Wednesday, 17 September 2025

Reactions to my new book - Hattevu Vijnanada Jipa

Reviews of my new popular science book - Hattevu Vijnanada Jipa

ಮನುಶ್ರೀ ಜೋಯ್ಸ್ ಅವರು ಬರೆದದ್ದು :

ಹತ್ತೇವು ವಿಜ್ಞಾನದ ಜೀಪ

ಲೇಖಕರು: Sharath Bhat Seraje 

ಈ ಪುಸ್ತಕದಲ್ಲಿ ಏನಿದೆ , ಏನಿಲ್ಲ ಅಂತ ಆಶ್ಚರ್ಯ ಆಗತ್ತೆ. ವಿಜ್ಞಾನದ ಕೌತುಕಗಳು, ಭಾಷೆಯ ಬಳಕೆ, ಹಾಸ್ಯ, ತತ್ವಜ್ಞಾನ, ಹಳಗನ್ನಡ ‌ಎಲ್ಲಾ ಸೇರಿಕೊಂಡಿರುವ ರಿಚ್ ಕೋಸಂಬರಿಯ ಹಾಗಿದೆ ಅನ್ನಬಹುದು.

ಬಹಳ ಚೆನ್ನಾಗಿದೆ. ಆದರೆ ಬೇಗ ಬೇಗ ಓದಕ್ಕೆ ಆಗಲ್ಲ.‌ ನಿಧಾನಕ್ಕೆ ಸವಿದು ಅರಗಿಸಿ ಕೊಳ್ಳಬೇಕು. ತುಂಬಾ ತುಂಬಾ ಮಾಹಿತಿ ಪೂರ್ಣ , ಸಂಗ್ರಹ ಯೋಗ್ಯ ಮತ್ತು ವಿಶೇಷವಾಗಿ "ಹಾಸ್ಯ" ಕಾಶೀ ಹಲ್ವದಲ್ಲಿ ಗೋಡಂಬಿಯ ಹಾಗಿದೆ. ಒಂದು ಕಡೆಯಿಂದ ವಿಜ್ಞಾನದ ಕೌತುಕ, ಇನ್ನೊಂದು ಕಡೆಯಿಂದ ತತ್ವಜ್ಞಾನ ದರ್ಶನ ಮತ್ತೊಂದು ಕಡೆಯಿಂದ ಪದಗಳ ಜೊತೆ ಆಟ, ವರ್ತಮಾನದ ಮಾಹಿತಿಯ ಜೊತೆ ಬೆರೆತು ಓದಿಸಿಕೊಂಡು ಹೋಯಿತು ಒಟ್ಟಾರೆ  ಭೂರಿ ಭೋಜನ.

ಸಾಕಷ್ಟು ಗೊತ್ತಿರದ ವಿಷಯಗಳನ್ನು ತಿಳಿಸಿತು. ನಿರೂಪಣೆ ವಿಶಿಷ್ಟವಾಗಿ, ಸುಲಲಿತವಾಗಿ ಓದಿಸಿಕೊಂಡು ಹೋಗುವ ಹಾಗಿದೆ. ಪುರಾತನ ಕಾಲದ ವಿಚಾರಗಳನ್ನು ವರ್ತಮಾನದೊಂದಿಗೆ ವಿವರಿಸಿರುವ ರೀತಿ ಇಷ್ಟವಾಯಿತು.

ಒಳ್ಳೆಯ ಪುಸ್ತಕ, ಆದರೆ ಹಿಡಿದು ಕೂತು ಓದಬೇಕು. ಓದಿದ ಮೇಲೆ ಅದರ ಪರಿಣಾಮ, ಹೊಸ ವಿಷಯಗಳು ಖಂಡಿತ ಅರಿವಾಗುತ್ತದೆ. ತತ್ವಗಳ ಬಗ್ಗೆಯೇ ಒಂದು ಬುಕ್ ಮಾಡಿ, ಹಳಗನ್ನಡದ ಸೊಗಡು ಆಗಿ‌ನ ವಿಚಾರಗಳ ಬಗ್ಗೆ ಇನ್ನೊಂದು ಪುಸ್ತಕ ಬರೆದು, ಈ ವಿಜ್ಞಾನ ವಿಜ್ಞಾನಿಗಳನ್ನು ಬೇರೆ ಮಾಡಿ ಅದನ್ನು ಪ್ರತ್ಯೇಕ ಪ್ರಕಟಿಸಿದರೆ ಓದುಗರಿಗೆ ಸುಲಭವೂ, ರಸಗವಳವೂ ಆಗುತ್ತಿತ್ತು ಅನ್ನುವುದು ನನ್ನ ಅಭಿಪ್ರಾಯ. ಕನ್ನಡದಲ್ಲಿ ಮಿಸ್ ಮಾಡಬಾರದ ವಿಶೇಷ ವೈಜ್ಞಾನಿಕ ಕೃತಿ.

