Thursday 11 August 2016

ಮಾತು ಮತ್ತು ಅರ್ಥ

ಮಾತು, ಶಬ್ದ ಮತ್ತು ಅರ್ಥ! ನಾವು ಮಾತಾಡುತ್ತಾ ಹೋಗುತ್ತೇವೆ, ನಿಲ್ಲದ ಬೆಂಗಳೂರಿನ ಟ್ರಾಫಿಕ್ಕಿನಂತೆ ಮಾತು ಬರುತ್ತಲೇ ಹೋಗುತ್ತದೆ, ಮಾತು ಅಂದ ಮೇಲೆ ಶಬ್ದಗಳೂ ಬರುತ್ತವೆ, ಮಾತಾಡುವವರು ಸಾಕಷ್ಟು ಜನ ಇದ್ದಾರೆ, ಅರ್ಥ ಇಲ್ಲದ್ದನ್ನು ಮಾತಾಡುವವರೂ ಇದ್ದಾರೆ, ಕೆಲವರು ಮಾತಾಡಿದರೆ ಅರ್ಥಕ್ಕೇ ಹೊಸ ಅರ್ಥ ಬರುವುದೂ ಇದೆ. ಈ ಶಬ್ದ ಮತ್ತು ಅರ್ಥಗಳು ಹೇಗೆಲ್ಲ ಬರುತ್ತವೆ, ಬದಲಾಗುತ್ತವೆ ಅಂತ ಬೆದಕುತ್ತ ಹೋದರೆ, ಶಬ್ದಗಳನ್ನು ಮುಟ್ಟಿ, ತಟ್ಟಿ ಮಾತಾಡಿಸಿದರೆ ಹಲವು ಸೋಜಿಗಗಳು, ವಿಚಿತ್ರ ಕತೆಗಳು ಸಿಗುತ್ತವೆ. ಇಂತಹ ತಮಾಷೆಯ, "ಓಹೋ ಹೀಗೋ ವಿಚಾರ !!" ಅನ್ನಿಸುವ ಶಬ್ದಗಳು ಇವೆ ಸಾಕಷ್ಟು. ಇಂತಹ ವೇಷ ಬದಲಿಸುವ ಒಂದಷ್ಟು ಶಬ್ದಗಳನ್ನು ಭೇಟಿ ಮಾಡೋಣ ಇವತ್ತು.

ಈಗ ಸವಾಲು ಅನ್ನುವ ಶಬ್ದವನ್ನೇ ತಗೊಳ್ಳಿ, ಸವಾಲ್ ಎಂಬ ಪದಕ್ಕೆ ಹಿಂದಿ/ ಉರ್ದುವಿನಲ್ಲಿ ಪ್ರಶ್ನೆ ಎಂಬ ಅರ್ಥವಿದೆ ಆದರೆ ಕನ್ನಡದಲ್ಲಿ ಸವಾಲು ಅಂದರೆ ಅದನ್ನು ಚಾಲೆಂಜ್/ಕೆಣಕು. ಇದು ಯಾಕೆ ಹೀಗೆ ? ಈ ಯಾಕೆ ಅನ್ನುವುದಕ್ಕೆ ಉತ್ತರ ಹೀಗೆ : ಇದು ಒಂದು ದಿನ ಒಬ್ಬರು ಕುಳಿತು ಇವತ್ತಿನಿಂದ ಹೀಗೆ ಪ್ರಯೋಗಿಸೋಣ ಅಂತ ಮಾಡಿದ ನಿರ್ಧಾರ ಅಲ್ಲ. ಒಂದು ಶಬ್ದ ಲಕ್ಷಗಟ್ಟಲೆ ಜನರ ಬಾಯಿಗೆ ಸಿಕ್ಕಿ ಸಹಜವಾಗಿ ಆದ ಬದಲಾವಣೆ (ಅರ್ಥಾಂತರ). ಎಲ್ಲ ಜೀವಂತ ಭಾಷೆಗಳಲ್ಲಿ ಹೀಗೆ ಆಗುತ್ತದೆ. ಕೆಲವೊಮ್ಮೆ ಅನುಕರಣೆಯಿಂದ , ಒಮ್ಮೊಮ್ಮೆ ಅಜ್ಞಾನದಿಂದ, ಕೆಲವೊಮ್ಮೆ ಸೌಲಭ್ಯಾಕಾಂಕ್ಷೆಯಿಂದ.
