Friday 2 December 2016

ಶಿವರಾಮ ಕಾರಂತರ ಕತೆಗಳು

ಶಿವರಾಮ ಕಾರಂತರ ಹುಟ್ಟು ಹಬ್ಬದ ನೆಪದಲ್ಲಿ ಮಾಡಿದ್ದ ಒಂದು ಪ್ರಯತ್ನ.
ಕೆಲವರಿಗೆ ಒಂದು ವಿಷಯದ ಬಗ್ಗೆ ಸರಿಯಾಗಿ ಗೊತ್ತಿದ್ದರೇ ಪುಣ್ಯ, ಎರಡೋ ಮೂರೋ ಗೊತ್ತಿದ್ದರಂತೂ ಸರಿಯೇ ಸರಿ, ಅಂತಾದ್ದರಲ್ಲಿ ಕಾರಂತಜ್ಜ ಕಡಿಮೆ ಎಂದರೂ ಸುಮಾರು ಹದಿನೈದು ವಿಷಯಗಳ ಬಗ್ಗೆಯಾದರೂ ಬರೆದಿರಬಹುದು/ಕೆಲಸ ಮಾಡಿರಬಹುದು. ಹೀಗಾಗಿ ಅವರನ್ನು ಕಡಲಿಗೆ, ಹಿಮಾಲಯಕ್ಕೆ, ಹೆಮ್ಮರಕ್ಕೆ ಎಲ್ಲ ಹೋಲಿಸಿ ಅವರ ಆಳ, ಎತ್ತರ, ವಿಸ್ತಾರ ,ಹರಹುಗಳ ಬಗ್ಗೆ ಹೇಳುವುದು ಮಾಮೂಲಿ.
ಬರೀ ಕಾರಂತಜ್ಜ ಅಂತಲ್ಲ, ತೇಜಸ್ವಿ, ಪಾವೆಂ ಆಚಾರ್ಯ, ವೈ ಎನ್ಕೆ ಇವರೆಲ್ಲ ಹೀಗೆ ಹತ್ತಾರು ಕಡೆ ಹುಡುಕಿ , ಹಲವಷ್ಟು ಬಗೆಯ ಖಾದ್ಯಗಳನ್ನು ಮಾಡಿ ಬಡಿಸಿದವರೇ. ಕನ್ನಡದ ಪಾಲಿಗೆ ಆಗಿನ ಕಾಲದ ನ್ಯಾಷನಲ್ ಜಿಯೋಗ್ರಾಫಿಕ್, ಡಿಸ್ಕವರಿ ಮತ್ತು ಹಿಸ್ಟರಿ ಚಾನೆಲ್ ಎಲ್ಲವೂ ಇವರುಗಳೇ ಆಗಿದ್ದರು ಅನ್ನುವುದಕ್ಕೆ ಅಡ್ಡಿಯಿಲ್ಲ! ಆಮೇಲೆ ಬಂದ ನಾಗೇಶ್ ಹೆಗಡೆ, ಶ್ರೀವತ್ಸ ಜೋಶಿ, ರೋಹಿತ್ ಚಕ್ರತೀರ್ಥ ಇವರೂ ಈ ಹಾದಿಯಲ್ಲಿ ಸಾಗಿದ್ದಾರೆ ಅಂತ ಹೇಳಬಹುದು. ಇಂತಿಪ್ಪ ಕಾರಂತರನ್ನ ಒಂದಷ್ಟು anecdoteಗಳ ಮೂಲಕ ಹಿಡಿದರೆ ಹೇಗೆ ಅಂತ ತಲೆಗೆ ಬಂತು. ಇವುಗಳಲ್ಲಿ ಹೆಚ್ಚಿನವು ನಾನು ಕಿವಿಯಾರೆ ಕೇಳಿದ್ದು, ಬಹುಷಃ ಎಲ್ಲಿಯೂ ಬರಹ ರೂಪದಲ್ಲಿ ಬಂದಿರಲಿಕ್ಕಿಲ್ಲ.
