ಕನ್ನಡಪ್ರಭದಲ್ಲಿ ಕಿಮ್ ಕಿ-ಡುಕ್ ಎಂಬ ಕೊರಿಯನ್ ನಿರ್ದೇಶಕನ ಬಗ್ಗೆ ನನ್ನದೊಂದು ಪುಟ್ಟ ಲೇಖನ. ಬರೆಸಿ,ಪ್ರಕಟಿಸಿದ ಜೋಗಿಯವರಿಗೆ ಧನ್ಯವಾದಗಳು:
My Facebook Id is: Sharath Bhat Seraje, my mail id is: sharathbhats@gmail.com
Saturday, 19 December 2020
ಕಿಮ್ ಕಿ-ಡುಕ್
ಮರಡೋನಾ ಎಂಬ ಮೋಹಕ ವ್ಯಸನ
ಕನ್ನಡಪ್ರಭದಲ್ಲಿ ಪ್ರಕಟವಾದ ಲೇಖನ:
ತೊಂಬತ್ತರ ದಶಕದ ಹುಡುಗರಿಗೆ ತೆಂಡೂಲ್ಕರ್ ಇದ್ದಂತೆ ಎಂಬತ್ತರ ದಶಕದ ಫುಟ್ಬಾಲ್ ಪ್ರಿಯರನ್ನು ವಶೀಕರಿಸಿದ ಹೆಸರು ಡಿಯಾಗೋ ಮರಡೋನಾನದ್ದು. ನಮ್ಮನ್ನು ಈ ಪರಿ ಸಮ್ಮೋಹಗೊಳಿಸಿದ ಮಹರಾಯ ಅದೇನು ಆಡ್ತಾನೆ ಅಂತ ನೋಡುವ ಕುತೂಹಲದಿಂದ 1986ರ ವಿಶ್ವಕಪ್ಪಿನ ವೀಡಿಯೊ ಟೇಪ್ ಒಂದನ್ನು ಆ ಕಾಲದಲ್ಲಿ ಸಂಪಾದಿಸಿ ನಾವೆಲ್ಲ ನೋಡಿದ್ದೇ ನೋಡಿದ್ದು. ನೋಡಿ ನೋಡಿ ನೋಡಿ ಆ ಟೇಪು ಸವೆದಿತ್ತು, ಆಗ ಹಾಗೆ ಪರವಶರಾಗುತ್ತಿದ್ದದ್ದರ ನೆನಪು ಮಾತ್ರ ಇನ್ನೂ ಸವೆದಿಲ್ಲ. ಪುರುಸೊತ್ತು ಇಲ್ಲದೆ ಇದ್ದಾಗಂತೂ ಫಾರ್ವರ್ಡ್ ಮಾಡುವುದು,ಸೀದಾ ಆ ಗೋಲಿನ ನಿಮಿಷಕ್ಕೆ ಬರುವುದು ! ಹ್ಯಾಂಡ್ ಆಫ್ ಗಾಡ್ ಅಂತ ಕುಪ್ರಸಿದ್ಧವಾದ ಗೋಲು ಆಗಿ ಸ್ವಲ್ಪವೇ ಹೊತ್ತಿನಲ್ಲಿ ಅದು ಬಂದದ್ದು.
ಅದೆಂಥಾ ಗೋಲು ಅಂತೀರಿ ! ಒಂದಿಡೀ ಜೀವಮಾನದ ಪ್ರತಿಭೆಯನ್ನು ಹನ್ನೊಂದು ಸೆಕೆಂಡುಗಳ ಸ್ತೋತ್ರಗೀತೆಯಾಗಿ ಹೇಳಿದಂತೆ, ಗೋಲು ಮಾಡಲು ಓಡಿದ ಅರುವತ್ತು ಮೀಟರುಗಳ ಸರಕ್ಕನೆಯ ಓಟ; ಅಮರಕೀರ್ತಿ ಎಂಬ ಗಮ್ಯದ ಕಡೆಗಿನ ದೂರ ಬರೀ ಅರುವತ್ತು ಮೀಟರು ಅಂತ ತೋರಿಸಿದ ಓಟ ಅದು! ಮೈದಡವಿದ್ದು, ಕುಟ್ಟಿದ್ದು, ನೂಕಿದ್ದು, ಗಿರ್ರನೆ ಸುತ್ತಿದ್ದು ಎಲ್ಲದರ ಕಥೆಯನ್ನು ಆ ಬಾಲೇ ನಮಗೆ ಹೇಳಿದ್ದರೆ ಚೆನ್ನಿತ್ತು !
1986ರ ಜೂನ್ 22ಕ್ಕೆ ಮೆಕ್ಸಿಕೋ ಸಿಟಿಯಲ್ಲಿ ಹೊಡೆದ ಆ ಗೋಲಿಗೆ ಸಾಕ್ಷಿಯಾಗಿ ಮೈದಾನದಲ್ಲೇ ಲಕ್ಷ ಜನ ನೆರೆದಿದ್ದರು. ಅಲ್ಲಿ ಬೀಟಲ್ಸ್ ತಂಡದ ಒಬ್ಬನ ಹಾಡು ಕೇಳುವುದಕ್ಕೆ ಲಕ್ಷ ಜನರ ಸಂತೆ ನೆರೆದದ್ದಿತ್ತು, ಧರ್ಮಗುರುಗಳ ಬೋಧನೆಗೆ ಜನಸಂತೆ ಒಟ್ಟಾದದ್ದಿತ್ತು, ಅಂಥಲ್ಲಿ ಆ ದಿನ ಮರಡೋನಾ ಭಕ್ತರ ಜಾತ್ರೆ ನೆರೆದಿತ್ತು. ರಭಸವೇ, ಜೋರೇ, ಚುರುಕೇ, ಬಿರುಸೇ, ಭಂಡ ಧೈರ್ಯವೇ - ಆ ಗೋಲಿನಲ್ಲಿ ಏನಿತ್ತು, ಏನಿರಲಿಲ್ಲ ! ಹೀಗೂ ಆಡಿ ದಕ್ಕಿಸಕೊಳ್ಳಬಹುದು ಅಂತ ನಮಗೆಲ್ಲ ಗೊತ್ತಾದದ್ದೇ ಅವತ್ತು. ಮರಡೋನಾ ಮೈದಾನದ ಮೂಲೆಯಲ್ಲಿ ಹಾಗೆ ಓಡಿದ್ದು, ಕೊಳೆಗೇರಿಯಲ್ಲಿ ಕಳೆದ ತನ್ನ ಬಾಲ್ಯದ ಅದೆಷ್ಟೋ ಕ್ಷಣಗಳೆಂಬ ಇಕ್ಕಟ್ಟಾದ ಸಂದಿಗಳಲ್ಲಿ,ಓಣಿಗಳಲ್ಲಿ ಓಡಿದ್ದರ ನೆನಪು ತರುವಂತಿತ್ತು.
ತೆಂಡೂಲ್ಕರನ ಮನಮೋಹಕ ಹುಕ್ಕು , ಲೆಕ್ಕಾಚಾರದ ಕವರ್ ಡ್ರೈವು, ಜಾನ್ ಮೆಕೆನ್ರೋವಿನ ಅದ್ಭುತ ವಾಲಿ, ಅದ್ಯಾರೋ ಜಿಮ್ನಾಸ್ಟಳು ತಾನು ಮನುಷ್ಯಳೇ ಅಲ್ಲ ಎಂಬಂತೆ ಬಳುಕಿದ್ದು ಇವನ್ನೆಲ್ಲ ಎಷ್ಟೆಷ್ಟು ಸಲ ಯುಟ್ಯೂಬಿನಲ್ಲಿ ನೋಡಿ ತಣಿಯುತ್ತೇವೋ ಅಷ್ಟೇ ಸಲ ಈ ಗೋಲನ್ನೂ ನೋಡಿರುತ್ತೇವೆ, ಅದು ಮಾಡಿದ ಮೋಡಿಯೇ ಹಾಗಿದೆ. ಮೆಸ್ಸಿ Getafeಯ ಜೊತೆ ಹೊಡೆದ ಗೋಲು ಗ್ರೇಟಾ ಇದು ಅದಕ್ಕಿಂತ ಮೇಲೆಯಾ ಅಂತ ನಾವು ಆಗಾಗ ಜಗಳ ಆಡುವುದುಂಟು. ಅದು ಉತ್ತರ ಗೊತ್ತಿದ್ದೇ ಕೇಳಿದ ಪ್ರಶ್ನೆಯ ಹಾಗೆ, ಜಗಳದಲ್ಲಿ ಗೆಲ್ಲುವುದು ಯಾರು ಅಂತ ಮೊದಲೇ ತೀರ್ಮಾನ ಆಗಿರುವ ಜಗಳ ! ಎಲ್ಲಿಯ ವರ್ಲ್ಡ್ ಕಪ್ಪು ಎಲ್ಲಿಯ, ಕ್ಲಬ್ಬು ಮ್ಯಾಚುಗಳು ಸ್ವಾಮೀ.
