Monday, 7 January 2019

ನನ್ನ ಬಾಗಿಲು ತೆರೆಯೇ ಸೇಸಮ್ಮ ಪುಸ್ತಕಕ್ಕೆ ಬಂದ ಪ್ರತಿಕ್ರಿಯೆಗಳು/ವಿಮರ್ಶೆಗಳು Part 2

ನನ್ನ ಪುಸ್ತಕಕ್ಕೆ ಬಂದ ಪ್ರತಿಕ್ರಿಯೆಗಳು/ವಿಮರ್ಶೆಗಳು(Baagilu Tereye Sesamma - Sharath Bhat Seraje - Book reviews):

ಮಾಕೋನಹಳ್ಳಿ ವಿನಯ್ ಮಾಧವ:
ಆ ಪ್ರಶ್ನೆಗೆ ಉತ್ತರ ಇದೇನಾ?...

A Brief History of Timeನ ಮುನ್ನುಡಿಯಲ್ಲಿ, 1973 ರಲ್ಲಿ ಪ್ರಕಟವಾಗಿದ್ದ ತನ್ನ ಪುಸ್ತಕ – `The Large Scale Structure of Spacetime’ ಕುರಿತು ಸ್ಟೀಫನ್ ಹಾಕಿಂಗ್ ಹೀಗೆ ಹೇಳುತ್ತಾನೆ.

`I would not advise readers of this book to consult that book for further information: it is highly technical, and quiet unreadable. I hope that since then I have learned how to write in a manner that is easier to understand’.

ವಿಜ್ಞಾನವನ್ನು ಸರಳವಾಗಿ ಬರೆಯುವುದು ಕಲೆಯಲ್ಲ, ಅದೊಂಥರ ತಪಸ್ಸು ಅಂತ ನಾನು ನಂಬಿದ್ದೆ. `ಬಾಗಿಲು ತೆರೆಯೇ ಸೇಸಮ್ಮ’ ಪುಸ್ತಕ ಓದುವವರೆಗೆ. ಸರಿಯಾಗಿ ಅರ್ಥ ಮಾಡಿಕೊಂಡರೆ, ಅದನ್ನು `ಲಲಿತ ಪ್ರಬಂಧವಾಗಿ’ ಬರೆಯಬಹುದು ಅಂತ ಒಪ್ಪಲೇಬೇಕಾಯ್ತು. ಅದಕ್ಕೆ ಮೊದಲು, ಹತ್ತು ವರ್ಷಗಳಿಂದ ನನ್ನ ಮನೆಯವರಿಗೆ ಮತ್ತು ಮಗಳಿಗೆ ಮನವರಿಕೆ ಮಾಡಲು ನಾನು ಸೋತಿರುವ `ಇಂಗ್ಲಿಶ್ ಎನೆ ಕುಣಿದಾಡುವುದೆನ್ನೆದೆ’ ಅನ್ನುವ ಪ್ರಬಂಧವನ್ನು ಓದಬೇಕು. ಮಾತೃ ಭಾಷೆಯನ್ನು ಅಲಕ್ಷಿಸಿದವರು ಯಾರೂ ಜೀವನವನ್ನು ಸರಳವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ, ಎನ್ನುವುದು ನನ್ನ ನಂಬಿಕೆ.

ನನಗೆ, ಶರತ್ ಭಟ್ ಸೇರಾಜೆ ಫೇಸ್ ಬುಕ್ ನಲ್ಲಿ ಗೆಳೆಯ. ಆದರೆ, ಮೊಬೈಲ್ ಫೋನ್ ನಲ್ಲಿ ಹೆಚ್ಚು ಓದುವುದು ನನಗೆ ಯಾಕೋ ಇಷ್ಟವಾಗುವುದಿಲ್ಲ. ಪುಸ್ತಕ ನನ್ನ ಕೈಗೆ ಬಂದು ಮೂರ್ನಾಲ್ಕು ವಾರಗಳಾಗಿರಬೇಕು. ಕೈಗೆತ್ತಿಕೊಂಡಾಗಲೆಲ್ಲ ಏನಾದರೊಂದು ಅಡ್ಡ ಬರುತ್ತಿತ್ತು. ಅಂತೂ, ಓದಿ ಮುಗಿಸಿದೆ.

ಈ ಪುಸ್ತಕದ ಬಗ್ಗೆ ಏನು ಬರೆಯಲೀ? ಮುನ್ನುಡಿಯಲ್ಲಿ ಜೋಗಿ, ಪ್ರಕಾಶ್ ಕಂಬತ್ತಳ್ಳಿ ಮತ್ತು ಹಿನ್ನುಡಿಯಲ್ಲಿ ಗಣೇಶ್ ಭಟ್ ನೆಲೆಮಾಂವ್ ಎಲ್ಲವನ್ನೂ ಬರೆದಿದ್ದಾರೆ. ನನಗೇನೂ ಉಳಿಸಿಲ್ಲವಾದರೂ, ಕೆಲವು ಇಷ್ಟವಾದ ವಿಷಯಗಳನ್ನು ಹೇಳಲೇ ಬೇಕು.

ಕಪ್ಪುಕುಳಿಗಳ (Black Hole) ಅನಂತ ಅಂತರಿಕ್ಷ ಲೋಕದಲ್ಲಿ, ರಜನಿ ಕಾಂತ್ ಮತ್ತು ಇತರ ತಮಿಳು, ತೆಲುಗು ಸಿನೆಮಾ ನಟರು ಉಪಮೇಯಗಳಾಗಿ ಬಂದು, ಅದೇನೂ ಬ್ರಹ್ಮವಿದ್ಯೆಯಲ್ಲ ಅಂತ ಅನ್ನಿಸಿದರೆ, ಮುಂದಿನ ಪ್ರಬಂಧ ಗೋಪಾಲಕೃಷ್ಣ ಅಡಿಗರ `ಯಾವ ಮೋಹನ ಮುರಳಿ ಕರೆಯಿತು’ ಪದ್ಯದ ವಿಶ್ಲೇಷಣೆಯೊಂದಿಗೆ, ಪ್ರೇಮಲೋಕಕ್ಕೆ ಕರೆದೊಯ್ಯುತ್ತದೆ. ಬಾಗಿಲು ತೆರೆಯೇ ಸೇಸಮ್ಮ, ಲೆಖ್ಖ ಮತ್ತು ನಮ್ಮ ಪಾಸ್ ವರ್ಡುಗಳಿಗಿರು ಸಂಬಂಧವನ್ನು, ಎರಡನೇ ಅಥವಾ ಐದನೇ ಮಗ್ಗಿಯಷ್ಟೇ ಸುಲಭ ಅಂತ ಅನ್ನಿಸುವಂತೆ ಮಾಡಿದರೆ, ನಾನು ಹೇಳುವ `Statistical Jugglery’ ಎನ್ನುವ ಪದವನ್ನು `ಲೆಕ್ಕ ಹಾಕಿ ಸುಳ್ಳು ಹೇಳಿ’ ಎಂಬ ಪ್ರಬಂಧದಲ್ಲಿ ಸೊಗಸಾಗಿ ವರ್ಣಿಸಿದೆ.

`ಪೂರ್ವಾಗ್ರಹ’ ಪೀಡಿತನಾಗಿ, `ಸಿರಿಗನ್ನಡಂ ಗೆಲ್ಗೆ’ ಎಂದು ಓದಲು ಶುರುಮಾಡಿದ ಪ್ರಬಂಧ, `ಪೂರ್ವಗ್ರಹ’ ವನ್ನು ಹಿಂದುರುಗಿ ನೋಡಿದಾಗ ತಿಳಿಯಿತು – ಅದು `ಸರಿಗನ್ನಡಂ ಗೆಲ್ಗೆ’ ಅಂತ. ನನ್ನ ಕನ್ನಡ ಭಾಷೆ ಎಷ್ಟು ಸುಧಾರಿಸಬೇಕಿದೆ ಎನ್ನುವ ಅರಿವೂ ಆಯಿತು.

ಎಲ್ಲಾ ಪ್ರಬಂಧಗಳ ಬಗ್ಗೆ ಬರೆಯುವುದಿಲ್ಲ. ಅವುಗಳ ಬಗ್ಗೆ ಬರೆಯೋಕೆ, ನಾನೂ ಒಂದು ಪ್ರಬಂಧ ಬರೆಯಬೇಕಾಗುತ್ತದೆ, ಅಷ್ಟೆ. ಆದರೆ, `ಬಲಿ ಚಕ್ರವರ್ತಿಯ ತ್ರಿವಿಕ್ರಮ’ ಪ್ರಬಂಧ ಓದುವಾಗ, ಯಂಡಮೂರಿ ವೀರೇಂದ್ರನಾಥರ `ಬೆಳದಿಂಗಳ ಬಾಲೆ’ ಓದಿದಷ್ಟೇ ಖುಷಿ ಕೊಟ್ಟಿತು.

ಕಾರಂತಜ್ಜನ ಕಥೆಗಳು ಮತ್ತು ಮರ್ಯಾದೆ ತೆಗೆಯುವ ಕಲೆ ಎನ್ನುವ ಎರಡು ಪ್ರಬಂಧಗಳನ್ನು ಓದುವಾಗ, ಕೆಲವು ವಿಷಯಗಳು ನನಗೆ ನೆನಪಾದವು. ಅದು ಶರತ್ ಗೆ ಗೊತ್ತೋ, ಇಲ್ಲವೋ.

ಕುಡಿತದ ಬಗ್ಗೆ ಕಾರಂತರು ಹೇಳಿದ ಒಂದು ಮಾತು ನನಗೆ ಬಹಳ ಇಷ್ಟವಾಗಿತ್ತು: `ಅಸಂಬದ್ದವಾಗಿ ಮಾತನಾಡಲು ಕುಡಿಯುವುದು ಏಕೆ? ಹಾಗೆಯೇ ಮಾತನಾಡಬಹುದಲ್ಲ?’

ಹಾಗೆಯೇ, ಲಂಕೇಶರು ಮರ್ಯಾದೆ ತೆಗೆಯುತಿದ್ದ ಪರಿಯ ಬಗ್ಗೆಯೂ ಕೆಲವು ವಿಷಯಗಳು ಪ್ರಸ್ತಾಪವಾಗಿದೆ. ಸಿ ಅಶ್ವಯಥ್ ರನ್ನು, ಕರ್ನಾಟಕ ಸರ್ಕಾರವು, ಅಮೆರಿಕಾದಲ್ಲಿ ನೆಡೆಯುತ್ತಿದ್ದ ಅಕ್ಕ ಸಮ್ಮೇಳನಕ್ಕೆ ಕಳುಹಿಸಲು ನಿರ್ಧರಿಸಿತ್ತು. ಲಂಕೇಶರು, ತಮ್ಮ ಪತ್ರಿಕೆಯಲ್ಲಿ, `ಅಶ್ವಥ್ ರನ್ನು ಅಮೇರಿಕಾಗೆ ಕಳುಹಿಸುವ ಸರ್ಕಾರದ ನಿರ್ಧಾರ ತಿಳಿದ, ಮೆಜೆಸ್ಟಿಕ್ ಬಸ್ ಸ್ಟಾಂಡಿನಲ್ಲಿನ ಭಿಕ್ಷುಕರೆಲ್ಲ, ನಮ್ಮ ರಾಗದಲ್ಲೇನು ದೋಷ, ಅಂಬೋ ಅಂದರಂತೆ,’ ಎನ್ನುವ ಚುಟುಕು ಕವನ ಬರೆದು, ಪ್ರಕಟಿಸಿಯೇ ಬಿಟ್ಟರು. ಈ ವಿಷಯ, ಹೊಡೆದಾಟದ ಹತ್ತಿರದವರೆಗೆ ಹೋಗಿ, ಬೇರೆಯವರ ಮಧ್ಯಸ್ಥಿಕೆಯಲ್ಲಿ ನಿಂತಿತ್ತು.

ಜಾರ್ಜ್ ಬರ್ನಾರ್ಡ್ದ ಶಾ, ವಿಚಿತ್ರ ವ್ಯಕ್ತಿ. ಒಮ್ಮೆ ಪಾರ್ಟಿಯೊಂದರಲ್ಲಿ, ಇಂಗ್ಲೆಂಡ್ ನ ಖ್ಯಾತ ರೂಪದರ್ಶಿಯೊಬ್ಬಳು ಬಂದು ಶಾ ರನ್ನು ಕೇಳಿದಳಂತೆ: `imagine if a child is born with my beauty and your intelligence’.
ರಪ್ಪನೆ ಶಾ ಉತ್ತರಿಸಿದರಂತೆ: `imagine its fate, if it is born with my beauty and your intelligence’.
ಈ ಘಟನೆಯ ನಂತರ ಶಾ ರವರು ಕುಳಿತು ರಚಿಸಿದ ನಾಟಕದ ಹೆಸರು `ಪಿಗ್ಮಲಿಯನ್’. ಮುಂದೆ ಅದು, `ಮೈ ಫೇರ್ ಲೇಡಿ’ ಎಂಬ ಹೆಸರಿನೊಂದಿಗೆ ಜಗತ್ಪ್ರಸಿದ್ದವಾಯಿತು. ಎಷ್ಟು ನಿಜವೋ, ಎಷ್ಟು ಸುಳ್ಳೋ ನನಗಂತೂ ಗೊತ್ತಿಲ್ಲ.

ಚಿಕ್ಕಂದಿನಲ್ಲಿ ಚಂದ ಮಾಮ, ಅಮರ ಚಿತ್ರ ಕಥೆ, ಪಂಚ ತಂತ್ರ, ಅರೆಬಿಯನ್ ನೈಟ್ಸ್, ಈಸೋಪನ ನೀತಿ ಕಥೆಗಳು ಮುಂತಾದ ಪುಸ್ತಕಗಳನ್ನು ಓದಿದಷ್ಟೇ ವಿಸ್ಮಯದಿಂದ ಈ ಪುಸ್ತಕವನ್ನೂ ಓದಿ ಮುಗಿಸಿದೆ. ವಿಜ್ಞಾನ, ಗಣಿತ, ಕಥೆ, ಸಾಹಿತ್ಯ, ಪರಂಪರೆ, ಸಮಕಾಲೀನ ವಿಷಯಗಳನ್ನು, ಮನಸ್ಸಿಗೆ ನಾಟುವಂತೆ, ಪ್ರಬಂಧದಲ್ಲಿ ಪಾತ್ರವಾಗುವಂತೆ ಬರೆಯುವುದು ಕಲೆಯೋ ಅಥವಾ ತಪಸ್ಸೋ ಎಂಬ ಜಿಜ್ಞಾಸೆ ಮತ್ತು ಶುರುವಾಯಿತು.

ಓದುತ್ತಾ, ನನ್ನ ಮತ್ತು ಪ್ರದೀಪ್ ಕೆಂಜಿಗೆಯವರ ನಡುವೆ ನೆಡೆದ ಸಂಭಾಷಣೆ ನೆನಪಾಯಿತು. ಪ್ರದೀಪ್ ರವರು ತೇಜಸ್ವಿಯವರು ಇಷ್ಟ ಪಡುತ್ತಿದ್ದ ವಿಷಯಗಳನ್ನೆಲ್ಲ ಹೇಳುತ್ತಿದ್ದಾಗ, `ಹಾಗಾದರೆ, ಸ್ಟೀಫನ್ ಹಾಕಿಂಗ್ ನ `A Brief History of Time’ ಅವರ ಇಷ್ಟದ ಪುಸ್ತಕಗಳಲ್ಲಿ ಒಂದಿರಬೇಕು, ಎಂದೆ.

`ಅದನ್ನು ಅವರು ಯಾವಾಗಲೋ ತರಿಸಿ ಓದಿದ್ದರು. ಅದನ್ನು ಕನ್ನಡಕ್ಕೆ ಟ್ರಾನ್ಸ ಲೇಟ್ ಮಾಡಬೇಕು ಅಂತ ಹೇಳುತ್ತಿದ್ದರು. ಅದನ್ನ ಹ್ಯಾಗ್ರೀ ಟ್ರಾನ್ಸ ಲೇಟ್ ಮಡೋದು? ಆ ಸಬ್ಜೆಕ್ಟ್ ನೋಡಿ, ಅದನ್ನ ಅರ್ಥ ಮಾಡಿಕೊಂಡು, ಎಲ್ಲರಿಗೂ ಅರ್ಥವಾಗುವ ಹಾಗೆ ಕನ್ನಡದಲ್ಲಿ ಬರೆಯೋಕೆ ನಮ್ಮ ಕೈಲಿ ಸಾಧ್ಯಾನಾ?,’ ಅಂತ ಪ್ರದೀಪ್ ಕೇಳಿದರು.

`ಅದು ಯಾರ ಕೈಲಾದ್ರೂ ಸಾಧ್ಯಾನಾ?’ ಅನ್ನೋ ಪ್ರಶ್ನೆ ನನ್ನನ್ನು ಬಹಳ ಕಾಲ ಕಾಡುತ್ತಿತ್ತು. ಯಾಕೋ, ಉತ್ತರ ಸಿಕ್ಕಿದೆ ಅನ್ನಿಸ್ತಾ ಇದೆ.

ಮಾಕೋನಹಳ್ಳಿ ವಿನಯ್ ಮಾಧವ
============================================
ಪ್ರಶಾಂತ್ ಭಟ್ :
ಬಾಗಿಲು ತೆರೆಯೇ ಸೇಸಮ್ಮ - ಶರತ್ ಭಟ್ ಸೇರಾಜೆ

ಗಹನ ವಿಷಯಗಳ ಸರಳವಾಗಿ ಮನಮುಟ್ಟುವಂತೆ ಹೇಳುವುದು ಒಂದು ಕಲೆ. ಶರತ್ ಇಲ್ಲಿ ಹೇಳಿದ ವಿಷಯಗಳು ನಾವಾಗೇ ಗೂಗಲಿಸಿ ಅಥವಾ ಓದಲು ಹೊರಟರೆ ತಲೆಯ ಮೇಲಿಂದ ಹಾರುವಂತಹವು. ಗುರುತ್ವದಂತಹ ವಿಷಯವನ್ನು ಮಣಿಶಂಕರ್ ಅಯ್ಯರ್,ದಿಗ್ವಿಜಯ ಸಿಂಗ್,ಸೋನಿಯಾ ಗಾಂಧಿ ಉದಾಹರಣೆ ಕೊಟ್ಟು ಕಚಗುಳಿ ಇಡಿಸಿ ವಿವರಿಸುವ ಅವರ ಶೈಲಿ ಅನನ್ಯ.

ಮಧ್ಯಾಹ್ನದ ನಿದ್ದೆ ಆದ ಬಳಿಕ ಸಂಜೆ ಚಾ ಕುಡಿಯುವಾಗ ಮನೆಗೆ ನೆಂಟರು ಬಂದರೆ ಅವರ ಜೊತೆ ಪಟ್ಟಾಂಗ ಹಾಕುವ ಶೈಲಿಯ ಇವರ ಲೇಖನಗಳು,ಸಿನಿಮಾದಂತೆ ಮಧ್ಯಂತರವೂ ಹೊಂದಿದೆ. ಅದಲ್ಲದೆ ಉದಾಹರಣೆಗೆ ನಾವು ದಿನ‌ನಿತ್ಯ ಅನುಭವಿಸಿದ್ದನ್ನೇ ತರುವ ಕಾರಣ ವಿಷಯಗಳು ಸರಳವಾಗಿ ಒಳಗಿಳಿಯುತ್ತವೆ.
ಇಲ್ಲಿನ ಹಲ ಲೇಖನಗಳ ಅವರ ಫೇಸ್ಬುಕ್ ಗೋಡೆಯ ಮೇಲೆ ಓದಿದ್ದೆ.ಮೆಚ್ಚಿದ್ದೆ.
ನಂಗಿರೋ ಒಂದೇ ಒಂದು ಸಂಶಯ ಎಂದರೆ ಶರತ್‍ಗೆ ತಾನು ಅನಗತ್ಯವಾಗಿ ಲಂಬಿಸುತ್ತೇನೋ ಎಂಬ ಅನುಮಾನವಿದೆ.ಹಾಗಾಗಿ ನಡು ನಡುವೆ ವಾಚಕ ಮಹಾಶಯರ ಮತ್ತೆ ಮೊದಲ ಸಾಲಿನ ಕಡೆಗೆ ಕರೆದೊಯ್ದು ಬರುತ್ತಾರೆ. ಇದು ಕೆಲ ಕಡೆ ಓದಿನ ರುಚಿ ಹೆಚ್ಚಿಸಿದರೆ ಕೆಲ‌ಕಡೆ ಬೇಡ ಅನಿಸುತ್ತದೆ. ಆದರೆ ಇದು ಗಬ ಗಬನೆ‌ ಓದುವವರಿಗೆ ಮಾತ್ರ ಆಗುವ ಅನಿಸಿಕೆ. ಒಂದು ಲೇಖನ ಸಾವಧಾನದಿಂದ ಓದುವ ಓದುಗ ಇದನ್ನು ಎಂಜಾಯ್ ಮಾಡೇ ಮಾಡ್ತಾನೆ.

ಪುಸ್ತಕ ನಂಗೆ ಬಹಳ ಹಿಡಿಸಿತು. ಬಹುಶಃ ಅವರ ಗೆಳೆಯರ ಬಳಗದಲ್ಲಿ ನೀವಿಲ್ಲದೆ ಇದ್ದರೆ ಇದನ್ನು ಓದಲು ಸಕಾಲ. ಸದ್ಯದಲ್ಲಿ ನಾನು ಓದಿದ ಅತ್ಯುತ್ತಮ ಜ್ಞಾನ ಮತ್ತು ಮನಸಿಗೆ ಹಾಯೆನಿಸಿದ ಪುಸ್ತಕಗಳಲ್ಲಿ ಇದೂ ಒಂದು.
ಮರೆಯದೆ ಓದಿ. ಓದಿಸಿ
================================================

ಸುಬ್ರಹ್ಮಣ್ಯ ಹೆಚ್.ಎನ್:
ಹೊಳಪಿನ ಪ್ರಬಂಧಗಳು
ಇಷ್ಟಲೇಖಕರಾದ ಜೋಗಿಸರ್ ತನ್ನ ಗೋಡೆಯಲ್ಲಿ ಈ ಪುಸ್ತಕಕ್ಕೆ ಬರೆದ ಮುನ್ನುಡಿಯನ್ನು ಲಗತ್ತಿಸಿದ್ದರಿಂದಾಗಿ 'ಸೇಸಮ್ಮ.....' ನನ್ನು ಓದುವ ಆಸೆ ಹುಟ್ಟಿತು. ಯಾವುದಕ್ಕೂ ಜೋಗಿಸರ್‌ಗೆ ಒಂದು ಕೃತಜ್ಞತೆ ಅರ್ಪಿಸಲೇ ಬೇಕು.

ಪತ್ರಿಕೆಯಲ್ಲಿ ಪ್ರಕಟವಾಗುವ ನಗೆಬರಹಗಳು ಗೊತ್ತು. ಗೋರೂರರು ಬರೆಯುವಂತಹ ರಸಮಯ ಪ್ರಬಂಧಗಳೂ ಗೊತ್ತಿವೆ. ವಸುಧೇಂದ್ರರ ಸುಲಲಿತ ಪ್ರಬಂಧಗಳನ್ನು ಕೂಡ ಓದಿರುವೆ. ಇವುಗಳ ನಡುವೆ ಇದೆಂತೆಹದಪ್ಪ .. ವೈಚಾರಿಕ ಲಲಿತ ಪ್ರಬಂಧಗಳು !? ರಾಶಿ ಕುತೂಹಲ ಇಟ್ಟುಕೊಂಡೇ ಓದಲು ಕೂಡ ಬೇಕಾಯ್ತು. ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಹೂರಣ ಈ ಕೃತಿಯಲ್ಲಿ ಸಿಕ್ಕಿತು. ಮಹತ್ತರವಾದ ಸಂಗತಿಗಳನ್ನು ರಸಮಯವಾಗಿ, ಶಾಲೆಯಲ್ಲಿ ಮೇಷ್ಟ್ರು ಮನದಟ್ಟಾಗುವಂತೆ (ಆಗ ಆಸಕ್ತಿ ಇರುವುದಿಲ್ಲ ಬಿಡಿ) ಉದಾಹರಣೆಗಳ ಮುಖಾಂತರ ಪಾಠ ಒಪ್ಪಿಸುವ ರೀತಿ ಹೇಳುವ ಶರತ್‌ರ ಶೈಲಿ ಅನನ್ಯ. ಅವರ ಪುಸ್ತಕ ಓದಿದ ಯಾರಿಗಾದರೂ ಅವರ ಆಸಕ್ತಿಯ ವಿಶಾಲ ಹರವು; ಗಣಿತ, ವಿಜ್ಞಾನ, ಸಾಹಿತ್ಯ, ರನ್ನ, ಪಂಪ, ಅಡಿಗರ ಕುರಿತಾದ ಅಗಾಧ ಜ್ಞಾನ ಬೆರಗು ಮೂಡದೇ ಇರದು.

ತೆಂಕು ತಿಟ್ಟು ಯಕ್ಷಗಾನವನ್ನು ಯಕ್ಷಗಾನವೇ ಅಲ್ಲವೆಂದು ಜರಿದ ಕಾರಂತರಿಗೆ, ವೇದಿಕೆಯಲ್ಲಿ ಶ್ರೇಣಿ ಗೋಪಾಲಕೃಷ್ಣ ಭಟ್ಟರು ಉತ್ತರಿಸಿದ ಅಪರೂಪದ ಪ್ರಸಂಗ, ನಾವು ಆಗಾಗ ಆಡುವ, ಬರೆಯುವ ತಪ್ಪು ತಪ್ಪು ಕನ್ನಡ, ಇಂಗ್ಲೀಷೇ ಪರಮ ಶ್ರೇಷ್ಠ ಭಾಷೆಯೆಂಬ ಮೂಢನಂಬುಗೆ ಇದನ್ನೆಲ್ಲಾ ತರ್ಕಗಳ ಮುಖಾಂತರ ಸರಳವಾಗಿ ತಿಳಿಸುತ್ತಾ ಹೋಗುತ್ತಾರೆ. ಲೇಖಕರು ಅಡಿಗರ 'ಯಾವ ಮೋಹನ ಮುರಳಿ ಕರೆಯಿತು.....' ಕವನದ ಅರ್ಥ ವಿವರಿಸುವಾಗ ಅಡಿಗರು ಬರೆದಿರುವ ಕಾದಂಬರಿಯ ಸಾಲೊಂದನ್ನು ಉಲ್ಲೇಖಿಸುತ್ತಾರೆ‌. ಅದನ್ನು ನಾನಿಲ್ಲಿ ಹೇಳಲೇ ಬೇಕು. "ಅರಬ್ಬೀ ಸಮುದ್ರಕ್ಕೆ ಬಿಡುವಿಲ್ಲ. ಮಳೆಗಾಲ, ಚಳಿಗಾಲ, ಬೇಸಿಗೆಕಾಲ - ಹಗಲು, ಇರುಳು, ಪ್ರತಿ ನಿಮಿಷಗಳೂ, ಅದು ಹುಚ್ಚೆದ್ದು ಕೂಗಿ, ರೇಗಿ ಸಾವಿರ ಸಿಂಹಗಳ ಗರ್ಜನೆಯಂತೆ, ಸಹಸ್ರಾರು ಆನೆಗಳು ಘೀಳಿಟ್ಟ ಹಾಗೆ ಮೊರೆಯುತ್ತದೆ, ಬೊಬ್ಬಿಡುತ್ತದೆ, ಹೂಂಕರಿಸುತ್ತದೆ. ಈ ಬೊಬ್ಬಾಟಕ್ಕೆ ಕೊನೆಮೊದಲಿಲ್ಲ. ಯಾವ ದುಃಖ ಬಡಿದಿದೆ ಈ ಕಡಲಿಗೆ? ಯಾವ ಆಕ್ರೋಶ? ಯಾವ ನೋವು? ಯಾರ ಚಿತ್ರಹಿಂಸೆ? ಅಗೋ ಈಗ ವಿಕಟಟ್ಟಾಹಾಸ -ಅಲ್ಲಲ್ಲ ಚೀತ್ಕಾರ- ಪೂತ್ಕಾರ !". ಇದನ್ನೆಲ್ಲಾ ಓದುವ ಭಾಗ್ಯವಾದರೂ ಎಲ್ಲಿತ್ತು!?

ಕೃತಿಯಲ್ಲಿ ಹೇಳ ಹೊರಟರೆ ಸಾವಿರ ಸವಿಗಳಿವೆ. ಕತೆ, ಕಾದಂಬರಿ, ಕವಿತೆಯ ನಡುವೆ ಸೇಸಮ್ಮನಿಗೂ ನಿಮ್ಮ ಕಪಾಟಿನಲ್ಲಿ ಜಾಗ ಕೊಡಿ. 'ಲೆಕ್ಕ ಹಾಕಿ ಸುಳ್ಳು ಹೇಳಿ', 'ಪರಂಪರೆಯ ಬೇರುಗಳು', 'ನಮ್ಮ ತಲೆಯೂ ನಮ್ಮ ಹರಟೆಯೂ' ಪ್ರಬಂಧಗಳಿರುವ ಪುಟಗಳ ಕಿವಿ ಮಡಿಚಿಟ್ಟಿದ್ದೇನೆ ಮತ್ತೆ ಮತ್ತೆ ಓದಲು.

ಸುಬ್ರಹ್ಮಣ್ಯ ಹೆಚ್.ಎನ್.
====================================================
ಸ್ಮಿತಾ ಭಟ್:
ನಮಸ್ತೇ ಸೇರಾಜೆಯವರಿಗೆ,

ನಿಮ್ಮ‌ಹಾಸ್ಯಮಿಶ್ರಿತ ಲೇಖನ ಶೈಲಿಯು ತುಂಬಾ ಇಷ್ಟವಾಯಿತು.ದ.ಕ/ ಉಡುಪಿ ಕನ್ನಡದ ಸೊಗಡಿರುವ ಭಾಷೆ, ಅಲ್ಲಲ್ಲಿ‌ ಸಖ್ತ್ ಪಂಚ್ ಗಳು ,ಪುಸ್ತಕವನ್ನು ೨ ಘಂಟೆಗಳಲ್ಲಿ ಒದಿ ಮುಗಿಸಿ ಅಚ್ಚರಿಯ ನಿಟ್ಟುಸಿರು ಬಿಡುವಂತೆ ಮಾಡಿತು.
ಅಡಿಗರ ಕವನವನ್ನು explain ಮಾಡಿದ ರೀತಿಯಂತು ನಮ್ಮ ಕನ್ನಡ lecturer ಅನ್ನು ಜ್ಞಾಪಿಸಿತು. ಯಾರೋ lecture ಕೊಡುತ್ತಿದ್ದಾರೆಂದು feel ಮಾಡಿಕೊಂಡು ಓದಿದೆ. ಆ ಕವಿತೆಗೊಂದು ಅಧ್ಯಾತ್ಮದ touch ಇದೆ ಎಂದು ಗಮನಿಸಿಯೇ ಇರಲಿಲ್ಲ.ಇನ್ನು ಮೇಲೆ ಎಲ್ಲಾ ಕವಿತೆಗಳನ್ನೂ deep ಆಗಿ analyze ಮಾಡಬೇಕು ಅಂತ ಅನಿಸ್ತಾ ಇದೆ.
ಕೆಲವೊಂದು lines ಗಳನ್ನು‌ ನೀವು ಹೇಗೆ explain ಮಾಡಬಹುದು‌ ಅಂತ ಕುತೂಹಲ develope ಆಗಿತ್ತು. ತನಗೂ ,ಇತರರಿಗೂ ಮುಜುಗರವಾಗದಂತೆ ಹಾಸ್ಯಮಯವಾಗಿ ಹೇಳಿದ್ದೀರಿ.
‌       'ಮರ್ಯಾದೆ ತೆಗೆಯುವ ಕಲೆ', 'ಕಾರಂತಜ್ಜನ ಕಥೆಗಳು' ಖುಷಿಯಲ್ಲಿ‌‌ ಓದಿಸಿಕೊಂಡು, ಓಡಿಸಿಕೊಂಡು ಹೋಯಿತು. 'ಸರಿಗನ್ನಡಂ ಗೆಲ್ಗೆ ' bore ಹೊಡೆಸಿದ್ದಕ್ಕೆ ಕಾರಣ  fb ಯಲ್ಲಿ ಇತ್ತೀಚಿಗೆ ನಡೆದ ಚರ್ಚೆ. ಓದಿದ್ದನ್ನೇ ಮತ್ತೆ ಮತ್ತೆ ಓದಿ ವಾಕರಿಕೆ ಬಂದಂತಾಗಿದೆ.( ನಿಮ್ಮ ಲೇಖನದ mistake ಅಲ್ಲ ಬಿಡಿ).
     'ಸಿನಿಮಾ ಮತ್ತು ಕಳ್ಳತನ 'ಈ‌ ಲೇಖನಕ್ಕೆ ಒಂದು ಅತ್ಯುತ್ತಮ ಉದಾಹರಣೆಯಂದರೆ ನಿಮ್ಮದೇ ಇನ್ನೊಂದು ಲೇಖನ AI ಬಗೆಗಿನದು.  Artificial intelligence ಬಗ್ಗೆ ಇತ್ತೀಚಿಗೆ ಒಂದು ಲೇಖನ ಓದಿದ್ದೆ ಕನ್ನಡ ದಿನಪತ್ರಿಕೆಯೊಂದರಲ್ಲಿ. ನೀವು ಅದೇ same old ingredients ಇಟ್ಟುಕೊಂಡು ಹೊಸ ರುಚಿ ಹೇಗೆ‌ ತಯಾರಿಸಿದ್ದೀರಿ ಎನ್ನುವ ಕುತೂಹಲದೊಂದಿಗೆ ಅತೀ ವೇಗದಲ್ಲಿ‌ಓದಿದೆ.‌ ಕಣ್ಣು ಗಳು ಓದುತ್ತಿದ್ದರೂ ಮೆದುಳಿಗೆ process ಮಾಡಲು‌ಕಷ್ಟ ವಾಗುವಂತಹ speed  ಅದು.
Here ingredients are -
1) what is AI in common man's language.
2) about Turing test or loebner prize.
3) can robots take over humans in future?

 With the same ingredients the final dish prepared by you at the end is totally different and you named it..!!

ಬಾಗಿಲು ತೆಗೆಯೇ ಸೇಸಮ್ಮ‌ ಲೇಖನದಲ್ಲಿ encryption and decryption ಬಗ್ಗೆ ಇನ್ನೂ ಆಳವಾಗಿ‌ ವಿವರಿಸಬೇಕಿತ್ತು‌ ಎಂದು ಅನಿಸಿತು.
"Password ಅನ್ನು ಒತ್ತಿ, ತಿರುಚಿ, ಹಿಸುಕಿ,ಜಜ್ಜಿ, ಮುದ್ದೆ ಮಾಡಿ ಬಾಗಿಸಿ,ಗುದ್ದಿ ,ನುಲಿದು,ನಜ್ಜುಗುಜ್ಜು ಮಾಡಿದರೆ ...." ಎನ್ನುವ ಬದಲಿಗೆ ಸುಮ್ಮನೆ cipher keys ಬಗ್ಗೆ, encryption algorithm ಗಳ ಬಗ್ಗೆ ಒಂದೆರಡು ಸಾಲು ಬರೆದಿದ್ದರೆ ಚೆನ್ನಾಗಿತ್ತೇನೋ.!
 ಇನ್ನು ಸಿನಿಮಾ ಮತ್ತು ಕಳ್ಳತನ‌ ಲೇಖನದ‌ ಬಗ್ಗೆಯೂ ಸುಮಾರು ವಿಷಯಗಳನ್ನು ಹಂಚಿಕೊಳ್ಳುವ ಆಸೆ ಇದೆ.

ಇನ್ನೂ ಕೂಡಾ  ಸಾಲುಸಾಲಾಗಿ ಪುಸ್ತಕಗಳನ್ನು ಬರೆಯಿರಿ. ನಿಮ್ಮ ಕೆಲವು ವಾಕ್ಯಗಳು ಬುದ್ಧಿವಂತರಿಗೆ ಮಾತ್ರ ವೆಂದೆನಿಸುತ್ತದೆ. " ಬರವಣಿಗೆ ಶುರುವಾದ ಮೇಲೆ ಭೂಮಿತಾಯಿ ಪ್ರಸನ್ನಳಾಗಿ ನನ್ನನ್ನು ೨-೩ ಸಲ ಸೂರ್ಯನ ಸುತ್ತ ಸುತ್ತುವ ಪ್ಯಾಕೇಜ್ ಟ್ರಿಪ್ಪಿನಲ್ಲಿ ಕರೆದುಕೊಂಡು ಹೋಗಿದ್ದಾಳೆ" ಈ ವಾಕ್ಯದ ಅರ್ಥ ನಾನು ಬರವಣಿಗೆ ಶುರು ಮಾಡಿ ೨-೩ ವರ್ಷ ಆಯ್ತೆಂದಲ್ಲವೇ? ಅರ್ಥ ಆದಾಗ ತುಂಬಾ ನಗು ಬಂತು. ನೀವು ಗೂಢಾರ್ಥಗಳನ್ನು ಮತ್ತು ಅಲಂಕಾರ, ಉಪಮೆಗಳನ್ನು ಬಳಸುವ ರೀತಿ ಚೆನ್ನಾಗಿದೆ. ನೀವು ಒಬ್ಬ ಉತ್ತಮ ಹರಟೆ ಲೇಖಕರೂ ಹೌದು, ವಿಜ್ಞಾನ ಬರಹಗಳ ಲೇಖಕರೂ ಹೌದು.

....ಧನ್ಯವಾದಗಳೊಂದಿಗೆ,
ಸ್ಮಿತಾ ಭಟ್.
=======================================================
# Baagilu Tereye Sesamma Book reviews

ನನ್ನ ಬಾಗಿಲು ತೆರೆಯೇ ಸೇಸಮ್ಮ ಪುಸ್ತಕಕ್ಕೆ ಬಂದ ಪ್ರತಿಕ್ರಿಯೆಗಳು/ವಿಮರ್ಶೆಗಳು/Baagilu Tereye Sesamma Reviews Part 1

ನನ್ನ ಪುಸ್ತಕಕ್ಕೆ ಬಂದ ಪ್ರತಿಕ್ರಿಯೆಗಳು/ವಿಮರ್ಶೆಗಳು(Baagilu Tereye Sesamma - Sharath Bhat Seraje - Book reviews):
ಮೊದಮೊದಲು ಬಂದವು :

ಇನ್ನೊಂದೆರಡು :

ಜಯಶೇಖರ ವಿ ಆರ್ ಅವರದ್ದು : ಗೆಳೆಯ Sharath Bhat ರ ಪುಸ್ತಕ ಬಿಡುಗಡೆಯಾಗಿದೆ. ವೃತ್ತಿಯಿಂದ ಇಂಜಿನಿಯರ್ ಆದರೂ ಭಾಷೆ ಹಾಗೂ ಸಾಹಿತ್ಯದ ಮೇಲೆ ಅವರಿಗಿರುವ ಆಸಕ್ತಿ , ಶ್ರದ್ಧೆ, ನಮಗೆಲ್ಲ ಸ್ಪೂರ್ತಿದಾಯಕವಾದುದು.
ಪುಸ್ತಕಕ್ಕೆ "ಬಾಗಿಲು ತೆರೆಯೇ ಸೇಸಮ್ಮ" ಅಂತ ಹೆಸರಿಟ್ಟು ಸ್ವತಃ ತಾವೇ ಹಲವು ಸ್ವಾರಸ್ಯಕರವಾದ ವಿಷಯಗಳ, ಕುತೂಹಲಕಾರಿ ಅಂಕಿಅಂಶಗಳ, ವಿಷಯಗಳ ಕಿಟಕಿ ಬಾಗಿಲನ್ನು ತೆರೆದಿಟ್ಟಿದ್ದಾರೆ. ಹದಿನೈದು ವೈಚಾರಿಕ ಲೇಖನಗಳ ಗುಚ್ಛದಲ್ಲಿ ಸಾಹಿತ್ಯ , ಸಿನೆಮಾ, ಗಣಿತ ಮುಂತಾದ ವಿಷಯಗಳ ಅವಲೋಕನವಿದೆ. ತುಂಬಾ ಗಂಭೀರ ವಿಷಯಗಳನ್ನು ಹೇಳುವಾಗ ಕೂಡ ವಿನೋದವಾಗಿ ಹೇಳುವ ಶೈಲಿ ಶರತ್ ಬೇಕಂತಲೇ ರೂಢಿಸಿಕೊಂಡ ಮಾರ್ಗವಿರಬಹುದು. ಅಲೆ ಅಲೆ ಗುರುತ್ವಾಕರ್ಷದ ಅಲೆಯೊ ಲೇಖನ ಮಾತ್ರ ಓದಿದ ಮೇಲೆಯೂ ಸೀದಾ ನನ್ನ ತಲೆಯ ಮೇಲೆ ಹಾದು ಹೋಗಿದ್ದರೆ ಅದಕ್ಕೆ ವಿಷಯದಲ್ಲಿನ ನನ್ನ ಅನಾಸಕ್ತಿ ಕಾರಣ. ಮೋಹನ ಮುರಳಿ ಲೇಖನ ಭಾವಮಂಥನ ಮಾಡಬಲ್ಲುದು ಹಾಗೆಯೇ, ಪರಂಪರೆಯ ಬೇರುಗಳು ಲೇಖನವು ಇಲ್ಲಿಯವರೆಗೆ ನಡೆದುಬಂದ ಹಲವು 'ರೂಢಿ'ಗಳ ಬಗ್ಗೆ ಆಶ್ಚರ್ಯಚಕಿತ ಸಂಗತಿಗಳನ್ನು ಹೇಳುತ್ತದೆ.

