Monday, 7 January 2019

ಕೆ ಜಿ ಎಫ್ ವಿಮರ್ಶೆ / KGF movie review

KGF movie review by Sharath Bhat Seraje
ಒಂದೇ ಮಾತಿನಲ್ಲಿ ಹೇಳುವುದಾದರೆ ಕೆಜಿಎಫ್ ಎಂಬ ರಾಕ್ಷಸ ಗಾತ್ರದ ಚಿತ್ರವು ಹನ್ನೆರಡು ಚಕ್ರಗಳ ರಾಕ್ಷಸ ಲಾರಿಯೊಂದು ಆಗುಂಬೆ ಘಾಟಿಯಲ್ಲಿ ಫಾರ್ಮುಲಾ ಒನ್ ಕಾರಿನ ವೇಗದಲ್ಲಿ ಓಡಿದರೆ ಹೇಗಾಗಬಹುದೋ ಹಾಗಿದೆ !! ಆದರೆ ಒಂದೇ ಮಾತಿನಲ್ಲಿ ಹೇಳಿ ಮುಗಿಸಬಹುದಾದ ಚಿತ್ರ ಇದಲ್ಲ ಎಂಬುದೇ ವಿಶೇಷ !!

ನಮ್ಮಲ್ಲಿ ದಡ್ಡರು ಮಸಾಲೆ ಚಿತ್ರಗಳನ್ನು ಮಾಡುತ್ತಾರೆ, ಬುದ್ದಿವಂತರು (ಯಾರೂ ನೋಡದ) ಆರ್ಟ್ ಫಿಲಂಗಳನ್ನು ಮಾಡ್ತಾರೆ ಎಂಬೊಂದು ಪದ್ಧತಿ ಇದೆ. ಉಪೇಂದ್ರ, ಶಂಕರ್, ರಾಜಮೌಳಿ ತರದವರು ಇದನ್ನು ಆಗಾಗ ಮುರಿದದ್ದೂ ಇದೆ, ಉಗ್ರಂ ಕೂಡಾ ಬುದ್ದಿವಂತರ ಮಾಸ್ ಚಿತ್ರ ಅನ್ನಿಸಿಕೊಂಡಿತ್ತು. ದರ್ಶಿನಿಯವರು ಅದೇ ಅಡುಗೆಭಟ್ಟರನ್ನಿಟ್ಟುಕೊಂಡು ಸ್ಟಾರ್ ಹೋಟೆಲ್ ಮಾಡಿದರೆಂಬಂತೆ, ಉಗ್ರಂ ನೋಡಿ ಇನ್ನೂ ಬೇಕು ಅಂದವರಿಗಾಗಿ ಉಗ್ರಮ್ಮಿಗೆ ಗಾಳಿ ಹಾಕಿ ಉಬ್ಬಿಸಿ ದೊಡ್ಡ ಮಟ್ಟದ ಉಗ್ರಂ ಅನ್ನು ತಯಾರಿಸಿರುವಂತೆಯೇ ಈ ಚಿತ್ರ ಇದೆ.

