Monday, 1 January 2018

ಹಿಂದೀ ಹೇರಿಕೆ

ಹಿಂದೀ ಹೇರಿಕೆ ! ಇದರ ಬಗ್ಗೆ ನೂರಾರು ಜನ ಪರ ವಿರೋಧ ಬೊಬ್ಬೆ ಹಾಕಿದರಾದರೂ ಸಾಕಷ್ಟು ಮೂಢನಂಬಿಕೆಗಳೂ ತಪ್ಪು ಕಲ್ಪನೆಗಳೂ ಉಳಿದೇ ಹೋದವು. ಪರ ವಿರೋಧಗಳು ಇದ್ದದ್ದೇ, ಇರುವುದು ಒಳ್ಳೆಯದೇ, ಬೇಂದ್ರೆಯವರೇ ಹೇಳಿದ್ದಾರಲ್ಲ, "ನೂರು ಮರ ನೂರು ಸ್ವರ" ಅಂತ, ಆದರೆ ಈ ಸಲ ಇದು ನೂರು ಮರ ನೂರೈವತ್ತು ಅಪಸ್ವರ, ಇನ್ನೂರ ಒಂದು ಮೂದಲಿಕೆ ,ನೂರೆಂಟು ಬೊಬ್ಬೆಯಷ್ಟೇ ಆಗಿ ಹೋಯಿತೇ ಅಂತ ಕಾಣುತ್ತದೆ . ಯಾವುದಕ್ಕೂ ಸಿಂಹಾವಲೋಕನ ಮಾಡುವುದುಒಳ್ಳೆಯದು. ಬಂದ ಆಕ್ಷೇಪಣೆಗಳಿಗೆ ನನಗೆ ಕಂಡಂತೆ ಉತ್ತರ ಕೊಟ್ಟಿದ್ದೇನೆ. ಸರಿಯಿದ್ದರೆ ಒಪ್ಪಿಕೊಳ್ಳಿ, ತಪ್ಪಿದ್ದರೆ ತಿದ್ದಿ, ವಾದಕ್ಕಾಗಿ ವಾದ ಬೇಡ.
1. ಹಿಂದಿಯ ಮೇಲೆ ದ್ವೇಷ ಯಾಕೆ ? ಹಿಂದಿ ಕಲಿಯುವಷ್ಟು ಬುದ್ಧಿಶಕ್ತಿ ಇಲ್ಲದ ಸೋಮಾರಿಗಳು ಈ ಹೋರಾಟದ ಹಿಂದೆ ಇದ್ದಾರೆ - ಇದು ಹಿಂದಿಯ ವಿರುದ್ಧದ ಚಳುವಳಿಯೇ ಅಲ್ಲ , ಹಿಂದೀ ಕಲಿಯುವುದಕ್ಕೂ ಅದನ್ನು ಇಷ್ಟ ಪಡುವುದಕ್ಕೂ ಯಾರ ತಕರಾರೂ ಇಲ್ಲ. ಮಂಜೇಶ್ವರ ಗೋವಿಂದ ಪೈಗಳು ಹದಿನೈದು ಭಾಷೆಗಳನ್ನು ಕಲಿತಿದ್ದರು, ಶತಾವಧಾನಿ ಗಣೇಶ್ ಹದಿನೆಂಟು ಭಾಷೆಗಳನ್ನು ಕಲಿತಿದ್ದಾರಂತೆ, ನೀವು ಬೇಕಾದರೆ ಇಪ್ಪತ್ತೊಂದು ಕಲಿಯಿರಿ, ಯಾರು ಬೇಡ ಅನ್ನುತ್ತಾರೆ ? ಬಿ ಎಂ ಶ್ರೀಅವರು ಸಂಸ್ಕೃತ, ಇಂಗ್ಲೀಷು ಭಾಷೆಗಳಿಂದ ಕನ್ನಡಕ್ಕೆ ತೊಂದರೆ ಆದದ್ದರ ಬಗ್ಗೆ ಮಾತಾಡಿದ್ದರು, ಆದರೆ ಅವರು ಇಂಗ್ಲೀಷು,ಸಂಸ್ಕೃತಗಳ ಅಭಿಮಾನಿಯೂ ಆಗಿದ್ದರು, ಆ ಎರಡು ಭಾಷೆಗಳಲ್ಲಿ ಪಂಡಿತರೂ ಆಗಿದ್ದರು ಅನ್ನುವುದನ್ನು ನಾವು ಮರೆಯಬಾರದು. ಉಳಿದ ಭಾಷೆಗಳಿಗಿಂತ ಹೆಚ್ಚು ಪ್ರಾಶಸ್ತ್ಯ ಹಿಂದಿಗೆ ಸಿಗಬಾರದು ಅಂತ ಮಾತ್ರ ವಾದ ಇರುವುದು, ನಮಗೆ ಎಲ್ಲ ಭಾಷೆಗಳ ಬಗ್ಗೆಯೂ ಗೌರವ ಇದೆ, ಇರಬೇಕು.
ಅಷ್ಟೇಕೆ ? ನಮ್ಮಲ್ಲಿ ಕೆಲವರಿಗೆ ಹಿಂದಿ ಇಷ್ಟವೂ ಕೂಡ, ನಾನಂತೂ ಘಂಟೆಗಟ್ಟಲೇ ಹಿಂದೀ ಶಾಯರಿಗಳನ್ನು ಓದುತ್ತಿದ್ದೆ, ಹಿಂದೀ ಪುಸ್ತಕಗಳನ್ನು ಅವರು ಬಳಸುವ ಲಿಪಿಯಲ್ಲೇ ಓದುತ್ತಿದ್ದೆ, ಒಂದು ಹಿಂದೀ ಕಥೆಯ ಕನ್ನಡ ಅನುವಾದವೂ ಮಾಡಿದ್ದೆ. ವಿಷಯ ಅದಲ್ಲ. ಈಗ ಒಂದು ಮಗುವಿಗೆ ಅದರ ಅಪ್ಪ ಅಮ್ಮ ಟೀವಿ ನೋಡಬೇಡ, ಕ್ರಿಕೆಟ್ ಆಡಿದ್ದು ಸಾಕು ಅಂತೆಲ್ಲ ಒಮ್ಮೊಮ್ಮೆ ಗದರಿಸುವುದು ಉಂಟು. ಅದರ ಅರ್ಥ ಏನು ? ಕ್ರಿಕೆಟ್ ಅನ್ನು ದ್ವೇಷಿಸುತ್ತಾರೆ ಅಂತಲೇ ? ಟೀವಿ ನೋಡಲೇಬಾರದುಅಂತಲೇ ? ಅಲ್ಲಾ ಅಲ್ಲಾ,ಅಲ್ಲವೇ ಅಲ್ಲಾ ! ಓದು ಬರೆಹಕ್ಕೆ ಮೊದಲ ಆದ್ಯತೆ ಇರಬೇಕು, ಕ್ರಿಕೆಟ್,ಟೀವಿ ಇವಕ್ಕೆಲ್ಲ ಯಾವ ಸ್ಥಾನ ಕೊಡಬೇಕೋ ಅಷ್ಟೇ ಕೊಡಬೇಕು ಅಂತ ಇದರ ಅರ್ಥ.
ಅದೇ ರೀತಿ, ಹಿಂದಿಗೆ ಕೊಡಬೇಕಾದ ಸ್ಥಾನ ಯಾವುದು, ಎಷ್ಟು ಅನ್ನುವುದೇ ಇಲ್ಲಿನ ಮುಖ್ಯ ವಿಷಯ. ತಾಯಿ ಹೇಗೆ ಒಬ್ಬ ಮಗನಿಗೆ ಮಾತ್ರ ಕಾಲೇಜು ಶಿಕ್ಷಣ ಕೊಡಿಸಿ ಇನ್ನೊಂದು ಮಗುವಿಗೆ ಅದನ್ನು ನಿರಾಕರಿಸಬಾರದೋ ಹಾಗೆಯೇ ಸರ್ಕಾರ ಒಂದು ಭಾಷೆಗೆ ಮಾತ್ರ ಮನ್ನಣೆಯ ಮಣೆ ಹಾಕಬಾರದು. ಎಲ್ಲ ಭಾರತೀಯ ಭಾಷೆಗಳೂ ಸಮಾನ, ಹಿಂದೀ ಒಂದು ಮಾತ್ರ "ನಂದು ನ್ಯಾಷನಲ್ ಲೆವೆಲ್ಲು" ಅಂತ ಕಾಲರು ಮೇಲೆ ಮಾಡಬಾರದು, ಹಿಂದಿಯನ್ನೂ ಸೇರಿಸಿ ಎಲ್ಲ ಭಾಷೆಗಳೂ regional ಭಾಷೆಗಳೇ, ಎಲ್ಲವೂ ಒಂದರ್ಥದಲ್ಲಿ ರಾಷ್ಟ್ರ ಭಾಷೆಗಳೇ, ಎಲ್ಲ ಭಾಷೆಗಳ ಕಾಲರೂ ಮೇಲೆಯೇ ಅಂತ ನಾವು ಹೇಳುತ್ತಿರುವುದು. ಸರ್ಕಾರವು ಒಂದು ಭಾಷೆಯ ಕಾಲರನ್ನು ಮೇಲೆತ್ತುವ ಕೆಲಸ ಮಾಡಬಾರದು ಅನ್ನುವುದು ನಮ್ಮ ವಾದ. ಹಿಂದೀ ಮಾತಾಡುವವರ ಜೊತೆ ನಮಗೆ ಸ್ನೇಹ ಬೇಕು, ಆದರೆ ಆ ಸ್ನೇಹಕ್ಕಾಗಿ ಅವರನ್ನು ಅಟ್ಟದಲ್ಲಿ ಕೂರಿಸಬೇಕಾಗಿಲ್ಲ. ಒಟ್ಟಿನಲ್ಲಿ ಹಿಂದಿಯೇ ಬೇರೆ, ಹಿಂದಿ ಹೇರಿಕೆಯೇ ಬೇರೆ ವಿಷಯ ಅಂತ ಹೇಳಿದರೆ ಸಾಕು. ಕನ್ನಡಪ್ರಭದ ಲೇಖನದಲ್ಲಿ ಅರ್ಪಣಾ ಅವರು ಬಳಸಿರುವ ರೂಪಕವನ್ನೇ ಬಳಸುವುದಾದರೆ, ಅಂಗಡಿಯಲ್ಲಿ ನಾವೇ ಚಾಕ್ಲೇಟು ಕೊಳ್ಳುವುದಕ್ಕೂ ಅಂಗಡಿಯವನು ಚಿಲ್ಲರೆ ಇಲ್ಲ ಅಂತ ಬಲವಂತದ ಚಾಕ್ಲೇಟು ಕೊಡುವುದಕ್ಕೂ ಇರುವ ವ್ಯತ್ಯಾಸವೇ ಇಲ್ಲಿಯೂ ಇದೆ.
2. ಇಂಗ್ಲೀಷಿನ ಬಗ್ಗೆ ನೀವ್ಯಾಕೆ ಮಾತಾಡುವುದಿಲ್ಲ - ಇದಕ್ಕೆ "ಇಂಗ್ಲೀಷಿನ ಬಗ್ಗೆ ಮಾತಾಡಿದಾಗ ನೀವೆಲ್ಲಿಗೆ ಚಳಿ ಕಾಯಿಸಲು ಹೋಗಿದ್ದಿರಿ" ಅನ್ನುವ ಇನ್ನೊಂದು ಪ್ರಶ್ನೆಯೇ ಉತ್ತರವಾದೀತು! ಹಾಗೆನೋಡಿದರೆ ಕಳೆದ ನೂರು ಚಿಲ್ಲರೆ ವರ್ಷಗಳಲ್ಲಿ ಇಂಗ್ಲೀಷಿನ ಬಗ್ಗೆ ಆದಷ್ಟು ಚರ್ಚೆ ಬೇರೆ ಯಾವ ಭಾಷೆಯ ಬಗೆಗೂ ಆಗಿಲ್ಲ ಅಂತಲೇ ಹೇಳಬೇಕು. ಕನ್ನಡ ಚಳುವಳಿಗೆ ಒಂದು ನೂರು ವರ್ಷಗಳಷ್ಟಾದರೂ ಇತಿಹಾಸ ಉಂಟು. ಮೇಲೆ ಹೇಳಿದಂತೆ ಬಿಎಂ ಶ್ರೀ ಅವರು ಇಂಗ್ಲೀಷು, ಸಂಸ್ಕೃತಗಳ ಬಗ್ಗೆ ಮಾತಾಡಿದ್ದಾರೆ, ಹಿಂದಿಯ ಪ್ರಸ್ತಾಪವೂ ಅಲ್ಲಿ ಬಂದಿದೆ, 1929ರಲ್ಲಿ ಮಾಸ್ತಿ ಅವರೂ ಇಂಗ್ಲೀಷು, ಸಂಸ್ಕೃತ, ಹಿಂದೀಗಳ ಬಗ್ಗೆ ಮಾತಾಡಿದ್ದಾರೆ. ಸೇಡಿಯಾಪು ಕೃಷ್ಣ ಭಟ್ಟರು, ತೀನಂಶ್ರೀ , ಕುವೆಂಪು, ಗೌರೀಶ ಕಾಯ್ಕಿಣಿ , ವೆಂಕಟಾಚಲ ಶಾಸ್ತ್ರಿಗಳು, ಚಿದಾನಂದ ಮೂರ್ತಿ, ಶತಾವಧಾನಿ ಗಣೇಶ್ , ಅನಕೃ , ಅನಂತಮೂರ್ತಿ ಎಲ್ಲರೂ ಇಂಗ್ಲೀಷಿನ ಬಗ್ಗೆ ಮಾತಾಡಿಯೇ ಇದ್ದಾರೆ. ಸಾಹಿತಿಗಳು ಮಾತ್ರವಲ್ಲ, ಮ ರಾಮಮೂರ್ತಿಯವರಿಂದ ಹಿಡಿದು , ಬನವಾಸಿ ಬಳಗದವರೆಗೆ , ಕರವೇಯಿಂದ ಹಿಡಿದು ವಸಂತ ಶೆಟ್ಟಿಯವರವರೆಗೆ ಎಲ್ಲರೂ ಇಂಗ್ಲೀಷಿನ ಬಗ್ಗೆ ಮಾತಾಡುತ್ತಲೇ ಬಂದಿದ್ದಾರೆ . ಇವರಲ್ಲಿ ಸಾಕಷ್ಟು ಜನ ಹಿಂದೀ, ಇಂಗ್ಲೀಷ್ ಎರಡರ ಬಗ್ಗೆಯೂ ಮಾತಾಡಿದ್ದಾರೆ . ಕಡೆಗೆ ನನ್ನ ಬ್ಲಾಗಿನ ಸರ್ವಪ್ರಥಮ ಪೋಸ್ಟ್ ಕೂಡಾ ಇಂಗ್ಲೀಷಿನ ಕುರಿತೇ ಇದೆ! ಹೀಗಿರುವಾಗ ಇಂಗ್ಲೀಷಿನ ಬಗ್ಗೆ ಯಾರೂ ಮಾತಾಡಿಲ್ಲ ಅನ್ನುವವರು ಕಣ್ಣು ಮುಚ್ಚಿದ್ದಾರೆ ಅಥವಾ ಕಣ್ಣು ಮುಚ್ಚಿದ ಹಾಗೆ ನಟಿಸುತ್ತಿದ್ದಾರೆ ಅನ್ನದೆ ಗತ್ಯಂತರವಿಲ್ಲ !
ಮೇಲೆ ಹೆಸರಿಸಿರುವವರು ಯಾರೂ ಇಂಗ್ಲೀಷು ಕಲಿಯಬಾರದು ಅಂತ ಎಲ್ಲಿಯೂ ಹೇಳಿಲ್ಲ . ಇವರಲ್ಲಿ ಹೆಚ್ಚಿನವರೂ ಇಂಗ್ಲೀಷನ್ನು ಚೆನ್ನಾಗಿ ಅಭ್ಯಾಸ ಮಾಡಿದವರೇ. ಬಿ ಎಂ ಶ್ರೀ,ಮಾಸ್ತಿ,ತೀನಂಶ್ರೀ ಇವರೆಲ್ಲ ಸ್ಪಷ್ಟ ಮಾತುಗಳಲ್ಲಿ ಇಂಗ್ಲೀಷಿನ ಪ್ರಯೋಜನ ನಮಗೆ ಸಿಗಬೇಕು ಅಂತ ಹೇಳಿಯೂ ಇದ್ದಾರೆ, ಇಂಗ್ಲೀಷಿಗಾಗಿ ನಮ್ಮ ಭಾಷೆಯನ್ನು ನಾವು ಮರೆಯಬಾರದು, ಇಂಗ್ಲೀಷು ಕನ್ನಡಕ್ಕೆ ಕಂಟಕವಾಗಬಾರದು ಅನ್ನುವುದೇ ಅವರ ಕಾಳಜಿ.
3. ಹಿಂದಿ ಹೋಗುವ ಬದಲು ಇಂಗ್ಲೀಷ್ ಹೋಗಲಿ - ನಾವು ಬಾವಿಯೊಳಗಿನ ಕಪ್ಪೆಗಳಲ್ಲ, ನಮಗೆ ಹೊರಗಿನವರ ಜೊತೆ ಸಂಪರ್ಕ ಬೇಕು, ಒಂದು ಲಿಂಕ್ ಲ್ಯಾಂಗ್ವೇಜ್ ಇಲ್ಲದೇ ದ್ವೀಪದ ಹಾಗೆ ಇರಲಾಗುವುದಿಲ್ಲ. ಬೇರೆ ಭಾಷೆಗಳ ಜ್ಞಾನ ಭಂಡಾರವೂ ಬೇಕು. ಆ ಲಿಂಕ್ ಲ್ಯಾಂಗ್ವೇಜ್ ಆಗುವುದಕ್ಕೆ ಹಿಂದೀ ಸೂಕ್ತವೋ , ಇಂಗ್ಲೀಷೋ ಅನ್ನುವುದು ಮುಂದಿನ ಪ್ರಶ್ನೆ. ನಾನೊಂದು ಉಪಾಯ ಹೇಳುತ್ತೇನೆ. ನೀವೊಂದು ಸಲ ಕೇರಳ ಗಡಿ ಭಾಗದಲ್ಲಿರುವ ಬದಿಯಡ್ಕಕ್ಕೆ ಹೋಗಿ ಬನ್ನಿ , ಉಡುಪಿಗೋ , ಮಂಗಳೂರಿಗೋ , ಬಾಳೆಹೊನ್ನೂರಿಗೋ , ಚಿತ್ರದುರ್ಗಕ್ಕೋ ಹೋಗಿ ಬನ್ನಿ . ಒಂದು ಐವತ್ತುಸಾವಿರ ಅಂಗಡಿಗಳನ್ನು ನೋಡಿ ಬನ್ನಿ . ಜನರು ಬೋರ್ಡ್ ಅನ್ನು ಯಾವ ಭಾಷೆಯಲ್ಲಿ ಹಾಕಿದ್ದಾರೆ ? ಕನ್ನಡದಲ್ಲಿ , ಅಥವಾ ಇಂಗ್ಲೀಷಿನಲ್ಲಿ , ಅಥವಾ ಎರಡರಲ್ಲೂ . ಯಾರಾದರೂ ಹಿಂದೀ ಬೋರ್ಡು ಹಾಕಿರುವುದು ಕಾಣುತ್ತದೆಯೇ ? ನಮ್ಮಲ್ಲಿಒಂದು ಐವತ್ತು ಸಾವಿರ ಜನ ಇತ್ತೀಚಿಗೆ ಮದುವೆಯಾದವರಿದ್ದಾರೆ , ಅವರು ಆಮಂತ್ರಣ ಪತ್ರಿಕೆಯನ್ನು ಯಾವ ಭಾಷೆಯಲ್ಲಿ ಮುದ್ರಿಸಿದ್ದಾರೆ ನೋಡಿ ಬನ್ನಿ ಒಮ್ಮೆ, ಅಲ್ಲೂ ಕನ್ನಡ ಇಂಗ್ಲೀಷುಗಳೇ ಕಂಡೀತಲ್ಲದೆ ಹಿಂದಿ ಕಾಣದು. ನಮ್ಮ ಜನ ಸಹಿ ಹೇಗೆಹಾಕುತ್ತಾರೆ ? ಯಾರಾದರೂ ಹಿಂದಿಯಲ್ಲಿ ಸಹಿ ಹಾಕುವವರು ಇದ್ದಾರೆಯೇ ?