ಈಗ ಒಬ್ಬರು ಆಟೋ ಚಾಲಕರು ಒಂದು ಇಂಗ್ಲಿಷು ಶಬ್ದ ಕೇಳುತ್ತಾರೆ ಅಂತಿಟ್ಟುಕೊಳ್ಳಿ. ಅವರಿಗೆ ಮೂಲ ಇಂಗ್ಲಿಷಿನ ಅರ್ಥ ತಿಳಿಯದು, ಸಂಧರ್ಭ ನೋಡಿ ಹೀಗಿರಬಹುದು ಅಂತ ಅರ್ಥ ಕಲ್ಪಿಸಿಕೊಳ್ಳುತ್ತಾರೆ, ಎರಡು ಮೂರು ಸಲ ಆ ಶಬ್ದ ಕಿವಿಗೆ ಬಿದ್ದ ಮೇಲೆ ಅವರೂ ಬಳಸುತ್ತಾರೆ . ಅವರನ್ನು ನೋಡಿ ಇನ್ನೊಬ್ಬರು , ಇನ್ನೊಬ್ಬರನ್ನು ನೋಡಿ ಮತ್ತೊಬ್ಬರು , ಹೀಗೆ ಅನುಕರಣೆಯಿಂದ ಕ್ರಮೇಣ ಎಲ್ಲರೂ ಬಳಸುತ್ತಾರೆ. ಉದಾಹರೆಣೆಗೆ : Recess ಅನ್ನುವ ಶಬ್ದ. Recess ಅಂದರೆ ಇಂಗ್ಲೀಷಿನಲ್ಲಿ ಬಿಡುವು. ಶಾಲೆಯಲ್ಲಿ ಬಿಡುವು ಇದ್ದಾಗ ಮಕ್ಕಳು ಮೂತ್ರ ವಿಸರ್ಜಿಸುವ ಕ್ರಮ ಇರುವುದರಿಂದ ಕೆಲವರು recess ಅಂದರೆ ಮೂತ್ರ ಮಾಡುವುದು ಅಂತಲೇ ಭಾವಿಸಿದರು. ಕ್ರಮೇಣ, "ನಮ್ ಹುಡುಗ recess ಮಾಡಬೇಕಂತೆ(ಮೂತ್ರ ವಿಸರ್ಜಿಸಬೇಕಂತೆ ಎಂಬರ್ಥದಲ್ಲಿ)" ಅಂತ ಬಳಸಿದರು. ಈಗ ತುಂಬ ಜನ ಹೀಗೇ ಬಳಸುತ್ತಾರೆ. ಇದು ಅಜ್ಞಾನದಿಂದ ಆದ ಅರ್ಥಾಂತರ.

ಅರ್ಥಗಳು ಐದು ತರದಲ್ಲಿ ಬದಲಾಗುತ್ತವೆ ಅಂತ ಭಾಷಾ ವಿಜ್ಞಾನಿಗಳು ಗುರುತಿಸಿದ್ದಾರೆ : ಅರ್ಥ ವಿಕಾಸ, ಅರ್ಥಸಂಕೋಚ, ಹೀನಾರ್ಥಪ್ರಾಪ್ತಿ, ಉತ್ತಮಾರ್ಥ ಪ್ರಾಪ್ತಿ ಮತ್ತು ಅರ್ಥಾಂತರ.
