"ಜಗಳ ಮಾಡುವುದು ಹೇಗೆ" ಎಂಬ ವಿಚಾರವಾಗಿ ನಾನು ಬರೆಯುತ್ತಿರುವ ಪುಸ್ತಕದ ಕೆಲವು ಸಾಲುಗಳು :
ನಾನು ಹಿಂದೊಮ್ಮೆ "ಸರಿಗನ್ನಡಂ ಗೆಲ್ಗೆ" ಎಂಬ ಭಾಷಾದೋಷಗಳನ್ನು ಗುರುತಿಸುವ ಲೇಖನವೊಂದನ್ನು ಬರೆದದ್ದು ಹಲವರಿಗೆ ನೆನಪಿರಬಹುದು. ಈಚೆಗೆ ಶ್ರೀವತ್ಸ ಜೋಶಿಯವರು ಅಂತದ್ದೊಂದು ಸರಣಿಯನ್ನೇ ಶುರು ಮಾಡಿ, ಅದನ್ನು ಚಂದದ ನಿರೂಪಣೆಯೊಂದಿಗೆ ಪ್ರಸ್ತುತಿ ಮಾಡಿ ಶ್ಲಾಘನೀಯ ಕೆಲಸವನ್ನು ಮಾಡುತ್ತಾ ಬಂದಿದ್ದಾರೆ. ಅವರ ವಿಚಾರಗಳಲ್ಲಿಯೂ ದೋಷಗಳಿರುವುದನ್ನು ಮಹೇಶ ಭಟ್ಟ ಹಾರ್ಯಾಡಿ ಎಂಬ ವ್ಯುತ್ಪನ್ನರು ತೋರಿಸಿದ ಮೇಲೆ ಹಲವು ವಾಲುಗಳಲ್ಲಿ ಈ ವಿಚಾರ ಚರ್ಚೆಯಾಗಿ, ಕಡೆಗೆ ಮಂಜುನಾಥ ಕೊಳ್ಳೆಗಾಲ ಅವರು ಸಂಯಮದಿಂದ, ಯಾವುದೇ ಸಂಶಯಕ್ಕೆ ಎಡೆಯಿಲ್ಲದಂತೆ ವಿವರಣೆ ಕೊಟ್ಟದ್ದೂ ಆಯಿತು. ಇಷ್ಟಾಗುವಾಗ ಹಲವು ವಾಲುಗಳ ಕಮೆಂಟುಗಳಲ್ಲಿ, ವಿಷಯ ಚರ್ಚೆಯಾಗದೆ ಗೇಲಿ, ಕುಹಕ, ಭರ್ತ್ಸನೆಗಳಿಗೇ ಹೆಚ್ಚು ಜಾಗ ಸಿಕ್ಕಿದ್ದೂ ಆಯಿತು. ಪ್ರಾಯಶಃ ಇದೆಲ್ಲದರಿಂದ ಕೆರಳಿದ ಜೋಶಿಯವರೂ ನೇರವಾಗಿ Ad hominem attack ಮಾಡಿದ್ದೂ ಆಯಿತು. ನಾನು ಜೋಶಿಯವರ ಬರೆಹಗಳನ್ನು ಮೊದಲಿಂದಲೂ ಮೆಚ್ಚುತ್ತಲೇ ಬಂದವನು, ಮಂಜುನಾಥ ಕೊಳ್ಳೇಗಾಲ ಅವರ ಬರೆಹಗಳ ಅಭಿಮಾನಿಯೂ ಹೌದು, ಮಹೇಶ ಭಟ್ಟ, ಗಣೇಶ ಭಟ್ಟ ಕೊಪ್ಪಲತೋಟ ಮುಂತಾದವರ ವಿದ್ವತ್ತೆಯ ಬಗ್ಗೆಯೂ ಗೌರವ ಭಾವವನ್ನೇ ತಾಳಿದವನು. ಹೀಗಾಗಿ ನಾನು ಯಾರ ವಿರುದ್ಧವೂ ಯಾರ ಪರವೂ ಅಲ್ಲದೆ, ಆದರ್ಶಪರವಾದರೆ ಹೇಗೆಂದು ಯೋಚಿಸಿ ಇಷ್ಟು ಹೇಳಿದ್ದೇನೆ.