ನಮ್ಮಲ್ಲಿ ಖಾಸಗೀ ಶಾಲೆಗಳು ಎಷ್ಟಿವೆ ಲೆಕ್ಕ ಹಾಕಿ,ಈಗ ಅದರಲ್ಲಿ ಹಿಂದೀ ಮಾಧ್ಯಮದ ಶಾಲೆಗಳನ್ನು ಎಷ್ಟು ಜನ ತೆರೆದಿದ್ದಾರೆ ಹೇಳಿ ನೋಡೋಣ. ಹೋಗಲಿ, ಈಗ ವಿಜ್ಞಾನ ಕಲಿತವರು , ಇಂಜಿನಿಯರಿಂಗ್ ಕಲಿತವರು, ಲಾಯರುಗಳು,ವೈದ್ಯರು ಅವರ ವಿಷಯಗಳನ್ನು ಹಿಂದಿಯಲ್ಲಿ ಕಲಿತವರಿದ್ದರೆ ತೋರಿಸಿ . ಲಿಂಕ್ ಲ್ಯಾಂಗ್ವೇಜ್ ಆಗಿ ಇಂಗ್ಲೀಷು ಬೇಕೋ, ಹಿಂದೀ ಬೇಕೋ ಅನ್ನುವ ಪ್ರಶ್ನೆಗೆ ಜನರೇ ಹೀಗೆ ಲಕ್ಷ ಲಕ್ಷ ಸಲ ಪ್ರತಿ ದಿನವೂ ತಮ್ಮ ಆಯ್ಕೆಗಳಿಂದಲೇ ಉತ್ತರಿಸಿದ್ದಾರೆ. ಈಗ ನಾಳೆ ಆಧಾರ್ ಕಾರ್ಡಿಗೆ ಪಾನ್ ಕಾರ್ಡ್ ಅನ್ನು ಲಿಂಕ್ ಮಾಡುವುದು ಹೇಗೆ ಅಂತ ನಾವು ಓದಿಕೊಳ್ಳುವುದೂ ಇಂಗ್ಲೀಷಿನಲ್ಲಿಯೇ ಹೊರತು ಹಿಂದಿಯಲ್ಲಲ್ಲ .
ನಿಮಗೆ ಗೊತ್ತಿದೆಯೋ ಇಲ್ಲವೋ , ಇಸ್ಲಾಮಿನ ಸುವರ್ಣ ಯುಗದಲ್ಲಿ ಆಗಿನ ಮುಸ್ಲಿಂ intellectualಗಳು ಒಂದು ರಾಶಿ ಸಂಸ್ಕೃತ ಪುಸ್ತಕಗಳನ್ನು ಪರ್ಶಿಯನ್ ಭಾಷೆಗೆ ಅನುವಾದ ಮಾಡಿದ್ದರು. ಅವರ ಮೇಲೆ ಯಾರೂ ಅದನ್ನು ಹೇರಿದ್ದಲ್ಲ , ಸಂಸ್ಕೃತದಲ್ಲಿ ಅಷ್ಟು ಜ್ಞಾನ ಭಂಡಾರ ಇದ್ದದ್ದರಿಂದ ಅವರೇ ಅದರ ಕಡೆಗೆ ಆಕರ್ಷಿತರಾಗಿ ಈ ಜ್ಞಾನದ ಪ್ರಯೋಜನ ಅರಬರಿಗೂ ಸಿಗಲಿ ಅಂತ ಮಾಡಿದ ಕೆಲಸ ಅದು , ನ್ಯೂಟನ್ ಅವನ ಮನೆಭಾಷೆ ಇಂಗ್ಲೀಷ್ ಆದರೂ ತನ್ನ ಕೃತಿಗಳನ್ನು ಲ್ಯಾಟಿನ್ಭಾಷೆಯಲ್ಲಿ ಬರೆದಿದ್ದ , ಅವತ್ತು ಲ್ಯಾಟಿನ್,ಸಂಸ್ಕೃತಗಳಿಗೆ ಇದ್ದ ಸ್ಥಾನ ಇವತ್ತು ಇಂಗ್ಲೀಷಿಗೆ ಇದೆ . ಅದರ ಪ್ರಯೋಜನ ಎಲ್ಲರಿಗೂ ಬೇಕು, ಅದರ ಸ್ಥಾನ ಹೇಗಿರಬೇಕು , ಎಷ್ಟಿರಬೇಕು ಅಂತ ನಿರ್ಣಯ ಮಾಡುವುದು , ಅದು ನಮ್ಮ ಭಾಷೆಗಳನ್ನುಕೊಲ್ಲದ ಹಾಗೆ ಜಾಗ್ರತೆ ಮಾಡುವುದು ನಾವು ಮಾಡಬಹುದಾದ ಕೆಲಸ. ಇಷ್ಟಿರುವಾಗ ಹಿಂದಿಯನ್ನೂ ಇಂಗ್ಲೀಶನ್ನೂ ಒಂದೇ ತಕ್ಕಡಿಯಲ್ಲಿಟ್ಟು ತೂಗುವುದು,"ತೆಂಡೂಲ್ಕರನೂ ಬ್ಯಾಟು ಹಿಡಿಯುತ್ತಾನೆ , ಕುಂಬ್ಳೆಯೂ ಹಿಡಿಯುತ್ತಾನೆ , ತೆಂಡೂಲ್ಕರನಿಗೆ ಮಾತ್ರ ಯಾಕೆ ಓಪನಿಂಗ್ ಸ್ಥಾನ" ಅಂತ ಕೇಳಿದಷ್ಟೇ ತಮಾಷೆಯ ಪ್ರಶ್ನೆ ಅನ್ನದೇ ವಿಧಿಯಿಲ್ಲ . ಲಿಂಕ್ ಲ್ಯಾಂಗ್ವೇಜ್ ಇರುವುದೇ ಪ್ರಯೋಜನಕ್ಕಾಗಿ , utilityಗಾಗಿ. ಜನ ಹೆಚ್ಚು utility ಇರುವುದನ್ನೇ ಆಯ್ದುಕೊಳ್ಳುತ್ತಾರೆ ಅಂತ ಬಿಡಿಸಿ ಹೇಳಬೇಕೇ ? ಮೊದಲೇ ಹೇಳಿದ ಹಾಗೆ ಇಂಗ್ಲೀಷನ್ನೋ ಹಿಂದಿಯನ್ನೋ ಕಲಿಯಬಾರದು ಅಂತ ಯಾರೂ ಹೇಳುತ್ತಿಲ್ಲ, ಅವುಗಳಿಂದ ಕನ್ನಡಕ್ಕೆ ತೊಂದರೆಯಾಗದ ಹಾಗೆ ಕಲಿಯಬೇಕು ಅನ್ನುವುದಷ್ಟೇ ಇಲ್ಲಿರುವ ಕಳಕಳಿ.
