Tuesday 9 July 2019

ಪುನರ್ವಸು ಕಾದಂಬರಿಯ ಬಗ್ಗೆ

ಡಾ.ಗಜಾನನ ಶರ್ಮರ ಪುನರ್ವಸು ಹಲವು ಕಾರಣಗಳಿಗೆ ಗಮನಾರ್ಹವಾದ ಕಾದಂಬರಿ. ಸುಮಾರು 540 ಪುಟಗಳಲ್ಲಿ ಬಿಚ್ಚಿಕೊಳ್ಳುವ ಕಥಾನಕವಾದರೂ, ಕರಗಿಸಬಹುದಾದ ಬೊಜ್ಜು ಇದರಲ್ಲಿಲ್ಲ. ಇರುವುದೆಲ್ಲವೂ ಮನನೀಯ, ಬೋಧಪ್ರದ.
ಡೇವಿಡ್ ಅಟೆನ್ಬರೋ ಬಿಬಿಸಿಗೆ ಮಾಡಿಕೊಟ್ಟ Planet Earthನಂಥಾ ಕೆಲವು ಸಾಕ್ಷ್ಯಚಿತ್ರಗಳನ್ನು ಮುಗಿಸಲಿಕ್ಕೆ ಐದು ವರ್ಷಗಳೇ ಬೇಕಾಗಿದ್ದವಂತೆ ಅಂತೆಲ್ಲ ಶ್ಲಾಘಿಸಿ, "ನಮ್ಮಲ್ಲಿ ಇಷ್ಟೆಲ್ಲ ಕಷ್ಟ ಪಡುವವರು ಯಾರಿದ್ದಾರೆ" ಅಂತ ನಾವೆಲ್ಲ ಪೇಚಾಡುವುದುಂಟು. ಹಾಗಂತ ವರ್ಷಗಟ್ಟಲೆ ರಿಸರ್ಚು, ಮಾಹಿತಿಯ ಸಂಗ್ರಹ ಇವೆಲ್ಲ ನಮ್ಮಲ್ಲಿ ಇಲ್ಲವೆಂದಲ್ಲ. ಹಳಗನ್ನಡದ ಮೇಲೆ ಕೆಲಸ ಮಾಡುವವರು, ವ್ಯಾಕರಣ ಶಾಸ್ತ್ರದ ಆಳಕ್ಕೆ ಇಳಿದವರು, ಶಬ್ದಾರ್ಥ ಶೋಧನೆಗೆ/ನಿಘಂಟುಗಳ ರಚನೆಗೆ ತೆತ್ತುಕೊಂಡವರು, ನೂರಾರು ಶಾಸನಗಳ ಬೆನ್ನಟ್ಟುವವರು, ತಾಳೆಗರಿಗಳನ್ನು ಕಲೆಹಾಕಿ ಗ್ರಂಥಸಂಪಾದನೆ ಮಾಡಲು ಹೊರಡುವವರು - ಹೀಗೆ ಪಾಂಡಿತ್ಯ, ಸಂಶೋಧನೆಯ ಕ್ಷೇತ್ರಗಳಲ್ಲಿ ಇರುವವರು - ಇವರೆಲ್ಲರೂ ಎಲ್ಲೆಲ್ಲಿಂದಲೋ ವಿಷಯಗಳನ್ನು ಸಂಚಯಿಸುವ ಶ್ರಮಸಾಧ್ಯವಾದ ಕೆಲಸ ಮಾಡುತ್ತಲೇ ಬಂದಿದ್ದಾರೆ. ಆದರೆ ಕಥೆ ಕಾದಂಬರಿ ಬರೆಯುವವರು, ಚಲನಚಿತ್ರ ರಂಗದವರು ಎಲ್ಲ ರಿಸರ್ಚು ಮಾಡುವುದು ಕಡಮೆ.
ಚಿತ್ರದುರ್ಗದ ಕಥೆ ಹೇಳಲು ತರಾಸು ಅವರು ಇತಿಹಾಸವನ್ನು ಕೆದಕಿದ್ದು, ಕೊರಟಿ ಶ್ರೀನಿವಾಸ ರಾವ್ ಅವರು ವಿಜಯನಗರದ ಇತಿಹಾಸವನ್ನು ಹೆಕ್ಕಿ ಗುಡ್ಡೆ ಹಾಕಿ ಕಥೆಗಳನ್ನು ಹೆಣೆದದ್ದು, ಭೈರಪ್ಪನವರು ಒಂದೊಂದು ಕೃತಿಗೆ ಮೊದಲೂ ಎಂಟೋ ಹತ್ತೋ ತಿಂಗಳು ಸಂಶೋಧನೆಗೆ ತೊಡಗುವುದು, ಕೆ.ಎನ್. ಗಣೇಶಯ್ಯನವರು ವಿಜ್ಞಾನ, ಇತಿಹಾಸಗಳ ಅಚ್ಚರಿಗಳ ಹುಡುಕಾಟವನ್ನು ಮತ್ತು ತನ್ನ ಕ್ಷೇತ್ರಕಾರ್ಯಗಳನ್ನೇ ಕಥೆಗಳನ್ನಾಗಿಸುವುದು ಹೀಗೆ ಕೆಲವು ಉದಾಹರಣೆಗಳನ್ನು ಕೊಡಬಹುದು. ಇದೀಗ ಈ ಕೂಟದ ಇತ್ತೀಚಿನ ಸದಸ್ಯರಾಗಿ ಪುನರ್ವಸು ಕಾದಂಬರಿಯ ಗಜಾನನ ಶರ್ಮರು ಸೇರಿಕೊಂಡಿದ್ದಾರೆ. ಅವರು ಹೇಳುತ್ತಿರುವುದು ಜೋಗದ ಸಿರಿಬೆಳಕಿನ, ಆ ಬೆಳಕಿನಿಂದ ಕತ್ತಲೆಗೆ ದೂಡಲ್ಪಟ್ಟ ಶರಾವತಿಯ ಆಚೀಚೆ ದಂಡೆಯ ಹಳ್ಳಿಗಳ ಕಥೆ. ನಮ್ಮಲ್ಲಿ ಕೈಗಾರಿಕೆಗಳು, ಉದ್ದಿಮೆಗಳು ಬರದಿದ್ದರೆ ಬಡತನ, ನಿರುದ್ಯೋಗಗಳು ತೊಲಗುವುದಿಲ್ಲ ಎಂಬ ಸರ್ ಎಂ. ವಿಶ್ವೇಶ್ವರಯ್ಯನವರ ನಿಲುವಿನಿಂದ ಶುರುವಾಗುವ ಜೋಗದ ಪ್ರಾಜೆಕ್ಟ್‌ ಮತ್ತು ಅದರಿಂದಾಗಿ ಮುಳುಗಿದ ಊರುಗಳ ಕಥೆಯಿದು.
ಉಪೇಂದ್ರ ಒಂದೊಮ್ಮೆ ಶೂಟಿಂಗ್‌ಗೆ ಒಂದುಕಡೆಗೆ ಹೋಗಿದ್ದಾಗ ಅವರ ಸ್ನೇಹಿತರು, 'ನೋಡು, ಈ ಏರಿಯಾ ಇನ್ನೂ ಡೆವಲಪ್‌ ಆಗಿಲ್ಲ. ಬರೀ ಕಾಡು, ಗುಡಿಸಲಿನಲ್ಲೇ ಜನ ವಾಸ ಮಾಡುತ್ತಿದ್ದಾರೆ' ಎಂದರಂತೆ. ಆಗ ಉಪ್ಪಿ, 'ನಿಮ್ಮ ಪ್ರಕಾರ, ಡೆವಲಪ್‌ಮೆಂಟ್ ಅಂದ್ರೆ ಏನು? ಈ ಏರಿಯಾದಲ್ಲಿನ ಕಾಡು ಕಡಿದು, ನಾಲ್ಕು ದೊಡ್ಡ ಬಿಲ್ಡಿಂಗ್‌ ಬಂದು ಜನ ಅಲ್ಲಿ ಐಷಾರಾಮಿಯಾಗಿ ವಾಸಿಸುತ್ತಿದ್ದರೆ ಅದು ಡೆವಲಪ್‌ಮೆಂಟಾ? ಕಡೆಗೆ ಏನ್ಮಾಡ್ತಾರೆ, ಆ ಬಿಲ್ಡಿಂಗ್‌ ಸಹವಾಸ ಬೋರಾಗಿ ಮತ್ತೆ ಎಲ್ಲೋ ತೋಟದ ಮನೆ ತೆಗೆದುಕೊಂಡು ಅಲ್ಲಿ ಹಾಯಾಗಿ ವಾಸಿಸುತ್ತಾರೆ. ಆದರೆ ಇಲ್ಲಿ ಹುಟ್ಟುವಾಗಲೇ ಪ್ರಕೃತಿಯ ಮಡಿಲಿನಲ್ಲಿ ಹುಟ್ಟಿ ಅದನ್ನೇ ಅನುಭವಿಸಿ ಖುಷಿಯ ಜೀವನ ನಡೆಸುತ್ತಿದ್ದಾರೆ. ಮನುಷ್ಯನಿಗೆ ಅಂತಿಮವಾಗಿ ಬೇಕಾಗೋದು ನೆಮ್ಮದಿಯ ವಾತಾವರಣವೇ ಹೊರತು ಡೆವಲಪ್‌ಮೆಂಟ್‌, ಐಷಾರಾಮಿ ಮನೆಯಲ್ಲ. ಅದೇ ಕಾರಣಕ್ಕೆ ದೊಡ್ಡ ಶ್ರೀಮಂತರು ತಮ್ಮ ಕೊನೆಗಾಲದಲ್ಲಿ ಎಲ್ಲೋ ಒಂದು ಚಿಕ್ಕ ಫಾರ್ಮ್ ಹೌಸಿನಲ್ಲಿ ವಾಸಿಸುತ್ತಾರೆ' ಎಂದಿದ್ದರಂತೆ. ಪುನರ್ವಸುವಿನಲ್ಲಿ ವಿಶ್ವೇಶ್ವರಯ್ಯ,ಕೃಷ್ಣರಾವ್, ಎಸ್ ಜಿ ಫೋರ್ಬ್ಸ್, ಎಸ್ ಕಡಾಂಬಿ, ಮೊಹಮದ್ ಹಯಾತ್, ಸರ್ ಮಿರ್ಜಾ ಇಸ್ಮಾಯಿಲ್ ಮುಂತಾದ ದೀವಾನರು, ದಕ್ಷ ಎಂಜಿನಿಯರುಗಳು ಎಲ್ಲ ಪ್ರಗತಿಯ ಬಗ್ಗೆ ಎಷ್ಟೆಲ್ಲ ವಾದಗಳನ್ನು ಹೂಡಿದರೂ, ಕೃತಿಕಾರನ ಒಲವಿರುವುದು ಉಪ್ಪಿ ಹೇಳಿದ ಸಿದ್ಧಾಂತದ ಕಡೆಗೇ.
ಲಿಂಗನಮಕ್ಕಿ ಜಲಾಶಯದ ಹಿಂದಿನ ಕಥೆ,ವ್ಯಥೆ, ಅಲ್ಲಿನ ಹಳ್ಳಿಗಾಡಿನ ಶ್ರೀಮಂತ ಸಂಸ್ಕೃತಿ, ಜೋಗದ ಬಗ್ಗೆ ಗೊತ್ತಿಲ್ಲದ ಸಂಗತಿಗಳು ಇವೆಲ್ಲವನ್ನು ಡೇವಿಡ್ ಅಟೆನ್ಬರೋ ಬಿಬಿಸಿಗೆ ಮಾಡಿಕೊಟ್ಟ ಸಾಕ್ಷ್ಯಚಿತ್ರವೊಂದರಂತೆ ಹೃದಯಹಾರಿಯಾಗಿ ತೋರಿಸಿದ್ದಕ್ಕೆ ಗಜಾನನ ಶರ್ಮರಿಗೆ ಅಭಿನಂದನೆಗಳು.

