Wednesday, 17 September 2025

Impossible crime thrillers

 ಪತ್ತೆದಾರಿ ಸಾಹಿತ್ಯದ ಅಭಿಮಾನಿಯಾದ ನಾನು ಅಂಥ ಕಥೆ ಕಾದಂಬರಿಗಳನ್ನು ಹುಡುಕಿ ಹುಡುಕಿ ಓದುತ್ತಿದ್ದೆ. ಆ ಪ್ರಕಾರದಲ್ಲಿ ಏನಾದರೂ ಹೊಸತು ಸಿಕ್ಕೀತೋ ಎಂದು ಕಾತರಿಸುತ್ತಿದ್ದೆ. ಬಹುಶಃ ನಾನು ಹೈಸ್ಕೂಲಿನಲ್ಲಿದ್ದ ಕಾಲದಲ್ಲಿರಬೇಕು, ತರಂಗದಲ್ಲಿ ಒಂದಷ್ಟು ಇಂಗ್ಲೀಷಿನ ಪತ್ತೆದಾರಿ ಕಥೆಗಳ ಅನುವಾದಗಳನ್ನು ಪ್ರಕಟಿಸಿದ್ದರು. ಎಸ್.ದಿವಾಕರ್ ಅದರ ಸಂಪಾದಕರಾಗಿದ್ದಿರಬೇಕು. ಆ ಸಂಚಿಕೆಯಲ್ಲಿ Arthur Conan Doyle, Agatha Christie ಇಂಥ ಪರಿಚಿತ ಹೆಸರುಗಳು ಮಾತ್ರವಲ್ಲದೆ Dorothy L Sayers, GK Chesterton, PD James, Margary Allingham ಮುಂತಾದವರ ಹೆಸರುಗಳೂ ಬಂದಿದ್ದವು ಅಂತ ಅಸ್ಪಷ್ಟವಾದ ನೆನಪು. ಅದು ಒಂದಷ್ಟು ಹೊಸ ಲೇಖಕರನ್ನು ಪರಿಚಯ ಮಾಡಿಸಿದ ಸಂಚಿಕೆ. ಸುಮಾರಾಗಿ ಅದೇ ಸಮಯಕ್ಕೆ ವಾಸುದೇವ ರಾವ್ ಎಂಬವರು ಮಾಡಿದ ಷೆರ್ಲಾಕ್ ಹೋಮ್ಸನ ಕಥೆಗಳ ಅನುವಾದಾಗಳೂ ಸಿಕ್ಕಿ ಖುಷಿ ಕೊಟ್ಟಿದ್ದವು.