*****************************************************

ಗಣೇಶ್ ಭಟ್ :

ಕನ್ನಡ ಸಾಹಿತ್ಯದ ಬಗ್ಗೆ ಮಾತಾಡುವಾಗ ಸಾಮಾನ್ಯವಾಗಿ ಬರುವ ಒಂದು ಆಕ್ಷೇಪವೆಂದರೆ ಕನ್ನಡದಲ್ಲಿ ವಿಜ್ಞಾನಸಾಹಿತ್ಯದ ಪ್ರಮಾಣ, ಅಂದರೆ ಜನಸಾಮಾನ್ಯರಿಗಾಗಿ ಅರ್ಥವಾಗುವಂತೆ ವಿಜ್ಞಾನದ ವಿಷಯಗಳನ್ನು ವಿವರಿಸುವ ಸಾಹಿತ್ಯದ ಪ್ರಮಾಣ, ಕಡಿಮೆ ಎಂಬುದು. ಅಲ್ಲಿ ಇಲ್ಲಿ ಒಂದಷ್ಟು ಲೇಖಕರು ಪುಸ್ತಕಗಳನ್ನು ಬರೆಯುವುದು ಕಾಣಸಿಗುವುದಾದರೂ ಇಂಗ್ಲಿಷ್ ಮುಂತಾದ ಭಾಷೆಗಳಿಗೆ ಹೋಲಿಸಿದರೆ ಕನ್ನಡದಲ್ಲಿ ವಿಜ್ಞಾನಸಾಹಿತ್ಯ ಬಹಳ ಕಡಿಮೆ ಎನ್ನುವುದು ನಿಜ. ಅದರಲ್ಲೂ ವಿಜ್ಞಾನದ ಒಂದು ನಿರ್ದಿಷ್ಟ ವಿಷಯದ ಬಗ್ಗೆ ಪೂರ್ತಿಯಾಗಿ ಚರ್ಚಿಸುವ ಪುಸ್ತಕವು ಇರುವುದು ಬಹಳ ಕಡಿಮೆ. ಅಂತಹ ಒಂದು ಪುಸ್ತಕ Sharath Bhat Seraje ಅವರ ‘ಹತ್ತೇವು ವಿಜ್ಞಾನದ ಜೀಪ’. ಇದು ಸಾಮಾನ್ಯ ಜನರನ್ನು ತಲುಪುವ ಉದ್ದೇಶದಿಂದಲೇ ಬರೆದ ವಿಜ್ಞಾನದ ಪುಸ್ತಕ.

