Monday 1 January 2018

ಕೊರಿಯನ್ ದ್ರಾವಿಡ

ನಾನು ಕೊರಿಯನ್ ಚಿತ್ರಗಳನ್ನು ನೋಡಿದ್ದರಿಂದ ಬೇರೇನಾದರೂ ಆಯಿತೋ ಇಲ್ಲವೋ, "ನಿಮಗಿದು ಗೊತ್ತೇ" ಎಂಬಂತೆ ಬರೆದ ಕಳೆದ ಪೋಸ್ಟಿಗೆ ಒಂದು ಪುಟ್ಟ sequel ಅಂತೂ ಹೊಳೆಯಿತು, ಅದೂ ಕನ್ನಡ ಭಾಷೆಯ ಕುರಿತಾಗಿ. ಎತ್ತಣ ಕನ್ನಡ ಎತ್ತಣ ಕೊರಿಯನ್ ಅಂತ ತಲೆ ತುರಿಸಬೇಡಿ, ಅವುಗಳಿಗೆ ಏನೋ ಕೊಂಡಿ ಇದೆ, ನಮ್ಮ ಚಿಕ್ಕಮ್ಮನ ಗಂಡನ ದೊಡ್ಡಮ್ಮನ ಮೊಮ್ಮಗನ ಹೆಂಡತಿ ಅನ್ನುವಂತೆ, ದೂರದ್ದಾದರೂ ಸಂಬಂಧ ಇದೆ. ಕೊರಿಯನ್ ಭಾಷೆಯಲ್ಲಿ ಅಪ್ಪನನ್ನು obba/oppa ಅನ್ನುತ್ತಾರೆ, ಅಮ್ಮನನ್ನು omma ಅನ್ನುತ್ತಾರೆ. ಇದು ಪಕ್ಕನೆ ಕೇಳಿದರೆ ಅಪ್ಪ ಅಮ್ಮ ಅಂತಲೇ ಕೇಳಿಸುತ್ತದೆ ಅಂತ ತಿಳಿದಾಗ ನನ್ನ ಕುತೂಹಲವು ರಾತ್ರಿ ವಾಹನಗಳ ಹಿಂದೆ ಓಡುವ ನಾಯಿಯೊಂದರಂತೆ ಓಡಲು ಶುರು ಮಾಡಿತು!! ಅವರು I ಅನ್ನಲು na ಅನ್ನುತ್ತಾರೆ(ಕನ್ನಡಿಗರು ನಾ, ನಾನು, ನಾನ್ ಅಂದಂತೆ), you ಅನ್ನು neo ಅನ್ನುತ್ತಾರೆ(ನಾವು "ನೀವು" ಅಂದಂತೆ), climb up ಅನ್ನಲು ಅವರು ಬಳಸುವ oreu ಅನ್ನುವುದೂ ನಮ್ಮ "ಏರು" ಎಂಬುದನ್ನು ಹೋಲುತ್ತದೆ ಎಂಬೆಲ್ಲ ಬಿಸ್ಕತ್ ತುಂಡುಗಳೂ ಸಿಕ್ಕಿ ಈ ಕೌತುಕದ ಶ್ವಾನ ಮತ್ತಷ್ಟು ನೆಗೆ ನೆಗೆದು ಓಡಿತು.
ಕನ್ನಡ, ತಮಿಳು, ತುಳು, ತೆಲುಗು ಇವೆಲ್ಲ ಒಂದೇ ಮೂಲದಿಂದ ಬಂದಿವೆ(ಅವುಗಳಲ್ಲಿ ಅಷ್ಟೊಂದು ಹೋಲಿಕೆಗಳಿರುವುದೇ ಅದಕ್ಕೆ ಸಾಕ್ಷಿ). ಆ ಮೂಲ ಭಾಷೆಯನ್ನು Proto-Dravidian ಅಂತ ಹೇಳುತ್ತಾರೆ. ಕನ್ನಡ, ತಮಿಳು, ತುಳು ಇವೆಲ್ಲ ಒಂದೊಮ್ಮೆ ಈ ಮೂಲ ದ್ರಾವಿಡಮ್ಮನ ಮಕ್ಕಳಾಗಿ ಒಂದೇ ಮನೆಯಲ್ಲಿದ್ದು ಅನಂತರ ಆಸ್ತಿ ಪಾಲು ಮಾಡಿಕೊಂಡು ಬೇರೆಯಾದ ಮಕ್ಕಳಂತೆ ಕಾಲಕ್ರಮದಲ್ಲಿ ಬೇರೆ ಬೇರೆಯಾಗಿವೆ ಅಂತ ತಜ್ಞರು ಹೇಳುತ್ತಾರೆ.