ಅರ್ಥ ವಿಕಾಸ - ಒಂದು ಸಂಸ್ಥೆ ಹೊಸ ಬ್ರಾಂಚುಗಳನ್ನು ತೆರೆದು ಬೆಳೆದ ಹಾಗೆ ಒಂದು ಶಬ್ದ ಬೆಳೆಯುವುದು. ಅದಕ್ಕೆ ಮೊದಲು ಇದ್ದ ಅರ್ಥಕ್ಕಿಂತ ಹೆಚ್ಚಿನ, ವಿಶಾಲವಾದ ಅರ್ಥವನ್ನು ಪಡೆಯುವುದು. ಉದಾ: ಎಣ್ಣೆ. ಎಣ್ಣೆ ಅಂದರೆ ಮೂಲದಲ್ಲಿ ಎಳ್ಳಿನ ಜಿಡ್ಡು (ಎಳ್ + ನೆಯ್ ). ಎಳ್ಳಿನ Oil. ಈಗ ಎಲ್ಲ Oilಗಳಿಗೂ, ಜಿಡ್ಡುಗಳಿಗೂ ಬಳಸುತ್ತಾರೆ, ತೆಂಗಿನ ಎಣ್ಣೆ, ಕಡಲೆ ಎಣ್ಣೆ ಇತ್ಯಾದಿ. ತೆಂಗಿನ ಎಣ್ಣೆ ಅಂದರೆ ತೆಂಗಿನ ಎಳ್ಳಿನ oil ಅಂದಂತೆ! ಇನ್ನು ದಿನಕ್ಕೆ ನಾಲ್ಕು ಸಲ ಕಿವಿಗೆ ಬೀಳುವ ಶಬ್ದ "ಸಕತ್". ಇದರ ಮೂಲ ಸಖ್ತ್ ಅನ್ನುವ ಪಾರಸಿ ಶಬ್ದ. ಸಖ್ತ್ ಅಂದರೆ ಬಲವಾದ, ಗಟ್ಟಿಯಾದ, ತೀವ್ರವಾದ ಅಂತ. ಜರೂರತ್ ಹೈ ಜರೂರತ್ ಹೈ ಸಖ್ತ್ ಜರೂರತ್ ಹೈ ಅನ್ನುವ ಹಾಡೇ ಇದೆಯಲ್ಲ! ಕನ್ನಡದಲ್ಲಿ ಇದು ಚಕ್ರವರ್ತಿಯನ್ನು ಕೂಡಿಸಿಕೊಂಡ ಕೆನೆಯುವ ಕುದುರೆಯ ಖುರಪುಟಗಳು ಧೂಳೆಬ್ಬಿಸುವ ಹಾಗೆ ಧೂಳೆಬ್ಬಿಸಿದೆ. ನೀರು ದೋಸೆ ಹೇಗಿತ್ತು ? ಸಕತ್ತಾಗಿತ್ತು. ಪರೀಕ್ಷೆ ಹೇಗಿತ್ತು ? ಸಕತ್ ಸುಲಭ. ಹುಡುಗಿ ಹೇಗಿದಾಳೆ ? ಸಕತ್ ! ಎಲ್ಲಿ ಬೇಕಾದರೂ ಬೇರೆ ಯಾವ ಶಬ್ದವೂ ನೆನಪಾಗದಿದ್ದರೆ ಸಕತ್ ಅನ್ನುವ ಶಬ್ದ ಪ್ರಯೋಗಿಸಿ ಮರ್ಯಾದೆ ಉಳಿಸಿಕೊಳ್ಳಬಹುದು. ಪಾರಸಿಯಲ್ಲಿ ಹೊದಿಕೆ ಹೊದ್ದು ಮಲಗಿದ್ದ ಶಬ್ದ ಕನ್ನಡದಲ್ಲಿ ನೆಗೆ ನೆಗೆದು, ಕುಪ್ಪಳಿಸಿ ಕುಣಿದಿದೆ!
ಅರ್ಥಸಂಕೋಚ - ಮಲ್ಯನ ಕಿಂಗಫಿಶರ್ನ ಹಾಗೆ ದೊಡ್ಡದು ಸಣ್ಣದಾಗುವುದು. ವಿಶಾಲ ಅರ್ಥವು ಒಂದೇ ಅರ್ಥಕ್ಕೆ ಸೀಮಿತ ಆಗಿ ಬಿಡುವುದು. ಉದಾ : ಖಲ್ಲಾಸ್ ಅನ್ನುವ ಶಬ್ದ. ಇದಕ್ಕೆ ಮುಗಿಸುವುದು ಅನ್ನುವ ಅರ್ಥ ಇದ್ದಿರಬೇಕು ಮೂಲದಲ್ಲಿ . ಕನ್ನಡದಲ್ಲಿ ಕೆಟ್ಟ ರೀತಿಯಲ್ಲಿ ಮುಗಿಸುವುದು ಅನ್ನುವ ಸೀಮಿತ ಅರ್ಥದಲ್ಲಿ ಈಗ ಬಳಸುತ್ತಾರೆ( ಉದಾ : ಹೆಚ್ಚಿಗೆ ಮಾತಾಡಿದರೆ ಖಲ್ಲಾಸ್ ಮಾಡಿ ಬಿಡ್ತೀನಿ ). ಈಚೆಗೆ ಅಲ್ ಜಜೀರಾ ಅನ್ನುವ ವಾರ್ತಾ ವಾಹಿನಿ (ಅರಬ್ ದೇಶಗಳಲ್ಲಿ ಹೆಸರು ಮಾಡಿರುವ ವಾಹಿನಿ )ಯಲ್ಲಿ ಒಂದು ಸಂದರ್ಶನ ನೋಡುತ್ತಿದ್ದೆ . ಇನ್ನು ಸಂದರ್ಶನ ಮುಗಿಸೋಣ ಅನ್ನುವುದಕ್ಕೆ ಅಲ್ಲಿ ಖಲ್ಲಾಸ್ ಮಾಡೋಣ ಅಂದರು.