ಪಾಶ್ಚ್ಯಾತರಲ್ಲಿ ಫಿಲಾಸಫಿ ಆಫ್ ಸೈನ್ಸ್ ಎಂಬ ‍‌‌ಒಂದು ಪರಿಕಲ್ಪನೆ ಇದೆ. ವಿಜ್ಞಾನ ಎಂದರೇನು? ವಿಜ್ಞಾನದ ವ್ಯಾಪ್ತಿ ಏನು? ಒಂದು ವಿಷಯ ವೈಜ್ಞಾನಿಕವಾಗುವುದು ಹೇಗೆ? ಯಾವುದು ವಿಜ್ಞಾನ ಅಲ್ಲ? ಇತ್ಯಾದಿ ವಿಷಯಗಳ ಬಗ್ಗೆ ಜಿಜ್ಞಾಸೆ ಮಾಡುವ, ತತ್ವಶಾಸ್ತ್ರದ ಒಂದು ಶಾಖೆ. ಕನ್ನಡದಲ್ಲಿ ಬೇಕಾದರೆ ವಿಜ್ಞಾನಮೀಮಾಂಸೆ ಎಂದು ಹೇಳುವುದು ಸೂಕ್ತವಾಗಬಹುದೇನೋ. ಕನ್ನಡದಲ್ಲಂತೂ ಈ ವಿಜ್ಞಾನಮೀಮಾಂಸೆ ಇರುವ ಪುಸ್ತಕ ಈ ಹಿಂದೆ ಬಂದಂತಿಲ್ಲ. ಆದರೆ ‘ಹತ್ತೇವು ವಿಜ್ಞಾನದ ಜೀಪ’ ಪುಸ್ತಕವು ಈ ಕೊರತೆಯನ್ನು ತುಂಬುವಲ್ಲಿ ಒಂದು ಮುಖ್ಯವಾದ ಹೆಜ್ಜೆ ಎನಿಸುತ್ತದೆ. ವಿಜ್ಞಾನಸಾಹಿತ್ಯ ಎಂದಾಕ್ಷಣ ಬಹಳ ಗಂಭೀರವಾಗಿರುತ್ತದೆ, ವಿಜ್ಞಾನವನ್ನು ಬಹಳ ತಿಳಿದುಕೊಂಡಿರುವವರಿಗೆ ಮಾತ್ರ ಅರ್ಥವಾಗುವುದು ಎಂದು ಭಾವಿಸಬೇಕಾಗಿಲ್ಲ. ಮೊದಲೇ ಹೇಳಿದಂತೆ ಇದು ಜನಸಾಮಾನ್ಯರಿಗಾಗಿಯೇ ಬರೆದ ಪುಸ್ತಕ. ಸರಳ, ಸುಲಭವಾದ ಶೈಲಿಯಲ್ಲಿ, ಹಾಸ್ಯದ ಲೇಪನದೊಂದಿಗೆ ಕ್ಲಿಷ್ಟವಾದ ವಿಷಯಗಳನ್ನು ಸ್ವಾರಸ್ಯಕರವಾಗಿ, ಸುಲಿದ ಬಾಳೆಯ ಹಣ್ಣಿನಂದದಿ ವಿವರಿಸುವ ಪುಸ್ತಕ. ಇದನ್ನು ಓದಲು ನಿಮಗೆ ವಿಜ್ಞಾನದಲ್ಲಿ ಪಾಂಡಿತ್ಯವೋ, ವಿದ್ವತ್ತೆಯೋ ಬೇಕಿಲ್ಲ. ಹೊಸ ವಿಷಯವೊಂದನ್ನು ಓದುವ ಆಸಕ್ತಿ ಇದ್ದರೆ ಸಾಕು.

*****************************************************

ಪ್ರಸಿದ್ಧ ಕನ್ನಡ ಲೇಖಕ ಜೋಗಿ ಅವರು ಬರೆದದ್ದು :

ಶರತ್ ಭಟ್ ಸೇರಾಜೆ ಬರೆದಿರುವ ಹತ್ತೇವು ವಿಜ್ಞಾನದ ಜೀಪ ವಿಶಿಷ್ಟ ಶೈಲಿಯ ಪುಸ್ತಕ. ಈಗ ಕನ್ನಡದಲ್ಲಿ ಈ ಮಾದರಿಯ ಪುಸ್ತಕಗಳು ಬಹಳ ಕಡಿಮೆ. ಬಹಳ ಹಿಂದೆ ಇಂಥ ವೈಜ್ಞಾನಿಕ ಪ್ರಬಂಧಗಳನ್ನು ಕೆಲವರು ಬರೆಯುತ್ತಿದ್ದರು. ನನಗೆ ನೆನಪಿರುವಂತೆ ಜಿಟಿ ನಾರಾಯಣ ರಾವ್, ಜೆ ಆರ್ ಲಕ್ಷ್ಮಣರಾವ್ ಬರೆಯುತ್ತಿದ್ದ ವಿಜ್ಞಾನವನ್ನೂ ಒಳಗೊಂಡ ಪ್ರಬಂಧಗಳು, ಪ್ರಬಂಧದ ಶೈಲಿಯಲ್ಲಿದ್ದ ವೈಜ್ಞಾನಿಕ ಬರಹಗಳು ಕುತೂಹಲ ಕೆರಳಿಸುತ್ತಾ, ತಣಿಸುತ್ತಾ, ಓದಿನ ಖುಷಿಯನ್ನೂ ಕೊಡುತ್ತಿದ್ದವು. ಆಗ ಅಗ್ಗದ ಬೆಲೆಗೆ ಮನರಂಜನೆಗಾಗಿ ಭೌತಶಾಸ್ತ್ರ ಮುಂತಾದ ಪುಸ್ತಕಗಳೂ ದೊರೆಯುತ್ತಿದ್ದವು. ನಮ್ಮ ಕಾಲಕ್ಕೆ ಬಂದರೆ ವ್ಯಾಪಕವಾಗಿಯೂ ಆಳವಾಗಿಯೂ ರಂಜಕವಾಗಿಯೂ ಬರೆಯುತ್ತಿದ್ದವರು, ಈಗಲೂ ಆಗಾಗ ಬರೆಯುತ್ತಿರುವವರು ನಾಗೇಶ ಹೆಗಡೆ. ಹಾಲ್ದೊಡ್ಡೇರಿ ಸುಧೀಂದ್ರ ಕೂಡ ವಿಜ್ಞಾನದ ಬರಹಗಳನ್ನು ಮಾಹಿತಿ, ಮನರಂಜನೆ ಎರಡೂ ಇರುವಂತೆ ಬರೆಯುತ್ತಿದ್ದರು.