ನಮ್ಮಲ್ಲಿ ಒಬ್ಬರು ಒಂದು ಪುಸ್ತಕ ಬರೆದರಂತೆ, ಕಾರಂತರು ಹೇಳಿಕೇಳಿ ದೊಡ್ಡ ಸಾಹಿತಿ , ಅವರು ಏನು ಹೇಳಿಯಾರು ನೋಡುವ ಅಂತ ಅವರನ್ನು ನೋಡಲು ಹೋದರಂತೆ. ಸರಿ. ಪುಸ್ತಕ ತೆಗೆದು, ಪುಟ ತಿರುಗಿಸಿ ನೋಡಿ, ಕಾರಂತರು ಇವರನ್ನೇ ದಿಟ್ಟಿಸಿ ನೋಡಿದರಂತೆ. ಇವರಿಗೆ ಮೊದಲೇ ಭಯ ಮಿಶ್ರಿತ ಗೌರವ, ಕಾರಂತರು ಉಗಿದು ಉಪ್ಪಿನ ಕಾಯಿ ಹಾಕಿದರೆ ಅಂತ ಒಳಗೊಳಗೇ ಕಟಿಪಿಟಿ. "ಮನೆಯಲ್ಲಿ ಕಪಾಟು ಉಂಟೋ ?", ಬೆಂಗಳೂರು ಟ್ರಾಫಿಕ್ಕಿನಲ್ಲಿ ಬೈಕೊಂದು ತೂರಿ ಬಂದ ಹಾಗೆ ಬಂತು ಕಾರಂತಜ್ಜನ ಪ್ರಶ್ನೆ! "ಕಪಾಟು .......... , ಒಂದುಂಟು ಸ್ವಾಮೀ", ಅಂದರು ಇನ್ನೇನು ಕಾದಿದೆಯೋ ಅಂತ ಹೆದರುತ್ತಾ. ಕಾರಂತಜ್ಜ ಮುಂದುವರೆಸಿದರು ,"ಹಾಗಾದರೆ ಇನ್ನೊಂದು ಮಾಡಿಸಿ, ಪುಸ್ತಕ ಎಲ್ಲ ಯಾರೂ ದುಡ್ಡು ಕೊಟ್ಟು ತಕೊಳ್ಳುದಿಲ್ಲ, ಒಂದು ಚಂದದ ಕಪಾಟು ಬೇಕಾಗ್ತದೆ ಸಾಲಾಗಿ ಜೋಡಿಸಿಡ್ಲಿಕ್ಕೆ".
ಇನ್ನೊಬ್ಬರು ಶಿಶು ಕವಿ, ಕವನ ಸಂಕಲನವನ್ನು ಕಾರಂತರಿಗೆ ಕಳಿಸಿದರು. ಕಾರಂತರಿಂದ ಉತ್ತರವಾಗಿ ಒಂದು ಪೋಸ್ಟು ಕಾರ್ಡು ಬಂತು, ನೋಡಿದರೆ ಒಂದೇ ಸಾಲು : ಮಕ್ಕಳ ಪದ್ಯಗಳು ವಿವರಿಸುವ ಹಾಗೆ ಇರಬಾರದು. ಒಂದು ಒಕ್ಕಣೆ, ಒಂದು ನಮಸ್ಕಾರ , ಇದು ಚೆನ್ನಾಗಿದೆ, ಇಲ್ಲಿ ಸರಿಯಿಲ್ಲ, ಇಷ್ಟು ಇಷ್ಟ ಆಯಿತು, ಇದನ್ನು ತಿದ್ದಿಕೊಳ್ಳಿ ಅಂತೆಲ್ಲ ಏನೂ ಇಲ್ಲ, ಬರೀ ಒಂದೇ ಸಾಲು! ಕಾರಂತರು ಇಷ್ಟು ದೊಡ್ಡ ಜನ ಆಗಿಯೂ ಪತ್ರ ಬರೆದು ಉತ್ತರಿಸಿದ್ದಾರೆ ಅಂತ ಖುಷಿ ಪಡಬೇಕೋ, ಹೀಗೆ ಬರೆದಿದ್ದಾರೆ ಅಂತ ಬೇಸರಿಸಬೇಕೋ ಗೊತ್ತಾಗದಂತ ಪರಿಸ್ಥಿತಿ!
