ರೆಪ್ಪೆ ತೆರೆದ ಮೇಲೆ ಇನ್ನೊಮ್ಮೆ ಚಿತ್ರಿಸಿಕೊಂಡ ಕನಸೊಂದರಂತೆ ಇದನ್ನೊಮ್ಮೆ ಊಹಿಸಿಕೊಳ್ಳಿ. ಒಂದು ಅಂತರರಾಷ್ಟ್ರೀಯ ಚೆಸ್ ಪಂದ್ಯಾಟ. ಮದ ಗಜಗಳ ಗುದ್ದಾಟ. ಸಮಬಲದ ಹಣಾಹಣಿ. ಹಠಾತ್ತನೆ ಒಬ್ಬ ತನ್ನ ರಥವನ್ನು ಒಡ್ಡಿ ಬಲಿ ಕೊಡುತ್ತಾನೆ. ಮತ್ತೆ ಕೆಲವೇ ನಡೆಗಳ ಅನಂತರ ಆನೆಯನ್ನೂ ಅರ್ಪಿಸಿ ಕೊಡುತ್ತಾನೆ . ಪ್ರೇಕ್ಷಕರು, "ಇವನಿಗೇನು ಮಂಡೆ ಸಮ ಇಲ್ಲವಾ ?" ಅಂತ ಪಿಳಿ ಪಿಳಿ ಕಣ್ಣು ಬಿಟ್ಟು ನೋಡುತ್ತಿರುವಾಗ, ಇಷ್ಟದೇವತೆಗೆ ನೈವೇದ್ಯ ಕೊಟ್ಟಂತೆ ಮತ್ತೊಂದು ಆನೆಯನ್ನೂ ಬಲಿಕೊಡುತ್ತಾನೆ, ಎದುರಾಳಿ ಆಟಗಾರ ನೋಡಿಯೇ ಬಾಕಿ! ಇಷ್ಟು ಸಾಲದು ಅಂತ ಕಡೆಗೆ ಚೆಸ್ ಬೋರ್ಡಿನಲ್ಲಿ ರಾಜನಂತೆ ಮೆರೆಯುವ ರಾಣಿ/ಮಂತ್ರಿಯನ್ನೂ ಎದುರಾಳಿಯ ಕುದುರೆಗೆ ತಿನ್ನಿಸಿ ಬಲಿಕೊಡುತ್ತಾನೆ. ಪ್ರೇಕ್ಷಕರು ಮೂರ್ಛೆ ಹೋಗುವುದೊಂದೇ ಬಾಕಿ. ಆಯಿತಲ್ಲ , ಈಗ ಈ ಪಂದ್ಯವನ್ನು ಗೆದ್ದದ್ದು ಯಾರು ಅಂತ ಹೇಳಿ ನೋಡೋಣ. ಚದುರಂಗ ಪ್ರೇಮಿಗಳಿಗೆಲ್ಲ ಗೊತ್ತೇ ಇರುತ್ತದೆ, ಗೆದ್ದದ್ದು ಆ ಪರಿ ಬಲಿ ಕೊಟ್ಟವನೇ ಅಂತ. ಬೆಕ್ಕಸಗೊಂಡ ಪ್ರೇಕ್ಷಕರು ಇನ್ನೇನು ಕುಣಿದೇ ಬಿಡುತ್ತಾರೆ ಅನ್ನುವಂತಹಾ ಹುರುಪಿನ ಸನ್ನಿವೇಶವದು. ಇದು ಅಡಾಲ್ಫ್ ಆಂಡರ್ಸನ್ ಎಂಬ ಚದುರಂಗದ ಕಲಾವಿದ ಚೆಸ್ಸಿನ "ಅಜರಾಮರ ಪಂದ್ಯ"ವನ್ನು ಆಡಿದ ರೀತಿ. ಈ ಚೆಸ್ಸೆಂಬ ತಾಗಾಟ ಕೂಡಾ ಫುಟ್ ಬಾಲಿನಂತೆ, ಹೊಡಿಬಡಿ ಶೈಲಿಯ ಕ್ರಿಕೆಟ್ಟಿನಂತೆ ರೋಮಾಂಚಕ ಅನ್ನಿಸುವುದು ಇಂತಹ ಅಚ್ಚರಿಯ ಕ್ಷಣಗಳಲ್ಲಿಯೇ. ಇಂತಹಾ ಆಶ್ಚರ್ಯ,ಉದ್ರೇಕ,ಪುಳಕಗಳನ್ನು ಚೆಸ್ ಪ್ರಿಯರಿಗೆ ಯಾವಾಗಂದರಾವಾಗ ಕೊಡುತ್ತಿದ್ದ ಮಾಂತ್ರಿಕನ ಹೆಸರೇ ಮಿಖಾಯಿಲ್ ತಾಲ್.
