Tuesday 20 May 2014

ಇಂಗ್ಲೀಶ್ ಎನೆ ಕುಣಿದಾಡುವುದೆನ್ನೆದೆ

ಕನ್ನಡ ಮಾಧ್ಯಮ ಕಡ್ಡಾಯವಲ್ಲ : ಸುಪ್ರೀಂ ತೀರ್ಪು

ಇದೊಂದು ಬೇರೆ ಬಾಕಿ ಇತ್ತು . ಇದು ಒಂದು ರೀತಿ ಕ್ಯಾನ್ಸರ್ ರೋಗಿಗೆ ವಿಷ ಕೊಟ್ಟ ಹಾಗೆ. ಮೊದಲೇ ನಮ್ಮ ಖಾಸಗಿ ಶಾಲೆಗಳಿಗೆ ಕನ್ನಡ ಅಂದರೆ ಅಷ್ಟಕ್ಕಷ್ಟೇ. ಮಗುವಿಗೆ ತನಗೇನು ಬೇಕು ಅಂತ ಗೊತ್ತಿಲ್ಲ, ಅದರ ಅಪ್ಪ ಅಮ್ಮನಿಗೆ ಕನ್ನಡ ಬೇಕಾಗಿಲ್ಲ, ಇಷ್ಟು ಸಾಲದು ಅಂತ ತೀರ್ಪು ಬೇರೆ. ಕರ್ನಾಟಕದಲ್ಲಿ ಕನ್ನಡ ಬೇಡ ಅಂದ್ರೆ ಹೇಗೆ ? ಇಲ್ಲಿ ಕನ್ನಡ ಬೇಡ ಅಂತಾದರೆ, ಇನ್ನೆಲ್ಲಿ ಸೋಮಾಲಿಯಾದಲ್ಲೋ ಈಜಿಪ್ಟಿನಲ್ಲೋ ಮಕ್ಕಳು ಕನ್ನಡ ಕಲಿಯಬೇಕೆ? 

ಇಂಗ್ಲೀಶು ಮಾಧ್ಯಮದಲ್ಲಿ ಕಲಿತರೆ ಮಾತ್ರ ಒಳ್ಳೆಯ ಕೆಲಸ ಸಿಗುತ್ತದೆ ಅನ್ನುವುದು ನಮ್ಮ ಪೇಟೆ ಜನರ ಅತಿ ದೊಡ್ಡ ಮೂಢ ನಂಬಿಕೆ. ಹಾಗೆ ನೋಡಿದರೆ ಇದಕ್ಕೆ ಯಾವ ಆಧಾರವೂ ಇಲ್ಲ. ವಿದೇಶಗಳಲ್ಲಿ ಇಂತಹಾ ವಿಷಯಗಳ ಬಗ್ಗೆ ಹತ್ತಿಪ್ಪತ್ತು ವರ್ಷ ಅಧ್ಯಯನ, ಸಂಶೋಧನೆ ಮಾಡಿ ಒಂದು ತೀರ್ಮಾನಕ್ಕೆ ಬರುವ ಕ್ರಮ ಇದೆ. ಈಗ ಒಂದೇ ಮಟ್ಟದ ಮೇಧಾಶಕ್ತಿ, ಬುದ್ಧಿ ಸಾಮರ್ಥ್ಯ ಇರುವ, ಒಂದೇ ಸಾಮಾಜಿಕ ಸ್ತರದಿಂದ ಬಂದ ನೂರು ಮಕ್ಕಳನ್ನ ಆಯ್ದುಕೊಂಡು, ಅವರಲ್ಲಿ ಒಂದೈವತ್ತು ಜನ ಕನ್ನಡ, ಒಂದೈವತ್ತು ಜನ ಇಂಗ್ಲೀಷು ಮಾಧ್ಯಮಕ್ಕೆ ಹೋಗುತ್ತಾರೆ ಅಂತಾದರೆ, ಈ ಮಕ್ಕಳನ್ನ ಒಂದು ಇಪ್ಪತ್ತು ಮೂವತ್ತು ವರ್ಷ ಗಮನಿಸಿ ಇಂಗ್ಲೀಷು ಮಾಧ್ಯಮದಲ್ಲಿ ಕಲಿತವರು ಉಳಿದ ಮಕ್ಕಳಿಗಿಂತ ವೃತ್ತಿಯಲ್ಲಿ ಮೇಲೆ ಹೋಗುತ್ತಾರೆಯೇ ಅಂತ ಗಮನಿಸಬಹುದು. ಇಂತಹಾ ಅಧ್ಯಯನಗಳೇನೂ ನಮ್ಮಲ್ಲಿ ಆದ ಹಾಗಿಲ್ಲ. ಹಾಗಾಗಿ ಈ ವಾದಕ್ಕೆ ಬಲವಾದ ಸಾಕ್ಷಿ ಆಧಾರಗಳೇನೂ ಇರುವ ಹಾಗಿಲ್ಲ. ಇಲ್ಲಿರುವುದು ಒಂದು ಗ್ರಹಿಕೆ ಅಥವಾ ನಂಬಿಕೆ ಮಾತ್ರ.  

