Saturday 19 December 2020

ಕಿಮ್ ಕಿ-ಡುಕ್

ಕನ್ನಡಪ್ರಭದಲ್ಲಿ ಕಿಮ್ ಕಿ-ಡುಕ್ ಎಂಬ ಕೊರಿಯನ್ ನಿರ್ದೇಶಕನ ಬಗ್ಗೆ ನನ್ನದೊಂದು ಪುಟ್ಟ ಲೇಖನ. ಬರೆಸಿ,ಪ್ರಕಟಿಸಿದ ಜೋಗಿಯವರಿಗೆ ಧನ್ಯವಾದಗಳು:

ಎಲ್ಲೋ ಓದಿದ ಈ ಸಾಲುಗಳನ್ನ ಇನ್ನೊಮ್ಮೆ ಓದಿಕೊಳ್ಳಿ :
ಬಿರುಗಾಳಿ ನಡುವೆ ಕಾಫಿಶಾಪ್
ಕೈಯ್ಯಲ್ಲೊಂದು ಕಪ್ ಕಾಫಿ
ಕಾಫಿಯೊಳಗೊಂದು ಬಿರುಗಾಳಿ
ಇದನ್ನೇ ನೀವು ಅಡ್ಡಡ್ಡ ಬರೆದು ಚು ಆಂಗ್ ತ್ಸು ಅಂತಲೋ ಅಥವಾ ಇನ್ನು ಯಾವುದಾದರೂ ಚೀನಿ,ಜಪಾನೀ ಹೆಸರು ತಗೊಂಡು ಆ ಝೆನ್ ಗುರು ಕಾಫಿಶಾಪ್ ನಲ್ಲಿ ಇದ್ದ ಅಂದು ಬಿಟ್ಟರೆ ಇದನ್ನೊಂದು ಝೆನ್ ಕಥೆ ಅಂತಲೂ ಅಂದುಕೊಳ್ಳಬಹುದು. ಇಂಥದ್ದನ್ನೆಲ್ಲ ಇಷ್ಟಪಡುವವರಿಗೆ ಅಂತ ಒಂದು ಸಿನಿಮಾ ಮಾಡಿದರೆ? ಇದನ್ನು ಕಲ್ಪಿಸಿಕೊಳ್ಳಿ: ಅಲ್ಲೊಂದು ನಿಶ್ಚಲ ಸರೋವರ, ಅದರ ಮೇಲೊಂದು ಬೌದ್ಧ ಸಂನ್ಯಾಸಿಯ ಕುಟೀರ. ಸರೋವರದಲ್ಲಿ ತೇಲುವ ಕುಟೀರದ ಸುತ್ತಲೂ ಎದ್ದುನಿಂತ ಗುಡ್ಡಗಳು, ಹಬ್ಬಿದ ಕಾಡು. ಇಂಥಲ್ಲಿ ನಿರಾಳವಾಗಿ ಬದುಕುವ ಗುರು ಶಿಷ್ಯರು; ಅಲ್ಲಿ ಅವರು ಬಿಟ್ಟರೆ ಇನ್ನೊಬ್ಬರಿಲ್ಲ. ಅಲ್ಲಿ ಬದಲಾಗುವ ಋತುಗಳು ಬದುಕಿನ ಬೇರೆ ಬೇರೆ ಹಂತಗಳಿಗೆ ಸಾಕ್ಷಿಯಾಗಿ, ರೂಪಕಗಳಾಗಿ ಇರುತ್ತವೆ.
ಇದು ಯಾವುದಾದರೂ ವಿಮರ್ಶಕರು ಮಾತ್ರ ಮೆಚ್ಚುವ ಕಾದಂಬರಿಗೋ ಕವನಕ್ಕೋ ಆದೀತು, ಇಂಥ ಚಲನಚಿತ್ರವೂ ಇರಲು ಸಾಧ್ಯವೇ ಅಂತ ತಲೆ ಕೆರೆದುಕೊಳ್ಳಬಹುದು. ಹೀಗೂ ಉಂಟು ಅನ್ನುವ ತರ ಇದ್ದದ್ದು Spring, Summer, Fall, Winter... and Spring ಎಂಬ ಚಿತ್ರ, ಅದನ್ನು ನೋಡಿ, ಈ ನಿರ್ದೇಶಕ ಬೇರೇನು ಮಾಡಿದ್ದಾನೆ ಅಂತ ಆಸಕ್ತರಾದವರೇ ಹೆಚ್ಚು. ಕಿಮ್ ಕಿ-ಡುಕ್ ಎಂಬ ಕೊರಿಯನ್ ನಿರ್ದೇಶಕನ ಪರಿಚಯ ಹಲವರಿಗೆ ಆದದ್ದು ಹಾಗೆಯೇ. ಅದು ಆಗಬೇಕಾದ್ದೂ ಹಾಗೆಯೇ ಎನ್ನಬೇಕು! ಜುಗುಪ್ಸೆ ಹುಟ್ಟಿಸುವ, ಕೆರಳಿಸುವ, ರೋಸಿಕೊಳ್ಳುವಂತೆ ಮಾಡುವ ಸಾಕಷ್ಟು ಚಿತ್ರಗಳನ್ನೂ ಈ ಮನುಷ್ಯ ಮಾಡಿದ್ದರಿಂದ ಈ ಮಾತನ್ನು ಹೇಳಬೇಕಾಯಿತು.
ಕ್ರೈಮ್ ಥ್ರಿಲ್ಲರುಗಳನ್ನು ಕೊರಿಯನ್ನರಂತೆ ಮಾಡುವವರಿಲ್ಲ, ಹಿಂಸೆಯನ್ನು ಅವರಷ್ಟು ತೋರಿಸುವವರಿಲ್ಲ, ಅವರಂತೆ ತೋರಿಸುವವರೂ ಇಲ್ಲ ಎಂಬ ಭಾವನೆ ಸಿನಿಪ್ರಿಯರ ವಲಯದಲ್ಲಿದೆ. ಅಷ್ಟಲ್ಲದೆ,ಒಂದು ಒಳ್ಳೆಯ ಕನ್ನಡ ಥ್ರಿಲ್ಲರ್ ಬಂದರೆ, ಅದನ್ನು ಹೊಗಳುವ ಮೊದಲು, ಇದರ ಮೂಲ ಯಾವುದಾದರೂ ಕೊರಿಯನ್ ಸಿನೆಮಾದಲ್ಲಿ ಇರಬಹುದೇ ಅಂತ ಹುಡುಕಿ ನೋಡುವವರೂ ಇದ್ದಾರೆ! ಇಂಥ ಚಿತ್ರರಂಗದಲ್ಲಿ ತನ್ನದು ಮತ್ತು ತನ್ನದು ಮಾತ್ರವೇ ಆದ ಸ್ವರದ ಮೂಲಕ ಸದ್ದು ಮಾಡಿದ್ದು ಕಿಮ್ ಕಿ-ಡುಕ್. ಇಟಾಲಿಯನ್ ನಿಯೋರಿಯಲಿಸಂ, ಇರಾನಿಯನ್ ನ್ಯೂ ವೇವ್ ಇರುವಂತೆ ಕೊರಿಯನ್ ಹೊಸ ಅಲೆಯೂ ಬಂದಾಗ ಅದರಲ್ಲಿ ಕಾಣಿಸಿಕೊಂಡ ಹೆಸರುಗಳಲ್ಲಿ ಇವನದ್ದೂ ಗಮನಾರ್ಹವಾದ ಹೆಸರು. ಒಂದು ಸಿನಿಮೀಯ ದುರಂತ ಎಂದರೆ, ಕೊರಿಯಾದಲ್ಲಿಯೇ ಅವನಿಗೆ ಅಂಥ ದೊಡ್ಡ ಹೆಸರಿರಲಿಲ್ಲ, ಅವನ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿಯೂ ಸೋತವು, ವಿಮರ್ಶಕರನ್ನೂ ಅಷ್ಟಾಗಿ ಸೆಳೆಯಲಿಲ್ಲ. ಅವನ ಅಭಿಮಾನಿಗಳು ಯೂರೋಪಿನಲ್ಲಿ, ಅಮೆರಿಕಾದಲ್ಲಿ, ಭಾರತದಲ್ಲಿಯೇ ಹೆಚ್ಚು ಇರುವುದು. ಚಿತ್ರೋತ್ಸವಗಳಲ್ಲಿ ಅವನಿಗೆ ಸ್ಟಾರ್ ನಿರ್ದೇಶಕನಿಗೆ ಸಿಗುವ ರಾಜಮರ್ಯಾದೆಯೇ ಸಿಗುತ್ತಿತ್ತು. ಮಿಟೂ ಚಳುವಳಿಯ ಕಾಲದಲ್ಲಿ ಹಲವರು ಇವನೊಬ್ಬ ಅತ್ಯಾಚಾರಿ ಅಂದಾಗ ಎಲ್ಲರಿಗೆ ಬೇಸರವಾಗಿತ್ತು, ಒಬ್ಬ ಒಳ್ಳೆಯ ಕಲಾವಿದನು ಒಬ್ಬ ಒಳ್ಳೆಯ ಮನುಷ್ಯನೂ ಆಗಿರುತ್ತಾನೆಯೇ ಎಂಬ ಪ್ರಶ್ನೆಗಳು ಎದ್ದದ್ದೂ ಉಂಟು.
Orson Wellesನು ಮೊದಲ ಬಾರಿ Citizen Kane ಅನ್ನು ಜನರಿಗೆ ತೋರಿಸಿದಾಗ, ಈ ಪುಣ್ಯಾತ್ಮ ಹಾಲಿವುಡ್ಡಿನ ಎಲ್ಲ ನಿಯಮಗಳನ್ನ ಮುರಿದಿದ್ದಾನೆ ಅಂದರಂತೆ ಯಾರೋ. ಮುರಿಯುವುದಕ್ಕೆ ಈ ರೂಲ್ಸು ಯಾವ್ದು ಅಂತ ನನಗೆ ಗೊತ್ತೇ ಇರ್ಲಿಲ್ಲ ಅಂದಿದ್ದನಂತೆ ಆತ. ಅಜ್ಞಾನವೇ ಪರಮಸುಖ ಅಂದಂತೆ. ಕಿಮ್ ಕಿ-ಡುಕ್ ಕೂಡಾ ಹಾಗೆ ಗೊತ್ತಿಲ್ಲದೇ ನಿಯಮಗಳನ್ನು ಗಾಳಿಗೆ ತೂರಿದವನೋ, ಬೇಕೆಂತಲೇ ಎಲ್ಲರನ್ನೂ ಬೆಚ್ಚಿ ಬೀಳಿಸ ಹೊರಟವನೋ ಅಂತ ಹೇಳುವುದು ಕಷ್ಟ.
ಚಿತ್ರಕಥೆ ಬರೆಯುವುದನ್ನು ಹೇಳಿಕೊಡುವ ಮಾಷ್ಟ್ರುಗಳು ಹೇಳಿ ಕೊಡುವ ಮೊದಲನೇ ಪಾಠ ಅಂದರೆ “Don’t tell,Show” ಅಂತ. ಅಂದರೆ ಪಾತ್ರಗಳು ಆಡದೇ, ಮಾಡಿ ರೂಢಿಯೊಳಗುತ್ತಮರಾಗಬೇಕು ಅಂತ. ಇಂಥಹ ಮೇಷ್ಟ್ರುಗಳ ಮಾತು ಕೇಳಿಸದಷ್ಟು ಮಾತಾಡಿದ್ದು ಯೋಗರಾಜ ಭಟ್ಟರ ಪಾತ್ರಗಳು. ಯೋಗರಾಜ ಭಟ್ಟರ ಪ್ರೀತಂ ಸ್ವಲ್ಪ ಸೈಲೆಂಟ್ ಹುಡುಗ ಅನ್ನಿಸುವಷ್ಟು ಮಾತಾಡಿದ್ದು ಗುರುಪ್ರಸಾದರ ಪಾತ್ರಗಳು ಮತ್ತು ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿಯ ಪಾತ್ರಗಳು. “Don’t tell,Show” ಸಿದ್ದಾಂತವನ್ನು ಇನ್ನೊಂದು ಅತಿಗೆ ಕೊಂಡು ಹೋದವನಂತೆ, ಮಾತೇ ಆಡದ ಪಾತ್ರಗಳನ್ನು ಕಟ್ಟಿದ್ದು ಕಿಮ್ ಕಿ-ಡುಕ್. ನಮ್ಮಲ್ಲಿ ಹಾಕುವಂತೆ, ಕಥೆ-ಚಿತ್ರಕಥೆ- ಸಂಭಾಷಣೆ ಎಂಬ ಕ್ರೆಡಿಟ್ ಕೊಡುವ ಅಗತ್ಯವೇ ಅವನ ಹಲವು ಚಿತ್ರಗಳಲ್ಲಿಲ್ಲ, ಅಷ್ಟೆಲ್ಲ ಸಂಭಾಷಣೆಗಳನ್ನು ಬರೆಯುವುದರಲ್ಲಿ ಅವನಿಗೆ ನಂಬಿಕೆಯಿದ್ದಂತಿಲ್ಲ. ಕಥೆ-ಚಿತ್ರಕಥೆ- ಛಾಯಾಗ್ರಹಣ ಅಂತ ಹಾಕಿ, ದೃಶ್ಯ, ಪರಿಸರ, ಹಿನ್ನೆಲೆ ಸಂಗೀತಗಳೇ ಸಂಭಾಷಣೆಯ ಕೆಲಸ ಮಾಡುತ್ತವೆ ಅಂದು ಸುಮ್ಮನಾಗಬಹುದು.
ಅವನ ಮೋಬಿಯಸ್ ಎಂಬ ವಿಕೃತ ಚಿತ್ರವನ್ನು ನೋಡದಿರುವುದೇ ಒಳ್ಳೆಯದೇನೋ, Pieta ಎಂಬ ಚಿತ್ರದಲ್ಲಿ ತೋರಿಸುವ ಕ್ರೌರ್ಯ ಅಸಹ್ಯ ತರಿಸಿ, ಎದ್ದು ಹೋಗುವ ಅನ್ನಿಸುವಂತೆ ಮಾಡಿದರೂ, ಅದನ್ನು ಸಹಿಸಿಕೊಂಡರೆ, ಅಬ್ಬಬ್ಬಾ ಎನ್ನಿಸುವ, ವಿಕ್ಷಿಪ್ತವಾದರೂ ಅದ್ಭುತವಾದ ಚಿತ್ರವಾಗಿ ಕಾಡುತ್ತದೆ. 3-Iron ಅವನ ನೋಡಲೇಬೇಕಾದ ಚಿತ್ರಗಳಲ್ಲೊಂದು. ಜತನದಿಂದ ಕಲಾತ್ಮಕವಾಗಿ ರೂಪಿಸಿದ ದೃಶ್ಯಗಳಲ್ಲಿ, ಆರದ ಗಾಯಕ್ಕೆ ಮುಲಾಮು ಹುಡುಕುತ್ತಿರುವ ಪಾತ್ರಗಳ ತೊಳಲಾಟದಲ್ಲಿ, ತಣ್ಣನೆಯ ಕ್ರೌರ್ಯದಲ್ಲಿ, ಸಂಕಟದಲ್ಲಿ, ಅಲ್ಲೊಮ್ಮೆ ಇಲ್ಲೊಮ್ಮೆ ಬರುವ ಮಾತುಗಳಲ್ಲಿ, ನಿಧಾನಕ್ಕೆ ಇಷ್ಟಿಷ್ಟೇ ಬಿಚ್ಚಿಕೊಳ್ಳುವ ಬಾವುಟದ ಥರ ಕಥೆ ಬಿಚ್ಚಿ ಪಟಪಟಿಸುವುದು ಅವನ ಚಿತ್ರಗಳ ಕ್ರಮ.
ನಮ್ಮ ಸೂರಿಯಂತೆ ಇವನೂ ಒಬ್ಬ ವರ್ಣಚಿತ್ರಕಾರ. ಅಕ್ಕರೆಯಿಂದ ಬಿಡಿಸಿಟ್ಟ ಚಿತ್ರದಂತೆ ಇರುವ, ರವಿಚಂದ್ರನ್ ಇದನ್ನು ಇಷ್ಟಪಟ್ಟಾರು ಅನ್ನಿಸುವಂಥ ಫ್ರೇಮುಗಳು ಅವನ ಚಿತ್ರಗಳಲ್ಲಿ ಎಲ್ಲೆಂದರಲ್ಲಿ ಸಿಗುತ್ತವೆ. ಅಷ್ಟು ಮಾತ್ರ ಅಲ್ಲ. ಇವಕ್ಕೆ ಹೋಲಿಸಿದರೆ ಸೂರಿ ಸಿನೆಮಾಗಳಲ್ಲಿ ತೋರಿಸುವ ಹಿಂಸೆಯು ರಾಜಕುಮಾರರ ಚಿತ್ರಗಳಷ್ಟು ಸಭ್ಯ ಎನ್ನಬಹುದಾದಷ್ಟು ಭಯಂಕರ, ವಿಕೃತ, ಭೀಭತ್ಸ ಚಿತ್ರಗಳನ್ನೂ ಈ ಪುಣ್ಯಾತ್ಮ ಮಾಡಿಟ್ಟಿದ್ದಾನೆ.
The Silence of the Lambs ಅವನ ಮೇಲೆ ತುಂಬಾ ಪ್ರಭಾವ ಬೀರಿದ ಚಿತ್ರವಂತೆ. ಅದು ಸೀರಿಯಲ್ ಕಿಲ್ಲರನ್ನು ತೋರಿಸುವ ಚಿತ್ರ, ಅದರ ಮುಖ್ಯ ಪಾತ್ರ ಒಬ್ಬ ನರಭಕ್ಷಕನದು ಆದರೂ ಅದೇನು ಹಸಿಬಿಸಿಯಾದ, ಅಸಹ್ಯ ಎನ್ನಿಸುವ ಚಿತ್ರವಾಗಿರಲಿಲ್ಲ. ಅದರಲ್ಲಿ ಬರುವ ನರಭಕ್ಷಕನೂ ಚಾರ್ಮಿಂಗ್ ಆದ ವ್ಯಕ್ತಿ. ಆದರೆ ಕಿಮ್ ಕಿ-ಡುಕ್ಕನಿಗೆ ಯಾಕೋ ಕ್ರೌರ್ಯದ, ಲೈಂಗಿಕತೆಯ ಹಸಿ ಹಸಿ ಚಿತ್ರಣದಲ್ಲಿ ಆಸಕ್ತಿ ಜಾಸ್ತಿ.
ಇವೆಲ್ಲ ಏನಿದ್ದರೂ, ಶಾಂತ ರಸ, ಕರುಣ ರಸಗಳನ್ನೂ ಧ್ಯಾನಸ್ಥನಂತೆ ಮುಟ್ಟಿ, ರೌದ್ರ,ಭೀಭತ್ಸಗಳನ್ನೂ ಅಷ್ಟೇ ಆಸಕ್ತಿಯಿಂದ ಚಿತ್ರಿಸಿ, ಅಲ್ಲೂ ಚಿಂತನೆಗೆ ಗ್ರಾಸ ಒದಗಿಸಿದ ಮತ್ತೊಬ್ಬ ನಿರ್ದೇಶಕನ ಹೆಸರು ನೆನಪಾಗುವುದಿಲ್ಲ. ಬಹುಶಃ ಎಲ್ಲ ಅತಿಗಳಿಗೆ ಹೋಗಿಯೂ ತುಂಬ ಗೌರವ ಕಾಪಾಡಿಕೊಂಡು, ಜೀನಿಯಸ್ ಎನ್ನಿಸಿಕೊಂಡ ಸ್ಟಾನ್ಲಿ ಕೂಬ್ರಿಕ್ ಕೂಡಾ ಸ್ವಲ್ಪ(ಸ್ವಲ್ಪ ಮಾತ್ರ) ಇದೇ ಜಾತಿಯ ಪ್ರಾಣಿ ಎನ್ನಬಹುದು. ಇಂಥವರ ಚಿತ್ರಗಳು ಖುಷಿ ಕೊಟ್ಟು, ಪ್ರಚೋದಿಸಿ, ರೇಗಿಸಿ,ಚಿಂತನೆಗೆ ಸರಕನ್ನು ಸರಬರಾಜು ಮಾಡಿ, ಚರ್ಚೆಗೆ ವಿಚಾರವನ್ನು ಒದಗಿಸಿ art should comfort the disturbed and disturb the comfortable ಎಂಬಂತೆ ನಮ್ಮನ್ನು ಕಲಕುತ್ತವೆ ಎಂಬ ಕಾರಣಕ್ಕಾದರೂ ಸಿನೆಮಾವ್ಯಾಮೋಹಿಗಳ ಬಾಯಲ್ಲಿ ಇವನ ಹೆಸರು ಉಳಿಯುತ್ತದೆ.



ಮರಡೋನಾ ಎಂಬ ಮೋಹಕ ವ್ಯಸನ

 ಕನ್ನಡಪ್ರಭದಲ್ಲಿ ಪ್ರಕಟವಾದ ಲೇಖನ: 

ತೊಂಬತ್ತರ ದಶಕದ ಹುಡುಗರಿಗೆ ತೆಂಡೂಲ್ಕರ್ ಇದ್ದಂತೆ ಎಂಬತ್ತರ ದಶಕದ ಫುಟ್ಬಾಲ್ ಪ್ರಿಯರನ್ನು ವಶೀಕರಿಸಿದ ಹೆಸರು ಡಿಯಾಗೋ ಮರಡೋನಾನದ್ದು.  ನಮ್ಮನ್ನು ಈ ಪರಿ ಸಮ್ಮೋಹಗೊಳಿಸಿದ ಮಹರಾಯ ಅದೇನು ಆಡ್ತಾನೆ ಅಂತ ನೋಡುವ ಕುತೂಹಲದಿಂದ 1986ರ ವಿಶ್ವಕಪ್ಪಿನ ವೀಡಿಯೊ ಟೇಪ್ ಒಂದನ್ನು ಆ ಕಾಲದಲ್ಲಿ ಸಂಪಾದಿಸಿ ನಾವೆಲ್ಲ ನೋಡಿದ್ದೇ ನೋಡಿದ್ದು. ನೋಡಿ ನೋಡಿ ನೋಡಿ ಆ ಟೇಪು ಸವೆದಿತ್ತು, ಆಗ ಹಾಗೆ ಪರವಶರಾಗುತ್ತಿದ್ದದ್ದರ ನೆನಪು ಮಾತ್ರ ಇನ್ನೂ ಸವೆದಿಲ್ಲ. ಪುರುಸೊತ್ತು ಇಲ್ಲದೆ ಇದ್ದಾಗಂತೂ ಫಾರ್ವರ್ಡ್ ಮಾಡುವುದು,ಸೀದಾ ಆ ಗೋಲಿನ ನಿಮಿಷಕ್ಕೆ ಬರುವುದು ! ಹ್ಯಾಂಡ್ ಆಫ್ ಗಾಡ್ ಅಂತ ಕುಪ್ರಸಿದ್ಧವಾದ ಗೋಲು ಆಗಿ ಸ್ವಲ್ಪವೇ ಹೊತ್ತಿನಲ್ಲಿ ಅದು ಬಂದದ್ದು.

ಅದೆಂಥಾ ಗೋಲು ಅಂತೀರಿ ! ಒಂದಿಡೀ ಜೀವಮಾನದ ಪ್ರತಿಭೆಯನ್ನು ಹನ್ನೊಂದು ಸೆಕೆಂಡುಗಳ ಸ್ತೋತ್ರಗೀತೆಯಾಗಿ ಹೇಳಿದಂತೆ, ಗೋಲು ಮಾಡಲು ಓಡಿದ ಅರುವತ್ತು ಮೀಟರುಗಳ ಸರಕ್ಕನೆಯ ಓಟ; ಅಮರಕೀರ್ತಿ ಎಂಬ  ಗಮ್ಯದ ಕಡೆಗಿನ ದೂರ ಬರೀ ಅರುವತ್ತು ಮೀಟರು ಅಂತ ತೋರಿಸಿದ ಓಟ ಅದು! ಮೈದಡವಿದ್ದು, ಕುಟ್ಟಿದ್ದು, ನೂಕಿದ್ದು, ಗಿರ್ರನೆ ಸುತ್ತಿದ್ದು ಎಲ್ಲದರ ಕಥೆಯನ್ನು ಆ ಬಾಲೇ ನಮಗೆ ಹೇಳಿದ್ದರೆ ಚೆನ್ನಿತ್ತು !

1986ರ ಜೂನ್ 22ಕ್ಕೆ ಮೆಕ್ಸಿಕೋ ಸಿಟಿಯಲ್ಲಿ ಹೊಡೆದ ಆ ಗೋಲಿಗೆ ಸಾಕ್ಷಿಯಾಗಿ ಮೈದಾನದಲ್ಲೇ ಲಕ್ಷ ಜನ ನೆರೆದಿದ್ದರು. ಅಲ್ಲಿ ಬೀಟಲ್ಸ್ ತಂಡದ ಒಬ್ಬನ ಹಾಡು ಕೇಳುವುದಕ್ಕೆ ಲಕ್ಷ ಜನರ ಸಂತೆ ನೆರೆದದ್ದಿತ್ತು, ಧರ್ಮಗುರುಗಳ ಬೋಧನೆಗೆ ಜನಸಂತೆ ಒಟ್ಟಾದದ್ದಿತ್ತು, ಅಂಥಲ್ಲಿ ಆ ದಿನ ಮರಡೋನಾ ಭಕ್ತರ ಜಾತ್ರೆ ನೆರೆದಿತ್ತು. ರಭಸವೇ, ಜೋರೇ, ಚುರುಕೇ, ಬಿರುಸೇ, ಭಂಡ ಧೈರ್ಯವೇ -  ಆ ಗೋಲಿನಲ್ಲಿ ಏನಿತ್ತು, ಏನಿರಲಿಲ್ಲ ! ಹೀಗೂ ಆಡಿ ದಕ್ಕಿಸಕೊಳ್ಳಬಹುದು ಅಂತ ನಮಗೆಲ್ಲ ಗೊತ್ತಾದದ್ದೇ ಅವತ್ತು. ಮರಡೋನಾ ಮೈದಾನದ ಮೂಲೆಯಲ್ಲಿ ಹಾಗೆ ಓಡಿದ್ದು, ಕೊಳೆಗೇರಿಯಲ್ಲಿ ಕಳೆದ ತನ್ನ ಬಾಲ್ಯದ ಅದೆಷ್ಟೋ ಕ್ಷಣಗಳೆಂಬ ಇಕ್ಕಟ್ಟಾದ  ಸಂದಿಗಳಲ್ಲಿ,ಓಣಿಗಳಲ್ಲಿ ಓಡಿದ್ದರ ನೆನಪು ತರುವಂತಿತ್ತು.

