Friday 2 December 2016

ಪರಂಪರೆಯ ಬೇರುಗಳು ಮತ್ತು ಹೊರಗಿನ ಗಾಳಿ ಬೆಳಕು!

ಈ ದೇಶದ ಸಂಸ್ಕೃತಿ, ಸಂಪ್ರದಾಯ, ಪರಂಪರೆ, ಇತಿಹಾಸ ಇದರ ಬಗ್ಗೆಯೆಲ್ಲ ನನಗೆ ತಕ್ಕ ಮಟ್ಟಿಗೆ ಗೊತ್ತಿದೆ ಅನ್ನುವವರು ಕೈ ಎತ್ತಿ ನೋಡೋಣ ! ಇದನ್ನು ಓದಿ ಮುಗಿಸಿ ಆದ ಮೇಲೂ ಕೈ ಅರ್ಧದಷ್ಟೂ ಕೆಳಗೆ ಹೋಗಲಿಲ್ಲ ಅನ್ನುವವರು ಆನಂತರ ಇನ್ನೊಂದು ಸಲ ಕೈ ಎತ್ತಿ ಪುನೀತರಾಗಬಹುದು.
ಒಂದೊಮ್ಮೆ ನಾನು ಅರ್ಜೆಂಟೀನಾದ Buenos Airesನಲ್ಲಿ ಇದ್ದೆ. ಎಲ್ಲಿಗೆ ಹೋದರೂ ನಮ್ಮ ಶೈಲಿಯ ಊಟ ಮಾಡದಿದ್ದರೆ ನನಗೆ ಮನಸು ಕೇಳುವುದಿಲ್ಲ, ಸರಿ, ಡೆಲ್ಲಿ ದರ್ಬಾರ್ ಅನ್ನುವ ಹೋಟೆಲು ಸಿಕ್ಕಿಯೂ ಬಿಟ್ಟಿತು. ನಮ್ಮೂರಿನ ತರದ ಚಾ ಹೇಳಿ, ಹಬೆಯಾಡುವ ಕಪ್ ಹಿಡಿದು ಸುರುಕ್ ಅಂತ ಎಳೆದು ಕುಡಿಯದೇ ಹೋದರೆ ಅದನ್ನೂ ಒಂದು ಹೋಟೆಲ್ ಭೇಟಿ ಅನ್ನುತ್ತಾರೆಯೇ ? ಒಂದು ಚಾ ಹೇಳಿದೆ, ವಿದೇಶ ಆದ್ದರಿಂದ ಸಕ್ಕರೆ ಹಾಕಿಯೇ ಮಾಡಿ ಅಂದಿದ್ದೆ. ಬಂತು. ಕುಡಿದು ನೋಡಿದರೆ ಸಕ್ಕರೆಯೇ ಹಾಕಿಲ್ಲ. ಅಮೇರಿಕಾದಲ್ಲಿ ಹಾಲು ಸಕ್ಕರೆ ಹಾಕದೆ, ಬರೀ ನೀರು ಮತ್ತು ಟೀ ಪುಡಿ ಇರುವ ಚಾ ಕುಡಿಯುವ ಕ್ರಮ ಇದೆ. ಅಲ್ಲಿನ ಇಂಡಿಯನ್ ಹೊಟೇಲುಗಳಲ್ಲಿ ಕೆಲವು ಕಡೆ ನೀನು ನಕ್ಕರೆ ಹಾಲು ಸಕ್ಕರೆ, ನಗದಿದ್ದರೂ ಹಾಲು ಸಕ್ಕರೆ ಅಂತ ಎಲ್ಲ ಹಾಕಿಯೇ ಕೊಡುತ್ತಾರೆ. ನನ್ನ ಸಹೋದ್ಯೋಗಿ Jamie ಅಂತೊಬ್ಬಳು ಇದನ್ನು ತುಂಬ ಇಷ್ಟ ಪಟ್ಟು, "ಐ ಲವ್ ಇಂಡಿಯನ್ ಚಾಯ್ ಟೀ" ಅಂತಲೇ ಹೇಳುತ್ತಿದ್ದದ್ದೂ ನೆನಪಿದೆ. ಇದೇನಿದು ಸಕ್ಕರೆ ಹಾಕಿ ಅಂದರೂ ಹಾಕಿಲ್ಲ ಅಂತ ಕೇಳಿದೆ. "ಅಯ್ಯೋ, ನಿಮ್ಮ ಚಾಕ್ಕೆ ನಾವು ಹೇಗೆ ಸಕ್ಕರೆ ಹಾಕಲು ಸಾಧ್ಯ" ಅನ್ನಬೇಕೆ. ಇದೇನು ಒಳ್ಳೆ ಅಮೆರಿಕದವರ ತರ ಮಾತಾಡ್ತಾರಲ್ಲ ಅಂದುಕೊಂಡು, "ನಾನೇ ಹೇಳ್ತಾ ಇದ್ದೇನಲ್ಲ, ಸಕ್ಕರೆ ಹಾಕಿ ಇಂಡಿಯನ್ ಟೀ ಮಾಡಿಕೊಡಿ, ನಿಮಗೆ ಎಷ್ಟು ಹಾಕ್ತೀರೋ ಅಷ್ಟೇ ಹಾಕಿ, ಸಕ್ಕರೆ ಹಾಕದಿದ್ರೆ ಇಂಡಿಯನ್ ಟೀ ಹೇಗಾಗ್ತದೆ" ಅಂತೆಲ್ಲ ಎಷ್ಟು ಬಡಕೊಂಡರೂ ಜಪ್ಪಯ್ಯ ಅನ್ನದೆ ಅದೇ ರಾಗ ಅದೇ ಹಾಡು ಅಪಶ್ರುತಿಯಲ್ಲಿಯೇ ಹಾಡಿ ಕಛೇರಿ ಮುಗಿಸಿದರು.
ಚೋದ್ಯ ಅದಲ್ಲ. ನಮಗೆ ಇಂಡಿಯನ್ ಟೀ ಅಂತ ಏನೆಲ್ಲ ಕಲ್ಪನೆಗಳು ಇದ್ದರೂ ಚಾ ನಮ್ಮ ದೇಶದ್ದಲ್ಲ. ಮಹಾಭಾರತದಲ್ಲಿ ಕೃಷ್ಣ ವಿದುರನ ಮನೆಗೆ ಹೋಗುತ್ತಾನಲ್ಲ, ಆವಾಗ ವಿದುರ ಬೇರೇನು ಹೇಳಿದನೋ ಗೊತ್ತಿಲ್ಲ. "ಓಹೋ ಕೃಷ್ಣ ದೇವರು, ಬನ್ನಿ ಬನ್ನಿ, ಚಾ ಮಾಡುದಾ ಅಲ್ಲ ಕಾಫಿ ತಗೋಳ್ತೀರಾ" ಅಂತ ಮಾತ್ರ ಹೇಳಿರಲಾರ. ಯಾಕಂದರೆ ಚಾ ಕಾಫಿ ಎರಡೂ ಆಗ ಇಲ್ಲಿ ಇರಲಿಲ್ಲ! ಕಾಫಿ ಅರೇಬಿಯಾದಿಂದ ಬಂದರೆ ಚಾ ಚೀನಾದಿಂದ ಬ್ರಿಟಿಷರ ಮೂಲಕ ಬಂತು. ಇನ್ನೊಂದು ತಮಾಷೆ ಅಂದರೆ ಕಾಡು ಗಿಡವಾಗಿ ಆಸ್ಸಾ೦ನ ಕಾಡುಗಳಲ್ಲಿ ಚಾ ಮೊದಲೇ ಇತ್ತಂತೆ, ಅಲ್ಲಿನ ಜನ ಅದನ್ನು ನೀರಲ್ಲಿ ಕುದಿಸಿ ಕುಡಿಯುತ್ತಲೂ ಇದ್ದರಂತೆ. ಅಲ್ಲಿಗೆ ಹಾಲು ಸಕ್ಕರೆ ಹಾಕದೆ ಕುಡಿಯುವುದೂ ಭಾರತೀಯ ಸಂಪ್ರದಾಯವೇ ಅಂತ ಆಯ್ತಲ್ಲ!
