ಶತಾವಧಾನಿ ಆರ್ ಗಣೇಶ್ ಮತ್ತು ನಾನು !
"ಇದೇನ್ರೀ ಇದು ಜೋಕ್ ಮಾಡ್ತೀರಾ? ಗಣೇಶ್ ಎಲ್ಲಿ, ನೀವೆಲ್ಲಿ ? ಅವರ ಹೆಸರಿನ ಜೊತೆ ನಿಮ್ಮ ಹೆಸರು ಯಾವ ಲೆಕ್ಕದಲ್ಲಿ ಸ್ವಾಮೀ ಬರುತ್ತೆ" ಅಂತ ಸಿಟ್ಟಾಗಬೇಡಿ. ಗಣೇಶರನ್ನು ನಾನು ಭೇಟಿಯಾದ ಪ್ರಸಂಗವನ್ನಷ್ಟೇ ನಾನು ಹೇಳಹೊರಟದ್ದು. ಅದನ್ನು ಹೇಳಲಿಕ್ಕೆ ಇದೊಂದು TRP friendlyಯಾಗಬಹುದಾದ ಮೊದಲ ಸಾಲನ್ನು ಹಾಕಿದೆನಷ್ಟೇ !
ಹಿರಿಯ ಸಂಸ್ಕೃತ ವಿದ್ವಾಂಸರೂ, ಕಾವ್ಯಮೀಮಾಂಸೆ, ಭಾರತೀಯ ಸಂವೇದನೆ ಮುಂತಾದ ವಿಷಯಗಳಲ್ಲಿ ಕೆಲಸ ಮಾಡಿದವರೂ ಆದ ಪಾದೆಕಲ್ಲು ನರಸಿಂಹ ಭಟ್ಟರ ಬಗ್ಗೆ ಒಂದು ಪುಟ್ಟ ಪುಸ್ತಕವನ್ನು ನಾನು ಬರೆಯಲಿಕ್ಕಿತ್ತು. ಗಣೇಶರೂ ನರಸಿಂಹ ಭಟ್ಟರ ಮೇಲೆ ಅಭಿಮಾನ ಇದ್ದವರು, ಅವರ ವಿಚಾರಗಳನ್ನು ಅರ್ಥಮಾಡಿಕೊಂಡು ಸ್ಪಂದಿಸಿದವರು. ಹಾಗಾಗಿ ರಿಸರ್ಚಿನ ಭಾಗವಾಗಿ ಅವರನ್ನು ಮಾತಾಡಿಸಬೇಕಿತ್ತು. ಗೋಖಲೆ ವಿಚಾರಸಂಸ್ಥೆಯಲ್ಲಿ ಸಿಕ್ಕಿದಾಗ, "ಇಂತದ್ದೊಂದು ವಿಷಯದಲ್ಲಿ, ನಿಮ್ಮ ಹತ್ತಿರ ಮಾತಾಡಲಿಕ್ಕಿದೆ, ಒಮ್ಮೆ ನಿಮಗೆ ಸಿಕ್ಕಲೇ" ಅಂತ ನಾನು ಸಂಕೋಚದಿಂದಲೇ ಕೇಳಿದೆ. 'ನಡೆದಾಡುವ ಸರಸ್ವತಿ' ಎಂದು ಕರೆಸಿಕೊಳ್ಳುವ ಗಣೇಶರು, ಸ್ವಲ್ಪವೂ ದೊಡ್ಡಸ್ತಿಕೆ, ಬಿಗುಮಾನಗಳಿಲ್ಲದೆ, ಸಂಕೋಚದ ಅಗತ್ಯವೇ ಇಲ್ಲವೆಂದು ಪದಗಳನ್ನು ಬಳಸದೆಯೇ ಹೇಳಿ, "ಫೋನ್ ನಂಬರ್ ತಗೊಳ್ಳಿ" ಅಂತಂದು, ಸ್ಥಳದಲ್ಲಿಯೇ ನಂಬರನ್ನು ಕೊಟ್ಟ ನಿರಾಡಂಬರ ಶೈಲಿಯ ಮುನ್ನುಡಿಗೆ ಅಚ್ಚರಿಯಿಂದಲೇ ಕಣ್ಣಾದೆ.