ಹೀನಾರ್ಥಪ್ರಾಪ್ತಿ: ಒಂದು ಶಬಕ್ಕಿದ್ದ ಒಳ್ಳೆಯ ಅರ್ಥ ಕೆಟ್ಟ ಅರ್ಥಕ್ಕೆ ತಿರುಗುವುದು. ಇದಕ್ಕೆ ಎಲ್ಲೆಲ್ಲೂ ಕಣ್ಣಿಗೆ ರಾಚುತ್ತಿರುವ ಉದಾಹರಣೆ ಬುದ್ದಿ ಜೀವಿ ಅನ್ನುವ ಶಬ್ದ. ಈ ಶಬ್ದಕ್ಕೆ ಇಂಟಲೆಕ್ಚುಯಲ್, ಧೀಮಂತರು ಎಂಬರ್ಥ. ಇತ್ತೀಚಿಗೆ ಧರ್ಮ ನಿಂದಕರು, ಆಷಾಡಭೂತಿಗಳು, ಎಡೆಬಿಡಂಗಿಗಳು, ಒಂದು ಧರ್ಮವನ್ನು ದ್ವೇಶಿಸುವವರು, sickularಗಳು, Libtardಗಳು ಅನ್ನುವ ಅರ್ಥಕ್ಕೆ ತಿರುಗಿದೆ . ಬುದ್ಧಿ ಜೀವಿ ಎನ್ನುವುದು ಧರ್ಮಕ್ಕೆ, ಧರ್ಮ ನಿಂದನೆಗೆ,ಎಡ, ಬಲಗಳಿಗೆ ಸಂಬಂದ ಪಟ್ಟ ಶಬ್ದವೇ ಅಲ್ಲ. ಅದು ಇಂಗ್ಲಿಷ್ ನ ಇಂಟಲೆಕ್ಚುಯಲ್ ಅನ್ನುವುದಕ್ಕೆ ಸಂವಾದಿಯಾದ ಶಬ್ದ. ಒಬ್ಬ ಬುದ್ಧಿ ಜೀವಿ ಪರಮ ಭಕ್ತನೂ, ಬಲ ಪಂಥೀಯನೂ ಆಗಿರಬಹುದು. ಈ ಎಡ ಬಲಗಳ ಪೆಟ್ಟುಗುಟ್ಟಿನಲ್ಲಿ ತೀರ ಗೌರಿ ಲಂಕೇಶ್, ಬರ್ಖಾ ದತ್ , ಆರುಂಧತಿ ರಾಯ್, ಭಗವಾನ್ ಮುಂತಾದವರನ್ನೂ ಬುದ್ದಿ ಜೀವಿಗಳು ಅಂತ ಕರೆದದ್ದೂ ಆಯಿತು -- ಅವರುಗಳು ಇಂಟಲೆಕ್ಚುಯಲ್ ಆಗಿ ಏನೂ ಕಡಿದು ಗುಡ್ಡ ಹಾಕಿರದಿದ್ದರೂ !! ಇದು ಎಷ್ಟು ಅತಿಗೆ ಹೋಗಿದೆ ಎಂದರೆ ಇವತ್ತು ಬುದ್ಧಿ ಜೀವಿ ಎನ್ನುವುದು ಒಂದು ಬೈಗುಳವೇ ಆಗಿ ಹೋಗಿದೆ. ಯಾರಾದರೂ ಒಳ್ಳೆ ಇಂಟಲೆಕ್ಚುಯಲ್ ಸಾಧಕರನ್ನು ಹೊಗಳುವುದಕ್ಕೆ/ಸಂಬೋಧಿಸುವುದಕ್ಕೆ ಯಾವ ಶಬ್ದ ಆದೀತು ಅಂತ ಹುಡುಕಬೇಕಾದ ಪರಿಸ್ಥಿತಿ !! ವೇದಗಳಲ್ಲಿ ಯಜ್ಞ-ಯಾಗಗಳನ್ನು