Monday, 7 January 2019

ವ್ಯಾಕರಣ ಬೇಕೇ

ಬುಕ್ಕಾಸುರ, ಓದುಬಾಕ ಗೆಳೆಯ ಪ್ರಶಾಂತ ಭಟ್ಟರು ವ್ಯಾಕರಣದ ಬಗ್ಗೆ ಒಂದಿಷ್ಟು ಚರ್ಚೆಗಳಾದದ್ದನ್ನು ನೋಡಿ, ತಕರಾರುಗಳನ್ನು ಎತ್ತಿ, "ವ್ಯಾಕರಣಕ್ಕಿಷ್ಟು‌ ಮಣ್ಣು ಹಾಕಾ. ಓದೋರಿಗೆ ಅರ್ಥ ಆದರೆ ಸಾಕು. ವ್ಯಾಕರಣಬದ್ಧವಾಗೇ ಬಳಸಿ ಏನು ಸಾಧಿಸ್ತಾರೋ!" ಅಂತ ಹೇಳಿ, ಕಡೆಗೆ, "ಆಡು ಭಾಷೆಯ ಬರೆಯುವಾಗ ವ್ಯಾಕರಣದ ನಿಯಮಗಳ ಪಾಲನೆ ಹೇಗೆ? ಹೇಳಬಹುದಾ" ಅಂತ ಕೇಳಿದ್ದಾರೆ. ಇದರಲ್ಲಿ ಒಂದು ಪುಟ್ಟ ಲೇಖನಕ್ಕೆ ಆಗುವಷ್ಟು ವಿಷಯವಿರುವುದರಿಂದ, ಆಸಕ್ತರಿಗಾಗಿ, ಇದನ್ನು ಪ್ರತ್ಯೇಕವಾಗಿಯೇ ಎತ್ತಿಕೊಂಡಿದ್ದೇನೆ.

ವ್ಯಾಕರಣದ ಬಗ್ಗೆ ಕಣ್ಣು ತೆರೆಸುವಂತಹಾ ಮಾತುಗಳನ್ನು ಸೇಡಿಯಾಪು ಕೃಷ್ಣ ಭಟ್ಟರು ತಿಳಿಸಿದ್ದಾರೆ, ಅವರ ಕೆಲವು ವಿಚಾರಗಳ ಸಾರವನ್ನಿಟ್ಟುಕೊಂಡು, ಪಾದೆಕಲ್ಲು ನರಸಿಂಹ ಭಟ್ಟರ ಚಿಂತನೆಯನ್ನು ಬೆರೆಸಿ, ನನ್ನದೇ ತಲೆಹರಟೆಯ ಮಸಾಲೆ ಸೇರಿಸಿದರೆ ಹೀಗೆ ಹೇಳಬಹುದು: ಸಾಧಾರಣವಾಗಿ ವ್ಯಾಕರಣ ಅಂದಕೂಡಲೇ ಬರೀ ಸಂಧಿ, ಸಮಾಸ, ಲಿಂಗ, ವಚನ, ವಿಭಕ್ತಿ ಅಂತೆಲ್ಲ ಒಂದಷ್ಟು ಕೆಲಸಕ್ಕೆ ಬಾರದ(?!) technical termಗಳನ್ನು ಹೇಳುವ, ರಾಜಾಜ್ಞೆ ಹೊರಡಿಸಿದಂತೆ ನಿಯಮಗಳನ್ನು ಹೇಳುವ, ಬೋರು ಹೊಡೆಸುವ ಶಾಸ್ತ್ರವೊಂದರ ಚಿತ್ರ ಕಣ್ಮುಂದೆ ಬರುತ್ತದೆ. ಇವುಗಳನ್ನು ಯಾರಾದರೂ ಯಾಕೆ ಕಲಿಯಬೇಕು ಅಂತಲೂ ಹೇಳದೆ, ಸುಮ್ಮನೇ ಆಖ್ಯಾತ ಪ್ರತ್ಯಯ, ವಿಭಕ್ತಿ ಪ್ರತ್ಯಯ, ಉಪಸರ್ಗ, ಸಂಧಿ, ಸಮಾಸ ಅಂತೆಲ್ಲ technical termಗಳನ್ನು ಬಾಯಿಪಾಠ ಮಾಡಿಸಿ ವಿದ್ಯಾರ್ಥಿಗಳ ಜೀವ ಹಿಂಡಲಾಗುತ್ತದೆ.

