"ಮಣ್ಣ ತಿಂದು ಸಿಹಿ ಹಣ್ಣಕೊಡುವ ಮರ ನೀಡಿ ನೀಡಿ ಮುಕ್ತ", "ತನ್ನಾವರಣವೆ ಸೆರೆಮನೆಯಾದರೆ ಜೀವಕೆ ಎಲ್ಲಿಯ ಮುಕ್ತಿ? ಬೆಳಕಿನ ಬಟ್ಟೆಯ ಬಿಚ್ಚುವ ಜ್ಯೋತಿಗೆ ಬಯಲೇ ಜೀವನ್ಮುಕ್ತಿ", "ಇರುಳ ವಿರುದ್ಧ ಬೆಳಕಿನ ಯುದ್ಧ ಕೊನೆಯಿಲ್ಲದ ಕಾದಾಟ ತಡೆಯೇ ಇಲ್ಲದೆ ನಡೆಯಲೆ ಬೇಕು ಸೋಲಿಲ್ಲದ ಹೋರಾಟ", "ಕಡಲ ಮೇಲೆ ಸಾವಿರಾರು ಮೈಲಿ ಸಾಗಿಯೂ ನೀರಿನಾಳ ತಿಳಿಯಿತೇನು ಹಾಯಿದೋಣಿಗೆ?", "ಸಾವಿರಾರು ಮುಖದ ಚೆಲುವ ಹಿಡಿದು ತೋರಿಯೂ ಒಂದಾದರೂ ಉಳಿಯಿತೇ ಕನ್ನಡಿಯ ಪಾಲಿಗೆ?" ಮುಂತಾದ ಸಾಲುಗಳು ನನಗೆ ಬಹಳವೇ ಇಷ್ಟ. ಈಚೆಗೆ ಸಪ್ತ ಸಾಗರದಾಚೆಯೆಲ್ಲೋ ಸಿನೆಮಾದಲ್ಲಿ "ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ" ಹಾಡು ಬಂದ ಮೇಲೆ ಅದನ್ನು, ಮತ್ತು ಅದೇ ಹಾಡನ್ನು ರಾಘವೇಂದ್ರ ಬೀಜಾಡಿಯವರು ಹಾಡಿರುವುದನ್ನೂ ಮತ್ತೆ ಮತ್ತೆ ಕೇಳುತ್ತಿದ್ದೆ. ಇಂತಹ ಸಾಲುಗಳನ್ನು ಕೊಟ್ಟ ಎಚ್.ಎಸ್. ವೆಂಕಟೇಶಮೂರ್ತಿಯವರು ಭೌತಿಕವಾಗಿ ಇನ್ನಿಲ್ಲ ಎಂಬುದು ಬೇಸರದ ಸಂಗತಿ.
ನಾನು ಇನ್ನೊಂದು ವರ್ಷಗಳಲ್ಲಿ ಸಂಸ್ಕೃತ, ಪ್ರಾಕೃತ ಮತ್ತು ಹಳಗನ್ನಡ/ನಡುಗನ್ನಡಗಳಿಂದ ಆಯ್ದ ಮಾತಿನ ಚಮತ್ಕಾರ, ಉಕ್ತಿ ವೈಚಿತ್ರ್ಯಗಳಿರುವ ಸಾಲುಗಳನ್ನು ಪರಿಚಯಿಸುವ ಪುಸ್ತಕವೊಂದನ್ನು ಬರೆಯಬೇಕು ಎಂದುಕೊಂಡಿದ್ದೆ, ಅದನ್ನು ಎಚ್ಚೆಸ್ವಿಯವರನ್ನು ಭೇಟಿಯಾಗಿ, ಪರಿಚಯ ಮಾಡಿಕೊಂಡು, ಅವರಿಗೆ ತೋರಿಸಬೇಕು ಎಂದು ಮನಸ್ಸಿನಲ್ಲೇ ಅಂದುಕೊಂಡಿದ್ದೆ. ಹಳಗನ್ನಡ ಕಾವ್ಯಗಳ ಬಗ್ಗೆ ಕುವೆಂಪು ಅವರು ಬರೆದಿರುವ ಲೇಖನಗಳು ಚಂದವೋ ಚಂದ, ತೀನಂಶ್ರೀಯವರು ಬರೆದಿರುವ ಲೇಖನಗಳೂ ಸೊಗಸಾಗಿವೆ. ಈ ನನ್ನ ಮೆಚ್ಚುಗೆಯ ಪಟ್ಟಿಗೆ ಎಚ್ಚೆಸ್ವಿಯವರೂ ಸೇರುತ್ತಾರೆ. ಅವರು ಎಷ್ಟೊಳ್ಳೆಯ ಕವಿಯೋ ಅಷ್ಟೇ ಒಳ್ಳೆಯ ಕಾವ್ಯರಸಿಕರು, ವ್ಯಾಖ್ಯಾನಕಾರರು, ಹಳಗನ್ನಡ, ನಡುಗನ್ನಡ, ಸಂಸ್ಕೃತ ಸಾಹಿತ್ಯದ ಸೊಗಸನ್ನು ತಿಳಿಯಾಗಿ, ಸೊಗಸಾಗಿ ತೆರೆದು ತೋರಿಸಬಲ್ಲ ಕಾವ್ಯಾಸ್ವಾದನಾ ನಿಪುಣರಾದ ವಿದ್ವಾಂಸರು ಎಂಬುದು ಹಲವರಿಗೆ ಗೊತ್ತಿರಲಿಕ್ಕಿಲ್ಲ. ಅವಧಿ ಮ್ಯಾಗಝೀನಿನಲ್ಲಿ ಕಾವ್ಯವನ್ನು ಹೇಗೆ ನೋಡಬೇಕು, ಹೇಗೆ ಆಸ್ವಾದಿಸಬೇಕು ಎಂಬ ವಿಷಯವನ್ನಿಟ್ಟುಕೊಂಡು ಅವರು ಬರೆದಿದ್ದ ಸರಣಿ ಲೇಖನಗಳು ಅಭ್ಯಾಸಯೋಗ್ಯವೂ, ಮನನಯೋಗ್ಯವೂ ಆಗಿವೆ. ಕನ್ನಡಪ್ರಭಕ್ಕೆ ಬುಕ್ ರೆಕಮೆಂಡೇಷನ್ ಲೇಖನವವೊಂದನ್ನು ನಾನು ಬರೆದಾಗ, ಅದರಲ್ಲಿ ಬಂದಿದ್ದ ಒಂದು ಭಾಗವನ್ನು ಕೆಳಗೆ ಕೊಟ್ಟಿದ್ದೇನೆ:
***************************************
ಕುಮಾರವ್ಯಾಸನು ವಾಗ್ದೇವಿಯ ಶಾಪಿಂಗ್ ಮಾಲ್'ನಲ್ಲಿ ಇದ್ದದ್ದನ್ನೆಲ್ಲಾ ಬಾಚಿ ಗುಡಿಸಿ ಶಾಪಿಂಗ್ ಮಾಡಿರುವ ಮಹಾಕವಿ. ಅವನ ಕಂಠಪತ್ರದ ಉಲುಹು ಕೇಳಿದಾಗ ಕಿವಿಗೊಟ್ಟರೆ, ಕಿವಿ ತುಂಬುವಷ್ಟು ವಕ್ರೋಕ್ತಿಗಳು ಕೇಳಿಸುತ್ತವೆ. ಅವನು ವಕ್ರೋಕ್ತಿ ಸಾಮ್ರಾಜ್ಯಚಕ್ರವರ್ತಿ. ಉತ್ಪ್ರೇಕ್ಷೆ, ಅತಿಶಯೋಕ್ತಿಗಳನ್ನು ಹೆಣೆಯಲು ನಿಂತರೆ ಅವನು ನಮ್ಮನ್ನು ಬೆರಗಾಗಿಸಿಬಿಡುತ್ತಾನೆ, ರೂಪಕಗಳು ಅವನು ಬೇಕೆಂದಾಗ ಬರುತ್ತವೆ. ಇಂಥ ಕವಿಯ ಪದ್ಯಗಳಿಗೆ ನಮ್ಮ ಕಾಲದ ಕವಿಯೊಬ್ಬರು ಸ್ಪಂದಿಸಿದಾಗ ಸಿಕ್ಕಿದ್ದು 