ಹೊಸಪುಸ್ತಕಗಳ ಬಗ್ಗೆ ಹೊಸ ಪ್ರತಿಕ್ರಿಯೆಗಳು ಹೊಸ ಹರ್ಷವನ್ನು ಉಂಟುಮಾಡುತ್ತವೆ. ನನ್ನ ಹೊಸಪುಸ್ತಕದ ಬಗ್ಗೆ ಮನುಶ್ರೀ ಜೋಯ್ಸ್ ಅವರು ಬರೆದ ಟಿಪ್ಪಣಿ:
AI ಅನ್ನೋದು ಈಗ ಮೊಬೈಲಿನಷ್ಟೇ ಅಥವಾ ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ಎಲ್ಲಾ ಕಡೆ ಆಕ್ರಮಿಸಿಕೊಂಡು ಬಿಟ್ಟಿದೆ. ನಮಗೆ ಗೊತ್ತಿಲ್ಲದೆಯೂ ನಾವು ಇದರ ಭಾಗವಾಗಿದ್ದೇವೆ. ಇದರ ಬಗೆಗಿನ ಕನಿಷ್ಠ ಜ್ಞಾನ ಈಗ ಅನಿವಾರ್ಯ.
AI ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಸಾಕಷ್ಟು ಕೋರ್ಸುಗಳು, ಟ್ರೈನಿಂಗ್ ಗಳು , ಕೆಲಸ ಮಾಡಲು ಬೇಕಾಗಿದ್ದು, ಬೇಡವಾಗಿದ್ದು, ಅದರ ಹಳೆ ಕಥೆ, ಹೊಸ ಪ್ಲಾನ್ ಹೀಗೆ ಎಲ್ಲವೂ ಸಿಗುತ್ತದೆ. ಆದರೆ ಇದೊಂದು ಸಾಗರ ಇಲ್ಲಿ ಮುಳುಗಿ ಎದ್ದು ಓದುವಷ್ಟರಲ್ಲಿ AI ಇನ್ನೊಂದು ಕಡೆ ಹರಿಯಲು ಶುರು ಮಾಡುತ್ತದೆ. ಇಂತಹ ಸಾಗರವನ್ನು ಕಮಂಡಲದಲ್ಲಿ ಹಿಡಿದು ಅತೀ ಮುಖ್ಯವಾದ ಅಂಶಗಳನ್ನು ಮಾತ್ರ ಹಾಕಿ , ಸಾರವನ್ನು ಭಟ್ಟಿ ಇಳಿಸಿದ್ದಾರೆ.
AI ಈಗ ಪ್ರಸಿದ್ಧಿಗೆ ಬಂದಿರಬಹುದು, ಆದರೆ ಇದರ ಹಿಂದಿರುವ ಸೋತ ಪ್ರಯತ್ನಗಳು , ಗೆಲುವುಗಳು ಎಲ್ಲವೂ ಆಸಕ್ತಿಕರ. ಇಮಿಟೇಷನ್ ಟೆಸ್ಟ್ ನಿಂದ ಶುರುವಾಗುವ AI ಹುಟ್ಟನ್ನು ಲೇಖಕರು ಸೊಗಸಾಗಿ ಬರೆದಿದ್ದಾರೆ.
ಈ ಚಾಟ್ ಬಾಟ್ ಗಳು ಅಷ್ಟೇ... ಈಗ ಸಾಕಷ್ಟು ಶಕ್ತಿಯುತವಾಗಿವೆ. ಮೊದಲಿನ ಚಾಟ್ ಬಾಟ್ ಗಳ ಅವಾಂತರ ಈ ಪುಸ್ತಕದಲ್ಲಿ ನೋಡಬೇಕು! AI ಎಂಬ ಹೆಸರಿಡಲು ಪಟ್ಟ ಪಾಡು, ಚೆಸ್ ನೊಂದಿಗಿರುವ ಅವಿನಾಭಾವ ಸಂಬಂಧ.
ನನಗೆ ಅತೀ ಇಷ್ಟವಾದ ಭಾಗವೆಂದರೆ ಮಾಡಿ ತಿಳಿ , ಎಡವಿ ಕಲಿ ಎಂದು ವಿವರಿಸಿದ ಮಷೀನ್ ಲರ್ನಿಂಗ್ , ಮನುಷ್ಯನ ತಲೆಗೂ ಇಲ್ಲಿನ ನ್ಯೂರಲ್ ನೆಟ್ ವರ್ಕಗೆ ಇರುವ ಸಾಮ್ಯತೆ. LLM ಮಾಡಲ್ ಗಳ ಬಗೆಗಿನ ಅಧ್ಯಾಯದಲ್ಲಿ ಕ್ಲಿಷ್ಟಕರ ಸಂಕೀರ್ಣ ವಿಚಾರಗಳನ್ನು ಹದವಾಗಿ ಬಿಡಿಸಿಟ್ಟಿದ್ದಾರೆ.
ಇದು ಮಾಡುವ ತಪ್ಪುಗಳು, ಸುಳ್ಳು ಉತ್ತರಗಳು. ಇದನ್ನು ಬಳಸುವ ವಿಧಾನಗಳು, ಮಿತಿಯಾಗಿ ಬಳಸಬೇಕಾದ ಉದಾಹರಣೆಗಳು, ಎಲ್ಲವೂ ಓದಲೇ ಬೇಕಾದ ಪುಟಗಳು. ನಮ್ಮತನವನ್ನು ಕಾಪಾಡಿಕೊಳ್ಳಲು , ಸೃಜನಶೀಲತೆ ಉಳಿಸಿ ಕೊಳ್ಳಲು, ಹೆಚ್ಚೆಚ್ಚು ಇದನ್ನು ನೆಚ್ಚಿ ಕೊಳ್ಳದೇ ಇರುವುದೇ ಉತ್ತಮ ಎಂದು ನನಗೆ ಕೊನೆಗೆ ಅನಿಸಿತು. ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಅನ್ನುವ ಹಾಗೆ ಇದರ ಉತ್ತರವನ್ನು ಕಣ್ಣು ಮುಚ್ಚಿ ಕಾಪಿ ಪೇಸ್ಟ್ ಮಾಡದೇ ಇರುವುದು ಕ್ಷೇಮ, ಒಂದೊಂದು ಅಕ್ಷರವನ್ನೂ ಪರಾಂಬರಿಸಿ ನೋಡಿ ಬಳಸುವುದು ಒಳಿತು.
