Saturday 19 December 2020

ಗೋವಿನ ಹಾಡು ಮತ್ತು ಅದನ್ನು ಬರೆದವರ ಜಾಡು

ವಿಜಯಕರ್ನಾಟಕದಲ್ಲಿ ಪ್ರಕಟವಾದ ಲೇಖನ:

"ಧರಣಿಮಂಡಲ ಮಧ್ಯದೊಳಗೆ ಮೆರೆಯುತಿಹ ಕರ್ಣಾಟ ದೇಶದಿ" ಎಂದು ಶುರುವಾಗುವ ಪುಣ್ಯಕೋಟಿಯ ಕಥೆಯನ್ನು ಲಾಲಿಸದವರಾರು, ಕೇಳಿ ಹನಿಗಣ್ಣಾಗದವರಾರು? ಎಲ್ಲರಿಗೂ ಗೊತ್ತಿರುವ ಪದ್ಯದ ಬಗ್ಗೆ ಇನ್ನೊಮ್ಮೆ ನಾನು ಹೇಳುವುದೇನೂ ಇಲ್ಲ. ನಾನು ಹೇಳಹೊರಟದ್ದು ಈ ಪದ್ಯದ ಬಗ್ಗೆ ಈಚೆಗೆ ಬಂದ, ವೈರಲ್ ಆದ ವೀಡಿಯೊ ಒಂದರ ಬಗ್ಗೆ. ಆದದ್ದಿಷ್ಟು: 'ಮೈಸೂರಿನ ಕಥೆಗಳು' ಎಂಬ ಫೇಸ್ಬುಕ್ ಪೇಜಿನಲ್ಲಿ ಚ.ವಾಸುದೇವಯ್ಯ(ಇವರು 1852ರಿಂದ 1943ರ ಕಾಲದಲ್ಲಿ ಇದ್ದವರು) ಎಂಬ ಮಹನೀಯರ ಪರಿಚಯ ಮಾಡಿಕೊಡಲಾಯಿತು. ಹಾಗೆ ಮಾಡುವಾಗ, ಜನಪದದಲ್ಲಿದ್ದ ಗೋವಿನ ಹಾಡನ್ನು ಬರೆದವರು ಚ.ವಾಸುದೇವಯ್ಯನವರೇ ಅಂತ ಹೇಳಲಾಯಿತು. ಈ ವೀಡಿಯೊವನ್ನು ಸುಮಾರು ಲಕ್ಷಕ್ಕೂ ಹೆಚ್ಚು ಜನ ಫೇಸ್ಬುಕ್ಕಿನಲ್ಲಿಯೇ ನೋಡಿದ್ದಾರೆ. ವಾಟ್ಸಪ್ಪಿನಲ್ಲಿ ಇದು 'ಗೋವಿನ ಹಾಡನ್ನು ಬರೆದವರು ಯಾರು ಗೊತ್ತೇ' ಎಂಬಂತೆ ವೈರಲ್ ಆಗಿದ್ದು, ಅಲ್ಲಿ ಅದೆಷ್ಟು ಸಾವಿರ ಜನ ನೋಡಿದ್ದಾರೋ.