ಇನ್ನೊಂದು ಕಥೆ ಸಾಹಿತಿ ಸಮಾಜ ಸೇವಕ ನೀರ್ಪಾಜೆ ಭೀಮ ಭಟ್ಟರು ಹೇಳಿದ್ದು. ಪಾರ್ತಿಸುಬ್ಬನನ್ನು ಯಕ್ಷಗಾನದ ಪಿತಾಮಹ ಅನ್ನುತ್ತಾರಷ್ಟೇ. ಈ ಪಾರ್ತಿಸುಬ್ಬನ ಊರು ಕುಂಬಳೆ ಅಂತ ಪ್ರತೀತಿ, ಅದು ಕುಂಬಳೆ ಅಲ್ಲ ಅಂತ ವಾದಿಸಿ ಕಾರಂತರು ಉದಯವಾಣಿಯಲ್ಲಿ ಬರೆದಿದ್ದರಂತೆ. ಅವರ ವಾದ ತಪ್ಪಿದೆ ಅಂತ ಭೀಮ ಭಟ್ಟರು ಸಾಕ್ಷಿ ಆಧಾರ ಒದಗಿಸಿ ಒಂದು ಉತ್ತರ ಕೊಟ್ಟರಂತೆ. ಆಮೇಲೆ ಉತ್ತರ, ಪ್ರತ್ಯುತ್ತರ, ವಾದ, ಪ್ರತಿವಾದ , ಮಂಡನೆ, ಖಂಡನೆ ಹೀಗೆ ಒಂದು ಎರಡು ತಿಂಗಳು ವಾಕ್ಸಮರವೇ ಆಯಿತಂತೆ. ಹೀಗಾಗಿ ಕಾರಂತರಿಗೂ ನೀರ್ಪಾಜೆಯವರಿಗೂ ಬಧ್ಧ ವೈರ ಇದೆ ಅಂತಲೇ ಜನ ಭಾವಿಸಿದ್ದರಂತೆ. ಆದರೆ ಮುಂದೆ ನೀರ್ಪಾಜೆಯವರನ್ನು ಸ್ನೇಹದಿಂದಲೇ ಕಂಡಿದ್ದರಂತೆ. ಆ ತರದ, ಸಿಧ್ಧಾಂತಕ್ಕೆ ಮಾತ್ರ ಸೀಮಿತವಾದ ಜಗಳಗಳು ಇದ್ದವು ಅಂತ ಎಡ ಬಲಗಳು ವಿಷ ಕಾರಿಕೊಂಡು, ವೈಯ್ಯಕ್ತಿಕ ದ್ವೇಷ ಸಾಧಿಸುವುದು ಹೆಚ್ಚಾಗಿರುವ ಈ ಕಾಲದಲ್ಲಿ ನೆನಪಿಸಲೇಬೇಕಾಗಿದೆ. ಮುಂದೆ ನೀರ್ಪಾಜೆಯವರ ಕೃತಿಗಳನ್ನು ಅವರು ಮೆಚ್ಚಿ ಆಡಿದ್ದೂ ಉಂಟಂತೆ. ನೀರ್ಪಾಜೆಯವರಿಗೆ ಆಗ ಸಣ್ಣ ಪ್ರಾಯ. "ನಿಮ್ಮ ವಾದ ಮಂಡನೆ, ವಿದ್ವತ್ತು ಇದನ್ನೆಲ್ಲ ನೋಡಿ ಅರುವತ್ತು ದಾಟಿರಬೇಕು ಅಂದುಕೊಂಡಿದ್ದೆ, ನಿಮಗೆ ಇಷ್ಟು ಸಣ್ಣ ಪ್ರಾಯವೇ" ಅಂತಲೂ ಕಾರಂತಜ್ಜ ಅಚ್ಚರಿ ಪಟ್ಟಿದ್ದರಂತೆ.
