Sunday, 6 January 2019

ಭಾಷೆಯ ಜೊತೆ ಚೆಲ್ಲಾಟ - ದತ್ತಪದಿ

ಇಂಗ್ಲೀಷಿನಲ್ಲಿ ಭಾಷೆಯ ಜೊತೆಗೆ ಹೇಗೆಲ್ಲ ಬಗೆ ಬಗೆಯ ಮೋಜಿನ ಆಟಗಳನ್ನಾಡುತ್ತಾರೆ ಅಂತ ಹಿಂದೊಂದು ಲೇಖನ ಬರೆದಿದ್ದೆ. ಸಂಸ್ಕೃತ, ಕನ್ನಡಗಳಲ್ಲೂ ಇಂತವು ಬೇಕಾದಷ್ಟಿವೆ. ಇವತ್ತು ಅಂತದ್ದೊಂದು ಭಾಷಾಸರಸ ಪ್ರಕಾರದ ಕೈಕುಲುಕಿಸುತ್ತೇನೆ. ಇಂತದ್ದೊಂದು ವಾಟ್ಸಪ್ಪ್ ಮೆಸೇಜು ನಿಮಗೆ ಬಂದಿರಬಹುದು :
ಹೋಟೆಲೊಂದಕ್ಕೆ ಶತಾವಧಾನಿ ಗಣೇಶರು ಉಪಾಹಾರಕ್ಕೆ ಹೋಗಿದ್ದಾಗ, ಅವರ ಮುಖ ಪರಿಚಯ ಇರುವ ಮಾಣಿಯೊಬ್ಬ ಅಲ್ಲಿರುತ್ತಾನೆ, ಶತಾವಧಾನಿಗಳನ್ನು ಸವಾಲು ಜವಾಬಿನ ಆಟಕ್ಕೆ ಎಳೆಯುತ್ತಾನೆ:
'ನಾನೊಂದು ಸಮಸ್ಯೆ ಕೊಡ್ತೇನೆ, ಉತ್ರ ಕೊಡಿ,
'ಹೇಳಪ್ಪ'
'ಒಂದು ಪದ್ಯ ಮಾಡಿ. ಅದರಲ್ಲಿ ನಾನು ಹೇಳೋ ಐಟಮ್ ಅಷ್ಟೂ ಇರ್ಬೇಕು. ಅದೇ ಸರದಿಯಲ್ಲೂ ಬರಬೇಕು'
'ಹೇಳಿ'.
'ಸಾಂಬಾರು, ಚಟ್ನಿ, ವಡೆ, ಇಡ್ಲಿ'.
ಮಾಣಿಯ ಮುಖದಲ್ಲಿ ಗೆದ್ದ ನಗು. ಶತಾವಧಾನಿಗಳು ಅರ್ಧ ನಿಮಿಷ ಕಣ್ಣುಮುಚ್ಚಿ ಯೋಚಿಸಿ, ಗಂಟಲು ಸರಿಪಡಿಸಿಕೊಂಡು ಮಾತು ಶುರು ಮಾಡಿದರು: 'ಹೇ, ಸಾಂಬಾ, ರುದ್ರಾ! ಚಟ ಚಟ್ ನಿಟಿಲಾಕ್ಷಾ! ಜಗದೆಲ್ಲೆಡೆ ನೀನಿರುವಡೆ,ನಾ ಕಾಲೆಲ್ಲಿಡ್ಲಿ?'. ಸುಸ್ತಾದ ಮಾಣಿ, 'ನಿಮಗೆ ಒಂದು ಪೆಷಲ್ ಕಾಪಿ ತರ್ತೇನೆ' ಅಂತ ಓಡಿದ!

ಇಲ್ಲಿ ಮಾಣಿಯೂ ಅವಧಾನಿಗಳೂ ಆಡಿರುವ ಭಾಷೆಯ ಆಟವನ್ನು ದತ್ತಪದಿ ಅನ್ನುತ್ತಾರೆ. ಇಲ್ಲಿ ಬಂದ ಪ್ರಸಂಗ ವಾಸ್ತವವಲ್ಲ,ಮೇಲಿನದು ನಿಜವಾಗಿ ಗಣೇಶರು ಕಟ್ಟಿದ ಪದ್ಯವೇನೋ ಅಲ್ಲ (ವಾಟ್ಸಪ್ಪಿನಲ್ಲಿ ನಿಜ ಎಲ್ಲಿ ಬರುತ್ತದೆ ?!). ಆದರೂ, ಎಲ್ಲರಿಗೂ ಅರ್ಥವಾಗುವಂತೆ ದತ್ತಪದಿಯ ರಸಾಸ್ವಾದನೆ ಮಾಡಿಸಿರುವುದನ್ನು ಮೆಚ್ಚಬೇಕು.