ಬರವಣಿಗೆ ಲಲಿತ ಪ್ರಬಂಧವಾಗಿದ್ದು ಸುಲಲಿತವಾಗಿ ಓದಿಸಿಕೊಂಡು ಹೋಗುತ್ತದೆ. ಗಂಟಲಲ್ಲಿ ಸಿಕ್ಕಿ ಹಾಕಿಕೊಳ್ಳುವ ಒಂದೇ ಒಂದು ಗಟ್ಟಿ ಕಡಲೆಯೂ ಇಲ್ಲ. ಸರಾಗ ಆಪ್ತ ಆಕರ್ಷಕ ಬರವಣಿಗೆ. ಒಟ್ಟಿನಲ್ಲಿ ಒಂದು ಓದಲೇಬೇಕಾದ ಅವಶ್ಯಕ, ಉಪಯುಕ್ತ ಚಂದದ ಪುಸ್ತಕ.
*************************************************************
Sandesh H Naik:
ವ್ಹಾರೆ ವ್ಹಾವ್... ಈಗಷ್ಟೇ ಕೊನೆಯ ಪೇಜಿನ, ಕೊನೆಯ ವಾಕ್ಯದ, ಕೊನೆಯ ಪದವನ್ನು ಓದಿ ಮುಚ್ಚಿಟ್ಟೆ.. ಎಷ್ಟು ಚೆನ್ನಾಗಿ ಬರೆದಿದ್ದೀರಿ. ನಿಜಕ್ಕೂ ಎಷ್ಟೊಂದು ಹೊಸ ವಿಚಾರಗಳು ತಿಳಿದವು. ಅದೂ ಇಷ್ಟು ಲಘುವಾಗಿಯೇ ಘನ ವಿಷಯಗಳನ್ನು ಹೇಳಿದೀರಿ. ನಿಮ್ಮ ಶೈಲಿ, ಭಾಷೆಯ ಬಳಕೆ, ಉದಾಹರಣೆಗಳ ಉಲ್ಲೇಖ, ನಗುವನ್ನೂ-ಚಿಂತನೆಯನ್ನೂ ಒಟ್ಟೊಟ್ಟಿಗೆ ಉಕ್ಕಿಸುವ ಕತೆಗಳು, ಹೋಲಿಕೆಗಳ ಸರಳತೆ ಎಲ್ಲವೂ ಒಂದಕ್ಕಿಂತ ಒಂದು ಮಿಗಿಲು. ಬಹಳ ಮಾಹಿತಿಪೂರ್ಣ ಪುಸ್ತಕ. ಹೇಳಲು ತುಂಬಾ ಇದೆ. ಸದ್ಯಕ್ಕೆ ಇಷ್ಟು!
*************************************************************
ಗಣೇಶ್ ಭಟ್:
ಕಳೆದ ಮೂರು ವರ್ಷಗಳಲ್ಲಿ ನೀವು ಯಾವುದೋ ಗುಹೆಯನ್ನು ಸೇರಿ ತಪಸ್ಸು ಮಾಡುತ್ತಿಲ್ಲವೆಂದಾದರೆ, ಮತ್ತು ಹುಲುಮಾನವರ ಕ್ಷುದ್ರ ದೈನಂದಿನ ವ್ಯವಹಾರಗಳಿಗೆ ಸ್ವಲ್ಪವಾದರೂ ಕಣ್ಣು-ಕಿವಿಗಳನ್ನು ತೆರೆದುಕೊಂಡಿದ್ದೀರಿ ಎಂದಾದರೆ, ಖಂಡಿತವಾಗಿಯೂ ಎಐ, ಚಾಟ್ ಜಿಪಿಟಿ, ಎಲ್.ಎಲ್.ಎಮ್, ಮುಂತಾದ ಶಬ್ದಗಳು ಅಲೆಗಳಂತೆ ಮತ್ತೆ ಮತ್ತೆ ಬಂದು ನಿಮ್ಮ ಕಿವಿಗಳಿಗೆ ಅಪ್ಪಳಿಸಿರಲೇಬೇಕು. ಈ ಎಐ ಅಥವಾ ಕೃತಕ ಬುದ್ಧಿಮತ್ತೆ ಎಂದರೆ ನಿಜವಾಗಿಯೂ ಏನು? ಅದು ಹೇಗೆ ಕೆಲಸ ಮಾಡುತ್ತದೆ? ಅದು ಮನುಷ್ಯನ ಬುದ್ಧಿಯಂತೆ ಇದೆಯೇ ಅಥವಾ ಮನುಷ್ಯನ ಬುದ್ಧಿಗಿಂತ ಭಿನ್ನವೇ? ಅದು ಯೋಚಿಸುವಾಗ ಅದರ ತಲೆಯೊಳಗೆ ಏನು ಓಡುತ್ತಿರತ್ತದೆ? ಮುಂತಾದ ಪ್ರಶ್ನೆಗಳು ನಿಮ್ಮ ಮನಸ್ಸಿನಲ್ಲಿ ಮೂಡಿರಬಹುದು. ಎಐ ಕುರಿತಾದ ಇಂತಹ ಬಹಳಷ್ಟು ವಿಷಯಗಳನ್ನು, ತಂತ್ರಜ್ಞಾನದ ಹಿನ್ನೆಲೆ ಇರದ ಸಾಮಾನ್ಯರಿಗೂ ಅರ್ಥವಾಗುವಂತೆ ವಿವರಿಸಿ Sharath Bhat Seraje ಅವರು ಬರೆದ ‘ಎಐ ಬರುತಿದೆ ದಾರಿಬಿಡಿ’ ಪುಸ್ತಕ ಸಾವಣ್ಣ ಪ್ರಕಾಶನದಿಂದ ಹೊಸದಾಗಿ ಪ್ರಕಟವಾಗಿದೆ. ಎಐ ಕುರಿತು ಕುತೂಹಲ ಇರುವವರೆಲ್ಲರೂ ಖಂಡಿತವಾಗಿಯೂ ಓದಬೇಕಾದ ಪುಸ್ತಕ. ಪುಸ್ತಕವು ಅಂಕಿತ, ನವಕರ್ನಾಟಕ, ಸಪ್ನಾ ಮುಂತಾದ ಪ್ರಮುಖ ಮಳಿಗೆಗಳಲ್ಲಿ ಮತ್ತು ಆನ್ಲೈನ್ ತಾಣಗಳಲ್ಲಿ ಲಭ್ಯವಿದೆ. ಜೊತೆಗೆ ಆಸಕ್ತರು ಇದೇ ಲೇಖಕರ ಹಿಂದಿನ ಪುಸ್ತಕಗಳಾದ ‘ಹತ್ತೇವು ವಿಜ್ಞಾನದ ಜೀಪ’ ಮತ್ತು ‘ಬಾಗಿಲು ತೆರೆಯೇ ಸೇಸಮ್ಮ’ ಪುಸ್ತಕಗಳನ್ನೂ ಓದಬಹುದು.
*************************************************************
ಮಾಕೋನಹಳ್ಳಿ ವಿನಯ್ ಮಾಧವ:
AI ಬಂದಾಗಿದೆ… ತೆಪ್ಪಗೆ ದಾರಿಗೆ ಬನ್ನಿ
ಏಳೆಂಟು ವರ್ಷಗಳ ಹಿಂದಿನ ಮಾತು… ಒಮ್ಮೆ, ನನ್ನ ಕಾರನ್ನು ಗ್ಯಾರೇಜಿನಲ್ಲಿ ರಿಪೇರಿಗಾಗಿ ಬಿಟ್ಟಾಗ ಅದು ಕಳ್ಳತನವಾಯಿತು. ಗ್ಯಾರೇಜಿನಿಂದ ಕಳ್ಳತನವಾದ್ದರಿಂದ, ವಿಷಯ ಇತ್ಯರ್ಥವಾಗುವವರೆಗೆ ಇರಲಿ ಎಂದು ಕಂಪನಿಯವರು ನನಗೆ ಬದಲೀ ಕಾರನ್ನು ಕೊಟ್ಟಿದ್ದರು.
ಆಗಲೇ ನಾನು ಫಾಸ್ಟ್ಯಾಗ್ ಉಪಯೋಗಿಸಲು ಆರಂಭಿಸಿದ್ದೆ. ಒಂದೆರೆಡು ವಾರಗಳ ನಂತರ ನಾನು ಊರಿಗೆ ಹೊರಟಾಗ, ಎರಡು ಟೋಲ್ ಗೇಟ್ ಗಳಲ್ಲಿ ದುಡ್ಡು ಕೊಟ್ಟು ದಾಟಿದ್ದೆನಷ್ಟೆ. ಫೋನಿನಲ್ಲಿ ಮೆಸೆಜ್ ಬಂದಿತು: `ದೀಪಾವಳಿಗೆ ಊರಿಗೆ ಹೊರಟಿರುವಿರಾ? ಟೋಲ್ ಗೇಟ್ ನಲ್ಲಿ ಸರದಿ ಕಾಯುವ ಬದಲು, ಫಾಸ್ಟ್ಯಾಗ್ ಬಳಸಿರಿ,’ ಎಂದು.’
`ಒಂದೆರೆಡು ನಿಮಿಷ ಗಡಿಬಿಡಿಯಾಯಿತು. ಮೊದಲನೆಯದಾಗಿ, ಈ ಕಾರು ನನ್ನದಲ್ಲ. ಆದರೂ, ನಾನು ಊರಿಗೆ ಹೋಗುತ್ತಿರುವುದಾಗಿ ಫಾಸ್ಟ್ಯಾಗ್ ಕಂಪನಿಯವರಿಗೆ ಯಾರು ಹೇಳಿದ್ದು?
ಎರಡನೆಯದಾಗಿ, ನಾನು ನನ್ನ ಎಲ್ಲಾ ವ್ಯವಹಾರಗಳಿಗೂ ನೀಡುವುದು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ನನ್ನ ಅತ್ತೆಯ ಮನೆಯ ವಿಳಾಸ. ನನ್ನ ಗೂಗಲ್ ಖಾತೆ, ಬ್ಯಾಂಕ್ ಖಾತೆ, ಆಧಾರ್, ಚುನಾವಣೆ ಗುರುತಿನ ಚೀಟಿ... ಅಷ್ಟೇಕೆ, ಫಾಸ್ಟ್ಯಾಗ್ ಪಡೆದದ್ದು ಕೂಡ ಇದೇ ವಿಳಾಸದಿಂದ. ಹಾಗಾದರೆ, ಮೂಡಿಗೆರೆ ನನ್ನ ಊರು ಅಂತ ಫಾಸ್ಟ್ಯಾಗ್ ಕಂಪನಿಗೆ ಹೇಳಿದವರು ಯಾರು? ನಾನು ಮೂಡಿಗೆರೆಗೆ ಹೋಗುತ್ತಿದ್ದೇನೆ ಅಂತ ಹೇಳಿದವರು ಯಾರು?
