Thursday 21 July 2016

ಹಂಸಲೇಖ

ಹಂಸಲೇಖರ ಬಗ್ಗೆ ಜೋಗಿ ಸರ್ ಎಂದಿನಂತೆ ವಾರೆವಾಹ್ ಅನ್ನಿಸುವಂಥ ಲೇಖನ ಬರೆದಿದ್ದಾರೆ, ಅದಕ್ಕೆ ಪ್ರತಿಕ್ರಿಯೆ ಎಂಬಂತೆ ನಾನು ಬರೆದದ್ದೂ, ಬರೆಯುತ್ತ ಬರೆಯುತ್ತ ಒಂದು ಸಣ್ಣ ಲೇಖನದಷ್ಟೇ ಉದ್ದವಾಯಿತು, ಅದನ್ನೇ ಇಲ್ಲಿ ಹಾಕಿದ್ದೇನೆ:
ಈಚೆಗೆ ಟೈಂಸ್ ನೌ ನಲ್ಲಿ ಆರ್ಡಿ ಬರ್ಮನ್ ಬಗ್ಗೆ ಬಂದ ಕಾರ್ಯಕ್ರಮ ನೋಡುತ್ತಿದ್ದೆ. ಅವರ ಬಗ್ಗೆ ಮಾತಾಡುತ್ತಾ, "ಪಂಚಮ್ ದಾ is a music director with a sense of humour" ಅಂದರು ಶಾನ್. ಇದು ಆರ್ಡಿ ಬರ್ಮನ್ರಷ್ಟೇ ಹಂಸಲೇಖರಿಗೂ ಒಪ್ಪುತ್ತದೆ. ಇಲ್ಲಿ ಹಾಸ್ಯಪ್ರಜ್ಞೆ ಅಂದರೆ
ಹಂಸ್ ಜೋಕು ಮಾಡುತ್ತಿರುತ್ತಾರೆ ಎಂಬರ್ಥದಲ್ಲಿ ಅಲ್ಲ( ಆ ಅರ್ಥದಲ್ಲೂ ಈ ಮಾತು ಹಂಸರಿಗೆ ಅನ್ವಯಿಸುತ್ತದೆ ಆ ಮಾತು ಬೇರೆ). ಅವರು ಮೀಟುವ ರಾಗಗಳಲ್ಲಿ, ಸಂಗೀತ ಸಂಯೋಜಿಸುವ ರೀತಿಯಲ್ಲಿ ಒಂದು ಮಕ್ಕಳಾಟಿಕೆ, ಹುಡುಗಾಟ, ತಮಾಷೆ ಇದೆ ಅನ್ನುವ ಅರ್ಥದಲ್ಲಿ.
ನಾನು ತುಂಬ ಇಷ್ಟ ಪಡುವ ಎ ಆರ್ ರಹಮಾನ್ ಮತ್ತು ಹಂಸಲೇಖ ಒಟ್ಟೊಟ್ಟಿಗೆ, ಒಂದೇ ಸಮಯದಲ್ಲಿ ಮಿಂಚಿದವರು. ರಹಮಾನ್ ಸಹಜ ಪ್ರತಿಭೆಗೆ ಎಂಜಿನಿಯರ್ ನ ಕುಶಲತೆ ಬೆರೆಸಿದ ರೀತಿ ಕೆಲಸ ಮಾಡಿದವರು, ಅವರಲ್ಲಿ ಅದೆಷ್ಟೋ ವಾದ್ಯಗಳ ಕಲರವ ಉಂಟು, ಇದಕ್ಕೆ ಹೋಲಿಸಿದರೆ ಹಂಸರದ್ದು ಅಷ್ಟು ವಾದ್ಯಗಳ, ಕಂಪ್ಯೂಟರ್ ನ ಸಹಾಯ ಪಡೆಯದ ಸರಳ ಸುಂದರ ಸಂಗೀತ. ರಹಮಾನ್ ರದ್ದು ಫೆರಾರಿ ಕಾರು ತಯಾರಿಸುವ ಕಾರ್ಖಾನೆಯಂತ ಸೊಫಿಸ್ಟಿಕೇಟೆಡ್ ಜಾಗದಲ್ಲಿ ಮಾಡಿದ ಬ್ರಾಂಡೆಡ್ ಅಂಗಿಯಂತೆ, ಅದರ ರೀತಿ. ಹಳ್ಳಿ ಜನ ಮಾಡಿದ ಚಂದದ ಕಸೂತಿಯಂತೆ, ನೇಕಾರರು ನೇಯ್ದ ಬಣ್ಣದ, ಆಕರ್ಷಕ ಸೀರೆಯಂತೆ ಹಂಸರ ರೀತಿ. ನಯ-ನಾಜೂಕು, ಸೌಂದರ್ಯ ಎರಡರಲ್ಲೂ ಉಂಟು. ಮನೋಮೂರ್ತಿ ಗೆ ಸ್ಟೀಫೆನ್ ಪ್ರಯೋಗ್ ರಂತಹ Music Arranger ಇದ್ದರು. ಹಂಸರದ್ದು ಅವರೇ ನಿಂತು, ವಾದ್ಯಗಾರರ ಕೈಲಿ ಕೆಲಸ ತೆಗೆಸಿ ಸಂಗೀತ ಸೃಷ್ಟಿಸುವ ಹಳೆ ಶೈಲಿ. ಹಂಸರಿಗೆ ಅವರ ಕಲ್ಪನೆಯ ಮಟ್ಟಕ್ಕೆ ವಾದ್ಯಗಳನ್ನು orchestrate ಮಾಡುವುದಕ್ಕೆ ಬಜೆಟ್ ಇರುತ್ತಿರಲಿಲ್ಲ ಅನ್ನುವವರಿದ್ದಾರೆ, ಕನ್ನಡದ್ದು ಪಕ್ಕದ ಮನೆಗಳಿಗೆ ಹೋಲಿಸಿದರೆ ಯಾವತ್ತೂ ಸಣ್ಣ ಬಜೆಟ್ಟೇ, ನಮ್ಮ ಕೆ ಆರ್ ಮಾರ್ಕೆಟ್ಟು ಅವತ್ತಿಗೂ ಇವತ್ತಿಗೂ ಸಣ್ಣ ಮಾರುಕಟ್ಟೆಯೇ. ರಹಮಾನ್ ಬೇಕಾದ್ದು ಕೊಳ್ಳಬಲ್ಲ ಶ್ರೀಮಂತರ ಮನೆಯ ಹೆಣ್ಣುಮಗಳಂತೆ, ಹಂಸ ಇದ್ದದ್ದರಲ್ಲೇ ಹೇಗೋ ಸರಿದೂಗಿಸಿ ಮನೆಮಂದಿಗೆ ರುಚಿರುಚಿ ಊಟ ಮಾಡಿ ಬಡಿಸುವ ಮಧ್ಯಮ ವರ್ಗದ ಅಮ್ಮನಂತೆ . ಈಗ ನೋಡಿದರೆ ಇದೆಲ್ಲ ಒಳ್ಳೆಯದೇ ಆಯಿತು, ಹಂಸರ ಮಟ್ಟಿಗೆ ಯಾವ ಕೊರತೆಯೂ ಕೊರತೆಯಾಗಿ ಕಂಡಿಲ್ಲ. ಸಹಜ ಪ್ರತಿಭೆಗೆ ಯಾವ ಬಜೆಟ್ ನ ಹಂಗೂ ಇಲ್ಲ. ಒಟ್ಟಿನಲ್ಲಿ ನಮಗೆ ಎರಡು ತರದ್ದೂ ಸಿಕ್ಕಿತು. ಹಂಸರ ನಿರಾಭರಣ ಸುಂದರಿಯ ಥಳುಕು ಬಳುಕು ಯಾವ ವಿಶ್ವ ಸುಂದರಿಗೂ ಕಮ್ಮಿ ಏನಲ್ಲ.