ತೆಂಡೂಲ್ಕರನ ಮನಮೋಹಕ ಹುಕ್ಕು , ಲೆಕ್ಕಾಚಾರದ ಕವರ್ ಡ್ರೈವು, ಜಾನ್ ಮೆಕೆನ್ರೋವಿನ ಅದ್ಭುತ ವಾಲಿ, ಅದ್ಯಾರೋ ಜಿಮ್ನಾಸ್ಟಳು ತಾನು ಮನುಷ್ಯಳೇ ಅಲ್ಲ ಎಂಬಂತೆ ಬಳುಕಿದ್ದು ಇವನ್ನೆಲ್ಲ ಎಷ್ಟೆಷ್ಟು ಸಲ ಯುಟ್ಯೂಬಿನಲ್ಲಿ ನೋಡಿ ತಣಿಯುತ್ತೇವೋ ಅಷ್ಟೇ ಸಲ ಈ ಗೋಲನ್ನೂ ನೋಡಿರುತ್ತೇವೆ, ಅದು ಮಾಡಿದ ಮೋಡಿಯೇ ಹಾಗಿದೆ. ಮೆಸ್ಸಿ Getafeಯ ಜೊತೆ ಹೊಡೆದ ಗೋಲು ಗ್ರೇಟಾ ಇದು ಅದಕ್ಕಿಂತ ಮೇಲೆಯಾ ಅಂತ ನಾವು ಆಗಾಗ ಜಗಳ ಆಡುವುದುಂಟು. ಅದು ಉತ್ತರ ಗೊತ್ತಿದ್ದೇ ಕೇಳಿದ ಪ್ರಶ್ನೆಯ ಹಾಗೆ, ಜಗಳದಲ್ಲಿ ಗೆಲ್ಲುವುದು ಯಾರು ಅಂತ ಮೊದಲೇ ತೀರ್ಮಾನ ಆಗಿರುವ ಜಗಳ ! ಎಲ್ಲಿಯ ವರ್ಲ್ಡ್ ಕಪ್ಪು ಎಲ್ಲಿಯ, ಕ್ಲಬ್ಬು ಮ್ಯಾಚುಗಳು ಸ್ವಾಮೀ.

ಮರಡೋನಾ ಅರುವತ್ತಕ್ಕೇ ಆಟ ಮುಗಿಸಿದ್ದು, ಆಶ್ಚರ್ಯವಲ್ಲದಿದ್ದರೂ ಮನಕರಗಿಸುವ ಸಂಗತಿ ಎನ್ನಬೇಕು. ಅವನು ಎಡವದೇ ಇರುತ್ತಿದ್ದದ್ದು ಮೈದಾನದಲ್ಲಿ ಮಾತ್ರ. ಆತ ತಪ್ಪೇ ಮಾಡುವುದಿಲ್ಲ ಅಂತಾಗುತ್ತಿದ್ದದ್ದು ಅವನ ಕಾಲು ಫುಟ್ಬಾಲನ್ನು ಸ್ಪರ್ಶಿಸಿದಾಗಲೇ. ಒಮ್ಮೆ ಮೈದಾನಕ್ಕೆ ಇಳಿದನೋ, ಮತ್ತೆ ತೊಂಬತ್ತು ನಿಮಿಷ ಅವನು ನಮ್ಮನ್ನೆಲ್ಲ ಯಾವುದೋ ಮಾಯಾಲೋಕಕ್ಕೆ ಕರೆದುಕೊಂಡು ಹೋಗುವ ಮಾಯಗಾರ. ಅವನದ್ದು ಮಲ್ಲಕಂಬಕ್ಕೆ ಹತ್ತಿದವನ ಸಮತೋಲನ, gymnastನಂಥ ಬಳುಕು, ಹಸಿದ ಚಿರತೆಯ ನೆಲಮುಟ್ಟದ ಓಟ. ಜೀವನದ ಓಟದಲ್ಲಿ ಮಾತ್ರ ಆ ಚಿರತೆ ಬಲೆಗೆ ಬೀಳುತ್ತಿತ್ತು, ಕಾಲುತಪ್ಪಿ ಎಡವುತ್ತಿತ್ತು.

ಮರಡೋನಾ ಎಂದಾಗ ನೆನಪಾಗುವುದು ಆರು ಜನ ಬೆಲ್ಜಿಯಂನ ಆಟಗಾರರು ಅವನೆದುರು ಹೊಡೆದೇ ಬಿಡುತ್ತಾರೇನೋ ಎಂಬಂತೆ ಅಡ್ಡಗಟ್ಟಿ ನಿಂತದ್ದರ ಛಾಯಾಚಿತ್ರ. ಒಂದು ರಾಶಿ ಬ್ರೆಝಿಲಿಯನ್ನರ ನಡುವೆ ಜಾಗ ಮಾಡಿಕೊಂಡು ಬಾಲನ್ನು ತೂರಿ ನೂಕಿ ಓಡೋಡುವ ದೃಶ್ಯ.  ದಿನಬೆಳಗಾದರೆ ಮರಡೋನಾ ಸಾಕ್ಸು ಏರಿಸುವ, ಲೇಸು ಕಟ್ಟುವ, ಕುಣಿಯುವ, ಬಾಲನ್ನು ಕುಣಿಸುವ, ಹರ್ಷದಿಂದ ಮಗುವಿನಂತೆ ಜಿಗಿಯುವ ವೀಡಿಯೊ ಕ್ಲಿಪ್ಪುಗಳು ಮೊಬೈಲಿಗೆ ಬಂದು ಬೀಳುತ್ತವೆ. ಹಾಗೆ ಓಡುವ, ಹಾರುವ, ಹರ್ಷದಿಂದ ಕುಪ್ಪಳಿಸುವ, ಮಗುವಿನಂಥ ಚಿತ್ರವೇ ನಮಗೆ ಇಷ್ಟವಾಗುವ, ಮನಸ್ಸಿನಲ್ಲಿ ಉಳಿಯಬೇಕಾದ ಚಿತ್ರ.          

ಮರಡೋನಾ ನಮಗೆ ಯಾಕಿಷ್ಟ? ಆ ಪ್ರತಿಭೆಗೆ, ಆ ಕೌಶಲಕ್ಕೆ ಮರುಳಾದೆವು ಅನ್ನುವುದೇನೋ ನಿಜವೇ, "ನಮ್ಮ ದೊಡ್ಡಪ್ಪನ ಮಗ ಇದ್ದ ನೋಡಿ, ಪಾಪ ! ಹಳ್ಳಿಯಲ್ಲಿ ಹೇಗಿದ್ದ, ಏನು ಕ್ಲೇಶ, ಏನು ಬಡತನ, ಕಷ್ಟಪಟ್ಟು ಹೇಗೆ ಮೇಲೆ ಬಂದ ನೋಡಿ" ಅನ್ನುವಂತೆ ಮರಡೋನಾನ ಜೀವನವಿತ್ತು. ಅವನು ಅಲ್ಲೆಲ್ಲೋ ಅರಮನೆಯಲ್ಲಿ ನಳನಳಿಸುತ್ತ ಕೂತ ಕೀರ್ತಿವಂತನಂತಿರಲಿಲ್ಲ, ಅವನು ನಮ್ಮಂತಿದ್ದ ನಿಮ್ಮಂತಿದ್ದ, ಗೆಲ್ಲುತ್ತಿದ್ದ, ಕುಸಿಯುತ್ತಿದ್ದ, ಹಾರುತ್ತಿದ್ದ, ಬೀಳುತ್ತಿದ್ದ. 


"ಇವನು ನಮಗೆ ರೋಲ್ ಮಾಡೆಲ್ ಕಣ್ರೀ" ಅಂತ ಯಾರೂ ಹೇಳಿರಲಾರರು, ಫುಟ್ಬಾಲನ್ನು ತುಳಿದ ಹಾಗೆ ದಾರಿದ್ರ್ಯ, ದುರ್ವ್ಯಸನಗಳು, ವಿವಾದಗಳು, ಊದಿಕೊಂಡ ದೇಹ, ಒತ್ತಡಗಳು ಇಂಥದನ್ನೆಲ್ಲ ಮೆಟ್ಟಿ, ಮೀಟಿ ಮೇಲೆ ಬಂದಿದ್ದ, ರಾರಾಜಿಸಿದ್ದ. ಮೈದಾನದಲ್ಲಿ ಓಡುವಾಗ, ಹೀಗೆ ಮುಗ್ಗರಿಸಿ, ಹಾಗೆ ಎದ್ದು, ಇಲ್ಲಿ ಕುಣಿದು, ಅಲ್ಲಿ ಬಿದ್ದು ಅತ್ತಿತ್ತ ಓಡುವವನಂತೆ ಮರಡೋನಾ ಬದುಕಿದ್ದ. 

ಅವನ ಕಥೆಯ ಪುಸ್ತಕದಲ್ಲಿ, "ಇದೆಲ್ಲ ಯಾಕೆ ಬೇಕಿತ್ತು" ಅನಿಸುವಂಥ ಅಧ್ಯಾಯಗಳಿವೆ. "ಪಕ್ಕದ್ಮನೆ ಅಂಕಲ್ಲು, ಮೊದಲು ಚೆನ್ನಾಗಿದ್ರಲ್ಲ, ಹೀಗ್ಯಾಕಾದ್ರು" ಅಂತ ಮೋರೆ ಕಿವುಚುವಂತೆ ಮಾಡುವ ಸನ್ನಿವೇಶಗಳೂ ಉಂಟು. ಅವೆಲ್ಲವನ್ನು ಮೀರಿ ಆ ಅಮರ ಗೋಲಿದೆ, ಶೇಖರಿಸಿಡುವುದಕ್ಕೆ ಅಂಥ ಉನ್ಮಾದದ ಅಮರ ಕ್ಷಣಗಳಿವೆ, ಇವತ್ತೂ ನಾಳೆಯೂ ನಾಡಿದ್ದೂ ನೆನಪಿಸಿಕೊಂಡು ರೋಮಾಂಚನ ಪಡಬಹುದಾದ ಮಾಯಕದ ಗಳಿಗೆಗಳಿವೆ. ಒಬ್ಬ ಆಟಗಾರ ಬಿಟ್ಟುಹೋಗಬೇಕಾದ್ದು ಅಂಥ ಕ್ಷಣಗಳ ಉಡುಗೊರೆಯನ್ನೇ.   
(ರೋಹಿತ್ ಬ್ರಿಜನಾಥ್ ಬರೆದ ಲೇಖನವೊಂದರ ಭಾವಾನುವಾದ)


ರವಿ ಬೆಳಗೆರೆ

 ನನ್ನ ಎಂಜಿನಿಯರಿಂಗಿನ ರೂಮ್ ಮೇಟ್, ಹತ್ತಿರದ ಗೆಳೆಯ ಪ್ರವೀಣ ಈಗ ಸಿಕ್ಕಿದರೂ ಮಾತು ಶುರು ಮಾಡುವುದು, "ನಿನ್ನ ರವಿ ಬೆಳಗೆರೆ ಈಗ ಎಂತ ಮಾಡ್ತಾ ಇದ್ದಾನೆ" ಎಂಬ ಧಾಟಿಯಲ್ಲೇ. ಆಗಿನ ಕಾಲದಲ್ಲಿ ಮಂಗಳವಾರವಾದರೆ 'ಹಾಯ್' ತರಲಿಕ್ಕೆ ಪೇಟೆಗೆ ಓಡಲು ಕಾಲು ಎಳೆಯುತ್ತಿತ್ತು, ಮನ ಎಳಸುತ್ತಿತ್ತು. ಜೋಗಿಯ ಜಾನಕಿ ಕಾಲಂ ಮತ್ತು ಬೆಳಗೆರೆಯ ಅಂಕಣಗಳ ಬಗ್ಗೆ ನನ್ನ ಪಾಠ್ಯ ಪುಸ್ತಕಗಳಿಗೆ ಅಸೂಯೆ ಹುಟ್ಟುತ್ತಿತ್ತೋ ಏನೋ ಅನ್ನಿಸುವಷ್ಟು ಓದುತ್ತಿದ್ದೆ ಅಂತ ಕಾಣುತ್ತದೆ. ನಾನು ಇಂಥವರ ಫ್ಯಾನು ಅನ್ನಬಹುದಾದಂತೆ ಓದಿದ್ದು ಬೀಚಿಯವರ ಪುಸ್ತಕಗಳನ್ನು. ಬೀಚಿಯವರ ಮಾತ್ರೆಗಳು, ಬೆಳ್ಳಿ ತಿಂಮ ನೂರೆಂಟು ಹೇಳಿದ, ಹುಚ್ಚು ಹುರುಳು, ಆರು ಏಳು ಸ್ತ್ರೀ ಸೌಖ್ಯ, ತಿಮ್ಮಿಕ್ಷನರಿ, ಮಾತನಾಡುವ ದೇವರುಗಳು ಇಂಥವೆಲ್ಲ ನನಗೆ ಓದುವ ಹುಚ್ಚು ಹಿಡಿಸಿದ ಪುಸ್ತಕಗಳು. ಆಮೇಲೆ ಅಂಥದ್ದೇ ಕಿಕ್ ಸಿಕ್ಕಿದ್ದು ಬಳಸಿ ಬರೆಯಲು ಕಂಠಪತ್ರದ ಉಲುಹುಗೆಡದಂತೆ ಬರೆದು ಬಿಸಾಕುತ್ತಿದ್ದಾರೇನೋ ಅನಿಸುತ್ತಿದ್ದ 'ಬೆಳಗೆರೆ ಉವಾಚ'ಗಳಲ್ಲಿ. ಕನ್ನಡದಲ್ಲಿ ಅತ್ಯಂತ ಪ್ರಖರವಾದ ವಿಡಂಬನೆ, ವ್ಯಂಗ್ಯ ಬಂದದ್ದು ಬೀಚಿ, ಚಂಪಾ ಮತ್ತು ಬೆಳೆಗೆರೆಯವರ ಪೆನ್ನುಗಳಿಂದ.

ಆದರೆ ಚಂಪಾರದ್ದು ಭಾವುಕತೆಯಿಲ್ಲದ ಜಗಳಗಂಟಿ ವ್ಯಂಗ್ಯ, ಬೀಚಿ ಮತ್ತು ಬೆಳಗೆರೆಯವರದ್ದು ಇನ್ನೊಂದು ತರದ, ಭಾವದ ಸ್ಪರ್ಶವಿರುವ, ತುಂಟತನ, ವಿಷಾದ ಎಲ್ಲ ಸೇರಿದ ವಿಡಂಬನೆ. ಮಾರ್ಕ್ ಟ್ವೈನ್, ಆಸ್ಕರ್ ವೈಲ್ಡ್ , ಬರ್ನಾರ್ಡ್ ಷಾ , ಎಚ್ ಎಲ್ ಮೆಂಕನ್, Steve Martin,Woody Allen, Groucho Marx ಮುಂತಾದವರ witty ಸಾಲುಗಳನ್ನು ಸವಿದವರಿಗೆ ಕನ್ನಡದಲ್ಲಿ ಅಂಥದ್ದನ್ನು ಧಾರಾಳವಾಗಿ ಕೊಟ್ಟವರೆಂದರೆ ಬೀಚಿ, ಬೆಳಗೆರೆ ಮತ್ತು ಜೋಗಿ ಎನ್ನಬಹುದು. ಸುಮ್ಮನೆ ಕೇಳಿದವರು ಓಡಿಹೋಗುವಂತೆ ಬಯ್ಯುವುದಕ್ಕೂ ತುಂಟತನದಲ್ಲಿ ಕೆಣಕಿ,ಮಾತು ಸ್ಫಟಿಕದ ಶಲಾಕೆಯಾಗುವಂತೆ ಝಾಡಿಸುವುದಕ್ಕೂ ಇರುವ ವ್ಯತ್ಯಾಸ ಕಾಣಬೇಕಾದರೂ ಬೀಚಿ, ಬೆಳಗೆರೆ ಇವರುಗಳ ವಿಡಂಬನೆಗಳನ್ನೂ ಬೇರೆ ಟ್ಯಾಬ್ಲಾಯ್ಡ್ ಗಳು ಬಳಸಿದ ಬೈಗುಳಗಳನ್ನೂ ಹೋಲಿಸಿ ನೋಡಬೇಕು.
ರಾಜೀವ್ ಹತ್ಯೆ, ಗಾಂಧೀ ಹತ್ಯೆ, ಸಂಜಯ್ ಗಾಂಧಿ,ಮುಸ್ಲಿಂ ಇಂಥ ವಿಷಯಗಳ ಬಗ್ಗೆ ಇಷ್ಟು ಇಂಟೆರೆಸ್ಟಿಂಗ್ ಆಗಿ, balanced ಆಗಿ ಕನ್ನಡದಲ್ಲಂತೂ ಬೇರೆ ಯಾರೂ ಬರೆದಿಲ್ಲ ಅನ್ನಬೇಕು. ಭೂಗತ ಲೋಕವೆಂಬ ಹುತ್ತದೊಳಕ್ಕೆ ಕೈ ಹಾಕಿ ಬರೆದ 'ಪಾಪಿಗಳ ಲೋಕದಲ್ಲಿ' ಕೂಡಾ ಒಂದು ಅಸಾಧಾರಣ ಕೃತಿ. ಸಮಾಜದಲ್ಲಿ ಕ್ರಿಮಿನಲ್ಲುಗಳು ಹೇಗೆ ಮತ್ತು ಯಾಕೆ ಸೃಷ್ಟಿಯಾಗುತ್ತಾರೆ ಎಂಬುದರ ಅಧ್ಯಯನ ಮಾಡಿದರೆ, "ಇಂಥಾ ಕೃತಿಗಳು ಸಮಾಜಕ್ಕೆ ಒಳ್ಳೆಯದಲ್ಲ" ಎಂಬ ಆರೋಪಗಳಲ್ಲಿ ವೈಜ್ಞಾನಿಕ ಸತ್ಯ ಇಲ್ಲ ಅಂತ ಗೊತ್ತಾದೀತು. ಅದನ್ನು ಓದಿ ಇಷ್ಟ ಪಟ್ಟ ನಾನೇನೂ ಮಚ್ಚು ಹಿಡಿದು ರೌಡಿಯಾಗಿಲ್ಲ!
ಈಗಲೂ ಮೆಚ್ಚಬಹುದಾದ 'ಪಾವೆಂ ಹೇಳಿದ ಕಥೆ', ಕಣ್ಣೀರು ತೊಟ್ಟಿಕ್ಕುವಂತೆ, ರಕ್ತ ಕುದಿಯುವಂತೆ ಮಾಡುವ ‘ಹಿಮಾಲಯನ್ ಬ್ಲಂಡರ್’ ಇವೆರಡನ್ನೇ ಬೆಳಗೆರೆ ಬರೆದಿದ್ದರೂ ದೊಡ್ಡ ಹೆಸರೇ ಮಾಡಿರುತ್ತಿದ್ದರು. ಬಸ್ ಸ್ಟಾಂಡಿನಲ್ಲಿ ಮೈಕ ಸಿಕ್ಕಿತೆಂದು, ಅನೌನ್ಸರ್ ಒಬ್ಬನು ಸಿಕ್ಕಾಪಟ್ಟೆ ಮಾತಾಡುವ ಕಥೆ, 'ಪಾವೆಂ ಹೇಳಿದ ಕಥೆ', ಕದಿಯುವ ಚಟ ಇರುವ ಅಮ್ಮನ ಕಥೆ ಇವೆಲ್ಲ ವಿಶಿಷ್ಟ ಸೃಷ್ಟಿಗಳು.
'ಅಸಲಿಗೆ', 'ನಂಗೊತ್ತು' Fine. ಬರ್ಬಾದ್, ಗಾಯಬ್, ಏಕ್‌ದಮ್, ನಿಕೃಷ್ಟ, ಮಟಾಷ್, 'ಹಟಕ್ಕೆ ಬಿದ್ದವನಂತೆ' ,'ಅಜಮಾಸು', ಪಟ್ಟಾಗಿ ಕೂತು 'ಬರೋಬ್ಬರಿ', 'ಮಟ್ಟಸ', ’ದರ್ದು’, "ಹೆಗ್ಗಳಿಕೆ ನನ್ನದಾ? ಅದು ನಿಮ್ಮದಾ? ಊಹುಂ, ಗೊತ್ತಿಲ್ಲ" 'ಅಫಿಡವಿಟ್ಟು', 'ಅರೆ ಇಸ್ಕಿ', “ಒಂದ್ಕಡೆಯಿಂದ ತಿಂದು ಹಾಕೋಣ ಅನ್ನೋಷ್ಟು ಚೆಂದ ಕಾಣ್ತಿದೀಯ ಇವತ್ತು!'' ಮುಂತಾದ ಟ್ರೇಡ್ಮಾರ್ಕ್ ಪದಪ್ರಯೋಗಗಳು,ಕುಟುಕುವ, ಕುತೂಹಲವನ್ನು ಕದಡಿ ಮಿಸುಕಾಡಿಸುವ, ಮಿಡಿಯುವ, ಬುದ್ಧಿ ಹೇಳುವ, ತುಂಟತನದ, ಭಾವದ ಮೂಲಕವೇ ಸ್ಪರ್ಶಿಸುವ ಬೆಳಗೆರೆ ಶೈಲಿ ಅನನ್ಯ.
ನಾನು ಒಂದು ಹತ್ತು ವರ್ಷ ಡ್ರಗ್ ಅಡಿಕ್ಟ್ ಆದವನಂತೆ ಹಾಯ್ ಓದಿದ್ದೆ. ಅದರ ಕ್ರೈಂ ವರದಿಗಳನ್ನು ಓದಿದ್ದು ಕಡಮೆ, ಅಂಕಣಗಳು, ಸಿನೆಮಾ ಸುದ್ದಿ ಇಂಥವೇ ಜಾಸ್ತಿ ಓದಿದ್ದು. ಆಮೇಲಾಮೇಲೆ ಅದದೇ ರಿಪೀಟ್ ಆಗುತ್ತದೆ, ಸರಕು ಮುಗಿದಿದೆ, ಬೋರು ಹೊಡೆಯುತ್ತಿದೆ, ಲೇಖಕ ತನ್ನ ಸರಕು ಖಾಲಿಯಾಗಿ, ಅಭ್ಯಾಸ ಬಲದಿಂದ ಬರೆಯತೊಡಗಬಾರದು ಅನಿಸಿತ್ತು. ಹಾಗನ್ನಿಸಿ 2012ರ ಸುಮಾರಿಗೆ ನಿಧಾನಕ್ಕೆ ಹಾಯ್ ಓದುವುದನ್ನು ಬಿಟ್ಟೆ. ಹೀಗೆ ಹತ್ತು ವರ್ಷ ಒಬ್ಬ ಓದುಗನನ್ನು ಹಿಡಿದಿಡುವುದು ಕಡಮೆ ಮಾತಲ್ಲ. ಬೆಳಗೆರೆಯೂ ತಮ್ಮ ಬಗ್ಗೆ ಸುಳ್ಳು, ಉತ್ಪ್ರೇಕ್ಷೆ ಮತ್ತೊಂದೆಲ್ಲ ಬರೆದುಕೊಳ್ಳುತ್ತಾರೆ ಅನಿಸಿತ್ತು, ಹಾಗಾಗಿ ಅವರ ಬರೆಹಗಳನ್ನು, ಖಾಸ್ ಬಾತ್ ಗಳನ್ನೂ ಕೂಡಾ ಕಥೆ ಅಂದುಕೊಂಡು ಓದುತ್ತಿದ್ದದ್ದೂ ಇತ್ತು. ಮುಟ್ಟಿದ್ದನ್ನೆಲ್ಲ ಒರೆಸುವ ಸ್ವಭಾವ ಇರುವ ತಮಿಳು ಹುಡುಗಿಯೊಬ್ಬಳ ಕಥೆ, ಒಂದು rogue ಸೈನಿಕರ ಗುಂಪನ್ನು ಒಂದು elite ಬಟಾಲಿಯನ್ನಾಗಿ ಪರಿವರ್ತನೆ ಮಾಡಿದವನ ಕಥೆ ಇಂಥವೆಲ್ಲ ಖಾಸ್ ಬಾತಿನ ರೂಪದಲ್ಲಿ ಬಂದ ಒಳ್ಳೆಯ ಸಣ್ಣ ಕಥೆಗಳೇ ಆಗಿದ್ದವು ಕೂಡಾ.
ಅರಾ ಮಿತ್ರ, ಕೃಷ್ಣೇ ಗೌಡ, ಪ್ರಾಣೇಶ್, ಹಿರಣ್ಣಯ್ಯ ಮುಂತಾದವರ ಜೊತೆಗೆ ನಿಲ್ಲಿಸಿದರೂ ಮಾತಾಡಿ ಚಪ್ಪಾಳೆ ಗಿಟ್ಟಿಸಿಕೊಂಡಾರು ಎನ್ನಿಸುವಂಥ ಭರ್ಜರಿ ಭಾಷಣಕಾರನೂ ರವಿಯವರ ಒಳಗಿದ್ದ. ಕಾಮರಾಜ ಮಾರ್ಗ ಪುಸ್ತಕ ಪ್ರಕಟವಾದಾಗಿನ ಸಭೆ ನನಗಿನ್ನೂ ನೆನಪಿದೆ. ಒಂದಿಡೀ ರವೀಂದ್ರ ಕಲಾಕ್ಷೇತ್ರ(ಅಥವಾ ಟೌನ್ ಹಾಲು) ತುಂಬಿ, ಹೊರಗೆ ಸ್ಕ್ರೀನು ಹಾಕಿ, ಅದನ್ನು ನೋಡಲಿಕ್ಕೂ ಜನತುಂಬಿ, 'ಪುಸ್ತಕದ ಕಾರ್ಯಕ್ರಮಕ್ಕೆ ಇಷ್ಟು ಜನ ಎಲ್ಲ ಬರ್ತಾರಾ' ಅನ್ನಿಸಿದ ಕಾರ್ಯಕ್ರಮ. ಅವತ್ತು ರಾಜಕಾರಣಿ ರಮೇಶ್ ಕುಮಾರ್ ಅವರದ್ದು ಎಲ್ಲರನ್ನೂ ಗೆದ್ದ ವಾಗ್ಜರಿ. "ಈ ಭಾಷಣ ಆದ್ಮೇಲೆ ಯಾರು ಮಾತಾಡಿದ್ರೂ ಡಲ್ ಹೊಡೆಯುತ್ತೆ" ಅಂತ ಶುರು ಮಾಡಿದ ಬೆಳಗೆರೆ ಅಷ್ಟೇ ಆಕರ್ಷಕವಾಗಿ ಮಾತಾಡಿ ಸಭಾಸದರನ್ನು ಮೋಡಿ ಮಾಡಿ ಬಿಟ್ಟಿದ್ದರು.
ಅವರ ಕುಣಿ ಕುಣಿಯುವ ಶಕ್ತಿಶಾಲಿ ಗದ್ಯ, ಹಿಂಡಿ ಬಿಡುವ ಭಾವುಕತೆ, ಕುಕ್ಕಿ ಬಿಡುವ ಹರಿತವಾದ ವ್ಯಂಗ್ಯ, ಕಣ್ಣಿಗೆ ಕಟ್ಟುವಂತೆ ವರ್ಣಿಸುವ ಚಿತ್ರಕ ಶಕ್ತಿ, ಅಳುಕಿಲ್ಲದೆ ಬದುಕಿನ ವಿಚಿತ್ರ ಮುಖಗಳಿಗೆ ಕನ್ನಡಿ ಹಿಡಿಯುವ ಗುಣ, ಸವಕಲಾಗದ ಗರಿಗರಿ ಭಾಷೆ, ತೀವ್ರತೆ, ಪುಸ್ತಕ ಬರೆಯಲು ಮಾಡುತ್ತಿದ್ದ ರಿಸರ್ಚು ಇವೆಲ್ಲ ಪ್ರಶಂಸನೀಯ. ಇಪ್ಪತ್ತು ವರ್ಷಗಳ ಖಾಸ್ ಬಾತನ್ನು ನೋಡಿ, ಹೇಳಿದ್ದನ್ನೇ ಹೇಳುವ ಸಾಧಾರಣ ಮಟ್ಟದವನ್ನು ಬಿಟ್ಟು, ಅದ್ಭುತವಾದವುಗಳನ್ನು ಹೆಕ್ಕಿ "ಬೆಸ್ಟ್ ಆಫ್ ಖಾಸ್ ಬಾತ್" ಅಂತ ಮಾಡಿದರೆ ಒಂದು ಮೂರು ಸಂಪುಟಗಳಿಗೆ ಆಗುವಷ್ಟು ವಸ್ತು ಅಲ್ಲೇ ಸಿಕ್ಕೀತು. ಹಾಗೆ ನಾನೇ ಒಂದು ದಿನ ಮಾಡಿಯೇನು ಅಂತ ಮನಸ್ಸಲ್ಲೇ ಅಂದುಕೊಂಡಿದ್ದೆ ಕೂಡಾ !
Alexander Mackendrick ಎಂಬ ನಿರ್ದೇಶಕ , ಮಾಸ್ಟ್ರು ಒಂದು ಸಲ ಹೇಳಿದ್ದ- ಹೊಸತಾಗಿ ಸಿನೆಮಾಕ್ಕೆ ಬರೆಯುವವರು ಈ ಕ್ಲಾಸಿಕ್ಕುಗಳು , ಅವಾರ್ಡ್ ವಿನ್ನಿಂಗೂ , ಕ್ರಿಟಿಕಲಿ acclaimed ತರದ್ದನ್ನೆಲ್ಲ ಓದ ಹೋಗಬಾರದು. ಅವರು ಓದಬೇಕಾದ್ದು pulp ಫಿಕ್ಷನ್ ಅನ್ನಿಸಿಕೊಂಡ ರೋಚಕ ಪತ್ತೆದಾರಿ, ಥ್ರಿಲ್ಲರ್ ರೈಟರುಗಳನ್ನು. ಕಸುಬು ಕಲಿಯಲು ಅದೇ ಸೂಕ್ತ ಅಂತ.
ನಾವೂ ಅದನ್ನು ಒಪ್ಪಬಹುದು. ಹೊಸತಾಗಿ ಬರೆಯ ಹೊರಟವರು, ಈಗಷ್ಟೇ ಓದಲು ತೊಡಗಿದವರು ಎಲ್ಲ ನಮ್ಮ ವಿಮರ್ಶಕರು ಮೆಚ್ಚುವ ಘನ ಗಂಭೀರ ಸಾಹಿತ್ಯ ಓದುವುದು ಸೂಕ್ತವಲ್ಲ(ಮಾಸ್ತಿ, ತೇಜಸ್ವಿ ತರದ ಜನಪ್ರಿಯರೂ, ವಿಮರ್ಶಕರ ಮೆಚ್ಚುಗೆ ಗಳಿಸಿದವರೂ ಆದ exceptionಗಳಿದ್ದಾರೆ ಆ ಮಾತು ಬೇರೆ). ಹೊಸಬರು ಓದಬೇಕಾದ್ದು ಅನಕೃ, ತರಾಸು, ಬೀಚಿ, ಬೆಳಗೆರೆ ತರದ craftsmanಗಳ ಆಕರ್ಷಕ, ರುಚಿಕಟ್ಟಾದ ಗದ್ಯವನ್ನೇ.
ಹೋಗಿಬನ್ನಿ ಬೆಳಗೆರೆ.