ಮುಂದಿನ ಶುಕ್ರವಾರ ಕರೆಮಾಡಿ, "ನಾಳೆ ಬಂದ್ರೆ ಆದೀತಾ" ಅಂತ ಕೇಳಿದೆ. ಸದ್ಯಕ್ಕೆ ನರೇಂದ್ರ ಮೋದಿ ಮತ್ತು ಕುಮಾರಸ್ವಾಮಿಯವರನ್ನು ಬಿಟ್ಟರೆ ಅತ್ಯಂತ ಬ್ಯುಸಿ ವ್ಯಕ್ತಿ ಇವರೇ ಇರಬಹುದು ಅನ್ನಿಸುವಷ್ಟು ಕೆಲಸಗಳನ್ನು ಗುಡ್ಡೆ ಹಾಕಿಕೊಂಡಿರುವವರು ಅವರು, "ಶನಿವಾರವೂ ಭಾನುವಾರವೂ ಒಂದು ಅರ್ಧ ಗಂಟೆಯೂ ಪುರುಸೊತ್ತು ಇಲ್ಲವಲ್ಲಾ, ಏನ್ಮಾಡೋಣ" ಅಂದರು. "ಓ ಹೌದಾ ಸರ್, ಆಯಿತು ಬಿಡಿ" ಅಂದೆ. ಸ್ವರದಲ್ಲಿ ನಿರಾಸೆಯನ್ನು ಗುರುತಿಸಿದವರಂತೆ, ಕೂಡಲೇ, "ಹೀಗ್ಮಾಡಿ, ಭಾನುವಾರ ರಾತ್ರಿ ಒಂಬತ್ತಕ್ಕೆ free ಆಗ್ತೀನಿ, ಆವಾಗ ಬಂದುಬಿಡಿ" ಅಂದರು. ಒಂದು ಐವತ್ತು ಪುಟಗಳ ಲೇಖನವೊಂದನ್ನು ಕಳಿಸಿ, "ಇದನ್ನು ಓದ್ಕೊಂಡು ಬನ್ನಿ" ಅಂದರು. ಆದರೇನು ಮಾಡೋಣ ! ಅವರಷ್ಟಲ್ಲದಿದ್ದರೂ ನಾನೂ ಬ್ಯುಸಿಯೇ ಆಗಿದ್ದೆ ! ಅದನ್ನು ಹತ್ತೇ ಪುಟ ಓದಿ, ಹೇಳಿದ್ದನ್ನು ಮಾಡದೇ, ಭಂಡಧೈರ್ಯದಿಂದಲೇ ಹೊರಟೆ ! "ಗಣೇಶರು ಸರಿಯಾಗಿ ಬೈತಾರೆ" ಅಂತ ಅವರ ಶಿಷ್ಯರು ಭಾಷಣವೊಂದರಲ್ಲಿ ತಮಾಷೆ ಮಾಡಿದ್ದನ್ನು ಬೇರೆ ಕೇಳಿದ್ದೆ !!