ಮರಡೋನಾ ಅರುವತ್ತಕ್ಕೇ ಆಟ ಮುಗಿಸಿದ್ದು, ಆಶ್ಚರ್ಯವಲ್ಲದಿದ್ದರೂ ಮನಕರಗಿಸುವ ಸಂಗತಿ ಎನ್ನಬೇಕು. ಅವನು ಎಡವದೇ ಇರುತ್ತಿದ್ದದ್ದು ಮೈದಾನದಲ್ಲಿ ಮಾತ್ರ. ಆತ ತಪ್ಪೇ ಮಾಡುವುದಿಲ್ಲ ಅಂತಾಗುತ್ತಿದ್ದದ್ದು ಅವನ ಕಾಲು ಫುಟ್ಬಾಲನ್ನು ಸ್ಪರ್ಶಿಸಿದಾಗಲೇ. ಒಮ್ಮೆ ಮೈದಾನಕ್ಕೆ ಇಳಿದನೋ, ಮತ್ತೆ ತೊಂಬತ್ತು ನಿಮಿಷ ಅವನು ನಮ್ಮನ್ನೆಲ್ಲ ಯಾವುದೋ ಮಾಯಾಲೋಕಕ್ಕೆ ಕರೆದುಕೊಂಡು ಹೋಗುವ ಮಾಯಗಾರ. ಅವನದ್ದು ಮಲ್ಲಕಂಬಕ್ಕೆ ಹತ್ತಿದವನ ಸಮತೋಲನ, gymnastನಂಥ ಬಳುಕು, ಹಸಿದ ಚಿರತೆಯ ನೆಲಮುಟ್ಟದ ಓಟ. ಜೀವನದ ಓಟದಲ್ಲಿ ಮಾತ್ರ ಆ ಚಿರತೆ ಬಲೆಗೆ ಬೀಳುತ್ತಿತ್ತು, ಕಾಲುತಪ್ಪಿ ಎಡವುತ್ತಿತ್ತು.
ಮರಡೋನಾ ಎಂದಾಗ ನೆನಪಾಗುವುದು ಆರು ಜನ ಬೆಲ್ಜಿಯಂನ ಆಟಗಾರರು ಅವನೆದುರು ಹೊಡೆದೇ ಬಿಡುತ್ತಾರೇನೋ ಎಂಬಂತೆ ಅಡ್ಡಗಟ್ಟಿ ನಿಂತದ್ದರ ಛಾಯಾಚಿತ್ರ. ಒಂದು ರಾಶಿ ಬ್ರೆಝಿಲಿಯನ್ನರ ನಡುವೆ ಜಾಗ ಮಾಡಿಕೊಂಡು ಬಾಲನ್ನು ತೂರಿ ನೂಕಿ ಓಡೋಡುವ ದೃಶ್ಯ. ದಿನಬೆಳಗಾದರೆ ಮರಡೋನಾ ಸಾಕ್ಸು ಏರಿಸುವ, ಲೇಸು ಕಟ್ಟುವ, ಕುಣಿಯುವ, ಬಾಲನ್ನು ಕುಣಿಸುವ, ಹರ್ಷದಿಂದ ಮಗುವಿನಂತೆ ಜಿಗಿಯುವ ವೀಡಿಯೊ ಕ್ಲಿಪ್ಪುಗಳು ಮೊಬೈಲಿಗೆ ಬಂದು ಬೀಳುತ್ತವೆ. ಹಾಗೆ ಓಡುವ, ಹಾರುವ, ಹರ್ಷದಿಂದ ಕುಪ್ಪಳಿಸುವ, ಮಗುವಿನಂಥ ಚಿತ್ರವೇ ನಮಗೆ ಇಷ್ಟವಾಗುವ, ಮನಸ್ಸಿನಲ್ಲಿ ಉಳಿಯಬೇಕಾದ ಚಿತ್ರ.
ಮರಡೋನಾ ನಮಗೆ ಯಾಕಿಷ್ಟ? ಆ ಪ್ರತಿಭೆಗೆ, ಆ ಕೌಶಲಕ್ಕೆ ಮರುಳಾದೆವು ಅನ್ನುವುದೇನೋ ನಿಜವೇ, "ನಮ್ಮ ದೊಡ್ಡಪ್ಪನ ಮಗ ಇದ್ದ ನೋಡಿ, ಪಾಪ ! ಹಳ್ಳಿಯಲ್ಲಿ ಹೇಗಿದ್ದ, ಏನು ಕ್ಲೇಶ, ಏನು ಬಡತನ, ಕಷ್ಟಪಟ್ಟು ಹೇಗೆ ಮೇಲೆ ಬಂದ ನೋಡಿ" ಅನ್ನುವಂತೆ ಮರಡೋನಾನ ಜೀವನವಿತ್ತು. ಅವನು ಅಲ್ಲೆಲ್ಲೋ ಅರಮನೆಯಲ್ಲಿ ನಳನಳಿಸುತ್ತ ಕೂತ ಕೀರ್ತಿವಂತನಂತಿರಲಿಲ್ಲ, ಅವನು ನಮ್ಮಂತಿದ್ದ ನಿಮ್ಮಂತಿದ್ದ, ಗೆಲ್ಲುತ್ತಿದ್ದ, ಕುಸಿಯುತ್ತಿದ್ದ, ಹಾರುತ್ತಿದ್ದ, ಬೀಳುತ್ತಿದ್ದ.
ಅವನ ಕಥೆಯ ಪುಸ್ತಕದಲ್ಲಿ, "ಇದೆಲ್ಲ ಯಾಕೆ ಬೇಕಿತ್ತು" ಅನಿಸುವಂಥ ಅಧ್ಯಾಯಗಳಿವೆ. "ಪಕ್ಕದ್ಮನೆ ಅಂಕಲ್ಲು, ಮೊದಲು ಚೆನ್ನಾಗಿದ್ರಲ್ಲ, ಹೀಗ್ಯಾಕಾದ್ರು" ಅಂತ ಮೋರೆ ಕಿವುಚುವಂತೆ ಮಾಡುವ ಸನ್ನಿವೇಶಗಳೂ ಉಂಟು. ಅವೆಲ್ಲವನ್ನು ಮೀರಿ ಆ ಅಮರ ಗೋಲಿದೆ, ಶೇಖರಿಸಿಡುವುದಕ್ಕೆ ಅಂಥ ಉನ್ಮಾದದ ಅಮರ ಕ್ಷಣಗಳಿವೆ, ಇವತ್ತೂ ನಾಳೆಯೂ ನಾಡಿದ್ದೂ ನೆನಪಿಸಿಕೊಂಡು ರೋಮಾಂಚನ ಪಡಬಹುದಾದ ಮಾಯಕದ ಗಳಿಗೆಗಳಿವೆ. ಒಬ್ಬ ಆಟಗಾರ ಬಿಟ್ಟುಹೋಗಬೇಕಾದ್ದು ಅಂಥ ಕ್ಷಣಗಳ ಉಡುಗೊರೆಯನ್ನೇ.
ರವಿ ಬೆಳಗೆರೆ
ನನ್ನ ಎಂಜಿನಿಯರಿಂಗಿನ ರೂಮ್ ಮೇಟ್, ಹತ್ತಿರದ ಗೆಳೆಯ ಪ್ರವೀಣ ಈಗ ಸಿಕ್ಕಿದರೂ ಮಾತು ಶುರು ಮಾಡುವುದು, "ನಿನ್ನ ರವಿ ಬೆಳಗೆರೆ ಈಗ ಎಂತ ಮಾಡ್ತಾ ಇದ್ದಾನೆ" ಎಂಬ ಧಾಟಿಯಲ್ಲೇ. ಆಗಿನ ಕಾಲದಲ್ಲಿ ಮಂಗಳವಾರವಾದರೆ 'ಹಾಯ್' ತರಲಿಕ್ಕೆ ಪೇಟೆಗೆ ಓಡಲು ಕಾಲು ಎಳೆಯುತ್ತಿತ್ತು, ಮನ ಎಳಸುತ್ತಿತ್ತು. ಜೋಗಿಯ ಜಾನಕಿ ಕಾಲಂ ಮತ್ತು ಬೆಳಗೆರೆಯ ಅಂಕಣಗಳ ಬಗ್ಗೆ ನನ್ನ ಪಾಠ್ಯ ಪುಸ್ತಕಗಳಿಗೆ ಅಸೂಯೆ ಹುಟ್ಟುತ್ತಿತ್ತೋ ಏನೋ ಅನ್ನಿಸುವಷ್ಟು ಓದುತ್ತಿದ್ದೆ ಅಂತ ಕಾಣುತ್ತದೆ. ನಾನು ಇಂಥವರ ಫ್ಯಾನು ಅನ್ನಬಹುದಾದಂತೆ ಓದಿದ್ದು ಬೀಚಿಯವರ ಪುಸ್ತಕಗಳನ್ನು. ಬೀಚಿಯವರ ಮಾತ್ರೆಗಳು, ಬೆಳ್ಳಿ ತಿಂಮ ನೂರೆಂಟು ಹೇಳಿದ, ಹುಚ್ಚು ಹುರುಳು, ಆರು ಏಳು ಸ್ತ್ರೀ ಸೌಖ್ಯ, ತಿಮ್ಮಿಕ್ಷನರಿ, ಮಾತನಾಡುವ ದೇವರುಗಳು ಇಂಥವೆಲ್ಲ ನನಗೆ ಓದುವ ಹುಚ್ಚು ಹಿಡಿಸಿದ ಪುಸ್ತಕಗಳು. ಆಮೇಲೆ ಅಂಥದ್ದೇ ಕಿಕ್ ಸಿಕ್ಕಿದ್ದು ಬಳಸಿ ಬರೆಯಲು ಕಂಠಪತ್ರದ ಉಲುಹುಗೆಡದಂತೆ ಬರೆದು ಬಿಸಾಕುತ್ತಿದ್ದಾರೇನೋ ಅನಿಸುತ್ತಿದ್ದ 'ಬೆಳಗೆರೆ ಉವಾಚ'ಗಳಲ್ಲಿ. ಕನ್ನಡದಲ್ಲಿ ಅತ್ಯಂತ ಪ್ರಖರವಾದ ವಿಡಂಬನೆ, ವ್ಯಂಗ್ಯ ಬಂದದ್ದು ಬೀಚಿ, ಚಂಪಾ ಮತ್ತು ಬೆಳೆಗೆರೆಯವರ ಪೆನ್ನುಗಳಿಂದ.
