ಎಲ್ಲರ ಕನ್ನಡವು ಸುದ್ದಿಯಲ್ಲಿದ್ದಾಗ ಬರೆದ ಲೇಖನ:
ಡಿ ಎನ್ ಶಂಕರ ಭಟ್ಟರ ಎಲ್ಲರ ಕನ್ನಡ ಯಾಕೋ ಮತ್ತೆ ಗುಲ್ಲೆಬ್ಬಿಸಿದೆ. ಅವರ ಒಂದೆರಡು ಧೂಳೆಬ್ಬಿಸಿರುವ ವಿಚಾರಗಳಲ್ಲಿ ಒಂದಾದ ಮಹಾಪ್ರಾಣದ ಬಗ್ಗೆ ಒಂದಷ್ಟು ಹೊಳಹುಗಳು.
ಕನ್ನಡದಲ್ಲಿ ಮಹಾಪ್ರಾಣಗಳು ಇಲ್ಲ, ಹಾಗಾಗಿ ಅವುಗಳನ್ನು ನಾವು ಬಿಡಬಹುದು ಅನ್ನುವುದು ಶಂಕರ ಭಟ್ಟರ ವಿಚಾರಗಳಲ್ಲಿ ಒಂದು. ಇದರಲ್ಲಿ ಎರಡು ವಿಷಯಗಳು ಅಡಗಿವೆ. ಕನ್ನಡದಲ್ಲಿ ಮಹಾಪ್ರಾಣಗಳು ಇಲ್ಲ ಎನ್ನುವುದು ಮೊದಲ ಭಾಗ, ಅವುಗಳನ್ನು ಕೈಬಿಡುವ ವಿಚಾರ ಎರಡನೆಯ ಭಾಗ. ಮೊದಲನೆಯ ಭಾಗ ಹಲವಾರು ಭಾವಿಸಿರುವಂತೆ ಶಂಕರ ಭಟ್ಟರು ಹೊಸದಾಗಿ ಹೇಳಿರುವ ವಿಚಾರವೇನೂ ಅಲ್ಲ. ಮಹಾಪ್ರಾಣಗಳು ಬಹುಮಟ್ಟಿಗೆ ಇರುವುದು ನಾವು ಸಂಸ್ಕೃತ ಮತ್ತಿತರ ಭಾಷೆಗಳಿಂದ ಸ್ವೀಕರಿಸಿರುವ ಪದಗಳಲ್ಲಿ ಮಾತ್ರ. ಅಚ್ಚಗನ್ನಡದಲ್ಲಿ ಮಹಾಪ್ರಾಣಗಳು ಬಹಳ ಕಡಮೆ, ಇಲ್ಲ ಎನ್ನುವಷ್ಟು ಕಡಮೆ ಅನ್ನುವುದೇನೋ ಸರಿ. ಅಚ್ಚಗನ್ನಡದಲ್ಲಿ ಮಹಾಪ್ರಾಣಗಳು ಇಲ್ಲ ಅಂತ ಕನ್ನಡದ ಅಧ್ಯಯನ ಮಾಡಿರುವ ಪಂಡಿತರಲ್ಲಿ ಹಲವರು ಸಾಕಷ್ಟು ಸಲ ಆಗಲೇ ಹೇಳಿಯೂ ಇದ್ದಾರೆ. ಆದರೆ ಇಲ್ಲ ಎಂದಮಾತ್ರಕ್ಕೆ ಅವನ್ನು ಬಿಟ್ಟು ಬಿಡಬೇಕು ಅಂತ ಮಾತ್ರ ಬಹುತೇಕ ಯಾವ ಪಂಡಿತರೂ ಹೇಳಿಲ್ಲ !
