Thursday 11 August 2016

ನಿಂದಕರಿರಬೇಕೇ

ಇದು ಲೇಖನ ಅಂತ ಬರೆದದ್ದಲ್ಲ, ಎರಡು ಮೂರು ಕಡೆ ಬೇರೆ ಬೇರೆ ಸಂಧರ್ಭಗಳಲ್ಲಿ ಹಾಕಿದ ಕಾಂಮೆಂಟುಗಳನ್ನು ಸೇರಿಸಿ, ಜೋಡಿಸಿದ ವಿಚಾರಗಳನ್ನು ಇಲ್ಲಿ ಗುಡ್ಡೆ ಹಾಕಿದ್ದೇನೆ.
"ಕನ್ನಡ ಸಿನೆಮಾಗಳ ಗುಣಮಟ್ಟ ಸರಿಯಾಗಿಲ್ಲ. ಕೆಟ್ಟ ಕೆಟ್ಟ ಕತೆಗಳನ್ನು ಚಿತ್ರೀಕರಿಸುತ್ತಿದ್ದಾರೆ. ಯಾವೊಂದು ಸಿನೆಮಾನೂ ನೋಡಕ್ಕಾಗಲ್ಲ. ಅವುಗಳ ಹೆಸರು ಕೇಳಿದರೇ ಸಿಟ್ಟು ಬರುತ್ತೆ ಅಂತ ನಮ್ಮೂರಿನ ಮಂದಿ ಮಾತ್ರವಲ್ಲ, ಮೈಸೂರಿನ ಮಧ್ಯವಯಸ್ಕರು ಕೂಡ ಮಾತಾಡಲು ಶುರು ಮಾಡಿದ್ದಾರೆ. ಅಂಥವರೊಬ್ಬರನ್ನು ನಿಲ್ಲಿಸಿ, ನೀವು ಇತ್ತೀಚೆಗೆ ನೋಡಿದ ಸಿನೆಮಾ ಯಾವುದು ಎಂದು ಕೇಳಿದರೆ, ನಾನು ಸಿನೆಮಾ ನೋಡದೇ ಹತ್ತು ವರ್ಷವಾಯಿತು ಅಂದುಬಿಟ್ಟರು. ಮತ್ತೆ ಸಿನೆಮಾ ಕೆಟ್ಟದಾಗಿದೆ ಅಂತ ಹೇಗೆ ಹೇಳುತ್ತೀರಿ ಎಂದು ಮರುಪ್ರಶ್ನಿಸಿದರೆ, ಟೀವೀಲಿ ನೋಡ್ತೀವಲ್ಲ ಅಂತ ಸಮಜಾಯಿಷಿ ಕೊಟ್ಟರು." -----> ಜೋಗಿ
ಹೊಸತಾಗಿ ಏನು ವ್ಯಾಪಾರ ಶುರು ಮಾಡಬಹುದು ಕರ್ನಾಟಕದಲ್ಲಿ ? ಕನ್ನಡ ಚಿತ್ರಗಳನ್ನು ಬೈಯ್ಯುವುದು ಹೇಗೆ ಅಂತ ಒಂದು ಕೋಚಿಂಗ್ ಕ್ಲಾಸು ಶುರು ಮಾಡಿದರೆ ನಿಮಗೆ ಸೊಳ್ಳೆ ಹೊಡೆಯುವುದಕ್ಕೂ ಸಮಯ ಇಲ್ಲ ಅನ್ನಬಹುದಾದಷ್ಟು ಜನ ಬರಬಹುದು! ಇರಲಿ. ಬಯ್ಯುವವರಲ್ಲಿ ಯಾವ್ಯಾವ ತರ ಇರುತ್ತಾರೆ? ತೆಗಳುವವರು ಯಾವ ವಿಚಾರಗಳನ್ನು ಮನಸ್ಸಲ್ಲಿ ಇಟ್ಟುಕೊಂಡರೆ ಒಳ್ಳೆಯದು ?
ಕನ್ನಡ ಚಿತ್ರರಂಗ ಜಗತ್ತಿನ ಎಂಟು ಅದ್ಭುತಗಳಲ್ಲಿ ಒಂದು ಅಂತೇನಲ್ಲ, ಆದರೆ ಬಹಳಷ್ಟು ಜನ ಏನೂ ಗೊತ್ತಿಲ್ಲದೇ ಆಡಿಕೊಳ್ಳುತ್ತಾರೆ ಅನ್ನುವುದು ನಿಜ. ಚಿತ್ರರಂಗದ ಬಗ್ಗೆ ಜನರಿಗೆ ಸಾಕಷ್ಟು ಮೂಢನಂಬಿಕೆಗಳು ಇವೆ.
"ಬರೀ ಡಬಲ್ ಮೀನಿಂಗ್ ಚಿತ್ರಗಳೇ ಬರ್ತವೆ" ಅಂದರು ಒಬ್ಬರು, ಸರಿ, ಕಳೆದ ಎರಡು ವರ್ಷಗಳಲ್ಲಿ ಸುಮಾರು ಇನ್ನೂರೈವತ್ತು ಚಿತ್ರಗಳು ಬಂದಿರಬೇಕು, ಅದರಲ್ಲಿ ಹತ್ತು ಡಬಲ್ ಮೀನಿಂಗ್ ಚಿತ್ರಗಳ ಹೆಸರು ಹೇಳಿ ಅಂದೆ. ಅವರೂ ಕಡೆಯ ಕನ್ನಡ ಚಿತ್ರ ನೋಡಿದ್ದು ಗಾಂಧೀಜಿ ಕ್ವಿಟ್ ಇಂಡಿಯಾ ಚಳುವಳಿ ಮಾಡಿದ ಕಾಲದಲ್ಲಿ ಅಂತ ಗೊತ್ತಾಯಿತು. "ಕನ್ನಡದಲ್ಲಿ ಬರೀ ಮಚ್ಚು ಲಾಂಗ್ ಚಿತ್ರಗಳೇ ಬರ್ತವೆ" ಅಂತ ಮತ್ತೊಬ್ಬರು ಗುಡುಗಿದರು. "ಹತ್ತು" ಕೇಳಿ ಪೇಚಿಗೆ ಸಿಲುಕಿಸುವುದು ಬೇಡ ಅಂತ ಸ್ವಲ್ಪ ರಿಯಾಯಿತಿ ತೋರಿಸಿ, ನೀವು ಇತ್ತೀಚೆಗೆ ನೋಡಿರೋ ಮಚ್ಚು ಲಾಂಗು ಚಿತ್ರ ಯಾವುದು ಅಂತ ಕೇಳಿದೆ, ಜೋಗಿ ಬಂದಿತ್ತಲ್ಲ ಅಂದರು ! ಅವರು ಜೋಗಿಯನ್ನೂ ನೋಡಿರಲಿಲ್ಲ , ಆ ಮಾತು ಬೇರೆ.
ಕನ್ನಡದಲ್ಲಿ ಬರೀ violent ಚಿತ್ರಗಳು ಬರ್ತವೆ ಅನ್ನುವವರು Tarantino ಏನದ್ಭುತ ಅಂತಲೋ Game of thrones ಏನು ಸಕತ್ತಾಗಿದೆ ಅಂತ ಹೇಳುವವರೇ ಆಗಿರುತ್ತಾರೆ. ಕನ್ನಡದಲ್ಲಿ ಪೂಜಾ ಗಾಂಧೀ ಬೆನ್ನು ತೋರಿಸಿದ್ದು ಮಹಾಪರಾಧ ಅನ್ನುವವರು Wolf of wall street ಅನ್ನು ಒಂದು ಕಲಾ ಕೃತಿ ಅಂತ ಆರಾಧಿಸಿರುತ್ತಾರೆ. ಈ ಆಷಾಡಭೂತಿತನ (hypocrisy) ಕನ್ನಡಿಗರಿಗೇ ವಿಶಿಷ್ಟವಾದದ್ದು. ಬೇರೆ ಯಾರು ಮಾಡಿದರೂ ಕ್ರೀಂ ಬಿಸ್ಕತ್ತು, ಕನ್ನಡಿಗರು ಮಾಡಿದರೆ ಮಾತ್ರ ಮಾರಿ ಬಿಸ್ಕತ್ತು ಅನ್ನುವ, "ಮನೆಗೆ ಮಾರಿ(!) ಊರಿಗೆ ಉಪಕಾರಿ" ಆಗುವ ಗುಣ ಕನ್ನಡಿಗರಿಗೆ ಮೊದಲಿಂದಲೂ ಇದೆ.