ಲೋಕೋ ಭಿನ್ನ ರುಚಿ:
ಕೆಲವು ವಿಚಾರಗಳಿರುತ್ತವೆ, ಅವು ಅರ್ಥಪೂರ್ಣವೂ, ಸತ್ತ್ವಭರಿತವೂ ಆಗಿರುತ್ತವೆ, ಆದರೆ ಅವುಗಳನ್ನೂ ಯಾರೂ ಪಾಲಿಸುವುದಿಲ್ಲ! 'ಎಲ್ಲರಿಗೂ ಗೊತ್ತಿರುವ ಆದರೆ ಯಾರೂ ಓದದ ಕೃತಿಯೇ ಕ್ಲಾಸಿಕ್' ಎಂಬಂತೆ ಈ ಆದರ್ಶಗಳ ಪಾಡು. ವಿವೇಕಿಗಳ ಬಾಯಿಂದ ಬಂದ, 'ಲೋಕೋ ಭಿನ್ನ ರುಚಿ:' ಎಂಬ ಉಕ್ತಿಗೂ ಈ ದುರ್ಗತಿ ಒದಗಿದೆಯೇನೋ. 'ಈ ಹೇಳಿಕೆಯೊಂದು ಕ್ಲೀಷೆ' ಅನ್ನಿಸುವ ಮಟ್ಟಿಗೆ ಅದು ಎಲ್ಲರಿಗೂ ಗೊತ್ತಿದೆ, ಆದರೆ ಅದನ್ನು ಮನಸಾರೆ ಒಪ್ಪಿ, ಅನುಷ್ಠಾನಕ್ಕೆ ತರುವವರು ಎಷ್ಟು ಜನರಿದ್ದಾರೆ ಅಂತ ಲೆಕ್ಕ ಹಾಕಿದರೆ, ಹತ್ತು ನಿಮಿಷದಲ್ಲಿ ಲೆಕ್ಕ ಮುಗಿದೀತು! ಕಳೆದ ಸೋಮವಾರ ಫೇಸ್ಬುಕ್ಕಿನಲ್ಲಿ ಒಂದು ಸಿನೆಮಾದ ಬಗ್ಗೆ ಬರೆದವನನ್ನು ನೋಡಿ, 'ನನ್ನ ಅಭಿಪ್ರಾಯವೊಂದು ರಾಜಾಜ್ಞೆ, ಲೋಕದ ಸಕಲ ಚರಾಚರ ವಸ್ತುಗಳೂ ಇದನ್ನು ಮತ್ತು ಇದನ್ನು ಮಾತ್ರ ಒಪ್ಪಬೇಕು' ಎಂಬ ಧಾಟಿ ಅವನಲ್ಲಿರುತ್ತದೆ. ಮೋದಿಯ ವಿರುದ್ಧವೋ ಪರವೋ ದಿನಗಟ್ಟಲೆ ಮಾತಾಡುವರನ್ನು ನೋಡಿ, 'ಇಡೀ ಲೋಕದ ಒಳಿತು ಕೆಡುಕುಗಳು ನನಗೊಬ್ಬನಿಗೇ ಮಾತ್ರ ಗೊತ್ತಿರುವುದು, ಎಲ್ಲ ಸರಿತಪ್ಪುಗಳ ನಿಶ್ಚಯವನ್ನು ನಾನೊಬ್ಬನೇ ಗುತ್ತಿಗೆ ತೆಗೆದುಕೊಂಡಿದ್ದೇನೆ' ಎಂಬ ಭಾವ ಅಲ್ಲಿ ಇಣುಕುತ್ತಿರುತ್ತದೆ. ನನಗೆ ಇಷ್ಟವಾಗದಿದ್ದರೆ ಆ ಸಿನೆಮಾ ಡಬ್ಬಾ ಅದನ್ನು ಬೇರೆ ಯಾರೂ ಇಷ್ಟಪಡುವಂತಿಲ್ಲ, ನನಗೆ ಹಿಡಿಸದ ಪುಸ್ತಕ ಕಳಪೆ, ಅದನ್ನು ಮೆಚ್ಚುವವರು ಅಭಿರುಚಿಹೀನರು, ನನ್ನ ಫೇವರಿಟ್ ನಟನಿಗೆ ಮಾತ್ರ ನಟನೆ ಗೊತ್ತಿರುವುದು ಅಂತೆಲ್ಲ ಹಲವರು ಒಳಗೊಳಗೇ ನಂಬಿರುತ್ತಾರೋ ಏನೋ ಅಂತ ಒಮ್ಮೊಮ್ಮೆಯಾದರೂ ಅನಿಸುತ್ತದೆ. ವಿ. ಸೀತಾರಾಮಯ್ಯನವರ ಈ ಕೆಳಗಿನ, ಎಲ್ಲರೂ ನೆನಪಿನಲ್ಲಿಟ್ಟುಕೊಳ್ಳಬೇಕಾದ, ಸಾಲುಗಳನ್ನು ಉದ್ಧರಿಸಲಿಕ್ಕೆ ಇಷ್ಟು ಪೀಠಿಕೆ ಹಾಕಿದೆ ಸ್ವಾಮೀ:
ಒಂದು ಕಾರ್ಪೊರೇಟು ನೀತಿಕಥೆ
ಬೀಚಿಯವರ ಒಂದು ಹಳೇ ಜೋಕನ್ನು ನೇಟಿವಿಟಿಗೆ ತಕ್ಕಂತೆ ಸ್ವಲ್ಪ ಬದಲಾಯಿಸಿ ರಚಿಸಿರುವ ಒಂದು ಕಾರ್ಪೊರೇಟು ನೀತಿಕಥೆ:
ಎರಡು ಅನುವಾದಗಳು
ಅನುವಾದವೆನ್ನುವುದು ಎಷ್ಟೋ ಸರ್ತಿ, ಅಂಗಡಿಯಲ್ಲಿದ್ದ ಐಸ್ ಕ್ರೀಮನ್ನು ಆಸೆಪಟ್ಟು, ಬಟ್ಟಲೊಂದರಲ್ಲಿ ಹಾಕಿ, ಮನೆಗೆ ತರಹೊರಟಂತೆ ಆಗುವುದುಂಟು. ಮನೆಗೆ ಮುಟ್ಟುವಾಗ ಐಸು ಕ್ರೀಮು ಕರಗಿ ಸೊರಗಿ ನೀರಾಗಿ, ಮತ್ತೇನೋ ಆಗಿ, 'ಏಗಿದ್ದೆಲ್ಲ ಸುಮ್ಮನೆ' ಅನಿಸಿಬಿಡುತ್ತದೆ. ಎಷ್ಟೋ ಸಲ ದೊಡ್ಡವರು ಮಾಡಿದ ಅನುವಾದಗಳಲ್ಲಿಯೇ, "He is so cool" ಅನ್ನುವುದನ್ನು, 'ಅವನು ತಣ್ಣನೆಯ ಮನುಷ್ಯ' ಅಂತ ಮಾಡಿಬಿಟ್ಟಿದ್ದಾರೋ ಏನ್ಕತೆ ಅಂತ ತೋರುವುದಿದೆ. ಮೂಲ ಬಿಜೆಪಿ, ಅನುವಾದ ಕಾಂಗ್ರೆಸ್ಸು ಎಂಬಂತಾದರಂತೂ ಕಡುಕಷ್ಟ. ಎಲ್ಲೋ ಕೆಲವೊಮ್ಮೆ, ಬಿಎಂಶ್ರೀಯವರ ಅನುವಾದಗಳಲ್ಲೋ, ಜೋಗಿ, ರವಿ ಬೆಳಗೆರೆ ಅವರುಗಳು ಮಾಡಿದ ರೂಪಾಂತರಗಳಲ್ಲೋ ಚೀನಾದ ಗೋಬಿ ಮಂಚೂರಿ ನಮ್ಮದೇ ತಿಂಡಿ ಆಗಿಬಿಟ್ಟಂತೆ, ಅಲ್ಲಿಯದು ಇಲ್ಲಿಯದೇ ಆಗುವುದುಂಟು. ಹಾಗಾದರೆ, ಓದುಗರಿಗೆ ಗೋಬಿ ಮಂಚೂರಿಯನ್ನನ್ನು ಕಚ್ಚಿದ ಸುಖಪ್ರಾಪ್ತಿ.