ದಯವಿಟ್ಟು ಗಮನಿಸಿ : ಅಚ್ಚಗನ್ನಡದಲ್ಲಿ ಮಹಾಪ್ರಾಣಗಳು ಅಷ್ಟಾಗಿ ಇಲ್ಲ ಎಂದು ಮಾತ್ರ ಇಲ್ಲಿ ಹೇಳಿರುವುದು; ಇಲ್ಲಿ ಅಚ್ಚಗನ್ನಡ ಎಂಬ ಪದಕ್ಕೆ ಒಂದು ಅಂಡರ್ ಲೈನ್ ಎಳೆಯುವ ಅಗತ್ಯವಿದೆ! ಮಹಾಪ್ರಾಣಗಳನ್ನು ಕನ್ನಡದಿಂದ ಬಿಡಬೇಕು/ತೆಗೆಯಬೇಕು/ಕಿತ್ತು ಹಾಕಬೇಕು ಅಂತೆಲ್ಲ ನಾನು ಹೇಳಿಯೇ ಇಲ್ಲ! ಹಾಗಾದರೆ ಅಚ್ಚಗನ್ನಡ ಅಂದರೆ ಏನು ಅನ್ನುವುದು ಸಹಜವಾಗಿಯೇ ಬರುವ ಪ್ರಶ್ನೆ. ಬೇರೆ ಯಾವುದೇ ಭಾಷೆಯ ಒಂದು ಪದವೂ ಮಿಶ್ರವಾಗದ, ಎರವಲಾಗಿ ಬಂದಿರದ, ಮೂಲದ ಅತ್ಯಂತ ಶುದ್ಧವಾದ ರೂಪವನ್ನು ಅಚ್ಚಗನ್ನಡ ಅನ್ನಬಹುದೇನೋ. ಈಗ ಅದಕ್ಕಿಂತ ಮುಖ್ಯವಾದ ಪ್ರಶ್ನೆ ಅಂದರೆ, ಇಂಥಾ ಅಚ್ಚಗನ್ನಡ ಎಲ್ಲಿಯಾದರೂ ಇದೆಯೇ ಅನ್ನುವುದು !
ಇಲ್ಲ ಸ್ವಾಮೀ ಇಲ್ಲ ! ಇಂಥ ಅಚ್ಚಗನ್ನಡ ನನಗೆ ಗೊತ್ತಿರುವಂತೆ ಎಲ್ಲಿಯೂ ಇಲ್ಲ, ಮ್ಯೂಸಿಯಮ್ಮುಗಳಲ್ಲಿಯೂ ಇಲ್ಲ ! ಅಚ್ಚಗನ್ನಡ ಅನ್ನುವುದು ನಮ್ಮ ಕಲ್ಪನೆಯಲ್ಲಿ ಮಾತ್ರ ಇರುವುದು, ಪ್ರಾಕ್ಟಿಕಲ್ ಆಗಿ ಎಲ್ಲಿಯೂ ಇಲ್ಲ.ಅಚ್ಚಗನ್ನಡದಲ್ಲಿ ಬರೆಯ ಹೊರಟ ಆಂಡಯ್ಯನ ಕಬ್ಬಿಗರ ಕಾವದಲ್ಲಿಯೂ ಬೇಕಾದಷ್ಟು ತದ್ಭವಗಳಿವೆ, lexical borrowing ಅನ್ನುವುದು ಎಲ್ಲ ಜೀವಂತ ಭಾಷೆಗಳಲ್ಲಿಯೂ ಇದೆ. ಕನ್ನಡದಲ್ಲಿ ಯಾವ ಮಟ್ಟದಲ್ಲಿ ಈ ಪದಗಳನ್ನು ಸ್ವೀಕರಿಸುವ ಗುಣ ಇದೆ ಅಂತ ಗೊತ್ತಾಗಲಿಕ್ಕೆ ಒಂದು ಉದಾಹರಣೆಯನ್ನು ನೋಡಿದರೆ ಸಾಕು.