ಗಮನಿಸಿ ನೋಡಿ. ಇವತ್ತು ಬೆಂಗಳೂರಿನಂತಹ ನಗರಗಳಲ್ಲಿ ಅರ್ಧರ್ಧ ಇಂಗ್ಲೀಷು ಮಾತಾಡುವ ಪುಟ್ಟ ಕಂದಮ್ಮಗಳು ಬೇಕಾದಷ್ಟು ಸಿಗುತ್ತವೆ. ಮಕ್ಕಳಿಗೆ ಕನ್ನಡವೂ ಕಲಿಸಿ ಜೊತೆಗೆ ಒಂದಷ್ಟು ಇಂಗ್ಲೀಷು ಹೇಳಿಕೊಟ್ಟರೆ ತೊಂದರೆ ಏನೂ ಇರಲಿಲ್ಲ. ಕನ್ನಡವನ್ನು ಸಂಪೂರ್ಣವಾಗಿ ಬಿಟ್ಟು ಬರೀ ಇಂಗ್ಲಿಷು ಮಾತ್ರ ಕಲಿಸುವುದರ ಬಗ್ಗೆ ತಕರಾರು  ಇರುವುದು. ಅಮೆರಿಕಾದಲ್ಲೋ, UK ಯಲ್ಲೋ ಆದರೆ ಸರಿ. ಇಲ್ಲಿ ಯಾಕೆ ಮಕ್ಕಳು ಕನ್ನಡ, ತಮಿಳು, ತೆಲುಗು ಮಾತಾಡದೆ ಇಂಗ್ಲೀಷು ಮಾತಾಡುತ್ತವೆ ? ಯಾಕೆಂದರೆ ಅವುಗಳ ಅಪ್ಪ ಅಮ್ಮ ಕಲಿಸಿದ್ದು ಅದೇ ಭಾಷೆ, ತೀರ ಉಪಾಯ ಇಲ್ಲದೆ ಅಜ್ಜ ಅಜ್ಜಿಯರೂ ಹರುಕು ಮುರುಕು ಇಂಗ್ಲಿಷಿನಲ್ಲೇ ಕತೆ ಹೇಳುವುದೂ ಇದೆ. ಭೀಮ ಬಕಾಸುರರ ಕತೆಯನ್ನು ಒಬ್ಬ ಅಜ್ಜ ಮಗುವಿಗೆ ಇಂಗ್ಲೀಷಿನಲ್ಲಿ ಹೇಳುವುದು ನೋಡಿ ನಾನೇ ನಕ್ಕದ್ದು ಇದೆ. ಇರಲಿ. ಯಾಕೆ ಹೀಗೆ ? ಮಗುವಿನ ಒಳ್ಳೆಯದಕ್ಕೆ ಹೀಗೆ ಮಾಡ್ತೇವೆ ಅಂತಾರೆ ಹಲವರು. ಇಷ್ಟು ಪುಟ್ಟ ಮಕ್ಕಳು ಅರೆ ಬರೆ ಇಂಗ್ಲೀಷು ಮಾತಾಡಿದರೆ ಹೇಗೆ ಅವಕ್ಕೆ ಒಳ್ಳೆಯದಾಗುತ್ತದೆ ಅಂತ ಕೇಳಿ ನೋಡಿ, ಇವತ್ತು ಇಂಗ್ಲೀಷು ಇಲ್ದೆ ಕೆಲಸ ಎಲ್ಲಿ ಸಿಗುತ್ತೆ ಅನ್ನುವ ಉತ್ತರ ಬರುತ್ತದೆ. ಈ ವಾದ ಎಷ್ಟು ಪೊಳ್ಳು ಅಂತ ನೋಡೋಣ ಬನ್ನಿ. 