'ಕುಮಾರವ್ಯಾಸ ಕಥಾಂತರ'. ನಮ್ಮಲ್ಲಿ ಒಬ್ಬೊಬ್ಬ ಕವಿಗೆ ಒಬ್ಬೊಬ್ಬ ಅಭಿಮಾನಿ, ವ್ಯಾಖ್ಯಾನಕಾರರು ಸಿಕ್ಕಿ, ಆ ಕವಿಯ ಬಗ್ಗೆ ಸಾಕಷ್ಟು ಬರೆದು, ಮಾತಾಡಿ ಹೆಸರು ಮಾಡಿದ್ದಾರೆ - ಪಂಪನಿಗೆ ಮುಳಿಯ ತಿಮ್ಮಪ್ಪಯ್ಯ, ಮುದ್ದಣನಿಗೆ ತೆಕ್ಕುಂಜ ಗೋಪಾಲಕೃಷ್ಣ ಭಟ್ಟರು, ಬೇಂದ್ರೆಗೆ ಕುರ್ತಕೋಟಿ, ನರಸಿಂಹಸ್ವಾಮಿಗೆ ನರಹಳ್ಳಿ, ಹೀಗೆ. ಕುಮಾರವ್ಯಾಸನಿಗಾದರೋ ಮೂರು ನಾಲ್ಕು ಜನ - ಕೀರ್ತಿನಾಥ ಕುರ್ತಕೋಟಿ, ಶತಾವಧಾನಿ ಗಣೇಶ್(ಉಪನ್ಯಾಸಗಳು ಮತ್ತು ಸುದೀರ್ಘವಾದ ಗಮಕ ವಾಚನದ ವ್ಯಾಖ್ಯಾನ) , ಎ.ವಿ. ಪ್ರಸನ್ನ(ಕುಮಾರವ್ಯಾಸನ ಕಾವ್ಯ ಚಿತ್ರಗಳು) ಮತ್ತು ಎಚ್.ಎಸ್.ವೆಂಕಟೇಶಮೂರ್ತಿ. ಒಂದು ಮಹಾಕೃತಿಯನ್ನು ಎಷ್ಟು ವೈವಿಧ್ಯಮಯವಾದ ನೆಲೆಗಳಿಂದ ಓದಬಹುದು ಎಂಬುದಕ್ಕೆ ಈ ಎಲ್ಲರ ವ್ಯಾಖ್ಯಾನಗಳು ಸಾಕ್ಷಿಯಾಗುತ್ತವೆ.
ಹಿರಿಯ ಕವಿ ಎಚ್.ಎಸ್.ವೆಂಕಟೇಶಮೂರ್ತಿಯವರ 'ಕುಮಾರವ್ಯಾಸ ಕಥಾಂತರ'ವು ನಾಲ್ಕು ಸಂಪುಟಗಳಲ್ಲಿ ಪ್ರಕಟವಾಗಿದೆ. ರೂಪಕಗಳ ಚೆಲುವು, ಭಾಷೆಯ, ಪದಗಳ ವಿಶ್ಲೇಷಣೆ, ಎಲ್ಲವನ್ನೂ ವೆಂಕಟೇಶಮೂರ್ತಿಯವರು ಹಿಡಿದಿರುವ ಪರಿಯೇ ಚಂದವಾಗಿದೆ. ಕುಮಾರವ್ಯಾಸ ಭಾರತವನ್ನು ಒಬ್ಬ ಕವಿಯಾಗಿ, ಓದುಗನಾಗಿ ಅವರು ಗ್ರಹಿಸುವ ರೀತಿ, ಅವರ ಹೊಳಹುಗಳನ್ನು ಅವರು ಸೊಗಸಾದ ಗದ್ಯದಲ್ಲಿ ವ್ಯಕ್ತಪಡಿಸುವ ವಿಧಾನ ಎಲ್ಲ ಸೇರಿ ಈ ಸರಣಿಯ ಪುಸ್ತಕಗಳು ಇಷ್ಟವಾಗುತ್ತವೆ.
****************************************
ಎಚ್ಚೆಸ್ವಿಯವರಿಗೆ ಅಂತಿಮ ನಮನಗಳು
No comments:
Post a Comment