---> Sharath Bhat Seraje

ಜೋಗಿಯವರ 'L', ನನ್ನ ಬೊಗಸೆಗೆ ಸಿಕ್ಕಿದಷ್ಟು

Analysis of  the novel "L" by Jogi by Sharath Bhat Seraje

ಜೋಗಿಯವರ ಹೊಸ ಕಾದಂಬರಿ 'L', ನನ್ನ ಬೊಗಸೆಗೆ ಸಿಕ್ಕಿದಷ್ಟು, ಬೊಗಸೆಯಿಂದ ಸೋರದೆ ಉಳಿದಷ್ಟು: ಅನ್ಯರೊರೆದುದನೆ ಬರೆದುದನೆ ಬರೆಬರೆದು ಓದುಗರನ್ನು ದಣಿಸುವ ಜಾಯಮಾನ ಜೋಗಿಯವರದ್ದಲ್ಲ ಎನ್ನುವುದು ಅವರ ಕಥೆಗಳನ್ನೋದುವರಿಗೆಲ್ಲ ಗೊತ್ತಿರುವ ವಿಚಾರವೇ. ಅವರದ್ದು ಕಥೆಗಳಿಗೆ ತೆರೆದಷ್ಟೇ ಬಾಗಿಲು; ಪ್ರಯೋಗಕ್ಕೆ ತೆರೆದೇ ಇರುವ ಬಾಗಿಲು. ಸ್ವರೂಪದಲ್ಲೂ,ಜೋಡಣೆಯಲ್ಲೂ, ಕೊನೆಗೆ ಹುರುಳಿನಲ್ಲೂ As clever as they come ಅಂತನ್ನಿಸುವ ಜಾಣತನ,ವಿನೋದಸ್ವಭಾವ, ಚಮತ್ಕಾರಪ್ರಿಯತೆ ಇವೆಲ್ಲ ಜೋಗಿಯವರ ಟ್ರೇಡ್ ಮಾರ್ಕುಗಳು. ಅಂಥದ್ದೊಂದು ಚತುರಸೃಷ್ಟಿಯ "ದೊಡ್ಡ ಸಣ್ಣಕಥೆ"ಯಾಗಿ ಜಕ್ಕುಳಿಸಿ, ರಂಜಿಸಿ, ತಲೆದೂಗಿಸಿದ್ದು ಜೋಗಿಯವರ "ಸಲಾಂ ಬೆಂಗಳೂರು". ತಂತ್ರಗಾರಿಕೆಯ ದೃಷ್ಟಿಯಿಂದ ಈ ಕಾದಂಬರಿಯೂ ಸಲಾಂ ಬೆಂಗಳೂರಿನ ಚಿಕ್ಕಪ್ಪನ ಮಗನಂತಹದ್ದು, ಮನೋಭಾವ ಮತ್ತು toneನಲ್ಲಿ ಕಿಶೋರ್ ಕುಮಾರನ ಚೆಲ್ಲಾಟಕ್ಕೂ ಮುಕೇಶನ ವಿಷಾದಗೀತೆಗಳಿಗೂ ಇರುವಂತಹ ಅಂತರ. ಹಾಗಾಗಿ ಇವೆರಡೂ ಕೃತಿಗಳು ಹತ್ತಿರವಿದ್ದೂ ದೂರ.
ಕಾವ್ಯ ಅಂದರೆ ಏನು ? ಕಾವ್ಯದ ಲಕ್ಷಣಗಳು ಯಾವುವು? ಕಾವ್ಯಕ್ಕೆ ಸೌಂದರ್ಯ ಹೇಗೆ ಬರುತ್ತದೆ? ಕವಿಯು ಹೇಗಿರುತ್ತಾನೆ, ಅವನ ಯೋಚನೆಯ ಪರಿಯೇನು ? ಅವನು ಯಾವ ಪರಿಕರಗಳನ್ನು ಬಳಸಿ ಕಾವ್ಯವನ್ನು ರಚಿಸುತ್ತಾನೆ? ಕಾವ್ಯದ ಪ್ರಯೋಜನ ಏನು? ಇಂತಹಾ ಮೂಲಭೂತವಾದ ಪ್ರಶ್ನೆಗಳಿಗೆ ಉತ್ತರ ಹುಡುಕುವ ಶಾಸ್ತ್ರಕ್ಕೆ ಕಾವ್ಯಮೀಮಾಂಸೆ ಅಂತ ಹೆಸರು. ಈ ಅರ್ಥದಲ್ಲಿ 'L' ಕಾದಂಬರಿಯ ನಾಯಕ ಲಕ್ಷ್ಮಣನೂ ಕಾವ್ಯಮೀಮಾಂಸೆಗೆ ಕೈ ಹಾಕಿದವನು. ತನ್ನ ಬವಣೆ, ಬೇಗುದಿಗಳಿಗೂ ತನ್ನ ಕಾವ್ಯಕ್ಕೂ ಎಷ್ಟು ಹತ್ತಿರದ ಸಂಬಂಧ ಅಂತ ಹುಡುಕುವವನು. ಅವನು ವಿದ್ವಾಂಸನಲ್ಲ, ಸಿದ್ಧಾಂತಿಯಲ್ಲ. ಅವನು ನಮ್ಮ ಭಾಮಹ, ದಂಡಿ, ವಾಮನ,ಕುಂತಕ, ಆನಂದವರ್ಧನ, ಅಭಿನವಗುಪ್ತರಂತೆ ಉದ್ದುದ್ದ ಸಿದ್ಧಾಂತಗಳನ್ನು ಮಂಡಿಸುವವನಲ್ಲ. ಅವನೊಬ್ಬ badass. ಸಿನಿಕನೂ.
Raymond Chandlerನ ಕಾದಂಬರಿಗಳಲ್ಲಿ ಬರುವ ಪತ್ತೆದಾರ Philip Marloweನ ಬಗ್ಗೆ ಒಬ್ಬರು ಹೀಗೆ ಹೇಳಿದ್ದಾರೆ : wisecracking, whiskey-drinking, tough-as-an-old-boot , Marlowe never minces his words or beats around the bush. He is blunt, terse, direct, sometimes dismissive and frequently rude. He talks tough and he talks smart. ನಮ್ಮ ಲಕ್ಷ್ಮಣನೂ ಇದೇ ಎರಕದವನು. ಹಳೇ ಚಿತ್ರಗಳಲ್ಲಿ ಬರುವ Humphrey Bogart, Robert Mitchum, Clint Eastwood, ನಾನಾ ಪಾಟೇಕರ್ ಮುಂತಾದವರಂತೆ. ಅವನ ಅನುಭವಗಳು ಕಹಿ, ಮಾತು ಕಟು - He is blunt, terse, direct, sometimes dismissive and frequently rude. He talks tough and he talks smart !!
ನಮ್ಮಲ್ಲಿ ಕಾವ್ಯ ಕಟ್ಟುವ ಕ್ರಿಯೆಯ ಬಗ್ಗೆಯೇ ಕಾವ್ಯ ಕಟ್ಟಿದವರಿದ್ದಾರೆ (ಬೇಂದ್ರೆಯವರ “ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ”), ಕಾವ್ಯ ಬರೆಯಲಾಗುತ್ತಿಲ್ಲ ಅನ್ನುವುದರ ಬಗ್ಗೆಯೇ ಕಾವ್ಯ ಬರೆದವರಿದ್ದಾರೆ(ಅಡಿಗರ ಕೂಪಮಂಡೂಕ) ! "English398: Fiction Workshop" ಅಂತೊಂದು ಕಥೆಯಿದೆ, ಕಥೆ ಬರೆಯುವ Workshopನಲ್ಲಿ ಹೇಳಿಕೊಡುವ ತಂತ್ರಗಳು ಆ ಕಥೆಯಲ್ಲಿಯೇ ಬರುತ್ತವೆ. ಇಂಥದ್ದನ್ನು metafiction ಅನ್ನುತ್ತಾರೆ, ಸಲಾಂ ಬೆಂಗಳೂರಿನಲ್ಲೂ metafiction ಇತ್ತು, L ಕೂಡಾ ಮೆಟಾ ಫಿಕ್ಷನ್ನೇ ಆದರೂ ಲಕ್ಷ್ಮಣನದು ಇನ್ನೊಂದೇ ಬಗೆಯ ಅನ್ವೇಷಣೆ. “ಆಳದನುಭವವನ್ನು ಮಾತು ಕೈ ಹಿಡಿದಾಗ, ಕಾವು ಬೆಳಕಾದಾಗ ಒಂದು ಕವನ” ಎನ್ನುವುದು ಕೆ. ಎಸ್‌. ನರಸಿಂಹಸ್ವಾಮಿಗಳ ಸಾಲು. ಬಡತನದಲ್ಲಿ ಬಳಲಿ, ಅಪ್ಪನಂತಿರದ ಅಪ್ಪನೊಂದಿಗೆ ಹೆಣಗಿ, ಪ್ರೇಮದಂತಿರದ ಪ್ರೇಮಜ್ವರದಲ್ಲಿ ತೊಳಲಿ, ಕಾವ್ಯವಾಗದ ಕಾವ್ಯದೊಂದಿಗೆ ಸೆಣಸಿ, ಉತ್ಸಾಹಗುಂದಿದ, ಕಠೋರ ಮನಸ್ಸಿನ, ಬಿರುಸು ಮಾತಿನ wisecracking ದೋಷದರ್ಶಿ ಇವನು. "ನೀನು ಸಿನಿಕ ಕಣಯ್ಯಾ" ಅಂತ ಯಾರಾದರೂ ಹೇಳಿದರೆ, 'A cynic is a man who, when he smells flowers, looks around for a coffin.' ಅಂತ ಹೇಳಿ, "ನನ್ನ ಜೀವನದಲ್ಲಿ ಮಾತ್ರ ಹೆಣದ ಪೆಟ್ಟಿಗೆ ಹತ್ತಿರವಿರದೆ, 'ಹೂವು ಮಾತ್ರ' ಅಂತ ಇರಲೇ ಇರಲಿಲ್ಲವಲ್ಲ" ಅಂತ ವಿಲವಿಲನೆ ಒದ್ದಾಡುತ್ತ ಇರಬಲ್ಲವನು. ಚುಚ್ಚುನುಡಿ ಮತ್ತು ಕಡುಮುಳಿಸು ಅವನ ಸ್ವಭಾವ, ಗಾಢವಾದ ವಿಷಾದ ಅವನಿಗೆ ನಿತ್ಯಸತ್ಯ, ನಾಟುನುಡಿ ಅವನಿಗೆ ಬಿಡುಗಡೆಗೆ/ಮುಕ್ತಿಗೆ ದಾರಿ.
ಇಂಥವನೊಬ್ಬ, "ಆಳದನುಭವವನ್ನು ಮಾತು ಕೈ ಹಿಡಿದಾಗ, ಕಾವು ಬೆಳಕಾದಾಗ" ಒಂದು ಕವನ ಆಗುತ್ತದೆಯೇ ಅಂತ ಅನ್ವೇಷಣೆ ಮಾಡಿದರೆ ಹೇಗಿರಬಹುದು ?! ಇಷ್ಟಕ್ಕೂ ಅನುಭವವು ಆಳ ಅಂತಾಗುವುದು ಯಾವಾಗ? ಅದು ಆಳದ ಅನುಭವ ಅಂತ ಗೊತ್ತಾಗುವುದು ಹೇಗೆ? ಅನುಭವವನ್ನು ಮಾತು ಕೈ ಹಿಡಿಯದಿದ್ದರೆ ಯಾವ ಗೋಡೆಗೆ ತಲೆ ಚಚ್ಚುವುದು? ಕಾವು ಬೆಳಕಾಗದಿದ್ದರೆ ಎಲ್ಲಿಗೆ ಹೋಗುವುದು ? ಲಕ್ಷ್ಮಣನಂಥವರಿಗೆ ಇವು ಅವನನ್ನು ಅಲ್ಲಾಡಿಸಿಬಿಡಬಹುದಾದ ಪ್ರಶ್ನೆಗಳು. ಹೀಗಾಗಿಯೇ ಆತ ತನ್ನ ನೆನಪುಗಳ ಸುರುಳಿ ಬಿಚ್ಚುತ್ತ ಹೋಗುತ್ತಾನೆ, ಅಲ್ಲಿ ಉತ್ತರಗಳನ್ನು ಕಾಣ ಹೊರಡುತ್ತಾನೆ. ಬಾಳಿಗೂ ಬರೆಹಕ್ಕೂ ನಂಟಿನ ಅಂಟು ಉಂಟೇ ಅಂತ ’ತನ್ನ ಕಾವ್ಯಕೆ ತಾಂ ಮಹಾಕವಿ ಮಣಿವಂತೆ!’ ಪ್ರಶ್ನೆಗಳ ಬಲೆ ಹೆಣೆಯುತ್ತ, ಹೋಗುತ್ತಾನೆ. ಪ್ರತೀ ಅಧ್ಯಾಯದಲ್ಲೂ ಕಾವ್ಯದ ಬಗ್ಗೆ ಸೂತ್ರರೂಪದ ಹೇಳಿಕೆಯೊಂದನ್ನು ಲಕ್ಷ್ಮಣ ಅಧ್ಯಾಯದ ಮೊದಲಲ್ಲೋ ಕೊನೆಯಲ್ಲೋ ಹೇಳುತ್ತಾನೆ. ಆ ಅಧ್ಯಾಯದಲ್ಲಿ ಬರುವ ಲಕ್ಷ್ಮಣನ ಜೀವನದ ಘಟನೆಗಳು ಈ ಸೂತ್ರರೂಪದ ಹೇಳಿಕೆಗೆ ಕಾರಣವಾಗುವಂತೆ ಇರುತ್ತವೆ. ಈ ಜಾಣ್ಣುಡಿಯಂಥ ಹೇಳಿಕೆಯನ್ನು ಸಚಿತ್ರವಾಗಿ ವಿವರಿಸುವಂತೆ, ಬೆಳೆಸುವಂತೆ,ವಿಶದಗೊಳಿಸುವಂತೆ, ಚತುರೋಕ್ತಿಯನ್ನು ಪರೀಕ್ಷೆಗೆ ಒಡ್ಡಿ ಅದರ ಸತ್ಯಾಸತ್ಯತೆಯನ್ನು ತೋರಿಸಿ ಕೊಡುವಂತೆ ಆ ಅಧ್ಯಾಯದಲ್ಲಿ ಪಾತ್ರಗಳು ವರ್ತಿಸುತ್ತವೆ. ಇದು ಒಂದು ತಂತ್ರವಾಗಿ ಕುತೂಹಲಕಾರಿಯಾಗಿದೆ. ಹೀಗಿರುವುದರಿಂದ, ಈ ವಾಕ್ಯದ ಎರಡು ಪಾಲು ಉದ್ದ ಮಾತ್ರವಿರುವ ಅಧ್ಯಾಯಗಳೂ ಇಲ್ಲಿವೆ !!