ಆದರೆ ಇದಿಷ್ಟೇ ವ್ಯಾಕರಣವಲ್ಲ. ನಮ್ಮ ತಲೆಯಲ್ಲಿ ಬಂದ ಎಡವಟ್ಟು ಯೋಚನೆಗಳನ್ನು ನಾವು ಉಳಿದವರಿಗೆ ಹೇಗೆ ತಿಳಿಸಿ ಅವರನ್ನು ಪೀಡಿಸುತ್ತೇವೆ, ಅದು ಇನ್ನೊಬ್ಬರಿಗೆ ಹೇಗೆ ಅರ್ಥವಾಗುತ್ತದೆ (ಇಷ್ಟಕ್ಕೂ ಅರ್ಥವಾಗುವುದು ಅಂದರೆ ಏನು? ಅರ್ಥದ ಅರ್ಥ ಏನು ?!) ಎಂಬುದೆಲ್ಲ ಒಳ್ಳೆ ಗಮ್ಮತ್ತಿನ ಪ್ರಶ್ನೆಗಳೇ. ನಮ್ಮ ಮಾತು ಹೇಗಿರುತ್ತದೆ, ಅದು ಇನ್ನೊಬ್ಬರಿಗೆ ಅರ್ಥ ಆಗುವುದರ ಹಿಂದಿರುವ ಥಿಯರಿ ಏನು ಅಂತೆಲ್ಲ ನಾವು ತಲೆ ಕೆರೆದುಕೊಂಡಿರುತ್ತೇವಾ? ಎಲ್ಲರೂ ಒಂದೇ ಡಿಕ್ಷನರಿಯಲ್ಲಿರುವ ಪದಗಳನ್ನೇ ಬಳಸುವುದು, ಆದರೂ ಕೆಲವರ ಮಾತು ಮಾತ್ರ ಚಂದ, ಕೆಲವರದ್ದು ಬೋರು, ಹೀಗ್ಯಾಕೆ ? ಕೆಲವರದ್ದು ಬರೆವಣಿಗೆ ಅಲ್ಲ ಕೊರೆವಣಿಗೆ ಎಂಬಂತೆ ಸುಮ್ಮನೇ ಕೊರೆದಂತಿದ್ದು ಸುಸ್ತಾಗಿಸುತ್ತದೆ, ಕೆಲವರದ್ದು ಶಿಲ್ಪವನ್ನು ಕೊರೆದಂತೆ ಹಿತವಾಗಿರುತ್ತದೆ. ಇದೆಲ್ಲ ಯಾಕೆ ಹೀಗೆ ? ಇದೆಲ್ಲದರ ಹಿಂದಿನ ತತ್ತ್ವಗಳು ಯಾವುವು ? ಮಾತಿನ ಗುಟ್ಟೇನು? ಇವೆಲ್ಲ ಪ್ರಶ್ನೆಗಳ ಬಗ್ಗೆ ಚಿಂತನೆ ಮಾಡುವುದು ನಿಜವಾಗಿಯೂ ವಿಶಾಲಾರ್ಥದಲ್ಲಿ ವ್ಯಾಕರಣದ ಕೆಲಸ.

