ಹಲವರು ಉತ್ಸಾಹಿಗಳು ಇನ್ನೊಂದು ಮತ್ತೊಂದು ಭರ್ಜರಿ ಬಹುಮಾನ ಇರುವ ಕಥಾಸ್ಪರ್ಧೆಗಳನ್ನು ಘೋಷಿಸಿ ಕತೆಗಾರರ ಸಂಭ್ರಮವನ್ನು ಇಮ್ಮಡಿಸಿದ್ದಾರೆ. ಇದು ನನಗೆ ಇಷ್ಟವಾದ ಬೆಳವಣಿಗೆ. ನಾನು ಸುಮಾರು 16-17 ವರ್ಷಗಳಿಂದ ಈ ಕಥಾಸ್ಪರ್ಧೆಗಳನ್ನು ನೋಡುತ್ತ, ಅಲ್ಲಿನ ಕಥೆಗಳನ್ನು ಓದುತ್ತ ಬಂದಿದ್ದೇನೆ(ಎರಡು ಮೂರು ಕಥೆಗಳನ್ನು ಬರೆದು ಸ್ಪರ್ಧೆಗಳಿಗೆ ಕಳಿಸಿಯೂ ಇದ್ದೇನೆ). ಕಥಾಸ್ಪರ್ಧೆಗಳ ನಿಷ್ಠಾವಂತ ಓದುಗನಾಗಿ ಒಂದಷ್ಟು ವಿಮರ್ಶೆಯ ಮಾತುಗಳನ್ನಾಡಿದರೆ ತಪ್ಪಾಗಲಾರದು ಎಂದುಕೊಳ್ಳುತ್ತೇನೆ.
ಮೊದಲನೆಯದಾಗಿ ಹೇಳುವುದಾದರೆ ನನಗೆ ಈ ಹದಿನೇಳು ಚಿಲ್ಲರೆ ವರ್ಷಗಳ ಹುಡುಕಾಟದಲ್ಲಿ ಅಂಥ exciting ಆದ ಕಥೆಗಳಾಗಲೀ, ಕಥೆಗಾರರಾಗಲೀ, "ನಾನಿವರ ಅಭಿಮಾನಿ" ಅನ್ನಿಸುವಂಥ ಕಥನಕುಶಲರಾಗಲೀ ಅಷ್ಟಾಗಿ ಸಿಕ್ಕಿಲ್ಲ. ಒಳ್ಳೆಯ ಕಥೆಗಳು ಬಂದೇ ಇಲ್ಲ ಅಂತಲ್ಲ, ಕೆಲವು ಒಳ್ಳೆಯ ಕಥೆಗಳು ಸಿಕ್ಕಿವೆ, ಆದರೆ ಖುಷಿಯಿಂದ ಕುಣಿದಾಡುವಷ್ಟು ಒಳ್ಳೆಯ ಕಥೆಗಳ ಬೆಳೆಯು ಹುಲುಸಾಗಿ ಬಂದಿಲ್ಲವೆಂದು ನನ್ನ ಅಭಿಪ್ರಾಯ. ಇದು ಯಾಕೆ ಎಂದು ಗೊತ್ತಿಲ್ಲ, ನಮ್ಮ ಕಥೆಗಾರರು ನಿಂತ ನೀರಾಗಿ, ಅದದೇ ಹಳೆಯ ಫಾರ್ಮುಲಾಗಳ ಕಥೆಗಳನ್ನು ಬರೆಯುತ್ತಿದ್ದಾರೋ, ಆಯ್ಕೆ ಮಾಡುವ ತೀರ್ಪುಗಾರರು ಎಡವುತ್ತಿದ್ದಾರೋ ಗೊತ್ತಿಲ್ಲ.