ಈಗ ಒಂದು ಸರಳವಾದ ವಾಕ್ಯವನ್ನೇ ತೆಗೆದುಕೊಳ್ಳಿ: "ಇವತ್ತು ಪುರುಸೊತ್ತು ಮಾಡಿಕೊಂಡು ನಮ್ಮ ಶಾಲೆಗೆ ಹೋಗಿದ್ದೆ, ಅಲ್ಲಿ ಮಾಷ್ಟ್ರು ವಿದ್ಯಾರ್ಥಿಗಳಿಗೆ ಪಾಠ ಮಾಡುವ ಕ್ರಮ ಸ್ವಲ್ಪವೂ ಬದಲಾಗಿಲ್ಲದ್ದನ್ನು ಕಂಡು ಖುಷಿಯಾಯಿತು." ಈ ವಾಕ್ಯ ಕನ್ನಡದ್ದೋ ಅಲ್ಲವೋ ? ಇದು ಕನ್ನಡದ್ದೇ ವಾಕ್ಯ ಅಂತೀರಿ ತಾನೇ ? ಈಗ ಇದರಲ್ಲಿ ಕನ್ನಡ ಪದಗಳೆಷ್ಟಿವೆ ಅಂತ ಒಂದು ಸಲ ನೋಡೋಣ! ಪುರುಸೊತ್ತು ಎಂಬುದು ಫುರ್ಸತ್ ಎಂಬ ಪರ್ಷಿಯನ್ ಭಾಷೆಯ ಪದದಿಂದ ಬಂದಿದೆ. ವಾಕ್ಯದಲ್ಲಿರುವ "ಶಾಲೆ" ಒಂದು ಸಂಸ್ಕೃತ ಪದ, ಮಾಷ್ಟ್ರು ಹುಟ್ಟಿರುವುದು ಇಂಗ್ಲೀಷಿನ ಮಾಸ್ಟರ್ ನಿಂದ. ವಿದ್ಯೆ, ಅರ್ಥಿ, ಕ್ರಮ ಹೇಗಿದ್ದರೂ ಸಂಸ್ಕೃತ ಮೂಲದವು, ಪಾಠವಂತೂ ಸಂಸ್ಕೃತದ್ದೇ, ಇನ್ನು "ಸ್ವಲ್ಪ" ಎಂಬ ಸೊಲ್ಲೂ ಸಂಸ್ಕೃತದ್ದೇ ಅಂತ ಬೇರೆ ಹೇಳಬೇಕೇ! ಬದಲಾಗು ಎಂಬ ಪ್ರಯೋಗದಲ್ಲಿರುವ "ಬದಲ್" ಎಂಬುದು ಅರೇಬಿಕ್ ಭಾಷೆಯಿಂದ ಬಂದಿದೆ. "ಖುಷಿ" ಎಂಬುದು ಮತ್ತೆ ಪರ್ಷಿಯನ್ ಮೂಲದ್ದು. ಇಡೀ ವಾಕ್ಯದಲ್ಲಿ ಸೂಕ್ಷ್ಮದರ್ಶಕ ಹಾಕಿ ಹುಡುಕಿದರೆ "ಇವತ್ತು", "ಮಾಡು", "ಹೋಗು" ಅಂತ ಎರಡು ಮೂರು ಪದಗಳು ಮಾತ್ರ ಕನ್ನಡದ್ದು ಸಿಕ್ಕಾವು! ಆದರೂ ಮೇಲಿನ ವಾಕ್ಯ ಕನ್ನಡದ್ದಲ್ಲ ಅಂತ ಯಾರೂ ಹೇಳಲಾರರು. ವಿಷಯ ಇಷ್ಟೇ : ಈಗ ನಾವು ಬಳಸುವ ಕನ್ನಡದ ಡಿಕ್ಷನರಿಯ ೬೦% ಪದಗಳು ಮೂಲತಃ ಕನ್ನಡದವಲ್ಲ(ಇಂಗ್ಲೀಷಿನಲ್ಲೂ ೬೫% ಪದಗಳು ಗ್ರೀಕ್ , ಲ್ಯಾಟಿನ್ ಇತ್ಯಾದಿ ಭಾಷೆಗಳಿಂದ ಬಂದವೇ ಆಗಿವೆ)
ದಿನನಿತ್ಯದ ಸರಳವಾದ ವಿಚಾರಗಳನ್ನು ಮಾತಾಡುವಾಗ ನಾವು ಒಂದಷ್ಟು ಅಚ್ಚಗನ್ನಡವನ್ನು ಬಳಸುತ್ತೇವೆ, ಉದಾ: ಭೋಜನವನ್ನು ಸ್ವೀಕರಿಸುತ್ತೇನೆ ಅನ್ನುವ ಬದಲು ಊಟ ಮಾಡ್ತೇನೆ ಅನ್ನಬಹುದು, ಹೀಗೆ. ಅದು ಬಿಟ್ಟರೆ, ಸಾಹಿತ್ಯದಲ್ಲಿ, ಸಂಕೀರ್ಣ ವಿಚಾರಗಳನ್ನು ಹೇಳುವಾಗ ಎಲ್ಲ ಸ್ವೀಕೃತ ಪದಗಳು ಇಲ್ಲದಿದ್ದರೆ ಕಷ್ಟ. (ಸಂಕೀರ್ಣ, ವಿಚಾರ, ಸ್ವೀಕೃತ, ಪದ, ಕಷ್ಟ ಇವು ಯಾವುವೂ ಕನ್ನಡದ ಪದಗಳಲ್ಲ, ಗಮನಿಸಿ, ಗಮನ ಎನ್ನುವುದೂ ಕನ್ನಡವಲ್ಲ !)