ಮಾತು ಗಾಡಿ ಓಡಿಸಿದಂತೆ ಅಂತಾದರೆ, ವ್ಯಾಕರಣ Newton's laws of motionನಂತೆ ಅಥವಾ ಎಂಜಿನ್ ಹೇಗೆ ಕೆಲಸ ಮಾಡುತ್ತದೆ ಅಂತ ತಿಳಿಸುವ ವಿಜ್ಞಾನಶಾಸ್ತ್ರದಂತೆ. ಪ್ರಾಚೀನ ಭಾರತದ ವ್ಯಾಕರಣ ಚಿಂತನೆ ಇಷ್ಟು ವಿಶಾಲವಾಗಿ ಹರಡಿಕೊಂಡು ಕಾವ್ಯಮೀಮಾಂಸೆಗೆ ಪ್ರೇರಣೆ ಕೊಟ್ಟದ್ದೆಲ್ಲ ಉಂಟು. ಹೀಗೆ ಮಾಡುವ ವ್ಯಾಕರಣ ಯಾರಿಗೆ ಬೇಡ ? ವ್ಯಾಕರಣವಿಲ್ಲದೆ ಕಾವ್ಯಸೌಂದರ್ಯವೇ ಇಲ್ಲ ಎಂಬಂತೆ ಪ್ರಾಚೀನರ ಕಾವ್ಯಮೀಮಾಂಸೆಯ ಪುಸ್ತಕಗಳಲ್ಲಿ ಪುಟಗಟ್ಟಲೆ ವ್ಯಾಕರಣದ ಚರ್ಚೆಗಳಿವೆ. ಶಬ್ದಮಣಿದರ್ಪಣದಲ್ಲಿ, "ವ್ಯಾಕರಣದಿಂದೆ ಪದಂ, ಆ ವ್ಯಾಕರಣದ ಪದದಿಂ ಅರ್ಥಂ, ಅರ್ಥದೆ ತತ್ತ್ವಾಲೋಕಂ. ತತ್ತ್ವಾಲೋಕದಿಂ ಆಕಾಂಕ್ಷಿಪ ಮುಕ್ತಿಯಕ್ಕುಂ, ಅದೆ ಬುಧರ್ಗೆ ಫಲಂ"(ವ್ಯಾಕರಣವನ್ನು ಓದಿದಾಗ ಪದಸಿದ್ಧಿಯಾಗುತ್ತದೆ, ಹಾಗೆ ಕಲಿತ ಪದದಿಂದ ಅರ್ಥದ ಬಗೆಗಿನ ಜ್ಞಾನವೂ ಹೆಚ್ಚುತ್ತದೆ, ಹಾಗೆ ಪಡೆದುಕೊಂಡ ಶಬ್ದ-ಅರ್ಥ ಜ್ಞಾನದಿಂದ ತತ್ತ್ವವಿಚಾರ ತಿಳಿಯುತ್ತದೆ. ಇದರಿಂದ ನಾವು ಬಯಸುವ ಮುಕ್ತಿ ಸಿಗುತ್ತದೆ. ಅದೇ ವಿದ್ವಾಂಸರಿಗೆ ಫಲ) ಎಂಬಂತಹಾ ಹೇಳಿಕೆಗಳು ಬರುವ ಮಟ್ಟಕ್ಕೆ ಪ್ರಾಚೀನರು ಹೋಗಿದ್ದಾರೆ.