ಡ್ರೈವ್ ಮಾಡುತ್ತಾ ಹಾಗೇ ಯೋಚನೆ ಮಾಡಿದೆ. ನನ್ನ ಫೋನ್ ನಲ್ಲಿ ಇರುವ ಗೂಗಲ್ ನಕ್ಷೆಯಿಂದ ನಾನು ಮೂಡಿಗೆರೆ ಕಡೆಗೆ ಹೋಗುತ್ತಿರುವುದು ಗೂಗಲ್ ಗೆ ಗೊತ್ತಾಗಿದೆ. ಆದರೆ ಮೂಡಿಗೆರೆ ನನ್ನ ಊರು ಅಂತ ಯಾರು ಹೇಳಿದರು? ಸಾಮಾಜಿಕ ಜಾಲತಾಣವಾದ ಫೇಸ್ಬುಕ್ಕಿನಲ್ಲಿ ನಾನು ಮೂಡಿಗೆರೆಯಿಂದ ಅಂತ ನಮೂದಿಸಿದ್ದೆ.
ಆಗಾಗ ಮೂಡಿಗೆರೆಗೆ ಹೋಗಿ ಬರುತ್ತಿದ್ದರಿಂದ, ಅದನ್ನು ನನ್ನ ಊರು ಅಂತ ಗೂಗಲ್ ಕಂಡು ಹಿಡಿದಿದೆ. ನಾನು, ನನ್ನ ಊರು, ನನ್ನ ಬಳಿ ಇರುವ ಫಾಸ್ಟ್ಯಾಗ್, ಎಲ್ಲದರ ಮಾಹಿತಿ ಗೂಗಲ್ ಬಳಿ ಇದ್ದು, ನಾನು ಅದನ್ನು ಉಪಯೋಗಿಸದೇ ಇದ್ದಾಗ, ಫಾಸ್ಟ್ಯಾಗ್ ಕಂಪನಿ ಮೂಲಕ ನನಗೆ ಅಶರೀರವಾಣಿ ಮೊಳಗಿದೆ.
`ತಕ್ಷಣವೇ ನಾನು ನನ್ನ ಸ್ನೇಹಿತ ರಾಜೇಶನಿಗೆ ಫೋನ್ ಮಾಡಿ ನೆಡೆದಿದ್ದನ್ನು ಹೇಳಿದೆ. ಇವೆಲ್ಲ ಗಾಭರಿ ಹುಟ್ಟಿಸುವ ವಿಷಯ ಅಂತ ಹೇಳಿ, ಅವನಿಗಾದ ಅನುಭವವನ್ನೂ ಹಂಚಿಕೊಂಡ.
ಒಮ್ಮೆ, ಅವನ ಕಛೇರಿಗೆ ವಿದೇಶದಲ್ಲಿರುವ ಹಿರಿಯ ಸಹದ್ಯೋಗಿ ಬಂದಿದ್ದರಂತೆ. ಮಾತಿನ ಮಧ್ಯ, ಕಛೇರಿಯಲ್ಲಿ ಕಾಗದಗಳನ್ನು ನಾಶಪಡಿಸುವ ಯಂತ್ರ (ಪೇಪರ್ ಶಡ್ಡರ್) ಇಲ್ಲದಿರುವುದರ ಬಗ್ಗೆ ಪ್ರಸ್ತಾಪಿಸಿ, ಒಂದನ್ನು ಕೊಂಡುಕೊಳ್ಳಲು ಸಲಹೆ ನೀಡಿದ್ದರಂತೆ. ಮಾರನೇ ದಿನ ರಾಜೇಶನ ಜಿ-ಮೇಲ್ ನಲ್ಲಿ, ನಾಲ್ಕೈದು ಕಂಪನಿಗಳು ಪೇಪರ್ ಶಡ್ಡರ್ ಗಳನ್ನು ಮಾರುವ ಬಗ್ಗೆ ಈ-ಮೇಲ್ ಕಳುಹಿಸಿದ್ದರಂತೆ. ರಾಜೇಶ್ ಮೊದಲಿಗೆ ಗಡಿಬಿಡಿಗೊಂಡನಂತೆ. ನಂತರ ಯೋಚಿಸುವಾಗ, ಸಹದ್ಯೋಗಿಯ ಜೊತೆ ಮಾತನಾಡುವಾಗ, ರಾಜೇಶ್ ತನ್ನ ಜಿ-ಮೇಲನ್ನು ತೆಗೆದಿಟ್ಟಿದ್ದನಂತೆ. ಪ್ರತೀ ಕಂಪ್ಯೂಟರ್ ಅಥವಾ ಫೋನ್ ನಲ್ಲಿರುವ ಮಾತನಾಡುವ ಸಾಧನ (ಸ್ಪೀಕರ್) ಮೂಲಕ ಅದು ಗೂಗಲ್ ನಲ್ಲಿ ಧ್ವನಿ ಮುದ್ರಿತವಾಗುತ್ತದೆ. ಗೂಗಲ್, ಈ ಥರಹದ ಸಂದೇಶಗಳನ್ನು ಕಂಪನಿಗಳಿಗೆ ರವಾನಿಸುತ್ತದೆ. ತಕ್ಷಣವೇ, ಆ ಕಂಪನಿಗಳು ಇಂತಹ ಈ-ಮೇಲ್ ಗಳನ್ನು ರವಾನಿಸುತ್ತವೆ.