ಹಾಗಂತ ನಮ್ಮದು ಶ್ರೇಷ್ಟ ಚಿತ್ರರಂಗ ಅಂತಲೂ ಹೇಳುವುದಿಲ್ಲ, ಸಮಸ್ಯೆಗಳು ಸಾಕಷ್ಟು ಇವೆ. ಕಳಪೆ ಚಿತ್ರಗಳು, ಒಳ್ಳೆ ಪ್ರಯತ್ನಗಳು, ಅತ್ತ್ಯುತ್ತಮ ಚಿತ್ರಗಳು ಎಲ್ಲವೂ ಇಲ್ಲಿ ಇವೆ. ಕನ್ನಡ ಚಿತ್ರಗಳನ್ನು ನಾನೂ ಆಗೀಗ ಬಯ್ಯುವವನೇ. ಆದರೆ ನೋಡದೇ ಆಡುವವರು ರೂಡಿಯೊಳಗುತ್ತಮರು ಅಂತ ಆಗಿರುವುದು ನೂರಕ್ಕೆ ನೂರು ಸತ್ಯ!
ಕನ್ನಡ ಸಿನೆಮಾವನ್ನ ಬಯ್ಯಬಾರದು ಅಂತ ನಾನು ಹೇಳಲಾರೆ, ಆದರೆ ಇಷ್ಟು ಬೈಬೇಡಿ, ಹೀಗೆ ಉಗೀಬೇಡಿ ಅನ್ನುವ ಕೆಲವರ ಕಳಕಳಿ ಯಾವುದರ ಬಗ್ಗೆ ಅಂತ ಹೇಳ್ತೇನೆ. ಟಾಪ್ ೫ ಹೀರೋಗಳನ್ನ ನಾವು ನೀವು ಏನೂ ಮಾಡಲಾರೆವು, ಅತ್ಯಂತ ಕಳಪೆಯಾಗಿದೆ ಅಂತ ಉಗಿಸಿಕೊಂಡ ಅಂಬರೀಷ ಎಷ್ಟು ದುಡ್ಡು ಮಾಡಿತು ಅಂತ ನಿಮಗೆ ಗೊತ್ತೇ ಇದೆ.
ನಮ್ಮ ಕಳಕಳಿ ಇರುವುದು Word of mouth ಮತ್ತು ಪತ್ರಿಕಾ ವಿಮರ್ಶೆಗಳಿಂದ ಮೇಲೆ ಬೀಳಬಹುದಾದ/ಸಾಯಬಹುದಾದ ಸಿನೆಮಾಗಳ ಬಗ್ಗೆ ಮಾತ್ರ. ಈಗ ರಂಗಿತರಂಗವನ್ನ ತಗೊಳ್ಳಿ. ಇದಕ್ಕೆ ಮೊದಲ ಹತ್ತು ಹದಿನೈದು ಸಾವಿರ ಜನ ರಕ್ಷಿತ್ ಶೆಟ್ಟಿ ಮಾತು ಕೇಳಿಯೇ ಬಂದವರು. ರಕ್ಷಿತ್, "ಸಿನಿಮಾ ಚೆನ್ನಾಗಿಲ್ಲ ಗುರೂ " ಅನ್ನುವ ಧಾಟಿಯಲ್ಲಿ ಬರೆದಿದ್ದರೆ ಅದರ ಕತೆ ಮುಗಿದೇ ಹೋಗುತ್ತಿತ್ತು. ಸುತ್ತಿಗೆಗೆ ಎಲ್ಲ ಕಡೆ ಮೊಳೆಯೇ ಕಾಣುತ್ತದೆ ಅನ್ನುವ ತರ ಸುತ್ತಿಗೆಗಳಾಗದೆ ಇಂತಹ ಚಿತ್ರಗಳಿಗೆ ಸ್ವಲ್ಪ ಕರುಣೆ ತೋರಿಸಿ ಅಂತ.
ಇಲ್ಲಿ ವೈಯಕ್ತಿಕ ಅಭಿರುಚಿ (ಪರ್ಸನಲ್ ಟೇಸ್ಟ್)ಯ ವಿಚಾರವೂ ಬರ್ತದೆ, ನಂಗೆ Django Unchained ಇಷ್ಟ ಆಗ್ಲಿಲ್ಲ, ಇಂಗ್ಮಾರ್ ಬರ್ಗಮನ್ ನ Autumn Sonata ನಿದ್ದೆ ಬರಿಸಿತು, ಹಾಗಂತ ಇವು ದರಿದ್ರ ಸಿನೆಮಾಗಳು ಅಂತ ಹೇಳಲಾರೆ. ಸಿನೆಮಾ ಡಬ್ಬಾ ಅನ್ನುವುದಕ್ಕೂ ನನ್ನ ಟೇಸ್ಟ್ ಗೆ ತಕ್ಕ ಹಾಗೆ ಇಲ್ಲ ಅನ್ನೋದಕ್ಕೂ ವ್ಯತ್ಯಾಸ ಇದೆ, ತುಂಬಾ ಜನ ಇದನ್ನು ಮರೆತೇ ಬಿಡುತ್ತಾರೆ.
ಎರಡನೇ ವಿಚಾರ ಒಂದು ಸಿನೆಮಾಕ್ಕೆ ತನ್ನನ್ನು ತಾನು ಪ್ರೂವ್ ಮಾಡಿಕೊಳ್ಳೋದಕ್ಕೆ ಎಷ್ಟು ಕಡಿಮೆ ಸಮಯ ಇರ್ತದೆ ಅನ್ನೋದು. ಈಶ್ವರೀಲಿ ಮಾಸ್ಟರ್ ಪೀಸ್ ಎರಡನೇ ವಾರದ ಶೇರ್ ಏಳು ಲಕ್ಷ ಇತ್ತು(ಶೇರ್ Gross ಅಲ್ಲ ), ಆದರೂ ಅದನ್ನ ಕಿತ್ತು ಬಿಸಾಡಿದರು. ಯಾವ ಕಾರಣಕ್ಕೆ ಅಂತ ನಾನು ಬಾಯಿ ಬಿಟ್ಟು ಹೇಳುವುದಿಲ್ಲ. ಯಶ್ ನಂತ ಓಡುವ ಕುದುರೆಗೆ ಓಡಿದಾಗಲೂ ಹೀಗೆ ಅಂದ್ರೆ ಹೊಸಬರ ಗತಿ ಹೇಗೆ ಅಂತ ಊಹಿಸಿಕೊಳ್ಳಿ. ಈಗ ಫೇಸ್ಬುಕ್ ಒಂದು ವಾರದಲ್ಲಿ ಕನಿಷ್ಟ ಒಂದು ಸಾವಿರ ಲೈಕ್ ಬರದೇ ಹೋದರೆ ನಮ್ ಪೋಸ್ಟ್ ಗಳನ್ನ ಡಿಲೀಟ್ ಮಾಡಿದರೆ ನಮ್ಗೆ ಹೇಗಾಗಬಹುದು ? ಬಾಹುಬಲಿಗೆ ಶೋ ಕೊಡುವುದಕ್ಕೆ ಚೆನ್ನಾಗೇ ಓಡುತ್ತಿದ್ದ ರಂಗಿಗೆ ಹೀಗೇ ಆಗಿತ್ತು, ಶೋ ಉಳಿಸಿಕೊಳ್ಳುದಕ್ಕೆ ಎಷ್ಟೆಲ್ಲಾ ಬಡಿದಾಡಬೇಕಾಯಿತು ಅಂತ ಹೇಳಿದರೆ ಅದೇ ಒಂದು ದೊಡ್ಡ ಕತೆ ಆಗ್ತದೆ. ಮುಂಗಾರು ಮಳೆಗೆ ಮೊದಲ ವಾರ ೩೦% ಕೂಡ occupancy ಇರಲಿಲ್ಲ. ಜನ ಬಂದದ್ದು ಐದು ವಾರ ಆದ ಮೇಲೆಯೇ, ಎರಡನೇ ವಾರಕ್ಕೆ ಒಡ್ಲಿಲ್ಲ ಅಂತ ಎತ್ತಂಗಡಿ ಮಾಡಿದ್ರೆ ಅದು ಅಲ್ಲೇ ಕೊನೆಯುಸಿರು ಎಳೀತಾ ಇತ್ತು . ಹೀಗಿರುವಾಗ ಮೊದಲ ದಿನವೇ ನಾವು ಕಲ್ಲು ಎತ್ತಾಕಿದರೆ ಅಷ್ಟೇ. ಎರಡನೇ ವಾರಕ್ಕೆ ಸಿನಿಮಾ ಕಿತ್ತು ಬಿಸಾಕುತ್ತಾರೆ, ಚಿತ್ರಕ್ಕೆ ನಿಜವಾದ Word of mouth ಏನಿತ್ತು ಅಂತ ಗೊತ್ತಾಗುವ ಮೊದಲೇ ಅದು ಸತ್ತಿರುತ್ತದೆ.