ಒಂದು ಪದಪ್ರಯೋಗ ಸರಿಯೇ ಅಲ್ಲವೇ ಎಂಬಂತಹಾ ವಿಚಾರಗಳಲ್ಲಿ, ವ್ಯಾಕರಣ, ಸಂಶೋಧನೆಯಂಥ ಸಂಗತಿಗಳಲ್ಲಿ ಮತಬೇಧಗಳು, ಅಸಮ್ಮತಿಗಳೆಲ್ಲ ಸಹಜ. ನಿಘಂಟು ಸಮಿತಿಗಳ ಸಭೆಗಳಲ್ಲಿ ಆಗುವ (ಪದಗಳ ಕುರಿತಾದ) ಜಗಳಗಳ ಬಗ್ಗೆ ಕೆಲವರು ಅಲ್ಲಲ್ಲಿ ಬರೆದಿದ್ದಾರೆ. ಹೆಚ್ಚು ಕಮ್ಮಿ ಪ್ರತಿದಿನವೂ ಡಿ.ಎಲ್. ನರಸಿಂಹಾಚಾರ್ಯರ ಜೊತೆ ಪದಗಳ ಬಗ್ಗೆ ಜಗಳ ಕಾಯುತ್ತಿದ್ದೆ ಅಂತ ಕವೆಂ ರಾಘವಾಚಾರ್ ಹೇಳಿದ್ದಾರೆ. ಶಿವರಾಮ ಕಾರಂತರಿಗೂ ಉಳಿದವರಿಗೂ ನಿಘಂಟು ಸಮಿತಿಯ ಸಭೆಗಳಲ್ಲಿ ಬಿಸಿ ಬಿಸಿ ಚರ್ಚೆಗಳಾಗುತ್ತಿದ್ದದ್ದು ಪ್ರಸಿದ್ಧವಾಗಿದೆ. ಅವಕಾಶ ಇದ್ದಾಗಲೆಲ್ಲ ಜಿ ವೆಂಕಟಸುಬ್ಬಯ್ಯನವರ ಜೊತೆ ಪದಗಳ ಬಗ್ಗೆ ವಾಗ್ಯುದ್ಧ ಮಾಡುತ್ತಿದ್ದೆ, ಸಾಹಿತ್ಯ ಪರಿಷತ್ತಿನ ಅರ್ಥಕೋಶದಲ್ಲಿರುವ ಹಲವು ಅರ್ಥಗಳನ್ನು ನಾನು ಈಗಲೂ ಒಪ್ಪುವುದಿಲ್ಲ ಅಂತ ಟಿವಿ ವೆಂಕಟಾಚಲ ಶಾಸ್ತ್ರಿಗಳು ಹೇಳಿದ್ದಾರೆ. ಇನ್ನು ಪಂಪನ "ಭಾನುಮತಿಯ ನೆತ್ತ" ಎಂಬ ಒಂದೇ ಒಂದು ಪದ್ಯದ ಬಗ್ಗೆ ಆದ ಸುಮಾರು ಇನ್ನೂರೈವತ್ತು ಮುನ್ನೂರು ಪುಟಗಳಷ್ಟು ಉದ್ದದ ಚರ್ಚೆಯನ್ನು ಸಂಕಲಿಸಿ ಪಾದೆಕಲ್ಲು ವಿಷ್ಣು ಭಟ್ಟರು ಒಂದು ಪುಸ್ತಕವನ್ನೇ ಸಂಪಾದಿಸಿ ಕೊಟ್ಟಿದ್ದಾರೆ. ವಿದ್ವದ್ವಲಯದಲ್ಲಿ ಇದು ಸಾಮಾನ್ಯ. ಇಲ್ಲೆಲ್ಲ ಪರಸ್ಪರ ಗೌರವವನ್ನು ಉಳಿಸಿಕೊಂಡೇ ಜಗಳಗಳನ್ನು ಮಾಡಲಾಗಿದೆ. "ಡಿಕ್ಷನರಿಯಲ್ಲಿ ಹೀಗಿದೆ, ಆದ್ದರಿಂದ ಇದು ಸರಿ" ಎಂದು ಎರಡೇ ಸೆಕೆಂಡಿನಲ್ಲಿ ಹೇಳಿ ಮುಗಿಸಬಹುದಾದಷ್ಟು ಈ ವಿಚಾರಗಳು ಸರಳವಲ್ಲ.