ಉಳಿದಂತೆ ಮರ್ಯಾದೆ ತೆಗೆಯುವ ಕಲೆ, ಇಂಗ್ಲಿಷ್ ಎನೆ ಕುಣಿದಾಡುವುದೆನ್ನೆದೆ ಲೇಖನಗಳು ತೆಳುಹಾಸ್ಯದಿಂದ ಕೂಡಿದ್ದು "ಹರಟೆ ಪ್ರಬಂಧ"ದ ಸಾಹಿತ್ಯದ ಮಾದರಿಗೆ ಸೇರಬಲ್ಲವು ಅನ್ನಿಸುತ್ತದೆ. ವೀ ಸೀತಾರಾಮಯ್ಯನವರ ಬಳಿಕ ಅಷ್ಟು ಸಶಕ್ತವಾಗಿ, ಸುಲಲಿತವಾಗಿ ಹರಟೆ ಪ್ರಬಂಧಗಳನ್ನು ಬರೆದವರಿದ್ದಾರಾ ನನಗೆ ತಿಳಿಯದು. ಆದರೆ ಆ ಪ್ರಾಕಾರವನ್ನು ಕೂಡ ಗೆಳೆಯ ಶರತ್ ಸಂಪನ್ನಗೊಳಿಸಬಲ್ಲರು ಅನ್ನುವ ಗುರುತುಗಳು ಈ ಲೇಖನಗಳಲ್ಲಿ ಇವೆ.
ಭರವಸೆಯ ಸರೋವರದಂತೆ ಕಾಣುವ ಗೆಳೆಯ ಶರತ್ ಸಾಹಿತ್ಯಸಾಗರವಾಗಿ ಸಾಗಲಿ ಅನ್ನೋದು ನನ್ನ ಆಶಯ, ಹಾರೈಕೆ.
ಇನ್ನು, ಇದು ಒಂದೇ ಸಮನೆ ಬಿಡದೇ ಓದಿಸಿಕೊಳ್ಳಬಲ್ಲ ಪುಸ್ತಕ. ಒಮ್ಮೆ ಕೊಂಡು ಓದಿ. ಖುಷಿಯಾಗ್ತದೆ

Gopalkrishna Bhat - ಶರತ್ ಭಟ್ ಸೇರಾಜೆ ಅವರು ಇಲ್ಲಿ ಬರೆಯುತ್ತಿದ್ದ ಲೇಖನಗಳ ಅಭಿಮಾನಿ ನಾನು. ಅವರು ಎತ್ತಿಕೊಳ್ಳುವ ವಿಷಯಗಳು, ನೀಡುತ್ತಿದ್ದ ಮಾಹಿತಿಗಳು ಇನ್ನೂ ಓದು ಇನ್ನೂ ಓದು ಎಂದು ಹುರಿದುಂಬಿಸುವ ಮಾತ್ರೆಗಳಿದ್ದಂತೆ. ಅವರು ಲೇಖನಗಳನ್ನು ಪುಸ್ತಕ ರೂಪಕ್ಕೆ ತರುತ್ತಾರೆ ಎಂದು ತಿಳಿದು ತುಂಬಾ ಖುಷಿಯಾಗಿತ್ತು. ಆವಾಗೊಮ್ಮೆ ಇವಾಗೊಮ್ಮೆ ಒಂದು ಲಡ್ಡುವೋ ಮತ್ತೊಮ್ಮೆ ಕೇಸರೀಬಾತೋ ಸಿಕ್ಕಿದ ಹಾಗೆ ಮೆಲ್ಲುತ್ತಿದ್ದ ನನಗೆ ಒಂದೇ ಸಲ ಮೃಷ್ಟಾನ್ನ ಭೋಜನ ನೀಡಿದಂತೆ ಈ ಪುಸ್ತಕ. ಅಷ್ಟು ಸುಲಭಕ್ಕೆ ಕೈಗೆಟುಕದ ವಿಷಯಗಳನ್ನು ಎಂತವರಿಗೇ ಆದರೂ ಸಲೀಸಾಗಿ ಅರ್ಥವಾಗುವ ರೀತಿ ಬರೆಯುವುದು ಇವರ ವಿಶೇಷ. ಒಮ್ಮೆ ಈ ಪುಸ್ತಕ ಓದಿ ನೋಡಿ. ತುಂಬಾ ಚೆನ್ನಾಗಿದೆ 

Hari Kiran H
 :

ಈ ಪುಸ್ತಕ ಓದುವ ಮುಂಚೆ ನನ್ನದೊಂದು ಕಿವಿಮಾತು, ನೀವು ಸಂಪಾದಕರ ಮಾತು, ಲೇಖಕರ ಮಾತು ಎಲ್ಲಾ ಯಾಕೆ ಓದುದು ಅದೆಲ್ಲಾ ಬೋರ್ ಅಂತ ಎಲ್ಲಾ ಸ್ಕಿಪ್ ಮಾಡಿ ಸೀದಾ ಮ್ಯಾಟರಿಗೆ ಹೋದ್ರೆ ಕೆಲವೆಲ್ಲಾ ನಗೆ ಚಟಾಕಿಗಳನ್ನು ಮಿಸ್ ಮಾಡಿಕೊಳ್ತೀರ. ಲೇಖಕರ ಮಾತಲ್ಲೇ ನಿಮಗೆ ಮುಂದೆ ಏನು ಸಿಗಲಿದೆ ಅನ್ನುವುದರ ಸ್ಪಷ್ಟ ಚಿತ್ರಣ ಸಿಕ್ಕಿಬಿಡುತ್ತದೆ. ಅವರೇ ಹೇಳಿದಂತೆ ಇದೊಂದು ವೈಚಾರಿಕ ಲಲಿತ ಪ್ರಬಂಧಗಳ ಸಂಕಲನ. ಕಹಿ ಗುಳಿಗೆಗಳನ್ನು ಪುಡಿ ಮಾಡಿ ಜೇನಿನಲ್ಲಿ ಬೆರೆಸಿ ಹೇಗೆ ಚಿಕ್ಕ ಮಗುವಿಗೆ ತಿನ್ನಿಸಿ ರೋಗ ವಾಸಿ ಮಾಡುತ್ತೇವೋ ಹಾಗೆ ವೈಚಾರಿಕ ಪ್ರಬಂಧಗಳನ್ನು ಹಾಸ್ಯದಲ್ಲಿ ಬೆರೆಸಿ ಎಲ್ಲಾ ತರಹದ ಓದುಗರಿಗೆ ಸಿಹಿಸಿಹಿಯಾಗಿ ತಿನ್ನಿಸಿದ್ದಾರೆ ಶರತ್ ಭಟ್ರು. ಬಾಗಿಲು ತೆರೆಯೇ ಸೇಸಮ್ಮ ಅಂತ ಅವರ ಮಾತು ಕೇಳಿ ಯಾವುದೋ ಸಾಮಾಜಿಕ ಕಥೆ ಕೇಳಲು ಬಾಗಿಲು ತೆರೆದು ನೀವು ಒಳಹೋಗಲು ಪ್ರಯತ್ನಿಸಿದರೆ ಅಲ್ಲಿ ನಿಮ್ಮ ಪಾಸ್ ವರ್ಡ್ ಕೇಳಿ ತಬ್ಬಿಬ್ಬುಗೊಳಿಸುತ್ತಾರೆ. ಹಾಗು ಪಾಸ್ ವರ್ಡ್ ಗಳನ್ನು ಹೇಗೆಲ್ಲಾ ಕದಿಯುತ್ತಾರೆ. ಅದು ಹೇಗಿದ್ದರೆ ಚೆನ್ನ ಎಂದೆಲ್ಲಾ ನಿಮಗೆ ಚೆನ್ನಾಗಿ ತಿಳಿಯುವಂತೆ ಮಾಡಿ ತಮ್ಮ ಪಾಸ್ ವರ್ಡ್ ಗಳನ್ನೂ ಕೂಡ ನಮ್ಮೊಂದಿಗೆ ಹಂಚಿಬಿಡುತ್ತಾರೆ, ಆಡುಮುಟ್ಟದ ಸೊಪ್ಪಿಲ್ಲ ಅನ್ನುವಂತೆ ಗುರುತ್ವಾಕರ್ಷಣೆ, ಕವಿತೆ, ಇಂಗ್ಲೀಷು, ಗಣಿತ, ಸಂಗೀತ, ಕನ್ನಡ, ಕೃತಕ ಬುದ್ದಿಮತ್ತೆ ಹೀಗೆ ತರಹೇವಾರಿ ಸಬ್ಜೆಕ್ಟುಗಳಲ್ಲಿ ತಮ್ಮ ಕೈಯಾಡಿಸಿದ್ದಾರೆ. ಎಲ್ಲವನ್ನು ತುಂಬಾ ಇಷ್ಟಪಟ್ಟು ಆಳವಾಗಿ ಅಭ್ಯಸಿಸಿರುವುದು ಎದ್ದು ಕಾಣುತ್ತದೆ. ಇವೆಲ್ಲದರ ಬೆಸೆವ ಒಂದೇ ಕೊಂಡಿ ತಿಳಿಹಾಸ್ಯ. ನೀವು ಊಹೆಯೇ ಮಾಡಿರದ ವಿಲಕ್ಷಣವಾದ ಉದಾಹರಣೆಗಳು ಹಾಗೂ ಹೋಲಿಕೆಗಳು ಖಂಡಿತವಾಗಿಯೂ ನಗೆಯುಕ್ಕಿಸುತ್ತವೆ. ಎಲ್ಲರಿಗೂ ಇಷ್ಟವಾಗುವಂತಹ ಉತ್ತಮವಾದ ಪುಸ್ತಕ.
 

ಕೆ ಜಿ ಎಫ್ ವಿಮರ್ಶೆ / KGF movie review

KGF movie review by Sharath Bhat Seraje
ಒಂದೇ ಮಾತಿನಲ್ಲಿ ಹೇಳುವುದಾದರೆ ಕೆಜಿಎಫ್ ಎಂಬ ರಾಕ್ಷಸ ಗಾತ್ರದ ಚಿತ್ರವು ಹನ್ನೆರಡು ಚಕ್ರಗಳ ರಾಕ್ಷಸ ಲಾರಿಯೊಂದು ಆಗುಂಬೆ ಘಾಟಿಯಲ್ಲಿ ಫಾರ್ಮುಲಾ ಒನ್ ಕಾರಿನ ವೇಗದಲ್ಲಿ ಓಡಿದರೆ ಹೇಗಾಗಬಹುದೋ ಹಾಗಿದೆ !! ಆದರೆ ಒಂದೇ ಮಾತಿನಲ್ಲಿ ಹೇಳಿ ಮುಗಿಸಬಹುದಾದ ಚಿತ್ರ ಇದಲ್ಲ ಎಂಬುದೇ ವಿಶೇಷ !!

ನಮ್ಮಲ್ಲಿ ದಡ್ಡರು ಮಸಾಲೆ ಚಿತ್ರಗಳನ್ನು ಮಾಡುತ್ತಾರೆ, ಬುದ್ದಿವಂತರು (ಯಾರೂ ನೋಡದ) ಆರ್ಟ್ ಫಿಲಂಗಳನ್ನು ಮಾಡ್ತಾರೆ ಎಂಬೊಂದು ಪದ್ಧತಿ ಇದೆ. ಉಪೇಂದ್ರ, ಶಂಕರ್, ರಾಜಮೌಳಿ ತರದವರು ಇದನ್ನು ಆಗಾಗ ಮುರಿದದ್ದೂ ಇದೆ, ಉಗ್ರಂ ಕೂಡಾ ಬುದ್ದಿವಂತರ ಮಾಸ್ ಚಿತ್ರ ಅನ್ನಿಸಿಕೊಂಡಿತ್ತು. ದರ್ಶಿನಿಯವರು ಅದೇ ಅಡುಗೆಭಟ್ಟರನ್ನಿಟ್ಟುಕೊಂಡು ಸ್ಟಾರ್ ಹೋಟೆಲ್ ಮಾಡಿದರೆಂಬಂತೆ, ಉಗ್ರಂ ನೋಡಿ ಇನ್ನೂ ಬೇಕು ಅಂದವರಿಗಾಗಿ ಉಗ್ರಮ್ಮಿಗೆ ಗಾಳಿ ಹಾಕಿ ಉಬ್ಬಿಸಿ ದೊಡ್ಡ ಮಟ್ಟದ ಉಗ್ರಂ ಅನ್ನು ತಯಾರಿಸಿರುವಂತೆಯೇ ಈ ಚಿತ್ರ ಇದೆ.

ಇದು ಹೇಳಿ ಕೇಳಿ ಅಡಿಯಿಂದ ಮುಡಿಯವರೆಗೆ ಇಂಚಿಂಚೂ ಮಾಸ್ ಸಿನೆಮಾವೇ ; ಆದರೆ ಚಾಣಾಕ್ಷತನದಿಂದ, ಪರಿಶ್ರಮದಿಂದ ಮಾಡಿರುವ ಮಾಸ್ ಚಿತ್ರ. ಹೀಗಾಗಿ ನೂರೈವತ್ತು ನಿಮಿಷಗಳ ಹೀರೋವಿನ ವೈಭವೀಕರಣ, ಮಾಸ್ ಅಂಶಗಳು ಎಲ್ಲ ಬೇರೆ ಚಿತ್ರಗಳಲ್ಲಿ ನನಗೆ ಇಷ್ಟ ಆಗದ ವಿಷಯಗಳಾದರೂ ಇಲ್ಲಿ ಅಷ್ಟೇನೂ ಬೇಸರ ಹುಟ್ಟಿಸಲಿಲ್ಲ, ಆರೋಗ್ಯಕ್ಕೆ ಒಳ್ಳೆಯದಲ್ಲದಿದ್ದರೂ ಕಿಕ್ ಕೊಡುವ ಫಾಸ್ಟ್ ಫುಡ್ಡಿನಂತೆ ಚಿತ್ರ ನೋಡುವಾಗ ಮೆಯ್ಯ ನವಿರುಗಳು ಸೆಟೆದು ನಿಲ್ಲುತ್ತವೆ ಅನ್ನಬೇಕು. ವರ್ಲ್ಡ್ ಸಿನೆಮಾ ಎಲ್ಲ ನೋಡುವ ನಾನೇ ಸೈರನ್ ಅನ್ನು ಹೋಲುವ ಹಿನ್ನೆಲೆ ಸಂಗೀತ ಮೊಳಗಿದಾಗ ಒಂದೆರಡು ಸಲ ಎದ್ದು ಕುಣಿಯಹೊರಟೆ ಅಂದಮೇಲೆ ಇನ್ನು ಮಾಸ್ ಪ್ರೇಕ್ಷಕರನ್ನು ಆ ದೇವರೇ ಕುರ್ಚಿಯಲ್ಲಿ ಹಿಡಿದಿಡಬೇಕು !

ಬೇರೆ ಚಿತ್ರಗಳಲ್ಲಿ ಹೀರೋ ತನ್ನನ್ನು ತಾನೇ ಹೊಗಳಿಕೊಳ್ಳುವ ಉದ್ದುದ್ದ ಡೈಲಾಗುಗಳಿರುತ್ತವೆ, ಇಲ್ಲಿ ಅದನ್ನು ಚಾಣಾಕ್ಷತನದಿಂದ ನಿಭಾಯಿಸಲಾಗಿದೆ. ಮೊದಲನೆಯದಾಗಿ ಚುರುಕು ಕಾಲುಗಳ, ಮಿಂಚಿನ ಕೈಯ ಚತುರ ಬಾಕ್ಸರ್ ನ ಗುದ್ದುಗಳಂತೆ ಎಲ್ಲ ಪಂಚು ಸಂಭಾಷಣೆಗಳೂ ಸರಿಯಾಗಿಯೇ ಅಪ್ಪಳಿಸಿ ಮಜಾ ಕೊಡುತ್ತವೆ, ಬರೆದವರಿಗೆ ಸೆನ್ಸ್ of wit ಇದೆ. ಇನ್ನೊಂದು ಉಪಾಯ ಏನೆಂದರೆ ಹೀರೋ ತನ್ನ ಬಗ್ಗೆ ತಾನೇ ಹೇಳುವುದಕ್ಕಿಂತ ಉಳಿದವರು ಅವನ ಬಗ್ಗೆ ಹೆಚ್ಚು ಹೇಳುವಂತೆ ಮಾಡಿದ್ದು, ಇದೊಂದು smart move. ಬಹುತೇಕ ಎಲ್ಲ ಪಂಚ್ ಡೈಲಾಗುಗಳು ಚಿತ್ರಕಥೆಯ ಅವಿಭಾಜ್ಯ ಅಂಗ, plotಗೆ ಇದು ಬೇಕಿತ್ತು ಅನ್ನಿಸುವಂತೆ ಮಾಡಿರುವುದು smartnessನಲ್ಲಿ ಅದಕ್ಕಿಂತಲೂ ಒಂದು ಕೈ ಮೇಲಿರುವ move ! ಹೀಗೆ ಬರೆದದ್ದಕ್ಕೆ ಚಂದ್ರಮೌಳಿಯವರಿಗೆ ಸಲಾಂ, ಬರೆಸಿದ್ದಕ್ಕೆ ಪ್ರಶಾಂತ್ ನೀಲ್ಗೂ ನಮಸ್ಕಾರ. ಡೈಲಾಗುಗಳು ಹೆಚ್ಚು ಉದ್ದ ಇಲ್ಲದಿರುವುದರ ಹಿಂದೆಯೂ ಪ್ರಶಾಂತರ ಕೈವಾಡವೇ ಇರಬೇಕು.

ಒಂದು ಬಕೇಟು ಮಣ್ಣಿನ ಬಣ್ಣ, ಒಂದು ಚೊಂಬು ಚಿನ್ನದ ಬಣ್ಣ, ಒಂದು ಕೊಡಪಾನ ಆರೆಂಜ್ ಬಣ್ಣದಲ್ಲಿ ಅದ್ದಿ ತೆಗೆದಿದ್ದಾರೇನೋ ಅನ್ನಿಸುವಂತೆ ಛಾಯಾಗ್ರಾಹಕ ಭುವನ್ ಗೌಡರು ಒಂದೇ ಬಣ್ಣದ ಛಾಯೆಗಳನ್ನಿಟ್ಟುಕೊಂಡು ಹೋಳಿ ಆಡಿದ್ದಾರೆ. Butch Cassidy and the Sundance Kid ಚಿತ್ರವೂ ಹಳದಿ ಬಣ್ಣವನ್ನು ಬಳಸಿ ಹೆಸರು ಮಾಡಿತ್ತು, ಅಬ್ಬಾಸ್ ಕಿರೋಸ್ತಾಮಿಯ Taste of Cherry ಚಿತ್ರವೂ ಮಣ್ಣು ಮಣ್ಣು ದೃಶ್ಯಗಳನ್ನು ತೋರಿಸಿತ್ತು.
Barry Lyndon ಎಂಬ ಚಿತ್ರವನ್ನು Stanley Kubrick ಎಂಬ ದೊಡ್ಡ ನಿರ್ದೇಶಕ ಯಾವುದೇ Artificial lightಗಳಿಲ್ಲದೆ ಚಿತ್ರಿಸಿದ್ದ, ಇಲ್ಲಿಯೂ ಹಲವು ಕಡೆ ಕೃತಕ ಬೆಳಕಿಲ್ಲದೆ ಬರೀ ದೊಂದಿ, ಬೆಂಕಿಗಳ ಬೆಳಕಿನಲ್ಲಿಯೇ ದೃಶ್ಯಗಳನ್ನು ಕಟ್ಟಿ ವಿಶಿಷ್ಟವಾದ ಕಲರ್ ಗ್ರೇಡಿಂಗ್ ಮಾಡಲಾಗಿದೆ, ಗಣಿಗಳ ಕತ್ತಲೆ, ಗಣಿ ಕಾರ್ಮಿಕರ ಬದುಕಿನ ಕತ್ತಲೆ, ಚಿತ್ರದ ಡಾರ್ಕ್ ಟೋನ್ ಎಲ್ಲ ಈ ಬೆಳಕಿನ ಆಟದಲ್ಲಿ, ಬಣ್ಣಗಾರಿಕೆಯಲ್ಲಿ ಹೇಳಲ್ಪಟ್ಟಿವೆ. ಹಗಲಿನಲ್ಲೂ ಸಹಜ ಬೆಳಕಿನ ನರ್ತನವೇ ಒಂದು ಬೇರೆ ಲುಕ್ ಕೊಡುವಂತೆ ಮಾಡಲಾಗಿದೆ.

ಬೀಜಿಂಗಿನಿಂದ ಶಾಂಘೈಗೆ ಹೋಗುವ ಬುಲೆಟ್ ಟ್ರೇನಿನಂತೆ ಚಿತ್ರ ಓಡುವಂತೆ ಕಂಡರೆ ಅದಕ್ಕೆ ಶ್ರೀಕಾಂತ್ ಗೌಡರ rapid fire ಎಡಿಟಿಂಗ್ ಕಾರಣ, ಬಹುಶಃ ನೂರಕ್ಕೆ ಎಂಬತ್ತು ಪಾಲು shotಗಳು ಐದು ಸೆಕೆಂಡಿಗಿಂತ ಹೆಚ್ಚು ತೆರೆಯಲ್ಲಿ ಇರುವುದೇ ಇಲ್ಲ, ಹೀಗಾಗಿ ಪಟಪಟನೇ ಶಾಟ್ ಗಳು ಕಣ್ಣಿಗೆ ಅಪ್ಪಳಿಸಿ ನಮಗೆ ಬಿಡುವೇ ಕೊಡುವುದಿಲ್ಲ, blink and miss ಶೈಲಿಯ ಓಘ ಚಿತ್ರಕ್ಕೆ ಸಿಕ್ಕಿದೆ, ಒಂದು ನಿಮಿಷ ವಾಟ್ಸಪ್ಪ್ ನೋಡಿ ಬರುತ್ತೇನೆ ಅನ್ನುವವರಿಗೆಲ್ಲ ಅವಕಾಶವೇ ಇಲ್ಲ ! ಶ್ರೀಕಾಂತರು Thelma Schoonmaker,Lee Smith, Michael Kahn ಮುಂತಾದ ಸಂಕಲನಕಾರರ ಅಭಿಮಾನಿಯಂತೆ. ಹೊಡೆದಾಟಗಳಲ್ಲಿಯೂ ಹೀರೋ ಹೊಡೆದರೆ ಹತ್ತು ಜನ ವಾಲಿಬಾಲಿನಂತೆ ಗಾಳಿಯಲ್ಲಿ ಹಾರುತ್ತಾರೆ ಎಂಬಂತಿರದೆ shaky ಕ್ಯಾಮೆರಾ ಮತ್ತು ಫಾಸ್ಟ್ ಕಟ್ ಗಳಲ್ಲಿ ಎಲ್ಲವನ್ನೂ ಅಡಗಿಸಲಾಗಿದೆ. frame rate ನ ಜೊತೆಯೂ ಆಟವಾಡಿ ಸ್ಲೋ ಮೋಶನ್ , ಫಾಸ್ಟ್ ಮೋಶನ್ ಎಲ್ಲ ಒಟ್ಟಿಗೇ ಬೆರೆಸಿರುವುದೂ ಇನ್ನೊಂದು ತಂತ್ರಗಾರಿಕೆ. ಕಲಾನಿರ್ದೇಶಕ ಶಿವು ಮತ್ತವರ ತಂಡದವರು ಸೆಟ್ ಹಾಕಲು ಅದೆಷ್ಟು ಕಷ್ಟ ಪಟ್ಟಿದ್ದಾರೋ ಅವರಿಗೇ ಗೊತ್ತು. ರವಿ ಬಸ್ರೂರರ ಹಿನ್ನೆಲೆ ಸಂಗೀತ ಭೋರ್ಗರೆಯುವ ಜಲಪಾತದಂತಿದೆ.

ಅನಂತ್ ನಾಗ್ , ಅಚ್ಯುತ್ , ವಸಿಷ್ಠ ಮುಂತಾದವರಿಗೆ ಹೆಚ್ಚು ಅವಕಾಶ ಇಲ್ಲದ್ದು ನಿರಾಸೆಯಾಯಿತು, ಯಶ್ ಅವರಿಗೆ badass ಆಗಿ ಕಾಣುವುದೊಂದೇ ಕೆಲಸ, ಅವರ attitude, ಆ ನೋಟ ಎಲ್ಲ ಜಗತ್ತನ್ನು ಗೆಲ್ಲಹೊರಟವನಿಗೆ ಇರಬೇಕಾದವೇ ಬಿಡಿ.
ಗಣಿಗಾರಿಕೆಯ ಸೂಕ್ಷ್ಮ, ರಾಜಕೀಯ, ಒಳಗುಟ್ಟುಗಳೆಲ್ಲ ಇದ್ದರೆ ಚೆನ್ನಾಗಿರುತ್ತಿತ್ತು, ಇದು ಮಾಸ್ ಚಿತ್ರವಾದ್ದರಿಂದ ಇಲ್ಲಿ ಎಲ್ಲವೂ ಬ್ಲಾಕ್ ಅಂಡ್ ವೈಟ್.
ಬೇರೆ ಚಿತ್ರಗಳಲ್ಲಿ ಖಳನಾಯಕರು ಹೀರೋವಿನ ಕೈಯಲ್ಲಿ ಪೆಟ್ಟು ತಿನ್ನಲಿಕ್ಕೆಂದೇ ಇರುವ ಹಾಸ್ಯಾಸ್ಪದ ವ್ಯಕ್ತಿಗಳಾಗಿರುತ್ತಾರೆ, ಇಲ್ಲಿ ವಿಲನ್ಗಳನ್ನೂ ಮೆರೆಸಿರುವುದು ಖುಷಿಯಾಯಿತು. ಕೊನೆಗೆ ಹೀರೋ ಬುದ್ಧಿ ಉಪಯೋಗಿಸಿ ಕೆಲಸ ಸಾಧಿಸುವುದೂ ತಾಯಿಯ ದುನಿಯಾ ಗೆಲ್ಲುವ ಕಾನ್ಸೆಪ್ಟ್ ಅನ್ನು ಮುದದಿಂದ ಸಾಕಾರಗೊಳಿಸಿ ಮಜಾ ಕೊಟ್ಟಿತು.

ದುಡ್ಡು ಸುರಿದ ಎಂಟೆದೆಯ ನಿರ್ಮಾಪಕರಿಗೆ ದೊಡ್ಡ ನಮಸ್ಕಾರ. ನಿರ್ದೇಶಕನ ಬಗ್ಗೆ ಎಷ್ಟು ಹೇಳಿದರೂ ಕಡಮೆಯೇ, ಕನಸು ಕಾಣುವವರು ಎಷ್ಟು ದೊಡ್ಡ ಮಟ್ಟದಲ್ಲಿ ಕಾಣಬೇಕು ಅನ್ನುವುದಕ್ಕೊಂದು ಮಾದರಿ ಇವರಿಬ್ಬರು.

ಅಬ್ಬರದ ಚಂಡೆಯ ಗೌಜಿಯಲ್ಲಿ ವೀರರಸದ ಯಕ್ಷಗಾನದಂತೆ ಥ್ರಿಲ್ಲಾಗಿಸುವ ಚಿತ್ರವಿದು. ಒಂದು ಜಾತ್ರೆಗೆ ಹೋದಾಗ, ಈ ಅಂಗಡಿಗೆ ಕೆಂಪು ಬಾಗಿಲು ಇರಬೇಕಿತ್ತು, ಜಯಂಟ್ ವೀಲ್ ವಿರುದ್ಧ ದಿಕ್ಕಿನಲ್ಲಿ ತಿರುಗಬೇಕಿತ್ತು , ಚುರುಮುರಿಗೆ ಪೈನಾಪಲ್ ಹಾಕಿದರೆ ಲಾಜಿಕ್ ಸರಿಯಾಗುತ್ತಿತ್ತು ಅಂತೆಲ್ಲ ಹೇಳುತ್ತಾ ಕೂತರೆ ನಷ್ಟ ನಿಮಗೇ , ಹೀಗೆ ಮಾಡುವ ಬದಲು ಬೆರಗುಗಣ್ಣುಗಳಿಂದ ಸುಮ್ಮನೆ ಸಂಭ್ರಮದಲ್ಲಿ ಸೇರಿಕೊಂಡರೆ ಮಜಾ ಹೆಚ್ಚು, ನಾನು ಏನು ಹೇಳುತ್ತಿದ್ದೇನೆ ಅಂತ ಗೊತ್ತಾಯಿತಲ್ಲ ?! ಯಾವುದಕ್ಕೂ ಒಮ್ಮೆ ನೋಡಿಬನ್ನಿ.

ಹಳಗನ್ನಡ ತರಲೆ ಪದ್ಯಗಳು

ತರಲೆ ಮಾಡುವುದು ಅಂತಲೇ ಆದ ಮೇಲೆ ಹೊಸಗನ್ನಡವಾದರೇನು, ಹಳಗನ್ನಡವಾದರೇನು. ಈಗಿನ ಹಾಲಿವುಡ್ ಸಿನೆಮಾಗಳ ಸಂಭಾಷಣೆಗಳನ್ನ ನಮ್ಮ ಪಂಪ ರನ್ನಾದಿ medieval ಕವಿಗಳು ಬರೆದಂತೆ ಬರೆದರೆ ಹೇಗಿದ್ದೀತು ಅಂತ ಮಾಡಿದ್ದ ವಿಚಿತ್ರ ಮತ್ತು ತಲೆಹರಟೆಯ ಕಲ್ಪನೆಯ ಕೂಸುಗಳಿವು.

Chuck Palahniuk ಬರೆದ ಕಾದಂಬರಿ ಆಧರಿಸಿ Fight Club ಅಂತೊಂದು ಚಿತ್ರ ಬಂದಿತ್ತು. ಮೊದಲಿಗೆ ಅದರ ಸಂಭಾಷಣೆಗಳನ್ನೇ ಎತ್ತಿಕೊಳ್ಳೋಣ.

"You are not your job, you're not how much money you have in the bank. You are not the car you drive. You're not the contents of your wallet. You are not your fucking khakis. You are all singing, all dancing crap of the world"
ಇದನ್ನು, ಪಾಪ, ಅಷ್ಟೊಳ್ಳೆ ಕವಿಯಾದ, ವಾಗ್ದೇವಿಯ ಶಾಪಿಂಗ್ ಮಾಲನ್ನು ಲೂಟಿ ಮಾಡಿದವನಾದ ನಮ್ಮ ಕುಮಾರವ್ಯಾಸನ ಹೆಸರು ಹಾಳಾಗುವಂತೆ, ಅವನ ಭಾಷೆಯಲ್ಲಿ ಬರೆದರೆ ಹೇಗಿರಬಹುದು? ಹೀಗೆ :

ಕಾಯಕದ ಮರುಳು ಕವಿದ ತೊತ್ತೆ
ಮಾಯಕದ ಸಿರಿಯ ಬಿಗಿದು ಕೆಡಹು
ರಾಯರೆಲ್ಲರನೊಯ್ವ ರಥವೇ ನೀನು ಧರಣಿಯಲಿ
ಕಾಯ ಒಪ್ಪುವ ತೊಡಿಗೆ ನಿನ್ನದೆ
ಆಯೆನುತ ಬೊಬ್ಬಿರಿದು ದುಗುಡದಲಿ
ಗಾಯನದಲಿ ಬಾಯ ಮೌನವ ಮುರಿವೆ ನೀನೆಂದ

“This is your life and its ending one moment at a time.” ಇದನ್ನು ಪಂಪ ರನ್ನರ ಭಾಷೆಯಲ್ಲಿ,ಭಾವದಲ್ಲಿ ಕೆತ್ತಿದರೆ :
ಮನದೊಳ್ ಇನ್ನೆವರಂ ಸಾವಿಲ್ಲ ಎಂದಿರ್ದಯ್, ಪ್ರಾಣಫಲಮಂ ಆ ಜವರಾಯ ಇನಿಸಿನಿಸು ತಿನದೇ ಪೋಕುಮೇ ?

“We've all been raised on television to believe that one day we'd all be millionaires, and movie gods, and rock stars. But we won't. And we're slowly learning that fact. And we're very, very pissed off.
ಆನ್ ಪುಟ್ಟೆ ಅಮ್ಮನ ಗಂಧವಾರಣ ಪುಟ್ಟಿತೆಂದರ್ ಕವೀಶ್ವರರ್, ಬಳೆಯೆ ನಿಜ ಕೀರ್ತಿಯಿಂ ಅಷ್ಟ ದಿಕ್ತಟಮಂ ಧವಳಿಸುಗು ಎಂದರ್, ಎಲ್ಲಿದುವೋ ಧವಳ ಚಾಮರಂ ? ತಾನೆಲ್ಲಿತ್ತೋ ಧನಂ ? ಶ್ರೀಯುವತಿ ಎತ್ತ ಪೋದಳೋ ? ಜಸಮಂ ಕಾಂಬೆನೆಂದಿರಲ್ ಇಂತಾಯ್ತು ವಿಧಾತೃ! ಸಿರಿ ಪುಸಿ, ನೆಗಳ್ತೆ ಪುಸಿ !

"ನಾನ್ ಬರೋ ತನಕ ಬೇರೆಯವರ್ ಹವಾ, ನಾನ್ ಬಂದ್ ಮೇಲೆ ನಂದೇ ಹವಾ"(ಇದು ಎಲ್ಲೋ ನೋಡಿದ್ದರ ಸ್ಪೂರ್ತಿಯಿಂದ ಸಿಕ್ಕಿದ್ದು)
ಇದು ಒಟ್ರಾಶಿ ಹಳಗನ್ನಡದ ಶೈಲಿಯಲ್ಲಿ :
ನಾಂ ಬರ್ಪನ್ನೆಗಂ ಪೆರರ ಸಮೀರಂ, ಆನ್ ಪೊಕ್ಕೊಡೆ ಎನ್ನದೇ ವಾತಂ.

ಇನ್ನೊಂದು, ಅಮೀರ್ ಖಾನರ ದೇಶ ಬಿಡುವ ಪ್ರಹಸನ ಬಿಸಿಯಾಗಿದ್ದ ಕಾಲದಲ್ಲಿ ಬರೆದದ್ದು. ಮುಪ್ಪಿನ ಷಡಕ್ಷರಿಗಳು ತಿರುಕನ ಕನಸಿನಲ್ಲಿ ಬಳಸಿದ ಭೋಗ ಷಟ್ಪದಿಯನ್ನು ಕೆಡಿಸುವ ಪ್ರಯತ್ನ:
ಮಿಡುಕಿದಳು ರವೀನಾ ಬೆದರಿ
ಸಿಡುಕಿದನು ಅರ್ನಬ್ ಟೀವಿಯಲಿ
ಹುಡುಕಿ ಹೇಳಿ ನಿಜವ ದೇಶ ಕೇಳುತ್ತಿರಲು
ದುಡುಕಿ ರಮಣಿ ಹೇಳಲ್ ದೇಶ
ಬಿಡುವಮೀರ ಖಾನರೆ ನೀವು
ಕಡುಕಷ್ಟವೆ ನಿಮಗೆ ಏನಚ್ಚರಿ ಅಕಟಕಟಾ

ಶತಾವಧಾನಿ ಆರ್ ಗಣೇಶ್ ಮತ್ತು ನಾನು !

ಶತಾವಧಾನಿ ಆರ್ ಗಣೇಶ್ ಮತ್ತು ನಾನು !

"ಇದೇನ್ರೀ ಇದು ಜೋಕ್ ಮಾಡ್ತೀರಾ? ಗಣೇಶ್ ಎಲ್ಲಿ, ನೀವೆಲ್ಲಿ ? ಅವರ ಹೆಸರಿನ ಜೊತೆ ನಿಮ್ಮ ಹೆಸರು ಯಾವ ಲೆಕ್ಕದಲ್ಲಿ ಸ್ವಾಮೀ ಬರುತ್ತೆ" ಅಂತ ಸಿಟ್ಟಾಗಬೇಡಿ. ಗಣೇಶರನ್ನು ನಾನು ಭೇಟಿಯಾದ ಪ್ರಸಂಗವನ್ನಷ್ಟೇ ನಾನು ಹೇಳಹೊರಟದ್ದು. ಅದನ್ನು ಹೇಳಲಿಕ್ಕೆ ಇದೊಂದು TRP friendlyಯಾಗಬಹುದಾದ ಮೊದಲ ಸಾಲನ್ನು ಹಾಕಿದೆನಷ್ಟೇ !

ಹಿರಿಯ ಸಂಸ್ಕೃತ ವಿದ್ವಾಂಸರೂ, ಕಾವ್ಯಮೀಮಾಂಸೆ, ಭಾರತೀಯ ಸಂವೇದನೆ ಮುಂತಾದ ವಿಷಯಗಳಲ್ಲಿ ಕೆಲಸ ಮಾಡಿದವರೂ ಆದ ಪಾದೆಕಲ್ಲು ನರಸಿಂಹ ಭಟ್ಟರ ಬಗ್ಗೆ ಒಂದು ಪುಟ್ಟ ಪುಸ್ತಕವನ್ನು ನಾನು ಬರೆಯಲಿಕ್ಕಿತ್ತು. ಗಣೇಶರೂ ನರಸಿಂಹ ಭಟ್ಟರ ಮೇಲೆ ಅಭಿಮಾನ ಇದ್ದವರು, ಅವರ ವಿಚಾರಗಳನ್ನು ಅರ್ಥಮಾಡಿಕೊಂಡು ಸ್ಪಂದಿಸಿದವರು. ಹಾಗಾಗಿ ರಿಸರ್ಚಿನ ಭಾಗವಾಗಿ ಅವರನ್ನು ಮಾತಾಡಿಸಬೇಕಿತ್ತು. ಗೋಖಲೆ ವಿಚಾರಸಂಸ್ಥೆಯಲ್ಲಿ ಸಿಕ್ಕಿದಾಗ, "ಇಂತದ್ದೊಂದು ವಿಷಯದಲ್ಲಿ, ನಿಮ್ಮ ಹತ್ತಿರ ಮಾತಾಡಲಿಕ್ಕಿದೆ, ಒಮ್ಮೆ ನಿಮಗೆ ಸಿಕ್ಕಲೇ" ಅಂತ ನಾನು ಸಂಕೋಚದಿಂದಲೇ ಕೇಳಿದೆ. 'ನಡೆದಾಡುವ ಸರಸ್ವತಿ' ಎಂದು ಕರೆಸಿಕೊಳ್ಳುವ ಗಣೇಶರು, ಸ್ವಲ್ಪವೂ ದೊಡ್ಡಸ್ತಿಕೆ, ಬಿಗುಮಾನಗಳಿಲ್ಲದೆ, ಸಂಕೋಚದ ಅಗತ್ಯವೇ ಇಲ್ಲವೆಂದು ಪದಗಳನ್ನು ಬಳಸದೆಯೇ ಹೇಳಿ, "ಫೋನ್ ನಂಬರ್ ತಗೊಳ್ಳಿ" ಅಂತಂದು, ಸ್ಥಳದಲ್ಲಿಯೇ ನಂಬರನ್ನು ಕೊಟ್ಟ ನಿರಾಡಂಬರ ಶೈಲಿಯ ಮುನ್ನುಡಿಗೆ ಅಚ್ಚರಿಯಿಂದಲೇ ಕಣ್ಣಾದೆ.

ಮುಂದಿನ ಶುಕ್ರವಾರ ಕರೆಮಾಡಿ, "ನಾಳೆ ಬಂದ್ರೆ ಆದೀತಾ" ಅಂತ ಕೇಳಿದೆ. ಸದ್ಯಕ್ಕೆ ನರೇಂದ್ರ ಮೋದಿ ಮತ್ತು ಕುಮಾರಸ್ವಾಮಿಯವರನ್ನು ಬಿಟ್ಟರೆ ಅತ್ಯಂತ ಬ್ಯುಸಿ ವ್ಯಕ್ತಿ ಇವರೇ ಇರಬಹುದು ಅನ್ನಿಸುವಷ್ಟು ಕೆಲಸಗಳನ್ನು ಗುಡ್ಡೆ ಹಾಕಿಕೊಂಡಿರುವವರು ಅವರು, "ಶನಿವಾರವೂ ಭಾನುವಾರವೂ ಒಂದು ಅರ್ಧ ಗಂಟೆಯೂ ಪುರುಸೊತ್ತು ಇಲ್ಲವಲ್ಲಾ, ಏನ್ಮಾಡೋಣ" ಅಂದರು. "ಓ ಹೌದಾ ಸರ್, ಆಯಿತು ಬಿಡಿ" ಅಂದೆ. ಸ್ವರದಲ್ಲಿ ನಿರಾಸೆಯನ್ನು ಗುರುತಿಸಿದವರಂತೆ, ಕೂಡಲೇ, "ಹೀಗ್ಮಾಡಿ, ಭಾನುವಾರ ರಾತ್ರಿ ಒಂಬತ್ತಕ್ಕೆ free ಆಗ್ತೀನಿ, ಆವಾಗ ಬಂದುಬಿಡಿ" ಅಂದರು. ಒಂದು ಐವತ್ತು ಪುಟಗಳ ಲೇಖನವೊಂದನ್ನು ಕಳಿಸಿ, "ಇದನ್ನು ಓದ್ಕೊಂಡು ಬನ್ನಿ" ಅಂದರು. ಆದರೇನು ಮಾಡೋಣ ! ಅವರಷ್ಟಲ್ಲದಿದ್ದರೂ ನಾನೂ ಬ್ಯುಸಿಯೇ ಆಗಿದ್ದೆ ! ಅದನ್ನು ಹತ್ತೇ ಪುಟ ಓದಿ, ಹೇಳಿದ್ದನ್ನು ಮಾಡದೇ, ಭಂಡಧೈರ್ಯದಿಂದಲೇ ಹೊರಟೆ ! "ಗಣೇಶರು ಸರಿಯಾಗಿ ಬೈತಾರೆ" ಅಂತ ಅವರ ಶಿಷ್ಯರು ಭಾಷಣವೊಂದರಲ್ಲಿ ತಮಾಷೆ ಮಾಡಿದ್ದನ್ನು ಬೇರೆ ಕೇಳಿದ್ದೆ !!

ಹಿಂದೀ ಚಿತ್ರಗಳಿಗೆ ಬರೆಯುತ್ತಿದ್ದ ಸಲೀಂ ಜಾವೇದ್ ಜೋಡಿಯ ಸಲೀಂ ಖಾನ್(ಸಲ್ಮಾನ್ ಖಾನ್ ಇವರ ಮಗನೇ) ಎಷ್ಟು ಓದುತ್ತಿದ್ದರು ಅಂದರೆ, ಕಡೆಗೊಮ್ಮೆ ಗ್ರಂಥಾಲಯವೊಂದರಲ್ಲಿ, "ಹೊಸ ಪುಸ್ತಕವೇನಾದರೂ ಬಂದಿದೆಯೇ" ಅಂತ ಅವರು ಕೇಳಿದಾಗ, ಲೈಬ್ರರಿಯನ್ನರು, "ಇನ್ನು ನೀವು ಓದದೇ ಇರುವ ಪುಸ್ತಕ ಯಾವುದೂ ನಮ್ಮ ಗ್ರಂಥಾಲಯದಲ್ಲಿ ಇಲ್ಲ ಸಲೀಂ ಸಾಬ್" ಅಂದಿದ್ದರಂತೆ ! ಬೆಂಗಳೂರಿನ ಎಲ್ಲ ಗ್ರಂಥಾಲಯಗಳವರೂ ಗಣೇಶರು ಕೇಳಿದರೆ ಹೀಗೇ ಹೇಳಬೇಕಾದೀತೋ ಏನೋ !! "ಬಹುಶಃ ಮೊನ್ನೆ ಶನಿವಾರ ಬಿಡುಗಡೆಯಾದ ನನ್ನ ಪುಸ್ತಕವೊಂದನ್ನು ಬಿಟ್ಟರೆ ಎಲ್ಲವನ್ನೂ ಇವರು ಓದಿ ಮುಗಿಸಿದ್ದಾರೆ" ಅಂತ ತಮಾಷೆ ಮಾಡಿದರೆ ಅದು ವಾಸ್ತವಕ್ಕಿಂತ ಬಹಳ ದೂರವೇನೂ ಹೋಗಲಿಕ್ಕಿಲ್ಲ !! ಹೀಗಿರುವ ಜ್ಞಾನರಾಶಿಯ ಮುಂದೆ ನಾನು ಯಾವ ಮುಖವಿಟ್ಟುಕೊಂಡು ಹೋಗುವುದಪ್ಪಾ, ಏನು ಮಾತಾಡುವುದಪ್ಪಾ ಎನ್ನುವುದನ್ನು ಊಹಿಸಿಯೇ ಒಳಗೊಳಗೇ ಪುಕು ಪುಕು ಶುರುವಾಯಿತು. ಮುಂದಿನದು ನನ್ನಮಟ್ಟಿಗೆ ಅವಿಸ್ಮರಣೀಯ !

ಒಂಬತ್ತೂ ಐದಕ್ಕೆ ಒಳಹೊಕ್ಕವನು ನಡುರಾತ್ರಿ ಹನ್ನೆರಡರವರೆಗೆ ನಿರರ್ಗಳವಾಗಿ ಹರಟಿದೆ. ಒಂದು ನಿಮಿಷದ awkward silence ಕೂಡಾ ಇಲ್ಲದ ನಮ್ಮಿಬ್ಬರ ಅಸ್ಖಲಿತ ಮಾತು ಕೋಣೆಯನ್ನು ತುಂಬಿಸಿತು. ಪಂಡಿತರ ಜೊತೆ ಪಾಮರರು ಮಾತಾಡಲಿಕ್ಕೆ ಆಗುವುದಿಲ್ಲ ಅಂತ ಯಾರು ಹೇಳಿದ್ದು ! ಆರಂಭದಲ್ಲಿ ದಂಡಿ, ಭಾಮಹ, ಆನಂದವರ್ಧನ ಮುಂತಾದವರ ಬಗ್ಗೆಯೆಲ್ಲ ಏನು ಹೇಳ್ತೀರಿ ಅಂತ ಕೇಳಿದಾಗ ಉತ್ಸಾಹದಿಂದಲೇ ಕೊರೆದಿದ್ದೆ, ಭಾರತೀಯ ಸೌಂದರ್ಯ ಮೀಮಾಂಸೆ, ಅಲಂಕಾರಶಾಸ್ತ್ರಗಳ ಪರಿಕಲ್ಪನೆಗಳನ್ನು ಸಿನೆಮಾಕ್ಕೆ ಅನ್ವಯಿಸಬಹುದೇ ಅಂತೆಲ್ಲ ಪ್ರಶ್ನೆ ಮಾಡಿದಾಗಲೂ ನನಗೆ ತೋಚಿದ್ದನ್ನು ಹೇಳಿದ್ದೆ. "ಹುಡುಗ ಎಷ್ಟು ತಿಳಿದುಕೊಂಡಿದ್ದಾನೆ" ಅಂತ ನನ್ನನ್ನು ಪರೀಕ್ಷೆ ಮಾಡುವುದಕ್ಕೆ ಕೇಳಿದ್ದಿರಬಹುದು ಅಂತ ಆಮೇಲೆ ಹೊಳೆಯಿತು !! Aryan invasion theoryಯಿಂದ ಯಕ್ಷಗಾನದವರೆಗೆ ಎಷ್ಟೆಲ್ಲಾ ವಿಷಯಗಳು ಬಂದವೋ !

ಪಾದೆಕಲ್ಲು ನಮಗೆ ನೆರೆಕರೆ ಅಂದಾಗ, "ನೀವು ಕರೋಪಾಡಿ ಗ್ರಾಮದವರೋ" ಅಂತ ಹೇಳಿದ, ದಕ್ಷಿಣ ಕನ್ನಡದ ಹತ್ತು ಹದಿನೈದು ಹಳ್ಳಿಗಳ ಹೆಸರನ್ನು ಕ್ಷಣಮಾತ್ರದಲ್ಲಿ ಹೇಳಿದ ಗಣೇಶರ ಅಸಾಧಾರಣ ಸ್ಮರಣಶಕ್ತಿಯ ಬಗ್ಗೆ ನಾನು ಹೊಸತಾಗಿಯೇನೂ ಹೇಳಬೇಕಾದ್ದಿಲ್ಲ. ಒಂದು ವಿಷಯ ಕೇಳಿದಾಗ, ಅದಕ್ಕೆ ಉದಾಹರಣೆಯಾಗಿ ಎರಡು ಹಳಗನ್ನಡ, ಒಂದು ಸಂಸ್ಕೃತ, ಒಂದು ತೆಲುಗು ಪದ್ಯಗಳನ್ನು ಕೂತಲ್ಲಿಯೇ ನೆನಪಿನಿಂದ quote ಮಾಡಿ ಹೇಳಿದ್ದು ಅವರಿಗೆ ನೀರು ಕುಡಿದಷ್ಟು ಸಲೀಸೆಂದು ನನಗೆ ಗೊತ್ತಿದೆ. ಜೊತೆಗೆ ತಾವೇ ಕಾಫಿ ಮಾಡಿ ನನಗೆ ಕುಡಿಸಿದ್ದೂ ಆಯಿತು. ನಾನು ಯುರೋಪಿಯನ್ ಭಾಷೆಗಳನ್ನು ಕಲಿಯಬೇಕೆಂದಿದ್ದೇನೆ ಅಂತ ಹೇಳಿ ಆ ವಿಚಾರ ಕೇಳಿದೆ . ಹದಿನೆಂಟು ಭಾಷೆಗಳನ್ನು ಕಲಿಯಲಿಕ್ಕೆ ಅವರಿಗೆ ಮಂಜೇಶ್ವರ ಗೋವಿಂದ ಪೈಗಳೇ ಸ್ಫೂರ್ತಿಯಂತೆ, ಅವರು ಪುಸ್ತಕಗಳನ್ನಿಟ್ಟುಕೊಂಡೇ ಅವನ್ನು ಕಲಿತದ್ದಂತೆ. ಈಗ ಕ್ಲಾಸುಗಳಿಗೆ ಹೋಗಿ, ಇಂಟರ್ನೆಟ್ ಅನ್ನು ಬಳಸಿ ಎಲ್ಲ ಕಲಿಯಬಹುದೆಂದು ಅಭಿಪ್ರಾಯ ಪಟ್ಟರು. ಸಂಸ್ಕೃತ ಕಲಿಯಲು ವಿದ್ವಾನ್ ರಂಗನಾಥ ಶರ್ಮ ಅವರ ವಾಲ್ಮೀಕಿ ರಾಮಾಯಣದ ಅನುವಾದ ಓದಿದರೆ ಸಾಕು,ಅವರು ಮೂಲವನ್ನೂ ಅನುವಾದವನ್ನೂ ಕೊಟ್ಟಿರುವುದರಿಂದ ಒಂದು ವರ್ಷದಲ್ಲಿ ಸಂಸ್ಕೃತ ಕರಗತವಾಗುತ್ತದೆ ಅಂತ ಅವರ ಅಂಬೋಣ. ಯಾವ ಸಿನೆಮಾಗಳನ್ನು ನೋಡಿದ್ದೀರಿ ಅಂತ ಕೇಳಿ , ಸಂಗೀತ ಕೇಳುವ ಅಭ್ಯಾಸ ಬೆಳೆಸಿಕೊಳ್ಳಿ ಅಂತ ಹೇಳಿದರು.

ಅವರ ಕೆಲವು ವಿಚಾರಗಳು ನನಗೆ ಒಪ್ಪಿಗೆಯಾಗಲಿಲ್ಲ. ಕೆಲವು ವಿಷಯಗಳ ಮತ್ತು ವ್ಯಕ್ತಿಗಳ ಬಗ್ಗೆ ಪೂರ್ವಗ್ರಹದಿಂದ ಮಾತಾಡಿದರೆಂದೂ ಕಂಡಿತು. ಏನೇ ಇದ್ದರೂ, ಆ ಹೊತ್ತಲ್ಲದ ಹೊತ್ತಿನಲ್ಲಿ, odd timeನಲ್ಲಿ ಕರೆಸಿಕೊಂಡು, ಎಷ್ಟೋ ವಿಷಯಗಳಲ್ಲಿ ನನಗಿದ್ದಿರಬಹುದಾದ ಅಜ್ಞಾನವನ್ನು ಲೆಕ್ಕಿಸದೆ, ವಯಸ್ಸಿನ, ಜ್ಞಾನದ, ಅಭಿರುಚಿಯ ಅಂತರವಿದ್ದರೂ ಗೆಳೆಯರಂತೆ ಅಷ್ಟು ದೀರ್ಘಕಾಲ ಮಾತಾಡಿದ್ದು ಅವರ ಔದಾರ್ಯವೆಂದು ಹೇಳದಿದ್ದರೆ ತಪ್ಪಾದೀತು.

ನಾವಿಬ್ಬರೂ ಸೇಡಿಯಾಪು ಕೃಷ್ಣಭಟ್ಟರ ಅಭಿಮಾನಿಗಳಾದ್ದರಿಂದ ಒಂದು ಹದಿನೈದಿಪ್ಪತ್ತು ನಿಮಿಷ ಅವರ ಪಾಂಡಿತ್ಯದ, ವಿಚಾರಗಳ ಚರ್ಚೆಯಾಯಿತು. ನಾಟ್ಯಶಾಸ್ತ್ರದ ಭರತ, ಧ್ವನ್ಯಾಲೋಕದ ಆನಂದವರ್ಧನ, ನ್ಯೂಟನ್, ಐನ್ ಸ್ಟೈನ್ ಮುಂತಾದವರ ಸಾಲಿನಲ್ಲೇ ಸಲ್ಲಬೇಕಾದ ಹೆಸರು ಸೇಡಿಯಾಪು ಅವರದ್ದು, ಅವರ ಸ್ಥಾನ ಬೇರೆ ಯಾವ ordinary mortalಗಳ ಜೊತೆಗೂ ಅಲ್ಲ ಅಂತ ಗಣೇಶರ ಅಭಿಪ್ರಾಯ. ಸೇಡಿಯಾಪು ಅವರು "ಕನ್ನಡ ಭಾಷಾಸೇವೆ" ಎಂಬ ಲೇಖನದಲ್ಲಿ, ಭೂಗೋಳ, ಇತಿಹಾಸ, ಗಣಿತ, ವಿಜ್ಞಾನ, ಅರ್ಥಶಾಸ್ತ್ರ ಮುಂತಾದ ಜ್ಞಾನಶಾಖೆಗಳಲ್ಲಿ ಬರೆಯುವುದು ಅತ್ಯಂತ ಉನ್ನತ ಮಟ್ಟದ ಕೆಲಸವೆಂದೂ, ಅದಕ್ಕೆ ಅಪಾರವಾದ ಪ್ರತಿಭೆ ಬೇಕೆಂದೂ ಹೇಳಿದ್ದು, ಅವರ ಅಭಿಪ್ರಾಯದಂತೆ ನಾನು ಇಂತಹಾ ವಿಷಯಗಳನ್ನು ಹುಡುಕಿ ಬರೆದಿದ್ದೇನೆಂದೂ ಸೇರಿಸಿದೆ. ಸೇಡಿಯಾಪು ಅವರ ಪಾಂಡಿತ್ಯ ನನಗೆ ಹೇಗೆ ಉಳಿದವರದಕ್ಕಿಂತ ಬೇರೆಯಾಗಿ ಕಾಣುತ್ತದೆ ಅಂತಲೂ ಹೇಳಿದೆ. ನಾನು ತೀನಂಶ್ರೀ ಅವರ ಅಭಿಮಾನಿಯೂ ಹೌದೆಂದು ಹೇಳಿ ಅವರ "ಭಾರತೀಯ ಕಾವ್ಯಮೀಮಾಂಸೆ" ನನಗೆ ಯಾಕಿಷ್ಟ ಅಂತ ವಿವರಿಸಿದೆ. ಪಾವೆಂ ಆಚಾರ್ಯರ ಪ್ರತಿಭೆ ಅಷ್ಟೊಂದು ವಿಷಯಗಳಲ್ಲಿ ಹರಿದು ಹಂಚಿ ಹೋಗುವ ಬದಲು ಒಂದೇ ಕ್ಷೇತ್ರದಲ್ಲಿ ಅವರು ದೊಡ್ಡ ಕೆಲಸವನ್ನೇನಾದರೂ ಮಾಡಬೇಕಿತ್ತು ಅಂತ ಗಣೇಶರಿಗೆ ಕಾಣುತ್ತದೆ. ಪದಾರ್ಥ ಚಿಂತಾಮಣಿ ದೊಡ್ಡ ಕೆಲಸವೇ ಅಲ್ಲವೇ ಅಂತ ನಾನು ಹೇಳಿದೆ.

ಕಡೆಗೆ ನನ್ನದೊಂದು ಲೇಖನವನ್ನೂ ಮೂರು ಪುಟದಷ್ಟು ಓದಿ, "ನಿಮಗೆ ಚಂದದ ಭಾಷೆ ಒಲಿದಿದೆ, ಸೊಗಸಾದ ಶೈಲಿ ಇದೆ , ವ್ಯಾಕರಣಶುದ್ಧವಾಗಿಯೂ ಬರೆದಿದ್ದೀರಿ" ಅಂತ ಗಣೇಶರು ಹೇಳಿದ್ದು ನನಗೆ ಸಿಕ್ಕಿದ ದೊಡ್ಡ ಸರ್ಟಿಫಿಕೇಟು. ಅಜ್ಜಿಪುಣ್ಯಕ್ಕೆ ಅವರಿಗೆ ತೋರಿಸಿದ ಭಾಗಗಳಲ್ಲಿ ಸೊಗಸಾದ ಶೈಲಿ ಮತ್ತು ದೋಷಗಳಿಲ್ಲದ ಭಾಷಾಪ್ರಯೋಗ ಇತ್ತೆಂದು ಕಾಣುತ್ತದೆ !

ಅವರಿಗೆ ಬೆನ್ನು ನೋವಿದ್ದು ಹೆಚ್ಚು ಹೊತ್ತು ಕೂತುಕೊಳ್ಳಲಿಕ್ಕೆ ಆಗುವುದಿಲ್ಲವಂತೆ ಅಂತ ನನಗೆ ಆಮೇಲೆ ಒಂದುದಿನ ಗೊತ್ತಾಯಿತು ! ಹಾಗಾದರೆ ಅಷ್ಟು ಹೊತ್ತು ನೋವನ್ನು ಸ್ವಲ್ಪವೂ ತೋರಿಸದೆ ಅದೂ ರಾತ್ರಿ ಕೂತಿದ್ದರೆಂದು ಕಾಣುತ್ತದೆ. ಈ ಅತಿಥಿ ಸತ್ಕಾರಕ್ಕೆ, ಸೌಜನ್ಯಕ್ಕೆ ಏನು ಹೇಳೋಣ. ಇವತ್ತು ಗಣೇಶರ ಜನುಮದಿನವಂತೆ ಅಂತ ಗೊತ್ತಾಗಿ ಇಷ್ಟು ಬರೆದೆ.

ಅಂಬರೀಷರ Top 25 ಚಿತ್ರಗಳು

 ಒಬ್ಬೊಬ್ಬರಿಗೆ ಒಂದೊಂದು ಕಾರಣಕ್ಕೆ ಹಿಡಿಸುತ್ತಿದ್ದ ಅಂಬರೀಷರು ನನಗೆ ಇಷ್ಟವಾದದ್ದು ಇನ್ನೊಬ್ಬರ ಕಷ್ಟಕ್ಕೆ ಕರಗುವ, ಪರೋಪಕಾರಕ್ಕೆ ನಿಂತುಬಿಡುವ 'ಮೃದೂನಿ ಕುಸುಮಾದಪಿ' ವ್ಯಕ್ತಿಯಾಗಿಯೇ. ಗೆಳೆಯರೊಬ್ಬರ ಗೆಳೆಯರು ಒಂದು ಸಲ ಒಂದು ಕ್ರಿಕೆಟ್ ಟೂರ್ನಮೆಂಟು ಮಾಡಿಸಲಿಕ್ಕೆ ಸಹಾಯ ಕೇಳಲಿಕ್ಕೆ ಅಂತ ಅಂಬಿ ಮನೆ ಬಾಗಿಲಿಗೆ ಹೋಗಿದ್ದರಂತೆ. ನಿಮಗೇನು ಕೆಲಸ ಇಲ್ಲವಾ ಅಂತ ಶುರು ಮಾಡಿ, "ಕ್ರಿಕೆಟ್ ಯಾಕ್ ಆಡಿಸ್ತೀರಾ, ಕಬಡ್ಡಿ ಆಡಸ್ರುಲಾ" ಅಂತ ಉಗಿದು, ಮನಸಾರೆ ಬಾಯ್ತುಂಬಾ ಬಯ್ದು, ಎರಡೇ ನಿಮಿಷದಲ್ಲೇ ನಿಂತ ಜಾಗದಲ್ಲೇ ಒಂದು ಲಕ್ಷ ರೂಪಾಯಿ ತೆಗೆದುಕೊಟ್ಟು ಕಳಿಸಿದರಂತೆ !

ಅವರ ಟಾಪ್ ೧೦ ಚಿತ್ರಗಳದ್ದೊಂದು ಪಟ್ಟಿ ಮಾಡೋಣ ಅಂತ ಗಂಧದಗುಡಿ ಫೋರಮ್ಮಿನ ಗೆಳೆಯರ ವಾಟ್ಸಪ್ಪ್ ಗ್ರೂಪಿನಲ್ಲಿ ಕೇಳಿದಾಗ ಹರಿದು ಬಂದ ಹೆಸರುಗಳಿಂದ ಮಾಡಿದ ಟಾಪ್ ೨೫ ಪಟ್ಟಿ (in no particular order):
ಅಂತ
ಆಹುತಿ
ಚಕ್ರವ್ಯೂಹ
ಪಡುವಾರಹಳ್ಳಿ ಪಾಂಡವರು
ಒಲವಿನ ಉಡುಗೊರೆ
ಏಳು ಸುತ್ತಿನ ಕೋಟೆ
ಹೃದಯ ಹಾಡಿತು
ಗಂಡುಭೇರುಂಡ
ಆಪರೇಷನ್ ಅಂತ
ಮಿಡಿದ ಹೃದಯಗಳು
ಮುಸುಕು
ಪೂರ್ಣಚಂದ್ರ
ಸಪ್ತಪದಿ
ಮಣ್ಣಿನ ದೋಣಿ
ಮುಂಜಾನೆಯ ಮಂಜು
ಒಡಹುಟ್ಟಿದವರು
ಕಲ್ಲರಳಿ ಹೂವಾಗಿ
ಟೋನಿ
ಮೃಗಾಲಯ

ರೀಮೇಕ್:
ನ್ಯೂ ಡೆಲ್ಲಿ
ತಿರುಗುಬಾಣ
ಪುಕ್ಸಟ್ಟೆ ಗಂಡ ಹೊಟ್ಟೆತುಂಬ ಉಂಡ

ಪೋಷಕ ಪಾತ್ರಗಳು :
ಮಸಣದ ಹೂವು
ರಂಗನಾಯಕಿ
ದೊಡ್ಮನೆ ಹುಡುಗ

ಬೋನಸ್ ಓದಿಗೆ :
ಉದಯ ಮರಕಿಣಿಯವರು ಹಿಂದೊಮ್ಮೆ ಕಟ್ಟಿಕೊಟ್ಟಿದ್ದ ವ್ಯಕ್ತಿತ್ತ್ವದ ಚಿತ್ರ :
https://www.chitraloka.com/uma-col…/12051-uma-column-67.html

ದಿಲ್ದಾರ್ ವ್ಯಕ್ತಿತ್ವದ ಒಂದೆರಡು ಕಥೆಗಳು ಇಲ್ಲಿ :
https://www.chitraloka.com/news/19021-ambi-the-kaliyugadha-karna.html

ಮರ್ಯಾದೆ ತೆಗೆಯುವ ಕಲೆಯ ಬಗ್ಗೆ ಮತ್ತಷ್ಟು


ಸಿನೆಮಾಗಳಲ್ಲಿ 'ಡಿಲೀಟೆಡ್ ಸೀನು'ಗಳನ್ನು ಆಮೇಲೆ ಡಿವಿಡಿಯಲ್ಲೋ ಯುಟ್ಯೂಬಿನಲ್ಲೋ ಹಾಕುವುದುಂಟು. ಹಾಗೆಯೇ, ನಾಳಿದ್ದು ಬರಲಿರುವ ನನ್ನ ಪುಸ್ತಕದಲ್ಲಿರುವ "ಮರ್ಯಾದೆ ತೆಗೆಯುವ ಕಲೆ" ಎಂಬ ಲೇಖನದಲ್ಲಿ ಸೇರದೇ ಉಳಿದುಕೊಂಡ, ಕೆಲವು ಮಜಾ ಕೊಡುವ, ಚಾಕಚಕ್ಯತೆ ಮೆರೆಯುವ ಅವಮಾನಗಳು:

He hasn't an enemy in the world, and none of his friends like him - Wilde on Shaw

What you lack in intelligence, you more than make up for in stupidity

I don't know what makes you so stupid, but whatever it is, it's really working

If he fell into the Thames, that would be misfortune; if someone pulled him out, that would be a calamity

Look, everyone has the right to be stupid, but you are abusing the privilege

Oh my god, look at you. Was anyone else hurt in the accident?

He is able to turn an unplotted, unworkable manuscript into an unplotted and unworkable manuscript with a lot of sex

ಅವರು: ನಾನು ಯಾಕೋ ಮೊದಲು ಬರೀತಾ ಇದ್ದ ಹಾಗೆ ಈಚೆಗೆ ಬರೀತಾ ಇಲ್ಲ
ಇವರು: ನೀವು ಮೊದಲಿನ ಹಾಗೇ ಬರೀತಾ ಇದೀರಾ ಬಿಡಿ, ನಿಮ್ಮ ಟೇಸ್ಟು ಸುಧಾರಿಸಿದೆ ಅಷ್ಟೇ.

ಚೆನ್ನಾಗಿ ಬರೆಯಲಿಕ್ಕೆ 3 ನಿಯಮಗಳಿವೆ. ಮೊದಲನೆಯ ನಿಯಮ: ಆರ್ಥರ್ ಪಿನೆರೋ ಜೋನ್ಸರಂತೆ ಬರೆಯಬಾರದು. 2ನೇ ಮತ್ತು ಮೂರನೇ ನಿಯಮವೂ ಅದೇ

Her virtue was that she said what she thought, her vice that what she thought didn't amount to much

Actress- I enjoyed reading your book. Who wrote it for you?
Ilka Chase - Darling, I am glad that you liked it. Who read it to you?

When I am right, I get angry, Churchill gets angry when he is wrong. We are angry at each other much of the time

Congressman: I have nothing to say, young man.
Heywould Broun: I know that. Now shall we get on with the interview?

I can still remember the first time I ever heard Hubert Humphrey speak. He was in the 2nd hour of a 5 minute talk

He uses statistics like a drunk uses lamp-posts, more for support than illumination

This wasn't just plain terrible, this was fancy terrible, this was terrible with raisins in it

I’ve just learned about his illness. Let’s hope it’s nothing trivial.

If Kinnock wins today will the last person to leave Britain please turn out the lights - The Sun

Drew Barrymore sings so badly, deaf people refuse to watch her lips move

Who can forget Mel Gibson in Hamlet? Though many have tried

He's never going to be a great player on grass, the only time he comes to the net is to shake your hand - Goran Ivanisevic on Ivan Lendl

The kid is the greatest proof of reincarnation. Nobody could be that stupid in one lifetime

Greg Thomas(after Viv Richards swings and misses)- It's red, round and weighs about 5 ounces, in case u were wondering.
Viv Richards(after smashing a 6)- Greg, you know what it looks like. Now go and find it

A discussion between 3 Gulag prisoners: "So, comrade, what have you done to be here?" "Well, I came late to work, so they accused me of sabotage". "And you, comrade, what did you do?" "Well,I came early to work, so they accused me of industrial espionage. What about you,comrade?" "Well, I came to work on time,so they accused me of buying my watch in the West"

ರವಿ ಬೆಳಗೆರೆಯವರ ಅಣಕ

ನಮ್ಮ ಕಾರ್ಯಕ್ರಮ ಮುಂದೆ ಹೋದದ್ದನ್ನು ಹೇಳಿದ್ದು

ಕಳೆದ ವಾರ ನಡೆಯಬೇಕಾಗಿದ್ದ ಪುಸ್ತಕಗಳ ಲೋಕಾರ್ಪಣೆ ಮುಂದಕ್ಕೆ ಹೋದದ್ದು ನಿಮಗೆ ಗೊತ್ತೇ ಇದೆ. ಆ ಕಾರ್ಯಕ್ರಮವೀಗ ಡಿಸೆಂಬರ್ 1, 2018ರ ಶನಿವಾರ ಸಂಜೆ 4 ಗಂಟೆಗೆ ಆಗಲಿದೆ. ಹಿಂದೊಮ್ಮೆ ಬೇಂದ್ರೆ,ಅಡಿಗ,ಯೋಗರಾಜ ಭಟ್ಟರ ಪದ್ಯಗಳ ಅಣಕ ಮಾಡಿದ್ದು, ಇಂಗ್ಲೀಷು ಸಾಲುಗಳನ್ನು ಹಳಗನ್ನಡದಲ್ಲಿ ಹೇಳಿದ್ದು ಎಲ್ಲ ನಿಮಗೆ ನೆನಪಿರಬಹುದು. ಈಗ ಮತ್ತೊಂದು. ರವಿ ಬೆಳಗೆರೆಯವರು ತನ್ನದೇ ಶೈಲಿಯಲ್ಲಿ ಈ ಕರೆಯೋಲೆಯನ್ನು ಬರೆದರೆ ಹೇಗೆ ಬರೆಯಬಹುದಿತ್ತು ಎಂಬ ಕಲ್ಪನೆ:

ಎಂದಿನಂತೆ ಓದುಗ ದೊರೆಗೆ ನಮಸ್ಕಾರಗಳು. ಅಸಲಿಗೆ ನಾನು ಪುಸ್ತಕಕ್ಕೆ ಅಂತ ಬರೆದವನೇ ಅಲ್ಲ. ಯಾಕೋ ಹಟಕ್ಕೆ ಬಿದ್ದವನಂತೆ ಅಜಮಾಸು ಮೂರು ವರ್ಷ ಬರೆಯುತ್ತ ಹೋದೆ, ನೀವು ಓದುತ್ತ ಹೋದಿರಿ. ತುಂಬ positive ಆದ ಕೆಲವು ಕಾಮೆಂಟ್ ಗಳಿದ್ದವು,ಇದನ್ನೆಲ್ಲಾ ಇಷ್ಟುದ್ದ ಫೇಸ್‌ಬುಕ್ಕಿನಲ್ಯಾಕೆ ಬರೀತೀರಿ ಎಂಬಂಥ ಡರಾವುಗಳೇನೂ ಇರಲಿಲ್ಲ. Fine. I am damn happy. ಒಂದಷ್ಟು ಹೊಸ ಸರಕನ್ನೂ ಪಟ್ಟಾಗಿ ಕೂತು ಹೊಂಚಿದೆ. "ನಾನು ಬರೀತೀನಾ? ಇದೆಲ್ಲಾ ಆಗುತ್ತಾ? ಅಷ್ಟಕ್ಕೂ ಈ ಮಹಾನಗರವೆಂಬ ಮಾಯಾಂಗನೆಯ ಸ್ಪೀಡು ನಿಮ್ಮನ್ನ ಓದಲು ಬಿಡುತ್ತದಾ?" ಹಾಗಂತ ಕೇಳಿಕೊಂಡದ್ದಿತ್ತು. ಈಗ ನೋಡಿದರೆ ಬರೋಬ್ಬರಿ ೧೨೫ ಪುಟಗಳಾಗಿವೆ ! ಹೆಗ್ಗಳಿಕೆ ನನ್ನದಾ? ಅದು ನಿಮ್ಮದಾ? With all sincerity, ನಿಜಕ್ಕೂ ತುಂಬ ಪ್ರಾಮಾಣಿಕವಾಗಿ ಹೇಳುತ್ತಿದ್ದೇನೆ, ಇಂಥ ಸಂದರ್ಭಗಳಲ್ಲಿ ತುಂಬ ಭಾವುಕನಾಗುತ್ತೇನೆ, ಮುಕೇಶ್‌ನ ಹಾಡೊಂದು ನೆನಪಾಗುತ್ತಿದೆ. ಬೆನ್ನು ಬಾಗಿಸಿ ಕೂತು ಬರೆದು, ಅದರ ಕರಡು ನೋಡಿ, ಪ್ರಿಂಟು ಮಾಡಿಸಿ, ಮೊದಲ ಪ್ರತಿ ಕೈಗೆ ಬಂದಾಗ ಅದೊಂಥರಾ ಖುಷಿ. ಮನಸ್ಸು ಜೋಯಿಡಾದ ಕಾಡಲ್ಲಿ ಸುಳಿಯುವ ಜಿಂಕೆ ! ಸಾವನ್ ಕಾ ಮಹೀನಾ ಪವನ್ ಕರೇ ಶೋರ್ ! ದಿಲ್ಲು ಫುಲ್ ಖುಷ್ ! ಆಯ್ತಲ್ಲ, ಇನ್ನೇನು? I am free now- ಎಂಬ ಭಾವ. ನಿಮಗೆ ಹೇಳಿಕೊಳ್ಳಬೇಕೆನ್ನಿಸಿತು. ನನ್ನ ಶ್ರದ್ಧೆ ಯಾವತ್ತೂ, ಕೊಂಚ ಮಾತ್ರವೂ ಕಡಮೆಯಾಗುವುದಿಲ್ಲ. ಪುಸ್ತಕ ನೋಡಿದರೆ ಅಂಕಿತ ಪ್ರಕಾಶನದವರ ಅಚ್ಚುಕಟ್ಟು-ಮಟ್ಟಸ ಎಂಥದೆಂಬುದು ಗೊತ್ತಾಗಿ ಹೋಗುತ್ತದೆ. ಜೋಗಿ ಅವರ ಸೊಗಸಾದ ಮುನ್ನುಡಿಯಿದೆ. Once again, I am blessed.
ನಾಳಿದ್ದು ಸಂಜೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರಿನ ಸಭಾಂಗಣದಲ್ಲಿ ಸಿಗೋಣ. ನಾನು ಕರೆಯದೆ ಇರ್ತೇನಾ, ನೀವು ಬರದೇ ಇರ್ತೀರಾ ?

ನನ್ನ ಮೊದಲ ಪುಸ್ತಕ

ಕಾರ್ಯಕ್ರಮಕ್ಕೆ ಬರೆದ ಕರೆಯೋಲೆ :
ನಾಳೆ ಬಸವನಗುಡಿಯ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನ ವಾಡಿಯಾ ಸಭಾಂಗಣದಲ್ಲಿ ನಮ್ಮ ಪುಸ್ತಕಗಳ ಲೋಕಾರ್ಪಣೆ. ಸಮಯ : ಬೆಳಗ್ಗೆ 10ರಿಂದ.

ಇದನ್ನು ಓದುತ್ತಿರುವುದರಿಂದ ನಿಮಗೆ ಓದುವ ಅಭ್ಯಾಸ ಇದ್ದೀತೆಂದು ತಿಳಿದು ನಿಮಗೀ ಅಕ್ಕರೆಯ ಕರೆಯೋಲೆ. ನಾನು ಬರೆದಿರುವ ವೈಚಾರಿಕ, ಅಲ್ಲಲ್ಲ ಲಲಿತ, ಐ ಮೀನ್ ಲಲಿತ ವೈಚಾರಿಕ ಅಲ್ಲಲ್ಲ ವೈಚಾರಿಕ ಲಲಿತ ಪ್ರಬಂಧಗಳು ಪುಸ್ತಕ ರೂಪದಲ್ಲಿ ಜನ್ಮ ತಳೆಯಲಿವೆ. ಈ ಮಗುವಿನ ನಾಮಕಾರಣಕ್ಕೆ ನೀವು ಬಂದು, ಮುಂದಿನ ದಿನಗಳಲ್ಲಿ ಮಗುವನ್ನು ಎತ್ತಿ ಆಡಿಸಿ, ಮಗು ಉಶಾರುಂಟಾ, ಚಂದ ಉಂಟಾ, ತಂಟೆಕೋರನಾ, ಅದರ ಕಿವಿ ಹಿಂಡಬೇಕಾ ಅಂತೆಲ್ಲ ಹೇಳಿದರೆ ನನ್ನ ಸಂಭ್ರಮ ದುಪ್ಪಟ್ಟಾಗುತ್ತದೆ.

ಲೋಕಾರ್ಪಣೆಯಾಗಲಿರುವ ಪುಸ್ತಕಗಳು :
ಬಾಗಿಲು ತೆರೆಯೇ ಸೇಸಮ್ಮ / ಶರತ್ ಭಟ್ ಸೇರಾಜೆಯ ಲೇಖನಗಳ ಸಂಗ್ರಹ
ಸಲಾಂ ಬೆಂಗಳೂರು / ಜೋಗಿ ಅವರ ಕಾದಂಬರಿ
ನವಿಲು ಕೊಂದ ಹುಡುಗ /ಸಚಿನ್ ತೀರ್ಥಹಳ್ಳಿ ಅವರ ಕಥಾ ಸಂಕಲನ

ಎಲ್ಲರೂ ಬನ್ನಿ, ಹರಸಿ.

----------------------------------------------------------------------------------
ಕಾರ್ಯಕ್ರಮ ನಾಳಿದ್ದು ಆದಿತ್ಯವಾರ, ವಂದನಾರ್ಪಣೆಯ ಕಾರ್ಯಕ್ರಮ ಇಲ್ಲೇ, ಇವತ್ತಿಂದಲೇ !

ವಂದನಾರ್ಪಣೆ ಭಾಗ ೧
==============================
ಬೆನ್ನುಡಿಗೆ ಯಾರಾದೀತು ಅಂತ ಭೂಮಿ ಅಡಿಮೇಲು ಮಾಡುತ್ತಿದ್ದಾಗ, ಇಂಗ್ಲೀಷು ಪುಸ್ತಕಗಳಿಗೆ ಇರುವಂತಹಾ ಕಣ್ಣು ಸೆಳೆಯುವ ಬ್ಲರ್ಬ್ ಯಾಕಿರಬಾರದು ಅಂತ ಆಸೆಗಣ್ಣುಗಳಿಂದ ಹುಡುಕಿದಾಗ, ಒದಗಿ ಬಂದ ಹೆಸರು ಗಣೇಶ್ ಭಟ್ ನೆಲೆಮಾಂವ್ ಅವರದ್ದು. Ganesh Bhat ವೈಯಕ್ತಿಕವಾಗಿ ನನಗೆ ಪರಿಚಯ ಇರುವವರಲ್ಲ, ಮತ್ತು ಬಹುಶಃ ನನಗಿಂತ ಕಿರಿಯರು, ಆದರೂ ಸಣ್ಣವಯಸ್ಸಿನಲ್ಲಿಯೇ ಸಾಕಷ್ಟು non-fiction ಪುಸ್ತಕಗಳ ಮೇಲೆ ಕಣ್ಣೋಡಿಸಿರುವ expert reader. ಅರ್ಜೆಂಟಿಗೆ ಬೇಕಾದರೆ ನನಗೋ, ನಮ್ಮ ಪ್ರಶಾಂತ ಭಟ್ಟರಿಗೋ, ಗುರುರಾಜ ಕೋಡ್ಕಣಿಯವರಿಗೋ ನಾವು ಓದಿರದ non-fiction ಪುಸ್ತಕವೊಂದರ ಹೆಸರು ಹೇಳಿ ಬಿಡಬಲ್ಲವರು. ಇನ್ನೂ ಹೇಳಬೇಕೆಂದರೆ ಗಣಿತ, ವಿಜ್ಞಾನ, ತಂತ್ರಜ್ಞಾನ, ಭಾಷೆಯಂತಹಾ ವಿಷಯಗಳಲ್ಲಿ ಬಂದಿರುವ ಬೇರೆ ಬರೆಹಗಳನ್ನು ಓದಿ, ಅವಕ್ಕಿಂತ ನನ್ನದು ಹೇಗೆ ಭಿನ್ನ ಅಂತ ಗ್ರಹಿಸಬಲ್ಲವರು. ನನ್ನನ್ನು ಮುಖತಃ ಕಂಡವರಲ್ಲವಾದರೂ ನನ್ನ ಬರೆಹಗಳ ಅಂತರಂಗವನ್ನು ಆಪ್ತಮಿತ್ರನಂತೆ ತಿಳಿದವರು.

ಕೇಳಿದಾಗ ಸಂಕೋಚದಿಂದಲೂ, ಸಂತೋಷದಿಂದಲೂ ಒಪ್ಪಿದರು.
"ನಮ್ಮ ನಡುವಿನ ಸಾಕ್ಷಿಪ್ರಜ್ಞೆಯಾದ ಶರತ್ ಸೇರಾಜೆಯವರು ಒಂದು ಬಂಧದ ಚೌಕಟ್ಟಿನೊಳಗೆ ಸೂಕ್ಷ್ಮ ಸಂವೇದನೆಯ ಆಶಯವು ಗ್ರಹೀತವಾಗುವುದರ, ಅರ್ಥಸ್ಫೋಟದ ಅನುಸಂಧಾನದ ಉದ್ಭೋದವಾಗಿ ತನ್ನ ಹಳವಂಡದಲ್ಲಿ ತಾನೇ ಹರಳುಗಟ್ಟಿ.... " ಅಂತೆಲ್ಲ ಬರೆದರೆ ಅಂಡರ್ವರ್ಲ್ಡ್ ಡಾನುಗಳನ್ನು ಕರೆಸಿಯೇನು ಅಂತ ಹೆದರಿಸಿದೆ. ನನ್ನ ಗ್ರಹಿಕೆ ಚೂರೂ ತಪ್ಪಾಗಲಿಲ್ಲ ಎಂಬಂತೆ ಎರಡು ಒಂದಕ್ಕಿಂತ ಒಂದು catchyಯಾದ ಬೆನ್ನುಡಿಗಳನ್ನು ಬರೆದುಕೊಟ್ಟು, ಒಂದನ್ನು ಆಯಬೇಕಾದ ಮತ್ತು ಉದ್ದ ಹೆಚ್ಚಾದ್ದರಿಂದ ಸ್ವಲ್ಪ ಅಲ್ಲಿಲ್ಲಿ ಕತ್ತರಿಸಬೇಕಾದ ಇಕ್ಕಟ್ಟಿಗೆ ನನ್ನನ್ನು ಸಿಕ್ಕಿಸಿ, "ಹೆಂಗೆ" ಅಂತ ಕೇಳಿದರು. ಅವರ ಆಕರ್ಷಕವಾದ ಬೆನ್ನುಡಿಯಿಂದ ಪುಸ್ತಕದ ಅಂದ ಹೆಚ್ಚಿದೆ ಅಂದರೆ ಹೆಚ್ಚಾಗಲಾರದು.
----------------------------------------------------------------------------------
"ಅಂಕಿತ ಪ್ರತಿಭೆ" ಮಾಲಿಕೆಯ ಸಂಪಾದಕರಾಗಿ, ಆ ಮಾಲಿಕೆಗೆ ನನ್ನ ಲೇಖನಗಳನ್ನು ಆಯ್ದು, ಪ್ರತಿಷ್ಠಿತ ಸಂಸ್ಥೆಯಾದ ಅಂಕಿತ ಪ್ರಕಾಶನದಿಂದಲೇ ಈ ಪುಸ್ತಕ ತರುತ್ತಿರುವ, ಇಷ್ಟೊಳ್ಳೆ ಮುನ್ನುಡಿ ಕೊಟ್ಟು, ಒಳ್ಳೆ vocabulary ಉಂಟೆಂದು ಬೀಗುತ್ತಿದ್ದ ನನ್ನನ್ನು ಯಾವ ಶಬ್ದ ಹಾಕಿ ಥ್ಯಾಂಕ್ಸ್ ಹೇಳುವುದೆಂದು ಗೊತ್ತಾಗದೆ ಪೇಚಾಡಿಸಿದ, ತನ್ನ "ಸಲಾಂ ಬೆಂಗಳೂರು" ಕಾದಂಬರಿ ತರುತ್ತಿರುವ ಈ ಹೊತ್ತಿನಲ್ಲಿ, ಬೆಂಗಳೂರರಿನಿಂದಲೇ ಜೋಗಿಯವರಿಗೊಂದು ಸಲಾಂ.

ಒಂದೊಳ್ಳೆಯ ಮುನ್ನುಡಿ ಬರೆಯುವುದು ಕಷ್ಟದ ಕೆಲಸ. ಪ್ರಸಿದ್ಧರ ಮುನ್ನುಡಿಯ ತೊಂದರೆ ಏನೆಂದರೆ, ಎಷ್ಟೋ ಸಲ, ಎಂಟೋ ಹತ್ತೋ ಪುಟಗಳನ್ನೋದಿ ಕಾಟಾಚಾರಕ್ಕೆ ಏನೋ ಒಂದು generic ಮುನ್ನುಡಿ ಬರೆದಿದ್ದಾರೆ ಅನ್ನಿಸುತ್ತದೆ. ಅದು ಅವರ ತಪ್ಪೂ ಅಲ್ಲ, ಅವರು ಮೊದಲೇ ಬಿಡುವಿಲ್ಲದವರು. ಹತ್ತಿಪ್ಪತ್ತು ಜನ ಒಟ್ಟೊಟ್ಟಿಗೆ ಮುನ್ನುಡಿ ಕೇಳಿದರೆ ಅವರಾದರೂ ಏನು ಮಾಡಿಯಾರು. ಇದಕ್ಕೆ ಒಂದು ಒಳ್ಳೆಯ exception ಆಗಿ ಜೋಗಿಯವರ ಮುನ್ನುಡಿಯಿದೆ. ಹೀಗೂ ಬರೆಯಬಹುದಲ್ಲ ಅಂತ ಅವರು ಬರೆದದ್ದನ್ನು ನೋಡಿದ ಮೇಲೆ ಅನ್ನಿಸುವಂತೆ ಜಾನಕಿ ಕಾಲಂ ಇರುತ್ತಿತ್ತು , ಮುನ್ನುಡಿಯೂ ಹಾಗೇ ಇದೆ. ಒಂದು ಕ್ಷಣ ನನ್ನ ಪುಸ್ತಕದ ಬಗ್ಗೆ ಬರೆದದ್ದು ಅನ್ನುವುದನ್ನು ಮರೆತು time ಟ್ರಾವೆಲ್ ಮಾಡಿ, ಆ ದಿನಗಳಲ್ಲಿ ಜಾನಕಿ ಕಾಲಂ ಓದುತ್ತಿದಂತೆಯೇ ರಪಕ್ಕನೆ ಓದಿದೆ. ಕಿರಿಯನೆಂದು ಕಡೆಗಣಿಸದೆ ಅಕ್ಕರಾಸ್ಥೆಯಿಂದ ಮುನ್ನುಡಿ ಬರೆದಿದ್ದಾರೆ.

"ಸಹೃದಯತೆ ಎಂದರೆ ಬರೆದವನ ಮೇಲೆ ಪಕ್ಷಪಾತವಲ್ಲ; ಕವಿಹೃದಯವನ್ನು, ಎಂದರೆ ಮಾತಿನಲ್ಲಿ ವ್ಯಕ್ತವಾದ ಅಥವಾ ಆಗಬೇಕೆಂದು ಅವನ ಮನಸ್ಸಿನಲ್ಲಿದ್ದ ಭಾವಸ್ವರೂಪವನ್ನು ತಿಳಿಯುವ ಪ್ರತಿಭಾಶಕ್ತಿ . ಇದರೊಂದಿಗೆ ಬಹುಜ್ಞತೆ ಸೇರಿದ್ದರೆ, ಆ ವಿಮರ್ಶಕನೇ ವಿಮರ್ಶಕನು"--> ಸೇಡಿಯಾಪು ಕೃಷ್ಣ ಭಟ್ಟ

ಈ ರೀತಿ, ಸೇಡಿಯಾಪು ಅಜ್ಜ ಹೇಳಿರುವ "ಸಹೃದಯ" ಎಂಬ ಶಬ್ದದ ಸರಿಯಾದ ಅರ್ಥದಲ್ಲಿ ಸಹೃದಯಿ ವಿಮರ್ಶೆಗಳಾಗಿ ಬೆನ್ನುಡಿಯನ್ನೂ ಮುನ್ನುಡಿಯನ್ನೂ ಬರೆದ ಇಬ್ಬರಿಗೂ ಫೇಸ್ಬುಕ್ಕಿನ ಗುರುಹಿರಿಯರು, ಲೈಕಾಧಿಪತಿಗಳು, ಶೇರ್ ಖಾನ್ ಗಳು, ಕಾಮೆಂಟು ಪ್ರವೀಣರು ಮುಂತಾದ ಹತ್ತು ಸಮಸ್ತರ ಸಮಕ್ಷದಲ್ಲಿ ವಂದನೆಯನ್ನು ಅರ್ಪಿಸಿ ಮೊದಲ ಭಾಗವನ್ನು ಮುಗಿಸುತ್ತೇನೆ. 

ಸ್ವಾಮಿ ಜಗದಾತ್ಮಾನಂದ ಇನ್ನಿಲ್ಲ

ನಾನು ಓದಿದ ಮೊತ್ತಮೊದಲ ಸೆಲ್ಫ್ ಹೆಲ್ಪ್ ಪುಸ್ತಕ ಅಂದರೆ ಸ್ವಾಮಿ ಜಗದಾತ್ಮಾನಂದರ 'ಬದುಕಲು ಕಲಿಯಿರಿ' ಅಥವಾ Dale Carnegieಯ ಯಾವುದಾದರೊಂದು ಪುಸ್ತಕ ಇರಬೇಕು. ಡೇಲ್ ಕಾರ್ನೆಗಿಯನ್ನು ಓದು ಅಂತ ಅಪ್ಪ ಹೇಳಿದ್ದರಿಂದ How to Win Friends & Influence People, How to Stop Worrying and Start Living ಮತ್ತು How to Develop Self-Confidence and Influence People by Public Speakingಗಳನ್ನು ಓದಿ ಮೆಚ್ಚಿದ್ದೆ. ಆಮೇಲೆ Norman Vincent Peale ಸಂಪಾದಿಸಿದ The Power of Positive Thinking ಕೈಗೆ ಬಂದಿತ್ತು , Robert Schuller ಅವರ Tough Times Never Last, but Tough People Do! ಆಕರ್ಷಕ ಶೀರ್ಷಿಕೆಯಿಂದ ಮನಸೆಳೆದಿತ್ತು. ಅದಾದ ಮೇಲೆ ಯಂಡಮೂರಿಯ ವಿಚಾರಗಳಲ್ಲಿ ಹೊಸತನವಿದೆ ಅನ್ನಿಸಿತ್ತು, ರವಿ ಬೆಳಗೆರೆಯ ಬಾಟಮ್ ಐಟಂ ವಿಶಿಷ್ಟ ನಿರೂಪಣೆಯಿಂದ, ಪಕ್ಕಾ ಪ್ರಾಕ್ಟಿಕಲ್ ಆದ, ನಿತ್ಯಜೀವನಕ್ಕೆ ಹತ್ತಿರದ ದೃಷ್ಟಿಕೋಣದಿಂದ ಓದಿಸಿಕೊಂಡು ಹೋಗಿತ್ತು.