ಶೂಟಿಂಗ್ ದ ಪಾಸ್ಟ್
ನಿನ್ನೆ ವರ್ಲ್ಡ್ ಫೋಟೋಗ್ರಫಿ ದಿನದ ಸಾಲು ಸಾಲು ಪೋಸ್ಟುಗಳು ಕಾಣಿಸಿದಾಗ ನೆನಪಾದದ್ದು ಬಿಬಿಸಿ ವಾಹಿನಿಯ ಶೂಟಿಂಗ್ ದ ಪಾಸ್ಟ್ ಎಂಬ ಒಂದು ಹಳೇ ಮಿನಿ ಸೀರಿಸ್. ಅದರ ಕತೆ ಸುಲಭ. ಒಂದು ದೊಡ್ಡ ಓಬೀರಾಯನ ಕಾಲದ ಕಟ್ಟಡ ಇರುತ್ತದೆ, ಅದೊಂದು ಛಾಯಾಚಿತ್ರಗಳ ಸಂಗ್ರಹಾಲಯ(Photo Library). ಕೈಗೆ ಸಿಕ್ಕದ ಚಿಟ್ಟೆ ಕ್ಯಾಮೆರಾಕ್ಕೆ ಸಿಕ್ಕುವ ಹಾಗೆ, ಅದೆಷ್ಟೋ ಜನರ ಜೀವನದ ಸಂತಸದ, ನಿತ್ಯದ ಕಲಾಪಗಳ ,ಹಳವಂಡಗಳ, ಲಕ್ಷ ಲಕ್ಷ ಕ್ಷಣಗಳು ಫೋಟೋಗಳಾಗಿ ಮರುಜನ್ಮ ತಾಳಿ ಅಲ್ಲಿ ಕೂತಿರುತ್ತವೆ. ಒಂದು ಫೋಟೋ ಬಾಲ್ಯದ್ದು , ಒಂದು ಅಜ್ಜನ ಮನೆಯದ್ದು , ಒಂದು ಕಾಲೇಜಿನದ್ದು ಎಲ್ಲ ಒಟ್ಟಿಗೆ ಇಟ್ಟು ನೋಡಿದರೆ ಅಲ್ಲೊಂದು ಕತೆ ಕಾಣಿಸುವ ಹಾಗೆ, ತತ್ ಕ್ಷಣಕ್ಕೆ ನಿಲುಕದ ಅದೆಷ್ಟೋ ಕತೆಗಳು ನೂರಾರು, ಸಾವಿರಾರು ಫೋಟೋಗಳಲ್ಲಿ ಅಡಗಿ ಕೂತಿರುತ್ತವೆ. ಆ ಕಟ್ಟಡ ಒಂದು ವ್ಯಾಪಾರಿ ಸಂಸ್ಥೆಯ ಕೈಗೆ ಹೋಗುತ್ತದೆ. ಅವರಿಗೋ ಅಲ್ಲೊಂದು School of Business ಕಟ್ಟುವ ಯೋಜನೆ . ದುಡ್ಡಿನ ಮಾತು ಬಂದ ಮೇಲೆ, ಈ ಲಕ್ಷಗಟ್ಟಲೆ ಫೋಟೋಗಳಿಗೆ ಜಾಗ ಎಲ್ಲಿರುತ್ತದೆ ? ಅವನ್ನೇನು ಮಾಡಬೇಕು ? ಮಾರಬೇಕೇ ? ಎಂಥವರಿಗೆ? ಯಾರು ಕೊಳ್ಳುತ್ತಾರೆ ? ಎಸೆಯಬೇಕೇ ? ಎಲ್ಲಿಗೆ ಎಸೆಯಬೇಕು? ಆ ಫೋಟೋಗಳ ಒಳಗಿರುವ ಭಾವಗೀತಗಳಿಗೆ ಯಾರು ಬೆಲೆ ಕೊಡುತ್ತಾರೆ ? ಕಲೆಗೆ ದುಡ್ಡಿನಿಂದ ಬೆಲೆ ಕಟ್ಟಲು ಸಾಧ್ಯವೇ ? ಈ ಎಲ್ಲ ಅಂಶಗಳನ್ನಿಟ್ಟುಕೊಂಡು, ಚಿತ್ರ ವಿಚಿತ್ರ ಪಾತ್ರಗಳನ್ನಿಟ್ಟುಕೊಂಡು, typically ಬ್ರಿಟಿಷ್ ಎನ್ನಬಹುದಾದ ನಿರೂಪಣೆಯೊಂದಿಗೆ, ಮೂರೇ ಘಂಟೆಗಳ ಈ ಮಿನಿಸೀರೀಸ್ ಆವರಿಸಿಕೊಳ್ಳುತ್ತದೆ
ಡ್ರೋನುಗಳ ಪ್ರತಾಪ
"ನೀವು ಇಷ್ಟೊಂದು ಖುಷಿಯಿಂದ, ನೆಮ್ಮದಿಯಿಂದ ಇದ್ದೀರಲ್ಲ,ಇದರ ಗುಟ್ಟೇನು" ಅಂತ ಯಾರಾದರೂ ಕೇಳಿದರೆ, ನನ್ನ ಉತ್ತರ, 'ಪವರ್ ಆಫ್ ಪಾಸಿಟಿವ್ ಥಿಂಕಿಂಗ್' ಎಂತಲೋ, 7 Habits of Highly Effective Peopleನ ತಂತ್ರಗಳು ಎಂದೋ,How to Stop Worrying and Start Livingನ ಸೂತ್ರಗಳು ಅಂತಲೋ ಅಲ್ಲ. ನನ್ನ ಯಶಸ್ಸಿನ ಗುಟ್ಟು ಇಷ್ಟೇ : ನಾನು ನಮ್ಮ ಟೀವಿ ನ್ಯೂಸ್ ಚಾನೆಲುಗಳನ್ನು ನೋಡುವುದಿಲ್ಲ ! ಅತಳ, ಸುತಳ, ಭೂತಳ, ಪಾತಾಳ, ತಳಾತಳ ಮತ್ತು ಫೇಸ್ಬುಕ್ಕುಗಳಲ್ಲಿ ಅಡಗಿದ್ದ ಸಕಲ ಚರಾಚರ ಪ್ರಾಣಿಗಳೆಲ್ಲ ಡ್ರೋನುಗಳ ಪ್ರತಾಪದ ವರ್ಣನೆ ಮಾಡುವುದನ್ನು ನೋಡಿದ ಮೇಲೆ, ಈ ವೀರವ್ರತವನ್ನು ಮುರಿದು ಹತ್ತು ನಿಮಿಷಗಳ ಕಾಲ ಕಿರಿಕ್ ಪ್ರತಾಪರ ಸಂದರ್ಶನದ 'ದರ್ಶನ್' ಭಾಗದ ದರ್ಶನ ಭಾಗ್ಯವನ್ನು ನಾನೂ ದಕ್ಕಿಸಿಕೊಂಡೆ. ವಿಜ್ಞಾನದ ವಿದ್ಯಾರ್ಥಿಯಾಗಿ ನಾನು ಅಷ್ಟನ್ನು ವ್ಯಾಖ್ಯಾನ ಮಾಡಿದರೆ ಸಾಕೆನಿಸುತ್ತದೆ.
ಪಾ. ವೆಂ. ಆಚಾರ್ಯ
40-50 ವರ್ಷಗಳ ಹಿಂದೆ ನಮ್ಮಲ್ಲಿ ಟೀವಿಗಳಿರಲಿಲ್ಲ, ನ್ಯಾಷನಲ್ ಜಿಯೋಗ್ರಾಫಿಕ್ಕಿನಂಥಾ ಚಾನೆಲ್ ಕೂಡಾ ಇರಲಿಲ್ಲ. ಆದರೇನಂತೆ? ಸರ್ವಜ್ಞಾಚಾರ್ಯ, ಸರ್ವಕುತೂಹಲಿ ಎಂಬ ಬಿರುದುಗಳಿದ್ದ ಸರ್ವಂಕಷ ಪ್ರತಿಭೆಯ ಪಾ. ವೆಂ. ಆಚಾರ್ಯರಿದ್ದರು, ಅವರೇ ಕಟ್ಟಿದ ಕಸ್ತೂರಿ ಪತ್ರಿಕೆಯಿತ್ತು. SSLCಯಲ್ಲಿ rank ಬಂದರೂ ಕಿತ್ತು ತಿನ್ನುವ ಬಡತನ ಅವರನ್ನು ಡಿಗ್ರಿಗೆ ಓದಲು ಬಿಡಲಿಲ್ಲ, ಜ್ಞಾನಕ್ಕೆ ಡಿಗ್ರಿಯ ಹಂಗು ಎಲ್ಲಿರುತ್ತದೆ(ಇವರು ಡಾಕ್ಟರೇಟು ಪಡೆದವರು ಅಂತ ಭಾವಿಸಿ ಕೆಲವರು ಅವರನ್ನು ಡಾ. ಪಾ. ವೆಂ. ಆಚಾರ್ಯರೇ ಅಂತಲೇ ಸಂಭೋದಿಸುತ್ತಿದ್ದರಂತೆ !) ಮುಂದೆ ವಿಧಿಯ ಮೇಲೆ ಸೇಡು ತೀರಿಸಲೋ ಎಂಬಂತೆ ಪಾವೆಂ ನೂರೆಂಟು ವಿಷಯಗಳನ್ನು ಓದಿಕೊಂಡರು, ಅವುಗಳ ಬಗ್ಗೆ ಕಸ್ತೂರಿಯಲ್ಲಿ ಸೊಗಸಾಗಿ ಬರೆದರು. ಕಾಲೇಜಿನ ಪ್ರಾಯಕ್ಕೆ ಬರುವಾಗಲೇ ನಾಗವರ್ಮನ ಛಂದೋಂಬುಧಿ, ಕೇಶಿರಾಜನ ಶಬ್ದಮಣಿದರ್ಪಣಗಳಂತಹ ಶಾಸ್ತ್ರ ಗ್ರಂಥಗಳನ್ನು ಪಾವೆಂ ಇಡಿ ಇಡಿಯಾಗಿ ನುಂಗಿ ಹಾಕಿದ್ದರಂತೆ. ಪಾಠ ಮಾಡಿದರೂ ತಲೆಗೆ ಹೋಗುವುದಿಲ್ಲ ಅನಿಸಬಹುದಾದ ಈ ತರದ ಶಾಸ್ತ್ರಗ್ರಂಥಗಳನ್ನು, ಪಾವೆಂ ಕಥೆ ಕಾದಂಬರಿ ಓದುವಂತೆ ತಮ್ಮಷ್ಟಕ್ಕೆ ತಾವೇ ಓದಿ ಮುಗಿಸಿದರೆಂದು ಕಾಣುತ್ತದೆ.
