Wednesday, 17 September 2025

ವಿರೋಧಾಭಾಸ

 "ವಿರೋಧಾಭಾಸ" ಎಂಬ ಪದವನ್ನು ಮುಖ್ಯಮಂತ್ರಿಗಳಿಂದ ಹಿಡಿದು ಸಾಹಿತಿಗಳವರೆಗೆ ಎಲ್ಲರೂ ಪ್ರಯೋಗಿಸುತ್ತಿರುತ್ತಾರೆ. ಆದರೆ ಈ "ವಿರೋಧಾಭಾಸ" ಅಂದರೇನು ಎಂದು ಎಂದಾದರೂ ಯೋಚನೆ ಮಾಡಿದ್ದೀರಾ? ನಾನು ಮಾಡಿದ್ದೇನೆ!

ತಾವು ಹೇಳಿದ್ದನ್ನು ತಾವೇ ವಿರೋಧಿಸುವಂಥ ನಡೆಯು ಎಲ್ಲಿಯಾದರೂ ಕಂಡಾಗ, ನಾನು ಕಂಡಂತೆ, "ಅಯ್ಯೋ ಇದೆಂಥ ವಿರೋಧಾಭಾಸ!" ಎಂಬ ಉದ್ಗಾರ ಹಲವರ ಕೀಬೋರ್ಡಿನಿಂದ ಹೊರಡುತ್ತದೆ. ಉದಾಹರಣೆಗೆ, ಲೇಖಕರೊಬ್ಬರ ಈ ವಾಕ್ಯಗಳನ್ನು ನೋಡಿ: "ಗಾಂಧಿ ರೈಲನ್ನು ವಿರೋಧಿಸಿದರು. ಅವರಷ್ಟು ರೈಲಿನಲ್ಲಿ ಚಲಿಸಿದವರಿಲ್ಲ. ಅಂಚೆಯನ್ನು ವಿರೋಧಿಸಿದರು.‌ ಎಂಬತ್ತು ಸಾವಿರ ಪತ್ರಗಳನ್ನು ಅವರೇ ಬರೆದರು." ಇಲ್ಲಿ ನಡೆಗೂ ನುಡಿಗೂ ಕಾಣುವ ಅಂತರವನ್ನು ಆ ಲೇಖಕರು ವಿರೋಧಾಭಾಸ ಎಂದಿದ್ದಾರೆ. ಮುಂದಿನ ವಾಕ್ಯವು ಹಿಂದಿನ ವಾಕ್ಯವನ್ನು ವಿರೋಧಿಸಿದರೆ ಅಲ್ಲಿಯೂ ವಿರೋಧಾಭಾಸದ ಮಾತು ಬರುತ್ತಿರುತ್ತದೆ. ಇನ್ನೊಂದು ಪ್ರಯೋಗವನ್ನೂ ನೋಡಿ ಬಿಡಿ, ಇವು ಪ್ರಸಿದ್ಧ ಲೇಖಕರೊಬ್ಬರ ಸಾಲುಗಳು:
"ನನ್ನ ವೈಯಕ್ತಿಯ ಗ್ರಂಥಾಲಯದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಪುಸ್ತಕಗಳಿವೆ. ಆದರೆ ಅದರಲ್ಲಿ ಸುಮಾರು ೩೦% ಪುಸ್ತಕಗಳನ್ನು ನಾನು ಓದಿಲ್ಲ. ಆದರೆ ಅಷ್ಟೇ ಪ್ರಮಾಣದ ಧ್ವನಿಚಕ್ರಗಳೂ ನನ್ನ ಹತ್ತಿರ ಇವೆ. ಪ್ರತಿಯೊಂದನ್ನು ಕನಿಷ್ಠ ಹತ್ತು ಬಾರಿಯಾದರೂ ಕೇಳಿದ್ದೇನೆ! ಈ ವಿರೋಧಾಭಾಸ ನಿಮ್ಮಲ್ಲಿಯೂ ಇದೆಯೆ?" -- ಇಲ್ಲಿ ಲೇಖಕರು "ವಿರೋಧಾಭಾಸ" ಎಂದು ಯಾವ ಅರ್ಥದಲ್ಲಿ ಹೇಳಿದ್ದಾರೋ ನನಗೆ ತಿಳಿಯಲಿಲ್ಲ.