ಹೇಳಿಕೇಳಿ ಚದುರಂಗವು ಒಂದು ಲೆಕ್ಕಾಚಾರಗಳ ಆಟ. ನಾನು ಇದನ್ನು ಇಟ್ಟರೆ, ಅವನು ಅದನ್ನು ದೂಡಿದರೆ , ನಾನು ಹೀಗೆ ಸ್ಪಂದಿಸಿದರೆ , ಆತ ಹಾಗೆ ಮಾಡಿದರೆ ಯಾವುದ್ಯಾವುದು ಹೇಗೇಗಾದೀತು ಅಂತ ದುಡ್ಡಿಗೆ ಬಾಯಿ ಬಿಡುವ ಬಡ್ಡಿ ವ್ಯಾಪಾರಿಗಳಂತೆ ಲೆಕ್ಕ ಹಾಕುವವರ ಆಟ. ದೊಡ್ಡ ಹೆಸರಿನವರು, ಪಟುಗಳಂತೂ ಒಂದೊಂದು ನಡೆಯಿಟ್ಟರೂ ಆಮೇಲಿನ ಹತ್ತು ಹದಿನೈದು ನಡೆಗಳು ಹೀಗೀಗೇ ಇರುತ್ತವೆ ಅಂತ ಶುದ್ಧಾಂಗ ಯಂತ್ರಗಳಂತೆ ಲೆಕ್ಕ ಹಾಕುತ್ತಾರೆ. ಇಂತ ಕರಾರುವಾಕ್ಕಾದ ಎಣಿಕೆಗಳು, ಒಂದೇ ತರದ ನಡೆಗಳು, ಅವವೇ ತಂತ್ರಗಾರಿಕೆಗಳ ಹಿಡಿತಗಳಿಂದ ನಲುಗಿ ಈ ಆಟ ಹಲವೊಮ್ಮೆ ಬೋರು ಹೊಡೆಸುವುದುಂಟು. ಇಂತದ್ದೇ ಲೆಕ್ಕಾಚಾರದ ಸರಕುಗಳು ಹುಟ್ಟಿಸುವ ಏಕತಾನತೆಯಿಂದ, ಚೆಸ್ ಪಂದ್ಯಗಳೆಂದರೆ, ಆಕಳಿಸುವವರ ತಾಣಗಳು ಎಂದಾಗಿದ್ದ ಕಾಲವೊಂದಿತ್ತು. ಆಗಿನ ಚಾಂಪಿಯನ್ ಮಿಖೈಲ್ ಬೋಟ್ವಿನ್ನಿಕ್ ಕೂಡ, "ನನ್ನ ಮಟ್ಟಿಗೆ ಚದುರಂಗವೆಂದರೆ ಕ್ರಮಾಗತವಾದ, ನಿಖರವಾದ ವಿಜ್ಞಾನ" ಎಂದಿದ್ದ. ಅಂತದ್ದೊಂದು ಕಾಲಾವಧಿಯಲ್ಲಿ ಮೊದಲ ಆಟ ಆಡಿದ ಹತ್ತೊಂಬತ್ತರ ತರುಣನೊಬ್ಬನ ತಲೆ ಬೇರೆಯೇ ರೀತಿಯಲ್ಲಿ ಓಡುತ್ತಿತ್ತು, ಒನ್ ವೇ ದಾರಿಯಲ್ಲಿ ಉಲ್ಟಾ ಹೊರಟ ಬೈಕೊಂದರಂತೆ.