ಕೇಳಿ ನಡುಗಿ ಹೋದೆ. ಎಷ್ಟೋ ಸಲ ಏನನ್ನಾದರೂ ಖರೀದಿಸಬೇಕು ಅಂತ ಮನೆಯಲ್ಲಿ ಮಾತನಾಡಿದ ಒಂದೆರೆಡು ದಿನಗಳಲ್ಲಿ ಅದೇ ವಿಷಯದಲ್ಲಿ ಈ-ಮೇಲ್ ಹೇಗೆ ಬರುತ್ತೆ ಅಂತ ಎಷ್ಟೋ ಸಲ ಯೋಚಿಸಿದ್ದೆ. ಈಗ ಉತ್ತರ ಸಿಕ್ಕಿತ್ತು.
ಗೂಗಲ್ ಎನ್ನುವ Search Engine ಯಾವಾಗಲೂ ಉಪಯೋಗಿಸುವುದರಿಂದ, ಈ ಅನಿಷ್ಟಕ್ಕೆಲ್ಲಾ ಗೂಗಲ್ ಎನ್ನುವ ಶನೀಶ್ವರನೇ ಕಾರಣ ಎಂಬ ನಿರ್ಣಯಕ್ಕೆ ಬಂದೆ. ಹೇಗಾದರೂ ಮಾಡಿ ನನ್ನ ವೈಯಕ್ತಿಕ ವಿವರಗಳನ್ನು ಈ ಗೂಗಲ್ ಎನ್ನುವ ದುಷ್ಟ ಶಕ್ತಿಯಿಂದ ಹೊರಗಿಡಬೇಕೆಂಬ ಹಠಕ್ಕೆ ಬಿದ್ದೆ. ನಿಧಾನವಾಗಿ `ಕೃತಕ ಬುದ್ದಿಮತ್ತೆ’ ಅಥವಾ (Artificial Intelligence), ಆಲ್ಗೋರಿದಮ್ (Algorithm) ಕೆಲಸ ಮಾಡುವ ರೀತಿಯನ್ನು ತಿಳಿದುಕೊಳ್ಳುತ್ತಾ ಹೋದೆ.
ಸ್ವಲ್ಪ ದಿನಗಳ ನಂತರ, ನನ್ನ ಹೆಂಡತಿಯ ತಮ್ಮ ಚೇತನ್ ಫೋನ್ ಮಾಡಿ, ʻವಿನಯ್, ಅಮೇರಿಕಾದಿಂದ ಬರುತ್ತಾ ನಿಮಗೆ ಏನು ತರಲಿ?ʼ ಎಂದು ಕೇಳಿದ.
ʻಒಂದು ಗೂಗಲ್ ಪಿಕ್ಸೆಲ್ ಫೋನ್ ತಗೊಂಡು ಬಾʼ ಎಂದು ತಣ್ಣಗೆ ಹೇಳಿದೆ. ಅಲ್ಲಿಂದ ಇಲ್ಲಿಯವರೆಗೂ ನಾನು ಉಪಯೋಗಿಸುತ್ತಿರುವುದು ಈ ಗೂಗಲ್ ಫೋನನ್ನೇ.
ಈ ಘಟನೆ ನೆನಪಾಗಿದ್ದು, ಶರತ್ ಭಟ್ ಸೆರಾಜೆ ಬರೆದ ʻAI ಬರುತ್ತಿದೆ ದಾರಿ ಬಿಡಿʼ ಪುಸ್ತಕ ಓದುತ್ತಿದ್ದಾಗ. ಈ ಕೃತಕ ಬುದ್ದಿಮತ್ತೆಯ ಬಗ್ಗೆ ಸಾಧಾರಣ ಜನಗಳಿಗೆ ಬಹಳಷ್ಟು ಉಗ್ರ ವಿಭ್ರಾಂತಿಗಳಿವೆ (Exaggerated notions). ಅದಕ್ಕೆ ಕಾರಣಗಳೂ ಹಲವಷ್ಟಿವೆ.
ಯಾವುದೇ ವಿಷಯವನ್ನು ವೈಭವೀಕರಣ ಮಾಡುವುದು ಮನುಷ್ಯನ ಸಹಜ ಗುಣ. ಈ ಕಂಪ್ಯೂಟರ್ ಗಳು ಮತ್ತು ಕೃತಕ ಬುದ್ಧಿಮತ್ತೆಯ ಬಗ್ಗೆ ಕಳೆದ ಮೂರು ದಶಕಗಳಲ್ಲಿ ಬಂದ ʻScience Fictionʼ ಪುಸ್ತಕಗಳು ಮತ್ತು ಸಿನೆಮಾಗಳನ್ನು ನೋಡಿದಾಗ, ಇನ್ನು ಕೆಲವೇ ವರ್ಷಗಳಲ್ಲಿ, ಕಂಪ್ಯೂಟರ್ ಗಳು ಬೌದ್ಧಿಕ ಸ್ವಾವಲಂಬಿಗಳಾಗಿ, ಮನುಷ್ಯನನ್ನು ಗುಲಾಮರನ್ನಾಗಿ ಮಾಡಿಕೊಳ್ಳುತ್ತವೆ ಎನ್ನುವುದನ್ನು ಪ್ರತಿಪಾದಿಸುವ ಮಟ್ಟಕ್ಕೆ ಹೋಗಿವೆ.
ಕೆಲವೇ ಕೆಲವು ಸಿನೆಮಾಗಳನ್ನು ಬಿಟ್ಟರೆ, (The Nȩt, Enemy of the State̤̤…) ನಾವು ನೋಡಿದ ರೋಚಕ ಚಿತ್ರಗಳಾದ ಟರ್ಮಿನೇಟರ್, ಡೈ ಹಾರ್ಡ್ - 4 ಮುಂತಾದ ಚಿತ್ರಗಳು ಮಾನವ ಜನಾಂಗದ ಸರ್ವನಾಶವನ್ನೇ ಸಾರುತ್ತವೆ.