ಹಿಂದೀ ಚಿತ್ರಗಳಿಗೆ ಬರೆಯುತ್ತಿದ್ದ ಸಲೀಂ ಜಾವೇದ್ ಜೋಡಿಯ ಸಲೀಂ ಖಾನ್(ಸಲ್ಮಾನ್ ಖಾನ್ ಇವರ ಮಗನೇ) ಎಷ್ಟು ಓದುತ್ತಿದ್ದರು ಅಂದರೆ, ಕಡೆಗೊಮ್ಮೆ ಗ್ರಂಥಾಲಯವೊಂದರಲ್ಲಿ, "ಹೊಸ ಪುಸ್ತಕವೇನಾದರೂ ಬಂದಿದೆಯೇ" ಅಂತ ಅವರು ಕೇಳಿದಾಗ, ಲೈಬ್ರರಿಯನ್ನರು, "ಇನ್ನು ನೀವು ಓದದೇ ಇರುವ ಪುಸ್ತಕ ಯಾವುದೂ ನಮ್ಮ ಗ್ರಂಥಾಲಯದಲ್ಲಿ ಇಲ್ಲ ಸಲೀಂ ಸಾಬ್" ಅಂದಿದ್ದರಂತೆ ! ಬೆಂಗಳೂರಿನ ಎಲ್ಲ ಗ್ರಂಥಾಲಯಗಳವರೂ ಗಣೇಶರು ಕೇಳಿದರೆ ಹೀಗೇ ಹೇಳಬೇಕಾದೀತೋ ಏನೋ !! "ಬಹುಶಃ ಮೊನ್ನೆ ಶನಿವಾರ ಬಿಡುಗಡೆಯಾದ ನನ್ನ ಪುಸ್ತಕವೊಂದನ್ನು ಬಿಟ್ಟರೆ ಎಲ್ಲವನ್ನೂ ಇವರು ಓದಿ ಮುಗಿಸಿದ್ದಾರೆ" ಅಂತ ತಮಾಷೆ ಮಾಡಿದರೆ ಅದು ವಾಸ್ತವಕ್ಕಿಂತ ಬಹಳ ದೂರವೇನೂ ಹೋಗಲಿಕ್ಕಿಲ್ಲ !! ಹೀಗಿರುವ ಜ್ಞಾನರಾಶಿಯ ಮುಂದೆ ನಾನು ಯಾವ ಮುಖವಿಟ್ಟುಕೊಂಡು ಹೋಗುವುದಪ್ಪಾ, ಏನು ಮಾತಾಡುವುದಪ್ಪಾ ಎನ್ನುವುದನ್ನು ಊಹಿಸಿಯೇ ಒಳಗೊಳಗೇ ಪುಕು ಪುಕು ಶುರುವಾಯಿತು. ಮುಂದಿನದು ನನ್ನಮಟ್ಟಿಗೆ ಅವಿಸ್ಮರಣೀಯ !
ಒಂಬತ್ತೂ ಐದಕ್ಕೆ ಒಳಹೊಕ್ಕವನು ನಡುರಾತ್ರಿ ಹನ್ನೆರಡರವರೆಗೆ ನಿರರ್ಗಳವಾಗಿ ಹರಟಿದೆ. ಒಂದು ನಿಮಿಷದ awkward silence ಕೂಡಾ ಇಲ್ಲದ ನಮ್ಮಿಬ್ಬರ ಅಸ್ಖಲಿತ ಮಾತು ಕೋಣೆಯನ್ನು ತುಂಬಿಸಿತು. ಪಂಡಿತರ ಜೊತೆ ಪಾಮರರು ಮಾತಾಡಲಿಕ್ಕೆ ಆಗುವುದಿಲ್ಲ ಅಂತ ಯಾರು ಹೇಳಿದ್ದು ! ಆರಂಭದಲ್ಲಿ ದಂಡಿ, ಭಾಮಹ, ಆನಂದವರ್ಧನ ಮುಂತಾದವರ ಬಗ್ಗೆಯೆಲ್ಲ ಏನು ಹೇಳ್ತೀರಿ ಅಂತ ಕೇಳಿದಾಗ ಉತ್ಸಾಹದಿಂದಲೇ ಕೊರೆದಿದ್ದೆ, ಭಾರತೀಯ ಸೌಂದರ್ಯ ಮೀಮಾಂಸೆ, ಅಲಂಕಾರಶಾಸ್ತ್ರಗಳ ಪರಿಕಲ್ಪನೆಗಳನ್ನು ಸಿನೆಮಾಕ್ಕೆ ಅನ್ವಯಿಸಬಹುದೇ ಅಂತೆಲ್ಲ ಪ್ರಶ್ನೆ ಮಾಡಿದಾಗಲೂ ನನಗೆ ತೋಚಿದ್ದನ್ನು ಹೇಳಿದ್ದೆ. "ಹುಡುಗ ಎಷ್ಟು ತಿಳಿದುಕೊಂಡಿದ್ದಾನೆ" ಅಂತ ನನ್ನನ್ನು ಪರೀಕ್ಷೆ ಮಾಡುವುದಕ್ಕೆ ಕೇಳಿದ್ದಿರಬಹುದು ಅಂತ ಆಮೇಲೆ ಹೊಳೆಯಿತು !! Aryan invasion theoryಯಿಂದ ಯಕ್ಷಗಾನದವರೆಗೆ ಎಷ್ಟೆಲ್ಲಾ ವಿಷಯಗಳು ಬಂದವೋ !