ಲೋಕೋ ಭಿನ್ನ ರುಚಿ:

 ಕೆಲವು ವಿಚಾರಗಳಿರುತ್ತವೆ, ಅವು ಅರ್ಥಪೂರ್ಣವೂ, ಸತ್ತ್ವಭರಿತವೂ ಆಗಿರುತ್ತವೆ, ಆದರೆ ಅವುಗಳನ್ನೂ ಯಾರೂ ಪಾಲಿಸುವುದಿಲ್ಲ! 'ಎಲ್ಲರಿಗೂ ಗೊತ್ತಿರುವ ಆದರೆ ಯಾರೂ ಓದದ ಕೃತಿಯೇ ಕ್ಲಾಸಿಕ್' ಎಂಬಂತೆ ಈ ಆದರ್ಶಗಳ ಪಾಡು. ವಿವೇಕಿಗಳ ಬಾಯಿಂದ ಬಂದ, 'ಲೋಕೋ ಭಿನ್ನ ರುಚಿ:' ಎಂಬ ಉಕ್ತಿಗೂ ಈ ದುರ್ಗತಿ ಒದಗಿದೆಯೇನೋ. 'ಈ ಹೇಳಿಕೆಯೊಂದು ಕ್ಲೀಷೆ' ಅನ್ನಿಸುವ ಮಟ್ಟಿಗೆ ಅದು ಎಲ್ಲರಿಗೂ ಗೊತ್ತಿದೆ, ಆದರೆ ಅದನ್ನು ಮನಸಾರೆ ಒಪ್ಪಿ, ಅನುಷ್ಠಾನಕ್ಕೆ ತರುವವರು ಎಷ್ಟು ಜನರಿದ್ದಾರೆ ಅಂತ ಲೆಕ್ಕ ಹಾಕಿದರೆ, ಹತ್ತು ನಿಮಿಷದಲ್ಲಿ ಲೆಕ್ಕ ಮುಗಿದೀತು! ಕಳೆದ ಸೋಮವಾರ ಫೇಸ್ಬುಕ್ಕಿನಲ್ಲಿ ಒಂದು ಸಿನೆಮಾದ ಬಗ್ಗೆ ಬರೆದವನನ್ನು ನೋಡಿ, 'ನನ್ನ ಅಭಿಪ್ರಾಯವೊಂದು ರಾಜಾಜ್ಞೆ, ಲೋಕದ ಸಕಲ ಚರಾಚರ ವಸ್ತುಗಳೂ ಇದನ್ನು ಮತ್ತು ಇದನ್ನು ಮಾತ್ರ ಒಪ್ಪಬೇಕು' ಎಂಬ ಧಾಟಿ ಅವನಲ್ಲಿರುತ್ತದೆ. ಮೋದಿಯ ವಿರುದ್ಧವೋ ಪರವೋ ದಿನಗಟ್ಟಲೆ ಮಾತಾಡುವರನ್ನು ನೋಡಿ, 'ಇಡೀ ಲೋಕದ ಒಳಿತು ಕೆಡುಕುಗಳು ನನಗೊಬ್ಬನಿಗೇ ಮಾತ್ರ ಗೊತ್ತಿರುವುದು, ಎಲ್ಲ ಸರಿತಪ್ಪುಗಳ ನಿಶ್ಚಯವನ್ನು ನಾನೊಬ್ಬನೇ ಗುತ್ತಿಗೆ ತೆಗೆದುಕೊಂಡಿದ್ದೇನೆ' ಎಂಬ ಭಾವ ಅಲ್ಲಿ ಇಣುಕುತ್ತಿರುತ್ತದೆ. ನನಗೆ ಇಷ್ಟವಾಗದಿದ್ದರೆ ಆ ಸಿನೆಮಾ ಡಬ್ಬಾ ಅದನ್ನು ಬೇರೆ ಯಾರೂ ಇಷ್ಟಪಡುವಂತಿಲ್ಲ, ನನಗೆ ಹಿಡಿಸದ ಪುಸ್ತಕ ಕಳಪೆ, ಅದನ್ನು ಮೆಚ್ಚುವವರು ಅಭಿರುಚಿಹೀನರು, ನನ್ನ ಫೇವರಿಟ್ ನಟನಿಗೆ ಮಾತ್ರ ನಟನೆ ಗೊತ್ತಿರುವುದು ಅಂತೆಲ್ಲ ಹಲವರು ಒಳಗೊಳಗೇ ನಂಬಿರುತ್ತಾರೋ ಏನೋ ಅಂತ ಒಮ್ಮೊಮ್ಮೆಯಾದರೂ ಅನಿಸುತ್ತದೆ. ವಿ. ಸೀತಾರಾಮಯ್ಯನವರ ಈ ಕೆಳಗಿನ, ಎಲ್ಲರೂ ನೆನಪಿನಲ್ಲಿಟ್ಟುಕೊಳ್ಳಬೇಕಾದ, ಸಾಲುಗಳನ್ನು ಉದ್ಧರಿಸಲಿಕ್ಕೆ ಇಷ್ಟು ಪೀಠಿಕೆ ಹಾಕಿದೆ ಸ್ವಾಮೀ:

"ವಿಮರ್ಶೆಯಲ್ಲಿ ಕೊನೆಯ ಮಾತೆಂಬುದಿಲ್ಲ. ಕಾವ್ಯದ ಅರ್ಥವೆಂಬುದು ರುಚಿ, ಅನುಭವ, ತಾರತಮ್ಯಜ್ಞಾನ ಇರುವವರೆಲ್ಲರೂ ತಾವು ತಾವು ಮಾಡಿಕೊಳ್ಳುವ ಅರ್ಥ. ಅವರ ಬೆಲೆ, ವಿನೋದ, ತರ್ಕ, ತೀರ್ಮಾನ , ಸುಹೃತ್, ಬಗೆಬಗೆಯ ಸಾಹಿತ್ಯ ಪರಿಚಯ, ಮೇಧಾಶಕ್ತಿ ಇದ್ದಂತೆಲ್ಲ ಅವರು ತಮ್ಮ ತಮ್ಮ ಕೈಲಾಸಗಳಲ್ಲಿ ಆಳಬಹುದು. ಉಳಿದೆಲ್ಲಕ್ಕಿಂತ ತಮ್ಮ ಕೈವಲ್ಯವೇ ಮೇಲಿನದೆನ್ನಬಹುದು. ಒಂದು ತೀರ್ಮಾನ ಹೊಳೆದ ಕೂಡಲೇ ಅದರ ಪರವಾಗಿ ವಾದ, ತರ್ಕ, ಹಟ ಸಹಜ; ಬೇರೆಯವುಗಳ ಖಂಡನೆಗೆ ಮನಸ್ಸು ತುಯ್ಯುತ್ತದೆ. ಇದು ಸಾಮಾನ್ಯ ಮಾನವ ಮನೋವೃತ್ತಿ. ಆದರೆ ನನ್ನ ಅಭಿಪ್ರಾಯವೇ ಸರ್ವಶ್ರೇಷ್ಠವೆಂದು ಯಾರು ಹೇಳುವುದೂ ದಾರ್ಷ್ಟ್ಯವಾದೀತು."
ಏನಂತೀರಿ ?

ಒಂದು ಕಾರ್ಪೊರೇಟು ನೀತಿಕಥೆ

 ಬೀಚಿಯವರ ಒಂದು ಹಳೇ ಜೋಕನ್ನು ನೇಟಿವಿಟಿಗೆ ತಕ್ಕಂತೆ ಸ್ವಲ್ಪ ಬದಲಾಯಿಸಿ ರಚಿಸಿರುವ ಒಂದು ಕಾರ್ಪೊರೇಟು ನೀತಿಕಥೆ:

ತಿಂಮನಿಗೆ ಏನೇನು ಮಾಡಿದರೂ ವಿದ್ಯೆ ತಲೆಗೆ ಹತ್ತದು, ಹಾಗಾಗಿ ಕ್ಲಾಸ್ ರೂಮೂ ಬದಲಾಗದು. ಹೆಡ್ ಮಾಸ್ತರರಿಗೂ ಸುಸ್ತಾಗಿ, ತಿಂಮನನ್ನು ಹೇಗಾದರೂ ಪಾಸು ಮಾಡಿ ಪುಣ್ಯ ಕಟ್ಟಿಕೊಳ್ಳುವಂತೆ ಮಾಷ್ಟ್ರುಗಳಲ್ಲಿ ಹೇಳಿದ್ದಾಯಿತು. ಶಾಲೆಯಲ್ಲಿ ಒಂದು appraisal ಸಮಿತಿ ಮಾಡಿ, ಮೀಟಿಂಗು ನಡೆಸಿ, ಕಡೆಗೆ ತಿಂಮನಿಗೆಂದೇ ಪ್ರತ್ಯೇಕ ಪರೀಕ್ಷೆ ಮಾಡುವುದೆಂದಾಯಿತು, ಹೆಚ್ಚು ಪ್ರಶ್ನೆಗಳನ್ನು ಕೆಳತಕ್ಕದ್ದಲ್ಲ, ಹೇಗಾದರೂ ಯಾವುದಾದರೂ ಒಂದು ಉತ್ತರ ಬಂದರೂ ಪಾಸು ಮಾಡಿ ಅಂದರು ಹೆಡ್ ಮಾಸ್ತರರು.
ಮೊದಲಿಗೆ ಇಂಗ್ಲೀಷು ಮಾಸ್ಟರು ಒಂದೇ ಒಂದು ಶಬ್ದದ ಸ್ಪೆಲ್ಲಿಂಗು ಬರೆಯಲು ಹೇಳಿದರಂತೆ, ಯಾವುದಾದರೂ ಒಂದು ಅಕ್ಷರ ಸರಿಯಾದರೂ ಪಾಸು ಮಾಡುವುದೆಂದು ನಿರ್ಣಯ ಮಾಡಿ, "ಎಂಚ" ಅಂತ ಕಣ್ಣು ಮಿಟುಕಿಸಿದರಂತೆ. ಏನು ಮಾಡುವುದು, ಮಾಷ್ಟ್ರ ಗ್ರಹಚಾರ! ಅವರು ಕೊಟ್ಟ ಶಬ್ದ- "ಕಾಫಿ", ಅದನ್ನು ತಿಂಮ ಬರೆದದ್ದು ಹೀಗೆ :
KAAPI.
ಮುಂದೆ ಕನ್ನಡ ಮಾಷ್ಟ್ರ ಸರದಿ, ಅವರೋ ಏಳು ಕೆರೆಯ ನೀರು ಕುಡಿದವರು, ಪ್ರಶ್ನೆ ಪತ್ರಿಕೆಯನ್ನು ಹೀಗೆ ರಚಿಸಿ ಕೊಟ್ಟರು :
೧. ಕನ್ನಡದಲ್ಲಿ ಒಟ್ಟು ಎಷ್ಟು ಸಂಧಿಗಳಿವೆ ?
೨. ಕನ್ನಡದ ಮೂರು ಸಂಧಿಗಳು ಯಾವುವು ?
೩. ಕನ್ನಡ ಸಂಧಿಯಾದ ಆಗಮ ಸಂಧಿಗೆ ಒಂದು ಉದಾಹರಣೆ ಕೊಡಿ
೪. ಕನ್ನಡ ಸಂಧಿಯಾದ ಆದೇಶ ಸಂಧಿಗೆ ಒಂದು ಉದಾಹರಣೆ ಕೊಡಿ
೫. ಕನ್ನಡ ಸಂಧಿಯಾದ ಲೋಪ ಸಂಧಿಗೆ ಒಂದು ಉದಾಹರಣೆ ಕೊಡಿ
ತಿಂಮನೇನು ಇಷ್ಟಕ್ಕೆಲ್ಲ ಸೋಲುವವನೇ? ಎಲ್ಲ ಪ್ರಶ್ನೆಗಳಿಗೂ, "ಗೊತ್ತಿಲ್ಲ" ಅಂತಲೇ ಬರೆದ!
ಮಾಷ್ಟ್ರು ಬಿಡುತ್ತಾರೆಯೇ? ಗೊತ್ತು + ಇಲ್ಲ = ಗೊತ್ತಿಲ್ಲ, ಲೋಪ ಸಂಧಿಗೆ ಸರಿಯಾದ ಉದಾಹರಣೆಯೇ ಕೊಟ್ಟಿದ್ದಾನೆ, ಐದನೇ ಉತ್ತರ ಸರಿ ಅಂತ ಹೇಳಿ ಪಾಸು ಮಾಡಿದರಂತೆ.
ಕಾರ್ಪೊರೇಟ್ ನೀತಿ: "ಈ ಸಲ ಪ್ರಮೋಷನ್ ಸಿಗುತ್ತದೋ ಇಲ್ಲವೋ" ಎನ್ನುವುದು ಸರಿಯಾದ ಪ್ರಶ್ನೆಯಲ್ಲ. "ಈ ಸರ್ತಿ ಮ್ಯಾನೇಜರು/ಬಾಸು ಮನಸ್ಸು ಮಾಡುತ್ತಾರೋ ಇಲ್ಲವೋ" ಎಂಬುದೇ ಉಚಿತವಾದ ಪ್ರಶ್ನೆ.

ಎರಡು ಅನುವಾದಗಳು

 ಅನುವಾದವೆನ್ನುವುದು ಎಷ್ಟೋ ಸರ್ತಿ, ಅಂಗಡಿಯಲ್ಲಿದ್ದ ಐಸ್ ಕ್ರೀಮನ್ನು ಆಸೆಪಟ್ಟು, ಬಟ್ಟಲೊಂದರಲ್ಲಿ ಹಾಕಿ, ಮನೆಗೆ ತರಹೊರಟಂತೆ ಆಗುವುದುಂಟು. ಮನೆಗೆ ಮುಟ್ಟುವಾಗ ಐಸು ಕ್ರೀಮು ಕರಗಿ ಸೊರಗಿ ನೀರಾಗಿ, ಮತ್ತೇನೋ ಆಗಿ, 'ಏಗಿದ್ದೆಲ್ಲ ಸುಮ್ಮನೆ' ಅನಿಸಿಬಿಡುತ್ತದೆ. ಎಷ್ಟೋ ಸಲ ದೊಡ್ಡವರು ಮಾಡಿದ ಅನುವಾದಗಳಲ್ಲಿಯೇ, "He is so cool" ಅನ್ನುವುದನ್ನು, 'ಅವನು ತಣ್ಣನೆಯ ಮನುಷ್ಯ' ಅಂತ ಮಾಡಿಬಿಟ್ಟಿದ್ದಾರೋ ಏನ್ಕತೆ ಅಂತ ತೋರುವುದಿದೆ. ಮೂಲ ಬಿಜೆಪಿ, ಅನುವಾದ ಕಾಂಗ್ರೆಸ್ಸು ಎಂಬಂತಾದರಂತೂ ಕಡುಕಷ್ಟ. ಎಲ್ಲೋ ಕೆಲವೊಮ್ಮೆ, ಬಿಎಂಶ್ರೀಯವರ ಅನುವಾದಗಳಲ್ಲೋ, ಜೋಗಿ, ರವಿ ಬೆಳಗೆರೆ ಅವರುಗಳು ಮಾಡಿದ ರೂಪಾಂತರಗಳಲ್ಲೋ ಚೀನಾದ ಗೋಬಿ ಮಂಚೂರಿ ನಮ್ಮದೇ ತಿಂಡಿ ಆಗಿಬಿಟ್ಟಂತೆ, ಅಲ್ಲಿಯದು ಇಲ್ಲಿಯದೇ ಆಗುವುದುಂಟು. ಹಾಗಾದರೆ, ಓದುಗರಿಗೆ ಗೋಬಿ ಮಂಚೂರಿಯನ್ನನ್ನು ಕಚ್ಚಿದ ಸುಖಪ್ರಾಪ್ತಿ.