ಒಮ್ಮೆ ಒಬ್ಬರು ಕಾರಂತರ ಮನೆಗೆ ಹೋದರಂತೆ. "ಕಾರಂತರೇ ನಿಮ್ಮನ್ನು ಒಮ್ಮೆ ನೋಡಿ ಹೋಗುವ ಅಂತ ಬಂದೆ" ಎಂದರಂತೆ. "ನೋಡಿ ಆಯಿತಲ್ಲ, ಇನ್ನು ಹೊರಡಿ" ಎಂದರಂತೆ ಕಾರಂತರು ! ನನ್ನ ದೊಡ್ಡಪ್ಪ(ಜಿಕೆ ಭಟ್ ಸೇರಾಜೆ) ಒಂದು ಸಲ ಕಾರಂತರಲ್ಲಿಗೆ ಹೋಗಿದ್ದರಂತೆ. ಅವರೊಟ್ಟಿಗೆ ಸ್ವಲ್ಪ ಜಾಗ್ರತೆ ಅಂತ ಗೆಳೆಯರು ಹೇಳಿ ಕಳಿಸಿದ್ದರಂತೆ! ಯಕ್ಷಗಾನದ ಉದಂತಕಥೆಯೇ ಆಗಿದ್ದ ಕುರಿಯ ವಿಠ್ಠಲ ಶಾಸ್ತ್ರಿಗಳ ಅಳಿಯ ನಾನು ಅಂತ ಪರಿಚಯ ಮಾಡಿಕೊಂಡ ಮೇಲೆ ಕಾರಂತಜ್ಜ ಸುಮಾರು ಒಂದೂವರೆ ಘಂಟೆ ಮಾತಾಡಿದರಂತೆ, ಅವರ ಶ್ರೀಮತಿಯವರೂ ಬಂದು ಮಾತಾಡಿಸಿ, ತಿಂಡಿ ಕಾಫಿ ಎಲ್ಲ ತಂದು ಕೊಟ್ಟು ಸತ್ಕರಿಸಿದರಂತೆ.
ಮುಳಿಯ ತಿಮ್ಮಪ್ಪಯ್ಯ, ಮಂಜೇಶ್ವರ ಗೋವಿಂದ ಪೈಗಳು, ಸೇಡಿಯಾಪು ಕೃಷ್ಣ ಭಟ್ಟರು ಇವರೆಲ್ಲ ದಕ್ಷಿಣ ಕನ್ನಡದಲ್ಲಿ ಮಾತ್ರವಲ್ಲ, ಕರ್ನಾಟಕದಲ್ಲೇ ಪಾಂಡಿತ್ಯದ ಮೇರು ಶಿಖರಗಳು. ಇವರದ್ದೆಲ್ಲ ಸಮಗ್ರ ಸಾಹಿತ್ಯ ಪುಸ್ತಕ ರೂಪದಲ್ಲಿ ಬರಬೇಕು ಅಂತ ಕಾರಂತರು ಯಾವಾಗಲೂ ಭಾಷಣಗಳಲ್ಲಿ ಹೇಳುತ್ತಿದ್ದರಂತೆ. ಗೋವಿಂದ ಪೈಗಳ ರಾಜಕೀಯ ನಿಲುವುಗಳು ಕಾರಂತರಿಗೆ ಆಗಿ ಬರುತ್ತಿರಲಿಲ್ಲ, ಅದನ್ನು ಖಂಡಿಸಿ ಲೇಖನವೂ ಬರೆದಿದ್ದರಂತೆ. ಆದರೂ ಮುಳಿಯ ತಿಮ್ಮಪ್ಪಯ್ಯ, ಗೋವಿಂದ ಪೈ ಇವರ ಸಮಗ್ರ ಸಾಹಿತ್ಯ ಬರಬೇಕು ಅಂತ ಹೇಳುತ್ತಲೇ ಇದ್ದರಂತೆ , ಮಾತ್ರವಲ್ಲ , ಗೋವಿಂದ ಪೈಗಳ ಸಂಶೋಧನೆಗಳ ಪುಸ್ತಕ ಬಂದಾಗ ಸಂತೋಷ ಪಟ್ಟು, ಅದನ್ನು