Sunday, 6 January 2019

ನೀವು ಓದಬೇಕಾದ ಕೆಲವು ಪುಸ್ತಕಗಳು


#sevendaysbookschallenge

Ganesh Bhat Nelemav ಅವರು ಎಸೆದಿರುವ ಪುಸ್ತಕದ ಸವಾಲನ್ನು ಜಾಂಟಿ ರೋಡ್ಸಿನ ಹಾಗೆ ಹಾರಿ ಹಿಡಿದಿದ್ದೇನೆ.

ಮೊದಲಿಗೆ, ಸೇಡಿಯಾಪು ಕೃಷ್ಣಭಟ್ಟರು ಪಂಡಿತ ಮುಳಿಯ ತಿಮ್ಮಪ್ಪಯ್ಯನವರ ವ್ಯಕ್ತಿತ್ವವನ್ನು ಕೆಲವೇ ಪದಗಳಲ್ಲಿ ಸಮರ್ಥವಾಗಿ ಕಟ್ಟಿಕೊಟ್ಟದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು(ಆ ಮೂಲಕ ಟೈಪು ಮಾಡುವ ಕಷ್ಟದಿಂದ ಜಾರಿಕೊಳ್ಳಬಹುದು !
“ಪಂಪನ ಭಕ್ತ, ಪಾರ್ತಿಸುಬ್ಬನ ಮಿತ್ರ, ಕವಿರಾಜಮಾರ್ಗದ ಪುರಸ್ಕರ್ತ, ಅಚ್ಚಗನ್ನಡದ ಹುಚ್ಚ – ಕ್ಷಮಿಸು, ನಮೋ ನಮೋ, ಕನ್ನಡದ ತಿರುಳನ್ನು ಕಂಡು ಉಂಡು ಉಣಿಸಿದ ಪಂಡಿತರಲ್ಲಿ, ಕನ್ನಡ ಕಾವ್ಯಪಾಠಕರಲ್ಲಿ ಪರಮೋಚ್ಚ, ಸಿರಿವಂತರ ಕುಲದಲ್ಲಿ ಜನಿಸಿಯೂ ಕಡುಬಡವ, ಬದುಕನ್ನೆಲ್ಲಾ ಬಡತನದಲ್ಲಿಯೇ ಕಳೆದೂ ಮನಸ್ವಿ, ವರ್ಚಸ್ವಿ, ಯಶಸ್ವಿ, ಹಳಗನ್ನಡ – ಹೊಸಗನ್ನಡ ಹಾರದ ಮಧ್ಯಮಣಿ, ನಮ್ಮ ಮುದ್ದಿನ ಮುದ್ದಣ, ನವೋದಯದ ಮುಂಗೋಳಿ, ಸ್ವರವೆತ್ತಿ ಕೂಗಿ ಕೆಲೆದು ನುಡಿಯಿಸಿದ ಕನ್ನಡವಕ್ಕಿ ನಮ್ಮ ಮುಳಿಯದ ಪಂಡಿತವಕ್ಕಿ” .

ತಿಮ್ಮಪ್ಪಯ್ಯನವರು ಹಳಬರು, ಪುಸ್ತಕ ಪ್ರಕಟಣೆ ಎಲ್ಲ ತುಂಬ ಕಷ್ಟ ಅನಿಸಿದ ಕಾಲ ಅವರದು. ಜೊತೆಗೆ ಆರ್ಥಿಕ ಸಂಕಷ್ಟ ಬೇರೆ. "ನಮ್ಮ ತಿಮ್ಮಪ್ಪಯ್ಯ ಅದೆಂತದೋ ಪಂಪ ಅನ್ನುವ ಪುಸ್ತಕ ಬರೆದಿದ್ದಾನೆ, ನಾನು ಅವನಿಗೆ (ಆ ಕಾಲದ) ಐದು ರೂಪಾಯಿ ಕೊಟ್ಟಿದ್ದೇನೆ, ಅದರ ಒಂದು ಪ್ರತಿಯನ್ನೂ ಖರೀದಿ ಮಾಡಿ ನಮ್ಮ ಹಳ್ಳಿಯ ಗ್ರಂಥಾಲಯಕ್ಕೆ ಕೊಟ್ಟಿದ್ದೇನೆ" ಅಂತ ನಮ್ಮ ಊರಿನ ಆಢ್ಯ ಮಹನೀಯರೊಬ್ಬರು ಆ ಕಾಲದಲ್ಲಿ ಹೇಳಿದ್ದರಂತೆ('ನಾಡೋಜ ಪಂಪ' ಕೃತಿಯ ಬಗ್ಗೆ). ಅವರೋ ಈ ಪುಸ್ತಕಗಳನ್ನೆಲ್ಲ ಓದಿ ಆಸ್ವಾದಿಸುವ ರುಚಿಯಿದ್ದವರಲ್ಲ, ಆದರೂ ತಿಮ್ಮಪ್ಪಯ್ಯ ಮಾಡಿದ್ದು ಅಂದಮೇಲೆ ಒಳ್ಳೆ ಕೆಲಸವೇ ಇರಬೇಕು, ನಾನು ಅದಕ್ಕೆ ನನ್ನಿಂದಾದ ಸಹಕಾರ ಕೊಡಬೇಕು ಅನ್ನುವ ಭಾವ ಅವರದ್ದು !