ಗ್ರಾಂಡ್ ಮಾಸ್ಟರ್ ಒಬ್ಬನನ್ನು ಆನೆ ಬಲಿಕೊಟ್ಟು ಬೇಸ್ತು ಬೀಳಿಸಿದಾಗಲೇ ಚೆಸ್ ಪಂಡಿತರು ಮಿಖಾಯಿಲ್ ತಾಲ್ ನೆಡೆಗೆ ಕಣ್ಣು ತಿರುಗಿಸಿದ್ದರು. ಅಲ್ಲಿಂದ ಶುರುವಾಯಿತು ನೋಡಿ ಬಲಿಗಳ ಜಡಿಮಳೆ. ಮೀನಿಗೆ ಗಾಳದಲ್ಲಿ ಹುಳ ಇಟ್ಟು ಕೊಡುವಂತೆ, ಎದುರಾಳಿಗೆ, ತಿನ್ನು ಅಂತ ಕಾಯಿಗಳನ್ನು ಒಡ್ಡಿ, ತದನಂತರ ಒಂದೇ ಸರ್ತಿ ಮುಗಿಬಿದ್ದು ಉಸಿರುಕಟ್ಟಿಸಿ ಬಿಡುವ ಅಸಲಿ ಕಸುಬು ಆತನಿಗೆ ಸಿದ್ದಿಸಿ ಬಿಟ್ಟಿತ್ತು. ಚೆಸ್ಸು ಎಲ್ಲ ಲೆಕ್ಕಾಚಾರಗಳನ್ನು ಮೀರಿ ಒಂದು ಕಲೆ, ಒಂದು ಆಕ್ರಮಣಕಾರಿ position ಸಿಕ್ಕುತ್ತದೆ ಅನ್ನುವ ಸುಳಿವು ಸಿಕ್ಕಿದರೂ ಸಾಕು ನಾನು ಬಲಿಕೊಟ್ಟೆನೆಂದೇ ಲೆಕ್ಕ ಅನ್ನುತ್ತಿದ್ದ ತಾಲ್, ಎಷ್ಟೋ ಸಲ ಆಟವನ್ನು ಕಲೆಯಂತೆ ಅರಳಿಸಿ, ಚಂದಗಾಣಿಸಲು ಹೋಗಿ ಸೋತೇ ಬಿಡುತ್ತಿದ್ದದ್ದೂ ಉಂಟು. ಗೆಲ್ಲುವುದು ಮುಖ್ಯವಲ್ಲ, ಮ್ಯಾಚು ಯಾರೋ ಜೇನಿನ ಕಂಠದವರು ಪಲುಕಿದ ರಾಗವೊಂದರ ಹಾಗೆ, ಚತುರ ಬೆರಳುಗಳು ಪೋಣಿಸಿದ ಹಾರವು ಪರಿಮಳಿಸಿದ ಹಾಗೆ ಇರಬೇಕು ಎಂಬಂತ ಧೋರಣೆ ಇದ್ದ ಕೆಲವೇ ಕೆಲವರಲ್ಲೊಬ್ಬ ಮಿಖಾಯಿಲ್ ತಾಲ್. ಆಟ ಸಮಬಲದಲ್ಲಿ ಇರುವಾಗ ಊಹೆಗೂ ನಿಲುಕದಂತೆ ತಿರುವು ಕೊಟ್ಟು,ಜೀವಕಳೆ ತುಂಬಿಸಿ ಆಕ್ರಮಣ ಮಾಡುತ್ತಿದ್ದ ಅವನ ಶೈಲಿಗೆ ಮರುಳಾಗಿ ಪ್ರೇಕ್ಷಕರು "ವಾರೆವಾ" ಎಂಬ ಉದ್ಗಾರ ತೆಗೆಯಲಿಕ್ಕೆಂದೇ ಸಾಲುಗಟ್ಟಿ ಬರುತ್ತಿದ್ದರು. The Magician from Riga ಅನ್ನುವುದು ಅಭಿಮಾನಿಗಳು ಇವನಿಗಿತ್ತ ಬಿರುದು. ಇವನ ಊರಾದ ಈ Riga ಲ್ಯಾಟ್ವಿಯಾ ದೇಶದಲ್ಲಿ ಬರುತ್ತದೆ, ಮೊದಲು ರಷ್ಯಾದ ಭಾಗವಾಗಿದ್ದು ಈಗ ಯೂರೋಪಿಗೆ ಸೇರಿರುವ ದೇಶ ಇದು(ಈ ದೇಶದ ಹಣಕಾಸು ಮಂತ್ರಿಯಾಗಿರುವವಳೂ ಒಬ್ಬ ಚೆಸ್ ಗ್ರ್ಯಾಂಡ್ ಮಾಸ್ಟರ್ ಆಗಿದ್ದಾಳೆ). ಕ್ರಿಕೆಟ್ ಅನ್ನುವುದು ಭಾರತೀಯರಿಗಾಗಿ ಬ್ರಿಟಿಷರು ಕಂಡು ಹಿಡಿದಿರುವ ಕ್ರೀಡೆ ಎನ್ನುತ್ತಾರೆ, ಹಾಗೆಯೇ ಚದುರಂಗವು ರಷ್ಯನ್ನರಿಗಾಗಿ ಭಾರತೀಯರು ಕಂಡು ಹಿಡಿದಿರುವ ಕ್ರೀಡೆ ಅನ್ನಬೇಕು ! ರಷ್ಯನ್ನರ ಈ ಹುಚ್ಚು ತಾಲ್ ನಿಗೂ ಬರದೇ ಹೋಗಲಿಲ್ಲ.