4. ಮೋದಿ ಬಂದಾಗಲೇ ಇವೆಲ್ಲ ನೆನಪಾದದ್ದೇ ನಿಮಗೆ - ಈ ಚರ್ಚೆ ಮನಮೋಹನ ಸಿಂಗರ ಕಾಲದಲ್ಲಿಯೂ ಇತ್ತು , ಅದಕ್ಕೆ ಮೊದಲೂ ಇತ್ತು . ಈಗಾಗಲೇ ಹೇಳಿದಂತೆ ಸ್ವಾತಂತ್ರ್ಯ ಪೂರ್ವ ಕಾಲದಿಂದಲೂ ಈ ವಿಷಯದಲ್ಲಿ ಹೋರಾಟಗಳೂ , ಸಂವಾದಗಳೂ ಆಗಿವೆ. ಕೆಲವರು ಇದರಲ್ಲಿ ರಾಜಕೀಯ ತಂದಿರಬಹುದಾದರೂ ಒಟ್ಟು ವಾದದಲ್ಲಿ ರಾಜಕೀಯ ಇಲ್ಲ . ಎರಡು ಬಣದವರೂ ರಾಜಕೀಯ ತರದೇ ಇರುವುದು ಒಳ್ಳೆಯದು.
5. ಇದು ರೋಲ್ಕಾಲು ಓರಾಟ - ಇಷ್ಟಕ್ಕೂ ಈ ರೋಲ್ಕಾಲು ಎಲ್ಲಿ ಸಿಗುತ್ತದೆ , ಎಷ್ಟು ಸಿಗುತ್ತದೆ, ಇದನ್ನು ಕೊಡುವವರು ಯಾರು ಅಂತ ನಮಗೂ ಸ್ವಲ್ಪ ಇವರೇ ಗುಟ್ಟು ಬಿಟ್ಟು ಕೊಟ್ಟರೆ ಉಪಕಾರವಾದೀತು, ಈ ಧಿಡೀರ್ ಹಿಂದೀಪ್ರೇಮಿಗಳು ಕನಸು ಕಾಣುತ್ತಿರುವಷ್ಟೆಲ್ಲ ರೋಲ್ಕಾಲು ಸಿಗುವುದಾದರೆ ನಾನೂ ಈ ದರಿದ್ರ ಸಾಫ್ಟ್ವೇರ್ ಕೆಲಸ ಬಿಟ್ಟು ಇದನ್ನೇ ಮಾಡೋಣ ಅಂತಿದ್ದೇನೆ, ನಾನೂ ಒಂದು ಏಳೆಂಟು ವರ್ಷಗಳಿಂದ ಕನ್ನಡ ಕನ್ನಡ ಅಂತ ಬೊಬ್ಬೆ ಹಾಕಿದ್ದೇ ಬಂತು , ಈ ಹಿಂದೀ ತಾಯಿಯ ಸಿರಿಮಕ್ಕಳು ಒಂದು ಹಳೇ ಎರಡು ರೂಪಾಯಿ ನೋಟನ್ನೂ ರೋಲ್ಕಾಲಾಗಿ ಕೊಟ್ಟಿಲ್ಲ, ಇದರ ರಹಸ್ಯ ಏನು ? ಯಾರಿಗೆ ಎಷ್ಟು ರೋಲ್ಕಾಲು ಅಂತ ಈ ಹಿಂದೀ ಮಾತೆಯ ವರಪುತ್ರರೇ ನಿರ್ಧಾರ ಮಾಡುತ್ತಾರೋ ಹೇಗೆ ? ಬಲ್ಲವರು ತಿಳಿಸಬೇಕು.
6. ಕಿರಿಕ್ ಕೀರ್ತಿ ಕೇಂದ್ರಿತ ಚರ್ಚೆ - ಅರ್ಧದಷ್ಟು ಜನ ತಮ್ಮ ಅರ್ಧಕ್ಕರ್ಧ ಶಕ್ತಿಯನ್ನು ಕಿರಿಕ್ ಕೀರ್ತಿಯನ್ನು ಗೇಲಿ ಮಾಡುವುದಕ್ಕೇ ಮೀಸಲಿಟ್ಟಿದ್ದಾರೆ . ಈ ವಿಚಾರದಲ್ಲಿ ಆಲೂರು ವೆಂಕಟರಾಯರು , ಬಿ ಎಂ ಶ್ರೀ , ಮಾಸ್ತಿ , ಕುವೆಂಪು, ಸೇಡಿಯಾಪುಕೃಷ್ಣ ಭಟ್ಟರು, ತೀನಂಶ್ರೀ , ಗೌರೀಶ ಕಾಯ್ಕಿಣಿ , ವೆಂಕಟಾಚಲ ಶಾಸ್ತ್ರಿಗಳು, ಚಿದಾನಂದ ಮೂರ್ತಿ, ಅನಕೃ , ತರಾಸು , ಶಂಬಾ ಜೋಶಿ ,ಅನಂತಮೂರ್ತಿ, ವೆಂಕಟಸುಬ್ಬಯ್ಯ ಇಂತಹಾ ಪ್ರಾಜ್ಞರು, ಹಿರಿಯ ಸಾಹಿತಿಗಳು, ಪಂಡಿತರು ಹೇಳಿದ್ದನ್ನು ನೋಡಬೇಕೋ, ಕಿರಿಕ್ ಕೀರ್ತಿ ಹೇಳಿದ್ದನ್ನೋ ? ಅಷ್ಟೆಲ್ಲ ಯಾಕೆ, ಮೊನ್ನೆ ಕನ್ನಡಪ್ರಭದಲ್ಲಿ ವಸುದೇಂಧ್ರ ಮತ್ತು ಅರ್ಪಣಾ ಎಚ್ ಎಸ್ ಬರೆದದ್ದರ ಬಗ್ಗೆ, ಬನವಾಸಿ ಬಳಗ, ಮುನ್ನೋಟ ತಂಡಗಳು ಅಥವಾ ವಸಂತ್ ಶೆಟ್ಟಿಬರೆದ ಯಾವ ಲೇಖನಗಳ ಕುರಿತೂ ಚರ್ಚೆಯೇ ಆಗಲಿಲ್ಲ!