ಹಾಗಂತ ಕೆಲಸ ಸಿಗುವುದಕ್ಕೆ ಇಂಗ್ಲೀಶು ಬೇಕಾಗುತ್ತದೆ ಅನ್ನುವುದು ಪೂರ್ತಿ ತಪ್ಪೇನಲ್ಲ. ಇದು ಹೇಗೆ ಅಂದರೆ ಕಂಪ್ಯೂಟರ್ ಬಳಕೆ ಗೊತ್ತಿದ್ದರೆ ಕೆಲಸ ಸಿಗುತ್ತದೆ ಅಂದ ಹಾಗೆ. ಕಂಪ್ಯೂಟರ್ ಬಳಕೆ ಗೊತ್ತಿರಬೇಕು ನಿಜ, ಹಾಗಂತ ಕಂಪ್ಯೂಟರ್ ಬಳಕೆ ಗೊತ್ತಿದೆ ನಿಮಗೆ ಅಂತಲೇ ಯಾರೂ ಕೆಲಸ ಕೊಡುವುದಿಲ್ಲ. ಹಾಗೆಯೇ ಇಂಗ್ಲೀಷು ಗೊತ್ತಿದೆ ಅಂತಲೇ ಯಾರೂ ಕೆಲಸ ಕೊಡುವುದಿಲ್ಲ. ಇಂಗ್ಲೀಷು ಬೇಕು, ತೀರ ಸಲ್ಮಾನ್ ರಶ್ದಿಯ ಮಟ್ಟದ ಇಂಗ್ಲೀಷು ಏನೂ ಬೇಕಾಗಿಲ್ಲ. ಒಟ್ಟಿನಲ್ಲಿ ಇವತ್ತು ಇಂಗ್ಲೀಶು ಬೇಕು ಅನ್ನುವುದು ಎಲ್ಲರೂ ಒಪ್ಪಬೇಕಾದ ವಿಚಾರವೇ. ಪ್ರಶ್ನೆ ಇರುವುದು ಕೆಲಸ ಸಿಗುವುದಕ್ಕೆ ಎಷ್ಟು ಇಂಗ್ಲೀಶು ಬೇಕಾಗುತ್ತದೆ ಮತ್ತು ಅಷ್ಟು ಇಂಗ್ಲೀಶು ಕಲಿಯುವುದಕ್ಕೆ ಕನ್ನಡವನ್ನು ಬಲಿ ಕೊಡಬೇಕೇ ಅನ್ನುವ ವಿಚಾರದಲ್ಲಿ ಮಾತ್ರ. ನಮಗೆ ಗಣಿತ, ವಿಜ್ಞಾನ, ಇತಿಹಾಸ, ಭೂಗೋಳ ಇವೆಲ್ಲ ಹೇಗೆ ಬೇಕೋ ಹಾಗೆಯೇ ಇಂಗ್ಲೀಷು ಕೂಡ ಬೇಕು ಅಂದರೆ ಸಾಕಾಗಲಾರದೇ? 

ವಾಸ್ತವ ಏನೆಂದರೆ ಕೆಲಸ ಸಿಗುವುದಕ್ಕೆ ವ್ಯವಹಾರಕ್ಕೆ ತಕ್ಕಷ್ಟು ಇಂಗ್ಲೀಶು ಗೊತ್ತಿದ್ದರೆ ಸಾಕು, ಅಷ್ಟು ಇಂಗ್ಲೀಶನ್ನು ಬುದ್ದಿವಂತರು ಸಲೀಸಾಗಿ ಕಲಿಯುತ್ತಾರೆ  - ಶಾಲೆಯಲ್ಲಿ ಕನ್ನಡದಲ್ಲೇ ಕಲಿತಿರಲಿ, ಇನ್ಯಾವುದೋ ಆಫ್ರಿಕನ್ ಭಾಷೆಯಲ್ಲೇ ಕಲಿತಿರಲಿ. ಎಷ್ಟೋ ಸಲ "we are looking into it" ಅಂತಲೋ "I will check the issue and get back to you" ಹೇಳಿದಲ್ಲಿಗೆ ಕೆಲಸ ಮುಗಿಯುತ್ತದೆ. ಇಂತಹಾ ಒಂದು ನೂರು ನೂರಿಪ್ಪತ್ತು ವಾಕ್ಯಗಳನ್ನು ಕಲಿಯುವುದಕ್ಕೆ ಯಾವ ಮಹಾ ತಪಸ್ಸೂ ಮಾಡಬೇಕಾಗಿಲ್ಲ. ಒಂದು ಆರೇಳು ವರ್ಷಗಳಾದ ಮೇಲೆ ವಿದೇಶೀಯರ ಜೊತೆ ತಾನೇ ಮಾತಾಡಿ ವ್ಯವಹರಿಸುವಷ್ಟು ಇಂಗ್ಲೀಶು ಬರಬೇಕಾಗುತ್ತದೆ. ಅಷ್ಟು ಕಲಿಯುವುದಕ್ಕೆ ನೀವೇನೂ ಬೃಹಸ್ಪತಿಗಳಾಗಬೇಕಿಲ್ಲ. ಸ್ವಲ್ಪ ಚುರುಕಾಗಿರುವವರು ಒಂದು ನಾಲ್ಕೈದು ವರ್ಷಗಳಲ್ಲಿ ಇಷ್ಟನ್ನು ನೋಡಿಯೇ ಕಲಿತುಬಿಡುತ್ತಾರೆ. 