ಅಷ್ಟಾವಧಾನ ಅನ್ನುವುದು ಕ್ಲಿಷ್ಟವಾದ,ಕ್ಲಿಷ್ಟವಾದರೂ ರಂಜನೀಯವಾದ ಕ್ರೀಡೆ. ಎಂಟು ಜನ ಎಂಟು ತರದಲ್ಲಿ, ಒಡ್ಡುವ ಸವಾಲುಗಳನ್ನು ಅವಧಾನಿಯು ಪರಿಹರಿಸಿ ಮುಗುಳುನಗಬೇಕು. ಆ ಎಂಟು ಸವಾಲುಗಳಲ್ಲಿ ನಮ್ಮ ದತ್ತಪದಿಯೂ ಒಂದು. ವಿಷಯಕ್ಕೆ ತಲೆಬುಡ ಸಂಬಂಧವೇ ಇಲ್ಲದ ಯಾವುದೋ ನಾಲ್ಕು ಪದಗಳನ್ನು ಕೊಟ್ಟು ಈ ಪದಗಳನ್ನು ಬಳಸಿಕೊಂಡು ಪದ್ಯವೊಂದನ್ನು ರಚಿಸಲು ಹೇಳುವುದು ಈ ಆಟದ ಕ್ರಮ. ಉದಾಹರಣೆಗೆ, ದೆಹಲಿ ಮತ್ತು ಮುಂಬಯಿ ಎಂಬ ಪದಗಳನ್ನು ಬಳಸಿ, ಕೃಷ್ಣನ ಬಗ್ಗೆ ಮಾತಾಡಿ ಅಂದರೆ ನಾವು ಇದೇನು ಗ್ರಹಚಾರ ಬಂತಪ್ಪಾ ಅಂತ ಮಂಕಾಗಬಹುದು ,ದೆಹಲಿಯನ್ನು ತರುವುದು ಹೇಗೆ ? ಗಣೇಶರು ಹೀಗೊಂದು ಸಾಲನ್ನೆಸೆಯಬಹುದು: ಕೂರ್ಮೆಯೊ೦ದೆ ಹಲಿಯ೦ ವ೦ದಿಪ್ಪನೇ ("ಯೊಂದೆ ಹಲಿ" ಅನ್ನುವಲ್ಲಿ ದೆಹಲಿ ಬಂದಿದೆ. ಕೂರ್ಮೆ = ಪ್ರೀತಿ, ಹಲ = ನೇಗಿಲು , ಹಲಿ = ಬಲರಾಮ, ವ೦ದಿಪ್ಪನೇ = ವಂದಿಸುವವನೇ). ಅಷ್ಟಕ್ಕೇ "ಅಬ್ಬಾ ಮುಗಿಯಿತು" ಅನ್ನುವಂತಿಲ್ಲ, ಮುಂಬಯಿಯೂ ಬರಬೇಕಲ್ಲ, ಗಣೇಶರು ಮುಂಬಯಿಯನ್ನು ಹೀಗೆ ಎಳೆದು ತರಬಹುದು: ನಲ್ಮೆಯ ವಾಕ್ಯಮು೦ ಬಯಿಗಳು೦ (ಪ್ರೀತಿಯ ವಾಕ್ಯವೂ, ಬೈಗುಳವೂ ).

