Sunday 9 September 2018

ಚಲನಚಿತ್ರಗಳಾಗಬೇಕಾದ/ಆಗಬಹುದಾದ ಪುಸ್ತಕಗಳು

ನಮ್ಮಲ್ಲಿ ಕಾದಂಬರಿ ಆಧಾರಿತ ಸಿನೆಮಾಗಳ ಸಂಖ್ಯೆ ಕಡಮೆಯಾಗುತ್ತಿದೆ ಎಂಬ ಮಾತು ಆಗಾಗ ಕೇಳಿಬರುತ್ತಿರುತ್ತದೆ. ದೊರೆ ಭಗವಾನ್, ಪುಟ್ಟಣ್ಣ , ಸಿದ್ದಲಿಂಗಯ್ಯ, ಫಣಿ ರಾಮಚಂದ್ರ ಇವರೆಲ್ಲ ಇಂತಹಾ ಸಾಕಷ್ಟು ಚಿತ್ರಗಳನ್ನು ಮಾಡಿರುವುದು ನಮಗೆ ಗೊತ್ತೇ ಇದೆ.
ಇಷ್ಟೇ ಹೇಳಿಬಿಡುವ ಬದಲು ಚಲನಚಿತ್ರಗಳಾಗಬೇಕಾದ/ಆಗಬಹುದಾದ, ದೃಶ್ಯರೂಪದಲ್ಲಿ ಬರುವ ಅಂತಸ್ಸತ್ವ/ಕಸುವುಳ್ಳ ಕಾದಂಬರಿಗಳ ಒಂದು ಪಟ್ಟಿ ಮಾಡಿ ಹಾಕಿದರೆ ಹೇಗೆ ಎಂಬ ಯೋಚನೆ ಬಂತು. ತರಾಸು, ಗಣೇಶಯ್ಯ ಮುಂತಾದವರ ಕೃತಿಗಳು ಈ ನಿಟ್ಟಿನಲ್ಲಿ ಕೇಳಿಬಂದಿರುವ ಈಗಾಗಲೇ ಸಾಕಷ್ಟು ಪ್ರಸಿದ್ಧವಾಗಿರುವ ಹೆಸರುಗಳು. ಇಂಥವು ಇನ್ನಷ್ಟು ಇರಬಹುದು, ಹೊಚ್ಚ ಹೊಸ ವಸ್ತು ಇರುವಂಥವು, ಇರುವ ವಸ್ತುವನ್ನೇ ಬೇರೆ ರೀತಿ ನಿರೂಪಿಸಿದವು, ನಮ್ಮ ನಾಡಿಗೆ ವಿಶಿಷ್ಟವಾದ ಆದರೆ ಸಿನಿಮೀಯವಾದ ಕಥೆಗಳನ್ನು ಹೇಳುವವು , ಕುತೂಹಲ ಕೆರಳಿಸುವವು, ಸ್ವಲ್ಪ ಬದಲಾಯಿಸಿದರೆ ಒಳ್ಳೆ ಚಿತ್ರಕಥೆಯಾಗಬಲ್ಲವು, ಹಲವರು ಓದಿಲ್ಲದೇ ಇರುವವು, ನಿಮಗೆ ಮಾತ್ರ ಗೊತ್ತಿರುವವು ಹೀಗೆ ಎಷ್ಟೂ ಇರಬಹುದು. ಒಟ್ಟಿನಲ್ಲಿ ಸಿನೆಮಾಕ್ಕೆ ಆಗುವಂತೆ ಇದ್ದರಾಯಿತು. ನೀವು ಓದಿರುವ ಇಂತಹಾ ಕಥೆ/ಕಾದಂಬರಿಗಳನ್ನು ಸೂಚಿಸಿ, ಅದನ್ನು ಯಾಕೆ ಶಿಫಾರಸುಮಾಡುತ್ತೀರಿ ಅಂತಲೂ ತಿಳಿಸಿದರೆ ಒಳ್ಳೆಯದು. ತಡವೇಕೆ ? ಪಟ್ಟಿ ತಯಾರು ಮಾಡೋಣ ! ನಿಮ್ಮ ಸಲಹೆ ಸೂಚನೆಗಳನ್ನು ಶುರುಮಾಡಿ ಅಂತ ನಾನೊಬ್ಬ ಪುಸ್ತಕಪ್ರೇಮಿ ಫೇಸ್ಬುಕ್ ಸಮೂಹದಲ್ಲಿ ಕೇಳಿದಾಗ ಬಂದ ಪ್ರತಿಕ್ರಿಯೆಗಳನ್ನು ಕೆಳಗೆ ಕೊಟ್ಟಿದ್ದೇನೆ:

ಸೂಚಿಸಲ್ಪಟ್ಟ ಕಾದಂಬರಿ/ಕಥೆ/ಪುಸ್ತಕಗಳ ಪಟ್ಟಿ :
  1. ಆನಂದ ಮಠ - ಬಂಕಿಮಚಂದ್ರ ಚಟರ್ಜಿ.
  2. ವಿಜಯ ಸಾಸನೂರ ಮತ್ತು ಅವರ ಪತ್ನಿ ಜಂಟಿಯಾಗಿ ಬರೆದ ಅಷ್ಟಪಾದ ಎಂಬ ಥ್ರಿಲ್ಲರ್.
  3. ತೆಲುಗಿನಲ್ಲಿ ಸೂರ್ಯದೇವರ ರಾಮಮೋಹನರಾಯ ಬರೆದ, ಕನ್ನಡದಲ್ಲಿ ಅನ್ವೇಷಿ ಎಂದು ಅನುವಾದಿತವಾದ ಕಾದಂಬರಿ. 
  4. ಬಿ ವಿ ಅನಂತರಾಮ್ ಅವರ, ಮಹೇಶ ಅಲಿಯಾಸ್ K7 ನಾಯಕನಾಗಿರುವ ಕಾದಂಬರಿಗಳು 
  5. ನೇಮಿಚಂದ್ರ ಅವರ ಯಾದವಶೇಮ್ 
  6. ಸಂದೀಪ ನಾಯಕರ ಗೋಡೆಗೆ ಬರೆದ ನವಿಲು ಕಥಾಸಂಕಲನದ ಇಲ್ಲಿ ಬಂದೆವು ಸುಮ್ಮನೆ ಕಥೆ 
  7. ನಾಗೇಶ ಕುಮಾರ್ ಸಿ ಎಸ್ ಅವರ ನಾಳೆಯನ್ನು ಗೆದ್ದವನು ಕಾದಂಬರಿ
  8. ತ ರಾ ಸು ಅವರ ಚಿತ್ರದುರ್ಗದ ಸರಣಿ (ಕಂಬನಿಯ ಕುಯಿಲಿನಿಂದ ದುರ್ಗಾಸ್ತಮಾನದ ತನಕ) 
  9. ತೇಜಸ್ವಿ ಅವರ ನಿಗೂಢ ಮನುಷ್ಯರು,ಜುಗಾರಿ ಕ್ರಾಸ್,ಕರ್ವಾಲೋ 
  10. ಶಂಕರ ಮೊಕಾಶಿ ಪುಣೇಕರರ "ಅವಧೇಶ್ವರಿ"
  11. ಯಂಡಮೂರಿಯವರ 'ಪವಿತ್ರ ಯುದ್ಧ' 
  12. ಕೃಪಾಕರ & ಸೇನಾನಿಯವರ 'ಸೆರೆಯಲ್ಲಿ ಹದಿನಾಲ್ಕು ದಿನಗಳು' 
  13. ರವಿ ಬೆಳಗೆರೆಯವರ 'ಹೇಳಿ ಹೋಗು ಕಾರಣ' 
  14. ಮಾಸ್ತಿ ಅವರ ಚೆನ್ನ ಬಸವನಾಯಕ ಮತ್ತು ಚಿಕವೀರ ರಾಜೇಂದ್ರ ಕಾದಂಬರಿಗಳು 
  15. ನಾ ಡಿಸೋಜ ಅವರ "ಕುಂಜಾಲು ಕಣಿವೆಯ ಕೆಂಪು ಹೂವು "
  16. ಕೆ. ಎನ್. ಗಣೇಶಯ್ಯ ಅವರ ಕಥೆ ಕಾದಂಬರಿಗಳು - ಕಪಿಲಿಪಿಸಾರ, ಶಿಲಾಕುಲವಲಸೆ, ಬಳ್ಳಿಕಾಳ ಬೆಳ್ಳಿ, ಕನಕಮುಸುಕು, ಮೂಕಧಾತು ಇತ್ಯಾದಿ
  17. ಶಂಕರ ಮೊಕಾಶಿ ಪುಣೇಕರರ ಅವಧೇಶ್ವರಿ
  18. ವ್ಯಾಸರಾವ್ ನಿಂಜೂರರ 'ತೆಂಕನಿಡಿಯೂರಿನ ಕುಳವಾರಿಗಳು', 'ಶ್ರೀ ಚಾಮುಂಡೇಶ್ವರಿ ಭವನ' 
  19. ಕೆದಂಬಾಡಿ ಜತ್ತಪ್ಪ ರೈಗಳ 'ಬೇಟೆಯ ನೆನಪು' 'ಈಡೊಂದು ಹುಲಿ ಎರಡು' ಕೃತಿಗಳು 
  20. ಶಿವರಾಮ ಕಾರಂತರ ಅಳಿದ ಮೇಲೆ,ಕುಡಿಯರ ಕೂಸು, ಧರ್ಮರಾಯನ ಸಂಸಾರ
  21. ಯಶವಂತ ಚಿತ್ತಾಲರ ಪುರುಷೋತ್ತಮ,ಶಿಕಾರಿ, ಛೇದ 
  22. ರವಿ ಬೆಳಗೆರೆ ಅವರು ಅನುವಾದಿಸಿರುವ 'ಹಿಮಾಲಯನ್ ಬ್ಲಂಡರ್' 
  23. ಮಂಜು ಬನವಾಸೆ ಅವರ 'ಸೋಲು ಗೆದ್ದವನದ್ದು!' 
  24. ವಿಜಯ ಸಾಸನೂರ ಅವರ ಫ್ಯಾಂಟಮ್
  25. ಸುದರ್ಶನ‌‌ ದೇಸಾಯಿ ಅವರ ಹಳದಿ ಚೇಳು
  26. ರವಿ ಬೆಳಗೆರೆಯವರ ಒಮರ್ಟಾ 
  27. ತಿರುಮಲೇಶರ 'ಬುಜ್ ' ಸಣ್ಣ ಕತೆ
  28. ಗೋಕಾಕರ ಸಮರಸವೇ ಜೀವನ 
  29. ಭೈರಪ್ಪರ ಬಿತ್ತಿ
  30. ಕುವೆಂಪುರವರ ನೆನಪಿನ ದೋಣಿಯಲ್ಲಿ, 
  31. ತೇಜಸ್ಲಿಯವರ ಅಣ್ಞನ ನೆನಪು
  32. ಗಜಾನನ ಶರ್ಮ ಅವರ ವಿಶ್ವೇಶ್ವರಯ್ಯರವರ ಗಾಥೆ
  33. ಕೃಷ್ಣರಾಜೇಂದ್ರ ಒಡೆಯರ ಕಥೆ 
  34. ಮಲ್ಲಾದಿ ವೆಂಕಟಕೃಷ್ಣಮೂರ್ತಿಯವರ " ಸುಲಗ್ನ ಸಾವಧಾನ" 
  35. ನಾ ಡಿಸೋಜ ಅವರ ಸುಣ್ಣ ಬಳಿದ ಸಮಾಧಿಗಳು
  36. Shivaram Kaansen ಅವರ  "ಉಪಸಂಸ್ಕಾರ" ಕಥೆ 
  37. ಅತಿ ಮಧುರವೀ ಸ್ನೇಹ
  38. ಶ್ರೀನಿವಾಸ ವೈದ್ಯ ಅವರ ತ್ರಯಸ್ಥ ಕತೆ
  39. ದೇವುಡು ಅವರ  ಮಹಾಬ್ರಾಹ್ಮಣ ಕಾದಂಬರಿ