ವೀಡಿಯೊ ಮಾಡಿದವರು ಒಳ್ಳೆಯ ಮನಸ್ಸಿನಿಂದ,ಸದುದ್ದೇಶದಿಂದ ಅದನ್ನು ಮಾಡಿರುವಂತೆ ಕಾಣುತ್ತದೆ. ಚ.ವಾಸುದೇವಯ್ಯನವರು ದೊಡ್ಡವರು, ಕನ್ನಡಿಗರಿಗೆ ಪ್ರಾತಃಸ್ಮರಣೀಯರು ಅನ್ನುವುದೇನೋ ಸರಿಯೇ, ಆದರೆ, 'ಧರಣಿ ಮಂಡಲ ಮಧ್ಯದೊಳಗೆ' ಎಂಬ ಪದ್ಯವನ್ನು ಅವರೇ ಬರೆದದ್ದು ಎನ್ನುವ ಹೇಳಿಕೆಗೆ ಮಾತ್ರ ಬೇರೆಡೆಗಳಿಂದ ಸಾಕಷ್ಟು ಪುಷ್ಟಿ ನನಗಂತೂ ಸಿಗಲಿಲ್ಲ, ಪೂರಕ ಆಧಾರಗಳಿಲ್ಲದೆ ಗೋವಿನ ಹಾಡಿನ ಕರ್ತೃತ್ವವನ್ನು ಹೇಳುವುದು ಅವಸರದ ತೀರ್ಮಾನವಾದೀತೆಂದೇ ನನಗೆ ಕಾಣುತ್ತದೆ. ಸಂಶೋಧನೆ ಅರ್ಜೆಂಟಿನಲ್ಲಿ ಆಗುವ ಕೆಲಸವಲ್ಲವಲ್ಲ!

ಇದರ ಬಗ್ಗೆ ಶತಾವಧಾನಿ ಗಣೇಶರ ಅಭಿಪ್ರಾಯವನ್ನು ಪಾದೆಕಲ್ಲು ವಿಷ್ಣು ಭಟ್ಟರು ಕೇಳಿದಾಗ ಅವರೂ ಈ ವೀಡಿಯೊದಲ್ಲಿ ಗೋವಿನಹಾಡಿನ ಬಗ್ಗೆ ಹೇಳಿದ್ದನ್ನು ಒಪ್ಪುವುದು ಕಷ್ಟವೆಂದೇ ಹೇಳಿದ್ದಾರೆ. ಗ್ರಂಥಸಂಪಾದನೆ ಮಾಡುವುದು, ಪರಿಷ್ಕೃತ ಆವೃತ್ತಿ ತರುವುದು, ಇರುವ ಒಂದು ಪದ್ಯವನ್ನು ಪಾಠ್ಯ ಪುಸ್ತಕಕ್ಕೆ ಏರಿಸುವುದು ಎಂಬವುಗಳ ನಡುವಿನ ವ್ಯತ್ಯಾಸವನ್ನು ವೀಡಿಯೊ ಮಾಡಿದವರು ಅಷ್ಟಾಗಿ ಗಮನಿಸಿದಂತೆ ಕಾಣುವುದಿಲ್ಲ. ಇದಲ್ಲದೆ ಡಿವಿಜಿಯವರೇ ವಾಸುದೇವಯ್ಯನವರ ಬಗ್ಗೆ ಬರೆದಿದ್ದಾರೆ; ಆದರೆ ಅವರೆಲ್ಲೂ ಈ ಪದ್ಯದ ವಿಚಾರ ಎತ್ತಿಲ್ಲ. ಕರ್ಣಾಟಕ ಕವಿಚರಿತೆಯನ್ನು ಬರೆದವರಾದ, ಮಹಾಪಂಡಿತರಾಗಿದ್ದ ರಾ.ನರಸಿಂಹಾಚಾರ್ಯರು ಮತ್ತು ಎಸ್.ಜಿ ನರಸಿಂಹಾಚಾರ್ಯರು  ವಾಸುದೇವಯ್ಯನವರ ಒಡನಾಟ ಇದ್ದವರು, ಅವರೂ ಈ ಬಗ್ಗೆ ಒಂದು ಮಾತೂ ತಿಳಿಸಿಲ್ಲ. ಪಂಜೆ ಮಂಗೇಶರಾಯರು ಅವರ ಕಿರಿಯ ಸಮಕಾಲೀನರಾದರೂ ಗೋವಿನ ಹಾಡಿನ ವಿಷಯ ಬಂದಾಗಲೂ ಎಲ್ಲೂ ಅದನ್ನು ಬರೆದವರ ಹೆಸರು ಹೇಳಿಲ್ಲ. ಈ ಎಲ್ಲ ಅಂಶಗಳನ್ನಿಟ್ಟುಕೊಂಡು ನೋಡಿದರೆ ಪುಣ್ಯಕೋಟಿಯ ಹಾಡು ವಾಸುದೇವಯ್ಯನವರ ರಚನೆಯಾಗಿರುವ ಸಂಭವನೀಯತೆ ತೀರಾ ಕಡಮೆ ಎಂದು ಗಣೇಶರ ಅಭಿಪ್ರಾಯ. ವಾಸುದೇವಯ್ಯನವರ ಬಗ್ಗೆ ಬರೆಯುವಾಗ ಟಿವಿ ವೆಂಕಟಾಚಲ ಶಾಸ್ತ್ರಿಗಳೂ ಎಲ್ಲೂ ಗೋವಿನ ಹಾಡನ್ನು ಉಲ್ಲೇಖಿಸಿಲ್ಲ ಎಂಬುದನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು.

