ಅವನು ಪುತ್ತೂರು ಬಿಟ್ಟು ಹತ್ತೂರು ಸುತ್ತಿ ಬೆಂಗಳೂರಿಗೆ ಬಂದಿದ್ದ. ಸಿನೆಮಾಗಳನ್ನು ಮಲ್ಟಿಪ್ಲೆಕ್ಸಿನ ಸಿಕ್ಕಾಪಟ್ಟೆ ಸಭ್ಯರ ಜೊತೆ ನೋಡುವುದಕ್ಕಿಂತ ಕೆಂಪೇಗೌಡ ರಸ್ತೆಯ ಗೌಜಿ ಗದ್ದಲಗಳಲ್ಲಿ ನೋಡಿದರೇ ಸುಖ ಅಂತ ನಂಬಿದ್ದ. ಹಾಗಂತ ಗೆಳೆಯರಲ್ಲಿ ಹೇಳುತ್ತಲೂ ಇದ್ದ. ಹೋಗುತ್ತಾ ಸಿ. ಅಶ್ವತ್ಥರು ಸಂಯೋಜಿಸಿದ ನಮ್ಮ ಕವಿಗಳ ಹಾಡುಗಳನ್ನು ಕಿವಿಗೆ ಸುರುವಿಕೊಳ್ಳುತ್ತಿದ್ದ. ಹಾಗೆ ಹೋದಾಗಲೆಲ್ಲ ಅಲ್ಲೇ ರಸ್ತೆಯಲ್ಲಿ ಗಾಡಿಯೊಂದರಲ್ಲಿ ಮಾರುವ ಬೇಯಿಸಿದ ಶೇಂಗಾ ಬೀಜ ತಿನ್ನುವುದು ವಾಡಿಕೆ. ಒಣ ಕಡಲೆಯೂ, ಈರುಳ್ಳಿ ಉಪ್ಪು ಮೆಣಸಿನ ಹುಡಿ ಹಾಕಿ ಬೇಯಿಸಿದ ಕಡಲೆಯೂ ಒಟ್ಟೊಟ್ಟಿಗೆ ಓಟಿಗೆ ನಿಂತರೆ ಒಣ ಶೇಂಗಾ ಬೀಜದ ಠೇವಣಿಯೂ ಉಳಿಯಲಿಕ್ಕಿಲ್ಲ ಅಂತ ನಂಬಿದ್ದ.
ಅಶ್ವತ್ಥರ ಹಾಡಿನಿಂದ ಕರ್ಣಾನಂದ, ಚಿತ್ರ ನೋಡಿ ಕಣ್ಣಿಗೆ ಖುಷಿ, ಆಮೇಲೆ ಉದರಪೂಜೆ. ಸರಿ, ಈ ಶುಕ್ರವಾರವೂ ಆ ಕಡೆಗೆ ಸವಾರಿ ಹೊರಟದ್ದಾಯಿತು. ಕೆಂಪೇಗೌಡ ರಸ್ತೆ ಹಸಿದ ಹೆಬ್ಬಾವಿನಂತೆ ಮಲಗಿತ್ತು. ಚಿತ್ರ ಮುಗಿಯಿತು. ಹಾಡುಗಳು ನೆನಪಾದವು, ಹೊಟ್ಟೆ ತಾಳ ಹಾಕಿತು. ಗಾಡಿಯ ಜಾಗದ ಕಡೆಗೆ ಪಾದ ಬೆಳೆಸಿದ. ಅರೆ ! ನೋಡಿದರೆ ಗಾಡಿ ಅಲ್ಲಿಲ್ಲ! ಮೆಲ್ಲನೇ ಗುನುಗಿಕೊಂಡ,
.
.
.
.
.
.
.
.
.
.
.
.
ಕಾಣದಾ ಕಡಲೆಗೆ ಹಂಬಲಿಸಿದೆ ಮನ !
.
.
.
.
.
.
.
.
.
.
.
.
ಕಾಣದಾ ಕಡಲೆಗೆ ಹಂಬಲಿಸಿದೆ ಮನ !
# ಟೈಂಪಾಸ್ ಕಡ್ಲೇ ಕಾಯ್
No comments:
Post a Comment