ಕನ್ನಡದಲ್ಲಿ ಇದುವರೆಗೆ ಸಿಕ್ಕಿರುವ ಗ್ರಂಥಗಳಲ್ಲಿ ಅತ್ಯಂತ ಹಳೆಯದೆಂದರೆ ಕವಿರಾಜಮಾರ್ಗ(ಪುರುಸೊತ್ತಾದರೆ, ಈ ಕವಿರಾಜಮಾರ್ಗ ಕೃತಿಯ ಬಗ್ಗೆ ಒಂದು ಲೇಖನವನ್ನು ಯಾವಾಗಲಾದರೂ ಒಮ್ಮೆ ನಾನೇ ಬರೆಯುತ್ತೇನೆ) ಈ ಪುಸ್ತಕದ ಕುರಿತಾಗಿ ಮುಳಿಯ ತಿಮ್ಮಪ್ಪಯ್ಯನವರು ಮಾಡಿರುವ ಸಂಶೋಧನೆ, ವ್ಯಾಖ್ಯಾನ,ವಿವರಣೆಗಳು “ಕವಿರಾಜಮಾರ್ಗ ವಿವೇಕ”ದಲ್ಲಿವೆ. ಕಥೆ ಕಾದಂಬರಿಗಳನ್ನು ಓದಿದಂತೆ ಇದನ್ನೊಂದು ಟೈಂಪಾಸ್ ಪುಸ್ತಕವಾಗಿ ಓದುವುದು ಕಷ್ಟ If I have seen further it is by standing on the shoulders of giants ಅನ್ನುವುದು ನ್ಯೂಟನ್ನನ ಮಾತು. ನೀನಾಸಂನ ಕೆ.ವಿ. ಸುಬ್ಬಣ್ಣನವರು ತಮ್ಮ "ಕವಿರಾಜ ಮಾರ್ಗ ಮತ್ತು ಕನ್ನಡ ಜಗತ್ತು" ಪುಸ್ತಕದಲ್ಲಿ ಹೀಗೆ ಬರೆದಿದ್ದಾರೆ :
"ಇಲ್ಲಿನ ನನ್ನ ಬರವಣಿಗೆಯು ದಿ. ಮುಳಿಯ ತಿಮ್ಮಪ್ಪಯ್ಯನವರ 'ನಾಡೋಜ ಪಂಪ' ಮತ್ತು 'ಕವಿರಾಜಮಾರ್ಗ ವಿವೇಕ' -- ಈ ಗ್ರಂಥಗಳಿಗೆ ಅನೇಕ ರೀತಿಗಳಲ್ಲಿ ಋಣಿಯಾಗಿದೆ. ಈ ಋಣವನ್ನು ಹೇಳಿಕೊಳ್ಳುವುದೇ ನನಗೆ ಹೆಮ್ಮೆ."

ಇವೆರಡನ್ನು ಸೇರಿಸಿ ಹೇಳುವುದಾದರೆ, ನಾನು ಪಂಪನ ಕಾವ್ಯವನ್ನು,ಮನಸ್ಸನ್ನು ಅಷ್ಟಿಷ್ಟು ಅರ್ಥಮಾಡಿಕೊಂಡದ್ದು ಮತ್ತು ಕವಿರಾಜಮಾರ್ಗಕಾರನ ತಲೆಯೊಳಗಡೆ ಸ್ವಲ್ಪ ಇಣುಕಿ ನೋಡಿದ್ದು ಮುಳಿಯದ ಪಂಡಿತರ ಹೆಗಲಿನ ಮೇಲೆ ನಿಂತೇ ಅನ್ನುವುದು ನನಗೆ ಹೆಮ್ಮೆಯ ವಿಷಯ.

ಎರಡನೇ ದಿನದ ಆಯ್ಕೆ:

ಒಂದು ಕಾಲದಲ್ಲಿ ನಾನು ಕಂಡದ್ದನ್ನೆಲ್ಲ ಓದಿ ಗುಡ್ಡೆ ಹಾಕುತ್ತಿದ್ದವನು, ತೆಂಡೂಲ್ಕರನು ಕೈಗೆ ಕಾಲಿಗೆ ತಡವಿದ, ಸಿಕ್ಕಿ ಸಿಕ್ಕಿದ ದಾಖಲೆಗಳನ್ನೆಲ್ಲಾ ಮುರಿದು ರಾಶಿ ಹಾಕುತ್ತಿದ್ದ ಹಾಗೆ ನಾನು ಸಿಕ್ಕಿದ್ದು, ಹಾಗೆಲ್ಲ ಸಿಕ್ಕದ್ದು, ಕಂಡದ್ದು, ಸುಲಭಕ್ಕೆ ಕಾಣದ್ದು ಎಲ್ಲವನ್ನೂ ಓದಿ ಬಿಸಾಡುತ್ತಿದ್ದೆ. ಇದರಿಂದ ಲಾಭವೂ ಆಯಿತು, ಒಮ್ಮೊಮ್ಮೆ ಸಮಯ ನಷ್ಟವೂ ಆಯಿತು. ಆ ಹೊತ್ತಿನಲ್ಲಿ, ಪ್ಯಾರಿಸ್ ಸುತ್ತುತ್ತೇನೆ ಅಂತ ಹೊರಟವನಿಗೆ ನುರಿತವನೂ, ವಾಕ್ಪಟುವೂ ಆದ ಟೂರ್ ಗೈಡ್ ಸಿಕ್ಕುವಂತೆ ಸಿಕ್ಕಿದ್ದು ಜಾನಕಿ ಕಾಲಂ. ಪೂರ್ವಸೂರಿಗಳ ಪರಿಚಯ ಮಾಡಿಸುತ್ತಾ, ಏನನ್ನು ಓದಬೇಕು, ಏನನ್ನು ಓದಲೇಬೇಕು ಅಂತೆಲ್ಲ ಹೇಳುತ್ತ ಹೋದ, ಓದನ್ನು ಕಲಿಸುತ್ತ ಹೋದ ಕಾಲಂ ಅದು.

