Monday, 1 January 2018

ಹಿಂದಿ ಹೇರಿಕೆ ಮತ್ತು ತುಳುವಿನ ಮೇಲೆ ಕನ್ನಡ ಹೇರಿಕೆ

ಹಿಂದಿ ಹೇರಿಕೆಯ ಬಗ್ಗೆ ತಲೆ ಚಿಟ್ಟು ಹಿಡಿಯುವಷ್ಟು ಚರ್ಚೆ ಆಗುತ್ತಿರುವುದು ಸಾಲದು ಎಂಬಂತೆ ಈಗ ತುಳುವಿನ ಮೇಲೆ ಕನ್ನಡ ಹೇರಿಕೆ
ಆಗುತ್ತಿದೆ ಅಂತಲೂ ಒಂದು ವಾದ ಶುರುವಾಗಿದೆಯಂತೆ , ಈ ಬಗ್ಗೆ ರಕ್ಷಿತ್ ಅವರ ಪೋಸ್ಟಿನಲ್ಲಿ ನಾನು ಹಾಕಿದ ಕಮೆಂಟು :

ತುಳುವಿನ ಮೇಲೆ ಕನ್ನಡದ ಹೇರಿಕೆ ಆಗಿದ್ದೇ ಆದರೆ ಅದು ಪ್ರಾಯಶಃ ಐದನೇ ಅಥವಾ ಆರನೇ ಶತಮಾನದಲ್ಲಿ ಕನ್ನಡದ ರಾಜರುಗಳಿಂದ ಆಗಿರಬೇಕು, ಅಷ್ಟು ಹಿಂದೆಯೇ ಅಲ್ಲಿ ಕನ್ನಡ ಬಂದದ್ದರಿಂದ ಅಲ್ಲಿನ ಬಹಳಷ್ಟು ಜನಕ್ಕೆ ಅಮ್ಮನಾಗಿ ತುಳು ಇದ್ದರೂ ಚಿಕ್ಕಮ್ಮನಾಗಿ ಕನ್ನಡ ತುಂಬ ಮೊದಲಿನಿಂದಲೂ ಇತ್ತು.
ಒಂದು ಉದಾಹರಣೆಯಿಂದ ಇದು ಸ್ಪಷ್ಟವಾಗುತ್ತದೆ: ಯಕ್ಷಗಾನ ಏನಿಲ್ಲವೆಂದರೂ ಎಂಟು ನೂರು ವರ್ಷಗಳಷ್ಟು ಹಳೆಯದು, ಈ ಯಕ್ಷಗಾನ ಮೊದಲಿನಿಂದಲೂ ಕನ್ನಡದಲ್ಲೇ ಇತ್ತು (ತುಳು ಯಕ್ಷಗಾನಗಳು ಬಂದದ್ದು ಈ ಶತಮಾನದಲ್ಲಿ). ಒಂದು ಊರಿನ ಒಂದು ಜನಪ್ರಿಯ ಕಲೆ ಪರವೂರಿನ ಭಾಷೆಯಲ್ಲಿ ಇರುತ್ತದೆಯೇ ? ಈಗ ಬೆಂಗಳೂರಿನಲ್ಲಿ ಹಿಂದಿ ಚಲನಚಿತ್ರಗಳನ್ನೋ , ಪಂಜಾಬಿ ಚಿತ್ರಗಳನ್ನೋ ಮಾಡುತ್ತಾರೆಯೇ ? ಮೈಸೂರಿನಲ್ಲಿ ಮಲಯಾಳಿ ನಾಟಕಗಳನ್ನು ಮಾಡುತ್ತಾರೆಯೇ ? ತೀರ್ಥಹಳ್ಳಿಯಲ್ಲಿ ಒಡಿಯಾ ಭಾಷೆಯ ಭಾವಗೀತೆಗಳನ್ನು ಹಾಡುತ್ತಾರೆಯೇ ? ಕನ್ನಡ ಈ ನೆಲದ ಭಾಷೆ ಅಲ್ಲದಿದ್ದರೆ ಯಕ್ಷಗಾನದಂತಹ ಜನಪ್ರಿಯ ಕಲಾ ಪ್ರಕಾರ ಕನ್ನಡದಲ್ಲಿ ಯಾಕಿರುತ್ತಿತ್ತು ? ಇದು ಯೋಚಿಸಬೇಕಾದ ವಿಚಾರ.