ಮುಂದಿನ ಹಂತದಲ್ಲಿ ಹಿಂದೆ ಓದಿದ್ದನ್ನು ಪ್ರಶ್ನಿಸುವ The Antidote: Happiness for People Who Can't Stand Positive Thinking ಅನ್ನು ಓದಿದ್ದೆ. Bright-sided: How Positive Thinking Is Undermining America ಅನ್ನು ಓದಿದೆನೋ ಇಲ್ಲವೋ ನೆನೆಪಾಗುತ್ತಿಲ್ಲ. Rich Dad, Poor Dad ಅಷ್ಟೇನೂ ಹಿಡಿಸಿರಲಿಲ್ಲ. ವಿಜ್ಞಾನ, ಸಂಶೋಧನೆ ಮುಂತಾದವನ್ನೆಲ್ಲ ಇಟ್ಟುಕೊಂಡು ಬರೆದ ರಿಚರ್ಡ್ ವೈಸ್ಮ್ಯಾನ್ ಅವರ :59 Seconds: think a little change a lot ಇಷ್ಟವಾಗಿತ್ತು. Influence: The Psychology of Persuasion by Robert Cialdini ಚೆನ್ನಾಗಿತ್ತು, Randy Pausch ಮರಣಶಯ್ಯೆಯಲ್ಲಿದ್ದುಕೊಂಡು ಕೊಟ್ಟ The Last Lecture ಎಂಬ ಬಿಸಿದೋಸೆಯನ್ನು ಚಪ್ಪರಿಸಿದ್ದೆ, Thinking, Fast and Slow By Daniel Kahneman ಒಂದು ಕಣ್ಣುತೆರೆಸುವ ಪುಸ್ತಕ ಅನಿಸಿತ್ತು,Outliers The Story of Success by Malcolm Gladwell ಅನ್ನು ಹೇಗೂ ಓದಿದ್ದಾಗಿತ್ತು. Stumbling on Happiness ಅಂತೂ ನನ್ನ ಅಚ್ಚುಮೆಚ್ಚಿನ ಪುಸ್ತಕ ಅಂತ ಹಿಂದೆಯೇ ಬರೆದಿದ್ದೆ.

ಇದೆಲ್ಲ ಏನೇ ಇದ್ದರೂ ಜಗದಾತ್ಮಾನಂದರ "ಬದುಕಲು ಕಲಿಯಿರಿ"ಗೆ ನಾಸ್ಟಾಲ್ಜಿಯಾದ ಕಾರಣದಿಂದಾದರೂ ಅಗ್ರಪೂಜೆಯನ್ನು ಮನಸ್ಸು ಸಲ್ಲಿಸುತ್ತಿದೆ, ಓದಿ ರುಚಿಸಿ, ಹಲವರ ಹತ್ತಿರ "ಇದನ್ನೋದಿ" ಅಂತ ಹೇಳಿದ ಪುಸ್ತಕಗಳಲ್ಲಿ ಅದೂ ಒಂದು.

ಉಳಿದದ್ದು ಸೂರ್ಯಪ್ರಕಾಶ ಪಂಡಿತರ ವಾಲಿನಿಂದ :
ಬದುಕನ್ನು ಕಲಿಸಿದ ಸ್ವಾಮೀಜಿ
==============================
'ಬದುಕಲು ಕಲಿಯಿರಿ' ಸಾವಿರಾರು ಜನರ‌ ಬದುಕಿಗೆ ಊರುಗೋಲಾದದ್ದು ಮಾತ್ರವಲ್ಲ, ಅದು ಕನ್ನಡದಲ್ಲಿ ‌ವ್ಯಕ್ತಿತ್ವನಿರ್ಮಾಣವಿಷಯವನ್ನು ಕುರಿತು ಪುಸ್ತಕರಚನೆಗೂ‌ ಪ್ರಕಾಶನಕ್ಕೂ ನಾಂದಿ ಹಾಡಿತೆನ್ನಬಹುದು. ಹಲವರ ಪಾಲಿಗೆ ಅದು ಉಪನಯನ, ಹುಟ್ಟುಹಬ್ಬದಂಥ ಸಂದರ್ಭಗಳಿಗೆ ಒದಗುವ ಸಾರ್ಥಕ ಗಿಫ್ಟ್. ಜೀವನೋತ್ಸಾಹಕ್ಕೆ ಸ್ವತಃ ಸ್ವಾಮಿಜಿಯವರೇ ಮೂರ್ತರೂಪವಾಗಿದ್ದರು. ಅನಾರೋಗ್ಯದಲ್ಲೂ ಅವರು ಕುಗ್ಗಿ ಮಾತನಾಡುತ್ತಿರಲಿಲ್ಲ. ಸುಮಾರು 7-8 ವರ್ಷಗಳ ಹಿಂದೆ ಅವರನ್ನು ದೂರದರ್ಶನಕ್ಕಾಗಿ ಸಂದರ್ಶನ ಮಾಡುವ ಅವಕಾಶ ಒದಗಿತ್ತು. ಅವರನ್ನು ಕಂಡೊಡನೆ 'ಹೇಗಿದ್ದೀರಿ ಸ್ವಾಮೀಜಿ?' ಎಂದೆ. 'ಎಂಬತ್ತು ವರ್ಷದಲ್ಲಿ ಇರಬಹುದಾದ ಸ್ಥಿತಿಗಿಂತಲೂ ಚೆನ್ನಾಗಿರುವೆ!' ಎಂದರು. ರಂಗನಾಥ ಶರ್ಮಾಜಿ ಅವರ ಬಗ್ಗೆ ವಿಚಾರಿಸಿದರು; ಶರ್ಮಾಜಿ ಅವರಿಂದ ರಘುವಂಶ ಮುಂತಾದ ಸಂಸ್ಕೃತಪಾಠಗಳನ್ನು ಮಾಡಿಸಿಕೊಂಡದ್ದನ್ನು ನೆನಪಿಸಿಕೊಂಡರು....
ಪೂಜ್ಯ ಸ್ವಾಮಿ ಜಗದಾತ್ಮಾನಂದಜೀ ಅವರಿಗೆ ಪ್ರಣಾಮಗಳು...

=============================

News and Content

Has the entire News paper industry turned into one big Times of India? I was clicking on Google News --> Entertainment section for last 4 days and out of 200-250+ stories posted, I didn't feel like reading even 3. Here is why - look at some samples:

-Not a dinner date or a romantic outing, here's how Alia Bhatt and Ranbir Kapoor spent time together
-Nick Jonas' phone wallpaper proves he still can't get over the first time he saw Priyanka Chopra - pic inside
-Malaika Arora captured outside rumoured boyfriend Arjun Kapoor's house
-Aishwarya Rai Bachchan looks lovely in an ivory outfit as she celebrates Diwali with family
-Amitabh Bachchan along with Jaya, Abhishek, Aishwarya, and Aaradhya performed a puja ceremony at their home.
-Sushmita Sen all set to tie the knot with Rohman Shawl?
-Deepika Padukone and Ranveer Singh extend wedding invitation to Sanjay Leela Bhansali and Farah Khan
-Shah Rukh Khan enjoys a plate of paani puri and pav bhaaji
-Sara Ali Khan steps out in chikankari kurta, pink silk dupatta post Diwali celebrations (Pics Inside)
-Happy Diwali: Taimur colour co-ordinates with Saif and we can’t stop looking!
-This is how Sonam Kapoor, Anand Ahuja celebrated their first Diwali after marriage in London. See pic
-Tiger Shroff Prefers His Cozy Dinner Date With Girlfriend Disha Patani Over Any Other Bollywood Diwali Parties
-Rohit Shetty wishes his Simmba Ranveer Singh and Meenamma Deepika Padukone on their wedding
-Kareena Kapoor Doesn't Shop for Me, Reveals Saif Ali Khan

This could mean 2 things. Either the hero worshipping Indian masses clearly don't like content or our newspapers have come to the judgement that Indians don't like content based stories. Am I the only one who likes neither?

--> Sharath Bhat Seraje

ಇಂಡೋನೇಶಿಯಾ ಮತ್ತು ಭಾರತ

ನಾನು ಆಗಾಗ ಬರೆಯುವ, "ನಿಮಗಿದು ಗೊತ್ತೇ" ಸರಣಿಯಲ್ಲಿ ಹಿಂದೊಮ್ಮೆ ಸಿಂಗಾಪುರ ಎಂಬ ಹೆಸರಿನ ಭಾರತೀಯ ಮೂಲ, ಕೊರಿಯನ್ ಭಾಷೆಯ ದ್ರಾವಿಡ ಸಂಪರ್ಕಗಳ ಬಗ್ಗೆ ಎಲ್ಲ ಬರೆದಿದ್ದೆ. ಎಷ್ಟೋ ಇಂಡೋನೇಷಿಯನ್ ಹೆಸರುಗಳೂ ಭಾರತೀಯ ಮೂಲದವು ಅಂತ ಇತ್ತೀಚಿಗೆ ಗೊತ್ತಾಯಿತು. The Raid ಮತ್ತು The Raid: Redemption ಎಂಬ ರೋಮಾಂಚಕ ಫೈಟಿಂಗ್ ಚಿತ್ರಗಳಲ್ಲಿ ನಾಯಕನ ಪಾತ್ರದ ಹೆಸರು "ರಾಮ" ಅಂತಿದ್ದದ್ದು ಸುಲಭಕ್ಕೆ ಸಿಕ್ಕಿ ಮರೆತಿತ್ತು. ಇದರ ನಾಯಕ ಪಾತ್ರ ಮಾಡಿದ Iko Uwaisನ ಪುತ್ರಿಯ ಹೆಸರು: Atreya Syahla Putri.

ಇಂಡೋನೇಶಿಯಾದ ಮೊದಲ ಅಧ್ಯಕ್ಷ, ಪ್ರಸಿದ್ಧ ನಾಯಕರ ಹೆಸರು: ಸುಕರ್ಣೋ, ಇದೊಳ್ಳೆ ಸಂಸ್ಕೃತದ 'ಸುಕರ್ಣ' ಬೆಂಗಾಲಿಗಳ ಬಾಯಿಗೆ ಸಿಕ್ಕಿದಂತಿದೆ ! ಇವರ ಪುತ್ರಿಯ ಹೆಸರು ಇನ್ನಷ್ಟು ಕುತೂಹಲ ಹುಟ್ಟಿಸುವಂತೆ, ಯಾರೋ ಸಂಸ್ಕೃತ ಪ್ರಿಯರ ಹೆಸರಿನಂತೆ ಇದೆ: ಮೇಘವತೀ ಸುಕರ್ಣೋಪುತ್ರಿ. ಈ ಮೇಘವತಿಯ ಅಮ್ಮನ ಹೆಸರು Fatmawati; ಪಕ್ಕನೆ ಪದ್ಮಾವತಿಯಂತೆ ಕೇಳುತ್ತದೆ. ಹೀಗೆ ಸಂಸ್ಕೃತ ಹೆಸರುಗಳನ್ನಿಟ್ಟುಕೊಂಡಿರುವ ಸುಕರ್ಣೋ ಕುಟುಂಬದವರು ಮುಸ್ಲಿಮರು ಅಂದರೆ ಕೆಲವರಿಗೆ ಆಶ್ಚರ್ಯವಾಗಬಹುದು.

Cinta Laura ಅಂತೊಬ್ಬಳು ಪಾಪ್ ಸಿಂಗರ್ ಇದ್ದಾಳೆ, ಇವಳು ಹಾಡುವುದನ್ನು ಕೇಳಿ ಯಾರಾದರೂ ಚಿಂತಾಕ್ರಾಂತರಾಗಿದ್ದಾರೋ ಗೊತ್ತಿಲ್ಲ. ಅಲನ್ ಬೂದಿಕುಸುಮ/ಬುದಿಕುಸುಮ ಅಂತೊಬ್ಬ ಬ್ಯಾಡ್ಮಿಂಟನ್ ಪಟು ಇದ್ದ, ಈ ಬೂದಿಕುಸುಮದಲ್ಲೂ ಇರುವುದು "ಬುದ್ಧಿ" ಮತ್ತು 'ಕುಸುಮ' ಎಂಬ ಸಂಸ್ಕೃತ ಪದಗಳೇ, ಅವನ ಹೆಂಡತಿ(ಅವಳೂ ದೊಡ್ಡ ಹೆಸರು ಮಾಡಿದ್ದ ಬ್ಯಾಡ್ಮಿಂಟನ್ ಆಟಗಾರ್ತಿ)ಯ ಹೆಸರು ಸೂಸಿ ಸುಸಾಂತಿ, ಈ ಸುಸಾಂತಿಯೂ ಸಂಸ್ಕೃತದ ಸುಶಾಂತಿಯಿಂದ ಬಂದಿರಬೇಕು. Teuku Wisnu ಅಂತೊಬ್ಬ ನಟನೂ ಇದ್ದಾನೆ. Jakarta ಎಂಬುದೂ ಸಂಸ್ಕೃತದ "ಜಯಕೃತ"ದಿಂದ ಬಂದಿದೆಯಂತೆ. ಪ್ರವಾಸಿಗರು ನುಗ್ಗುವ ಬಾಲಿ ದ್ವೀಪವೂ ಮೂಲದಲ್ಲಿ ಬಲಿ ದ್ವೀಪ ಎಂಬ ಭಾರತೀಯ ಹೆಸರೇ ಆಗಿದ್ದಿರಬೇಕು. ಹಲವು ಶತಮಾನಗಳ ಕಾಲ ಹಿಂದೂ ಮತ್ತು ಬೌದ್ಧ ದೊರೆಗಳ ಆಳಿಕೆ ಇದ್ದದ್ದರಿಂದ ಈ ಮಟ್ಟಕ್ಕೆ ಭಾರತೀಯ ಪದಗಳು ಅಲ್ಲಿ ಬಳಕೆಗೆ ಬಂದಿರಬೇಕು. ರಾಮಾಯಣ ಮಹಾಭಾರತಗಳೂ ಅಲ್ಲಿ ಸಿಕ್ಕಾಬಟ್ಟೆ ಪ್ರಖ್ಯಾತ.

"ರಾಮನಿಗೆ ಸೀತೆ ಏನಾಗಬೇಕು?" ಎಂಬ ಹೆಸರಿನ ಪುಸ್ತಕವೊಂದಿದೆ (ತೆಲುಗು ಮೂಲದ್ದು). "ರಾಮನಿಗೆ ಸೀತೆ ಏನಾಗಬೇಕು?" ಎಂಬ ಪ್ರಶ್ನೆ ಪೆದ್ದು ಪ್ರಶ್ನೆಯಲ್ಲ, ಈ ಪ್ರಶ್ನೆಯಲ್ಲಿ ಎಷ್ಟೋ ವಿಚಿತ್ರ ವಿಷಯಗಳು, ಚರ್ಚಿಸಬಹುದಾದಂಥ ಅಂಶಗಳು ಅಡಗಿವೆ ಎಂದು ಪ್ರತಿಪಾದಿಸುವ ಪುಸ್ತಕ ಅದು. ಶ್ರೀಲಂಕಾ, ಟಿಬೆಟ್, ಕಾಂಬೋಡಿಯಾ, ಥಾಯ್ಲೆಂಡ್, ಇಂಡೋನೇಷಿಯಾ, ಮಲೇಷಿಯಾ, ಫಿಲಿಫೈನ್ಸ್ ಇಲ್ಲೆಲ್ಲ ಒಂದೊಂದು ಕಡೆ ಒಂದೊಂದು ತರದಲ್ಲಿ ರಾಮಕಥೆಯು ಚಾಲ್ತಿಯಲ್ಲಿದೆ/ಇತ್ತು ಎಂಬುದರ ಚರ್ಚೆ ಅದರಲ್ಲಿದೆ. (ಹನೂಮಂತನನ್ನು ಹೋಲುವ ಪಾತ್ರವೊಂದು ಚೀನೀ ಪುರಾಣಗಳಲ್ಲಿ ಇರುವುದರ ಪ್ರಸ್ತಾವವನ್ನೂ ಹಿಂದೊಮ್ಮೆ ಮಾಡಿದ್ದೆ). ಎಕೆ ರಾಮಾನುಜನ್ನರು Three Hundred Ramayanas ಅನ್ನುವ ಪ್ರಬಂಧ ಬರೆದದ್ದು ಕೆಲವರಿಗೆ ನೆನಪಿರಬಹುದು. "ತಿಣುಕಿದನು ಫಣಿರಾಯ ರಾಮಾಯಣದ ಕವಿಗಳ ಭಾರದಲಿ ತಿಂಥಿಣಿಯ ರಘುವರಚರಿತೆಯಲಿ ಕಾಲಿಡಲು ತೆರಪಿಲ್ಲ" ಅಂತ ನಮ್ಮ ಕುಮಾರವ್ಯಾಸನೇ ಹೇಳಿದ್ದಾನಲ್ಲ ! ಅಷ್ಟೊಂದು ಸಂಖ್ಯೆಯ ರಾಮಾಯಣಗಳು ಅವನ ಕಾಲದಲ್ಲಿಯೇ ಇದ್ದಿರಬೇಕು.

ಇವನ್ನೆಲ್ಲ ನೋಡಿದರೆ, ಪ್ರಾಚೀನ ಭಾರತದ ಹಲವು ಪದಗಳೂ, ಸಾಂಸ್ಕೃತಿಕ ವಿಚಾರಗಳೂ ಇಂಡೋನೇಷಿಯಾದಲ್ಲಿ ಸಿಕ್ಕರೂ ಸಿಕ್ಕಬಹುದು ಅಂತ ಹೇಳುವುದಕ್ಕೆ ಅಡ್ಡಿಯಿಲ್ಲ.

ಮಿಟೂ ಚಳುವಳಿ

ಮಿಟೂ ಚಳುವಳಿಯ ಬಗ್ಗೆ ಕನ್ನಡಪ್ರಭ ಪತ್ರಿಕೆಗೆ ನಾನು ಬರೆದಿದ್ದ ಲೇಖನದ ವಿಸ್ತೃತ ರೂಪ, ಹೊಸ ಬೆಳವಣಿಗೆಗಳ ಚರ್ಚೆಯೊಂದಿಗೆ :

ಕೆಲವು ವರ್ಷಗಳ ಹಿಂದಿನ ಮಾತು. ಸ್ಫೋಟಕವಾಗಬಹುದಾದ ಹಗರಣವೊಂದು ಹೊರಬಂದಿತ್ತು. ಸಿನೆಮಾ ರಂಗದಲ್ಲಿ ನಟಿಯರಾಗಿ ಅವಕಾಶ ಸಿಗಬೇಕಾದರೆ ಇಂತಿಂಥವರ ಜೊತೆ ಮಲಗಬೇಕು ಎಂಬಂತಹಾ ಪರಿಸ್ಥಿತಿ ಇದೆ, ದೊಡ್ಡ ನಟರು,ನಿರ್ಮಾಪಕರು ,ನಿರ್ದೇಶಕರು ಎಲ್ಲ ಇದರ ಹಿಂದಿದ್ದಾರೆ ಎನ್ನಲಾಗಿತ್ತು(ಆಧಾರಸಮೇತ). ಇಷ್ಟಾದ ಮೇಲೂ ಇದು ಸ್ಫೋಟವೂ ಆಗಲಿಲ್ಲ, ಹತ್ತಿಕೊಂಡು ಉರಿಯಲೂ ಇಲ್ಲ. "ಅಯ್ಯೋ, ಇದೆಲ್ಲಾ ಮಾಮೂಲಿ ಬಿಡಿ ಸಾರ್, ಇದಕ್ಕೆಲ್ಲಾ ಯಾರ್ ಅಳ್ತಾರೆ" ಎಂದು ಉದಾಸೀನ ತೋರಿಸಿ ವಿಷಯವನ್ನೇ ಒರೆಸಿ ಹಾಕಲಾಯಿತು.

ಕಳವಳವನ್ನುಂಟುಮಾಡಬಹುದಾದ ಮತ್ತೊಂದೆರಡು ಅಂಕಿ ಅಂಶಗಳೂ ಬಂದಿದ್ದವು. National Crime Records Bureau ಎಂಬ ಸಂಸ್ಥೆ 2012 ರಲ್ಲಿ ಹೇಳಿದಂತೆ, ಆ ವರ್ಷ ವರದಿಯಾದ 24,923 ಅತ್ಯಾಚಾರದ ಪ್ರಕರಣಗಳಲ್ಲಿ 98% ರಷ್ಟು ಚೆನ್ನಾಗಿ ಪರಿಚಯ ಇದ್ದವರೇ(ಎಷ್ಟೋ ಸಲ ನೆಂಟರೇ, ಕೆಲವೊಮ್ಮೆ ಮನೆಯವರೇ) ಮಾಡಿದವು. ಇನ್ನು ಕೆಲವು ತಜ್ಞರು ಹೇಳುವಂತೆ 54 ರಿಂದ 71%ರಷ್ಟು ಪ್ರಕರಣಗಳು ವರದಿಯೇ ಆಗದೆ, ದಾಖಲೇ ಆಗದೆ ಮುಚ್ಚಿ ಹೋಗುತ್ತವಂತೆ ! ಲೈಂಗಿಕ ದೌರ್ಜನ್ಯ ಆದಾಗ ಅದನ್ನು ಮುಕ್ತವಾಗಿ ಹೇಳಬಹುದಾದ ವಾತಾವರಣ ನಮ್ಮಲ್ಲಿಲ್ಲ ಅನ್ನುವುದನ್ನು ಈ ಅಂಕಿ ಅಂಶಗಳು ಅತ್ಯಂತ ಸ್ಫುಟವಾಗಿಯೇ ಹೇಳುತ್ತವೆ. ರೇಪ್ ಆದಾಗ ಬಲಿಪಶುವೇ ಅದನ್ನು ಮುಚ್ಚಿ ಹಾಕುವ ಪರಿಸ್ಥಿತಿ, ಸಾಮಾಜಿಕ ವ್ಯವಸ್ಥೆ ಎಲ್ಲ ಇದ್ದಾಗ, ಅದನ್ನು ಮಾಡಿಯೂ ದಕ್ಕಿಸಿಕೊಳ್ಳಬಲ್ಲೆ ಎನ್ನುವ ಮನೋಭಾವದವರೂ ಸಾಕಷ್ಟು ಜನರಿರುತ್ತಾರೆ. ಪ್ರಭಾವಿಗಳು, ದೊಡ್ಡ ಹುದ್ದೆಗಳಲ್ಲಿ ಇದ್ದವರು, ಬಾಸುಗಳು, ಬಲಶಾಲಿಗಳು ಎಲ್ಲ ಏನು ಮಾಡಿದರೂ ಏನೂ ಆಗುವುದಿಲ್ಲ ಎಂಬ ಶೋಚನೀಯ ಸ್ಥಿತಿಯಿದ್ದಾಗ MeToo ಚಳುವಳಿ ಮಾಡಿದ ಕೆಲಸ ದೊಡ್ಡದೂ, ಶ್ಲಾಘನೀಯವೂ ಆಗಿದೆ ಎನ್ನಲೇಬೇಕು.

ಈ ನಡುವೆ, "ಮೀಟಲು ಬಂದಾಗ ಚಪ್ಪಲಿಯಲ್ಲಿ ಹೊಡೆಯುವವರು ಮರ್ಯಾದಸ್ಥರು, ಕಾರ್ಯಸಾಧನೆಗಾಗಿ ಮೀಟಿಸಿಕೊಂಡು ಈಗ #me_too ಅಂತ ಬರುತ್ತಿರುವವರು ಮಿಟಕಲಾಡಿಗಳು!" ಎಂಬ ಒಂದು ಪೋಸ್ಟು/ಕಮೆಂಟು/ಮೆಸೇಜು ಶ್ರುತಿ ಹರಿಹರನ್ ಅವರ ಪೋಸ್ಟಿನಲ್ಲಿ ಬಂದು ಈಗ ವೈರಲ್ ಆಗಿದೆ.
ಇದಕ್ಕೆ ನಾಲ್ಕು ತರದಲ್ಲಿ ಉತ್ತರ ಹೇಳಬಹುದು : ಮೊದಲನೆಯದಾಗಿ ಶ್ರುತಿ ಸೇರಿದಂತೆ ಇನ್ನೂ ಹಲವರು "ನಾವು ಕಾರ್ಯಸಾಧನೆಗಾಗಿ ಮೀಟಿಸಿಕೊಂಡಿದ್ದೇವೆ" ಅಂತ ಹೇಳಿಕೊಂಡಿಲ್ಲ, ಪ್ರಯತ್ನ ಮಾಡಲಾಯಿತು, ನಾವು ವಿರೋಧಿಸಿ, ತಪ್ಪಿಸಿಕೊಂಡು ಬಂದೆವು ಅಂತಲೇ ಹಲವರ ಹೇಳಿಕೆ ಇರುವುದು.

"ಮೀಟಲು ಬಂದಾಗ ಚಪ್ಪಲಿಯಲ್ಲಿ ಹೊಡೆಯುವವರು ಮರ್ಯಾದಸ್ಥರು" ಅನ್ನುವ ಪುರುಷ ಪುಂಗವರಿಗೆ ಕೆಲವು ಪ್ರಶ್ನೆಗಳನ್ನು ಕೇಳಬಹುದು : ಒಬ್ಬ ಸರಕಾರೀ ಅಧಿಕಾರಿ ಲಂಚ ಕೇಳಿದಾಗ ನೀವೆಷ್ಟು ಸಲ ಅವರ ಕಪಾಳಕ್ಕೆ ಬಾರಿಸಿದ್ದೀರಿ ? ಒಬ್ಬ ರೌಡಿ ಅಥವಾ ಖಾಲಿ ಪೋಲಿ ಬೀದಿಯಲ್ಲಿ ಸುಮ್ಮನೆ ಗಲಾಟೆ ಮಾಡಿದಾಗ ನೀವೆಷ್ಟು ಸಲ ಹೋಗಿ ನಾಲ್ಕು ತದುಕಿದ್ದೀರಿ ? ಒಬ್ಬ MLA ಅಥವಾ Mಪಿ ಅಥವಾ ಒಬ್ಬ BBMP ಅಧಿಕಾರಿ ಕೋಟಿಗಟ್ಟಲೆ ನುಂಗಿದಾಗ ನೀವೆಷ್ಟು ಸಲ ಹೋಗಿ ಚಪ್ಪಲಿಯಲ್ಲಿ ಹೊಡೆದು ಬಂದಿದ್ದೀರಿ ? ದರೋಡೆ ಆದಾಗ, ಕಿಡ್ನಾಪ್ ಆದಾಗ, snatching ಆದಾಗ ಆ ಅಪರಾಧಿಗಳಿಗೆ ಚಪ್ಪಲಿಯಲ್ಲಿ ಬಾರಿಸಿದ ಎಷ್ಟು ಪ್ರಕರಣಗಳು ದಾಖಲಾಗಿವೆ? ರಸ್ತೆಯಲ್ಲಿ ಒಬ್ಬರು ಕಸಹಾಕಿದಾಗ, ಉಗಿದಾಗ , ಆಫೀಸಿನಲ್ಲಿ ಬಾಸು ಅನ್ಯಾಯ ಮಾಡಿದಾಗ ನಾಲ್ಕು ಪೆಟ್ಟು ಹಾಕಿದವರು ಎಷ್ಟು ಜನರಿದ್ದೀರಿ? ಅತ್ಯಾಚಾರ ಆಗಿದೆ ಅಂತ ತಂದೆಗೆ, ಅಣ್ಣ ತಮ್ಮಂದಿರಿಗೆ ಗೊತ್ತಾದಾಗ, ವಿಷಯ ಬಹಿರಂಗವಾದರೆ ಮರ್ಯಾದೆ ಹೋಗುತ್ತದೆ, ಆಮೇಲೆ ಗಂಡು ಸಿಗುವುದು ಕಷ್ಟ ಅಂತ ಭಾವಿಸಿ ವಿಷಯವನ್ನು ಅಲ್ಲೇ ಮುಚ್ಚಿಟ್ಟು ಆದಷ್ಟು ಬೇಗ ಅಕ್ಕ ತಂಗಿಯರಿಗೆ ಮದುವೆ ಮಾಡಿಸಿ ಅವರನ್ನು ಸಾಗಹಾಕಿದವರು ನಿಮ್ಮ ಸುತ್ತ ಮುತ್ತ ಎಷ್ಟು ಜನರಿರಬಹುದು ಅಂತ ನಿಮಗೆ ಗೊತ್ತಿದೆಯೇ ?

ಮೂರನೇ ಉತ್ತರ Sowmya Rajendran ಅನ್ನುವವರು ಕೊಟ್ಟಿರುವ ಉತ್ತರ :Dear women who are proudly claiming you don't have #MeToo stories because you slapped your harasser, please understand that these stories too ARE Me Too. Your response to sexual harassment doesn't change the fact that it happened in the first place.

The point of the movement is to change the culture of male entitlement at an organisational level, not tell women that they must go for Karate class. The point is to develop zero tolerance to sexual harassment at the workplace, not conduct boxing matches in the boardroom and announce a victor. Not everyone has the same physical and emotional strength or financial security to go around slapping men in powerful positions. Please stop adding this to the already long list of what women have to do to stay alive in this country. Thanks.

ನಾಲ್ಕನೇ ಉತ್ತರ : ಒಂದುವೇಳೆ ಕಾರ್ಯಸಾಧನೆಗಾಗಿ ಸಮ್ಮತಿಯಿಂದಲೇ ಕೂಡಿದರೂ ಅದೂ ಎರಡೂ ಕಡೆಯಿಂದಲೂ ತಪ್ಪೇ ಆಗುತ್ತದೆ(ಅದು ಮಿಟೂ ಆಗಲಾರದು, ಮಿಟೂ ಅಲ್ಲದಿದ್ದರೂ ಇನ್ನೊಂದು ರೀತಿಯಲ್ಲಿ ತಪ್ಪೇ). ಈಗ ಶಾಲೆಗಳಲ್ಲಿ ಟೀಚರ್ ಆಗಬೇಕಾದರೆ, software ಉದ್ಯೋಗ ಸಿಗಬೇಕಾದರೆ, ಬ್ಯಾಂಕ್ ನೌಕರಿ ಸಿಗಬೇಕಾದರೆ ಇಂಥಿಂಥವರ ಜೊತೆ ಮಲಗಬೇಕು ಎಂಬ ವ್ಯವಸ್ಥೆ ಇದ್ದರೆ ನೀವು ಆ ವ್ಯವಸ್ಥೆಯನ್ನು ಒಪುತ್ತೀರಾ? ಈಗ ಭಾರತೀಯ ಕ್ರಿಕೆಟ್ ತಂಡಕ್ಕೆ ಮಹಿಳಾ ಸೆಲೆಕ್ಟರ್ ಗಳಿದ್ದಾರೆ ಅಂದುಕೊಳ್ಳಿ. ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಬೇಕಾದ್ದು ಕ್ರಿಕೆಟ್ ಚೆನ್ನಾಗಿ ಆಡಲು ಗೊತ್ತಿರುವವರೋ ಅಥವಾ ಚೆನ್ನಾಗಿ ಮೀಟಲು ಗೊತ್ತಿದ್ದು ಸೆಲೆಕ್ಟರುಗಳನ್ನು ಖುಷಿಪಡಿಸುವವರೋ?
ತಾತ್ಪರ್ಯ ಇಷ್ಟೇ : ಪ್ರತಿಭೆಯಿಂದ ಆಯ್ಕೆಗಳಾಗಬೇಕಾದಲ್ಲಿ ಜಾತಿ, ಧರ್ಮ, ಲಿಂಗ, ಲಂಚದ ಹಣ, ಲೈಂಗಿಕ ತೃಪ್ತಿಯಂಥಹಾ ವಿಷಯಗಳ ಆಧಾರದಲ್ಲಿ ಆಯ್ಕೆಗಳು ನಡೆದರೆ ಅದು ತಪ್ಪೇ - ಸಮ್ಮತಿ ಇರಲಿ, ಇಲ್ಲದಿರಲಿ.

ಮಲಯಾಳಿ ಶ್ರುತಿಯ ತಂದೆ ಕಮ್ಮ್ಯುನಿಸ್ಟರೆಂದೂ, ಅರ್ಜುನ್ ಸರ್ಜಾ ಹಿಂದುತ್ವವಾದಿಗಳೆಂದೂ, ಇದು ಮೋದಿ ಮತ್ತು ಹಿಂದುತ್ವಗಳ ವಿರುದ್ಧ ನಡೆಯುತ್ತಿರುವ ಸಂಚೆಂದೂ ಹೊಸದೊಂದು Conspiracy theory ನಿನ್ನೆಯಿಂದ ಶುರುವಾಗಿದೆ. ಮೊದಲನೆಯದಾಗಿ ಶ್ರುತಿ ಮಲಯಾಳಿಯಲ್ಲ, ತಮಿಳರು. ಅವರ ತಂದೆ ನನಗೆ ತಿಳಿದಿರುವಂತೆ ಪಬ್ಲಿಕ್ ಫಿಗರ್ ಅಲ್ಲ, ಅವರ ರಾಜಕೀಯ ನಿಲುವು ನನಗೆ ತಿಳಿಯದು; ಇವರಿಗೆ ಹೇಗೆ ಗೊತ್ತಾಯಿತೋ ಗೊತ್ತಿಲ್ಲ. ಇನ್ನು ಬಲಪಂಥೀಯರಾಗಿ ಹೆಸರು ಮಾಡಿರುವ ಸದ್ಗುರು ಅವರ Rally for Rivers ಅನ್ನು ಶ್ರುತಿ ಬೆಂಬಲಿಸಿದ್ದರ ಫೋಟೋಗಳೂ ಸಿಗುತ್ತವೆ. ಅರ್ಜುನ್ ಸರ್ಜಾ ಸಜ್ಜನರೂ ಆಗಿರಬಹುದು, ಆದರೆ ಸಂಗೀತಾ ಭಟ್ ಹೇಳಿದ ಕಥೆಯಲ್ಲಿಯೂ ಆಕೆ ಹೆಸರು ಹೇಳಿರದಿದ್ದರೂ, ಬೆರಳು ಯಾವ ಕುಟುಂಬದ ಕಡೆಗಿತ್ತು ಅನ್ನುವುದು ಸಿನೆಮಾ ರಂಗದ ಪರಿಚಯ ಇರುವವರಿಗೆ ಅರ್ಥ ಆಗುತ್ತದೆ. ಹಾಗಂತ ಅರ್ಜುನ್ ಸರ್ಜಾ ಅಪರಾಧಿಯೆಂದು ಷರಾ ಬರೆದುಬಿಡುವುದು ಇನ್ನೊಂದು ಅತಿರೇಕವೇ ಆಗಬಹುದು. ಅವರು ಸಜ್ಜನರೇ ಇರಬಹುದು, ನನಗೇನು ಗೊತ್ತು ? ವಿಚಾರ ಅದಲ್ಲ, ಒಬ್ಬಾಕೆ ಒಬ್ಬ ಪ್ರಭಾವಿ ವ್ಯಕ್ತಿಯ ಮೇಲೆ ಆರೋಪ ಮಾಡಿದಾಗ ಆತನ ಎಲ್ಲ ಅಭಿಮಾನಿಗಳೂ ಏಕಾಏಕಿ ಮುಗಿಬಿದ್ದು ಆಕೆಯ ಚಾರಿತ್ರ್ಯವಧೆ ಮಾಡಿದರೆ, ಮುಂದೆ ಇಂತದ್ದನ್ನು ಹೇಳಲಿಕ್ಕೆ ಯಾವ ಹೆಣ್ಣುಮಗಳಿಗೆ ಧೈರ್ಯ ಬಂದೀತು ? ತಾನೇ ದೊಡ್ಡ center of controversy ಆಗಿ, ಸಿಕ್ಕ ಸಿಕ್ಕವರ ಕೈಯ್ಯಲ್ಲಿ ಬಾಯಿಗೆ ಬಂದಂತೆ ಹೇಳಿಸಿಕೊಳ್ಳುವ ಬದಲು, "ನನಗ್ಯಾಕೆ ಈ ರಂಪ ರಗಳೆಯೆಲ್ಲ" ಅಂತ ಮುಚ್ಚಿ ಹಾಕುವ ಸಂದರ್ಭವನ್ನು ನಾವೇ ಸೃಷ್ಟಿಸಿದ ಹಾಗಾಗಲಿಲ್ಲವೇ ?

ಇನ್ನು ಒಟ್ಟು ಚಳುವಳಿ ಮತ್ತು ಹಿಂದುತ್ವದ ವಿಚಾರ. ಮೋದಿಯ ಬಗ್ಗೆ ತಮಾಷೆ ಮಾಡುತ್ತಲೇ ಬಂದಿರುವ ವರುಣ್ ಗ್ರೋವರ್ ಮೇಲೂ ಆರೋಪಗಳಿವೆ, ಮೋದಿಯನ್ನು ಹಾಸ್ಯ ಮಾಡುತ್ತಾ ಬಂದಿರುವ AIBಗೂ ಹೊಡೆತ ಬಿದ್ದಿದೆ. ಮೋದಿ ವಿರೋಧಿ ಅನ್ನಲಾಗಿದ್ದ ರಘು ದೀಕ್ಷಿತರನ್ನೂ ಬಿಡಲಾಗಿಲ್ಲ. The Wire ಎಂಬ ಪಕ್ಕಾ ಎಡಪಂಥೀಯ ಪತ್ರಿಕೆಯ Vinod Dua ಎಂಬಾತನ ಮೇಲೆಯೂ ಕಲ್ಲು ಬಿದ್ದಿದೆ. ಲೈಂಗಿಕತೆ ಏನು ಪಕ್ಷ ನೋಡಿ ಬರುತ್ತದೆಯೇ ? ಎಡದವರ ಮೇಲೆ ಆರೋಪ ಬಂದಾಗ ಸಿಕ್ಕಿದ್ದೇ ಛಾನ್ಸು ಅಂತ ಬಲದವರು ಕುಣಿದಾಡುತ್ತಾರೆ, ಬಲದವರ ವಿಕೆಟು ಬಿದ್ದಾಗ ಎಡದಿಂದ ರಣಹದ್ದುಗಳು ಓಡೋಡಿ ಬಂದು ನಲಿಯುತ್ತವೆ,ಅಷ್ಟೇ. ಕಳ್ಳರು ಎಲ್ಲೆಡೆಯಲ್ಲಿಯೂ ಇದ್ದಾರೆ.

ಈ ಚಳುವಳಿ ಅಮೇರಿಕಾದ ಚಿತ್ರರಂಗದಿಂದ ಶುರುವಾಗಿ, ಲಕ್ಷಗಟ್ಟಲೆ ಜನರನ್ನು ಸೆಳೆದು, ಒಬ್ಬೊಬ್ಬರಾಗಿ ಯಾರೂ ಮಾಡಲಾಗದ್ದನ್ನು ಟ್ವಿಟ್ಟರು, ಫೇಸ್ಬುಕ್ಕುಗಳು ಮಾಡಬಹುದೆಂದು ತೋರಿಸಿಕೊಟ್ಟು ಈಗ ಇಲ್ಲಿಗೂ ಮುಟ್ಟಿದೆ. ಎಲ್ಲ ಕಡೆಗಳಲ್ಲಿಯೂ ಆಗುವಂತೆ, ಅಮೆರಿಕಾದಲ್ಲಿ ಇದು ಒಂದು ರಾಜಕೀಯ ದಾಳವಾಗಿ ಬಳಕೆಯಾದದ್ದೂ ಆಯಿತು. ಹೀಗಾಗಿ ಇದರ ದುರ್ಬಳಕೆ ಆಗುತ್ತಿದೆ, ಸ್ತ್ರೀವಾದಿಗಳು ಎಲ್ಲವನ್ನೂ ಅತಿ ಮಾಡುತ್ತಾರೆ, ಯಾರು ಬೇಕಾದರೂ ತಲೆಬುಡವಿಲ್ಲದ ಆರೋಪ ಮಾಡಿ ರಾಡಿಯೆಬ್ಬಿಸಬಹುದು ಎಂಬ ಕೂಗೂ ವ್ಯಾಪಕವಾಗಿಯೇ ಅಮೆರಿಕಾದಲ್ಲಿ ಎದ್ದಿದೆ. ಇದರಲ್ಲಿ ಸತ್ಯವೂ ಇಲ್ಲದಿಲ್ಲ. ಇದು ನಮಗೂ ಪಾಠವಾಗಬಹುದಲ್ಲ.

ಯಾವುದೇ ಒಂದು ವಿಚಾರವು ಒಂದು mass movement ಆದಾಗ, ಅದರ ಮೂಲ ಉದ್ದೇಶವನ್ನು ಮೀರಿ ಅಲ್ಲಿ ಎಡವಟ್ಟುಗಳಾಗಬಹುದು. ಪ್ರಚಾರಪ್ರಿಯರು, ಕಲಹಪ್ರಿಯರು, ಸುದ್ದಿಮಾಡಿಯೇ ದೊಡ್ಡವರಾಗಹೊರಟವರು ಎಲ್ಲ ಸೇರಿ ಒಂದು ಚಳುವಳಿಯನ್ನು ಕೆಡಿಸಿಬಿಡಬಹುದು. ಯಾವಾಗಲೋ ಆದದ್ದನ್ನು ಈಗ ವ್ಯಕ್ತಿ ದೊಡ್ಡವನಾದ ಮೇಲೆ ಹೇಳುವಾಗ, ದೊಡ್ಡವರನ್ನು ಮೇಲಿಂದ ದಡಲ್ಲನೇ ಬೀಳಿಸಿ ಮಜಾ ನೋಡುವ ಚಾಳಿ ಸಮಾಜಕ್ಕೆ, ಟೀವಿ ವಾಹಿನಿಗಳಿಗೆ ಇರುವಾಗ, guilty until proven innocent ಎಂದಾದರೆ ಕಷ್ಟ(ಹತ್ತು ವರ್ಷ ಮೊದಲು ಆದದ್ದಕ್ಕೆ, ಅವನು ಚುಂಬಿಸಲು ಪ್ರಯತ್ನಿಸಿದ ಎಂಬಂಥ ಆರೋಪಗಳಿಗೆ ಈಗ ಸಾಕ್ಷಿ ತರುವುದಾದರೂ ಎಲ್ಲಿಂದ?). ಇನ್ನು ಆ ವ್ಯಕ್ತಿ ಒಂದು ಸಿದ್ದಾಂತದ ಜೊತೆ ಗುರುತಿಸಿಕೊಂಡವನೋ, ಒಂದು ರಾಜಕೀಯ ಪಕ್ಷದವನೋ ಆಗಿದ್ದರೆ ಇನ್ನೂ ಕಷ್ಟ, ಸುಮ್ಮನೇ harmless flirting ಮಾಡಿದ್ದನ್ನೂ ಶತ್ರುಗಳು ಅತ್ಯಾಚಾರ ಎಂಬ ಮಟ್ಟಕ್ಕೆ ಕೊಂಡುಹೋಗಬಹುದು. ಆಪಾದಿತನು ಆರೋಪಿಯೇ ಎಂದು ತೀರ್ಪು ಕೊಟ್ಟುಬಿಡುವ ಚಾಳಿಯೂ ಕಷ್ಟದ್ದೇ.