ಅನುಷ್ಠಾನಕ್ಕೆ ಸಂಬಂಧಿಸಿದ user manual ತರದ ಭಾಗವನ್ನು `ಕರ್ಮಕಾಂಡ' ಎಂದು ಕರೆಯುತ್ತಾರೆ. ಆದರೆ ಇವತ್ತು ಆ ಪದದ ಕರ್ಮಕಾಂಡವೇ ಆಗಿ ಹೋಗಿದೆ ! ಆಗ ತಂಗೂಳು ಅಂದರೆ ತಣ್ಣಗಿನ+ಕೂಳು=ತಣ್ಣಗಿರುವ ಆಹಾರ. ಈಗ ಇದಕ್ಕೆ ಹಳಸಿದ ಎಂಬರ್ಥ ಬಂದಿದೆ. ಕುನ್ನಿ ಅಂದರೆ ಮೊದಲು ಕನ್ನಡದಲ್ಲಿ ಪುಟ್ಟ ಗಂಡು ಮಗು ಅಂತ ಇದ್ದಿರಬೇಕು. ಈಗ ನಾಯಿಮರಿ ಅಂತ ಆಗಿಬಿಟ್ಟಿದೆ . ಈಗ ಗದಾಯುದ್ಧ ಯಕ್ಷಗಾನದಲ್ಲಿ , ಎಲಾ ಎಲಾ ಛೀ ನೃಪಕುಲ ಕುನ್ನಿ ಅಂತಲೇ ಮೂದಲಿಸಲಾಗುತ್ತದೆ. ಹವ್ಯಕ ಭಾಷೆಯಲ್ಲಿ ಈಗಲೂ ಪುಟ್ಟ ಮಕ್ಕಳನ್ನು ಮುದ್ದಿನಿಂದ ಒಪ್ಪಕುಂಞಿ ಅನ್ನುತ್ತಾರೆ. ಲೇಖಕ ಬೊಳುವಾರು ಮಹಮ್ಮದ್ ಕುಂಞಿ ಇದ್ದಾರಲ್ಲ ಹಳೇ ಅರ್ಥದ ಕುಂಞಿ ಅವರ ಹೆಸರಿನಲ್ಲಿ ಇರುವುದು.
ಉತ್ತಮಾರ್ಥ ಪ್ರಾಪ್ತಿ: ಒಂದು ಶಬಕ್ಕೆ ಒಳ್ಳೆಯ ಅರ್ಥ ಬಂದು ಬಿಡುವುದು . ಉದಾ : ದಿಗ್ಗಜ ಅಂದರೆ ದಿಕ್ಕುಗಳನ್ನು ಹೊತ್ತುನಿಂತ ಆನೆ. ಇವತ್ತು ಇದನ್ನು ದೊಡ್ಡ ಜನ, ಒಂದು ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿ ಪರಿಣತಿ ಹೊಂದಿದವರು ಅನ್ನುವ ಅರ್ಥದಲ್ಲಿ ಬಳಸುತ್ತಾರೆ. ಪಂಟರ್ ಎಂಬ ಇಂಗ್ಲಿಷ್ ಪದಕ್ಕೆ ಒಳ್ಳೆ ಜೂಜುಕೋರನೆಂಬ ಅರ್ಥವಷ್ಟೇ ಇತ್ತು, ಕನ್ನಡದಲ್ಲಿ ನಿಸ್ಸೀಮ, ನಿಷ್ಣಾತ ಅನ್ನುವ ಅರ್ಥದಲ್ಲಿ, "ಅವ್ನು ಬಿಡಪ್ಪಾ ಪಂಟ" ಅನ್ನದ ಕಾಲೇಜು ವಿದ್ಯಾರ್ಥಿಗಳೇ ಇಲ್ಲ.