ಶರತ್ ಭಟ್ ಸೇರಾಜೆಯ ಪುಸ್ತಕದಲ್ಲಿರುವ ಜಾರುಹಾದಿಯಲ್ಲಿ ಎಂಬ ಲೇಖನವನ್ನೇ ನೋಡೋಣ. ಅದು ವಿಜ್ಞಾನದ ಬಹುಜನಪ್ರಿಯವಾದ Falsifiability ಎಂಬ ಕಾರ್ಲ್ ಪಾಪ್ಪರನ ಸಿದ್ಧಾಂತವನ್ನು ಮುಂದಿಟ್ಟುಕೊಂಡು ಹೊರಡುತ್ತದೆ. ಈ ಸಿದ್ಧಾಂತ ಹೇಳುವುದಿಷ್ಟು; ಯಾವುದೇ ಸಿದ್ಧಾಂತವಾದರೂ,  ಪ್ರಯೋಗದ ಮೂಲಕವೋ ಪರಿಶೀಲನೆಯ ಮೂಲಕವೋ ಸುಳ್ಳೆಂದು ಸಾಬೀತುಪಡಿಸುವುದಕ್ಕೆ, ಅನುವು ಮಾಡಿಕೊಡಬೇಕು.  ಅಂದರೆ ಒಂದು ಸಿದ್ಧಾಂತ ಸುಳ್ಳೆಂದು ಸಾಧಿಸಲಿಕ್ಕೆ ಬೇಕಾದ ಮುಕ್ತವಾದ ಅವಕಾಶ ಆ ಸಿದ್ಧಾಂತದಲ್ಲೇ ಇರಬೇಕು.  ಆ ಸಿದ್ಧಾಂತ ವೈಜ್ಞಾನಿಕ ಹೌದೋ ಅಲ್ಲವೋ ಅನ್ನುವುದನ್ನು ನಿರ್ಧರಿಸುವುದೇ ಈ ಸುಳ್ಳೆಂದು ಸಾಬೀತು ಪಡಿಸಿಕೊಳ್ಳುವ ಸಾಧ್ಯತೆಯನ್ನು ಒಡಲಲ್ಲಿ ಇಟ್ಟುಕೊಂಡಿರುವುದು.