ಕಂಪ್ಯೂಟರ್ ಅನ್ನು ಒಬ್ಬ ಸಮಾಜಸೇವಕ  ಬಡತನ ನಿವಾರಣೆ ಮಾಡುವ ಯೋಜನೆಗೂ ಉಪಯೋಗಿಸಬಹುದು ಇನ್ನೊಬ್ಬ ಉಗ್ರಗಾಮಿ ನಾಲ್ಕು ಜನರನ್ನು ಕೊಲ್ಲುವುದಕ್ಕೂ ಬಳಸಬಹುದು. ಕಂಪ್ಯೂಟರ್ ಅನ್ನುವುದು ಒಂದು ಸಾಧನ ಮಾತ್ರ. ಹಾಗೆಯೇ   ಭಾಷೆ ಒಂದು ಮಾಧ್ಯಮ ಮಾತ್ರ. ಟಿಫಿನು ಡಬ್ಬಿಗೆ ಬೆಲೆ ಬರುವುದು ಒಳಗಿರುವ ಆಹಾರದಿಂದಲೇ ಹೊರತು ಡಬ್ಬಿ ಎಷ್ಟು ಹೊಳೆಯುತ್ತಿದೆ ಅನ್ನುವ ಕಾರಣಕ್ಕಲ್ಲ! ನಮ್ಮ ಸಾಫ್ಟ್ ವೇರ್ ಕಂಪೆನಿಗಳಿಗೆ ನಾನೇ ಐವತ್ತಕ್ಕೂ ಹೆಚ್ಚು ಸಂದರ್ಶನಗಳನ್ನ ಮಾಡಿದ್ದೇನೆ, ಇವತ್ತಿನ ತನಕ ಯಾರನ್ನೂ "ಆಹಾ... ಎಷ್ಟೊಳ್ಳೆ ಇಂಗ್ಲೀಶು  ಮಾತಾಡ್ತಾರೆ" ಅನ್ನುವ ಕಾರಣಕ್ಕೆ ಕೆಲಸಕ್ಕೆ ಆಯ್ಕೆ ಮಾಡಿಲ್ಲ. ಕೆಲಸ ಸಿಗುವುದು ಜ್ಞಾನಕ್ಕೆ, ಅನುಭವಕ್ಕೆ ಬೆಲೆ ಸಿಕ್ಕಿ, ಭಾಷೆಯ ಆಧಾರದ ಮೇಲೆ ಅಲ್ಲ(ನಮ್ಮ ದೇಶದಲ್ಲಿ ದುಡ್ಡು, ಜಾತಿ, ಪ್ರಭಾವ ಇವೆಲ್ಲವೂ ಇವೆ, ಆ ಮಾತು ಬೇರೆ). ಪೇಟೆ ಜನರೇ, ಇದನ್ನು ಇನ್ನೊಂದು ಸಲ, ಮತ್ತೊಂದು ಸಲ, ಮಗದೊಂದು ಸಲ ಓದಿಕೊಳ್ಳಿ!! ಕೆಲಸ ಸಿಗುವುದು ಜ್ಞಾನಕ್ಕೆ, ಅನುಭವಕ್ಕೆ, ಪ್ರತಿಭೆಗೆ, ನಿಮ್ಮ ನೈಪುಣ್ಯಕ್ಕೆ, ಕುಶಲತೆಗೆ. ಭಾಷಾ ಪ್ರಾವೀಣ್ಯದ ಅರ್ಹತೆಯ ಮೇಲೆ ಅಲ್ಲ!  ಮೊದಲೇ ಹೇಳಿದಂತೆ ಇದಕ್ಕೆ ಸಾಕ್ಷಿ ಆಧಾರ ಅಂತ ನಮ್ಮಲ್ಲಿ ಏನೂ ಅಷ್ಟಾಗಿ ಇದ್ದಂತಿಲ್ಲ, ಹೆಚ್ಚೆಂದರೆ anecdotal evidence ಕೊಡಬಹುದಷ್ಟೇ. 