ಕಷ್ಟ ಇಷ್ಟಕ್ಕೇ ಮುಗಿಯುವುದಿಲ್ಲ. ಪದ್ಯವನ್ನು ಕೊಟ್ಟಿರುವ ವಿಷಯದ ಕುರಿತಾಗಿಯೇ ಬರೆಯಬೇಕು. "ಅಯ್ಯೋ ರಾಮ !" ಅನ್ನಬೇಡಿ, ಅಷ್ಟು ಸಾಲದು ಅಂತ ಕೊಟ್ಟ ಛಂದಸ್ಸಿನಲ್ಲಿಯೇ ಬರೆಯಬೇಕು ! ಉದಾ : ಭಾಮಿನೀ ಷಟ್ಪದಿಯಾದರೆ ಮೂರು ಸಾಲುಗಳಲ್ಲಿ ಮಾತ್ರೆಗಳ ಲೆಕ್ಕ ಹೀಗೆ ಬರಬೇಕು :
3 | 4 | 3 | 4
3 | 4 | 3 | 4
3 | 4 | 3 | 4 | 3 | 4 | 2
ಹೀಗೆ ಬೇರೆ ಬೇರೆ ಛಂದಸ್ಸುಗಳದ್ದು ಬೇರೆ ಬೇರೆ ಲೆಕ್ಕ ಇದೆ. ಇಷ್ಟಕ್ಕೆ ಮುಗಿಯಲಿಲ್ಲ, ಪ್ರತೀ ಸಾಲಿನ ಎರಡನೇ ಅಕ್ಷರ ಪ್ರಾಸ ಬೇರೆ ಆಗಬೇಕು(ಆದಿಪ್ರಾಸ). ಇದೆಂತಹಾ ನಿಬಂಧನೆಗಳ ಜಟಿಲ ಜಾಲ ಸ್ವಾಮೀ ಅಂತ ಹೆದರಬೇಡಿ, ಹಳಗನ್ನಡದ ಪದ್ಯಗಳಲ್ಲೆಲ್ಲ ಹೀಗೆ ಛಂದಸ್ಸನ್ನೂ ಆದಿಪ್ರಾಸವನ್ನೂ ಪಾಲಿಸಲಾಗುತ್ತದೆ. ಪದ್ಯಪಾನ ಅಂತೊಂದು ರಾ ಗಣೇಶರ ತಂಡದ್ದೇ ಸೈಟಿದೆ. ಅಲ್ಲಿ ಹೀಗೆ ದತ್ತಪದಿಯ ಸವಾಲುಗಳನ್ನು ಒಡ್ಡಲಾಗುತ್ತದೆ. ಈ ಚಾಲೆಂಜಿಂಗ್ ಪದ್ಯಗಳನ್ನು ಬರೆದೆಸೆಯುವ, ನೀಡಿದ ಪದಗಳನ್ನು ಬಳಸಿ, ಆದಿಪ್ರಾಸ ಮಾಡಿ , ಕೊಟ್ಟ ವಿಷಯದಲ್ಲಿ, ಛಂದಸ್ಸಿನಲ್ಲಿಯೇ ಬರೆಯುವ ಘಟಾನುಘಟಿಗಳು ಅಲ್ಲಿದ್ದಾರೆ. ಅಲ್ಲಿಂದ ಒಂದಷ್ಟು ಸವಾಲು ಜವಾಬುಗಳನ್ನು ಹೆಕ್ಕಿ, ಸಾಹಿತ್ಯದ ಬಾರಿನಲ್ಲಿ ಹೊಸತಾಗಿ ಪದ್ಯಪಾನ ಮಾಡುವವರಿಗಾಗಿ ಇಲ್ಲಿ ಕೊಟ್ಟಿದ್ದೇನೆ (ಆದಷ್ಟೂ ಸುಲಭವಾಗಿ ಅರ್ಥವಾಗುವ ಪದ್ಯಗಳನ್ನೇ ಎತ್ತಿಕೊಂಡಿದ್ದೇನೆ, ಅಲ್ಲಲ್ಲಿ ಬರುವ ಕಠಿಣ ಪದಗಳ ಅರ್ಥ ಮತ್ತು ಟಿಪ್ಪಣಿಗಳನ್ನು ಬ್ರಾಕೆಟ್ಟಿನಲ್ಲಿ ಹಾಕಿದ್ದೇನೆ), ತಡವೇಕೆ ? ನಡೆಯಲಿ ಪದ್ಯವೃಷ್ಟಿ:

ದೇವಿಯೊಂ ಔರ್ ಸಜ್ಜನೋ, ಆಪ್ಕಾ ಪೆಹಲಾ ಸವಾಲ್ ಇಂತಿದೆ :
Auto (ಆಟೊ), Rickshaw (ರಿಕ್ಷ), Volvo (ವೊಲ್ವೊ), Lorry (ಲಾರಿ) ಪದಗಳನ್ನುಪಯೋಗಿಸಿ ಶ್ರೀ ಹರಿಯು, ಭಕ್ತನ ನೆರವಿಗೆ ಬಂದ ಸಂದರ್ಭವನ್ನು ವಿವರಿಸಿ. ಅಬ್ಬಬ್ಬಾ! ಎಲ್ಲಿಯ ಆಟೋ, ಎಲ್ಲಿಯ ವೋಲ್ವೋ, ಎತ್ತಣ ಹರಿಭಕ್ತರು ? ಗೊತ್ತಾಗಬೇಕಾದರೆ ಹಂಸಾನಂದಿ ಅನ್ನುವವರ ಪದ್ಯವನ್ನೇ ನೋಡಬೇಕು:
ಮೊಸಳೆಯಾರ್ಭಟವೇನು! ಆಟೋಪವಿನ್ನೇನು!
ಹಸುಳೆಯಾನೆಯ ಬಾಳೆಗಿಡದವೋಲ್ವೊರಗಿಸೆ
ಅಸುವಕಾಯೆಂಬ ಮೊರೆಗಲ್ಲಾರಿಗೂ ಮೊದಲು
ನಸುನಗುತ ಹರಿಯಂತರಿಕ್ಷದಲೆ ಪೊರೆದ!
(ಎಲ್ಲ ಪದಗಳು ಬಂದವೇ ಅಂತ ನೋಡಿಕೊಳ್ಳಿ. ಗಜೇಂದ್ರಮೋಕ್ಷ ಪ್ರಕರಣದಲ್ಲಿ, ಆನೆ ನೀರು ಕುಡಿಯಲು ಬಂದಾಗ ಮೊಸಳೆ ಅದರ ಕಾಲನ್ನು ಕಚ್ಚಿ ಹಿಡಿದಾಗ,ವಿಷ್ಣು ಅದನ್ನು ಕಾಪಾಡುತ್ತಾನೆ. ಬಾಳೆಗಿಡದವೋಲ್ವೊರಗಿಸೆ = ಬಾಳೆಗಿಡದ ಹಾಗೆ ಕೆಳಗೆ ಬೀಳಿಸಲು)