ನಾನು ಪತ್ರಿಕೋದ್ಯಮ ಓದುವಾಗ, ಒಬ್ಬರು ಕಂಪ್ಯೂಟರ್ ತಜ್ಞರನ್ನು ಭಾಷಣಕ್ಕೆ ಕರೆದಿದ್ದರು. ಆಗ ಅವರು ಹೇಳಿದ ಒಂದು ಮಾತು: ʻComputers should be used as tooļs not as alternative brainsʼ. ಆ ಮೂವತ್ತು ವರ್ಷಗಳ ಹಿಂದಿನ ಕಂಪ್ಯೂಟರನ್ನು ಈಗ ತಿರುಗಿ ನೋಡಿದಾಗ, ಶಿಲಾಯುಗದ ಕಾಲದ ತಂತ್ರಜ್ಞಾನವಲ್ಲದಿದ್ದರೂ, ಲೋಹಯುಗದ ತಂತ್ರಜ್ಞಾನದಂತೆ ಕಾಣುತ್ತದೆ. ಮೈಕ್ರೋಸಾಫ್ಟ್ ಕಂಪನಿಯ ʻMS DoSʼ ಉಪಯೋಗಿಸಿಕೊಂಡು, 286, 386, 486 ಎಂಬ ಕಂಪ್ಯೂಟರ್ ಗಳನ್ನು ಸಾಮಾನ್ಯ ಮನುಷ್ಯ ಉಪಯೋಗಿಸುತ್ತಿದ್ದ ಕಾಲ. ಪೆಂಟಿಯಮ್ ಬಂದು, ಡಯಲ್ ಅಪ್ ಇಂಟರ್ ನೆಟ್ ಸಾಧಾರಣ ಜನಗಳಿಗೆ ತಲುಪಲು ಇನ್ನೂ ಸ್ವಲ್ಪ ಸಮಯ ಹಿಡಿದಿತ್ತು. ಆದರೆ, ಈಗ ನಾವು ಉಪಯೋಗಿಸುತ್ತಿರುವ ಕಂಪ್ಯೂಟರ್ ಗಳು ಬರುತ್ತವೆ ಎನ್ನುವುದನ್ನು ಊಹಿಸಲೂ ಅಸಾಧ್ಯವಾಗಿತ್ತು.
ಆಗೆಲ್ಲ ಹೊಸ ತಂತ್ರಜ್ಞಾನ ಬರಲು ವರ್ಷಗಳು ಬೇಕಾಗಿದ್ದವು. ಆದರೆ ಈಗ, ತಿಂಗಳಿಗೊಂದು ತಂತ್ರಜ್ಞಾನ ಬಂದು, ಒಂದು ವರ್ಷದ ಹಿಂದೆ ನಾವು ಉಪಯೋಗಿಸುತ್ತಿದ್ದ ತಂತ್ರಜ್ಞಾನಗಳೇ ನಿರುಪಯೋಗಿಗಳಾಗಿ ಕಾಣುತ್ತವೆ. ಕೃತಕ ಬುದ್ದಿಮತ್ತೆಯ ಪ್ರಪಂಚದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ನೋಡಿದರೆ, ಒಂದು ಕ್ಷಣ ಗಾಭರಿಯಾಗುವುದಂತೂ ನಿಜ.
ಆದರೆ, ಈ ಕೃತಕ ಬುದ್ದಿಮತ್ತೆಗಳಿಗೂ ಒಂದು ಮಿತಿ ಇದೆ. ಅವು ಮಿತಿಗಳಲ್ಲಿ ಕೆಲಸ ಮಾಡುತ್ತವೆ. ಅವುಗಳಿಗೆ ಯಾವುದೇ ಭಾವನೆಗಳಿಲ್ಲ. ಅವು, ಶತದಡ್ಡನಂತೆ ಕೆಲಸ ಮಾಡಬಲ್ಲವು. ನಮ್ಮ ಇಂದಿನ ಅವಶ್ಯಕತೆ ಏನೆಂದರೆ, ಕೃತಕ ಬುದ್ದಿಮತ್ತೆಗಳ ಮಿತಿಗಳನ್ನು ಅರಿತುಕೊಳ್ಳುವುದು ಮತ್ತು ʻAI should be used as a too̧l, not as an alternative brainʼ ಎಂಬ ಸತ್ಯವನ್ನು ಅರಿತುಕೊಳ್ಳುವುದು.
ಈ ನಿಟ್ಟಿನಲ್ಲಿ, ಕೃತಕ ಬುದ್ದಿಮತ್ತೆಯನ್ನು ಬಹಳ ಸರಳವಾಗಿ ಶರತ್ ಅರ್ಥ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹತ್ತೊಂಬತ್ತು ಅಧ್ಯಾಯಗಳಿರುವ ಈ ಪುಸ್ತಕವು, ಕೃತಕ ಬುದ್ದಿಮತ್ತೆಯ ಅವಿಷ್ಕಾರದ ಮೂಲವನ್ನೇ ಸ್ವಾರಸ್ಯಕರವಾಗಿ ಹುಡುಕುತ್ತಾ ಹೊರಡುತ್ತದೆ. ಎರಡನೇ ಮಹಾ ಯುದ್ದದ ಸಮಯದಲ್ಲಿ, ಜರ್ಮನ್ ದೇಶದ ಎನಿಗ್ಮಾ ಕೋಡನ್ನು ಬೇಧಿಸಿದ ಅಲನ್ ಟ್ಯೂರಿಂಗ್ ಹೆಸರಿನಲ್ಲಿ ಬರುವ ಒಂದು ಪಂದ್ಯ, ಅದಕ್ಕೆ ಕೊಡುವ ಲೋಬ್ನರ್ ಬಹುಮಾನ ಮತ್ತು ಕೃತಕ ಬುದ್ದಿಮತ್ತೆಯ ಈ ಸ್ಪರ್ಧೆಯ ನಿರ್ದೇಶಕನಾಗಿದ್ದ ರಾಬರ್ಟ್ ಎಪ್‌ಸ್ಟೈನ್ ಒಂದು ಪ್ರಣಯ ಪ್ರಸಂಗಕ್ಕೆ ಬಿದ್ದು, ಚಾಟ್‌ಬಾಟ್ ನಿಂದ ಬೆಸ್ತು ಬಿದ್ದ ಪ್ರಸಂಗ ಸ್ವಾರಸ್ಯಕರವಾಗಿದೆ.