ಕೆಲವೊಮ್ಮೆ ತೀರ್ಪುಗಾರರ ಟಿಪ್ಪಣಿಗಳು, ಮಾತುಗಳನ್ನೆಲ್ಲ ನೋಡಿದರೆ ಇವರು ಯಾವ ಓಬಿರಾಯನ ಕಾಲದ ವಿಮರ್ಶೆಯ ಮಾನದಂಡಗಳನ್ನು ಇಟ್ಕೊಂಡು ಬರೆದಿದ್ದಾರಪ್ಪ ಅನ್ನಿಸದೆ ಇರದು(ತಲೆಬುಡ ಅರ್ಥವಾಗದಂತೆ ಬರೆಯುವವರು ಏನು ಹೇಳುತ್ತಿದ್ದಾರೆ ಎಂದೇ ಅರ್ಥ ಆಗುವುದಿಲ್ಲವಾದ್ದರಿಂದ ಅಲ್ಲಿ ಮಾನದಂಡಗಳ ಪ್ರಶ್ನೆಯಿಲ್ಲ!). ನಗರ ಪ್ರಜ್ಞೆ, ಗ್ರಾಮೀಣ ಪ್ರಜ್ಞೆ, ಜಾತಿಪ್ರಜ್ಞೆ, ಕೋಮುಪ್ರಜ್ಞೆ ವರ್ತಮಾನದ ಹಳವಂಡಗಳು, ಈ ದುರಿತ ಕಾಲದ ತಲ್ಲಣಗಳು, ಸಮಕಾಲೀನ ಬದುಕಿನ ದುರಂತ ಇಂಥ ಭಯಬೀಳಿಸುವ ಪದಗಳನ್ನು ಈ ತೀರ್ಪುಗಾರರು ಅಸ್ತ್ರಗಳಂತೆ ಬಳಸುತ್ತಿದ್ದಾರಾ ಎಂದು ಹೆದರಿಕೆಯಾಗುತ್ತದೆ. ನಾನು ಓದಿ ಇಷ್ಟಪಟ್ಟಿರುವ ಒಂದಷ್ಟು ಅಮೇರಿಕನ್ ಕಥೆಗಳನ್ನೇ ಇಟ್ಟುಕೊಂಡು ಮಾತಾಡುವುದಾದರೆ, ಅದನ್ನು ಬರೆದವರು 1943ರಲ್ಲಿಯೋ, 1954ರಲ್ಲಿಯೋ, 1967ರಲ್ಲಿಯೋ, 1957ರಲ್ಲಿಯೋ ಅಮೆರಿಕಾದಲ್ಲಿಯೋ ಕೆನಡಾದಲ್ಲಿಯೋ ಎಲ್ಲಿಯೋ ಕೂತು ಬರೆದವರು, ಅವರ ಕಾಲದ ಸಮಕಾಲೀನ ತಲ್ಲಣಗಳು, ವರ್ತಮಾನದ ದುರಂತಗಳು ಏನಿದ್ದವೋ ನನಗಂತೂ ದೇವರಾಣೆ ಗೊತ್ತಿಲ್ಲ. ಅವರ ಕಥೆಗಳನ್ನು ಆಸ್ವಾದಿಸುವುದಕ್ಕೆ ಇದೊಂದು ಕಾರಣವೇ ಆಗಿಲ್ಲ. ಅವರು ನಗರದವರೋ, ಹಳ್ಳಿಯವರೋ, ಮೇಲ್ವರ್ಗದವರೋ, ಕೆಳವರ್ಗದವರೋ, ಎಡಪಂಥೀಯರೊ, ಬಲದವರೋ ಒಂದೂ ನನಗೆ ಗೊತ್ತಿಲ್ಲ! ಅದು ಎಂದಿಗೂ ಮ್ಯಾಟರ್ ಆಗಲೇ ಇಲ್ಲ.