ಇನ್ನು ಸುತ್ತಿಗೆ ಮೊಳೆಗಳ ವಿಚಾರ. Mihir Fadnavis ಅಂತ ಒಬ್ಬ ಹಿಂದಿ ಚಿತ್ರಗಳಿಗೆ ವಿಮರ್ಶೆ ಬರೀತಾನೆ, ಆ ಪಾರ್ಟಿ ಹೆಂಗೆ ಅಂದ್ರೆ ನೂರು ಚಿತ್ರ ನೋಡಿದ್ರೆ ಅದ್ರಲ್ಲಿ ತೊಂಬತ್ತೆಂಟು ಅವ್ನಿಗೆ ಇಷ್ಟ ಆಗಿರೋದಿಲ್ಲ, ವಿಮರ್ಶೆ ಹೆಸರಲ್ಲಿ ಬಂದದ್ದನ್ನೆಲ್ಲಾ ಕೊಚ್ಚಿ ಬಿಸಾಕ್ತಾ ಇರೋದೇ ಅವನ ಕೆಲಸ, "ಹೆಂಗೆ ಚಚ್ಚಿದೆ ನೋಡಿ" ಅನ್ನುವ ರಣೋತ್ಸಾಹ ಬಿಟ್ರೆ ನಂಗೆ ಏನೂ ಕಾಣೋದಿಲ್ಲ ಅವನಲ್ಲಿ. ಬರೋ ನೂರಿಪ್ಪತ್ತರಲ್ಲಿ ನೂರ ಹದಿನೆಂಟು ಇಷ್ಟ ಆಗೋಲ್ಲ ಅನ್ನುವವರು, ಹಿಂದಿ ನೋಡುವುದು ಬಿಟ್ಟು ಅವರಿಗೆ ಇಷ್ಟ ಆಗುವ ಫ್ರೆಂಚ್, ಇರಾನಿಯನ್ ಇತ್ಯಾದಿ ನೋಡುವುದು ಒಳ್ಳೇದು.
ಇನ್ನು ಪೂರ್ವಾಪರ ಸಂದರ್ಭ(Context )ದ ವಿಚಾರ, ಕೆಲವರಿಗೆ ಒಂದು ಸಿನೆಮಾ ಒಂದು Contextನಲ್ಲಿ ತಯಾರಾಗಿರುತ್ತದೆ ಅಂತಲೇ ಗೊತ್ತಾಗುವುದಿಲ್ಲ. "ಮಾಸ್ಟರ್ ಪೀಸ್ ನೋಡಿ ಎಷ್ಟು ದರಿದ್ರವಾಗಿದೆ, ಕಾಸರವಳ್ಳಿನೇ ನಮ್ ದೇವ್ರು" ಅನ್ನೋ ಜಾತಿ ಇವರು . ರೋಹಿತ್ ಶೆಟ್ಟಿಯ ಚಿತ್ರಕ್ಕೂ ಅನುರಾಗ್ ಕಶ್ಯಪ್ ಚಿತ್ರಕ್ಕೂ ಹೋಲಿಕೆ ಮಾಡಬಾರದು. ರೋಹಿತ್ ಶೆಟ್ಟಿ ಒಂದು ಚಿತ್ರವನ್ನ ಯಾಕೆ, ಯಾರಿಗಾಗಿ ಮತ್ತು ಹೇಗೆ ಮಾಡಿರುತ್ತಾನೆ ಹಾಗೂ ಅನುರಾಗ್ ಕಶ್ಯಪ್ ಒಂದು ಚಿತ್ರವನ್ನ ಯಾವ ತರದವರಿಗೆ ಮಾಡಿರುತ್ತಾನೆ ಅನ್ನುವುದಕ್ಕೂ ವ್ಯತ್ಯಾಸ ಇರುತ್ತದೆ. ರೋಹಿತ್ ಶೆಟ್ಟಿ ತಾನು ಏನು ಮಾಡಬೇಕು ಅಂತ ಹೊರಟಿದ್ದಾನೋ ಅದನ್ನಾದರೂ ಮಾಡಿದ್ದಾನ ಅಂತಷ್ಟೇ ನೋಡಬೇಕು, ರೋಹಿತ್ ಶೆಟ್ಟಿಯ ಚಿತ್ರ Christopher Nolan ಮಟ್ಟಕ್ಕೆ ಇಲ್ಲ ಅಂತ ಹಲುಬಿದರೆ ತಪ್ಪು ಯಾರದ್ದು ?
ಇನ್ನು ನಿರಭಿಮಾನದ ಪ್ರಶ್ನೆ. Nenokkadine ಅಂತ ಒಂದು ತೆಲುಗು ಪಿಚ್ಚರ್ ಬಂದಿತ್ತು ಅದು ಸೂಪರ್ ಫ್ಲಾಪ್, ಆದರೂ ಸುಮಾರು ಅರುವತ್ತು ಕೋಟಿ ಬಿಸಿನೆಸ್ ಮಾಡಿತ್ತು, ನಮ್ಮ ಸೂಪರ್ ಹಿಟ್ ಗಳೂ ಇಷ್ಟು ಮಾಡುವುದಿಲ್ಲ. ತೆಲುಗು ಪ್ರೇಕ್ಷಕ looks for a reason to watch the film. ಕನ್ನಡ ಪ್ರೇಕ್ಷಕ looks for an excuse to skip the film, ಸಿನಿಮಾ ನೋಡುವುದಕ್ಕೆ ಏನಾದರೂ ಕಾರಣ ಸಿಗುತ್ತದೆಯೇ ಅಂತ ಹುಡುಕುವ ಸಿನಿಮಾ ಪ್ರೀತಿ ತೆಲುಗು ಪ್ರೇಕ್ಷಕನದ್ದು, ಸಿನಿಮಾ ನೋಡದೇ ಇರಲಿಕ್ಕೆ ಏನಾದರೂ ನೆಪ ಸಿಗುತ್ತದೆಯೇ ಅನ್ನುವ ರೀತಿ ಕನ್ನಡಿಗನದ್ದು . ಕನ್ನಡ ಸಿನಿಮಾ ಕ್ಕೆ ನಾಲ್ಕು ಒಳ್ಳೆ ವಿಮರ್ಷೆ ಬಂದು, ನೀವು ಒಬ್ಬರು ಬೈದರೆ, ಕನ್ನಡ ಪ್ರೇಕ್ಷಕ ನಾಲ್ಕು ಹೊಗಳಿರೋ ವಿಮರ್ಷೆ ಮರೆತು "ನೋಡ್ರೀ ಇವ್ರು ಹೇಗೆ ಉಗಿದಿದ್ದಾರೆ" ಅಂತ ನಿಮ್ಮ ರಿವ್ಯೂ ಅನ್ನೇ ನೆಚ್ಚಿಕೊಳ್ತಾನೆ, ಇದು ಕನ್ನಡಿಗರ ಗುಣ. ಸಿನಿಮಾ ಅಂತಲ್ಲ ಸಾಹಿತ್ಯದಂತ ಕ್ಷೇತ್ರದಲ್ಲೂ ಹೀಗಾಗುತ್ತದೆ. ತೆಲುಗಿನಲ್ಲೇನೂ world class ಚಿತ್ರಗಳು ಬರುತ್ತಿಲ್ಲ, ಆದರೂ ಅದು ನಮಗಿಂತ ಎಷ್ಟು ದೊಡ್ಡ ಇಂಡಸ್ಟ್ರಿ ನೋಡಿ. ಇದು ಪ್ರೇಕ್ಷಕರ ಗುಣ. ಕನ್ನಡಿಗರಿಗೆ ನೆಗೆಟಿವ್ ಅಂಶ ಹುಡುಕಿ ಕೀಳರಿಮೆ (Inferiority) ಬೆಳೆಸಿಕೊಳ್ಳುವ ಸ್ವಭಾವ ಮೊದಲಿಂದಲೂ ಇದೆ.