ಪಾದೆಕಲ್ಲು ನಮಗೆ ನೆರೆಕರೆ ಅಂದಾಗ, "ನೀವು ಕರೋಪಾಡಿ ಗ್ರಾಮದವರೋ" ಅಂತ ಹೇಳಿದ, ದಕ್ಷಿಣ ಕನ್ನಡದ ಹತ್ತು ಹದಿನೈದು ಹಳ್ಳಿಗಳ ಹೆಸರನ್ನು ಕ್ಷಣಮಾತ್ರದಲ್ಲಿ ಹೇಳಿದ ಗಣೇಶರ ಅಸಾಧಾರಣ ಸ್ಮರಣಶಕ್ತಿಯ ಬಗ್ಗೆ ನಾನು ಹೊಸತಾಗಿಯೇನೂ ಹೇಳಬೇಕಾದ್ದಿಲ್ಲ. ಒಂದು ವಿಷಯ ಕೇಳಿದಾಗ, ಅದಕ್ಕೆ ಉದಾಹರಣೆಯಾಗಿ ಎರಡು ಹಳಗನ್ನಡ, ಒಂದು ಸಂಸ್ಕೃತ, ಒಂದು ತೆಲುಗು ಪದ್ಯಗಳನ್ನು ಕೂತಲ್ಲಿಯೇ ನೆನಪಿನಿಂದ quote ಮಾಡಿ ಹೇಳಿದ್ದು ಅವರಿಗೆ ನೀರು ಕುಡಿದಷ್ಟು ಸಲೀಸೆಂದು ನನಗೆ ಗೊತ್ತಿದೆ. ಜೊತೆಗೆ ತಾವೇ ಕಾಫಿ ಮಾಡಿ ನನಗೆ ಕುಡಿಸಿದ್ದೂ ಆಯಿತು. ನಾನು ಯುರೋಪಿಯನ್ ಭಾಷೆಗಳನ್ನು ಕಲಿಯಬೇಕೆಂದಿದ್ದೇನೆ ಅಂತ ಹೇಳಿ ಆ ವಿಚಾರ ಕೇಳಿದೆ . ಹದಿನೆಂಟು ಭಾಷೆಗಳನ್ನು ಕಲಿಯಲಿಕ್ಕೆ ಅವರಿಗೆ ಮಂಜೇಶ್ವರ ಗೋವಿಂದ ಪೈಗಳೇ ಸ್ಫೂರ್ತಿಯಂತೆ, ಅವರು ಪುಸ್ತಕಗಳನ್ನಿಟ್ಟುಕೊಂಡೇ ಅವನ್ನು ಕಲಿತದ್ದಂತೆ. ಈಗ ಕ್ಲಾಸುಗಳಿಗೆ ಹೋಗಿ, ಇಂಟರ್ನೆಟ್ ಅನ್ನು ಬಳಸಿ ಎಲ್ಲ ಕಲಿಯಬಹುದೆಂದು ಅಭಿಪ್ರಾಯ ಪಟ್ಟರು. ಸಂಸ್ಕೃತ ಕಲಿಯಲು ವಿದ್ವಾನ್ ರಂಗನಾಥ ಶರ್ಮ ಅವರ ವಾಲ್ಮೀಕಿ ರಾಮಾಯಣದ ಅನುವಾದ ಓದಿದರೆ ಸಾಕು,ಅವರು ಮೂಲವನ್ನೂ ಅನುವಾದವನ್ನೂ ಕೊಟ್ಟಿರುವುದರಿಂದ ಒಂದು ವರ್ಷದಲ್ಲಿ ಸಂಸ್ಕೃತ ಕರಗತವಾಗುತ್ತದೆ ಅಂತ ಅವರ ಅಂಬೋಣ. ಯಾವ ಸಿನೆಮಾಗಳನ್ನು ನೋಡಿದ್ದೀರಿ ಅಂತ ಕೇಳಿ , ಸಂಗೀತ ಕೇಳುವ ಅಭ್ಯಾಸ ಬೆಳೆಸಿಕೊಳ್ಳಿ ಅಂತ ಹೇಳಿದರು.