ಪ್ರತೀಸಲ ಸಾಹಿತ್ಯಾಸಕ್ತರು ಸಿಕ್ಕಾಗಲೂ ಜಾನಕಿ ಕಾಲಂನ ಪ್ರಸ್ತಾವ ಬಂದು, ಜಾನಕಿ ಯಾರು ಅನ್ನುವ ಪ್ರಶ್ನೆ ಬರುತ್ತಿತ್ತು, ರವಿ ಬೆಳಗೆರೆಯೇ ಜಾನಕಿಯಿರಬಹುದು ಎಂಬಲ್ಲಿಂದ ಶುರುವಾಗಿ ಮಂಗಳಗ್ರಹದ ಉತ್ತರ ಭಾಗದಲ್ಲಿ ವಾಸ ಮಾಡುತ್ತಿರುವವರೊಬ್ಬರೇ ಜಾನಕಿಯಂತೆ ಎಂಬಲ್ಲಿಯವರೆಗೆ ಥರಾವರಿ ಕಥೆಗಳು ಹಬ್ಬಿದ್ದವು. ಕೆಲವರಂತೂ ಕಣ್ಣಾರೆ ನೋಡಿ ಬಂದವರಂತೆ, "ನನಗೆ ಗೊತ್ತಿಲ್ಲವೇ , ಜಾನಕಿ ಓ ಇಂಥವರೇ" ಅಂತ ಬೆರಳು ತೋರಿಸಿ ಹೇಳಿ ಬಿಡುತ್ತಲೂ ಇದ್ದರು! ಸಾಹಿತ್ಯದ ಸಭೆಗಳಲ್ಲಿ ಜಾನಕಿಯನ್ನು ಹುಡುಕುವ ನೆಪದಲ್ಲಿ ಹುಡುಗಿಯರನ್ನು ನೋಡುವ ಅವಕಾಶವೂ ಒದಗಿ ಬಂದಿತ್ತು :p

ಶೇಣಿ ಗೋಪಾಲಕೃಷ್ಣ ಭಟ್ಟರ ತಾಳಮದ್ದಳೆಯ ಅರ್ಥ ಕೇಳಿದವರಿಗೆ, ಯಾವತ್ತೇ ಆದರೂ ಇದನ್ನು ಹೀಗಲ್ಲದೆ, ಇದಕ್ಕಿಂತ ಚಂದದಲ್ಲಿ ನಿರೂಪಿಸುವುದು ಕಷ್ಟ ಅನ್ನಿಸುತ್ತಿತ್ತು, ಜೋಗಿಯವರ ಬರೆಹವೂ ಹಾಗೆಯೇ ಅನ್ನಬೇಕು. ಮಂಗಳೂರಿನಲ್ಲಿ ಒಂದುಕಾಲಕ್ಕೆ ಬರುತ್ತಿದ್ದ ನಿಲ್ಲದ ಮಳೆಯ ಹಾಗೆ ಬರೆಯುತ್ತಲೇ ಹೋದರು. ಯಕ್ಷಗಾನದಲ್ಲಿ ಪುಂಡು ವೇಷಗಳು ಕುಣಿದ ಹಾಗಿನ ವಿಮರ್ಶೆಯ ಪಾರಿಭಾಷಿಕ ಪದಗಳ ಹಾರಾಟ ಇಲ್ಲಿ ಇಲ್ಲ, "ಶ್ರೀಯುತರು ವಸಾಹತ್ತೋತರ ಹಳವಂಡಗಳ ನೇಯ್ಗೆಯ ಕಾಣ್ಕೆಯ ತಾದಾತ್ಮ್ಯದಲ್ಲಿ ತನ್ನತನದ ಅರಿವಿನ ಪರಿವೆಯ ಪರಿಪಾಕದ ಹರಳುಗಟ್ಟಿಸುವಿಕೆಯ ಸೃಷ್ಟಿಯಲ್ಲಿ ಸೋತರೂ ಗೆದ್ದಿದ್ದಾರೆ" ಯಂತಹ ವಾಕ್ಯಗಳು ಇಲ್ಲದ ವಿಮರ್ಶೆ ಜಾನಕಿ ಕಾಲಮ್ಮಿನ ವಿಶೇಷ. ಮಬ್ಬು, ಮಂಕು, ಸಪ್ಪೆ ಎಲ್ಲಕ್ಕೂ ಜಾನಕಿ ಕಾಲಮ್ಮಿಗೂ ಬಸವನಗುಡಿಯಿಂದ ವೈಟ್ ಫೀಲ್ಡ್ ಇಗೆ ಇರುವಷ್ಟು ದೂರ.