ಅರ್ಥಾಂತರ: ಒಂದು ಪದ ಹಿಗ್ಗದೆ, ಕುಗ್ಗದೆ, ಹೀನ ಅಥವಾ ಉತ್ತಮ ಅರ್ಥಕ್ಕೆ ತಿರುಗದೆ ಬದಲಾದರೆ ಅದು ಅರ್ಥಾಂತರ. ಇಲ್ಲಿ ತಮಾಷೆ ಇರುವುದು ಸರೀ ಉಲ್ಟಾ ಅಥವಾ ವಿರುದ್ಧ ಅರ್ಥಕ್ಕೆ ಹಾರಿ ಪಕ್ಷಾಂತರ ಮಾಡುವ ರಾಜಕಾರಣಿಯಂತ ಶಬ್ಧಗಳಲ್ಲಿ. ಅಮ್ಮ ಅನ್ನುವ ಶಬ್ದ ಯಾರಿಗೆ ಗೊತ್ತಿಲ್ಲ. ಹಳಗನ್ನಡದಲ್ಲಿ ಅಮ್ಮ ಅಂದರೆ ಅಪ್ಪ ಅಂತಲೇ ಅರ್ಥ! ಹೀಗೆ ಅಂದರೆ ನೀವು ಟಿವಿ 9 ಇನ "ಹೀಗೂ ಉಂಟೆ" modeಗೆ ಹೋಗಬಹುದು. ಹಳಗನ್ನಡದಲ್ಲಿ ಅಬ್ಬೆಯರು ಇದ್ದಾರೆ ಅಮ್ಮ ಈಗ ಇರುವಲ್ಲಿ. ನೃಪತುಂಗನ ಮಗಳ ಹೆಸರು ಚಂದ್ರಬಲಬ್ಬೆ. ತುಳುವಿನಲ್ಲಿ ಈಗಲೂ ಅಮ್ಮೆ ಅಂದರೆ ಅಪ್ಪನೇ. ಅಪ್ಪನ ಜಾಗದಲ್ಲಿ ಅಬ್ಬೆಯನ್ನು/ಅಮ್ಮನನ್ನು ಕೂರಿಸಿ ತಿರುಗಾ ಮುರುಗಾ ಮಾಡಲಾಗಿದೆ. ರುಂಡ ಎಂದರೆ ಕುತ್ತಿಗೆ ಮೇಲಿನದ್ದು, ಮುಂಡ ಅಂದರೆ ಕೆಳಗಿನದ್ದು, ಆದರೂ ತಲೆಗೆ ಸುತ್ತುವ ವಸ್ತ್ರ ಮುಂಡಾಸು, ರುಂಡಾಸು ಅಲ್ಲ. ಮುಂಡ ಅಂದರೆ ಮೊದಲು ತಲೆ ಆಗಿದ್ದಿರಬೇಕು, ಈಗ ಉಲ್ಟಾ ಆಗಿದೆ.

ಇನ್ನೊಂದು ಭಾಷಾ  ಪ್ರಕ್ರಿಯೆ ಅಂದರೆ ಸ್ವೀಕರಣ
ಸ್ವೀಕರಣ : ಬೇರೆ ಭಾಷೆಗಳಿಂದ ಸಾಲ ಪಡೆಯುವುದು, ಕೆಲವೊಮ್ಮೆ ಸಾಲ ಪಡೆದದ್ದನ್ನು ತಿರುಚುವುದು. ಬೆಂಗಳೂರಿನಲ್ಲಿ ಕೂತಲ್ಲಿ ನಿಂತಲ್ಲಿ " ಬೇಜಾನ್ " ಅನ್ನದವರು ಯಾರಿದ್ದಾರೆ ? ಜಾನ್ ಅಂದರೆ ಉರ್ದುವಿನಲ್ಲಿ ಜೀವ. ಹಾಗಾಗಿ ಬೇಜಾನ್ ಅಂದರೆ ಜೀವ ಇಲ್ಲದಿರುವುದು, ನಿರ್ಜೀವವಾಗಿರುವುದು. ಇದನ್ನು ಯಾರೋ ಪುಣ್ಯಾತ್ಮ ಬೇಜಾನ್ ತಲೆ ಓಡಿಸಿ ಸಿಕ್ಕಾಪಟ್ಟೆ,ಅಪಾರ, ಬಹಳಷ್ಟು ಅನ್ನುವ ಅರ್ಥಕ್ಕೆ ತಿರುಗಿಸಿದ್ದಾನೆ. ಇದು ಮತ್ತು ಸಕತ್ ಅನ್ನುವ ಪದ ಇಲ್ಲದಿದ್ದರೆ ಬೆಂಗಳೂರಿಗರು ಬದುಕುಳಿಯುವುದು ಕಷ್ಟ ಅನ್ನುವ ಪರಿಸ್ಥಿತಿ ಇದೆ! ಇನ್ನೂ ಕೆಲವು ವಿಚಿತ್ರ ಪ್ರಯೋಗಗಳು : ಬಂದ್ಬಿಟ್ಟು . ಕೆಲವರು ಮಾತಿಗೊಮ್ಮೆ ಬಂದ್ಬಿಟ್ಟು ,ಬಂದ್ಬಿಟ್ಟು, ಬಂದ್ಬಿಟ್ಟು,ಬಂದ್ಬಿಟ್ಟು ಅಂತ ಹೇಳುವುದು ಕೇಳಿ, ಈ ಪುಣ್ಯಾತ್ಮ ಎಷ್ಟು ಸಲ ಬರ್ತಾರೆ ಮತ್ತು ಯಾಕೆ ಹೀಗೆ ಬರ್ತಾರೆ ಅಂತ ತಲೆ ಕೆರೆದುಕೊಂಡಿದ್ದೆ . ಆಮೇಲೆ ಗೊತ್ತಾಯಿತು ಇದು ತಮಿಳ್ ಸ್ಟೈಲ್ ಅಂತ . ಕೇಳ್ಪಟ್ಟೆ ಅನ್ನುವುದು ಮತ್ತೊಂದು ಅಂತದೇ ಪ್ರಯೋಗ . ಇದೇನಿದು ಕೇಳ್ಪಟ್ಟೆ ಅಂತ ಮೊದಮೊದಲು ಯೋಚನೆ ಮಾಡ್ತಾ ಇದ್ದೆ. ಈಗ ಅಭ್ಯಾಸ ಆಗಿದೆ.

ಮಂಗಳೂರಿನ ಮಾರೆ(ಮಹಾರಾಯವನ್ನು ಕುಗ್ಗಿಸಿದರೆ ಮಾರಾಯ, ಮಾರಾಯವನ್ನು ಸ್ವಲ್ಪ ಒತ್ತಿದರೆ ಮಾರೆ) ಮಾರೆ ಕೇಳಿ ಅಭ್ಯಾಸ ಆದವರಿಗೆ ಬೆಂಗಳೂರಿನ ಮಚ್ಚಾ ಎಂಬುದು ವಿಚಿತ್ರ ಅನ್ನಿಸಬಹುದು , ಈ ತಮಿಳು ಭಾಷೆಯ ಪದಕ್ಕೆ ಭಾವ ಅಂತ ಮೂಲಾರ್ಥ, ಹಿಂದಿಯ ಸಾಲಾ ಇದ್ದ ಹಾಗೆ. ಇನ್ನೊಂದು ವಿಚಿತ್ರ ಪ್ರಯೋಗ "ಕಿಂಡಲ್" ಮಾಡೋದು . ಇದ್ಯಾಕಪ್ಪ ಬೆಂಗಳೂರಿನಲ್ಲಿ ಹುಡುಗಿಯರನ್ನ ಹೀಗೆ ಕಿಂಡಲ್ ಮಾಡೋದು ಅಂತ ಅನ್ನಿಸ್ತಾ ಇತ್ತು . ಆಮೇಲೆ ಗೊತ್ತಾಯ್ತು , ತಮಿಳಿನಲ್ಲಿ ಯಾರೋ ಕಿಂಡಲ್ ಅನ್ನುವ ಶಬ್ದವನ್ನ ಚುಡಾಯಿಸುವುದು ಅನ್ನುವ ಅರ್ಥದಲ್ಲಿ ಬಳಕೆ ಮಾಡಿ ಪ್ರಸಿದ್ದಿಗೆ ತಂದಿದ್ದರಂತೆ (ಇಂಗ್ಲೀಷಿನಲ್ಲಿ ಅದಕ್ಕೆ ಆ ಅರ್ಥ ಇಲ್ಲ). ತಮಿಳರ ತಪ್ಪನ್ನ ನಾವೂ ಅನುಕರಣೆ ಮಾಡದೇ ಇದ್ದರೆ ಹೇಗೆ ? ಕಿಂಡಲ್ ಇಲ್ಲಿಗೂ ಬಂತು, ಉಳಿಯಿತು, ತಪ್ಪೇ ಆದರೂ. ಕಂತ್ರಿ ಅನ್ನುವುದು ಇಂಗ್ಲಿಷಿನ countryಯ ಕನ್ನಡ ಅವತಾರ ಆದರೆ ಆಶ್ಚರ್ಯ ಆಗಬಹುದು. Country dog ಕಂತ್ರಿ ನಾಯಿ ಇವನ್ನು ಹೋಲಿಸಿ ನೋಡಬಹುದು. ಮಾರ್ಕೆಟ್ ಅನ್ನುವುದಕ್ಕೆ ಯಾರೋ ಬುದ್ದಿವಂತರು ಅದೇ ರೀತಿ ಉಚ್ಚಾರಣೆ ಇರುವ ಮಾರುಕಟ್ಟೆ ಶಬ್ದ ಸೃಷ್ಟಿ ಮಾಡಿದ್ದಾರೆ. ಬಲ್ಬ್ ಅಂದರೆ ಮೂಲದಲ್ಲಿ ಗಡ್ಡೆ ಅನ್ನುವ ಅರ್ಥ. ನಾವು ಕುಡಿಯುವ ಕಾಫಿ ಮೂಲತಃ ಅರೇಬಿಯಾದ್ದು, ಈ ಕಾಫಿ ಅನ್ನುವ ಪದಕ್ಕೆ ಪೋರ್ಚುಗೀಸ್ ಭಾಷೆಯ Cafe ಅನ್ನುವುದೇ ಮೂಲ, ಹಾಗಾದರೆ ಕೆಫೆ ಕಾಫಿ ಡೇ ಅಂದರೆ ಏನು ? Coffee Coffee day ಅಂತಲೇ ಆಗುತ್ತದೆ ಅಲ್ಲವೇ ?! ರಾಜೀನಾಮೆ ಅಂದರೆ ಮೂಲದಲ್ಲಿ ಪಾರಸಿ ಭಾಷೆಯಲ್ಲಿ ರಾಜೀ + ನಾಮಾ , ರಾಜೀ = compromise , ನಾಮಾ ಅಂದರೆ ಬರಹದ ರೂಪದಲ್ಲಿ ಇರುವುದು. ಅಂದರೆ ಬರಹದ ರೂಪದಲ್ಲಿರುವ ಕಾಂಪ್ರೊಮೈಸ್. ಮೊನ್ನೆ ಮಂತ್ರಿ ಜಾರ್ಜ್ ಕೊಟ್ಟ ರಾಜೀನಾಮೆ ಪತ್ರ ಬರಹದ ರೂಪದಲ್ಲಿ ಮಾಡಿದ ರಾಜಿಯೇ ಒಂದು ರೀತಿಯಲ್ಲಿ!

ಕಣ್ಣಿಗೆ ಅಡಕವಾದದ್ದು ಕಣ್ಣಡಕ, ಜನರ ಬಾಯಲ್ಲಿ ಕನ್ನಡಕ ಆಗಿದೆ. ಮಸೂರ ಪಾಕ ಅಂದರೆ ಕಡಲೆ ಹಿಟ್ಟಿನ ಪಾಕ, ಈ ಮಸೂರ ಪಾಕ ಜನರ ಬಾಯಿಗೆ ಸಿಕ್ಕಿ ಮೈಸೂರು ಪಾಕ್ ಆಗಿದೆ ಅಂತ ವೈ ಎನ್ಕೆ ಒಂದು ಕಡೆ ಬರೆದಿದ್ದಾರೆ.
ಅಂತೂ ಯಾವುದೇ ಒಂದು ಶಬ್ದಕ್ಕೆ ಎಲ್ಲಾ ಕಾಲಕ್ಕೂ ಒಂದೇ ಅರ್ಥ ಇರಬೇಕೆಂದೇನೂ ಇಲ್ಲ. ಒಂದು ಶಬ್ದದ ಅರ್ಥ ಬದಲಾಗದ ಹಾಗೆ ಕಾಯುವ ಕಾವಲುಗಾರರು, ಪೊಲೀಸರು ಇಲ್ಲ. ಹಾಗಾಗಿ ಹೀಗೆಲ್ಲ ಆಗದೆ ವಿಧಿಯಿಲ್ಲ!

No comments:

Post a Comment