"ಪ್ರೀತಿಯು ದೂರದರ್ಶಕದಿಂದ ನೋಡುತ್ತದೆ; ಅಸೂಯೆ ನೋಡುವುದು ಸೂಕ್ಷ್ಮದರ್ಶಕದಿಂದ" ಅಂತೊಂದು ಮಾತಿದೆ. ಕಳೆದ ವಾರ ಅಂಬರಕ್ಕೆ ಚಿಮ್ಮಿದ ನಾಸಾದವರ ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್ ಎಂಬ ದೂರದರ್ಶಕ ಮಾತ್ರ ಭವ್ಯವಾದದ್ದು ಹುಟ್ಟಿಸಬಲ್ಲ ಪ್ರೀತಿಯನ್ನೂ, ಭರ್ಜರಿಯಾದದ್ದು ಹೊರಡಿಸಬಲ್ಲ ಅಸೂಯೆಯನ್ನೂ ಒಟ್ಟೊಟ್ಟಿಗೇ ಸೃಷ್ಟಿಸಬಲ್ಲದು! ದಕ್ಷಿಣ ಅಮೆರಿಕಾದ ಉತ್ತರಭಾಗದಲ್ಲಿ ಬ್ರೆಝಿಲ್ಲಿನಿಂದ ಮೇಲೆ ಇರುವ ಫ್ರೆಂಚ್ ಗಯಾನ ಎಂಬಲ್ಲಿಂದ ನಭಕ್ಕೆ ನೆಗೆದ ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪು ಭೂಮಿಯಿಂದ ಸುಮಾರು 16 ಲಕ್ಷ ಕಿ.ಮೀ ದೂರದಲ್ಲಿ ಸ್ಥಾಪಿತಗೊಳ್ಳಲಿದೆ.
1990ರಲ್ಲಿ ಹಾರಿ, ಭಯಂಕರ ಹೆಸರು ಮಾಡಿದ್ದ ಹಬಲ್ ದೂರದರ್ಶಕವು ಕಣ್ಣಿಟ್ಟದ್ದು ಬರಿಗಣ್ಣಿಗೆ ಕಾಣದ, ನೀಲವರ್ಣದ ತರಂಗಾಂತರದಿಂದ ಸ್ವಲ್ಪ ಆಚೆಯಿರುವ, ಅಲ್ಟ್ರಾವಯಲೆಟ್ ಕಿರಣಗಳ ಮೇಲೆ. ಇದು ನೋಡಹೊರಟಿರುವುದು ರಕ್ತವರ್ಣಾತೀತ(ಇನ್ಫ್ರಾರೆಡ್) ಅಲೆಗಳನ್ನು ಹಿಡಿಯುವುದರ ಮೂಲಕ. ಹೀಗಾಗಿ ಅದರ ಮುಷ್ಟಿಗೆ ಸಿಗದೇ ಹೋದ ವಿವರಗಳು ಇದಕ್ಕೆ ಸಿಗುತ್ತವೆ. ಇನ್ಫ್ರಾರೆಡ್ ಅಲೆಗಳ ಅಲೆಯಳತೆ ಸ್ವಲ್ಪ ಹೆಚ್ಚಾದ್ದರಿಂದ ನಮ್ಮ ಕಣ್ಣಿಗೆ ಬೀಳುವ ಬೆಳಕು ಹೋಗದಲ್ಲಿಗೆ ಈ ಅಲೆಗಳು ನುಗ್ಗಬಲ್ಲವು. ಹಬಲ್ ದೂರದರ್ಶಕವು ಬಲದಲ್ಲಿ ಅಂಗದನಾದರೆ ಇದರದ್ದು ಸಂಕೀರ್ಣತೆಯಲ್ಲಿ, ಸಾಮರ್ಥ್ಯದಲ್ಲಿ, ನಯದಲ್ಲಿ ಆಂಜನೇಯನ ಅಳವು!