MTRನಲ್ಲಿ ಪಲ್ಯ, ಕೋಸಂಬರಿ, ಗಸಿ, ಪೂರಿ, ಚಟ್ನಿಯಿಂದ ಹಿಡಿದು ಐಸ್ ಕ್ರೀಂನ ತನಕ ಎಲ್ಲವೂ ಬಾಯಿಗೆ ಹಿತವಾಗಿ, ರುಚಿಯಾಗಿ ಇರುವಂತೆ ಜೋಗಿಯವರ ಪೆನ್ನಿನಿಂದ ಬಂದ ಎಲ್ಲ ತರದ ಬರೆಹಗಳೂ ಚುರುಕಾಗಿ, ರುಚಿಯಾಗಿ ಇದ್ದವು. ವ್ಯಂಗ್ಯ, ಮೊನಚು, ಸ್ವಾರಸ್ಯ, ರಂಜಕತೆಗಳಿಂದ ಕಳೆಗಟ್ಟಿದ, ಪುಟ್ಟ ಪುಟ್ಟ ವಾಕ್ಯಗಳನ್ನು ಪೋಣಿಸಿದ, ಬೋರು ಹೊಡೆಸುವುದೆಂದರೇನೆಂದೇ ಗೊತ್ತಿಲ್ಲದ ಲವಲವಿಕೆಯ ಗದ್ಯ ಜಾನಕಿ ಕಾಲಮ್ಮಿನ ಶಿಲ್ಪಕಲ್ಪವಾಯಿತು. "ಹಾಗಾದರೆ ಬೆಂಗಳೂರು ನಮ್ಮನ್ನು ನಿಜಕ್ಕೂ ತಬ್ಬಿಬ್ಬಾಗಿಸುತ್ತದಾ?", "ಅಷ್ಟಕ್ಕೂ ನಾವು ಪ್ರಶ್ನೆ ಮಾಡುವುದನ್ನೇ ಮರೆತಿದ್ದೇವಾ?" ಎಂಬಿತ್ಯಾದಿ ಪುಟ್ಟ ಪುಟ್ಟ ಪ್ರಶ್ನೆಗಳು ಕೂಡಾ ಜಾನಕಿ ಕಾಲಮ್ಮಿನ ವಿಶಿಷ್ಟ ನುಡಿಗಟ್ಟಿನ ಭಾಗವೇ ಆಗಿದೆ.
ಒಂದು ರಾಜಕೀಯ ಸಿದ್ದಾಂತಕ್ಕೆ ತಲೆಯನ್ನು ಬಾಂಡ್ ಪೇಪರಿನಲ್ಲಿ ಬರೆದುಕೊಟ್ಟಂತೆ ಕಾಣದ ತೆರೆದ ಮನಸ್ಸು,ಪಲಾವಿನಲ್ಲಿ ಅಲ್ಲಲ್ಲಿ ಕರಿದ ಬ್ರೆಡ್ ಸಿಗುವಂತೆ ಸಿಗುವ witty ಸಾಲುಗಳು, ಸಮಚಿತ್ತದ, ಒಮ್ಮೊಮ್ಮೆ ಚೇಷ್ಟೆಯ, ತುಂಟತನದ ಗ್ರಹಿಕೆ, ವಿಸ್ತಾರವಾದ ಓದು ಎಲ್ಲ ಸೇರಿ ಜೋಗಿ ಸ್ಟೈಲ್ ಆಗಿದೆ.

ಮೂರನೇ ದಿನದ ಆಯ್ಕೆ:
ಇವತ್ತು ಎರಡು ಪುಸ್ತಕಗಳನ್ನು ಒಟ್ಟಿಗೆ ಕೊಡುತ್ತಿದ್ದೇನೆ. ಚಿಂತಕರು, ವಿಚಾರವಾದಿಗಳು , ನಮ್ಮ ಮೆದುಳು ಹೇಗೆ ವಿಷಯಗಳನ್ನು ಗ್ರಹಿಸುತ್ತದೆ ಅಂತ ಯೋಚನೆ ಮಾಡುವವರು, ನಮ್ಮನ್ನು ನಾವೇ ಅರ್ಥ ಮಾಡಿಕೊಳ್ಳಬೇಕು ಅನ್ನುವವರು ಎಲ್ಲ ಓದಲೇಬೇಕಾದ ಪುಸ್ತಕಗಳಿವು. Thinking, Fast and Slow ಒಂದು ಕ್ರಾಂತಿಕಾರಿ ಪುಸ್ತಕ, ಮೈಲಿಗಲ್ಲ. ಅದನ್ನು ಬರೆದ Daniel Kahneman ಅವರು Behavioral economicsನಲ್ಲಿ ದೊಡ್ಡ ಹೆಸರು (ನೊಬೆಲ್ ಪ್ರಶಸ್ತಿ ಪುರಸ್ಕೃತರು). Daniel Gilbertರು ಹಾರ್ವರ್ಡ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿ, ವಿಜ್ಞಾನಿಯಾಗಿ ಗುರುತಿಸಿಕೊಂಡವರು.