ಸಲಾಂ ಬೆಂಗಳೂರಿನಲ್ಲಿ ಒಂದು ಚೇಸ್ ಥ್ರಿಲ್ಲರಿಗೆ ಆಗುವಂತಹಾ ಕಥೆಯಿತ್ತು, ಇಲ್ಲಿ ಅಂತಹಾ ಕಥೆಯೇನೂ ಇಲ್ಲ. ಹೇಳಬೇಕಾದ್ದನ್ನು ಕಥೆಯಲ್ಲಿ ಬುದ್ಧಿವಂತಿಕೆಯಿಂದ ಅಡಗಿಸುವ ಸಲಾಂ ಬೆಂಗಳೂರಿನ ಕಲೆಗಾರಿಕೆ ಇಲ್ಲಿಲ್ಲವಾದ್ದರಿಂದ ನನಗೆ ಇದಕ್ಕಿಂತ ಅದೇ ಹೆಚ್ಚು ಇಷ್ಟವಾಯಿತು. ಷೇಕ್ಸಪಿಯರನ ಬ್ರೂಟಸ್ ಹೇಳುವ, "If there be any in this assembly, any dear friend of Caesar's, to him I say that Brutus' love to Caesar was no less than his. If then that friend demand why Brutus rose against Caesar, this is my answer: not that I loved Caesar less, but that I loved Rome more" ಎಂಬ ಮಾತಿನಂತೆ, ನನಗೆ L ಇಷ್ಟವಾಗಲಿಲ್ಲ ಅಂತಲ್ಲ, ಸಲಾಂ ಹೆಚ್ಚು ಹಿಡಿಸಿತು ಅಷ್ಟೇ ಅಂತ ಹೇಳಿಬಿಡುತ್ತೇನೆ
ತಮ್ಮ ಬಾಲ್ಯದ ನೆನಪುಗಳು, ತಮ್ಮ ಊರಿನ/ಹಳ್ಳಿಯ ವಿವರಗಳು, ತಾವು ಕಂಡ ವ್ಯಕ್ತಿಗಳು ಇವರನ್ನೆಲ್ಲ ತಮ್ಮ ಕಥೆಗಳಲ್ಲಿ ಬಲವಂತವಾಗಿ ಎಳೆದು ತರುವ ಚಪಲ ಎಲ್ಲರಿಗೂ ಇದ್ದದ್ದೇ. ಅವುಗಳಿಗೆ ಸಾಹಿತ್ಯಿಕ ಮೌಲ್ಯ ಇದೆಯೇ, ಕಥೆಗೆ ಇದೆಲ್ಲ ಬೇಕೇ ಅಂತ ಯೋಚಿಸದೆ, ನನ್ನ ಬಾಲ್ಯದ, ನಮ್ಮೂರಿನ ಸಂಗತಿಗಳನ್ನು ಹೇಗಾದರೂ ತಂದುಬಿಡಬೇಕು ಅಂತಿರುವವರು ನಮ್ಮಲ್ಲಿ ಹಲವರಿದ್ದಾರೆ. ನಾಸ್ಟಾಲ್ಜಿಯಾವೇ ಕಥೆಗೆ ಭಾರವಾಗುವಂತೆ ಬರೆಯುವವರೂ ಇಲ್ಲದಿಲ್ಲ.
"ನೀವು rationalist ಆದರೂ ನಿಮ್ಮ ಪಾತ್ರಗಳು ಸಂಪ್ರದಾಯ ಶರಣರು. ಹೀಗೇಕೆ?", ಅಂತ ಶಿವರಾಮ ಕಾರಂತರನ್ನು ಕೇಳಿದಾಗ, "ನಾನು ಬರೆದದ್ದು ಕಾದಂಬರಿ, ಆತ್ಮಕಥೆಯಲ್ಲ" ಅಂತ ಅವರು ಗುಡುಗಿದ್ದರು! ಜಯಂತ ಕಾಯ್ಕಿಣಿಯವರು ಒಂದು ಹೋಟೆಲಿಗೆ ಹೋಗಿದ್ದಾಗ, ಅವರ ಚಿತ್ರಗೀತೆಗಳ ಅಭಿಮಾನಿಯೊಬ್ಬ, "ನಿಮ್ದು ಲವ್ ಫೇಲ್ಯೂರ್ ಕೇಸಾ ಸರ್?" ಅಂತ ಕೇಳಿದ್ದನಂತೆ! "ನಾಸ್ತಿಕರಾದ ನೀವು ಕೃಷ್ಣನ ಬಗ್ಗೆ ಇಷ್ಟು ಪ್ರೀತಿಯಿಂದ ಹೇಗೆ ಬರೆದಿರಿ, ಅಷ್ಟೊಳ್ಳೆ ಭಜನ್ ಗಳನ್ನು ಹೇಗೆ ಬರೆದಿರಿ, ಆಸ್ತಿಕರಲ್ಲದವರು, ಹಿಂದೂಧರ್ಮದ ಅನುಯಾಯಿಗಳಲ್ಲದವರು ಹೀಗೆ ಬರೆಯಲು ಸಾಧ್ಯವೇ?" ಅಂತೊಬ್ಬರು ಜಾವೇದ್ ಅಕ್ತರರನ್ನು ಕೇಳಿದ್ದರಂತೆ. ಅದಕ್ಕವರು, "ನನ್ನ ಪುಣ್ಯಕ್ಕೆ ನೀವು ಗಬ್ಬರ್ ಸಿಂಗನ ಡೈಲಾಗ್ ಬರೆದವರು ಡಕಾಯಿತರೇ ಆಗಿರಬೇಕು ಅನ್ನಲಿಲ್ಲವಲ್ಲ" ಅಂದಿದ್ದರಂತೆ! ಎಲ್ ಕಾದಂಬರಿಯ ನಾಯಕ ಈ ವಿಚಾರಗಳಿಗೆ ಹೇಗೆ ಪ್ರತಿಕ್ರಿಯಿಸಬಹುದು? ಕಥೆಯಲ್ಲಿ ಕಥೆಗಾರ ಎಷ್ಟು ಕಾಣಿಸಿಕೊಳ್ಳಬೇಕು, ಅವನ ಜೀವನ ಎಷ್ಟು ಬರಬೇಕು ಎಂಬ ಪ್ರಶ್ನೆ L ಕಾದಂಬರಿಯದ್ದೂ ಆಗಿದೆ ಅಂದುಕೊಂಡು ಇಷ್ಟು ಕೊರೆದೆ.
ಸು.ರಂ. ಎಕ್ಕುಂಡಿಯವರ "ಇಬ್ಬರು ರೈತರು" ಎಂಬ ಕವಿತೆಯಲ್ಲಿ ಕಾವ್ಯಕ್ಕೂ ಬದುಕಿಗೂ ಇರುವ ನಂಟನ್ನು ಇನ್ನೊಂದು ತರದಲ್ಲಿ ನೋಡಲಾಗಿದೆ. ಅದರಲ್ಲಿ ಇಬ್ಬರು ರೈತರು ಉಜ್ಜಯಿನಿಗೆ ಬರುತ್ತಾರೆ. ಅದು ಕಾಳಿದಾಸನ ಊರು. ಅವನ ಮನೆಗೇ ಬರುತ್ತಾರೆ. ಹೇಳಿ ಕೇಳಿ ಒಬ್ಬ ಕವಿಯ ಮನೆಗೆ ಯಾಕೆ ಬರುತ್ತಾರೆ ಅನ್ನುವುದು ಇಂಟೆರೆಸ್ಟಿಂಗ್ ಆಗಿದೆ. ಕವಿಯು ಕಾವ್ಯಗಳಲ್ಲಿ, ಪಾತ್ರಗಳನ್ನು ಸಂಕಷ್ಟಗಳಿಂದ ಪಾರು ಮಾಡಿದವನು( "ಕಣ್ವಪುತ್ರಿಯ ದೊರೆಗೆ ಒಪ್ಪಿಸಿದಿರಿ/ಅಂದು ಶಾಪಗ್ರಸ್ತಬಲೆಗಿದಿರಾಗಿದ್ದ ಅನಾಹುತವ, ಉಂಗುರದಿ ತಪ್ಪಿಸಿದಿರಿ"). ಇಂಥದ್ದು ನಿಜಜೀವನದಲ್ಲೂ ಯಾಕಾಗಬಾರದು ಅನ್ನುವುದು ಮುಗ್ಧ ರೈತರ ನಿಲುವು. ಕಾಳಿದಾಸನ ಮೇಘದೂತ ಕಾವ್ಯದಲ್ಲಿ ಯಕ್ಷನೊಬ್ಬನು ಒಂದು ಮೋಡದ ಹತ್ತಿರ ಮಾತಾಡಿ, ದೂರದಲ್ಲಿ ಅಲಕಾನಗರಿಯಲ್ಲಿದ್ದ ಯಕ್ಷಿಯ ಕಡೆಗೆ ಆ ಮೋಡವನ್ನು ಸಂದೇಶವಾಹಕನಾಗಿ ಕಳಿಸಿಕೊಟ್ಟವನು. ಹಾಗಾಗಿ ಕವಿಯ ಮಾತನ್ನು ಮೋಡವೂ ಕೇಳೀತು ಅಂತ ಆ ರೈತರ ನಂಬುಗೆ !! ಮೋಡಕ್ಕೆ ಸ್ವಲ್ಪ influence ಮಾಡಿಸಿ, ದಾರಿಯಲ್ಲಿ ನಮ್ಮ ಹೊಲಗಳಲ್ಲಿ ಬಾಯಾರಿ ಒಣಗಿನಿಂತ ಪೈರಿಗೆ ನೀರು ಸುರಿಸಲು ಹೇಳ್ತೀರಾ" ಅಂತ ರೈತರು ಕೋರಿಕೊಳ್ಳುವಲ್ಲಿಗೆ ಎಕ್ಕುಂಡಿಯವರ ಕವನ ನಿಲ್ಲುತ್ತದೆ. ಎಲ್ ಕಾದಂಬರಿಯ ನಾಯಕನಿಗೆ ಈ ಕವಿತೆ ಇಷ್ಟವಾಗುತ್ತಿತ್ತೆಂದು ಕಾಣುತ್ತದೆ. ನೇಮಿಚಂದ್ರನು ಬರೆದ, ಕಪಿ ಸಂತತಿಯು ಕಡಲಿನಲ್ಲಿ ಸೇತುವೆ ಕಟ್ಟಿತೋ ಬಿಟ್ಟಿತೋ ಗೊತ್ತಿಲ್ಲ, ಕವಿಯಂತೂ ತನ್ನ ಕಾವ್ಯಬಂಧದಲ್ಲಿ ಅದನ್ನು ಕಟ್ಟಿಬಿಟ್ಟಿದ್ದಾನೆ(ಕಟ್ಟುಗೆ ಕಟ್ಟದಿರ್ಕೆ ಕಡಲಂ ಕಪಿಸಂತತಿ..... ಕವಿಗಳ್‌ ಕೃತಿಬಂಧದೊಳಲ್ತೆ ಕಟ್ಟಿದರ್‌) ಎಂಬ ಸಾಲನ್ನು ಎಲ್ ಕಾದಂಬರಿಯ ಲಕ್ಷ್ಮಣ ಒಪ್ಪುತ್ತಾನೋ ಬಿಡುತ್ತಾನೋ ಗೊತ್ತಿಲ್ಲ. ಜೀವನ ಕಲೆಯನ್ನು ಅನುಸರಿಸುತ್ತದೆಯೇ, ಕಲೆ ಜೀವನವನ್ನೋ ಎನ್ನುವ ಪ್ರಶ್ನೆಗೆ ವುಡಿ ಅಲನ್ ಒಂದು ತಮಾಷೆಯ ಉತ್ತರ ಕೊಟ್ಟಿದ್ದಾನೆ : 'Life doesn't imitate art, it imitates bad television.'
ಹರೀಶ್ ಕೇರ ಅವರು ಗುರುತಿಸಿದಂತೆ "ಕವಿ ನಿಜಕ್ಕೂ ತನ್ನನ್ನೇ ಮಥಿಸಿಕೊಳ್ಳಲು ಹೊರಟರೆ ಏನಾಗುತ್ತದೆ?" ಎಂಬುದನ್ನು ಹೇಳುವ ಕಾದಂಬರಿಯಿದು. ಜೋಗಿಯವರು ಬರೆಯುವವರ ಸಂಕಟಗಳನ್ನು ತಮಗೇ ವಿಶಿಷ್ಟವಾದ witty ಶೈಲಿಗೆ ವಿಷಾದ, ಉತ್ಕಟತೆ, ವ್ಯಥೆಗಳಲ್ಲಿ ಅದ್ದಿ ಹೇಳಿರುವ ಕಥೆಯಿದು. ಇಂಗ್ಲೀಷಿನಲ್ಲಿ ಹೇಳುವಂತೆ ಜೋಗಿ ಮೀಟ್ಸ್ ಎಂ ವ್ಯಾಸ, ಚಿತ್ತಾಲ and ಖಾಸನೀಸ ಅಂತಲೂ ಹೇಳಬಹುದು. ಕಾಡುವುದು ಖಚಿತ.