"ಅತ್ತಿಗೆ" ಎಂಬ ಒಂದೇ ಪದದ ಅರ್ಥದ ಬಗ್ಗೆ ಸೇಡಿಯಾಪು ಕೃಷ್ಣ ಭಟ್ಟ, ಕಡವ ಶಂಭು ಶರ್ಮ ಮತ್ತು ರಾಳ್ಳಪಲ್ಲಿ ಅನಂತಕೃಷ್ಣ ಶರ್ಮ ಇವರೆಲ್ಲ ಸೇರಿ ಸುಮಾರು ಮೂವತ್ತೈದು ಪುಟಗಳಷ್ಟು ಚರ್ಚೆ ಮಾಡಿದ್ದಾರೆ ! ಸಾಹಿತ್ಯ ಪರಿಷತ್ತಿನ ನಿಘಂಟಿನಲ್ಲಿ ಅತ್ತಿಗೆ = ನಲ್ಲೆ ಅಂತಲೂ ಒಂದರ್ಥವನ್ನು ಕೊಡಲಾಗಿದೆ. ಇದಕ್ಕೆ ಪಂಪನ ಒಂದು ಪ್ರಯೋಗವೇ ಆಧಾರ. ಭೀಷ್ಮನು ಅಂಬೆಯ ಮದುವೆಯ proposal ಅನ್ನು ತಿರಸ್ಕರಿಸುತ್ತಾ ಹೇಳುವ ಮಾತು : ಈಗಳ್ ಅಬ್ಬೆಯೆಂದು ಅತ್ತಿಗೆಯೆಂಬ ಮಾತನೆನಗೇನೆನಲಕ್ಕುಮೊ. ನಿನ್ನನ್ನು ತಾಯಿ ಎಂದು ಕರೆದು ಆನಂತರ ನಲ್ಲೆ ಎನ್ನಲು ಆಗುತ್ತದೆಯೇ ಎಂಬುದು ಇದರ ಭಾವ. ಇಲ್ಲಿ ನಲ್ಲೆ ಎಂಬ ಅರ್ಥ ಕೊಡುವಂತೆ ಅತ್ತಿಗೆ ಬಂದಿದೆ. ಈ ಬಗ್ಗೆ ನಾಡಿನ ದೊಡ್ಡ ವಿದ್ವಾಂಸರ ಅಭಿಪ್ರಾಯ ಕೇಳಲಾಗಿತ್ತು. ಸೇಡಿಯಾಪು ಅವರಲ್ಲಿ ಕೇಳಿದಾಗ ಅವರು ಈ ಪದ್ಯಕ್ಕೆ ವಿವರವಾಗಿ ವ್ಯಾಖ್ಯಾನ ಮಾಡಿ, ಅತ್ತಿಗೆ = ನಲ್ಲೆ ಎಂಬ ಅರ್ಥ ಸರ್ವಥಾ ತಪ್ಪು ಅಂತ ಸಮರ್ಥವಾಗಿ ವಾದಿಸಿದ್ದರು. ಸೇಡಿಯಾಪು ಅವರ ವಾದವನ್ನು ಆಗ ನಿಘಂಟು ಸಮಿತಿಯ ಅಧ್ಯಕ್ಷರಾಗಿದ್ದ ಎ ಆರ್ ಕೃಷ್ಣಶಾಸ್ತ್ರಿಗಳು ಬಹಳವಾಗಿ ಮೆಚ್ಚಿಕೊಂಡು, ಅದರ ಕುರಿತಾದ ಪ್ರಶಂಸೆಯನ್ನೂ ಬರೆದಿದ್ದರಂತೆ. ಆದರೆ ಅತ್ತಿಗೆ = ನಲ್ಲೆ ಎಂಬ ಅರ್ಥವನ್ನು ನಿಘಂಟಿನಲ್ಲಿ ಉಳಿಸಿಕೊಳ್ಳಲಾಗಿದೆ ! ಇದಕ್ಕೆ ನಿಘಂಟು ಸಮಿತಿಯಲ್ಲಿದ್ದ ಬೇರೆ ತಜ್ಞರ ವಾದಗಳೂ ಕಾರಣವಾಗಿರಬಹುದು.
ಹೀಗೆ ಕೆಲವು ಸಲ ಸರಿಯಲ್ಲದ/ಒಪ್ಪಿಗೆಯಿಲ್ಲದ ರೂಪಗಳನ್ನು ಬಳಕೆಯ ಬಲ ಇರುವುದರಿಂದ ಉಳಿಸಿಕೊಳ್ಳುವುದೂ, ತಮಗೆ ಒಪ್ಪಿಗೆಯಾಗದ ಪದಗಳನ್ನು ಕೊಡುವುದೂ ಮಾಡಬೇಕಾಗುತ್ತದೆ.