ಮನಃಶಾಸ್ತ್ರಕ್ಕೂ ಅರ್ಥಶಾಸ್ತ್ರಕ್ಕೂ ಮದುವೆ ಮಾಡಿಸಿದರೆ ಹುಟ್ಟುವ ಮಗುವಿಗೆ Behavioral economics ಅಂತ ಹೆಸರಿಡಬಹುದು. ನಮ್ಮ ಗ್ರಹಿಕೆ, ಸಂವೇದನೆ ಹೇಗೆಲ್ಲ ತಪ್ಪಾಗುತ್ತದೆ,ನಮ್ಮ ಮೆದುಳು ಹೇಗೆಲ್ಲ ನಮಗೆ ಗೊತ್ತೇ ಆಗದಂತೆ ಕೈಕೊಡುತ್ತದೆ, ನಮ್ಮ ನಿರ್ಧಾರಗಳು ಎಷ್ಟು ತರ್ಕವಿದೂರವಾಗಿರುತ್ತವೆ ಅಂತ ತಿಳಿಸಿಕೊಡುವುದು ಈ ಎರಡೂ ಪುಸ್ತಕಗಳ ಸಾಮಾನ್ಯ ಅಂಶ. Thinking, Fast and Slowನದ್ದು ಸ್ವಲ್ಪ ಗಂಭೀರವಾದ, ಬುದ್ದಿಜೀವಿಗಳ ಅಕಾಡೆಮಿಕ್ ಶೈಲಿ (ಆದರೂ ಓದಿಸಿಕೊಂಡು ಹೋಗುತ್ತದೆ), Stumbling on Happinessನದ್ದು ಸ್ವಲ್ಪ ಗಮ್ಮತ್ತು ಮಾಡಿ, ಮಜಾ ಕೊಡುವ ತಮಾಷೆಯ ಶೈಲಿ. ವಿನೋದಪ್ರಿಯನಾದ ನನಗೆ Stumbling on Happiness ಬಹಳ ಹಿಡಿಸಿತು ಅಂತ ಬೇರೆ ಹೇಳಬೇಕಾದ್ದಿಲ್ಲವಲ್ಲ.

Stumbling on Happiness ಒಂದು ಟ್ರೆಂಡ್ ಅನ್ನೇ ಹುಟ್ಟುಹಾಕಿತು ಅನ್ನಬೇಕು. ತದನಂತರ ಇದೇ ದಿಕ್ಕಿನಲ್ಲಿ ರಿಚರ್ಡ್ ಥೇಲರ್ ಅವರ Nudge: Improving Decisions about Health, Wealth, and Happiness ಅನ್ನುವ ಪುಸ್ತಕ ಬಂತು (ಇವರಿಗೆ ಕಳೆದ ವರ್ಷ ನೊಬೆಲ್ ಕೊಡಲಾಯಿತು). Dan Ariely ಬರೆದ Predictably Irrational ಸದ್ದು ಮಾಡಿತು. ಇವರು The Upside of Irrationality ಅಂತಲೂ ಒಂದು ಹೊತ್ತಗೆಯನ್ನು ಬರೆದರು.

ಹೆಚ್ಚು ಬರೆಯಲು ಸೋಮಾರಿತನ ಬಿಡುತ್ತಿಲ್ಲ, ಹಾಗಾಗಿ ಈ ಎರಡು ಪುಸ್ತಕಗಳ ಬಗ್ಗೆ ಬೇರೆಯವರು ಬರೆದ ಸಾಲುಗಳನ್ನು ಕೊಟ್ಟಿದ್ದೇನೆ.
Stumbling on Happinessಗೆ ಸಿಕ್ಕಿದ ಪ್ರಶಂಸೆಯ ಸಾಲುಗಳು :
Gilbert has a knack for coming up with zany experiments that show just how flawed and biased the human mind is. Read This Book If…
…you enjoy Harvard professors who reference The Beatles in every chapter and make jokes about quadriplegics.
…you’ve always had a hunch that you are completely full of shit but would like 400 pages of psychological research to confirm it for you.
— Mark Manson

A witty, insightful and superbly entertaining trek through the foibles of human imagination.” —New Scientist

“Gilbert’s book has no subtitle, allowing you to invent your own. I’d call it ‘The Only Truly Useful Book on Psychology I’ve Ever Read.’” —James Pressley, Bloomberg News

Thinking, Fast and Slowನ ಕುರಿತು ಬಂದಿರುವ ಮೆಚ್ಚುಗೆಯ ಸಾಲುಗಳು :

“A sweeping, compelling tale of just how easily our brains are bamboozled, bringing in both his own research and that of numerous psychologists, economists, and other experts...Kahneman has a remarkable ability to take decades worth of research and distil from it what would be important and interesting for a lay audience...Thinking, Fast and Slow is an immensely important book. ―
Jesse Singal, Boston Globe

ನಾಲ್ಕನೇ ದಿನದ್ದು :

ಇವತ್ತು ಉಳಿದ ಲೇಖಕರು ಅಷ್ಟಾಗಿ ಮುಟ್ಟದ ವಿಷಯಗಳ ಬಗ್ಗೆ ಚೆನ್ನಾಗಿ ಬರೆದಿರುವವರ, ಜ್ಞಾನದ ಕಿಟಕಿಗಳನ್ನು ತೆರೆದು ಬುದ್ದಿಗೆ ಕೆಲಸ ಕೊಡುವಂತೆ ಬರೆದವರ,ಕಥೆ ಕಾದಂಬರಿ, ಕವನಗಳ ಆಚೆಯೂ ಸಾಹಿತ್ಯ ಇದೆ ಅಂತ ತೋರಿಸಿದವರ ಪರಿಚಯ, ಪುಸ್ತಕಗಳ ಫೋಟೋಗಳು ನೆಪಕ್ಕೆ ಮಾತ್ರ.