ಇದಕ್ಕೆ ಪೂರಕವಾಗಿ ಇನ್ನೊಂದಷ್ಟು ಒಗ್ಗರಣೆ: ನಮ್ಮ ಸಂಸ್ಕೃತ ಪಂಡಿತರ ಎದುರೋ, ಹಳಗನ್ನಡ ಕಾವ್ಯಾಸಕ್ತರ ಮುಂದೋ ದೇವರು ಪ್ರತ್ಯಕ್ಷನಾಗಿ, "ವತ್ಸಾ, ಒಂದು ವರ ಕೇಳಿಕೋ" ಅಂತ ಹೇಳಿದನಾದರೆ, ಈ ಪಂಡಿತರಲ್ಲನೇಕರು, "ಯಾವ ಯಾವ ಕೃತಿಗಳನ್ನು ಯಾರ್ಯಾರು ಬರೆದರು, ಬರೆದವರು ಎಲ್ಲಿ, ಯಾವಾಗ, ಹೇಗೆ ಇದ್ದರು ಅಂತ ಹೇಳಿಬಿಡು ತಂದೆ" ಅಂದುಬಿಟ್ಟಾರು ಎನ್ನಿಸುವಷ್ಟು ಎಟುಕಿಗೆ ನಿಲುಕದ  ಕರ್ತೃತ್ವದ ಸಮಸ್ಯೆಗಳಿವೆ. ಕಾಳಿದಾಸ, ಕುಮಾರವ್ಯಾಸ, ಭಾಸ, ಪಾಣಿನಿ, ಭರತ ಇವರೆಲ್ಲ ಯಾರು, ಹೇಗಿದ್ದರು ಎಂಬುದೇ ಗೊತ್ತಾಗದಷ್ಟು ಮಟ್ಟಿಗೆ ಅವರ ವೈಯಕ್ತಿಕ ವಿವರಗಳನ್ನು ಹೇಳುವಲ್ಲಿ ನಿರಾಸಕ್ತಿಯನ್ನು ಖುದ್ದು ಅವರೂ, ಪ್ರಾಚೀನರೂ ತೋರಿಸಿದಂತೆ ಕಾಣುತ್ತದೆ. ನಮ್ಮಲ್ಲಿ ಕವಿರಾಜಮಾರ್ಗವನ್ನು ನಿಜವಾಗಿಯೂ ಬರೆದವರು ಯಾರು ಎಂಬ ವಿಷಯದಲ್ಲಿ ಶಾಸ್ತ್ರಕೋವಿದರು ಎಳೆದೆಳೆದು ಮಾಡಿರುವ ಚರ್ಚೆಗಳು, ಅವುಗಳಿಗೆ ಹುಟ್ಟಿರುವ ಉತ್ತರ, ಪ್ರತ್ಯುತ್ತರಗಳು ಎಲ್ಲ ಸೇರಿದರೆ ಒಂದು ರೋಚಕ whodunnit ಕಾದಂಬರಿಗೆ ಸರಕಾಗಬಲ್ಲವು ಎಂಬಷ್ಟಿವೆ ! ಭಾಸನ ವಿಷಯದಲ್ಲೂ ಹಾಗಾಗಿದೆ. ತಿರುವಾಂಕೂರಿನ ಗಣಪತಿ ಶಾಸ್ತ್ರಿ ಎಂಬವರಿಗೆ ಹದಿಮೂರು ನಾಟಕಗಳು ಸಿಕ್ಕಿ, ಅವನ್ನು ಭಾಸನೇ ಬರೆದದ್ದು ಎಂಬ ತೀರ್ಮಾನಕ್ಕೆ ಅವರು ಬಂದರು. ಅನಂತರ ಅವನ್ನು  ಭಾಸನೇ ಬರೆದದ್ದೋ, ಬೇರೆ ಯಾರಾದರೋ ಎಂಬುದರ ಬಗ್ಗೆ ಎದ್ದ ಕೋಲಾಹಲ, ಪಂಡಿತರು ಹೂಡಿದ ತರ್ಕಗಳು, ನೋಡಿದ ಆಧಾರಗಳು, ನೀಡಿದ ನಿರ್ಣಯಗಳು ಎಂತಹ ಪತ್ತೆದಾರನಿಗೂ ಕೀಳರಿಮೆ ಹುಟ್ಟಿಸಬಲ್ಲವು. ಗೋವಿನ ಹಾಡಿನ ಕರ್ತೃತ್ವದಲ್ಲಿ ಹೀಗೆಲ್ಲ ಚರ್ಚೆಗಳಾಗಿಲ್ಲ.      

ಗೋವಿನ ಹಾಡನ್ನು ಸಂಪಾದಿಸಿ ವಿಸ್ತೃತ,ಪರಿಷ್ಕೃತ ಆವೃತ್ತಿಗಳನ್ನು ಇಬ್ಬರು ವಿದ್ವನ್ಮಹನೀಯರು ತಂದಿದ್ದಾರೆ - ಡಿ ಎಲ್ ನರಸಿಂಹಾಚಾರ್ಯ ಮತ್ತು ತಾಳ್ತಜೆ ಕೇಶವ ಭಟ್ಟ. ಡಿ ಎಲ್. ಎನ್ ಅವರದ್ದು ಮೇರುಸದೃಶವಾದ ಪಾಂಡಿತ್ಯ. ಇವರು ಸ್ಪಷ್ಟವಾಗಿ, ಈ ಹಾಡನ್ನು ರಚಿಸಿದವರಾರೋ ಗೊತ್ತಿಲ್ಲ ಅಂತಲೇ ಬರೆದಿದ್ದಾರೆ. ಸಾವಿರ ವರ್ಷಗಳ ಹಿಂದಿನ ಕೃತಿಗಳ ಜನ್ಮ ಜಾಲಾಡಿಬಿಡುತ್ತಿದ್ದ ಇಂಥಹಾ ವಿದ್ವನ್ಮಣಿಗೆ ತಮ್ಮ ಮೊದಲ ತಲೆಮಾರಿನವರೊಬ್ಬರು ಒಂದು ಪದ್ಯವನ್ನು ಬರೆದ ವಿಚಾರ ಗೊತ್ತಾಗಲಿಲ್ಲ ಅಂತ ಒಪ್ಪುವುದು ನನಗಂತೂ ಕಷ್ಟವೇ ಸರಿ. ಇಲ್ಲಿ ಇನ್ನೊಂದು ತಮಾಷೆಯೂ ಇದೆ. ಡಿ ಎಲ್ ನರಸಿಂಹಾಚಾರ್ ಅವರು ತಾವು ನೋಡಿದ್ದು, ಆಕರವಾಗಿ ಇಟ್ಟುಕೊಂಡದ್ದು ಸರಸ್ವತೀ ಭಂಡಾರದ ಓಲೆಯ ಪ್ರತಿ ಮತ್ತು ಮೈಸೂರು ಓರಿಯೆಂಟಲ್ ಲೈಬ್ರರಿಯ ಪ್ರತಿಗಳನ್ನು ಅಂತ ಕೊಟ್ಟಿದ್ದಾರೆ. 1870ರ ಆಸುಪಾಸಿನ ಕೃತಿಯೊಂದು ತಾಳೆಗರಿಗಳಲ್ಲಿ, ಓಲೆಯ ಪ್ರತಿಗಳಲ್ಲಿ ಸಿಗುತ್ತದೆಯೇ ? ಇದೀಗ ಯೋಚನೆ ಮಾಡಬೇಕಾದ ಅಂಶ!