ಅನಂತರ ದಶಕವೊಂದು ಕಳೆದ ಮೇಲೆ Ellery Queen, John Dickson Carr ಮೊದಲಾದವರನ್ನು ನಾನೇ ಹುಡುಕಿ ಓದಿಕೊಂಡೆ. ಈ John Dickson Carrನಿಗೆ ಪ್ರಿಯವಾದ ಪ್ರಕಾರದ ಬಗ್ಗೆಯೇ ನಾನೀಗ ಹೇಳಹೊರಟದ್ದು. ಅದು "locked-room mystery" ಅಥವಾ "impossible crime" ಎಂಬೊಂದು ಪ್ರಕಾರ. ಹೆಚ್ಚಿನ ಡಿಟೆಕ್ಟಿವ್ ಕಥೆಗಳಲ್ಲಿ ಸಿಗರೇಟಿನ ಹೊಗೆಯನ್ನು ಭುಸು ಭುಸನೆ ಹೊರಬಿಡುವ, ಮುಂಗೋಪಿ ಪತ್ತೆದಾರನೊಬ್ಬ ಬಂದು, ಕೊಲೆ ನಡೆದಾಗ ಯಾರ್ಯಾರು ಎಲ್ಲಿದ್ದರು, ಕೊಲೆಯಾದವನ ಉಯಿಲಿನಲ್ಲಿ ಯಾರ ಹೆಸರು ಬರೆದಿದೆ ಅಂತ ನೋಡಿ, ಫಿಂಗರ್ ಪ್ರಿಂಟುಗಳ ಬಗ್ಗೆ, ಡಿ.ಎನ್.ಎಯ ಬಗ್ಗೆ ಏನಾದರೂ ಕಚಪಿಚ ಹೇಳಿ, ಒಂದು dramatic revealನಲ್ಲಿ ಕೊಲೆಗಾರನ ಹೆಸರನ್ನು ಹೇಳಿಬಿಡುತ್ತಾನೆ. ಆದರೆ locked room mysteryಯಲ್ಲಿ ಹಾಗೆಲ್ಲ ಆಗುವುದಿಲ್ಲ! ಇದರಲ್ಲಿ, "ಅಸಾಧ್ಯ" ಎಂಬ ರೀತಿಯಲ್ಲಿ, ಅಪರಾಧಿಗೆ ಭೌತಶಾಸ್ತ್ರದ ನಿಯಮಗಳು ಗೊತ್ತಿಲ್ಲವೇನೋ ಎನ್ನಿಸುವಂತೆ ಅಪರಾಧವು ನಡೆದಿರುತ್ತದೆ. ಉದಾಹರಣೆಗೆ, ಮುಚ್ಚಿದ ಕೋಣೆಯೊಳಗೊಂದು ಹೆಣ ಇರುತ್ತದೆ, ಒಳಗಿಂದ ಚಿಲಕ ಹಾಕಿರುತ್ತದೆ, ಕಿಟಕಿಗಳೇ ಇರುವುದಿಲ್ಲ, ಹಾಗಾದರೆ ಕೊಲೆಗಾರ ಹೇಗೆ ಹೊರಗೆ ಹೋದ ಎನ್ನುವುದೇ ಇಲ್ಲಿನ ಒಗಟು. ಇತ್ಲಾಗಿ ಬಂದ ರಿಷಬ್ ಶೆಟ್ಟಿ ಅಭಿನಯದ ಬೆಲ್ ಬಾಟಂ ಚಿತ್ರವೂ ಒಂದುಮಟ್ಟಕ್ಕೆ ಈ ಪ್ರಕಾರಕ್ಕೇ ಸೇರಿದ್ದು. ಸುನಿಲ್ ಕುಮಾರ್ ದೇಸಾಯಿಯವರ "ಮರ್ಮ" ಸಿನೆಮಾವೂ,Now You See Me ಎಂಬ ಹಾಲಿವುಡ್ ಚಿತ್ರವೂ "impossible crime"ನ ಅಂಶಗಳನ್ನು ಒಳಗೊಂಡಿದ್ದವು. ಕೊಲೆಯನ್ನೋ ಕಳವನ್ನೋ ಯಾರು ಮಾಡಿದರು ಎನ್ನುವುದಕ್ಕಿಂತ, ಹೇಗೆ ಮಾಡಿದರು ಎನ್ನುವುದೇ ಇಂಥ ಕಥೆಗಳಲ್ಲಿ ಕುತೂಹಲವನ್ನು ಕುಣಿಸುವ ಅಂಶ.
"There is a room with no doors, no windows, nothing and a man is hung from the ceiling and a puddle of water is on the floor. How did he die?" ಎಂಬುದೊಂದು ಒಗಟು ಒಂದು ಕಾಲದಲ್ಲಿ ಚಾಲ್ತಿಯಲ್ಲಿತ್ತು. ಇದು ಕೊಲೆಯೇ ಅಥವಾ ಆತ್ಮಹತ್ಯೆಯೇ? ಕೊಲೆಯಾದರೆ ಕೊಂದವನು ಹೇಗೆ ಪರಾರಿಯಾದ, ಆತ್ಮಹತ್ಯೆಯಾದರೆ ಅದನ್ನು ಮಾಡಿಕೊಂಡದ್ದು ಹೇಗೆ ಎಂಬುದು ಇಲ್ಲಿ ನಮ್ಮನ್ನು ತಲೆಕೆಡಿಸಿಕೊಳ್ಳುವಂತೆ ಮಾಡುವ ಅಂಶ. ಈ ಒಗಟೂ ಇದೇ ಪ್ರಕಾರಕ್ಕೆ ಸೇರಿದ್ದು.
ತಲೆಯನ್ನು ಎಷ್ಟು ಸಲ ಪರಾ ಪರಾ ಅಂತ ಕೆರೆದುಕೊಂಡರೂ ನಮಗೆ ಸಮಸ್ಯೆಗೆ ಪರಿಹಾರ ಹೊಳೆಯಬಾರದು. ಹೀಗೆ ಕಥೆಗಾರ ತಂದು ಬಿಸಾಡಿದ ಒಗಟು ನಮ್ಮನ್ನು ಸತಾಯಿಸುತ್ತ ಇರುವಾಗ ಮಹಾಚಾಣಾಕ್ಷನಾದ ಪತ್ತೆದಾರ ಪ್ರತ್ಯಕ್ಷನಾಗಬೇಕು. ನೋಡನೋಡುತ್ತಿದ್ದಂತೆ ಉತ್ತರವಿಲ್ಲದ ಪ್ರಶ್ನೆಗೆ ಅವನೊಂದು ಒಂದು ಪರಿಹಾರವನ್ನು ಕಂಡುಹಿಡಿಯಬೇಕು. ನಮಗಾಗ, 'ಆಹಾ ಓಹೋ, ಉತ್ತರವು ಕಣ್ಣೆದುರಲ್ಲೇ ಓಡಾಡುತ್ತಿತ್ತು ಆದರೆ ಅದು ನಮ್ಮಂಥ ಬಡಪಾಯಿಗಳ ಕೈಗೆ ಮಾತ್ರ ಸಿಕ್ಕಿರಲಿಲ್ಲ. ಸುಳಿವುಗಳು ನಮ್ಮ ಮುಂದೆಯೂ ಇದ್ದವು, ಆದರೆ ನಮಗೆ ಕಾಣದೆ ಹೋದದ್ದು ಪತ್ತೇದಾರನಿಗೆ ಕಂಡಿತು" ಎನ್ನಿಸಬೇಕು. ಇದು ಇಂಥ ಕಥೆ ಕಾದಂಬರಿಗಳ ಹೂರಣ. ಮೇಲೆ ಕೊಟ್ಟಿರುವ ಒಗಟಿಗೂ ಉತ್ತರವೂ ಸಿಕ್ಕಿದ ಮೇಲೆ, "ಹೌದಲ್ಲ, ಇದು ನಮಗೂ ಹೊಳೆಯಬಹುದಿತ್ತಲ್ಲ" ಎನ್ನಿಸುತ್ತದೆ. ಅದೇ ಈ ಪ್ರಕಾರದ ವಿಶೇಷ. ಒಂದು ರೀತಿಯಲ್ಲಿ ಪವಾಡಗಳನ್ನು ಬಯಲಿಗೆಳೆಯುವ ವಿಚಾರವಾದಿಯ ಹಾಗಿರುವ ಪತ್ತೆದಾರ ಇಂಥ ಕಥೆಗಳಲ್ಲಿ ನಮಗೆ ಕಾಣಿಸುತ್ತಾನೆ ಎನ್ನಬಹುದು.
ಈ ಪ್ರಕಾರದಲ್ಲಿ ಚಕ್ರವರ್ತಿಯಂತೆ ಮೆರೆದವನು John Dickson Carr ಎಂಬ ಹಳೆಕಾಲದ ಲೇಖಕ. ಈ ಪ್ರಕಾರದ ಹತ್ತು ಹಲವು ಸಾಧ್ಯತೆಗಳನ್ನು ಮನಗಂಡು ಬೇಕು ಬೇಕಾದಂತೆ ಕಥೆ ಕಾದಂಬರಿಗಳನ್ನು ಬರೆದವನಾತ. ಅವನ ಕೃತಿಗಳನ್ನು ಆಸಕ್ತರು ಓದಿ ನೋಡಿ.
ಈ ಪ್ರಕಾರದ ಅದ್ಭುತರಮ್ಯವಾದ ಮತ್ತಷ್ಟು ಸಾಧ್ಯತೆಗಳನ್ನು ಕಾಣಬೇಕಾದರೆ ನೀವು Jonathan Creek ಎಂಬ ಬ್ರಿಟಿಷ್ ಟಿವಿ ಸೀರೀಸ್ ಅನ್ನೂ ನೋಡಬಹುದು. ಅದರಲ್ಲಿ ಮ್ಯಾಜಿಕ್ ಷೋಗಳ ವಿನ್ಯಾಸ ಮಾಡುವವನೊಬ್ಬನೇ ಪತ್ತೆದಾರ. ಅಂಥವನಿಗೆ ಇಂದ್ರಜಾಲದ ಥರ ಕಂಡ ಅಪರಾಧಗಳನ್ನು ಹೇಗೆ ಮಾಡಿರಬಹುದು ಎಂದು ಹೊಳೆಯುವುದು ಸಹಜವೇ ತಾನೇ? ಇದು ಕಷ್ಟದ ಒಗಟುಗಳಿಗೆ ಚತುರವಾದ ಪರಿಹಾರಗಳನ್ನು ಕೊಡುವ ಪತ್ತೆದಾರರ ಅಭಿಮಾನಿಯಾಗಿ ನಾನು ಚೆನ್ನಾಗಿ ಆಸ್ವಾದಿಸಿದ ಟಿವಿ ಸರಣಿಯಿದು.
ನಮ್ಮಲ್ಲಿ ಈ ಪ್ರಕಾರಕ್ಕೆ ಅಂಥ ಪ್ರಚಾರವೇನೂ ಸಿಕ್ಕಿಲ್ಲವಾದ್ದರಿಂದ ಅದನ್ನು ಪರಿಚಯಿಸುವ ಪ್ರಯತ್ನವನ್ನು ಮಾಡಿದೆ ಅಷ್ಟೇ. ಓಕೆ. ಬಾಯ್.

No comments:

Post a Comment