ವಿವರಗಳು, ಸೂಚಿಸಿದವರ ಹೆಸರುಗಳ ಜೊತೆ :
Gopalkrishna Bhat - ಆನಂದ ಮಠ - ಬಂಕಿಮಚಂದ್ರ ಚಟರ್ಜಿ. ಗತಿಸಿ ಹೋದ ಕಾಲದ ಹೇಳದೆ ಉಳಿದ ಕಥೆಯೆಂದು ಅನ್ನಿಸಿತು

Ganesh Bhat Nelemav -  ವಿಜಯ ಸಾಸನೂರ ಮತ್ತು ಅವರ ಪತ್ನಿ ಜಂಟಿಯಾಗಿ ಬರೆದ ಅಷ್ಟಪಾದ ಎಂಬ ಥ್ರಿಲ್ಲರ್.
ತೆಲುಗಿನಲ್ಲಿ ಸೂರ್ಯದೇವರ ರಾಮಮೋಹನರಾಯ ಬರೆದ, ಕನ್ನಡದಲ್ಲಿ ಅನ್ವೇಷಿ ಎಂದು ಅನುವಾದಿತವಾದ ಕಾದಂಬರಿ. ( ಇದರ ಅಂತ್ಯ ನನಗೆ ಇಷ್ಟವಾಗಲಿಲ್ಲ. ಅತಿರೇಕ ಎನಿಸಿತು. ಸಿನಿಮಾ ಮಾಡಿದರೆ ಅಂತ್ಯ ಬದಲಿಸುವುದೊಳಿತು.)
ಬಿ ವಿ ಅನಂತರಾಮ್ ಅವರ, ಮಹೇಶ ಅಲಿಯಾಸ್ K7 ನಾಯಕನಾಗಿರುವ ಕಾದಂಬರಿಗಳು ಒಳ್ಳೆಯ ಬಾಂಡ್ ಶೈಲಿಯ ಸಿನಿಮಾಗಳಾಗಬಲ್ಲವು. ಜನ ಗೆಲ್ಲಿಸಿದರೆ ಕನ್ನಡದಲ್ಲೂ ಬಾಂಡ್ ರೀತಿಯ ಫ್ರಾಂಚೈಸ್ ಶುರು ಮಾಡಲು ಸಾಧ್ಯವಾಗಬಹುದೇನೋ
(Sharath Bhat Seraje  ಅವರ ಪ್ರತಿಕ್ರಿಯೆ : ಒಳ್ಳೆಯ ಸಲಹೆಗಳು.
ಬಿ ವಿ ಅನಂತರಾಮ್ ಅವರದ್ದರ ಕೊರತೆಯೆಂದರೆ ಐದೇ ಕಾದಂಬರಿಗಳ ಸರಕಿಟ್ಟುಕೊಂಡು ಐವತ್ತು ಬರೆದಿದ್ದಾರೆ ಅನಿಸುತ್ತದೆ. ಹೀಗಾಗಿ ಅವರ ಇನ್ನೂರಕ್ಕೂ ಹೆಚ್ಚು ಕಾದಂಬರಿಗಳಲ್ಲಿ ಒಂದು ಹತ್ತು ಉತ್ತಮವಾದವುಗಳನ್ನು ಕಲೆಹಾಕಿ, ಅವುಗಳಲ್ಲಿ ಮೂರು ನಾಲ್ಕನ್ನು ಸೇರಿಸಿ ಒಂದು ಚಿತ್ರ, ಇನ್ನೊಂದು ನಾಲ್ಕನ್ನು ಸೇರಿಸಿ ಮತ್ತೊಂದು ಹೀಗೆ ಮಾಡಬಹುದು. ಈಗಾಗಲೇ ಬಾಂಡ್ ಮತ್ತು ಮಿಷನ್ ಇಂಪಾಸಿಬಲ್ಗಳೆಲ್ಲ ಸೇರಿ ಮೂವ್ವತ್ತು ಚಿತ್ರಗಳು ಬಂದಿರುವುದರಿಂದ ಅವುಗಳಿಗೆ ಹೆಚ್ಚು ಹೋಲಿಕೆಯಾಗದಂತೆ ಮಾಡುವುದು ಇನ್ನೊಂದು ಸವಾಲು, ಕಡಮೆ ಬಜೆಟ್ನಲ್ಲಿ ಮಾಡುವುದು ಇನ್ನೊಂದು ಸವಾಲು. ರಾಝಿಯ ತರ ಮಾಡುವುದಾದರೆ ಆಗಬಹುದು. ಅನಂತರಾಮ್ ಅವರು ಡಿಟೆಕ್ಟಿವ್ ಮಹೇಂದ್ರನ ಪಾತ್ರ ಇಟ್ಟುಕೊಂಡೂ ಬರೆದಿದ್ದಾರೆ , ಅಲ್ಲೂ ಕೆಲವು ಸಸ್ಪೆನ್ಸ್ ಥ್ರಿಲ್ಲರ್ಗಳಿರಬಹುದು. ಒಟ್ಟಿನಲ್ಲಿ ಸಂಖ್ಯಾಬಾಹುಳ್ಯವೇ ತೊಡಕು , ಅಷ್ಟರಲ್ಲಿ ಸತ್ತ್ವ ಇರುವವು ಯಾವುವು ಅಂತ ಹುಡುಕುವುದೇ ಒಂದು ಕೆಲಸ.
Ganesh Bhat Nelemav ಅವರ ಪ್ರತಿಕ್ರಿಯೆ :ಅಂತಹ ಸಮಸ್ಯೆ ಎದುರಾದರೆ ಫ್ಲೆಮಿಂಗ್ ಸೊಸೈಟಿ ಮಾಡಿದಂತೆ ನುರಿತ ಲೇಖಕರಿಂದ ಕಥೆಗಳನ್ನು ಮುಂದುವರೆಸಿ ಚಿತ್ರಗಳನ್ನು ಮಾಡಬಹುದು. ಆದರೆ ಕನ್ನಡದ ಬಜೆಟ್ ಗಮನಿದರೆ ಇವೆಲ್ಲ ಸರ್ಕಸ್ ಮಾಡಿದಂತಾಗುತ್ತದೆ. ಅಲ್ಲದೇ ಕನ್ನಡದಲ್ಲಿ ಸದ್ಯಕ್ಕೆ ಅಂತಹ ಥ್ರಿಲ್ಲರ್ ಲೇಖರೂ ಇಲ್ಲ.)
.
Shridhar Nayak  - ಯಶವಂತ ಚಿತ್ತಾಲರ ಪುರುಷೋತ್ತಮ ಒಳ್ಳೆಯ ಸಿನೇಮಾ ಆಗಬಲ್ಲದು

