Monday 2 November 2015

ಸಿರಿಗನ್ನಡ ಮತ್ತು ಸರಿಗನ್ನಡ!!

ಇದು ಕನ್ನಡ ರಾಜ್ಯೋತ್ಸವ ಸ್ಪೆಷಲ್ !! ಇಂಗ್ಲೀಷಿನಲ್ಲಿ "Mistakes we make while speaking English"ಅಥವಾ "Common English bloopers" ಅಂತ ಹೇಳುವ ಹಾಗೆ, ಕನ್ನಡದ ಬಳಕೆಯಲ್ಲಿ ಆಗುವ ತಪ್ಪುಗಳ ಬಗ್ಗೆ ಒಂದು ಪುಟ್ಟ ಟಿಪ್ಪಣಿ.

ಪುನೀತ್ ಅಭಿಮಾನಿಗಳಿಗೆ ಒಂದು ಪ್ರಶ್ನೆ. ಅವರು ನಡೆಸಿ ಕೊಡ್ತಾ ಇದ್ದ ಕಾರ್ಯಕ್ರಮದ ಹೆಸರು ಹೇಳಿ ನೋಡೋಣ! ಏನಂದ್ರಿ ? ಕನ್ನಡದ "ಕೋಟ್ಯಾಧಿಪತಿ" ಅಂದ್ರಾ ? ಹಹಹಾ !! ಸಿಕ್ಕಿ ಹಾಕ್ಕೊಂಡ್ರಿ. ಅದು ಕೋಟ್ಯಧಿಪತಿ ಆಗಬೇಕಿತ್ತು ,ಕೋಟ್ಯಾಧಿಪತಿ ಅಲ್ಲ. ಕೋಟಿ + ಅಧಿಪತಿ = ಕೋಟ್ಯಧಿಪತಿ. ಕಾರ್ಯಕ್ರಮ ಹೆಚ್ಚು ದೀರ್ಘವಾಗಿ ಇರ್ಲಿಲ್ಲ, ಹಾಗಾಗಿ ದೀರ್ಘ ಬೇಡ! ಇದೇ ಜಾತಿಗೆ ಸೇರಿದ ಮತ್ತೊಂದು "ಜಾತ್ಯಾತೀತ", ದಿನ ಬೆಳಗಾದರೆ ಎಲ್ಲರೂ ತಾವು ಜಾತ್ಯಾತೀತರು ಅಂತ ಹೇಳಿಕೊಳ್ಳುವಾಗ ನೀವು ಮಾತ್ರ ನಾನು ಜಾತ್ಯತೀತ ಅಂತ ಹೇಳಿ, ನಿಟ್ಟುಸಿರು ಬಿಡಿ. ಪ್ರಾಕಾರ ಅನ್ನುವ ಶಬ್ದವೂ ಹೀಗೆಯೇ. ಪ್ರಕಾರ ಅನ್ನಬೇಕಾದಲ್ಲಿ ಸುಮ್ಮನೆ ದೀರ್ಘವನ್ನ ಎಳೆದು ತಂದು ಪ್ರಾಕಾರ ಮಾಡುವವರಿದ್ದಾರೆ. ಉದಾ : ಯಕ್ಷಗಾನ ಒಂದು ಕಲಾ ಪ್ರಕಾರ, ಪ್ರಾಕಾರ ಅಲ್ಲ. ಪ್ರಾಕಾರ ಅಂದರೆ ಸುತ್ತಲೂ ಆವರಿಸಿ ಇರುವ ಸುತ್ತುಗೋಡೆ. ಕೋಟೆಗಳಲ್ಲಿ ಪ್ರಾಕಾರಗಳು ಇದ್ದವು, ದೇವಸ್ಥಾನಗಳಲ್ಲಿ ಗರ್ಭ ಗುಡಿಯ ಸುತ್ತ  ಪ್ರಾಕಾರಗಳು ಇರುತ್ತವೆ. 

ಇದರ ಉಲ್ಟಾ ಅನ್ನಿಸುವ ತಪ್ಪೂ ಇದೆ, ದೀರ್ಘ ಬೇಕಾದಲ್ಲಿ ದೀರ್ಘ ಹಾಕದೆ ಇರುವುದನ್ನ ನೋಡಬೇಕಾದರೆ ಬಸವನಗುಡಿಯ ನೆಟ್ಟಕಲ್ಲಪ್ಪ ಸರ್ಕಲ್ ಹತ್ತಿರ ಬನ್ನಿ. ಅಲ್ಲಿ "ಉಪಹಾರ ದರ್ಶಿನಿ" ಅನ್ನುವ ಬೋರ್ಡು ಕಣ್ಣಿಗೆ ರಾಚುತ್ತದೆ. ಅಲ್ಲಿ ನಿಮಗೆ ಯಾರೂ ಹಾರ ಹಾಕುವುದಿಲ್ಲ. 
ಅಲ್ಲಿ ನಿಜವಾಗಿಯೂ ಸಿಗುವುದು ಉಪ + ಆಹಾರ = ಉಪಾಹಾರ. ಇನ್ನು ಸಸ್ಯಹಾರ, ಮಾಂಸಹಾರ ಬೇಡವೇ ಬೇಡ. ಚಿನ್ನದ ಹಾರ, ಮುತ್ತಿನ ಹಾರ , ರತ್ನದ ಹಾರ ಎಲ್ಲ ಇರುವಾಗ ಸುಮ್ನೆ ಮಾಂಸದ ಹಾರ ಯಾಕೆ ಹಾಕಿಕೊಳ್ತೀರಿ! ಮಾಂಸಹಾರ ಬಿಟ್ಟು  ಮಾಂಸ + ಆಹಾರ = ಮಾಂಸಾಹಾರ ತಿನ್ನಿ( ನೀವು ಮಾಂಸಾಹಾರಿ ಆಗಿದ್ದರೆ! )

ಹೋಟೆಲು ಅಂದಾಗ ನೆನಪಾಯಿತು, ನೀವು ಶಾಖಾಹಾರಿ ಹೋಟೆಲ್ಗಳನ್ನ ನೋಡಿದ್ದೀರಾ ? 'ಶಾಖ’ ಎಂದರೆ ಬಿಸಿಯಾದದ್ದು. ಆದ್ದರಿಂದ ‘ಶಾಖಾಹಾರ’ ಅಂದರೆ ‘ಬಿಸಿಯಾದ ಅಡುಗೆ’ ಎಂದಾಗುತ್ತದೆ ಮತ್ತು ಇಂತಹ ಹೋಟೆಲುಗಳಲ್ಲಿ ತಣಿದ ಆಹಾರವೇ ಸಿಗುತ್ತದೆ! ಶಾಕ = ತರಕಾರಿ, ನೀವು ಒಂದು ಹೊಸ ಹೋಟೆಲು ತೆರೆದರೆ ಶಾಕಾಹಾರಿ ಅಂತಲೇ ಬರೆಸಿ. 

ಮಹಾಪ್ರಾಣದಲ್ಲಿ ಹೇಳಿದರೆ ಗೌರವ ಹೆಚ್ಚು ಅಂತ ನಮ್ಮ ಜನ ಭಾವಿಸುವುದರಿಂದ ಹೀಗೆ ಪ್ರಯೋಗ ಮಾಡುತ್ತಾರೆ. ಶಾಖ ಅಂದರೆ ಮರ್ಯಾದೆ ಜಾಸ್ತಿ ಶಾಕ ಅಂದರೆ ಕಡಿಮೆ ಅನ್ನುವ ಭಾವನೆ! ಮಹಾಪ್ರಾಣಿಗಳಾದ ಹುಲಿ, ಸಿಂಹಗಳು ಕೂಗಿದ ಮಾತ್ರಕ್ಕೆ ಮೊದಲಕ್ಷರ ಮಹಾಪ್ರಾಣವಾಗಬೇಕಿಲ್ಲ. 
ಘರ್ಜನೆ - ತಪ್ಪು, ಅದನ್ನು ಗರ್ಜನೆ ಅಂದರೆ ಸಾಕು.
ನನ್ನ ಮೇಲೆ ಸಿಟ್ಟು ಬಂದರೆ ನ್ಯಾಯಾಲಯಕ್ಕೆ ಹೋಗಿ. ಆದರೆ ಉಚ್ಚ ನ್ಯಾಯಾಲಯಕ್ಕೆ ಹೋದರೆ ಸಾಕು, ಉಚ್ಛ ನ್ಯಾಯಾಲಯ ಬೇಡ. 'ಚ' ಒತ್ತು ಸಾಕು. 'ಛ' ಒತ್ತು ಬೇಡ. ಮಹಾಪ್ರಾಣದ ವ್ಯಾಮೋಹಕ್ಕೆ ಕಡೇ ಉದಾಹರಣೆ: ಕುಂಕುಮಕ್ಕೆ ಇರುವ ಶಬ್ದ. ಸಿಂದೂರ ಅಂದರೆ ಕುಂಕುಮ (ಬಾಲ ಇಲ್ಲ). ಸಿಂಧೂರ ಅಂದರೆ ಆನೆ (ಬಾಲ ಇದೆ, ಹಾಗಾಗಿ ಆನೆ ಅನ್ನಿ!), ಹುಡುಗಿಯರನ್ನ ಆನೆಗೆ ಹೋಲಿಸಿ ಬೈಸಿಕೊಳ್ಳಬೇಡಿ. 