ಇನ್ನೀಗ ಆಡು ಭಾಷೆಯಲ್ಲಿ ವ್ಯಾಕರಣ ಬೇಕೇ ಎಂಬ ಪ್ರಶ್ನೆ. ಜನ ಹೇಗೆ ಮಾತಾಡುತ್ತಾರೆ ಅಂತ ನೋಡಿದರೆ ಇದಕ್ಕೆ ಉತ್ತರ ಅಲ್ಲಿಯೇ ಸಿಗುತ್ತದೆ. "ನಾನು ಒಳಗೆ ಕೂತು ಊಟ ಮಾಡ್ತೇನೆ" ಅಂತ ಹೇಳಬೇಕಾಗಿದೆ ಅಂದುಕೊಳ್ಳೋಣ. ಇದನ್ನು ತಪ್ಪು ವ್ಯಾಕರಣ ಬಳಸಿ ಹೀಗೆಲ್ಲ ಹೇಳಬಹುದು :
"ನೀನು ಒಳಗೆ ನಿಂತು ಊಟ ಮಾಡುವವನು"
"ನನ್ನನ್ನು ಒಳಗಿನಲ್ಲಿ ಕೂತು ಊಟವು ಮಾಡ್ತದೆ"
"ನೇಣು ಒಲೆಗೆ ಕೂತು ಹೂಟ ಮಾಡ್ತೇನೆ"
"ಮಾಡ್ತೇನೆ ಒಳಗೆ ಊಟ ಕೂತು ನಾನು"
ಹೀಗೆಲ್ಲ ಹೇಳುವವರು ಯಾರಿದ್ದಾರೆ ? "ನಾನು ಒಳಗೆ ಕೂತು ಊಟ ಮಾಡ್ತೇನೆ" ಅಂತ ವ್ಯಾಕರಣಬದ್ಧವಾಗಿಯೇ ಎಲ್ಲರೂ ಹೇಳುವುದು.
ಹಾಗೆಯೇ ಯಾರೋ ಮಹನೀಯರು ತೀರಿಕೊಂಡರೆಂದಿಟ್ಟುಕೊಳ್ಳೋಣ. ಅದನ್ನು ಅದೇ ಅರ್ಥ ಬರುವಂತೆ ಇಷ್ಟು ತರಗಳಲ್ಲಿ ಹೇಳಬಹುದು :
ಶ್ರೀಯುತರು ಸ್ವರ್ಗಸ್ಥರಾದರು
ಅವರು ದೈವಾಧೀನರಾದರು
ಅವರು ಇನ್ನಿಲ್ಲ
ಶ್ರೀಯುತರು ನೆಗೆದು ಬಿದ್ದರು
ಶ್ರೀಯುತರು ಗೊಟಕ್ ಆದರು
ನಾವ್ಯಾರೂ ಕೊನೆಯ ಎರಡು ಪ್ರಯೋಗಗಳನ್ನು ಮಾಡದೆ ವ್ಯಾಕರಣದ ಮರ್ಯಾದೆಯನ್ನು ಪಾಲಿಸಿಯೇ ಮಾತಾಡುತ್ತೇವೆ.
ಹೀಗೆ ನಾವೆಲ್ಲ ಗೊತ್ತಿದ್ದೋ ಗೊತ್ತಿಲ್ಲದೆಯೋ ವ್ಯಾಕರಣಕ್ಕೆ ಬೆಲೆ ಕೊಟ್ಟು ಮಾತಾಡುವವರೇ ಆಗಿದ್ದೇವೆ ಅಂತ ಗೊತ್ತಾಗಲಿಕ್ಕೆ ಈ ಎರಡು ಉದಾಹರಣೆಗಳು ಸಾಕು.

ವ್ಯಾಕರಣವನ್ನು ನಾವೆಲ್ಲ ಪಾಲಿಸುವವರೇ ; degree ಯಲ್ಲಿ ಮಾತ್ರ ವ್ಯತ್ಯಾಸ. ಈಗ, "ಇರುವುದಕ್ಕೆ ಒಂದೊಳ್ಳೆ ಮನೆ ಬೇಕು" ಅಂತ ನಾವೆಲ್ಲ ಹೇಳುತ್ತೇವೆ. ಇಲ್ಲಿ ಒಳ್ಳೆ ಮನೆ ಅಂದರೆ ಏನು ಅನ್ನುವುದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಬಡವನಿಗೆ ಗುಡಿಸಲು ಒಳ್ಳೆಯ ಮನೆಯಾಗಬಹುದು, ಇನ್ನೊಬ್ಬನಿಗೆ 2 BHK ಸಾಕಾಗಬಹುದು, ಮತ್ತೊಬ್ಬನಿಗೆ Posh Villa ಬೇಕಾಗಬಹುದು, ಅಂಬಾನಿಗೆ 100 ಕೋಟಿಯ ಮನೆಯೇ ಒಳ್ಳೆಯ ಮನೆ ಅನ್ನಿಸಬಹುದು. ಒಳ್ಳೆಯ ಮನೆ ಎಲ್ಲರಿಗೂ ಬೇಕು, ಒಳ್ಳೆಯತನದ degree ಯಲ್ಲಿ ಮಾತ್ರ ವ್ಯತ್ಯಾಸ. ವ್ಯಾಕರಣವೂ ಹಾಗೆ. ಘನವಿದ್ವಾಂಸರು ಅಂಬಾನಿಯಂತೆ, ನನ್ನಂತವರು 2 BHK ಯವರು, ಒಟ್ರಾಶಿ ತಪ್ಪು ತಪ್ಪು ಭಾಷೆಯಲ್ಲಿ ಮಾತಾಡುವವರು ಬಡವರು ಅಂತಾಗಬಹುದು. ಬರೆಯುವವರು, ಭಾಷಣಕಾರರು ಎಲ್ಲ Posh Villaದ ಮಟ್ಟಕ್ಕಾದರೂ ಬಂದರೆ ಅವರ ಬರೆಹವೇ/ಮಾತೇ ಕಳೆಗಟ್ಟುತ್ತದೆ.