ವಿಕಾಸ್ ಹೆಗ್ಡೆ - ನಾನು ಯಾದವಶೇಮ್ ಕಾದಂಬರಿ ಓದಿದಾಗ ಅದು ಸಿನೆಮಾ‌ ಆದರೆ ಹೇಗಿರುತ್ತದೆ‌ ಅಂತ ಕನಸು ಕಟ್ಟಿದ್ದೆ. ಒಂದು ಸ್ವಲ್ಪ ಚಿತ್ರಕತೆ ಕೂಡ ಬರೆದಿಟ್ಟಿದ್ದೆ. ಹಳೇ ಬೆಂಗಳೂರು ಗೋರಿಪಾಳ್ಯದಿಂದ ಹಿಡಿದು ಇಸ್ರೇಲ್, ಅಮೆರಿಕಾ ಎಲ್ಲಾ ಕಡೆ ಶೂಟಿಂಗ್ ಮಾಡಿದರೆ ಹಾಲಿವುಡ್ ಮಟ್ಟದ ಸಿನೆಮಾ ಆಗಬಹುದು. 😄 ಲೇಖಕಿ‌ ಪಾತ್ರಕ್ಕೆ ರಮ್ಯ with ಕನ್ನಡಕ ಫಿಕ್ಸ್. 😄

Guruganesh Bhat - ನನಗೊಂದು ಕಥೆ ನೆನಪಾಗುತ್ತಿದೆ, ಸಂದೀಪ ನಾಯಕರ ಗೋಡೆಗೆ ಬರೆದ ನವಿಲು ಕಥಾಸಂಕಲನದ ಇಲ್ಲಿ ಬಂದೆವು ಸುಮ್ಮನೆ ಕಥೆ ಓದಿ ಇದನ್ನು ಪರದೆಯ ಮೇಲೆ ನೋಡಬೇಕು ಅನಿಸಿತ್ತು.

ಮಂಜುನಾಥ ಬ್ಯಾಳಿ - ಯಶವಂತ ಚಿತ್ತಾಲರ ಶಿಕಾರಿ ಮಾಡಬೇಕು ಸರ್
(ಪ್ರತಿಕ್ರಿಯೆಗಳು : Sharath Bhat Seraje - ತುಂಬಾ ಕಷ್ಟ, ಓದುವಾಗಿನ ಅದ್ಭುತ ಅನುಭವ ದೃಶ್ಯ ರೂಪದಲ್ಲಿ ಮೂಡೀತೆಂದು ಹೇಳಲಾಗದು , ಶಿಕಾರಿ ನಾಟಕ ನೋಡಿದಾಗ ಬೋರು ಹೊಡೆಸುತ್ತಿದೆ ಅನ್ನಿಸಿತ್ತು
Gaurish Akki - ಶಿಕಾರಿ ಧಾರಾವಾಹಿ ಆಗಿದೆ‌.ಅದರೆ ಕಾದಂಬರಿಯ ಪರಿಣಾಮ ಇರಲಿಲ್ಲ
ಮಂಜುನಾಥ ಬ್ಯಾಳಿ - ಬಹಶಃ ಚಿತ್ರವಾದರೂ ಪರಿಣಾಮ ಆಗುತ್ತದೊ ಇಲ್ಲವೋ)

ನಾಗೇಶ ಕುಮಾರ್ ಸಿ ಎಸ್ - ನನ್ನ ನಾಳೆಯನ್ನು ಗೆದ್ದವನು ಕಾದಂಬರಿಯನ್ನು ನಾಗತಿಹಳ್ಳಿ ಚಂದ್ರಶೇಖರ್ ಓದಿ ಆಸಕ್ತಿ ವಹಿಸಿದ್ದರು. ಯಾಕೋ ಇನ್ನೂ ಸಮಯ ಕೂಡಿಬಂದಿಲ್ಲ

Pradeep Ks - ನಾನು yeshwanth ಚಿತ್ತಾಲ ಅವರ ಛೇದ ಓದಿದಾಗ ಹಾಗೆ ಅನಿಸಿತು. ಒಮ್ಮೆ ನಾಗಾಭರಣ avaranu ಭೇಟಿ ಆಗುವ ಅವಕಾಶ ಸಿಕ್ಕಾಗ ಅವರನ್ನು ಕೇಳಿದೆ. ಅದು ಬಾಂಬೆ ನಲ್ಲಿ ನಡೆಯುವ ಕಥೆ ಮಾಡೋದು ಕಷ್ಟ ಅಂದರು