 ಕನ್ನಡದಲ್ಲೇ ಕಲಿತು ಕನ್ನಡದಲ್ಲೇ ಯೋಚನೆ ಮಾಡಿ ನನ್ನಂತವರು ತಕ್ಕ ಮಟ್ಟಿಗೆ ಉದ್ದಾರ ಆಗಿದ್ದೇವಲ್ಲ (ನಾವು ಆಗಿರುವುದನ್ನೇ ಉದ್ದಾರ ಅನ್ನುವುದಾದರೆ!) ? ನಾವೆಲ್ಲಾ ಶುಧ್ಧ ಕನ್ನಡಲ್ಲೇ ಓದಿ ಕೂಡ ನಾಲ್ಕು ದೇಶ ಸುತ್ತಿ, ಸಾಫ್ಟ್ ವೇರು, ಹಾರ್ಡುವೇರು ಅಂತ ಏನೇನೋ ಕುಟ್ಟಿ ಪ್ರಮೋಷನ್ , ಮಣ್ಣು, ಮಸಿ ಅಂತ ತಗೊಂಡಿದ್ದೇವಲ್ಲ ? ತಲೆ ಬಿಚ್ಚಿದರೆ ನಾಲ್ಕು ಇಂಗ್ಲೀಶ್ ಶಬ್ದ ಉದುರಲಿಕ್ಕಿಲ್ಲ ಅನ್ನಿಸಿಕೊಂಡವರೆಲ್ಲ ಪ್ರಾಜೆಕ್ಟುಗಳನ್ನು ನಡುಗಿಸಿರುವುದು ನಾನೇ ನೋಡಿದ್ದೇನೆ. ಅಮೆರಿಕಾವನ್ನು ಮಿನಿ ಆಂಧ್ರಪ್ರದೇಶ ಅಂತಲೇ ಹೇಳುತ್ತಾರೆ, ಅಲ್ಲಿ ಅಷ್ಟು ಸಂಖ್ಯೆಯಲ್ಲಿ ತುಂಬಿಕೊಂಡಿರುವ ತೆಲುಗರಲ್ಲಿ ಇಂಗ್ಲೀಷು ಪಂಡಿತರು ಹೆಚ್ಚೇನಿಲ್ಲ. ಬಹಳಷ್ಟು ಜನ ಕೂಡಿಸಿ,ಸೇರಿಸಿ,ಪರದಾಡಿ ಅಲ್ಲಿಂದಲ್ಲಿಗೆ ವ್ಯವಹಾರಕ್ಕೆ ತಕ್ಕಷ್ಟು ಇಂಗ್ಲೀಶು ಮಾತಾಡುವವರೇ. Apostrophe ಎಲ್ಲಿ ಹಾಕಬೇಕು ಅಂತ ಸಾಫ್ಟವೇರ್ ಜನಗಳಿಗೆ ಕಲಿಸುವ ಒಂದು ವ್ಯಾಪಾರ ಮಾಡಿದರೆ ಈಗಲೂ ಭರ್ಜರಿ ವ್ಯಾಪಾರ ಆದೀತು, "it is one of my favorites" ಅನ್ನಬೇಕೋ "it is one of my favorite" ಅನ್ನಬೇಕೋ ಅಂತ ಗೊತ್ತಿರುವವರೂ ಅಲ್ಪಸಂಖ್ಯಾತರೇ! 