ಅಲ್ಲಿಂದ ಹೊರಟು ಹನೂಮಂತನ ಕಡೆಗೆ ಹೋಗೋಣ. ಎರಡನೇ ಒಗಟು ಇದು: “ape, lemur, monkey, gibbon” – ಈ ಪದಗಳನ್ನುಪಯೋಗಿಸಿ ನಿಮಗಿಷ್ಟವಾದ ಛಂದಸ್ಸಿನಲ್ಲಿ ಹನುಮಂತನ ಸಮುದ್ರ ಲಂಘನದ ಬಗ್ಗೆ ಪದ್ಯ ರಚಿಸಿರಿ ಅಂದಾಗ ಗಾಯತ್ರಿ ಇಂದಾವರ ಅನ್ನುವವರು ಕೊಟ್ಟ ಪರಿಹಾರ:
ಜಲರಾಶಿಯವನೇ ಪರೀಕ್ಷಿಸಲು ಹೇಳಿದನು
ಸುಲಭವಲೆ ಮೂರು ಜಗದೊಡೆಯನ ಸೇವೆ
ಕುಲಕೆ ಹನುಮಂ ಕೀರ್ತಿ ತರಲೆಂದು ಹಾರಿದನು
ಸಲಿಲವದು ತೋರಲವಗಿಬ್ಬನಿಯವೊಲ್
(ಸಲಿಲ = ನೀರು, ತೋರಲವಗಿಬ್ಬನಿಯವೊಲ್ = ಅವನಿಗೆ ಇಬ್ಬನಿಯಂತೆ ತೋರಲು. ಹನೂಮಂತನು ಉತ್ಸಾಹದಿಂದ ಸಮುದ್ರದ ಮೇಲೆ ಹಾರುತ್ತಿರಲು, ಆ ಜಲರಾಶಿ ಅವನಿಗೆ ಇಬ್ಬನಿಯಂತೆ ತೋರಿತು)

ಇನ್ನೊಂದು ಸಮಾಧಾನ ಸೋಮ ಅವರಿಂದ:
“ಹೇ ಪವನಸುತನೆ ನಿನಗಿಬ್ಬಂದಿತನ ತರವೆ
ಭೂಪನೇಳೀಗಲೇ ಮುರಿದು ಭಯವ
ಭಾಪೆನುವ ಕಜ್ಜಮ೦ ಕೀಳ್ಮಾಡೆ ಶಕ್ಯನೆನೆ”
ಗೋಪುರದವೊಲು ಬೆಳೆದು ತಾ೦ ಜಿಗಿದನಯ್
(ನಿನಗಿಬ್ಬಂದಿತನ = ನಿನಗೆ ಇಬ್ಬಂದಿತನ, ಕಜ್ಜಮ೦ = ಕೆಲಸವನ್ನು, ಗೋಪುರದವೊಲು = ಗೋಪುರದಂತೆ. ಜಾಂಬವಂತನು ಹನೂಮಂತನನ್ನು ಹುರಿದುಂಬಿಸುವುದು ಮೊದಲ ಮೂರು ಸಾಲುಗಳಲ್ಲಿದೆ)