ಇದು ಹೇಳಿ ಕೇಳಿ ಅಡಿಯಿಂದ ಮುಡಿಯವರೆಗೆ ಇಂಚಿಂಚೂ ಮಾಸ್ ಸಿನೆಮಾವೇ ; ಆದರೆ ಚಾಣಾಕ್ಷತನದಿಂದ, ಪರಿಶ್ರಮದಿಂದ ಮಾಡಿರುವ ಮಾಸ್ ಚಿತ್ರ. ಹೀಗಾಗಿ ನೂರೈವತ್ತು ನಿಮಿಷಗಳ ಹೀರೋವಿನ ವೈಭವೀಕರಣ, ಮಾಸ್ ಅಂಶಗಳು ಎಲ್ಲ ಬೇರೆ ಚಿತ್ರಗಳಲ್ಲಿ ನನಗೆ ಇಷ್ಟ ಆಗದ ವಿಷಯಗಳಾದರೂ ಇಲ್ಲಿ ಅಷ್ಟೇನೂ ಬೇಸರ ಹುಟ್ಟಿಸಲಿಲ್ಲ, ಆರೋಗ್ಯಕ್ಕೆ ಒಳ್ಳೆಯದಲ್ಲದಿದ್ದರೂ ಕಿಕ್ ಕೊಡುವ ಫಾಸ್ಟ್ ಫುಡ್ಡಿನಂತೆ ಚಿತ್ರ ನೋಡುವಾಗ ಮೆಯ್ಯ ನವಿರುಗಳು ಸೆಟೆದು ನಿಲ್ಲುತ್ತವೆ ಅನ್ನಬೇಕು. ವರ್ಲ್ಡ್ ಸಿನೆಮಾ ಎಲ್ಲ ನೋಡುವ ನಾನೇ ಸೈರನ್ ಅನ್ನು ಹೋಲುವ ಹಿನ್ನೆಲೆ ಸಂಗೀತ ಮೊಳಗಿದಾಗ ಒಂದೆರಡು ಸಲ ಎದ್ದು ಕುಣಿಯಹೊರಟೆ ಅಂದಮೇಲೆ ಇನ್ನು ಮಾಸ್ ಪ್ರೇಕ್ಷಕರನ್ನು ಆ ದೇವರೇ ಕುರ್ಚಿಯಲ್ಲಿ ಹಿಡಿದಿಡಬೇಕು !

ಬೇರೆ ಚಿತ್ರಗಳಲ್ಲಿ ಹೀರೋ ತನ್ನನ್ನು ತಾನೇ ಹೊಗಳಿಕೊಳ್ಳುವ ಉದ್ದುದ್ದ ಡೈಲಾಗುಗಳಿರುತ್ತವೆ, ಇಲ್ಲಿ ಅದನ್ನು ಚಾಣಾಕ್ಷತನದಿಂದ ನಿಭಾಯಿಸಲಾಗಿದೆ. ಮೊದಲನೆಯದಾಗಿ ಚುರುಕು ಕಾಲುಗಳ, ಮಿಂಚಿನ ಕೈಯ ಚತುರ ಬಾಕ್ಸರ್ ನ ಗುದ್ದುಗಳಂತೆ ಎಲ್ಲ ಪಂಚು ಸಂಭಾಷಣೆಗಳೂ ಸರಿಯಾಗಿಯೇ ಅಪ್ಪಳಿಸಿ ಮಜಾ ಕೊಡುತ್ತವೆ, ಬರೆದವರಿಗೆ ಸೆನ್ಸ್ of wit ಇದೆ. ಇನ್ನೊಂದು ಉಪಾಯ ಏನೆಂದರೆ ಹೀರೋ ತನ್ನ ಬಗ್ಗೆ ತಾನೇ ಹೇಳುವುದಕ್ಕಿಂತ ಉಳಿದವರು ಅವನ ಬಗ್ಗೆ ಹೆಚ್ಚು ಹೇಳುವಂತೆ ಮಾಡಿದ್ದು, ಇದೊಂದು smart move. ಬಹುತೇಕ ಎಲ್ಲ ಪಂಚ್ ಡೈಲಾಗುಗಳು ಚಿತ್ರಕಥೆಯ ಅವಿಭಾಜ್ಯ ಅಂಗ, plotಗೆ ಇದು ಬೇಕಿತ್ತು ಅನ್ನಿಸುವಂತೆ ಮಾಡಿರುವುದು smartnessನಲ್ಲಿ ಅದಕ್ಕಿಂತಲೂ ಒಂದು ಕೈ ಮೇಲಿರುವ move ! ಹೀಗೆ ಬರೆದದ್ದಕ್ಕೆ ಚಂದ್ರಮೌಳಿಯವರಿಗೆ ಸಲಾಂ, ಬರೆಸಿದ್ದಕ್ಕೆ ಪ್ರಶಾಂತ್ ನೀಲ್ಗೂ ನಮಸ್ಕಾರ. ಡೈಲಾಗುಗಳು ಹೆಚ್ಚು ಉದ್ದ ಇಲ್ಲದಿರುವುದರ ಹಿಂದೆಯೂ ಪ್ರಶಾಂತರ ಕೈವಾಡವೇ ಇರಬೇಕು.