ಮೊದಲನೇ ಚಾಟ್‌ಬಾಟ್ ಆದ ಎಲಿಝಾ, ಜನಗಳ ಕಷ್ಟಗಳನ್ನು ಕೇಳಿಸಿಕೊಳ್ಳುವ ಸಾಧನವಾಗಿ ಮಾರ್ಪಾಡಾಗಿದ್ದು, MGonz ಇಂದಿನ ಟ್ರೋಲ್ ಜಗತ್ತಿನ ಪಿತಾಮಹನಂತೆ ವರ್ತಿಸಿದರೂ, ಮನುಷ್ಯರ ನಡುವೆ ಸ್ಪರ್ಧಿಸಿ ಲೋಬ್ನರ್ ಬಹುಮಾನ ಗೆದ್ದು, ಬಹುಮಾನದ ಸಮಿತಿಯನ್ನೇ ಬೆಸ್ತು ಬೀಳಿಸಿದ ಪ್ರಸಂಗಗಳು ಮನಸ್ಸಿಗೆ ಮುದ ನೀಡುತ್ತವೆ.
ಮುಂದೆ, ಚೆಸ್ ಆಡುವ ʻDeep Blueʼ ಬಹಳ ಸ್ವಾರಸ್ಯವಾಗಿದೆ. ಅತೀ ಬುದ್ದಿಮತ್ತೆ ತೋರಿಸುವ ಈ ಕೃತಕ ಬುದ್ದಿಮತ್ತೆ, ಅತೀ ಮೂರ್ಖತನ ತೋರಿಸಿದಾಗ, ಅದರ ಎದುರಾಳಿಯಾಗಿದ್ದ ಆಗಿನ ಗ್ರ್ಯಾಂಡ್ ಮಾಸ್ಟರ್ ಗ್ಯಾರಿ ಕ್ಯಾಸ್ಪರೋವ್ ಒಳಗಾಗುವ ಮಾನಸಿಕ ಕ್ಷೋಬೆಯನ್ನು ಬಹಳ ಸ್ವಾರಸ್ಯವಾಗಿ ವಿವರಿಸಿದ್ದಾರೆ.
ಈ ಅಧ್ಯಾಯ ಓದುವಾಗ ಒಂದು ಘಟನೆ ನೆನಪಾಯಿತು. ಭಾರತದ ವಿಶ್ವನಾಥ್ ಆನಂದ್ ಗ್ರ್ಯಾಂಡ್ ಮಾಸ್ಟರ್ ಆದಾಗ, ಭಾರತಕ್ಕೆ ಹಿಂದುರುಗುವ ಸಮಯದಲ್ಲಿ, ʻDeep Blueʼ ಒಳಗೊಂಡ ಒಂದು ಲ್ಯಾಪ್ ಟಾಪ್ ತಮ್ಮ ಜೊತೆ ತಂದರು. ಆ ಲ್ಯಾಪ್ ಟಾಪ್‌ನಲ್ಲಿ ಎಷ್ಟೋ ಸಾವಿರವೋ, ಲಕ್ಷವೋ ಆಟಗಳಿದ್ದವು ಎಂದು ಓದಿದ ನೆನಪು. ಆದರೆ, ವಿಮಾನ ನಿಲ್ದಾಣದಲ್ಲಿ ಕಸ್ಟಂ ಅಧಿಕಾರಿಗಳು ಅವರನ್ನು ತಡೆದರು.
ಆಗಿನ ಕಾಲದಲ್ಲಿ, ಸ್ವಂತ ಉಪಯೋಗಕ್ಕೆ ಒಂದು ಲ್ಯಾಪ್ ಟಾಪ್ ವಿದೇಶದಿಂದ ತರಬಹುದಿತ್ತು. ಯಾವುದೇ ʻelectronic gadgetʼ ಒಂದಕ್ಕಿಂತ ಹೆಚ್ಚು ಒಬ್ಬ ಪ್ರಯಾಣಿಗನ ಜೊತೆಗೆ ಇದ್ದರೆ, ಅದನ್ನು ವ್ಯಾಪರಕ್ಕೆ ಎಂದು ಪರಿಗಣಿಸಿ, ಅದರ ಮೇಲೆ ಶೇ 350 ಸುಂಕ ವಿಧಿಸುತ್ತಿದ್ದರು. ಭಾರತದಿಂದ ಹೋಗುವಾಗ, ವಿಶ್ವನಾಥ್ ಆನಂದ್ ತಮ್ಮ ಲ್ಯಾಪ್ ಟಾಪ್ ತೆಗೆದುಕೊಂಡು ಹೋಗಿದ್ದರು. ಬರುವಾಗ ಎರಡನೆಯದು ಅವರ ಕೈಯಲ್ಲಿ ಇತ್ತು. ಹಾಗಾಗಿ, ಸುಂಕದವರು ಅದಕ್ಕೆ ಸುಂಕ ಕೊಡದೆ ಹೊರಕ್ಕೆ ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.