ಸುಖವೋ ಕಷ್ಟವೋ, ಯಾವುದಕ್ಕೂ ಒಮ್ಮೆ ಷೆಲ್ಲಿಯ 'To a Skylark' ಕವನವನ್ನೊಮ್ಮೆ ನೋಡೋಣ. ಕನ್ನಡಿಗರ ಸುದೈವ ಎಂಬಂತೆ ಇಬ್ಬರು ಘನ ವಿದ್ವಾಂಸರು skylark ಎಂಬ ಹಕ್ಕಿಗೆ ಇಲ್ಲಿ ಗೂಡುಕಟ್ಟಿದ್ದಾರೆ. ಪಂಡಿತರ ಲೋಕದಲ್ಲಿ, "ಹುಲಿ ಅಂದ್ರೆ ಹುಲೀನೇ" ಎನ್ನಬಹುದಾದ ಮಂಜೇಶ್ವರದ ಗೋವಿಂದ ಪೈಯವರು `ಬಾನಕ್ಕಿಗೆ' ಎಂಬ ಹೆಸರಿನಲ್ಲೂ, ನನಗೆ ಇವತ್ತಿಗೂ ಅನುವಾದಕ್ಕೆ ಮಾದರಿಯಾಗಿರುವ ಬಿಎಂಶ್ರೀಯವರು `ಬಾನಾಡಿ' ಎಂದೂ ಈ ಪದ್ಯವನ್ನು ಕನ್ನಡಕ್ಕೆ ತಂದಿದ್ದಾರೆ. ಸುಮ್ಮನೆ ತಮಾಷೆಗೆ ಕೆಲವು ಸಾಲುಗಳನ್ನು ಅಕ್ಕಪಕ್ಕ ಇಟ್ಟು ಮೂಲದ ಒನಪನ್ನೂ, ಅನುವಾದದ ಒಯ್ಯಾರವನ್ನೂ, ಇಂಗ್ಲೀಷಿನ ಬಿಂಕವನ್ನೂ ಕನ್ನಡದ/ಹಳಗನ್ನಡದ ಬಿಗುಮಾನವನ್ನೂ ನೋಡೋಣ. ಇದೊಂತರ ತೆಂಡೂಲ್ಕರನನ್ನೂ ಲಾರಾನನ್ನೂ ಆಚೀಚೆ ಇಟ್ಟು ನೋಡಿದಂತೆ. ಬಿಎಂಶ್ರೀಯವರದ್ದು ಹೆಚ್ಚಿನ ಕಡೆ ಪಾಂಡಿತ್ಯದ ಭಾರ ಓದುವವರ ಮೇಲೆ ಬೀಳದಂತ ಸರಳ,ಲಲಿತ, ಭಾವಗೀತದ ಓಟ. ಗೋವಿಂದ ಪೈಗಳದ್ದು ಹಳೆಕಾಲದ ಪಂಡಿತರ ಬಿಗಿಯಾದ ಗತ್ತಿನ ನಡಿಗೆಯ ಕ್ರಮ.
ಮೊದಲ ಸಾಲುಗಳು ಹೀಗಿವೆ:
'Hail to thee blithe spirt!
Bird thou never wert,
That from heaven, or near it
pourest thyfull heart
In profuse strains of unpremeditated art''
ಇದನ್ನು ಶ್ರೀಯವರು ಹೀಗೆ ಅನುವಾದಿಸಿದ್ದಾರೆ:
'ಆರು ನೀನೆಲೆ ಹರುಷ ಮೂರುತಿ?
ಹಕ್ಕಿಯೆಂಬರೆ ನಿನ್ನನು!
ತೋರಿ ದಿವಿಜರು ಸುಳಿವ ಬಳಿ,ಸುಖ
ವುಕ್ಕಿ ಬಹನಿನ್ನೆದೆಯನು
ಹಾರಿ ನೆನೆಯದ ಕಲೆಯ ಕುಶಲದ ಭೂರಿಗಾನದೊಳೆರೆಯುವೆ'
ಇದು ಪೈಗಳಲ್ಲಿ ಹೀಗೆ ಬಂದಿದೆ:
ಸೊಗಯಿಸೈ ಸುಖಜೀವಿ!
ನೆಗೆವಕ್ಕಿ ನೀನಲ್ಲ;
ಗಗನದಿಂದಲೊ ಗಗನದರುಗಿಂದಲೊ
ಮೊಗೆವೆ ತುಂಬೆದೆಯ
ಮುಂಬಗೆದಿಲ್ಲದಿಹ
ಬಿನ್ನಣಿಗೆಯುಗುವುದಾರ ಗಾಯನದ ಝರಿಯಿಂ
ಇದರಲ್ಲಿ ಪೈಗಳದ್ದು ಮೂಲವನ್ನು ಇರುವ ಹಾಗೇ ತರುವ ಕ್ರಮ, ಶ್ರೀಯವರದ್ದು ಮೂಲದ ದಿಕ್ಕಿನಲ್ಲಿ ಸ್ವಲ್ಪ ಆಚೀಚೆ ಹೋಗುವ ದಾರಿ. pourest thy full heart In profuse strains of unpremeditated art ಅನ್ನುವುದರ ಕೊರಳಿಗೆ ಹಗ್ಗ ಬಿಗಿದು ಎಳೆತರುವುದು ಸಾಹಸದ ಕೆಲಸ. unpremeditated art ಅನ್ನುವುದರ ಭಾವ "ನೆನೆಯದ ಕಲೆಯ ಕುಶಲದ" ಅಂದಾಗ ಬರಲಿಲ್ಲ, "ಮುಂಬಗೆದಿಲ್ಲದಿಹ ಬಿನ್ನಣಿಗೆ ಉಗುವುದು" ಎಂದಾಗ ಮೂಲದ ಅಬ್ಬರವೇನೋ ಬಂತು, ಆದರೆ 'ಬಿನ್ನಣಿಗೆ' ಎಂಬ ಶಬ್ದಕ್ಕೆ ಡಿಕ್ಷನರಿ ಬೇಕಾದೀತು!
ಬಿ ಎಂ ಶ್ರೀಯವರ "ನೆಲವನೊಲ್ಲದೆ ಚಿಗಿದು ಚಿಮ್ಮುತ ಮೇಲು ಮೇಲಕ್ಕೋಡುವೆ; ಒಲೆದು ದಳ್ಳುರಿ ನೆಗೆದು ಎಂಬ ಸಾಲುಗಳಲ್ಲಿHigher still and higher/From the earth thou springest/Like a cloud of fire ಎಂಬ ಸಾಲುಗಳ ಸೊಗಸು ಮಾಯವಾಗಿದೆ. "ಉನ್ನತಂ ಮೇಣದರಿನುನ್ನತಂ ಭುವಿಯಿಂದ ನೀನ್ನೆಗೆವೆ ಕೆಂಡದುರಿ ಮೋಡದಂತೆ" ಎಂಬ ಪೈಗಳ ಸಾಲುಗಳು ಮೂಲಕ್ಕೆ ಹತ್ತಿರ. ಮುಂದೆ ಬರುವ And singing still dost soar, and soaring ever singest ಪೈಗಳಲ್ಲಿ - "ಗನ್ನದೊಳೇರುತಿನ್ನು ಹಾಡುವೆ, ಹಾಡುತಿನ್ನೇರುವೆ" ಅಂತ ಸಾಧಾರಣವಾಗಿದೆ. ಶ್ರೀಯವರ, "ನಲಿದು ಹಾಡುತ ಹಾಡುತೇರುವೆ, ಏರುತೇರುತ ಹಾಡುವೆ" ಎಂಬಲ್ಲಿ ಪದಗಳನ್ನು ಕುಣಿಸಿರುವ ರೀತಿಯಿಂದ ಮಜಾ ಬಂದಿದೆ.
ಕೈಗೆ ಸಿಗದೇ ಜಾರಬಹುದಾದ ಒಂದು ಸಾಲು ಇದು: Thou dost float and run; Like an unbodied joy whose race is just begun. ಶ್ರೀಯವರ "ಮುಳುಗಿ ಏಳುವೆ, ಹರಿಯುವೆ, ಕಳಚಿ ದೇಹವ ದಿವಕೆ ಹರಿಯುವ ಭೋಗಿಯೋಲಾಟದವೊಲು" ಎಂಬಲ್ಲಿ ಮೂಲಕ್ಕೆ ಬೇರೆಯೇ ಟ್ವಿಸ್ಟ್ ಕೊಟ್ಟಿದ್ದಾರೆ. ಪೈಗಳ "ಮುಂಗತಿಗಣಂ ತೊಡಗಿದಂಗವಡೆಯದ ಸೊಗದ ಪಾಂಗಿನಿಂ ತೇಲಾಡಿ ಹರಿದಾಡುವೆ" ಎಂಬುದು, ಸ್ವಲ್ಪ ಹಳಗನ್ನಡದಂತಿದ್ದರೂ ಮೂಲದ ಚೆನ್ನಾದ ಮರುಸೃಷ್ಟಿ. unbodied joy = ಅಂಗವಡೆಯದ ಸೊಗ ಎಂಬುದುಕಣ್ಣು ಸೆಳೆಯುವ ಅನುವಾದ.
ಕಡೆಗೊಮ್ಮೆ ಬರುವ We look before and after, And pine for what is not ಎಂಬ ಸರಳವಾದ ಸಾಲು, ಗೋವಿಂದ ಪೈಗಳಲ್ಲಿ "ಹಿಂದುಮುಂದಕೆ ನೋಡಿ ಹೊಂದದನು ಹಲುಬಲಾವೊಂದು" ಅಂತಾಗಿ ಭಾವ ಅಷ್ಟಾಗಿ ಮೂಡುವುದಿಲ್ಲ, ಇಂತಲ್ಲಿ ಸರಳತೆಯೇ ಒಳ್ಳೆಯದು ಎಂಬಂತೆ, ಶ್ರೀಯವರ ಈ ಸಾಲುಗಳು ತಟ್ಟನೆ ಮನಮುಟ್ಟುತ್ತವೆ: "ಹಿಂದುಮುಂದನು ನೋಡಿ ನಮೆವೆವು ನೆನೆಯುತಿಲ್ಲದ ಸುಖವನು". ಹಾಗೆ ನೋಡಿದರೆ ಈ ಸಾಲು ಅತ್ಯಂತ ಮನೋಹಾರಿಯಾಗಿ ಮೂಡಿರುವುದು ಅಡಿಗರಲ್ಲಿ ಮತ್ತು ಪುತಿನ ಅವರಲ್ಲಿ, ಅವರು ಈ ಕವನದ ಅನುವಾದ ಮಾಡಿರದಿದ್ದರೂ ! ಅಡಿಗರ, "ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ" ಎಂಬ ಸಾಲು ಷೆಲ್ಲಿಗಿಂತ ಒಂದು ಕೈ ಮೇಲೆಯೇ ಇದೆ. ಗೋಕುಲ ನಿರ್ಗಮನದಲ್ಲಿ ಪುತಿನ ಬರೆದಿರುವ ಈ ಸಾಲನ್ನು ಇವುಗಳ ಜೊತೆಯಿಟ್ಟು ನೋಡಿ, ಇದು ಉಳಿದೆಲ್ಲವನ್ನೂ ಮೀರಿಸುವಂತಿಲ್ಲವೇ: "ಬಯಕೆಯೊಳೇ ಬಾಳ್ ಕಳೆವುದು ಬಯಕೆಯು ದೊರೆತ ಚಣ/ ಬಯಸಿಕೆಯನೆ ಬಯಸುವ ತೆರವೇಕಹುದೆನ್ನ ಮನ"
ಇನ್ನು ಷೆಲ್ಲಿಯ Our sweetest songs are those that tell of saddest thought ಎಂಬುದರ ಪಂಚ್ ಗೋವಿಂದ ಪೈಗಳ "ಸಂದ ಬೇವಸವ ಬಗೆ ತಂದೊರೆವುವೆಮ್ಮ ಸ್ವಾದಿಷ್ಠ ಗೀತಂ" ಎಂಬ ಸಾಲಿನಲ್ಲಿ ಸಿಗುವುದಿಲ್ಲ. ಶ್ರೀಯವರ, "ನೊಂದ ಗೋಳನು ಹೇಳಿ ಕೊರೆವುವೆ ಇನಿಯ ಕವನಗಳೆಮ್ಮೊಳು" ಎನ್ನುವುದರಲ್ಲಿಯೂ ಅಷ್ಟು ಪಂಚ್ ಇಲ್ಲ, ಭಾವಸ್ಫುರಣೆಯಿಲ್ಲ. ಈ ಸಾಲು ನಿಜವಾಗಿಯೂ ಸತ್ತ್ವಪೂರ್ಣವಾಗಿ ಇನ್ನೊಂದು ತರದಲ್ಲಿ ಬಂದಿರುವುದು ಬೇಂದ್ರೆಯವರ ಈ ಕೆಳಗಿನ ಸಾಲುಗಳಲ್ಲಿ !
ಎನ್ನ ಪಾಡೆನಗಿರಲಿ, ಅದರ ಹಾಡನ್ನಷ್ಟೆ
ನೀಡುವೆನು ರಸಿಕ ನಿನಗೆ
ಕಲ್ಲುಸಕ್ಕರೆಯಂಥ ನಿನ್ನೆದೆಯು ಕರಗಿದರೆ
ಆ ಸವಿಯ ಹಣಿಸು ನನಗೆ
ವಿಶೇಷವೆಂದರೆ,ಇಬ್ಬರು ವಿಶಾರದರು ಒಂದೇ ಪದ್ಯವನ್ನು ಅನುವಾದಿಸಿದರೂ, ಒಂದೇ ಪದವನ್ನು ಬಳಸುವುದು ಇಲ್ಲ ಎಂಬಷ್ಟು ಕಡಮೆ ಎಂಬುದನ್ನು ಗಮನಿಸಿ.
ಹೀಗಿದೆ ಅನುವಾದಗಳ ಕಥೆ. ಅಂತೂ ಒಲಿಯದ ನಲ್ಲೆಯನ್ನು ಒಲಿಸಿಕೊಳ್ಳಲು ಹೆಣಗುವ ಹುಡುಗರಂತೆ ಬರೆಯುವವರು ಅನುವಾದಗಳನ್ನು ಮಾಡುತ್ತಲೇ ಇರುತ್ತಾರೆ.

ಶೂಟಿಂಗ್ ದ ಪಾಸ್ಟ್

ನಿನ್ನೆ ವರ್ಲ್ಡ್ ಫೋಟೋಗ್ರಫಿ ದಿನದ ಸಾಲು ಸಾಲು ಪೋಸ್ಟುಗಳು ಕಾಣಿಸಿದಾಗ ನೆನಪಾದದ್ದು ಬಿಬಿಸಿ ವಾಹಿನಿಯ ಶೂಟಿಂಗ್ ದ ಪಾಸ್ಟ್ ಎಂಬ ಒಂದು ಹಳೇ ಮಿನಿ ಸೀರಿಸ್. ಅದರ ಕತೆ ಸುಲಭ. ಒಂದು ದೊಡ್ಡ ಓಬೀರಾಯನ ಕಾಲದ ಕಟ್ಟಡ ಇರುತ್ತದೆ, ಅದೊಂದು ಛಾಯಾಚಿತ್ರಗಳ ಸಂಗ್ರಹಾಲಯ(Photo Library). ಕೈಗೆ ಸಿಕ್ಕದ ಚಿಟ್ಟೆ ಕ್ಯಾಮೆರಾಕ್ಕೆ ಸಿಕ್ಕುವ ಹಾಗೆ, ಅದೆಷ್ಟೋ ಜನರ ಜೀವನದ ಸಂತಸದ, ನಿತ್ಯದ ಕಲಾಪಗಳ ,ಹಳವಂಡಗಳ, ಲಕ್ಷ ಲಕ್ಷ ಕ್ಷಣಗಳು ಫೋಟೋಗಳಾಗಿ ಮರುಜನ್ಮ ತಾಳಿ ಅಲ್ಲಿ ಕೂತಿರುತ್ತವೆ. ಒಂದು ಫೋಟೋ ಬಾಲ್ಯದ್ದು , ಒಂದು ಅಜ್ಜನ ಮನೆಯದ್ದು , ಒಂದು ಕಾಲೇಜಿನದ್ದು ಎಲ್ಲ ಒಟ್ಟಿಗೆ ಇಟ್ಟು ನೋಡಿದರೆ ಅಲ್ಲೊಂದು ಕತೆ ಕಾಣಿಸುವ ಹಾಗೆ, ತತ್ ಕ್ಷಣಕ್ಕೆ ನಿಲುಕದ ಅದೆಷ್ಟೋ ಕತೆಗಳು ನೂರಾರು, ಸಾವಿರಾರು ಫೋಟೋಗಳಲ್ಲಿ ಅಡಗಿ ಕೂತಿರುತ್ತವೆ. ಆ ಕಟ್ಟಡ ಒಂದು ವ್ಯಾಪಾರಿ ಸಂಸ್ಥೆಯ ಕೈಗೆ ಹೋಗುತ್ತದೆ. ಅವರಿಗೋ ಅಲ್ಲೊಂದು School of Business ಕಟ್ಟುವ ಯೋಜನೆ . ದುಡ್ಡಿನ ಮಾತು ಬಂದ ಮೇಲೆ, ಈ ಲಕ್ಷಗಟ್ಟಲೆ ಫೋಟೋಗಳಿಗೆ ಜಾಗ ಎಲ್ಲಿರುತ್ತದೆ ? ಅವನ್ನೇನು ಮಾಡಬೇಕು ? ಮಾರಬೇಕೇ ? ಎಂಥವರಿಗೆ? ಯಾರು ಕೊಳ್ಳುತ್ತಾರೆ ? ಎಸೆಯಬೇಕೇ ? ಎಲ್ಲಿಗೆ ಎಸೆಯಬೇಕು? ಆ ಫೋಟೋಗಳ ಒಳಗಿರುವ ಭಾವಗೀತಗಳಿಗೆ ಯಾರು ಬೆಲೆ ಕೊಡುತ್ತಾರೆ ? ಕಲೆಗೆ ದುಡ್ಡಿನಿಂದ ಬೆಲೆ ಕಟ್ಟಲು ಸಾಧ್ಯವೇ ? ಈ ಎಲ್ಲ ಅಂಶಗಳನ್ನಿಟ್ಟುಕೊಂಡು, ಚಿತ್ರ ವಿಚಿತ್ರ ಪಾತ್ರಗಳನ್ನಿಟ್ಟುಕೊಂಡು, typically ಬ್ರಿಟಿಷ್ ಎನ್ನಬಹುದಾದ ನಿರೂಪಣೆಯೊಂದಿಗೆ, ಮೂರೇ ಘಂಟೆಗಳ ಈ ಮಿನಿಸೀರೀಸ್ ಆವರಿಸಿಕೊಳ್ಳುತ್ತದೆ

https://www.imdb.com/title/tt0184157/?fbclid=IwAR0EsdsmrIFWPrm2TYUgxqm6BTjVnZ7cQnegOnskBqgCLzp-BXqfUd67scg

ಡ್ರೋನುಗಳ ಪ್ರತಾಪ

 "ನೀವು ಇಷ್ಟೊಂದು ಖುಷಿಯಿಂದ, ನೆಮ್ಮದಿಯಿಂದ ಇದ್ದೀರಲ್ಲ,ಇದರ ಗುಟ್ಟೇನು" ಅಂತ ಯಾರಾದರೂ ಕೇಳಿದರೆ, ನನ್ನ ಉತ್ತರ, 'ಪವರ್ ಆಫ್ ಪಾಸಿಟಿವ್ ಥಿಂಕಿಂಗ್' ಎಂತಲೋ, 7 Habits of Highly Effective Peopleನ ತಂತ್ರಗಳು ಎಂದೋ,How to Stop Worrying and Start Livingನ ಸೂತ್ರಗಳು ಅಂತಲೋ ಅಲ್ಲ. ನನ್ನ ಯಶಸ್ಸಿನ ಗುಟ್ಟು ಇಷ್ಟೇ : ನಾನು ನಮ್ಮ ಟೀವಿ ನ್ಯೂಸ್ ಚಾನೆಲುಗಳನ್ನು ನೋಡುವುದಿಲ್ಲ ! ಅತಳ, ಸುತಳ, ಭೂತಳ, ಪಾತಾಳ, ತಳಾತಳ ಮತ್ತು ಫೇಸ್ಬುಕ್ಕುಗಳಲ್ಲಿ ಅಡಗಿದ್ದ ಸಕಲ ಚರಾಚರ ಪ್ರಾಣಿಗಳೆಲ್ಲ ಡ್ರೋನುಗಳ ಪ್ರತಾಪದ ವರ್ಣನೆ ಮಾಡುವುದನ್ನು ನೋಡಿದ ಮೇಲೆ, ಈ ವೀರವ್ರತವನ್ನು ಮುರಿದು ಹತ್ತು ನಿಮಿಷಗಳ ಕಾಲ ಕಿರಿಕ್ ಪ್ರತಾಪರ ಸಂದರ್ಶನದ 'ದರ್ಶನ್' ಭಾಗದ ದರ್ಶನ ಭಾಗ್ಯವನ್ನು ನಾನೂ ದಕ್ಕಿಸಿಕೊಂಡೆ. ವಿಜ್ಞಾನದ ವಿದ್ಯಾರ್ಥಿಯಾಗಿ ನಾನು ಅಷ್ಟನ್ನು ವ್ಯಾಖ್ಯಾನ ಮಾಡಿದರೆ ಸಾಕೆನಿಸುತ್ತದೆ.

ದರ್ಶನ್ ಕೇಳಿದ್ದು ಇಷ್ಟು : "ಬೇರೇನೂ ಬೇಡ, Lift,drag,Thrust ಮತ್ತು viscosityಗಳನ್ನು ಹೇಗೆ ಕ್ಯಾಲ್ಕ್ಯುಲೇಟ್ ಮಾಡ್ತಿ ಅಂತ ಹೇಳಿಬಿಟ್ಟರೆ ಸಾಕು".
ಇವು Aerodynamics ಎಂಬ ವಿಜ್ಞಾನ ಶಾಸ್ತ್ರಕ್ಕೆ ಸಂಬಂಧ ಪಟ್ಟ ಪದಗಳು. ಗಾಳಿಯು ವಸ್ತುಗಳನ್ನು ಹೇಗೆಲ್ಲ ಉದುರಿಸಿ, ಕೆದರಿಸಿ,ಸುತ್ತಿಸಿ, ಝಾಡಿಸಿ , ಆಡಿಸಿ,ಅಡಿಮೇಲಾಗಿಸುತ್ತದೆ ಅಂತ ಹೇಳುವುದು ಈ ಶಾಸ್ತ್ರದ ಕೆಲಸ. ಸ್ವಲ್ಪ ಫ್ಲ್ಯಾಶ್ ಬ್ಯಾಕಿಗೆ ಜಾರಿ ದರ್ಶನರು ಬಳಸಿದ ಈ ಪದಗಳ ಅರ್ಥ ಏನು ಅಂತ ನೋಡೋಣ. ಒಂದು ಕಾರು ಎಲ್ಲಿಗೆ ಚಲಿಸುತ್ತದೆ? ಮುಂದಕ್ಕೆ. ಸರಿ, ಮುಂದಕ್ಕೆ ಹೋಗೋಣ, ವಿಮಾನ ? ಅದು ಮೇಲಕ್ಕೂ ಹೋಗುತ್ತದೆ, ಮುಂದಕ್ಕೂ ಸಾಗುತ್ತದೆ. ವಿಮಾನ, ಹೆಲಿಕಾಪ್ಟರುಗಳ ಮೊಮ್ಮಗನಂಥ ಡ್ರೋನು ಕೂಡಾ ಅಷ್ಟೇ.
ಮೇಲೆ ಹೋಗುವವರಿಗೆಲ್ಲ ಗೊತ್ತಿರುವ ವಿಚಾರ ಏನಪ್ಪಾ ಅಂದರೆ, ಮೇಲೆ ಹೋಗುವಾಗ ನಮ್ಮನ್ನು ಕೆಳಕ್ಕೆಳೆಯುವವರೂ ಇರುತ್ತಾರೆ, ಮುಂದೆ ಹೊರಟಾಗ ಹಿಂದಕ್ಕೆ ಜಗ್ಗುವವರೂ ಇದ್ದೇ ಇರುತ್ತಾರೆ. Lift,drag,Thrust ಮತ್ತು weight ಗಳದ್ದೂ ಇದೇ ಕೆಲಸ. ಮೇಲೆತ್ತಿ ಉದ್ದಾರ ಮಾಡುವ ಉತ್ತೇಜಕ ಶಕ್ತಿ ಲಿಫ್ಟ್ ಆದರೆ ಕೆಳಗೆಳೆಯುವ ಹೊಟ್ಟೆಕಿಚ್ಚಿನ ಮೊಟ್ಟೆಕೋಳಿ weight. ಮುನ್ನುಗ್ಗಿಸುವ ಭೀಮಬಲ Thrust ಆದರೆ, ಕರುಬಿ ಮುಂದೆ ಹೊರಟವರನ್ನು ಹಿಂದೆ ಎಳೆಯುವ ಕೇಡಿಗನ ಪಾತ್ರ dragನದ್ದು. ವಿಮಾನಕ್ಕೆ ಅದರ ಭಾರ, ಗುರುತ್ವಾಕರ್ಷಣೆಗಳೇ ಕೆಳಗೊತ್ತುವ ಶಕ್ತಿಗಳು, ಅದರ ರೆಕ್ಕೆಯೇ ಮೇಲೆತ್ತುವ ಬಲ. ವಿಮಾನದ ರೆಕ್ಕೆಯ ಕೆಳಗೆ ಗಾಳಿಯಲ್ಲಿ high pressure ಇರುವ ಹಾಗೂ ಮೇಲೆ ಕಡಮೆ ಒತ್ತಡ ಇರುವ ಹಾಗೂ ತಂತ್ರ ಮಾಡಿರುತ್ತಾರೆ. ಹೀಗೆ ಗಾಳಿಯನ್ನು ಬೇಸ್ತು ಬೀಳಿಸಿ ಅದೇ ವಿಮಾನವನ್ನು ಮೇಲೆ ದೂಡುವಂತೆ ಮಾಡಿರುತ್ತಾರೆ. ಮೇಲೆ ದೂಡುವ ಶಕ್ತಿ ಹೆಚ್ಚೋ, ಕೆಳಗೆ ಸೆಳೆಯುವ ತಾಕತ್ತು ಹೆಚ್ಚೋ ಅಂತ ಎಂಜಿನಿಯರುಗಳು ಲೆಕ್ಕ ಹಾಕದಿದ್ದರೆ ವಿಮಾನವೋ ಡ್ರೋನೋ ಶಾಲೆಗೆ ಹೋಗಲು ಮನಸ್ಸಿಲ್ಲದ ಮಗುವಿನಂತೆ ಕೆಳಗೇ ಉಳಿದುಬಿಟ್ಟೀತು. ಈ ಲೆಕ್ಕವನ್ನೇ ದರ್ಶನ್ ಕೇಳಿದ್ದು.
ವಿಮಾನಕ್ಕೆ thrust ಕೊಟ್ಟು ಮುನ್ನೂಕಲಿಕ್ಕೆ propellerಗಳು ಇರುತ್ತವೆ. ಡ್ರೋನಿನ ಬದಿಗಳಲ್ಲಿ ಗರಗರ ತಿರುಗುವ ಚಕ್ರಗಳ ತರದ rotorಗಳು ಇರುತ್ತವೆ. ಇವೇ ಅದನ್ನು ಜೋರ್ ಲಗಾಕೇ ಐಸಾ ಅಂತ ದೂಡುವ ಶಕ್ತಿಗಳು. ಆಗ Pressure drag, Viscous drag ಅಂತೆಲ್ಲ ದುಷ್ಟಶಕ್ತಿಗಳು ಹಗ್ಗ ಜಗ್ಗಾಟ ಮಾಡಿ ಅದನ್ನು ಮುಂದೆ ಹೋಗದಂತೆ ತಡೆಯುತ್ತವೆ. viscosityಯ ಬಗ್ಗೆ ಕೇಳಿದ್ದು ಅದಕ್ಕೇ. ಈ viscosityಯನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಸುಲಭ. ಮಜ್ಜಿಗೆ ನೀರು ನೀರಾಗಿರುತ್ತದೆ, ಮೊಸರು ದಪ್ಪ ದಪ್ಪ ಇರುತ್ತದೆ. ನೀರು ತೆಳು ತೆಳು, ಜೇನು ಮಂದ ಮಂದ. ಜೇನು, ಮೊಸರುಗಳ ದಪ್ಪ, ಜಿಗುಟುತನ ಉಂಟಲ್ಲ ಅದೇ viscosity. ಡ್ರೋನಿನ ಬಗ್ಗೆ ಮಾತಾಡುವಾಗ ಇದರ ಸುದ್ದಿ ಯಾಕೆ ಅನ್ನುವವರಿಗೆ ಒಂದು ಪ್ರಶ್ನೆ. ನೀರಿನ ಹೊಳೆಯಲ್ಲಿ ಈಜುವುದು ಸುಲಭವೋ ? ಜೇನಿನ ಹೊಳೆಯಲ್ಲೋ ? ವಾತಾವರಣದಲ್ಲಿ ಗಾಳಿಯ ಬದಲಿಗೆ ಫೆವಿಕಾಲ್ ಗಮ್ಮು ಇದ್ದಿದ್ದರೆ ನಿಮ್ಮ ಕಾರು ಗಾಳಿಯನ್ನು ನೂಕುವ ಬದಲು ಫೆವಿಕಾಲನ್ನು ದೂಡಬೇಕಾಗಿ ಬಂದಿದ್ದರೆ ಅದು ಎಷ್ಟು ವೇಗ ಹೋಗಲು ಸಾಧ್ಯವಿತ್ತು. ಒಂದು ವಸ್ತು ದಪ್ಪ ಇದ್ದಷ್ಟು ಅದರಲ್ಲಿ ಚಲಿಸಲು ಕಷ್ಟ ನಮಗಾದರೂ ಅಷ್ಟೇ, ಕಾರಿಗಾದರೂ ಅಷ್ಟೇ, ಡ್ರೋನಿಗಾದರೂ ಅಷ್ಟೇ. ಅದರ ಲೆಕ್ಕ ಬೇಕಾದದ್ದು ಅದೇ ಕಾರಣಕ್ಕೆ.
ಹೀಗೆ ಒಂದು ಡ್ರೋನು ಮೇಲೆ, ಕೆಳಗೆ, ಹಿಂದೆ, ಮುಂದೆ ಹೋಗುವುದು ಹೇಗೆ ಅಂತ ಹೇಳಲಿಕ್ಕೆ Lift,drag,Thrust, viscosity ಇಷ್ಟರ ಲೆಕ್ಕ ಬೇಕು. ಇಲ್ಲದಿದ್ದರೆ ಅದು ಮಣಿಶಂಕರ ಐಯ್ಯರರ ಮಾತಿನಂತೆ ಬೇಕಾಬಿಟ್ಟಿ ಒಟ್ರಾಶಿ ಎಲ್ಲೆಲ್ಲಿಗೋ ಹೋಗಿ ಬಿಟ್ಟೀತು. ಇಷ್ಟು ಲೆಕ್ಕವನ್ನೇ ಪ್ರತಾಪರಿಗೆ ದರ್ಶನ್ ಕೇಳಿದ್ದು. ನಮ್ಮ ವಾರ್ತಾವಾಹಿನಿಗಳ ಮಟ್ಟ ಎಷ್ಟು drag ಆಗಿದೆ, ಅವುಗಳಿಗೆ ಎಷ್ಟು ಲಿಫ್ಟ್ ಬೇಕು ಅಂದರೆ, ಜನರಿಗೆ, "ಕೀರ್ತಿ ಪ್ರತಾಪರನ್ನು ಕೊಚ್ಚಿ ಕೊಂದೇ ಬಿಡಬೇಕಿತ್ತು" ಎಂಬ ನಿರೀಕ್ಷೆಯಿದ್ದಂತಿತ್ತು! ಹೀಗಾಗಿ, "ಇನ್ನೊಂದು ನಾಲ್ಕೇಟು ಹಾಕಬೇಕಿತ್ತು, ಚಾನ್ಸ್ ತಪ್ಪಿಹೋಯಿತು" ಎಂಬಂತೆ ಹಲವರಾಡಿದ್ದಾರೆ. 'ದಿನಾ ಹತ್ತು ಕೊಲೆ ಮಾಡುವವನು ಇವತ್ತು ಚಿವುಟಿ ಸುಮ್ಮನಾಗಿಬಿಟ್ಟನಲ್ಲ' ಅಂತ ಆಗುವ ನಿರಾಸೆಯಂತೆಯೇ ಇದು ಇರಬಹುದೇನೋ ! ಈ ಸರಿ ತಪ್ಪುಗಳ ವಿಚಾರ ಏನೇ ಇದ್ದರೂ,ವಿಜ್ಞಾನ ಗೊತ್ತಿದ್ದವರಿಗೆ Lift,drag,Thrust, viscosityಗಳ ಪ್ರಶ್ನೆಗಳೇ ಸ್ಥಾಲೀ ಪುಲಾಕ ನ್ಯಾಯದಿಂದ ಸಾಕು. "ಡ್ರೋನು, ಮೇಲೆ , ಕೆಳಗೆ, ಹಿಂದೆ, ಮುಂದೆ ಹೇಗೆ ಚಲಿಸುತ್ತದೆ ಎಂಬ ವಿಚಾರಗಳನ್ನು ಬಿಟ್ಟು ಬೇರೆಲ್ಲಾ ಗೊತ್ತಿದೆ" ಅಂತ ಯಾರಾದರೂ ಹೇಳಿದರೆ, ಅಷ್ಟು ಸಾಕು ! ಅದು ದೋಣಿ ತಯಾರು ಮಾಡುವವನು, 'ಯಾವ ತರದ ದೋಣಿ ಯಾವಾಗ ಮುಳುಗುತ್ತದೆ ಅಂತ ಗೊತ್ತಿಲ್ಲ' ಅಂದ ಹಾಗೆಯೇ. ಅವನಿಗೆ ಆರ್ಕಿಮಿಡೀಸನ ಸಿದ್ದಾಂತ ಎಲ್ಲ ಗೊತ್ತಿದೆಯೋ ಇಲ್ಲವೋ, ದೋಣಿ ಮುಳುಗದೆ ದೂರ ತೀರಕ್ಕೆ ಸೇರಲು ಏನು ಮಾಡಬೇಕು ಅಂತಾದರೂ ಅವನಿಗೆ ಹೇಳಲು ಬರಬೇಕು. ಮಾಧ್ಯಮಗಳಿಗೆ ಕಾಗದದ ದೋಣಿಯೂ ಸುದ್ದಿಯೇ , ನಮಗೆ ಯಾವುದು ಸುದ್ದಿ ಅಂತ ನಾವೇ ಕೇಳಿಕೊಳ್ಳಬೇಕು. ಇದೆಲ್ಲ ಏನೇ ಇದ್ದರೂ ಈ ನೆವದಲ್ಲಿ ನಾವು ವಿಜ್ಞಾನದ ಮಾತಾಡಿದೆವಲ್ಲ, ಅದೇ ಸಂತೋಷ.