ಬರೀ ಬೇಸ್ತು ಬೀಳಿಸುವುದರಲ್ಲಿಯೇ ನಿಷ್ಣಾತನೀತ ಅಂತ ಮೂದಲಿಸುವವರ ಬಾಯಿ ಮುಚ್ಚಿಸಲೋ ಎಂಬಂತೆ ತಾಲ್ ಉತ್ತಮ ತಂತ್ರಗಾರನೂ ಆಗಿದ್ದ. ದ್ರಾವಿಡನ ತಂತ್ರ, ತೆಂಡೂಲ್ಕರ್ನ ಮೋಹಕತೆ, ಸೆಹ್ವಾಗ್ ನ ಬಿರುಸು ಸೇರಿಸಿದರೆ ಹೇಗಾದೀತೋ ಅಂತಹಾ ಪ್ರತಿಭೆ ಆತನದು . ನಮ್ಮಲ್ಲಿ ಭಾಷ್ಯಗಳನ್ನು ಬರೆಯುವಂತೆ, ಕವಿತೆಗಳಿಗೆ ಟೀಕೆ, ಟಿಪ್ಪಣಿಗಳನ್ನು ರಚಿಸುವಂತೆ ಚೆಸ್ ಪಂದ್ಯಗಳಿಗೆ ಆಟದ ಪ್ರತಿ ನಡೆಯನ್ನೂ ವ್ಯಾಖ್ಯಾನಿಸಿ annotation ಬರೆಯುತ್ತಾರೆ, ತಾಲ್ ನ ಆಟವೊಂದರ ಎರಡು ಮೂರು ನಡೆಗಳಿಗೆ Nigel Short ಎಂಬ ಗ್ರ್ಯಾಂಡ್ ಮಾಸ್ಟರ್ ಬರೆದಿರುವ ಈ annotation/ವ್ಯಾಖ್ಯಾನಗಳನ್ನು ನೋಡಿದರೆ ಅವನ ವರಸೆಗಳು ಹೇಗಿರುತ್ತವೆ ಅಂತ ಅಂದಾಜು ಮಾಡಬಹುದು: . 20.Nd5!? (Sensing that the strategic tide has turned against him, Tal decides to create mayhem) 26.Rc3!? ( Brilliant and typically Tal. Objectively, this is unsound, but Tal doubtless did not like the look of the mundane 34.Qh6!! (A stunning deflection sacrifice. The difficulty is not in calculating the simple main variation but in visualising this unexpected blow to the right when all eyes are concentrated on Black's exposed queenside