ನನ್ನ ಉತ್ತರ ಭಾರತದ ಸಹೋದ್ಯೋಗಿ ಒಬ್ಬ ದಿನಾ ಕೆಫೆಟೇರಿಯಾದಲ್ಲಿ ಆಲೂಗಡ್ಡೆ ಸಬ್ಜಿ ಬಿಟ್ಟರೆ ಬೇರೇನೂ ತಗೊಳ್ಳುತ್ತಿರಲಿಲ್ಲ. ವಾರಕ್ಕೆ ಹದಿನಾಲ್ಕು ದಿನವೂ ಬಟಾಟೆಯ ಧ್ಯಾನ. ಕೆಲವರು ಬೆಂಡೆಕಾಯಿ ಪದಾರ್ಥಕ್ಕೂ ಇರಲಿ ಅಂತ ಆಲೂಗಡ್ಡೆ ಸೇರಿಸುವುದು ಇದೆ. ನೀವು ಮಿಕ್ಸೆಡ್ ವೆಜ್ ಸಬ್ಜಿ ಅಂತ ಮಾಡಿದರೆ ಅದು ಆಲೂಗಡ್ಡೆ ಸಬ್ಜಿಯೇ ಆಗಿರುತ್ತದೆ ಅಂತ ಗೇಲಿ ಮಾಡುತ್ತಿದ್ದೆ. ಇಷ್ಟು ಭಾರತೀಯ ಆಗಿರುವ ಆಲೂಗಡ್ಡೆಯೂ ಇಲ್ಲಿನದ್ದಲ್ಲ, ದಕ್ಷಿಣ ಅಮೇರಿಕಾದಿಂದ ಬಂದದ್ದು ಅಂದರೆ ಆಶ್ಚರ್ಯ ಆಗಬಹುದು. ಟೊಮ್ಯಾಟೋ ನಮ್ಮದಲ್ಲ, ಕಡ್ಲೆ ಕಾಯಿ ಮ್ಮದಲ್ಲ, ಅಷ್ಟೇಕೆ ಮೆಣಸೂ ನಮ್ಮದಲ್ಲ. ಹಾಗಾದರೆ ಇಂತಾ ಖಾರ ಪ್ರಿಯರು, ಅದೂ ಆಂಧ್ರದ ಜನ ಏನು ಉಪವಾಸ ಕೂರುತ್ತಿದ್ದರೇ ಅಂತ ಕೇಳಬಹುದು. ಇಲ್ಲಿ ಮೆಣಸಿಗೆ ಬದಲಾಗಿ ಇದ್ದದ್ದು ಕಾಳು ಮೆಣಸು, ಗಾಂಧಾರಿ ಮೆಣಸು ಕೂಡ ಇತ್ತಂತೆ
ನಾನು ನೋಡಿದ ಯೂರೋಪಿನ ಚಿತ್ರವೊಂದರಲ್ಲಿ ಟರ್ಕಿಶ್ ಹೋಟೆಲೊಂದರ ಕತೆ ಇತ್ತು, ಅದರ ಹೆಸರು ಕೋಫ್ತಾ. ಅಲ್ಲಿಗೆ ಮಲಾಯಿ ಕೋಫ್ತಾದ ಕೋಫ್ತಾ ನಮ್ಮದಲ್ಲ ಅಂತಾಯಿತಲ್ಲ. ಜಿಲೇಬಿ, ಜಾಮೂನಿನಂತ ಪಕ್ಕಾ ಭಾರತೀಯ ಅನ್ನಿಸುವ ಖಾದ್ಯಗಳೂ ಪರ್ಷಿಯಾ ಕಡೆಯಿಂದಲೇ ಇಲ್ಲಿಗೆ ಬಂದಿದೆ. ಇನ್ನು ಪಲಾವು, ಬಿರಿಯಾನಿ, ಸಮೋಸ ಇವೆಲ್ಲ ಹೇಗೂ ಇಲ್ಲಿಯವು ಅಲ್ಲ. ಯಾರಾದರೂ ಸಿಕ್ಕಾಪಟ್ಟೆ ಹೈಫೈ ಲಲನೆಯರು ಐ ಲವ್ ಇಟಾಲಿಯನ್, ಐ ಲವ್ ಕಾಂಟಿನೆಂಟಲ್ ಅಂತೆಲ್ಲ ಸಾಲು ಸಾಲು ವಿದೇಶಿ ಹೆಸರುಗಳು ಹೇಳಿದರೆ, ನೀವೂ ಹೆದರದೆ, ಐ ಲವ್ ಜಾಮೂನ್ , ಐ ಲವ್ ಪಲಾವ್ ಅಂತ ಅಂದು ನೋಡಿ!