ಆಯಿತಲ್ಲ, ಹನೂಮಂತ ಹಾರಿಯಾಯಿತು, ನಾವೀಗ ಸುಂದರಿಯರ ಕಡೆಗೆ ನೆಗೆಯೋಣ. Bajaj,Yamaha,Kawasaki,Kinetic ಈ ನಾಲ್ಕುಪದಗಳನ್ನು ಬಳಸಿ, ಒಬ್ಬಳು ಸು೦ದರಿ ಮತ್ತೊಬ್ಬಳ ಗುಣಗಾನವನ್ನು ಮಾಡುವ ವಿಷಯವನ್ನಿಟ್ಟುಕೊ೦ಡು ಹೇಗೆ ಬರೆಯುತ್ತಾರಪ್ಪಾ ಅಂತ ತಲೆಹಾಳಾದರೆ ಹಂಸಾನಂದಿಯವರ ಚೆಲುವಾದ ಪರಿಹಾರವನ್ನು ನೋಡಿದರಾಯಿತು :
ಏನು? ಮುಡಿಯಲಿ ತುಂಬ ಜಾಜಿಯ ಹೂವ ಮುಡಿದಿಹೆ ಚೆಂದದಿ
ಏನೊ ಕಾರ್ಯ ಮಹದಾನಂದದಿ ಮಾಡಹೊರಟಿಹೆ ಬಲ್ಲೆನು
ನೀನು ನೋಟದಲೇನೆ ಕೊಲುವುದು ಮಿಕವ ಸಾಕಿನ್ನೆನ್ನುತ
ಕೈನೆ ಟಿಕಲಿಯ ನೊಸಲಿಗಿಡುತಲಿ ಒಡತಿಗೊರೆದಳು ಚೆನ್ನುಡಿ
(ಕೈನೆ= ಸೇವಕಿ; ಟಿಕಲಿ= ಹಣೆಬೊಟ್ಟು,ನೊಸಲು = ಹಣೆ, ಕಿರಿಯ ಪ್ರಾಯದ ಒಡತಿ ಯಾರನ್ನೋ ಮರುಳು ಮಾಡುವುದನ್ನು ನೋಡಿ ಹಿರಿಯವಳಾದ ಪರಿಚಾರಿಕೆ ಹೇಳುವ ಮಾತು ಇಲ್ಲಿದೆ)
ಚಿತ್ರ ವಿಚಿತ್ರ ಪದಗಳನ್ನು ಹೇಗೆ ಸಲೀಸಾಗಿ ಹಿಡಿದು ಪದ್ಯದೊಳಗೆ ಕೂರಿಸಿ ಕವಿಗಳು ನಗುತ್ತಿದ್ದಾರೆ ಅಂತ ನೋಡ್ತಾ ಇದ್ದೀರಲ್ಲ. ಈ ಪದಕ್ರೀಡೆಗೆ ಮನಸ್ಸಿನಲ್ಲೇ "ವಾರೆ ವಾಹ್" ಹೇಳಿ ಮುಂದಿನ ಪಂಥಾಹ್ವಾನಕ್ಕೆ ಬನ್ನಿ.

“ವಿಪ್ರೋ”,“ಸತ್ಯಂ”,”ಟಿಸಿಎಸ್”, “ಗೂಗಲ್”, ಈ ಪದಗಳನ್ನು ಉಪಯೋಗಿಸಿ Raghavendra H ಅವರು ಭಾಮಿನೀಷಟ್ಪದಿಯಲ್ಲಿ ಮಳೆಯನ್ನು ವರ್ಣಿಸಿದ್ದು ಹೀಗೆ:
ಪರಕೆ ಫಲಿಸಿತು ಸತ್ಯಮುಲಿಪರ !
ಕೆರೆಯು ತುಂಬಿತು ಕುಸುಮವರಳಿತು |
ಸರಿಯಲಿ ರವಿ ಪ್ರೋಕ್ಷಿಸುತೆ ಮಳೆಯಿಳೆಗೆ ವರಜಲವ ||
ಧರಿಸಿ ಶರವನು ಮಾರಚಾಪದಿ
ಶರದನೊಡೆಯಲು ನವಿಲುಗೂಗಲಿ |
ಬರದ ಘೋರಾಸುರನ ಕುಟ್ಟಿಸಿ ಎಸೆದ ಮಳೆರಾಯ ||
(ಪರಕೆ = ಹರಕೆ , ಸತ್ಯಂ ಉಲಿಪರ = ಸತ್ಯ ಹೇಳುವವರ, ಸರಿ= ಬೆಟ್ಟದ ಜಾರು. ಶರ= ಬಾಣ/ನೀರು; ಮಾರಚಾಪ = ಕಾಮನಬಿಲ್ಲು , ಬರ= ಕ್ಷಾಮ)

