Saturday 30 April 2016

ಕನ್ನಡಕ್ಕೊಬ್ಬರೇ ಬೀಚಿ

ಇವತ್ತು ಬೀchi ಅವರ ಹುಟ್ಟು ಹಬ್ಬವಂತೆ. ಬೀchi(ಪಾರ್ಥಸಾರಥಿ ಪಾಚು ಆಗುವಂತೆ ಬಳ್ಳಾರಿ ಭೀಮಸೇನರಾವ್ ಬೀಚಿ ಆಗಿದೆ ) !! ಹೆಸರು ಕೇಳಿದರೆ ಮುಖ ಅರಳುತ್ತದೆ, ತುಟಿಯ ಅಂಚಿನಿಂದ ನಗೆಹೂವು ಬಿರಿಯುತ್ತದೆ. ನನಗೆ ಬುದ್ದಿ ಬಂದಾಗಿಂದ ನಾನು ಹುಡುಕಿ ಹುಡುಕಿ ಓದಿದ್ದು ಅಂತಿದ್ದರೆ ಈ ಮಹಾಮಹಿಮರ ಪುಸ್ತಕಗಳನ್ನೇ ("ಬುದ್ದಿ ಬಂದ ಮೇಲೆ" ಅನ್ನುವ ಪ್ರಯೋಗದ ಬಗ್ಗೆ ಬೀchiಯವರದ್ದೇ ಒಂದು ಚಟಾಕಿ : ಕೆಲವರು "ನನಗೆ ಬುದ್ದಿ ಬಂದ ಮೇಲೆ" ಎಂದು ಮಾತು ಆರಂಭಿಸುತ್ತಾರೆ. "ಯಾವಾಗ ಬಂತು ನಿಮಗೆ ಬುದ್ದಿ?" ಎಂದು ಕೇಳಿದರೆ ಜಗಳ ಆರಂಭ). ಬೀchi ಅವರ ಬಗ್ಗೆ ಬರೆಯುವುದು ಅಂದರೆ ಗುಲಾಬ್ ಜಾಮೂನಿನ ಬಗ್ಗೆ ಭರತ ನಾಟ್ಯ ಮಾಡಿದ ಹಾಗೆ!! ಅದರ ರುಚಿಯನ್ನು ಓದಿಯೇ ಸವಿಯಬೇಕು.

ಅಬ್ಬಾ !! Beechi ಬರೀತಿದ್ದ ಗೇಲಿ, ತಮಾಷೆ , ಹಾಸ್ಯ , ವ್ಯಂಗ್ಯ, ಕುಟುಕು, ವಿಡಂಬನೆ ತುಂಬಿದ ಬರಹಗಳನ್ನ ಓದೋ ಮಜಾನೇ ಬೇರೆ. ಒಂದು ಬಂಡೆ ಕಲ್ಲು ಕೊಟ್ಟರೆ ಆ ಕಲ್ಲಿನ ಬಗೆಗೂ ತಮಾಷೆ ಮಾಡಬಲ್ಲಷ್ಟು ಪ್ರತಿಭಾಶಾಲಿ ಬೀchi (ವಿಡಂಬನ ಸಾಹಿತ್ಯವನ್ನೂ ಬಿಡದೆ ಕಾಲೆಳೆದಿದ್ದಾರೆ ಬೀಚಿ: 'ವಿಡಂಬ'ನ ಸಾಹಿತ್ಯ! ಯಾರು ಸ್ವಾಮಿ ವಿಡಂಬ? ಅವನ ಹೆಸರನ್ನೇ ಕೇಳಿಲ್ಲವಲ್ಲ ನಾವು! ಯಾವ ಶತಮಾನದ ಕವಿ 'ವಿಡಂಬ' ಎಂಬುವವನು). ನನ್ನ ಮಟ್ಟಿಗೆ ಸಾಹಿತ್ಯ ದೇವಿಯ ಗುಡಿಯಲ್ಲಿ ಚಿರಕಾಲ ಉಳಿಯುವ ನಂದಾದೀಪಗಳನ್ನು ಹೊತ್ತಿಸಿದವರು ಇಬ್ಬರು: ಬೀಚಿ ಮತ್ತು ನಾ. ಕಸ್ತೂರಿ. ಕನ್ನಡದ ಶ್ರೇಷ್ಟ ಹಾಸ್ಯ ಲೇಖಕರ ಪಟ್ಟಿ ಅಂತ ಮಾಡಿದರೆ ಈ ಎರಡು ಹೆಸರುಗಳು ಬರಲೇ ಬೇಕು. ನನ್ನ ಪಟ್ಟಿಯಲ್ಲಿ ಪಡುಕೋಣೆ ರಮಾನಂದರಾಯ, ಅರಾ ಮಿತ್ರ, ಭುವನೇಶ್ವರಿ ಹೆಗಡೆ , ರಾಶಿ, ನಾಡಿಗೇರ ಕೃಷ್ಣ ರಾಯರು, ಟಿ ಎಸ್ ಅಂಬುಜಾ, ಪಾವೆಂ ಆಚಾರ್ಯ ಎಲ್ಲ ಬರುತ್ತಾರೆ. ಯಾರು ಬರುತ್ತಾರೋ ಬಿಡುತ್ತಾರೋ ಬೀchi ಅಂತೂ ಇದ್ದೇ ಇರುತ್ತಾರೆ ವಿರಾಜಮಾನರಾಗಿ. ಬಳ್ಳಾರಿಯಲ್ಲಿ ಇರುವುದು ಎರಡೇ ಕಾಲ ಒಂದು ಬೇಸಿಗೆ. ಮತ್ತೊಂದು ಬಿರು ಬೇಸಿಗೆ ಅನ್ನುವುದು ಬೀchi ಯವರದೇ ಮಾತು. ಬೀಚಿಯವರನ್ನು ಓದಿದವರು ಮಾಡುವುದು ಎರಡೇ ಕೆಲಸ: ನಗುವುದು ಮತ್ತು ಇನ್ನಷ್ಟು ನಗುವುದು.

ಹಾಗಂತ ಬರೀ ಜೋಕು ಹೊಡೆದು ಟೈಮ್ ಪಾಸ್ ಮಾಡುವುದೇ ಬೀchiಯವರ ಗುರಿಯಲ್ಲ. ಸಮಾಜದ ಒರೆ ಕೋರೆ ಗಳನ್ನು ತಿದ್ದುವ, ತಪ್ಪುಗಳನ್ನು, ಅನ್ಯಾಯವನ್ನು, ಮೂಡ ನಂಬಿಕೆಗಳನ್ನು ಬೆದಕಿ, ಚುಚ್ಚಿ, ಕೆಣಕಿ, ಗೇಲಿ ಮಾಡಿ ಸಮಾಜ ಸುಧಾರಣೆ ಮಾಡುವ ವಿಚಿಕಿತ್ಸಕ ದೃಷ್ಟಿ ಅವರದ್ದು. "ಸಂಪ್ರದಾಯ ಎಂಬುದು ಒಂದು ದಾರಿಯನ್ನು ತೊರಿಸುತ್ತದೆ ಮಾತ್ರ, ಬೆತ್ತವನ್ನು ಹಿಡಿದು ನಿಂತು ಈ ದಿಕ್ಕಿಗೆ ಹೋಗು ಎಂದು ಹೇಳುವ ಅಧಿಕಾರ ಅದಕ್ಕಿಲ್ಲ" ಅನ್ನುವ ಸಾಲು ಅಥವಾ "ಬಹುಜನ ಮಾಡುತ್ತಿದ್ದಾರೆಂಬ ಏಕ ಮಾತ್ರ ಕಾರಣದಿಂದಲೇ, ಅನೇಕ ತಪ್ಪುಗಳನ್ನು ನಾವಿಂದು ತಪ್ಪೆಂದು ಅನ್ನುತ್ತಿಲ್ಲ.