ಗೋವಿನ ಹಾಡು ಮತ್ತು ಅದನ್ನು ಬರೆದವರ ಜಾಡು
ವಿಜಯಕರ್ನಾಟಕದಲ್ಲಿ ಪ್ರಕಟವಾದ ಲೇಖನ:
"ಧರಣಿಮಂಡಲ ಮಧ್ಯದೊಳಗೆ ಮೆರೆಯುತಿಹ ಕರ್ಣಾಟ ದೇಶದಿ" ಎಂದು ಶುರುವಾಗುವ ಪುಣ್ಯಕೋಟಿಯ ಕಥೆಯನ್ನು ಲಾಲಿಸದವರಾರು, ಕೇಳಿ ಹನಿಗಣ್ಣಾಗದವರಾರು? ಎಲ್ಲರಿಗೂ ಗೊತ್ತಿರುವ ಪದ್ಯದ ಬಗ್ಗೆ ಇನ್ನೊಮ್ಮೆ ನಾನು ಹೇಳುವುದೇನೂ ಇಲ್ಲ. ನಾನು ಹೇಳಹೊರಟದ್ದು ಈ ಪದ್ಯದ ಬಗ್ಗೆ ಈಚೆಗೆ ಬಂದ, ವೈರಲ್ ಆದ ವೀಡಿಯೊ ಒಂದರ ಬಗ್ಗೆ. ಆದದ್ದಿಷ್ಟು: 'ಮೈಸೂರಿನ ಕಥೆಗಳು' ಎಂಬ ಫೇಸ್ಬುಕ್ ಪೇಜಿನಲ್ಲಿ ಚ.ವಾಸುದೇವಯ್ಯ(ಇವರು 1852ರಿಂದ 1943ರ ಕಾಲದಲ್ಲಿ ಇದ್ದವರು) ಎಂಬ ಮಹನೀಯರ ಪರಿಚಯ ಮಾಡಿಕೊಡಲಾಯಿತು. ಹಾಗೆ ಮಾಡುವಾಗ, ಜನಪದದಲ್ಲಿದ್ದ ಗೋವಿನ ಹಾಡನ್ನು ಬರೆದವರು ಚ.ವಾಸುದೇವಯ್ಯನವರೇ ಅಂತ ಹೇಳಲಾಯಿತು. ಈ ವೀಡಿಯೊವನ್ನು ಸುಮಾರು ಲಕ್ಷಕ್ಕೂ ಹೆಚ್ಚು ಜನ ಫೇಸ್ಬುಕ್ಕಿನಲ್ಲಿಯೇ ನೋಡಿದ್ದಾರೆ. ವಾಟ್ಸಪ್ಪಿನಲ್ಲಿ ಇದು 'ಗೋವಿನ ಹಾಡನ್ನು ಬರೆದವರು ಯಾರು ಗೊತ್ತೇ' ಎಂಬಂತೆ ವೈರಲ್ ಆಗಿದ್ದು, ಅಲ್ಲಿ ಅದೆಷ್ಟು ಸಾವಿರ ಜನ ನೋಡಿದ್ದಾರೋ.
ವೀಡಿಯೊ ಮಾಡಿದವರು ಒಳ್ಳೆಯ ಮನಸ್ಸಿನಿಂದ,ಸದುದ್ದೇಶದಿಂದ ಅದನ್ನು ಮಾಡಿರುವಂತೆ ಕಾಣುತ್ತದೆ. ಚ.ವಾಸುದೇವಯ್ಯನವರು ದೊಡ್ಡವರು, ಕನ್ನಡಿಗರಿಗೆ ಪ್ರಾತಃಸ್ಮರಣೀಯರು ಅನ್ನುವುದೇನೋ ಸರಿಯೇ, ಆದರೆ, 'ಧರಣಿ ಮಂಡಲ ಮಧ್ಯದೊಳಗೆ' ಎಂಬ ಪದ್ಯವನ್ನು ಅವರೇ ಬರೆದದ್ದು ಎನ್ನುವ ಹೇಳಿಕೆಗೆ ಮಾತ್ರ ಬೇರೆಡೆಗಳಿಂದ ಸಾಕಷ್ಟು ಪುಷ್ಟಿ ನನಗಂತೂ ಸಿಗಲಿಲ್ಲ, ಪೂರಕ ಆಧಾರಗಳಿಲ್ಲದೆ ಗೋವಿನ ಹಾಡಿನ ಕರ್ತೃತ್ವವನ್ನು ಹೇಳುವುದು ಅವಸರದ ತೀರ್ಮಾನವಾದೀತೆಂದೇ ನನಗೆ ಕಾಣುತ್ತದೆ. ಸಂಶೋಧನೆ ಅರ್ಜೆಂಟಿನಲ್ಲಿ ಆಗುವ ಕೆಲಸವಲ್ಲವಲ್ಲ!
ಇದರ ಬಗ್ಗೆ ಶತಾವಧಾನಿ ಗಣೇಶರ ಅಭಿಪ್ರಾಯವನ್ನು ಪಾದೆಕಲ್ಲು ವಿಷ್ಣು ಭಟ್ಟರು ಕೇಳಿದಾಗ ಅವರೂ ಈ ವೀಡಿಯೊದಲ್ಲಿ ಗೋವಿನಹಾಡಿನ ಬಗ್ಗೆ ಹೇಳಿದ್ದನ್ನು ಒಪ್ಪುವುದು ಕಷ್ಟವೆಂದೇ ಹೇಳಿದ್ದಾರೆ. ಗ್ರಂಥಸಂಪಾದನೆ ಮಾಡುವುದು, ಪರಿಷ್ಕೃತ ಆವೃತ್ತಿ ತರುವುದು, ಇರುವ ಒಂದು ಪದ್ಯವನ್ನು ಪಾಠ್ಯ ಪುಸ್ತಕಕ್ಕೆ ಏರಿಸುವುದು ಎಂಬವುಗಳ ನಡುವಿನ ವ್ಯತ್ಯಾಸವನ್ನು ವೀಡಿಯೊ ಮಾಡಿದವರು ಅಷ್ಟಾಗಿ ಗಮನಿಸಿದಂತೆ ಕಾಣುವುದಿಲ್ಲ. ಇದಲ್ಲದೆ ಡಿವಿಜಿಯವರೇ ವಾಸುದೇವಯ್ಯನವರ ಬಗ್ಗೆ ಬರೆದಿದ್ದಾರೆ; ಆದರೆ ಅವರೆಲ್ಲೂ ಈ ಪದ್ಯದ ವಿಚಾರ ಎತ್ತಿಲ್ಲ. ಕರ್ಣಾಟಕ ಕವಿಚರಿತೆಯನ್ನು ಬರೆದವರಾದ, ಮಹಾಪಂಡಿತರಾಗಿದ್ದ ರಾ.ನರಸಿಂಹಾಚಾರ್ಯರು ಮತ್ತು ಎಸ್.ಜಿ ನರಸಿಂಹಾಚಾರ್ಯರು ವಾಸುದೇವಯ್ಯನವರ ಒಡನಾಟ ಇದ್ದವರು, ಅವರೂ ಈ ಬಗ್ಗೆ ಒಂದು ಮಾತೂ ತಿಳಿಸಿಲ್ಲ. ಪಂಜೆ ಮಂಗೇಶರಾಯರು ಅವರ ಕಿರಿಯ ಸಮಕಾಲೀನರಾದರೂ ಗೋವಿನ ಹಾಡಿನ ವಿಷಯ ಬಂದಾಗಲೂ ಎಲ್ಲೂ ಅದನ್ನು ಬರೆದವರ ಹೆಸರು ಹೇಳಿಲ್ಲ. ಈ ಎಲ್ಲ ಅಂಶಗಳನ್ನಿಟ್ಟುಕೊಂಡು ನೋಡಿದರೆ ಪುಣ್ಯಕೋಟಿಯ ಹಾಡು ವಾಸುದೇವಯ್ಯನವರ ರಚನೆಯಾಗಿರುವ ಸಂಭವನೀಯತೆ ತೀರಾ ಕಡಮೆ ಎಂದು ಗಣೇಶರ ಅಭಿಪ್ರಾಯ. ವಾಸುದೇವಯ್ಯನವರ ಬಗ್ಗೆ ಬರೆಯುವಾಗ ಟಿವಿ ವೆಂಕಟಾಚಲ ಶಾಸ್ತ್ರಿಗಳೂ ಎಲ್ಲೂ ಗೋವಿನ ಹಾಡನ್ನು ಉಲ್ಲೇಖಿಸಿಲ್ಲ ಎಂಬುದನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು.
ಇದಕ್ಕೆ ಪೂರಕವಾಗಿ ಇನ್ನೊಂದಷ್ಟು ಒಗ್ಗರಣೆ: ನಮ್ಮ ಸಂಸ್ಕೃತ ಪಂಡಿತರ ಎದುರೋ, ಹಳಗನ್ನಡ ಕಾವ್ಯಾಸಕ್ತರ ಮುಂದೋ ದೇವರು ಪ್ರತ್ಯಕ್ಷನಾಗಿ, "ವತ್ಸಾ, ಒಂದು ವರ ಕೇಳಿಕೋ" ಅಂತ ಹೇಳಿದನಾದರೆ, ಈ ಪಂಡಿತರಲ್ಲನೇಕರು, "ಯಾವ ಯಾವ ಕೃತಿಗಳನ್ನು ಯಾರ್ಯಾರು ಬರೆದರು, ಬರೆದವರು ಎಲ್ಲಿ, ಯಾವಾಗ, ಹೇಗೆ ಇದ್ದರು ಅಂತ ಹೇಳಿಬಿಡು ತಂದೆ" ಅಂದುಬಿಟ್ಟಾರು ಎನ್ನಿಸುವಷ್ಟು ಎಟುಕಿಗೆ ನಿಲುಕದ ಕರ್ತೃತ್ವದ ಸಮಸ್ಯೆಗಳಿವೆ. ಕಾಳಿದಾಸ, ಕುಮಾರವ್ಯಾಸ, ಭಾಸ, ಪಾಣಿನಿ, ಭರತ ಇವರೆಲ್ಲ ಯಾರು, ಹೇಗಿದ್ದರು ಎಂಬುದೇ ಗೊತ್ತಾಗದಷ್ಟು ಮಟ್ಟಿಗೆ ಅವರ ವೈಯಕ್ತಿಕ ವಿವರಗಳನ್ನು ಹೇಳುವಲ್ಲಿ ನಿರಾಸಕ್ತಿಯನ್ನು ಖುದ್ದು ಅವರೂ, ಪ್ರಾಚೀನರೂ ತೋರಿಸಿದಂತೆ ಕಾಣುತ್ತದೆ. ನಮ್ಮಲ್ಲಿ ಕವಿರಾಜಮಾರ್ಗವನ್ನು ನಿಜವಾಗಿಯೂ ಬರೆದವರು ಯಾರು ಎಂಬ ವಿಷಯದಲ್ಲಿ ಶಾಸ್ತ್ರಕೋವಿದರು ಎಳೆದೆಳೆದು ಮಾಡಿರುವ ಚರ್ಚೆಗಳು, ಅವುಗಳಿಗೆ ಹುಟ್ಟಿರುವ ಉತ್ತರ, ಪ್ರತ್ಯುತ್ತರಗಳು ಎಲ್ಲ ಸೇರಿದರೆ ಒಂದು ರೋಚಕ whodunnit ಕಾದಂಬರಿಗೆ ಸರಕಾಗಬಲ್ಲವು ಎಂಬಷ್ಟಿವೆ ! ಭಾಸನ ವಿಷಯದಲ್ಲೂ ಹಾಗಾಗಿದೆ. ತಿರುವಾಂಕೂರಿನ ಗಣಪತಿ ಶಾಸ್ತ್ರಿ ಎಂಬವರಿಗೆ ಹದಿಮೂರು ನಾಟಕಗಳು ಸಿಕ್ಕಿ, ಅವನ್ನು ಭಾಸನೇ ಬರೆದದ್ದು ಎಂಬ ತೀರ್ಮಾನಕ್ಕೆ ಅವರು ಬಂದರು. ಅನಂತರ ಅವನ್ನು ಭಾಸನೇ ಬರೆದದ್ದೋ, ಬೇರೆ ಯಾರಾದರೋ ಎಂಬುದರ ಬಗ್ಗೆ ಎದ್ದ ಕೋಲಾಹಲ, ಪಂಡಿತರು ಹೂಡಿದ ತರ್ಕಗಳು, ನೋಡಿದ ಆಧಾರಗಳು, ನೀಡಿದ ನಿರ್ಣಯಗಳು ಎಂತಹ ಪತ್ತೆದಾರನಿಗೂ ಕೀಳರಿಮೆ ಹುಟ್ಟಿಸಬಲ್ಲವು. ಗೋವಿನ ಹಾಡಿನ ಕರ್ತೃತ್ವದಲ್ಲಿ ಹೀಗೆಲ್ಲ ಚರ್ಚೆಗಳಾಗಿಲ್ಲ.
ಗೋವಿನ ಹಾಡನ್ನು ಸಂಪಾದಿಸಿ ವಿಸ್ತೃತ,ಪರಿಷ್ಕೃತ ಆವೃತ್ತಿಗಳನ್ನು ಇಬ್ಬರು ವಿದ್ವನ್ಮಹನೀಯರು ತಂದಿದ್ದಾರೆ - ಡಿ ಎಲ್ ನರಸಿಂಹಾಚಾರ್ಯ ಮತ್ತು ತಾಳ್ತಜೆ ಕೇಶವ ಭಟ್ಟ. ಡಿ ಎಲ್. ಎನ್ ಅವರದ್ದು ಮೇರುಸದೃಶವಾದ ಪಾಂಡಿತ್ಯ. ಇವರು ಸ್ಪಷ್ಟವಾಗಿ, ಈ ಹಾಡನ್ನು ರಚಿಸಿದವರಾರೋ ಗೊತ್ತಿಲ್ಲ ಅಂತಲೇ ಬರೆದಿದ್ದಾರೆ. ಸಾವಿರ ವರ್ಷಗಳ ಹಿಂದಿನ ಕೃತಿಗಳ ಜನ್ಮ ಜಾಲಾಡಿಬಿಡುತ್ತಿದ್ದ ಇಂಥಹಾ ವಿದ್ವನ್ಮಣಿಗೆ ತಮ್ಮ ಮೊದಲ ತಲೆಮಾರಿನವರೊಬ್ಬರು ಒಂದು ಪದ್ಯವನ್ನು ಬರೆದ ವಿಚಾರ ಗೊತ್ತಾಗಲಿಲ್ಲ ಅಂತ ಒಪ್ಪುವುದು ನನಗಂತೂ ಕಷ್ಟವೇ ಸರಿ. ಇಲ್ಲಿ ಇನ್ನೊಂದು ತಮಾಷೆಯೂ ಇದೆ. ಡಿ ಎಲ್ ನರಸಿಂಹಾಚಾರ್ ಅವರು ತಾವು ನೋಡಿದ್ದು, ಆಕರವಾಗಿ ಇಟ್ಟುಕೊಂಡದ್ದು ಸರಸ್ವತೀ ಭಂಡಾರದ ಓಲೆಯ ಪ್ರತಿ ಮತ್ತು ಮೈಸೂರು ಓರಿಯೆಂಟಲ್ ಲೈಬ್ರರಿಯ ಪ್ರತಿಗಳನ್ನು ಅಂತ ಕೊಟ್ಟಿದ್ದಾರೆ. 1870ರ ಆಸುಪಾಸಿನ ಕೃತಿಯೊಂದು ತಾಳೆಗರಿಗಳಲ್ಲಿ, ಓಲೆಯ ಪ್ರತಿಗಳಲ್ಲಿ ಸಿಗುತ್ತದೆಯೇ ? ಇದೀಗ ಯೋಚನೆ ಮಾಡಬೇಕಾದ ಅಂಶ!
ಇನ್ನು ಇನ್ನೊಬ್ಬ ದೊಡ್ಡ ವಿದ್ವಾಂಸರಾದ ತಾಳ್ತಜೆ ಕೇಶವ ಭಟ್ಟರು ಸಂಪಾದಿಸಿದ್ದು ಅವರ ತಂದೆಯವರೇ ಲಿಪಿಕಾರನಾಗಿ 1915ರಲ್ಲಿ ಮಾಡಿಟ್ಟಿದ್ದ ಪ್ರತಿಯೊಂದರಿಂದ, ಅವರ ತಂದೆಯವರೂ ಪ್ರತಿ ಮಾಡಿದ್ದು ತಾಳೆಯೋಲೆಯಿಂದಲೇ ಇರಬೇಕಷ್ಟೇ. ಇದು ದಕ್ಷಿಣ ಕನ್ನಡದಲ್ಲಿ ಆ ಕಾಲದಲ್ಲಿ ಚಾಲ್ತಿಯಲ್ಲಿದ್ದ ಹಾಡಾಗಿರಬೇಕು. ಗುಬ್ಬಿ ಗುರುಸಿದ್ದಪ್ಪನವರು ಬರೆದ ಗೋವುಚರಿತ್ರೆ ಎಂಬ ಒಂದು ಯಕ್ಷಗಾನ ಪ್ರಸಂಗ 1895ರಲ್ಲೇ ಇದ್ದದ್ದನ್ನೂ ಅವರೇ ನಮೂದಿಸಿದ್ದಾರೆ.