ಕಳೆದ ವರುಷ ಸಿಂಗಾಪುರದಲ್ಲಿ ಹಂಸಧ್ವನಿ ಮೊಳಗಿತ್ತು. ಕಿಕ್ಕಿರಿದ ಸಭಾಂಗಣದಲ್ಲಿ ಒಂದು ಒಂದೂಕಾಲು ಸಾವಿರ ಜನ ಸೇರಿದ್ದರು, ಬೇರೆ ಯಾವ ಕಾರ್ಯಕ್ರಮಕ್ಕೂ ಸಿಂಗಾಪುರದಂತ ಊರಿನಲ್ಲಿ ಇಷ್ಟು ಜನ ಕನ್ನಡಿಗರು ಸೇರಿದ್ದು ನನಗಂತೂ ಗೊತ್ತಿಲ್ಲ. ಮತ್ತೆ ರಹಮಾನ್ concert ಇಗೆ ಹೋಲಿಸಿದರೆ ವೇದಿಕೆ ಖಾಲಿ, ಆದರೂ ಗಂಧರ್ವ ಲೋಕ ಸೃಷ್ಟಿ ಆಗಿಯೇ ಆಯಿತು. ಚಪ್ಪಾಳೆ, ಶಿಳ್ಳೆ ಗಳಿಂದ ಕೂಡಿದ ಪಕ್ಕಾ ಮಾಸ್ ವಾತಾವರಣ. ತಮ್ಮ ಹಳೇ ಹಾಡುಗಳಿಗೆ ಸಿಂಗಾಪುರದಂತಲ್ಲಿ ಇಷ್ಟು ಬೇಡಿಕೆ ಉಂಟೇ ಅಂತ ಅವರಿಗೇ ಆಶ್ಚರ್ಯ ಆಗಿರಬಹುದು. ಒಮ್ಮೆ ಮಲೆಗಳಲ್ಲಿ ಮದುಮಗಳು ಎಂಬ ಅತ್ಯದ್ಭುತ ನಾಟಕಕ್ಕೆ ಹೋಗಿದ್ದೆ. ನೀವು ನೋಡಲೇಬೇಕು ಅಂತ ಕೈಯೆತ್ತಿ ತೋರಿಸಬಹುದಾದ ವಿಶಿಷ್ಟ ಪ್ರಯೋಗ ಅದು. ಗೆಳೆಯರೊಬ್ಬರು ಪಕ್ಕದಲ್ಲಿ ಕೂತಿದ್ದರು . ಸ್ವಲ್ಪ ಹೊತ್ತಾದ ಮೇಲೆ, ಇದಕ್ಕೆ ಸಂಗೀತ ಕೊಟ್ಟದ್ದು ಹಂಸಲೇಖ ಮಹಾರಾಜ್ ಅಂದೆ. "ಹೌದಾ, ಹಂಸ್ ಸಂಗೀತ ಎಷ್ಟು ಕ್ಯಾಚೀ ಆಗಿರುತ್ತೆ ನೋಡಿ" ಅಂತ ಧಿಡಗ್ಗನೆ ಎದ್ದು ಕೂತರು! ಹಂಸ ನಡಿಗೆ ಮಾಡಿರುವ ಮೋಡಿಯೇ ಹಾಗಿದೆ. ಜನ ಕಣ್ಣರಳಿಸಿ ಎದ್ದು ಕೂರುತ್ತಾರೆ.