ಕಬಾಲಿ ಬಂತು ಅಂತ ಇಲ್ಲಿನವರು ಅಳುವಾಗ "ಹೀಗೆ ತಮ್ಮ ಸಿನೆಮಾ ನೋಡ್ರೋ ನೋಡ್ರೋ ಎಂದು ಬೇಡಿ ಕೊಂಡು ಕೈಮುಗಿದು ಅಳುವ ಸೀನನ್ನು ತಮಿಳುನಾಡಲ್ಲಿ, ಹೈದರಾಬಾದಲ್ಲಿ, ಬೇಡ ಮಲಯಾಳಿಗಳ ನೆಲದಲ್ಲಿ ನೋಡಿಲ್ಲ" ಅಂದರು ಒಬ್ಬರು. ಇದು ನಿಜ, ಹಾಗೆ ಕೈ ಮುಗಿದು ಅಳುವ ಪರಿಸ್ಥಿತಿಯನ್ನು ಅಲ್ಲಿನ ಪ್ರೇಕ್ಷಕ ನಿರ್ಮಿಸಿಲ್ಲ ಅನ್ನುವುದೂ ಅಷ್ಟೇ ನಿಜ. ಶ್ರೀಮಂತ ಮಾಲ್ ಕಟ್ಟಿಸುತ್ತಾನೆ, ಬಡವ ಕಿರಾಣಿ ಅಂಗಡಿ ಇಡುತ್ತಾನೆ, ನಮ್ಮ ಅಂಗಡಿಗೂ ಬನ್ನಿ ಅಂತ ಅಳುವ ಪ್ರಸಕ್ತಿ ಬರುವುದು ಕಿರಾಣಿ ಅಂಗಡಿಯವನಿಗೇ. ಒಟ್ಟಿನಲಿ level playing field ಇಲ್ಲ ಅನ್ನುವುದು ನಮ್ಮ ಕಳಕಳಿ. ತಮಿಳಿಗೋ, ತೆಲುಗಿಗೋ ಅಷ್ಟು ದೊಡ್ಡ ಮಾರುಕಟ್ಟೆ ಇರುವುದು ಗುಣಮಟ್ಟದ ಫಲವಾಗಿಯೋ, ಮಾರ್ಕೆಟಿಂಗ್ genius ನ ಫಲವಾಗಿಯೋ ಅಲ್ಲ. ತಮಿಳಿನಲ್ಲೋ , ತೆಲುಗುನಲ್ಲೋ ಜಗತ್ತೇ ಬೆರಗಾಗಿ ನೋಡುವಂತ್ ಮಾರ್ಕೆಟಿಂಗ್ ಕಲೆ ಏನೂ ಇಲ್ಲ. ತುಂಬ ದುಡ್ಡು ಸುರಿದರೆ ಮಾರ್ಕೆಟಿಂಗ್ ಮಾಡುವುದು ಕಷ್ಟವೇನಲ್ಲ.
ಇದು ಬರೀ ಗುಣಮಟ್ಟದ ಪ್ರಶ್ನೆಯೂ ಅಲ್ಲ, ಎಂಬತ್ತರ ದಶಕದಲ್ಲಿ ಹಿಂದಿಯಲ್ಲಿ ಎಷ್ಟು ಕಳಪೆ ಚಿತ್ರಗಳು ಬಂದಿದ್ದವು, ಮರಾಠಿ ಚಿತ್ರೋದ್ಯಮ ಮುಚ್ಚಿಯೇ ಹೋಯಿತು ಅಂತ ಆಗಿತ್ತು, ಮಲಯಾಳ ಚಿತ್ರಗಳು ಹೊಸದೇನು ಬರದೇ ಗತವೈಭವ ವೇ ಗತಿ ಅಂದ ಕಾಲ ಇತ್ತು . ಎಲ್ಲ ಕಡೆಯೂ ಇಲ್ಲಿರುವುದಕ್ಕಿಂತ ಹೆಚ್ಚು ಒಳ್ಳೆಯದು ಇನ್ನೊಂದು ಕಡೆ ಇದೆ ಅಂತ ತೋರಿಸಲು ಸಾಧ್ಯ ಇದೆ. ತೆಲುಗಿಗಿಂತ ಒಳ್ಳೆ ಚಿತ್ರಗಳು ಬೇರೆ ಕಡೆ ಬಂದರೂ ತೆಲುಗು ಪ್ರೇಕ್ಷಕ ಮನೆಯಾಕೆಯನ್ನು ಬಿಟ್ಟು ಪಕ್ಕದ ಮನೆಯಾಕೆಯ ಹಿಂದೆ ಹೋಗುವುದಿಲ್ಲ, ತಮಿಳಿಗಿಂತ ಒಳ್ಳೆ ಚಿತ್ರ ಹಾಲಿವುಡ್ಡಿನಲ್ಲಿ ಬಂದರೂ ತಮಿಳು ಪ್ರೇಕ್ಷಕ ತಮಿಳು ಚಿತ್ರಗಳನ್ನು ಯಾವತ್ತೂ ಅನಾಥವಾಗಿಸಿಲ್ಲ. ಉತ್ತರ ಪ್ರದೇಶದಲ್ಲಿ ಹಿಂದಿ ಚಿತ್ರಕ್ಕೆ ಸ್ಕ್ರೀನ್ ಸಿಗದೇ ಕನ್ನಡ ಚಿತ್ರಕ್ಕೆ ಐನೂರು ಶೋ ಸಿಕ್ಕಿದ್ದು ಇತಿಹಾಸದಲ್ಲೇ ಇಲ್ಲ, ಚೆನ್ನೈಯಲ್ಲಿ ಮಲಯಾಳಿ ಚಿತ್ರಕ್ಕೆ ನಾನೂರು ಶೋ ಕೊಟ್ಟು ತಮಿಳು ಚಿತ್ರಕ್ಕೆ ಚಿತ್ರ ಮಂದಿರ ಇಲ್ಲ ಅನ್ನುವ ಸನ್ನಿವೇಶ ಮೊದಲೂ ಬಂದಿಲ್ಲ, ಇನ್ನು ಮುಂದೆಯೂ ಬರುವುದಿಲ್ಲ, ಅಷ್ಟು ಉದಾರಿ ಕನ್ನಡಿಗ ಮಾತ್ರ! ಔದಾರ್ಯ ಒಳ್ಳೆಯದೇ, ಳ್ಳೆಯ ಪರಭಾಷಾ ಚಿತ್ರಗಳನ್ನು ಖಂಡಿತ ನೋಡೋಣ, ಅವುಗಳಿಗೆ ಇಲ್ಲಿ ಥಿಯೇಟರೂ ಕೊಡೋಣ. ನಾವು ಎಲ್ಲವನ್ನೂ ಗೌರವಿಸೋಣ, ಸ್ವೀಕರಿಸೋಣ, ಆದರೆ ಇಲ್ಲಿಯದ್ದು ಮಾತ್ರ ಕಳಪೆ, ಇಲ್ಲಿನದ್ದನ್ನು ಕೊಂದಾದರೂ ಬೇರೆಯದ್ದನ್ನು ಮೆರೆಸಬೇಕು ಅನ್ನುವ ಭಾವ ಬೇಡ.
"ಆಹಾ ಎಷ್ಟು ಚೆನ್ನಾಗಿದೆ ಎಂದು ಹೇಳಬಹುದಾದ ಹಾಸ್ಯ ಮತ್ತು ಹಾಡನ್ನು ಇಲ್ಲಿ ನಾನು ಕೇಳಿ ಯಾವುದೋ ಕಾಲ ಆಯಿತು" ಅಂದರು ಒಬ್ಬರು . ಇದರಲ್ಲಿ ಸತ್ಯ ಇಲ್ಲದಿಲ್ಲ ಅನ್ನಲಾರೆ . ಆದರೆ ನ ಧೀಮ್ ಧೀಮ್ ತನ , ಹೆಸರು ಪೂರ್ತಿ ಹೇಳದೆ, ಪರವಶನಾದೆನು , ಬಿದ್ದಲ್ಲೆ ಬೇರೂರಿ, ಕೆಂಡಸಂಪಿಗೆ , ಉಳಿದವರು ಕಂಡಂತೆ, ಜಟ್ಟ , ಗೋಧಿ ಬಣ್ಣ ಈ ಚಿತ್ರಗಳ ಹಾಡುಗಳನ್ನು ನೀವು ಕೇಳಿಲ್ಲವೇ ಅಂತ ಮರುಪ್ರಶ್ನೆ ಹಾಕಬಹುದು. ಹಿಂದಿ, ತೆಲುಗು , ತಮಿಳು ಪ್ರೇಕ್ಷಕನೂ ಆಹಾ ಎಷ್ಟು ಚೆನ್ನಾಗಿದೆ ಎಂದು ಹೇಳಬಹುದಾದ ಹಾಸ್ಯ ಮತ್ತು ಹಾಡನ್ನು ಕೇಳಿ ವರ್ಷಗಳೇ ಆಗಿವೆ, ಆದರೆ ಆತ ತನ್ನ ಭಾಷೆಯ ಚಿತ್ರ ನೋಡುವುದು ಬಿಟ್ಟಿಲ್ಲ.