ಪಾ. ವೆಂ. ಆಚಾರ್ಯ

 40-50 ವರ್ಷಗಳ ಹಿಂದೆ ನಮ್ಮಲ್ಲಿ ಟೀವಿಗಳಿರಲಿಲ್ಲ, ನ್ಯಾಷನಲ್ ಜಿಯೋಗ್ರಾಫಿಕ್ಕಿನಂಥಾ ಚಾನೆಲ್ ಕೂಡಾ ಇರಲಿಲ್ಲ. ಆದರೇನಂತೆ? ಸರ್ವಜ್ಞಾಚಾರ್ಯ, ಸರ್ವಕುತೂಹಲಿ ಎಂಬ ಬಿರುದುಗಳಿದ್ದ ಸರ್ವಂಕಷ ಪ್ರತಿಭೆಯ ಪಾ. ವೆಂ. ಆಚಾರ್ಯರಿದ್ದರು, ಅವರೇ ಕಟ್ಟಿದ ಕಸ್ತೂರಿ ಪತ್ರಿಕೆಯಿತ್ತು. SSLCಯಲ್ಲಿ rank ಬಂದರೂ ಕಿತ್ತು ತಿನ್ನುವ ಬಡತನ ಅವರನ್ನು ಡಿಗ್ರಿಗೆ ಓದಲು ಬಿಡಲಿಲ್ಲ, ಜ್ಞಾನಕ್ಕೆ ಡಿಗ್ರಿಯ ಹಂಗು ಎಲ್ಲಿರುತ್ತದೆ(ಇವರು ಡಾಕ್ಟರೇಟು ಪಡೆದವರು ಅಂತ ಭಾವಿಸಿ ಕೆಲವರು ಅವರನ್ನು ಡಾ. ಪಾ. ವೆಂ. ಆಚಾರ್ಯರೇ ಅಂತಲೇ ಸಂಭೋದಿಸುತ್ತಿದ್ದರಂತೆ !) ಮುಂದೆ ವಿಧಿಯ ಮೇಲೆ ಸೇಡು ತೀರಿಸಲೋ ಎಂಬಂತೆ ಪಾವೆಂ ನೂರೆಂಟು ವಿಷಯಗಳನ್ನು ಓದಿಕೊಂಡರು, ಅವುಗಳ ಬಗ್ಗೆ ಕಸ್ತೂರಿಯಲ್ಲಿ ಸೊಗಸಾಗಿ ಬರೆದರು. ಕಾಲೇಜಿನ ಪ್ರಾಯಕ್ಕೆ ಬರುವಾಗಲೇ ನಾಗವರ್ಮನ ಛಂದೋಂಬುಧಿ, ಕೇಶಿರಾಜನ ಶಬ್ದಮಣಿದರ್ಪಣಗಳಂತಹ ಶಾಸ್ತ್ರ ಗ್ರಂಥಗಳನ್ನು ಪಾವೆಂ ಇಡಿ ಇಡಿಯಾಗಿ ನುಂಗಿ ಹಾಕಿದ್ದರಂತೆ. ಪಾಠ ಮಾಡಿದರೂ ತಲೆಗೆ ಹೋಗುವುದಿಲ್ಲ ಅನಿಸಬಹುದಾದ ಈ ತರದ ಶಾಸ್ತ್ರಗ್ರಂಥಗಳನ್ನು, ಪಾವೆಂ ಕಥೆ ಕಾದಂಬರಿ ಓದುವಂತೆ ತಮ್ಮಷ್ಟಕ್ಕೆ ತಾವೇ ಓದಿ ಮುಗಿಸಿದರೆಂದು ಕಾಣುತ್ತದೆ.

ಭೌತ ಶಾಸ್ತ್ರ,ರಸಾಯನ ಶಾಸ್ತ್ರ,ಮನೋವಿಜ್ಞಾನ, ಭಾಷೆ, ಶಬ್ದ ವ್ಯುತ್ಪತ್ತಿ, ರಾಜಕೀಯ,ಕ್ರೈಂ, ಇತಿಹಾಸ, ಭೂಗೋಳ,ಗಣಿತ, ವೈದ್ಯಕೀಯ ವಿಚಾರಗಳು, ಹೂವು, ಹಣ್ಣು ಹೀಗೆ ನೀವು ಯಾವ ವಿಷಯ ಬೇಕಾದರೂ ಹೇಳಿ, ಅಲ್ಲಿಗೆ ಆಚಾರ್ಯರ ಪೆನ್ನು ಆ ಕಾಲದಲ್ಲೇ ಹೋಗಿ ಬಂದಿರುತ್ತದೆ! ಮೊನಚಾದ ಹರಟೆ,ವಿಡಂಬನೆಗಳು, ಅನುವಾದಗಳು, ಕವಿತೆಗಳು ಎಲ್ಲವನ್ನೂ ಅವರು ಬರೆದಿದ್ದಾರೆ. ಸರ್ವಕುತೂಹಲದ ಕಾರಣಕ್ಕೆಯೋ ಏನೋ, ನನ್ನ ಪುಸ್ತಕದ ಬೆನ್ನುಡಿ,ಮುನ್ನುಡಿ, ಲೇಖಕನ ಮಾತು ಎಲ್ಲ ಕಡೆಗಳಲ್ಲೂ ಆಚಾರ್ಯರ ಹೆಸರು ಬಂದಿದೆ. ಒಬ್ಬ ಚೆಸ್ ಆಟಗಾರನ ಬಗ್ಗೆ ನಾನು ಬರೆಯಹೊರಟಾಗ, ಇಂತದ್ದು ಕನ್ನಡದಲ್ಲಿ ಬಂದಿರಲಿಕ್ಕಿಲ್ಲ ಅಂದುಕೊಂಡು ಹೊರಟಿದ್ದೆ, ಆಮೇಲೆ ನೋಡಿದರೆ ಎಪ್ಪತ್ತರ ದಶಕದಲ್ಲಿಯೇ ಆಚಾರ್ಯರು ಬಾಬಿ ಫಿಷರ್ ನ ಬಗ್ಗೆ ಬರೆದುಬಿಟ್ಟಿದ್ದಾರೆ !
ಅವರ ಆರೋಗ್ಯ ಕೈಕೊಟ್ಟಾಗ, ನೂರಕ್ಕೆ ನೂರು ಕೆಲಸ ಮಾಡಲಾಗುತ್ತಿಲ್ಲ, ಹಾಗಾಗಿ ನನ್ನನ್ನು ಕೆಲಸದಿಂದ ಬಿಡುಗಡೆ ಮಾಡಿ ಅಂತ ಕೇಳಿಕೊಂಡು ರಾಜೀನಾಮೆ ಪತ್ರ ಬರೆದಿದ್ದರಂತೆ. ಇಷ್ಟು ಪ್ರಾಮಾಣಿಕರ ರಾಜೀನಾಮೆ ಪಾತ್ರವನ್ನು ಮೊಹರೆ ಹನುಮಂತ ರಾಯರು ಒಪ್ಪಿಯಾರೇ ? "ನೀವು ಮನೆಯಲ್ಲೇ ಕುಳಿತು ಕೆಲಸ ಮಾಡಿ" ಅಂತಂದು ಅವರದನ್ನು ಕಸದ ಬುಟ್ಟಿಗೆ ಎಸೆದರಂತೆ. ಪಾವೆಂ ಬರೆದದ್ದರಲ್ಲಿ ಕಸದ ಬುಟ್ಟಿ ಸೇರಲು ಯೋಗ್ಯವಾದದ್ದು ಈ ರಾಜೀನಾಮೆಯ ಪತ್ರವೊಂದೇ ಇರಬಹುದೇನೋ ! ಹೀಗೆ ಆ ಕಾಲದಲ್ಲೇ ವರ್ಕ್ ಫ್ರಮ್ ಹೋಮ್ ಅನ್ನೂ ಪಾವೆಂ ಮಾಡಿದರು !
ಆಚಾರ್ಯರು ಎಷ್ಟೋ ಸಲ ಕಸ್ತೂರಿಯ ಪುಟಗಳನ್ನು ತಾವೇ ಹಲವು ಹೆಸರುಗಳಲ್ಲಿ ಬರೆದು ತುಂಬಿಸುತ್ತಿದ್ದದ್ದಿತ್ತು. ಅವರು ಒಟ್ಟು ಎಷ್ಟು ಬರೆದಿದ್ದಾರೆ, ಎಷ್ಟು ಗುಪ್ತನಾಮಗಳಲ್ಲಿ ಬರೆದಿದ್ದಾರೆ, ಯಾವೆಲ್ಲ ಪತ್ರಿಕೆಗಳಿಗೆ ಬರೆದಿದ್ದಾರೆ ಅಂತ ಲೆಕ್ಕವಿಟ್ಟವರಿಲ್ಲ. ಹೀಗಿದ್ದ ಆಚಾರ್ಯರ ಎಲ್ಲ ಬರೆಹಗಳನ್ನೂ ಹುಡುಕಿ ತೆಗೆಯುವುದು ಕಷ್ಟಸಾಧ್ಯ. ಅದಕ್ಕೆ ಬೇಕಾಗುವ ಓಡಾಟ, ಹುಡುಕಾಟ, ತಾಳ್ಮೆ ಅಪಾರ. ಆಚಾರ್ಯರ ಮೊಮ್ಮಗಳಾದ ಛಾಯಾ ಉಪಾಧ್ಯ, ಈ ನಿಟ್ಟಿನಲ್ಲಿ ಶ್ರಮ ವಹಿಸಿ ಅಜ್ಜನ ಬಹಳಷ್ಟು ಬರೆಹಗಳನ್ನು ಸಂಗ್ರಹಿಸಿ ಆನ್ಲೈನಿನಲ್ಲಿ ಹಾಕಿದ್ದಾರೆ. ಸಿಕ್ಕಿದ ಎಲ್ಲ ವಿವರಗಳನ್ನೂ ಕೃತಿಗಳನ್ನೂ ಸೇರಿಸಿ ಸೈಟ್ ಒಂದನ್ನು ಅವರ ಬಳಗದವರು ಮಾಡಿದ್ದಾರೆ. ಆಚಾರ್ಯರ ಬಹಳಷ್ಟು ಕೃತಿಗಳು ಇಲ್ಲಿ ಸಿಗುತ್ತವೆ , ಓದಿ ಆನಂದಿಸಿ,

ಪಾವೆಂ ಬಗ್ಗೆ ರವಿ ಬೆಳಗೆರೆ 1996ರಲ್ಲಿ ಬರೆದಿದ್ದ ಸಾಲುಗಳನ್ನು ಕೆಳಗೆ ಹಾಕಿದ್ದೇನೆ:




ಗೋವಿನ ಹಾಡು ಮತ್ತು ಅದನ್ನು ಬರೆದವರ ಜಾಡು

ವಿಜಯಕರ್ನಾಟಕದಲ್ಲಿ ಪ್ರಕಟವಾದ ಲೇಖನ:

"ಧರಣಿಮಂಡಲ ಮಧ್ಯದೊಳಗೆ ಮೆರೆಯುತಿಹ ಕರ್ಣಾಟ ದೇಶದಿ" ಎಂದು ಶುರುವಾಗುವ ಪುಣ್ಯಕೋಟಿಯ ಕಥೆಯನ್ನು ಲಾಲಿಸದವರಾರು, ಕೇಳಿ ಹನಿಗಣ್ಣಾಗದವರಾರು? ಎಲ್ಲರಿಗೂ ಗೊತ್ತಿರುವ ಪದ್ಯದ ಬಗ್ಗೆ ಇನ್ನೊಮ್ಮೆ ನಾನು ಹೇಳುವುದೇನೂ ಇಲ್ಲ. ನಾನು ಹೇಳಹೊರಟದ್ದು ಈ ಪದ್ಯದ ಬಗ್ಗೆ ಈಚೆಗೆ ಬಂದ, ವೈರಲ್ ಆದ ವೀಡಿಯೊ ಒಂದರ ಬಗ್ಗೆ. ಆದದ್ದಿಷ್ಟು: 'ಮೈಸೂರಿನ ಕಥೆಗಳು' ಎಂಬ ಫೇಸ್ಬುಕ್ ಪೇಜಿನಲ್ಲಿ ಚ.ವಾಸುದೇವಯ್ಯ(ಇವರು 1852ರಿಂದ 1943ರ ಕಾಲದಲ್ಲಿ ಇದ್ದವರು) ಎಂಬ ಮಹನೀಯರ ಪರಿಚಯ ಮಾಡಿಕೊಡಲಾಯಿತು. ಹಾಗೆ ಮಾಡುವಾಗ, ಜನಪದದಲ್ಲಿದ್ದ ಗೋವಿನ ಹಾಡನ್ನು ಬರೆದವರು ಚ.ವಾಸುದೇವಯ್ಯನವರೇ ಅಂತ ಹೇಳಲಾಯಿತು. ಈ ವೀಡಿಯೊವನ್ನು ಸುಮಾರು ಲಕ್ಷಕ್ಕೂ ಹೆಚ್ಚು ಜನ ಫೇಸ್ಬುಕ್ಕಿನಲ್ಲಿಯೇ ನೋಡಿದ್ದಾರೆ. ವಾಟ್ಸಪ್ಪಿನಲ್ಲಿ ಇದು 'ಗೋವಿನ ಹಾಡನ್ನು ಬರೆದವರು ಯಾರು ಗೊತ್ತೇ' ಎಂಬಂತೆ ವೈರಲ್ ಆಗಿದ್ದು, ಅಲ್ಲಿ ಅದೆಷ್ಟು ಸಾವಿರ ಜನ ನೋಡಿದ್ದಾರೋ.


ವೀಡಿಯೊ ಮಾಡಿದವರು ಒಳ್ಳೆಯ ಮನಸ್ಸಿನಿಂದ,ಸದುದ್ದೇಶದಿಂದ ಅದನ್ನು ಮಾಡಿರುವಂತೆ ಕಾಣುತ್ತದೆ. ಚ.ವಾಸುದೇವಯ್ಯನವರು ದೊಡ್ಡವರು, ಕನ್ನಡಿಗರಿಗೆ ಪ್ರಾತಃಸ್ಮರಣೀಯರು ಅನ್ನುವುದೇನೋ ಸರಿಯೇ, ಆದರೆ, 'ಧರಣಿ ಮಂಡಲ ಮಧ್ಯದೊಳಗೆ' ಎಂಬ ಪದ್ಯವನ್ನು ಅವರೇ ಬರೆದದ್ದು ಎನ್ನುವ ಹೇಳಿಕೆಗೆ ಮಾತ್ರ ಬೇರೆಡೆಗಳಿಂದ ಸಾಕಷ್ಟು ಪುಷ್ಟಿ ನನಗಂತೂ ಸಿಗಲಿಲ್ಲ, ಪೂರಕ ಆಧಾರಗಳಿಲ್ಲದೆ ಗೋವಿನ ಹಾಡಿನ ಕರ್ತೃತ್ವವನ್ನು ಹೇಳುವುದು ಅವಸರದ ತೀರ್ಮಾನವಾದೀತೆಂದೇ ನನಗೆ ಕಾಣುತ್ತದೆ. ಸಂಶೋಧನೆ ಅರ್ಜೆಂಟಿನಲ್ಲಿ ಆಗುವ ಕೆಲಸವಲ್ಲವಲ್ಲ!

ಇದರ ಬಗ್ಗೆ ಶತಾವಧಾನಿ ಗಣೇಶರ ಅಭಿಪ್ರಾಯವನ್ನು ಪಾದೆಕಲ್ಲು ವಿಷ್ಣು ಭಟ್ಟರು ಕೇಳಿದಾಗ ಅವರೂ ಈ ವೀಡಿಯೊದಲ್ಲಿ ಗೋವಿನಹಾಡಿನ ಬಗ್ಗೆ ಹೇಳಿದ್ದನ್ನು ಒಪ್ಪುವುದು ಕಷ್ಟವೆಂದೇ ಹೇಳಿದ್ದಾರೆ. ಗ್ರಂಥಸಂಪಾದನೆ ಮಾಡುವುದು, ಪರಿಷ್ಕೃತ ಆವೃತ್ತಿ ತರುವುದು, ಇರುವ ಒಂದು ಪದ್ಯವನ್ನು ಪಾಠ್ಯ ಪುಸ್ತಕಕ್ಕೆ ಏರಿಸುವುದು ಎಂಬವುಗಳ ನಡುವಿನ ವ್ಯತ್ಯಾಸವನ್ನು ವೀಡಿಯೊ ಮಾಡಿದವರು ಅಷ್ಟಾಗಿ ಗಮನಿಸಿದಂತೆ ಕಾಣುವುದಿಲ್ಲ. ಇದಲ್ಲದೆ ಡಿವಿಜಿಯವರೇ ವಾಸುದೇವಯ್ಯನವರ ಬಗ್ಗೆ ಬರೆದಿದ್ದಾರೆ; ಆದರೆ ಅವರೆಲ್ಲೂ ಈ ಪದ್ಯದ ವಿಚಾರ ಎತ್ತಿಲ್ಲ. ಕರ್ಣಾಟಕ ಕವಿಚರಿತೆಯನ್ನು ಬರೆದವರಾದ, ಮಹಾಪಂಡಿತರಾಗಿದ್ದ ರಾ.ನರಸಿಂಹಾಚಾರ್ಯರು ಮತ್ತು ಎಸ್.ಜಿ ನರಸಿಂಹಾಚಾರ್ಯರು  ವಾಸುದೇವಯ್ಯನವರ ಒಡನಾಟ ಇದ್ದವರು, ಅವರೂ ಈ ಬಗ್ಗೆ ಒಂದು ಮಾತೂ ತಿಳಿಸಿಲ್ಲ. ಪಂಜೆ ಮಂಗೇಶರಾಯರು ಅವರ ಕಿರಿಯ ಸಮಕಾಲೀನರಾದರೂ ಗೋವಿನ ಹಾಡಿನ ವಿಷಯ ಬಂದಾಗಲೂ ಎಲ್ಲೂ ಅದನ್ನು ಬರೆದವರ ಹೆಸರು ಹೇಳಿಲ್ಲ. ಈ ಎಲ್ಲ ಅಂಶಗಳನ್ನಿಟ್ಟುಕೊಂಡು ನೋಡಿದರೆ ಪುಣ್ಯಕೋಟಿಯ ಹಾಡು ವಾಸುದೇವಯ್ಯನವರ ರಚನೆಯಾಗಿರುವ ಸಂಭವನೀಯತೆ ತೀರಾ ಕಡಮೆ ಎಂದು ಗಣೇಶರ ಅಭಿಪ್ರಾಯ. ವಾಸುದೇವಯ್ಯನವರ ಬಗ್ಗೆ ಬರೆಯುವಾಗ ಟಿವಿ ವೆಂಕಟಾಚಲ ಶಾಸ್ತ್ರಿಗಳೂ ಎಲ್ಲೂ ಗೋವಿನ ಹಾಡನ್ನು ಉಲ್ಲೇಖಿಸಿಲ್ಲ ಎಂಬುದನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು.

ಇದಕ್ಕೆ ಪೂರಕವಾಗಿ ಇನ್ನೊಂದಷ್ಟು ಒಗ್ಗರಣೆ: ನಮ್ಮ ಸಂಸ್ಕೃತ ಪಂಡಿತರ ಎದುರೋ, ಹಳಗನ್ನಡ ಕಾವ್ಯಾಸಕ್ತರ ಮುಂದೋ ದೇವರು ಪ್ರತ್ಯಕ್ಷನಾಗಿ, "ವತ್ಸಾ, ಒಂದು ವರ ಕೇಳಿಕೋ" ಅಂತ ಹೇಳಿದನಾದರೆ, ಈ ಪಂಡಿತರಲ್ಲನೇಕರು, "ಯಾವ ಯಾವ ಕೃತಿಗಳನ್ನು ಯಾರ್ಯಾರು ಬರೆದರು, ಬರೆದವರು ಎಲ್ಲಿ, ಯಾವಾಗ, ಹೇಗೆ ಇದ್ದರು ಅಂತ ಹೇಳಿಬಿಡು ತಂದೆ" ಅಂದುಬಿಟ್ಟಾರು ಎನ್ನಿಸುವಷ್ಟು ಎಟುಕಿಗೆ ನಿಲುಕದ  ಕರ್ತೃತ್ವದ ಸಮಸ್ಯೆಗಳಿವೆ. ಕಾಳಿದಾಸ, ಕುಮಾರವ್ಯಾಸ, ಭಾಸ, ಪಾಣಿನಿ, ಭರತ ಇವರೆಲ್ಲ ಯಾರು, ಹೇಗಿದ್ದರು ಎಂಬುದೇ ಗೊತ್ತಾಗದಷ್ಟು ಮಟ್ಟಿಗೆ ಅವರ ವೈಯಕ್ತಿಕ ವಿವರಗಳನ್ನು ಹೇಳುವಲ್ಲಿ ನಿರಾಸಕ್ತಿಯನ್ನು ಖುದ್ದು ಅವರೂ, ಪ್ರಾಚೀನರೂ ತೋರಿಸಿದಂತೆ ಕಾಣುತ್ತದೆ. ನಮ್ಮಲ್ಲಿ ಕವಿರಾಜಮಾರ್ಗವನ್ನು ನಿಜವಾಗಿಯೂ ಬರೆದವರು ಯಾರು ಎಂಬ ವಿಷಯದಲ್ಲಿ ಶಾಸ್ತ್ರಕೋವಿದರು ಎಳೆದೆಳೆದು ಮಾಡಿರುವ ಚರ್ಚೆಗಳು, ಅವುಗಳಿಗೆ ಹುಟ್ಟಿರುವ ಉತ್ತರ, ಪ್ರತ್ಯುತ್ತರಗಳು ಎಲ್ಲ ಸೇರಿದರೆ ಒಂದು ರೋಚಕ whodunnit ಕಾದಂಬರಿಗೆ ಸರಕಾಗಬಲ್ಲವು ಎಂಬಷ್ಟಿವೆ ! ಭಾಸನ ವಿಷಯದಲ್ಲೂ ಹಾಗಾಗಿದೆ. ತಿರುವಾಂಕೂರಿನ ಗಣಪತಿ ಶಾಸ್ತ್ರಿ ಎಂಬವರಿಗೆ ಹದಿಮೂರು ನಾಟಕಗಳು ಸಿಕ್ಕಿ, ಅವನ್ನು ಭಾಸನೇ ಬರೆದದ್ದು ಎಂಬ ತೀರ್ಮಾನಕ್ಕೆ ಅವರು ಬಂದರು. ಅನಂತರ ಅವನ್ನು  ಭಾಸನೇ ಬರೆದದ್ದೋ, ಬೇರೆ ಯಾರಾದರೋ ಎಂಬುದರ ಬಗ್ಗೆ ಎದ್ದ ಕೋಲಾಹಲ, ಪಂಡಿತರು ಹೂಡಿದ ತರ್ಕಗಳು, ನೋಡಿದ ಆಧಾರಗಳು, ನೀಡಿದ ನಿರ್ಣಯಗಳು ಎಂತಹ ಪತ್ತೆದಾರನಿಗೂ ಕೀಳರಿಮೆ ಹುಟ್ಟಿಸಬಲ್ಲವು. ಗೋವಿನ ಹಾಡಿನ ಕರ್ತೃತ್ವದಲ್ಲಿ ಹೀಗೆಲ್ಲ ಚರ್ಚೆಗಳಾಗಿಲ್ಲ.      