ಇದು ನಮ್ಮ ತಪ್ಪು" ಮಾತುಗಳಲ್ಲಿ ಈ ಜೋಕ್ ಮಾಡುತ್ತಲೇ ವಿಚಾರದ ಬೀಜ ಬಿತ್ತುವ ಕ್ರಮ ಕಾಣುತ್ತದೆ. ಗಂಭೀರವಾದ ವಿಚಾರಗಳನ್ನು ತಿಳಿಹಾಸ್ಯ ದೊಂದಿಗೆ ಹೇಳುವ ಶೈಲಿಗೆ ಅವರ "ಪೊರಕೆಗೆ ಏನು ಕಂಡರೂ ಕಸವಾಗಿಯೇ ಕಾಣುತ್ತದೆ. ಪೊರಕೆಯ ಯೋಗ್ಯತೆಯೇ ಅಷ್ಟು" ಅನ್ನುವ quote ಹೇಳಬಹುದು ಅಥವಾ ಈ ಸಾಲುಗಳನ್ನೂ ನೋಡಬಹುದು:
ನಿನ್ನಂತೆ ನೀನಾಗು ನಿನ್ನ ನೀ ಅರಿ ಮೊದಲು
ಚೆನ್ನೆಂದು ದೊಡ್ಡವರ ಅನುಕರಿಸ ಬೇಡ
ಏನಾಯ್ತು ಮರಿಕತ್ತೆ? ಚೆಲುವಿತ್ತು, ಮುದ್ದಿತ್ತು
ತನ್ನಪ್ಪನಂತಾಗಿ ಹಾಳಾಯ್ತೊ ತಿಂಮ

ಬೀಚಿ ಕೋಟ್ ಗಳ ಕೋಟೆ ಕಟ್ಟಿ ಮೆರೆದ ಕೋಟೇಶ್ವರ ಸಾಮ್ರಾಟ, ಮಹಾ ಚಕ್ರವರ್ತಿ ಅನ್ನಬೇಕು. ಮೇಲೆಯೇ ಕೆಲವನ್ನು ಕೊಟ್ಟಿದ್ದೇನೆ. ಮಳೆಗಾಲದಲ್ಲಿ ಜೋಗದಲ್ಲಿ ಧುಮ್ಮಿಕ್ಕಿ ಹರಿಯುವ ಜಲರಾಶಿಯಂತೆ ಬೀಚಿ ಬರಹಗಳಲ್ಲಿ quotable quoteಗಳ ರಾಶಿಯೇ ಸಿಗುತ್ತದೆ. ಈ ಮಟ್ಟಿಗೆ ಕನ್ನಡದ ಮಾರ್ಕ್ ಟ್ವೈನ್, George Bernard SHaw, Oscar Wilde ಎಲ್ಲವೂ ಇವರೇ. ಉದಾಹರಣೆಗಳು :
ಸತ್ಯವನು ಅರಿತವನು ಸತ್ತಂತೆ ಇರಬೇಕು
ಗೆಳೆಯನನ್ನು ಉಪ್ಪಿನಂತೆ ಬಳಿಸಬೇಕು, ಸಕ್ಕರೆಯಂತೆ ಸುರುವಿಕೊಳ್ಳಬಾರದು
ಚುನಾವಣೆಯಲ್ಲಿ ಜಯ ದೊರಕುವುದು ಪಕ್ಷಕ್ಕಲ್ಲ, ವ್ಯಕ್ತಿಗಲ್ಲ, ದ್ವೇಷಕ್ಕೆ!
ವಾರದಲ್ಲಿ ಮೂರು ದಿನಗಳಾದರೂ ನಗುತ್ತ ಇರಬೇಕು - ನಿನ್ನೆ, ಇವತ್ತು ಮತ್ತು ನಾಳೆ
ಸೂರ್ಯನೂ ತಂಣಗಾಗುತ್ತಿದ್ದ, ಅವನಿಗೊಂದು ಹೆಂಣು ಗಂಟು ಬಿದ್ದಿದ್ದರೆ.