ನಮ್ಮ ಕಾಲೇಜಿನಲ್ಲೂ ಸುಟ್ಟು ತಿನ್ನುವಷ್ಟೂ ಇಂಗ್ಲೀಶು ಗೊತ್ತಿಲ್ಲದವರೂ ಕ್ಯಾಂಪಸ್ ಸೆಲೆಕ್ಷನ್ ಆದಾಗ ಮೊದಲ ಏಳೆಂಟು ಕಂಪೆನಿಗಳಲ್ಲೇ ಕೆಲಸ ಗಿಟ್ಟಿಸಿಕೊಳ್ಳುತ್ತಿದ್ದರು. ಕೆಲಸಕ್ಕೆ ಸೇರಿದ ಮೇಲೂ, ಸಾಕಷ್ಟು "ಇಂಗ್ಲೀಷ್ ಅಷ್ಟಕ್ಕಷ್ಟೇ" ಗಿರಾಕಿಗಳು ಯುರೋಪು ಸುತ್ತಿ, ಅಮೆರಿಕಾ ನೋಡಿ ಬಂದವರೇ. ನಮ್ಮದು ಹೀಗಾದರೆ ಯುರೋಪಿಯನ್ನರ, ಚೀನೀಯರ,ಜಪಾನೀಯರ,ಫಿಲಿಪೀನಿಯರ ಇಂಗ್ಲೀಷು ಉಚ್ಚಾರಣೆಯ ಶೈಲಿಯೇ ವಿಚಿತ್ರ. ಅವರಿಗೆ ಅದೊಂದು ಸಮಸ್ಯೆಯೇ ಆದ ಹಾಗಿಲ್ಲ. ಯುರೋಪಿಗೋ ಅರ್ಜೆಂಟಿನಕ್ಕೋ ಹೋದರೆ ಸಾಫ್ಟ್ ವೇರ್ ಕಂಪೆನಿಗಳಲ್ಲೂ ಕೇಳಿಸುವುದು ಮಾತೃ ಭಾಷೆಗಳ ರಿಂಗಣವೇ. 

ಇನ್ನು ನಮ್ಮ ಪೇಟೆ ಮಂದಿ ಮಾತಾಡುವ ಇಂಗ್ಲಿಷು ದೇವರಿಗೇ ಪ್ರೀತಿ. ಕಂ ಯಾ ಗೋ ಯಾ, ಎಸ್ ಡಾ , ವೈ ಡಾ, ಹೀ ಇಸ್ ಕಮಿಂಗ್ ನಾ ಅಂತೆಲ್ಲ ಮಾತಾಡುವವರ ಪೆದ್ದು ಇಂಗ್ಲಿಷು ಎಷ್ಟು ನೋಡಿಲ್ಲ ನಾವು? ಅತ್ಲಾಗೆ ಷೇಕ್ಸಪಿಯರ್ ಬರೆದದ್ದನ್ನೂ ಓದಲಿಲ್ಲ ಇತ್ಲಾಗೆ ಮೂರ್ತಿ ರಾಯರ ಬಗ್ಗೆಯೂ ಗೊತ್ತಿಲ್ಲ ಅನ್ನುವ ಎಡೆಬಿಡಂಗಿ ಅರ್ಧರ್ಧ ಇಂಗ್ಲಿಷು ಜನ ಎಷ್ಟಿಲ್ಲ ? ಇವರ್ಯಾರೂ ಕುವೆಂಪು, ಬೇಂದ್ರೆ, ಅಡಿಗರ ಹೆಸರನ್ನು ಕೇಳಿದವರಲ್ಲ. ಅತ್ತ ಬ್ಲೇಕ್, ವಿಟ್ಮ್ಯಾನ್,ಎಲಿಯಟ್‍ರನ್ನೂ ಓದಿಕೊಂಡವರಲ್ಲ. ಸೂಪರ್ ಮ್ಯಾನು, X ಮೆನ್ನು, ಅವೆಂಜರ್ಸ್ ತರದ್ದು ಒಂದು ನಾಲ್ಕು ಚಿತ್ರ ನೋಡಿ ನಾವು ಹಾಲಿವುಡ್ಡನ್ನು ಅರೆದು ಕುಡಿದಿದ್ದೇವೆ ಅನ್ನುವಂತೆ ಪೋಸು ಕೊಡುವವರ ಸಂಖ್ಯೆ ಕಡಮೆಯೇನಲ್ಲ! 

ಇದನ್ನೊಮ್ಮೆ ಊಹಿಸಿಕೊಳ್ಳಿ . ನೀವೊಬ್ಬ ವೈದ್ಯರ ಹತ್ತಿರ ಹೋಗ್ತೀರಿ, ಅವರಿಗೆ ಇಂಗ್ಲೀಶು ಲೀಲಾಜಾಲ, ಆದರೆ ಪಾಪ ಯಾವ ರೋಗಕ್ಕೆ ಯಾವ ಮದ್ದು ಕೊಡಬೇಕು ಅಂತ ಗೊತ್ತಿಲ್ಲ, ನೀವು ಎಷ್ಟು ಸಲ ಅದೇ ಡಾಕ್ಟರ ಹತ್ತಿರ ಹೋಗ್ತೀರಿ? ನೀವೊಂದು ವಿಮಾನ ಹತ್ತುತ್ತೀರಿ. ಪೈಲಟ್  ಅರಳು ಹುರಿದಂತೆ ಇಂಗ್ಲೀಶು ಮಾತಾಡ್ತಾನೆ, ಆದ್ರೆ ಆಸಾಮಿಗೆ ವಿಮಾನ ಓಡಿಸೋದು ಹೇಗೆ ಅಂತ ಗೊತ್ತಿಲ್ಲ, ಆ ಪೈಲಟ್ ನ ಇಂಗ್ಲೀಶು ಕೇಳುವ ಭಾಗ್ಯ ಎಷ್ಟು ದಿನ ಸಿಕ್ಕೀತು?! ಯಾವ ಭಾಷೆಯೂ ತನ್ನಷ್ಟಕ್ಕೇ ತಾನೇ ಶ್ರೇಷ್ಟ ಅಲ್ಲ. ಈಗ ಇಂಗ್ಲೀಷಿನಲ್ಲಿ ಮಾತಾಡಿದರೆ cool ಅನ್ನಿಸುವಂತೆ ಒಂದು ಕಾಲಕ್ಕೆ ಲ್ಯಾಟಿನ್ ನಲ್ಲೋ ಸಂಸ್ಕೃತದಲ್ಲೋ ಮಾತಾಡಿದರೆ ದೊಡ್ಡ ಮನುಷ್ಯ ಅಂತ ಪ್ರತೀತಿ ಇತ್ತು (ಆ ಭಾಷೆಗಳಲ್ಲಿ ಜ್ಞಾನ ಸಂಪತ್ತು ಸೃಷ್ಟಿಯೂ ಹೇರಳವಾಗೇ ಆಗುತ್ತಿತ್ತು ಅನ್ನಿ ಈಗ ಇಂಗ್ಲಿಷಿನಲ್ಲಿ ಆಗುತ್ತಿರುವ ಹಾಗೆ) ಈಗ ಎಲ್ಲಿ ಹಾಳಾಗಿ ಹೋಯಿತು ಅದೆಲ್ಲಾ ? ಕಾಲದ ರಥ ಯಾವ ಭಾಷೆಗೂ ಶಾಶ್ವತವಾಗಿ ಕಪ್ಪ ಕಾಣಿಕೆಗಳನ್ನು ಕೊಟ್ಟು ಕೈ ಮುಗಿದಿಲ್ಲ. 