ಗೋವಿನ ಹಾಡನ್ನು ಸಂಪಾದಿಸಿ ವಿಸ್ತೃತ,ಪರಿಷ್ಕೃತ ಆವೃತ್ತಿಗಳನ್ನು ಇಬ್ಬರು ವಿದ್ವನ್ಮಹನೀಯರು ತಂದಿದ್ದಾರೆ - ಡಿ ಎಲ್ ನರಸಿಂಹಾಚಾರ್ಯ ಮತ್ತು ತಾಳ್ತಜೆ ಕೇಶವ ಭಟ್ಟ. ಡಿ ಎಲ್. ಎನ್ ಅವರದ್ದು ಮೇರುಸದೃಶವಾದ ಪಾಂಡಿತ್ಯ. ಇವರು ಸ್ಪಷ್ಟವಾಗಿ, ಈ ಹಾಡನ್ನು ರಚಿಸಿದವರಾರೋ ಗೊತ್ತಿಲ್ಲ ಅಂತಲೇ ಬರೆದಿದ್ದಾರೆ. ಸಾವಿರ ವರ್ಷಗಳ ಹಿಂದಿನ ಕೃತಿಗಳ ಜನ್ಮ ಜಾಲಾಡಿಬಿಡುತ್ತಿದ್ದ ಇಂಥಹಾ ವಿದ್ವನ್ಮಣಿಗೆ ತಮ್ಮ ಮೊದಲ ತಲೆಮಾರಿನವರೊಬ್ಬರು ಒಂದು ಪದ್ಯವನ್ನು ಬರೆದ ವಿಚಾರ ಗೊತ್ತಾಗಲಿಲ್ಲ ಅಂತ ಒಪ್ಪುವುದು ನನಗಂತೂ ಕಷ್ಟವೇ ಸರಿ. ಇಲ್ಲಿ ಇನ್ನೊಂದು ತಮಾಷೆಯೂ ಇದೆ. ಡಿ ಎಲ್ ನರಸಿಂಹಾಚಾರ್ ಅವರು ತಾವು ನೋಡಿದ್ದು, ಆಕರವಾಗಿ ಇಟ್ಟುಕೊಂಡದ್ದು ಸರಸ್ವತೀ ಭಂಡಾರದ ಓಲೆಯ ಪ್ರತಿ ಮತ್ತು ಮೈಸೂರು ಓರಿಯೆಂಟಲ್ ಲೈಬ್ರರಿಯ ಪ್ರತಿಗಳನ್ನು ಅಂತ ಕೊಟ್ಟಿದ್ದಾರೆ. 1870ರ ಆಸುಪಾಸಿನ ಕೃತಿಯೊಂದು ತಾಳೆಗರಿಗಳಲ್ಲಿ, ಓಲೆಯ ಪ್ರತಿಗಳಲ್ಲಿ ಸಿಗುತ್ತದೆಯೇ ? ಇದೀಗ ಯೋಚನೆ ಮಾಡಬೇಕಾದ ಅಂಶ!
ಇನ್ನು ಇನ್ನೊಬ್ಬ ದೊಡ್ಡ ವಿದ್ವಾಂಸರಾದ ತಾಳ್ತಜೆ ಕೇಶವ ಭಟ್ಟರು ಸಂಪಾದಿಸಿದ್ದು ಅವರ ತಂದೆಯವರೇ ಲಿಪಿಕಾರನಾಗಿ 1915ರಲ್ಲಿ ಮಾಡಿಟ್ಟಿದ್ದ ಪ್ರತಿಯೊಂದರಿಂದ, ಅವರ ತಂದೆಯವರೂ ಪ್ರತಿ ಮಾಡಿದ್ದು ತಾಳೆಯೋಲೆಯಿಂದಲೇ ಇರಬೇಕಷ್ಟೇ. ಇದು ದಕ್ಷಿಣ ಕನ್ನಡದಲ್ಲಿ ಆ ಕಾಲದಲ್ಲಿ ಚಾಲ್ತಿಯಲ್ಲಿದ್ದ ಹಾಡಾಗಿರಬೇಕು. ಗುಬ್ಬಿ ಗುರುಸಿದ್ದಪ್ಪನವರು ಬರೆದ ಗೋವುಚರಿತ್ರೆ ಎಂಬ ಒಂದು ಯಕ್ಷಗಾನ ಪ್ರಸಂಗ 1895ರಲ್ಲೇ ಇದ್ದದ್ದನ್ನೂ ಅವರೇ ನಮೂದಿಸಿದ್ದಾರೆ.

ಈ ಕಥೆಗೆ ಸಂಸ್ಕೃತದ ‘ಇತಿಹಾಸ ಸಮುಚ್ಚಯ’ ಎಂಬ ಗ್ರಂಥದಲ್ಲಿನ ಕಥೆಯೊಂದೇ ಮೂಲವೆನ್ನುವ ವಿಚಾರಕ್ಕೆ ಮೇಲಿನ ಇಬ್ಬರು ವಿದ್ವಾಂಸರ ಸಮ್ಮತಿಯೂ ಇದೆ. (ಬಹುಶಃ ಇವರಿಬ್ಬರು ಕೊಟ್ಟಿರುವುದರ ಆಧಾರದ ಮೇಲೆ) ಕೆ.ವಿ.ಸುಬ್ಬಣ್ಣನವರು ತಮ್ಮ 'ಕವಿರಾಜಮಾರ್ಗ ಮತ್ತು ಕನ್ನಡ ಜಗತ್ತು' ಕೃತಿಯಲ್ಲಿ ಹೀಗೆ ಬರೆದಿದ್ದಾರೆ :
"ಸಂಸ್ಕೃತದ ‘ಪದ್ಮಪುರಾಣ’ದಲ್ಲಿ ಮತ್ತು ‘ಇತಿಹಾಸ ಸಮುಚ್ಚಯ’ವೆಂಬುದರಲ್ಲಿ ಈ ಕಥೆ ಬರುತ್ತದಂತೆ. ‘ಪದ್ಮ ಪುರಾಣ’ದಲ್ಲಿ ಶಾಪಗ್ರಸ್ತನಾದ ಪ್ರಭಂಜನನೆನ್ನುವನು ಹುಲಿಯ ಜನ್ಮ ತಾಳಿರುತ್ತಾನೆ. ‘ಇತಿಹಾಸ ಸಮುಚ್ಚಯ’ದಲ್ಲಿ ಅದು, ಭೀಷ್ಮನು ಧರ್ಮರಾಯನಿಗೆ ಹೇಳುವ ‘ಬಹುಲೋಪಾಖ್ಯಾನ’; ಬಹುಲಾ ಎಂಬುದು ಹಸು, ಕಾಮರೂಪಿಯೆಂಬುದು ಹುಲಿ. ಇವೆಲ್ಲಕ್ಕೂ ಪ್ರಾಯಶಃ ಮೊದಲೇ, ಕಾಲಿದಾಸನ ‘ರಘುವಂಶ’ದ ದಿಲೀಪಾಖ್ಯಾನದಲ್ಲಿ ನಂದಿನಿಯ ಮೇಲೆ ಆಕ್ರಮಣ ನಡೆಸಲು ಬಂದ ಸಿಂಹದ ಇಂಥದೇ ಕಥೆ ಉಂಟಲ್ಲ? ‘ರಘುವಂಶ’ದ ಸಿಂಹವು
ನಂದಿಯೇ ಸೃಷ್ಟಿಸಿದ ಮಾಯೆ. ಅವೆಲ್ಲ ಇದ್ದರೂ ಈ ಕನ್ನಡ ಹಾಡಿನ ಸ್ವಂತಿಕೆ ಅನನ್ಯತ್ವಗಳಿಗೆ ಆಪೋಹವಿಲ್ಲ"

ಗೋವಿನ ಹಾಡು ಮತ್ತೊಂದು ರೂಪದಲ್ಲಿ ಸಿಗುವುದು ಕೆ ಶಿವರಾಮ ಐತಾಳರ 'ದಕ್ಷಿಣ ಕನ್ನಡದ ಜನಪದ ಸಾಹಿತ್ಯ' ಎಂಬ ಕೃತಿಯಲ್ಲಿ. ಇಲ್ಲಿ ಬರುವ ಹಾಡಿನ ಕಥೆ ಗೋವಿನ ಹಾಡಿನದ್ದೇ ಆದರೂ ನಿರೂಪಣೆ ಬೇರೆಯೇ ತರದಲ್ಲಿ ಇದೆ. ಇದು ತ್ರಿಪದಿಯಲ್ಲಿದೆ, ಇದರ ಗಾತ್ರವೂ ಕಿರಿದು.  ದಕ್ಷಿಣ ಕನ್ನಡ ಅಂತಿದ್ದರೂ ಭಾಷೆ ಅಲ್ಲಿಯದರಂತೆ ತೋರಲಿಲ್ಲ. ‘ಇತಿಹಾಸ ಸಮುಚ್ಚಯ’ದಲ್ಲಿ ಈ ಕಥೆಯನ್ನು ಭೀಷ್ಮನು ಧರ್ಮರಾಯನಿಗೆ ಹೇಳಿದ್ದರ ಪ್ರಸ್ತಾವ ಬಂತಲ್ಲ, ಈ ಕೃತಿಯಲ್ಲಿಯೂ ಹಾಗೇ ಇದೆ. ಶಿವರಾಮ ಐತಾಳರ ಸವಿಸ್ತಾರವೂ ಉಪಯುಕ್ತವೂ ಆದ ಪ್ರಸ್ತಾವನೆ ಇದರ ಇನ್ನೊಂದು ವಿಶೇಷ .
ಕ.ರಾ.ಕೃಷ್ಣಸ್ವಾಮಿಯವರು ಸಂಪಾದಿಸಿದ ತೀರ್ಥಹಳ್ಳಿ ಕಡೆಯ 'ಕೌಲೆ ಹಾಡು' ಇದೇ ಕಥೆಯ ಮತ್ತೊಂದು ಅವತಾರ. ಈ ಹಾಡಿನಲ್ಲಿ ಹುಲಿ ಆತ್ಮಬಲಿ ಎಲ್ಲ ಮಾಡುವಷ್ಟು ಕರುಣರಸ ಇಲ್ಲ, ಇದರಲ್ಲಿ ಹುಲಿ ಹಸುವನ್ನು ತಿಂದು, ಕರು ಅಮ್ಮನನ್ನು ಹುಡುಕಿಕೊಂಡು ಬಂದು, ಹುಲಿಯ ಜೊತೆ ಹೋರಾಟ ಮಾಡುವಂತೆ ಕಥೆಯನ್ನು ತಿರುಗಿಸಲಾಗಿದೆ.  
ಕಾಪಸೆ ರೇವಪ್ಪ ಎಂಬವರು ಸಂಗ್ರಹ ಮಾಡಿಕೊಟ್ಟಿರುವ, ತ್ರಿಪದಿಯಲ್ಲಿರುವ 'ಆಕಳ ಹಾಡು' ಉತ್ತರ ಕರ್ನಾಟಕದ ಸೊಗಡಿನ ಭಾಷೆಯ ಹಾಡು, ಇದರಲ್ಲಿ ಬರೀ 31 ಪದ್ಯಗಳಿವೆ, ಇಲ್ಲಿನದ್ದು ಋಷಿಯ ಆಶ್ರಮದ ಹಸು. ಇಲ್ಲಿ ಹುಲಿಯ ಪ್ರಾಣತ್ಯಾಗ ಮಾಡಿಸದೇ ದೇವತೆಗಳನ್ನು ಬರಿಸಿ ಕಥೆಗೆ ಸುಖಾಂತ್ಯ ಕೊಡಲಾಗಿದೆ. ಇದರಿಂದ ಹಾಡಿನ ಮನಕಲಕುವ ಗುಣ ಕಡಮೆಯಾಗುತ್ತದೆ ಎಂಬುದು ಬೇರೆ ಮಾತು.  

ಮೇಲೆ ತೋರಿಸಿದಂತೆ ಈ ಹಾಡಿಗೆ ಬಹಳಷ್ಟು ಪಾಠಾಂತರಗಳು,ಮರುನಿರೂಪಣೆಗಳು, ಆಕೃತಿಗಳು ಇವೆ ಅನ್ನುವುದು ಸ್ಪಷ್ಟ. ಡಿ.ಎಲ್.ಎನ್ ಮತ್ತು ಕೇಶವ ಭಟ್ಟರು ಸಂಪಾದಿಸಿದ ಆವೃತ್ತಿಗಳಲ್ಲೇ ಎಷ್ಟೋ ವ್ಯತ್ಯಾಸಗಳಿವೆ. ಹೊಸ ಕೃತಿಗಳಿಗೆ ಹೀಗೆ ಅಷ್ಟೊಂದು ಪಾಠಾಂತರಗಳು ಇರುವುದಿಲ್ಲ. ಉದಾ: ಪಂಜೆ ಮಂಗೇಶರಾಯರೋ , ಮಂಜೇಶ್ವರ ಗೋವಿಂದ ಪೈಗಳೋ ಬರೆದ ಹಾಡೊಂದು ಹತ್ತು ಕಡೆಗಳಲ್ಲಿ ಹತ್ತು ತರದ ಸಾಹಿತ್ಯ ಹೊಂದಿರುವುದಿಲ್ಲ. ಹೀಗಾಗುವುದು ಪ್ರಾಚೀನ ಕೃತಿಗಳಲ್ಲಿ, ಓಲೆಗರಿಯ ಪ್ರತಿಗಳಲ್ಲೇ ಜಾಸ್ತಿ. ಇನ್ನುಳಿದದ್ದು, 'ಬೆಳಗೆರೆ ಕೃಷ್ಣಶಾಸ್ತ್ರಿಗಳು ಗೋವಿನ ಹಾಡನ್ನು ವಾಸುದೇವಯ್ಯನವರೇ ಬರೆದದ್ದೆಂದು ಹೇಳಿದ್ದಾರೆ' ಎಂಬ ಹೇಳಿಕೆ. ಶಾಸ್ತ್ರಿಗಳು ಏನು ಹೇಳಿದರೋ, ಅವರು ಹೇಳಿದ್ದನ್ನು ಸರಿಯಾಗಿ ಗ್ರಹಿಸದೇ ಯಾರಾದರೂ misquote ಮಾಡಿದರೋ, ಶಾಸ್ತ್ರಿಗಳೇ ಬೇರೆ ಯಾರೋ ಹೇಳಿದ್ದನ್ನು ಕೇಳಿ ಹೇಳಿದರೋ ಅಂತ ಇನ್ನು ಗೊತ್ತಾಗುವುದು ಕಷ್ಟ. ಏನೇ ಇದ್ದರೂ ಇಂತಹಾ ವಿಷಯಗಳಿಗೆ ಅವರೊಬ್ಬರ ಹೇಳಿಕೆ ಸಾಕಾಗುವುದಿಲ್ಲ ಎಂದಷ್ಟೇ ಹೇಳಬಹುದು.

"ಜನರಿಗಾಗಿ ಜನಜೀವನವನ್ನು ಜನಸಾಮಾನ್ಯರು ತಿರುಳುಗನ್ನಡದಲ್ಲಿ ರಸವತ್ತಾಗಿ ಚಿತ್ರಿಸಿದ್ದೇ ಜನಪದ ಸಾಹಿತ್ಯ" ಅಂತ ಉತ್ತಂಗಿ ಚೆನ್ನಪ್ಪನವರು ಹೇಳಿದ ಮಾತಿನಿಂದ, "ಜನರಿಗಾಗಿ, ತಿರುಳುಗನ್ನಡದಲ್ಲಿ, ರಸವತ್ತಾಗಿ ಚಿತ್ರಿಸಿದ್ದು" ಮುಂತಾದ ಗುಣವಿಶೇಷಗಳನ್ನು ಗೋವಿನ ಹಾಡಿಗೂ ಅನ್ವಯಿಸಬಹುದು. ಇದರ ಕಥೆ ನಾಟಕೀಯ. ಈಗಲೂ ನಾಟಕವಾಗಿ ಮಾಡಿದರೆ ರಂಗಸ್ಥಳದಲ್ಲಿ ಸೊಗಸಾಗಿ ಮೂಡಿಬರುತ್ತದೆ, ಹೀಗಾಗಿ  ಇದನ್ನು ಜನ ನಾಟಕವಾಗಿ ಆಡುತ್ತಲೂ ಇದ್ದಿರಬಹುದೇನೋ ಎಂಬ ಊಹೆಗೆ ಅವಕಾಶವುಂಟು. ಅಂತೂ ಈ ಹಾಡು ಒಂದು ಪಕ್ಷದಲ್ಲಿ ಬರೆಹದ ರೂಪದಲ್ಲಿ ಇರದೇ ಹೋಗಿದ್ದರೂ, ಊರಿನಲ್ಲಿ ಯಾರೋ ಹಾಡುವುದನ್ನು ಕೇಳಿಯೋ, ಅಜ್ಜಿಯಿಂದಲೋ ಅಮ್ಮನಿಂದಲೋ ಕಲಿತೋ, ಮೌಖಿಕವಾಗಿಯೇ ತಲೆಮಾರಿನಿಂದ ತಲೆಮಾರಿಗೆ ಬರುತ್ತಿತ್ತೆನ್ನಲಿಕ್ಕೆ ಅಡ್ಡಿಯಿಲ್ಲ.    

ಚ.ವಾಸುದೇವಯ್ಯನವರಿಗೆ ಇಲ್ಲಿಂದಲೇ ಒಂದು ಗೌರವಪೂರ್ವಕ ನಮಸ್ಕಾರ ಹಾಕಿ, ಯಾರಾದರೂ ಪುಣ್ಯಕೋಟಿಯ ಜಾಡು ಹಿಡಿದು, ಅದರ ಕವಿಯ ಹೆಸರನ್ನು ಕಂಡುಹಿಡಿಯಲಿ ಅಂತ ಆಶಿಸೋಣ.


Dia - Kannada movie

 The funny thing about Dia is that, it tempts you to praise it for what it is not. The film does not have an earth shatteringly distinctive story. The plot wouldn't exactly invoke an urge in you to compare it to a Nolan screenplay. There is no action or anything remotely similar to a fight and no, there is not much comedy, sorry Sadhu and Chikkanna fans! There is not much for fans of horror or suspense either. Tssk!

Heroism and build up? No sir! Villains ? Naa baba naa. Breathtaking locations then? No. And for those want a longer list of "No"s, there are no songs either! How on earth can anyone make an engaging movie without any of these then? The director somehow magically pulls it off, an accomplishment I would've once thought inconceivable. It is the fragrance of genuine warmth,innocence and grace that happens to be the director's magical wand. It is those intimate, beautifully observed small moments beaming with warmth that turn a 90s type old fashioned story into something delicate, dignified and honestly moving.
Almost a disney film like cheerfulness in the background score by Ajaneesh adds to the mood. New faces and their fresh voices help. We were discussing as to how a single dubbing artist seems to be lending her voice to almost every heroine, hence creating some sort of monotony and how it felt so fresh to hear Manvita Hareesh's voice in Kendasampige. Here also the heroine's voice seems new.
Characters(especially the leading lady and her voice-overs) are cute and the progression of their affection for one another is believable and not as artificial as is generally the case in the routine masala movies. This genuineness matters. There also is a deliberate attempt to avoid most of the cliches and infuse freshness in the narration. Result is a film of moods and tones and pools of feeling, full of moving moments and tenderness. This is as close as KFI can possibly get to humming KS Narsimhaswaami's love songs.
Direction and writing is simple, yet assured, situations are explored with lyrical artistry and touching drama, touching mainly because we care about the characters. It is an achingly tender love story,that leaves a bittersweet or rather a bitter aftertaste, it is no wonder that the suddenness of the climax and the bitter aftertaste exasperated many.
All said, this film is an evidence that sometimes it's the simple, unfussy storytelling that comes off best.

ಅಣಕವಾಡುಗಳು

 ಸುಮ್ಮನೆ ಏನನ್ನೋ ನೋಡುತ್ತಿದ್ದಾಗ ಸಿಕ್ಕಿದ ನಾಲ್ಕೈದು ಅಣಕವಾಡು(parody)ಗಳು ಕಚಗುಳಿಯಿಟ್ಟವು, ನಿಮ್ಮ ಖುಷಿಗೆ ಅವನ್ನಿಲ್ಲಿ ಕೊಡುತ್ತಿದ್ದೇನೆ(ಶತಾವಧಾನಿ ಗಣೇಶ್ ಮತ್ತವರ ಬಳಗದವರು ನಡೆಸುತ್ತಿರುವ ಪದ್ಯಪಾನ ಸೈಟಿನಿಂದ ಹೆಕ್ಕಿದ್ದು). ಅಣಕಗಳು ಮೂಲಪದ್ಯದ ಪದಪ್ರಯೋಗ,ಛಂದಸ್ಸು, ಗತಿಗಳನ್ನು ಅನುಕರಣೆ ಮಾಡುವುದರಿಂದ ಅವನ್ನು ಹಾಡಿದರೆ ರಸಾಸ್ವಾದ ಹೆಚ್ಚು. ಹೇಗೂ ಅಣಕಿಸುವುದಾದರೆ ಮಹಾಕವಿ ಕುಮಾರವ್ಯಾಸನನ್ನೇ ಅಣಕಿಸಿದರೆ ಮಜಾ ಅಲ್ಲವೇ ? ಆ ಕವಿ ತನ್ನ ಕಾವ್ಯದ ಬಗ್ಗೆ ಬರೆದುಕೊಂಡ ಸಾಲುಗಳಿವು:

ಅರಸುಗಳಿಗಿದು ವೀರ ದ್ವಿಜರಿಗೆ
ಪರಮವೇದದ ಸಾರ ಯೋಗೀ-
ಶ್ವರರ ತತ್ತ್ವವಿಚಾರ ಮಂತ್ರಿಜನಕ್ಕೆ ಬುದ್ಧಿಗುಣ
ವಿರಹಿಗಳ ಶೃಂಗಾರ ವಿದ್ಯಾ-
ಪರಿಣತರಲಂಕಾರ ಕಾವ್ಯಕೆ
ಗುರುವೆನಲು ರಚಿಸಿದ ಕುಮಾರವ್ಯಾಸ ಭಾರತವ
ಈ ಸಾಲುಗಳು ನಮ್ಮ ಗಾಂಧಿನಗರದ ಮಾಸ್ ಚಿತ್ರಗಳ ನಿರ್ಮಾಪಕರು ಆಗಾಗ ಹೇಳುವುದನ್ನು ಹೇಗೆ ಹೋಲುತ್ತವೆ ಅಂತ ಒಂದು ತಲೆಹರಟೆಯ ಕಲ್ಪನೆಯನ್ನು ನಾನು ಹಿಂದೊಮ್ಮೆ ಮಾಡಿದ್ದೆ:
ಅರಸುಗಳಿಗಿದು ವೀರ - ಇಲ್ಲಿ ನಂ ಹೀರೋದು ಒಂದು ಸಕ್ಕತ್ ಫೈಟ್ ಬರುತ್ತೆ.
ದ್ವಿಜರಿಗೆ ಪರಮ ವೇದದ ಸಾರ - ನಮ್ಮ ಯೋಗರಾಜ ಭಟ್ರು ಬರೆದಿರೋ ಓತ್ಲಾ ವೇದಾಂತ ಸಾಂಗು ಬರುತ್ತೆ , ಹರಿಕೃಷ್ಣ ಮತ್ತೆ ಟಿಪ್ಪು ಹಾಡ್ತಾರೆ
ಯೋಗೀಶ್ವರರ ತತ್ತ್ವವಿಚಾರ ಮಂತ್ರಿಜನಕ್ಕೆ ಬುದ್ಧಿಗುಣ - ಫ್ಯಾಮಿಲಿಗೆ ಒಂದೊಳ್ಳೆ ಮೆಸೇಜ್ ಕೊಟ್ಟಿದೀವಿ !
ವಿರಹಿಗಳ ಶೃಂಗಾರ - ಇಲ್ಲಿ ಕಾಯ್ಕಿಣಿ ಸರ್ ದು ಪ್ಯಾಥೋ ಸಾಂಗ್ ಬರುತ್ತೆ ಸೋನು ನಿಗಂ ವಾಯ್ಸಲ್ಲಿ !
ಅದು ಹಾಗಿರಲಿ, ಈಗ ಈ ಪದ್ಯದ ವಿಡಂಬನ ಮಾಡಿ ಬರೆದಿರುವ ಪದ್ಯಗಳನ್ನು ನೋಡೋಣ.
ಮೊದಲಿಗೆ ನೀಲಕಂಠ ಅವರ ರಚನೆ :
ಅರಸುಗಳಿಗಿದು ನೀರ, ದ್ವಿಜರಿಗೆ
ಪರಮಭೋಜನಸಾರ, ಭೋಗೀ-
ಶ್ವರರ ವಿತ್ತವಿಚಾರ (ಪಿತ್ಥವಿಕಾರ), ಮಂತ್ರಿಜನಕ್ಕೆ ನರಿಯ ಗುಣ
ವಿರಹಿಗಳು ಬೇರೊಬ್ಬರನರಸೆ
ಪರಿಣತಿಯ ಬೋಧವಿದು, ಕಾವ್ಯಕೆ
ಗುರುತದುಂಟೇ ನೀಲಕಂಠನೆ ರಚಿಸೆ ಭಾರತವ
ಅವರದ್ದೇ ಇನ್ನೊಂದು ಪದ್ಯ:
ನೆರೆಯ ಮನೆಗಿವ ದೂರ, ನಿತ್ಯದ
ತರಲೆ ತಂಟೆಗೆ ಶೂರ, ಮಾತಿನೊ-
ಳರೆದ ಮೆಣಸಿನ ಖಾರ, ಕಂತ್ರಿಜನಕ್ಕೆ ಮಂತ್ರಿಯಿವ
ಸಿರಿಯು ಕಾಲ್ಕೆಳಗಾಡುತಿದ್ದರು
ಕರೆದು ಕೊಟ್ಟವನಲ್ಲ ಕೇಳ್ವರ,
ಹೊರುವ ಜನರಿಗೆ ಭಾರ ಕೊನೆಗೀತನ ಕಳೇಬರವು
ಸೋಮ ಅವರ ಪದ್ಯವನ್ನೂ ಓದಿಬಿಡಿ:
ಅರಸರನೆ ಬಿಡ ಪೋರ, ದ್ವಿಜರೆನೆ
ಕೊರಮಗಾಗದಪಾರ ಕೂಗೇ-
ನರರೆ, ತತ್ವವಿಚಾರ ಕಂತ್ರಿಜನಕ್ಕೆ ಬುದ್ಧಿಗುಣ
ಗುರುಹಿರಿಯರಿಂ ದೂರವಿದ್ಯಾ-
ಪರಿಣತರಲಂಕಾರ ಕೀಳ್ಮೆಗೆ-
ಗುರುವೆ ಕನಯಕುಮಾರ ಜೇಎನ್ಯು ಪೀಡೆ ಭಾರತಕೆ
ಕಾಂಚನಾ ಅವರಿಗೆ ಹೊಳೆದ ಸಾಲುಗಳು:
ಅರಸುಗಳಿಗಿದು ಸೇರ,ದ್ವಿಜರಿಗೆ
ಪರಮ ಮೋದದ”ಸಾರ”ಯೋಗೀ
ಶ್ವರರ ಪಥ್ಯಕೆ ಬಾರ,ಮಂತ್ರಿಜಗ ಕ್ಕೆ ವರ್ಜ್ಯ ಕಣಾ!
ಸುರಿಯಲಿದು ಬಂಗಾರ,ಪಾಕದ
ಪರಿಣತಿಗಲಂಕಾರ,ಭೋಜ್ಯಕೆ
ಗುರುವೆನುತೆ ಕುದಿಸಿದ ಕುಮಾರ ಭಟ್ಟ ,ಬೇಳೆಯನು!!
ಸೋಮ ಅವರ ಮತ್ತೊಂದು ರಚನೆಯನ್ನೋದಿ ಮುಗಿಸೋಣ :
ಚರಿತೆಯೊಳಗಿವ ಜಾರ, ವನಿತೆಯ-
ನರಸೆ ಜೀವನಸಾರ, ಭೋಗೀ-
ಶ್ವರರ ತತ್ತ್ವಕೆ ಧೀರ, ಮಂತ್ರಿಗಣಕ್ಕುಮೇರ್ದ ಕಣ
ಸುರರವೊಲೆ ಶೃಂಗಾರ, ಮದ್ಯದ-
ಪರಿಣತರಲಂಕಾರ, ಬ್ಯಾಂಕಿಗೆ
ಗರಗಸಮೆನಲು ಮಲ್ಯ ಮೆರೆಯುತೆ ತೊರೆದ ಭಾರತವ