ಒಂದು ಒಳ್ಳೆಯ ಕಥೆ ಕಡೆಗೂ ನಮ್ಮನ್ನು ತಟ್ಟುವುದು ಅದರ plot ಮತ್ತು ಪಾತ್ರಪೋಷಣೆಯಿಂದ. ಈ ಸರಳ ಸತ್ಯವನ್ನು ನಾವು ಮರೆತು ಅತಿಬುದ್ದಿವಂತಿಕೆ ತೋರಿಸಿದರೆ ಕಥೆಗಳ ಸ್ವಾರಸ್ಯ ಕೆಡುತ್ತದೆ. ಒಳ್ಳೆಯ ಪಾತ್ರಗಳು ಮತ್ತು ಒಳ್ಳೆಯ ಪ್ಲಾಟಿಗೆ ಸಿದ್ದಾಂತಗಳ, ಪ್ರಜ್ಞೆಗಳ, ಸಮಕಾಲೀನ ತಲ್ಲಣಗಳ ಹಂಗಿಲ್ಲ. ನನಗೆ ಈಗಲೂ ಇಷ್ಟವಾಗುವುದು ಕೆ. ನರಸಿಂಹಮೂರ್ತಿಯವರು ಸಂಪಾದಿಸಿದ
"ಕನ್ನಡದ ಅತ್ತ್ಯುತ್ತಮ ಕತೆಗಳು" ಎಂಬ ನಲುವತ್ತು ಕಥೆಗಳ ಸಂಕಲನ ಮತ್ತು ಗಿರಡ್ಡಿ ಗೋವಿಂದರಾಜ ಅವರು ಸಂಪಾದಿಸಿದ "ಮರೆಯಬಾರದ ಹಳೆಯ ಕತೆಗಳು" ಎಂಬ ಸಂಕಲನ(ಇದಕ್ಕೆ ಎಸ್.ದಿವಾಕರ್ ಅವರ ಬೆಂಬಲ ಮತ್ತು ಪ್ರೋತ್ಸಾಹವಿತ್ತು). ಈ ಕಥೆಗಳಲ್ಲಿ ಒಳ್ಳೆಯ ಪ್ಲಾಟ್'ಗಳು ಮತ್ತು ಪಾತ್ರಗಳಿವೆ ಎಂಬುದೇ ಅದಕ್ಕೆ ಮುಖ್ಯ ಕಾರಣ. ಇವುಗಳಲ್ಲಿರುವುದು ಹಳೆಯ ಕಥೆಗಳು, ಆ ಕಾಲದವರು ಕಥೆಯನ್ನು ಕಥೆಯಾಗಿಯೇ ನೋಡುತ್ತಿದ್ದರು ಯಾವುದೋ ಬೌದ್ಧಿಕ ಸರ್ಕಸ್ ಆಗಿಯೋ, ತಮ್ಮ ಸಿದ್ದಾಂತಗಳನ್ನು ಬಲವಂತವಾಗಿ ತುರುಕಲು ಇರುವ ಸಾಧನವಾಗಿಯೋ ನೋಡಿದವರು ಹೆಚ್ಚಿಲ್ಲ ಎಂಬುದು ಗಮನಾರ್ಹ.
ನಾನು ಕುಮಾರವ್ಯಾಸನ ಸಾಲುಗಳನ್ನು ಚಪ್ಪರಿಸಿಕೊಂಡು ಓದುತ್ತೇನೆ, ಅವನು ಯಾವ ಶತಮಾನದವನು ಎಂಬುದೇ ಸರಿಯಾಗಿ ತೀರ್ಮಾನವಾಗಿಲ್ಲ, ಇನ್ನವನ ಸಮಕಾಲೀನ ದುರಂತಗಳು, ವರ್ತಮಾನದ ತಲ್ಲಣಗಳು ಏನಿದ್ದವೋ ಯಾರಿಗೆ ಗೊತ್ತಿದೆ?! ಕಸ್ತೂರಿ ನಿವಾಸದ ಕೊನೆಯ ದೃಶ್ಯದಂತೆ ಅಳುಮುಖದ ಹಿನ್ನೆಲೆ ಸಂಗೀತ ಹಾಕಿ, ಸಮಕಾಲೀನ ಬದುಕು ಅಷ್ಟೊಂದು