“ಎಲ್ಲಾ ಇಂಡಸ್ಟ್ರಿ ಅಲ್ಲೂ ಕೆಟ್ಟ ಫಿಲಂಸ್ ಬರ್ತಾವೆ, ನಮ್ಮದೇನೂ ಸ್ಪೆಷಲ್ ಅಲ್ಲ” ಅಂತ Denial  ಮೋಡ್ ನಲ್ಲಿ ಇದನ್ನೆಲ್ಲ ಹೇಳಿದ್ದಲ್ಲ. ಕಾಲ ಕಾಲಕ್ಕೆ ಒಳ್ಳೆಯದು ಕೆಟ್ಟದು ಎಲ್ಲ ಕಡೆ ಬಂದಿದೆ. ಆದರೆ ಕನ್ನಡಿಗರು ಮತ್ತು ಉಳಿದವರು ಕೆಟ್ಟದ್ದಕ್ಕೆ ರಿಯಾಕ್ಟ್ ಮಾಡಿರುವ ರೀತಿಯಲ್ಲಿ ದೊಡ್ಡ ವ್ಯತ್ಯಾಸವೇ ಇದೆ. ಈಗ ಬಾಲಿವುಡ್ಡನ್ನೇ ತಗೊಂಡರೆ, ಅಲ್ಲಿ ಎಂಬತ್ತರ ದಶಕ ತೀರಾ mediocre ಚಿತ್ರಗಳು ಬಂದ ದಶಕ, ತೊಂಬತ್ತರ ದಶಕದಲ್ಲೂ ಹೇಳಿಕೊಳ್ಳುವಂತದ್ದು ಹೆಚ್ಚು ಏನೂ ಬರಲಿಲ್ಲ. ತುಂಬಾ ಕಡೆ ಯಾವುದೇ ನಾಚಿಕೆ ಇಲ್ಲದೆ ಹಾಲಿವುಡ್ ಕ್ಯಾಸೆಟ್ಗಳನ್ನು ಶೂಟಿಂಗ್ ಜಾಗಕ್ಕೆ ತಂದು ನೋಡಿಕೊಂಡೇ ಶೂಟಿಂಗ್ ಮಾಡಿದ, ಆ ಮಟ್ಟದ ಕಾಪಿವೀರರು ಇದ್ದರಂತೆ. ಸ್ಕ್ರಿಪ್ಟ್ ಮಾಡುವ ಸಂಪ್ರದಾಯವೇ ನಿಂತು ಹೋಗಿತ್ತಂತೆ, ಶಾರುಖ್ ಖಾನ್ bound ಸ್ಕ್ರಿಪ್ಟ್ ಇಲ್ಲದೆ ಚಿತ್ರ ಒಪ್ಪಿಕೊಳ್ಳುವುದಿಲ್ಲ ಅಂದಾಗ, "ಈ ಮನುಷ್ಯನಿಗೆ ದುರಹಂಕಾರ" ಅಂದಿದ್ದರಂತೆ! ಕುಚ್ ಕುಚ್ ಹೋತಾ ಹೈ ಬಂದಾಗ ಇದು ಹೊಸತನದ ಹರಿಕಾರ ಅನ್ನುವ ಪರಿಸ್ಥಿತಿ ಇತ್ತು! ಇಪ್ಪತ್ತು ವರ್ಷಗಳಲ್ಲಿ ಒಂದು ಎರಡು ಸಾವಿರ ಚಿತ್ರಗಳು ಬಂದವು ಅಂತ ಇಟ್ಟುಕೊಂಡರೆ, ಅದರಲ್ಲಿ ನೆನಪಿರುವ, ಇವತ್ತಿಗೂ ಚೆನ್ನಾಗಿದೆ ಅನ್ನಬಹುದಾದ, ಕದ್ದಿಲ್ಲದ ಚಿತ್ರಗಳು ಸುಮಾರು ಹತ್ತು ಹದಿನೈದು ಇರಬಹುದೇನೋ. ಇಪ್ಪತ್ತು ವರ್ಷ ಹೀಗಿದ್ದರೂ "ಇನ್ನು ನನ್ನ ಕೊನೆ ಉಸಿರು ಇರುವವವರೆಗೂ ಹಿಂದಿ ಚಿತ್ರಗಳನ್ನು ಕಣ್ಣೆತ್ತಿಯೂ ನೋಡಲಾರೆ" ಅಂತ ಪ್ರತಿಜ್ಞೆ ಮಾಡಿದವರು ಅಲ್ಲಿ ಅಥವಾ ಇಲ್ಲಿ ಎಷ್ಟಿದ್ದಾರೆ ? ಹಿಂದಿ ಚಿತ್ರ ನೋಡಿದರೆ ಮರ್ಯಾದೆಗೆ ಕಮ್ಮಿ ಅಂದವರು ಯಾರಿದ್ದಾರೆ ? 
ಮರಾಠಿ ಚಿತ್ರರಂಗ ಇನ್ನೇನು ಮುಚ್ಚಿಯೇ ಹೋಯಿತು ಅಂತಾಗಿತ್ತಲ್ಲ, ಕಳೆದ ಏಳೆಂಟು ವರ್ಷಗಳಲ್ಲಿ ಹೇಗೆ ಚಿಗಿತು ನಿಂತಿದೆ ನೋಡಿ. ಮರಾಠಿಗಳು ಯಾವತ್ತಾದರೂ ನಾನು ಮರಾಠಿ ಚಿತ್ರ ನೋಡಿ ಹನ್ನೊಂದು ವರ್ಷ ಆಯಿತು ಅಂತ ಹೇಳುವುದು ನೋಡಿದ್ದೀರಾ ? ಮಲಯಾಳದಲ್ಲಿ ನಾಲ್ಕೈದು ವರ್ಷ ಬರ ಬಂದಾಗ ಮಲ್ಲುಗಳು ಆಫೀಸಿನಲ್ಲಿ ನಮ್ಮ ಮಲಯಾಳದಷ್ಟು ಕೆಟ್ಟದ್ದು ಎಲ್ಲೂ ಇಲ್ಲ ಅನ್ನುವುದು ನೋಡಿದ್ದೀರಾ ? ತಮಿಳರು ವಿಜಯಕಾಂತ್ ಚಿತ್ರಗಳನ್ನು ಇಟ್ಟುಕೊಂಡು ನಮ್ಮ ತಮಿಳಿನ ಹಣೆಬರಹವೇ ಇಷ್ಟು, ಇನ್ನು ಹದಿನೈದು ವರ್ಷ ತಮಿಳಿನ ಕಡೆ ತಲೆ ಹಾಕಲಾರೆ ಅಂದ ಉದಾಹರಣೆಗಳು ಇವೆಯೇ? ಬಾಲಯ್ಯ ಚಿತ್ರಗಳನ್ನು ಇಟ್ಟುಕೊಂಡು, ನಾವು ಹೈ ಫೈ, ತೆಲುಗು ಚಿತ್ರ ನೋಡುವುದು ನಮ್ಮ ಲೆವೆಲ್ಲಿಗೆ ಕಮ್ಮಿ ಅನ್ನುವ ತೆಲುಗರು ಸಿಕ್ಕಲಾರರು. ಅಷ್ಟು overreact ಮಾಡುವುದು, ಇಲ್ಲಿಯವರು ಮಾತ್ರ. 