Adarsha Um - ಯಂಡಮೂರಿಯವರ 'ಧರ್ಮ ಯುದ್ಧ' ಅನ್ನುವ ಕಾದಂಬರಿಯನ್ನು ಸಿನಿಮಾ ಮಾಡಬಹುದು ಅನ್ನಿಸುತ್ತೆ ನಂಗೆ..ಒಳ್ಳೆ ಕಮರ್ಷಿಯಲ್ ಥ್ರಿಲ್ಲಿಂಗ್ ಎಲಿಮೆಂಟ್ಸ್ ಇರೋ ಕತೆ ಅದು.
ಕೃಪಾಕರ & ಸೇನಾನಿಯವರ 'ಸೆರೆಯಲ್ಲಿ ಹದಿನಾಲ್ಕು ದಿನಗಳು' ನ Series.ಧಾರವಾಹಿ ಅಥವಾ ಸಿನಿಮಾ ಯಾವುದನ್ನಾಗಿಯೂ ಮಾಡಬಹುದು.ವೀರಪ್ಪನ್ ಪ್ರಮುಖ ಆಕರ್ಷಣೆಯಾಗ್ತಾನೆ.
ರವಿ ಬೆಳಗೆರೆಯವರ 'ಹೇಳಿ ಹೋಗು ಕಾರಣ' ಕೂಡಾ ಒಂದೊಳ್ಳೆ ಸಿನಿಮಾ ಕತೆಯಾಗಬಹುದು....
(ತೇಜಸ್ವಿಯವರ ಎಲ್ಲ ಪುಸ್ತಕಗಳನ್ನೂ ಅಂತ ಹೇಳುತ್ತಿದ್ದೆ,ಆದರೆ ಅವರ ಕೃತಿಗಳು ಸಿನಿಮಾಗಳಾಗಿವೆ,ಆಗುತ್ತಲಿವೆ)

ನಿ ಶಿ  - ಮಾಸ್ತಿ ಅವರ ಚೆನ್ನ ಬಸವನಾಯಕ ಕಾದಂಬರಿಯೇನಾದರೂ ಸಿನಿಮಾವಾಗಿ(ಕಮರ್ಷಿಯಲ್) ಮೂಡಿ ಬಂದರೆ ಕನ್ನಡ ಮಾತ್ರವಲ್ಲ ಭಾರತೀಯ ಚಿತ್ರರಂಗದಲ್ಲೆ ಒಂದು ಹೆಜ್ಜೆ ಗುರುತಾಗಿ ಉಳಿಯಬಹುದು ಅಂತ ನನ್ನ ಅನಿಸಿಕೆ.

Harsha Matadhikari -  ತ ರಾ ಸು ಅವರ ಚಿತ್ರದುರ್ಗದ ಸರಣಿ (ಕಂಬನಿಯ ಕುಯಿಲಿನಿಂದ ದುರ್ಗಾಸ್ತಮಾನದ ತನಕ) ಒಂದು ದೀರ್ಘ ದಾರಾವಾಹಿಯಾಗಬಹುದು. ಚಲನ ಚಿತ್ರಕ್ಕೆ ಅವು ಸರಿಹೊಂದುವುದಿಲ್ಲ . ಕರ್ನಾಟಕದ ನಿಜ Game Of Thrones ಅದು.
ಪೂರ್ತಿ ಓದಿಲ್ಲ ಆದರೆ ಗೋಕಾಕರ ಸಮರಸವೇ ಜೀವನ Tale of Two Cities ಅಥವಾ Le Miserables ನಂತೆ ದೀರ್ಫ ಕಾದಂಬರಿ ಸತ್ಯಜಿತ್ ರೇ ಯರ Apu Trilogy ಯಂತ ಚಿತ್ರ ಮಾಡಿ Oscar ಗೆ ಪ್ರಯತ್ನಿಸಬಹುದು
ಕರ್ನಾಟಕದಲ್ಲಿ ವ್ಯಕ್ತಿಚಿತ್ರಣ ಇಲ್ಲವೇ ಇಲ್ಲ !!
1. ಭೈರಪ್ಪರ ಬಿತ್ತಿ
2. ಕುವೆಂಪುರವರ ನೆನಪಿನ ದೋಣಿಯಲ್ಲಿ,
3. ಗಜಾನನ ಶರ್ಮ ಅವರ ವಿಶ್ವೇಶ್ವರಯ್ಯರವರ ಗಾಥೆ
4. ಕೃಷ್ಣರಾಜೇಂದ್ರ ಒಡೆಯರ ಕಥೆ (ನನ್ನ ಬಳಿ PDF ಇದೆ)
5ತೇಜಸ್ಲಿಯವರ ಅಣ್ಞನ ನೆನಪು
6. ಅನಿಲ್ ಕುಂಬ್ಳೆ - M S Dhoni ಚಿತ್ರದಂತೆ ಅದ್ಭುತವಾಗಿ ತೆಗೆದು ರಾಷ್ಟ್ರೀಯ ಮಟ್ಟದಲ್ಲಿ ಹೆಸರುಗಳಿಸಬಹುದು
7. ಜೆ. ಕಾರ್ಯಪ್ಪ ಕ. ತಿಮ್ಮಯ್ಯ ಇವರ ಬಗ್ಗೆ
8. ಭೀಮಸೇನ ಜೋಶಿಯವರ ಕಥೆ
ಇವರ ಜೀವನಚರಿತ್ರೆ ಇದ್ದರೆ ತಿಳಿಸಿ

ಶರತ್ ಭಟ್ ಸೇರಾಜೆ - Game Of Thrones ಅಂದಾಗ ನೆನಪಾಯಿತು, ಶಂಕರ ಮೊಕಾಶಿ ಪುಣೇಕರರ "ಅವಧೇಶ್ವರಿ"ಯಲ್ಲಿ ಒಂದು ಚಿತ್ರದ ಬೀಜ ಅಡಗಿದೆ, ಆದರೆ ಅದು ಈಗಿರುವಂತೆ ಬಳಸಲಾಗದು, ಹಲವು ಅನವಶ್ಯಕ ಭಾಗಗಳನ್ನು ಕತ್ತರಿಸಿ, ಒಂದು ಪಾತ್ರವನ್ನು ನಾಯಕ ಪಾತ್ರವಾಗಿಸಿ, ಕಥೆಯನ್ನು ಆ ಪಾತ್ರದ ಸುತ್ತ ತಂದು, ಒಂದೆರಡು action ದೃಶ್ಯಗಳನ್ನು ಜೋಡಿಸಿದರೆ ಒಂದೊಳ್ಳೆ ಗೇಮ್ ಆಫ್ ಥಾರ್ನ್ಸ್ ತರದ ಚಿತ್ರವಾಗಬಹುದು.

Vinayak Shanbhag - ನಾ ಡಿಸೋಜ ಅವರ "ಕುಂಜಾಲು ಕಣಿವೆಯ ಕೆಂಪು ಹೂವು " ಒಂದು ಉತ್ತಮ ಚಿತ್ರ ಆಗಬಹುದು.