ಈ ಕಥೆಗೆ ಸಂಸ್ಕೃತದ ‘ಇತಿಹಾಸ ಸಮುಚ್ಚಯ’ ಎಂಬ ಗ್ರಂಥದಲ್ಲಿನ ಕಥೆಯೊಂದೇ ಮೂಲವೆನ್ನುವ ವಿಚಾರಕ್ಕೆ ಮೇಲಿನ ಇಬ್ಬರು ವಿದ್ವಾಂಸರ ಸಮ್ಮತಿಯೂ ಇದೆ. (ಬಹುಶಃ ಇವರಿಬ್ಬರು ಕೊಟ್ಟಿರುವುದರ ಆಧಾರದ ಮೇಲೆ) ಕೆ.ವಿ.ಸುಬ್ಬಣ್ಣನವರು ತಮ್ಮ 'ಕವಿರಾಜಮಾರ್ಗ ಮತ್ತು ಕನ್ನಡ ಜಗತ್ತು' ಕೃತಿಯಲ್ಲಿ ಹೀಗೆ ಬರೆದಿದ್ದಾರೆ :
"ಸಂಸ್ಕೃತದ ‘ಪದ್ಮಪುರಾಣ’ದಲ್ಲಿ ಮತ್ತು ‘ಇತಿಹಾಸ ಸಮುಚ್ಚಯ’ವೆಂಬುದರಲ್ಲಿ ಈ ಕಥೆ ಬರುತ್ತದಂತೆ. ‘ಪದ್ಮ ಪುರಾಣ’ದಲ್ಲಿ ಶಾಪಗ್ರಸ್ತನಾದ ಪ್ರಭಂಜನನೆನ್ನುವನು ಹುಲಿಯ ಜನ್ಮ ತಾಳಿರುತ್ತಾನೆ. ‘ಇತಿಹಾಸ ಸಮುಚ್ಚಯ’ದಲ್ಲಿ ಅದು, ಭೀಷ್ಮನು ಧರ್ಮರಾಯನಿಗೆ ಹೇಳುವ ‘ಬಹುಲೋಪಾಖ್ಯಾನ’; ಬಹುಲಾ ಎಂಬುದು ಹಸು, ಕಾಮರೂಪಿಯೆಂಬುದು ಹುಲಿ. ಇವೆಲ್ಲಕ್ಕೂ ಪ್ರಾಯಶಃ ಮೊದಲೇ, ಕಾಲಿದಾಸನ ‘ರಘುವಂಶ’ದ ದಿಲೀಪಾಖ್ಯಾನದಲ್ಲಿ ನಂದಿನಿಯ ಮೇಲೆ ಆಕ್ರಮಣ ನಡೆಸಲು ಬಂದ ಸಿಂಹದ ಇಂಥದೇ ಕಥೆ ಉಂಟಲ್ಲ? ‘ರಘುವಂಶ’ದ ಸಿಂಹವು
ನಂದಿಯೇ ಸೃಷ್ಟಿಸಿದ ಮಾಯೆ. ಅವೆಲ್ಲ ಇದ್ದರೂ ಈ ಕನ್ನಡ ಹಾಡಿನ ಸ್ವಂತಿಕೆ ಅನನ್ಯತ್ವಗಳಿಗೆ ಆಪೋಹವಿಲ್ಲ"
ಗೋವಿನ ಹಾಡು ಮತ್ತೊಂದು ರೂಪದಲ್ಲಿ ಸಿಗುವುದು ಕೆ ಶಿವರಾಮ ಐತಾಳರ 'ದಕ್ಷಿಣ ಕನ್ನಡದ ಜನಪದ ಸಾಹಿತ್ಯ' ಎಂಬ ಕೃತಿಯಲ್ಲಿ. ಇಲ್ಲಿ ಬರುವ ಹಾಡಿನ ಕಥೆ ಗೋವಿನ ಹಾಡಿನದ್ದೇ ಆದರೂ ನಿರೂಪಣೆ ಬೇರೆಯೇ ತರದಲ್ಲಿ ಇದೆ. ಇದು ತ್ರಿಪದಿಯಲ್ಲಿದೆ, ಇದರ ಗಾತ್ರವೂ ಕಿರಿದು. ದಕ್ಷಿಣ ಕನ್ನಡ ಅಂತಿದ್ದರೂ ಭಾಷೆ ಅಲ್ಲಿಯದರಂತೆ ತೋರಲಿಲ್ಲ. ‘ಇತಿಹಾಸ ಸಮುಚ್ಚಯ’ದಲ್ಲಿ ಈ ಕಥೆಯನ್ನು ಭೀಷ್ಮನು ಧರ್ಮರಾಯನಿಗೆ ಹೇಳಿದ್ದರ ಪ್ರಸ್ತಾವ ಬಂತಲ್ಲ, ಈ ಕೃತಿಯಲ್ಲಿಯೂ ಹಾಗೇ ಇದೆ. ಶಿವರಾಮ ಐತಾಳರ ಸವಿಸ್ತಾರವೂ ಉಪಯುಕ್ತವೂ ಆದ ಪ್ರಸ್ತಾವನೆ ಇದರ ಇನ್ನೊಂದು ವಿಶೇಷ .
ಕ.ರಾ.ಕೃಷ್ಣಸ್ವಾಮಿಯವರು ಸಂಪಾದಿಸಿದ ತೀರ್ಥಹಳ್ಳಿ ಕಡೆಯ 'ಕೌಲೆ ಹಾಡು' ಇದೇ ಕಥೆಯ ಮತ್ತೊಂದು ಅವತಾರ. ಈ ಹಾಡಿನಲ್ಲಿ ಹುಲಿ ಆತ್ಮಬಲಿ ಎಲ್ಲ ಮಾಡುವಷ್ಟು ಕರುಣರಸ ಇಲ್ಲ, ಇದರಲ್ಲಿ ಹುಲಿ ಹಸುವನ್ನು ತಿಂದು, ಕರು ಅಮ್ಮನನ್ನು ಹುಡುಕಿಕೊಂಡು ಬಂದು, ಹುಲಿಯ ಜೊತೆ ಹೋರಾಟ ಮಾಡುವಂತೆ ಕಥೆಯನ್ನು ತಿರುಗಿಸಲಾಗಿದೆ.
ಕಾಪಸೆ ರೇವಪ್ಪ ಎಂಬವರು ಸಂಗ್ರಹ ಮಾಡಿಕೊಟ್ಟಿರುವ, ತ್ರಿಪದಿಯಲ್ಲಿರುವ 'ಆಕಳ ಹಾಡು' ಉತ್ತರ ಕರ್ನಾಟಕದ ಸೊಗಡಿನ ಭಾಷೆಯ ಹಾಡು, ಇದರಲ್ಲಿ ಬರೀ 31 ಪದ್ಯಗಳಿವೆ, ಇಲ್ಲಿನದ್ದು ಋಷಿಯ ಆಶ್ರಮದ ಹಸು. ಇಲ್ಲಿ ಹುಲಿಯ ಪ್ರಾಣತ್ಯಾಗ ಮಾಡಿಸದೇ ದೇವತೆಗಳನ್ನು ಬರಿಸಿ ಕಥೆಗೆ ಸುಖಾಂತ್ಯ ಕೊಡಲಾಗಿದೆ. ಇದರಿಂದ ಹಾಡಿನ ಮನಕಲಕುವ ಗುಣ ಕಡಮೆಯಾಗುತ್ತದೆ ಎಂಬುದು ಬೇರೆ ಮಾತು.
ಮೇಲೆ ತೋರಿಸಿದಂತೆ ಈ ಹಾಡಿಗೆ ಬಹಳಷ್ಟು ಪಾಠಾಂತರಗಳು,ಮರುನಿರೂಪಣೆಗಳು, ಆಕೃತಿಗಳು ಇವೆ ಅನ್ನುವುದು ಸ್ಪಷ್ಟ. ಡಿ.ಎಲ್.ಎನ್ ಮತ್ತು ಕೇಶವ ಭಟ್ಟರು ಸಂಪಾದಿಸಿದ ಆವೃತ್ತಿಗಳಲ್ಲೇ ಎಷ್ಟೋ ವ್ಯತ್ಯಾಸಗಳಿವೆ. ಹೊಸ ಕೃತಿಗಳಿಗೆ ಹೀಗೆ ಅಷ್ಟೊಂದು ಪಾಠಾಂತರಗಳು ಇರುವುದಿಲ್ಲ. ಉದಾ: ಪಂಜೆ ಮಂಗೇಶರಾಯರೋ , ಮಂಜೇಶ್ವರ ಗೋವಿಂದ ಪೈಗಳೋ ಬರೆದ ಹಾಡೊಂದು ಹತ್ತು ಕಡೆಗಳಲ್ಲಿ ಹತ್ತು ತರದ ಸಾಹಿತ್ಯ ಹೊಂದಿರುವುದಿಲ್ಲ. ಹೀಗಾಗುವುದು ಪ್ರಾಚೀನ ಕೃತಿಗಳಲ್ಲಿ, ಓಲೆಗರಿಯ ಪ್ರತಿಗಳಲ್ಲೇ ಜಾಸ್ತಿ. ಇನ್ನುಳಿದದ್ದು, 'ಬೆಳಗೆರೆ ಕೃಷ್ಣಶಾಸ್ತ್ರಿಗಳು ಗೋವಿನ ಹಾಡನ್ನು ವಾಸುದೇವಯ್ಯನವರೇ ಬರೆದದ್ದೆಂದು ಹೇಳಿದ್ದಾರೆ' ಎಂಬ ಹೇಳಿಕೆ. ಶಾಸ್ತ್ರಿಗಳು ಏನು ಹೇಳಿದರೋ, ಅವರು ಹೇಳಿದ್ದನ್ನು ಸರಿಯಾಗಿ ಗ್ರಹಿಸದೇ ಯಾರಾದರೂ misquote ಮಾಡಿದರೋ, ಶಾಸ್ತ್ರಿಗಳೇ ಬೇರೆ ಯಾರೋ ಹೇಳಿದ್ದನ್ನು ಕೇಳಿ ಹೇಳಿದರೋ ಅಂತ ಇನ್ನು ಗೊತ್ತಾಗುವುದು ಕಷ್ಟ. ಏನೇ ಇದ್ದರೂ ಇಂತಹಾ ವಿಷಯಗಳಿಗೆ ಅವರೊಬ್ಬರ ಹೇಳಿಕೆ ಸಾಕಾಗುವುದಿಲ್ಲ ಎಂದಷ್ಟೇ ಹೇಳಬಹುದು.