ಮೊದಲಿಗೆ ಪಾ.ವೆಂ. ಆಚಾರ್ಯರ "ಚಿತ್ರ ವಿಚಿತ್ರ ಈ ಜಗತ್ತು" (ಅದರ ಪ್ರತಿ ಸಿಗಲಿಲ್ಲವಾದ್ದರಿಂದ ಆಚಾರ್ಯರ masterpiece ಎನಿಸಿಕೊಂಡ , ನೂರಾರು ಪದಗಳ ಮೂಲವನ್ನು ಕೆದಕುವ ಕೃತಿಯಾದ ಪದಾರ್ಥ ಚಿಂತಾಮಣಿಯನ್ನು ಹಾಕಿದ್ದೇನೆ.

ರೀಡರ್ಸ್ ಡೈಜೆಸ್ಟ್ ಅನ್ನು ನೋಡಿ ಅಂತದ್ದು ಇಲ್ಲೂ ಬೇಕೆಂಬ ಆಸೆಯಿಂದ ಕಸ್ತೂರಿ ಪತ್ರಿಕೆ ಮಾಡಿದವರು ಪಾವೆಂ. ಆಚಾರ್ಯರೇ ಈ ಪತ್ರಿಕೆಯ ವಿಶೇಷ ಅನ್ನಬೇಕು, ಹತ್ತಾರು ಗುಪ್ತನಾಮಗಳಲ್ಲಿ ಬರೆದು ಪತ್ರಿಕೆಯ ಎಲ್ಲ ಪುಟಗಳನ್ನೂ ಒಮ್ಮೊಮ್ಮೆ ಅವರೇ ತುಂಬಿಸುತ್ತಿದ್ದರಂತೆ . ಆಚಾರ್ಯರು ಶಿವರಾಮ ಕಾರಂತರಂತೆ ನಡೆದಾಡುವ ವಿಶ್ವಕೋಶವಾಗಿದ್ದವರು, ಆದರೆ ಯಾಕೋ ಕಾರಂತರಿಗೆ ಸಿಕ್ಕಿದಷ್ಟು ಪ್ರಚಾರ ಇವರಿಗೆ ಸಿಗಲಿಲ್ಲ. SSLCಯಲ್ಲಿ rank ಬಂದರೂ ಕಿತ್ತು ತಿನ್ನುವ ಬಡತನ ಅವರನ್ನು ಡಿಗ್ರಿಗೆ ಓದಲು ಬಿಡಲಿಲ್ಲ, ಅದು ಒಳ್ಳೆಯದೇ ಆಯಿತು , ಮುಂದೆ ವಿಧಿಯ ಮೇಲೆ ಸೇಡು ತೀರಿಸಲೋ ಎಂಬಂತೆ ಪಾವೆಂ ನೂರೆಂಟು ವಿಷಯಗಳನ್ನು ಓದಿಕೊಂಡರು , ಅವುಗಳ ಬಗ್ಗೆ ಕಸ್ತೂರಿಯಲ್ಲಿ ಸೊಗಸಾಗಿ ಬರೆದರು. ವಿಜ್ಞಾನ, ಭಾಷೆ, ರಾಜಕೀಯ,ಕ್ರೈಂ, ಇತಿಹಾಸ, ಭೂಗೋಳ ಹೀಗೆ ಆಚಾರ್ಯರ ಪೆನ್ನು ಹೋಗದ ಜಾಗವಿಲ್ಲ. ಹೀಗೆ ನೂರೆಂಟು ವಿಷಯಗಳ ಬಗ್ಗೆ ಬರೆದದ್ದರ ಸ್ಯಾಂಪಲ್ ಈ "ಚಿತ್ರ ವಿಚಿತ್ರ ಈ ಜಗತ್ತು" ಪುಸ್ತಕದಲ್ಲಿದೆ. ಆಚಾರ್ಯರನ್ನು ಆ ಕಾಲದ ನ್ಯಾಷನಲ್ ಜಿಯೋಗ್ರಾಫಿಕ್ ಚಾನೆಲ್ ಅನ್ನಬಹುದು. ಇದೇ ಮಾತನ್ನು ಇವತ್ತಿನ ಉಳಿದ ಲೇಖಕರಿಗೂ ಅನ್ವಯಿಸಬಹುದು.