Sudheer Sagar - ಕೆ. ಎನ್. ಗಣೇಶಯ್ಯ ಅವರ ಕಥೆ ಕಾದಂಬರಿಗಳು (ಕಪಿಲಿಪಿಸಾರ, ಶಿಲಾಕುಲವಲಸೆ, ಬಳ್ಳಿಕಾಳ ಬೆಳ್ಳಿ, ಕನಕಮುಸುಕು, ಮೂಕಧಾತು ಇತ್ಯಾದಿ), ಆಂಗ್ಲದ ಡ್ಯಾನ್ ಬ್ರೌನ್ ಕಾದಂಬರಿಗಳಂತೆ ಬಲು ರೋಚಕ ಸರಕು......ಇತಿಹಾಸದೊಂದಿಗೆ, ಥ್ರಿಲ್ಲಿಂಗ್ ಪತ್ತೇದಾರೀ ಅಂಶಗಳಿರುವುದರಿಂದ, ಸಮರ್ಥ ನಿರ್ದೇಶಕನ ಕೈಗೆ ಸಿಕ್ಕರೆ, ಚೆಂದದ ಸಿನಿಮಾಗಳಾಗುವುದರಲ್ಲಿ ಸಂದೇಹವಿಲ್ಲ......

ವ್ಯಾಸರಾವ್ ನಿಂಜೂರರ 'ತೆಂಕನಿಡಿಯೂರಿನ ಕುಳವಾರಿಗಳು', 'ಶ್ರೀ ಚಾಮುಂಡೇಶ್ವರಿ ಭವನ' ಕೂಡಾ, ಚಂದದ ಹಳ್ಳಿ ಪರಿಸರದ ಸಿನಿಮಾ ಆಗುವ ತಾಕತ್ತು ಹೊಂದಿವೆ........'ಓಂ ಶಾಂತಿ ಓಶಾನಾ' 'ಮಹೇಷಿಂಡೆ ಪ್ರತೀಕಾರಂ' 'ಕುಂಜಿರಾಮಾಯಣಂ' ಮುಂತಾದ ಮಲಯಾಳಂ ಸಿನಿಮಾಗಳ ತರಹ.....

ತರಾಸು ಅವರ ಚಿತ್ರದುರ್ಗದ ಸರಣಿ ಕಾದಂಬರಿಗಳಂತೂ ಚಲನಚಿತ್ರಕ್ಕೆ ಹೇಳಿ ಮಾಡಿಸಿದಂತಿವೆ....... ನಿರ್ದೇಶಕ ಸ್ಪಿಲ್ಬರ್ಗ್, ರಾಜಮೌಳಿ, ವೂಲ್ಫ್ ಗ್ಯಾಂಗ್ ಪೀಟರ್ಸನ್, ಮೆಲ್ ಗಿಬ್ಸನ್ ಮುಂತಾದವರಂತಹ ತಾಕತ್ತುಳ್ಳವನಾಗಿರಬೇಕಷ್ಟೇ........ಹಾಗಿದ್ದರೆ ಸಿನಿಮಾಗಳು ಯಶಸ್ವಿಯಾದಾವು.....

ಕೆದಂಬಾಡಿ ಜತ್ತಪ್ಪ ರೈಗಳ 'ಬೇಟೆಯ ನೆನಪು' 'ಈಡೊಂದು ಹುಲಿ ಎರಡು' ಕೃತಿಗಳೂ ಕೂಡಾ ಬಹಳ ಚಂದದ ಸರಕು.......ಸಿನಿಮಾ ಮಾಡಲು....

ರವಿ ಬೆಳಗೆರೆ ಅವರು ಅನುವಾದಿಸಿರುವ 'ಹಿಮಾಲಯನ್ ಬ್ಲಂಡರ್' ಒಂದೊಳ್ಳೇ ದೇಶಭಕ್ತಿಯ ಸಿನಿಮಾ ಆಗಬಲ್ಲುದು........ ಇದೇ ಥೀಮನ್ನಿಟ್ಟುಕೊಂಡು ಏಪ್ರಿಲ್ 2018ರಲ್ಲಿ ಪಂಜಾಬೀ ಸಿನಿಮಾ ಒಂದು ತೆರೆಕಂಡು ಯಶಸ್ವಿಯಾಗಿದೆ: "ಸುಬೇದಾರ್ ಜೋಗಿಂದರ್ ಸಿಂಗ್" ಅಂತ......

ನನ್ನ ಮಟ್ಟಿಗೆ ಹೇಳುವುದಾದರೆ: ಕನ್ನಡ ಸಿನೆಮಾ ರಂಗದಲ್ಲಿ ಓದುಗರ ಸಂಖ್ಯೆ ತಿರಾ ಕಡಿಮೆ.....ಅದರಲ್ಲೂ ಕನ್ನಡ ಓದುವವರು ಇನ್ನೂ ಕಡಿಮೆ......ಆ ಓದುವ ಕೆಲವರಲ್ಲೇ, ಸಿನಿಮಾ ಮಾಡಲು ತಮ್ಮ ಕಥೆಗಳನ್ನೇ ಆರಿಸಿಕೊಳ್ತಾರೆ......ಇನ್ನುಳಿದವರಿಗೆ ಕಲ್ಪನಾ ಶಕ್ತಿಯ ಕೊರತೆ..... ಇನ್ನು 'ಇದನ್ನು ಸಿನಿಮಾ ಮಾಡಿದರೆ ಓಡುದಿಲ್ಲ' ಅಂತ ಲೆಕ್ಕಾಚಾರ ಹಾಕೊರು ಇನ್ನೊಂದಷ್ಟರು.......
ಗಿರೀಶ್ ಕಾಸರವಳ್ಳಿ, ಲಿಂಗದೇವರು, ಶೇಷಾದ್ರಿ, ನಾಗಾಭರಣ, ಸುನೀಲ್ ಕುಮಾರ್ ದೇಸಾಯಿ.......ಮುಂತಾದ ಒಳ್ಳೇ ತಳಿಯ ನಿರ್ದೇಶಕರು ನೇಪಥ್ಯಕ್ಕೆ ಸರಿದು ಹೋಗುತ್ತಿದ್ದಾರೆ.....
ವರ್ಷಕ್ಕೆ ಒಂದೋ ಎರಡೋ ಸಿನಿಮಾಗಳನ್ನು ಹಿಟ್ಟು/ಸೂಪರ್ ಹಿಟ್ಟು ಮಾಡಿಕೋತಾ, ಹಾಗೋ ಹೀಗೋ ಸಿನಿಮಾ ಉದ್ಯಮ ನಡೀತಿದೆ ಅಷ್ಟೇ......