ವಿಶ್ವನಾಥ್ ಆನಂದ್ ಎಷ್ಟೇ ಹೇಳಿದರೂ, ಬರೀ ಚೆಸ್ ಆಡಲು ಒಂದು ಲ್ಯಾಪ್ ಟಾಪ್ ಎನ್ನುವುದನ್ನು ಅಧಿಕಾರಿಗಳು ಒಪ್ಪಲು ತಯಾರಿರಲಿಲ್ಲ. ಏಕೆಂದರೆ, ಆಗ ಕಂಪ್ಯೂಟರ್ ಬಗ್ಗೆ ಅವರಿಗೆ ಮತ್ತು ನಮಗೂ ಇದ್ದ ಜ್ಞಾನ ಅಷ್ಟೆ. ಆನ್‌ಲೈನ್ ಬ್ಯಾಂಕಿಂಗ್ ಮತ್ತು ಗೂಗಲ್ ಪೇ ಇಲ್ಲದ ಕಾಲ. ಸುಂಕ ಕಟ್ಟುವಷ್ಟು ದುಡ್ಡು ಆನಂದ್ ಅವರ ಪರ್ಸ್ ನಲ್ಲೂ ಇರಲಿಲ್ಲ. ಹೊಸ ಲ್ಯಾಪ್ ಟಾಪ್ ಅನ್ನು ಅಲ್ಲಿಯೇ ಬಿಟ್ಟು, ಮನೆಗೆ ತೆರಳಿದರು.
ಆನಂತರ, ಕೇಂದ್ರ ವಾಣಿಜ್ಯ ಇಲಾಖೆಗೆ ವಿಷಯ ಗೊತ್ತಾಗಿ, ಆ ಹೊಸ ಲ್ಯಾಪ್ ಟಾಪ್ ಅನ್ನು ವಿಶ್ವನಾಥ್ ಆನಂದ್ ಅವರಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿತ್ತು.
ಈ ಪುಸ್ತಕದ ಹತ್ತೊಂಬತ್ತು ಅಧ್ಯಾಯಗಳಲ್ಲೂ, ಈ ಕೃತಕ ಬುದ್ಧಿಮತ್ತೆ ಬೆಳೆದ ದಾರಿ, ಪ್ರತೀ ಹಂತದಲ್ಲೂ ಮನುಷ್ಯರು ಮತ್ತು ಕೃತಕ ಬದ್ದಿಮತ್ತೆ ಎದುರಿಸಿದ ಸವಾಲುಗಳು, ಅವುಗಳ ಮತ್ತು ಮನುಷ್ಯರ ಇತಿಮಿತಿಗಳ ಬಗ್ಗೆ ಶರತ್ ಸ್ವಾರಸ್ಯವಾಗಿ, ಸರಳವಾಗಿ ವಿವರಿಸಿದ್ದಾರೆ. ಎಂದಿನಂತೆ, ವಿಜ್ಞಾನದ ಬಗ್ಗೆ ಸಾಹಿತ್ಯ, ಪೌರಾಣಿಕ ಲೇಪನಗಳೂ ಉಪಮೇಯಗಳಾಗಿ ಬಂದು ಹೋಗುವುದರಿಂದ, ಕಬ್ಬಿಣದ ಕಡಲೆ ತಿನ್ನುತ್ತಿದ್ದೇನೆ ಎಂದು ಎಂತಹ ಕಂಪ್ಯೂಟರ್ ವಿರೋಧಿಗೂ ಅನ್ನಿಸುವುದಿಲ್ಲ.
ಹಾಗಾಗಿ, ಅವರ ಕೊನೆ ಅಧ್ಯಾಯದ ಹೆಸರಾದ ʻAI ಬಂದಿದೆ, ಸೇರಿ ನಡೆʼ ಎನ್ನುವ ಹೆಸರನ್ನೂ ಸಹ ನನಗೆ ಒಪ್ಪಲಾಗಿಲ್ಲ. ಏಕೆಂದರೆ, ಕೃತಕ ಬುದ್ದಿ ನಮ್ಮ ಜೀವನದ ಅವಿಭಾಜ್ಯ ಅಂಗವಾದ ನಂತರವೂ, ನಾವಿನ್ನೂ ಅವುಗಳ ವಿಷಯದಲ್ಲಿ ಅನಾವಶ್ಯಕ ಭ್ರಾಂತಿಗಳಲ್ಲಿ ಚರ್ಚೆ ಮಾಡುತ್ತಿದ್ದೇವೆ.
ಈ ಪುಸ್ತಕದ ಹೆಸರು, ʻAI ಬಂದಾಗಿದೆ, ತೆಪ್ಪಗೆ ದಾರಿಗೆ ಬನ್ನಿʼ ಎನ್ನುವುದೇ ಸರಿ ಅಂತ ನನಗನ್ನಿಸಿತು…
Kannada book about Artificial Intelligence Artificial Intelligence in Kannada Book about AI in Kannada ಕನ್ನಡದಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ ಕನ್ನಡದಲ್ಲಿ ಸರಳವಾಗಿ ಕೃತಕ ಬುದ್ಧಿಮತ್ತೆ
What Makes the Book Special:
Known for transforming dry scientific concepts into engaging narratives
Consistently uses wit, humour, and relatable analogies
Each book maintains his characteristic conversational tone that feels like learning from a knowledgeable friend
Accessibility: Complex scientific theories explained in everyday Kannada
Entertainment Value: Incorporates sarcasm, light humour and amusing observations
AI Barutide Daari Bidi is a Kannada book on Artificial Intelligence that transforms complex tech into pure entertainment. This isn't your typical AI book in Kannada—it's the one that refuses to bore you to death with technical mumbo-jumbo.
ReplyDeleteLooking for Artificial Intelligence explained in Kannada without the snooze fest? This popular science book delivers exactly that. It's designed for anyone wanting to learn AI in Kannada without feeling like they're drowning in incomprehensible jargon.
As an introduction to AI Kannada book, it stands out by doing something unique: making you smile while you learn. This Kannada book on AI ditches the sleep-inducing technical speak and instead serves up sarcasm, humor, and real-world examples that actually make sense.
Want to see what readers are saying? Check out the link below:
https://sharathbhats.blogspot.com/2025/09/kannada-book-about-artificial_58.html