ಅಂಬಾನಿಗೆ ಬಡವರ ಮನೆ ಕೊಳಕೆಂದು ಕಾಣಬಹುದು, 2 BHKಯವರಿಗೆ ಅಂಬಾನಿಯ ಮನೆಯೆಲ್ಲ ಯಾಕೆ ಸುಮ್ಮನೆ ಅನ್ನಿಸಬಹುದು. ಇದು ಅವರವರ ಜ್ಞಾನ, ಓದು, ಸೌಂದರ್ಯಪ್ರಜ್ಞೆ, ಸಂಸ್ಕಾರಗಳಿಗೆ ಬಿಟ್ಟ ವಿಚಾರ. "ಓದೋರಿಗೆ ಅರ್ಥ ಆದರೆ ಸಾಕು. ವ್ಯಾಕರಣಬದ್ಧವಾಗೇ ಬಳಸಿ ಏನು ಸಾಧಿಸ್ತಾರೋ" ಎಂಬುದಕ್ಕೂ ಇದುವೇ ಉತ್ತರ. ಈಗ, ನಾವೊಂದು ಮದುವೆಗೆ ಹೋಗುತ್ತೇವೆ. ಹೋಗುವಾಗ ಕೆಸರಾದ ಬಟ್ಟೆಯನ್ನೂ ಧರಿಸಬಹುದು, ಮಾಸಲಾದ ಹಳೆಯ ಉಡುಗೆಯನ್ನೂ ತೊಡಬಹುದು, ಒಳ್ಳೆಯ ಒಪ್ಪ ಓರಣದ ಚಂದದ ಬಟ್ಟೆಯನ್ನೂ ಹಾಕಿಕೊಳ್ಳಬಹುದು. "ನಾನು ಕೆಸರಾದ ಬಟ್ಟೆ ಹಾಕಿಕೊಂಡರೆ ನಿಮಗೇನು ಕಷ್ಟ ? ಊಟ ಆಗಲೂ ಸಿಕ್ಕುತ್ತದೆ, ಮಾಸಲು ಬಟ್ಟೆ ಹಾಕಿದರೆ ಮದುವೆ ನಿಲ್ಲುತ್ತದೆಯೇ" ಅಂತ ಕೇಳಿದರೆ, ಯಾವ ಬಟ್ಟೆಯನ್ನಾದರೂ ಹಾಕಿಕೊಳ್ಳಿ, ಅದು ನಿಮ್ಮ ಕಲಾಪ್ರಜ್ಞೆ , ಸೌಂದರ್ಯಪ್ರಜ್ಞೆ, ಸಂಸ್ಕಾರಗಳಿಗೆ ಬಿಟ್ಟ ವಿಚಾರ ಅಂತಷ್ಟೇ ಹೇಳಬಹುದು.