ಒಂದು ಚಿತ್ರ ಕನ್ನಡದ್ದು ಅಂದಮಾತ್ರಕ್ಕೆ ನೋಡಬೇಕು ಅಂತ ಹೇಳಲಾರೆ, ಇಲ್ಲಿ ಆಕ್ಷೇಪ ಇರುವುದು ಒಳ್ಳೆಯ ಚಿತ್ರಗಳೂ ಸಾಕಷ್ಟು ಬಂದಿದೆ ಅನುವುದನ್ನು ಲೆಕ್ಕಕ್ಕೇ ತಗೊಳ್ಳದೆ ಮಾತಾಡುವುದರ ಬಗ್ಗೆ, ಒಳ್ಳೆಯದು ಬಂದಾಗ ಪ್ರೋತ್ಸಾಹಿಸಿ, ಇಂತದ್ದು ನಮಗೆ ಬೇಕು ಅಂತ ಹೇಳುವ ಕೆಲಸ ಅಷ್ಟಾಗಿ ಆಗಿಲ್ಲ ಅಂತ (ಮೇಲೆ ಹೇಳಿದ್ದೇನಲ್ಲ ಆ ಪಟ್ಟಿಯಲ್ಲಿ ಇರುವ ಚಿತ್ರಗಳ ಬಾಕ್ಸ್ ಆಫೀಸ್ ಸಾಧನೆ ಬಗ್ಗೆ) . ಲೂಸಿಯಾ, ತಿಥಿ, ಕೆಂಡಸಂಪಿಗೆ ಇವೆಲ್ಲ ದುಡ್ಡು ಮಾಡುವುದಿಲ್ಲ ಅಂತಾದರೆ ಅದಕ್ಕೆ ಪ್ರೇಕ್ಷಕನನ್ನು ಹೊಣೆ ಮಾಡದೆ ಇರುವುದು ಹೇಗೆ ? ಅಂಬರೀಷದಂತ ಕಳಪೆ ಮಾಲು ಹತ್ತು ಹದಿನೈದು ಕೋಟಿ ಬಾಚುತ್ತದೆ, ಲೂಸಿಯಾ, ಕೆಂಡಸಂಪಿಗೆ, ತಿಥಿ ಗಳು ಎರಡರಿಂದ ನಾಲ್ಕು ಕೋಟಿ ಮಾಡಿದರೆ ಹೆಚ್ಚು ಅಂತಾದರೆ, ಸ್ಟಾರ್ ಗಳು, ದುಡ್ಡು ಸುರಿಯುವ ನಿರ್ಮಾಪಕರ ಆಯ್ಕೆ ಯಾವುದಾಗಿರುತ್ತದೆ ಅಂತ ಸುಲಭದಲ್ಲಿ ಊಹಿಸಬಹುದಲ್ಲ. ಸಯನೈಡ್, ಎದೆಗಾರಿಕೆ, ಸ್ಲಂ ಬಾಲ , ಸಿಂಪಲ್ ಆಗ್ ಒಂದ್ ಲವ್ ಸ್ಟೋರಿ, ಅಟ್ಟಹಾಸ , ಲೂಸಿಯಾ , ಒಲವೇ ಮಂದಾರ , ಎದ್ದೇಳು ಮಂಜುನಾಥ , ಗೊಂಬೆಗಳ ಲವ್ , ಚಿತ್ರಮಂದಿರದಲ್ಲಿ, ಉಳಿದವರು ಕಂಡಂತೆ, ಸಿದ್ಲಿಂಗು, ಟೋನಿ , 6-5=2, ಬಹುಪರಾಕ್ , ಮೈನಾ, ರಂಗಿತರಂಗ, ಕಿಲ್ಲಿಂಗ್ ವೀರಪ್ಪನ್ , ನಾನು ಅವನಲ್ಲ ಅವಳು, ಭಾರತ್ ಸ್ಟೋರ್ಸ್ , ಕೂರ್ಮಾವತಾರ , ಉಗ್ರಂ, ಕೆಂಡಸಂಪಿಗೆ, ಯು ಟರ್ನ್ , ಪ್ಲಾನ್ , ಮೈತ್ರಿ , ಉಪ್ಪಿ 2, ಕಿಲ್ಲಿಂಗ್ ವೀರಪ್ಪನ್ , ರಾಟೆ , ಜಟ್ಟ , ತಿಥಿ , ಕಿರಗೂರಿನ ಗಯ್ಯಾಳಿಗಳು , ಕೃಷ್ಣ ಲೀಲಾ , ಹಗ್ಗದ ಕೊನೆ , ಗಣಪ , ಲಾಸ್ಟ್ ಬಸ್, ಕರ್ವ , ರಿಕ್ಕಿ , ಗೋಧಿ ಬಣ್ಣ. ಇಷ್ಟು ವಿಭಿನ್ನ ಚಿತ್ರಗಳು ಅನ್ನಬಹುದಲ್ಲ. ಇವೆಲ್ಲ ಶ್ರೇಷ್ಟ ಚಿತ್ರಗಳು ಅಂತಲ್ಲ, ಇಷ್ಟು ಬಂದಿದೆ ಕಳೆದ ಐದಾರು ವರ್ಷಗಳಲ್ಲಿ. ಡೈರೆಕ್ಟರ್ಸ್ ಸ್ಪೆಷಲ್, ದ್ಯಾವ್ರೆ, ಮಿಂಚಾಗಿ ನೀನು ಬರಲು , ದ್ಯಾವ್ರೆ, ಭಾಗ್ಯರಾಜ್ , ಅಪೂರ್ವ ತರದ ಸೋತ ಚಿತ್ರಗಳೂ ಇವೆ. ಯೋಗರಾಜ್, ಸೂರಿ, ಶಶಾಂಕ್ , ನಾಗಶೇಖರ್ ಇವರೆಲ್ಲ ಆರಕ್ಕೇರದೆ ಮೂರಕ್ಕಿಳಿಯಿದೆ, ಕೆಟ್ಟದ್ದೂ ಅಲ್ಲ ಭಯಂಕರ ಗ್ರೇಟ್ ಊ ಅಲ್ಲ ಅನ್ನಬಹುದಾದದ್ದು ಮಾಡುತ್ತಲೇ ಬಂದಿದ್ದಾರೆ. ಹೀಗೆ ಸಾಕಷ್ಟು ವಿಭಿನ್ನ, ಸ್ವಲ್ಪ ಮಟ್ಟಿಗಾದರೂ ಚೆನ್ನಾಗಿರುವ ಚಿತ್ರಗಳು ಬಂದಿವೆ, ಹೀಗೆ ಬೈಕೊಂಡು ಓಡಾಡುವವರು ಇವುಗಳಲ್ಲಿ ಅರ್ಧದಷ್ಟೂ ನೋಡಿರುವುದಿಲ್ಲ ಅಂತ ಬೆಟ್ ಕಟ್ಟಬಲ್ಲೆ ! 

ಇಂತದ್ದು ಬಂದಾಗ ನೋಡದೆ, ನಾನು ಕನ್ನಡ ಚಿತ್ರವೊಂದನ್ನು ನೋಡಿ ಹದಿನೈದು ವರ್ಷಗಳೇ ಆಯಿತು, ನಾನು ಸ್ವರ್ಗ ಲೋಕದಿಂದ ಇಳಿದವನು, ನನ್ನ ಲೆವೆಲ್ಲೇ ಬೇರೆ ಅಂದುಕೊಂಡು ಓಡಾಡಿದರೆ ಯಾರಿಗೂ ಯಾವ ಪ್ರಯೋಜನವೂ ಇಲ್ಲ. ಪ್ರೇಕ್ಷಕನಂತೆ ಕಲೆ. ಪ್ರೇಕ್ಷಕ ಒಳ್ಳೆಯದನ್ನು ನೋಡಿ ಚಪ್ಪಾಳೆ ತಟ್ಟಿದರೆ ಒಳ್ಳೆಯದು ಬರುತ್ತದೆ, ನಾವು ಥಿಯೇಟರಿಗೆ ಹೋಗುವುದಿಲ್ಲ ಅಂದರೆ ಅಲ್ಲಿಗೆ ಹೋಗುವವರಿಗೆ ಬೇಕಾದಂತದ್ದು ಬರುತ್ತದೆ. ಎರಡು ಸರ್ತಿ ದೋಸೆ ಮಾಡಿದಾಗ ಒಳ್ಳೆ ವ್ಯಾಪಾರ ಆಗಲಿಲ್ಲ ಅಂತಾದರೆ ಹೋಟೆಲಿನವರು ದೋಸೆ ಮಾಡುವುದು ನಿಲ್ಲಿಸುತ್ತಾರೆ. ಆಮೇಲೆ ದೋಸೆ ಇಲ್ಲ ಅಂತ ಇವರು ಹೋಗುವುದಿಲ್ಲ, ಇವರು ಹೇಗೂ ಬರುವುದಿಲ್ಲ ಅಂತ ಅವರು ದೋಸೆ ಹುಯ್ಯುವುದಿಲ್ಲ ಅಂತ ಆಗಿಬಿಡುತ್ತದೆ !! ಒಂದೋ ಹೋಟೆಲಿಗೆ ಹೋಗಿ ನಮಗೆ ದೋಸೆ ಬೇಕು ಅಂತ ಇವರು ಗೊತ್ತು ಮಾಡಿಸಬೇಕು, ಇಲ್ಲವೇ ಒಳ್ಳೆ ದೋಸೆಗೆ ಜನ ಬಂದೇ ಬರುತ್ತಾರೆ ಅಂತ ಅವರು ಧೈರ್ಯ ಮಾಡಬೇಕು. ಎರಡೂ ಕಳೆದ ಮೂರು ವರ್ಷಗಳಲ್ಲಿ ಸ್ವಲ್ಪವಾದರೂ ಆಗಿರುವುದು ಖುಷಿಯ ವಿಷಯ.
