Friday, 9 June 2017

ಕುಮಾರವ್ಯಾಸನೂ ಚಿತ್ರರಂಗವೂ

ಈ ಪ್ರಯತ್ನದೊಂದಿಗೆ ನನ್ನ "ಹಳಗನ್ನಡ ತಲೆಹರಟೆ"ಯ trilogy ಪೂರ್ತಿಯಾಗುತ್ತಿದೆ. "ಸದ್ಯ, ಈಗಲಾದರೂ ಮುಗಿಯಿತಲ್ಲ", ಅಂತ ನೀವು ನಿಟ್ಟುಸಿರು ಬಿಡಬಹುದು, "ಆಗಲೇ ಮುಗಿಯಿತೇ ? ಇದು ಶುರುವಾದದ್ದೇ ಗೊತ್ತಿರಲಿಲ್ಲ" ಅಂತಂದು ಗಹಗಹಿಸಿ ನಗಬಹುದು.
ಕನ್ನಡದ ಮಾಸ್ ಚಿತ್ರಗಳನ್ನೂ ಕುಮಾರವ್ಯಾಸನನ್ನೂ ಬೆಸೆಯುವ ಪ್ರಯತ್ನ ಈ ಸಲ.
ನಮ್ಮ ಹೀರೋಗಳು ತಮ್ಮನ್ನು ತಾವೇ ಬಾಕ್ಸ್ ಆಫೀಸ್ ಸುಲ್ತಾನ , ಆರಡಿ ಕಟೌಟು , ಪವರು , ನಂದೇ ಹವಾ ಅಂತೆಲ್ಲಾ ಹೇಳಿಕೊಳ್ಳುತ್ತಾರಷ್ಟೇ. ಇದಕ್ಕೆ ನಮ್ಮ ಮಾಸ್ ರೈಟರ್ ಗಳು ಸ್ಪೂರ್ತಿ ಪಡೆಯುವುದಾದರೆ ನಮ್ಮ ಕುಮಾರವ್ಯಾಸನಿಂದಲೇ ಪಡೆಯಬಹುದು.
ಆತ ತನ್ನ ಕಾವ್ಯ ರಚನಾ ಕ್ರಮದ ಬಗ್ಗೆ ಬರೆಯುವುದು ಹೀಗೆ :
ಹಲಗೆಬಳಪವ ಪಿಡಿಯದೊಂದ
ಗ್ಗಳಿಕೆ ಪದವಿಟ್ಟಳುಪದೊಂದ
ಗ್ಗಳಿಕೆ ಪರರೊಡ್ಡವದ ರೀತಿಯ ಕೊಳ್ಳದಗ್ಗಳಿಕೆ|
ಬಳಸಿಬರೆಯಲು ಕಂಠಪತ್ರದ
ವುಲುಹುಗೆಡದಗ್ಗಳಿಕೆಯೆಂಬೀ
ಬಲುಹು ಗದುಗಿನ ವೀರನಾರಾಯಣನ ಕಿಂಕರಗೆ||
ಹಲಗೆಬಳಪವ ಪಿಡಿಯದೊಂದಗ್ಗಳಿಕೆ - ಈಗಿನ ಭಾಷೆಯಲ್ಲಿ ಹೇಳುವುದಾದರೆ, ಡ್ರಾಫ್ಟ್ ವರ್ಷನ್, ವರ್ಷನ್ ಒನ್ ,ವರ್ಷನ್ ಟೂಗಳನ್ನೆಲ್ಲಾ ಬರೆದವನೇ ಅಲ್ಲ ನಮ್ಮ ಕವಿ, ಹಲಗೆ, ಬಳಪ ಇವೆಲ್ಲ ಬೇಕಾಗುವುದು ಯಾರಿಗೆ ? ತೋಚಿದ್ದನ್ನು ಡ್ರಾಫ್ಟ್ ಆಗಿ ಬರೆದು, ಉಜ್ಜಿ ಮತ್ತೆ ಬರೆಯುವವರಿಗೆ, ನಮ್ಮದು ಹಾಗೆಲ್ಲ ಮಾಡುವ ಸೀನೇ ಇಲ್ಲ ಅನ್ನುತ್ತಾನೆ ಕವಿ.
ಪದವಿಟ್ಟಳುಪದೊಂದಗ್ಗಳಿಕೆ - ಹಲಗೆ ಬಳಪವೇ ಹಿಡಿಯದ ಪುಣ್ಯಾತ್ಮ ಇನ್ನು ಇಟ್ಟ ಪದಗಳನ್ನು ಅಳಿಸುತ್ತಾನೆಯೇ ? ಕುಮಾರವ್ಯಾಸನ ಕೀಬೋರ್ಡಿಗೆ backspaceನ ಅಗತ್ಯವೇ ಇರಲಿಲ್ಲವಂತೆ.
 ಪರರೊಡ್ಡವದ ರೀತಿಯ ಕೊಳ್ಳದಗ್ಗಳಿಕೆ - ಇಷ್ಟು ಅಗ್ಗಳಿಕೆಗಳು ಇರುವ ಆಸಾಮಿ ಅವರಿವರು ಬರೆದದ್ದನ್ನು ಕಾಪಿ ಪೇಸ್ಟ್ ಮಾಡುತ್ತಾನೆಯೇ ? ಊಹೂಂ . ಪರರ ರೀತಿಯನ್ನು ಅನುಕರಣೆ ಮಾಡುವವನಲ್ಲ ಆತ .
ಬಳಸಿಬರೆಯಲು ಕಂಠಪತ್ರದವುಲುಹುಗೆಡದಗ್ಗಳಿಕೆ - ತಾಳೆಗರಿಯ ಮೇಲೆ stylusನ ತರದ ಆ ಕಾಲದ ಲೋಹದ ಪೆನ್ನಿನಲ್ಲಿ ಬರೆದರೆ (ಕೆತ್ತಿದರೆ) ಕರಕರ ಕರ ಅಂತ ಶಬ್ದವಾಗುತ್ತಿತ್ತು. ಆ ಶಬ್ದ ಕಂಠಪತ್ರದ ಉಲುಹು. ನಮ್ಮ ಬೆಂಗಳೂರಿನಲ್ಲಿ ನಿಲ್ಲದ ವಾಹನಗಳ ಹಾರ್ನಿನಂತೆ, ಈ ಕರಕರ ಶಬ್ದವೂ ನಿಲ್ಲುತ್ತಿರಲಿಲ್ಲವಂತೆ, ಸ್ವಲ್ಪ ತಡೆದು, ತಲೆ ತುರಿಸಿ, ಇನ್ನು ಏನು ಕೊರೆಯೋಣ ಅಂತ ಯೋಚಿಸಿ ಬರೆಯುವವರಾದರೆ ನಿಲ್ಲಿಸಿ ಬರೆಯಬೇಕು. ಕುಮಾರವ್ಯಾಸನದ್ದು ಅಲ್ಲೇ ಡ್ರಾ, ಅಲ್ಲೇ ಬಹುಮಾನ ಕರಕರ ಸದ್ದು ಕೇಳಿ ಸುಸ್ತಾಗಿ ನಿಲ್ಲಿಸಿಯಾನೇ ಹೊರತು, ತಲೆಯಲ್ಲಿ ಸರಕು ಖಾಲಿಯಾಗಿ ನಿಲ್ಲಿಸುವ ಪ್ರಮೇಯವೇ ಇಲ್ಲ .