ಇದು 16 ಲಕ್ಷ ಕಿ.ಮೀ ದೂರ ಪಯಣಿಸಿ ನೆಲೆ ನಿಲ್ಲುವುದು Lagrange’s points ಅಂತ ಕರೆಯಲ್ಪಡುವ ಸ್ಥಾನವೊಂದರಲ್ಲಿ. ಸೂರ್ಯ, ಭೂಮಿ, ಚಂದ್ರ ಇವುಗಳ ಗುರುತ್ವಾಕರ್ಷಣೆಯ ಎಳೆತದ ವಿರುದ್ಧ ಇದು ಹೆಣಗಾಡಬೇಕಲ್ಲ? ಅದಕ್ಕೆ ಈ ಸ್ಥಳ ಸಹಾಯ ಮಾಡುತ್ತದೆ. ಇಬ್ಬರು ಶತ್ರುಗಳಿದ್ದರೆ, ಅವರ ನಡುವೆ ಕಲಹ ಹುಟ್ಟಿಸಿ ಅವರು ತಮ್ಮ ತಮ್ಮಲ್ಲೇ ಹೊಡೆದಾಡಿಕೊಂಡು ಸಾಯುವ ಹಾಗೆ ಮಾಡಬೇಕು ಎಂಬಂತೆ, ಸೂರ್ಯ, ಭೂಮಿಗಳ ಗುರುತ್ವಾಕರ್ಷಣೆಗಳು ಒಂದನ್ನೊಂದು ಹೊಡೆದು ಹಾಕುವ ಜಾಗಗಳಿಗೆ Lagrange’s points ಅಂತ ಹೆಸರು. 'ಆ ಕಡೆಯಿಂದ ಅವರು ಎಳೆದರು, ಈ ಕಡೆಯಿಂದ ಇವರು ಜಗ್ಗಿದರು, ಅಂತೂ ನಾನು ಅಲುಗಾಡಲಿಲ್ಲ' ಅನ್ನಬಹುದಾದ ಜಾಗ ಅದು. ಅಲ್ಲಿ ನಿಂತರೆ ಜಾಸ್ತಿ ಇಂಧನವೂ ಖರ್ಚಾಗುವುದಿಲ್ಲ.
ಇದನ್ನು ಭೂಮಿಯಲ್ಲೇ ಇಡಬಹುದಲ್ಲ, ದಿಕ್ತಟಗಳ ಆಚೆ, ವ್ಯೋಮದ ಆ ಕಡೆ ವೀಕ್ಷಣಾಲಯವೊಂದನ್ನು ನೆಲೆನಿಲ್ಲಿಸಿ ಏನು ಪ್ರಯೋಜನ ಎಂಬ ಪ್ರಶ್ನೆಯೂ ಮೂಡುತ್ತದೆ. ನಕ್ಷತ್ರ ನೋಡುವವರಿಗೆ ಕಾಂಕ್ರೀಟು ಕಾಡುಗಳಿಗಿಂತ ತೆರೆದ ಬಯಲು ಹೇಗೆ ಲೇಸಾದ ಅವಕಾಶವೋ, ಹಾಗೆಯೇ, ಗಗನದ ಮೇಲೇರಿ ನೋಡಿದರೆ ಆ ನೋಟ ಇಲ್ಲಿನದಕ್ಕಿಂತ ಸ್ಪಷ್ಟತರ,ಪಾರದರ್ಶಕ. ವಾಯುಮಂಡಲದ ಅಡಚಣೆಯಿಲ್ಲದೆ, ಹವಾಮಾನದ ಕಿರಿಕಿರಿಯಿಲ್ಲದೆ ನಿಸರ್ಗಪ್ರೇಮಿಯಾದ ಕವಿಯಂತೆ ಅವು ಬಾನಂಚಿನ ಆಚೆಗೆ ನೋಟ ನೆಟ್ಟು ಕೂತರಾಯಿತು.