7. ಮೆಟ್ರೋದಲ್ಲಿ ಒಂದು ಬೋರ್ಡ್ನಲ್ಲಿ ಹಿಂದಿ ಇದ್ದರೆ ತಪ್ಪೇನು - ಒಂದು ವಾದಕ್ಕೆ ಒಂದು socio political context ಇರುತ್ತದೆ , ಮೆಟ್ರೋದಲ್ಲಿ ಬೋರ್ಡು ಅನ್ನುವುದು ಇಲ್ಲಿ ಒಂದು ನೆಪ ಮಾತ್ರ. ಒಂದೇ ಭಾಷೆಗೆ ಮನ್ನಣೆಯ ಮಣೆ ಯಾಕೆ ? ಹಿಂದೀ ಕನ್ನಡಗಳ ಸಂಬಂಧ ಹೇಗಿರಬೇಕು , ಹಿಂದಿಗೆ ಇಲ್ಲಿ ಕೊಡಬೇಕಾದ ಸ್ಥಾನ ಮಾನ ಏನು ಅನ್ನುವುದೇ ಪ್ರಶ್ನೆ . ಬ್ಯಾಂಕುಗಳಲ್ಲಿ , ರೈಲ್ವೆಯಲ್ಲಿ , ಮೈಲಿಗಲ್ಲುಗಳಲ್ಲಿ, ಎಲ್ ಐಸಿ ಯಲ್ಲಿ , ಕಡೆಗೆ ಗ್ಯಾಸು ಸಿಲಿಂಡರಿನಲ್ಲಿ ಕೂಡ ಕನ್ನಡ ಮಾಯ ಆಗಿ ಹಿಂದೀಮತ್ತು ಇಂಗ್ಲೀಷ್ ಕೂತಿದೆ . ಬೆಂಗಳೂರನ್ನು union territory ಮಾಡಿ ಅಂತ ಅಭಿಯಾನ ನಡೆಸಿದವರಿದ್ದಾರೆ , ಫ್ಲಿಪ್ ಕಾರ್ಟಿನಂಥ ಸಂಸ್ಥೆ ಬೆಂಗಳೂರಿನಲ್ಲಿ ಗ್ರಾಹಕರ ಜೊತೆ ಹಿಂದಿ ಮತ್ತು ಇಂಗ್ಲೀಷಿನಲ್ಲಿ ಮಾತ್ರ ವ್ಯವಹಾರ ಮಾಡುತ್ತದೆ, ಕಂಡಕ್ಟರುಗಳುಆಟೋದವರು, ಕ್ಯಾಬ್ ಡ್ರೈವರ್ ಗಳು ಅಂಗಡಿಯವರು ಇವರೆಲ್ಲ ಹಿಂದಿ ಬರದ ಅನಾಗರಿಕರು ಅಂತ ಬೈದುಕೊಂಡು ಓಡಾಡಿದವರ ಸಂಖ್ಯೆ ಕಡಮೆಯೇನಲ್ಲ. ಒಂದು ಕ್ಯಾಬ್ ಸಂಸ್ಥೆ ಡ್ರೈವರ್ ಆಗುವುದಕ್ಕೆ ಹಿಂದಿ ಜ್ಞಾನ ಬೇಕೇ ಬೇಕು ಅಂತ ಹೇಳಿದೆ , ಒಬ್ಬ ರಾಜ್ಯಪಾಲರು ಹಿಂದಿ ಕಲಿಯುವುದು ನಿಮ್ಮ ಕರ್ತವ್ಯ ಅಂತ ಹೇಳಿದ್ದಾರೆ ! ನಿನ್ನೆಯಷ್ಟೇ ಒಬ್ಬ ಹುಡುಗಿಗೆ ಮಾಲ್ ಒಂದರಲ್ಲಿ ನಾವು ಹಿಂದಿ ಮಾತ್ರ ಮಾತಾಡುವುದು ಅಂತ ಹೇಳಿ ಗಲಾಟೆ ಮಾಡಿದವರಿದ್ದಾರೆ. UPSC ಪರೀಕ್ಷೆಗಳು ಹಿಂದಿಯಲ್ಲಿವೆ, ಬೇರೆ ಭಾರತೀಯ ಭಾಷೆಗಳಲ್ಲಿ ಇಲ್ಲ, ಹೀಗೆ ಸಮಸ್ಯೆಗಳ ಪಟ್ಟಿಯೇ ಇದೆ. ಈ ಲೋಕಲ್ ಲ್ಯಾಂಗ್ವೇಜ್ ಅನ್ನು ಬ್ಯಾನ್ ಮಾಡಿ ಅಂತ ಒಂದಷ್ಟು ಜನ ಫೇಸ್ಬುಕ್ ನಲ್ಲಿ ಕರೆಕೊಡುವುದೂ ಆಗಾಗ ನಡೆದು ಬಂದಿದೆ.