ಮೇಲೆ ಹೇಳಿದ degreeಯ ವ್ಯತ್ಯಾಸಕ್ಕೆ ಕೆಲವು ಕಾರಣಗಳೂ ಇರುತ್ತವೆ. ವಿಷಯವು ಕ್ಲಿಷ್ಟವೂ, ಸೂಕ್ಷ್ಮವೂ, ಸುಂದರವೂ ಆದಷ್ಟು ಭಾಷೆ, ವ್ಯಾಕರಣಗಳ ಸಹಾಯ ಹೆಚ್ಚು ಹೆಚ್ಚು ಬೇಕು. ಉದಾ: "ನೀರು ಕುಡಿ" ಅನ್ನುವುದು ಸರಳವಾದ ವಿಚಾರ, ಇದನ್ನು ತಪ್ಪು ತಪ್ಪು ಭಾಷೆಯಲ್ಲಿ ಹೇಳಿದರೂ ನಡೆಯುತ್ತದೆ, ಅಷ್ಟೇಕೆ ಮಾತೇ ಇಲ್ಲದೆ ಕೈಸನ್ನೆಯಿಂದಲೇ ಹೇಳಿದರೂ ಆಗುತ್ತದೆ. ಆದರೆ, "ಎರಡನೇ ಪಾತ್ರೆಯಿಂದ ಉದ್ದಲೋಟದಲ್ಲಿ ಅರ್ಧ ಲೋಟ ನೀರು ತೆಗೆದುಕೊಂಡು, ಅದಕ್ಕೆ ಉಪ್ಪು ಬೆರೆಸಿ, ನೀರನ್ನು ಬಿಸಿ ಮಾಡಿ, ಅದನ್ನು ಬಾಯಿಗೆ ಹಾಕಿ, ಮುಕ್ಕುಳಿಸಿ, ಆಮೇಲೆ ಉಗಿ" ಅಂತ ಕೈಸನ್ನೆಯಿಂದ ಹೇಳಬೇಕಾದರೆ ಸ್ವಲ್ಪ ಸರ್ಕಸ್ ಮಾಡಬೇಕು, ಮಾತಿನಿಂದಲೇ ಹೇಳಿದರೂ, ಸರಿಯಾದ ವ್ಯಾಕರಣ ಬಳಸದೆ ಇದನ್ನು ಹೇಳಿದರೆ ಅರ್ಥವಾಗುವುದು ಕಷ್ಟ.
ಹೀಗೆ ವಿಷಯವು ಕ್ಲಿಷ್ಟವೂ ಸೂಕ್ಷ್ಮವೂ ಆಗುತ್ತಾ ಹೋದಹಾಗೆ ವ್ಯಾಕರಣ ಇರಬೇಕಾಗುತ್ತದೆ, ಸರಳ ವಿಚಾರಗಳಲ್ಲಿ ವ್ಯಾಕರಣ ಇಲ್ಲದಿದ್ದರೂ ಆಗುತ್ತದೆ. ಸೂಕ್ಷ್ಮವಿಚಾರಗಳನ್ನು , ಸುಂದರವಾದದ್ದನ್ನು ಹೇಳುವಾಗಲಂತೂ ಸರಿಯಾದ ಭಾಷೆ, ಭಾಷಾಸೌಂದರ್ಯ ಎಲ್ಲ ಬೇಕೇ ಬೇಕಾಗುತ್ತದೆ. ಲೇಖನದಲ್ಲಿಯೋ,ಕಾದಂಬರಿಯಲ್ಲಿಯೋ, ಕವಿತೆಯಲ್ಲಿಯೋ, ಸಿನೆಮಾದಲ್ಲಿಯೋ, ಹಾಡಲ್ಲಿಯೋ, ಯಕ್ಷಗಾನದಲ್ಲಿಯೋ ತಪ್ಪು ತಪ್ಪು ಭಾಷೆಯಿದ್ದರೆ ರಸಾಭಾಸ ಆಗಿ, ನಾವೇ ಬೈಕೊಳ್ಳುತ್ತೇವೆ.

ಇಷ್ಟು ಹೇಳಿದರೆ ಪ್ರಶ್ನೆಗಳಿಗೆ ಸಮಾಧಾನ ಹೇಳಿದಂತಾಯ್ತು ಅಂದುಕೊಳ್ಳುತ್ತೇನೆ.

No comments:

Post a Comment