ಆತ ಸತತ ಒಂಬತ್ತು ಮ್ಯಾಚುಗಳಲ್ಲಿ ಗ್ರಾಂಡ್ ಮಾಸ್ಟರ್ಗಳನ್ನು ಮಣಿಸಿದ್ದು ಇಂದಿಗೂ ಒಂದು ಅಪರೂಪದ ದಾಖಲೆ, ಹೆಚ್ಚು ಕಮ್ಮಿ ಮೂವತ್ತು ವರ್ಷಗಳ ಕಾಲ ವಿಶ್ವದ ಮೊದಲ ಹತ್ತು ಸ್ಥಾನಗಳ ಒಳಗೇ ಇದ್ದದ್ದೂ ಅಪ್ರತಿಮ ಸಾಧನೆಯೇ . ಯು.ಎಸ್. ಎಸ್.ಆರ್ ಚಾಂಪಿಯನ್ಶಿಪ್ ಅನ್ನು ಸತತ ಎರಡು ಸಲ ಗೆದ್ದದ್ದೂ ಕಡಮೆ ಗೆಲವೇನಲ್ಲ. ಹೀಗೆ ಗೆದ್ದವರ ಪಟ್ಟಿ ಮಾಡಲಿಕ್ಕೆ ಒಂದು ತುಂಡು ಕಾಗದ ಸಾಕಾದೀತು! ಚೆಸ್ ಪ್ರಪಂಚದ ಉದಂತ ಕಥೆಯೇ ಆಗಿರುವ ಬಾಬಿ ಫಿಷರ್ ನ ಹತ್ತು ಜನ ಸಾರ್ವಕಾಲಿಕ ಶ್ರೇಷ್ಠರ ಪಟ್ಟಿಯಲ್ಲಿ ಎಂಟನೇ ಹೆಸರು ತಾಲ್ ನದ್ದೇ, ಜೊತೆಗೆ, "ಈ ಮನುಷ್ಯ ಎಲ್ಲರನ್ನೂ ಹೆದರಿಸುತ್ತಾನೆ" ಎಂಬ ಟಿಪ್ಪಣಿ ಬೇರೆ(ನಮ್ಮ ವಿಶ್ವನಾಥನ್ ಆನಂದ್ ರ ಟಾಪ್ ಟೆನ್ ಪಟ್ಟಿಯಲ್ಲಿಯೂ ತಾಲ್ ಹೆಸರಿದೆ ). ತಾಲ್ ವಿಶ್ವ ಚಾಂಪಿಯನ್ಶಿಪ್ ಗೆದ್ದದ್ದು ಆಗ ಚಕ್ರಾಧಿಪತಿಯಂತೆ ಮೆರೆದಾಡುತ್ತಿದ್ದ ಮಿಖೈಲ್ ಬೋಟ್ವಿನ್ನಿಕ್ ಅನ್ನು ಪರಾಭವಗೊಳಿಸಿ(ಈ ಪಂದ್ಯಕ್ಕೆ ಮೊದಲಿನ ತನ್ನ ಮನಸ್ಥಿತಿಯನ್ನು ತಾಲ್ ಹೀಗೆ ತಮಾಷೆಯಾಗಿ ಬರೆದುಕೊಂಡಿದ್ದಾನೆ : ನಮ್ಮ ಬೋಟ್ವಿನ್ನಿಕ್ ಅವರು ವಿಶ್ವ ಚಾಂಪಿಯನ್ ಆಗಿದ್ದಾರೆ ಅಂತ ಕೇಳಿ ಆನಂದವಾಯಿತು, ಆದರೆ ಒಂದು ಸಂದೇಹ ಮನಸ್ಸಿನಲ್ಲಿ ಉಳಿದೇ ಬಿಟ್ಟಿತು, ಇವರು ವಿಶ್ವ ಚಾಂಪಿಯನ್ ಆಗಲು ಹೇಗೆ ಸಾಧ್ಯ? after all he had never played me!) ಅದರ ಮರುವರ್ಷವೇ ಬೋಟ್ವಿನ್ನಿಕ್ ತಾಲ್ನನ್ನು ಸೋಲಿಸಿ ಕಿರೀಟವನ್ನು ಕಿತ್ತುಕೊಂಡದ್ದೂ ಆಯಿತು. ಆ ಆಟವನ್ನು ತಾಲ್ ಆಡಿದ್ದು ತೀವ್ರವಾದ ಕಿಡ್ನಿ ಭಾಧೆಯಿಂದ ನರಳುತ್ತಾ ಅನ್ನುವುದನ್ನು ಮರೆಯುವಂತಿಲ್ಲ(ಅದೂ 24ರ ಸಣ್ಣ ಪ್ರಾಯದಲ್ಲಿ).