ಅಭಿಪ್ರಾಯಗಳು ಮಕ್ಕಳಿದ್ದಂತೆ - ನಮ್ಮವು ನಮಗೇ ಚೆಂದ
ಆಳವು ಕಡಿಮೆಯಾದಂತೆಲ್ಲಾ ಉದ್ದದಲ್ಲಿ ಜಾಸ್ತಿಯಾಗುವಂತಹ ರಬ್ಬರ್ ನಂತಹುದಕ್ಕೆ ಭಾಷಣ ಎಂದು ಹೆಸರು
MA ಮತ್ತು MLAಗಳ ನಡುವಿನ ವ್ಯತ್ಯಾಸವೇನು?
> ಎಮ್ಮೆ ನಿಂತಲ್ಲೇ ಮೇಯುತ್ತದೆ, ಎಂಎಲ್‌ಎ ಊರೆಲ್ಲ ಮೇಯುತ್ತಾನೆ
"ಒಳ್ಳೆಯವರು ಎನ್ನಿ ಸಿಕೊಂಡವರು ಇನ್ನೂ ಒಳ್ಳೆಯವರಾಗೇ ಇದ್ದಾರೆ ಅಂದರೆ ಅವರಿಗೆ ಇನ್ನೂ ಭ್ರಷ್ಟರಾಗುವ ಅವಕಾಶ ಸಿಕ್ಕಿಲ್ಲ ಎಂಬುದೇ ಕಾರಣ" ಎನ್ನುವ ಸಾಲು ನೋಡಿ, The Dark Knight ಚಿತ್ರದ You either die a hero, or you live long enough to see yourself become the villain ಅನ್ನುವ ಸಾಲು ನೆನಪಾಗುವುದಿಲ್ಲವೇ ?

ಕನ್ನಡದಲ್ಲಿ ಬರೆಯುವುದು ಓದುವುದು ಅಷ್ಟೇನೂ ಗೌರವದ ಕೆಲಸವಲ್ಲ ಎಂಬ ಭಾವನೆ ಬೀಚಿಯವರಿಗೆ ಇತ್ತಂತೆ. ಅವರ ಹೆಂಡತಿ, “ಮಧ್ಯಾಹ್ನ ಕಳೆಯುವುದೇ ಕಷ್ಟವಾಗುತ್ತಿದೆ. ಯಾವುದಾದರೂ ಕನ್ನಡ ಪುಸ್ತಕ ತಂದುಕೊಡಿ” ಎಂದು ಒಂದು ದಿನ ಗಂಡನನ್ನು ಕೇಳಿದರಂತೆ . ಇಂಗ್ಲಿಷ್ ಪುಸ್ತಕ ಪ್ರೇಮಿಯಾಗಿದ್ದ ಬೀchi ಅಲ್ಪ ಸ್ವಲ್ಪ ತಿರಸ್ಕಾರದ ಭಾವದಿಂದಲೇ ಒಂದು ಪುಸ್ತಕದ ಅಂಗಡಿಗೆ ಹೋದರಂತೆ. “ಒಂದು ಕನ್ನಡದ ಪುಸ್ತಕ ಕೊಡಿ. ಯಾವುದಾದರೂ ಚಿಂತೆಯಿಲ್ಲ. ರೈಲ್ವೆ ಟೈಮ್ ಟೇಬಲ್ ಪುಸ್ತಕ ಕೊಟ್ಟರೂ ಅಡ್ಡಿಯಿಲ್ಲ. ಆದರೆ ಕನ್ನಡದಲ್ಲಿ ಅಚ್ಚಾಗಿರಬೇಕು” ಎಂದರಂತೆ! ಅಂಗಡಿಯವರು ಸಾಹಿತ್ಯ ಪ್ರೇಮಿಯೇ, ಅವರು ಕೊಟ್ಟದ್ದು ಅನಕೃ ಅವರ ಸಂಧ್ಯಾರಾಗ. ಮರುದಿನ ರೈಲು ಪ್ರಯಾಣವಿತ್ತಂತೆ. ಕನ್ನಡ ಪುಸ್ತಕ ಓದಿದರೆ ಮರ್ಯಾದೆ ಹೋದೀತು ಅಂತ ಬೀಚಿ, ‘ಇಲಸ್ಟ್ರೇಟೆಡ್ ವೀಕ್ಲಿ’ ಮ್ಯಾಗಝಿನ್‌ನೊಳಗೆ ಕನ್ನಡ ಪುಸ್ತಕವನ್ನಿಟ್ಟುಕೊಂಡು ಓದಲಾರಂಭಿಸಿದರಂತೆ. ಕನ್ನಡಿಗರು ಈ ಪುಸ್ತಕಕ್ಕೆ ಥ್ಯಾಂಕ್ಸ್ ಹೇಳಲೇ ಬೇಕು. ಥಳುಕು ಬಳುಕಿನ ಹುಡುಗಿಗೆ ಪ್ರಾಯದ ಯುವಕ ಬೀಳುವಂತೆ ಆ ಪುಸ್ತಕಕ್ಕೆ ಬಿದ್ದ ಬೀchi ಸದ್ದಿಲ್ಲದೆ ಕನ್ನಡದ ಪ್ರೇಮಿಯಾದರು. ಆಮೇಲೆ ಅದೇ ಅನಕೃ ಅವರ ಜೊತೆ ಹಳ್ಳಿ ಹಳ್ಳಿಗಳಿಗೆ ತಿರುಗಿ ಯಾವುದೇ ಫಲಾಪೇಕ್ಷೆಯಿಲ್ಲದೆ ಕನ್ನಡ ಪರ ಜಾಗೃತಿ ಮೂಡಿಸುವ ಭಾಷಣಗಳನ್ನೂ ಮಾಡಿದರು. "ತಂದೆ ಮಾಡಿದಂತೆ ಮಗನೂ ತಪ್ಪು ಮಾಡುತ್ತಾನೆ. ತಪ್ಪು ಮಾಡುವುದು ಮಾನವ ಜನ್ಮಸಿದ್ದವಾದ ಹಕ್ಕು. ಆದರೆ ತಂದೆ ಮಾಡಿದ ತಪ್ಪನ್ನೇ ಮಗನೂ ಏಕೆ ಮಾಡಬೇಕು? ಈ ಎಬಡಾ ಜಗತ್ತಿನಲ್ಲಿ ತಪ್ಪುಗಳಿಗೂ ಬಡತನವೇ? ತಪ್ಪುಗಳಲ್ಲಿ ವೈವಿಧ್ಯತೆ ಇಲ್ಲವೇ, ಮಾಡಬೇಕೆನ್ನುವ ಮಗನಿಗೆ? " ಎಂಬ ತನ್ನದೇ ಸಾಲುಗಳಂತೆ ಯಾರನ್ನೂ ಅನುಕರಿಸದೆ ತಮ್ಮದೇ ಆದ ಬೀಚಿ ಸ್ಟೈಲ್ ಸೃಷ್ಟಿ ಮಾಡಿದರು.

ಮಾತ್ರೆಗಳು, ಹುಚ್ಚು ಹುರುಳು, ಮಾತನಾಡುವ ದೇವರುಗಳು , ಆರು ಏಳು ಸ್ತ್ರೀ ಸೌಖ್ಯ, ಕನ್ನಡ ಎಮ್ಮೆ, ತಿಂಮಿಕ್ಷನರಿ ಇವೆಲ್ಲ ಅವರ ಅತ್ತ್ಯುತ್ತಮ ಕೃತಿಗಳು. ಬೆಳ್ಳಿ ತಿಂಮ ೧೦೮ ಮತ್ತು ತಿಂಮನ ತಲೆ ಅಲ್ಲಿಲ್ಲಿಂದ ಆಯ್ದ ಜೋಕುಗಳ ಸಂಗ್ರಹಗಳು. ಜೋಕು ಸ್ವಂತದ್ದಲ್ಲವಾದರೂ ನಿರೂಪಣೆಯ ಸೊಗಸಿಗೆ ಮರುಳಾಗಲೇ ಬೇಕು. ತಿಂಮಿಕ್ಷನರಿ ತಮಾಷೆಯ, ಅಣಕದ ಡಿಕ್ಷನರಿ, ನಾ ಕಸ್ತೂರಿಯವರ ಅನರ್ಥಕೋಶ ಇದ್ದಂತೆ. ಅದರಲ್ಲಿ ನನಗೆ ನೆನಪಿರುವುದು "ಇತ್ಯಾದಿ" ಶಬ್ದದ ಡೆಫಿನಿಷನ್. ಇತ್ಯಾದಿ - ನನಗೆ ತಿಳಿದಿರುವುದು ಇಷ್ಟೇ ಆದರೂ, ‘ಇನ್ನೂ ಹೆಚ್ಚು ತಿಳಿದಿದೆ ಎಂದು ತಿಳಿಯಿರಿ’ ಎನ್ನುವ ಮಂತ್ರ. ಮತ್ತೊಂದು : ಸಿಗರೇಟು - ಸದ್ಬ್ರಾಹ್ಮಣ ಕುಟುಂಬಕ್ಕೆ ಸೇರಿದುದು - ದಹನವೇ ಇದಕ್ಕೆ ಅಂತ್ಯ ಸಂಸ್ಕಾರ. ನನಗೆ ನೆನಪಿರುವ ಮತ್ತೊಂದು ಡೆಫಿನಿಷನ್ ತುಪ್ಪ ಶಬ್ದದ್ದು. ಇದು ನಾ ಕಸ್ತೂರಿಯವರ ಅನರ್ಥಕೋಶದ್ದೋ ಬೀಚಿಯವರ ತಿಂಮಿಕ್ಷನರಿಯದ್ದೋ ನೆನಪಾಗುತ್ತಿಲ್ಲ . ತುಪ್ಪ - ಪಕ್ಕದಲ್ಲಿ ಊಟಕ್ಕೆ ಕೂತವನ ತಟ್ಟೆಗೆ ಚಮಚ ಬಡಿದಾಗ ಉಂಟಾಗುವ ಶಬ್ದ. ಈ ತುಪ್ಪದ ಡೆಫಿನಿಷನ್ ಬಹುಕಾಲ ನನ್ನ ಪರಮಪ್ರಿಯ ಜೋಕ್ ಆಗಿತ್ತು ಇದನ್ನು ಒಂದಷ್ಟು ಗೆಳೆಯರಿಗೆ ಹೇಳಿ ಅವರು ಅರ್ಥವಾಗದೆ ಕಣ್ಣು ಪಿಳಿ ಪಿಳಿ ಮಾಡಿದಾಗ ಪೆಚ್ಚಾದದ್ದೂ ಇದೆ!

ಬೀಚಿ ಒಂದಷ್ಟು ಕಾದಂಬರಿಗಳನ್ನೂ ಬರೆದಿದ್ದಾರೆ. ತಮ್ಮ ಆತ್ಮಕಥನವನ್ನು ‘ನನ್ನ ಭಯಾಗ್ರಫಿ’ ಅಂದಿದ್ದಾರೆ! ಯಾವ ಜೋಕ್ ಕೇಳಿದರೂ ಇದು ಬೀಚಿ ಜೋಕ್ ಅನ್ನಿಸುವಷ್ಟು ಹುಲುಸಾದ ಹಾಸ್ಯದ ಬೆಳೆ ತೆಗೆದಿದ್ದಾರೆ ಅನ್ನುವುದು ಅವರ ಹೆಗ್ಗಳಿಕೆ. ಇದನ್ನು ಅವರ ಜೋಕ್ ಗಳೊಂದಿಗೇ ಮುಗಿಸುತ್ತೇನೆ, ಅವರ ಯಾವ ಪುಸ್ತಕ ಸಿಕ್ಕರೂ ಚಪ್ಪರಿಸಿಕೊಂಡು ಓದಿ ಅನ್ನುವ ಸಲಹೆಯೊಂದಿಗೆ.
********************************************
ಬೀchiಯವರನ್ನು ಒಬ್ಬ ತೆಲುಗು ಸಾಹಿತಿ ಕೇಳಿದರಂತೆ: ನಾನು ನನ್ನ ಪುಸ್ತಕಗಳ ಸೆಟ್‍ ಕಳಿಸುತ್ತೇನೆ.ನೀವು ನಿಮ್ಮ ಪುಸ್ತಕಗಳ ಸೆಟ್‍ ನನಗೆ ಕಳಿಸಿ.