ಪಡ್ಡೆ ಹುಡುಗರಿಗೆ ಹುಡುಗಾಟಕ್ಕೆ ಪೋಲಿ ಸಾಲುಗಳು ಬೇಕೇ ? ದಾಸರ ಹಾಗೆ ತತ್ವ ಚಿಂತನೆ ಬೇಕೇ ? ಜಾನಪದವೇ ? ನಾಡಗೀತೆಯೇ ? ಹಂಸರ ಅಂಗಡಿಯಲ್ಲಿ ಎಲ್ಲವೂ ಉಂಟು. ವಿಶ್ವವಿದ್ಯಾಲಯದ ಬುದ್ದಿಜೀವಿ ಪ್ರೊಫೆಸರ್ ರಂತೆಯೂ ಮಾತಾಡುತ್ತಾರೆ, ಪಕ್ಕದ ಮನೆಯ ತರಲೆ ಅಂಕಲ್ ರಂತೆಯೂ ತಮಾಷೆಯ ಮಾತೂ ಮಾತಾಡುತ್ತಾರೆ. ಶಂಕರ್ ನಾಗ್ ಬಗ್ಗೆ ಹಂಸ್ ಹೇಳಿರುವ ಮಾತುಗಳು ಅವರು ಎಷ್ಟು ಸೊಗಸಾಗಿ, witty ಆಗಿ ಯೋಚನೆಗೆ ಇಂಬು ಕೊಡುವ ಹಾಗೆ ಮಾತಾಡಬಲ್ಲರು ಅನ್ನುವುದಕ್ಕೆ ನಿದರ್ಶನ. ಶಾಪ ಚಿತ್ರಕ್ಕೆ ಅವರು ಬರೆದಿರುವ ಚಿತ್ರಕತೆ ನೋಡಿದರೆ ಅವರ ಸಂಗೀತ ಸಾಹಿತ್ಯ ಗಳ ದೈತ್ಯ ಪ್ರತಿಭೆಗೆ ಬೆರಗಾಗಿ ಒಬ್ಬ ಒಳ್ಳೆ ಚಿತ್ರಕತೆ ಬರೆಯಬಲ್ಲವರನ್ನು ಮರೆತೇ ಬಿಟ್ಟೆವೇ ಅನ್ನಿಸುತ್ತದೆ, ರವಿಚಂದ್ರನ್ ಚಿತ್ರಗಳ ಚಿತ್ರಕತೆ, ಸಂಭಾಷಣೆಗಳ ಹಿಂದೆ ಹಂಸ್ ಕೈಚಳಕ ಇರುತ್ತಿತ್ತು ಅನ್ನುತ್ತಾರೆ ಕೆಲವರು
ನೀರು ಸಮಯ ಸಂಧರ್ಭ ನೋಡಿ ಬೇರೆ ಬೇರೆ ರೂಪ ತಾಳುತ್ತದೆ , ಲೋಟದಲ್ಲಿ ಲೋಟದ ಆಕೃತಿ, ಮಡಕೆಯಲ್ಲಿಟ್ಟರೆ ತಂಪು ತಂಪು , ಸಮುದ್ರದಲ್ಲಿ ಸೇರಿದರೆ ಮೊರೆಯುವ ಮೆರೆಯುವ ನಿರ್ಘೋಷದ ಹಾಗೆ, ಜಲಪಾತವಾದರೆ ಕಿವಿ ಗಡಚಿಕ್ಕುವಂತೆ ಧುಮ್ಮಿಕ್ಕಿ ಹರಿಯುವ ಜಲರಾಶಿ. ಹಂಸ್ ರ ಸಂಗೀತ, ಸಾಹಿತ್ಯ ನೀರಿನ ಹಾಗೆ, ಅದು ಗುಪ್ತ ಗಾಮಿನಿಯಂತೆ ಹರಿದದ್ದೂ ಉಂಟು, ಲೋಟದಲ್ಲಿ ಅಡಗಿ ಕುಳಿತದ್ದೂ ಉಂಟು, ಸಮುದ್ರದ ಹಾಗೆ ಅಬ್ಬರಿಸಿ ಬೊಬ್ಬಿರಿದದ್ದೂ ಉಂಟು.
ಸೋಲೇ ಇಲ್ಲ ನಿಮ್ಮ ಹಾಡು ಹಾಡುವಾಗ !!

No comments:

Post a Comment