"ಡಿ.ಎಲ್.ನರಸಿಂಹಾಚಾರ್, ರಂ ಶ್ರೀ ಮುಗಳಿ, ಕವೆಂ ರಾಘವಾಚಾರ್ ಮತ್ತು ತೀನಂಶ್ರೀಯವರ ವಾದ ವಿವಾದಗಳನ್ನು ಕೇಳುವಾಗ ರಸದೌತಣದ ಅನುಭವವಾಗುತ್ತಿತ್ತು. ಬಹು ಗ್ರಂಥ ವ್ಯಾಸಂಗದಿಂದ ದೊರೆಯಲಾರದ ಜ್ಞಾನ ಆ ಕೆಲವು ಚರ್ಚೆಗಳಲ್ಲಿ ಸಿಗುತ್ತಿದ್ದವು" ಅಂತ ದೇ.ಜವರೇ ಗೌಡರು ಒಂದೆಡೆ ಬರೆದಿದ್ದಾರೆ. ಇವೆಲ್ಲ ಗೆಳೆಯರ ನಡುವೆಯೇ ನಡೆದ, ವಿಚಾರಕ್ಕೆ ಮಾತ್ರ ಸೀಮಿತವಾದ ಜಗಳಗಳು. "ನಾನು ನಾಯಿ, ನೀನು ಕತ್ತೆ" ಎಂದು ಬೈದುಕೊಂಡಂತೆ ಮಾಡಬಹುದಾದ ಜಗಳಗಳು ಇವಲ್ಲ, "ಇವರು ಅವರಿಗೆ ಸರಿಯಾಗಿ ಇಕ್ಕಿದರು" ಎಂಬಂತೆ ಮಜಾ ನೋಡುವ ದೃಷ್ಟಿಯೂ ಇಲ್ಲಿರಬಾರದು. ಮತ್ತು ನನ್ನಂತಹಾ ವಿದ್ಯಾರ್ಥಿಗಳಿಗೆ, ಕಲಿಯುವ ದೃಷ್ಟಿಯಿಂದ, ಭಾಷಾವಿಷಯದಲ್ಲಿ ಉದ್ದುದ್ದ ಚರ್ಚೆಗಳು ಅಗತ್ಯವಾಗಿ ಬೇಕು. ಆದರೆ ಇಂತಹಾ ಅಕಾಡೆಮಿಕ್ ಚರ್ಚೆಗಳು ವೈಯಕ್ತಿಕ ಗೇಲಿಯ,ಅಸಹನೆಯ ರಾಶಿಯಾಗಿ, ತಾನು ಹೇಳಿದ್ದೇ ಸರಿ ಎನ್ನುವ, ಸ್ವಪ್ರತಿಷ್ಟೆಯ ಹಂತಕ್ಕೆ ಮುಟ್ಟಿದರೆ ಕಷ್ಟ. ಇದು ಬೇಸರದ ವಿಷಯ.
ಈ ಕ್ಷೇತ್ರದಲ್ಲಿ ಬರೆದಾಗ ಕೆಲವೊಮ್ಮೆ ತಪ್ಪುಗಳು, ಭಿನ್ನಮತಗಳು ಸಹಜ ಎಂಬ ನಿಲುವು ಟೀಕಿಸುವವರಿಗೆ ಇರಬೇಕು, ಬರೆದವನಿಗೆ ದುರುದ್ದೇಶ ಇದೆಯೆಂಬ ಮಟ್ಟಕ್ಕೆ ಪಂಡಿತರ ಟೀಕೆಗಳು ಹೋಗಬಾರದು, ಮತ್ತು ಆಧಾರಸಮೇತ ತೋರಿಸಿಕೊಟ್ಟಾಗ ತಿದ್ದಿಕೊಂಡರೆ ಯಾರೂ ಸಣ್ಣವರಾಗುವುದಿಲ್ಲ ಎಂಬ ನಿಲುವು ಬರೆದವರಿಗೂ ಇರಬೇಕು. ಪಾಂಡಿತ್ಯದ ಪರ್ವತವೇ ಆಗಿದ್ದ ಡಿ.ಎಲ್.ನರಸಿಂಹಾಚಾರ್ಯ ಅವರ ಪುಸ್ತಕವೊಂದರಲ್ಲಿ ದೋಷವೊಂದನ್ನು ಅವರಿಗಿಂತ ಪ್ರಾಯದಲ್ಲಿಯೂ ಜ್ಞಾನದಲ್ಲಿಯೂ ಕಿರಿಯರಾಗಿದ್ದ ಎಂ.ಎಂ.ಕಲಬುರ್ಗಿಯವರು ತೋರಿಸಿಕೊಟ್ಟಿದ್ದರಂತೆ. ಅದನ್ನು ಚರ್ಚಿಸಿ ಒಪಿದ್ದೇ ಅಲ್ಲದೆ ಮುಂದಿನ ಆವೃತ್ತಿಯಲ್ಲಿ ಕಲಬುರ್ಗಿಯವರ ಹೆಸರು ಹಾಕಿ ತಿದ್ದಿದ್ದಕ್ಕೆ ಕೃತಜ್ಞತೆಯನ್ನೂ ಅರ್ಪಿಸಿದ್ದರಂತೆ ಡಿ.ಎಲ್.ಎನ್ ! ಅದೇ ಡಿ.ಎಲ್.ಎನ್ ಅವರ ಅಭಿನಂದನಾ ಗ್ರಂಥವೊಂದಕ್ಕೆ ಮಂಜೇಶ್ವರ ಗೋವಿಂದ ಪೈಗಳು ಶಾಸನವೊಂದನ್ನು ಇಟ್ಟುಕೊಂಡು ಸಂಶೋಧನಾ ಲೇಖನವೊಂದನ್ನು ಕಳಿಸಿದ್ದರಂತೆ. ಆದರೆ ಪಂಡಿತ ಶ್ರೇಷ್ಠರಾದ ಗೋವಿಂದ ಪೈಗಳು ಕೂಟಶಾಸನ( ಕೃತಕ ಶಾಸನ)ವೊಂದನ್ನು ಇಟ್ಟುಕೊಂಡು ಮೋಸಹೋಗಿ ಬರೆದಿದ್ದರೆಂದು ಗೊತ್ತಾಯಿತಂತೆ. "ಗೋವಿಂದ ಪೈಗಳು ನಮಗೆ ಗುರು ಸಮಾನರು, ಅವರು ಪ್ರೀತಿಯಿಂದ ಕಳಿಸಿದ ಲೇಖನ ತಪ್ಪೇ ಆದರೂ ನನ್ನ ಪುಸ್ತಕದಲ್ಲಿರಬೇಕು" ಅಂತ ಡಿ.ಎಲ್.ಎನ್ ತಾಕೀತು ಮಾಡಿದ್ದರಂತೆ ! ಇಷ್ಟು ಗೌರವ ಚರ್ಚೆ ಮಾಡುವ ಎರಡೂ ಪಕ್ಷದವರಿಗಿದ್ದರೆ ಸಮಸ್ಯೆಯೇ ಉದ್ಭವಿಸುವುದಿಲ್ಲ.