ಲೈಂಗಿಕ ದೌರ್ಜನ್ಯಗಳಿಗೂ ಸ್ವಲ್ಪ ಮಾತಲ್ಲೇ ಚೆಲ್ಲಾಟವಾಡುವುದಕ್ಕೂ ವ್ಯತ್ಯಾಸವಿದೆ. ಒಲಿಸಿಕೊಳ್ಳಲು ಪ್ರಯತ್ನ ಮಾಡಿದ್ದೆಲ್ಲ ಅತ್ಯಾಚಾರವಲ್ಲ,You're really cute, I like those legs ಎಂದರೆ ಮಹಾಪರಾಧವೇನೂ ಅಲ್ಲ ಅನ್ನುವ ಹೆಂಗಳೆಯರೇ ಇದ್ದಾರೆ, ದಿಟ್ಟಿಸಿ ನೋಡುವುದು ಕೂಡ ಲೈಂಗಿಕ ಕಿರುಕುಳವೇ ಅನ್ನುವವರೂ ಇಲ್ಲದಿಲ್ಲ. ತಾವಾಗಿ hug ಮಾಡುವ ಹುಡುಗಿಯರಿರುತ್ತಾರೆ, ಮುಟ್ಟಿದರೂ ತಪ್ಪೇ ಅನ್ನುವವರೂ ಇದ್ದಾರೆ. ಹೀಗಿರುವಾಗ ಯಾವುದು ಲೈಂಗಿಕ ದೌರ್ಜನ್ಯ ಯಾವುದು ಅಲ್ಲ ಅನ್ನುವ ಗೆರೆಯನ್ನು ಎಲ್ಲಿ ಯಾರು ಹೇಗೆ ಎಳೆಯುತ್ತಾರೆ? ಯಾರ ಸಹನೆ, ಸಹಿಷ್ಣುತೆಯ ಮಟ್ಟ ಎಷ್ಟೆಂದು ಹೇಗೆ ಗೊತ್ತಾಗಬೇಕು?ಒಂದು ಕಾಲದಲ್ಲಿ ಪ್ರಣಯಪಕ್ಷಿಗಳಾಗಿದ್ದವರು, ಬೇರೆ ಬೇರೆಯಾದ ಮೇಲೆ, "ನಾಲ್ಕು ವರ್ಷದ ಹಿಂದೆ ಒಮ್ಮೆ ನನಗೆ ಇಷ್ಟ ಇಲ್ಲದಿದ್ದರೂ ಆತ ಮೇಲೆ ಬಿದ್ದು ಬಂದಿದ್ದ" ಅಂದರೆ ಏನು ಮಾಡೋಣ? ಫ್ಲರ್ಟ್ ಮಾಡಿನೋಡುವುದು, ಚುಡಾಯಿಸುವುದು, ಪೀಡಿಸುವುದು, ದೌರ್ಜನ್ಯ ಎಸಗುವುದು ಎಲ್ಲ ಬೇರೆ ಬೇರೆಯಷ್ಟೇ. ಎಲ್ಲ ರೋಗಗಳಿಗೂ ಒಂದೇ ಮದ್ದಲ್ಲವಲ್ಲ.
ನಮ್ಮಲ್ಲಿ ಪ್ರೇಮನಿವೇದನೆಯ ವಿಷಯದಲ್ಲಿ ಗಂಡಸರೇ ಮೊದಲು ಶುರು ಮಾಡಬೇಕು ಎಂಬ ಅಲಿಖಿತ ನಿಯಮ ಹಲವು ಕಾಲದಿಂದ ಇರುವುದರಿಂದ ಗಂಡಸರು ಓಲೈಸುವ, ಒಲಿಸುವ ಪ್ರಯತ್ನ ಮಾಡಿಬಿಡಬಹುದು, ಇದನ್ನೆಲ್ಲ ಏಕಾಏಕಿ ಲೈಂಗಿಕ ದೌರ್ಜನ್ಯ ಎಂದು painting with a broad brush ಮಾಡಲಾಗದು.

ಈ ಎಲ್ಲದರ ಬಗ್ಗೆ Shuchi singh kalra ಅನ್ನುವವರು ಹೇಳಿದ್ದನ್ನು quote ಮಾಡಿದರೆ ಎಲ್ಲವನ್ನೂ ಹೇಳಿದಂತಾಯಿತು : An abusive relationship, however bad, is not #metoo. An affair gone bad is not #metoo. A man trying to flirt with you is not #metoo. A consensual relationship that fetched you benefits at one time is not #metoo in retrospect. Please don't dilute the movement.

ಹೀಗೆ ಸ್ವಲ್ಪ ಎಚ್ಚರಗಳನ್ನೂ ವಹಿಸಿದರೆ ಈ ಚಳುವಳಿ ಸ್ವಾಗತಾರ್ಹವಾದ ಬದಲಾವಣೆಗಳನ್ನು ತಂದೀತು, ದೌರ್ಜನ್ಯ ಅಷ್ಟು ಸುಲಭಕ್ಕೆ ಕಡೆಗಣಿಸಲಾಗದ ವಿಷಯ ಎಂಬ ಹೆದರಿಕೆಯಾದರೂ ಹುಟ್ಟೀತು.

ವ್ಯಾಕರಣ ಬೇಕೇ

ಬುಕ್ಕಾಸುರ, ಓದುಬಾಕ ಗೆಳೆಯ ಪ್ರಶಾಂತ ಭಟ್ಟರು ವ್ಯಾಕರಣದ ಬಗ್ಗೆ ಒಂದಿಷ್ಟು ಚರ್ಚೆಗಳಾದದ್ದನ್ನು ನೋಡಿ, ತಕರಾರುಗಳನ್ನು ಎತ್ತಿ, "ವ್ಯಾಕರಣಕ್ಕಿಷ್ಟು‌ ಮಣ್ಣು ಹಾಕಾ. ಓದೋರಿಗೆ ಅರ್ಥ ಆದರೆ ಸಾಕು. ವ್ಯಾಕರಣಬದ್ಧವಾಗೇ ಬಳಸಿ ಏನು ಸಾಧಿಸ್ತಾರೋ!" ಅಂತ ಹೇಳಿ, ಕಡೆಗೆ, "ಆಡು ಭಾಷೆಯ ಬರೆಯುವಾಗ ವ್ಯಾಕರಣದ ನಿಯಮಗಳ ಪಾಲನೆ ಹೇಗೆ? ಹೇಳಬಹುದಾ" ಅಂತ ಕೇಳಿದ್ದಾರೆ. ಇದರಲ್ಲಿ ಒಂದು ಪುಟ್ಟ ಲೇಖನಕ್ಕೆ ಆಗುವಷ್ಟು ವಿಷಯವಿರುವುದರಿಂದ, ಆಸಕ್ತರಿಗಾಗಿ, ಇದನ್ನು ಪ್ರತ್ಯೇಕವಾಗಿಯೇ ಎತ್ತಿಕೊಂಡಿದ್ದೇನೆ.

ವ್ಯಾಕರಣದ ಬಗ್ಗೆ ಕಣ್ಣು ತೆರೆಸುವಂತಹಾ ಮಾತುಗಳನ್ನು ಸೇಡಿಯಾಪು ಕೃಷ್ಣ ಭಟ್ಟರು ತಿಳಿಸಿದ್ದಾರೆ, ಅವರ ಕೆಲವು ವಿಚಾರಗಳ ಸಾರವನ್ನಿಟ್ಟುಕೊಂಡು, ಪಾದೆಕಲ್ಲು ನರಸಿಂಹ ಭಟ್ಟರ ಚಿಂತನೆಯನ್ನು ಬೆರೆಸಿ, ನನ್ನದೇ ತಲೆಹರಟೆಯ ಮಸಾಲೆ ಸೇರಿಸಿದರೆ ಹೀಗೆ ಹೇಳಬಹುದು: ಸಾಧಾರಣವಾಗಿ ವ್ಯಾಕರಣ ಅಂದಕೂಡಲೇ ಬರೀ ಸಂಧಿ, ಸಮಾಸ, ಲಿಂಗ, ವಚನ, ವಿಭಕ್ತಿ ಅಂತೆಲ್ಲ ಒಂದಷ್ಟು ಕೆಲಸಕ್ಕೆ ಬಾರದ(?!) technical termಗಳನ್ನು ಹೇಳುವ, ರಾಜಾಜ್ಞೆ ಹೊರಡಿಸಿದಂತೆ ನಿಯಮಗಳನ್ನು ಹೇಳುವ, ಬೋರು ಹೊಡೆಸುವ ಶಾಸ್ತ್ರವೊಂದರ ಚಿತ್ರ ಕಣ್ಮುಂದೆ ಬರುತ್ತದೆ. ಇವುಗಳನ್ನು ಯಾರಾದರೂ ಯಾಕೆ ಕಲಿಯಬೇಕು ಅಂತಲೂ ಹೇಳದೆ, ಸುಮ್ಮನೇ ಆಖ್ಯಾತ ಪ್ರತ್ಯಯ, ವಿಭಕ್ತಿ ಪ್ರತ್ಯಯ, ಉಪಸರ್ಗ, ಸಂಧಿ, ಸಮಾಸ ಅಂತೆಲ್ಲ technical termಗಳನ್ನು ಬಾಯಿಪಾಠ ಮಾಡಿಸಿ ವಿದ್ಯಾರ್ಥಿಗಳ ಜೀವ ಹಿಂಡಲಾಗುತ್ತದೆ.

ಆದರೆ ಇದಿಷ್ಟೇ ವ್ಯಾಕರಣವಲ್ಲ. ನಮ್ಮ ತಲೆಯಲ್ಲಿ ಬಂದ ಎಡವಟ್ಟು ಯೋಚನೆಗಳನ್ನು ನಾವು ಉಳಿದವರಿಗೆ ಹೇಗೆ ತಿಳಿಸಿ ಅವರನ್ನು ಪೀಡಿಸುತ್ತೇವೆ, ಅದು ಇನ್ನೊಬ್ಬರಿಗೆ ಹೇಗೆ ಅರ್ಥವಾಗುತ್ತದೆ (ಇಷ್ಟಕ್ಕೂ ಅರ್ಥವಾಗುವುದು ಅಂದರೆ ಏನು? ಅರ್ಥದ ಅರ್ಥ ಏನು ?!) ಎಂಬುದೆಲ್ಲ ಒಳ್ಳೆ ಗಮ್ಮತ್ತಿನ ಪ್ರಶ್ನೆಗಳೇ. ನಮ್ಮ ಮಾತು ಹೇಗಿರುತ್ತದೆ, ಅದು ಇನ್ನೊಬ್ಬರಿಗೆ ಅರ್ಥ ಆಗುವುದರ ಹಿಂದಿರುವ ಥಿಯರಿ ಏನು ಅಂತೆಲ್ಲ ನಾವು ತಲೆ ಕೆರೆದುಕೊಂಡಿರುತ್ತೇವಾ? ಎಲ್ಲರೂ ಒಂದೇ ಡಿಕ್ಷನರಿಯಲ್ಲಿರುವ ಪದಗಳನ್ನೇ ಬಳಸುವುದು, ಆದರೂ ಕೆಲವರ ಮಾತು ಮಾತ್ರ ಚಂದ, ಕೆಲವರದ್ದು ಬೋರು, ಹೀಗ್ಯಾಕೆ ? ಕೆಲವರದ್ದು ಬರೆವಣಿಗೆ ಅಲ್ಲ ಕೊರೆವಣಿಗೆ ಎಂಬಂತೆ ಸುಮ್ಮನೇ ಕೊರೆದಂತಿದ್ದು ಸುಸ್ತಾಗಿಸುತ್ತದೆ, ಕೆಲವರದ್ದು ಶಿಲ್ಪವನ್ನು ಕೊರೆದಂತೆ ಹಿತವಾಗಿರುತ್ತದೆ. ಇದೆಲ್ಲ ಯಾಕೆ ಹೀಗೆ ? ಇದೆಲ್ಲದರ ಹಿಂದಿನ ತತ್ತ್ವಗಳು ಯಾವುವು ? ಮಾತಿನ ಗುಟ್ಟೇನು? ಇವೆಲ್ಲ ಪ್ರಶ್ನೆಗಳ ಬಗ್ಗೆ ಚಿಂತನೆ ಮಾಡುವುದು ನಿಜವಾಗಿಯೂ ವಿಶಾಲಾರ್ಥದಲ್ಲಿ ವ್ಯಾಕರಣದ ಕೆಲಸ.

ಮಾತು ಗಾಡಿ ಓಡಿಸಿದಂತೆ ಅಂತಾದರೆ, ವ್ಯಾಕರಣ Newton's laws of motionನಂತೆ ಅಥವಾ ಎಂಜಿನ್ ಹೇಗೆ ಕೆಲಸ ಮಾಡುತ್ತದೆ ಅಂತ ತಿಳಿಸುವ ವಿಜ್ಞಾನಶಾಸ್ತ್ರದಂತೆ. ಪ್ರಾಚೀನ ಭಾರತದ ವ್ಯಾಕರಣ ಚಿಂತನೆ ಇಷ್ಟು ವಿಶಾಲವಾಗಿ ಹರಡಿಕೊಂಡು ಕಾವ್ಯಮೀಮಾಂಸೆಗೆ ಪ್ರೇರಣೆ ಕೊಟ್ಟದ್ದೆಲ್ಲ ಉಂಟು. ಹೀಗೆ ಮಾಡುವ ವ್ಯಾಕರಣ ಯಾರಿಗೆ ಬೇಡ ? ವ್ಯಾಕರಣವಿಲ್ಲದೆ ಕಾವ್ಯಸೌಂದರ್ಯವೇ ಇಲ್ಲ ಎಂಬಂತೆ ಪ್ರಾಚೀನರ ಕಾವ್ಯಮೀಮಾಂಸೆಯ ಪುಸ್ತಕಗಳಲ್ಲಿ ಪುಟಗಟ್ಟಲೆ ವ್ಯಾಕರಣದ ಚರ್ಚೆಗಳಿವೆ. ಶಬ್ದಮಣಿದರ್ಪಣದಲ್ಲಿ, "ವ್ಯಾಕರಣದಿಂದೆ ಪದಂ, ಆ ವ್ಯಾಕರಣದ ಪದದಿಂ ಅರ್ಥಂ, ಅರ್ಥದೆ ತತ್ತ್ವಾಲೋಕಂ. ತತ್ತ್ವಾಲೋಕದಿಂ ಆಕಾಂಕ್ಷಿಪ ಮುಕ್ತಿಯಕ್ಕುಂ, ಅದೆ ಬುಧರ್ಗೆ ಫಲಂ"(ವ್ಯಾಕರಣವನ್ನು ಓದಿದಾಗ ಪದಸಿದ್ಧಿಯಾಗುತ್ತದೆ, ಹಾಗೆ ಕಲಿತ ಪದದಿಂದ ಅರ್ಥದ ಬಗೆಗಿನ ಜ್ಞಾನವೂ ಹೆಚ್ಚುತ್ತದೆ, ಹಾಗೆ ಪಡೆದುಕೊಂಡ ಶಬ್ದ-ಅರ್ಥ ಜ್ಞಾನದಿಂದ ತತ್ತ್ವವಿಚಾರ ತಿಳಿಯುತ್ತದೆ. ಇದರಿಂದ ನಾವು ಬಯಸುವ ಮುಕ್ತಿ ಸಿಗುತ್ತದೆ. ಅದೇ ವಿದ್ವಾಂಸರಿಗೆ ಫಲ) ಎಂಬಂತಹಾ ಹೇಳಿಕೆಗಳು ಬರುವ ಮಟ್ಟಕ್ಕೆ ಪ್ರಾಚೀನರು ಹೋಗಿದ್ದಾರೆ.

ಇನ್ನೀಗ ಆಡು ಭಾಷೆಯಲ್ಲಿ ವ್ಯಾಕರಣ ಬೇಕೇ ಎಂಬ ಪ್ರಶ್ನೆ. ಜನ ಹೇಗೆ ಮಾತಾಡುತ್ತಾರೆ ಅಂತ ನೋಡಿದರೆ ಇದಕ್ಕೆ ಉತ್ತರ ಅಲ್ಲಿಯೇ ಸಿಗುತ್ತದೆ. "ನಾನು ಒಳಗೆ ಕೂತು ಊಟ ಮಾಡ್ತೇನೆ" ಅಂತ ಹೇಳಬೇಕಾಗಿದೆ ಅಂದುಕೊಳ್ಳೋಣ. ಇದನ್ನು ತಪ್ಪು ವ್ಯಾಕರಣ ಬಳಸಿ ಹೀಗೆಲ್ಲ ಹೇಳಬಹುದು :
"ನೀನು ಒಳಗೆ ನಿಂತು ಊಟ ಮಾಡುವವನು"
"ನನ್ನನ್ನು ಒಳಗಿನಲ್ಲಿ ಕೂತು ಊಟವು ಮಾಡ್ತದೆ"
"ನೇಣು ಒಲೆಗೆ ಕೂತು ಹೂಟ ಮಾಡ್ತೇನೆ"
"ಮಾಡ್ತೇನೆ ಒಳಗೆ ಊಟ ಕೂತು ನಾನು"
ಹೀಗೆಲ್ಲ ಹೇಳುವವರು ಯಾರಿದ್ದಾರೆ ? "ನಾನು ಒಳಗೆ ಕೂತು ಊಟ ಮಾಡ್ತೇನೆ" ಅಂತ ವ್ಯಾಕರಣಬದ್ಧವಾಗಿಯೇ ಎಲ್ಲರೂ ಹೇಳುವುದು.
ಹಾಗೆಯೇ ಯಾರೋ ಮಹನೀಯರು ತೀರಿಕೊಂಡರೆಂದಿಟ್ಟುಕೊಳ್ಳೋಣ. ಅದನ್ನು ಅದೇ ಅರ್ಥ ಬರುವಂತೆ ಇಷ್ಟು ತರಗಳಲ್ಲಿ ಹೇಳಬಹುದು :
ಶ್ರೀಯುತರು ಸ್ವರ್ಗಸ್ಥರಾದರು
ಅವರು ದೈವಾಧೀನರಾದರು
ಅವರು ಇನ್ನಿಲ್ಲ
ಶ್ರೀಯುತರು ನೆಗೆದು ಬಿದ್ದರು
ಶ್ರೀಯುತರು ಗೊಟಕ್ ಆದರು
ನಾವ್ಯಾರೂ ಕೊನೆಯ ಎರಡು ಪ್ರಯೋಗಗಳನ್ನು ಮಾಡದೆ ವ್ಯಾಕರಣದ ಮರ್ಯಾದೆಯನ್ನು ಪಾಲಿಸಿಯೇ ಮಾತಾಡುತ್ತೇವೆ.
ಹೀಗೆ ನಾವೆಲ್ಲ ಗೊತ್ತಿದ್ದೋ ಗೊತ್ತಿಲ್ಲದೆಯೋ ವ್ಯಾಕರಣಕ್ಕೆ ಬೆಲೆ ಕೊಟ್ಟು ಮಾತಾಡುವವರೇ ಆಗಿದ್ದೇವೆ ಅಂತ ಗೊತ್ತಾಗಲಿಕ್ಕೆ ಈ ಎರಡು ಉದಾಹರಣೆಗಳು ಸಾಕು.

ವ್ಯಾಕರಣವನ್ನು ನಾವೆಲ್ಲ ಪಾಲಿಸುವವರೇ ; degree ಯಲ್ಲಿ ಮಾತ್ರ ವ್ಯತ್ಯಾಸ. ಈಗ, "ಇರುವುದಕ್ಕೆ ಒಂದೊಳ್ಳೆ ಮನೆ ಬೇಕು" ಅಂತ ನಾವೆಲ್ಲ ಹೇಳುತ್ತೇವೆ. ಇಲ್ಲಿ ಒಳ್ಳೆ ಮನೆ ಅಂದರೆ ಏನು ಅನ್ನುವುದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಬಡವನಿಗೆ ಗುಡಿಸಲು ಒಳ್ಳೆಯ ಮನೆಯಾಗಬಹುದು, ಇನ್ನೊಬ್ಬನಿಗೆ 2 BHK ಸಾಕಾಗಬಹುದು, ಮತ್ತೊಬ್ಬನಿಗೆ Posh Villa ಬೇಕಾಗಬಹುದು, ಅಂಬಾನಿಗೆ 100 ಕೋಟಿಯ ಮನೆಯೇ ಒಳ್ಳೆಯ ಮನೆ ಅನ್ನಿಸಬಹುದು. ಒಳ್ಳೆಯ ಮನೆ ಎಲ್ಲರಿಗೂ ಬೇಕು, ಒಳ್ಳೆಯತನದ degree ಯಲ್ಲಿ ಮಾತ್ರ ವ್ಯತ್ಯಾಸ. ವ್ಯಾಕರಣವೂ ಹಾಗೆ. ಘನವಿದ್ವಾಂಸರು ಅಂಬಾನಿಯಂತೆ, ನನ್ನಂತವರು 2 BHK ಯವರು, ಒಟ್ರಾಶಿ ತಪ್ಪು ತಪ್ಪು ಭಾಷೆಯಲ್ಲಿ ಮಾತಾಡುವವರು ಬಡವರು ಅಂತಾಗಬಹುದು. ಬರೆಯುವವರು, ಭಾಷಣಕಾರರು ಎಲ್ಲ Posh Villaದ ಮಟ್ಟಕ್ಕಾದರೂ ಬಂದರೆ ಅವರ ಬರೆಹವೇ/ಮಾತೇ ಕಳೆಗಟ್ಟುತ್ತದೆ.

ಅಂಬಾನಿಗೆ ಬಡವರ ಮನೆ ಕೊಳಕೆಂದು ಕಾಣಬಹುದು, 2 BHKಯವರಿಗೆ ಅಂಬಾನಿಯ ಮನೆಯೆಲ್ಲ ಯಾಕೆ ಸುಮ್ಮನೆ ಅನ್ನಿಸಬಹುದು. ಇದು ಅವರವರ ಜ್ಞಾನ, ಓದು, ಸೌಂದರ್ಯಪ್ರಜ್ಞೆ, ಸಂಸ್ಕಾರಗಳಿಗೆ ಬಿಟ್ಟ ವಿಚಾರ. "ಓದೋರಿಗೆ ಅರ್ಥ ಆದರೆ ಸಾಕು. ವ್ಯಾಕರಣಬದ್ಧವಾಗೇ ಬಳಸಿ ಏನು ಸಾಧಿಸ್ತಾರೋ" ಎಂಬುದಕ್ಕೂ ಇದುವೇ ಉತ್ತರ. ಈಗ, ನಾವೊಂದು ಮದುವೆಗೆ ಹೋಗುತ್ತೇವೆ. ಹೋಗುವಾಗ ಕೆಸರಾದ ಬಟ್ಟೆಯನ್ನೂ ಧರಿಸಬಹುದು, ಮಾಸಲಾದ ಹಳೆಯ ಉಡುಗೆಯನ್ನೂ ತೊಡಬಹುದು, ಒಳ್ಳೆಯ ಒಪ್ಪ ಓರಣದ ಚಂದದ ಬಟ್ಟೆಯನ್ನೂ ಹಾಕಿಕೊಳ್ಳಬಹುದು. "ನಾನು ಕೆಸರಾದ ಬಟ್ಟೆ ಹಾಕಿಕೊಂಡರೆ ನಿಮಗೇನು ಕಷ್ಟ ? ಊಟ ಆಗಲೂ ಸಿಕ್ಕುತ್ತದೆ, ಮಾಸಲು ಬಟ್ಟೆ ಹಾಕಿದರೆ ಮದುವೆ ನಿಲ್ಲುತ್ತದೆಯೇ" ಅಂತ ಕೇಳಿದರೆ, ಯಾವ ಬಟ್ಟೆಯನ್ನಾದರೂ ಹಾಕಿಕೊಳ್ಳಿ, ಅದು ನಿಮ್ಮ ಕಲಾಪ್ರಜ್ಞೆ , ಸೌಂದರ್ಯಪ್ರಜ್ಞೆ, ಸಂಸ್ಕಾರಗಳಿಗೆ ಬಿಟ್ಟ ವಿಚಾರ ಅಂತಷ್ಟೇ ಹೇಳಬಹುದು.

ಮೇಲೆ ಹೇಳಿದ degreeಯ ವ್ಯತ್ಯಾಸಕ್ಕೆ ಕೆಲವು ಕಾರಣಗಳೂ ಇರುತ್ತವೆ. ವಿಷಯವು ಕ್ಲಿಷ್ಟವೂ, ಸೂಕ್ಷ್ಮವೂ, ಸುಂದರವೂ ಆದಷ್ಟು ಭಾಷೆ, ವ್ಯಾಕರಣಗಳ ಸಹಾಯ ಹೆಚ್ಚು ಹೆಚ್ಚು ಬೇಕು. ಉದಾ: "ನೀರು ಕುಡಿ" ಅನ್ನುವುದು ಸರಳವಾದ ವಿಚಾರ, ಇದನ್ನು ತಪ್ಪು ತಪ್ಪು ಭಾಷೆಯಲ್ಲಿ ಹೇಳಿದರೂ ನಡೆಯುತ್ತದೆ, ಅಷ್ಟೇಕೆ ಮಾತೇ ಇಲ್ಲದೆ ಕೈಸನ್ನೆಯಿಂದಲೇ ಹೇಳಿದರೂ ಆಗುತ್ತದೆ. ಆದರೆ, "ಎರಡನೇ ಪಾತ್ರೆಯಿಂದ ಉದ್ದಲೋಟದಲ್ಲಿ ಅರ್ಧ ಲೋಟ ನೀರು ತೆಗೆದುಕೊಂಡು, ಅದಕ್ಕೆ ಉಪ್ಪು ಬೆರೆಸಿ, ನೀರನ್ನು ಬಿಸಿ ಮಾಡಿ, ಅದನ್ನು ಬಾಯಿಗೆ ಹಾಕಿ, ಮುಕ್ಕುಳಿಸಿ, ಆಮೇಲೆ ಉಗಿ" ಅಂತ ಕೈಸನ್ನೆಯಿಂದ ಹೇಳಬೇಕಾದರೆ ಸ್ವಲ್ಪ ಸರ್ಕಸ್ ಮಾಡಬೇಕು, ಮಾತಿನಿಂದಲೇ ಹೇಳಿದರೂ, ಸರಿಯಾದ ವ್ಯಾಕರಣ ಬಳಸದೆ ಇದನ್ನು ಹೇಳಿದರೆ ಅರ್ಥವಾಗುವುದು ಕಷ್ಟ.
ಹೀಗೆ ವಿಷಯವು ಕ್ಲಿಷ್ಟವೂ ಸೂಕ್ಷ್ಮವೂ ಆಗುತ್ತಾ ಹೋದಹಾಗೆ ವ್ಯಾಕರಣ ಇರಬೇಕಾಗುತ್ತದೆ, ಸರಳ ವಿಚಾರಗಳಲ್ಲಿ ವ್ಯಾಕರಣ ಇಲ್ಲದಿದ್ದರೂ ಆಗುತ್ತದೆ. ಸೂಕ್ಷ್ಮವಿಚಾರಗಳನ್ನು , ಸುಂದರವಾದದ್ದನ್ನು ಹೇಳುವಾಗಲಂತೂ ಸರಿಯಾದ ಭಾಷೆ, ಭಾಷಾಸೌಂದರ್ಯ ಎಲ್ಲ ಬೇಕೇ ಬೇಕಾಗುತ್ತದೆ. ಲೇಖನದಲ್ಲಿಯೋ,ಕಾದಂಬರಿಯಲ್ಲಿಯೋ, ಕವಿತೆಯಲ್ಲಿಯೋ, ಸಿನೆಮಾದಲ್ಲಿಯೋ, ಹಾಡಲ್ಲಿಯೋ, ಯಕ್ಷಗಾನದಲ್ಲಿಯೋ ತಪ್ಪು ತಪ್ಪು ಭಾಷೆಯಿದ್ದರೆ ರಸಾಭಾಸ ಆಗಿ, ನಾವೇ ಬೈಕೊಳ್ಳುತ್ತೇವೆ.

ಇಷ್ಟು ಹೇಳಿದರೆ ಪ್ರಶ್ನೆಗಳಿಗೆ ಸಮಾಧಾನ ಹೇಳಿದಂತಾಯ್ತು ಅಂದುಕೊಳ್ಳುತ್ತೇನೆ.

ಜಗಳ ಮಾಡುವುದು ಹೇಗೆ

"ಜಗಳ ಮಾಡುವುದು ಹೇಗೆ" ಎಂಬ ವಿಚಾರವಾಗಿ ನಾನು ಬರೆಯುತ್ತಿರುವ ಪುಸ್ತಕದ ಕೆಲವು ಸಾಲುಗಳು :

ನಾನು ಹಿಂದೊಮ್ಮೆ "ಸರಿಗನ್ನಡಂ ಗೆಲ್ಗೆ" ಎಂಬ ಭಾಷಾದೋಷಗಳನ್ನು ಗುರುತಿಸುವ ಲೇಖನವೊಂದನ್ನು ಬರೆದದ್ದು ಹಲವರಿಗೆ ನೆನಪಿರಬಹುದು. ಈಚೆಗೆ ಶ್ರೀವತ್ಸ ಜೋಶಿಯವರು ಅಂತದ್ದೊಂದು ಸರಣಿಯನ್ನೇ ಶುರು ಮಾಡಿ, ಅದನ್ನು ಚಂದದ ನಿರೂಪಣೆಯೊಂದಿಗೆ ಪ್ರಸ್ತುತಿ ಮಾಡಿ ಶ್ಲಾಘನೀಯ ಕೆಲಸವನ್ನು ಮಾಡುತ್ತಾ ಬಂದಿದ್ದಾರೆ. ಅವರ ವಿಚಾರಗಳಲ್ಲಿಯೂ ದೋಷಗಳಿರುವುದನ್ನು ಮಹೇಶ ಭಟ್ಟ ಹಾರ್ಯಾಡಿ ಎಂಬ ವ್ಯುತ್ಪನ್ನರು ತೋರಿಸಿದ ಮೇಲೆ ಹಲವು ವಾಲುಗಳಲ್ಲಿ ಈ ವಿಚಾರ ಚರ್ಚೆಯಾಗಿ, ಕಡೆಗೆ ಮಂಜುನಾಥ ಕೊಳ್ಳೆಗಾಲ ಅವರು ಸಂಯಮದಿಂದ, ಯಾವುದೇ ಸಂಶಯಕ್ಕೆ ಎಡೆಯಿಲ್ಲದಂತೆ ವಿವರಣೆ ಕೊಟ್ಟದ್ದೂ ಆಯಿತು. ಇಷ್ಟಾಗುವಾಗ ಹಲವು ವಾಲುಗಳ ಕಮೆಂಟುಗಳಲ್ಲಿ, ವಿಷಯ ಚರ್ಚೆಯಾಗದೆ ಗೇಲಿ, ಕುಹಕ, ಭರ್ತ್ಸನೆಗಳಿಗೇ ಹೆಚ್ಚು ಜಾಗ ಸಿಕ್ಕಿದ್ದೂ ಆಯಿತು. ಪ್ರಾಯಶಃ ಇದೆಲ್ಲದರಿಂದ ಕೆರಳಿದ ಜೋಶಿಯವರೂ ನೇರವಾಗಿ Ad hominem attack ಮಾಡಿದ್ದೂ ಆಯಿತು. ನಾನು ಜೋಶಿಯವರ ಬರೆಹಗಳನ್ನು ಮೊದಲಿಂದಲೂ ಮೆಚ್ಚುತ್ತಲೇ ಬಂದವನು, ಮಂಜುನಾಥ ಕೊಳ್ಳೇಗಾಲ ಅವರ ಬರೆಹಗಳ ಅಭಿಮಾನಿಯೂ ಹೌದು, ಮಹೇಶ ಭಟ್ಟ, ಗಣೇಶ ಭಟ್ಟ ಕೊಪ್ಪಲತೋಟ ಮುಂತಾದವರ ವಿದ್ವತ್ತೆಯ ಬಗ್ಗೆಯೂ ಗೌರವ ಭಾವವನ್ನೇ ತಾಳಿದವನು. ಹೀಗಾಗಿ ನಾನು ಯಾರ ವಿರುದ್ಧವೂ ಯಾರ ಪರವೂ ಅಲ್ಲದೆ, ಆದರ್ಶಪರವಾದರೆ ಹೇಗೆಂದು ಯೋಚಿಸಿ ಇಷ್ಟು ಹೇಳಿದ್ದೇನೆ.

ಒಂದು ಪದಪ್ರಯೋಗ ಸರಿಯೇ ಅಲ್ಲವೇ ಎಂಬಂತಹಾ ವಿಚಾರಗಳಲ್ಲಿ, ವ್ಯಾಕರಣ, ಸಂಶೋಧನೆಯಂಥ ಸಂಗತಿಗಳಲ್ಲಿ ಮತಬೇಧಗಳು, ಅಸಮ್ಮತಿಗಳೆಲ್ಲ ಸಹಜ. ನಿಘಂಟು ಸಮಿತಿಗಳ ಸಭೆಗಳಲ್ಲಿ ಆಗುವ (ಪದಗಳ ಕುರಿತಾದ) ಜಗಳಗಳ ಬಗ್ಗೆ ಕೆಲವರು ಅಲ್ಲಲ್ಲಿ ಬರೆದಿದ್ದಾರೆ. ಹೆಚ್ಚು ಕಮ್ಮಿ ಪ್ರತಿದಿನವೂ ಡಿ.ಎಲ್. ನರಸಿಂಹಾಚಾರ್ಯರ ಜೊತೆ ಪದಗಳ ಬಗ್ಗೆ ಜಗಳ ಕಾಯುತ್ತಿದ್ದೆ ಅಂತ ಕವೆಂ ರಾಘವಾಚಾರ್ ಹೇಳಿದ್ದಾರೆ. ಶಿವರಾಮ ಕಾರಂತರಿಗೂ ಉಳಿದವರಿಗೂ ನಿಘಂಟು ಸಮಿತಿಯ ಸಭೆಗಳಲ್ಲಿ ಬಿಸಿ ಬಿಸಿ ಚರ್ಚೆಗಳಾಗುತ್ತಿದ್ದದ್ದು ಪ್ರಸಿದ್ಧವಾಗಿದೆ. ಅವಕಾಶ ಇದ್ದಾಗಲೆಲ್ಲ ಜಿ ವೆಂಕಟಸುಬ್ಬಯ್ಯನವರ ಜೊತೆ ಪದಗಳ ಬಗ್ಗೆ ವಾಗ್ಯುದ್ಧ ಮಾಡುತ್ತಿದ್ದೆ, ಸಾಹಿತ್ಯ ಪರಿಷತ್ತಿನ ಅರ್ಥಕೋಶದಲ್ಲಿರುವ ಹಲವು ಅರ್ಥಗಳನ್ನು ನಾನು ಈಗಲೂ ಒಪ್ಪುವುದಿಲ್ಲ ಅಂತ ಟಿವಿ ವೆಂಕಟಾಚಲ ಶಾಸ್ತ್ರಿಗಳು ಹೇಳಿದ್ದಾರೆ. ಇನ್ನು ಪಂಪನ "ಭಾನುಮತಿಯ ನೆತ್ತ" ಎಂಬ ಒಂದೇ ಒಂದು ಪದ್ಯದ ಬಗ್ಗೆ ಆದ ಸುಮಾರು ಇನ್ನೂರೈವತ್ತು ಮುನ್ನೂರು ಪುಟಗಳಷ್ಟು ಉದ್ದದ ಚರ್ಚೆಯನ್ನು ಸಂಕಲಿಸಿ ಪಾದೆಕಲ್ಲು ವಿಷ್ಣು ಭಟ್ಟರು ಒಂದು ಪುಸ್ತಕವನ್ನೇ ಸಂಪಾದಿಸಿ ಕೊಟ್ಟಿದ್ದಾರೆ. ವಿದ್ವದ್ವಲಯದಲ್ಲಿ ಇದು ಸಾಮಾನ್ಯ. ಇಲ್ಲೆಲ್ಲ ಪರಸ್ಪರ ಗೌರವವನ್ನು ಉಳಿಸಿಕೊಂಡೇ ಜಗಳಗಳನ್ನು ಮಾಡಲಾಗಿದೆ. "ಡಿಕ್ಷನರಿಯಲ್ಲಿ ಹೀಗಿದೆ, ಆದ್ದರಿಂದ ಇದು ಸರಿ" ಎಂದು ಎರಡೇ ಸೆಕೆಂಡಿನಲ್ಲಿ ಹೇಳಿ ಮುಗಿಸಬಹುದಾದಷ್ಟು ಈ ವಿಚಾರಗಳು ಸರಳವಲ್ಲ.

"ಅತ್ತಿಗೆ" ಎಂಬ ಒಂದೇ ಪದದ ಅರ್ಥದ ಬಗ್ಗೆ ಸೇಡಿಯಾಪು ಕೃಷ್ಣ ಭಟ್ಟ, ಕಡವ ಶಂಭು ಶರ್ಮ ಮತ್ತು ರಾಳ್ಳಪಲ್ಲಿ ಅನಂತಕೃಷ್ಣ ಶರ್ಮ ಇವರೆಲ್ಲ ಸೇರಿ ಸುಮಾರು ಮೂವತ್ತೈದು ಪುಟಗಳಷ್ಟು ಚರ್ಚೆ ಮಾಡಿದ್ದಾರೆ ! ಸಾಹಿತ್ಯ ಪರಿಷತ್ತಿನ ನಿಘಂಟಿನಲ್ಲಿ ಅತ್ತಿಗೆ = ನಲ್ಲೆ ಅಂತಲೂ ಒಂದರ್ಥವನ್ನು ಕೊಡಲಾಗಿದೆ. ಇದಕ್ಕೆ ಪಂಪನ ಒಂದು ಪ್ರಯೋಗವೇ ಆಧಾರ. ಭೀಷ್ಮನು ಅಂಬೆಯ ಮದುವೆಯ proposal ಅನ್ನು ತಿರಸ್ಕರಿಸುತ್ತಾ ಹೇಳುವ ಮಾತು : ಈಗಳ್ ಅಬ್ಬೆಯೆಂದು ಅತ್ತಿಗೆಯೆಂಬ ಮಾತನೆನಗೇನೆನಲಕ್ಕುಮೊ. ನಿನ್ನನ್ನು ತಾಯಿ ಎಂದು ಕರೆದು ಆನಂತರ ನಲ್ಲೆ ಎನ್ನಲು ಆಗುತ್ತದೆಯೇ ಎಂಬುದು ಇದರ ಭಾವ. ಇಲ್ಲಿ ನಲ್ಲೆ ಎಂಬ ಅರ್ಥ ಕೊಡುವಂತೆ ಅತ್ತಿಗೆ ಬಂದಿದೆ. ಈ ಬಗ್ಗೆ ನಾಡಿನ ದೊಡ್ಡ ವಿದ್ವಾಂಸರ ಅಭಿಪ್ರಾಯ ಕೇಳಲಾಗಿತ್ತು. ಸೇಡಿಯಾಪು ಅವರಲ್ಲಿ ಕೇಳಿದಾಗ ಅವರು ಈ ಪದ್ಯಕ್ಕೆ ವಿವರವಾಗಿ ವ್ಯಾಖ್ಯಾನ ಮಾಡಿ, ಅತ್ತಿಗೆ = ನಲ್ಲೆ ಎಂಬ ಅರ್ಥ ಸರ್ವಥಾ ತಪ್ಪು ಅಂತ ಸಮರ್ಥವಾಗಿ ವಾದಿಸಿದ್ದರು. ಸೇಡಿಯಾಪು ಅವರ ವಾದವನ್ನು ಆಗ ನಿಘಂಟು ಸಮಿತಿಯ ಅಧ್ಯಕ್ಷರಾಗಿದ್ದ ಎ ಆರ್ ಕೃಷ್ಣಶಾಸ್ತ್ರಿಗಳು ಬಹಳವಾಗಿ ಮೆಚ್ಚಿಕೊಂಡು, ಅದರ ಕುರಿತಾದ ಪ್ರಶಂಸೆಯನ್ನೂ ಬರೆದಿದ್ದರಂತೆ. ಆದರೆ ಅತ್ತಿಗೆ = ನಲ್ಲೆ ಎಂಬ ಅರ್ಥವನ್ನು ನಿಘಂಟಿನಲ್ಲಿ ಉಳಿಸಿಕೊಳ್ಳಲಾಗಿದೆ ! ಇದಕ್ಕೆ ನಿಘಂಟು ಸಮಿತಿಯಲ್ಲಿದ್ದ ಬೇರೆ ತಜ್ಞರ ವಾದಗಳೂ ಕಾರಣವಾಗಿರಬಹುದು.
ಹೀಗೆ ಕೆಲವು ಸಲ ಸರಿಯಲ್ಲದ/ಒಪ್ಪಿಗೆಯಿಲ್ಲದ ರೂಪಗಳನ್ನು ಬಳಕೆಯ ಬಲ ಇರುವುದರಿಂದ ಉಳಿಸಿಕೊಳ್ಳುವುದೂ, ತಮಗೆ ಒಪ್ಪಿಗೆಯಾಗದ ಪದಗಳನ್ನು ಕೊಡುವುದೂ ಮಾಡಬೇಕಾಗುತ್ತದೆ.

"ಡಿ.ಎಲ್.ನರಸಿಂಹಾಚಾರ್, ರಂ ಶ್ರೀ ಮುಗಳಿ, ಕವೆಂ ರಾಘವಾಚಾರ್ ಮತ್ತು ತೀನಂಶ್ರೀಯವರ ವಾದ ವಿವಾದಗಳನ್ನು ಕೇಳುವಾಗ ರಸದೌತಣದ ಅನುಭವವಾಗುತ್ತಿತ್ತು. ಬಹು ಗ್ರಂಥ ವ್ಯಾಸಂಗದಿಂದ ದೊರೆಯಲಾರದ ಜ್ಞಾನ ಆ ಕೆಲವು ಚರ್ಚೆಗಳಲ್ಲಿ ಸಿಗುತ್ತಿದ್ದವು" ಅಂತ ದೇ.ಜವರೇ ಗೌಡರು ಒಂದೆಡೆ ಬರೆದಿದ್ದಾರೆ. ಇವೆಲ್ಲ ಗೆಳೆಯರ ನಡುವೆಯೇ ನಡೆದ, ವಿಚಾರಕ್ಕೆ ಮಾತ್ರ ಸೀಮಿತವಾದ ಜಗಳಗಳು. "ನಾನು ನಾಯಿ, ನೀನು ಕತ್ತೆ" ಎಂದು ಬೈದುಕೊಂಡಂತೆ ಮಾಡಬಹುದಾದ ಜಗಳಗಳು ಇವಲ್ಲ, "ಇವರು ಅವರಿಗೆ ಸರಿಯಾಗಿ ಇಕ್ಕಿದರು" ಎಂಬಂತೆ ಮಜಾ ನೋಡುವ ದೃಷ್ಟಿಯೂ ಇಲ್ಲಿರಬಾರದು. ಮತ್ತು ನನ್ನಂತಹಾ ವಿದ್ಯಾರ್ಥಿಗಳಿಗೆ, ಕಲಿಯುವ ದೃಷ್ಟಿಯಿಂದ, ಭಾಷಾವಿಷಯದಲ್ಲಿ ಉದ್ದುದ್ದ ಚರ್ಚೆಗಳು ಅಗತ್ಯವಾಗಿ ಬೇಕು. ಆದರೆ ಇಂತಹಾ ಅಕಾಡೆಮಿಕ್ ಚರ್ಚೆಗಳು ವೈಯಕ್ತಿಕ ಗೇಲಿಯ,ಅಸಹನೆಯ ರಾಶಿಯಾಗಿ, ತಾನು ಹೇಳಿದ್ದೇ ಸರಿ ಎನ್ನುವ, ಸ್ವಪ್ರತಿಷ್ಟೆಯ ಹಂತಕ್ಕೆ ಮುಟ್ಟಿದರೆ ಕಷ್ಟ. ಇದು ಬೇಸರದ ವಿಷಯ.