ಶಬ್ದ ಚಮತ್ಕಾರದ ಮಳೆಯಾಯಿತಲ್ಲ. ಇನ್ನೀಗ ಪಬ್ಲಿಕ್ ಟಿವಿಯ ಕಡೆ ಕಿವಿಗೊಡಿ, "ಆಲ್ರೈಟ್ ಮುಂದಕ್ಕೋಗೋಣ" ಎಂಬ ಉದ್ಗಾರ ಕೇಳಿ ಕಿವಿ ಪಾವನವಾಯ್ತಲ್ಲ, ಹಾಗೆಯೇ ಮಾಡೋಣ. ಇಂಗ್ಲೀಷು ಪದಗಳನ್ನು ತಂದು ಇನ್ನಷ್ಟು ಕಠಿಣ ಸವಾಲನ್ನೊಡ್ಡಿ ನೋಡೋಣ.
ಲಿಕ್ಕರ್, ನಿಕ್ಕರ್, ಕುಕ್ಕರ್, ಸಕ್ಕರ್ ಪದಗಳನ್ನು ಬಳಸಿ ದುಷ್ಟರನ್ನು ನಿಂದಿಸುವ ಪದ್ಯ ಬೇಕಂತೆ,ಅಯ್ಯೋ ದೇವರೇ! ಇದು ಹೇಗೆ ? ಶಕುಂತಲಾ ಮೊಳೆಯಾರ ಪಾದೆಕಲ್ಲು ಅವರ ರಚನೆ :
ಪಾಲನಿಕ್ಕರ್,ಬಿಲದೆ ಜೀವಿಪ
ಕಾಲಸರ್ಪಂ ಪಸಿಯಲಿಕ್ಕರ್
ಕೋಲಿನಿಂದಪ್ಪಳಿಸಿ ದುಷ್ಟರ್ ಸಂತಸಂಗೊಂಬರ್ |
ಫಾಲಲೋಚನನಾಲಯದೆ,ಪರಿ-
ಪಾಲಿಸುತೆ,ಸಕ್ಕರೆಯ ನೀಡುತೆ
ಮಾಲೆಯಿಕ್ಕುತೆ,ಕಲ್ಲಿನುರಗನ ಪೂಜಿಪರ್,ಕುಕ್ಕರ್ ||
(ಪಾಲನಿಕ್ಕರ್ = ಹಾಲನ್ನು ಇಕ್ಕರು,ಪಸಿಯಲಿಕ್ಕರ್ = ಹಸಿದಾಗ ಇಕ್ಕರು, ಫಾಲಲೋಚನ = ಹಣೆಯಲ್ಲಿ ಕಣ್ಣಿರುವವನು, ಅಂದರೆ ಶಿವ, ಕಲ್ಲಿನುರಗ = ಕಲ್ಲಿನ ಹಾವು, ಕುಕ್ಕರ್ = ನಾಯಿಗಳು)

ಆಯಿತು ಅಂದಿರಾ ? ತಡೀರಿ. ಈಗ ಇದೆ ಮಜಾ. ಕಾಲರಾ, ಕಾಮಾಲೆ, ಜ್ವರ, ಆಮಶಂಕೆ ಪದಗಳನ್ನು ಬಳಸಿ ಧನ್ವಂತರಿಯ ಸ್ತುತಿಯನ್ನು ನಿಮ್ಮಿಚ್ಛೆಯ ಛಂದಸ್ಸಿನಲ್ಲಿ ಮಾಡಿ ನೋಡೋಣ. ಬರೀ ನೋಡುವುದಲ್ಲ, ಮಾಡಿ ನೋಡಿ ಸ್ವಾಮೀ. ಇದೊಳ್ಳೆ ಕಷ್ಟವಾಯಿತಲ್ಲ ಅಂದಿರಾ ? ಆಯಿತು ಬಿಡಿ. ಕಾಂಚನಾ ಅವರ ಉತ್ತರವನ್ನೇ ನೋಡಿಬಿಡಿ:
ಪರಿಮಳದ ಮಲ್ಲಿಕಾ ಮಾಲೆಯಂ ಹೆಣೆಯುತ್ತ
ಲಿರುವಂತ ಮೋಹಜ್ವರವನಳಿಸಲು,
ಚಿರಕಾಲ ರಾಜಿಸಲು ಹೃದಯ ಮಂದಿರದಲ್ಲಿ
ಕರೆವೆನಾ ಹರಿನಾಮ ಶಂಕೆಯಿರದೇ
(ಮಲ್ಲಿಕಾ = ಮಲ್ಲಿಗೆ)
ಯಾವ ಯಾವ ಪದಗಳನ್ನು ಹೇಗೇಗೆ ತೂರಿಸಲಾಯ್ತು ಅಂತ ನೋಡಿಯಾದರೆ ಮುಂದಿನ ಸವಾಲಿನೆಡೆಗೆ ನುಗ್ಗಬಹುದು.