1840ರಲ್ಲಿ ಹರ್ಮನ್ ಮೊಗ್ಲಿಂಗ್ ಕನ್ನಡದ ಪ್ರಪ್ರಥಮ ಸಮಾಚಾರ ಪತ್ರಿಕೆಯನ್ನು ಮಂಗಳೂರಿನಲ್ಲಿ ಶುರು ಮಾಡಿ ಅದನ್ನು ‘ಮಂಗಳೂರು ಸಮಾಚಾರ’ ಅಂತ ಯಾಕೆ ಕರೆದ ? ಈಗ ತಿರುವನಂತಪುರದಲ್ಲಿ ಯಾರಾದರೂ ಬೆಂಗಾಲಿ ಪತ್ರಿಕೆ ಮಾಡುತ್ತಾರೆಯೇ ? ಕನ್ನಡ ಈ ಊರಿನ ಭಾಷೆಯಾಗಿರದಿದ್ದರೆ ಇದು ಸಾಧ್ಯವೇ ಇರಲಿಲ್ಲ. ಕರ್ನಾಟಕ ರಾಜ್ಯ ಆಗುವ ಎಷ್ಟೋ ಮೊದಲೇ ಬಂದ ಸಾಹಿತಿಗಳಾದ ಮಂಜೇಶ್ವರ ಗೋವಿಂದ ಪೈ , ಮುದ್ದಣ, ಪಂಜೆ ಮಂಗೇಶ ರಾಯರು ಇವರೆಲ್ಲ ಕನ್ನಡದಲ್ಲಿಯೇ ಬರೆದು, ಕನ್ನಡದ ಅಭಿಮಾನಿಗಳು ಅಂತಲೇ ಯಾಕೆ ಹೆಸರು ಪಡೆದಿದ್ದರು? ಈಗ ನಾವು ಮಾಡುತ್ತಿರುವ "ಕನ್ನಡ ಕಸ್ತೂರಿ" ಎಂಬ ಪ್ರಯೋಗವನ್ನೂ ಮೊದಲು ಮಾಡಿದ್ದು ತುಳುನಾಡಿನ ಮುದ್ದಣನೇ ("ಕನ್ನಡಂ ಕತ್ತುರಿಯಲ್ತೆ" ಅಂದರೆ ಕನ್ನಡವು ಕಸ್ತೂರಿಯಲ್ಲವೇ ಎಂಬುದು ಮುದ್ದಣನ ಮಾತು), ಹೇರಲ್ಪಟ್ಟ ಭಾಷೆಯನ್ನು ಯಾರಾದರೂ ಹೀಗೆಲ್ಲ ಹೊಗಳುವುದುಂಟೆ ? ಅಷ್ಟೇಕೆ, ಹದಿನೈದನೇ ಶತಮಾನದ ಕವಿ ರತ್ನಾಕರವರ್ಣಿ ತುಳುವನಾದರೂ ಭರತೇಶ ವೈಭವವನ್ನು ಕನ್ನಡದಲ್ಲಿ ಯಾಕೆ ಬರೆದಿದ್ದಾನೆ ? ಹೇಗೆ ನೋಡಿದರೂ ಇಲ್ಲಿನ ತುಳುವರಿಗೆ ತುಳುವಿನ ಮೇಲೆ ಪ್ರೀತಿಯೂ, ಕನ್ನಡದ ಬಗ್ಗೆ ಅಕ್ಕರೆಯೂ ಜೊತೆ ಜೊತೆಗೇ ಇದ್ದದ್ದೇ ಕಾಣುತ್ತದೆ.

ಕಳೆದ ಎಂಟುನೂರು-ಸಾವಿರ ವರ್ಷಗಳಿಂದಾದರೂ ಕನ್ನಡ ಈ ನೆಲದ ಭಾಷೆಯಾಗಿತ್ತು ಅಂತ ಹೇಳುವುದಕ್ಕೆ ಇಷ್ಟು ಸಾಕಲ್ಲ!

No comments:

Post a Comment