ಈ ಕ್ಷೇತ್ರದಲ್ಲಿ ಬರೆದಾಗ ಕೆಲವೊಮ್ಮೆ ತಪ್ಪುಗಳು, ಭಿನ್ನಮತಗಳು ಸಹಜ ಎಂಬ ನಿಲುವು ಟೀಕಿಸುವವರಿಗೆ ಇರಬೇಕು, ಬರೆದವನಿಗೆ ದುರುದ್ದೇಶ ಇದೆಯೆಂಬ ಮಟ್ಟಕ್ಕೆ ಪಂಡಿತರ ಟೀಕೆಗಳು ಹೋಗಬಾರದು, ಮತ್ತು ಆಧಾರಸಮೇತ ತೋರಿಸಿಕೊಟ್ಟಾಗ ತಿದ್ದಿಕೊಂಡರೆ ಯಾರೂ ಸಣ್ಣವರಾಗುವುದಿಲ್ಲ ಎಂಬ ನಿಲುವು ಬರೆದವರಿಗೂ ಇರಬೇಕು. ಪಾಂಡಿತ್ಯದ ಪರ್ವತವೇ ಆಗಿದ್ದ ಡಿ.ಎಲ್.ನರಸಿಂಹಾಚಾರ್ಯ ಅವರ ಪುಸ್ತಕವೊಂದರಲ್ಲಿ ದೋಷವೊಂದನ್ನು ಅವರಿಗಿಂತ ಪ್ರಾಯದಲ್ಲಿಯೂ ಜ್ಞಾನದಲ್ಲಿಯೂ ಕಿರಿಯರಾಗಿದ್ದ ಎಂ.ಎಂ.ಕಲಬುರ್ಗಿಯವರು ತೋರಿಸಿಕೊಟ್ಟಿದ್ದರಂತೆ. ಅದನ್ನು ಚರ್ಚಿಸಿ ಒಪಿದ್ದೇ ಅಲ್ಲದೆ ಮುಂದಿನ ಆವೃತ್ತಿಯಲ್ಲಿ ಕಲಬುರ್ಗಿಯವರ ಹೆಸರು ಹಾಕಿ ತಿದ್ದಿದ್ದಕ್ಕೆ ಕೃತಜ್ಞತೆಯನ್ನೂ ಅರ್ಪಿಸಿದ್ದರಂತೆ ಡಿ.ಎಲ್.ಎನ್ ! ಅದೇ ಡಿ.ಎಲ್.ಎನ್ ಅವರ ಅಭಿನಂದನಾ ಗ್ರಂಥವೊಂದಕ್ಕೆ ಮಂಜೇಶ್ವರ ಗೋವಿಂದ ಪೈಗಳು ಶಾಸನವೊಂದನ್ನು ಇಟ್ಟುಕೊಂಡು ಸಂಶೋಧನಾ ಲೇಖನವೊಂದನ್ನು ಕಳಿಸಿದ್ದರಂತೆ. ಆದರೆ ಪಂಡಿತ ಶ್ರೇಷ್ಠರಾದ ಗೋವಿಂದ ಪೈಗಳು ಕೂಟಶಾಸನ( ಕೃತಕ ಶಾಸನ)ವೊಂದನ್ನು ಇಟ್ಟುಕೊಂಡು ಮೋಸಹೋಗಿ ಬರೆದಿದ್ದರೆಂದು ಗೊತ್ತಾಯಿತಂತೆ. "ಗೋವಿಂದ ಪೈಗಳು ನಮಗೆ ಗುರು ಸಮಾನರು, ಅವರು ಪ್ರೀತಿಯಿಂದ ಕಳಿಸಿದ ಲೇಖನ ತಪ್ಪೇ ಆದರೂ ನನ್ನ ಪುಸ್ತಕದಲ್ಲಿರಬೇಕು" ಅಂತ ಡಿ.ಎಲ್.ಎನ್ ತಾಕೀತು ಮಾಡಿದ್ದರಂತೆ ! ಇಷ್ಟು ಗೌರವ ಚರ್ಚೆ ಮಾಡುವ ಎರಡೂ ಪಕ್ಷದವರಿಗಿದ್ದರೆ ಸಮಸ್ಯೆಯೇ ಉದ್ಭವಿಸುವುದಿಲ್ಲ.

ಅಕಾಡೆಮಿಕ್ ಚರ್ಚೆಗಳಲ್ಲಿಯೇ ವೈಯಕ್ತಿಕ ನಿಂದನೆ ಎಲ್ಲ ಆದರೆ, ಇನ್ನು ಎಡ ಬಲಗಳ, ಅಥವಾ ಬೇರೆ ಸಿದ್ದಾಂತಗಳಿಂದ ಕುರುಡಾದವರ ಜಗಳಗಳಂತೂ ಹೊಲಸೇ ಆಗಿಬಿಟ್ಟಿವೆ. ಸೈದ್ದಾಂತಿಕ ಜಗಳವನ್ನು ವೈಯಕ್ತಿಕ ಮಾಡುವ, sweeping ಸ್ಟೇಟಮೆಂಟುಗಳನ್ನು ಎಸೆದು ಒಂದಿಡೀ ವ್ಯಕ್ತಿತ್ತ್ವವನ್ನು ಬ್ಲ್ಯಾಕ್ ಆಂಡ್ ವೈಟುಗಳಲ್ಲಿ ಅಡಗಿಸುವ ರೋಗ ಉಲ್ಬಣ ಆಗಿಬಿಟ್ಟಿದೆ. ಉದಾ: ಭೈರಪ್ಪನವರನ್ನ ಕಾದಂಬರಿಕಾರರೆಂಬ ನೆಲೆಯಲ್ಲಿ ಸುಮ್ಮನೇ ಹೊಗಳುವುದಕ್ಕೋ, ಬೈಯ್ಯುವುದಕ್ಕೋ ಸಾಧ್ಯವೇ ಇಲ್ಲ ಅನ್ನುವಂತಹ ಪರಿಸ್ಥಿತಿ. ಹೊಗಳಿದರೆ ನೀವು ಆರೆಸ್ಸೆಸ್ಸು, ಉಗ್ರ ಹಿಂದೂ, ಬಲ ಪಂಥ ಅಂತಾಗುತ್ತದೆ. ನಮ್ಮ ಅರೆಬೆಂದ ಸೆಕ್ಯುಲರ್ಗಳು ಚಡ್ಡಿ ಪಡ್ಡಿ ಅಂತ ಕಾರುವ ವಿಷವನ್ನು ಸಹಿಸಿಕೊಳ್ಳಬೇಕು, ಅವರ ಕುತ್ಸಿತ ಬುದ್ಧಿಯ ಕೊಳಕು ವಿಚಾರಗಳಿಗೆ "ಪ್ರಗತಿಪರ" ಇನ್ನೊಂದು ಮತ್ತೊಂದೆಂಬ ಲೇಬಲ್ಲುಗಳನ್ನು ಬೇರೆ ಅಂಟಿಸಿಕೊಡುತ್ತಾರೆ. ಬೈದರೆ ಇನ್ನೂ ಕಷ್ಟ. ಭೈರಪ್ಪ ಭಕ್ತ ಮಂಡಳಿಯವರು ನಿಮ್ಮನ್ನು ಸಿಕ್ಯುಲರ್, ಬುದ್ದಿಜೀವಿ, ಲದ್ದಿ ಜೀವಿ, ಗಂಜಿ ಗಿರಾಕಿ ಅಂತೆಲ್ಲ ಬಣ್ಣಿಸಿ, ಅದೇ ಹಳೇ ಬೈಗುಳಗಳನ್ನ ಪ್ರಸಾದದ ತರ ಹಂಚುತ್ತಾರೆ. ಕುವೆಂಪು ಬಗ್ಗೆ ಬರೆದರೆ ಇನ್ನೊಂದಷ್ಟು ಜನರಿಗೆ ಸಾಲದೆ ಬರುತ್ತದೆ, ಲಂಕೇಶರ ಬಗ್ಗೆ ಹೇಳಿದರೆ ಅವರ ಅಭಿಮಾನಿಗಳಿಗೆ ಸಿಟ್ಟು ಬರುತ್ತದೆ, ಅನಂತಮೂರ್ತಿ, ಕಾರ್ನಾಡ್ ಮುಂತಾದವರ ಬಗ್ಗೆ ಮಾತಾಡಿದರೆ ಜಗಳವೇ ಆಗಿಬಿಡಬಹುದು. ಅಂಬೇಡ್ಕರ್ ಅವರ ಬಗ್ಗೆ ಏನಾದರೂ ಹೇಳಿದರೆ ಪೆಟ್ಟೇ ಆಗಬಹುದು ಎಂಬಂತೆ ಇದೆ.

ಟ್ರಂಪ್, ಮೋದಿಗಳ ವಿಚಾರದಲ್ಲೂ ಹೀಗೇ ಆಗಿದೆ. ಮೋದಿ ಅವರನ್ನು ಹೊಗಳಿದರೆ ನೀವು ವಿರಾಟ್ ಹಿಂದು,ಕೋಮುವಾದಿ ಎಂದು ಮುಂತಾಗಿ ಜರೆಯಲಾಗುತ್ತದೆ, ಬೈದರೆ ಮತ್ತದೇ ಬುದ್ದಿಜೀವಿ, ಪೆದ್ದು ಜೀವಿ ಇತ್ಯಾದಿ. ಸರಿಯಾದ, cherry picking ಅಲ್ಲದ ಅಂಕಿ ಅಂಶಗಳು, ತರ್ಕಬದ್ಧ ವಿವರಣೆ, objective analysis, ಪೂರ್ಣಸತ್ಯದೃಷ್ಟಿ ಎಲ್ಲ ಇರುವ ಚರ್ಚೆಯೊಂದು ಮೋದಿಯ ಆಡಳಿತದ ಬಗ್ಗೆ ಆದದ್ದು ನನಗಂತೂ ನೆನಪಿಲ್ಲ. ಒಂದೋ ಏನಕೇನ ಪ್ರಕಾರೇಣ ಬೈದೇ ತೀರುತ್ತೇನೆ ಅನ್ನುವವರು, ಅಥವಾ ಭೂಮಿ ಅಡಿಮೇಲಾದರೂ ಹೊಗಳಿಯೇ ಸಿದ್ಧ ಅನ್ನುವವರು. ಈ ವಿಷಯದಲ್ಲಿ ಹೇಗೆ ಹೇಳಿದರೂ, ಯಾವ ಪಕ್ಷ ವಹಿಸಿದರೂ ಯಾವುದಾದರೂ ಒಂದು ಬಣದವರ ದ್ವೇಷ ಶತಃಸ್ಸಿದ್ಧ ಎಂಬಂತೆ ಆಗಿಬಿಟ್ಟಿದೆ. ಯಾರನ್ನಾದರೂ ಎಲ್ಲರೂ ಕಡ್ಡಾಯವಾಗಿ ಬೈಯ್ಯತಕ್ಕದ್ದು ಅಥವಾ ಹೊಗಳತಕ್ಕದ್ದು ಅನ್ನುವುದೇ ವೈಚಾರಿಕ ಕುರುಡು ಎಂದು ಯಾರೂ ಯೋಚಿಸಿದಂತಿಲ್ಲ.

ಚಲನಚಿತ್ರಗಳಂತಹಾ ಕ್ಷೇತ್ರಗಳಲ್ಲಿಯೂ ದರ್ಶನ್ ಬಗ್ಗೆ ಹೇಳಿದರೆ ಅಭಿಮಾನಿಗಳು ಸಿಟ್ಟಾಗುತ್ತಾರೆ, ಸುದೀಪನ ಟೀಕೆ ಮಾಡಿದರೆ ಇನ್ನೊಂದಷ್ಟು ಜನ ಕೆರಳುತ್ತಾರೆ, ರಾಜಕುಮಾರರ ಮಕ್ಕಳ ಬಗ್ಗೆ ಹೇಳಿದರೆ ಮತ್ಯಾರಿಗೋ ಸಿಟ್ಟು ಬರುತ್ತದೆ ಎಂಬಂತಾಗಿದೆ. ದೊಡ್ಡ ಸ್ಟಾರುಗಳು, ರಾಜಕೀಯ ನಾಯಕರ ಮಾತು ಬಿಡಿ, ಪವನ್ ಕುಮಾರ್ ಎಂಬ ನಿರ್ದೇಶಕನೊಬ್ಬರ ವಾಲಿನಲ್ಲಿ ನಡೆದ ಚರ್ಚೆಯೊಂದರಲ್ಲಿ ನನಗೇ ಈ ಅನುಭವ ಆಗಿತ್ತು. ಉದ್ರೇಕ ಉಂಟುಮಾಡುವಂಥ ಯಾವುದೇ ಮಾತನ್ನು ನಾನು ಹೇಳಿರದಿದ್ದರೂ, ಅತ್ಯಂತ ಕೀಳುಮಟ್ಟದ personal attack ಅನ್ನು ಅವರ ಚಮಚಾ ಒಬ್ಬನಿಂದ ಎದುರಿಸಬೇಕಾಗಿತ್ತು. ಒಟ್ಟಿನಲ್ಲಿ ಏನೇ ಹೇಳಿದರೂ ಯಾವುದಾದರೂ ಮೂಲೆಯಲ್ಲಿರುವ ಯಾರಿಗಾದರೂ ಸಿಟ್ಟು ಬಂದೇ ಬರುತ್ತದೆ ! ಮತ್ತು ಅದನ್ನು ಕಾರಿಕೊಳ್ಳಲು ಅವಕಾಶಗಳೂ ಸಿಗುತ್ತವೆ. ಯಾರೋ ಇಷ್ಟರವರೆಗೂ ಏನನ್ನೂ ಮಾಡದವನು, ಇನ್ಯಾವನೋ ಕಲಹಪ್ರಿಯನು ಎಲ್ಲ ಸೇರಿ, ಒಂದು ಕ್ಷೇತ್ರದಲ್ಲಿ ಮೂವತ್ತು ವರ್ಷ ಶ್ರದ್ಧೆಯಿಂದ ದುಡಿದವರನ್ನು, ಅವರ ಎಲ್ಲ ಒಳ್ಳೆಯ ಕೆಲಸಗಳನ್ನು ಮರೆತು, ಯಾವುದೋ ಕೆಲಸಕ್ಕೆ ಬಾರದ ಸ್ಟೇಟಸ್ಸನ್ನು ಇಟ್ಟುಕೊಂಡು ವಾಚಾಮಗೋಚರ ನಿಂದಿಸಿಬಿಡಬಹುದು.

ನಮ್ಮ ಸಾಹಿತಿಗಳಲ್ಲಿ ಹಲವರಿಗೂ ಒಂದು ಘನಸ್ತಿಕೆ ಇರುವ ಹಾಗೆ ಜಗಳ ಮಾಡಲು ಬರುವುದಿಲ್ಲ ಅನ್ನುವುದು ನಿಜಕ್ಕೂ ದುರಂತವೇ (ಎಡ, ಬಲ, ನಡು ಎಲ್ಲರಿಗೂ ಈ ಮಾತು ಸಲ್ಲುತ್ತದೆ). ಒಂದು ಜಗಳ ಮಾಡಿದರೆ, ಜಗಳ ಮಾಡಿಕೊಂಡವರು ಒಬ್ಬರಿಂದ ಒಬ್ಬರು ಏನಾದರೂ ಕಲಿಯುವ ಹಾಗೆ ಇರಬೇಕು. ಜಗಳ ನೋಡಿದವರಿಗೂ, "ಹೌದಲ್ಲ! ಈ ವಿಚಾರ ಹೊಳೆದೇ ಇರಲಿಲ್ಲ" ಅಂತ ಅನ್ನಿಸುವ ಹಾಗೆ ಇರಬೇಕು. ಹಾಗೆ ಮಾಡಲು ಆಗುವುದಿಲ್ಲ ಅಂತಾದರೆ ಈ ಸಾಹಿತಿಗಳು ಕತೆ, ಕವನ, ಲೇಖನಗಳನ್ನು ಬರೆದುಕೊಂಡು ಹಾಯಾಗಿ ಇದ್ದು ಬಿಡುವುದು ಒಳ್ಳೆಯದು. ಇವರು ಒಳ್ಳೆ ಅಂಡರ್ವರ್ಲ್ಡ್ ಡಾನುಗಳಂತೆ ಕಚ್ಚಾಡಿ, ವೈಯಕ್ತಿಕ ದ್ವೇಷ ಸಾಧಿಸಿ, ಸಾಹಿತ್ಯದ ಘನತೆಯನ್ನೇ ಕುಗ್ಗಿಸುವುದು ಎಲ್ಲ ನೋಡುವುದಕ್ಕೆ ನಮಗೂ ಕಷ್ಟವೇ. Shoot the message not the messenger ಅನ್ನುವ ರೀತಿ ಇವರೆಲ್ಲ ಜಗಳ ಆಡಿಯಾರು ಅಂತ ನಿರೀಕ್ಷೆ ಮಾಡಿದ್ದೇ ತಪ್ಪಾಯಿತು ಎನ್ನಬೇಕು.

ಅಭಿಪ್ರಾಯ ಭೇದಗಳು ಏನೇ ಇದ್ದರೂ, ತಥ್ಯ ಪ್ರೀತಿಯಿಂದ,ಸತ್ಯನಿಷ್ಠೆಯಿಂದ, ವಿದ್ಯಾಪಕ್ಷಪಾತದಿಂದ, ಜ್ಞಾನ ದಾಹದಿಂದ, ಜಿಜ್ಞಾಸೆಯ ದೃಷ್ಟಿಯಿಂದ, ಬೌದ್ಧಿಕ ಪ್ರಾಮಾಣಿಕತೆಯಿಂದ ಚರ್ಚೆಗಳು ನಡೆದರೆ ಒಳ್ಳೆಯದು. ಹೀಗೆ ಬಿಚ್ಚು ಮನಸ್ಸಿನಿಂದ ಚರ್ಚೆಯಾದಾಗ, ಸ್ವಂತ ಅಧ್ಯಯನಗಳ ನೆಲೆಯಲ್ಲಿ ಅರಿವನ್ನು ಪರಸ್ಪರ ಹೆಚ್ಚಿಸಿಕೊಳ್ಳಲು ಪರಿಣತರಿಗೆ ಅವಕಾಶವೂ ಇರುತ್ತದೆ. ಓದುಗರಿಗಂತೂ ಈ ಜಿಜ್ಞಾಸೆಗಳು ಅನೇಕ ಹೊಸ ಹೊಳಹುಗಳನ್ನು ತೆರೆದಿಡುತ್ತವೆ. 'ವಾದೇ ವಾದೇ ಜಾಯತೇ ತತ್ತ್ವ ಬೋಧಃ' ಎಂಬಂತೆ ವಿಭಿನ್ನ ಅಭಿಮತಗಳು ಬೆಳಕಿಗೆ ಬಂದು, ವಿಷಯದ ಆಯಾಮಗಳು ವೃದ್ಧಿಗೊಂಡು ಎಲ್ಲರಿಗೂ ವಿದ್ಯಾಲಾಭವೇ ಆಗಬಹುದು. ವಿಜ್ಞಾನದಲ್ಲಿ, ಕ್ವಾಟಂ ಮೆಕ್ಯಾನಿಕ್ಸನ್ನು ಐನ್‌ಸ್ಟೈನ್ ಒಪ್ಪಿರಲಿಲ್ಲ, ಅದನ್ನು ವಿರೋಧಿಸುತ್ತಲೇ ಆತ ಮೇಲಿಂದ ಮೇಲೆ ಪ್ರಶ್ನೆ ಮಾಡಿದ್ದರಿಂದ, ಐನ್‌ಸ್ಟೈನನಿಗೂ ನೀಲ್ಸ್ ಬೋರ್ ಎಂಬ ವಿಜ್ಞಾನಿಗೂ ಸಾಕಷ್ಟು ವಾಗ್ವಾದಗಳು ನಡೆದದ್ದರಿಂದ, ಈ ಕ್ಷೇತ್ರವೇ ಇನ್ನಷ್ಟು ಬೆಳೆದು, ಅದರಲ್ಲಿ ಒಳ್ಳೆಯ ಸಂಶೋಧನೆಗಳು ನಡೆದದ್ದನ್ನು ನಾವು ನೆನಪಿಸಿಕೊಳ್ಳಬಹುದು.

Evelyn Beatrice Hall ಎಂಬಾಕೆ ಬರೆದ “I don’t agree with what you say but I will defend to the death your right to say it.” ಎಂಬ ಮಾತು ನಮಗೆ ಆದರ್ಶವಾಗಲಾರದೇ ? ನಾವು ಸರಿಯಾಗಿ, ಸಂಯಮದಿಂದ, ಘನತೆಯಿಂದ, ನಿರ್ಲಿಪ್ತ ಭಾವದಿಂದ,ಜ್ಞಾನ ಪಿಪಾಸೆಯಿಂದ, ಸತ್ಯ ತಿಳಿಯಬೇಕೆಂಬ ಹಂಬಲವಿಟ್ಟುಕೊಂಡು, ಸತ್ಯವನ್ನು ಎದುರಾಳಿ ಹೇಳಿದರೂ ಒಪ್ಪಬೇಕೆಂಬ ಆದರ್ಶದೊಂದಿಗೆ ಚರ್ಚೆ ಮಾಡಲು ಕಲಿಯುವುದು ಯಾವಾಗ ?

Witty Quotes

Back in the days of pen and paper, whenver I stumbled upon a witty,wacky line while reading I used to write it down in my diary, creating a personal collection of quotable quotes. Some pearls from that collection:

When things are at their blackest, I say to myself, 'Cheer up, things could be worse.' And sure enough, they get worse
- Robert Lynn Asprin

There are moments when everything goes well; don't be frightened, it won't last.

Some humans would do anything to see if it was possible to do it. If you put a large switch in some cave somewhere, with a sign on it saying 'End-of-the-World Switch. PLEASE DO NOT TOUCH', the paint wouldn't even have time to dry.
-Terry Pratchett

The advice to ‘be yourself’ is obviously nonsense. But our brains accept this tripe as wisdom because it is more comfortable to believe we have a strategy for life than to believe we have no idea how to behave - Scott Adams

The trouble with being in the rat race is that even if you win, you're still a rat.

Life doesn't imitate art, it imitates bad television - Woody Allen

The world is a stage and the play is badly cast - Oscar Wilde

I hate to think that all my current experiences will someday become stories with no point.
- Bill Watterson

Right now I’m having amnesia and déjà vu at the same time. I think I’ve forgotten this before. - Steven Wright

I was walking down fifth avenue today and I found a wallet, and I was gonna keep it, rather than return it, but I thought: well, if I lost a hundred and fifty dollars, how would I feel? And I realized I would want to be taught a lesson.
Emo Philips

Trying is the first step towards failure - HOmer Simpson

I know the world isn't fair, but why isn't it ever unfair in my favor?
- Bill Watterson

Sometimes I think the surest sign that intelligent life exists elsewhere in the universe is that none of it has tried to contact us - Bill Watterson

In the beginning the Universe was created. This has made a lot of people very angry and been widely regarded as a bad move.
Douglas Adams

How many people here have telekenetic powers? Raise my hand.
Emo Philips

The guy hammering on a roof called me a paranoid little weirdo... in Morse code.
Emo Philips

Sometimes I get the feeling the whole world is against me, but deep down I know that's not true. Some smaller countries are neutral.
- Robert Orben

Reality continues to ruin my life.
- Bill Watterson

No one in his death bed ever said, "I wish I had spent more time at the office"

I xeroxed a mirror. Now I have an extra xerox machine.
- Steven Wright(?)

Luck is probability taken personally..!

You know how it is when you go to be the subject of a psychology experiment,and nobody else shows up, and you think maybe that's part of the experiment? I'm like that all the time. -- Steven Wright

I went into a McDonald's yesterday and said, "I'd like some fries" The girl at the counter said, "Would you like some fries with that?"
-Jay Leno

Title troubles

The word "Ayogya" has been used 486.5 times in a recently released 2.5 hour long film" Stated a research team from Indian Statistical Institute while addressing the press conference in KG road. 'The film thereby topples the record set by "Dana kayonu"' they informed.

"This is probably the hardest effort in the history of cinema to justify the title", the research team said. As per the findings that our team could lay its hands on, Dana Kayonu had used a software technique to randomly insert the words "Naanu Dana Kayonu" once every two minutes in the screenplay.

The team explained that the onus is on the audience to make sure that these directors do not come across titles like,"The Englishman Who Went Up a Hill But Came Down a Mountain" or "Night of the Day of the Dawn of the Son of the Bride of the Return of the Terror"

Sources have relevealed that another ambitious project that attempts to count the number of times "Alright Mundak hogona" is used in a certain News channel is facing acute shortages of staff because of the sheer enormity of the task at hand.

#SulSuddiBureau

By Sharath Bhat Seraje

ವಂದೇ ಮಾತರಂ, ಒಂದು ಪದ್ಯ, ಐದು ಅನುವಾದಗಳು - ಒಂದು ಸಂವಾದ

ವಂದೇ ಮಾತರಂ! ಒಂದು ಪದ್ಯ, ಐದು ಅನುವಾದಗಳು! ಒಂದೇ ಭಾವವನ್ನು ೫ ಜನ, "ಇವಳ ಸೊಬಗನವಳು ತೊಟ್ಟು,ನೋಡ ಬಯಸಿದೆ; ಅವಳ ತೊಡಿಗೆ ಇವಳಿಗಿಟ್ಟು ಹಾಡ ಬಯಸಿದೆ" ಎಂಬಂತೆ ಬೇರೆ ಬೇರೆ ನುಡಿಗಳ ಉಡಿಗೆಗಳನ್ನು ಉಡಿಸಿ ನಡೆಸಿದ್ದನ್ನು ನೋಡುವ, ಅದರ ಒನಪು ಒಯ್ಯಾರಗಳು ಬದಲಾಗುವುದನ್ನು ಕಾಣುವ ಸುಖಕ್ಕಾಗಿ ಇಲ್ಲಿ ಅವನ್ನು ಕೊಟ್ಟಿದ್ದೇನೆ. ಮೂಲವನ್ನು ಕಮೆಂಟಿನಲ್ಲಿ ಕೊಟ್ಟಿದ್ದೇನೆ
ಮೊದಲ ಅನುವಾದ ಶಿಕಾರಿಪುರ ಹರಿಹರೇಶ್ವರ ಅವರದ್ದು. ಬಹುಶ್ರುತರು ಅಂತ ಹೆಸರು ಮಾಡಿದ್ದ, ಅಮೆರಿಕಾದಲ್ಲಿ ಕೂತು ಕನ್ನಡದ ಕೆಲಸ ಮಾಡಿದ್ದ ಪಂಡಿತರಿವರು. ಮೂಲದ ಯಥಾವತ್ ಅನುವಾದ ಇವರದು:
ಒಳ್ಳೆ ನೀರುಳ್ಳವಳೇ,
ಒಳ್ಳೇ ಹಣ್ಣುಳ್ಳವಳೇ,
ಮಲಯ ಮಾರುತದಿಂದ ತುಂಬ ತಂಪುಗೊಂಡವಳೇ,
ಬಳ್ಳಿ ಗಿಡಮರಗಳಿಂ ಕಪ್ಪು ಕಪ್ಪಾದವಳೇ-
ಓ ತಾಯಿ, ಭಾರತಿಯೆ, ನಿನಗೆ ನಮನ!
ಅಚ್ಚ ಬೆಳದಿಂಗಳು ಬಿದ್ದು
ನೀ ಪುಲಕಗೊಂಡಿರುವೆ ಇರುಳಿನಲ್ಲಿ ;
ಶೋಭಿಸುತ್ತಿಹೆ ನೀನು
ಮರಗಿಡದ ಎದೆಯಿಂದ ಹೂವುಗಳು ಅರಳಿ;
ಒಳ್ಳೆ ನಗೆಯುಳ್ಳವಳೇ,
ಸವಿ ಮಾತನಾಡುವಳೇ,
ಎಲ್ಲಾ ಸುಖ ನೀಡುತ್ತ,
ಕೇಳಿದ್ದ ಕೊಡುವವಳೇ-
ಓ ತಾಯೆ, ಭಾರತಿಯೇ, ನಿನಗೆ ನಮನ

ಎರಡನೆಯದ್ದು ಅರಬಿಂದೋ ಅವರದ್ದು. ಕೀಟ್ಸ್,ಷೆಲ್ಲಿ ಮುಂತಾದವರನ್ನು ನೆನಪಿಸುವ, ಮೂಲದ ಪ್ರೇರಣೆ ಇರುವ ಪ್ರತಿಸೃಷ್ಟಿ ಅನ್ನಬಹುದಾದ ಅನುವಾದ:
Mother, I bow to thee!
Rich with thy hurrying streams,
bright with orchard gleams,
Cool with thy winds of delight,
Dark fields waving Mother of might,
Mother free.
Glory of moonlight dreams,
Over thy branches and lordly streams,
Clad in thy blossoming trees,
Mother, giver of ease
Laughing low and sweet!
Mother I kiss thy feet,
Speaker sweet and low!
Mother, to thee I bow.

ಮೂರನೆಯದ್ದು Keshab Bhattarai ಅನ್ನುವವರದ್ದು, ಮೂಲದಲ್ಲಿ ಇರುವಂತೆಯೇ ಮರುಸೃಷ್ಟಿ ಮಾಡುವ ರೀತಿ ಇವರದ್ದು :
Salutations (to you), oh Mother!
(You are blessed with) Richness in water
resources, plenty of fruits (and forest
resources), flushed with cool air breezing
from Malaya mountains;
Green with rice plants o ! our motherland
Salutations (to you), oh Mother!
Where nights are made joyous by sparkling light
very beautiful by buds-flowers- and rows of trees
Always looking pleasant, sweet speaking
giver of happiness and riches
o! our motherland!
Salutations (to you), oh Mother!

ಇನ್ನೊಂದು ಅನುವಾದ ಮಂಜುನಾಥ ಕೊಳ್ಳೇಗಾಲ ಅವರದ್ದು. ಭಾಷೆ, ವ್ಯಾಕರಣ, ಹಳಗನ್ನಡ ಮುಂತಾದ ವಿಷಯಗಳಲ್ಲಿ ನಿರ್ದುಷ್ಟ ನಿರ್ಮಲವೂ, ಅಕ್ಲಿಷ್ಟ ಸುಂದರವೂ ಆದ ಶೈಲಿ ಯಲ್ಲಿ ಫೇಸ್ಬುಕ್ಕಿನ ಗ್ರೂಪುಗಳಲ್ಲಿ ಬರೆಯುತ್ತ ಬಂದಿರುವ ವಿದ್ವಾಂಸರಿವರು. ಸಣ್ಣ ಪುಟ್ಟ ಬದಲಾವಣೆಗಳೊಂದಿಗೆ ಬಂದಿರುವ ಅಚ್ಚಗನ್ನಡದ ಅನುವಾದ ಇದು, ಅರಬಿಂದೋ ಅವರಿಗೆ ಹೆಚ್ಚು ಹತ್ತಿರ ಇದೆನ್ನಬಹುದು:

ತಾಯೇ ಬಾಗುವೆ
ಸವಿನೀರ್, ತನಿವಣ್, ತಂಬೆಲರೀವಳೇ
ಸಿರಿಹಸಿರವಳೇ, ಬಾಗುವೆ
ತಾಯೇ ಬಾಗುವೆ...

ಮುಂಜಾವದ ಬಿಳಿ ಸೋನೆಯ ಚುಮಚುಮವೇ
ಅರಳಿ ನಗುವ ಹೂ ಮರಗಳ ಗಮಗಮವೇ
ಮೆಲುನಗೆಯೇ, ನಲ್ನುಡಿಗಾತಿಯೇ
ಸೊಗವೀವಳೆ ವರವೀವಳೇ
ತಾಯೇ ಬಾಗುವೆ...

ಅರಬಿಂದೋ ಅವರ ಸಾಲಿಗೆ ಸೇರಬಹುದಾದ ಮತ್ತೊಂದು ಅನುವಾದ ರಂಜಿತ್ ಭಿಡೆ ಅವರದ್ದು :
ಹರಿವ ತಿಳಿ ಜಲವಾಗಿ ಬಿರಿವ ಸಿಹಿ ಫಲವಾಗಿ
ಗಿರಿಪಂಕ್ತಿಯಲಿ ಸುಳಿವ ತಂಗಾಳಿಯಾಗಿ
ತರುಲತೆಗಳಲಿ ತುಂಬಿರುವ ಹಚ್ಚಹಸಿರಾಗಿ
ಚಿರಕಾಲ ಜನಮನದಿ ಭಾವೈಕ್ಯವಾಗಿ
ನೆಲೆಸಿರುವ ಓ ತಾಯೇ ಭಾರತಿ,
ನಿನಗಿದೋ ವಂದನೆಗಳಾರತಿ
ಬಿಳಿಯ ಬೆಳದಿಂಗಳಲಿ ಹೊಳೆವಂತೆ ಬೆಳೆದಿರುಳು,
ಇಬ್ಬನಿಯನಿಳಿಸಿರಿಸಿ ನಲಿವಂತೆ ಹೂಪಕಳೆ,
ಎಳೆ ಹಸುಳೆ ನಗುವಂತೆ, ತಿಳಿಯಾದ ಮಾತುಗಳ
ಮಳೆಯಂತೆ, ಹರುಷವನು ಹಂಚುತಿರುವವಳೇ
ನೀನೆ ಸುಖದಾಯಿ ವರದಾಯಿ
ನಮನಗಳನೊಪ್ಪಿಸಿಕೊ ತಾಯಿ

ಸಂವಾದ 

ಭಾಸ್ಕರ ನರಸಿಂಹಯ್ಯ:  ಮಂಜುನಾಥ ಕೊಳ್ಳೇಗಾಲ ಅವರೇ ನಿಮ್ಮ ರಚನೆ ಸುಂದರವಾಗಿದೆ.
ಸುಜಲ, ಸುಫಲ ವೆಂಬುದು 'ಹೇರಳ' ಎಂಬ ಅರ್ಥ ಹೊಂದಿದಂತಿದೆ; ಅಷ್ಟರಮಟ್ಟಿಗೆ 'ಸವಿನೀರ್', 'ತನಿವಣ್' ಪದಗಳು ಬದಲಾದರೆ ನಿಮ್ಮ ಅನುವಾದ ನನ್ನ ತಿಳಿವಿನ ಮಟ್ಟಿಗೆ ಮೂಲದ ಓಘವನ್ನು, Brevity ಯನ್ನು ಉಳಿಸಿಕೊಂಡಿರುವ ಅರವಿಂದರ ಅನುವಾದದಷ್ಟೇ ಸುಂದರ ಮೋಹಕ.
'ಶಾಮಲ' ವನ್ನು Dark ಎಂದು ಅರ್ಥೈಸದೆ 'ಸಿರಿಹಸಿರು' ದಟ್ಟ ಎಂಬ ಅರ್ಥ ಬರುವಂತೆ ಅನುವಾದಿಸಿ ಮೂಲ ಆಶಯವನ್ನು ಉಳಿಸಿದ್ದೀರಿ.
'ತಂಬೆಲರು' ಪದವು ಸುಂದರ ಆಯ್ಕೆ.
ಮಂಜುನಾಥ ಕೊಳ್ಳೇಗಾಲ : ಧನ್ಯವಾದಗಳು. ಭಾಷಾಂತರದ ಮಿತಿಯೇ ಇದು. ಸಂಸ್ಕೃತದಲ್ಲಿ ಸು ಉಪಸರ್ಗಕ್ಕೆ ಬಹುವಿಶಾಲ ಅರ್ಥವಿದೆ. ಆದರೆ ಇಂಗ್ಲಿಷಿನಲ್ಲಾಗಲೀ ಕನ್ನಡದಲ್ಲಾಗಲೀ ಅಷ್ಟು ವಿಶಾಲ ಅರ್ಥ ಸೂಚಿಸುವ ಒಂದು ಉಪಸರ್ಗವೋ ಪದವೋ ಸಿಗುವುದು ದುಸ್ತರ. ಸು ಎನ್ನುವುದಕ್ಕೆ ಅಷ್ಟೇ ವಿಶಾಲವಾದ ತಟಸ್ಥವಾದ ಒಳ್ಳೆಯ good ಎಂಬ ವಿಶೇಷಣಗಳು ಕನ್ನಡ ಮತ್ತು ಇಂಗ್ಲಿಷಿನಲ್ಲಿ ಇವೆಯಾದರೂ, ಬಳಕೆಯಲ್ಲಿ ಅವು ತೀರ ಸಪ್ಪೆ, ಏನೂ ಹೇಳಿದಂತಾಗುವುದಿಲ್ಲ. ಒಳ್ನೀರ್ ಒಳ್ವಣ್ ಎಂಬ ಅನುವಾದ ಮೂಲದ ನಾದವನ್ನು ಹಿಡಿಯದೇ ಕಿವಿಗೆ ಕಟುವಾಗುತ್ತದೆ. ಹೀಗಾಗಿ ಸುಜಲಾಂ ಎಂಬಲ್ಲಿ ಸುಫಲಾಂ ಎಂಬಲ್ಲಿ ಸು ಸೂಚಿಸುವ ಮುಖ್ಯ ಆಯಾಮವನ್ನಷ್ಟೇ ತೆಗೆದುಕೊಂಡು ಅನುವಾದವು ತೃಪ್ತಿಪಟ್ಟುಕೊಳ್ಳಬೇಕಾಗುತ್ತದೆ. ನೀರಿನ ’ಒಳ್ಳೆಯ’ತನದ ಮುಖ್ಯಾಂಶ ಯಾವುದು? ಸವಿ. ಹಣ್ಣಿನ ’ಒಳ್ಳೆಯ’ತನದ ಮುಖ್ಯಾಂಶ ಯಾವುದು? ತನಿಪು - ತಾಜಾತನ, ರುಚಿ. ಹೀಗಾಗಿ ಸವಿನೀರ್ ತನಿವಣ್ ಎಂದು ಅನುವಾದಿಸಬೇಕಾಗಿದ್ದು.

ಅರವಿಂದರಂಥವರೂ ಸಸ್ಯಶ್ಯಾಮಲೆಯನ್ನು dark fields ಎಂದು ಅನುವಾದಿಸಿದ್ದು ಅಚ್ಚರಿಯನ್ನುಂಟುಮಾಡಿತು. ಜೊತೆಗೆ, ಜಲ, ಫಲ, ಮಲಯಜಶೀತಲತೆ, ಸಸ್ಯಶ್ಯಾಮಲತೆ ಇವೆಲ್ಲಾ ಆ ತಾಯಿಯ ವ್ಯಕ್ತಿತ್ವದ ಭಾಗಗಳೇ ಎಂಬ ಜೀವಂತ ಚಿತ್ರಣವು ಮೂಲದಲ್ಲಿದ್ದರೆ, ಅರವಿಂದರ ಅನುವಾದದಲ್ಲಿ ಅವೆಲ್ಲಾ hurrying streams, orchard gleams, winds of delight, dark fields ಮೊದಲಾಗಿ ಕೇವಲ ಭೌತಿಕ ವಸ್ತುಗಳಾಗಿ ಬಂದಿವೆ - ಅದು ಮೂಲದ ಆಶಯವಲ್ಲ. ಅಲ್ಲದೇ, ಸು ಎಂಬುದನ್ನು hurrying ಎಂದೂ gleam ಎಂದೂ ಅನುವಾದಿಸಿದ್ದಾರೆ. ಆದರೆ ಹರಿವಾಗಲೀ ಹೊಳಪಾಗಲಿ ನೀರು ಹಣ್ಣುಗಳ ಮುಖ್ಯಾಂಶಗಳಲ್ಲ. ಇನ್ನು ಮಾರುತಗಳಲ್ಲಿ ಮಲಯಮಾರುತಕ್ಕೆ ಬಹಳ ವಿಶಿಷ್ಟಸ್ಥಾನವಿದೆ. ಸಮುದ್ರದ ಮೇಲಿನಿಂದಲೂ ತಂಗಾಳಿ ಬೀಸಬಹುದು, ಅದು delightಅನ್ನು ಸಹಾ ತರುತ್ತದೆ, ಆದರೆ ಮಲಯಮಾರುತ ಸ್ಪಷ್ಟವಾಗಿಯೇ ನಮೂದಿಸಬೇಕಾದ್ದು. Cool with winds of delights ಎನ್ನುವಲ್ಲಿ ಮಲಯಮಾರುತದ ಸುಗಂಧ ಶೀತಲತೆ ಕಾಣುವುದಿಲ್ಲ. ಶರತ್ ಸೇರಾಜೆಯವರು ಹೇಳುವಂತೆ, ಇದು ಮೂಲದ ಸ್ಫೂರ್ತಿಯಿಂದ ಬಂದ ಪ್ರತಿಸೃಷ್ಟಿಯಿರಬಹುದು, ಅನುವಾದ/ಭಾವಾನುವಾದವೆನ್ನಲಾಗದು.

ಸುಮ್ಮನೇ ಕುತೂಹಲಕ್ಕಾಗಿ ಇದೊಂದು ಪ್ರಯತ್ನ, ಇಂಗ್ಲಿಷಿನಲ್ಲಿ. ಆದರೆ ಇದು ಮೂಲದ brevityಗೆ ಎಷ್ಟುಮಾತ್ರವೂ ಹತ್ತಿರವಲ್ಲ, ಪ್ರಾಸಪದಗಳೂ perfectಆಗಿ ಪ್ರಾಸಪದಗಳಲ್ಲ, ಆದರೂ ಮೂಲದ ಭಾವವನ್ನು ಸಾಧ್ಯವಾದಷ್ಟು ಹಿಡಿದಿಡುವ ಪ್ರಯತ್ನವಿದು

To thee I bow, O mother

Rich with sweet streams, fruits so fresh,
And cool with fragrant mountain breeze,
And green, O mother, so rich and lush
To thee I bow, O mother

O thou, with nights tingled by moonlight bright
Adorned with woods blooming,
With those soft smiles and words so sweet
Comforting with bounties

To thee I bow, O mother

ಶರತ್ ಸೇರಾಜೆ : ನಾನು ಇಂತಹಾ ಸೂಕ್ಷ್ಮಗಳ ಚರ್ಚೆಗಾಗಿಯೇ ಕಾಯುತ್ತಿದ್ದೆ !

ಭಾಷಾಂತರದ ಮಿತಿಯ ಬಗ್ಗೆ ಇನ್ನಷ್ಟು ಹೇಳಬಹುದು. ಕನ್ನಡದಂತಹಾ ಭಾಷೆಯ ಪದಗಳನ್ನು ಸಾವಿರಾರು ವರ್ಷಗಳಿಂದ ಸಾಹಿತಿಗಳು ಬಳಸಿ ಬಳಸಿ, ಅವೊಂದು ರೀತಿಯಲ್ಲಿ ಶ್ರುತಿ ಮಾಡಿಟ್ಟ ವೀಣೆಯಂತಾಗಿರುತ್ತವೆ ಅಂತ ಶತಾವಧಾನಿ ಗಣೇಶರು ಒಂದು ಸಲ ಹೇಳಿದ್ದರು. ಹೀಗಾಗಿ ವಿಕ್ರಮೋರ್ವಶೀಯವನ್ನು The King and the Nymph ಎಂದು ಅನುವಾದಿಸಿದರೆ ನಮಗೆ ಕಷ್ಟವಾಗಬಹುದು, ಊರ್ವಶಿ ಪುರೂರವರ ಕಥೆ ಓದಿದವರಿಗೆ, ಯಕ್ಷಗಾನದ ಊರ್ವಶಿಯನ್ನು ನೋಡಿದವರಿಗೆ, "ಇವಳೊಳ್ಳೆ ರಂಭೆ ಊರ್ವಶಿಯರನ್ನು ಮೀರಿಸುವಂತಿದ್ದಾಳೆ" ಎಂಬ ತರದ ಮಾತುಗಳನ್ನು ಕೇಳಿದವರಿಗೆ ಊರ್ವಶಿಯನ್ನು Nymph ಅಂದರೆ ಒಪ್ಪಿಕೊಳ್ಳಲು ಕಷ್ಟವಾಗಬಹುದು. ಇನ್ನು "ವಿಕ್ರಮ" ಅನ್ನುವ ಪದಕ್ಕಿರುವ ಫೋರ್ಸ್ ಕಿಂಗ್ ಅನ್ನುವ ಸಪ್ಪೆ ಶಬ್ದಕ್ಕೆಲ್ಲಿದೆ ಅನ್ನಿಸಬಹುದು.