ಕನ್ನಡದ ಚಿತ್ರ ಅಂದ ಮಾತ್ರಕ್ಕೆ ಕಳಪೆ ಸರಕುಗಳನ್ನು ಹೊಗಳಬೇಕು ಅನ್ನುವುದು ಇದರ ತಾತ್ಪರ್ಯ ಅಲ್ಲ. ಏನೋ ಸ್ವಲ್ಪ ಹಾದಿ ತಪ್ಪಿರುವ ಮಗ ಮನೆಯಲ್ಲಿದ್ದರೆ ಪಕ್ಕದ ಮನೆಗಳಲ್ಲಿ ಸರ್ವಶ್ರೇಷ್ಟರೇ ಇದ್ದಾರೆ ಮತ್ತು ಜಗತ್ತಿನ ಅತ್ಯಂತ ದುಷ್ಟ ವ್ಯಕ್ತಿ ನಮ್ಮಲ್ಲಿದ್ದಾನೆ ಅನ್ನುವ ಭಾವ ಬೇಡ. ನಮ್ಮ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಡಿಪಾರ್ಟ್ಮೆಂಟ್ ಮತ್ತು ಎಲೆಕ್ಟ್ರಿಕಲ್ ಡಿಪಾರ್ಟ್ಮೆಂಟ್ ಎರಡು ಭಿನ್ನ ಧೋರಣೆ ಇಟ್ಟುಕೊಂಡಿದ್ದವು, ಎಲೆಕ್ಟ್ರಾನಿಕ್ಸ್ನಲ್ಲಿ ಲ್ಯಾಬಿನಲ್ಲಿ output ಬರದಿದ್ದಾರೂ ಏನೋ ಪಾಪ ಬದುಕಿಕೊಳ್ಳಲಿ ಅಂತ ಪಾಸಾಗುವಷ್ಟು ಮಾರ್ಕು ಕೊಟ್ಟು ಪಾರು ಮಾಡುತ್ತಿದ್ದರು, ಎಲೆಕ್ಟ್ರಿಕಲ್ನಲ್ಲಿ ಒಂದು ಸಣ್ಣ ತಪ್ಪಾದರೂ ನಿರ್ದಯವಾಗಿ ಸೊನ್ನೆಯೋ ಐದೋ ಹತ್ತೋ ಕೊಟ್ಟು ಫೇಲ್ ಮಾಡಿ ಕೂರಿಸುತ್ತಿದ್ದರು. ನಾವು ಎಲೆಕ್ಟ್ರಾನಿಕ್ಸ್ ವಿಭಾಗದ ಹಾಗಿದ್ದರೆ ಒಳ್ಳೆಯದು. ಉದಾಹರಣೆಗೆ ಟೋನಿ ಚಿತ್ರ, ಇದರಲ್ಲಿ ಹೀರೋ ಅಭಿನಯ ಸಪ್ಪೆ, ಕತೆಯ ಓಟಕ್ಕೆ ಹಾಡುಗಳು ಅಡ್ಡ ಬಂದಿವೆ, ಕೆಲವು ಕಡೆ ಕತೆ ಕುಂಟಿದೆ ಹೀಗೆ ಹುಡುಕಿದರೆ ತಪ್ಪುಗಳು ಸಿಗಬಹುದು, ಆದರೆ ಇದು ಒಂದು ಅದ್ಭುತ ಪ್ರಯೋಗ, ಇಲ್ಲಿ ಯಾವತ್ತೂ ಬಂದಿರದ ಕಥೆ, ಜಗತ್ತಿನಲ್ಲೇ ಅಪರೂಪ ಅನ್ನಿಸುವ ನಿರೂಪಣಾ ವಿಧಾನ ಇದೆ. ಏನೋ ಪ್ರತಿಭಾವಂತ ಹುಡುಗ, ಸ್ವಲ್ಪ ಗಡಿಬಿಡಿಯಲ್ಲಿ ಎಡವಿದ್ದಾನೆ ಅಂತ ಇಂತದ್ದನ್ನು ಪಾಸು ಮಾಡಿಬಿಡುವುದು ಒಳ್ಳೆಯದು. ಟೀವಿಯಲ್ಲಿ ಟೋನಿ ನೋಡಿ ಇಂತದ್ದೊಂದು ಅಪೂರ್ವ ಪ್ರಯೋಗ ಬಂದಿದೆ ಅಂತ ಗೊತ್ತೇ ಇರಲಿಲ್ಲ ಅಂತ ತುಂಬ ಜನ ಹೇಳಿದರಂತೆ.

ಇಲ್ಲಿನ ಜನರಿಗೆ ಕಂಟೆಂಟ್ based, issue based ಚಿತ್ರಗಳು ಬೇಕು, ವಿಭಿನ್ನ ಪ್ರಯತ್ನಗಳು ಬೇಕು ಅನ್ನುವುದಾದರೆ ಕಾಸರವಳ್ಳಿ, ಶೇಷಾದ್ರಿ ಚಿತ್ರಗಳು, ಹಗ್ಗದ ಕೊನೆ ತರದ್ದು ಯಾಕೆ ಒಂದು ಐವತ್ತು ಲಕ್ಷವೂ ಮಾಡುವುದಿಲ್ಲ ? ಲೂಸಿಯಾ ಯಾಕೆ ಬಿ ಮತ್ತು ಸಿ ಸೆಂಟರ್ ಗಳಲ್ಲಿ, ಸಿಂಗಲ್ ಸ್ಕ್ರೀನ್ಗಳಲ್ಲಿ ವಾಶೌಟ್ ಆಯಿತು ? ಸಯನೈಡ್ ಹತ್ತು ಕೋಟಿ , ಗೋಧಿ ಬಣ್ಣ ಇಪ್ಪತ್ತು ಕೋಟಿ, ಕೆಂಡಸಂಪಿಗೆ ಹದಿನೈದು ಕೋಟಿ , ರಿಕ್ಕಿ ಹತ್ತು ಕೋಟಿ ತರದ ಕಲೆಕ್ಷನ್ ಯಾಕಾಗಿಲ್ಲ ? ತಿಥಿ ಒಂದು ಎಂಟ್ ಹತ್ತು ಮಲ್ಟಿ ಪ್ಲೆಕ್ಸ್ ಗಳಲ್ಲಿ, ಅದೂ ಕಡಿಮೆ ಶೋ ಇಟ್ಟುಕೊಂಡು ಓಡಿದ್ದನ್ನೇ ಗೆಲುವು ಅನ್ನಬೇಕೆ ? ಯಾಕಾಗಿಲ್ಲ ಅಂದರೆ ಇವುಗಳನ್ನು ಗೆಲ್ಲಿಸಬಲ್ಲಂತವರು ಥಿಯೇಟರಿಗೆ ಬರುವುದೇ ಇಲ್ಲ. ಮತ್ತು ಕನ್ನಡಿಗರು in general ಚಿತ್ರ ನೋಡುವುದಿಲ್ಲ, ಅವರದ್ದೇನಿದ್ದರೂ ಫೇಸ್ಬುಕ್ ನಲ್ಲಿ ಬೈದು ಸುಮ್ಮನಾಗುವ ಸ್ವಭಾವ. 

ಸ್ಟಾರ್ ಗಳು ಅಂದಾಗ ನೆನಪಾಯಿತು , ಈ perception ಬರುವುದಕ್ಕೆ ದೊಡ್ಡ ಹೀರೋಗಳೂ ದೊಡ್ಡ ಕಾರಣ, ಸ್ಟಾರ್ ಗಳು ಸಾಲು ಸಾಲು ರಿಮೇಕು, ಮಸಾಲೆ ಚಿತ್ರಗಳು ಮಾಡಿದ್ದರಿಂದ ಎಲ್ಲವೂ ಹೀಗೆ ಅನ್ನುವ ಭಾವ ಬಂದಿರಬಹುದು. ಇಂತಹಾ ಕಳಂಕ ಅಂಟುವುದಕ್ಕೆ ಹೀರೋಗಳು ಕಾರಣವಾಗಿದ್ದಾರೆ ಅನ್ನಬಹುದು. 