ಹಾಗಂತ ಎಲ್ಲರೂ ಹಾಗಿರುವುದಿಲ್ಲ, ಒಳ್ಳೆಯವರು ಕೆಟ್ಟವರು ಎಲ್ಲ ಕಡೆಯೂ ಇರುತ್ತಾರೆ, ಉತ್ತರ ಭಾರತದಲ್ಲಿ ಒಳ್ಳೆಯವರೂ, ಇಲ್ಲಿ ದುಷ್ಟರೂ ಇಲ್ಲ ಅಂತಲ್ಲ. ನಮಗೆ ದುರಭಿಮಾನ ಬೇಡ,ದ್ವೇಷ ಬೇಡವೇ ಬೇಡ. ನಮಗೂ ಉತ್ತರದ ಕಡೆಯ ಗೆಳೆಯರಿದ್ದಾರೆ. ಉತ್ತರ ಭಾರತದವರೂ ನಮ್ಮವರೇ. ಕನ್ನಡವನ್ನು ಬಿಟ್ಟು ಕೊಡದೆ ಅವರ ಜೊತೆ ಗೆಳೆತನ ಮಾಡುವುದು ಹೇಗೆ ಅನ್ನುವುದು ಯೋಚಿಸಬೇಕಾದ ವಿಷಯ. ಹೀಗೆ ಪ್ರತಿ ಸಲವೂ ಏನಾದರೂ ಆದಾಗ ಒಂದೊಂದು ಹೊಸ ಜಗಳ ಮಾಡುತ್ತಾ ಕೂರುವುದುನಮಗೆ ಸಾಧ್ಯವೂ ಅಲ್ಲ, ಸಾಧುವೂ ಅಲ್ಲ , ಶೋಭೆಯಂತೂ ಮೊದಲೇ ಅಲ್ಲ. ಹೀಗಾಗಿ ಈ ಎಲ್ಲ ಘಟನೆಗಳನ್ನೂ ಸೇರಿಸಿ ಸಾಂಕೇತಿಕವಾಗಿ ಮೆಟ್ರೋದ ವಿಷಯ ಎತ್ತಿದ್ದೇವಲ್ಲದೆ ಒಂದು ಬೋರ್ಡಿನಿಂದ ಭೂಕಂಪ ಆಗುತ್ತದೆ ಅಂತಲ್ಲ. ಮೆಟ್ರೋಒಂದು ನೆಪ ಮಾತ್ರ , ವಿಷಯದ ವ್ಯಾಪ್ತಿ,ಹರಹು ದೊಡ್ಡದಿದೆ. ಝೆನ್ ಗುರುವೊಬ್ಬ ಆಕಾಶದ ಕಡೆ ಬೆರಳು ತೋರಿಸಿದಾಗ ಶಿಷ್ಯ ಬೆರಳಿನಲ್ಲಿ ಏನೋ ವಿಶೇಷ ಇರಬೇಕು ಅಂತ ಅದನ್ನೇ ನೋಡಿದನಂತೆ ; ನಕ್ಷತ್ರ ನೀಹಾರಿಕೆಗಳನ್ನು ನೋಡುವ ಬದಲು. ನಾವು ಮೆಟ್ರೋ ಬೋರ್ಡು ಅನ್ನುವ ಬೆರಳನ್ನು ನೋಡಬೇಕೋ, ನಕ್ಷತ್ರಗಳನ್ನೋ ?
8. ಇದು ಯಾವ ಮಹಾ ದೊಡ್ಡ ವಿಷಯ ? ಕನ್ನಡಕ್ಕೆ ಏನಾಗಿದೆ ಈಗ - ನಿನ್ನೆ ನನಗೆ axis ಬ್ಯಾಂಕಿನಿಂದ ಒಂದು ಕಾಲ್ ಬಂತು , ಆ ಪುಣ್ಯಾತ್ಮ ಹಿಂದಿಯಲ್ಲಿಯೇ ಮಾತಾಡಿದ , ಬೆಂಗಳೂರಿನಲ್ಲಿ ಗ್ರಾಹಕರಿಗೆ ಫೋನು ಮಾಡುವಾಗ ಹಿಂದಿಯೇ ಮೊದಲ ಆಯ್ಕೆ ಅಂತ ಅವನಿಗೆ ಯಾಕನ್ನಿಸಿತೋ ಗೊತ್ತಿಲ್ಲ. ಮಾರತ್ತಹಳ್ಳಿ, whitefield ಗಳಲ್ಲಿ , ಎಂ ಜಿ ರೋಡಿನಲ್ಲಿ ಎಲ್ಲ ಹೀಗೇ ಆಗಿದೆ , ನಗರಗಳಲ್ಲಿ ಅಪ್ಪ ಅಮ್ಮಂದಿರೇ ಮಕ್ಕಳ ಹತ್ತಿರ ಇಂಗ್ಲೀಷು ಮಾತಾಡುತ್ತಾರೆ. ಬೊಳುವಾರು ಮಹಮ್ಮದ್ ಕುಂಞಿಸಂಪಾದಿಸಿರುವ "ತಟ್ಟು ಚಪ್ಪಾಳೆ ಪುಟ್ಟ ಮಗು" ಪುಸ್ತಕದಲ್ಲಿ ಎಷ್ಟೆಲ್ಲ ಬಗೆ ಬಗೆಯ rhymes ಇದೆ ಅಂತ ಮಕ್ಕಳಿಗೆ ಬಿಡಿ , ಪಾಲಕರಿಗೇ ಗೊತ್ತಿರುವುದಿಲ್ಲ. ಮಕ್ಕಳು ಕನ್ನಡ ಕಥೆ ಓದುವುದಿಲ್ಲ, ರಾಮಾಯಣ, ಮಹಾಭಾರತಗಳನ್ನೂ ಅವು ಇಂಗ್ಲೀಷಿನಲ್ಲಿಕಲಿಯುತ್ತವೆ .