ಇನ್ನು ಧರ್ಮದ ವಿಷಯ. ವೇದಗಳೇ ಹಿಂದೂ ಧರ್ಮದ ಮೂಲ ಅನ್ನಬಹುದು. ವೇದಗಳಿಗೆ ಹೋದರೆ ಅಲ್ಲಿ ವಿಷ್ಣು, ಶಿವ, ಗಣಪತಿಯಂತ ದೇವರುಗಳ ಪ್ರಸ್ತಾಪವೇ ಇಲ್ಲವಂತೆ. ದೇವರುಗಳು ಬಂದಿರುವುದು ಆಮೇಲೆ ಹುಟ್ಟಿಕೊಂಡ ಪುರಾಣಗಳಲ್ಲಿ. ಅದರಲ್ಲೂ ಸ್ವಾರಸ್ಯಗಳಿವೆ ಈಗ ಕೃಷ್ಣ ಅಂದಾಗ ನಮಗೆ ಒಂದಷ್ಟು ವಿಷಯಗಳು ತಲೆಗೆ ಬರುತ್ತವೆ, ಮತ್ತು ಕೃಷ್ಣ ಅಂದರೆ ಮಹಾಭಾರತದ ಕೃಷ್ಣ ಅಂತಲೇ ಜನ ಭಾವಿಸುತ್ತಾರೆ. ಆದರೆ ಕೃಷ್ಣನ ಬಗ್ಗೆ ಚಾಲ್ತಿಯಲ್ಲಿರುವ ಅರ್ಧದಷ್ಟು ಕತೆಗಳು ಬಂದಿರುವುದು ಭಾಗವತ ಪುರಾಣ ಅನ್ನುವ ಇನ್ನೊಂದು ಪುರಾಣದಿಂದ. ರಾಮ ವಿಷ್ಣುವಿನ ಅವತಾರ ಅನ್ನುವ ಕಲ್ಪನೆ ವಾಲ್ಮೀಕಿ ರಾಮಾಯಣದಲ್ಲಿ ಇಲ್ಲ ಅಂತ ಕೆಲವರು ಹೇಳಿದ್ದಾರೆ. ಮಹಾಭಾರತದಲ್ಲಂತೂ ಹೀಗೆ ಆಮೇಲೆ ಸೇರಿಸಿದ ಕತೆಗಳ ರಾಶಿಯೇ ಇದೆ. ದ್ರೌಪದಿಯ ವಸ್ತ್ರ ಎಳೆದದ್ದೂ, ಕೃಷ್ಣ ಮುಗಿಯದಷ್ಟು ವಸ್ತ್ರ ಕೊಟ್ಟದ್ದೂ ಈಗ ಪ್ರಸಿದ್ಧ. ಈ ಅಕ್ಷಯ ಅಂಬರದ ಕತೆ ವ್ಯಾಸರ ಭಾರತದಲ್ಲಿ ಇಲ್ಲವಂತೆ. ಇದು ಯಾರೋ ಕೃಷ್ಣನ ಭಕ್ತರು, "ನಮ್ಮ ದೇವರು ಗ್ರೇಟ್" ಅಂತ ತೋರಿಸುವುದಕ್ಕೆ ಆಮೇಲೆ ಸೇರಿಸಿದ ಕತೆ.
ಸೀತೆಯನ್ನು ರಾಮ ಕಾಡಿಗೆ ಅಟ್ಟುವುದು, ಲವ ಕುಶರ ಕತೆ ಎಲ್ಲ ಮೂಲ ರಾಮಾಯಣದಲ್ಲಿ ಇಲ್ಲ. ಇನ್ನೊಂದು ವಿಶೇಷ ಅಂದರೆ , ಏನಿಲ್ಲ ಅಂದರೂ ಸುಮಾರು ಮುನ್ನೂರಕ್ಕೂ ಹೆಚ್ಚು ರಾಮಾಯಣಗಳು ದೇಶ ವಿದೇಶಗಳಲ್ಲಿ ಇವೆ, ಇವು ಮುನ್ನೂರು ತರದಲ್ಲಿಯೂ ಇವೆ! ಇನ್ನೊಂದು ಭಯಂಕರ ಪಾಯಿಂಟು ನೋಡಿ , ಶ್ರೀಲಂಕಾಕ್ಕೆ ಶ್ರೀಲಂಕಾ ಅನ್ನುವ ಹೆಸರು ಬಂದದ್ದು ಈಚೆಗೆ, ಅದರ ಹಳೇ ಹೆಸರು ಸಿಂಹಳ ದ್ವೀಪ, ಅಂದಮೇಲೆ ರಾಮಾಯಣ ಬರೆದವರು ಅದನ್ನು ಲಂಕಾ ಅನ್ನುವ ಹೊಸ ಹೆಸರಿಂದ ಆ ಹಳೇ ಕಾಲದಲ್ಲಿ ಹೇಗೆ ಕರೆದರು ಅಂತ ಪ್ರಶ್ನೆ ಬರುತ್ತದಲ್ಲ! ಹಾಗಾಗಿ ರಾವಣ ಇದ್ದದ್ದು ಈಗಿನ ಶ್ರೀಲಂಕಾದಲ್ಲಿ ಅಲ್ಲ, ಮಾಲ್ಡೀವ್ಸ್ ನ ಹತ್ತಿರ ಅಂದವರೂ ಇದ್ದಾರೆ! ಅಂತೂ ಈಗ ಚಾಲ್ತಿಯಲ್ಲಿ ಇರುವ ರಾಮಾಯಣ, ಮಹಾಭಾರತ ಓದಿದವರು ವ್ಯಾಸ, ವಾಲ್ಮೀಕಿಗಳ ಮೂಲ ಕಥೆಗಳನ್ನು ಓದಿದರೆ ಟಿವಿ ನೈನ್ ನ ಧಾಟಿಯಲ್ಲಿ, "ಹೀಗೂ ಉಂಟೆ" ಅನ್ನಬೇಕಾದೀತು.