ಈ ನಕ್ಷತ್ರಾಲೋಕನ ಶಾಲೆಯಿಂದ ಕಾಣುವುದು ಎಂಥಾ ಕಾಣ್ಕೆ ಅಂತೀರಿ? ಅದು 1370 ಕೋಟಿ ವರ್ಷಗಳ ಹಿಂದೆ ಅಂತರಿಕ್ಷದಲ್ಲಿ ನಡೆದ ವಿದ್ಯಮಾನಗಳ ಸುಳುಹು ಕೊಡಬಲ್ಲದು. ಯಾವುದೋ ನಕ್ಷತ್ರದಿಂದ ಕೋಟಿ ವರ್ಷ ಮೊದಲು ಹೊರಟ ಬೆಳಕು ಈಗ ಈ ದೂರದರ್ಶಕವನ್ನು ಮುಟ್ಟಿದರೆ ಅವು ಕೋಟಿ ವರ್ಷ ಹಿಂದೆ ಏನಾಯಿತು ಅಂತ ಹೇಳುವ ಸಂದೇಶವಾಹಕಗಳಾಗುತ್ತವೆ. ಹಾಗಾಗಿ, ಬ್ರಹ್ಮಾಂಡದ ಸೃಷ್ಟಿಯ ಆರಂಭದ ದೃಶ್ಯಗಳು ಹೇಗಿದ್ದವು? ಗ್ರಹಗಳು, ನಕ್ಷತ್ರಗಳು ,ನಕ್ಷತ್ರ ಪುಂಜಗಳ ಉದಯದ ಕಥೆಯೇನು? ಬಾಹ್ಯಾಕಾಶದ ಬೃಹನ್ನಾಟಕದ ಮೊದಲ ಅಧ್ಯಾಯದ ಮೊತ್ತಮೊದಲ ನಿಮಿಷದಲ್ಲಿ ಏನೇನು ನಡೆಯಿತು ಅಂತೆಲ್ಲ ಹುಡುಕುವ ವಿಜ್ಞಾನಿಗಳ ರಾವಣನ ಹೊಟ್ಟೆಯ ಜ್ಞಾನದ ಹಸಿವೆಗೆ ಇದು ಸಾವಿರ ಕೋಟಿ ಡಾಲರ್ ಮೌಲ್ಯದ ಹಂಡೆ ಹಂಡೆಗಟ್ಟಲೆ ಮಸಾಲೆ ಮಜ್ಜಿಗೆ ಸುರಿದೀತು ಎಂಬ ನಿರೀಕ್ಷೆಯಂತೂ ನಮಗೆಲ್ಲ ಇದೆ.
ಅಂಥ ಅತ್ಯಗಾಧ ದೂರಗಳಿಂದ ಬರುವ ಸೂಕ್ಷ್ಮ ಕಿರಣಗಳ ಸೂಚನೆ ಹಿಡಿಯಲಿಕ್ಕೆ ಕುಶಲತೆಯ, ಜಾಣಿನ ಪರಮಾವಧಿಯ ಸೃಷ್ಟಿಯಾದ ಕನ್ನಡಿಗಳು ಬೇಕಾಗುತ್ತವೆ. ಇದರ ಅಂದಾಜು ಸಿಗಲಿಕ್ಕೆ ಒಂದು ಹೋಲಿಕೆಯೇ ಬೇಕು; ಕನ್ನಡಿ ನಮ್ಮ ಏಷಿಯಾ ಖಂಡದಷ್ಟು ಗಾತ್ರದ್ದಾದರೆ ಅದರಲ್ಲಿ ಒಂದು ಮೊಳಕಾಲಿನ ಎತ್ತರಕ್ಕೆ ಬರುವ ಗುಡ್ಡವೂ ಇರಕೂಡದು! ಆ ಮಟ್ಟದ ನುಣುಪು, ನಯಗಾರಿಕೆ ಇಲ್ಲದಿದ್ದರೆ ಅದು ಕೋಟಿ ಕೋಟಿ ಕೋಟಿ ಮೈಲಿಗಟ್ಟಲೆ ದೂರದ ತಾರಾಪುಂಜಗಳಿಂದ ಬಂದು ಸುಸ್ತಾಗಿರುವ ಕ್ಷೀಣಾತಿಕ್ಷೀಣ ಅಲೆಗಳನ್ನು ಹಿಡಿಯಲಾರದು. ಇಂಥ ಸೂಕ್ಷ್ಮಶಕ್ತಿಯ ಕನ್ನಡಿ ಹತ್ತಿಪ್ಪತ್ತು ಸಣ್ಣ ಷಟ್ಕೋನದ ಆಕೃತಿಯ ಕನ್ನಡಿಗಳು ಸೇರಿ ಆಗಿರುತ್ತದೆ. ಅವೆಲ್ಲ ಸೇರಿ ಆದ ದೊಡ್ಡ ಕನ್ನಡಿ ಒಂದು ಜೇನುಗೂಡಿನ ಆಕಾರದಲ್ಲಿ ಇರುತ್ತದೆ.