ಅಕಾಡೆಮಿಕ್ ಚರ್ಚೆಗಳಲ್ಲಿಯೇ ವೈಯಕ್ತಿಕ ನಿಂದನೆ ಎಲ್ಲ ಆದರೆ, ಇನ್ನು ಎಡ ಬಲಗಳ, ಅಥವಾ ಬೇರೆ ಸಿದ್ದಾಂತಗಳಿಂದ ಕುರುಡಾದವರ ಜಗಳಗಳಂತೂ ಹೊಲಸೇ ಆಗಿಬಿಟ್ಟಿವೆ. ಸೈದ್ದಾಂತಿಕ ಜಗಳವನ್ನು ವೈಯಕ್ತಿಕ ಮಾಡುವ, sweeping ಸ್ಟೇಟಮೆಂಟುಗಳನ್ನು ಎಸೆದು ಒಂದಿಡೀ ವ್ಯಕ್ತಿತ್ತ್ವವನ್ನು ಬ್ಲ್ಯಾಕ್ ಆಂಡ್ ವೈಟುಗಳಲ್ಲಿ ಅಡಗಿಸುವ ರೋಗ ಉಲ್ಬಣ ಆಗಿಬಿಟ್ಟಿದೆ. ಉದಾ: ಭೈರಪ್ಪನವರನ್ನ ಕಾದಂಬರಿಕಾರರೆಂಬ ನೆಲೆಯಲ್ಲಿ ಸುಮ್ಮನೇ ಹೊಗಳುವುದಕ್ಕೋ, ಬೈಯ್ಯುವುದಕ್ಕೋ ಸಾಧ್ಯವೇ ಇಲ್ಲ ಅನ್ನುವಂತಹ ಪರಿಸ್ಥಿತಿ. ಹೊಗಳಿದರೆ ನೀವು ಆರೆಸ್ಸೆಸ್ಸು, ಉಗ್ರ ಹಿಂದೂ, ಬಲ ಪಂಥ ಅಂತಾಗುತ್ತದೆ. ನಮ್ಮ ಅರೆಬೆಂದ ಸೆಕ್ಯುಲರ್ಗಳು ಚಡ್ಡಿ ಪಡ್ಡಿ ಅಂತ ಕಾರುವ ವಿಷವನ್ನು ಸಹಿಸಿಕೊಳ್ಳಬೇಕು, ಅವರ ಕುತ್ಸಿತ ಬುದ್ಧಿಯ ಕೊಳಕು ವಿಚಾರಗಳಿಗೆ "ಪ್ರಗತಿಪರ" ಇನ್ನೊಂದು ಮತ್ತೊಂದೆಂಬ ಲೇಬಲ್ಲುಗಳನ್ನು ಬೇರೆ ಅಂಟಿಸಿಕೊಡುತ್ತಾರೆ. ಬೈದರೆ ಇನ್ನೂ ಕಷ್ಟ. ಭೈರಪ್ಪ ಭಕ್ತ ಮಂಡಳಿಯವರು ನಿಮ್ಮನ್ನು ಸಿಕ್ಯುಲರ್, ಬುದ್ದಿಜೀವಿ, ಲದ್ದಿ ಜೀವಿ, ಗಂಜಿ ಗಿರಾಕಿ ಅಂತೆಲ್ಲ ಬಣ್ಣಿಸಿ, ಅದೇ ಹಳೇ ಬೈಗುಳಗಳನ್ನ ಪ್ರಸಾದದ ತರ ಹಂಚುತ್ತಾರೆ. ಕುವೆಂಪು ಬಗ್ಗೆ ಬರೆದರೆ ಇನ್ನೊಂದಷ್ಟು ಜನರಿಗೆ ಸಾಲದೆ ಬರುತ್ತದೆ, ಲಂಕೇಶರ ಬಗ್ಗೆ ಹೇಳಿದರೆ ಅವರ ಅಭಿಮಾನಿಗಳಿಗೆ ಸಿಟ್ಟು ಬರುತ್ತದೆ, ಅನಂತಮೂರ್ತಿ, ಕಾರ್ನಾಡ್ ಮುಂತಾದವರ ಬಗ್ಗೆ ಮಾತಾಡಿದರೆ ಜಗಳವೇ ಆಗಿಬಿಡಬಹುದು. ಅಂಬೇಡ್ಕರ್ ಅವರ ಬಗ್ಗೆ ಏನಾದರೂ ಹೇಳಿದರೆ ಪೆಟ್ಟೇ ಆಗಬಹುದು ಎಂಬಂತೆ ಇದೆ.