ರನ್ನ, ಪಂಪ, ರಾಘವಾಂಕ, ಕುಮಾರವ್ಯಾಸರಿಂದ, ಕುವೆಂಪು, ಅಡಿಗರವರೆಗೆ, ಎಂಕ ಶೀನ ನಾಣಿಯರಿಂದ ನನ್ನವರೆಗೆ ನಾವೆಲ್ಲ ಎರವಲು ಪದಗಳನ್ನು ಬಳಸುತ್ತಿದ್ದೇವೆ, ಸಂಸ್ಕೃತ, ಪ್ರಾಕೃತಗಳು, ಪರ್ಷಿಯನ್ , ಉರ್ದು, ಹಿಂದುಸ್ತಾನಿ, ಇಂಗ್ಲೀಷ್ ಮುಂತಾದ ಭಾಷೆಗಳಿಂದ ಎರವಲಾಗಿ ಬಂದ ಮಹಾಪ್ರಾಣಗಳನ್ನು ಬಳಸುತ್ತಲೇ ಬಂದಿದ್ದೇವೆ. ಒಂದೂವರೆ ಸಾವಿರ ವರ್ಷಗಳ ಬಳಕೆಯಿಂದ ಅವು ಕನ್ನಡದವೇ ಆಗಿ ಹೋಗಿವೆ(ಮೂಲದಲ್ಲಿ ಇಲ್ಲದಿದ್ದರೂ). ಭಾಷೆಗೆ ಯಾವ ಮಡಿಯೂ ಇಲ್ಲ. ಇನ್ನು ಕನ್ನಡದಲ್ಲೂ ಸಣ್ಣ ಪ್ರಮಾಣದಲ್ಲಿ(ಸಣ್ಣ ಪ್ರಮಾಣದಲ್ಲಿ ಮಾತ್ರ) ಮಹಾಪ್ರಾಣಗಳು ಉಂಟೆಂದು ವಾದಿಸಲು ಅವಕಾಶವಿದೆ, ಆ ಮಾತು ಬೇರೆ.
ಈ ಹಿನ್ನೆಲೆ ಇಲ್ಲದೆ ಕನ್ನಡದಲ್ಲಿ ಮಹಾಪ್ರಾಣ ಇಲ್ಲ ಅಂದರೆ ಅದಕ್ಕೆ ಬೇರೆಯದೇ ಅರ್ಥ, ಪೊಲಿಟಿಕಲ್ ಅರ್ಥ ಹೊರಡುತ್ತದೆ, ಹಾಗೆ ಹೇಳುತ್ತಿರುವ ಹಲವರಿಗೆ ಪೊಲಿಟಿಕಲ್ ಉದ್ದೇಶಗಳು ಸ್ಪಷ್ಟವಾಗಿಯೇ ಇವೆ. ಸಂಸ್ಕೃತದ ಬಗ್ಗೆ ವಿಚಿತ್ರ ದ್ವೇಷವೂ ಅಂಥವರಲ್ಲಿ ಹಲವರಿಗೆ(ಎಲ್ಲರಿಗೂ ಅಲ್ಲ) ಇದ್ದೇ ಇದೆ. ಇಂಥ ದ್ವೇಷದ ರಾಜಕಾರಣ ಅದು ಭಾಷಾಶಾಸ್ತ್ರದ ವ್ಯಾಪ್ತಿಪ್ರದೇಶದಿಂದ ಹೊರಗೆ. ಬಿಡಿ. ಕೆಲವರಿಗೆ ಸಂಸ್ಕೃತವನ್ನು ಕಂಡರಾಗುವುದಿಲ್ಲ ಎಂಬ ಕಾರಣಕ್ಕೆ ಈಗಿನ ನಮ್ಮ ಕನ್ನಡವನ್ನು ೬೦% ರಷ್ಟು ಬದಲಾಯಿಸಲೂ ಆಗುವುದಿಲ್ಲ. ಅಷ್ಟೇ.