ಅದರ ಅಗಲ ಇಪ್ಪತ್ತೊಂದು ಫೀಟು. ಕಷ್ಟ ಏನಪ್ಪಾ ಅಂದರೆ ಇಷ್ಟೊಂದು ದೊಡ್ಡ ಸರಂಜಾಮು ತುಂಬಿಸಲಿಕ್ಕೆ ರಾಕೆಟ್ಟುಗಳಲ್ಲಿ ಜಾಗ ಇರುವುದಿಲ್ಲ. ಹೀಗಾಗಿ ಜೇನುಗೂಡಿನ ಎರಡು ಬದಿಗಳನ್ನು ಮಡಚಿದ ಹಾಗೆ ಕನ್ನಡಿಯ ಇಕ್ಕೆಲಗಳಲ್ಲಿಯೂ ಇರುವ ಪುಟ್ಟ ಕನ್ನಡಿಗಳನ್ನು ಮಡಿಸಿ ಕಳಿಸಲಾಗುತ್ತದೆ. ಗಮ್ಯ ಸೇರಿದ ಮೇಲೆ ಅವು ಮೊಗ್ಗು ಬಿರಿದು ಸುಮವರಳಿದ ಹಾಗೆ ಬಿಡಿಸಿಕೊಳ್ಳುತ್ತವೆ. ಅದು ಸುಮಕೆ ಸೌರಭ ಬರುವ ಗಳಿಗೆಯೂ ಹೌದು! ಆ ಕನ್ನಡಿಗಳು ಒಂದಕ್ಕೊಂದು ಜೋಡಿಕೂಳ್ಳುವಾಗ ಬೇಕಾದ ಸೂಕ್ಷ್ಮ ಲೆಕ್ಕಾಚಾರ ಚಿನ್ನದ ಕೆಲಸಕ್ಕಿಂತಲೂ ಸಾವಿರ ಪಾಲು ಕಷ್ಟದ ಕುಸುರಿ ಬೇಡುವಂಥದ್ದು. 'ಒಂದು ಮಿಲಿಮೀಟರಿನ ಲಕ್ಷದ ಒಂದು ಭಾಗದಷ್ಟು ಆಚೀಚೆಯಾಯಿತು, ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ' ಅಂತೆಲ್ಲ ಹೇಳುವ ಹಾಗೇ ಇಲ್ಲ! ಖಚಿತತೆ ಅಂದರೆ ಖಚಿತತೆಯೇ.
ಇಂತಿಪ್ಪ ಜೇಮ್ಸ್ ವೆಬ್ ದೂರದರ್ಶಕವು ಮುಂದಿನ ದಿನಗಳಲ್ಲಿ ಸೃಷ್ಟಿಯ ಯಾವೆಲ್ಲ ರಹಸ್ಯಗಳನ್ನು ಭೇದಿಸಲಿದೆ ಅಂತ ಕಾದು ನೋಡೋಣ.
No comments:
Post a Comment