ತಂದ ಮುರಳೀಧರ ಉಪಾಧ್ಯ ಹಿರಿಯಡಕ ಮತ್ತು ಹೆರಂಜೆ ಕೃಷ್ಣ ಭಟ್ಟರಿಗೆ ಇಪ್ಪತ್ತು ಸಾವಿರ ಕಿಸೆಯಿಂದ ತೆಗೆದು ಕೊಟ್ಟಿದ್ದರಂತೆ(ಹಿರಿಯಡಕ ಮುರಳೀಧರ ಉಪಾಧ್ಯರು ಸಂದರ್ಶನವೊಂದರಲ್ಲಿ ಹೇಳಿದ್ದು)
ವಿಮರ್ಶಕ ವಿಜಯ ಶಂಕರ್ ಹೇಳಿದ ಕಥೆ. ವಿಟ್ಲದ ಪ್ರೌಢ ಶಾಲೆಯ ಕಾರ್ಯಕ್ರಮ ಒಂದಕ್ಕೆ ಬರ್ತೇನೆ ಅಂತ ಎರಡು ತಿಂಗಳು ಮೊದಲೇ ಕಾರಂತರು ಒಪ್ಪಿದ್ದರಂತೆ. ಕಾರ್ಯಕ್ರಮಕ್ಕೆ ಇನ್ನು ಹದಿನೈದು ದಿನ ಇರುವಾಗ ಪೇಪರಿನಲ್ಲೊಂದು ಸುದ್ದಿ. ಡೆಲ್ಲಿಯಲ್ಲಿ ಯಾವುದೋ ದೊಡ್ಡ ಕಾರ್ಯಕ್ರಮ ಇದೆ, ಕಾರಂತರು ಅಲ್ಲಿರುತ್ತಾರೆ ಅಂತ. ದೊಡ್ಡ ಕಾರ್ಯಕ್ರಮ ಇರುವಾಗ ವಿಟ್ಲದ ಸಣ್ಣ ಕಾರ್ಯಕ್ರಮಕ್ಕೆ ಕಾರಂತರು ಬರುತ್ತಾರೆಯೇ ಅಂತ ಗಲಿಬಿಲಿ ಆಗಿ, ಸಂಶಯ ನಿವಾರಣೆಗೆ ಅವರಲ್ಲಿಗೇ ಓಡಿದರಂತೆ. "ನಿಮ್ಮಲ್ಲಿಗೆ ಬರ್ತೇನೆ ಅಂತ ಒಪ್ಪಿಕೊಂಡಿದ್ದೇನಲ್ಲ, ಮತ್ತೆ ಡೆಲ್ಲಿಗೆ ಯಾಕೆ ಹೋಗ್ತೇನೆ ? ನಿಮ್ಮಲ್ಲಿಗೇ ಬರುವುದು" ಅಂದರಂತೆ. ಇನ್ನೊಬ್ಬರು ಹೀಗೆ ಕರೆದಿದ್ದಾಗ ಕಾರಿನ ಡೀಸೆಲ್ ಖರ್ಚಿಗೆ ಇಷ್ಟು ಅಂತ ಕೊಟ್ಟಿದ್ದರಂತೆ ಕಾರಂತರಿಗೆ. ಸರಿ, ಬಂದದ್ದಾಯಿತು, ಹೋದದ್ದಾಯಿತು. ಒಂದು ವಾರದಲ್ಲಿ ಕಾರಂತರಿಂದ ಮನಿ ಆರ್ಡರ್! ಏನು ಅಂತ ನೋಡಿದರೆ : ಡೀಸೆಲ್ ಖರ್ಚಿಗೆ ಆಗಿ ಉಳಿದ ಹಣ ಇದು ಅಂತ ಒಕ್ಕಣೆ! ಚಿತ್ರ ನಟ ಅಶ್ವಥ್ ಕೂಡ ಹೀಗೆ ನಿರ್ಮಾಪಕರು ಕೊಟ್ಟ ದುಡ್ಡು ವಾಪಸ್ ಕೊಡುತ್ತಿದ್ದ ಅಪರೂಪದ ಮನುಷ್ಯ ಅಂತ ಕತೆ ಹೇಳುತ್ತಾರೆ.