Kavaludaari movie

Watched Kavaludaari last Saturday. It wasn't as good as GBSM and it wasn't what I expected it to be. It Still was intriguing and pretty darn good. Good as in slowly sinking into the world of a novel or sitting back and digging into a Slow burning TV series.
Regarding the genre: The interesting thing is that it is not structured like a typical suspense thriller. A suspense thriller would make every attempt to milk the suspense about what next and who the killer is going to be.
Every scene would try to build and increase the tension, it would also have 4-5 possible suspects and would place red herrings and all.
Peak point of the suspense thriller is when the killer's name and method are revealed. This movie isn't structured like that. That is probably why Hemanth called it as police drama instead of suspense thriller.
Tamil movie Ratsasan is an example of a traditionally structured suspense movie. I don't mean to suggest that one is superior to the other, just that one sticks to the rules of game and the other not so much.
Since the culprits are revealed half an hour before the end, it just goes on and on while we wait for the predictable finish (or shall we call it the commercial ending, an ending where the bad guy loses and the good prevails). Hence not sticking to the rules of the suspense genre. That's deliberately done I think.
I was a little disappointed with the way Ananth Nag's character was written. Clichéd, formulaic. He delivers a classy performance alright, but wasn't his potential wasted? Couldn't his character have been more complex, nuanced and therefore more fascinating? Writing didn't take him to the level he is capable of going. It was like hiring Elon musk to run TCS. He will do good there but he is meant to do something greater.
Some things that were wow for me: That scene where Achyuth scolds that MLA candidate at night, only in climax do we get to know what actually was going on. And that scene when the goons approach Ananth's house and he keeps that cop aagidda photo - superb build up without even uttering a word of build up. Khaki dialogue and the climactic Holi scene worked well by the way.
A film worth watching.

Fun at Amazon

Amazon can be a funny place. Here is a compilation of some hilarious stuff from their review and Q&A section.
SanDisk Ultra Dual Pen Drive:
Q: Can it be used for storage purpose?
Ans: No. It's only used for hunting rabbits.
Wakefit Memory Foam Mattress:
Q: Does this come with bed-frame too or is it just the mattress? The picture shows both?
Ans: Does it come with house too? It shows walls in the background
Shure Sound Isolating Earphones (Prices from Rs 119,999.00)
Question: What are the cables and connectors provided as Standard?
Answer: R u gonna buy this??
Reviews:
- Totally recommended....these are simply magical, just put these on...no need to connect the headphones to any source device, and you just think of a song and it start playing . What a sound quality, although had to sell of my car, but totally worth it, guys if there are any more products coming up in a similar or a higher price range, do let me know. I just realized I had two kidneys, don't need the second one.
- Just added it to CART, can't tell you, how much my self-esteem got boosted!
- I robbed a bank to buy this one.....now listening to songs in jail, a must have headphones
- I sold my laptop, iPod, TV, phone and my cochlea to buy this. The problem now is I don't have any device and the organ to try it out now.
Uranium Ore(bottle) by Images SI
Q: If I opt for air mail does it get delivered by Amazon Prime Air or CIA drones?
Ans: No sir, just give us your coordinates and we will deliver it via intercontinental missile in less than an hour, guaranteed speed.
Reviews:
- I got a free cat in the box with this purchase but I'm not sure if I should open it to see if the cat is ok.
- I purchased this product 4.47 Billion Years ago and when I opened it today, it was half empty.
- This is NOT, repeat, NOT a woman from the Ukraine. Very disappointed but can only blame myself. Please read description when sober.
How to Avoid Huge Ships(Book)
Review: Read this book before going on vacation and I couldn't find my cruise liner in the port. Vacation ruined.
---------------------------------------------------------------------------
Lastly, reviews of a book that had the leftists excited:
At first, I was skeptical. It seemed difficult to believe a cogent argument could be made in such a short tome. As I read, however, I become more and more engrossed in the text. The prose is elegant and to-the-point. There is very little fluff in the language, and every word is chosen very carefully. By the end, I was fully convinced. This author can definitely convey his ideas fully and articulately.
Best book I ever read. Once I started I couldn’t put it down until I finished. Straight to the point no nonsense literature.
Thinking as to what exactly is so funny about these 2 reviews? Here is the thing. Title of the book is: “Why Socialism Works”. And the entire book has just 2 words: “It doesn’t”
Share your favorite ones too

ಕುಮಾರವ್ಯಾಸನ ಉದ್ಯೋಗ ಪರ್ವ

ಇದನ್ನೊಂದು ಲೇಖನವೆಂದು ಬರೆದದ್ದಲ್ಲ, ಋತುಮಾನ ಸೈಟಿಗೆ, ಕಂಚಿನ ಕಂಠದ ಚಂದ್ರಶೇಖರ ಕೆದಿಲಾಯರು ಮಾಡಿಕೊಟ್ಟ ಗಮಕವಾಚನಕ್ಕೆ ಪೀಠಿಕೆಯಾಗಿ, ಸ್ವಲ್ಪ ಅರ್ಜೆಂಟಿನಲ್ಲೇ ಬರೆದಿದ್ದ ಪುಟ್ಟ ಟಿಪ್ಪಣಿ :
ಕರ್ಣಭೇದನವು ಹಲವು ಕಾರಣಗಳಿಗೆ ಪ್ರಸಿದ್ದವಾದ ಪ್ರಸಂಗ. ಯಕ್ಷಗಾನದಲ್ಲಿಯೂ, ಯಕ್ಷಗಾನ ತಾಳಮದ್ದಳೆಯಾಗಿಯೂ ಹೆಸರು ಮಾಡಿರುವ ಪ್ರಸಂಗವಿದು . ಕುಮಾರವ್ಯಾಸನ ಉದ್ಯೋಗಪರ್ವದಲ್ಲಿ, ಹತ್ತನೇ ಸಂಧಿಯಲ್ಲಿ ಇದು ಬರುತ್ತದೆ. ಕೃಷ್ಣನ ರಾಜಕೀಯದ ಪಟ್ಟುಗಳು, ಲಾಭ ಕುದುರಿಸಲಿಕ್ಕೆ ಹೊರಟ Corporate management ಅನ್ನು ಹೋಲಬಹುದಾದ ಸಮಾಲೋಚನೆಯ ಶೈಲಿ, ಕರ್ಣನನ್ನು ಭಾವನೆಯ ಬಲೆಯಲ್ಲಿ ಬಂಧಿಸಿ ಅವನ ಸ್ವಾಮಿನಿಷ್ಠೆಯನ್ನು ಪರೀಕ್ಷಿಸುವುದು ಎಲ್ಲ ಅತ್ಯಂತ ನಾಟಕೀಯವಾಗಿದೆ. ಸಂಧಾನಕ್ಕೆಂದು ಹೋಗಿದ್ದ ಕೃಷ್ಣ, ಕೌರವನಿಂದ ರಣದ ವೀಳ್ಯ ಪಡೆದು, ಹಸ್ತಿನಾವತಿಯ ರಾಜಸಭೆಯಿಂದ ಹೊರನಡೆದ ಮೇಲೆ ಘಟಿಸುವ ಘಟನೆಯಿದು. ಕರ್ಣನನ್ನು ಏಕಾಂತಕ್ಕೆ ಕರೆದುಕೊಂಡುಹೋಗಿ, ಅವನ ಹುಟ್ಟಿನ ವಿವರಗಳನ್ನು ಅವನಿಗೆ ತಿಳಿಸಿ, ಅವನನ್ನು ಒಲಿಸಿಕೊಳ್ಳುವ, ಯುದ್ಧವನ್ನೇ ಮಾಡದೆ ಸೋಲಿಸುವ ಪ್ರಯತ್ನವೇ ಈ ಪ್ರಸಂಗದ ತಿರುಳು.