ಅಡಿಗರ ಭೂತ ಪದ್ಯವನ್ನು ಇಂಗ್ಲೀಷಿನಲ್ಲಿ ಹೇಳುವುದಾದರೆ, ಭೂತ ಅಂತ ಕನ್ನಡದಲ್ಲಿ ಹೇಳಿದ್ದನ್ನು Ghosts and pasts ಅಂತ ಅಷ್ಟುದ್ದ ಮಾಡಿ ಹೇಳಿದರೆ ಸ್ವಾರಸ್ಯ ಕೆಡಬಹುದು, ಇನ್ನು ಭೂತಾರಾಧನೆಯಿರುವ ದಕ್ಷಿಣ ಕನ್ನಡದವರಿಗೆ ಭೂತ ಎಂಬ ಪದವು ಬೇರೆ ಅರ್ಥಗಳನ್ನು ಉದ್ದೀಪಿಸಬಹುದು. ಇದೇ ಕಾರಣಕ್ಕೆ winds of delightನಲ್ಲಿ ಸಿಕ್ಕದ delight ಕನ್ನಡಿಗರಿಗೆ ತೆಂಕಣಗಾಳಿಯಲ್ಲಿ ಸಿಗಬಹುದು (ಕನ್ನಡಿಗರಲ್ಲೂ ಪಂಜೆ ಮಂಗೇಶರಾಯರ ತೆಂಕಣಗಾಳಿಯ ಆರ್ಭಟವನ್ನು ಸವಿದವರಿಗೆ ಆ ಗಾಳಿಯು ಬೀಸುವ ರೀತಿ ಇನ್ನೊಂದು ತರ ಕಾಣಬಹುದು, ಪಂಪನ ತೆಂಕಣಗಾಳಿ ಸೋಂಕಿದವರಿಗೆ ಅದು ಮಲಯಾಮಾರುತದಷ್ಟೇ ತಂಪೆನ್ನಿಸಬಹುದು). ಮಂಜುನಾಥರ ಪದ್ಯದ "ತನಿವಣ್ಣು" ಮನೋರಮೆಯು ಮುದ್ದಣನಿಗೆ ತನಿವಣ್ಣನ್ನು ತಿನಲಿತ್ತು, ಕೆನೆವಾಲಂ ಕುಡಿವೊಡಿತ್ತು ಉಪಚರಿಸಿದ್ದನ್ನು ನೆನಪಿಸಿತು. ಈ ನೆನಪು ಬ್ರಿಟಿಷರಿಗೆ ಬರಲಾರದು, ಹಾಗಾಗಿ ತನಿವಣ್ಣನ್ನು ಹಾಗೆಯೇ ಇಂಗ್ಲೀಷಿಗೆ ತಂದರೆ ಆ ರುಚಿ ಬಂದೀತೆಂದು ಹೇಳಲಾಗದು. ತಂಬೆಲರೂ ಹಾಗೆಯೇ.

ಸುಜಲಾಂ,ಸುಫಲಾಂ,ಮಲಯಜ,ಶೀತಲಾಂ ಎಂಬಲ್ಲೆಲ್ಲ ಲಕಾರದ ಅನುಪ್ರಾಸವಿದೆ, ಅದೂ ಭಾಷಾಂತರದಲ್ಲಿ ಬರಲಾರದು. ಇನ್ನು ಸುಜಲಾಂ,ಸುಫಲಾಂ,ಶೀತಲಾಂ
,ಶಾಮಲಾಂ,ಮಾತರಂ,ಯಾಮಿನೀಂ,ಭಾಷಿಣೀಂ,ಸುಖದಾಂ,ವರದಾಂ ಮುಂತಾದ ಪದಗಳ ವರ್ಣಸಂಯೋಜನೆ ಹೆಚ್ಚು ಕಮ್ಮಿ ಒಂದೇ ರೀತಿ ಇರುವುದರಿಂದ ಒಂದು ರೀತಿಯ ನಾದ, musicality ಬಂದಿದೆ (ಸುಹಾಸಿನೀಂ ಎಂಬಲ್ಲೂ "ಸು" ಎಂಬ ಅಕ್ಷರವನ್ನು ತೇಲಿಸಿ, ಅದನ್ನು "ಹಾಸಿನೀಂ" ಎಂಬಂತೆ ಹಾಡುತ್ತಾರೆ). ಸರಿಯಾಗಿ ಛಂದಸ್ಸಿನ ನಿಯಮಗಳ ಪ್ರಕಾರ ಮಾತ್ರೆಗಳ ಲೆಕ್ಕ ಮಾಡಿದರೆ ವ್ಯತ್ಯಾಸ ಇರಬಹುದಾದರೂ, ಹಾಡುವಾಗ ಕಿವಿಗೆ ಇವುಗಳೆಲ್ಲ ಒಂದು ರೀತಿ ಸಮರೂಪದ ಪದಗಳಂತೆ ಕೇಳಿಸುತ್ತವೆ, ಈ ಪದಗಳಲ್ಲಿನ ದೀರ್ಘಗಳೂ ಹಾಡುವವರಿಗೆ ಎಳೆದೆಳೆದು ಗಾಯನಪ್ರತಿಭೆಯನ್ನು ತೋರಿಸಲು ಒಳ್ಳೆಯ ಅವಕಾಶ ಕೊಡುವಂತಿವೆ ! ಇವೆಲ್ಲ ಅನುವಾದದಲ್ಲಿ ಬರಬೇಕೆಂದು ನಿರೀಕ್ಷೆ ಮಾಡಲಾಗದು.

ಇನ್ನು ಸಸ್ಯಶ್ಯಾಮಲೆಯನ್ನು dark fields ಎಂದು ಅನುವಾದಿಸಿದ್ದರ ಬಗ್ಗೆ ನನಗನ್ನಿಸಿದ್ದು ಹೀಗೆ: ಇಲ್ಲಿ (ಮೂಲದಲ್ಲಿ)ಬಂಗಾಳ = ಭಾರತಮಾತೆ = ದುರ್ಗಾದೇವಿ(ಮೂಲದಲ್ಲಿ) = ಪ್ರಕೃತಿಮಾತೆ ಎಂಬಂತೆ ಸಂಯೋಜನೆ ಇದೆ. ಸುಹಾಸಿನೀಂ ಸುಮಧುರ ಭಾಷಿಣೀಂ ಎಂಬುವೆಲ್ಲ ದುರ್ಗೆಯ ಗುಣಗಳು ಎಂಬಂತೆ ಹೇಳಲಾಗಿದೆ. ಅವಳ ಗುಣಗಳಿಗೆ ಅನ್ವಯವಾಗುವಂತೆ ಪ್ರಕೃತಿವರ್ಣನೆಯನ್ನೂ ಮಾಡಲಾಗಿದೆ. ಹೀಗಾಗಿ ಶ್ಯಾಮಲೆ ಎಂಬುದು ದುರ್ಗೆಯ ಬಣ್ಣ ಎಂಬುದೇ ಇಲ್ಲಿ ಪ್ರಧಾನವಾದ ಅರ್ಥ. ಮೂಲದಲ್ಲಿ ಕೊನೆಗೆ ಈ ಸಾಲುಗಳು ಬರುತ್ತವೆ :
ವಂದೇ ಮಾತರಂ
ಶ್ಯಾಮಲಾಂ ಸರಲಾಂ
ಸುಸ್ಮಿತಾಂ ಭೂಷಿತಾಂ
ಧರಣೀಮ್ ಭರಣೀಮ್ (धरणीं भरणीं ಎಂಬುದನ್ನು ಹೀಗೆ ಟೈಪ್ ಮಾಡಿದ್ದೇನೆ)
ಮಾತರಂ

ಇಲ್ಲಿ "ಸಸ್ಯ" ಎಂಬ ಪದವಿಲ್ಲದೆ ಶ್ಯಾಮಲಾಂ ಎಂಬ ಪದ ಮಾತ್ರ ಬಂದಿದೆ, ಇದು ದುರ್ಗೆಯನ್ನು ಕುರಿತು ಹೇಳಿರುವ ಸಾಲುಗಳಾದ್ದರಿಂದ ಇಲ್ಲಿ ಶ್ಯಾಮಲ ಎಂಬುದು ಅವಳ ಬಣ್ಣವೇ ಆಗಿರಬೇಕು. ಕೃಷ್ಣನನ್ನು ಶ್ಯಾಮ ಎನ್ನುವುದು, ಗಣಪತಿಯನ್ನು ಶ್ಯಾಮಲವರ್ಣದವನೆಂದು ಹೇಳುವುದು, ಪಂಪ ಕವಿ ತನ್ನನ್ನು 'ಕದಳೀಗರ್ಭ ಶ್ಯಾಮಂ' ಎಂದು ಹೇಳಿಕೊಳ್ಳುವುದು, ಇವನ್ನೆಲ್ಲ ನೆನಪಿಸಿಕೊಳ್ಳಬಹುದು. ಆದರೆ ಸಸ್ಯಶ್ಯಾಮಲ ಎಂದಾಗ ಅಲ್ಲಿ ಹಸುರಿದ್ದರೇ ಉಚಿತ (ಇಲ್ಲಿ ಬಂಕಿಮಚಂದ್ರರು ತೂಕಡಿಸಿರಬಹುದೇ?), Dark Forest ಅನ್ನುವಂತೆ ಕಾಡನ್ನು ಬೇಕಾದರೆ dark ಅನ್ನಬಹುದು, ಮರದ ಕಾಂಡ/ತೊಗಟೆಗಳನ್ನು ಬೇಕಾದರೆ dark ಅನ್ನಬಹುದು, ಆದರೆ ಸಸ್ಯಸಂಪತ್ತನ್ನು ಹೇಳುವಾಗ ಹಸುರನ್ನೇ ಎತ್ತಿ ಆಡುವುದು ರೂಢಿ, ಇನ್ನು Dark fields ಎಂದರೆ ಹೇಗೋ !
ಇಲ್ಲೂ ಒಂದು ವಿಶೇಷವೆಂದರೆ ನಮ್ಮಲ್ಲಿ Dark Forest ಅನ್ನುವುದಕ್ಕೆ ಸಂವಾದಿಯಾದ ಪ್ರಯೋಗಗಳು ಇರಬಹುದಾದರೂ ಅವು ಅಷ್ಟಾಗಿ ಚಾಲ್ತಿಯಲ್ಲಿಲ್ಲ, ನಮ್ಮದು ಏನಿದ್ದರೂ ದಟ್ಟವಾದ ಕಾಡು, ಅದು ದಟ್ಟವಾಗಿರುವುದೇ ಅದರ darkness ಇಗೆ ಕಾರಣ ಎಂದು ಲಕ್ಷಣಾರ್ಥವನ್ನು ಬೇಕಾದರೆ ಹೇಳಬಹುದು !

ಮಂಜುನಾಥ ಕೊಳ್ಳೇಗಾಲ : "ತನಿವಣ್ಣು" ಮನೋರಮೆಯು ಮುದ್ದಣನಿಗೆ ತನಿವಣ್ಣನ್ನು ತಿನಲಿತ್ತು, ಕೆನೆವಾಲಂ ಕುಡಿವೊಡಿತ್ತು ಉಪಚರಿಸಿದ್ದನ್ನು ನೆನಪಿಸಿತು. ಈ ನೆನಪು ಬ್ರಿಟಿಷರಿಗೆ ಬರಲಾರದು, ಹಾಗಾಗಿ ತನಿವಣ್ಣನ್ನು ಹಾಗೆಯೇ ಇಂಗ್ಲೀಷಿಗೆ ತಂದರೆ ಆ ರುಚಿ ಬಂದೀತೆಂದು ಹೇಳಲಾಗದು. ತಂಬೆಲರೂ ಹಾಗೆಯೇ - ಈ ಮಾತಿನ ಮೂಲಕ ಅನುವಾದದ ಮೂಲಭೂತಸಮಸ್ಯೆಯೊಂದನ್ನು ತಾವು ಎತ್ತಿದಿರಿ. ನಿಜ. ಅನುವಾದವೊಂದು ಯಶಸ್ವಿಯಾಗಬೇಕಾದರೆ ಅಲ್ಲಿ ಕೆಲಸ ಮಾಡುವುದು ಒಂದು ನಿಘಂಟು ಮಾತ್ರವಲ್ಲ, ಆ ಪದ್ಯವೋ ಗದ್ಯವೋ ಹುಟ್ಟಿದ ನೆಲದ ಇಡೀ ವ್ಯಕ್ತಿತ್ವ ಅದರಲ್ಲಿ ತೊಡಗಿಕೊಳ್ಳುತ್ತದೆ. ಪದವೊಂದನ್ನು ಅದರೆಲ್ಲ ಸ್ಮೃತಿಗಳೊಂದಿಗೆ ಇನ್ನೊಂದು ಭಾಷೆಗೆ ತರುವುದು ನಿಜವಾದ ಸವಾಲು - ಎಷ್ಟೋ ಬಾರಿ ಅಸಾಧ್ಯವಾದ ಸವಾಲು. ನೀವು ಅನುವಾದಿಸುವ ಪದವು ಅನುವಾದದಲ್ಲಿ ತೀರ ವಿವರಣಾತ್ಮಕವಾಗಬಾರದು, ಹಾಗೆಂದು ಪದವನ್ನು ಹಾಗೆಹಾಗೇ ಹಾಕಿ ವಿವರಣೆಯನ್ನು ಅಡಿ ಟಿಪ್ಪಣಿಯಲ್ಲಿ ಹಾಕಿದರೂ ಪದ್ಯದ ಮೈಯಂತೂ ಕೆಟ್ಟೇ ಕೆಡುತ್ತದೆ, ಜೊತೆಗೆ ನಾದ, ಲಯ ಇವೆಲ್ಲವನ್ನೂ ಒಂದಿಲ್ಲೊಂದು ರೀತಿಯಲ್ಲಿ ಹಿಡಿದಿಡಬೇಕಾಗುತ್ತದೆ. ಇದು ಹೇಗೆಂದರೆ, ಒಂದು ರೀತಿಯಲ್ಲಿ ಸಂಗೀತಕ್ಕೆ ಮೃದಂಗ ನುಡಿಸಿದಂತೆ. ರಾಗದಲ್ಲಿ, ಸ್ವರವಿನ್ಯಾಸದಲ್ಲಿ ಬರುವುದೆಲ್ಲ ಮೃದಂಗದಲ್ಲಿ ಬರಲಾರದು, ಏಕೆಂದರೆ ಅದು ಮೂಲತಃ ಸ್ವರವಾದ್ಯವಲ್ಲ. ಆದರೆ ರಾಗದ ಭಾವಮುದ್ರೆಯನ್ನು ಮೃದಂಗವು ಅದರದೇ ರೀತಿಯಲ್ಲಿ ಪ್ರಸ್ತುತಪಡಿಸಬಲ್ಲುದು. ಹೀಗೆ ಮಾಡುವಲ್ಲಿ ಮೃದಂಗವಾದಕನಿಗೆ, ಆ ರಾಗದ ಭಾವಮುದ್ರೆಯನ್ನು ಹಿಡಿಯುವಷ್ಟು ಸಂಗೀತದ ’ಅರಿವು’ ಇರಬೇಕಾಗುತ್ತದೆ. ಇದು ಕೆಲವೊಮ್ಮೆ "ಗರೀಸನಿದ ರಿಸಾನಿದಪ ಗಾಮಾದಾ" ಎನ್ನುವುದನ್ನು "ತದೀಂತಕಿಟ ತಧೀಂತಕಿಟ ತತ್ತಜ್ಝಂ" ಎಂದು ’ಅನುವಾದಿಸಿ’ದಷ್ಟು ಸರಳವೂ ಇರಬಹುದು, ಅಥವಾ ವಿವರಣೆಗೆ ದಕ್ಕದಷ್ಟು ಕ್ಲಿಷ್ಟವೂ ಇರಬಹುದು. ಒಟ್ಟಿನಲ್ಲಿ ಕೇಳುಗನಿಗೆ ಇವೆರಡರ ನಡುವೆ ’ಮೇಳ’ ಇದೆಯೆನ್ನಿಸುವುದು ಮುಖ್ಯ. ಇದರಲ್ಲಿ ಕೇಳುಗನ ಕೇಳ್ಮೆಯ ಸಂಸ್ಕಾರದ್ದೂ ಬಹುಮುಖ್ಯ ಪಾತ್ರ. ಆದ್ದರಿಂದಲೇ ಸಂಸ್ಕೃತದ ಸುಫಲ ಕನ್ನಡದಲ್ಲಿ ಯಾವಾಗಲೂ ತನಿವಣ್ಣೇ ಆಗುವುದಿಲ್ಲ, ಸಂದರ್ಭಕ್ಕೆ ತಕ್ಕಂತೆ ಇನಿವಣ್ಣೂ ಆಗಬಹುದು, ಸವಿವಣ್ಣೂ ಆಗಬಹುದು; ಸವಿನೀರು ಸಿಹಿನೀರಾಗಬಹುದು. ಅವೇ ಇಂಗ್ಲಿಷಿನಲ್ಲಿ good fruit, tasty fruit, sweet fruit ಏನಾದರೂ ಆಗಬಹುದು, ಅಥವಾ ಸಂದರ್ಭವು ಬಲಗೊಟ್ಟರೆ ಕೇವಲ fruit ಎಂಬ ಶಬ್ದವೇ ಇವೆಲ್ಲ ಅರ್ಥವನ್ನೂ ಕಟ್ಟಿಕೊಡಲೂ ಬಹುದು.

ಇದೇ ಹಿನ್ನೆಲೆಯಲ್ಲಿ ಶ್ಯಾಮಲ ಶಬ್ದವನ್ನೂ ವಿವರಿಸಬಹುದು. ದುರ್ಗೆಯ ಬಣ್ಣ ಕಪ್ಪು (ಕಪ್ಪೆಂದರೆ ಕಪ್ಪಲ್ಲ, ಇರಲಿ). ಅದಕ್ಕೆ ಸಂವಾದಿಯಾಗಿ ಪ್ರಕೃತಿವಿವರಣೆಯಲ್ಲಿ ಸಸ್ಯಶ್ಯಾಮಲಾ ಎಂದಿದ್ದಾರೆ. ಸಸ್ಯಶ್ಯಾಮಲಾ ಎನ್ನುವುದು ಬಂಕಿಮಚಂದ್ರರದ್ದೇ ಸೃಷ್ಟಿಯಲ್ಲ. ಸಸ್ಯಶ್ಯಾಮಲಾ ಎನ್ನುವ ಪದವು ಸಸ್ಯಸಿರಿಯನ್ನು ಹೊಂದಿದವಳು ಎಂಬ ಅರ್ಥದಲ್ಲಿ ಬಳಕೆಯಲ್ಲಿರುವ ಪದವೇ. ಆದರೆ ಶ್ಯಾಮಲಾ ಎಂಬ ಪದ ಎಂಥದ್ದೆಂದರೆ, ನಾನು ಈ ಹಿಂದೆ ವಿವರಿಸಿದಂತೆ ವಿವಿಧ ವಸ್ತು ವರ್ಣಗಳೊಡನೆ ಇದು ವಿವಿಧ ಅರ್ಥಚ್ಛಾಯೆಗಳನ್ನು ಪಡೆದುಕೊಳ್ಳುತ್ತದೆ. ಪಂಪನ ಕದಳೀಗರ್ಭಶ್ಯಾಮ ಒಳ್ಳೆಯ ಉದಾಹರಣೆ. ಇಲ್ಲಿ ಶ್ಯಾಮ ಕಪ್ಪಲ್ಲ, ಹಸಿರೂ ಅಲ್ಲ, ಬಾಳೆಯ ಮೋತೆ ಕುಡಿಯೊಡುವಲ್ಲಿ ಕೆಂಗಪ್ಪಿನ ನಡುವೆ ಮೂಡುವ ನಸುಗೆಂಪು. ಇದನ್ನು ಹೇಗೆ ವರ್ಣಿಸುತ್ತೀರಿ? ಶ್ಯಾಮ ಎಂಬ ಒಂದೇ ಪದ ಇದನ್ನು ಕಟ್ಟಿಕೊಡಲಾರದು, ಅದಕ್ಕಾಗಿಯೇ ಅದು "ಕದಳೀಗರ್ಭಶ್ಯಾಮ" ಆಗಬೇಕಾಯಿತು. ಕದಳೀಗರ್ಭಶ್ಯಾಮ, ನೀಲಮೇಘಶ್ಯಾಮ, ಸಸ್ಯಶ್ಯಾಮ, ಕೇವಲ ಶ್ಯಾಮ, ಇವೆಲ್ಲಾ ಕಪ್ಪೇ ಅಲ್ಲ, ನಸುಗಪ್ಪಿನ ಅಂಶ ಹೊಂದಿದ ಬೇರೆಬೇರೆ ಬಣ್ಣಗಳು - ಎಂದರೆ, ಆಯಾ ಬಣ್ಣಗಳಿಗೆ ತುಸು ದಟ್ಟತನವನ್ನು ನೀಡುವಂಥವು. ಹೋಗಲಿ, ದಟ್ಟ ಎಂಬುದನ್ನಾದರೂ ಸರಳವಾಗಿ dark ಎನ್ನಬಹುದೇ? ದಟ್ಟದಂತೆಯೇ dark ಕೂಡ ಪ್ರತ್ಯೇಕವಾಗಿ ಬಳಸಿ ದಕ್ಕಿಸಿಕೊಳ್ಳಬಹುದಾದ ಪದವಲ್ಲ, ಅದನ್ನು ಇನ್ನೊಂದರ ಜೊತೆ ಬಳಸಿದರೆ ಬೇರೆಯೇ ಅರ್ಥ ಕೊಡುವಂಥದು. ಇನ್ನು ಅರವಿಂದರು ಸಸ್ಯಶ್ಯಾಮಲೆ ಎನ್ನುವುದನ್ನು dark fields ಎನ್ನುತ್ತಾರೆ. ಆದರೆ ಈ fields ಎನ್ನುವ ಪದ, ಸಸ್ಯರಾಜಿಯನ್ನು ಹೊಂದಿರುವ ಬಯಲು, ಬೆಟ್ಟ, ಗುಡ್ಡ ಕಾಡು ಇವೆಲ್ಲವನ್ನೂ ಒಂದಿನಿತೂ ಸೂಚಿಸುವುದಿಲ್ಲ. ಆದ್ದರಿಂದ, ಶ್ಯಾಮಲೆ ಎಂಬುದನ್ನು ವಿವಿಧಾರ್ಥಗಳಲ್ಲಿ ಬಳಸಿಕೊಳ್ಳುವ ಸಂಸ್ಕೃತದ ಸೌಲಭ್ಯ ಇಂಗ್ಲಿಷಿನಲ್ಲಿ ಸಿಗದಿರುವಾಗ, ಅದನ್ನು ಆಯಾ ಸಂದರ್ಭಕ್ಕೆ ತಕ್ಕಂತೆ ಅನುವಾದಿಸುವುದು ಯುಕ್ತ ಮಾರ್ಗ ಎಂದು ನನ್ನ ಅನಿಸಿಕೆ. ಹೀಗೆ ಮಾಡುವಾಗ ಆಯಾ ಸಂದರ್ಭಕ್ಕೆ ಇಂಗ್ಲಿಷಿನಲ್ಲಿ ಸಮಾನವಾದ ಪ್ರತಿಮೆಗಳನ್ನು ರೂಪಿಸಿಕೊಳ್ಳುವುದು ಅನುವಾದಕನ ಕೆಲಸ.
---------------------------------------------------------------------------------------------
ಈ ವಿಷಯವಾಗಿ ಮತ್ತಷ್ಟು ಪದಪ್ರಯೋಗಗಳ ಸೂಕ್ಷ್ಮಗಳ ವಿಶ್ಲೇಷಣೆಯನ್ನು ಮಂಜುನಾಥರು ಇಲ್ಲಿ ಮಾಡಿದ್ದಾರೆ: https://nannabaraha.blogspot.com/2018/09/blog-post.html

ಅದಕ್ಕೆ ನನ್ನ ಪ್ರತಿಕ್ರಿಯೆಯನ್ನು ಕೆಳಗೆ ಕೊಟ್ಟಿದ್ದೇನೆ :

"ಮುಗುಳ್ನಗೆಗೂ ನಗುವುದಕ್ಕೂ (smile and laughter) ಅಜಗಜಾಂತರ ವ್ಯತ್ಯಾಸವಿದೆ. Laughing low ಎನ್ನುವುದು ಅಪಹಾಸ್ಯದ ಮುಸಿನಗೆಯಾಗಬಲ್ಲುದೇ ವಿನಾ ಮುಗುಳ್ನಗೆಯಾಗಲಾರದು. ಮತ್ತು Laughing low and sweet ಎನ್ನುವುದು ಕಪಟದ ನಗೆಯಲ್ಲದೇ ಬೇರೊಂದಾಗಲಾರದು."
ಎಂಬ ಅರೋಬಿಂದೋ ಅವರ ಅನುವಾದದ ಬಗೆಗಿನ ಮಂಜುನಾಥರ ವಿಶ್ಲೇಷಣೆ ನನಗೆ ಒಪ್ಪಿಗೆಯಾಗಲಿಲ್ಲ. ಮೊದಲಿಗೆ smile and laughter ಗಳಿಗೆ ವ್ಯತ್ಯಾಸವಿದೆ ಎಂಬ ನಿಮ್ಮ ಮಾತು ಸರಿಯಾಗಿದೆ. ಆದರೆ ಇಲ್ಲಿ laugh ಅನ್ನುವುದನ್ನು qualify ಮಾಡಲಿಕ್ಕೆಂದೇ low ಎಂಬ ಪದ ಬಂದಿದೆ. ಇಲ್ಲಿನ low ಎಂಬ ಪದ flat adverb ಎಂದು ಕರೆಸಿಕೊಳ್ಳುವ, ಈಗ ಈ ಅರ್ಥದಲ್ಲಿ ಅಷ್ಟಾಗಿ ಬಳಕೆಯಲ್ಲಿಲ್ಲದ ಪದ.

ನಮ್ಮ "ಮುಗುಳ್ನಗೆ"ಯೂ ಹಾಗೆಯೇ ತಾನೇ. ಇಲ್ಲೂ "ನಗೆ" ಎಂಬುದನ್ನು "ಮುಗುಳು" ಎಂಬ ಪದ qualify ಮಾಡಿದೆ. ಮುಗುಳು = ಮೊಗ್ಗು. ಆದ್ದರಿಂದ, ಮೊಗ್ಗು ಅರಳಿದಂತೆ ನಗು = ಮುಗುಳ್ನಗು. ಅಲ್ಲವೇ ? ಮುಗುಳ್ನಗೆಯ ನಗೆಯಂತೆಯೇ Laughing low ಎಂಬಲ್ಲಿನ laugh. ನಮ್ಮಲ್ಲಿ ಸ್ಮಿತ, ಹಸಿತ,ವಿಹಸಿತ ,ಉಪಹಸಿತ,ಅತಿಹಸಿತ ಅಂತೆಲ್ಲ ನಗೆಯ ಬೇರೆ ಬೇರೆ ಪ್ರಕಾರಗಳನ್ನು ಹೇಳುತ್ತಾರಲ್ಲ, ಇವುಗಳಲ್ಲಿನ ಹಸಿತ(Gentle laughter) ಮತ್ತು ವಿಹಸಿತ(Gentle open laughter) ಎಂಬ ಪದಗಳಿಗೆ ಹತ್ತಿರದ ಅರ್ಥವನ್ನು Laughing low ಎಂಬುದಕ್ಕೆ ಮಾಡಿಕೊಳ್ಳಬೇಕು. ಒಟ್ಟಿನಲ್ಲಿ Laughing low is not the same as laughing. Laughing low = ಮೆಲುನಗೆ ಎಂದು ಹೇಳಿದರೆ ಸಾಕು.

ಹೀಗಿದ್ದರೂ Laughing low ಎಂಬುದು ಭಾವದ ದೃಷ್ಟಿಯಿಂದ ಒಳ್ಳೆಯ ಅನುವಾದವಲ್ಲ ಎಂಬಲ್ಲಿ ನಿಮ್ಮ ಅಭಿಪ್ರಾಯ ನನಗೂ ಒಪ್ಪಿಗೆಯೇ, ಇಲ್ಲಿ ಸ್ಮಿತ ಅಥವಾ charming smile ಎಂಬ ಭಾವವೇ ಬರಬೇಕಾದ್ದು. ಇಲ್ಲಿ ಅನುವಾದ ಮಾಡುವಾಗ ಕಷ್ಟವಾಗುವುದು ಏನೆಂದರ soft ,sweet,charming ಮುಂತಾದ ಪದಗಳು ಬಳಸಿ ಬಳಸಿ ಸವಕಲಾಗಿರುವುದರಿಂದ ಅವು (ಅರ್ಥದ ದೃಷ್ಟಿಯಿಂದ ಸರಿಯಾದರೂ) ವಿಶೇಷ ಭಾವಗಳನ್ನು ಉದ್ದೀಪಿಸುವುದು ಕಷ್ಟ. ಇಂತಲ್ಲಿ soft ,sweet,charming ಮುಂತಾದ ಭಾವಗಳನ್ನು ಪ್ರಚೋದಿಸುವಂತೆ ಯಾವುದಾದರೂ ರೂಪಕವನ್ನು ಬಳಸಿ ಈ ಕಷ್ಟದಿಂದ ಪಾರಾಗಬಹುದು. ಅಥವಾ ಇಂತಹಾ ನಗೆಯ sweetness ಅನ್ನು ಹೇಳಬೇಕಾದಾಗ Wordsworth,Coleridge,Shelley,Blake, Keats ಮುಂತಾದವರು ಅಂತದ್ದನ್ನು ಹೇಗೆ ಹೇಳಿದ್ದಾರೆಂದು ನೋಡಿಕೊಳ್ಳಬಹುದು (ಉದಾಹರಣೆಗಳು ಇದ್ದರೆ, ಅವು ಪಕ್ಕನೆ ನೆನಪಾದರೆ ! )

ಮೇಲೆ ಮೊದಲಿಗೆ ಹೇಳಿದ ಮಾತನ್ನೇ speaker sweet and low ಎಂಬುದರ ಬಗ್ಗೆಯೂ ಹೇಳಬಹುದು. speak sweet and low ಅಂದರೆ ಮೆಲ್ನುಡಿ ಎಂದು ಮಾಡಿಕೊಳ್ಳಬೇಕು. ಇಲ್ಲಿ ಬರಬೇಕಾದ್ದು ಬರೀ ಮೇಲ್ನುಡಿಯಲ್ಲ, sweet words ಎಂಬ ಅರ್ಥದಲ್ಲಿ ನಿಮ್ಮ ಅಭಿಪ್ರಾಯವನ್ನು ಒಪ್ಪುತ್ತೇನೆ.

Movies with great plot twists

Here is a quick recommendation list of movies with great plot twists.

A good twist for me is one which makes perfect sense even during a second viewing, It is fairly clued, you feel like, "Why on earth did I not see that one coming? All the clues were there!", The worst ones are the ones where they say, It all was just a dream!! Or It was just an imagination/hallucination of Hero!! (There are some notable exceptions to this)

The clues were all there but the writer cleverly misled us. It is similar to how the magician misdirects us. Like Nolan had put it in The Prestige, we were not watching closely! It was right in front of our eyes but the writer managed to misdirect us and make us perceive things differently. When it is revealed in the end, it makes us go 'Wow!!'

Some of the most deliciously ironic/poetic twists that I have seen are the ones in TV shows -- The Twilight Zone and Alfred Hitchcock Presents. I Would highly recommend these 2 shows.

Some good movies with plot twists that I liked:
Memento
Primal fear
6th sense
Predestination
Planet of Apes
House of Games
Orphan
Saw
The Spanish prisoner
The game
The Prestige
The Visit
The crying game (British)
Pieta (Korean)
Incendies (Canadian)
The illusionist
The bird with crystal plumage (Italian)
Psycho
The Village
Unbreakable
The Others
Loft (Belgian)
The secret in their eyes (Argentinean)
Atonement (British)
Chinatown
The Conversation
Scream
Gone baby gone
Body Heat
The Body (Spanish)
Butterfly on a wheel
Matchstick men
Witness for the prosecution
Nine queens(Argentinean)
the best offer(Italian)
Les diaboliques(French)
Dark City
Another Earth
Following
Identity

Recommendations are welcome

Sunday, 6 January 2019

ರಾವಣ ವಧೆ - ಏಕವ್ಯಕ್ತಿ ತಾಳಮದ್ದಳೆ

ಇವತ್ತು ಬೆಂಗಳೂರಿನ ಗೋಖಲೆ ವಿಚಾರ ಸಂಸ್ಥೆಯಲ್ಲಿ ನಡೆದ, "ಜನ್ಮರಹಸ್ಯ (ರಾವಣ ವಧೆ)" ಏಕವ್ಯಕ್ತಿ ತಾಳಮದ್ದಳೆಗೆ ಹೋಗಿ ಬಂದೆ. ನನಗೆ ತಿಳಿದಂತೆ, ಗೋಖಲೆಯಲ್ಲಿ ಆದ ಎಲ್ಲ ಯಕ್ಷಗಾನ ತಾಳಮದ್ದಲೆಗಳೂ ಸೊಗಸಾಗಿ ಮೂಡಿ ಬಂದಿವೆ.

ಗೋಖಲೆ ಸಂಸ್ಥೆಯ ಗ್ರಂಥಾಲಯವೆಂದರೆ ನನಗೆ ಅದೊಂದು ಪವಿತ್ರಸ್ಥಳವಿದ್ದಂತೆ. ಅಲ್ಲಿ ಡಿವಿಜಿ, ನಿಟ್ಟೂರು ಶ್ರೀನಿವಾಸರಾಯರು, ಎಲ್ ಎಸ್ ಶೇಷಗಿರಿರಾಯರು ಮುಂತಾದವರ ಖಾಸಗಿ ಸಂಗ್ರಹದಲ್ಲಿದ್ದ ಪುಸ್ತಕಗಳನ್ನು ಓದುವುದು, ನಾಡಿನ ದೊಡ್ಡ ಪಂಡಿತರ ಫೋಟೋಗಳನ್ನು ನೋಡುವುದೂ ಖುಷಿ ಕೊಡುವ ವಿಚಾರ. ಅಲ್ಲಿನ ವೇದಿಕೆಯೂ ಅಷ್ಟೇ, ಡಿವಿಜಯವರ ಕಾಲದಿಂದಲೂ ಅದು ತೂಕದ, ಎಷ್ಟೋ ಜನ ದೊಡ್ಡ ದೊಡ್ಡವರು ಹತ್ತಿ ಇಳಿದಿರುವ ಜಾಗ. ಅಲ್ಲೇ ಮೇಲೆ, "ನಾನು ಕೇಳುತ್ತಿದ್ದೇನೆ, ಎಚ್ಚರವಿರಲಿ" ಎಂಬ ಭಾವ ಹುಟ್ಟಿಸುವ ಡಿವಿಜಿಯವರ ಭಾವಚಿತ್ರ , ಒಪ್ಪ ಓರಣದ, ಸಮಯಕ್ಕೆ ಸರಿಯಾಗಿ ಶುರುವಾಗಿ, ಕ್ಲಪ್ತ ಸಮಯಕ್ಕೆ ಮುಗಿಸುವ ಶಿಸ್ತಿನ ಸಂಯೋಜನೆ, ಹೌಸ್ ಫುಲ್ ಆಗಿಸುವ, ಆಗಾಗ ಮೆಚ್ಚಿ "ಆಹಾ ಓಹೋ" ಅಂತ ತಲೆದೂಗುವ ಸಹೃದಯಿ,ರಸಿಕ ಪ್ರೇಕ್ಷಕವರ್ಗ ಎಲ್ಲ ಸೇರಿ ಒಂದೊಳ್ಳೆ ಕಾರ್ಯಕ್ರಮಕ್ಕೆ ಹೋಗಿಬಂದ ಸಾರ್ಥಕ ಭಾವ ಹುಟ್ಟಿಸುತ್ತದೆ. ಇದು ಕೂಡಾ ಹಾಗೆಯೇ ಇದ್ದು 'ರಸವತ್' ಅನ್ನಿಸಿತು.

ರಂಗಸ್ಥಳದ ಮೇಲೆಯೇ ಶತಾವಧಾನಿ ಗಣೇಶರು ಭಾವಪರವಶರಾಗಿ ದಿವಾಕರ ಹೆಗಡೆಯವರಿಗೆ ಪೊಡಮಡುವ ಅಪೂರ್ವ ವಿದ್ಯಮಾನವೂ ನಡೆದು ಹೋಯಿತು. "ವ್ಯಾಸ ವಾಲ್ಮೀಕಿಯರೇ ಇವರೊಳಗೆ ಕೂತು, ಇವರ ಬಾಯಿಂದ ಮಾತುಗಳನ್ನು ಆಡಿಸುತ್ತಿದ್ದಾರೆ" ಎಂಬ ಕೊಂಡಾಟ ಗಣೇಶರ ಬಾಯಿಂದ ಬಂತು.

ಎಪಿ ಪಾಠಕರ ಭಾಗವತಿಕೆ. ರಾಜೇಶ್ ಆಚಾರ್ ಅವರೆ ಮದ್ದಳೆಯ ಹಿಮ್ಮೇಳ ಇತ್ತು. ದಿವಾಕರ ಹೆಗಡೆಯವರದ್ದು ಚೊಕ್ಕವಾದ ಉತ್ಕೃಷ್ಟವಾದ, ರಸವ್ಯಂಜಕವಾದ ಪಾತ್ರಸೃಷ್ಟಿ. ಪಾತ್ರಗಳೇ ತಾನಾಗಿ,ಭಾವಪೂರ್ಣ ಪ್ರಸ್ತುತಿಯಿಂದ ಪ್ರದರ್ಶನವನ್ನು ಅವರು ಮೇಲೆ ಹಾಕಿದರು. ಕೋಟೆಬಲ್ ಕೋಟುಗಳಾಗಬಹುದಾದ ಪಂಚ್ ಡೈಲಾಗ್ ಅಂತ ಹೇಳಿಸಿಕೊಳ್ಳುವ ಮಾತುಗಳನ್ನು ಸಾಲು ಸಾಲಾಗಿ ಹೇಳಿ ಚಪ್ಪಾಳೆ ಗಿಟ್ಟಿಸಿಕೊಳ್ಳುವುದು ದಿವಾಕರ ಹೆಗಡೆಯವರ ಶೈಲಿ. ಅದನ್ನವರು ಭಾವ ಕೆಡದಂತೆ, ಔಚಿತ್ಯ ತಪ್ಪದಂತೆ ಮಾಡುವ ರೀತಿ ಶ್ಲಾಘ್ಯ. ಭಾವದ ಎಣ್ಣೆಯಲ್ಲಿ ಕಾಯಿಸಿ ಮುಟ್ಟಿದರೆ ರಸ ಒಸರುವ ಜಿಲೇಬಿಯಂತೆ ಪಾತ್ರವನ್ನು ಕಟ್ಟುವ ಅನನ್ಯ ಸಾಧಾರಣವಾದ ಅವರ ಶೈಲಿಯೊಂದು ಮಾದರಿ.

ವ್ಯಾಸೋಚ್ಚಿಷ್ಠಮ್ ಜಗತ್ ಸರ್ವಂ (ಎಲ್ಲವೂ ವ್ಯಾಸರ ಎಂಜಲು) ಎಂಬೊಂದು ಮಾತು ಸಾಹಿತ್ಯವಲಯದಲ್ಲಿರುವಂತೆ, ಎಲ್ಲವೂ ಶೇಣಿ ಗೋಪಾಲಕೃಷ್ಣ ಭಟ್ಟರು (ಅಥವಾ ಶೇಣಿ ಮತ್ತು ಸಾಮಗರು) ಈಗಾಗಲೇ ಹೇಳಿಬಿಟ್ಟಿರುವುದರ ಅನುಕರಣೆ ಅಥವಾ ಮುಂಬರಿಕೆ ಅಂತೊಂದು ಮಾತಿದೆ. ಬೇರೆಯವರಿಗೆ ಹೊಸತನ್ನು ಹೇಳಲು ಏನೂ ಉಳಿಯಲಿಲ್ಲ ಅನ್ನಿಸುವಷ್ಟು ತರದಲ್ಲಿ, ಬಗೆಬಗೆಯಾಗಿ ಅವರು ಈ ಪಾತ್ರಗಳನ್ನು ಕಡೆದಿದ್ದಾರೆ ಎಂಬುದು ಇಲ್ಲಿನ ಭಾವ . ದಿವಾಕರ ಹೆಗಡೆಯವರನ್ನೂ ಸೇರಿಸಿ ಎಲ್ಲರೂ ರಾವಣನ ಪಾತ್ರಸೃಷ್ಟಿಗೆ ಮತ್ತು ಎಷ್ಟೋ ಪಾತ್ರಗಳಿಗೆ ಶೇಣಿಯವರಿಗೆ ಋಣಿಗಳೇ. ಇಷ್ಟಿದ್ದರೂ ಇಂತದ್ದೊಂದು ಬುದ್ಧಿ ಭಾವಗಳ ವಿದ್ಯುದಾಲಿಂಗನವನ್ನು ಕಂಡಾಗ, ಇಷ್ಟು ರಸ ಉಕ್ಕಿದಾಗ ದಿವಾಕರ ಹೆಗಡೆಯವರು ಅದನ್ನು ಹೊಸತಾಗಿಯೇ ಕಟ್ಟಿದರು ಅನ್ನಿಸುತ್ತದೆ. ಅದಕ್ಕವರಿಗೆ ನಮನಗಳು. "ಇಂತದ್ದೊಂದು ವಿಷಯದಲ್ಲಿ, ನಿಮ್ಮ ಹತ್ತಿರ ಮಾತಾಡಲಿಕ್ಕಿದೆ, ಒಮ್ಮೆ ನಿಮಗೆ ಸಿಕ್ಕಲೇ" ಅಂತ ನಾನು ಕೇಳಿದಾಗ, ಸ್ವಲ್ಪವೂ ದೊಡ್ಡಸ್ತಿಕೆ, ಬಿಗುಮಾನಗಳಿಲ್ಲದೆ "ಫೋನ್ ನಂಬರ್ ತಗೊಳ್ಳಿ" ಅಂತಂದು ಅಲ್ಲಿಯೇ ಕೊಟ್ಟ ಗಣೇಶರ ನಿರಾಡಂಬರ ಶೈಲಿ ಬೋನಸ್ ಖುಷಿ ಕೊಟ್ಟಿತು.

ಹೆಸರಿಗೆ ತಕ್ಕಂತೆ !!

"ಹೆತ್ತ ಮಕ್ಕಳಿಗೆ ಹೆಸರಿಡುವ ಹೊಣೆಯೇನು ಅಂತಿಂತಹದಲ್ಲ. ಪ್ರಹ್ಲಾದ ಅಂತ ಹೆಸರಿಡುವಾಗ ತಂದೆಗೂ, ಘಟೋತ್ಕಚನೆಂದು ಹೆಸರಿಡುವಾಗ ತಾಯಿಗೂ, ಕೃಷ್ಣನೆಂದು ಹೆಸರಿಡುವಾಗ ಸೋದರ ಮಾವನಿಗೂ ಕೊಂಚ ಕಷ್ಟವೆನಿಸಿದರೆ ಏನೂ ಸೋಜಿಗವಿಲ್ಲ. ನಾವು ನಿತ್ಯವೂ ಕಾಣುವ ಹಲವು ವ್ಯಕ್ತಿಗಳ ವ್ಯಕ್ತಿತ್ವಕ್ಕೂ ಅವರ ಹೆಸರಿಗೂ ಇರುವ— ಅಂದರೆ ಇರದಿರುವ — ಸಂಬಂಧವನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ಆ ಅವರೇ ನಕ್ಕಾರು, ನಗಲು ಅವರಿಗೆ ಬರುತ್ತಿದ್ದರೆ. ಗಂಡನಿಗೆ ಬೇರೆ ಊರಿಗೆ ವರ್ಗವಾದಾಗ ಹಿಂಬಾಲಿಸಲು ತಕರಾರು ಹೂಡಿದ ಸೀತಮ್ಮ,ಅನ್ನದಲ್ಲಿ ವಿಷ ಬೆರೆಸಿ ಕೈಹಿಡಿದ ಗಂಡನನ್ನು ಯಮರಾಯನ ಕೈಗೆ ಹಿಡಿದುಕೊಟ್ಟ ಮಹಾಸತಿ ಸಾವಿತ್ರಮ್ಮ,ಊರಿಗೊಂದು ಹೆಂಣನ್ನಿಟ್ಟ ಡ್ರೈವರ್ ರಾಮು,ದಾಯಾದಿಯ ಮಗನನ್ನು ದತ್ತು ಕೇಳುವ ಸಂತಾನಂ ಅಯ್ಯಂಗಾರರೂ, ಕಾರ್ಕೋಟಕನ ಅನುಗ್ರಹ ಹೊಂದಿದ ನಳನ ರೂಪವನ್ನೂ ಧಿಕ್ಕರಿಸುವಂತಹ ರೂಪವುಳ್ಳ ಸುಂದರರಾಜನ್ನರೂ ಹೇರಳವಾಗಿದ್ದಾರೆ. ಬಸ್ ಸ್ಟ್ಯಾಂಡಿನಲ್ಲಿ ಕಾಡುತ್ತಿದ್ದ ಭಿಕ್ಷುಕಳನ್ನು ಹೆಸರು ಕೇಳಿದರೆ,ಲಕ್ಷ್ಮಿ ಎಂದು ಹೇಳಿ ತಾನೇ ನಕ್ಕಾಳು" ---> ಬೀಚಿ

ಆದರೆ ಒಮ್ಮೊಮ್ಮೆ,ತಮಾಷೆಗೆಂಬಂತೆ, ಇಟ್ಟ ಹೆಸರಿಗೆ ಸರಿಯಾಗಿ ಇರುವವರೂ ಹುಟ್ಟುವುದುಂಟು. ಇಂತಹಾ ಕೆಲವು ಹೆಸರುಗಳನ್ನು ಪಟ್ಟಿಮಾಡುವ ಪ್ರಯತ್ನ. ಸುಮಾರು ನೂರು ವರ್ಷಗಳಿಗೆ ಮೊದಲು ನರವಿಜ್ಞಾನ(neurology)ಕ್ಕೆ ಸಂಬಂಧಪಟ್ಟ ಪತ್ರಿಕೆಯೊಂದು ಬರುತ್ತಿತ್ತು, ಆ ಪತ್ರಿಕೆಯ ಹೆಸರು, "Brain" ಅಂತ. ಅದರ ಸಂಪಾದಕ, ಅಂದರೆ ಹೆಡ್ ಆಗಿದ್ದವನು Henry Head, ಇವನಾದ ಮೇಲೆ ಆ ಜಾಗಕ್ಕೆ ಬಂದವನು Russell Brain ಎಂಬಾತ ! ಇವರಿಬ್ಬರೂ ಮೆದುಳಿನ ಬಗ್ಗೆ ಉದ್ದುದ್ದ ಬರೆದವರೇ. ಈ ಪತ್ರಿಕೆಯಲ್ಲಿ ಹೆನ್ರಿಯ ಬಗ್ಗೆ ರಸೆಲ್ ಬರೆದ ಲೇಖನವೊಂದನ್ನು Brain on Head in Brain ಅಂತ ಹೇಳಲಾಗಿದೆ ! Thomas Crapper ಅನ್ನುವವನು flush ಟಾಯ್ಲೆಟ್ ಗಳನ್ನು ಕಂಡು ಹಿಡಿದು, ಶೌಚಾಲಯದ ಕ್ಷೇತ್ರದಲ್ಲಿ ಒಂದಷ್ಟು ಕೆಲಸಗಳನ್ನು ಮಾಡಿದ್ದು ಚೋದ್ಯವೆಂದೇ ಹೇಳಬೇಕು.