"ನೀವು ಸೋತದ್ದಕ್ಕೆ ಅನಾರೋಗ್ಯ ಕಾರಣವೇ" ಅಂತ ಕೇಳಿದಾಗ, "ಅಲ್ಲ, ಎದುರಾಳಿ ನನ್ನನ್ನು ಸೋಲಿಸಿದ್ದೇ ನಾನು ಸೋಲಲು ಅತಿಮುಖ್ಯ ಕಾರಣ" ಅಂತ ಉಸುರಿ ನಗುವಂತ ಕುಶಾಲು ತಾಲ್ ನದ್ದು . ಹಾಗೆ ನೋಡಿದರೆ ಮಿಖೈಲ್ ಬೋಟ್ವಿನ್ನಿಕ್, ಬಾಬಿ ಫಿಷರ್,ಬೋರಿಸ್ ಸ್ಪಾಸ್ಕಿ ,Viktor Korchnoi,Tigran Petrosianರಂತಹಾ ಚಂಡ ಪ್ರಚಂಡ ಎದುರಾಳಿಗಳಿಗಿಂತ ಈ ಮನುಷ್ಯನನ್ನು ಹೆಚ್ಚು ಕಾಡಿಸಿ ಪೀಡಿಸಿದ್ದು ಆರೋಗ್ಯವೇ. ಕಿಡ್ನಿ ಮತ್ತು ಪಿತ್ತಜನಕಾಂಗಗಳು ಸುಮಾರು ಇಪ್ಪತ್ತೈದು ವರ್ಷ, ಇವನ ವೃತ್ತಿ ಜೀವನದ ಉದ್ದಕ್ಕೂ ತೊಂದರೆ ಕೊಟ್ಟು,ಹಣಿದು ಹೈರಾಣಾಗಿಸಿ ಬಿಟ್ಟಿದ್ದವು, ಇವನು ಟೂರ್ನಮೆಂಟ್ ಗಳಿಗೆ ಹೋದರೆ ಇರುವುದು ಹೋಟೆಲಿನಲ್ಲಲ್ಲ, ಆಸ್ಪತ್ರೆಯಲ್ಲಿ ಎನ್ನುವಂತಾಯಿತು ! ಇಷ್ಟಿದ್ದರೂ ತಾಲ್ ಕುಡಿತದ ,ಸಿಗರೇಟಿನ ದಾಸ. ಆಟ ನಡೆವಲ್ಲಿ ಸಿಗರೇಟು ಎಳೆಯುವಂತಿಲ್ಲ, ಹೀಗಾಗಿ ಈತ ಒಂದು ನಡೆ ಇಡುವುದು, ಹೊರಗೆ ಜಾರುವುದು, ಹೊಗೆ ಬಿಟ್ಟು ಒಳಗೆ ನುಸುಳುವುದು, ಥಟ್ಟನೆ ಆಡಿ, ಮತ್ತೆ ಓಡುವುದು, ಹೀಗೆ ಮರ್ಕಟ ಬುದ್ಧಿ ತೋರಿಸುತ್ತಿದ್ದ. ತಾಲ್ ನ ಚೆಸ್ ಬೋರ್ಡಿನ ನಡೆಗಳ ಅರ್ಥವೇನು, ಸಂಕೀರ್ಣತೆಯೇನು , ಏನೇನು ಪರಿಣಾಮಗಳಾಗಿ ಮ್ಯಾಚು ಯಾವ ದಿಕ್ಕಿಗೆ ಹೊರಳೀತು ಅಂತ ತಲೆ ಕೆಡಿಸಿಕೊಳ್ಳುತ್ತಾ ಎಲ್ಲರೂ ಬೋರ್ಡಿನ ಮೇಲೆ ಕಣ್ಣು ನೆಟ್ಟು ಕುಳಿತಿದ್ದರೆ ಈ ಪುಣ್ಯಾತ್ಮನದು ಹೊರಗಡೆ ನಿರುಮ್ಮಳ ಧೂಮ ಲೀಲೆ !
ಹೀಗೆ ಎಷ್ಟೋ ಸರ್ತಿ ಎರಡು ತಾಸಿನ ಪಂದ್ಯವಾದರೆ ಒಂದೂ ಕಾಲು ಘಂಟೆ ಸಿಗರೇಟಿನ ಜೊತೆ ಕಳೆದು, ಹೊರಗೆ ಬಂದ ಮೇಲೆ ಕುಡಿ ಕುಡಿದು ಅಳಿದುಳಿದ ಆರೋಗ್ಯವನ್ನೂ ಸಿಗರೇಟಿನಂತೆ ಸುಟ್ಟು ಬಿಟ್ಟಿದ್ದ ತಾಲ್. ಬರೀ ಐವತ್ತೈದು ವರ್ಷ ಆದಾಗಲೇ ತೀವ್ರ ಅನಾರೋಗ್ಯವು ಈ ಬಲಿ ಚಕ್ರವರ್ತಿಯ ಬಲಿಯನ್ನು ತೆಗೆದುಕೊಂಡದ್ದು ಖೇದಕರ. ಸ್ನೇಹ ಜೀವಿಯೂ, ರಸಿಕನೂ, ಕುಶಾಲಿನ ವರ್ಣರಂಜಿತ ವ್ಯಕ್ತಿಯೂ ಆಗಿದ್ದ ತಾಲ್ ನಮ್ಮನ್ನು ಇನ್ನಷ್ಟು ರಂಜಿಸಿ, ನಗಿಸಿ ಹೋಗಬಹುದಿತ್ತೆಂದು ವಿಧಿಗೆ ತೋರಲಿಲ್ಲ. ಇರಲಿ.
