಟ್ಟಿತೋ ಬಿಟ್ಟಿತೋ ಗೊತ್ತಿಲ್ಲ, ಕವಿಯಂತೂ ತನ್ನ ಕಾವ್ಯಬಂಧದಲ್ಲಿ ಅದನ್ನು ಕಟ್ಟಿಬಿಟ್ಟಿದ್ದಾನೆ(ಕಟ್ಟುಗೆ ಕಟ್ಟದಿರ್ಕೆ ಕಡಲಂ ಕಪಿಸಂತತಿ..... ಕವಿಗಳ್‌ ಕೃತಿಬಂಧದೊಳಲ್ತೆ ಕಟ್ಟಿದರ್‌) ಎಂಬ ಸಾಲನ್ನು ಎಲ್ ಕಾದಂಬರಿಯ ಲಕ್ಷ್ಮಣ ಒಪ್ಪುತ್ತಾನೋ ಬಿಡುತ್ತಾನೋ ಗೊತ್ತಿಲ್ಲ. ಜೀವನ ಕಲೆಯನ್ನು ಅನುಸರಿಸುತ್ತದೆಯೇ, ಕಲೆ ಜೀವನವನ್ನೋ ಎನ್ನುವ ಪ್ರಶ್ನೆಗೆ ವುಡಿ ಅಲನ್ ಒಂದು ತಮಾಷೆಯ ಉತ್ತರ ಕೊಟ್ಟಿದ್ದಾನೆ : 'Life doesn't imitate art, it imitates bad television.'
ಹರೀಶ್ ಕೇರ ಅವರು ಗುರುತಿಸಿದಂತೆ "ಕವಿ ನಿಜಕ್ಕೂ ತನ್ನನ್ನೇ ಮಥಿಸಿಕೊಳ್ಳಲು ಹೊರಟರೆ ಏನಾಗುತ್ತದೆ?" ಎಂಬುದನ್ನು ಹೇಳುವ ಕಾದಂಬರಿಯಿದು. ಜೋಗಿಯವರು ಬರೆಯುವವರ ಸಂಕಟಗಳನ್ನು ತಮಗೇ ವಿಶಿಷ್ಟವಾದ witty ಶೈಲಿಗೆ ವಿಷಾದ, ಉತ್ಕಟತೆ, ವ್ಯಥೆಗಳಲ್ಲಿ ಅದ್ದಿ ಹೇಳಿರುವ ಕಥೆಯಿದು. ಇಂಗ್ಲೀಷಿನಲ್ಲಿ ಹೇಳುವಂತೆ ಜೋಗಿ ಮೀಟ್ಸ್ ಎಂ ವ್ಯಾಸ, ಚಿತ್ತಾಲ and ಖಾಸನೀಸ ಅಂತಲೂ ಹೇಳಬಹುದು. ಕಾಡುವುದು ಖಚಿತ.

No comments:

Post a Comment