ಹಂಸಾನಂದಿಯವರು ಲೆಮನ್ ಯೆಲ್ಲೋ ರೆಡ್ ವೈನ್ - ಈ ನಾಲ್ಕು ಪದಗಳನ್ನು ಬಳಸಿ ರಾಮಾಯಣದ ಕಥೆಯ ಯಾವುದಾದರೂ ಒಂದು ಸಂದರ್ಭಕ್ಕೆ ಆಗುವಂತೆ ಬರೆದದ್ದು:
ಕಾನನದಿ ಸೀತೆಯೆಲ್ಲೋ ನೀರು ತರುವಾಗ
ವೈನಾದ ಹೊನ್ನಜಿಂಕೆಯ ನೋಡಿ ಬಯಸೆ
ತಾನಲ್ಲೆ ಮನದನ್ನೆಯಾಸೆ ತೀರಿಸೆ ರಾಮ
ಚಿನ್ನಮಿಗಕೆಳಸಿರೆಡಗಣ್ಣದುರಿತವಗೆ
(ಚಿನ್ನಮಿಗಕೆಳಸಿರೆಡಗಣ್ಣದುರಿತವಗೆ = ಚಿನ್ನ ಮಿಗಕೆ ಎಳಸಿರೆ ಎಡಗಣ್ಣು ಅದುರಿತು ಅವಗೆ. ಮಾಯಾ ಮೃಗದ ಸಂದರ್ಭ. ಗಂಡಸರ ಎಡಗಣ್ಣು, ಹೆಂಗಸರ ಬಲಗಣ್ಣು ಅದುರಿದರೆ ಅಶುಭ ಶಕುನವೆಂಬುದು ಕವಿಸಮಯ)

ಗಣಿತಪ್ರಿಯರಿಗೆ Sin(ಸೈನ್), Cos(ಕಾಸ್), Tan(ಟ್ಯಾನ್/ಟಾನ್), Cot(ಕಾಟ್) ಪದಗಳಿಂದ ಕೃಷ್ಣಾವತಾರದ ಯಾವುದಾದರೂ ಘಟನಾವಳಿಯನ್ನು ಹೇಳಬೇಕೆಂಬ ಸವಾಲು ಖುಶಿ ಕೊಡಬಹುದು. T S Rajagopal ಅವರು ಕಟ್ಟಿದ ಪದ್ಯ :
ಕಲ್ಲೆದೆಯ ಕಂಸನಿಗೆ ಸೈನಿಕರು ಬಂದೊರೆಯೆ
ಕಲ್ಲೆಸೆದ ಕಾಸಾರವಾಯ್ತು ಮನವು |
ಕಲ್ಲಿಗಪ್ಪಳಿಸಲ್ಕೆ ಶಿಶುವನಕಟಾ ನೆಗಹಿ-
ತಲ್ಲಿಯೇ ಗಗನಕಾಟಿಕೆಯ ತೆರದಿ ||
(ಕಾಸಾರ = ಸರೋವರ , ನೆಗಹಿತು = ಚಿಮ್ಮಿತು. ಕೃಷ್ಣ ಹುಟ್ಟಿದಾಗ, ವಸುದೇವನು ಕಾರಾಗೃಹದಿಂದ ತಪ್ಪಿಸಿಕೊಂಡು, ಅವನನ್ನು ಗೋಕುಲದಲ್ಲಿ ಬಿಟ್ಟು,ಯಶೋದೆ ಮತ್ತು ನಂದಗೋಪರ ಶಿಶುವನ್ನು ತಾನು ಎತ್ತಿಕೊಂಡು ಕಾರಾಗೃಹಕ್ಕೆ ಮರಳುತ್ತಾನೆ. ದೇವಕಿಗೆ ಹುಟ್ಟಿದ ಶಿಶು ಅದು ಎಂದು ಭ್ರಮಿಸಿ ಕಂಸನು ಆ ಮಗುವನ್ನು ಕೊಲ್ಲಲು ಪ್ರಯತ್ನಿಸುವ ಸಂಧರ್ಭ ಇದು). ಗಣಿತದ ವಿಷಯ ಎತ್ತಿದರೆ ಕೂಡಲೇ ಡ್ಯಾಗರ್, ಗನ್ನು,ಲಾಂಗು ಎಲ್ಲ ಎತ್ತುವವರಿದ್ದಾರೆ. ಅವುಗಳನ್ನಿಟ್ಟುಕೊಂಡೂ ಪದ್ಯರಚನೆಯಾಗಿ ಹೋಗಲಿ.