ಕುಮಾರವ್ಯಾಸನ ಕೃಷ್ಣನಂತೂ ನುರಿತ ಮನೋವಿಜ್ಞಾನಿಯಂತೆ, ಪಳಗಿದ ಸೇಲ್ಸ್ ಮ್ಯಾನ್ ಒಬ್ಬನಂತೆ ಆಕರ್ಷಕವಾದ ಮಾತು, ನಡೆಗಳ ಮೂಲಕ ಕರ್ಣನನ್ನು ಒಳಗೊಳಗೇ ಕುಸಿಯುವಂತೆ ಮಾಡುತ್ತಾನೆ. ಕುಮಾರವ್ಯಾಸನ ಕೃಷ್ಣನು, ಇನತನೂಜನ ಕೂಡೆ ಮೈದುನತನದ ಸರಸವನೆಸಗಿ ವಿಷಯ ಶುರುಮಾಡುತ್ತಾನೆ. (ಶತ್ರುಪಾಳಯದವನಾದ ಕರ್ಣ ಕುಂತಿಯ ಮಗನಾಗಿದ್ದದ್ದು ಇಷ್ಟು ದಿನ ನೆನಪಿಗೆ ಬರದೇ ಈಗ ಬರುತ್ತದೆ !) ಯಾದವ ಕುಲ ತಿಲಕನಾದ ಕೃಷ್ಣನು ಸೂತಪುತ್ರನಾದ ಕರ್ಣನನ್ನು ಬರಸೆಳೆದು, ತೊಡೆ ಸೋಂಕಿನಲಿ ಕುಳ್ಳಿರಿಸಿ ತಬ್ಬಿಬ್ಬಾಗಿಸುತ್ತಾನೆ. ಕೀರ್ತಿನಾಥ ಕುರ್ತಕೋಟಿಯವರ ಮಾತಿನಲ್ಲಿ ಹೇಳುವುದಾದರೆ : "ಕರ್ಣನ ಮನಃಸ್ಥಿತಿ ಹೇಗಿತ್ತೆಂದರೆ, ಯಾರಾದರೂ ಅವನಿಗೆ ಸೂತಪುತ್ರ ಎನ್ನಬೇಕು , ಆಗ ಸಿಟ್ಟಿನಿಂದ ಅವನ ಪರಾಕ್ರಮ ಹೆಚ್ಚಾಗಬೇಕು, ತಾನು ಸೂತಪುತ್ರ ಅಲ್ಲ ಅಂತ ತೋರಿಸಬೇಕು. ಅವನಿಗೆ ಯಾವಾಗಲೂ ತನ್ನ ಅಸ್ಮಿತೆಯ ಬಗ್ಗೆ ಎಚ್ಚರ. ಕೃಷ್ಟ ಅಂಥದ್ದೇನೂ ಮಾಡಲಿಲ್ಲ". ಬೈಯ್ಯದೆ, ಬಡಿಯದೆ, ಒಳ್ಳೆಯ ಮಾತುಗಳಲ್ಲಿ ಹೊಗಳಿ ಕೆಡವುವುದು ಅಂದರೆ ಇದೇ ತಾನೇ ! ಅಷ್ಟೇ ಅಲ್ಲ , ಅವನ ಕರದೊಳು ಕರತಳವನಿಕ್ಕಿ, ನಿನ್ನಯ ಕುಲವನರಿ, ವೃಥಾ ಸೇವಕತನದಲಿ ಇಹುದು ಉಚಿತವಲ್ಲ ಅಂತ ಅವನ ಹಿತೈಷಿಯಂತೆ ಮಾತಾಡುತ್ತಾನೆ, "ಇಷ್ಟು ಟ್ಯಾಲೆಂಟ್ ಇದ್ರೂ ನಿನಗೆ ಸರಿಯಾಗಿ salary hike ಯಾಕೆ ಆಗಿಲ್ಲ" ಎಂದು ಹಿತಚಿಂತನೆಗೆ ತೊಡಗುವ ಕಾರ್ಪೊರೇಟು recruiterನಂತೆ.

ಕರ್ಣ ಮನಸ್ಸು ಮಾಡಿದರೆ, ಕುರುಕ್ಷೇತ್ರದ ಯುದ್ಧವೇ ನಡೆಯುವುದಿಲ್ಲ. ಆಗ ಹಿರಿಯನಾದ ಕರ್ಣನಿಗೆ ಪಟ್ಟಕಟ್ಟಿ ಕೌರವ ಪಾಂಡವ ಮತ್ತಿತರರು ಒಟ್ಟಿಗೇ ಕೂತರೆ ಆ ಚಿತ್ರ ಹೇಗಿರುತ್ತದೆ? “ಎಡದ ಮೈಯಲಿ ಕೌರವೇಂದ್ರರ ಗಡಣ. ಬಲದಲಿ ಪಾಂಡುತನಯರ ಗಡಣವಿದಿರಲಿ ಮಾದ್ರ ಮಾಗಧ ಯಾದವಾದಿಗಳು ನಡುವೆ ನೀನೋಲಗದೊಳು !” ಅಂತ ಆಮಿಷ ಒಡ್ಡುತ್ತಾನೆ. ನೀನು ನಮ್ಮಲ್ಲೇ ಉಳಿದರೆ, ಈ ಸರ್ತಿ ಪ್ರಮೋಷನ್ ಗ್ಯಾರಂಟಿ ಎನ್ನುವವನಂತೆ. “ಒಪ್ಪುವ ಕಡುವಿಲಾಸವ ಬಿಸುಟು, ಕುರುಪತಿ ನುಡಿಸೆ,ಜೀಯ ಹಸಾದವೆಂಬುದು ಕಷ್ಟ ನಿನಗೆ !” ಅಂತ ಒಗ್ಗರಣೆ ಹಾಕುತ್ತಾನೆ.

ಈ ತಂತ್ರಗಾರಿಕೆಗೆ ಕರ್ಣನ ಕೊರಳ ಸೆರೆ ಹಿಗ್ಗುತ್ತದೆ, ದೃಗುಜಲ ಉರವಣಿಸುತ್ತದೆ, ಅವನು ಕಡುನೊಂದನು ಎನ್ನುತ್ತಾನೆ ಕವಿ. ಕರ್ಣನೇನು ಕೃಷ್ಣನ ಜಾಣ್ಮೆಯ ಅರಿವಾಗದಷ್ಟು ದಡ್ಡನಲ್ಲ. ಹೀಗಾಗಿ "ಭೇದದಲಿ ಹೊಕ್ಕಿರಿದನೋ ಮಧುಸೂದನನು", "ನೀನು ಕೌರವೇಂದ್ರನ ಕೊಂದೆ" ಅಂತೆಲ್ಲ ಹೇಳಿ ತಾನೇಕೆ ಕೌರವಪಕ್ಷವನ್ನು ತೊರೆಯಲಾರೆ ಅಂತ ಹೇಳುವುದನ್ನು ಕುಮಾರವ್ಯಾಸ ಸೊಗಸಾಗಿ ಚಿತ್ರಿಸಿದ್ದಾನೆ. ಕಡುಕಾವಲು ಇರುತ್ತಿದ್ದ ರಾಜರ ಅಂತಃಪುರಗಳಿಗೆ ಕಪಟದಿಂದ ಹೊಕ್ಕು ಇರಿಯುವ, ಕೊಲೆಯ ಪ್ರಯತ್ನಗಳನ್ನು ಮಾಡುವವರು ಕುಮಾರವ್ಯಾಸನ ಕಾಲದಲ್ಲಿ ಇದ್ದಿರಬೇಕು, ಆದರೆ ಇಲ್ಲಿ ಭೇದೋಪಾಯದಿಂದ ಹೊಕ್ಕದ್ದು ಮನಸ್ಸಿಗೆ, ಅದಕ್ಯಾವ ರಕ್ಷಣೆ ? ಇರಿದದ್ದು ಭಾವವನ್ನು, ಅದನ್ಯಾರು ಕಾಪಿಡುವವರು? "ಕೌರವೇಂದ್ರನ ಕೊಂದೆ" ಎಂಬ ಮಾತು ಎಷ್ಟು ಮಾರ್ಮಿಕ ನೋಡಿ, ಒಬ್ಬನ ಹುಟ್ಟಿನ ಗುಟ್ಟನ್ನು ಬಿಚ್ಚಿದರೆ ಮತ್ತೊಬ್ಬನನ್ನು ಕೊಂದಂತೆ ಆಗುತ್ತದೆ. ತನ್ನ ಜನ್ಮವೃತ್ತಾಂತ ಹೊರಗೆ ಬಂತು ಎನ್ನುವುದಕ್ಕಿಂತ ಕುರುಪತಿಗೆ ಕೇಡಾಯಿತಲ್ಲಾ ಅಂತ ಕರ್ಣ ಮರುಗುತ್ತಾನೆ

ಗಮಕವಾಚನ ಇಲ್ಲಿದೆ :
https://youtu.be/tqBQz8egQT8 

ನನ್ನ ಬಾಗಿಲು ತೆರೆಯೇ ಸೇಸಮ್ಮ ಪುಸ್ತಕಕ್ಕೆ ಬಂದ ಪ್ರತಿಕ್ರಿಯೆಗಳು/ವಿಮರ್ಶೆಗಳು Part 3

ನನ್ನ ಪುಸ್ತಕಕ್ಕೆ ಬಂದ ಪ್ರತಿಕ್ರಿಯೆಗಳು/ವಿಮರ್ಶೆಗಳು(Baagilu Tereye Sesamma - Sharath Bhat Seraje - Book reviews):

ವಿಷ್ಣು ಭಟ್, ಹೊಸ್ಮನೆ ಅವರು ನನ್ನ ಪುಸ್ತಕವನ್ನೋದಿ ಬರೆದಿರುವ ಸಾಲುಗಳು :
ಅಬ್ಬಾ! ವೈಚಾರಿಕ ಪ್ರಬಂಧಗಳನ್ನು ಹೀಗೂ ಬರೆಯಬಹುದೇ? ಎಂದು ಹುಬ್ಬೇರುವಂತೆ ಮಾಡುವ ಈ ಸೇಸಮ್ಮ ಬಾಗಿಲು ಹಾಕಿ ಕುಂತಿದ್ದಾದರೂ ಯಾಕೆ? ಎಂಬುದನ್ನು ತಿಳಿದುಕೊಳ್ಳಲು ಪುಸ್ತಕ ಓದಲೇ ಬೇಕು. ಶರತ್ ಭಟ್ ಸೇರಾಜೆಯವರ ಜ್ಞಾನ ಇಲ್ಲಿ ಹರಿದ ಬಗೆ ನದಿಯ ನೀರಿನಂತೆ. ಯಾಕೆಂದರೆ ನದಿಯ ನೀರು ಸಮುದ್ರದ ನೀರಿನಂತಲ್ಲ! ಸಮುದ್ರದ ನೀರಿಗೆ ಹೋಲಿಸಿದರೆ ನದಿಯ ನೀರು ಅಳತೆಯಲ್ಲಿ ಎಷ್ಟೂ ಅಲ್ಲದೇ ಇರಬಹುದು. ಆದರೆ ನದಿಯ ನೀರು ಹರಿಯುವಷ್ಟು ಪ್ರದೇಶಗಳನ್ನು ಸಮುದ್ರ ನೋಡುವುದೇ ಇಲ್ಲ. ನದಿಯ ನೀರು ಎಲ್ಲವುದರ ಮೇಲೂ ಹರಿದುಕೊಂಡು ಬರುತ್ತದೆ. ಮುಳ್ಳು, ಕಲ್ಲು, ಗಿಡ, ಮರ ಎಲ್ಲವನ್ನೂ ಸವರಿಕೊಂಡು ಸಾಗುತ್ತದೆ. ಕಂದಕಗಳಿಗೆ ಧುಮುಕುತ್ತದೆ. ಅಲ್ಲೊಂದು ಜಲಪಾತವಾಗಿ ರಂಜಿಸುತ್ತದೆ. ಕೆಲವೆಡೆ ವಿಶಾಲವಾಗಿ ಹರಡಿಕೊಂಡು, ಇನ್ನು ಕೆಲವೆಡೆ ಚಿಕ್ಕದಾಗಿ ಇರುವಷ್ಟೇ ದಾರಿಯಲ್ಲಿ ಹರಿಯುತ್ತದೆ. ನಿಧಾನವಾಗಿ ದಾರಿ ಮಾಡಿಕೊಳ್ಳುವ, ಎಲ್ಲ ಸೂಕ್ಷ್ಮಗಳನ್ನು ಹೊಕ್ಕು ಹೊರಬೀಳುವ ಜಾಣ್ಮೆ ಈ ನದಿಯ ನೀರಿಗಿದೆ. ಅಂತಹ ಹರಿವ ನದಿಯೇ ಈ ಪ್ರಬಂಧಗಳು. ಎಲ್ಲಾ ವಿಷಯಗಳನ್ನೂ ಒಂದೊಂದಾಗಿ ತೆರೆದಿಟ್ಟಿರುವ ಶರತ್ ಭಟ್ಟರು ನಮ್ಮೊಳಗಿನ ಪ್ರಶ್ನೆಯನ್ನು ತಾವೇ ಕೇಳುತ್ತ, ಉತ್ತರಿಸುತ್ತ ಕೊನೆಯಲ್ಲಿ ಹೊಸದೊಂದು ವೈಚಾರಿಕ ಲೋಕಕ್ಕೆ ನೇರವಾಗಿ ಎಳೆದು ಬಿಡುತ್ತಾರೆ. ಇದು ಅವರ ಶಕ್ತಿಯೋ ಯುಕ್ತಿಯೋ? ಎಂದು ಕೇಳಿದರೆ ಎರಡೂ ಸರಿಯಾದ ಉತ್ತರವೇ.