ದುರಂತಮಯ ಎಂದು ನಮ್ಮ ತೀರ್ಪುಗಾರರು ಯಾಕಷ್ಟು ಗೋಳಾಡುತ್ತಾರೋ ನನಗಂತೂ ಗೊತ್ತಾಗಿಲ್ಲ. ಒಂದು ಜೋಕ್ ಹೇಳಿದಾಗ ಸುಮ್ಮನೆ ನಗಬೇಕು, ಅದರಲ್ಲಿ ನಗರಪ್ರಜ್ಞೆಯಿದೆಯೇ, ಜಾತಿಪ್ರಜ್ಞೆಯಿದೆಯೇ, ಸೈದ್ಧಾಂತಿಕ ನಲಿವುಗಳಿವೆಯೇ, ಮಾರ್ಕ್ಸ್'ವಾದ ಇದೆಯೇ, ವರ್ತಮಾನದ ಹಳವಂಡಗಳು ಇವೆಯೇ ಎಂದೆಲ್ಲ ಹೇಳುತ್ತಾ ಕೂತರೆ ಜೋಕನ್ನು ಎಂಜಾಯ್ ಮಾಡಲಾಗುವುದಿಲ್ಲ. "ಇವರಿಗೆ ಒಂದೊಳ್ಳೆ ಕಥೆಯನ್ನು ಎಂಜಾಯ್ ಮಾಡುವುದು ಹೇಗೆ ಎಂದೇ ಗೊತ್ತಿಲ್ಲವೇ? ಓದುವಿಕೆಯ ಬೇಸಿಕ್ ಆದ ಸಂತೋಷವನ್ನು ಪಡೆಯುವ ಗುಣವೇ ಇವರಲ್ಲಿಲ್ಲವೇ?" ಎಂಬ ಪ್ರಶ್ನೆ ಹುಟ್ಟುವಷ್ಟು ಅಳುಮೋರೆ, ಬಿಗುಮೋರೆ, ಸಿಡುಕುಮೋರೆಯವರಾಗಿ ನಮ್ಮ ವಿಮರ್ಶಕರು/ತೀರ್ಪುಗಾರರು ಕಾಣುತ್ತಾರೆ. Of course, ಎಲ್ಲರೂ ಹೀಗೆ ಎಂದು ನಾನು ಹೇಳುವುದಿಲ್ಲ, ಒಳ್ಳೆಯ ಅಭಿರುಚಿ ಇರುವ, ಒಂದೊಳ್ಳೆ ಬರೆವಣಿಗೆಯನ್ನು ಥಟ್ಟನೆ ಗುರುತಿಸಬಲ್ಲ, ಒಳ್ಳೆಯ ಕಥೆಗಳನ್ನು ಆಯ್ದಿರುವ ವಿಮರ್ಶಕರೂ, ಹಿರಿಯ ಕಥೆಗಾರರೂ ಇದ್ದಾರೆ.
ಸಮಕಾಲೀನ ಜೀವನ, ಮನುಷ್ಯನ ನೋವು ತಲ್ಲಣ, ಸಿದ್ದಾಂತ ಇವೆಲ್ಲ ಕಥೆಯಲ್ಲಿ ಇರಬಾರದೆಂದಲ್ಲ, ಅವು ಕಥೆಯಲ್ಲಿ ಸಹಜವಾಗಿ ಇದ್ದೇ ಇರುತ್ತವೆ, ಆದರೆ ಅದು ತುರುಕಿದಂತಿರಬಾರದು, ವಿಮರ್ಶಕರು ಅದನ್ನೇ ಹುಡುಕಬಾರದು. ಅದೆಲ್ಲ ಸಹಜವಾಗಿ, ಪ್ಲಾಟ್ ಮತ್ತು ಪಾತ್ರಗಳ ಬೈ ಪ್ರಾಡಕ್ಟ್ ಆಗಿ ಬಂದರೆ ಕಥೆಗೊಂದು ಶೋಭೆ. ಒಳ್ಳೆಯ ತೀರ್ಪುಗಾರರನ್ನು ಹುಡುಕಲಿಕ್ಕೆ ಮೊದಲೊಂದು ತೀರ್ಪುಗಾರರ ಸ್ಪರ್ಧೆ ಆಗಬೇಕು ಎಂಬಂತಾಗದಿರಲಿ.