ಹಿಂದೂಗಳು ಅಂದಮೇಲೆ ದೇವಾಲಯಗಳು ಬರುತ್ತವಲ್ಲ . ದೇವಾಲಯಗಳು ಬಂದದ್ದೂ ಸುಮಾರು ಮೂರು ಸಾವಿರ ವರ್ಷಗಳ ಮೊದಲಷ್ಟೇ . ಈ ಪುರಾಣಗಳಲ್ಲಿ ಬಂದಿರುವ ನಕ್ಷತ್ರಗಳ ಲೆಕ್ಕ ಮಾಡಿ ರಾಮಾಯಣದ ಕಾಲ ಕ್ರಿ ಪೂ 5000 ಇದ್ದೀತು ಅಂದವರು ಇದ್ದಾರೆ. ಹೀಗಾಗಿ ಒಂದು ಏಳು ಸಾವಿರ ವರ್ಷಗಳಿಂದ ಈ ಧರ್ಮ ಇದೆ ಅಂತ ಇಟ್ಟುಕೊಂಡರೆ, ಅದರಲ್ಲಿ ಸುಮಾರು ನಾಲ್ಕು ಸಾವಿರ ವರ್ಷ ದೇವಾಲಯಗಳೇ ಇರಲಿಲ್ಲ ಅಂದರೆ ಅಚ್ಚರಿಯ ವಿಷಯವೇ. ದೇವಾಲಯಗಳೂ ಮೊದ ಮೊದಲು ಜೇಡಿ ಮಣ್ಣಿನ, ಹುಲ್ಲು ಹಾಸು ಇರುವ ಕಟ್ಟಡಗಳಾಗಿ ಇದ್ದವಂತೆ. ಇನ್ನು ಸತ್ಯನಾರಾಯಣ ಪೂಜೆಯಂತೂ ತೀರ ಇನ್ನೂರು ಮುನ್ನೂರು ವರ್ಷ ಮೊದಲು ಹುಟ್ಟಿದ್ದು ಅಂತ ಶ್ರೀನಿವಾಸ ಹಾವನೂರರು ಹೇಳಿದ್ದಾರೆ.
ಕಲೆಗಳ ವಿಚಾರಕ್ಕೆ ಬರೋಣ. ಭರತ ನಾಟ್ಯ ನಮ್ಮ ಸಾಂಪ್ರದಾಯಿಕ ನಾಟ್ಯ, ಸರಿ ತಾನೇ ? ಇಲ್ಲಿ ಕೇಳಿ. ನಾವು ಈಗ ಭರತ ನಾಟ್ಯ ಅಂತ ಯಾವುದನ್ನು ಹೇಳುತ್ತೇವೋ ಅದು ಸುಮಾರು ಇನ್ನೂರು ವರ್ಷಕ್ಕೆ ಮೊದಲಷ್ಟೇ ಹುಟ್ಟಿದ್ದು. ಮೊದಲಿಂದ ಇದ್ದದ್ದು ದೇವದಾಸಿಯರು ದೇವಾಲಯಗಳಲ್ಲಿ ಮಾಡುತ್ತಿದ್ದ ನೃತ್ಯ, ರಾಜರ ಆಸ್ಥಾನಗಳಲ್ಲಿ ನರ್ತಕಿಯರ ನೃತ್ಯ, ಸಾದಿರ್ ನಾಟ್ಯ , ಭಾಗವತರ ಮೇಳ ಇಂತವು. ಇವನ್ನು ನೋಡಿ, ಮತ್ತು ತುಂಬಾ ಮೊದಲು ಭರತ ಮುನಿ ಬರೆದ ನಾಟ್ಯ ಶಾಸ್ತ್ರ ಪುಸ್ತಕ ಇಟ್ಟುಕೊಂಡು ಇತ್ತೀಚಿಗೆ ಚಾಲ್ತಿಗೆ ಬಂದ ನೃತ್ಯ ಪ್ರಕಾರ ಇದು. ಅದಕ್ಕೆ ಈಗಿನ ರೂಪ ಬಂದದ್ದು ಕಳೆದ ಎಂಬತ್ತು ವರ್ಷಗಳಲ್ಲಿ ಅಂದರೆ ಆಶ್ಚರ್ಯವೇ. ಹಾಗೆ ನೋಡಿದರೆ ನಮ್ಮ ಯಕ್ಷಗಾನ, ಕಥಕ್ ಇವಕ್ಕೆಲ್ಲ ಒಂದು 900 ವರ್ಷಗಳ ಇತಿಹಾಸವಾದರೂ ಇದೆ, ಭರತನಾಟ್ಯ ಮಾತ್ರ ಈಚೆಗಿನದು.