ವಿದ್ಯಾಭ್ಯಾಸ ಮಾಡಿದವರೂ ಇಂತಹ ತಪ್ಪುಗಳನ್ನು ಮಾಡುತ್ತಾರೆ. ಅದನ್ನೆಲ್ಲಾ ಬಿಡಿ. "ವಿದ್ಯಾಭ್ಯಾಸ" ಅನ್ನುವ ಶಬ್ದವನ್ನೇ ತಪ್ಪಾಗಿ "ವಿಧ್ಯಾಬ್ಯಾಸ" ಅಂತ ಬರೆಯುವವರು ಎಷ್ಟು ಜನ ಇಲ್ಲ!  ನೀವು ಅದೇನು ಕಲಿತು ಗುಡ್ಡೆ ಹಾಕಿದರೂ ಅದು ವಿದ್ಯೆ(ಬಾಲ ಇಲ್ಲ ) ವಿಧ್ಯೆ ಅಲ್ಲ. ವಿದ್ಯೆ ಕಲಿತರೆ ಕೆಲವರಿಗೆ ಕೋಡು ಬರುವ ಹಾಗೆ ವಿದ್ಯೆಗೆ ಬಾಲ ಬಂದು  ವಿಧ್ಯಾ ಆಗುವುದು ಬೇಡ. ಅಭ್ಯಾಸವನ್ನ ಅಬ್ಯಾಸ ಮಾಡಿದರೆ ಅದೂ ಆಭಾಸವೇ, ಈ ಅಭ್ಯಾಸ ಬಿಟ್ಟು ಬಿಡಿ. 

ಬೊಂಬೆಯಾಟವಯ್ಯ ಹಾಡು ಕೇಳಿದ್ದೀರಲ್ಲ ? ಆ ಚಿತ್ರದಲ್ಲಿ ನಮ್ಮ ಕಣ್ಣೀರು ಸ್ಪೆಷಲಿಸ್ಟ್ ಶೃತಿ ನಟಿಸಿದರೆ ಅದನ್ನು ಏನಂತ ಹೇಳಬಹುದಿತ್ತು? ಶ್ರುತಿ ಸೇರಿದಾಗ ಚಿತ್ರದಲ್ಲಿ ಶೃತಿ ಸೇರಿದಾಗ!! ಶ್ರುತಿ ಅಂದರೆ ಸರಿ. ಶೃತಿ ಅಂದರೆ ಏನು ಅಂತ ಗೊತ್ತಾದರೆ ಆ ನಟಿ ಕಣ್ಣೀರು ಸುರಿಸಬಹುದೇನೋ( 'ಶೃತಿ’ ಪದಕ್ಕೆ cooked, boiled, dressed ಎನ್ನುವ ಅರ್ಥ). ಇದೇ ರೀತಿ ಧ್ರುವ ಅಂದರೆ ಸರಿ, ಧೃವ ಅಂದರೆ ತಪ್ಪು.
ಇದನ್ನು ಓದಿ ಸುಸ್ತಾದೆ, ನಿಶ್ಯಕ್ತಿ ಆಗಿದೆ ಅನ್ನಬೇಡಿ. ಅದು ಶ್ಯಕ್ತಿ ಅಲ್ಲ, ಶಕ್ತಿ. ನಿಃ + ಶಕ್ತಿ = ನಿಶ್ಶಕ್ತಿ ('ಯ' ಒತ್ತು ಅಲ್ಲ 'ಶ' ಒತ್ತು). ಮಹಾಭಾರತದಲ್ಲಿ ಬರುವುದು ದುಶ್ಯಾಸನ ಅಲ್ಲ, ಅವನು ದುಶ್ಶಾಸನ . "ಅನಾವಶ್ಯಕ" ಇಷ್ಟು ಉದ್ದ ಬರ್ದಿದ್ದಾನೆ ಅಂದಿರಾ ? ನೋಡಿ ಅದೂ ಸರಿಯಲ್ಲ, ಇದರ ಬಗ್ಗೆ ವಿವರಣೆ ಅನವಶ್ಯಕ!!

ಕೊನೆ ಸಿಡಿ : ನನ್ನ ದುಡ್ಡು Axis ಬ್ಯಾಂಕಿನಲ್ಲಿದೆ . ಈ ಸಲ ದೀಪಾವಳಿಗೆ ಬೇರೆಯವರೆಲ್ಲ ಏನಾದರೂ ಮಾಡ್ಕೊಂಡು ಹಾಳಾಗಿ ಹೋಗಲಿ, Axis ಬ್ಯಾಂಕಿನವರು ಮಾತ್ರ ಹ್ಯಾಪಿ "ದಿವಾಳಿ" ಅಂತ ಹಾರೈಸದೆ ಇದ್ದರೆ ಸಾಕು.
‪#‎ಅರ್ಥ_ಇರೋ_ಕನ್ನಡ_ಪದಕ್ಕಿಂತ_ಅರ್ಥ_ಇಲ್ಲದ_ಇಂಗ್ಲೀಷು_ಪದಾನೇ_ನಮಗಿಷ್ಟ‬

No comments:

Post a Comment