ಇನ್ನು ಇನ್ನೊಬ್ಬ ದೊಡ್ಡ ವಿದ್ವಾಂಸರಾದ ತಾಳ್ತಜೆ ಕೇಶವ ಭಟ್ಟರು ಸಂಪಾದಿಸಿದ್ದು ಅವರ ತಂದೆಯವರೇ ಲಿಪಿಕಾರನಾಗಿ 1915ರಲ್ಲಿ ಮಾಡಿಟ್ಟಿದ್ದ ಪ್ರತಿಯೊಂದರಿಂದ, ಅವರ ತಂದೆಯವರೂ ಪ್ರತಿ ಮಾಡಿದ್ದು ತಾಳೆಯೋಲೆಯಿಂದಲೇ ಇರಬೇಕಷ್ಟೇ. ಇದು ದಕ್ಷಿಣ ಕನ್ನಡದಲ್ಲಿ ಆ ಕಾಲದಲ್ಲಿ ಚಾಲ್ತಿಯಲ್ಲಿದ್ದ ಹಾಡಾಗಿರಬೇಕು. ಗುಬ್ಬಿ ಗುರುಸಿದ್ದಪ್ಪನವರು ಬರೆದ ಗೋವುಚರಿತ್ರೆ ಎಂಬ ಒಂದು ಯಕ್ಷಗಾನ ಪ್ರಸಂಗ 1895ರಲ್ಲೇ ಇದ್ದದ್ದನ್ನೂ ಅವರೇ ನಮೂದಿಸಿದ್ದಾರೆ.

ಈ ಕಥೆಗೆ ಸಂಸ್ಕೃತದ ‘ಇತಿಹಾಸ ಸಮುಚ್ಚಯ’ ಎಂಬ ಗ್ರಂಥದಲ್ಲಿನ ಕಥೆಯೊಂದೇ ಮೂಲವೆನ್ನುವ ವಿಚಾರಕ್ಕೆ ಮೇಲಿನ ಇಬ್ಬರು ವಿದ್ವಾಂಸರ ಸಮ್ಮತಿಯೂ ಇದೆ. (ಬಹುಶಃ ಇವರಿಬ್ಬರು ಕೊಟ್ಟಿರುವುದರ ಆಧಾರದ ಮೇಲೆ) ಕೆ.ವಿ.ಸುಬ್ಬಣ್ಣನವರು ತಮ್ಮ 'ಕವಿರಾಜಮಾರ್ಗ ಮತ್ತು ಕನ್ನಡ ಜಗತ್ತು' ಕೃತಿಯಲ್ಲಿ ಹೀಗೆ ಬರೆದಿದ್ದಾರೆ :
"ಸಂಸ್ಕೃತದ ‘ಪದ್ಮಪುರಾಣ’ದಲ್ಲಿ ಮತ್ತು ‘ಇತಿಹಾಸ ಸಮುಚ್ಚಯ’ವೆಂಬುದರಲ್ಲಿ ಈ ಕಥೆ ಬರುತ್ತದಂತೆ. ‘ಪದ್ಮ ಪುರಾಣ’ದಲ್ಲಿ ಶಾಪಗ್ರಸ್ತನಾದ ಪ್ರಭಂಜನನೆನ್ನುವನು ಹುಲಿಯ ಜನ್ಮ ತಾಳಿರುತ್ತಾನೆ. ‘ಇತಿಹಾಸ ಸಮುಚ್ಚಯ’ದಲ್ಲಿ ಅದು, ಭೀಷ್ಮನು ಧರ್ಮರಾಯನಿಗೆ ಹೇಳುವ ‘ಬಹುಲೋಪಾಖ್ಯಾನ’; ಬಹುಲಾ ಎಂಬುದು ಹಸು, ಕಾಮರೂಪಿಯೆಂಬುದು ಹುಲಿ. ಇವೆಲ್ಲಕ್ಕೂ ಪ್ರಾಯಶಃ ಮೊದಲೇ, ಕಾಲಿದಾಸನ ‘ರಘುವಂಶ’ದ ದಿಲೀಪಾಖ್ಯಾನದಲ್ಲಿ ನಂದಿನಿಯ ಮೇಲೆ ಆಕ್ರಮಣ ನಡೆಸಲು ಬಂದ ಸಿಂಹದ ಇಂಥದೇ ಕಥೆ ಉಂಟಲ್ಲ? ‘ರಘುವಂಶ’ದ ಸಿಂಹವು