ಅಲೆ ಅಲೆ ಎನ್ನುತ್ತ ಕೊನೆಗೆ ನಮ್ಮ ತಲೆ, ತಲೆಹರಟೆಯ ತನಕ ಪೋಣಿಸಿಟ್ಟ ಅಕ್ಷರಗಳಲ್ಲಿ ಗಂಭೀರ ವಿಚಾರಗಳಿವೆ, ಹಾಸ್ಯವಿದೆ, ಜ್ಞಾನವಿದೆ, ಯೋಚನೆಗಳಿವೆ ಮತ್ತು ಓದುಗನ ತಲೆಯೊಳಗೇ ಓಡಾಡುವ ಯೋಚನಾಹುಳುಗಳೂ ಇವೆ! ಹದಿನೈದು ವಿಭಿನ್ನ ವಿಚಾರಗಳನ್ನು ಸೇಸಮ್ಮ ಹೊತ್ತು ತಂದಿದ್ದಾಳೆ. ಅವುಗಳನ್ನು ಓದಿ ನಗುವುದಕ್ಕಿದೆ, ನಾವು ಮಾಡುವ ತಪ್ಪುಗಳನ್ನೂ ಸರಿ ಪಡಿಸಿಕೊಳ್ಳುವುದಕ್ಕಿದೆ, ನಮ್ಮನ್ನೇ ನಾವು ಪ್ರಶ್ನಿಸಿಕೊಳ್ಳುವುದಕ್ಕಿದೆ, ಗಂಭೀರವಾದ ನಿರ್ಧಾರಕ್ಕೆ ಬರಬೇಕಾದ ವಿಷಯಗಳೂ ಇವೆ. ಇಷ್ಟೆಲ್ಲವನ್ನೂ ಹೇಗೆ? ಎಲ್ಲಿಂದ ತಂದಿರಿ? ಎಂಬ ಪ್ರಶ್ನೆಗೆ ಶರತ್ ಭಟ್ ಅವರೇ ಉತ್ತರಿಸಬೇಕು.

ಎಲ್ಲರೂ ಓದ ಬೇಕಾದ ತುಂಬಾ ಚಂದದ ಪುಸ್ತಕ. ಅಂಕಿತ ಪ್ರಕಾಶನಕ್ಕೂ ಅಂಕಿತ ಪ್ರತಿಭೆ ಮಾಲಿಕೆಯ ಸಂಕಲನಕಾರರಾದ ಜೋಗಿಯವರಿಗೂ ವಂದನೆಗಳು. ಶರತ್ ಭಟ್ಟರಿಗೆ ನಮೋನ್ನಮಹಃ||

ಪುಸ್ತಕದ ಮುಖಪುಟದಲ್ಲಿ ಬಾಗಿಲು ಹಾಕಿದೆ, ಕೆಲವು ಬೀಗಗಳೂ ಹಾಕಿಕೊಂಡಿವೆ. ಬಾಗಿಲು ತೆರೆಯೇ ಸೇಸಮ್ಮ ಎಂದು ಒಳಹೋಗುವವರು ಕೇಳುವುದಲ್ಲ, ಒಳಗಿದ್ದವರು ಕೇಳುವುದು. ಪುಸ್ತಕದ ಒಳಗೆ ಹೊಕ್ಕರೆ ಹೊರಬರಲು ಖಂಡಿತವಾಗಿಯೂ ಆ ಹದಿನೈದು ಬೀಗಳನ್ನು ತೆಗೆಯಲೇ ಬೇಕು. ಒಳಗೆ ಹೋಗಿ ನೋಡಿ!

ಒದುಗ ಇನ್ನೂ ಒಳಗೇ ಇದ್ದಾನೆ..ಬಾಗಿಲು ತೆರೆಯೇ ಸೇಸಮ್ಮ ಪ್ಲೀಸ್..
ಅಂಕಿತ ಪುಸ್ತಕ, ಗಾಂಧೀಬಜಾರಿನಲ್ಲಿ ಪುಸ್ತಕದ ಪ್ರತಿಗಳು ಸಿಗುತ್ತವೆ.
--------------------------------------------------------
ಅಜಿತ್ ಹೆಗ್ಡೆ ಹರೀಶಿ ಅವರ ಸಾಲುಗಳು
ಅಂಕಿತ ಪ್ರತಿಭೆ ಮಾಲಿಕೆ-5 ಅಡಿಯಲ್ಲಿ ಅದರ ಸಂಪಾದಕರಾದ ಜೋಗಿಯವರು ಶರತ್ ಭಟ್ಟರನ್ನು ಗುರುತಿಸಿ ಈ ಕೃತಿಯನ್ನು ಪ್ರಕಟಿಸಲು ಅನುವು ಮಾಡಿಕೊಟ್ಟಿದ್ದಾರೆ.ಶರತರ ಈ ಎಲ್ಲಾ ಹದಿನೈದು ಪ್ರಬಂಧಗಳು ಈ ಗೌರವಕ್ಕೆ ಅರ್ಹವಾಗಿವೆ.

ಈ ಲೇಖನಗಳನ್ನು ಓದಿದಾಗ ಅವರು ಅಪಾರವಾಗಿ ಓದಿಕೊಂಡವರು ಎಂಬುದೂ ಗೊತ್ತಾಗುತ್ತದೆ.ಬಳಸಿದ ಭಾಷೆ ಬಹಳ ಚೆನ್ನಾಗಿದೆ.ಅವರ ತರ್ಕ, ತಮಾಷೆ ಮತ್ತು ವಿಷಯವನ್ನು ವಿವರಿಸಲು ಕೊಡುವ ಉದಾಹರಣೆಗಳು ವಿಶಿಷ್ಟವಾಗಿವೆ.

ಗುರುತ್ವದ ಅಲೆ ಕುರಿತು ಸಾಮಾನ್ಯ ಜನರಿಗೆ ಅರ್ಥವಾಗುವಂತೆ ಸರಳವಾಗಿ ವಿವರಿಸಬಹುದು ಎಂದು ಸೇರಾಜೆ ತೋರಿಸಿಕೊಟ್ಟಿದ್ದಾರೆ. ಜೊತೆಗೆ ಪಂಚಿಂಗ್ ಡೈಲಾಗ್ಸ್ ಇವೆ. ಇವು ನಮ್ಮಲ್ಲಿ ನಗುವನ್ನು ಉಕ್ಕಿಸುತ್ತವೆ.

ಅವರು ಗೋಪಾಲಕೃಷ್ಣ ಅಡಿಗರ ಯಾವ ಮೋಹನ ಮುರಲಿ ಕರೆಯಿತು ಕವಿತೆಯ ಬಗ್ಗೆ ಸಾಹಿತ್ಯದ ವಿದ್ಯಾರ್ಥಿಯಂತೆ ಚೆಂದವಾಗಿ ವರ್ಣಿಸಿದ್ದಾರೆ.ಬಿಎಂಶ್ರೀಯಿಂದ ಬರ್ನ್ಸ್ ಎಂಬ ಕವಿಯವರೆಗೆ ಉಲ್ಲೇಖ ಮಾಡಿದ್ದಾರೆ.

ಥಟ್ ಅಂತ ರಾಷ್ಟ್ರಗಳ ಸಂಖ್ಯೆ ಬಗ್ಗೆ ಶರತ್ ಹೇಳಿಬಿಡುತ್ತಾರೆ.ದೇಶಗಳನ್ನೂ, ಅವುಗಳ ಗುಟ್ಟುಗಳನ್ನು, ಜೋಕುಗಳನ್ನು ಕ್ರ್ಯಾಕ್ ಮಾಡುತ್ತಾ ಬೆಡ್ ರೂಂವರೆಗೂ ಬರುತ್ತಾರೆ.

ಅರ್ಥವೆಂಬ ಊಸರವಳ್ಳಿಯಲ್ಲಿ ಶಬ್ದದ ಅನುಕರಣೆ ಮಾಡಿ ಬದಲಾದ ಅರ್ಥಗಳ ಬಗ್ಗೆ ಮಾಹಿತಿ ಕೊಡುತ್ತಾರೆ. ರೀಸಸ್ ( ಬಿಡುವು ) ಶಬ್ದ ಮೂತ್ರ ವಿಸರ್ಜನೆಗೆ ಬಳಕೆಯಾಗಿದ್ದು. ಆಯಿಲ್, ಸಕತ್, ಪ್ರವೀಣ ಮುಂತಾದ ಶಬ್ದಗಳ ಬಗ್ಗೆ ಇಲ್ಲಿ ಭಟ್ಟರು ಹೇಳಿದ್ದಾರೆ.

ಬಾಗಿಲು ತೆರೆಯೇ ಸೇಸಮ್ಮ - ನಾವು ಇಂದು ಸೋಷಿಯಲ್ ಮೀಡಿಯಾಗಳಲ್ಲಿ ಬಳಸುವ ಪಾಸ್ವರ್ಡ್ ಕುರಿತು ಮಾಹಿತಿ ನೀಡುವ ಮತ್ತು ಹ್ಯಾಕರ್ ಗಳ ವಿವರ ನೀಡುವ ಪ್ರಬಂಧ.
ಇದು ನಿಮಗೆ ಗೂಗಲ್ ಮಾಡಿದರೂ ಸಿಗಬಹುದು ಆದರೆ ಇಲ್ಲಿ ಅವರು ವಿವರಿಸಿದರ ಶೈಲಿ ಇದೆಯಲ್ಲ ಇದು ವಿಭಿನ್ನ ಮತ್ತು ಸರಳವಾಗಿದೆ.

ಮರ್ಯಾದೆ ತೆಗೆಯುವ ಕಲೆಯನ್ನು ಓದುತ್ತಾ ನೋಡಬಹುದು ಮತ್ತು ಬೆಚ್ಚಿಬೀಳಬಹುದು.
ಇಂಗ್ಲಿಷ್ ಮಾಧ್ಯಮದ ಕುರಿತು ಅವರ ನಿಲುವನ್ನು ಒಪ್ಪದಿರುವುದು ಕಷ್ಟ. ಇಂಗ್ಲೀಷ್ ಭಾಷೆ ದೋಸೆಯಾದರೆ ಮಾತೃಭಾಷೆ ಕನ್ನಡ ಊಟ ಎಂಬ ಸೋದಾಹರಣೆ ಚೆನ್ನಾಗಿದೆ.