ವಾಗ್ವಿಲಾಸ, ವಾಗಾಡಂಬರ, ವಾಗ್ವೈಭವ ಮುಂತಾದ ಶಬ್ದಗಳ ಅರ್ಥ ಗೊತ್ತಾಗಬೇಕಾದರೆ ಶೇಣಿಯವರ ಅರ್ಥ ಕೇಳಬೇಕು ಅನ್ನಿಸುವಷ್ಟು ದೊಡ್ಡ ಮಾತಿನ ಮಲ್ಲ ಆಗಿದ್ದವರು ಯಕ್ಷಗಾನ ಕಲಾವಿದ, ತಾಳಮದ್ದಳೆ ಅರ್ಥದಾರಿ ಶೇಣಿ ಗೋಪಾಲಕೃಷ್ಣ ಭಟ್ಟರು. ಕಾರಂತರ ಜೊತೆ ಒಳ್ಳೆ ಒಡನಾಟ ಇದ್ದವರು ಇವರು . ಕಾರಂತರು ಒಮ್ಮೆ ಸಭೆಯಲ್ಲಿ ತೆಂಕು ತಿಟ್ಟು ಯಕ್ಷಗಾನ ಯಕ್ಷಗಾನವೇ ಅಲ್ಲ ಅಂತ ಹೇಳಿದಾಗ ವೇದಿಕೆಯಲ್ಲಿಯೇ ಅದನ್ನು ಖಂಡಿಸಿ ಶೇಣಿ ಉತ್ತರ ಕೊಟ್ಟಿದ್ದರಂತೆ. ಕಾರಂತರನ್ನು ಎದುರೆದುರೇ ಖಂಡಿಸುವಷ್ಟು ಧೈರ್ಯ ಮತ್ತು ಸಾಮರ್ಥ್ಯ ಇದ್ದ ಕೆಲವೇ ಕೆಲವರಲ್ಲಿ ಇವರು ಒಬ್ಬರು ಅನ್ನುತ್ತಾರೆ ಬಲ್ಲವರು. ಶೇಣಿ ಯಕ್ಷಗಾನ ಮೇಳದಲ್ಲಿಯೂ ಇದ್ದವರು. ಅವರು ಹೇಳಿದ ಕಥೆ. ಇವರು ಮಾತಾಡಿಸಲಿಕ್ಕೆ ಅಂತ ಒಮ್ಮೆ ಕಾರಂತರಲ್ಲಿಗೆ ಹೋದರಂತೆ. ಕಾರಂತರು ಏನೋ ಮಾಡುತ್ತಾ, ಅಂಗಳದಲ್ಲೇ ನಿಂತಿದ್ದರಂತೆ. ಇವರ ಮುಖ ದರ್ಶನವಾಯಿತು. ಕಾರಂತರು ನಾಟಕೀಯವಾಗಿ ಹೀಗೆ ಸ್ವಾಗತ ಮಾಡಿದರಂತೆ :
ಓ ಹೋ ಹೋ ! ಶೇಣಿಯವರು !! ಬರ್ಬೇಕು ಬರ್ಬೇಕು !!! ಮತ್ತೆ? ಸಮಾಚಾರ ಎಲ್ಲ ? ಹೇಗೆ ನಡೀತಾ ಉಂಟು ವ್ಯಾಪಾರ ?!!
(ಯಕ್ಷಗಾನ ಕಲೆಯಾಗಿ ಉಳಿದಿಲ್ಲ, ವ್ಯಾಪಾರದ ಹಾಗೆ ಆಗಿದೆ ಅಂತ ಮಾರ್ಮಿಕ ವ್ಯಂಗ್ಯ)

No comments:

Post a Comment