ಹಲವು ಸಾಹಿತಿಗಳ ಪ್ರಯೋಗಗಳನ್ನು ನೋಡಿದಾಗಲೂ ಅವರು ಈ ಪದವನ್ನು ಅದರ ಅರ್ಥ ತಿಳಿದು ಬಳಸುತ್ತಿದ್ದಾರೆ ಎನ್ನಲು ಧೈರ್ಯ ಸಾಕಾಗಲಿಲ್ಲ.
ಇದೆಲ್ಲ ಹೇಗಾದರೂ ಇರಲಿ. "ವಿರೋಧಾಭಾಸ" ಎಂಬ ಪದದ ಮೂಲಾರ್ಥ ಮೇಲಿನ ಯಾವುದೂ ಅಲ್ಲ ಎಂಬುದೇ ನಾನು ಹೇಳಹೊರಟಿರುವ ವಿಚಾರ. ಹಾಗಾದರೆ ಈ ಪದದ ನಿಜವಾದ ಅರ್ಥವೇನು? ಅದು ಸುಲಭ - ವಿರೋಧದ ಆಭಾಸವೇ, ಅಂದರೆ ವಿರೋಧದ ತೋರಿಕೆಯೇ ವಿರೋಧಾಭಾಸ. ಇಲ್ಲಿ "ತೋರಿಕೆ" ಎಂಬುದಕ್ಕೆ ಅಡಿಗೆರೆ ಹಾಕಿಕೊಳ್ಳಿ. ವಿರೋಧವು ನಿಜವಾಗಿಯೂ ಇಲ್ಲದ ಜಾಗದಲ್ಲಿ, ಮೇಲುನೋಟಕ್ಕೆ ಅದು ಇರುವಂತೆ ತೋರಿಸಿ(apparent contradiction), ಕೊನೆಗೆ ಆ ವಿರೋಧಕ್ಕೆ ಒಂದು ಪರಿಹಾರ ಕಾಣಿಸುವ ಚಮತ್ಕಾರಕ್ಕೆ ವಿರೋಧಾಭಾಸಾಲಂಕಾರ ಎಂದು ಹೆಸರು. ಗಮನಿಸಿ, ಮೂಲಾರ್ಥದಲ್ಲಿ, ಪ್ರಾಚೀನರ ಲೆಕ್ಕದಲ್ಲಿ, ಇದೊಂದು ಅಲಂಕಾರ; ದೋಷವಲ್ಲ. ಉಪಮೆ,ರೂಪಕ,ಶ್ಲೇಷೆ, ಉತ್ಪ್ರೇಕ್ಷೆ, ಅರ್ಥಾಂತರನ್ಯಾಸ,ಸಮಾಸೋಕ್ತಿ, ಅಪ್ರಸ್ತುತ ಪ್ರಶಂಸೆ ಇವೆಲ್ಲ ಇರುವಂತೆ ಇದೂ ಒಂದು ಅಲಂಕಾರ.
ಈ ಅಲಂಕಾರಕ್ಕೆ ಸಿನೆಮಾ ಹಾಡುಗಳಿಂದಲೇ ಉದಾಹರಣೆಗಳನ್ನು ಕೊಡಬಹುದು -
ಈ ಸಾಲನ್ನು ನೋಡಿ : "ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ........ ಮಾತೆಲ್ಲ ಮುಗಿದಾ ಮೇಲೆ ದನಿಯೊಂದು ಕಾಡಿದೆ....... " - ಮಳೆ ಇದ್ದಾಗ ಹನಿ ಇರುತ್ತದೆ, ಮಳೆ ನಿಂತ ಮೇಲೆ ಹನಿ ಉದುರುವುದು ಹೇಗೆ? ಇದು ವಿರೋಧ. ಮಾತಾಡುವಾಗ ದನಿ ಕೇಳುವುದೇನೋ ಸರಿ, ಇಲ್ಲಿ ನೋಡಿದರೆ ಮಾತು ಮುಗಿದ ಮೇಲೆ ದನಿ ಹೊರಡುತ್ತಿದೆ. ಏನಿದೀ ವಿಚಿತ್ರ? ಆದರೆ ಇಲ್ಲೊಂದು logical contradiction ಇದೆ ಎಂದು ಯಾರೂ ಹೇಳುವುದನ್ನು ನಾನು ಕೇಳಿಲ್ಲ, ಇದು ಹೇಗಾಯಿತು? ಈ ಸಾಲುಗಳ ಭಾವ ಜನರಿಗೆ ಅರ್ಥವಾಗಿದೆ, ಇಲ್ಲಿರುವುದು ವಿರೋಧವಲ್ಲ, ಅದರ ಆಭಾಸ ಮಾತ್ರ ಎಂಬುದು ಕೇಳುಗರಿಗೆ ಗೊತ್ತಿದೆ; ಇಲ್ಲಿರುವುದು ಒಂದು ಅಲಂಕಾರ ಎಂಬುದು ಗೊತ್ತಿಲ್ಲದಿದ್ದರೂ!