ಲೆಕ್ಕ ಹಾಕಿ ಸುಳ್ಳು ಹೇಳಿ - ಈ ಕ್ಷಣದ ಕಟು ವಾಸ್ತವವನ್ನು ಅನಾವರಣ ಮಾಡುವ ಲೇಖನ.
ಸಿನೆಮಾ ಮತ್ತು ಕಳ್ಳತನ ಕುರಿತು ಅವರ ವಿಚಾರ, ನಮ್ಮ ತಲೆಗೆ ಕೈ ಹಾಕಿ ಹೂಂಗುಟ್ಟುವಂತೆ ಮಾಡುತ್ತದೆ.ವಿಮರ್ಶಕರಿಗೆ ಶಾಲಿನಲ್ಲಿ ಕಲ್ಲು ಹಾಕಿ ತಟ್ಟಿದ್ದಾರೆ.

ಕಾರಂತಜ್ಜನ ಕಥೆಗಳು - ಇದರಲ್ಲಿ ಕಾರಂತರ ಕುರಿತು ಅಪರೂಪದ ವಿಷಯಗಳಿವೆ.ಬಲಿ ಚಕ್ರವರ್ತಿಯ ತ್ರಿವಿಕ್ರಮ ದಲ್ಲಿ ಮಿಖಾಯಿಲ್ ತಾಲ್ ಎಂಬ ಚೆಸ್ ಆಟಗಾರ ಬರುತ್ತಾನೆ.ಅದನ್ನು ಓದುವುದೇ ಒಂದು ಪುಳಕ.

ನಮ್ಮ ತಲೆಯೂ ನಮ್ಮ ಹರೆಟೆಯೂ; ವೈಚಾರಿಕ ಲಲಿತ ಪ್ರಬಂಧ ಬರೆಯಲು ಆಸಕ್ತಿ ಇರುವವರು ಅಧ್ಯಯನ ಮಾಡುವಂತಹ ಒಂದು ಲೇಖನ.

ಈ ಎಲ್ಲಾ ಅಂಶಗಳನ್ನು ಗಮನಿಸಿದರೆ ಒಮ್ಮೆ ಓದಲೇಬೇಕಾದ ಲೇಖನಗಳ ಗುಚ್ಛ ಶರತರ ಈ ಕೃತಿ ಎಂದು ಬೇಷರತ್ತಾಗಿ ಹೇಳುವೆ.
-------------------------------------------------------
ಹಿರಿಯರೂ,ಸಂವೇದನಾಶೀಲರೂ ಆದ ಪಿ ಎಸ್ ನಾಯಕ್ ಸರ್ ನನ್ನ ಪುಸ್ತಕವನ್ನೋದಿ, ಯಕ್ಷಗಾನ ತಾಳಮದ್ದಳೆಯ ಹಂಚಿಕೆ, ಚರ್ಚೆಗಳಿಗಾಗಿ ಸುಧಾಕರ ಜೈನರು ಹುಟ್ಟುಹಾಕಿದ ಅರ್ಥಾಂಬುಧಿ ಎನ್ನುವ ಗ್ರೂಪಿನಲ್ಲಿ ಬರೆದದ್ದು:
ಇದೊಂದು ವೈಚಾರಿಕ ಲಲಿತ ಪ್ರಬಂಧಗಳ ಸಂಕಲನ. ಲೇಖಕರು ಶ್ರೀಯುತ ಶರತ್ ಸೇರಾಜೆ, ನಮ್ಮ ಬಳಗದ ಬಂಧು.

ಸೇರಾಜೆ ಎಂದಾಗ ಎರಡರ್ಥದಲ್ಲಿ ಸ್ಪೂರ್ತಿದಾಯಕ- ಒಂದು, ಸೀತಾರಾಮಯ್ಯರಂತಹ ಮೇರು ಯಕ್ಷ ಕಲಾವಿದ, ಲೇಖಕ, ಚಿಂತಕರಿಗೆ ಜನ್ಮ ನೀಡಿದ ದೇರಾಜೆ(ಚೊಕ್ಕಾಡಿ)ಯೊಂದಿಗೆ ಹೊಂದಿದ ಧ್ವನಿ ಸಾಮ್ಯತೆ. ಇನ್ನೊಂದು, ಸೇರಾಜೆ ಮನೆತನ ಕುರಿಯ ವಿಟ್ಠಲ ಶಾಸ್ತ್ರಿಯವರ ಕುಟುಂಬಕ್ಕೂ ಪದ್ಯಾಣ ಕುಟುಂಬಕ್ಕೂ ಬೆಸೆದ ಯಕ್ಷಗಾನೀಯ ಬಾಂಧವ್ಯ.

ಸುಮಾರು ಒಂದು ವರ್ಷದ ಹಿಂದೆ(ಈ ಪುಸ್ತಕ ಬಿಡುಗಡೆಯ ಮೊದಲು) ಶರತ್ ಇವರ "ಸರಿಗನ್ನಡಂ ಗೆಲ್ಗೆ" ಲೇಖನ(ಸಂಖ್ಯೆ ೧೨-ಪುಟ ೯೭) ಇದೇ ಬಳಗದಲ್ಲಿ ಪ್ರಸಾರವಾಗಿತ್ತು. ಕನ್ನಡ ಭಾಷೆಯ ಬಳಕೆಯಲ್ಲಿ ಕಂಡುಬರುವ ತಪ್ಪುಗಳನ್ನು ಕ್ರೋಡೀಕರಿಸಿ ಅವುಗಳ ಸರಿಯಾದ ರೂಪವನ್ನು ತಿಳಿಸುವ ಒಂದು ಸುಂದರ ಲೇಖನ.

ಶರತ್ ರ ಲೇಖನಿಯ ಮೊನಚು, ಸರಿಯನ್ನು ಸರಿಯೆಂದು ಹೇಳುವ ಛಾತಿ, ರೇಷ್ಮೆಯಂತೆ ನುಣುಪಾದ ಶೈಲಿ, ಎಲ್ಲವೂ ನನ್ನನ್ನು ಸೆರೆಹಿಡಿದಿದ್ದವು.

ಇಂತಹ ೧೪ (ಒಟ್ಟಿಗೆ ೧೫) ಲೇಖನಗಳನ್ನೊಳಗೊಂಡ ೧೩೨ ಪುಟಗಳ "ಬಾಗಿಲು ತೆರೆಯೇ ಸೇಸಮ್ಮ" ಬಿಡುಗಡೆಗೆ ಸಜ್ಜಾಗಿದೆ ಎನ್ನುವದನ್ನು ಅವರಿಂದ ತಿಳಿದ ಕೂಡಲೇ ನನಗಾಗಿ ಒಂದು ಪ್ರತಿಯನ್ನು ಕಳುಹಿಸುವಂತೆ ಬಿನ್ನವಿಸಲಾಗಿ ಎರಡು ತಿಂಗಳ ಹಿಂದೆ ನನ್ನ ಮನೆಗೆ ತನ್ನ ಚೊಚ್ಚಲ(?) ಕೃತಿಯನ್ನು ತಪ್ಪದೆ ಕಳುಹಿಸಿದ ಶರತ್ ಗೆ ನನ್ನ ಬೇಶರತ್ ಅಭಿನಂದನೆ(ಸಂಪಾದಕ ಜೋಗಿಯವರನ್ನು ಉದ್ಧರಿಸಿ).

ಬೀಸ ಬೀಸ ಓದಿರಿ ಎಂದು ಕಳುಹಿಸಿದ ಪುಸ್ತಕ ನನ್ನೂರು ಮುಟ್ಟುವಾಗ ನಾನು ಅವರ ಊರಿಗೆ ಹೋಗಬೇಕೇ? Don't bite more than what you can chew ಎನ್ನುವಂತೆ, ಅರೆಯುವಷ್ಟನ್ನೇ ಅಗೆಯುವ ಜಾಯಮಾನದ ನನಗೆ ಇಡೀ ಪುಸ್ತಕವನ್ನು ಓದಲು ಎರಡು ವಾರಗಳೇ ಬೇಕಾದವು.

ಇಷ್ಟಕ್ಕೂ ಯಾರೀ ಸೇಸಮ್ಮ? ಕದವ ತಟ್ಟುವವರಾರು? ಯಾಕಾಗಿ? ಯಾರಿಗಾಗಿ?

ಕುತೂಹಲವೇ ಕಾರಣವಾಗಿ, ನಾನು ಓದಿದ ಮೊದಲ ಲೇಖನ ಪುಸ್ತಕದ ಶೀರ್ಷಿಕೆಯ "ಬಾಗಿಲು ತೆರೆಯೇ ಸೇಸಮ್ಮ"(ಸಂಖ್ಯೆ ೫, ಪುಟ ೪೮). ಪ್ರವೃತ್ತಿಯಲ್ಲಿ ಲೇಖಕರಾದರೂ ವೃತ್ತಿಯಲ್ಲಿ ಒಬ್ಬ ಮಾಹಿತಿತಂತ್ರಜ್ಞಾನ(Information Technology) ಹೊಂದಿರುವವರು ಎನ್ನುವುದು ಈ ಲೇಖನದಲ್ಲಿ ನಿಚ್ಚಳವಾಗುತ್ತದೆ.

"ಕಂಪ್ಯೂಟರ್ ಜ್ಞಾನವೇ ಜ್ಞಾನ" ಎನ್ನುವ ಯುಗದಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡುಗಳ ಪಿನ್ನುಗಳು, ಫೇಸ್ ಬುಕ್, ಈ ಮೈಲ್ ಗಳಲ್ಲಿ ಬಳಸಬೇಕಾದ "ಗುಪ್ತ ಸಂಖ್ಯೆ(password)" ಎನ್ನುವ ರಹಸ್ಯಮಂತ್ರಗಳ ಬಳಕೆಯಲ್ಲಿರಬೇಕಾದ ಎಚ್ಚರ, ತಪ್ಪಿದಲ್ಲಿ ಆಗುವ ಅನಾಹೂತ ಅನಾಹುತ.... ಎಲ್ಲವನ್ನೂ ಎಳೆ ಎಳೆಯಾಗಿ ಎಳೆದುತಂದಿದ್ದಾರೆ.

ಲೇಖಕರ ಅಧ್ಯಯನಶೀಲತೆಯನ್ನು ಮನಂಬುಗಬೇಕಾದರೆ "ಅಲೆ ಅಲೆ ಅಲೆ ಗುರುತ್ವದ ಅಲೆಯೋ??!" ; "ಲೆಕ್ಕ ಹಾಕಿ ಸುಳ್ಳು ಹೇಳಿ"; ಲೇಖನಗಳನ್ನೋ, ಸಾಹಿತ್ಯ(ಕಲೆ)ದ bent of mind ತಿಳಿಯಲು "ಮೋಹನ ಮುರಲಿ ನಾನು ಕಂಡಂತೆ ನನಗೆ ಕಂಡಷ್ಟು"; ಭಾಷಾಪ್ರಯೋಗದ ವಿಚಾರದಲ್ಲಿ "ಅರ್ಥವೆಂಬ ಊಸರವಳ್ಳಿ"; "ಸರಿಗನ್ನಡಂ ಗೆಲ್ಗೆ" ....

ವೈವಿಧ್ಯಮಯ ಮತ್ತು ವೈಶಿಷ್ಟ್ಯಪೂರ್ಣ.