ನಂದಿಯೇ ಸೃಷ್ಟಿಸಿದ ಮಾಯೆ. ಅವೆಲ್ಲ ಇದ್ದರೂ ಈ ಕನ್ನಡ ಹಾಡಿನ ಸ್ವಂತಿಕೆ ಅನನ್ಯತ್ವಗಳಿಗೆ ಆಪೋಹವಿಲ್ಲ"

ಗೋವಿನ ಹಾಡು ಮತ್ತೊಂದು ರೂಪದಲ್ಲಿ ಸಿಗುವುದು ಕೆ ಶಿವರಾಮ ಐತಾಳರ 'ದಕ್ಷಿಣ ಕನ್ನಡದ ಜನಪದ ಸಾಹಿತ್ಯ' ಎಂಬ ಕೃತಿಯಲ್ಲಿ. ಇಲ್ಲಿ ಬರುವ ಹಾಡಿನ ಕಥೆ ಗೋವಿನ ಹಾಡಿನದ್ದೇ ಆದರೂ ನಿರೂಪಣೆ ಬೇರೆಯೇ ತರದಲ್ಲಿ ಇದೆ. ಇದು ತ್ರಿಪದಿಯಲ್ಲಿದೆ, ಇದರ ಗಾತ್ರವೂ ಕಿರಿದು.  ದಕ್ಷಿಣ ಕನ್ನಡ ಅಂತಿದ್ದರೂ ಭಾಷೆ ಅಲ್ಲಿಯದರಂತೆ ತೋರಲಿಲ್ಲ. ‘ಇತಿಹಾಸ ಸಮುಚ್ಚಯ’ದಲ್ಲಿ ಈ ಕಥೆಯನ್ನು ಭೀಷ್ಮನು ಧರ್ಮರಾಯನಿಗೆ ಹೇಳಿದ್ದರ ಪ್ರಸ್ತಾವ ಬಂತಲ್ಲ, ಈ ಕೃತಿಯಲ್ಲಿಯೂ ಹಾಗೇ ಇದೆ. ಶಿವರಾಮ ಐತಾಳರ ಸವಿಸ್ತಾರವೂ ಉಪಯುಕ್ತವೂ ಆದ ಪ್ರಸ್ತಾವನೆ ಇದರ ಇನ್ನೊಂದು ವಿಶೇಷ .
ಕ.ರಾ.ಕೃಷ್ಣಸ್ವಾಮಿಯವರು ಸಂಪಾದಿಸಿದ ತೀರ್ಥಹಳ್ಳಿ ಕಡೆಯ 'ಕೌಲೆ ಹಾಡು' ಇದೇ ಕಥೆಯ ಮತ್ತೊಂದು ಅವತಾರ. ಈ ಹಾಡಿನಲ್ಲಿ ಹುಲಿ ಆತ್ಮಬಲಿ ಎಲ್ಲ ಮಾಡುವಷ್ಟು ಕರುಣರಸ ಇಲ್ಲ, ಇದರಲ್ಲಿ ಹುಲಿ ಹಸುವನ್ನು ತಿಂದು, ಕರು ಅಮ್ಮನನ್ನು ಹುಡುಕಿಕೊಂಡು ಬಂದು, ಹುಲಿಯ ಜೊತೆ ಹೋರಾಟ ಮಾಡುವಂತೆ ಕಥೆಯನ್ನು ತಿರುಗಿಸಲಾಗಿದೆ.  
ಕಾಪಸೆ ರೇವಪ್ಪ ಎಂಬವರು ಸಂಗ್ರಹ ಮಾಡಿಕೊಟ್ಟಿರುವ, ತ್ರಿಪದಿಯಲ್ಲಿರುವ 'ಆಕಳ ಹಾಡು' ಉತ್ತರ ಕರ್ನಾಟಕದ ಸೊಗಡಿನ ಭಾಷೆಯ ಹಾಡು, ಇದರಲ್ಲಿ ಬರೀ 31 ಪದ್ಯಗಳಿವೆ, ಇಲ್ಲಿನದ್ದು ಋಷಿಯ ಆಶ್ರಮದ ಹಸು. ಇಲ್ಲಿ ಹುಲಿಯ ಪ್ರಾಣತ್ಯಾಗ ಮಾಡಿಸದೇ ದೇವತೆಗಳನ್ನು ಬರಿಸಿ ಕಥೆಗೆ ಸುಖಾಂತ್ಯ ಕೊಡಲಾಗಿದೆ. ಇದರಿಂದ ಹಾಡಿನ ಮನಕಲಕುವ ಗುಣ ಕಡಮೆಯಾಗುತ್ತದೆ ಎಂಬುದು ಬೇರೆ ಮಾತು.  

ಮೇಲೆ ತೋರಿಸಿದಂತೆ ಈ ಹಾಡಿಗೆ ಬಹಳಷ್ಟು ಪಾಠಾಂತರಗಳು,ಮರುನಿರೂಪಣೆಗಳು, ಆಕೃತಿಗಳು ಇವೆ ಅನ್ನುವುದು ಸ್ಪಷ್ಟ. ಡಿ.ಎಲ್.ಎನ್ ಮತ್ತು ಕೇಶವ ಭಟ್ಟರು ಸಂಪಾದಿಸಿದ ಆವೃತ್ತಿಗಳಲ್ಲೇ ಎಷ್ಟೋ ವ್ಯತ್ಯಾಸಗಳಿವೆ. ಹೊಸ ಕೃತಿಗಳಿಗೆ ಹೀಗೆ ಅಷ್ಟೊಂದು ಪಾಠಾಂತರಗಳು ಇರುವುದಿಲ್ಲ. ಉದಾ: ಪಂಜೆ ಮಂಗೇಶರಾಯರೋ , ಮಂಜೇಶ್ವರ ಗೋವಿಂದ ಪೈಗಳೋ ಬರೆದ ಹಾಡೊಂದು ಹತ್ತು ಕಡೆಗಳಲ್ಲಿ ಹತ್ತು ತರದ ಸಾಹಿತ್ಯ ಹೊಂದಿರುವುದಿಲ್ಲ. ಹೀಗಾಗುವುದು ಪ್ರಾಚೀನ ಕೃತಿಗಳಲ್ಲಿ, ಓಲೆಗರಿಯ ಪ್ರತಿಗಳಲ್ಲೇ ಜಾಸ್ತಿ. ಇನ್ನುಳಿದದ್ದು, 'ಬೆಳಗೆರೆ ಕೃಷ್ಣಶಾಸ್ತ್ರಿಗಳು ಗೋವಿನ ಹಾಡನ್ನು ವಾಸುದೇವಯ್ಯನವರೇ ಬರೆದದ್ದೆಂದು ಹೇಳಿದ್ದಾರೆ' ಎಂಬ ಹೇಳಿಕೆ. ಶಾಸ್ತ್ರಿಗಳು ಏನು ಹೇಳಿದರೋ, ಅವರು ಹೇಳಿದ್ದನ್ನು ಸರಿಯಾಗಿ ಗ್ರಹಿಸದೇ ಯಾರಾದರೂ misquote ಮಾಡಿದರೋ, ಶಾಸ್ತ್ರಿಗಳೇ ಬೇರೆ ಯಾರೋ ಹೇಳಿದ್ದನ್ನು ಕೇಳಿ ಹೇಳಿದರೋ ಅಂತ ಇನ್ನು ಗೊತ್ತಾಗುವುದು ಕಷ್ಟ. ಏನೇ ಇದ್ದರೂ ಇಂತಹಾ ವಿಷಯಗಳಿಗೆ ಅವರೊಬ್ಬರ ಹೇಳಿಕೆ ಸಾಕಾಗುವುದಿಲ್ಲ ಎಂದಷ್ಟೇ ಹೇಳಬಹುದು.