ಬಸ್ಸು, ಕಾರು, ಪೊಲೀಸು, ಪೇಪರು, ಮೇಜು, ಕುರ್ಚಿ, ಚಟ್ನಿ, ಇವೆಲ್ಲಾ ಬೇರೆಕಡೆಯಿಂದ ಬಂದರೂ ಇವತ್ತು ಕನ್ನಡದ ಪದಗಳೇ ಆಗಿವೆ. ಇವೆಲ್ಲ ೨೦೦-೩೦೦ ವರ್ಷಗಳಷ್ಟು ಮೊದಲು ಬಂದವು, ಪ್ರಾಕೃತ, ಸಂಸ್ಕೃತಗಳ ಪದಗಳು ಸಾವಿರ, ಎರಡು ಸಾವಿರ ವರ್ಷಗಳಷ್ಟು ಮೊದಲು, ಅಥವಾ ಅದಕ್ಕೂ ಮುಂಚೆ ಬಂದವು ಇಷ್ಟೇ ವ್ಯತ್ಯಾಸ. ಮತ್ತು ಸಾವಿರ ವರ್ಷಗಳಲ್ಲಿ ಲಕ್ಷ ಲಕ್ಷ ಸಲ ಬಳಕೆಯಾಗಿ ಆ ಎರವಲು ಪದಗಳೆಲ್ಲ ಕನ್ನಡ ಪದಗಳೇ ಆಗಿಬಿಟ್ಟಿವೆ, ದತ್ತುಪುತ್ರ ಇಪ್ಪತ್ತು ವರುಷಗಳಾದ ಮೇಲೆ ಮನೆಯ ಮಗನೇ ಆಗುವಂತೆ! ಹೀಗಾಗಿ ಮಹಾಪ್ರಾಣಗಳನ್ನು ಬಿಡಬೇಕು ಅನ್ನುವುದು ಅಮೆರಿಕಾದಲ್ಲಿ ಅಲ್ಲಿನ ಮೂಲನಿವಾಸಿಗಳು ಮಾತ್ರ ಉಳಿಯಬೇಕು, ಹೊರಗಿಂದ ಬಂದವರನ್ನೆಲ್ಲ ಓಡಿಸಬೇಕು ಅಂದ ಹಾಗೆ! ಹಾಗೆ ಮಾಡಿದರೆ ಇಡೀ ಅಮೆರಿಕಾವೇ ಖಾಲಿಯಾದೀತು! ಮತ್ತು ಈಗ ಅಲ್ಲಿರುವವರು ಅಮೇರಿಕ್ಕನ್ನರಲ್ಲ ಅಂತ ಹೇಳಲಿಕ್ಕೆ ನಮಗೇನು ಹಕ್ಕಿದೆ? ದತ್ತುಪುತ್ರನು ಚೆನ್ನಾಗಿ ಹೊಂದಿಕೊಂಡು ಮನೆಮಗನೇ ಆಗಿ, ಅಪ್ಪ ಅಮ್ಮನ ಕಣ್ಮಣಿಯೇ ಆಗಿದ್ದರೂ ಮನೆಮಗನಲ್ಲ ಅಂತ ಶಂಕರ ಭಟ್ಟರಿಗೆ ಕಂಡೀತು, ಆದರೆ ಅದು ಎಲ್ಲರೂ ಒಪ್ಪಬಹುದಾದ ಮಾತೇ ? ವಿಚಾರ ಮಾಡಿದರೆ ಉತ್ತರ ನಮಗೇ ಸಿಗುತ್ತದೆ.
ಇದು ಮಹಾಪ್ರಾಣದ ವಿಷಯವಾಯಿತು. ಉಳಿದ ವಿಚಾರಗಳ ಬಗ್ಗೆ ಇನ್ನೊಮ್ಮೆ ಬರೆದೇನು.
No comments:
Post a Comment