ಇಷ್ಟಾಗಿ ನಮ್ಮ ಪುನೀತು , ಶಿವಣ್ಣ ನಾವು ರಾಜಕುಮಾರರ ಮಕ್ಕಳು ಅನ್ನುವಂತೆ , ಸುದೀಪ್ ವಿಷ್ಣುವರ್ಧನರ ಉತ್ತರಾಧಿಕಾರಿಯಾಗಿರುವ ಹಾಗೆ ಕುಮಾರವ್ಯಾಸ ವೀರನಾರಾಯಣನ ಅಭಿಮಾನಿ, ವೀರನಾರಾಯಣನೇ ಹೇಳಿ ಬರೆಸುತ್ತಿದ್ದಾನೆ ಎಂಬ ಭಾವ ಕವಿಯದ್ದು.
ಇನ್ನು ನಮ್ಮಲ್ಲಿ ಹೀರೋವನ್ನು ಹುಲಿ ಸಿಂಹಗಳಿಗೆ ಹೋಲಿಸಿ ಹಾಡಿ ಹೊಗಳುವ ಬಿಲ್ಡಪ್ಪು ಉಂಟಷ್ಟೇ, ಕುಮಾರವ್ಯಾಸನ ಬಿಲ್ಡಪ್ಪು ಒಂದನ್ನೂ ನೋಡಿಬಿಡೋಣ. ಅಭಿಮನ್ಯು ಚಕ್ರವ್ಯೂಹದ ಕಡೆಗೆ ಹೊರಟಾಗ, ದೊಡ್ಡ ದೊಡ್ಡವರ ಜೊತೆ ಈ ಬಚ್ಚಾ ಏನು ಮಾಡಿಯಾನು ಎಂಬ ಶಂಕೆ ಬಂದಾಗ ಅಭಿಮನ್ಯು ಹೇಳುವುದು ಹೀಗೆ :
ಬವರವಾದರೆ ಹರನ ವದನಕೆ
ಬೆವರ ತಹೆನವಗೆಡಿಸಿದರೆ ವಾ
ಸವನ ಸದೆವೆನು ಹೊಕ್ಕಡಹುದೆನಿಸುವೆನು ಭಾರ್ಗವನ
ಜವನ ಜವಗೆಡಿಸುವೆನು ಸಾಕಿ
ನ್ನಿವರವರಲೇನರ್ಜುನನು ಮಾ
ಧವನು ಮುನಿದೊಡೆ ಗೆಲುವೆನಂಜದೆ ರಥವ ಹರಿಸೆಂದ
ಬವರವಾದರೆ ಹರನ ವದನಕೆ ಬೆವರ ತಹೆನು- ನಮ್ಮ ನಿಮ್ಮಂತವರಾದರೆ ಸಿಲ್ಕ್ ಬೋರ್ಡಿನ ಟ್ರಾಫಿಕ್ಕಿಗೇ ಬೆವರಿಳಿಸುವವರು . ಹರ ಹಾಗಲ್ಲ , ಆತ ಹೇಳಿಕೇಳಿ ಮೂರನೇ ಕಣ್ಣಿರುವವನು, ಬ್ರಹ್ಮಾಂಡವನ್ನೇ ಸುಡಬಲ್ಲ ಕಣ್ಣು ಅದು (ಈ ಶಿವ ಬೇಸಗೆಯಲ್ಲಿ ಮಂಗಳೂರಿಗೆ ಬಂದಿದ್ದರೆ ಬೆವರುತ್ತಿದ್ದನೋ ಏನೋ ಆ ಮಾತು ಬೇರೆ), ಆದರೆ ಅಂತಹಾ ಕಣ್ಣಿದ್ದೂ ಹರ ಬೆವರುವವನಲ್ಲ, ಅಂತಹಾ ಕೂಲ್ ವ್ಯಕ್ತಿಯ ಮುಖದಲ್ಲಿ ಬೆವರಿಳಿಸುತ್ತೇನೆ ಅನ್ನುತ್ತಾನೆ ಅಭಿಮನ್ಯು. ಇಂದ್ರ , ಭಾರ್ಗವ ಯಾರು ಬಂದರೂ ಚಚ್ಚುವುದೇ .
ಜವನ ಜವಗೆಡಿಸುವೆನು - ಜವ ಅಂದರೆ ಯಮ ಅಂತಲೂ ಆಗುತ್ತದೆ , ವೇಗ, ರಭಸ ಅಂತಲೂ ಅರ್ಥ . ಯಮನಿಗೇ, "ಈ ಹುಡುಗ ಏನು ಫಾಸ್ಟ್ ಅಪ್ಪಾ" ಅನಿಸುವಂತೆ ಮಾಡುತ್ತೇನೆ. ಇದು ಅಭಿಮನ್ಯುವಿನ ಪ್ರತಾಪ .

ಕೊನೆಯದಾಗಿ, ತನ್ನ ಕೃತಿ ಹೇಗಿದೆ ಅಂತ ಕುಮಾರವ್ಯಾಸ ಹೇಳುವ ಮಾತು :
ಅರಸುಗಳಿಗಿದು ವೀರ ದ್ವಿಜರಿಗೆ
ಪರಮ ವೇದದ ಸಾರ ಯೋಗೀ
ಶ್ವರರ ತತ್ವವಿಚಾರ ಮಂತ್ರಿಜನಕ್ಕೆ ಬುದ್ಧಿಗುಣ
ವಿರಹಿಗಳ ಶೃಂಗಾರ ವಿದ್ಯಾ
ಪರಿಣತರಲಂಕಾರ ಕಾವ್ಯಕೆ
ಗುರುವೆನಲು ರಚಿಸಿದ ಕುಮಾರವ್ಯಾಸ ಭಾರತವ
ಇದು ನಮ್ಮ ಗಾಂಧಿನಗರದ ಮಾಸ್ ಚಿತ್ರಗಳ ನಿರ್ಮಾಪಕರಿಗೆ ಸಿಕ್ಕಿದರೆ ಅವರಿಗೆ ಹೇಗೆ ಕಾಣಬಹುದು ? ಹೀಗೆ :
ಅರಸುಗಳಿಗಿದು ವೀರ - ಇಲ್ಲಿ ನಂ ಅಪ್ಪುದು ಒಂದು ಸಕ್ಕತ್ ಫೈಟ್ ಬರುತ್ತೆ.
ದ್ವಿಜರಿಗೆ ಪರಮ ವೇದದ ಸಾರ - ಇಲ್ಲಿ ನಮ್ಮ ಯೋಗರಾಜ ಭಟ್ರು ಬರೆದಿರೋ ಓತ್ಲಾ ವೇದಾಂತ ಸಾಂಗು ಬರುತ್ತೆ , ಹರಿಕೃಷ್ಣ ಇಲ್ಲಾ ಟಿಪ್ಪು ಹಾಡ್ತಾರೆ
ಯೋಗೀಶ್ವರರ ತತ್ವವಿಚಾರ ಮಂತ್ರಿಜನಕ್ಕೆ ಬುದ್ಧಿಗುಣ - ಫ್ಯಾಮಿಲಿಗೆ ಒಂದೊಳ್ಳೆ ಮೆಸೇಜ್ ಕೊಡ್ತೀವಿ !
ವಿರಹಿಗಳ ಶೃಂಗಾರ - ಇಲ್ಲಿ ಕಾಯ್ಕಿಣಿ ಸರ್ ದು ಪ್ಯಾಥೋ ಸಾಂಗ್ ಬರುತ್ತೆ ಸೋನು ನಿಗಂ ವಾಯ್ಸಲ್ಲಿ !
ವಿದ್ಯಾಪರಿಣತರಲಂಕಾರ - ಫಾರಿನ್ ಅಲ್ಲಿ ಶೂಟ್ ಮಾಡ್ತೀವಿ !

No comments:

Post a Comment