ಪಂಪಭಾರತ ಗಮಕ ವಾಚನ

 ಋತುಮಾನ ವೆಬ್ ಸೈಟಿನವರು ಪ್ರಸ್ತುತಪಡಿಸುತ್ತಿರುವ ಪಂಪಭಾರತದ ಒಂದು ಭಾಗದ ಗಮಕ ವಾಚನ ಮತ್ತು ವ್ಯಾಖ್ಯಾನಕ್ಕೆ ನಾನು ಬರೆದಿರುವ ಪುಟ್ಟ ಪೀಠಿಕೆಯಿದು,ಟಿವಿ ವೆಂಕಟಾಚಲ ಶಾಸ್ತ್ರಿ, ಕೆ ಆರ್ ಗಣೇಶ್, ಸಿಪಿಕೆ, ಚಂದ್ರಶೇಖರ ಕೆದ್ಲಾಯ ಮುಂತಾದ ಮಹನೀಯರು ವೀಡಿಯೊದಲ್ಲಿದ್ದಾರೆ. ಗಮಕಕ್ಕೆ ಪ್ರಸ್ತಾವನೆಯಾಗಿ ಇದನ್ನು ಬರೆದಿರುವುದರಿಂದ ಒಂದು ಲೇಖನದ ಸೊಗಸು ಕಾಣಲಾರದೇನೋ ಎಂಬ ಹೆದರಿಕೆ, ಅರ್ಜೆಂಟಿನಲ್ಲಿ ಮಾಡಿದ ಅಡುಗೆ ಬೇರೆ, ಈ ಸಂಕೋಚದೊಂದಿಗೇ ಇದನ್ನು ನಿಮ್ಮ ಮುಂದಿಡುತ್ತಿದ್ದೇನೆ:

ಪಂಪಭಾರತದಲ್ಲಿ ಭೀಷ್ಮ ಸೇನಾಧಿಪತ್ಯದ ಪ್ರಸಂಗವು ರಸವತ್ತಾದ ಭಾಗ. ಇಲ್ಲಿನ ಮೂರ್ನಾಲ್ಕು ಪದ್ಯಗಳು ಹತ್ತು ಹಲವು ಕಾರಣಗಳಿಗೆ ಪ್ರಸಿದ್ಧಿ ಪಡೆದಿವೆ, ಚರ್ಚೆಗಳನ್ನೂ ಎಬ್ಬಿಸಿವೆ. ಭೀಷ್ಮರ ನಿವಾಸಕ್ಕೆ ರಾತ್ರಿಯೇ ತೆರಳಿ, ಅವರ ಮನವೊಲಿಸಿ ಬಂದು, ಸಹಸ್ರ ಕಿರಣೋದಯವಾದಾಗ(ಬೆಳಗಾದಾಗ) ಅವರಿಗೆ ಸಕಲ ರಾಜವೈಭೋಗಗಳೊಂದಿಗೆ ಶಾಸ್ತ್ರೋಕ್ತವಾಗಿ ವೀರಪಟ್ಟವನ್ನು ಕಟ್ಟಲು ಧುರ್ಯೋಧನ ಹೊರಡುತ್ತಾನೆ. ಆ ಭೀಷ್ಮರಾದರೂ ಎಂಥವರು ? ಒಂದು ಕಾಲದಲ್ಲಿ ಪರಶುರಾಮನನ್ನೇ ಅಂಜಿಸಿದ ವೀರರು. ಅಂಥ ವೀರಾಗ್ರಣಿಯೇ ಸೇನಾಧಿಪತಿಯಾಗಿ ಬಂದು ನಿಂತರೆ, 'ಪಗೆವರನು ಎನ್ನ ಮಂಚದ ಕಾಲೊಳ್ ಕಟ್ಟಿದಂತೆಯೇ' ಎಂದು ಗರ್ವಿಸಿ ಉಬ್ಬುತ್ತಾನೆ ಧುರ್ಯೋಧನ.
ಕರ್ಣನಿಗೋ ಯೌವನದ ಸಹಜ ದುಡುಕು, ತನಗೆ ಎಷ್ಟೆಲ್ಲವನ್ನೂ ಕೊಟ್ಟ ದೊರೆಗೆ ಸ್ವಾಮಿನಿಷ್ಠೆಯನ್ನು ತೋರಿಸುವ ತವಕ, ಹಿಂದೊಮ್ಮೆ ಪಾಂಡವರು ತನ್ನ ಸೋದರರೆಂದು ತಿಳಿದಾಗ, ಅತ್ತ ತನ್ನವರನ್ನೂ ಕೊಲ್ಲಲಾರೆ ಇತ್ತ ತನ್ನನ್ನು ಪೂರ್ಣವಾಗಿ ನಂಬಿದ ಸುಯೋಧನನ್ನೂ ಬಿಡಲಾರೆ ಎಂಬ ಭಾವದಲ್ಲಿ, "ನನ್ನೊಡೆಯನಿಗಿಂತ ಮೊದಲು ನಾನೇ ಪರಾಕ್ರಮವನ್ನು ಅಂಗೀಕರಿಸಿ ಸಾಯುತ್ತೇನೆ(ತಱಸಂದುದ್ಧತ ವೈರಿ ಭೂಪ ಬಲದೊಡ್ಡಳ್ಳಾಡೆ ಲೆಕ್ಕಕ್ಕೆ ತಳ್ತಿಱದೆನ್ನಾಳ್ದನಿವಾನೆ ಮುಂಚೆ ನಿಱಪೆಂ ಕೆಯ್ಕೊಂಡು ಕಟ್ಟಾಯಮಂ)" ಎಂದು ನಿಷ್ಕರ್ಷೆ ಮಾಡಿಕೊಂಡವನಾತ, ಅಷ್ಟಾಗಿ ಹೆಜ್ಜೆ ಹೆಜ್ಜೆಗೂ ಜಾತಿಯ ಹೆಸರಿನಲ್ಲಿ ಆದ ಅವಮಾನಗಳಿಂದ ಮಡುಗಟ್ಟಿದ್ದ ಅಸಹಾಯಕತೆ, ಕೀಳರಿಮೆ ಮತ್ತು ಕ್ರೋಧಗಳು ಬೇರೆ ಇದ್ದವು .
ಇಂಥಹಾ ಕರ್ಣನಿಗೆ ತನ್ನ ಗೆಳೆಯ, ತನ್ನ ದೊರೆ ತನ್ನನ್ನು ಬಿಟ್ಟು, ಹೋಗಿ ಹೋಗಿ ಒಬ್ಬ ಮುದುಕರಿಗೆ ಪಟ್ಟಗಟ್ಟಿದಾಗ ಬರಬಾರದ ಕೋಪವೇ ಬರುತ್ತದೆ. ತಾನಾದರೋ ಶತ್ರುಗಳ ನಿಟ್ಟೆಲುಬುಗಳನ್ನು ಪುಡಿಮಾಡಬಲ್ಲವನು, ಅದುಬಿಟ್ಟು ಈ ಹಣ್ಣುಹಣ್ಣು ಮುದುಕರಿಂದೇನಾದೀತು ಎಂಬುದು ಅವನ ವ್ಯಥೆ. ಭೀಷ್ಮರು ಕಣ್ಣು ಕಾಣದ ಮುದುಕನಂತೆ, ಬಿಲ್ಲನ್ನು ಊರುಗೋಲಾಗಿ ಹಿಡಿಯಬೇಕಾದ ದುರ್ಬಲ ವೃದ್ಧರಂತೆ(ಅವರು ಪಿಡಿದ ಬಿಲ್ಲೆ ದಂಟಿಂಗೆಣೆ) ಅವನಿಗೆ ಕಾಣುತ್ತಾರೆ. ಅವರ ಪೌರುಷ ದೇವಿ ಮೈಮೇಲೆ ಬಂದವರ ಆವೇಶದಂತೆ, ಕಟ್ಟುಕಥೆ(ಇಲ್ಲಿ ಬರುವ "ಭಗವತಿಯೇಱುವೇೞ್ವ ತೆರದಿಂ ಕಥೆಯಾಯ್ತಿವರೇಱು" ಎಂಬ ಸಾಲಿನ ಅರ್ಥವೇನು ಎಂಬುದರ ಬಗ್ಗೆ ವಿದ್ವದ್ವಲಯದಲ್ಲಿ ಸಾಕಷ್ಟು ಚರ್ಚೆಗಳಾಗಿವೆ). ಇಂತಹಾ ಮುದುಕರನ್ನು ಯುದ್ಧರಂಗಕ್ಕೆ ಒಯ್ದರೆ ಶತ್ರುಗಳು ಬಿದ್ದು ಬಿದ್ದು ನಕ್ಕಾರು ಅನಿಸುತ್ತದೆ ಕರ್ಣನಿಗೆ, ಇದೆಲ್ಲವನ್ನೂ ಬಾಯಿಬಿಟ್ಟು ಹೇಳಿಯೂ ಬಿಡುತ್ತಾನೆ.
ಇಷ್ಟಾದಾಗ ದ್ರೋಣರು ತಾವೇನು ಕಮ್ಮಿ ಕೋಪದವರಲ್ಲ ಎಂಬಂತೆ ಕೆರಳಿಬಿಡುತ್ತಾರೆ. ಈ ಕೋಪೋದ್ರೇಕದಲ್ಲಿ ಜಾತಿ ಬಂದುಬಿಡುತ್ತದೆ ! ಸತ್ಕುಲಪ್ರಸೂತರಾದ ಭೀಷ್ಮರನ್ನು ಹೀಗೆ ಆಡಿಕೊಳ್ಳಬೇಕಾದರೆ ಹೀನಕುಲದವನದ್ದೇ ನಾಲಗೆಯಾಗಬೇಕು ಎಂದವರ ಎಣಿಕೆ. ನಾಲಗೆ ಕುಲಮಂ ತುಬ್ಬುವುದು(ಪ್ರಕಟಪಡಿಸುವುದು) ಎಂಬ ನಾಣ್ಣುಡಿ ನಿನ್ನಂಥವರಿಗೇ ಇರುವುದು ಎಂದಾಡಿಬಿಡುತ್ತಾರೆ.
ಅಲ್ಲಿಗೆ ಕರ್ಣನ ಆತ್ಮಾಭಿಮಾನವನ್ನು ಬಡಿದೆಬ್ಬಿಸಿದಂತಾಗುತ್ತದೆ. ದ್ರೋಣನ ಕರ್ಣಕಠೋರ ವಚನಗಳಿಗೆ ಉತ್ತರ ಪಟಪಟನೆ ಅವನ ಬಾಯಿಯಿಂದ ಹೊರಡುತ್ತದೆ. "ಕುಲಮನೆ ಮುನ್ನಂ ಉಗ್ಗಡಿಪಿರೇಂ ಗಳ" (ಬಾಯಿ ತೆಗೆದರೆ ಮೊದಲು ಕುಲವನ್ನೇ ಕುರಿತು ದೊಡ್ಡದಾಗಿ ಯಾಕೆ ಹೇಳುತ್ತೀರಿ ಸ್ವಾಮೀ?) ಎನ್ನುತ್ತಾನೆ. ಹಿಂದೊಮ್ಮೆ ಧನುರ್ವಿದ್ಯಾ ಪ್ರದರ್ಶನವಾದಾಗಲೂ, ಕರ್ಣ ಅರ್ಜುನನ ಜೊತೆ ಸ್ಪರ್ಧಿಸಹೊರಟಾಗ ಅವನು ಕುಲದ ಕಾರಣದಿಂದ ಅರ್ಜುನನಿಗೆ ಸಮನಲ್ಲ ಎಂಬ ಕಟುನಿಂದೆ ಕೇಳಿಬಂದಿತ್ತು. ಆಗ ಕರ್ಣನ ಪರವಾಗಿ ಧುರ್ಯೋಧನನೇ ಮಾತಾಡಿ, "ಕುಲಮೆಂಬುದುಂಟೆ ಬೀರಮೆ ಕುಲಮಲ್ಲದೆ ಕುಲಮನಿಂತು ಪಿಕ್ಕದಿರಿಂ"(ಶೌರ್ಯವೇ ಕುಲವಲ್ಲದೆ ಕುಲವೆಂಬುದು ಬೇರೆಯುಂಟೇ?) ಎಂದಿದ್ದ. ಅದು ಕರ್ಣನಿಗೆ ನೆನಪಿದ್ದಿರಬೇಕು. ಮುಂಬರಿದು, "ನಿಮ್ಮ ಕುಲಂಗಳು ಆಂತು ಮಾರ್ಮಲೆವನನು ಅಟ್ಟಿ ತಿಂಬುವೆ" ಅಂತ ಸವಾಲು ಹಾಕುತ್ತಾನೆ(ಯುದ್ಧದಲ್ಲಿ ಎದುರಾಳಿ ಬಾಣಗಳ ಮಳೆಗರೆದಾಗ, "ನಾನು ಇಂಥಹಾ ಕುಲದವನು" ಅಂತ ಜಂಬ ಕೊಚ್ಚಿದರೆ, ನಿಮ್ಮ ಕುಲವೇನು ಯುದ್ಧ ಗೆದ್ದು ಕೊಡುತ್ತದೆಯೇ ಮಾರಾಯರೇ ಎಂಬ ಭಾವ).
ಕೊನೆಗೆ "ಕುಲಂ ಕುಲಮಲ್ತು, ಚಲಂ ಕುಲಂ,ಗುಣಂ ಕುಲಂ, ಅಭಿಮಾನಮೊಂದೆ ಕುಲಂ,ಅಣ್ಮು ಕುಲಂ"(ಹುಟ್ಟಿನಿಂದ ಬಂದದ್ದು ಕುಲವಲ್ಲ. ಚಲ, ಸದ್ಗುಣ, ಆತ್ಮಾಭಿಮಾನ, ಪರಾಕ್ರಮಗಳೇ ಕುಲ) ಎಂದುಸುರುತ್ತಾನೆ. ಪಂಪನ ಸಾಮಾಜಿಕ ಪ್ರಜ್ಞೆಗೆ ಇಲ್ಲಿ ಕರ್ಣ ಬಾಯಾಗುತ್ತಾನೆ. ಕಡೆಗೆ, ಭೀಷ್ಮನು ಪಾಂಡವರನ್ನು ಗೆದ್ದರೆ ನಾನು ತಪಸ್ಸಿಗೆ ಹೋಗಿಬಿಡುತ್ತೇನೆ ಅಂತ ಬೇರೆ ಹೇಳುತ್ತಾನೆ!
ಇಷ್ಟಾದ ಮೇಲೆ ಭೀಷ್ಮರು ತಣ್ಣಗೆ ಕರ್ಣನನ್ನು taunt ಮಾಡುವಂತೆ ಮಾತಾಡುತ್ತಾರೆ, 'ನಿನಗಿರುವಷ್ಟು ಕಲಿತನದ ಉಕ್ಕು, ಜವ್ವನದ ಸೊಕ್ಕು, ರಾಜನ ಗೆಳೆತನ, ತೋಳ್ಬಲದ ಶಕ್ತಿ ನನಗೆಲ್ಲಿದೆಯಪ್ಪಾ' ಎನ್ನುತ್ತಾರೆ. ಅಲ್ಲಿ ಅವರಾಡುವ "ಸೂೞ್ಪಡೆಯಲಪ್ಪುದು ಕಾಣ ಮಹಾಜಿರಂಗದೊಳ್" ಎಂಬ ಮಾತೂ ಬಹುಪ್ರಸಿದ್ಧ. "ಈ ಮಹಾಯುದ್ಧದಲ್ಲಿ ನಮಗೆ ಸಿಗುವುದು ವಿಜಯವಲ್ಲ, ನಮ್ಮದೇನಿದ್ದರೂ ಒಬ್ಬರಾದ ಮೇಲೆ ಒಬ್ಬರು ಪತನ ಹೊಂದುವ ಕೆಲಸ, ಸಾಯುವುದಕ್ಕೆ ನಮ್ಮ ಸರದಿ ಯಾವಾಗ ಬರುತ್ತದೆ ಅಂತ ಕಾಯುವ ಕೆಲಸ. ಹೀಗಾಗಿ, ಜಾಸ್ತಿ ಹಾರಾಡಬೇಡ, ನಿನ್ನ ಸರದಿಯೂ ಬಂದೇ ಬರುತ್ತದೆ" ಎಂಬ ವ್ಯಂಗ್ಯ ಭೀಷ್ಮರದು. ಇಷ್ಟು ಹೇಳಿ, "ಚಕ್ರವನ್ನು ಹಿಡಿಯುವುದಿಲ್ಲವೆಂದು ಪ್ರತಿಜ್ಞೆ ಮಾಡಿರುವ ಕೃಷ್ಣನ ಕೈಯಲ್ಲಿ ಚಕ್ರ ಹಿಡಿಸುತ್ತೇನೆ, ಅರ್ಜುನನ ರಥವು ಎಂಟು ಗಾವುದ ದೂರ ಹೋಗುವಂತೆ ಬಾಣಪ್ರಯೋಗ ಮಾಡುತ್ತೇನೆ, ಪ್ರತಿದಿನವೂ ಯುದ್ಧದಲ್ಲಿ ಹತ್ತು ಸಾವಿರ ಯೋಧರನ್ನು ಧರೆಗುರುಳಿಸುತ್ತೇನೆ" ಎಂದು ಭೀಷ್ಮರು ಮಹಾಪ್ರತಿಜ್ಞಾರೂಢರಾಗುವಲ್ಲಿಗೆ ಈ ಪ್ರಸಂಗ ಮುಗಿಯುತ್ತದೆ.
ಪೂರಕ ಓದಿಗೆ :
ಮುಳಿಯ ತಿಮ್ಮಪ್ಪಯ್ಯನವರ "ನಾಡೋಜ ಪಂಪ" ಎಂಬ ಅಧ್ಭುತ ಕೃತಿ
ವಿದ್ವಾನ್ ಕೆವಿ ಕೃಷ್ಣ ಭಟ್ಟರ 'ಕರ್ಣ ರಸಾಯನಂ' ಎಂಬ ಪುಸ್ತಕ
ಎಂ ಎಂ ಕಲಬುರ್ಗಿಯವರ "ನನ್ನಿಯೊಳಿನತನಯಂ" ಎಂಬ ಲೇಖನ
ಶಂಭಾ ಜೋಶಿಯವರ, 'ಕರ್ಣನ ಮೂರು ಚಿತ್ರಗಳು' ಎಂಬ ಲೇಖನ
"ಭಗವತಿಯೇಱುವೇೞ್ವ ತೆರದಿಂ ಕಥೆಯಾಯ್ತಿವರೇಱು" ಎಂಬ ಸಾಲಿನ ಬಗ್ಗೆ ಡಿ ಎಲ್ ನರಸಿಂಹಾಚಾರ್, ಟಿ.ವಿ. ವೆಂಕಟಾಚಲ ಶಾಸ್ತ್ರಿ, ಚಿದಾನಂದ ಮೂರ್ತಿ ಇವರೆಲ್ಲ ಬರೆದಿರುವ ಲೇಖನಗಳು
ವಾಗರ್ಥ ಬಳಗದಲ್ಲಿ ಈ ಪದ್ಯದ ಸೂಕ್ಷ್ಮಗಳ ಬಗ್ಗೆ ನಡೆದ ಚರ್ಚೆಗಳು(https://www.facebook.com/groups/vagartha/permalink/1535529626537188/)
ಗಮಕದ ವೀಡಿಯೊ ಇಲ್ಲಿದೆ :

ಮಂಜೇಶ್ವರ ಗೋವಿಂದ ಪೈ ಎಂಬ ಅದ್ಭುತ

 ಕನ್ನಡದಲ್ಲಿ ಅಸಾಧಾರಣ ಕೆಲಸ ಮಾಡಿದ ವಿದ್ವನ್ಮಣಿಗಳಿಗೆ ಮೆಚ್ಚಿಕೆ ಸಲ್ಲಿಸಿ ಅವರ ಪರಿಚಯವನ್ನು ಫೇಸ್ಬುಕ್ಕಿಗರಿಗೆ ಮಾಡಿಸುವ ಪ್ರಯತ್ನ.

ಪಂಡಿತರನ್ನು ಅಂಕಿಅಂಶಗಳಲ್ಲಿ ಅಳೆಯುವುದು ಆಫೀಸಿನ ಕೆಲಸವನ್ನು ಗಂಟೆಗಳಲ್ಲಿ ಅಳೆದಂತೆ ಬರೀ ತೋರಿಕೆಯ ಮಾತಾದೀತು. ಆದರೆ ಮಂಜೇಶ್ವರ ಗೋವಿಂದ ಪೈಗಳ ವಿಷಯ ಹಾಗಲ್ಲ. ಬ್ರಾಡ್ಮನ್ನನ ಸರಾಸರಿಯನ್ನು ನೋಡಿ ಬೆರಗಾಗುವಂತೆ ಆಗಬೇಕಾದರೆ ಇದನ್ನು ನೋಡಿ: ಗೋವಿಂದ ಪೈಗಳ ಗ್ರಂಥಸಂಗ್ರಹದಲ್ಲಿ ಸುಮಾರು 4750 ಪುಸ್ತಕಗಳು ಸಿಕ್ಕಿವೆ. ಅದರಲ್ಲೇನಿದೆ ಎನ್ನುವವರಿದ್ದರೆ, ಇನ್ನೊಂದು ವಿವರವನ್ನೂ ಹೇಳಿ ಬಿಡುತ್ತೇನೆ, ಸಿಕ್ಕಿದ ಸಂಗ್ರಹದಲ್ಲಿ 35 ಭಾಷೆಗಳ ಪುಸ್ತಕಗಳಿವೆ! ಇವುಗಳಲ್ಲಿ 22 ಭಾಷೆಗಳು ಪೈಗಳಿಗೆ ಗೊತ್ತಿದ್ದವು ! ಸಂಸ್ಕೃತ,ತುಳು, ಪ್ರಾಕೃತ, ಪಾಲಿ, ಬಂಗಾಲಿ, ಉರ್ದು,ಮರಾಠಿ, ಜರ್ಮನ್, ಜಪಾನಿಯಿಂದ ಮುಂತಾದ ಭಾಷೆಗಳಿಂದ ಅವರು ಭಾಷಾಂತರ ಮಾಡಿಯೂ ಇದ್ದಾರೆ.
ಈಜಿಪ್ಟಿನಲ್ಲಿ ಸಿಕ್ಕಿದ Oxyrhynchus Papyri ಎಂಬ ಪುರಾತನ ಕಾಗದಗಳ ಕಟ್ಟೊಂದರಲ್ಲಿರುವ, ಎರಡೂ ಕಾಲು ಸಾವಿರ ವರ್ಷ ಹಳೆಯ ಗ್ರೀಕ್ ನಾಟಕವೊಂದರಲ್ಲಿ ಕೆಲವು ಕನ್ನಡದ ಪದಗಳಿವೆ ಅಂತ, ಮೂಲ papyrusನಲ್ಲಿದ್ದ ನಾಟಕವನ್ನು ಗ್ರೀಕ್ ಭಾಷೆಯಲ್ಲಿಯೇ ಓದಿ ಪೈಗಳು ಹೇಳಿಯೂ ಇದ್ದಾರೆ ! ಹಿರಿಯಡಕ ಮುರಳೀಧರ ಉಪಾಧ್ಯರು ಭಾಷಣವೊಂದರಲ್ಲಿ ಹೇಳಿದಂತೆ, "ಬ್ರಿಟಿಷರ ಭಾರತದಲ್ಲಿ ತಮ್ಮ ಜೀವನದ 64 ವರ್ಷಗಳನ್ನು ಕಳೆದ ಪೈಗಳು ಜಗತ್ತಿನ ಜ್ಞಾನನಿಧಿ ಇಂಗ್ಲಿಷಿನಲ್ಲಿ ಮಾತ್ರ ಇದೆ ಎಂಬುದನ್ನು ಒಪ್ಪಲಿಲ್ಲ ಎಂಬುದು ಮಹತ್ವದ ಸಂಗತಿ. ಸಂಸ್ಕೃತ, ಪಾಲಿ, ಪ್ರಾಕೃತ, ಪರ್ಷಿಯನ್,ಜಪಾನಿ, ಚೀನೀ ಇಂಥ ಭಾಷೆಗಳಲ್ಲಿ ಜ್ಞಾನದ ಕೊಪ್ಪರಿಗೆಗಳಿವೆ ಎಂಬುದು ಅವರಿಗೆ ಗೊತ್ತಿತ್ತು"
ಇನ್ನೊಬ್ಬ ಮಹಾಪಂಡಿತರಾದ ಸೇಡಿಯಾಪು ಕೃಷ್ಣ ಭಟ್ಟರು ಪೈಗಳ ಕೆಲಸದ ಬಗ್ಗೆ ಹೇಳಿರುವ ಮಾತುಗಳು most appropriate ಎಂಬಂತಿವೆ: "ಅವರು ನೂರಾರು ಗ್ರಂಥಗಳನ್ನು ಓದಿ ಸಾರಗ್ರಹಣ ಮಾಡಿ ಬರೆದ ಲೇಖನಗಳು ಇತರ ಎಷ್ಟೋ ಮಂದಿ ಸಂಶೋಧಕರೆಂಬವರ ಜ್ಞಾನಸಂಪತ್ತಿನ ಪೇಟಿಕೆಗಳಾಗಿವೆ. ಹೀಗೆ ಅವರು ಸಂಗ್ರಹಿಸಿದ ಜ್ಞಾನಸಂಪತ್ತು ಒಂದುದೃಷ್ಟಿಯಿಂದ ನೋಡಿದರೆ ಅವರ ಲೇಖನಗಳಿಂದ ಕನ್ನಡಕ್ಕೆ ಎಷ್ಟು ಪ್ರಯೋಜನವಾಗಿದೆಯೋ ಅದಕ್ಕಿಂತ ಎಷ್ಟೋ ಮಿಗಿಲೆಂಬುದರಲ್ಲಿ ಸಂದೇಹವಿರಲಾರದು. ಹೀಗೆ ಸಂಶೋಧನಕ್ಕೆ ಬೇಕಾದ ಮೂಲದ್ರವ್ಯಗಳನ್ನು ಏಕಾಂಗವೀರತೆಯಿಂದ ಸಂಗ್ರಹಿಸಿ ಅವರು ಮಾಡಿದ ಅದ್ಭುತಕಾರ್ಯವನ್ನು ಕಾಡಿನಲ್ಲಿ ಒಂಟಿಯಾಗಿ ಕುಳಿತು ತಪಸ್ಸು ಮಾಡಿ ಸಿದ್ಧಿಯನ್ನು ಪಡೆಯುತ್ತಿದ್ದ ಪುರಾಣಮುನಿಗಳ ಪ್ರಯತ್ನಕ್ಕೆ ಹೋಲಿಸಬಹುದು. ಅವರ ನಿಗಮನಗಳಲ್ಲಿ ಹಲವು ನನಗೆ ಒಪ್ಪಿಗೆಯಾಗದಿದ್ದರೂ ಅವರ ಇಂತಹ ಸಂಗ್ರಹಗಳಿಂದ ಅಷ್ಟಿಷ್ಟು ಪ್ರಯೋಜನವನ್ನು ಪ್ರಸಾದರೂಪವಾಗಿ ಪಡೆದ ಕಿರಿಯರೊಳಗೆ ನಾನೂ ಒಬ್ಬನು ಎಂದು ಕೃತಜ್ಞತಾಪೂರ್ವಕವಾಗಿ ನಿವೇದಿಸುತ್ತಿದ್ದೇನೆ", ಸೇಡಿಯಾಪು ಅವರು ಅಳೆದು ತೂಗಿ, ಒಂದಕ್ಷರವೂ ಬದಲಿಸಲಾಗದಂತೆ ಕೊಟ್ಟಿರುವ ಈ ಪ್ರಶಂಸೆಯ ಸರ್ಟಿಫಿಕೇಟು ಎಲ್ಲವನ್ನೂ ಹೇಳುತ್ತದೆ. ಪೈಗಳ ಸಮಗ್ರ ಸಂಶೋಧನ ಸಂಪುಟವನ್ನು (ಓದಿ?)ನೋಡಿ, ಲಂಕೇಶರು, "ಇದನ್ನೋದಿ ಅರ್ಥ ಮಾಡಿಕೊಳ್ಳಲು ನನ್ನ ಒಂದು ಜೀವಮಾನ ಸಾಲದು" ಅಂತ ಬರೆದಿದ್ದರಂತೆ!
ಸನಾತನಧರ್ಮದಲ್ಲಿ ಅಚಲವಾದ ಶ್ರದ್ಧೆಯಿದ್ದ ಪೈಗಳು ಹೀಬ್ರೂ ಭಾಷೆಯಲ್ಲಿ ಬೈಬಲ್ಲನ್ನು ಓದಿ ಏಸುಕ್ರಿಸ್ತನ ಕೊನೆಯ ದಿನಗಳ ಬಗ್ಗೆ "ಗೋಲ್ಗೋಥಾ" ಎಂದೂ, ಪಾಳಿ ಭಾಷೆಯಲ್ಲಿ ಬುದ್ಧನ ಬಗ್ಗೆ ಓದಿ,ಅವನ ಬಗ್ಗೆ "ವೈಶಾಖಿ" ಎಂದೂ ಖಂಡಕಾವ್ಯಗಳನ್ನು ಕಟ್ಟಿದ್ದಾರೆ. ಪೈಗಳ ಬಗ್ಗೆ ಬೇಂದ್ರೆಯವರು ಬರೆದಿರುವ ಚಂದದ ಕವಿತೆಯಿಂದ ಕೆಲವು ಸಾಲುಗಳು :
ಕಲ್ಲು-ಕಾಗದ-ಕಡತಗಳಲಿ ಕಾಲನ ಕಾಲು/ಸಿಕ್ಕು ತೊಳಲಾಡುವಲ್ಲಿ ಕುಣಿಕೆ ಬಿಡಿಸಿದಿರಣ್ಣ ! ...... ನಿಮಗೆ ನೀವೇ ಪೂರ್ವಪಕ್ಷ,ಅಕ್ಷರ-ರಮ್ಯ. (ಕನ್ನಡ ಎಷ್ಟು ಹಳತು,ಕುಮಾರವ್ಯಾಸ, ರಾಘವಾಂಕನ ಕಾಲನಿರ್ಣಯ ಹೇಗೆ, ರನ್ನನು ಗದಾಯುದ್ಧವನ್ನು ಬರೆದುದೆಂದು? ಹೀಗೆ ಎಷ್ಟೋ ವಿಷಯಗಳ ಕಾಲನಿರ್ಣಯ ಮಾಡಿದ್ದರ ಸೂಚನೆ ಮೊದಲ ಸಾಲಿನಲ್ಲಿದೆ. ಒಂದು ವಿಷಯದ ಬಗ್ಗೆ ಚರ್ಚೆಯಾಗುವಾಗ, ಮೊದಲು ಹೂಡಿದ ವಾದವನ್ನು ಪೂರ್ವಪಕ್ಷ ಎನ್ನುತ್ತಾರೆ, ಡಿಬೇಟಿನಲ್ಲಿ ಒಂದು motion ಇರುತ್ತದೆ, ಅನಂತರ against ದಿ motion ವಾದವೂ ಇರುತ್ತದೆ. ಪೈಗಳದ್ದು ಅವರಿಗೆ ಅವರೇ ಪೂರ್ವಪಕ್ಷ, ಅವರಿಗೆ ಅವರೇ for the motion ಮತ್ತು against the motion ಹೇಳಬೇಕು ಎಂಬ ಚಮತ್ಕಾರದ ಕಲ್ಪನೆ ಬೇಂದ್ರೆಯವರದ್ದು)