ಹೀಗೆ ಹಂತ ಹಂತವಾಗಿ, ನಿಧಾನಕ್ಕೆ ಭಾಷೆ ಸಾಯುತ್ತದೆ . ಯೂರೋಪಿನಲ್ಲಿ ಒಂದು ಸಾವಿರಕ್ಕೂ ಹೆಚ್ಚು ಭಾಷೆಗಳಿದ್ದವು, ಈಗ ಇಪ್ಪತ್ತೈದು ಉಳಿದುಕೊಂಡಿವೆ. ಪಾಕಿಸ್ಥಾನದಲ್ಲಿ ಸರ್ಕಾರ ಉರ್ದು ಹೇರಿದ್ದರಿಂದ ಪಂಜಾಬಿಗಳು ಸಿಂಧಿಗಳ (ಅವರೇಹೆಚ್ಚಿದ್ದರೂ ) ಭಾಷೆಗೆ ಅನುಕೂಲವೇ ಇಲ್ಲದ ಹಾಗಾಯಿತು. ಐರ್ಲೆಂಡ್ ದೇಶದಲ್ಲಿ ಐರಿಷ್ ಭಾಷೆಯನ್ನು ಇಂಗ್ಲೀಷ್ ಹೇರಿಕೆ ತಿಂದು ಹಾಕಿದೆ . ಆಫ್ರಿಕಾದ ಎಷ್ಟೋ ಭಾಷೆಗಳನ್ನು ಇಂಗ್ಲೀಷು ನುಂಗಿ ನೀರು ಕುಡಿದಿದೆ. ಈಗ ಇಂಗ್ಲೀಷಿನಂತೆಯೇಮೆರೆಯುತ್ತಿದ್ದ ಸಂಸ್ಕೃತ, ಲ್ಯಾಟಿನ್ ಗಳನ್ನು ಇವತ್ತು ಯಾರೂ ಆಡುಭಾಷೆಯಾಗಿ ಮಾತಾಡುತ್ತಿಲ್ಲ . ನಮ್ಮ ದೇಶದ ಪ್ರಾಕೃತ, ಪಾಳಿ ಭಾಷೆಗಳು ಸತ್ತೇ ಹೋಗಿವೆ, ಭಾರತದಲ್ಲಿ ಈಗ ಸುಮಾರು ನೂರಾತೊಂಬತ್ತು ಭಾಷೆಗಳು ಕೊನೆಯುಸಿರುಎಳೆಯುತ್ತಿವೆ. ಭಾಷೆಗಳ ವಿಷಯದಲ್ಲಿ, “ಕನ್ನಡ ಸೋಮವಾರ ಇತ್ತು, ಮಂಗಳವಾರ ಇದ್ದಕ್ಕಿದ್ದಂತೆ ಮಾಯ ಆಯಿತು” ಅನ್ನುವಂತೆ ಆಗುವುದಿಲ್ಲ. ಅವುಗಳದ್ದು ಏನಿದ್ದರೂ ನಿಧಾನಕ್ಕೆ ಇಷ್ಟಿಷ್ಟೇ ಸಾಯುವ ಕರ್ಮ ! ಕನ್ನಡ ಇವತ್ತಿನ ಮಟ್ಟಿಗೆ ಸತ್ತಿಲ್ಲದಿದ್ದರೂ ಅದಕ್ಕೆಒಂದು ಮಲೇರಿಯಾವಾದರೂ ಬಂದಿದೆ ಅನ್ನದೇ ವಿಧಿಯಿಲ್ಲ ! ಹೀಗಾಗಿ ಅದು ಇನ್ನೇನು ಸಾಯಲಿದೆ ಅಂದಾಗ ವೈದ್ಯರನ್ನು ಹುಡುಕುವ ಬದಲು ಪ್ರತಿ ಸಲ ಜ್ವರ ಬಂದಾಗಲೂ ಮದ್ದು ಮಾಡುವುದು ಸುಸೂತ್ರ !
9. ನಮ್ಮ ದೇಶಕ್ಕೆ ಒಗ್ಗಟ್ಟಿಗೆ, ನಮ್ಮನ್ನು ಒಂದುಗೂಡಿಸಲಿಕ್ಕೆ ಒಂದು ರಾಷ್ಟ್ರ ಭಾಷೆ ಬೇಕು - ಕಳೆದ ಎಪ್ಪತ್ತು ವರ್ಷಗಳಲ್ಲಿ ಕರ್ನಾಟಕದವರು ಮಧ್ಯಪ್ರದೇಶದವರ ಮೇಲೆ ಯುದ್ಧ ಸಾರಿದ್ದಾರೆಯೇ ? ಕೇರಳದವರಿಗೂ ಗುಜರಾತಿನವರಿಗೂ civil war ಆಗಿದೆಯೇ ? ನಾವು ತಕ್ಕ ಮಟ್ಟಿಗೆ ಒಗ್ಗಟ್ಟಿನಲ್ಲಿಯೇ ಇದ್ದೇವಲ್ಲ ! ಭ್ರಷ್ಟಾಚಾರ.ಬಡತನದಂತಹಾ ಸಮಸ್ಯೆಗಳು ನಮ್ಮನ್ನು ಕಾಡಿವೆಯಲ್ಲದೆ, ರಾಷ್ಟ್ರ ಭಾಷೆ ಇಲ್ಲದ ಸಮಸ್ಯೆ ಹುಟ್ಟಿಯೇ ಇಲ್ಲ. ನಮ್ಮಲ್ಲಿ ಅನ್ನ ಇಲ್ಲ , ನೀರಿಲ್ಲ, ಉದ್ಯೋಗ ಇಲ್ಲ, ರಸ್ತೆಯಿಲ್ಲ, ವಿದ್ಯುತ್ ಇಲ್ಲ ಅಂದವರಿದ್ದಾರಲ್ಲದೆ ರಾಷ್ಟ್ರ ಭಾಷೆ ಇಲ್ಲ ಅಂದವರು ಹೆಚ್ಚಿಲ್ಲ. ಈಗಲೂ ಹಿಂದಿ ಗೊತ್ತಿಲ್ಲದವರು ಒಂದು ಐವತ್ತು ಅರುವತ್ತು ಕೋಟಿಯಷ್ಟು ಜನರಿದ್ದಾರೆ, ಇದರಿಂದ ಒಗ್ಗಟ್ಟಿಗೆ ತೊಂದರೆ ಆದಂತಿಲ್ಲ. ಸ್ವಾತಂತ್ರ್ಯ ಹೋರಾಟಆಗುವಾಗ ಇಡೀ ದೇಶಕ್ಕೆ ಹಿಂದೀ ಗೊತ್ತಿತ್ತೇ ? ಆದರೂ ಎಲ್ಲರೂ ಐಕಮತ್ಯದಿಂದಲೇ ಹೋರಾಡಿದರಲ್ಲ. ಗಾಂಧೀಜಿ ಮಂಗಳೂರಿಗೆ ಬಂದರೆ ಅವರ ಭಾಷಣವನ್ನು ಒಬ್ಬರು ಸ್ಥಳೀಯರು ಸ್ಥಳದಲ್ಲಿಯೇ ಕನ್ನಡಕ್ಕೋ ತುಳುವಿಗೋ ಅನುವಾದ ಮಾಡಿಹೇಳುತ್ತಿದ್ದರು, ಮನಸ್ಸಿದ್ದರೆ ಮಾರ್ಗ, ಮನಸ್ಸಿಲ್ಲದಿದ್ದರೆ ಯಾವ ಮಾರ್ಗವೂ ಏನೂ ಮಾಡಲಾರದು. If it ain't broke, don't fix it ಅನ್ನುತ್ತಾರೆ, ಇಲ್ಲದ ರೋಗಕ್ಕೆ ಮದ್ದು ಹುಡುಕ ಹೊರಟು ಇರುವ ಒಗ್ಗಟ್ಟನ್ನೂ ಮುರಿದಂತಾಗಲಿಲ್ಲವೇ ?

No comments:

Post a Comment