ಒಂದು ಬಕೇಟು ಮಣ್ಣಿನ ಬಣ್ಣ, ಒಂದು ಚೊಂಬು ಚಿನ್ನದ ಬಣ್ಣ, ಒಂದು ಕೊಡಪಾನ ಆರೆಂಜ್ ಬಣ್ಣದಲ್ಲಿ ಅದ್ದಿ ತೆಗೆದಿದ್ದಾರೇನೋ ಅನ್ನಿಸುವಂತೆ ಛಾಯಾಗ್ರಾಹಕ ಭುವನ್ ಗೌಡರು ಒಂದೇ ಬಣ್ಣದ ಛಾಯೆಗಳನ್ನಿಟ್ಟುಕೊಂಡು ಹೋಳಿ ಆಡಿದ್ದಾರೆ. Butch Cassidy and the Sundance Kid ಚಿತ್ರವೂ ಹಳದಿ ಬಣ್ಣವನ್ನು ಬಳಸಿ ಹೆಸರು ಮಾಡಿತ್ತು, ಅಬ್ಬಾಸ್ ಕಿರೋಸ್ತಾಮಿಯ Taste of Cherry ಚಿತ್ರವೂ ಮಣ್ಣು ಮಣ್ಣು ದೃಶ್ಯಗಳನ್ನು ತೋರಿಸಿತ್ತು.
Barry Lyndon ಎಂಬ ಚಿತ್ರವನ್ನು Stanley Kubrick ಎಂಬ ದೊಡ್ಡ ನಿರ್ದೇಶಕ ಯಾವುದೇ Artificial lightಗಳಿಲ್ಲದೆ ಚಿತ್ರಿಸಿದ್ದ, ಇಲ್ಲಿಯೂ ಹಲವು ಕಡೆ ಕೃತಕ ಬೆಳಕಿಲ್ಲದೆ ಬರೀ ದೊಂದಿ, ಬೆಂಕಿಗಳ ಬೆಳಕಿನಲ್ಲಿಯೇ ದೃಶ್ಯಗಳನ್ನು ಕಟ್ಟಿ ವಿಶಿಷ್ಟವಾದ ಕಲರ್ ಗ್ರೇಡಿಂಗ್ ಮಾಡಲಾಗಿದೆ, ಗಣಿಗಳ ಕತ್ತಲೆ, ಗಣಿ ಕಾರ್ಮಿಕರ ಬದುಕಿನ ಕತ್ತಲೆ, ಚಿತ್ರದ ಡಾರ್ಕ್ ಟೋನ್ ಎಲ್ಲ ಈ ಬೆಳಕಿನ ಆಟದಲ್ಲಿ, ಬಣ್ಣಗಾರಿಕೆಯಲ್ಲಿ ಹೇಳಲ್ಪಟ್ಟಿವೆ. ಹಗಲಿನಲ್ಲೂ ಸಹಜ ಬೆಳಕಿನ ನರ್ತನವೇ ಒಂದು ಬೇರೆ ಲುಕ್ ಕೊಡುವಂತೆ ಮಾಡಲಾಗಿದೆ.