ಇದರ ಸುತ್ತ ಮಾತಾಡುತ್ತಾ ಶರತ್ ಹತ್ತಿಪ್ಪತ್ತು ಸೊಗಸಾದ ಪ್ರಸಂಗಗಳನ್ನು ಹೇಳುತ್ತಾ ಹೋಗುತ್ತಾರೆ. ಅವರು ಓದಿದ, ಕೇಳಿದ, ಗ್ರಹಿಸಿದ ಸಂಗತಿಗಳನ್ನೆಲ್ಲ ಬಳಸಿಕೊಂಡು ಅವರು ತಮ್ಮ ವಾದವನ್ನು ಮಂಡಿಸುತ್ತಾ ಬರುತ್ತಾರೆ. ಒಂದು ರೀತಿಯಲ್ಲಿ ಇದು, ನ್ಯಾಯಾಲಯದಲ್ಲಿ ನುರಿತ ನ್ಯಾಯವಾದಿ ಒಂದೊಂದೇ ಸಾಕ್ಷಿಯನ್ನೂ ಸನ್ನಿವೇಶವನ್ನೂ ಮುಂದಿಡುತ್ತಾ ವಾದ ಮಾಡುತ್ತಿರುವಂತೆ ಕಾಣುತ್ತದೆ. ಈ ಕ್ರಮದಲ್ಲಿ ಓದುವ ಕುತೂಹಲವೂ ಹೊಸದನ್ನು ತಿಳಿದುಕೊಂಡ ಸಂತೋಷವೂ ಏಕಕಾಲಕ್ಕೆ ಉಂಟಾಗುತ್ತವೆ.

ಇಡೀ ಪುಸ್ತಕದ ತುಂಬ ಶರತ್ ಇಂಥ ಬೆರಗುಗೊಳಿಸುವ ಸಂಗತಿಗಳನ್ನು ಒಂದರ ಹಿಂದೊಂದರಂತೆ ಹೇಳುತ್ತಾ ಹೋಗುತ್ತಾರೆ. ಪ್ರಯೋಗಪರಿಣತಮತಿಗಳ್, ಇದೆಂಥಾ ಪ್ರಯೋಗವಯ್ಯಾ, ಕಾರ್ಯಕಾರಣದೊಂದಪೂರ್ವ ನಟನೆ, ಇದ ತಿಳಿದನೆಂದರೂ ತಿಳಿದ ಧೀರನಿಲ್ಲ, ದೂರದಿಂದ ಬಂದಂಥ ಸುಂದರಾಂಗ ಜ್ಞಾನ- ಹೀಗೆ ಆಕರ್ಷಕ ಶೀರ್ಷಿಕೆಗಳ ಅತ್ಯಾಕರ್ಷಕ ಬರಹಗಳು ಇಲ್ಲಿ ಅನೇಕವಿವೆ.

ಶರತ್ ಭಟ್ ಬರಹವನ್ನು ಓದುತ್ತಿದ್ದರೆ ನನಗೆ ಥಟ್ಟನೆ ನೆನಪಾಗುವುದು ವೈಯನ್ಕೆ. ತಾನು ಹೇಳುತ್ತಾ ಹೋಗುವಾಗ ಹತ್ತಾರು ಉದಾಹರಣೆಗಳನ್ನು ಕೊಡುತ್ತಾ ಹೋಗುತ್ತಿದ್ದರು ವೈಯನ್ಕೆ. ಷೇಕ್ಸ್‌ಪಿಯರ್ ಬಗ್ಗೆ ಬರೆಯುತ್ತಾ ಕೈಲಾಸಂ ತನಕ ಬಂದು, ಶೇಕ್ಸ್ ಪಿಯರ್ ನಾಟಕಗಳನ್ನು ಯಾರು ಬರೆದಿರಬಹುದು ಎಂದು ಹಲವು ಹೆಸರುಗಳನ್ನು ಸೂಚಿಸುತ್ತಾ ಲೇಖನ ಮುಗಿದ ನಂತರವೂ ಕುತೂಹಲ ಉಳಿಯುವಂತೆ ಮಾಡುತ್ತಿದ್ದ ವೈಯನ್ಕೆಯವರ ಶೈಲಿಯನ್ನು ಶರತ್ ಭಟ್ ಸೇರಾಜೆಯವರ ಬರಹಗಳಲ್ಲೂ ಕಾಣಬಹುದು. ಒಂದೇ ಒಂದು ವ್ಯತ್ಯಾಸವೆಂದರೆ ಶರತ್ ಭಟ್ ಸೇರಾಜೆಗೆ ವೈಯನ್ಕೆಗಿಂತ ಹೆಚ್ಚು ತಾಳ್ಮೆಯಿದೆ. ಹಾಗೇ ಸೇರಾಜೆ ವೈಯನ್ಕೆಗಿಂತ ಹೆಚ್ಚು ವಾಚಾಳಿ ಕೂಡ.