ವಾರಕ್ಕೆ ಏಳು ದಿನ ಅನ್ನುವ ಕಲ್ಪನೆಯೂ ಬಂದು ಬರೇ ಸಾವಿರದ ಇನ್ನೂರು ವರ್ಷ ಆಗಿರಬಹುದಷ್ಟೆ
ಶಾಸ್ತ್ರೀಯ ಸಂಗೀತ ಅಂದ ಕೂಡಲೇ ಹಾರ್ಮೋನಿಯಮ್ , ಪಿಟೀಲುಗಳು ನೆನಪಾಗುತ್ತವಲ್ಲ. ಪಕ್ಕಾ ಶಾಸ್ತ್ರೀಯ ಶೈಲಿಯಲ್ಲಿ ಯಾರಾದರೂ ಪಿಟೀಲು ನುಡಿಸುವುದು ನೋಡಿ ತಲೆ ಆಡಿಸಿರುತ್ತೀರಿ. ಆದರೆ ಅವೂ ಯೂರೋಪಿನಿಂದ ಬಂದವು ಅಂದರೆ ಹೌಹಾರುವಂತೆ ಆಗಬಹುದು. ತಂಬೂರಿಯೂ ಅರೇಬಿಯಾದ್ದು ಅಂತ ಪಾವೆಂ ಆಚಾರ್ಯರು ಹೇಳಿದ್ದಾರೆ, ತಂಬೂರಿ ಮೀಟಿದವ ಭವಾಬ್ದಿ ದಾಟಿದವ ಹಾಡನ್ನು ತಿದ್ದಿ ಬರೆಯಬೇಕಾದೀತು . ತಬಲಾ ಹೇಗೂ ನಮ್ಮದಲ್ಲ. ಇನ್ನು ಉಳಿದದ್ದು ಏನು ಅಂತ ಕೇಳಬೇಡಿ!
ಇನ್ನೊಂದು ವಿಚಿತ್ರ ಅಂದರೆ ನಮ್ಮ ಇತಿಹಾಸವನ್ನು ಅನೇಕ ಸಲ ವಿದೇಶಿಯರು ಬರೆದದ್ದರಿಂದ, ಅವರು ಅವರ ಮೂಗಿನ ನೇರಕ್ಕೆ ಬರೆದು, ಅದೆಷ್ಟೋ ತಲೆಬುಡ ಇಲ್ಲದ ವಿಷಯಗಳು ಸೇರಿ ಕಿಚ್ಡಿ ಆಗಿದೆ. ಉದಾಹರಣೆಗೆ ಸಾಮ್ರಾಟ ಅಶೋಕ ಅಂತಾ ಒಳ್ಳೆ ಮನುಷ್ಯ ಅನ್ನುವುದಕ್ಕೆ, ಶ್ರೇಷ್ಟಾತಿಶ್ರೇಷ್ಟ ರಾಜ ಅನ್ನುವುದಕ್ಕೆ ಸರಿಯಾದ ಸಾಕ್ಷಿ ಆಧಾರಗಳೇ ಇಲ್ಲ ಅಂತ ಹೇಳಬೇಕು. ಅಶೋಕ ಗ್ರೇಟ್ ಅಂತ ಆದದ್ದು ತೀರಾ ಇನ್ನೂರು ವರ್ಷ ಮೊದಲು ಆದ ಬೆಳವಣಿಗೆ. ಆರ್ಯನ್ invasion ಥಿಯರಿಯಂತ ಕಟ್ಟು ಕತೆ ಒಮ್ಮೆ ಚಾಲ್ತಿಗೆ ಬಂದ ಮೇಲೆ ತೆಗೆದು ಹಾಕುವುದಕ್ಕೆ ಬಡಿದಾಟವೇ ಆಗಬೇಕಾಗಿದೆ. ಇತಿಹಾಸವನ್ನು ಗೆದ್ದವರೇ ಬರೆಯುವುದರಿಂದ ಅವರಿಗೆ ಬೇಕಾದಂತೆ ಬರೆಯುವುದೂ ಮಾಮೂಲಿಯೇ. ದುಷ್ಟನೂ, ಮತಾಂಧನೂ ಆಗಿದ್ದ ಔರಂಗಜೇಬನಿಗೆ ಎಷ್ಟು ಪ್ರಚಾರ ಸಿಕ್ಕಿದೆ ನೋಡಿ , ತುಂಬಾ ಸಜ್ಜನನೂ ಹಿಂದೂ ಮುಸ್ಲಿಂ ಗೆಳೆತನದ ಪ್ರತೀಕವೂ ಆಗಿದ್ದ ದಾರಾ ಶಿಕೋವಿಗೆ ಅವನು ಔರಂಗಜೇಬನ ಅಣ್ಣನೇ ಆದರೂ ಅಷ್ಟು ಪ್ರಚಾರ ಸಿಕ್ಕಿಲ್ಲ. ಇಂತದ್ದು, ಇತಿಹಾಸ ಬಲಶಾಲಿಗಳ ಪರವಾಗಿ ಇರುವುದು ಬೇಕಾದಷ್ಟಿದೆ
ಹಲ್ಮಿಡಿಯ ಶಾಸನ ಕನ್ನಡದ ಅತ್ಯಂತ ಹಳೆಯ ಶಾಸನ ಅಂತ ಶಾಪ ಹಾಕಿ ಶಾಲೆಯಲ್ಲಿ ಬಾಯಿ ಪಾಠ ಮಾಡಿರ್ತೀರಿ. ನಿಮ್ಮನ್ನು ಅದರ ಮುಂದೆ ನಿಲ್ಲಿಸಿದರೆ ಎಷ್ಟು ಜನ ಓದಬಲ್ಲಿರಿ ಹೇಳಿ ನೋಡೋಣ. ಯಾಕೆ ಈ ಪ್ರಶ್ನೆ ಅಂತೀರಾ ? ಯಾಕೆಂದರೆ ನಾವು ಈಗ ಕನ್ನಡ ಅಂತ ಹೇಳುವ ಲಿಪಿಯಲ್ಲಿ ಅದು ಇಲ್ಲ! ಅಷ್ಟು ಸಾಲದು ಅಂತ ಸ್ಪೇಸ್ ಗಳ ಬಳಕೆಯೂ ಮಾಡದೆ ಎಲ್ಲ ಅಕ್ಷರಗಳನ್ನ ಮುದ್ದೆ ಮಾಡಿ ಗುಡ್ಡೆ ಹಾಕಿದ ತರ ಬರೆದಿದ್ದಾರೆ. ನಾವು ಈಗ ಬಳಸುತ್ತಿರುವ ಲಿಪಿ ಬಂದದ್ದು ಕದಂಬರ ಕಾಲದಲ್ಲಿ. ಒಂದು ಮೂರು ಸಾವಿರ ವರ್ಷಗಳಿಂದ ಕನ್ನಡ ಇದೆ ಅಂತ ಇಟ್ಟುಕೊಂಡರೆ ಈಗ ಇರುವ ಲಿಪಿ ಸುಮಾರು ಎರಡು ಸಾವಿರ ವರ್ಷ ಇರಲಿಲ್ಲ. ಬಲದಿಂದ ಎಡಕ್ಕೆ ಬರೆಯುವುದು ಅರೇಬಿಕ್ ಪದ್ಧತಿ ಅಂದುಕೊಂಡವರಿಗೂ ಒಂದು ಸುದ್ದಿ ಇದೆ, ಇಂತವು ನಮ್ಮಲ್ಲೂ ಇದ್ದವು. ಹರಪ್ಪಾ ಮೊಹೆಂಜೋದಾರೋ ದಲ್ಲಿ ಇದ್ದದ್ದು ಬಲದಿಂದ ಎಡಕ್ಕೆ ಬರೆಯುವ ಲಿಪಿ ಇರಬಹುದು ಅಂತ ಈಗ ಊಹಿಸಿದ್ದಾರೆ, ಕೆಳಗಿಂದ ಮೇಲೆ ಬರೆದಿರುವ ಶಾಸನಗಳೂ ನಮ್ಮಲ್ಲಿ ಸಿಕ್ಕಿವೆ. ಸುದೀಪ, ಪುನೀತ, ದರ್ಶನ , ಪ್ರವೀಣ ಹೀಗೆ ಬರೆಯುವುದು ಕನ್ನಡದ ಕ್ರಮ, ಈಗ ಹಿಂದಿ ಶೈಲಿಯಲ್ಲಿ ಇವು ಸುದೀಪ್, ಪುನೀತ್ , ದರ್ಶನ್ ಆಗಿವೆ, ಹೌದು ತಾನೇ ? ಈಗ ಒಮ್ಮೆ ಶ್ರೀಲಂಕಾಕ್ಕೆ ಹೋಗಿ ಬನ್ನಿ. ಅಲ್ಲಿ ಅರ್ಜುನ್ ರಣತುಂಗ್, ಕುಮಾರ್ ಧರಮ್ ಸೇನ್ ಗಳು ಇಲ್ಲ . ಅಲ್ಲಿರುವುದು ಅರವಿಂದ ಡಿಸಿಲ್ವ, ಕುಮಾರ ಧರ್ಮಸೇನ, ಅರ್ಜುನ ರಣತುಂಗದಂತ ಕನ್ನಡದ ಶೈಲಿಯ, ಅಕಾರ ಇರುವ ಹೆಸರುಗಳೇ!
ಮತ್ತೆ ಆಹಾರಕ್ಕೆ ಬರೋಣ. ಭಾರತೀಯ ಆಹಾರ ಪದ್ದತಿಯ ಬಗ್ಗೆ ಸಾಕಷ್ಟು ಸಂಶೋಧನೆ ಮಾಡಿ ಬರೆದಿರುವ ವಿದ್ವಾಂಸ ಕೆಟಿ ಅಚಯ್ಯ ಅನ್ನುವವರು. ಅವರು ಹೇಳುವಂತೆ ಇಡ್ಲಿಯೂ ಇಲ್ಲಿಯದ್ದಲ್ಲವಂತೆ. ಅದು ಇಂಡೋನೇಷಿಯಾದಿಂದ ಬಂದಿದೆ ಅಂತ ಅವರು ಬರೆದಿದ್ದಾರೆ. ಇದು ಇಡ್ಲಿಪ್ರಿಯರ ವಲಯದಲ್ಲಿ ಕೋಲಾಹಲವನ್ನೇ ಎಬ್ಬಿಸಿದೆ. ಇಡ್ಲಿಯೇ ನಮ್ಮದಲ್ಲ ಅಂತಾದ ಮೇಲೆ ಈ ಬಾಳುವೆ ಇದ್ದರೆಷ್ಟು ಹೋದರೆಷ್ಟು ಅನ್ನುವವರು ಇರಬಹುದು. ಕೆಲವರು ಇದು ತಪ್ಪು ಅಂತ ವಾದಿಸಿಯೂ ಇದ್ದಾರೆ . ದಕ್ಷಿಣ ಕನ್ನಡದ ಪತ್ರೊಡೆ, ಕೊಟ್ಟೆ ಇಡ್ಲಿ, ಕೊಟ್ಟಿಗೆ, ಉಂಡೆ(ಪುಂಡಿ) ಇವೆಲ್ಲ ಇಡ್ಲಿಯ ಹತ್ತಿರದ ಸಂಬಂಧಿಗಳೇ. ಹೀಗೆ ಹಬೆಯಲ್ಲಿ ಬೇಯಿಸುವ ಕ್ರಮ ನಮ್ಮಲ್ಲಿ ಮೊದಲೇ ಇತ್ತು ಅಂತ ನಿಟ್ಟುಸಿರು ಬಿಡಬಹುದು.
ಅಂತೂ ಸಂಪ್ರದಾಯ, ನಮ್ಮದು ಅನ್ನುವ ಕಲ್ಪನೆಗಳೆಲ್ಲ ಐನೂರು ವರ್ಷಕ್ಕೊಮ್ಮೆ ಹಲವು ವಿಷಯಗಳಲ್ಲಿ ಬದಲಾಗುತ್ತವೆ ಅನ್ನುವುದಕ್ಕೆ ಅಡ್ಡಿಯಿಲ್ಲ.

No comments:

Post a Comment