ಹೀಗೆ ಎಷ್ಟೋ ಸರ್ತಿ ಎರಡು ತಾಸಿನ ಪಂದ್ಯವಾದರೆ ಒಂದೂ ಕಾಲು ಘಂಟೆ ಸಿಗರೇಟಿನ ಜೊತೆ ಕಳೆದು, ಹೊರಗೆ ಬಂದ ಮೇಲೆ ಕುಡಿ ಕುಡಿದು ಅಳಿದುಳಿದ ಆರೋಗ್ಯವನ್ನೂ ಸಿಗರೇಟಿನಂತೆ ಸುಟ್ಟು ಬಿಟ್ಟಿದ್ದ ತಾಲ್. ಬರೀ ಐವತ್ತೈದು ವರ್ಷ ಆದಾಗಲೇ ತೀವ್ರ ಅನಾರೋಗ್ಯವು ಈ ಬಲಿ ಚಕ್ರವರ್ತಿಯ ಬಲಿಯನ್ನು ತೆಗೆದುಕೊಂಡದ್ದು ಖೇದಕರ. ಸ್ನೇಹ ಜೀವಿಯೂ, ರಸಿಕನೂ, ಕುಶಾಲಿನ ವರ್ಣರಂಜಿತ ವ್ಯಕ್ತಿಯೂ ಆಗಿದ್ದ ತಾಲ್ ನಮ್ಮನ್ನು ಇನ್ನಷ್ಟು ರಂಜಿಸಿ, ನಗಿಸಿ ಹೋಗಬಹುದಿತ್ತೆಂದು ವಿಧಿಗೆ ತೋರಲಿಲ್ಲ. ಇರಲಿ.
ಈತನ, "ಬಲಿ ಕೊಡುವುದರಲ್ಲಿ ಎರಡು ರೀತಿ. ಒಂದು ಸರಿಯಾದ ಕ್ರಮ, ಇನ್ನೊಂದು ನನ್ನ ರೀತಿ" ಎಂಬ ಜೋಕೋಕ್ತಿ ಪ್ರಸಿದ್ಧ. The Life and Games of Mikhail Tal ಎಂಬ ಹೆಸರಿನ ಇವನ ಆತ್ಮಕಥೆಯೂ ಉಳಿದ ಚೆಸ್ ಪುಸ್ತಕಗಳಂತೆ ಘನ ಗಂಭೀರವಾಗಿರದೆ ಲಲಿತ ಪ್ರಬಂಧವೊಂದರಂತೆ ಇದೆ. ಅದರಲ್ಲಿ ಬರುವ ಒಂದು ವೃತ್ತಾಂತ ಮಜವಾಗಿದೆ : ವ್ಯಾಸುಕೋವ್ ಜೊತೆಗಿನ ಮ್ಯಾಚಿನಲ್ಲಿ ಕಠಿಣವಾದ ಪೊಸಿಷನ್ ಬಂದಿತ್ತು , ನನಗೋ ಒಳಮನಸ್ಸು ಕುದುರೆಯನ್ನು ಬಲಿ ಕೊಟ್ಟು ಬಿಡು ಅಂತ ಪುಸಲಾಯಿಸಿತು. ಲೆಕ್ಕ ಹಾಕಿದರೆ ಅದರಿಂದ ಏನೂ ಗಿಟ್ಟಲಿಕ್ಕಿಲ್ಲ ಅನ್ನಿಸಿತು. ಅದರ ಪರಿಣಾಮಗಳು ಎಷ್ಟು ಕ್ಲಿಷ್ಟವಾದೀತೆಂದು ಯೋಚಿಸಿ ತಲೆ ಕೆಟ್ಟಿತು. ಆಗ ನೆನಪಾಯಿತು ನೋಡಿ ಒಂದು ದ್ವಿಪದಿ, "Oh, what a difficult job it was. To drag out of the marsh the hippopotamus". ಆಮೇಲೆ ಅದೇ ತಲೆಗೆ ಹೊಕ್ಕಿತು. ಅದೂ ಹೌದಲ್ಲ, ಅಂತ ಆಲೋಚನೆ ಮಾಡಿದೆ. ಹೆಲಿಕಾಪ್ಟರು ತಂದರೆ ಹೇಗೆ ? ಕ್ರೇನು ಕಟ್ಟಿ ಎಳೆದರೆ ಆದೀತೇ ? ಅಂತೆಲ್ಲ ಕಲ್ಪಿಸಿದೆ. ಅರ್ಧ ಘಂಟೆ ನನಗೆ ಗೊತ್ತಿದ್ದ ಇಂಜಿನಿಯರಿಂಗ್ ತಂತ್ರಗಳನ್ನೆಲ್ಲ ಮನದಲ್ಲೇ ಪ್ರಯೋಗಿಸಿ ನೋಡಿದೆ. ಉಹೂಂ ! ಹಿಪ್ಪೋಪಾಟಮಸ್ ಅನ್ನು ಎಳೆಯುವುದು ದುಸ್ಸಾಧ್ಯ ಅನ್ನಿಸಿಬಿಟ್ಟಿತು. ಮತ್ತೆ ಚೆಸ್ ಬೋರ್ಡಿನ ವಾಸ್ತವಕ್ಕೆ ಬಂದೆ. ಈಗ ಎಲ್ಲ ನಿರಾಳವಾಯಿತು. ನಷ್ಟ ಆದೀತೋ, ಬಿಟ್ಟೀತೋ, ಪಂದ್ಯ ಕುತೊಹಲಕಾರಿ ಅಂತೂ ಆಗುತ್ತದೆ ಅಂತ ಕುದುರೆಯ ಬಲಿ ಕೊಟ್ಟೇ ಬಿಟ್ಟೆ. ಮರುದಿನ ಪತ್ರಿಕೆಯೊಂದು, "ತಾಲರವರು ನಲುವತ್ತು ನಿಮಿಷಗಳ ಕಾಲ ತದೇಕಚಿತ್ತದಿಂದ ಅಳೆದು ತೂಗಿ , ಅತ್ಯಂತ ಜಾಗರೂಕತೆಯಿಂದ ಲೆಕ್ಕ ಹಾಕಿ, ನಿಖರವಾದ ಬಲಿ ಕೊಟ್ಟರು" ಅಂತ ಬರೆಯಿತು !
ತಾಲ್ ಒಂದು ಕಾಲಾವಧಿಯಲ್ಲಿ ಎಲ್ಲ ಟೂರ್ನಮೆಂಟುಗಳಲ್ಲಿಯೂ ಆಡಿದ ಮೊದಲ ಪಂದ್ಯ ಸೋಲುವುದು ಮಾಮೂಲಿ ಆಗಿತ್ತಂತೆ. ಅದರ ಬಗ್ಗೆ ಹೀಗೆ ಬರೆದಿದ್ದಾನೆ : ರೈಲಿನಲ್ಲಿ ಕೊನೆಯ ಬೋಗಿ ಸಿಕ್ಕಿದವರಿಗೆ ಅದು ಸ್ಟೇಷನ್ಗಳಲ್ಲಿ ನಿಂತಾಗಲೆಲ್ಲ ಏನಾದರೂ ತರಬೇಕಾದರೆ ದೂರ ನಡೆಯಬೇಕಾಗಿ ಬಂದು ತುಂಬಾ ಕಷ್ಟವಾಗಿತ್ತಂತೆ, ಹಾಗಾಗಿ ಇಳಿದ ಮೇಲೆ ಅವರು ಒಂದು ದೂರು ಕೊಟ್ಟರಂತೆ : ಇನ್ನು ಮೇಲೆ ರೈಲುಗಳಲ್ಲಿ ಕೊನೆಯ ಬೋಗಿ ಇರಬಾರದು, ಇದ್ದರೂ ಅದು ನಡುವೆ ಎಲ್ಲಿಯಾದರೂ ಇರಬೇಕು. ನಾನೂ ಇದೇ ಉಪಾಯ ಮಾಡಿದೆ. ಇನ್ನು ಪಂದ್ಯಾವಳಿಗಳಲ್ಲಿ ನಾನು ನನ್ನ ಮೊದಲನೇ ಪಂದ್ಯ ಆಡಬಾರದು, ಏನಿದ್ದರೂ ಎರಡನೇ ಪಂದ್ಯ ಮಾತ್ರ ಆಡಿ ಶುರು ಮಾಡಬೇಕು.
ತಾಲ್ ನ ಗುರುವಾಗಿದ್ದ Alexander Koblents ಆತನನ್ನು ತಯಾರು ಮಾಡಿದ್ದು ಹೇಗೆ ಅಂತ ಒಬ್ಬರು ಹೀಗೆ ವಿನೋದ ಮಾಡಿದ್ದಾರೆ : Do you know how Koblents trains Tal? All day long he repeats to his protégé one and the same thing: "Mikhail, you play brilliantly!"
ನಾನು ಹೇಳುವುದೂ ಅದನ್ನೇ, Mikhail, you played brilliantly!
No comments:
Post a Comment