Dagger (ಡಾಗರ್/ಡ್ಯಾಗರ್), Gun, Long, Acid (ಆಸಿಡ್) – ಈ ಪದಗಳನ್ನು ಬಳಸಿ ಸತ್ಯಭಾಮೆಯ ಸೆಡವಿಗೆ ಕಾರಣವನ್ನು ಹೇಳಬೇಕು ಅಂದರೆ ಯಾರಾದರೂ ತಬ್ಬಿಬ್ಬಾಗಬಹುದು. ಪರಿಹಾರ ಇದ್ದೇ ಇದೆ . ಕಾಂಚನಾ ಅವರ ರಚನೆ:
ನೋಡಾ! ಗರ್ಜಿಪ ಮೇಘವ – ರವಿಯೆಡೆ
ಕಾಡುತ್ತಿರಲಾಂಗನೆಯರನಂ
ಕೇಡಾ ಸಿಡುಕದ ಭಾಮೆಗೆರಗದೇ?
ಮಾಡಿರೆ ಸವತಿಯ ಘನಶಾಮಂ
(ಕಾಂಚನಾ ಅವರದ್ದೇ ವಿವರಣೆ : ಇತರ ಹೆಂಗಳೆಯರಲ್ಲಿ ರವಿಯ ಸ್ನೇಹವನ್ನು ಕಂಡ ಮೇಘ, ತನ್ನ ರಕ್ಷಣೆಗಾಗಿ ಗರ್ಜಿಸುತ್ತಿದ್ದಾಳೆ. ಅಂತೆಯೇ, ಸವತಿಯ ಸ್ಥಾನವನ್ನು ಗಳಿಸಿದ ಸತ್ಯಭಾಮೆಯೂ ತನಗಾಗುವ ಕೇಡನ್ನು ತಡೆಯಲು ಸಿಡುಕುವುದೇ ಸೂಕ್ತ)

ಕಡೆಯದಾಗಿ, ತಿಂಡಿಪ್ರಿಯರನ್ನು ಸಂಪ್ರೀತರನ್ನಾಗಿಸಿ ಇದನ್ನು ಮುಗಿಸೋಣ. ‘ದೋಸೆ’, ‘ಸಾರು’, ‘ಪಲ್ಯ’, ‘ಪೂರಿ’ ಪದಗಳನ್ನುಪಯೋಗಿಸಿ ನಿಮ್ಮ ಇಷ್ಟದೇವತೆಯ ಸ್ತುತಿಯನ್ನು ಪದ್ಯರೂಪದಲ್ಲಿ ರಚಿಸಿರಿ ಅಂದಾಗ ಹಂಸಾನಂದಿಯವರಿಗೆ ಹೊಳೆದ ಪದ್ಯ ಇದು :
ಕಾಯಿಪಲ್ಯದ ಹಾರತೊಟ್ಟಿಹ
ತಾಯೆ ಶಾಕಂಭರಿಯೆ ನೀ ವರ
ವೀಯೆ ಸಾರುತ ನಂಬಿದವರನು ಪೊರೆವೆನೆನ್ನುತಲಿ
ಹಾಯೆನಿಸಿದೋ ಸೆರೆಯ ಜೀವವ
ಕಾಯುವುದು ತರ ನಿಖಿಳ ಜಗಕೆ-
ನ್ಯಾಯ ಕರುಣಾ ಪೂರಿತೆಯೆ ಹಸಿವನ್ನು ನೀನಳಿಸಿ

ಇದಕ್ಕೆ ಇನ್ನೊಂದು ಮಜವಾದ ಪರಿಹಾರವೂ ಇದೆ. ಸುಧೀರ್ ಕೇಸರಿ ಅನ್ನುವವರು ಸಂಸ್ಕೃತದ ಶಾಲಿನೀ ವೃತ್ತ ಎಂಬ ಛಂದಸ್ಸನ್ನು ಇಂಗ್ಲೀಷಿನಲ್ಲಿ ಹೊಸೆದು, ದೋಸೆ, ಪೂರಿ,ಸಾರು , ಪಲ್ಯಗಳನ್ನೆಲ್ಲ ಆಂಗ್ಲಭಾಷೆಯಲ್ಲಿ ತಂದು ಚಮತ್ಕಾರದ ರಚನೆ ಮಾಡಿದ್ದಕ್ಕೆ ಚಪ್ಪಾಳೆ ತಟ್ಟಲೇಬೇಕು:
Though sages say thou art abstract and abstruse,
Don’t people yearn all the time just to see you?
Those Who saw rules of the Cosmic Dimensions
can't describe you ; speech is poor in that aspect!

ಪದ್ಯಪಾನದಲ್ಲಿ ಬಂದಿರುವ ಎಲ್ಲ ದತ್ತಪದಿಗಳನ್ನೂ, ಪರಿಹಾರಗಳನ್ನೂ ಇಲ್ಲಿ ನೋಡಬಹುದು: http://padyapaana.com/?cat=56

ಅವಧಾನ ಕಲೆಯ ಪರಿಚಯವನ್ನು ಮಂಜುನಾಥ ಕೊಳ್ಳೇಗಾಲ ಅವರ ಬ್ಲಾಗಿನಲ್ಲಿ ಓದಬಹುದು :
http://nannabaraha.blogspot.com/2012/11/blog-post.html

No comments:

Post a Comment