ಟ್ರಂಪ್, ಮೋದಿಗಳ ವಿಚಾರದಲ್ಲೂ ಹೀಗೇ ಆಗಿದೆ. ಮೋದಿ ಅವರನ್ನು ಹೊಗಳಿದರೆ ನೀವು ವಿರಾಟ್ ಹಿಂದು,ಕೋಮುವಾದಿ ಎಂದು ಮುಂತಾಗಿ ಜರೆಯಲಾಗುತ್ತದೆ, ಬೈದರೆ ಮತ್ತದೇ ಬುದ್ದಿಜೀವಿ, ಪೆದ್ದು ಜೀವಿ ಇತ್ಯಾದಿ. ಸರಿಯಾದ, cherry picking ಅಲ್ಲದ ಅಂಕಿ ಅಂಶಗಳು, ತರ್ಕಬದ್ಧ ವಿವರಣೆ, objective analysis, ಪೂರ್ಣಸತ್ಯದೃಷ್ಟಿ ಎಲ್ಲ ಇರುವ ಚರ್ಚೆಯೊಂದು ಮೋದಿಯ ಆಡಳಿತದ ಬಗ್ಗೆ ಆದದ್ದು ನನಗಂತೂ ನೆನಪಿಲ್ಲ. ಒಂದೋ ಏನಕೇನ ಪ್ರಕಾರೇಣ ಬೈದೇ ತೀರುತ್ತೇನೆ ಅನ್ನುವವರು, ಅಥವಾ ಭೂಮಿ ಅಡಿಮೇಲಾದರೂ ಹೊಗಳಿಯೇ ಸಿದ್ಧ ಅನ್ನುವವರು. ಈ ವಿಷಯದಲ್ಲಿ ಹೇಗೆ ಹೇಳಿದರೂ, ಯಾವ ಪಕ್ಷ ವಹಿಸಿದರೂ ಯಾವುದಾದರೂ ಒಂದು ಬಣದವರ ದ್ವೇಷ ಶತಃಸ್ಸಿದ್ಧ ಎಂಬಂತೆ ಆಗಿಬಿಟ್ಟಿದೆ. ಯಾರನ್ನಾದರೂ ಎಲ್ಲರೂ ಕಡ್ಡಾಯವಾಗಿ ಬೈಯ್ಯತಕ್ಕದ್ದು ಅಥವಾ ಹೊಗಳತಕ್ಕದ್ದು ಅನ್ನುವುದೇ ವೈಚಾರಿಕ ಕುರುಡು ಎಂದು ಯಾರೂ ಯೋಚಿಸಿದಂತಿಲ್ಲ.