ಅವರ ಕೆಲವು ವಿಚಾರಗಳು ನನಗೆ ಒಪ್ಪಿಗೆಯಾಗಲಿಲ್ಲ. ಕೆಲವು ವಿಷಯಗಳ ಮತ್ತು ವ್ಯಕ್ತಿಗಳ ಬಗ್ಗೆ ಪೂರ್ವಗ್ರಹದಿಂದ ಮಾತಾಡಿದರೆಂದೂ ಕಂಡಿತು. ಏನೇ ಇದ್ದರೂ, ಆ ಹೊತ್ತಲ್ಲದ ಹೊತ್ತಿನಲ್ಲಿ, odd timeನಲ್ಲಿ ಕರೆಸಿಕೊಂಡು, ಎಷ್ಟೋ ವಿಷಯಗಳಲ್ಲಿ ನನಗಿದ್ದಿರಬಹುದಾದ ಅಜ್ಞಾನವನ್ನು ಲೆಕ್ಕಿಸದೆ, ವಯಸ್ಸಿನ, ಜ್ಞಾನದ, ಅಭಿರುಚಿಯ ಅಂತರವಿದ್ದರೂ ಗೆಳೆಯರಂತೆ ಅಷ್ಟು ದೀರ್ಘಕಾಲ ಮಾತಾಡಿದ್ದು ಅವರ ಔದಾರ್ಯವೆಂದು ಹೇಳದಿದ್ದರೆ ತಪ್ಪಾದೀತು.
ನಾವಿಬ್ಬರೂ ಸೇಡಿಯಾಪು ಕೃಷ್ಣಭಟ್ಟರ ಅಭಿಮಾನಿಗಳಾದ್ದರಿಂದ ಒಂದು ಹದಿನೈದಿಪ್ಪತ್ತು ನಿಮಿಷ ಅವರ ಪಾಂಡಿತ್ಯದ, ವಿಚಾರಗಳ ಚರ್ಚೆಯಾಯಿತು. ನಾಟ್ಯಶಾಸ್ತ್ರದ ಭರತ, ಧ್ವನ್ಯಾಲೋಕದ ಆನಂದವರ್ಧನ, ನ್ಯೂಟನ್, ಐನ್ ಸ್ಟೈನ್ ಮುಂತಾದವರ ಸಾಲಿನಲ್ಲೇ ಸಲ್ಲಬೇಕಾದ ಹೆಸರು ಸೇಡಿಯಾಪು ಅವರದ್ದು, ಅವರ ಸ್ಥಾನ ಬೇರೆ ಯಾವ ordinary mortalಗಳ ಜೊತೆಗೂ ಅಲ್ಲ ಅಂತ ಗಣೇಶರ ಅಭಿಪ್ರಾಯ. ಸೇಡಿಯಾಪು ಅವರು "ಕನ್ನಡ ಭಾಷಾಸೇವೆ" ಎಂಬ ಲೇಖನದಲ್ಲಿ, ಭೂಗೋಳ, ಇತಿಹಾಸ, ಗಣಿತ, ವಿಜ್ಞಾನ, ಅರ್ಥಶಾಸ್ತ್ರ ಮುಂತಾದ ಜ್ಞಾನಶಾಖೆಗಳಲ್ಲಿ ಬರೆಯುವುದು ಅತ್ಯಂತ ಉನ್ನತ ಮಟ್ಟದ ಕೆಲಸವೆಂದೂ, ಅದಕ್ಕೆ ಅಪಾರವಾದ ಪ್ರತಿಭೆ ಬೇಕೆಂದೂ ಹೇಳಿದ್ದು, ಅವರ ಅಭಿಪ್ರಾಯದಂತೆ ನಾನು ಇಂತಹಾ ವಿಷಯಗಳನ್ನು ಹುಡುಕಿ ಬರೆದಿದ್ದೇನೆಂದೂ ಸೇರಿಸಿದೆ. ಸೇಡಿಯಾಪು ಅವರ ಪಾಂಡಿತ್ಯ ನನಗೆ ಹೇಗೆ ಉಳಿದವರದಕ್ಕಿಂತ ಬೇರೆಯಾಗಿ ಕಾಣುತ್ತದೆ ಅಂತಲೂ ಹೇಳಿದೆ. ನಾನು ತೀನಂಶ್ರೀ ಅವರ ಅಭಿಮಾನಿಯೂ ಹೌದೆಂದು ಹೇಳಿ ಅವರ "ಭಾರತೀಯ ಕಾವ್ಯಮೀಮಾಂಸೆ" ನನಗೆ ಯಾಕಿಷ್ಟ ಅಂತ ವಿವರಿಸಿದೆ. ಪಾವೆಂ ಆಚಾರ್ಯರ ಪ್ರತಿಭೆ ಅಷ್ಟೊಂದು ವಿಷಯಗಳಲ್ಲಿ ಹರಿದು ಹಂಚಿ ಹೋಗುವ ಬದಲು ಒಂದೇ ಕ್ಷೇತ್ರದಲ್ಲಿ ಅವರು ದೊಡ್ಡ ಕೆಲಸವನ್ನೇನಾದರೂ ಮಾಡಬೇಕಿತ್ತು ಅಂತ ಗಣೇಶರಿಗೆ ಕಾಣುತ್ತದೆ. ಪದಾರ್ಥ ಚಿಂತಾಮಣಿ ದೊಡ್ಡ ಕೆಲಸವೇ ಅಲ್ಲವೇ ಅಂತ ನಾನು ಹೇಳಿದೆ.
ಕಡೆಗೆ ನನ್ನದೊಂದು ಲೇಖನವನ್ನೂ ಮೂರು ಪುಟದಷ್ಟು ಓದಿ, "ನಿಮಗೆ ಚಂದದ ಭಾಷೆ ಒಲಿದಿದೆ, ಸೊಗಸಾದ ಶೈಲಿ ಇದೆ , ವ್ಯಾಕರಣಶುದ್ಧವಾಗಿಯೂ ಬರೆದಿದ್ದೀರಿ" ಅಂತ ಗಣೇಶರು ಹೇಳಿದ್ದು ನನಗೆ ಸಿಕ್ಕಿದ ದೊಡ್ಡ ಸರ್ಟಿಫಿಕೇಟು. ಅಜ್ಜಿಪುಣ್ಯಕ್ಕೆ ಅವರಿಗೆ ತೋರಿಸಿದ ಭಾಗಗಳಲ್ಲಿ ಸೊಗಸಾದ ಶೈಲಿ ಮತ್ತು ದೋಷಗಳಿಲ್ಲದ ಭಾಷಾಪ್ರಯೋಗ ಇತ್ತೆಂದು ಕಾಣುತ್ತದೆ !
ಅವರಿಗೆ ಬೆನ್ನು ನೋವಿದ್ದು ಹೆಚ್ಚು ಹೊತ್ತು ಕೂತುಕೊಳ್ಳಲಿಕ್ಕೆ ಆಗುವುದಿಲ್ಲವಂತೆ ಅಂತ ನನಗೆ ಆಮೇಲೆ ಒಂದುದಿನ ಗೊತ್ತಾಯಿತು ! ಹಾಗಾದರೆ ಅಷ್ಟು ಹೊತ್ತು ನೋವನ್ನು ಸ್ವಲ್ಪವೂ ತೋರಿಸದೆ ಅದೂ ರಾತ್ರಿ ಕೂತಿದ್ದರೆಂದು ಕಾಣುತ್ತದೆ. ಈ ಅತಿಥಿ ಸತ್ಕಾರಕ್ಕೆ, ಸೌಜನ್ಯಕ್ಕೆ ಏನು ಹೇಳೋಣ. ಇವತ್ತು ಗಣೇಶರ ಜನುಮದಿನವಂತೆ ಅಂತ ಗೊತ್ತಾಗಿ ಇಷ್ಟು ಬರೆದೆ.

No comments:
Post a Comment