Hk Sharath - ಮಂಜು ಬನವಾಸೆ ಅವರ 'ಸೋಲು ಗೆದ್ದವನದ್ದು!' ಕಾದಂಬರಿ ಓದಿದ ನಟ ಸುಚೇಂದ್ರ ಪ್ರಸಾದ್ ಅವರು ನಿರ್ದೇಶಕರೊಬ್ಬರಿಗೆ ಅದನ್ನು ಆಧರಿಸಿ ಸಿನಿಮಾ ಮಾಡಬಹುದೆಂದು ತಿಳಿಸಿದ್ದರು. ನಕ್ಸಲ್ ನಿಗ್ರಹ ಕಾರ್ಯಾಚರಣೆಯ ದಟ್ಟ ವಿವರಗಳುಳ್ಳ ಈ ಕಾದಂಬರಿ ಸಿನಿಮಾಗೆ ಹೇಳಿ ಮಾಡಿಸಿದಂತಿದೆ ಎಂಬುದು ಅವರ ಅಭಿಪ್ರಾಯ
'ಸೋಲು ಗೆದ್ದವನದ್ದು!' ಕಾದಂಬರಿ ನನಗೆ ತುಂಬಾ ಇಷ್ಟವಾಗಿತ್ತು. ಹಾಗಾಗಿ ನಾನೇ 'ಸೋಲು ಗೆದ್ದವನದ್ದು!' ಪ್ರಕಟಿಸಿದೆ. ಓದಲು ಆರಂಭಿಸಿದರೆ, ಓದುಗನನ್ನು ಹಿಡಿದಿಟ್ಟುಕೊಳ್ಳುವಷ್ಟು ಸಶಕ್ತವಾಗಿದೆ. ಮಲೆನಾಡಿನ ಬದುಕು, ನಕ್ಸಲರ ಚಟುವಟಿಕೆ, ಎ ಎನ್ ಎಫ್ ಕಾರ್ಯಾಚರಣೆ ಕುರಿತ ಕಥಾಹಂದರವಿದೆ. ಸಿನಿಮಾಗೆ ಹೊಂದುವಂತಹ ಕಥಾನಕ.
ಎಸ್ ಎಸ್ ಕಾವೇರಿ ಅವರ 'ಕರಗದ ನಗು' ಕಥಾ ಸಂಕಲನದಲ್ಲಿನ 'ಗುಜರಿ ಕನಸು' ಕಥೆ ಆಧರಿಸಿ ಸಿನಿಮಾ ಮಾಡಲು ಮಂಜುನಾಥ ಪಾಂಡವಪುರ ಎಂಬುವವರು ಮುಂದಾಗಿದ್ದಾರೆ
 ಇನ್ನು 'ಕರಗದ ನಗು'ವಿನಲ್ಲಿರುವ 'ಗುಜರಿ ಕನಸು' ಕಥೆಯಲ್ಲಿ ಕೆಲವೇ ಪಾತ್ರಗಳಿರುವುದರಿಂದ ಕಡಿಮೆ ಬಜೆಟ್ ನ (ಕಲಾತ್ಮಕವೆಂದು ಕರೆಯಲಾಗುವ) ಸಿನಿಮಾ ಮಾಡಲು ಆಯ್ದುಕೊಳ್ಳಲಾಗಿದೆ. ಕಥೆ ನನಗೂ ಮೆಚ್ಚುಗೆಯಾಗಿದೆ.

Prashanth Bhat -  ವಿಜಯ ಸಾಸನೂರ ಅವರ ಫ್ಯಾಂಟಮ್
ಸುದರ್ಶನ‌‌ ದೇಸಾಯಿ ಅವರ ಹಳದಿ ಚೇಳು
ರವಿ ಬೆಳಗೆರೆಯವರ ಒಮರ್ಟಾ ಒಳ್ಳೆ ಕಮರ್ಷಿಯಲ್ ಸಿನಿಮಾಗೆ ಚೆನ್ನಾಗಿದೆ.
ತಿರುಮಲೇಶರ 'ಬುಜ್ ' ಸಣ್ಣ ಕತೆ ಒಳ್ಳೆಯ ಕಿರುಚಿತ್ರವಾಗಬಹುದು

ಅಳಿದ ಮೇಲೆ (Anantha Narayana Bhat )
ಕರ್ವಾಲೋ(San Kencharama)
ದುರ್ಗಾಸ್ತಮಾನ (Manju Kale )
ನಿಗೂಢ ಮನುಷ್ಯರು - ತೇಜಸ್ವಿ (Achutha Ananda)
 ಜುಗಾರಿ ಕ್ರಾಸ್ (Rajesh Hanumanthappa)