ಉದಾಹರಣೆಗೆ ‘ಮುನ್ನುಡಿಗೆ ಥ್ಯಾಂಕ್ಸ್’ ಎಂದು ಒಂದೇ ಪದದಲ್ಲೋ ಸಾಲಲ್ಲೋ  ಹೇಳುವ ಬದಲು `ಪರ್ಸನಲ್ ಲೋನ್ ಬೇಕಾ, ಹೋಮ್ ಲೋನ್ ಬೇಕಾ ಎಂದೆಲ್ಲ ಆಗಾಗ ಬ್ಯಾಂಕಿನವರು ನನಗೆ ಕರೆ ಮಾಡುತ್ತಿರುತ್ತಾರೆ. ನನಗಾದರೋ ಮುನ್ನುಡಿಕಾರರಿಗೆ ಕೊಡುವುದಕ್ಕೆ ಒಂದಷ್ಟು ಧನ್ಯವಾದಗಳ ಸಾಲ ಬೇಕಿತ್ತು. ಅದನ್ನು ಯಾವ ಬ್ಯಾಂಕಿನವರೂ ಕೊಟ್ಟಿಲ್ಲ.  ಹೀಗಾಗಿ ನನ್ನ ಹತ್ತಿರ ಇರುವ ಒಂದಷ್ಟು ಧನ್ಯವಾದಗಳನ್ನೇ ಮೂಟೆಕಟ್ಟಿ ಅವರಿಗೆ ಕೊಡುತ್ತಿದ್ದೇನೆ’ ಎಂದು ನಾಲ್ಕಾರು ಸಾಲುಗಳನ್ನು ಬರೆಯುತ್ತಾರೆ. ಇದೆಲ್ಲ ಹಳೆಯ ಕಾಲದ ಅತಿವಾಚಾಳಿತನ ಎಂದು ನನಗೆ ಅನ್ನಿಸುತ್ತದೆ. ಇದು ಪ್ರಬಂಧಗಳಲ್ಲೂ ಅಲ್ಲಲ್ಲಿ ಹಣಿಕಿಹಾಕುತ್ತದೆ. ಈ ಪುಸ್ತಕದ ಶೀರ್ಷಿಕೆ ಕೂಡ ನನಗೆ ಅಷ್ಟಾಗಿ ಸೇರಲಿಲ್ಲ. ಹಚ್ಚೇವು ಕನ್ನಡದ ದೀಪ ಎಂಬ ಸಾಲು ಹತ್ತೇವು ವಿಜ್ಞಾನದ ಜೀಪ ಎಂದಾಗಿದೆ. ಅದು ಈ ಪುಸ್ತಕದಲ್ಲಿರುವ ಬರಹಗಳು ಏನು ಹೇಳುತ್ತವೋ ಅವನ್ನೆಲ್ಲ ಧ್ವನಿಸುವುದಿಲ್ಲ. ಅಲ್ಲದೇ ಮೂಲ ಸಾಲುಗಳಿಲ್ಲದೇ, ಈ ಸಾಲಿಗೆ ಸ್ವಯಂದೀಪಕತೆಯೂ ಇಲ್ಲ.  Pun is the lowest form of wit.

ಅದ್ಭುತವಾದ ವಿಚಾರಗಳು, ಸೊಗಸಾದ ಉದಾಹರಣೆಗಳು, ಅಪರೂಪದ ಉಲ್ಲೇಖಗಳು, ಎಲ್ಲೋ ಓದಿದ ಪ್ರಸಂಗಗಳನ್ನು ಒಳಗೊಂಡ ಇದು ಕನ್ನಡಕ್ಕೆ ತುಂಬ ಅಪರೂಪದ ಪುಸ್ತಕ. ಇದರ ಓದು ಒಂದು ಸುಖಾನುಭವ. ಶರತ್ ಈಗಾಗಲೇ ತಮ್ಮದೇ ಆದ ಒಂದು ಶೈಲಿ, ಪ್ರಕಾರ ಮತ್ತು ಧಾಟಿಯನ್ನು ಕಂಡುಕೊಂಡಿದ್ದಾರೆ. ಅವರು ಮತ್ತಷ್ಟು ಬರೆಯಲಿ ಎಂದು ಹಾರೈಸುತ್ತೇನೆ.

*****************************************************




No comments:

Post a Comment