ಬೀಜಿಂಗಿನಿಂದ ಶಾಂಘೈಗೆ ಹೋಗುವ ಬುಲೆಟ್ ಟ್ರೇನಿನಂತೆ ಚಿತ್ರ ಓಡುವಂತೆ ಕಂಡರೆ ಅದಕ್ಕೆ ಶ್ರೀಕಾಂತ್ ಗೌಡರ rapid fire ಎಡಿಟಿಂಗ್ ಕಾರಣ, ಬಹುಶಃ ನೂರಕ್ಕೆ ಎಂಬತ್ತು ಪಾಲು shotಗಳು ಐದು ಸೆಕೆಂಡಿಗಿಂತ ಹೆಚ್ಚು ತೆರೆಯಲ್ಲಿ ಇರುವುದೇ ಇಲ್ಲ, ಹೀಗಾಗಿ ಪಟಪಟನೇ ಶಾಟ್ ಗಳು ಕಣ್ಣಿಗೆ ಅಪ್ಪಳಿಸಿ ನಮಗೆ ಬಿಡುವೇ ಕೊಡುವುದಿಲ್ಲ, blink and miss ಶೈಲಿಯ ಓಘ ಚಿತ್ರಕ್ಕೆ ಸಿಕ್ಕಿದೆ, ಒಂದು ನಿಮಿಷ ವಾಟ್ಸಪ್ಪ್ ನೋಡಿ ಬರುತ್ತೇನೆ ಅನ್ನುವವರಿಗೆಲ್ಲ ಅವಕಾಶವೇ ಇಲ್ಲ ! ಶ್ರೀಕಾಂತರು Thelma Schoonmaker,Lee Smith, Michael Kahn ಮುಂತಾದ ಸಂಕಲನಕಾರರ ಅಭಿಮಾನಿಯಂತೆ. ಹೊಡೆದಾಟಗಳಲ್ಲಿಯೂ ಹೀರೋ ಹೊಡೆದರೆ ಹತ್ತು ಜನ ವಾಲಿಬಾಲಿನಂತೆ ಗಾಳಿಯಲ್ಲಿ ಹಾರುತ್ತಾರೆ ಎಂಬಂತಿರದೆ shaky ಕ್ಯಾಮೆರಾ ಮತ್ತು ಫಾಸ್ಟ್ ಕಟ್ ಗಳಲ್ಲಿ ಎಲ್ಲವನ್ನೂ ಅಡಗಿಸಲಾಗಿದೆ. frame rate ನ ಜೊತೆಯೂ ಆಟವಾಡಿ ಸ್ಲೋ ಮೋಶನ್ , ಫಾಸ್ಟ್ ಮೋಶನ್ ಎಲ್ಲ ಒಟ್ಟಿಗೇ ಬೆರೆಸಿರುವುದೂ ಇನ್ನೊಂದು ತಂತ್ರಗಾರಿಕೆ. ಕಲಾನಿರ್ದೇಶಕ ಶಿವು ಮತ್ತವರ ತಂಡದವರು ಸೆಟ್ ಹಾಕಲು ಅದೆಷ್ಟು ಕಷ್ಟ ಪಟ್ಟಿದ್ದಾರೋ ಅವರಿಗೇ ಗೊತ್ತು. ರವಿ ಬಸ್ರೂರರ ಹಿನ್ನೆಲೆ ಸಂಗೀತ ಭೋರ್ಗರೆಯುವ ಜಲಪಾತದಂತಿದೆ.