ಗೂಢಚಾರಿಕೆ

 'ಗೂಢಚಾರಿಕೆ' ಎನ್ನುವುದು ನನ್ನ ಮಟ್ಟಿಗೆ ಕುತೂಹಲವನ್ನು ಕದಡಿ ಮಿಸುಕಾಡಿಸುವ ಸಂಗತಿ. ಅಲ್ಲಿ ನಡೆಯುವುದೆಲ್ಲ ಗೋಪ್ಯವೂ ನಿಗೂಢವೂ ಆದ್ದರಿಂದ ಆ ಗುಟ್ಟುಗಳನ್ನು ತಿಳಿಯಲು ಮನ ಎಳಸುತ್ತದೆ. ಈ ನಿಟ್ಟಿನಲ್ಲಿ The Unending Game: A Former R&AW Chief's Insights into Espionage ಎಂಬ ಪುಸ್ತಕದಿಂದ ಹೆಕ್ಕಿದ ನಾಲ್ಕಾರು ವಿಷಯಗಳು (ನನ್ನ ಒಗ್ಗರಣೆಯೊಂದಿಗೆ).

ವಿಕ್ರಮ್ ಸೂದ್ ಅವರದ್ದು ಅಂತಹಾ ಆಕರ್ಷಕ, ರೋಚಕ ಗದ್ಯವೇನೂ ಅಲ್ಲ, ಮಾಹಿತಿಗಳಿಂದ ಇಡಿಕಿರಿದಿರುವ, ಪಠ್ಯಪುಸ್ತಕದಂಥಾ ಶೈಲಿ ಅವರದ್ದು (The best and most successful spies are the quiet, apparently boring and dull people ಅಂತೊಂದು ಮಾತೇ ಇದೆ! ಜೇಮ್ಸ್ ಬಾಂಡ್ನಂತೆ ಎಲ್ಲರ ಗಮನ ಸೆಳೆಯುವವರು ಒಳ್ಳೆಯ ಗುಪ್ತಚರರಾಗುವುದು ಕಷ್ಟ. ಎಲ್ಲರೂ ಯಾವಾಗಲೂ ನಿಮ್ಮನ್ನು ನೋಡುತ್ತ, ಮಾತಾಡಿಸುತ್ತ ಇದ್ದರೆ ಗುಪ್ತ ಚಟುವಟಿಕೆಗಳನ್ನು ಮಾಡುವುದಾದರೂ ಹೇಗೆ ?! James Bond is fantasy, George Smiley is reality ಅಂತ ವಿಕ್ರಮ್ ಸೂದ್ ಅವರೇ ಬರೆಯುತ್ತಾರೆ ಕೂಡಾ!). ಶೈಲಿ ಸ್ವಲ್ಪ dry ಆದರೂ, ಬರೆದವರು ನಮ್ಮ ದೇಶದ ಬೇಹುಗಾರಿಕಾ ಸಂಸ್ಥೆಯಾದ R&AWದಲ್ಲಿ ಮೂವತ್ತು ವರ್ಷ ಕೆಲಸ ಮಾಡಿದವರು, ಅದರ ಮುಖ್ಯಸ್ಥರೂ ಆಗಿದ್ದವರು ಎಂಬ ಕಾರಣಕ್ಕೆ ಪುಸ್ತಕಕ್ಕೊಂದು ವಿಶ್ವಾಸಾರ್ಹತೆ ತನ್ನಿಂತಾನೇ ಸಿಗುತ್ತದೆ. ಇನ್ನು ಪುಸ್ತಕದಿಂದ ಹೆಕ್ಕಿದ ನಾಲ್ಕಾರು ವಿಷಯಗಳಿಗೇ ಬರೋಣ.
ಇಂದಿರಾ ಗಾಂಧಿಯ ಕ್ಯಾಬಿನೆಟ್ಟಿನಲ್ಲಿ ಇದ್ದ ಭೂಪರೊಬ್ಬರು, "ನನಗೆ 50000 ಡಾಲರುಗಳನ್ನು ಕೊಟ್ಟರೆ ನಿಮಗೆ ಗುಟ್ಟಿನಲ್ಲಿ ಸುದ್ದಿ ಕೊಡುತ್ತೇನೆ" ಅಂತ ರಷ್ಯಾದ ಕೆಜಿಬಿಯ ಹತ್ತಿರ ಯೋಜನೆಯನ್ನು ಮುಂದಿಟ್ಟರಂತೆ. ತಮಾಷೆ ಅಂದರೆ ಕೆಜಿಬಿ ಅದಕ್ಕೊಪ್ಪಲಿಲ್ಲವಂತೆ -- "ಬೇಕಾದಷ್ಟು ಜನ ವರ್ತಮಾನ ಕೊಡುವವರು ದೊಡ್ಡ ದೊಡ್ಡ ಸ್ಥಾನಗಳಲ್ಲಿ ಈಗಾಗಲೇ ಇದ್ದಾರೆ, ನಿಮಗೆ ಕೊಟ್ಟು ದುಡ್ಡು ವೇಸ್ಟು ಮಾಡುವುದು ಯಾಕೆ" ಎಂಬ ಕಾರಣಕ್ಕೆ! ಸ್ವತಃ ಇಂದಿರಾ ಗಾಂಧಿಯ ಹೆಸರೇ VANO ಎಂಬ ಹೆಸರಿನಲ್ಲಿ ಕೆಜಿಬಿಯ ದಾಖಲೆಗಳಲ್ಲಿ ಇದೆಯಂತೆ. ಇನ್ನು "1971ರ ಕಾಲದಲ್ಲಿ ಮೊರಾರ್ಜಿ ದೇಸಾಯಿ ನಮ್ಮ informer ಆಗಿದ್ದರು, ನಮಗೆ ಅಲ್ಲಿನ ವೃತ್ತಾಂತಗಳನ್ನು ತಿಳಿಸುತ್ತಿದ್ದರು ಅಂತ ಅಮೆರಿಕಾದ CIAಯವರೊಬ್ಬರು ಪುಸ್ತಕವೊಂದರಲ್ಲಿ ಬರೆದಿದ್ದಾರಂತೆ ! ಇಂಥವರು ಇನ್ನಷ್ಟು ಜನರೂ ಇದ್ದರಂತೆ. "ಅವ್ನು ಬಿಡಿ, ಪಾಕಿಸ್ತಾನದ paid ಏಜೆಂಟ್" ಅಂತ ಕೆಲವರನ್ನು ಫೇಸ್ಬುಕ್ಕಿಗರು ಹಳಿಯುವುದುಂಟು, ಆದರೆ ಅಂತದ್ದು ದೊಡ್ಡ ದರ್ಜೆಯವರಲ್ಲಿ ನಿಜವಾಗಿಯೂ ಆಗುತ್ತದೆ ಅಂತ ಮಾತ್ರ ಹೀಗೆ ಆರೋಪ ಮಾಡುವವರಿಗೂ ಗೊತ್ತಿದೆಯೋ ಇಲ್ಲವೋ ! ಹಾಗಂತ ಇದು ನಮ್ಮಲ್ಲಿ ಮಾತ್ರ ನಡೆಯುವುದೂ ಅಲ್ಲ, ಅಮೆರಿಕಾದಲ್ಲಿ ದೊಡ್ಡ ಹುದ್ದೆಗಳಲ್ಲಿ ರಷ್ಯಾದ ಏಜೆಂಟರು ಇದ್ದದ್ದು, ರಷಿಯಾದಲ್ಲಿ ಎತ್ತರದ ಸ್ಥಾನದಲ್ಲಿ ಅಮೆರಿಕಾದ ಗೂಢಚಾರರು ಇದ್ದದ್ದು ಎಲ್ಲ ಅಧಿಕೃತವಾಗಿಯೇ ವರದಿಯಾಗಿವೆ.
ಪೇಯ್ಡ್ ಮೀಡೀಯಾ ಕೂಡಾ ನಿಜವೇ; ಇಂದಿಗೂ ಅಂದಿಗೂ. Between 1972 and 1975, the KGB planted nearly 17,000 stories in the media ಅಂತ ಸೂದ್ ಬರೆಯುತ್ತಾರೆ. ಅಮೆರಿಕಾದ CIAಯದ್ದಂತೂ Propaganda and Covert operations ಅಂತೊಂದು ಅಧಿಕೃತ ವಿಭಾಗವೇ ಇತ್ತಂತೆ(ಈಗಲೂ ಇರಬಹುದು) ! ಆ ಕಾಲಕ್ಕೇ ಹೀಗೆ ಅಂದಮೇಲೆ, ಇವತ್ತು ತಮಗೆ ಬೇಕಾದಂತೆ ಬರೆಯುವುದಕ್ಕೆ, ಸುದ್ದಿ ತೋರಿಸುವುದಕ್ಕೆ ಪಾಕಿಸ್ತಾನದ ISI, ಅಮೆರಿಕಾ, ರಷಿಯಾಗಳ ಸಂಸ್ಥೆಗಳು ಇವರ ಕೈಯಿಂದೆಲ್ಲ ತಿಂಗಳಿಗಿಷ್ಟು ಅಂತ ತೆಗೆದುಕೊಳ್ಳುವವರು ನಮ್ಮಲ್ಲಿ ಹಲವರು ಇದ್ದಾರು. ಹೀಗಾಗಿ "ರಾಹುಲ್ ಗಾಂಧಿಯೇ ಪ್ರಧಾನಿಯಾಗಲಿ" ಎನ್ನುವವರು, ದಿನಕ್ಕೆರಡು ಸಲ ಮೋದಿಯ ಗುಣಗಾನ ಮಾಡುವವರು, ಕೋಮುವಾದ ಇನ್ನೊಂದು ಮತ್ತೊಂದು ಅಂತ ಹಾರಾಡುವವರು, ಹಿಂದುತ್ವ ಆತ್ವ ಈತ್ವ ಅಂತ ಕೂಗಾಡುವವರು, ಕಮ್ಮ್ಯುನಿಸ್ಟ್ ಪಕ್ಷದ ವಕ್ತಾರರಂತೆ ಸಮಾಜವಾದ ಅದು ಇದು ಅಂತ ಎಡೆಬಿಡದೆ ಬಿತ್ತರಿಸುವವರು, ವಾರಕ್ಕೊಮ್ಮೆ ಟೌನ್ ಹಾಲ್ ಹೋರಾಟ ಮಾಡುವವರು, ಸಿಕ್ಕಾಬಟ್ಟೆ ಎಡಗಡೆಗೋ, ಬಲಗಡೆಗೋ ನೋಡುತ್ತ ಬರೆಯುವವರು ಇಂಥವರು ಹೇಳುವುದನ್ನೆಲ್ಲ ಸ್ವಲ್ಪ ಸಂಶಯದ ದೃಷ್ಟಿಯಿಂದಲೇ ನೋಡುವುದೊಳ್ಳೆಯದು. ಯಾರ ಅಕೌಂಟಿಗೆ ಎಷ್ಟು ಎಲ್ಲಿಂದ ಬಂದುಬೀಳುತ್ತಿದೆ ಅಂತ ಯಾರಿಗೆ ಗೊತ್ತಿದೆ ? ಕೆಲವೊಮ್ಮೆ ಇಂಥವರು ಇಂಥದ್ದನ್ನು ಬೇಕೆಂತಲೇ ಮಾಡದೆಯೂ ಇರಬಹುದು. Never attribute to malice that which can be adequately explained by stupidity ಅನ್ನುತ್ತಾರಲ್ಲ!
ಇನ್ನು ಪಾಕಿಸ್ತಾನದ ISIಯ ವಿಚಾರ. ಒಂದು ಅಂದಾಜಿನ ಪ್ರಕಾರ ಈ ISI ಕಳೆದ ದಶಕದಲ್ಲಿ ಲಷ್ಕರ್‌–ಎ–ತಯಬಾ, ಜೈಷ್ ಎ ಮೊಹಮ್ಮದ್, ಹಿಜ್ಬುಲ್ ಮುಜಾಹಿದೀನಿನಂತಹಾ ಭಯೋತ್ಪಾದಕರ ಸಂಘಟನೆಗಳಿಗೆ ವರ್ಷಕ್ಕೆ ಸುಮಾರು 1792ಕೋಟಿ ರೂಪಾಯಿಯಂತೆ ಕೊಡುತ್ತ ಬಂದಿದೆಯಂತೆ. 1792 ರೂಪಾಯಿಯಲ್ಲ, 1792 ಕೋಟಿ ರೂಪಾಯಿ ಅದೂ ಪ್ರತಿವರ್ಷ! ಕಳೆದ ಸಲದ ಮುಂಬಯಿಯ ಆಕ್ರಮಣವೊಂದಕ್ಕೇ ಸುಮಾರು ಐದು ಕೋಟಿ ರೂಪಾಯಿ ದುಡ್ಡನ್ನು ಐಎಸ್ಐ ಸುರಿದಿರಬಹುದು. ಬರೀ ಕಾಶ್ಮೀರದಲ್ಲಿ ಒಂದು operating seasonಇಗೆ ಲಷ್ಕರ್‌–ಎ–ತಯಬಾದಂತಹ ಭಯೋತ್ಪಾದಕರ ಸಂಘಟನೆಯೊಂದಕ್ಕೇ ಸುಮಾರು 25 ಕೋಟಿ ಕೊಡುತ್ತದೆ ಪಾಪಿ ಐಎಸ್ಐ ! ಒಂದು ಸೀಸನ್ನಿಗೆ ಒಂದು ಸಂಘಟನೆಗೆ 25 ಕೋಟಿ ಕೊಡುವ State-sponsored terrorism. ಇಷ್ಟು ದೊಡ್ಡ ಬಜೆಟ್ ಇದ್ದರೆ ಹೋರಾಟವೂ ಆಗುತ್ತದೆ, ಇನ್ನೊಂದೂ ಆಗುತ್ತದೆ. ಇದ್ಯಾವುದೂ ವಾಟ್ಸಪ್ಪಿನಲ್ಲಿ ಬಂದ ಸುಳ್ಸುದ್ದಿಯಲ್ಲ -- ಇವೆಲ್ಲ R&AWದ ಮಾಜಿ Chief ಆಗಿದ್ದ ವಿಕ್ರಂ ಸೂದ್ ಬರೆದಿರುವ ಅಂಕಿ ಅಂಶಗಳು. ಇಷ್ಟಿರುವಾಗ ISI ಕೃಪಾಪೋಷಿತ ನಾಟಕಮಂಡಳಿಯ ಕಾಶ್ಮೀರದ ಹೋರಾಟಗಾರರು ಸೈನಿಕರ ಕಡೆಗೆ ಕಲ್ಲೇಕೆ ಮುತ್ತು ರತ್ನಗಳನ್ನೇ ಎಸೆದರೂ ಆಶ್ಚರ್ಯವೇನೂ ಇಲ್ಲ !
ಪಾಕಿಸ್ತಾನದ ಸ್ಥಿತಿ ಆರ್ಥಿಕವಾಗಿ ಹೊಟ್ಟೆಗೆ ಹಿಟ್ಟಿಲ್ಲ, ಜುಟ್ಟಿಗೆ ಮಲ್ಲಿಗೆಯೂ ಇಲ್ಲ ಎಂಬಂತಿರುವಾಗ ಇಷ್ಟು ದುಡ್ಡು ಎಲ್ಲಿಂದ ಬರುತ್ತದೆ ಹಾಗಾದರೆ ? ನಮ್ಮಲ್ಲಿ ಅಥವಾ ಎಲ್ಲಿಯೇ ಆದರೂ ಬೇಹುಗಾರಿಕಾ ಸಂಸ್ಥೆಯೊಂದರ ಕೆಲಸ ಎಂದರೆ ಬೇಹುಗಾರಿಕೆ ಮಾಡುವುದು, ರಾಷ್ಟ್ರದ ರಕ್ಷಣೆ ಮಾಡುವುದು. ಅವುಗಳಿಗೆ ಸಂವಿಧಾನದ, ಕೋರ್ಟುಗಳ, ಪ್ರಧಾನಿಯ ಚೌಕಟ್ಟಿದೆ. ಪಾಕಿಸ್ತಾನದಲ್ಲಿ ಹಾಗಲ್ಲ. ಅಲ್ಲಿ ISI ವಿದೇಶಾಂಗ ಸಚಿವನ ಕೆಲಸವನ್ನೂ ಮಾಡುತ್ತದೆ, ಪ್ರಧಾನಿಯನ್ನೂ ಕುಣಿಸುತ್ತದೆ, ಮಿಲಿಟರಿಯನ್ನು ಆಡಿಸುತ್ತದೆ, ವ್ಯಾಪಾರದಿಂದ ಹಿಡಿದು ಕಳ್ಳವ್ಯಾಪಾರದವರೆಗೆ ನೂರೆಂಟು ವಹಿವಾಟುಗಳನ್ನೂ ಮಾಡುತ್ತದೆ! ಅದಕ್ಕೆ ದುಡ್ಡು ಬರಲಿಕ್ಕೆ ಜನರು ಕಟ್ಟುವ ತೆರಿಗೆಯೂ ಬೇಡ, ಸರ್ಕಾರದ ಬಜೆಟ್ಟೂ ಬೇಡ. ಉದಾ: ನಮ್ಮ ದೇಶದಲ್ಲಿ ನಕಲಿ ನೋಟುಗಳನ್ನು ಹರಿಯಬಿಟ್ಟೇ ಈ ಧೂರ್ತ ಸಂಸ್ಥೆ ವರ್ಷಕ್ಕೆ ಕಮ್ಮಿ ಎಂದರೂ ಐನೂರು ಕೋಟಿ ಗಳಿಸುತ್ತದಂತೆ. ಜಗತ್ತಿನಲ್ಲಿ ಮಾದಕದ್ರವ್ಯಗಳ ಜಾಲಗಳದ್ದು ಸುಮಾರು ಐನೂರು ಬಿಲಿಯನ್ ಡಾಲರುಗಳ ವಹಿವಾಟು, ಅದರಲ್ಲಿ 40 ಶೇಕಡಾ ಅಪಘಾನಿಸ್ತಾನದಿಂದಲೇ ಬರುತ್ತದೆ, ಇದರಲ್ಲಿ ದೊಡ್ಡ ಪಾಲನ್ನು ISI ಬಾಚಿಕೊಳ್ಳುತ್ತದೆ(ಅದರಲ್ಲಿ ಸಿಂಹಪಾಲನ್ನು ನಮ್ಮ ದೇಶದ ವಿರುದ್ಧ ಬಳಸುತ್ತದೆ ಅಂತ ಬೇರೆ ಹೇಳಬೇಕಾದ್ದಿಲ್ಲ).
ಯಾವುದೇ ದಾಳಿ ಆದರೂ ಕೇಳಿ ಬರುವ ಕೂಗು intelligence failureನದ್ದು. ಅದರಲ್ಲಿ ಎಷ್ಟೋ ಸಲ ಸತ್ಯ ಇರುವುದಿಲ್ಲ ಎನ್ನುತ್ತಾರೆ ಸೂದ್. ಉದಾ: ಕಾರ್ಗಿಲ್ಲಿನಲ್ಲಿ ಹೀಗೇ ಆಗಲಿದೆ ಅಂತ ಸ್ಪಷ್ಟವಾಗಿ ಮೂರ್ನಾಲ್ಕು ವರದಿಗಳನ್ನು ಬೇಹುಗಾರಿಕಾ ಸಂಸ್ಥೆಗಳು ಕೊಟ್ಟಿದ್ದವಂತೆ, ಸೈನ್ಯದ ಕೆಲವು ಬ್ರಿಗೇಡಿಯರುಗಳೂ ಎಚ್ಚರಿಸಿದ್ದರಂತೆ, ಆದರೆ ಯಾಕೋ ಸರ್ಕಾರ ಮತ್ತು ಸೈನ್ಯ ಇದನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಿಲ್ಲ. ಮುಂಬಯಿಯಲ್ಲಿ ದಾಳಿ ಆಗುವ ಎರಡು ತಿಂಗಳಿಗೆ ಮೊದಲೇ ಸಮುದ್ರದ ಹತ್ತಿರ ಇರುವ ಐಷಾರಾಮಿ ಹೋಟೆಲುಗಳ ಮೇಲೆ ದಾಳಿ ಆಗಲಿದೆ ಅಂತ R&AW ಎರಡು ಮೂರು ಸಲ ಸ್ಪಷ್ಟವಾದ ವರದಿ ಕಳಿಸಿತ್ತಂತೆ(ಆದರೂ ಕೃತ್ಯ ನಡೆದೇ ಹೋದದ್ದು ಬೇಸರದ ವಿಷಯ), ಏನೇ ಆದರೂ ಘಟನೆಯ ಎರಡು ತಿಂಗಳು ಮೊದಲೇ ವ್ಯೂಹ ಭೇದಿಸಿ, ಹೀಗಾಗಲಿದೆ ಅಂದದ್ದು ಸಾಮಾನ್ಯ ವಿಷಯವಲ್ಲ. ಇಂಥಹಾ ಕಿಲಾಡಿಗಳು ಬೇಹುಗಾರಿಕೆಯಲ್ಲಿ ಇರುವುದರಿಂದಲೇ ಭಯೋತ್ಪಾದಕರ ನೂರಾರು ಸಂಚುಗಳು ಹೊಸಕಿ ಹಾಕಲ್ಪಟ್ಟು ಸಾವಿರಾರು ಅಮಾಯಕರ ಜೀವಗಳು ಉಳಿಯುತ್ತವೆ ಅಂತ ಹೇಳಿದರೆ ಸಾಕು.