ಹೀಗಾಗಿ ಕೊರಿಯನ್ ಭಾಷೆ ಹಳೆಯ ಕಾಲದ ಮೂಲ ದ್ರಾವಿಡವನ್ನು ಅಥವಾ ಮೂಲ ದ್ರಾವಿಡದ ಪ್ರಯೋಗಗಳನ್ನು ಬಹಳಷ್ಟು ಉಳಿಸಿಕೊಂಡಿರುವ ತಮಿಳನ್ನು ಹೆಚ್ಚು ಹೋಲುತ್ತದೆ ಅನ್ನಬಹುದು(ಕೆಲವು ತಮಿಳರು ಕೊರಿಯನ್ ಭಾಷೆ ತಮಿಳಿನಿಂದಲೇ ಹುಟ್ಟಿದೆ ಎಂಬ ತಲೆಬುಡ ಇಲ್ಲದ ವಾದ ಮಾಡಿಯೂ ಇದ್ದಾರೆ ! ) ಉದಾ : ಕೊರಿಯನ್ನರು ದಿನವನ್ನು Nal ಅನ್ನುತ್ತಾರೆ, ಹಳಗನ್ನಡದಲ್ಲಿ ನಾಳ್ ಅಂದರೆ ದಿನವೇ, ಕನ್ನಡದಲ್ಲಿ ಈಗ ಇದು ಬಿಟ್ಟುಹೋಗಿದೆ, ತಮಿಳಿನಲ್ಲಿ ಅದನ್ನು ಈಗಲೂ ಉಳಿಸಿಕೊಂಡಿದ್ದಾರೆ. come ಅನ್ನುವುದಕ್ಕೆ ಕೊರಿಯನ್ನರು Wa ಅಂತ ಹೇಳುತ್ತಾರೆ (ನಾವು ಬಾ ಅಂದಂತೆ), ತಮಿಳಿನಲ್ಲಿ ಈಗಲೂ ವಾ ಅಂತಲೇ ಹೇಳುತ್ತಾರೆ, ಹಳಗನ್ನಡದಲ್ಲಿ ಈ ಪ್ರಯೋಗ ಇದ್ದಿರಬೇಕು, (ಉದಾ : ಹಳಗನ್ನಡದಲ್ಲಿ ವಂದು ಅಂದರೆ ಬಂದು ಅಂತ ಅರ್ಥ).
ಹುಡುಕಿದರೆ Homer Hulbert ಅನ್ನುವವರು ಬರೆದಿರುವ Comparative Grammar of Korean and Dravidian ಅನ್ನುವ ಪುಸ್ತಕವೂ ಸಿಗುತ್ತದೆ, ನಮ್ಮ ದ್ರಾವಿಡ ಭಾಷೆಗಳ ಮತ್ತು ಅವರ ವ್ಯಾಕರಣದಲ್ಲಿಯೂ ಹೋಲಿಕೆ ಇರುವುದನ್ನು ಆ ಪುಸ್ತಕದಲ್ಲಿ ಗುರುತಿಸಲಾಗಿದೆ. ಇದನ್ನೆಲ್ಲ ನೋಡಿದರೆ ಪ್ರಾಚೀನ ಭಾರತ ಮತ್ತು ಆಗಿನ ಕೊರಿಯಾದ ನಡುವೆ cultural exchange ಮತ್ತು ಭಾಷಾ ವಿನಿಮಯ ಆಗಿರಬೇಕೆಂದು ತೋರುತ್ತದೆ. ಎರಡು ಸಾವಿರ ವರ್ಷಗಳಿಗೆ ಮೊದಲು ಇಲ್ಲಿನವರು ಅಲ್ಲಿಗೆ ಹೋಗಿರಬಹುದು, ಅಲ್ಲಿನವರು ಇಲ್ಲಿಗೆ ಬಂದಿರಬಹುದು ಅಂತೆಲ್ಲ ಊಹಿಸಿದವರಿದ್ದಾರೆ. ತಮಿಳಿನ/ಮೂಲ ದ್ರಾವಿಡದ ಸುಮಾರು ಐನೂರು ಪದಗಳು ಕೊರಿಯನ್ ಪದಗಳನ್ನು ಹೋಲುತ್ತವೆ ಅಂತ ಹೇಳಿದವರಿದ್ದಾರೆ.
ಯಾವುದಕ್ಕೂ ಇನ್ನೊಮ್ಮೆ ಕೊರಿಯನ್ ಚಿತ್ರ ನೋಡುವಾಗ ಸ್ವಲ್ಪ ಕಿವಿಕೊಟ್ಟು ನೋಡಿ, ಏನಾದರೂ ಸಿಕ್ಕಿದರೂ ಸಿಕ್ಕೀತು.

No comments:

Post a Comment