ಬೀchi : ಎರಡೂ ಕಡೆಯಿಂದ ಅದು ನನಗೇ ಲಾಸು
**********************************************
ಗುರುಗಳು ತಮ್ಮ ಶಿಷ್ಯ ತಿಮ್ಮನನ್ನು ಪ್ರಶ್ನಿಸಿದರು ನಮ್ಮ ದೇಶದ ಸಮಸ್ಯೆಗಳಿಗೆಲ್ಲಾ ಏನು ಕಾರಣ? "ನಮ್ಮ ರಾಜಕೀಯ ನೇತಾರರು", ಉತ್ತರಿಸಿದ ತಿಮ್ಮ. "ಸರಿ, ಈ ಸಮಸ್ಯೆಗೆ ಪರಿಹಾರವೇನಾದರು ಇದೆಯಾ?" ಕೇಳಿದರು ಗುರುಗಳು. "ಬಹಳ ಸರಳ ಉಪಾಯವಿದೆ ಗುರುಗಳೆ" ಹೇಳಿದ ತಿಮ್ಮ. ಆದೇನೆಂದು ಬೊಗಳು ಎಂದರು ಗುರುಗಳು."ಏನಿಲ್ಲಾ ಗುರುಗಳೆ, ನಮ್ಮ ನೇತಾರರೆನ್ನೆಲ್ಲಾ ಮೂರು ಬಾರಿ ನೀರಿನಲ್ಲಿ ಅದ್ದಿ ಎರಡು ಸಾರಿ ಮಾತ್ರ ಹೊರಗೆ ತೆಗೆಯಬೇಕು" ಥಟ್ಟನೆ ಹೇಳಿದ ತಿಂಮ್ಮ ಬ್ರಹ್ಮ.
*************************************************
ಬೆಳಗಿನ ಜಾವದಲ್ಲಿ ಎದ್ದು ತಿಂಮ ಕಾಲ್ನಡಿಗೆಯಲ್ಲಿ ಹೊರಟಿದ್ದ. ಊರ ಹೊರಗೆ ಕೊಂಚ ದೂರ ಸಾಗಿದ ಮೇಲೆ ಗ್ಯಾಸ್ ಪ್ಲಾಂಟಿನ ಬಸ್ಸೊಂದು ಹಿಂದೆ ಬಂದಿತು.
ಪರಿಚಿತ ಡ್ರೈವರನಿದ್ದಕಾರಣ ಮೋಟಾರು ನಿಲ್ಲಿಸಿ ತಿಂಮನನ್ನು ಮಾತಾಡಿಸಿದ.
"ಹಳ್ಳಿಯವರಿಗೂ ನಡೆಯೋದಾ? ಬಾರೋ ತಿಂಮ ಮೋಟರಿನಲ್ಲಿ, ಹಳ್ಳಿಯಲ್ಲಿ ನಿನ್ನನ್ನು ಇಳಿಸುತ್ತೇನೆ."
"ಇಲ್ಲ, ನೀವು ಹೋಗಿ. ನಾನು ನಡದೇ ಬರುತ್ತೇನೆ."
"ಏಕೋ? "
"ಇಂದು ನಾನು ಹಳ್ಳಿಗೆ ಹೋಗಲೇಬೇಕು. ಕೊಂಚ ಅವಸರವಿದೆ. "

2 comments:

  1. ಸರ್, ನಾನೂ ಕೂಡ ಬೇಚಿ ಅವರ ಬರಹಗಳ ಅಭಿಮಾನಿ, ಬೀಚಿ ಅವರ ಪುಸ್ತಕ ಸಂಗ್ರಹ ಮಾಡುತ್ತಿದ್ದೇನೆ. ಬೀಚಿ ಬರೆದ "ಆರಿದ ಚಹಾ" ನನ್ನ ಮೆಚ್ಚಿನ ಕಾದಂಬರಿ.

    ReplyDelete
  2. ಸರ್ ಬೀಚಿರವರ ದಾಸಕೂಟ ನನ್ನ ಮೆಚ್ಚಿನ ಕಾದಂಬರಿ

    ReplyDelete