ಅನಂತ್ ನಾಗ್ , ಅಚ್ಯುತ್ , ವಸಿಷ್ಠ ಮುಂತಾದವರಿಗೆ ಹೆಚ್ಚು ಅವಕಾಶ ಇಲ್ಲದ್ದು ನಿರಾಸೆಯಾಯಿತು, ಯಶ್ ಅವರಿಗೆ badass ಆಗಿ ಕಾಣುವುದೊಂದೇ ಕೆಲಸ, ಅವರ attitude, ಆ ನೋಟ ಎಲ್ಲ ಜಗತ್ತನ್ನು ಗೆಲ್ಲಹೊರಟವನಿಗೆ ಇರಬೇಕಾದವೇ ಬಿಡಿ.
ಗಣಿಗಾರಿಕೆಯ ಸೂಕ್ಷ್ಮ, ರಾಜಕೀಯ, ಒಳಗುಟ್ಟುಗಳೆಲ್ಲ ಇದ್ದರೆ ಚೆನ್ನಾಗಿರುತ್ತಿತ್ತು, ಇದು ಮಾಸ್ ಚಿತ್ರವಾದ್ದರಿಂದ ಇಲ್ಲಿ ಎಲ್ಲವೂ ಬ್ಲಾಕ್ ಅಂಡ್ ವೈಟ್.
ಬೇರೆ ಚಿತ್ರಗಳಲ್ಲಿ ಖಳನಾಯಕರು ಹೀರೋವಿನ ಕೈಯಲ್ಲಿ ಪೆಟ್ಟು ತಿನ್ನಲಿಕ್ಕೆಂದೇ ಇರುವ ಹಾಸ್ಯಾಸ್ಪದ ವ್ಯಕ್ತಿಗಳಾಗಿರುತ್ತಾರೆ, ಇಲ್ಲಿ ವಿಲನ್ಗಳನ್ನೂ ಮೆರೆಸಿರುವುದು ಖುಷಿಯಾಯಿತು. ಕೊನೆಗೆ ಹೀರೋ ಬುದ್ಧಿ ಉಪಯೋಗಿಸಿ ಕೆಲಸ ಸಾಧಿಸುವುದೂ ತಾಯಿಯ ದುನಿಯಾ ಗೆಲ್ಲುವ ಕಾನ್ಸೆಪ್ಟ್ ಅನ್ನು ಮುದದಿಂದ ಸಾಕಾರಗೊಳಿಸಿ ಮಜಾ ಕೊಟ್ಟಿತು.

ದುಡ್ಡು ಸುರಿದ ಎಂಟೆದೆಯ ನಿರ್ಮಾಪಕರಿಗೆ ದೊಡ್ಡ ನಮಸ್ಕಾರ. ನಿರ್ದೇಶಕನ ಬಗ್ಗೆ ಎಷ್ಟು ಹೇಳಿದರೂ ಕಡಮೆಯೇ, ಕನಸು ಕಾಣುವವರು ಎಷ್ಟು ದೊಡ್ಡ ಮಟ್ಟದಲ್ಲಿ ಕಾಣಬೇಕು ಅನ್ನುವುದಕ್ಕೊಂದು ಮಾದರಿ ಇವರಿಬ್ಬರು.

ಅಬ್ಬರದ ಚಂಡೆಯ ಗೌಜಿಯಲ್ಲಿ ವೀರರಸದ ಯಕ್ಷಗಾನದಂತೆ ಥ್ರಿಲ್ಲಾಗಿಸುವ ಚಿತ್ರವಿದು. ಒಂದು ಜಾತ್ರೆಗೆ ಹೋದಾಗ, ಈ ಅಂಗಡಿಗೆ ಕೆಂಪು ಬಾಗಿಲು ಇರಬೇಕಿತ್ತು, ಜಯಂಟ್ ವೀಲ್ ವಿರುದ್ಧ ದಿಕ್ಕಿನಲ್ಲಿ ತಿರುಗಬೇಕಿತ್ತು , ಚುರುಮುರಿಗೆ ಪೈನಾಪಲ್ ಹಾಕಿದರೆ ಲಾಜಿಕ್ ಸರಿಯಾಗುತ್ತಿತ್ತು ಅಂತೆಲ್ಲ ಹೇಳುತ್ತಾ ಕೂತರೆ ನಷ್ಟ ನಿಮಗೇ , ಹೀಗೆ ಮಾಡುವ ಬದಲು ಬೆರಗುಗಣ್ಣುಗಳಿಂದ ಸುಮ್ಮನೆ ಸಂಭ್ರಮದಲ್ಲಿ ಸೇರಿಕೊಂಡರೆ ಮಜಾ ಹೆಚ್ಚು, ನಾನು ಏನು ಹೇಳುತ್ತಿದ್ದೇನೆ ಅಂತ ಗೊತ್ತಾಯಿತಲ್ಲ ?! ಯಾವುದಕ್ಕೂ ಒಮ್ಮೆ ನೋಡಿಬನ್ನಿ.

No comments:

Post a Comment