ಕಥೆಗಾರರು ಅವವೇ ಕಥೆಗಳಿಂದ, ಅದೇ ಹಳೆಯ ಥೀಮುಗಳಿಂದ ಹೊರಬರುತ್ತಿಲ್ಲ ಅನ್ನಿಸಿದರೆ ಇನ್ನೊಂದು ಉಪಾಯ ಮಾಡಬಹುದು: ಒಂದು ಪ್ರಕಾರವನ್ನೋ, ಒಂದು ಥೀಮ್ ಅನ್ನೋ ಕೊಟ್ಟು ಆ ಚೌಕಟ್ಟಿನಲ್ಲಿ ಬರೆಯ ಹೇಳಬಹುದು. ಇಂಗ್ಲೀಷಿನಲ್ಲಿ ಇಂಥ ಹಲವು ಪ್ರಯೋಗಗಳಾಗಿವೆ. ಉದಾಹರಣೆಗೆ, Mystery Writers of Americaದವರು ಥೀಮುಗಳನ್ನು ಇಟ್ಟುಕೊಂಡು ಕೆಲವು ಆಂಥಾಲಜಿಗಳನ್ನೂ ತಂದರು: Mystery Writers of America Presents Vengeance(ಒಂದಿಲ್ಲೊಂದು ರೀತಿಯಲ್ಲಿ ಸೇಡಿನ ಥೀಮ್ ಇರುವ ಕಥೆಗಳು) The Prosecution Rests(Courtroom ಡ್ರಾಮಗಳದ್ದೇ ಕಥೆಗಳು), Mystery Writers of America Presents Ice Cold: Tales of Intrigue From the Cold War, Deadly Anniversaries(ಸ್ವಾತಂತ್ರ್ಯ ದಿನಾಚರಣೆ, ಹೀಗೆ ಯಾವುದಾದರೂ ವಿಶೇಷ ದಿನದಲ್ಲೇ ಘಟಿಸುವ ಕಥೆಗಳು), ಹೀಗೆ. Ellery Queen ಜೋಡಿ, ಆಲ್ಫ್ರೆಡ್ ಹಿಚ್'ಕಾಕ್ ಹೆಸರಿನ ಮ್ಯಾಗಝೀನಿನವರು ತಂದ ಆಂಥಾಲಜಿಗಳು, Isaac Asimov, Martin H. Greenberg ಇವರೆಲ್ಲ ತಂದ ಕಥಾಸಂಕಲನಗಳಲ್ಲಿ ಇಂಥ ಪ್ರಯೋಗಗಳನ್ನು ಸಾಕಷ್ಟು ಸಲ ಮಾಡಲಾಗಿದೆ. ನಮ್ಮಲ್ಲಿಯೂ ಪತ್ತೆದಾರಿ ಕಥೆಗಳ ಸ್ಪರ್ಧೆ, ಟ್ವಿಸ್ಟ್ ಎಂಡಿಂಗ್ ಇರುವ ಕಥೆಗಳ ಸ್ಪರ್ಧೆ, ಸೈನ್ಸ್ ಫಿಕ್ಷನ್ ಕಥೆಗಳ ಸ್ಪರ್ಧೆ, ಅಥವಾ ಮೇಲಿನಂತೆ ಯಾವುದಾದರೂ ಥೀಮ್ ಇರುವ ಸ್ಪರ್ಧೆ ಇಂಥದ್ದನ್ನೂ ಮಾಡಿ ನೋಡಬಹುದು. ಕಥೆಗಾರರು ತಾವೇ ಹಾಕಿಕೊಂಡ ಬೇಲಿಯನ್ನು ಹಾರಿ ಹೊರ ಬರಲು ಇಂಥವು ಸಹಾಯಕವಾಗಬಹುದು. ಅಂತೂ ಕಥಾಸ್ಪರ್ಧೆಗಳು ಹೆಚ್ಚಲಿ, ಒಳ್ಳೊಳ್ಳೆ ಕಥೆಗಳು ಬರಲಿ.
ಏನಂತೀರಿ?
No comments:
Post a Comment