ಯೋಚಿಸಿ ನೋಡಿ. ನೀವು ಉಪಯೋಗಿಸೋ ಟೀವಿ ತಯಾರಿಸಿದವರಿಗೆ ಬಹುಶಃ ಇಂಗ್ಲಿಷು ಗೊತ್ತಿಲ್ಲ, ನಿಮ್ಮ ಮೊಬೈಲು ತಯಾರಿಸಿದವರು ಪ್ರಾಯಶಃ ಇಂಗ್ಲಿಶ್ ಮಾತಾಡರು, ನೀವು ಪೀಯುಸಿಯಲ್ಲಿ ಓದಿದ ಬಹುತೇಕ ಎಲ್ಲ ಫಿಸಿಕ್ಸು ಯುರೋಪಿಯನ್ ಭಾಷೆಗಳಲ್ಲೇ ಬಂದಿದ್ದು, ಎಲ್ಲ ಅವರವರ ಮಾತೃ ಭಾಷೆಗಳಲ್ಲೇ ಅಥವಾ ಲ್ಯಾಟಿನ್ ನಲ್ಲಿ  ಬರೆದದ್ದು. ಅರ್ಧ ಅಮೇರಿಕಾ ಜಪಾನಿನ Animation ಸಿನೆಮಾಗಳನ್ನ ಇಂಗ್ಲಿಶ್ Subtitles ಹಾಕಿ ನೋಡ್ತದೆ , ವಿಷಯ ಚೆನ್ನಾಗಿದ್ದರೆ ಅವರೇ ಇಂಗ್ಲಿಷಿಗೆ ಅನುವಾದ ಮಾಡಿ ನೋಡುತ್ತಾರೆ ಅಲ್ಲವೇ? 2300 ವರ್ಷಗಳ ನಂತರ ಇವತ್ತಿಗೂ Aristotle, Plato ಅಂತ ಮಾತಾಡ್ತಾರೆ , ಅವ್ರೇನು ಇಂಗ್ಲಿಶ್ ಮೀಡಿಯಂ ಶಾಲೆಗೇ ಹೋಗಿ ಹಾಳಾಗಿದ್ದರೇ? ಅವರೇನು ಇಂಗ್ಲಿಷಲ್ಲಿ ಬರೆದಿದ್ರಾ ? ವಿಷಯ ಚೆನ್ನಾಗಿದ್ದರೆ ಅಮೆರಿಕಾದವರೇ ಇಂಗ್ಲಿಷಿಗೆ ಅನುವಾದ ಮಾಡಿ ಓದಿಕೊಳ್ಳುತ್ತಾರೆ. ನಿರ್ದೇಶಕ Akira Kurosawa ಮಾತಾಡಿದ್ದು ಜಪಾನೀ ಭಾಷೆಯಲ್ಲೇ, ಅರ್ಧ ಜಗತ್ತೇ ಅವನ ಪಾದದ Xerox ಕಾಪಿಯನ್ನು ಇಂಗ್ಲಿಷಿನಲ್ಲೇ ತೆಗೆಯಲಿಲ್ಲವೇ? ಬೆಲೆ ಇರುವುದು ನಿಮ್ಮ ತಲೆಗೆ ಮತ್ತು ಹೃದಯಕ್ಕೆ ಇಂಗ್ಲೀಷಿಗೂ ಅಲ್ಲ ಫ್ರೆಂಚಿಗೂ ಅಲ್ಲ!!

ಮಾತೃ ಭಾಷೆ ಬೇಡ ಅನ್ನೋದಕ್ಕಿಂತ ಪೆದ್ದುತನ ಬೇರೆ ಇಲ್ಲ, ನಮಗೆ ಇವತ್ತಿನ ಕಾಲಕ್ಕೆ ಇಂಗ್ಲೀಶು ಬೇಕು ಆದರೆ ಕನ್ನಡ ಬಿಟ್ಟಲ್ಲ. ಕನ್ನಡ ಕಲಿತರೆ ಇಂಗ್ಲಿಷು ಚೆನ್ನಾಗಿಯೇ ಬರ್ತದೆ,ಅದು ಕನ್ನಡದ ಮೂಲಕ ಬರುತ್ತದೆ ಅಷ್ಟೇ. ಒಂದು ಬಾಗಿಲು ಕನ್ನಡದ್ದು ಇದ್ದರೆ ಉಳಿದ ಕಿಟಕಿ ಬಾಗಿಲುಗಳು ಎಷ್ಟಾದರೂ ಇರಬಹುದಲ್ಲ. ಇಂಗ್ಲೀಷು, ಲ್ಯಾಟಿನು, ಫ್ರೆಂಚು, ಸಂಸ್ಕೃತ, ಪ್ರಾಕೃತ, ಅರೇಬಿಕ್ ಹೀಗೆ ಎಷ್ಟು ಕಡೆಯಿಂದಾದರೂ ಗಾಳಿ ಬೆಳಕುಗಳು ಬರಲಿ. ಒಂದು ಬಾಗಿಲು ಕನ್ನಡಕ್ಕೂ ಇರಲಿ. ಇಷ್ಟೂ ಅರ್ಥ ಆಗ್ಲಿಲ್ಲ ಅಂದ್ರೆ ಇಂಗ್ಲೀಷಲ್ಲೇ ಕಲೀರಿ, ಅದೇನು ಗುಡ್ಡೆ ಕಡಿದು ಹಾಕ್ತೀರೋ ನೋಡಿಯೇ ಬಿಡೋಣ.   

2 comments:

  1. Nijavada maathu Sharath anna.
    Blog shuru maadiddu thumbaa khushi aythu. Heege bareetha iri.

    ReplyDelete