ಚಲನಚಿತ್ರಗಳಂತಹಾ ಕ್ಷೇತ್ರಗಳಲ್ಲಿಯೂ ದರ್ಶನ್ ಬಗ್ಗೆ ಹೇಳಿದರೆ ಅಭಿಮಾನಿಗಳು ಸಿಟ್ಟಾಗುತ್ತಾರೆ, ಸುದೀಪನ ಟೀಕೆ ಮಾಡಿದರೆ ಇನ್ನೊಂದಷ್ಟು ಜನ ಕೆರಳುತ್ತಾರೆ, ರಾಜಕುಮಾರರ ಮಕ್ಕಳ ಬಗ್ಗೆ ಹೇಳಿದರೆ ಮತ್ಯಾರಿಗೋ ಸಿಟ್ಟು ಬರುತ್ತದೆ ಎಂಬಂತಾಗಿದೆ. ದೊಡ್ಡ ಸ್ಟಾರುಗಳು, ರಾಜಕೀಯ ನಾಯಕರ ಮಾತು ಬಿಡಿ, ಪವನ್ ಕುಮಾರ್ ಎಂಬ ನಿರ್ದೇಶಕನೊಬ್ಬರ ವಾಲಿನಲ್ಲಿ ನಡೆದ ಚರ್ಚೆಯೊಂದರಲ್ಲಿ ನನಗೇ ಈ ಅನುಭವ ಆಗಿತ್ತು. ಉದ್ರೇಕ ಉಂಟುಮಾಡುವಂಥ ಯಾವುದೇ ಮಾತನ್ನು ನಾನು ಹೇಳಿರದಿದ್ದರೂ, ಅತ್ಯಂತ ಕೀಳುಮಟ್ಟದ personal attack ಅನ್ನು ಅವರ ಚಮಚಾ ಒಬ್ಬನಿಂದ ಎದುರಿಸಬೇಕಾಗಿತ್ತು. ಒಟ್ಟಿನಲ್ಲಿ ಏನೇ ಹೇಳಿದರೂ ಯಾವುದಾದರೂ ಮೂಲೆಯಲ್ಲಿರುವ ಯಾರಿಗಾದರೂ ಸಿಟ್ಟು ಬಂದೇ ಬರುತ್ತದೆ ! ಮತ್ತು ಅದನ್ನು ಕಾರಿಕೊಳ್ಳಲು ಅವಕಾಶಗಳೂ ಸಿಗುತ್ತವೆ. ಯಾರೋ ಇಷ್ಟರವರೆಗೂ ಏನನ್ನೂ ಮಾಡದವನು, ಇನ್ಯಾವನೋ ಕಲಹಪ್ರಿಯನು ಎಲ್ಲ ಸೇರಿ, ಒಂದು ಕ್ಷೇತ್ರದಲ್ಲಿ ಮೂವತ್ತು ವರ್ಷ ಶ್ರದ್ಧೆಯಿಂದ ದುಡಿದವರನ್ನು, ಅವರ ಎಲ್ಲ ಒಳ್ಳೆಯ ಕೆಲಸಗಳನ್ನು ಮರೆತು, ಯಾವುದೋ ಕೆಲಸಕ್ಕೆ ಬಾರದ ಸ್ಟೇಟಸ್ಸನ್ನು ಇಟ್ಟುಕೊಂಡು ವಾಚಾಮಗೋಚರ ನಿಂದಿಸಿಬಿಡಬಹುದು.
ನಮ್ಮ ಸಾಹಿತಿಗಳಲ್ಲಿ ಹಲವರಿಗೂ ಒಂದು ಘನಸ್ತಿಕೆ ಇರುವ ಹಾಗೆ ಜಗಳ ಮಾಡಲು ಬರುವುದಿಲ್ಲ ಅನ್ನುವುದು ನಿಜಕ್ಕೂ ದುರಂತವೇ (ಎಡ, ಬಲ, ನಡು ಎಲ್ಲರಿಗೂ ಈ ಮಾತು ಸಲ್ಲುತ್ತದೆ). ಒಂದು ಜಗಳ ಮಾಡಿದರೆ, ಜಗಳ ಮಾಡಿಕೊಂಡವರು ಒಬ್ಬರಿಂದ ಒಬ್ಬರು ಏನಾದರೂ ಕಲಿಯುವ ಹಾಗೆ ಇರಬೇಕು. ಜಗಳ ನೋಡಿದವರಿಗೂ, "ಹೌದಲ್ಲ! ಈ ವಿಚಾರ ಹೊಳೆದೇ ಇರಲಿಲ್ಲ" ಅಂತ ಅನ್ನಿಸುವ ಹಾಗೆ ಇರಬೇಕು. ಹಾಗೆ ಮಾಡಲು ಆಗುವುದಿಲ್ಲ ಅಂತಾದರೆ ಈ ಸಾಹಿತಿಗಳು ಕತೆ, ಕವನ, ಲೇಖನಗಳನ್ನು ಬರೆದುಕೊಂಡು ಹಾಯಾಗಿ ಇದ್ದು ಬಿಡುವುದು ಒಳ್ಳೆಯದು. ಇವರು ಒಳ್ಳೆ ಅಂಡರ್ವರ್ಲ್ಡ್ ಡಾನುಗಳಂತೆ ಕಚ್ಚಾಡಿ, ವೈಯಕ್ತಿಕ ದ್ವೇಷ ಸಾಧಿಸಿ, ಸಾಹಿತ್ಯದ ಘನತೆಯನ್ನೇ ಕುಗ್ಗಿಸುವುದು ಎಲ್ಲ ನೋಡುವುದಕ್ಕೆ ನಮಗೂ ಕಷ್ಟವೇ. Shoot the message not the messenger ಅನ್ನುವ ರೀತಿ ಇವರೆಲ್ಲ ಜಗಳ ಆಡಿಯಾರು ಅಂತ ನಿರೀಕ್ಷೆ ಮಾಡಿದ್ದೇ ತಪ್ಪಾಯಿತು ಎನ್ನಬೇಕು.