ವೈಎನ್ಕೆ ಬರೆಹಗಳೂ ಕಾಲಿಗೆ ಚಕ್ರ ಕಟ್ಟಿಗೊಂದು ಜಗತ್ತನ್ನು ಸುತ್ತುವ ಜಾತಿಯವು, ಸಿಕ್ಕಾಬಟ್ಟೆ ಪನ್ ಪ್ರಿಯರಾದ ವೈಎನ್ಕೆ ಬರೆದ ಅಂಕಣ ಬರೆಹಗಳು ವಂಡರ್ ಸೀರೀಸ್ ಅಂತ ಐದಾರು ಬಂದಿವೆ. ಮೇಲೆ ಉಪನಿಷತ್ತು, ಅಲ್ಲೇ ಕೆಳಗೆ ಯಾವುದೋ ಹಾಲಿವುಡ್ ಸಿನೆಮಾ ! ಕಣ್ಣು ಮಿಟುಕಿಸುವಷ್ಟರಲ್ಲಿ ರಷ್ಯಾದ ರಾಜಕೀಯ ಬಂದುಹೋಗುತ್ತದೆ, ಮುಂದಿನ ಪುಟದಲ್ಲಿ ಒಂದು ಜೋಕು ಸಿಡಿಯುತ್ತದೆ ! ಅಲ್ಲಿಂದ ಯಾವುದೋ ಯೂರೋಪಿನ ಸಾಹಿತ್ಯಕ್ಕೆ ಜಂಪ್ ! , ಅದಾಯಿತು ಅನ್ನುವಾಗ ವೈಎನ್ಕೆ ಯಾವುದೋ ಕವಿತೆಯ ಬಗ್ಗೆ ಮಾತಾಡುತ್ತಿರುತ್ತಾರೆ , ಉಸಿರು ಬಿಡುವಷ್ಟರಲ್ಲಿ ದಡಕ್ಕನೆ ಯಾರೋ ಹೇಳಿದ witty quote ಒಂದು ಪ್ರತ್ಯಕ್ಷ ! ಅಷ್ಟರಲ್ಲಿ ಅದ್ಯಾರೋ ಒಬ್ಬ ವರ್ಣರಂಜಿತ ವ್ಯಕ್ತಿ ಬರುತ್ತಾನೆ! ಹೀಗೆ ಇಡೀ ಜಗತ್ತೇ ಒಂದು ಲೇಖನದಲ್ಲಿಯೇ ಬಂದು ಬಿಡುವ ವಿಚಿತ್ರ, ವಿಶಿಷ್ಟ ಶೈಲಿ ಇವರದು.

ಮೇಲಿನ ಇಬ್ಬರು ಕೊಟ್ಟದ್ದು ಸಾಕಾಗಲಿಲ್ಲ ಅಂತಾದರೆ ಮೂರನೇ ವಿಕಿಪೀಡಿಯಾವಾದ ಎಸ್ ದಿವಾಕರರ ಅಂಕಣಗಳಿಗೆ ಬರಬಹುದು! ಜಗತ್ತಿನ ಬೇರೆ ಬೇರೆ ಕಡೆ ಬಂದಿರುವ ಅದೆಷ್ಟೋ ವಿಷಯಗಳನ್ನು, ಪುಸ್ತಕಗಳನ್ನು ನುಂಗಿ ನೀರು ಕುಡಿದಿರುವ ಎಸ್ ದಿವಾಕರರಂತವರು ಸಿಕ್ಕಿರುವುದು ನಮ್ಮ ಪಾಲಿಗೆ ಲಾಟರಿಯೇ. ಅವರದ್ದು ಗಾಂಧೀ ಬಜಾರಿನ ವೆಂಕಟೇಶ್ವರ ಸ್ವೀಟ್ ಸ್ಟಾಲಿನ ಹಾಗೆ ಬಗೆ ಬಗೆಯ ಖಾದ್ಯಗಳ ಸಂಗ್ರಹ.

ನಾಗೇಶ ಹೆಗಡೆಯವರ ಕೆಲಸವೂ ಅಪಾರ. ಕನ್ನಡದ ವಿಜ್ಞಾನದ ಬರೆವಣಿಗೆಯು ಬೆಳ್ಳಾವೆ ವೆಂಕಟನಾರಾಣಪ್ಪನವರಿಂದ ಹಾಲುಂಡು , ಜಿಟಿ ನಾರಾಯಣರಾಯರು, ಅಡ್ಯನಡ್ಕ ಕೃಷ್ಣ ಭಟ್ಟರು,ತೇಜಸ್ವಿ, ಸ್ವಾಮಿ, ಕೃಷ್ಣಾನಂದ ಕಾಮತ್ ಇವರೆಲ್ಲರ ಪೋಷಣೆಯಲ್ಲಿ ಬೆಳೆದ ಶಿಶು. ಸುಮಾರು ಮೂವತ್ತಕ್ಕೂ ಹೆಚ್ಚು ವರ್ಷಗಳ ವಿಜ್ಞಾನ ವಿಷಯವಾಗಿ ಸೊಗಸಾಗಿ ಬರೆದು ಆ ಶಿಶುವನ್ನು ಒಬ್ಬ ದಷ್ಟ ಪುಷ್ಟ ಮಧ್ಯವಯಸ್ಕನನ್ನಾಗಿಸಿದ ಶ್ರೇಯಸ್ಸು ನಾಗೇಶರಿಗೆ ಸಲ್ಲಬೇಕು. ಚಂದದ, ಆಕರ್ಷಕ ಶೈಲಿ ಇಲ್ಲದಿದ್ದರೆ ಅವರ ಲೇಖನಗಳು ಇಷ್ಟು ಕಾಲ ಬಾಳಿಕೆ ಬರುತ್ತಿರಲಿಲ್ಲ.