ಯಾರ್ಯಾರು ಸಿನೇಮಾ ಮಾಡಲಿಕ್ಕೆ ಎಷ್ಟು ಕಷ್ಟ ಪಟ್ಟರು ಅನ್ನುವ ಕಾರಣಕ್ಕೆ ಪ್ರೇಕ್ಷಕ ನೋಡಬೇಕಾಗಿಲ್ಲ , ಅದನ್ನು ಹೇಳಿದ್ದು ಪ್ಯಾಶನ್ ಇರುವವರು ಯಾರಿದ್ದಾರೆ ಎಂಬ ಸಂದೇಹಕ್ಕೆ ಉತ್ತರವಾಗಿ. ಶೋಕಿಗೆ ಬರುವವರು, ಹೆಸರು ಹಾಳು ಮಾಡುವವರು ತುಂಬ ಜನ ಇದ್ದಾರೆ . ಹಾಗೆಯೇ ದೊಡ್ಡ ಸಂಬಳದ ಕಾರ್ಪೊರೇಟ್ ಕೆಲಸ ಬಿಟ್ಟು, ಸಾಕಷ್ಟು ಶ್ರದ್ದೆಯಿಂದ ಅಭ್ಯಾಸ ಮಾಡಿ , ಸ್ವಂತ ಮನೆ ಮಠ ಮಾರಿ ಎಲ್ಲ ಮಾಡಿರುವ ಪ್ಯಾಶನೇಟ್ ಜನರೂ ಸಾಕಷ್ಟು ಇದ್ದಾರೆ. 

ಮೂವತ್ತು ನಲವತ್ತರ ದಶಕದಲ್ಲಿ ಯಕ್ಷಗಾನ ಅಂದರೆ , ಅಶ್ಲೀಲ ನಿರೂಪಣೆ ಇರುವ , ಕಲಾವಂತಿಕೆ ಇಲ್ಲದ ಕಲಾವಿದರ ಸಂತೆ ಆಗಿತ್ತಂತೆ. ವಿದ್ಯಾವಂತರು ಸುಸಂಸ್ಕೃತರು ಇದನ್ನು ಕೆಳ ಮಟ್ಟದ ಚೀಪ್ ಕಲೆ ಅಂತ ದೂರ ಇಟ್ಟಿದ್ದರಂತೆ. ಆಮೇಲೆ ಕುರಿಯ ವಿಠ್ಠಲ ಶಾಸ್ತ್ರಿಗಳು, ಪೊಳಲಿ ಶಾಸ್ತ್ರಿಗಳು, ದೇರಾಜೆ ಸೀತಾರಾಮಯ್ಯ , ಶೇಣಿ ಗೋಪಾಲಕೃಷ್ಣ ಭಟ್ಟರು , ದೊಡ್ಡ ಸಾಮಗರು ಎಲ್ಲ ಬಂದ ಮೇಲೆ ಇದು ಕಲಾವಂತಿಕೆ ಇರುವ, ಸುಸಂಸ್ಕೃತರು, ವಿದ್ವಜ್ಜನರು ನೋಡಬಹುದಾದ, ನೋಡಬೇಕಾದ ಕಲೆ ಅಂತ ಆಯಿತಂತೆ. ಹೀಗೆ ಏರಿಳಿತಗಳು ಆಗುವುದು, ಅದನ್ನು ತಿಳಿದವರು ಬಂದು ಸರಿ ಮಾಡುವುದು, ಈ ತಿಳಿದವರು ಬಂದಾಗ ಪ್ರೇಕ್ಷಕ ಅವರನ್ನು ಮೆಚ್ಚಿ ಪ್ರೋತ್ಸಾಹಿಸುವುದು ಎಲ್ಲ ಆಗಬೇಕಾದ್ದು. ನಾನು ಮೊದಲೇ ಹೇಳಿದಂತೆ ಪ್ರೇಕ್ಷಕನಂತೆ ಕಲೆ. ಗೋಧಿಬಣ್ಣ ಮೂವತ್ತು ಕೋಟಿ ಮಾಡುತ್ತದೆ ಅಂತಾಗುವ ಪ್ರೇಕ್ಷಕ ಇದ್ದಾಗ ಅಂತದ್ದು ಬರುತ್ತದೆ. 

ದರ್ಶನ್ ಚಿತ್ರಗಳು ಇಪ್ಪತ್ತು ಕೋಟಿ ಮಾಡಿದರೆ ದರ್ಶನ್ ಚಿತ್ರಗಳ ತರದ್ದೇ ಬರುತ್ತದೆ. ಕುರಿಯ, ದೇರಾಜೆ, ಶೇಣಿ ಅವರಂತ ಕಲಾವಿದರೂ ಬರಬೇಕು, ಅವರ ಕ್ರಿಯೇಟಿವಿಟಿ , ವಿದ್ವತ್ತು ಆಸ್ವಾದಿಸಬಲ್ಲ ಪ್ರೇಕ್ಷಕರೂ ಬೇಕು. ಎರಡೂ ಕೈ ಸೇರದೆ ಚಪ್ಪಾಳೆ ಆಗುವುದಿಲ್ಲ. ಬರೀ ಮಾಸ್ ಪ್ರೇಕ್ಷಕರು ಬಂದಿದ್ದರೆ ಈ ಪಂಡಿತರು ಏನು ಕೊರೀತಾರಪ್ಪ ಅಂತ ಆಗುತ್ತಿತ್ತು. ಮಾಸ್ ಪ್ರೇಕ್ಷಕ ದೊಡ್ಡ ಸಂಖ್ಯೆಯಲ್ಲಿ ಇದ್ದಾಗ ಮಾಸ್ ಚಿತ್ರಗಳು ಬರುತ್ತವೆ, ಕ್ಲಾಸ್ ಪ್ರೇಕ್ಷಕ ಥಿಯೇಟರಿಗೆ ಬರದಿದ್ದರೆ, ಅವರಿದ್ದಾರೆ, ಅವರಿಗೆ ಆಗುವಂತ ಚಿತ್ರ ಮಾಡಿಯೂ ದುಡ್ಡು ಮಾಡಬಹುದು ಅಂತ ಗೊತ್ತಾಗುವುದು ಹೇಗೆ ? ಇಲ್ಲಿ ಕೋಳಿ ಮೊದಲೋ ಮೊಟ್ಟೆ ಮೊದಲೋ , ದೋಸೆ ಇಲ್ಲ ಅಂತ ಅವರು ಬರುವುದಿಲ್ಲವೇ, ಅವರು ಬರುವುದಿಲ್ಲ ಅಂತ ದೋಸೆ ಮಾಡುವುದಿಲ್ಲವೇ , ಅಥವಾ ಇಬ್ಬರದ್ದೂ ಸ್ವಲ್ಪ ಸ್ವಲ್ಪ ತಪ್ಪಿದೆ ಅನ್ನಬೇಕೇ ಅನ್ನುವುದು ಯೋಚಿಸಬಹುದಾದ ವಿಚಾರ.

ಒಳ್ಳೆಯದನ್ನು ಪ್ರೋತ್ಸಾಹಿಸಿ ಕೆಟ್ಟದ್ದನ್ನು ತಿರಸ್ಕರಿಸುವುದು ಎಲ್ಲ ಕಡೆ ಆಗುತ್ತದೆ, ಇಲ್ಲಿಯೂ ಆಗುತ್ತದೆ, ಆಗಬೇಕು. ಹೇಳಿ ಕೇಳಿ ಎಲ್ಲ ಚಿತ್ರಗಳೂ ಪ್ರಾಡಕ್ಟ್ ಗಳೇ, ಮಾರುಕಟ್ಟೆಯಲ್ಲಿ ಒಳ್ಳೆ ಪ್ರಾಡಕ್ಟ್ ಉಳಿಯುವುದು, ಕೆಟ್ಟದ್ದು ತಿರಸ್ಕರಿಸಲ್ಪಡುವುದು ಆಗುತ್ತದೆ, ಆಗಲೇಬೇಕು. ಆದರೆ ಉಗಿಯುವಾಗ ಸ್ವಲ್ಪ ನೋಡಿಕೊಂಡು, ಕೆಲವು ವಿಚಾರಗಳನ್ನ ಮನಸ್ಸಿನಲ್ಲಿ ಇಟ್ಟುಕೊಂಡು ಉಗೀರಿ ಅನ್ನುವ ನಿಟ್ಟಿನಲ್ಲಿ ಈ ಮಾತುಗಳನ್ನು ಹೇಳಿದ್ದೇನೆ. ಮನೆಯಲ್ಲಿ ಹೆಂಡತಿ ಕೈಲಿ ಉಗಿಸಿಕೊಂಡರೆ ಕನ್ನಡ ಚಿತ್ರಗಳನ್ನು ಬೈದು ಸೇಡು ತೀರಿಸಿಕೊಳ್ಳಬಹುದು ಅನ್ನುವಷ್ಟು ಸಸಾರ ಆಗದಿರಲಿ! ಏನಂತೀರಿ ?

No comments:

Post a Comment