ಕಾಯ್ಕಿಣಿಯವರದ್ದೇ ಇನ್ನೆರಡು ಸಾಲುಗಳನ್ನು ನೋಡಿ:
೧. "ನೀನೆಂದರೆ ನನ್ನೊಳಗೆ ಏನೋ ಒಂದು ಸಂಚಲನ.. ನಾ ಬರೆಯದ ಕವಿತೆಗಳ ನೀನೇ ಒಂದು ಸಂಕಲನ.."
- ಬರೆದ ಕವಿತೆಗಳ ಸಂಕಲನವನ್ನಾದರೆ ತರಬಹುದು(ಅದನ್ನು ಓದುವವರು ಯಾರೂ ಇಲ್ಲದಿದ್ದರೂ), ಬರೆಯದ ಕವಿತೆಗಳ ಸಂಕಲನ ತರಲಾದೀತೇ? ತರುವುದಾದರೆ invisible ink ಬಳಸಿಯೇ ಪುಸ್ತಕ ತರಬೇಕೇನೋ! ಇಂಥ ಮೇಲುನೋಟದ ವಿರೋಧವೇ ಈ ಅಲಂಕಾರದ ಜೀವಾಳ.
೨. "ನಾನಾಡದಾ ಮಾತೆಲ್ಲವ ಕದ್ದಾಲಿಸು/ಆದರೂ ನೀ ಹೇಳದೆ ಒದ್ದಾಡಿಸು"
- ಆಡಿದ ಮಾತುಗಳನ್ನೇ ಕೇಳುವವರಿಲ್ಲದ ಈ ಕಾಲದಲ್ಲಿ, ಆಡದ ಮಾತುಗಳನ್ನು ಆಲಿಸಬೇಕಂತೆ! ಇದು ಹೇಗೆ ಸಾಧ್ಯ? ಇದೇ ವಿರೋಧಾಭಾಸವೆಂಬ ಅಲಂಕಾರದ ಜಾದೂ!
ಕವಿಗಳ ಕವಿಯಾದ ಮಹರ್ಷಿ ವಾಲ್ಮೀಕಿಯ ಕಾವ್ಯದಿಂದಲೇ ಒಂದು ಕೊನೆಯ ಉದಾಹರಣೆಯನ್ನು ನೋಡಿ ಈ ಪ್ರಸಂಗವನ್ನು ಮುಗಿಸೋಣ:
ರಾಮಾಯಣದಲ್ಲಿ, ಸರ್ಪಾಸ್ತ್ರದ ಹೊಡೆತಕ್ಕೆ ಸಿಕ್ಕಿ, ಕಪಿಸೇನೆಯೆಲ್ಲ ಮೂರ್ಛೆ ಹೋದಾಗ ಬರುವ ಮಾತೊಂದು ಸುಮಾರಾಗಿ ಹೀಗಿದೆ:
ಹನುಮಂತನಿದ್ದಾನಲ್ಲ, ಅವನೊಬ್ಬನು ಬದುಕಿದ್ದರೆ, ಇಡಿಯ ಸೇನೆಯು ಸತ್ತಿದ್ದರೂ ಬದುಕಿದ್ದಂತೆ; ಅವನೇ ಒಂದು ವೇಳೆ ಸತ್ತಿದ್ದಲ್ಲಿ, ಇಡೀ ಸೇನೆಯು ಬದುಕಿದ್ದರೂ ಸತ್ತಿದ್ದಂತೆಯೇ ಲೆಕ್ಕ!
ಹೀಗೆ ಸತ್ತವರು ಬದುಕಿದಂತೆಯೂ ಬದುಕಿದ್ದವರು ಸತ್ತಂತೆಯೂ ಆಗಬೇಕಾದರೆ ಅಲ್ಲಿರಬೇಕಾದ್ದು ಈ ವಿರೋಧಾಭಾಸವೆಂಬ ಅಲಂಕಾರವೇ!

No comments:

Post a Comment