Igor Judge ಎಂದೊಬ್ಬ ನ್ಯಾಯಾಧೀಶನಿದ್ದದ್ದು, ಇಸ್ಪೀಟಾಟ(poker)ದ ಚಾಂಪಿಯನ್ ಒಬ್ಬನಿಗೆ Chris Moneymaker ಎಂಬ ನಾಮಧೇಯವಿದ್ದದ್ದು ಎಲ್ಲ ಸುದ್ದಿಯಾಗಿದೆ. Wordsworth ಕವಿಯೂ ಖ್ಯಾತನಾಮನೇ, ಇದೇ ತರ Francine Prose ಅಂತೊಬ್ಬ ಕಾದಂಬರಿಗಾರ್ತಿಯಿದ್ದಾಳೆ. Margaret Court ಎಂಬ ಟೆನ್ನಿಸ್ ಚಾಂಪಿಯನ್ ಒಬ್ಬಳ ಹೆಸರನ್ನು ನೀವು ಓದಿರಬಹುದು, Chris Gayle ಎಷ್ಟೋ ಸಲ ಅಕ್ಷರಶಃ gale(ಬಿರುಗಾಳಿ) ಆಗಿಬಿಡುತ್ತಿದ್ದದ್ದು ಆರ್ಸಿಬಿ ಪ್ರಿಯರಿಗೆ ಗೊತ್ತೇ ಇದೆ, Usain Bolt ಅನ್ನುವುದೂ ಅನ್ವರ್ಥ ನಾಮವೇ ಸರಿ. Ken Hurt, Dalbert Fear ಅಂತೆಲ್ಲ ಹಲ್ಲಿನ ಡಾಕ್ಟರುಗಳಿದ್ದದ್ದು ತಮಾಷೆಯೆನ್ನಬೇಕು("ನೋವುಗಳಲ್ಲಿ ಎರಡು ವಿಧ : ಕೆಲವು ಫಿಸಿಕಲ್, ಇನ್ನು ಕೆಲವು ಮೆಂಟಲ್, ಇವೆರಡೂ ಇದ್ದರೆ ಅದು ಡೆಂಟಲ್!" ಎಂಬ ಆಗ್ಡೆನ್ ನ್ಯಾಶ್ ಪದ್ಯವನ್ನು ನೆನಪಿಸಿಕೊಳ್ಳಿ)

ನಮ್ಮಲ್ಲಿ ಚೆನ್ನಾಗಿ ದುಡ್ಡು ಮಾಡಿದ ಐಶ್ವರ್ಯ ರೈ, ಸುಂದರವಾಗಿ ನಗುತ್ತಿದ್ದ ಸುಸ್ಮಿತಾ ಸೇನ್(ಸ್ಮಿತ = ಮುಗುಳುನಗೆ), ಪಲ್ಲವಿ ಚರಣಗಳನ್ನು ಹಾಡುವ ಎಂಡಿ ಪಲ್ಲವಿ, ದೊಡ್ಡ ದೇಹದ ನಟ ದೊಡ್ಡಣ್ಣ, ಎಲ್ಲ ಅನ್ವರ್ಥ ನಾಮಗಳೆನ್ನಿಸಬಹುದು. ನಮ್ಮ ದೇಶದ ಆಜಾದಿಗಾಗಿ ಹೋರಾಡಿದ ಮೌಲಾನಾ ಅಬುಲ್ ಕಲಾಂ ಆಜಾದ್, ನರೇಂದ್ರ ಮೋದಿ (ನರೇಂದ್ರ ಅಂದರೆ ರಾಜ)ಗಳೂ ಸಾರ್ಥಕ ನಾಮಗಳು, ಅಂತೆಯೇ ದೇವರಾಜ ಅರಸು(ಇವರ ಹೆಸರಿನಲ್ಲಿ ರಾಜ ಮತ್ತು ಅರಸು ಎರಡೂ ಬಂದದ್ದರಿಂದ ಎರಡು ಸಲ ಮುಖ್ಯಮಂತ್ರಿಗಳಾದರು ಅನ್ನೋಣವೇ). ಇಂಥವರ ಕುಮಾರರೆಂದೇ ಹೆಸರಾದ ಎಚ್ಡಿ ಕುಮಾರಸ್ವಾಮಿ ಮತ್ತು ಕುಮಾರ ಬಂಗಾರಪ್ಪರನ್ನೂ ಪಟ್ಟಿಗೆ ಸೇರಿಸಬಹುದು. ಸಾಹಿತಿ, ಪಂಡಿತ ಮುಳಿಯ ತಿಮ್ಮಪ್ಪಯ್ಯನವರ ಹೆಸರಿಗೂ ತಮಾಷೆಯ ಅರ್ಥ ಕಟ್ಟಲಾಗಿತ್ತು. ಮುಳಿಸು ಅಂದರೆ ಕೋಪ. ಹಾಗಾಗಿ ತಿಮ್ಮಪ್ಪಯ್ಯ ಮುಳಿಯ ಅಂದರೆ ತಿಮ್ಮಪ್ಪಯ್ಯನಿಗೆ ಕೋಪ ಬರುವುದಿಲ್ಲ ಅಂತ ಅರ್ಥ! ಕಡೆಯದಾಗಿ Johnny Cash ಎಂಬ ಸಂಗೀತಕಾರ,Bob Hope ಎಂಬ ಹಾಸ್ಯಪಟುಗಳ ಹೆಸರಿನ ಮೇಲೆ ಬಂದ ಒಂದು ಚಾಟೂಕ್ತಿ: 20 years ago we had Johnny Cash, Bob Hope and Steve Jobs. Now we have no Cash, no Hope and no Jobs. Please don't let Kevin Bacon die!
ಇಂತವು ನಿಮಗೂ ಗೊತ್ತಿದ್ದರೆ, ಕಮೆಂಟು ಹಾಕುವಂತವರಾಗಿ.

ಭಾಷೆಯ ಜೊತೆ ಚೆಲ್ಲಾಟ - ದತ್ತಪದಿ

ಇಂಗ್ಲೀಷಿನಲ್ಲಿ ಭಾಷೆಯ ಜೊತೆಗೆ ಹೇಗೆಲ್ಲ ಬಗೆ ಬಗೆಯ ಮೋಜಿನ ಆಟಗಳನ್ನಾಡುತ್ತಾರೆ ಅಂತ ಹಿಂದೊಂದು ಲೇಖನ ಬರೆದಿದ್ದೆ. ಸಂಸ್ಕೃತ, ಕನ್ನಡಗಳಲ್ಲೂ ಇಂತವು ಬೇಕಾದಷ್ಟಿವೆ. ಇವತ್ತು ಅಂತದ್ದೊಂದು ಭಾಷಾಸರಸ ಪ್ರಕಾರದ ಕೈಕುಲುಕಿಸುತ್ತೇನೆ. ಇಂತದ್ದೊಂದು ವಾಟ್ಸಪ್ಪ್ ಮೆಸೇಜು ನಿಮಗೆ ಬಂದಿರಬಹುದು :
ಹೋಟೆಲೊಂದಕ್ಕೆ ಶತಾವಧಾನಿ ಗಣೇಶರು ಉಪಾಹಾರಕ್ಕೆ ಹೋಗಿದ್ದಾಗ, ಅವರ ಮುಖ ಪರಿಚಯ ಇರುವ ಮಾಣಿಯೊಬ್ಬ ಅಲ್ಲಿರುತ್ತಾನೆ, ಶತಾವಧಾನಿಗಳನ್ನು ಸವಾಲು ಜವಾಬಿನ ಆಟಕ್ಕೆ ಎಳೆಯುತ್ತಾನೆ:
'ನಾನೊಂದು ಸಮಸ್ಯೆ ಕೊಡ್ತೇನೆ, ಉತ್ರ ಕೊಡಿ,
'ಹೇಳಪ್ಪ'
'ಒಂದು ಪದ್ಯ ಮಾಡಿ. ಅದರಲ್ಲಿ ನಾನು ಹೇಳೋ ಐಟಮ್ ಅಷ್ಟೂ ಇರ್ಬೇಕು. ಅದೇ ಸರದಿಯಲ್ಲೂ ಬರಬೇಕು'
'ಹೇಳಿ'.
'ಸಾಂಬಾರು, ಚಟ್ನಿ, ವಡೆ, ಇಡ್ಲಿ'.
ಮಾಣಿಯ ಮುಖದಲ್ಲಿ ಗೆದ್ದ ನಗು. ಶತಾವಧಾನಿಗಳು ಅರ್ಧ ನಿಮಿಷ ಕಣ್ಣುಮುಚ್ಚಿ ಯೋಚಿಸಿ, ಗಂಟಲು ಸರಿಪಡಿಸಿಕೊಂಡು ಮಾತು ಶುರು ಮಾಡಿದರು: 'ಹೇ, ಸಾಂಬಾ, ರುದ್ರಾ! ಚಟ ಚಟ್ ನಿಟಿಲಾಕ್ಷಾ! ಜಗದೆಲ್ಲೆಡೆ ನೀನಿರುವಡೆ,ನಾ ಕಾಲೆಲ್ಲಿಡ್ಲಿ?'. ಸುಸ್ತಾದ ಮಾಣಿ, 'ನಿಮಗೆ ಒಂದು ಪೆಷಲ್ ಕಾಪಿ ತರ್ತೇನೆ' ಅಂತ ಓಡಿದ!

ಇಲ್ಲಿ ಮಾಣಿಯೂ ಅವಧಾನಿಗಳೂ ಆಡಿರುವ ಭಾಷೆಯ ಆಟವನ್ನು ದತ್ತಪದಿ ಅನ್ನುತ್ತಾರೆ. ಇಲ್ಲಿ ಬಂದ ಪ್ರಸಂಗ ವಾಸ್ತವವಲ್ಲ,ಮೇಲಿನದು ನಿಜವಾಗಿ ಗಣೇಶರು ಕಟ್ಟಿದ ಪದ್ಯವೇನೋ ಅಲ್ಲ (ವಾಟ್ಸಪ್ಪಿನಲ್ಲಿ ನಿಜ ಎಲ್ಲಿ ಬರುತ್ತದೆ ?!). ಆದರೂ, ಎಲ್ಲರಿಗೂ ಅರ್ಥವಾಗುವಂತೆ ದತ್ತಪದಿಯ ರಸಾಸ್ವಾದನೆ ಮಾಡಿಸಿರುವುದನ್ನು ಮೆಚ್ಚಬೇಕು.

ಅಷ್ಟಾವಧಾನ ಅನ್ನುವುದು ಕ್ಲಿಷ್ಟವಾದ,ಕ್ಲಿಷ್ಟವಾದರೂ ರಂಜನೀಯವಾದ ಕ್ರೀಡೆ. ಎಂಟು ಜನ ಎಂಟು ತರದಲ್ಲಿ, ಒಡ್ಡುವ ಸವಾಲುಗಳನ್ನು ಅವಧಾನಿಯು ಪರಿಹರಿಸಿ ಮುಗುಳುನಗಬೇಕು. ಆ ಎಂಟು ಸವಾಲುಗಳಲ್ಲಿ ನಮ್ಮ ದತ್ತಪದಿಯೂ ಒಂದು. ವಿಷಯಕ್ಕೆ ತಲೆಬುಡ ಸಂಬಂಧವೇ ಇಲ್ಲದ ಯಾವುದೋ ನಾಲ್ಕು ಪದಗಳನ್ನು ಕೊಟ್ಟು ಈ ಪದಗಳನ್ನು ಬಳಸಿಕೊಂಡು ಪದ್ಯವೊಂದನ್ನು ರಚಿಸಲು ಹೇಳುವುದು ಈ ಆಟದ ಕ್ರಮ. ಉದಾಹರಣೆಗೆ, ದೆಹಲಿ ಮತ್ತು ಮುಂಬಯಿ ಎಂಬ ಪದಗಳನ್ನು ಬಳಸಿ, ಕೃಷ್ಣನ ಬಗ್ಗೆ ಮಾತಾಡಿ ಅಂದರೆ ನಾವು ಇದೇನು ಗ್ರಹಚಾರ ಬಂತಪ್ಪಾ ಅಂತ ಮಂಕಾಗಬಹುದು ,ದೆಹಲಿಯನ್ನು ತರುವುದು ಹೇಗೆ ? ಗಣೇಶರು ಹೀಗೊಂದು ಸಾಲನ್ನೆಸೆಯಬಹುದು: ಕೂರ್ಮೆಯೊ೦ದೆ ಹಲಿಯ೦ ವ೦ದಿಪ್ಪನೇ ("ಯೊಂದೆ ಹಲಿ" ಅನ್ನುವಲ್ಲಿ ದೆಹಲಿ ಬಂದಿದೆ. ಕೂರ್ಮೆ = ಪ್ರೀತಿ, ಹಲ = ನೇಗಿಲು , ಹಲಿ = ಬಲರಾಮ, ವ೦ದಿಪ್ಪನೇ = ವಂದಿಸುವವನೇ). ಅಷ್ಟಕ್ಕೇ "ಅಬ್ಬಾ ಮುಗಿಯಿತು" ಅನ್ನುವಂತಿಲ್ಲ, ಮುಂಬಯಿಯೂ ಬರಬೇಕಲ್ಲ, ಗಣೇಶರು ಮುಂಬಯಿಯನ್ನು ಹೀಗೆ ಎಳೆದು ತರಬಹುದು: ನಲ್ಮೆಯ ವಾಕ್ಯಮು೦ ಬಯಿಗಳು೦ (ಪ್ರೀತಿಯ ವಾಕ್ಯವೂ, ಬೈಗುಳವೂ ).

ಕಷ್ಟ ಇಷ್ಟಕ್ಕೇ ಮುಗಿಯುವುದಿಲ್ಲ. ಪದ್ಯವನ್ನು ಕೊಟ್ಟಿರುವ ವಿಷಯದ ಕುರಿತಾಗಿಯೇ ಬರೆಯಬೇಕು. "ಅಯ್ಯೋ ರಾಮ !" ಅನ್ನಬೇಡಿ, ಅಷ್ಟು ಸಾಲದು ಅಂತ ಕೊಟ್ಟ ಛಂದಸ್ಸಿನಲ್ಲಿಯೇ ಬರೆಯಬೇಕು ! ಉದಾ : ಭಾಮಿನೀ ಷಟ್ಪದಿಯಾದರೆ ಮೂರು ಸಾಲುಗಳಲ್ಲಿ ಮಾತ್ರೆಗಳ ಲೆಕ್ಕ ಹೀಗೆ ಬರಬೇಕು :
3 | 4 | 3 | 4
3 | 4 | 3 | 4
3 | 4 | 3 | 4 | 3 | 4 | 2
ಹೀಗೆ ಬೇರೆ ಬೇರೆ ಛಂದಸ್ಸುಗಳದ್ದು ಬೇರೆ ಬೇರೆ ಲೆಕ್ಕ ಇದೆ. ಇಷ್ಟಕ್ಕೆ ಮುಗಿಯಲಿಲ್ಲ, ಪ್ರತೀ ಸಾಲಿನ ಎರಡನೇ ಅಕ್ಷರ ಪ್ರಾಸ ಬೇರೆ ಆಗಬೇಕು(ಆದಿಪ್ರಾಸ). ಇದೆಂತಹಾ ನಿಬಂಧನೆಗಳ ಜಟಿಲ ಜಾಲ ಸ್ವಾಮೀ ಅಂತ ಹೆದರಬೇಡಿ, ಹಳಗನ್ನಡದ ಪದ್ಯಗಳಲ್ಲೆಲ್ಲ ಹೀಗೆ ಛಂದಸ್ಸನ್ನೂ ಆದಿಪ್ರಾಸವನ್ನೂ ಪಾಲಿಸಲಾಗುತ್ತದೆ. ಪದ್ಯಪಾನ ಅಂತೊಂದು ರಾ ಗಣೇಶರ ತಂಡದ್ದೇ ಸೈಟಿದೆ. ಅಲ್ಲಿ ಹೀಗೆ ದತ್ತಪದಿಯ ಸವಾಲುಗಳನ್ನು ಒಡ್ಡಲಾಗುತ್ತದೆ. ಈ ಚಾಲೆಂಜಿಂಗ್ ಪದ್ಯಗಳನ್ನು ಬರೆದೆಸೆಯುವ, ನೀಡಿದ ಪದಗಳನ್ನು ಬಳಸಿ, ಆದಿಪ್ರಾಸ ಮಾಡಿ , ಕೊಟ್ಟ ವಿಷಯದಲ್ಲಿ, ಛಂದಸ್ಸಿನಲ್ಲಿಯೇ ಬರೆಯುವ ಘಟಾನುಘಟಿಗಳು ಅಲ್ಲಿದ್ದಾರೆ. ಅಲ್ಲಿಂದ ಒಂದಷ್ಟು ಸವಾಲು ಜವಾಬುಗಳನ್ನು ಹೆಕ್ಕಿ, ಸಾಹಿತ್ಯದ ಬಾರಿನಲ್ಲಿ ಹೊಸತಾಗಿ ಪದ್ಯಪಾನ ಮಾಡುವವರಿಗಾಗಿ ಇಲ್ಲಿ ಕೊಟ್ಟಿದ್ದೇನೆ (ಆದಷ್ಟೂ ಸುಲಭವಾಗಿ ಅರ್ಥವಾಗುವ ಪದ್ಯಗಳನ್ನೇ ಎತ್ತಿಕೊಂಡಿದ್ದೇನೆ, ಅಲ್ಲಲ್ಲಿ ಬರುವ ಕಠಿಣ ಪದಗಳ ಅರ್ಥ ಮತ್ತು ಟಿಪ್ಪಣಿಗಳನ್ನು ಬ್ರಾಕೆಟ್ಟಿನಲ್ಲಿ ಹಾಕಿದ್ದೇನೆ), ತಡವೇಕೆ ? ನಡೆಯಲಿ ಪದ್ಯವೃಷ್ಟಿ:

ದೇವಿಯೊಂ ಔರ್ ಸಜ್ಜನೋ, ಆಪ್ಕಾ ಪೆಹಲಾ ಸವಾಲ್ ಇಂತಿದೆ :
Auto (ಆಟೊ), Rickshaw (ರಿಕ್ಷ), Volvo (ವೊಲ್ವೊ), Lorry (ಲಾರಿ) ಪದಗಳನ್ನುಪಯೋಗಿಸಿ ಶ್ರೀ ಹರಿಯು, ಭಕ್ತನ ನೆರವಿಗೆ ಬಂದ ಸಂದರ್ಭವನ್ನು ವಿವರಿಸಿ. ಅಬ್ಬಬ್ಬಾ! ಎಲ್ಲಿಯ ಆಟೋ, ಎಲ್ಲಿಯ ವೋಲ್ವೋ, ಎತ್ತಣ ಹರಿಭಕ್ತರು ? ಗೊತ್ತಾಗಬೇಕಾದರೆ ಹಂಸಾನಂದಿ ಅನ್ನುವವರ ಪದ್ಯವನ್ನೇ ನೋಡಬೇಕು:
ಮೊಸಳೆಯಾರ್ಭಟವೇನು! ಆಟೋಪವಿನ್ನೇನು!
ಹಸುಳೆಯಾನೆಯ ಬಾಳೆಗಿಡದವೋಲ್ವೊರಗಿಸೆ
ಅಸುವಕಾಯೆಂಬ ಮೊರೆಗಲ್ಲಾರಿಗೂ ಮೊದಲು
ನಸುನಗುತ ಹರಿಯಂತರಿಕ್ಷದಲೆ ಪೊರೆದ!
(ಎಲ್ಲ ಪದಗಳು ಬಂದವೇ ಅಂತ ನೋಡಿಕೊಳ್ಳಿ. ಗಜೇಂದ್ರಮೋಕ್ಷ ಪ್ರಕರಣದಲ್ಲಿ, ಆನೆ ನೀರು ಕುಡಿಯಲು ಬಂದಾಗ ಮೊಸಳೆ ಅದರ ಕಾಲನ್ನು ಕಚ್ಚಿ ಹಿಡಿದಾಗ,ವಿಷ್ಣು ಅದನ್ನು ಕಾಪಾಡುತ್ತಾನೆ. ಬಾಳೆಗಿಡದವೋಲ್ವೊರಗಿಸೆ = ಬಾಳೆಗಿಡದ ಹಾಗೆ ಕೆಳಗೆ ಬೀಳಿಸಲು)

ಅಲ್ಲಿಂದ ಹೊರಟು ಹನೂಮಂತನ ಕಡೆಗೆ ಹೋಗೋಣ. ಎರಡನೇ ಒಗಟು ಇದು: “ape, lemur, monkey, gibbon” – ಈ ಪದಗಳನ್ನುಪಯೋಗಿಸಿ ನಿಮಗಿಷ್ಟವಾದ ಛಂದಸ್ಸಿನಲ್ಲಿ ಹನುಮಂತನ ಸಮುದ್ರ ಲಂಘನದ ಬಗ್ಗೆ ಪದ್ಯ ರಚಿಸಿರಿ ಅಂದಾಗ ಗಾಯತ್ರಿ ಇಂದಾವರ ಅನ್ನುವವರು ಕೊಟ್ಟ ಪರಿಹಾರ:
ಜಲರಾಶಿಯವನೇ ಪರೀಕ್ಷಿಸಲು ಹೇಳಿದನು
ಸುಲಭವಲೆ ಮೂರು ಜಗದೊಡೆಯನ ಸೇವೆ
ಕುಲಕೆ ಹನುಮಂ ಕೀರ್ತಿ ತರಲೆಂದು ಹಾರಿದನು
ಸಲಿಲವದು ತೋರಲವಗಿಬ್ಬನಿಯವೊಲ್
(ಸಲಿಲ = ನೀರು, ತೋರಲವಗಿಬ್ಬನಿಯವೊಲ್ = ಅವನಿಗೆ ಇಬ್ಬನಿಯಂತೆ ತೋರಲು. ಹನೂಮಂತನು ಉತ್ಸಾಹದಿಂದ ಸಮುದ್ರದ ಮೇಲೆ ಹಾರುತ್ತಿರಲು, ಆ ಜಲರಾಶಿ ಅವನಿಗೆ ಇಬ್ಬನಿಯಂತೆ ತೋರಿತು)

ಇನ್ನೊಂದು ಸಮಾಧಾನ ಸೋಮ ಅವರಿಂದ:
“ಹೇ ಪವನಸುತನೆ ನಿನಗಿಬ್ಬಂದಿತನ ತರವೆ
ಭೂಪನೇಳೀಗಲೇ ಮುರಿದು ಭಯವ
ಭಾಪೆನುವ ಕಜ್ಜಮ೦ ಕೀಳ್ಮಾಡೆ ಶಕ್ಯನೆನೆ”
ಗೋಪುರದವೊಲು ಬೆಳೆದು ತಾ೦ ಜಿಗಿದನಯ್
(ನಿನಗಿಬ್ಬಂದಿತನ = ನಿನಗೆ ಇಬ್ಬಂದಿತನ, ಕಜ್ಜಮ೦ = ಕೆಲಸವನ್ನು, ಗೋಪುರದವೊಲು = ಗೋಪುರದಂತೆ. ಜಾಂಬವಂತನು ಹನೂಮಂತನನ್ನು ಹುರಿದುಂಬಿಸುವುದು ಮೊದಲ ಮೂರು ಸಾಲುಗಳಲ್ಲಿದೆ)

ಆಯಿತಲ್ಲ, ಹನೂಮಂತ ಹಾರಿಯಾಯಿತು, ನಾವೀಗ ಸುಂದರಿಯರ ಕಡೆಗೆ ನೆಗೆಯೋಣ. Bajaj,Yamaha,Kawasaki,Kinetic ಈ ನಾಲ್ಕುಪದಗಳನ್ನು ಬಳಸಿ, ಒಬ್ಬಳು ಸು೦ದರಿ ಮತ್ತೊಬ್ಬಳ ಗುಣಗಾನವನ್ನು ಮಾಡುವ ವಿಷಯವನ್ನಿಟ್ಟುಕೊ೦ಡು ಹೇಗೆ ಬರೆಯುತ್ತಾರಪ್ಪಾ ಅಂತ ತಲೆಹಾಳಾದರೆ ಹಂಸಾನಂದಿಯವರ ಚೆಲುವಾದ ಪರಿಹಾರವನ್ನು ನೋಡಿದರಾಯಿತು :
ಏನು? ಮುಡಿಯಲಿ ತುಂಬ ಜಾಜಿಯ ಹೂವ ಮುಡಿದಿಹೆ ಚೆಂದದಿ
ಏನೊ ಕಾರ್ಯ ಮಹದಾನಂದದಿ ಮಾಡಹೊರಟಿಹೆ ಬಲ್ಲೆನು
ನೀನು ನೋಟದಲೇನೆ ಕೊಲುವುದು ಮಿಕವ ಸಾಕಿನ್ನೆನ್ನುತ
ಕೈನೆ ಟಿಕಲಿಯ ನೊಸಲಿಗಿಡುತಲಿ ಒಡತಿಗೊರೆದಳು ಚೆನ್ನುಡಿ
(ಕೈನೆ= ಸೇವಕಿ; ಟಿಕಲಿ= ಹಣೆಬೊಟ್ಟು,ನೊಸಲು = ಹಣೆ, ಕಿರಿಯ ಪ್ರಾಯದ ಒಡತಿ ಯಾರನ್ನೋ ಮರುಳು ಮಾಡುವುದನ್ನು ನೋಡಿ ಹಿರಿಯವಳಾದ ಪರಿಚಾರಿಕೆ ಹೇಳುವ ಮಾತು ಇಲ್ಲಿದೆ)
ಚಿತ್ರ ವಿಚಿತ್ರ ಪದಗಳನ್ನು ಹೇಗೆ ಸಲೀಸಾಗಿ ಹಿಡಿದು ಪದ್ಯದೊಳಗೆ ಕೂರಿಸಿ ಕವಿಗಳು ನಗುತ್ತಿದ್ದಾರೆ ಅಂತ ನೋಡ್ತಾ ಇದ್ದೀರಲ್ಲ. ಈ ಪದಕ್ರೀಡೆಗೆ ಮನಸ್ಸಿನಲ್ಲೇ "ವಾರೆ ವಾಹ್" ಹೇಳಿ ಮುಂದಿನ ಪಂಥಾಹ್ವಾನಕ್ಕೆ ಬನ್ನಿ.

“ವಿಪ್ರೋ”,“ಸತ್ಯಂ”,”ಟಿಸಿಎಸ್”, “ಗೂಗಲ್”, ಈ ಪದಗಳನ್ನು ಉಪಯೋಗಿಸಿ Raghavendra H ಅವರು ಭಾಮಿನೀಷಟ್ಪದಿಯಲ್ಲಿ ಮಳೆಯನ್ನು ವರ್ಣಿಸಿದ್ದು ಹೀಗೆ:
ಪರಕೆ ಫಲಿಸಿತು ಸತ್ಯಮುಲಿಪರ !
ಕೆರೆಯು ತುಂಬಿತು ಕುಸುಮವರಳಿತು |
ಸರಿಯಲಿ ರವಿ ಪ್ರೋಕ್ಷಿಸುತೆ ಮಳೆಯಿಳೆಗೆ ವರಜಲವ ||
ಧರಿಸಿ ಶರವನು ಮಾರಚಾಪದಿ
ಶರದನೊಡೆಯಲು ನವಿಲುಗೂಗಲಿ |
ಬರದ ಘೋರಾಸುರನ ಕುಟ್ಟಿಸಿ ಎಸೆದ ಮಳೆರಾಯ ||
(ಪರಕೆ = ಹರಕೆ , ಸತ್ಯಂ ಉಲಿಪರ = ಸತ್ಯ ಹೇಳುವವರ, ಸರಿ= ಬೆಟ್ಟದ ಜಾರು. ಶರ= ಬಾಣ/ನೀರು; ಮಾರಚಾಪ = ಕಾಮನಬಿಲ್ಲು , ಬರ= ಕ್ಷಾಮ)

ಶಬ್ದ ಚಮತ್ಕಾರದ ಮಳೆಯಾಯಿತಲ್ಲ. ಇನ್ನೀಗ ಪಬ್ಲಿಕ್ ಟಿವಿಯ ಕಡೆ ಕಿವಿಗೊಡಿ, "ಆಲ್ರೈಟ್ ಮುಂದಕ್ಕೋಗೋಣ" ಎಂಬ ಉದ್ಗಾರ ಕೇಳಿ ಕಿವಿ ಪಾವನವಾಯ್ತಲ್ಲ, ಹಾಗೆಯೇ ಮಾಡೋಣ. ಇಂಗ್ಲೀಷು ಪದಗಳನ್ನು ತಂದು ಇನ್ನಷ್ಟು ಕಠಿಣ ಸವಾಲನ್ನೊಡ್ಡಿ ನೋಡೋಣ.
ಲಿಕ್ಕರ್, ನಿಕ್ಕರ್, ಕುಕ್ಕರ್, ಸಕ್ಕರ್ ಪದಗಳನ್ನು ಬಳಸಿ ದುಷ್ಟರನ್ನು ನಿಂದಿಸುವ ಪದ್ಯ ಬೇಕಂತೆ,ಅಯ್ಯೋ ದೇವರೇ! ಇದು ಹೇಗೆ ? ಶಕುಂತಲಾ ಮೊಳೆಯಾರ ಪಾದೆಕಲ್ಲು ಅವರ ರಚನೆ :
ಪಾಲನಿಕ್ಕರ್,ಬಿಲದೆ ಜೀವಿಪ
ಕಾಲಸರ್ಪಂ ಪಸಿಯಲಿಕ್ಕರ್
ಕೋಲಿನಿಂದಪ್ಪಳಿಸಿ ದುಷ್ಟರ್ ಸಂತಸಂಗೊಂಬರ್ |
ಫಾಲಲೋಚನನಾಲಯದೆ,ಪರಿ-
ಪಾಲಿಸುತೆ,ಸಕ್ಕರೆಯ ನೀಡುತೆ
ಮಾಲೆಯಿಕ್ಕುತೆ,ಕಲ್ಲಿನುರಗನ ಪೂಜಿಪರ್,ಕುಕ್ಕರ್ ||
(ಪಾಲನಿಕ್ಕರ್ = ಹಾಲನ್ನು ಇಕ್ಕರು,ಪಸಿಯಲಿಕ್ಕರ್ = ಹಸಿದಾಗ ಇಕ್ಕರು, ಫಾಲಲೋಚನ = ಹಣೆಯಲ್ಲಿ ಕಣ್ಣಿರುವವನು, ಅಂದರೆ ಶಿವ, ಕಲ್ಲಿನುರಗ = ಕಲ್ಲಿನ ಹಾವು, ಕುಕ್ಕರ್ = ನಾಯಿಗಳು)

ಆಯಿತು ಅಂದಿರಾ ? ತಡೀರಿ. ಈಗ ಇದೆ ಮಜಾ. ಕಾಲರಾ, ಕಾಮಾಲೆ, ಜ್ವರ, ಆಮಶಂಕೆ ಪದಗಳನ್ನು ಬಳಸಿ ಧನ್ವಂತರಿಯ ಸ್ತುತಿಯನ್ನು ನಿಮ್ಮಿಚ್ಛೆಯ ಛಂದಸ್ಸಿನಲ್ಲಿ ಮಾಡಿ ನೋಡೋಣ. ಬರೀ ನೋಡುವುದಲ್ಲ, ಮಾಡಿ ನೋಡಿ ಸ್ವಾಮೀ. ಇದೊಳ್ಳೆ ಕಷ್ಟವಾಯಿತಲ್ಲ ಅಂದಿರಾ ? ಆಯಿತು ಬಿಡಿ. ಕಾಂಚನಾ ಅವರ ಉತ್ತರವನ್ನೇ ನೋಡಿಬಿಡಿ:
ಪರಿಮಳದ ಮಲ್ಲಿಕಾ ಮಾಲೆಯಂ ಹೆಣೆಯುತ್ತ
ಲಿರುವಂತ ಮೋಹಜ್ವರವನಳಿಸಲು,
ಚಿರಕಾಲ ರಾಜಿಸಲು ಹೃದಯ ಮಂದಿರದಲ್ಲಿ
ಕರೆವೆನಾ ಹರಿನಾಮ ಶಂಕೆಯಿರದೇ
(ಮಲ್ಲಿಕಾ = ಮಲ್ಲಿಗೆ)
ಯಾವ ಯಾವ ಪದಗಳನ್ನು ಹೇಗೇಗೆ ತೂರಿಸಲಾಯ್ತು ಅಂತ ನೋಡಿಯಾದರೆ ಮುಂದಿನ ಸವಾಲಿನೆಡೆಗೆ ನುಗ್ಗಬಹುದು.

ಹಂಸಾನಂದಿಯವರು ಲೆಮನ್ ಯೆಲ್ಲೋ ರೆಡ್ ವೈನ್ - ಈ ನಾಲ್ಕು ಪದಗಳನ್ನು ಬಳಸಿ ರಾಮಾಯಣದ ಕಥೆಯ ಯಾವುದಾದರೂ ಒಂದು ಸಂದರ್ಭಕ್ಕೆ ಆಗುವಂತೆ ಬರೆದದ್ದು:
ಕಾನನದಿ ಸೀತೆಯೆಲ್ಲೋ ನೀರು ತರುವಾಗ
ವೈನಾದ ಹೊನ್ನಜಿಂಕೆಯ ನೋಡಿ ಬಯಸೆ
ತಾನಲ್ಲೆ ಮನದನ್ನೆಯಾಸೆ ತೀರಿಸೆ ರಾಮ
ಚಿನ್ನಮಿಗಕೆಳಸಿರೆಡಗಣ್ಣದುರಿತವಗೆ
(ಚಿನ್ನಮಿಗಕೆಳಸಿರೆಡಗಣ್ಣದುರಿತವಗೆ = ಚಿನ್ನ ಮಿಗಕೆ ಎಳಸಿರೆ ಎಡಗಣ್ಣು ಅದುರಿತು ಅವಗೆ. ಮಾಯಾ ಮೃಗದ ಸಂದರ್ಭ. ಗಂಡಸರ ಎಡಗಣ್ಣು, ಹೆಂಗಸರ ಬಲಗಣ್ಣು ಅದುರಿದರೆ ಅಶುಭ ಶಕುನವೆಂಬುದು ಕವಿಸಮಯ)

ಗಣಿತಪ್ರಿಯರಿಗೆ Sin(ಸೈನ್), Cos(ಕಾಸ್), Tan(ಟ್ಯಾನ್/ಟಾನ್), Cot(ಕಾಟ್) ಪದಗಳಿಂದ ಕೃಷ್ಣಾವತಾರದ ಯಾವುದಾದರೂ ಘಟನಾವಳಿಯನ್ನು ಹೇಳಬೇಕೆಂಬ ಸವಾಲು ಖುಶಿ ಕೊಡಬಹುದು. T S Rajagopal ಅವರು ಕಟ್ಟಿದ ಪದ್ಯ :
ಕಲ್ಲೆದೆಯ ಕಂಸನಿಗೆ ಸೈನಿಕರು ಬಂದೊರೆಯೆ
ಕಲ್ಲೆಸೆದ ಕಾಸಾರವಾಯ್ತು ಮನವು |
ಕಲ್ಲಿಗಪ್ಪಳಿಸಲ್ಕೆ ಶಿಶುವನಕಟಾ ನೆಗಹಿ-
ತಲ್ಲಿಯೇ ಗಗನಕಾಟಿಕೆಯ ತೆರದಿ ||
(ಕಾಸಾರ = ಸರೋವರ , ನೆಗಹಿತು = ಚಿಮ್ಮಿತು. ಕೃಷ್ಣ ಹುಟ್ಟಿದಾಗ, ವಸುದೇವನು ಕಾರಾಗೃಹದಿಂದ ತಪ್ಪಿಸಿಕೊಂಡು, ಅವನನ್ನು ಗೋಕುಲದಲ್ಲಿ ಬಿಟ್ಟು,ಯಶೋದೆ ಮತ್ತು ನಂದಗೋಪರ ಶಿಶುವನ್ನು ತಾನು ಎತ್ತಿಕೊಂಡು ಕಾರಾಗೃಹಕ್ಕೆ ಮರಳುತ್ತಾನೆ. ದೇವಕಿಗೆ ಹುಟ್ಟಿದ ಶಿಶು ಅದು ಎಂದು ಭ್ರಮಿಸಿ ಕಂಸನು ಆ ಮಗುವನ್ನು ಕೊಲ್ಲಲು ಪ್ರಯತ್ನಿಸುವ ಸಂಧರ್ಭ ಇದು). ಗಣಿತದ ವಿಷಯ ಎತ್ತಿದರೆ ಕೂಡಲೇ ಡ್ಯಾಗರ್, ಗನ್ನು,ಲಾಂಗು ಎಲ್ಲ ಎತ್ತುವವರಿದ್ದಾರೆ. ಅವುಗಳನ್ನಿಟ್ಟುಕೊಂಡೂ ಪದ್ಯರಚನೆಯಾಗಿ ಹೋಗಲಿ.

Dagger (ಡಾಗರ್/ಡ್ಯಾಗರ್), Gun, Long, Acid (ಆಸಿಡ್) – ಈ ಪದಗಳನ್ನು ಬಳಸಿ ಸತ್ಯಭಾಮೆಯ ಸೆಡವಿಗೆ ಕಾರಣವನ್ನು ಹೇಳಬೇಕು ಅಂದರೆ ಯಾರಾದರೂ ತಬ್ಬಿಬ್ಬಾಗಬಹುದು. ಪರಿಹಾರ ಇದ್ದೇ ಇದೆ . ಕಾಂಚನಾ ಅವರ ರಚನೆ:
ನೋಡಾ! ಗರ್ಜಿಪ ಮೇಘವ – ರವಿಯೆಡೆ
ಕಾಡುತ್ತಿರಲಾಂಗನೆಯರನಂ
ಕೇಡಾ ಸಿಡುಕದ ಭಾಮೆಗೆರಗದೇ?
ಮಾಡಿರೆ ಸವತಿಯ ಘನಶಾಮಂ
(ಕಾಂಚನಾ ಅವರದ್ದೇ ವಿವರಣೆ : ಇತರ ಹೆಂಗಳೆಯರಲ್ಲಿ ರವಿಯ ಸ್ನೇಹವನ್ನು ಕಂಡ ಮೇಘ, ತನ್ನ ರಕ್ಷಣೆಗಾಗಿ ಗರ್ಜಿಸುತ್ತಿದ್ದಾಳೆ. ಅಂತೆಯೇ, ಸವತಿಯ ಸ್ಥಾನವನ್ನು ಗಳಿಸಿದ ಸತ್ಯಭಾಮೆಯೂ ತನಗಾಗುವ ಕೇಡನ್ನು ತಡೆಯಲು ಸಿಡುಕುವುದೇ ಸೂಕ್ತ)

ಕಡೆಯದಾಗಿ, ತಿಂಡಿಪ್ರಿಯರನ್ನು ಸಂಪ್ರೀತರನ್ನಾಗಿಸಿ ಇದನ್ನು ಮುಗಿಸೋಣ. ‘ದೋಸೆ’, ‘ಸಾರು’, ‘ಪಲ್ಯ’, ‘ಪೂರಿ’ ಪದಗಳನ್ನುಪಯೋಗಿಸಿ ನಿಮ್ಮ ಇಷ್ಟದೇವತೆಯ ಸ್ತುತಿಯನ್ನು ಪದ್ಯರೂಪದಲ್ಲಿ ರಚಿಸಿರಿ ಅಂದಾಗ ಹಂಸಾನಂದಿಯವರಿಗೆ ಹೊಳೆದ ಪದ್ಯ ಇದು :
ಕಾಯಿಪಲ್ಯದ ಹಾರತೊಟ್ಟಿಹ
ತಾಯೆ ಶಾಕಂಭರಿಯೆ ನೀ ವರ
ವೀಯೆ ಸಾರುತ ನಂಬಿದವರನು ಪೊರೆವೆನೆನ್ನುತಲಿ
ಹಾಯೆನಿಸಿದೋ ಸೆರೆಯ ಜೀವವ
ಕಾಯುವುದು ತರ ನಿಖಿಳ ಜಗಕೆ-
ನ್ಯಾಯ ಕರುಣಾ ಪೂರಿತೆಯೆ ಹಸಿವನ್ನು ನೀನಳಿಸಿ

ಇದಕ್ಕೆ ಇನ್ನೊಂದು ಮಜವಾದ ಪರಿಹಾರವೂ ಇದೆ. ಸುಧೀರ್ ಕೇಸರಿ ಅನ್ನುವವರು ಸಂಸ್ಕೃತದ ಶಾಲಿನೀ ವೃತ್ತ ಎಂಬ ಛಂದಸ್ಸನ್ನು ಇಂಗ್ಲೀಷಿನಲ್ಲಿ ಹೊಸೆದು, ದೋಸೆ, ಪೂರಿ,ಸಾರು , ಪಲ್ಯಗಳನ್ನೆಲ್ಲ ಆಂಗ್ಲಭಾಷೆಯಲ್ಲಿ ತಂದು ಚಮತ್ಕಾರದ ರಚನೆ ಮಾಡಿದ್ದಕ್ಕೆ ಚಪ್ಪಾಳೆ ತಟ್ಟಲೇಬೇಕು:
Though sages say thou art abstract and abstruse,
Don’t people yearn all the time just to see you?
Those Who saw rules of the Cosmic Dimensions
can't describe you ; speech is poor in that aspect!

ಪದ್ಯಪಾನದಲ್ಲಿ ಬಂದಿರುವ ಎಲ್ಲ ದತ್ತಪದಿಗಳನ್ನೂ, ಪರಿಹಾರಗಳನ್ನೂ ಇಲ್ಲಿ ನೋಡಬಹುದು: http://padyapaana.com/?cat=56

ಅವಧಾನ ಕಲೆಯ ಪರಿಚಯವನ್ನು ಮಂಜುನಾಥ ಕೊಳ್ಳೇಗಾಲ ಅವರ ಬ್ಲಾಗಿನಲ್ಲಿ ಓದಬಹುದು :
http://nannabaraha.blogspot.com/2012/11/blog-post.html