೧೫ ಲೇಖನಗಳಲ್ಲಿ ಎದ್ದುಕಾಣುವುದು ಸರಳ ಶೈಲಿ ಮತ್ತು ನಿರೂಪಣೆ. Shakespeare ನ ಭಾಷೆಯ ಕಬ್ಬಿಣದ ಕಡಲೆ, ರನ್ನ ಪಂಪರ ಪೆಂಪು ಸೊಂಪುಗಳಿಂದ ಮಾರುದೂರ.
ಜೋಗಿಯವರ ಮುನ್ನುಡಿ, ಗಣೇಶ್ ಭಟ್ ನೆಲಮಾಂವ್ ಇವರ ಬೆನ್ನುಡಿ ತಿಲಕವಿಟ್ಟಂತಿವೆ.
ಅಂದವಾದ ಮುದ್ರಣ, ಕೈಗೆಟಕುವ ಬೆಲೆ( ರೂಪಾಯಿ ೧೨೦/=) ಗ್ರಂಥವನ್ನೂ ಗ್ರಂಥಕರ್ತರನ್ನೂ ಇನ್ನೂ ಹತ್ತಿರವಾಗಿಸಿವೆ.
ಇದು ಹೊತ್ತಗೆಯ ಹೊತ್ತು. ಇನ್ನೂ ಏಕೆ ಹೊತ್ತು? ನೀವೂ ಓದಿ
--------------------------------------------------------------------
Chandrashekhar Madabhavi ಅವರ ಸಾಲುಗಳು
ಇದರ ಸಂಪಾದಕರು ಜೋಗಿ, ಪುಸ್ತಕ ಚೆನ್ನಾಗಿರುತ್ತೆ ಅನ್ನೋದರಲ್ಲಿ ಎರಡು ಮಾತಿಲ್ಲ

ಅಂಕಿತ ಪುಸ್ತಕ ಹೊಸಬರಿಗೆ ಅವಕಾಶ ಕೊಟ್ಟಿದ್ದಾರೆ ಅವರಿಗೆ ಚಪ್ಪಾಳೆ

ತುಂಬಾ ಒಳ್ಳೆಯ ಲೇಖನಗಳ ಪುಸ್ತಕ.
ಇದರಲ್ಲಿ ಭೂತ, ವರ್ತಮಾನ ಮತ್ತು ಭವಿಷ್ಯದ ಲೇಖನಗಳಿವೆ. ಲೇಖನಗಳ ಪ್ರುಟ್ ಸಲಾಡ್ ಅಥವಾ ಹೂಗುಚ್ಚ ಎನ್ನಬಹುದು

ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಲೇಖಕರು ಹಲವು ವಿಷಯಗಳ ಬಗ್ಗೆ ಲೇಖಗಳನ್ನು ಬರೆದಿದ್ದಾರೆ

ಕಠಿಣ ವಿಷಯಗಳನ್ನು ಸರಳೀಕರಿಸಿ ಸಾಮಾನ್ಯರಿಗೆ ಅರ್ಥವಾಗುವಂತೆ ಹೇಗೆ ಬರೆಯಬೇಕು ಎಂದು ತಿಳಿದುಕೊಳ್ಳಬೇಕು ಎಂದರೆ ಇದನ್ನು ಓದಲೇಬೇಕು.

ನನಗಂತೂ ಲೇಖನಗಳನ್ನು ಹೇಗೆ ಬರೆಯಬೇಕು ಎನ್ನುವುದರ ಬಗ್ಗೆ ಸಾಕಷ್ಟು ಮಾಹಿತಿ ಸಿಕ್ಕಿತು

ಲೇಖಕರು ಪತ್ರಿಕೆಗಳಲ್ಲಿ ಕಾಲಂ ಬರೆಯಬಲ್ಲರು. ಅವರಿಗಾಗಲೆ ಕಾಲಂ ಬರೀತಾ ಇಲ್ಲ ಅಂದ್ರೆ , ಬರೆಯಲಿ.
ನೀವೂ ಈ ಪುಸ್ತಕವನ್ನು ಕೊಂಡು ಓದಿ

--------------------------------------
ಸುಹಾನ್ ಶೇಕ್ ಅವರು ಹೇಳಿದ್ದು:
#ಕೃತಿ: ಬಾಗಿಲು ತೆರೆಯೇ ಸೇಸಮ್ಮ
#ಲೇಖಕರು: Sharath Bhat Seraje
#ಓದಿ ಮುಗಿಸಿದ ಅವಧಿ : ಅಂದಾಜು 3 ಗಂಟೆ ಮೂವತ್ತು ನಿಮಿಷ
#ಪುಟಗಳು: 132

ಬಾಗಿಲು ತೆರಯೇ ಸೇಸಮ್ಮ. ಪುಟಗಳನ್ನು ತಿರುವುತ್ತಾ ಹೋದಂತೆ ಲೇಖಕರು ತನ್ನ ಪ್ರಬಂಧಗಳಲ್ಲಿ ತಿಳಿ ಹಾಸ್ಯವನ್ನು ಬೆರೆಸಿ ಉದಾಹರಣೆಯನ್ನು ಕೊಡುತ್ತಾ ಒಂದೊಂದೆ ಮಾಹಿತಿಯನ್ನು ಓದುಗರಿಗೆ ಉಣಬಡಿಸಿದ್ದಾರೆ.ಸೋನಿಯಾ ಗಾಂಧಿಯಿಂದಿಡಿದು ಟ್ರಂಪ್ ,ರಜನಿಕಾಂತ್,ಕ್ರಿಕೆಟ್ ,ಚೆಸ್ ಹೀಗೆ ಎಲ್ಲದರಲ್ಲಿ ವ್ಯಂಗ್ಯವಾಗಿ ಬರಹದ ಶೈಲಿಯನ್ನು ಬಣಿಸಿ ಓದುಗರ ತಲೆಗೆ ಹೊಕ್ಕುವಾಗೆ ಮಾಡಿರೋದು ಶರತ್ ರವರ ಸ್ಪೆಶಲಿಟಿ.

ಅಂದಹಾಗೆ ಗಣಿತವನ್ನು ಕಬ್ಬಿಣದ ಕಡಲೆಕಾಯಿ ಅನ್ನಬೇಡಿ‌.ಆ ಕಡಲೆಕಾಯಿಯನ್ನೂ ನಿಧಾನವಾಗಿ ಅಗೆದು ತಿನ್ನುವ ವಿಧಾನವನ್ನು ಹೇಳಿದ್ದಾರೆ. (ಸುಮ್ಮನೆ ಓದಿ, ಗಣಿತದ ತರ್ಕ ತಿಳಿದುಕೊಂಡ್ರೆ ನಿಮಗೆ ಜೀರ್ಣಿಸಿಕೊಳ್ಳಲಾಗದು) ಉದಾಹರಣೆಗೆಗಳ ಪಟ್ಟಿ ಒಂದಿಷ್ಟು ಕಮ್ಮಿಯಾದ್ರೆ ಒಳಿತು ಸರ್.

ಇನ್ನುಳಿದಂತೆ ವ್ಯಾಕರಣ ಬೋಧಿಸುವ ಮೇಸ್ಟ್ರಾಗಿ,ವೈಜ್ಞಾನಿಕ ಮತ್ತು ತಾಂತ್ರಿಕ ವಿಷಯಗಳನ್ನು ಬೋರಾಗಿಸದೆ ವ್ಯಂಗ್ಯವಾಗಿ ಉದಾಹರಣೆಗಳನ್ನು ಕೊಟ್ಟು ವಿಶ್ಲೇಷಣೆ ಮಾಡುವ ಶರತ್ ಭಟ್ ಸೇರಾಜೆ ರವರ ಬರಹ ಫೇಸ್ಬುಕ್ ಗೋಡೆಗಳಿಂದ ಎರವಲಾಗಿದ್ರು ನನ್ನಗಿದ್ದು, ಹೊಸ ಓದಿನ‌ ಅನುಭವ.
-----------------------------------------------------------------

Supreetha Venkat
 :

ಈ ಪುಸ್ತಕ ಬಿಡುಗಡೆಯಾಗಿ ಒಂದು ವರ್ಷವಾಯಿತು, ನನ್ನ ಪುಸ್ತಕ ಭಂಡಾರಕ್ಕೆ ಸೇರ್ಪಡೆಯಾಗಿ ಕೆಲವು ತಿಂಗಳುಗಳಾಯಿತು, ಆದರೆ ಓದಲು ಈಗ ಕಾಲ ಕೂಡಿ ಬಂತು! ಶರತ್ ಭಟ್ ಅವರ ಕೆಲವು ಬರಹಗಳನ್ನು ಅವರ ಫೇಸ್ಬುಕ್ ಪ್ರೊಫೈಲ್ ಅಲ್ಲಿ ಓದಿದ್ದೆ, ಸಣ್ಣದ್ದನ್ನೂ ಸವಿಸ್ತಾರವಾಗಿ ಬರೆಯುವ ಅವರು, ಅವರ ಪುಸ್ತಕ ಬಿಡುಗಡೆಯಾದ ಸಂದರ್ಭದಲ್ಲಿ ಅದನ್ನು ಓದುವ ಕುತೂಹಲ ತನ್ನಿಂದಾತಾನೆ ಹುಟ್ಟಿತ್ತು. ಪುಸ್ತಕದ ಬಗ್ಗೆ ಪುಟ್ಟದಾದ ಅನಿಸಿಕೆ ಬರೆಯುತ್ತಿದ್ದೇನೆ.
ಲೈಫ್ ಅನ್ನು ಸೀರಿಯಸ್ ಆಗಿ ತಗೋ ಕೆಲವರಂದರೆ, ಜೀವನವನ್ನು ಗಂಭೀರವಾಗಿ ತೆಗೆದುಕೊಳ್ಳಬಾರದೆನ್ನುತ್ತಾರೆ ಹಲವರು. ಎಲ್ಲವೂ ಎಲ್ಲರಿಗೆ ಅರ್ಥವಾಗೋಲ್ಲ (ವಾಸ್ತವ?), ಎಲ್ಲವನ್ನೂ ಎಲ್ಲರಿಗೂ ಅರ್ಥಪಡಿಸೋಕ್ಕಾಗೋಲ್ಲ (ವೇದಾಂತ?). ಅದೇನೇ ಇರಲಿ ಒಂದು
ವಿಷಯವನ್ನು ಪರಿಗಣಿಸಿ ಅದನ್ನು ಸರಳವಾಗಿಸಿ, ಉದಾಹರಣೆಗಳ ಮೂಲಕ ಬರೆದಿದ್ದಾರೆ ಶರತ್ ಅವರು. ಓದುವಿಕೆಯಲ್ಲಿ ಆಸಕ್ತಿ ಬರಬೇಕಾದರೆ ಕೇವಲ ಬರಹದ ವಿಷಯ ಆಸಕ್ತಿದಾಯಕವಾಗಿದ್ದರೆ ಸಾಲದು, ಬರಹದ ಶೈಲಿ ಸ್ವಾರಸ್ಯಕರವಾಗಿ ಇದ್ದರೆ ಓದುಗರನ್ನು ಬಹುಬೇಗನೆ ತಲುಪುವುದು. ಇಂತಹದ್ದೊಂದು ಪ್ರಯತ್ನ ಪಟ್ಟಿದ್ದಾರೆ ಲೇಖಕರು. ಸಮೀಪದ ವಸ್ತುವಿಷಯದಿಂದ ಹಿಡಿದು ಅತೀ ದೂರದ ವಸ್ತುವಿಷಯಗಳಿವೆ. ಹಾಗಂದ್ರೇನು ಅಂತೀರಾ? ಕನ್ನಡ ಭಾಷೆಯ ಬಗೆಗೆ ಪ್ರೀತಿಯಿದೆ, ಇಂಗ್ಲೀಷ್ ನಡುವೆ ನಲುಗುತ್ತಿರುವ ಕನ್ನಡದ ಬಗ್ಗೆ ಕಳಕಳಿಯಿದೆ, ಕನ್ನಡ ಸಾಹಿತ್ಯದ, ಬರಹಗಾರರ, ಬರವಣಿಗೆಗಳ ಉಲ್ಲೇಖವಿದೆ, ಮಾತುಗಾರಿಕೆ ಎಂಬ ಕೌಶಲ್ಯದ ಮಾತುಗಳಿವೆ, ಅಷ್ಟೇ ಯಾಕೆ ಗಣಿತವಿದೆ, ವಿಜ್ಞಾನವಿದೆ, ಇತಿಹಾಸ, ಖಗೋಳ ಶಾಸ್ತ್ರವೂ ಬಂದು ಹೋಗುತ್ತದೆ. ಏನಿಲ್ಲ, ಏನಿದೆ? ಎಲ್ಲವೂ ಇವೆ. ಯಾವುದೇ ಒಂದು ಟಾಪಿಕ್'ಗೆ ಸ್ಟಿಕ್ ಆಗದೆ, ಓದುಗರಿಗೆ ಬೋರ್ ಹೊಡಿಸದೆ ಇರುವ ಈ ಪುಸ್ತಕವನ್ನು ಓದಿ ನೋಡಿ
ಸುಪ್ರೀತಾ ವೆಂಕಟ್