ನಮ್ಮ ಈ ಲೇಖನದ ನ್ಯಾಷನಲ್ ಜಿಯೋಗ್ರಾಫಿಕ್ ಸೊಸೈಟಿಯ ಕೊನೆಯ ಸದಸ್ಯರು ಶ್ರೀವತ್ಸ ಜೋಶಿ. ನಮ್ಮ ಯಕ್ಷಗಾನ ಅರ್ಥವಾದಿ, ಸರಸ ಭಾಷಣಕಾರ, ವಿದ್ವಾಂಸ, ವಿಮರ್ಶಕರಾಗಿರುವ ಪ್ರಭಾಕರ ಜೋಶಿ ಒಂದು ಘಟನೆ ಹೇಳಿದ್ದರು : ರಂಜನೀಯವಾಗಿ ಮಾತಾಡುವುದಕ್ಕೆ ಹೆಸರಾದ ಅವರು ಸಾವಿರಾರು ಭಾಷಣಗಳನ್ನು ಮಾಡಿದವರು. ಒಮ್ಮೆ ಅವರನ್ನೊಬ್ಬರು ಭಾಷಣಕ್ಕೆ ಬರಬೇಕು ಅಂತ ಕೇಳಿಕೊಂಡರಂತೆ. ಯಾವ ವಿಷಯ ಮಾತಾಡಬೇಕು ಅಂತ ಇವರು ಕೇಳಿದರು. ಅಲ್ಲಿಂದ ಪಟಕ್ಕನೆ ತುಳುವಿನಲ್ಲಿ ಉತ್ತರ ಬಂತು : ಈರೆಗ್ ವಿಷಯ ದಾಯೆ (ನಿಮಗೆ ವಿಷಯ ಯಾಕೆ )?! ಅಂದರೆ ಜೋಶಿಯವರು ಯಾವ ವಿಷಯ ಕೊಟ್ಟರೂ ಮಾತಾಡಬಲ್ಲರು ಅನ್ನುವುದು ಅವರು ಉದ್ದೇಶಿಸಿದ ಅರ್ಥ. "ನನಗೆ ವಿಷಯ ಯಾಕೆ ? ನಾನು ವಿಷಯವೇ ಇಲ್ಲದೆ ಗಂಟೆಗಟ್ಟಲೆ ಮಾತಾಡುವವನು" ಅಂತ ಜೋಶಿಯವರು ಅದಕ್ಕೆ ಮಾಡಿದ ತಮಾಷೆಯ ಅರ್ಥ. ಶ್ರೀವತ್ಸ ಜೋಶಿಯವರನ್ನೂ ಹೀಗೆ "ಈರೆಗ್ ವಿಷಯ ದಾಯೆ ? ನಿಮಗೆ ವಿಷಯ ಯಾಕೆ?" ಅಂತ ಕೇಳಬಹುದು. ಇದೊಂದು ವಿಷಯವೇ ಅಲ್ಲ ಅನ್ನಿಸಬಹುದಾದ ವಸ್ತುವಾದರೂ ಇವರ ಪೆನ್ನಿಗೆ ಸಿಕ್ಕಿದರೆ ಚಿನ್ನದ ಲೇಪನ ಕೊಟ್ಟ ವಸ್ತುವಿನಂತೆ ಸ್ವಾರಸ್ಯಕರವಾಗಿ ಮಿರುಗುತ್ತದೆ ಅಂತ ಇವರನ್ನು ಹೊಗಳಿ ಪೆನ್ನ ಶೂಲಕ್ಕೇರಿಸಬಹುದು ! ಇವರ ಒಂದು ಲೇಖನವನ್ನೋದಿ ಒಬ್ಬರು "bullshit" ಅಂತ ಹೇಳಿದ್ದರಂತೆ, ಇವರು ಬಿಡಬೇಕಲ್ಲ , bullshit ಅಂದರೆ ಏನು ಎತ್ತ ಅಂತ ರಿಸರ್ಚ್ ಮಾಡಿ ಮುಂದಿನ ವಾರ ಅದರ ಬಗ್ಗೆಯೇ ಅಂಕಣ ಬರೆದರಂತೆ. ಹೀಗೆ ಉಳಿದವರು ಹೆಕ್ಕಿಕೊಳ್ಳದ ವಿಷಯಗಳನ್ನು ಎತ್ತಿಕೊಂಡು ರುಚಿಕಟ್ಟಾಗಿ ಬರೆಯುವುದರಲ್ಲಿ ಜೋಶಿಯವರು ಪಿ ಎಚ್ಡಿ ಮಾಡಿದ್ದಾರೆ. ವಿಜ್ಞಾನ, ಗಣಿತ, ಭಾಷೆ , ಸಾಹಿತ್ಯಗಳಿಂದ bullshit ಇನ ವರೆಗೆ ಎಷ್ಟೆಲ್ಲ ವಿಷಯಗಳು ಇವರ ಅಂಕಣಗಳಲ್ಲಿ ಬಂದಿದೆ.

No comments:

Post a Comment