"ಜನರಿಗಾಗಿ ಜನಜೀವನವನ್ನು ಜನಸಾಮಾನ್ಯರು ತಿರುಳುಗನ್ನಡದಲ್ಲಿ ರಸವತ್ತಾಗಿ ಚಿತ್ರಿಸಿದ್ದೇ ಜನಪದ ಸಾಹಿತ್ಯ" ಅಂತ ಉತ್ತಂಗಿ ಚೆನ್ನಪ್ಪನವರು ಹೇಳಿದ ಮಾತಿನಿಂದ, "ಜನರಿಗಾಗಿ, ತಿರುಳುಗನ್ನಡದಲ್ಲಿ, ರಸವತ್ತಾಗಿ ಚಿತ್ರಿಸಿದ್ದು" ಮುಂತಾದ ಗುಣವಿಶೇಷಗಳನ್ನು ಗೋವಿನ ಹಾಡಿಗೂ ಅನ್ವಯಿಸಬಹುದು. ಇದರ ಕಥೆ ನಾಟಕೀಯ. ಈಗಲೂ ನಾಟಕವಾಗಿ ಮಾಡಿದರೆ ರಂಗಸ್ಥಳದಲ್ಲಿ ಸೊಗಸಾಗಿ ಮೂಡಿಬರುತ್ತದೆ, ಹೀಗಾಗಿ ಇದನ್ನು ಜನ ನಾಟಕವಾಗಿ ಆಡುತ್ತಲೂ ಇದ್ದಿರಬಹುದೇನೋ ಎಂಬ ಊಹೆಗೆ ಅವಕಾಶವುಂಟು. ಅಂತೂ ಈ ಹಾಡು ಒಂದು ಪಕ್ಷದಲ್ಲಿ ಬರೆಹದ ರೂಪದಲ್ಲಿ ಇರದೇ ಹೋಗಿದ್ದರೂ, ಊರಿನಲ್ಲಿ ಯಾರೋ ಹಾಡುವುದನ್ನು ಕೇಳಿಯೋ, ಅಜ್ಜಿಯಿಂದಲೋ ಅಮ್ಮನಿಂದಲೋ ಕಲಿತೋ, ಮೌಖಿಕವಾಗಿಯೇ ತಲೆಮಾರಿನಿಂದ ತಲೆಮಾರಿಗೆ ಬರುತ್ತಿತ್ತೆನ್ನಲಿಕ್ಕೆ ಅಡ್ಡಿಯಿಲ್ಲ.
ಚ.ವಾಸುದೇವಯ್ಯನವರಿಗೆ ಇಲ್ಲಿಂದಲೇ ಒಂದು ಗೌರವಪೂರ್ವಕ ನಮಸ್ಕಾರ ಹಾಕಿ, ಯಾರಾದರೂ ಪುಣ್ಯಕೋಟಿಯ ಜಾಡು ಹಿಡಿದು, ಅದರ ಕವಿಯ ಹೆಸರನ್ನು ಕಂಡುಹಿಡಿಯಲಿ ಅಂತ ಆಶಿಸೋಣ.
Dia - Kannada movie
The funny thing about Dia is that, it tempts you to praise it for what it is not. The film does not have an earth shatteringly distinctive story. The plot wouldn't exactly invoke an urge in you to compare it to a Nolan screenplay. There is no action or anything remotely similar to a fight and no, there is not much comedy, sorry Sadhu and Chikkanna fans! There is not much for fans of horror or suspense either. Tssk!
ಅಣಕವಾಡುಗಳು
ಸುಮ್ಮನೆ ಏನನ್ನೋ ನೋಡುತ್ತಿದ್ದಾಗ ಸಿಕ್ಕಿದ ನಾಲ್ಕೈದು ಅಣಕವಾಡು(parody)ಗಳು ಕಚಗುಳಿಯಿಟ್ಟವು, ನಿಮ್ಮ ಖುಷಿಗೆ ಅವನ್ನಿಲ್ಲಿ ಕೊಡುತ್ತಿದ್ದೇನೆ(ಶತಾವಧಾನಿ ಗಣೇಶ್ ಮತ್ತವರ ಬಳಗದವರು ನಡೆಸುತ್ತಿರುವ ಪದ್ಯಪಾನ ಸೈಟಿನಿಂದ ಹೆಕ್ಕಿದ್ದು). ಅಣಕಗಳು ಮೂಲಪದ್ಯದ ಪದಪ್ರಯೋಗ,ಛಂದಸ್ಸು, ಗತಿಗಳನ್ನು ಅನುಕರಣೆ ಮಾಡುವುದರಿಂದ ಅವನ್ನು ಹಾಡಿದರೆ ರಸಾಸ್ವಾದ ಹೆಚ್ಚು. ಹೇಗೂ ಅಣಕಿಸುವುದಾದರೆ ಮಹಾಕವಿ ಕುಮಾರವ್ಯಾಸನನ್ನೇ ಅಣಕಿಸಿದರೆ ಮಜಾ ಅಲ್ಲವೇ ? ಆ ಕವಿ ತನ್ನ ಕಾವ್ಯದ ಬಗ್ಗೆ ಬರೆದುಕೊಂಡ ಸಾಲುಗಳಿವು:
ಪಂಪಭಾರತ ಗಮಕ ವಾಚನ
ಋತುಮಾನ ವೆಬ್ ಸೈಟಿನವರು ಪ್ರಸ್ತುತಪಡಿಸುತ್ತಿರುವ ಪಂಪಭಾರತದ ಒಂದು ಭಾಗದ ಗಮಕ ವಾಚನ ಮತ್ತು ವ್ಯಾಖ್ಯಾನಕ್ಕೆ ನಾನು ಬರೆದಿರುವ ಪುಟ್ಟ ಪೀಠಿಕೆಯಿದು,ಟಿವಿ ವೆಂಕಟಾಚಲ ಶಾಸ್ತ್ರಿ, ಕೆ ಆರ್ ಗಣೇಶ್, ಸಿಪಿಕೆ, ಚಂದ್ರಶೇಖರ ಕೆದ್ಲಾಯ ಮುಂತಾದ ಮಹನೀಯರು ವೀಡಿಯೊದಲ್ಲಿದ್ದಾರೆ. ಗಮಕಕ್ಕೆ ಪ್ರಸ್ತಾವನೆಯಾಗಿ ಇದನ್ನು ಬರೆದಿರುವುದರಿಂದ ಒಂದು ಲೇಖನದ ಸೊಗಸು ಕಾಣಲಾರದೇನೋ ಎಂಬ ಹೆದರಿಕೆ, ಅರ್ಜೆಂಟಿನಲ್ಲಿ ಮಾಡಿದ ಅಡುಗೆ ಬೇರೆ, ಈ ಸಂಕೋಚದೊಂದಿಗೇ ಇದನ್ನು ನಿಮ್ಮ ಮುಂದಿಡುತ್ತಿದ್ದೇನೆ:
ಮಂಜೇಶ್ವರ ಗೋವಿಂದ ಪೈ ಎಂಬ ಅದ್ಭುತ
ಕನ್ನಡದಲ್ಲಿ ಅಸಾಧಾರಣ ಕೆಲಸ ಮಾಡಿದ ವಿದ್ವನ್ಮಣಿಗಳಿಗೆ ಮೆಚ್ಚಿಕೆ ಸಲ್ಲಿಸಿ ಅವರ ಪರಿಚಯವನ್ನು ಫೇಸ್ಬುಕ್ಕಿಗರಿಗೆ ಮಾಡಿಸುವ ಪ್ರಯತ್ನ.
ಗೂಢಚಾರಿಕೆ
'ಗೂಢಚಾರಿಕೆ' ಎನ್ನುವುದು ನನ್ನ ಮಟ್ಟಿಗೆ ಕುತೂಹಲವನ್ನು ಕದಡಿ ಮಿಸುಕಾಡಿಸುವ ಸಂಗತಿ. ಅಲ್ಲಿ ನಡೆಯುವುದೆಲ್ಲ ಗೋಪ್ಯವೂ ನಿಗೂಢವೂ ಆದ್ದರಿಂದ ಆ ಗುಟ್ಟುಗಳನ್ನು ತಿಳಿಯಲು ಮನ ಎಳಸುತ್ತದೆ. ಈ ನಿಟ್ಟಿನಲ್ಲಿ The Unending Game: A Former R&AW Chief's Insights into Espionage ಎಂಬ ಪುಸ್ತಕದಿಂದ ಹೆಕ್ಕಿದ ನಾಲ್ಕಾರು ವಿಷಯಗಳು (ನನ್ನ ಒಗ್ಗರಣೆಯೊಂದಿಗೆ).