ಅಭಿಪ್ರಾಯ ಭೇದಗಳು ಏನೇ ಇದ್ದರೂ, ತಥ್ಯ ಪ್ರೀತಿಯಿಂದ,ಸತ್ಯನಿಷ್ಠೆಯಿಂದ, ವಿದ್ಯಾಪಕ್ಷಪಾತದಿಂದ, ಜ್ಞಾನ ದಾಹದಿಂದ, ಜಿಜ್ಞಾಸೆಯ ದೃಷ್ಟಿಯಿಂದ, ಬೌದ್ಧಿಕ ಪ್ರಾಮಾಣಿಕತೆಯಿಂದ ಚರ್ಚೆಗಳು ನಡೆದರೆ ಒಳ್ಳೆಯದು. ಹೀಗೆ ಬಿಚ್ಚು ಮನಸ್ಸಿನಿಂದ ಚರ್ಚೆಯಾದಾಗ, ಸ್ವಂತ ಅಧ್ಯಯನಗಳ ನೆಲೆಯಲ್ಲಿ ಅರಿವನ್ನು ಪರಸ್ಪರ ಹೆಚ್ಚಿಸಿಕೊಳ್ಳಲು ಪರಿಣತರಿಗೆ ಅವಕಾಶವೂ ಇರುತ್ತದೆ. ಓದುಗರಿಗಂತೂ ಈ ಜಿಜ್ಞಾಸೆಗಳು ಅನೇಕ ಹೊಸ ಹೊಳಹುಗಳನ್ನು ತೆರೆದಿಡುತ್ತವೆ. 'ವಾದೇ ವಾದೇ ಜಾಯತೇ ತತ್ತ್ವ ಬೋಧಃ' ಎಂಬಂತೆ ವಿಭಿನ್ನ ಅಭಿಮತಗಳು ಬೆಳಕಿಗೆ ಬಂದು, ವಿಷಯದ ಆಯಾಮಗಳು ವೃದ್ಧಿಗೊಂಡು ಎಲ್ಲರಿಗೂ ವಿದ್ಯಾಲಾಭವೇ ಆಗಬಹುದು. ವಿಜ್ಞಾನದಲ್ಲಿ, ಕ್ವಾಟಂ ಮೆಕ್ಯಾನಿಕ್ಸನ್ನು ಐನ್‌ಸ್ಟೈನ್ ಒಪ್ಪಿರಲಿಲ್ಲ, ಅದನ್ನು ವಿರೋಧಿಸುತ್ತಲೇ ಆತ ಮೇಲಿಂದ ಮೇಲೆ ಪ್ರಶ್ನೆ ಮಾಡಿದ್ದರಿಂದ, ಐನ್‌ಸ್ಟೈನನಿಗೂ ನೀಲ್ಸ್ ಬೋರ್ ಎಂಬ ವಿಜ್ಞಾನಿಗೂ ಸಾಕಷ್ಟು ವಾಗ್ವಾದಗಳು ನಡೆದದ್ದರಿಂದ, ಈ ಕ್ಷೇತ್ರವೇ ಇನ್ನಷ್ಟು ಬೆಳೆದು, ಅದರಲ್ಲಿ ಒಳ್ಳೆಯ ಸಂಶೋಧನೆಗಳು ನಡೆದದ್ದನ್ನು ನಾವು ನೆನಪಿಸಿಕೊಳ್ಳಬಹುದು.
Evelyn Beatrice Hall ಎಂಬಾಕೆ ಬರೆದ “I don’t agree with what you say but I will defend to the death your right to say it.” ಎಂಬ ಮಾತು ನಮಗೆ ಆದರ್ಶವಾಗಲಾರದೇ ? ನಾವು ಸರಿಯಾಗಿ, ಸಂಯಮದಿಂದ, ಘನತೆಯಿಂದ, ನಿರ್ಲಿಪ್ತ ಭಾವದಿಂದ,ಜ್ಞಾನ ಪಿಪಾಸೆಯಿಂದ, ಸತ್ಯ ತಿಳಿಯಬೇಕೆಂಬ ಹಂಬಲವಿಟ್ಟುಕೊಂಡು, ಸತ್ಯವನ್ನು ಎದುರಾಳಿ ಹೇಳಿದರೂ ಒಪ್ಪಬೇಕೆಂಬ ಆದರ್ಶದೊಂದಿಗೆ ಚರ್ಚೆ ಮಾಡಲು ಕಲಿಯುವುದು ಯಾವಾಗ ?

No comments:
Post a Comment