"ಜನರಿಗಾಗಿ ಜನಜೀವನವನ್ನು ಜನಸಾಮಾನ್ಯರು ತಿರುಳುಗನ್ನಡದಲ್ಲಿ ರಸವತ್ತಾಗಿ ಚಿತ್ರಿಸಿದ್ದೇ ಜನಪದ ಸಾಹಿತ್ಯ" ಅಂತ ಉತ್ತಂಗಿ ಚೆನ್ನಪ್ಪನವರು ಹೇಳಿದ ಮಾತಿನಿಂದ, "ಜನರಿಗಾಗಿ, ತಿರುಳುಗನ್ನಡದಲ್ಲಿ, ರಸವತ್ತಾಗಿ ಚಿತ್ರಿಸಿದ್ದು" ಮುಂತಾದ ಗುಣವಿಶೇಷಗಳನ್ನು ಗೋವಿನ ಹಾಡಿಗೂ ಅನ್ವಯಿಸಬಹುದು. ಇದರ ಕಥೆ ನಾಟಕೀಯ. ಈಗಲೂ ನಾಟಕವಾಗಿ ಮಾಡಿದರೆ ರಂಗಸ್ಥಳದಲ್ಲಿ ಸೊಗಸಾಗಿ ಮೂಡಿಬರುತ್ತದೆ, ಹೀಗಾಗಿ  ಇದನ್ನು ಜನ ನಾಟಕವಾಗಿ ಆಡುತ್ತಲೂ ಇದ್ದಿರಬಹುದೇನೋ ಎಂಬ ಊಹೆಗೆ ಅವಕಾಶವುಂಟು. ಅಂತೂ ಈ ಹಾಡು ಒಂದು ಪಕ್ಷದಲ್ಲಿ ಬರೆಹದ ರೂಪದಲ್ಲಿ ಇರದೇ ಹೋಗಿದ್ದರೂ, ಊರಿನಲ್ಲಿ ಯಾರೋ ಹಾಡುವುದನ್ನು ಕೇಳಿಯೋ, ಅಜ್ಜಿಯಿಂದಲೋ ಅಮ್ಮನಿಂದಲೋ ಕಲಿತೋ, ಮೌಖಿಕವಾಗಿಯೇ ತಲೆಮಾರಿನಿಂದ ತಲೆಮಾರಿಗೆ ಬರುತ್ತಿತ್ತೆನ್ನಲಿಕ್ಕೆ ಅಡ್ಡಿಯಿಲ್ಲ.    

ಚ.ವಾಸುದೇವಯ್ಯನವರಿಗೆ ಇಲ್ಲಿಂದಲೇ ಒಂದು ಗೌರವಪೂರ್ವಕ ನಮಸ್ಕಾರ ಹಾಕಿ, ಯಾರಾದರೂ ಪುಣ್ಯಕೋಟಿಯ ಜಾಡು ಹಿಡಿದು, ಅದರ ಕವಿಯ ಹೆಸರನ್ನು ಕಂಡುಹಿಡಿಯಲಿ ಅಂತ ಆಶಿಸೋಣ.


No comments:

Post a Comment