Hampi Yaji - ಯಾಜಿ ಪ್ರಕಾಶನ ಪ್ರಕಟಿಸಿರುವ ನಾಲ್ಕು ಕಾದಂಬರಿಗಳು ಸಿನಿಮಾ ಆಗಿ ಜನಮನ ಗೆದ್ದಿವೆ.
ಡಾ. ಸರಜೂ ಕಾಟ್ಕರ್ ಅವರ
೧. ಜುಲೈ ೨೨ ೧೯೪೭
೨. ಬಾಜೀರಾವ್ ಮಸ್ತಾನಿ(ಹಿಂದಿ ಸಿನಿಮಾಕ್ಕಿಂತ ಮೊದಲು ಕಾದಂಬರಿ ಬಂದಿತ್ತು)
೩. ತೋಟಿಯುಡೆ ಮಗನ್(ಮಲಯಾಳಂ ಕಾದಂಬರಿ)ಡಾ. ಮೋಹನ ಕುಂಟಾರ್ ಅನುವಾದಿಸಿದ ತೋಟಿಯ ಮಗ ಅಮರಾವತಿ ಸಿನಿಮಾ ..
೪. ಡಾ. ಸರಜೂ ಅವರ ಸಾವಿತ್ರಿಬಾಯಿ ಫುಲೆ...
 Arun Kumar Mogha - ಮಲ್ಲಾದಿ ವೆಂಕಟಕೃಷ್ಣಮೂರ್ತಿಯವರ " ಸುಲಗ್ನ ಸಾವಧಾನ" ಅತ್ಯುತ್ತಮ ಹಾಸ್ಯ ಚಿತ್ರವಾಗಿ ರೂಪುಗೊಳ್ಳಬಹುದು....ಅದು ಅಲ್ಲದೆ ಅವರ ಇನ್ನೊಂದು ಪುಸ್ತಕ " ಸಂಭ್ರಮದ ಸುದಿನಗಳು" ಅದ್ಭುತವಾದ ಪತ್ತೇದಾರಿ ಚಿತ್ರವಾಗಿ ಹೊರಹೊಮ್ಮಬಹುದು

Kavitha Naveen - ನಾ ಡಿಸೋಜ ಅವರ ಸುಣ್ಣ ಬಳಿದ ಸಮಾಧಿಗಳು

ಶಶಿ ಕಿರಣ್  - ಕುಡಿಯರ ಕೂಸು, ಧರ್ಮರಾಯನ ಸಂಸಾರ - ಶಿವರಾಮ ಕಾರಂತರು

Shivaram Kaansen - ಷೇರು ಬಂಡವಾಳದ ಮೂಲಕ ನಾನೇ ಬರೆದ "ಉಪಸಂಸ್ಕಾರ" ಕಥೆ ಆಧಾರಿತ ಕಿರುಸಿನೆಮಾ ಮಾಡುವ ಉದ್ದೇಶವಿದೆ. ಚಿತ್ರಕತೆ-ಸಂಭಾಷಣೆ-ಹಾಡುಗಳೂ ಸಿದ್ದವಿದೆ.

ಇದರ ಸಾಫಲ್ಯ/ವೈಫಲ್ಯ
(Credit/Debit) ಏನಿದ್ದರೂ
"ಅಲಂಗಿ" ಗಳಿಗೆ ಸಲ್ಲುತ್ತದೆ !
(ಅನಂತಮೂರ್ತಿ+ಲಂಕೇಶ+ಗಿರೀಶ್ ಕಾರ್ನಾಡ್)

ನಾನು ಆಶಾವಾದಿ, ನೋಡೋಣ !!

Mallappa Basaragi - ಬಹಳ ದಿನಗಳ ಹಿಂದೆ ಓದಿದ ಕಾದಂಬರಿ.ಬರೆದವರ ಹೆಸರು ನೆನಪಿಗೆ ಬರುತ್ತಿಲ್ಲ. " ಅತಿ ಮಧುರವೀ ಸ್ನೇಹ " ಕಾದಂಬರಿಯ ಹೆಸರು. ಸ್ವಲ್ಪ ಕಮರ್ಷಿಯಲ್ ಅಂಶಗಳನ್ನು ಸೇರಿಸಿದರೆ ಒಂದೊಳ್ಳೆ ಚಲನಚಿತ್ರ ಆಗುತ್ತದೆ

Guruganesh Bhat - ನೀವು ಕಾದಂಬರಿಗಳನ್ನು ಸೂಚಿಸಲು ಹೇಳಿದ್ದೀರಿ, ಆದರೆ ನನಗೆ ಶ್ರೀನಿವಾಸ ವೈದ್ಯ ಅವರ ತ್ರಯಸ್ಥ ಕತೆಯನ್ನು ಹೇಳದೇಇರಲು ಮನಸ್ಸು ಒಪ್ಪುತ್ತಿಲ್ಲ. ಈ ಕತೆಯ ಹಲವು ಎಳೆಗಳು ಈಗಾಗಲೇ ಎಷ್ಟೊ ಸಿನಿಮಾಗಳಲ್ಲಿ ಅಳವಡಿಕೆಯಾಗಿರಬಹುದು ಅನಿಸುತ್ತೆ. ನನಗೆ ಕಣ್ಣಿಗೆ ಕಟ್ಟಿದ ಕಥನ ತ್ರಯಸ್ಥ.

Chaitanya Majalukodi - ಮಹಾಬ್ರಾಹ್ಮಣ ಕಾದಂಬರಿಯನ್ನ 'ವಿಶ್ವಾಮಿತ್ರ' ನನ್ನ ಕಲ್ಪನೆಯಲ್ಲೇ ಸಿನೆಮಾ ಶೈಲಿಗೆ ತಂದ್ಕೊಂಡು ಎಷ್ಟೋ ಬಾರಿ ಕಣ್ಮುಚ್ಚಿ ಅನುಭವಿಸಿದ್ದೇನೆ. ಅಣ್ಣಾವ್ರೇ ವಸಿಷ್ಠ, ವಿಷ್ಣುನೇ ವಿಶ್ವಾಮಿತ್ರ...!! 😍 ಉತ್ತಮ ಅಭಿರುಚಿ ಇರೋ ನಿರ್ದೇಶಕ ಆಗಿದ್ರೆ, ಮಯೂರ ಬಂದಾಗ, ಅದರ ಹಿಂದೆನೇ ಇದನ್ನೂ ಮಾಡಬಹುದಿತ್ತು. ಅದನ್ನ ಮಾಡಿ ವಿಷ್ಣು-ರಾಜ್ ಪ್ರತ್ಯಕ್ಷ/ಪರೋಕ್ಷ ವೈಮನಸ್ಯವನ್ನ ಅಂತ್ಯ ಮಾಡಬಹುದಿತ್ತು....